ಆ ಪೂರ್ವ ಈ ಪಶ್ಚಿಮ: ೧೬. ಏಕಮಾತ್ರ ಪ್ರತಿನಿಧಿ (೧)ವೇದ ಕಾಲದಿಂದಲೂ ಭಾರತ ಬದಲಾಗದೇ ಉಳಿದುಬಂದಿದೆ ಎಂದರೂ ಒಂದೇ, ಚಲನ ಶೀಲತೆ ಕಳೆದುಕೊಂಡಿದೆ ಎಂದರೂ ಬಹುತೇಕ ಒಂದೇಯಾದ ಸಂದಂಧಿಸಿದ ಪ್ರಶ್ನೆಗಳಿಗೆ ಹೋಗುವ ಮೊದಲು, ಹೋಮರ್‌ – ವ್ಯಾಸ – ವಾಲ್ಮೀಕಿ – ವರ್ಜಿಲ್‌ ಮತ್ತು ಕಾಳಿದಾಸರ ನಡುವಿನ ಕೆಲ ಆಂತರಿಕ ಹೊಂದಾಣಿಕೆ ವೈರುದ್ಧಗಳನ್ನು ಕುರಿತು ಮತ್ತೊಮ್ಮೆ ಮೆಲುಕು ಹಾಕುವುದು ಒಳ್ಳೆಯದು. ಅದನ್ನು ಗುರುತಿಸುತ್ತಲೆ ಭಾರತ ಮತ್ತು ಯುರೋಪ್‌ ಅನುಸರಿಸಿದ ಭಿನ್ನ ಮಾರ್ಗವನ್ನು ಸಹ ಸೂಕ್ಷ್ಮವಾಗಿ ಗ್ರಹಿಸಬಹುದಾಗಿದೆ. ಈ ಮೊದಲೇ ಹೇಳಲಾದಂತೆ ಗ್ರೀಕ್‌ ಭಾಷೆಯಲ್ಲಿ ಅವತರಿಸಿದ ಒಂದು ಮಿತಿ ಬಿಟ್ಟರೆ ಹೋಮರನಿಗೆ ಯಾವುದೇ ದೇಶ ಅಥವಾ ಭೌಗೋಳಿಕ ಕಟ್ಟುಪಾಡುಗಳ ಎಲ್ಲೆ ಇರುವುದಿಲ್ಲವಾದಂತೆ, ವ್ಯಾಸ – ವಾಲ್ಮೀಕಿಯರಿಗೂ ಇಲ್ಲ. ಅವರು ಬಳಸುವ ಸಂಸ್ಕೃತ ಭಾಷೆ ಅವರ ಕೃತಿಗಳಿಗೆ ಒಂದು ಭೌಗೋಳಿಕ ಮಿತಿಯನ್ನು ಹೊದಿಸಿದೆಯಷ್ಟೆ. ಅದು ಹೊರತು ಆ ಮೂವರಿಗೂ ಯಾವುದೇ ದೇಶ ಅಥವಾ ಸಂಸ್ಕೃತಿಗಳ ಹಂಗಿರುವಂತೆ ಕಾಣುವುದಿಲ್ಲ. ಆ ಅರ್ಥದಲ್ಲಿ ಎಪಿಕ್‌ ಕವಿಗಳಾದ ಆ ಮೂವರೂ ಒಂದು ಗುಂಪಿಗೆ ಸೇರುತ್ತಾರೆ.

ಹೋಮರ್‌ ಮತ್ತು ಆತ ಪ್ರತಿನಿಧಿಸುವ ಸಂಸ್ಕೃತಿಯನ್ನು ಪೇಗನ್‌ ಎಂದು ಗುರಿತಿಸಿದರೆ, ಮೂಲ ಮಹಾಭಾರತ ಮತ್ತು ರಾಮಾಯಣ ನೀಡಿದ ವ್ಯಾಸ ಮತ್ತು ವಾಲ್ಮೀಕಿಯರನ್ನು ಹಿಂದೂ ಸಂಸ್ಕೃತಿಯ ಮೂಲವಾಗಿ ಭಾರತ ಸ್ವೀಕರಿಸಿತು. ಆದರೆ ಹೋಮರ್‌ ಪರಂಪರೆಯ ಎಪಿಕ್‌ ಕವಿಯಾದ ವಾಲ್ಮೀಕಿ ಕೆಲ ಕಾರಣಗಳಿಂದಾಗಿ ವರ್ಜಿಲ್‌ ಪರಂಪರೆಗೆ ಹತ್ತಿರದವನಾಗಿ ಕಾಣಿಸಿಕೊಂಡರೆ, ಮೂಲತಃ ವರ್ಜಿಲ್‌ ತರಹವೇ ಲಿಖಿತ ಕಾವ್ಯಪರಂಪರೆಯ ಕವಿಯಾದ ಕಾಳಿದಾಸ, ಹೋಮರ್‌ ಮತ್ತು ವ್ಯಾಸ ಪರಂಪರೆಯ ನೇರ ಪ್ರತಿನಿಧಿಯಂತೆ ಕಾಣಿಸಿಕೊಳ್ಳುವುದು. ಸಮಾಸ – ಸಂಧಿಗಳನ್ನು ಸೇರಿಸಿ ಎಷ್ಟೇ ಉದ್ದುದ್ದದ ವಾಕ್ಯರಚನೆ ಮಾಡಿದರೂ ಅದನ್ನು ಬಿಡಿಸಿದಾಗ ಆತನಲ್ಲಿ ಕೊನೆಗೆ ಉಳಿಯುವುದು ಸರಳತೆ ಮಾತ್ರ. ಹಾಗಾಗಿ ಕಾಳಿದಾಸ ಎಂಬುದು ಸರಳತೆಗೆ ಮತ್ತೊಂದು ಹೆಸರು. ಹೋಮರ್‌ನಲ್ಲಿನ ಆ ಸರಳತೆಯ ಸಹಜತೆಯನ್ನು ಮುಂದೆ ಬಂದ ವರ್ಜಿಲ್‌ ಅಥವಾ ದಾಂತೆಯಲ್ಲಿ ಆ ರೂಪದಲ್ಲಿ ಕಾಣಲಾಗುವುದಿಲ್ಲ. ವಾಲ್ಮೀಕಿ ನಂತರ ಬಂದ ಕಾಳಿದಾಸ, ವ್ಯಾಸ ಮತ್ತು ಹೋಮರ್‌ ಎಪಿಕ್‌ ಪರಂಪರೆಗೆ ಸಹಜವಾದ ಸರಳತೆಯನ್ನು ವಸ್ತುವಿನ ಆಯ್ಕೆ, ನಿರೂಪಣಾ ವಿಧಾನ ಮತ್ತು ತಂತ್ರಗಾರಿಕೆಯಲ್ಲಿ – ಭಾಷಾ ಬಳಕೆ ಹೊರತು – ಸಾಧಿಸಿರುವುದು ಅದ್ಭುತವೇ ಸರಿ. ಕಾಳಿದಾಸನ ಪಾತ್ರ ಜಗತ್ತಿನ ವಾತಾವರಣ ವ್ಯಾಸ – ಹೋಮರ್‌ ಜಗತ್ತಿನ ತರಹ ಸರಳವಾದುದಾಗಿ ಕಾಣುತ್ತದೆ. ಮತ್ತು ಅವನ ಕೃತಿಗಳು ಪಡೆದಿಕೊಳ್ಳುವ ಸಂಕೀರ್ಣತೆ ಅದರ ಮೂಲಗುಣವಾದ ಸರಳತೆಯಿಂದಲೇ ಬಂದುದು. ಅಷ್ಟಾದರೂ ಕಾಳಿದಾಸನ ಕಾವ್ಯಜಗತ್ತಿಗೆ ದಕ್ಕುವ ಸಂಕೀರ್ಣತೆಯ ಪ್ರಮಾಣ ಸೀಮಿತವಾದುದು; ಆ ರೀತಿಯ ಸೀಮಿತತಗೆ ಆತ ಬಂದ ಕಾಲ ಕೂಡ ಕಾರಣವಾಗಿದ್ದಿರಬಹುದು – ಮತ್ತು ಬದುಕಿನ ರೀತಿ ಸಹ.

ಈ ಮೊದಲೇ ಗುರಿತಿಸಲಾದಂತೆ ಚೆನ್ನಾಗಿ ರಚಿಸಿ ಹಾಡುವುದರ ಕಡೆಗೆ ಹೋಮರನ ಲಕ್ಷ್ಯವಿರುತ್ತದೆ; ಯಾವುದೇ ಎಪಿಕ್‌ನ ಪ್ರಭಾನ ಗುಣಲಕ್ಷಣವೇ ಅದು. ಹಾಗಾಗಿ ವಸ್ತುವಿನ ಆಯ್ಕೆ, ನಿರ್ವಹಣಾ ವಿಧಾನ, ತಂತ್ರಗಾರಿಕೆ, ಕಲಾಕೌಶಲ್ಯ ಮತ್ತು ಭಾಷಾಬಳಕೆಯಲ್ಲಿ ಸರಳತೆ ಸಾಧಿಸುವುದು ಲಿಖಿತ ಸೌಲಭ್ಯದಿಂದ ವಂಚಿತರಾದ ಎಪಿಕ್‌ ಕವಿಯ ಮೂಲ ಜಾಯಮಾನ. ಅದಕ್ಕನುಗುಣವಾಗಿ ಅವರ ಕಾವ್ಯಜಗತ್ತು, ಅಲ್ಲಿ ಬರುವ ಪಾತ್ರಗಳ ಆಸೆ ಆಕಾಂಕ್ಷೆಗಳು ಮತ್ತು ನಡವಳಿಕೆಗಳು ನೇರ ಮತ್ತು ಸರಳವಾದುವಾಗಿರುವುದು ಅವರ ಕಾಲದ ಬದುಕಿನ ರೀತಿಯ ಕೊಡುಗೆ. ಬದುಕನ್ನು ಅರ್ಥೈಸಿ ಮುಂಗಾಣ್ಕೆ ನೀಡುವುದರ ಮೂಲಕ ಮಹಾಕೃತಿಯನ್ನೇ ನೀಡಬೇಕೆಂಬ ಹಟತೊಟ್ಟು ಕಾವ್ಯ ಹೊಸದವನೇನಲ್ಲ ಹೋಮರ್‌. ಅವನು ಬರೆದುದು ಮಹಾಕೃತಿಯಾಯಿತು. ಅವನು ಬದುಕಿಗೆ ಬದ್ಧವಾಗಿ ತನ್ನ ಅನುಭವಗಳನ್ನು ದಾಖಲಿಸಿದ ರೀತಿ ಬದುಕಿನ ಅರ್ಥೈಸುವಿಕೆಯಾಯಿತು. ಮೂಲತಃ ಏಷ್ಯಾ ಮೈನರ್‌ ಭಾಗದವನಾಗಿದ್ದಿರಬಹುದಾದ ಹೋಮರ್‌, ಯುರೋಪ್‌ ಮೂಲದ ಜನರ ತಾಯಿಬೇರುಗಳಲ್ಲಿ ಒಂದಾದ ಗ್ರೀಕ್‌ ಭಾಷೆಯಲ್ಲಿ ಎಪಿಕ್‌ ರಚಿಸಿದುದು, ಯುರೋಪ್‌ ಮತ್ತು ಏಷ್ಯನ್ನರ ನಡುವಿನ ಸೂಕ್ಷ್ಮ ಸಂಗತಿಗಳು ಮತ್ತು ವಿಭಜನೆ ಗುರಿತಿಸಿದ ಮುಂಗಾಣ್ಕೆಯಾಗಿ ಪರಿವರ್ತನೆಗೊಂಡಿತು. ಹೆಕ್ತರ್‌ ಏಷ್ಯನ್ನರ ಪ್ರತಿನಿಧಿಯಾಗಿ ಕಾಣಿಸಿಕೊಂಡರೆ, ಅಖಿಲ್ಯೂಸ್‌ ಮತ್ತು ಒದಿಸ್ಯೂಸ್‌ ಯುರೋಪ್‌ ಮೂಲದ ಮನೋಭಾವ ಮತ್ತು ಮನೋಧರ್ಮವಾಗಿ ಪ್ರಕಟಗೊಂಡುದು ಹೋಮರನಿಗೆ ದಕ್ಕಿದ ಕಾಲನ ಸ್ಪಂದನಕ್ಕೆ ಅತ್ಯುತ್ತಮ ಉದಾಹರಣೆ. ಆ ಕಾರಣವೇ ಹೋಮರನ ಕೃತಿಗಳು ಪಡೆದುಕೊಳ್ಳುವ ಸಂಕೀರ್ಣತೆ ಅದರ ಮೂಲಗುಣವಾದ ಸರಳತೆಯ ಗರ್ಭದಿಂದ ಒಡಮೂಡಿದುದಾಗಿದೆ.

ವ್ಯಾಸರ ನಂತರದ ತಲೆಮಾರಿನ ಸಹಸ್ರಾರು ನಾಮಿಕ, ಅನಾಮಿಕ ಕವಿಗಳು ಸೇರಿದರೆ ಬಹುದಾದ ಬದುಕಿನ ಬಗೆಗಿನ ವಿವಿಧ ರೀತಿಯ ತರ್ಕ, ವಾದ, ನೀತಿ, ಸಿದ್ಧಾಂತ ಮತ್ತು ವಿವರಣಾತ್ಮಕ ಹಿತವಚನಗಳನ್ನು ಹೊರತುಪಡಿಸಿದರೆ, ಮೂಲ ಮಹಾಭಾರತದಲ್ಲಿ ಕಾಣಸಿಗುವುದು, ಹೋಮರನ ಕಾವ್ಯ ಜಗತ್ತಿನ ತರಹದ್ದೇ ಸರಳತೆ ಮತ್ತು ನೇರ ನಡೆನುಡಿ; ಆ ಸರಳ ಮತ್ತು ನೇರ ನಡೆನುಡಿಯ ಜನರಿಂದ ತುಂಬಿದ ಮಹಾಭಾರತದ ಜಗತ್ತು ಪಡೆದುಕೊಳ್ಳುವ ಸಂಕೀರ್ಣತೆ, ಹೋಮರನ ಕಾವ್ಯಜಗತ್ತಿಗಿಂತ ತೀವ್ರವಾದುದಾಗಿಬಿಡುತ್ತದೆ. ಕಾರಣ ವಿಷ್ಟೆ: ಆದಿಸಂಸ್ಕೃತಿ ಮತ್ತು ನಗರಸಂಸ್ಕೃತಿ ನಡುವಿನ ಸಂಘರ್ಷ, ಪರಸ್ಪರ ಅಂತರ್ಗತ ಹೊಂದಾಣಿಕೆ ಮತ್ತು ಸ್ಥಳಪಲ್ಲಟದ ಕತೆಯನ್ನು ‘ಗಿಲ್ಗಮೆಷ್‌’ ತನ್ನ ವಸ್ತುವಾಗಿ ನಿರ್ವಹಿಸಿದರೆ, ಮೂಲತಃ ಒಂದೇ ತೆಂಡೆಯಿಂದ ಬಂದು ಭಿನ್ನ ಜನಾಂಗ ಮತ್ತು ಸಂಸ್ಕೃತಿಯಾಗಿ ಕವಲಾಗುವ ಹಾದಿಯಲ್ಲಿ ಜನರ ನಡುವಿನ ಸಂಘರ್ಷದ ಕತೆಯೇ ಹೋಮರನ ‘ಇಲಿಯಡ್‌’ ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳಾದ ಜನರು ತಂದುಕೊಂಡ ಸರ್ವನಾಶದ ಕತೆ ‘ಮಹಾಭಾರತ’ ನೆಲದ ಮೇಲಿನ ಹಿಡಿತದ ನೆಪ ಪಾಂಡವ – ಕೌರವರ ನಡುವಿನ ಮಾತ್ಸರ್ಯಕ್ಕೆ ಕಾರಣವಾಗಿಬಿಡುವಂತೆ, ಟ್ರೋಜನ್ನರು ಮತ್ತು ಅಖೈಯನ್ನರ ನಡುವಿನ ಜ್ವಾಲಾಗ್ನಿಯಂತೆ ಹತ್ತಿ ಉರಿದ ಈರ್ಷ್ಯೆಗೆ ಹೆಲೆನ್‌ ನೆಪವಾಗಿಬಿಡುವುದು.

‘ಗಿಲ್ಗಮೆಷ್‌’ನ ಎಂಕಿಡು ಮತ್ತು ಗಿಲ್ಗಮೆಷ್‌ ಒಡನಾಡಿಗಳಾದಂತೆ, ಟ್ರೋಜನ್ನರು ಮತ್ತು ಅಖೈಯನ್ನರು ಕೌರವ – ಪಾಂಡವರ ತರಹವೇ ಬಂಧುಗಳಾಗಿದ್ದವರು; ಆದರೆ ‘ಇಲಿಯಡ್‌’ ಆರಂಭವಾಗುವ ವೇಳೆಗೆ ತಲೆಮಾರುಗಳ ಹಿಂದಿನ ದಾಯಾದಿತನದ ನೆನಪು ಮಾಸಿ ಹೋಗಿರುತ್ತದೆ. ಮಹಾಭಾರತದ ಕತೆ ಆರಂಭವಾಗುವುದೇ ಬೇರೆ ಬೇರೆ ಜನಾಂಗಗಳಾಗಿ ಮಾರ್ಪಡುವ ಹಾದಿಯಲ್ಲಿದ್ದ ದಾಯಾದಿಗಳ ನಡುವಿನ ಸಂಘರ್ಷದ ಮೂಲದಿಂದ. ಅಂಥ ಪೂರ್ವಕಾಲದ ಕತೆಯನ್ನು ವಸ್ತುವಾಗಿ ನಿರ್ವಹಿಸುವ ಮಹಾಭಾರತ – ಈಜಗತ್ತಿನ ಎಲ್ಲ ಎಪಿಕ್‌ಗಳಿಗೂ ಗಿಲ್ಗಮೆಷ್‌ ಹೊರತು – ಪೂರ್ವದ್ದಾಗಿ ಕಾಣುವುದಾದಲ್ಲಿ ಅದರಲ್ಲಿ ಆಶ್ಚರ್ಯಪಡುವಂತಾದ್ದು ಏನೂ ಇರಲಾರದು. ‘ಗಿಲ್ಗಮೆಷ್‌’ ಪೂರ್ಣ ಪ್ರಮಾಣದ ಎಪಿಕ್‌ ಆಗಿರುವ ಸಾಧ್ಯತೆ ಬಗ್ಗೆ ಅನುಮಾನಗಳು ಉದ್ಭವಿಸುತ್ತವೆ. ಕೃತಿಯ ಹಂದರ ಜನಪದೀಯವಾಗಿ ಉಳಿಯದಿದ್ದರೂ ಜನಪದ ಮೂಲಕ್ಕೆ ಹತ್ತಿರವಿರುವುದು ಒಂದು ಕಾರಣವಾದರೆ, ಅದರ ವ್ಯಾಪ್ತಿ ಮತ್ತು ಭೂಮಿಕೆ ‘ಇಲಿಯಡ್‌’ ಮತ್ತು ‘ಮಹಾಭಾರತ’ದಷ್ಟು ವಿಶಾಲವಾದುದಾಗಿಲ್ಲ. ಆ ಅರ್ಥದಲ್ಲಿ ಹೋಮರನ ‘ಇಲಿಯಡ್‌’ ಈ ಜಗತ್ತಿನ ಮೊದಲ ಮಾದರಿ ಎಪಿಕ್‌.[1]

ಆ ಸರಳತೆ ವರ್ಜಿಲ್‌ ಕಾಲಕ್ಕೆ ಉಳಿಯಲಿಲ್ಲ. ರೋಮನ್‌ ಜನರ ಭವ್ಯ ಭವಿತವ್ಯದ ಪ್ರಶ್ನೆ ಅನ್ವೇಷಿಸುವ, ಮತ್ತು ಹೋಮರನ ಎರಡು ಎಪಿಕ್‌ಗಳಿಗೂ ಸಮನಾದ ಒಂದೇ ಒಂದು ಎಪಿಕ್‌ ಕಾವ್ಯವನ್ನು ಲ್ಯಾಟಿನ್‌ ಭಾಷೆಯಲ್ಲಿ ಬರೆಯುವ ಅತ್ಯಂತ ಮಹತ್ವಾಕಾಂಕ್ಷೆಯಿಂದ ಹೊರಡುವ ವರ್ಜಿಲ್‌ಗೆ ಅವೆರಡೂ ಬೇರೆಬೇರೆಯಲ್ಲ. ಅದಕ್ಕನುಗುಣ ಅವನ ಕಾವ್ಯ ಜಗತ್ತು ಕೂಡ ಬದಲಾಗಿ ಹೋಗುವುದು ಅನಿವಾರ್ಯ ಆಗುತ್ತದೆ. ಅಲ್ಲಿ ಬರುವ ಈನಿಯಾಸ್‌, ಟರ್ನಸ್‌ ಯಾರೂ ಕೂಡ ಸರಳ ವ್ಯಕ್ತಿಗಳಲ್ಲ; ಘನವಾದ ಉದ್ದೇಶದಿಂದದಿದೊ ಈನಿಯಾಸ್‌ನನ್ನು ಪ್ರೀತಿಸಿದರೆ, ಅಂತಾದ್ದೆ ಘನವಾದ ಉದ್ದೇಶಗಳ ಕಾರಣವೆ ಈನಿಯಾಸ್‌ದಿದೊಗೆ ವಿದಾಯ ಹೇಳುವುದು ಅವನಿಗೆ ಸಮ್ಮತವಾಗಿ ತೋರುತ್ತದೆ. ವರ್ಜಿಲ್‌ ಎದುರಿಸಿದ ತರಹದ್ದೇ ಒತ್ತಡವನ್ನು ಎದುರಿಸಿದವನು ಈನಿಯಾಸ್‌. ಆ ತರಹದ ಒತ್ತಡದ ಫಲವಾಗಿ ಬರುವ ಸಂಕೀರ್ಣತೆ ಮತ್ತು ಸಂಕೀರ್ಣತೆ ಪರಿಣಾಮವಾಗಿ ತೀವ್ರವಾಗುವ ಒತ್ತಡ ದಾಂತೆ ಕಾಲಕ್ಕೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

ರಾಮಾಯಣ ಕಾಲಕ್ಕೆ ಮರಳಿ ಹೋಗುವುದಾದಲ್ಲಿ, ವರ್ಜಿಲ್‌ ಕಾಲದ ಕೆಲವೊಂದು ಲಕ್ಷಣಗಳನ್ನು ಅಲಿಖಿತ ಸೂತ ಪರಂಪರೆಗೆ ಸೇರಿದ ವಾಲ್ಮೀಕಿಯಲ್ಲಿ ಕಾಣಬಹುದಾಗಿದೆ. ವಾಲಿ, ಸುಗ್ರೀವ, ರಾವಣ, ವಿಭೀಷಣ ಮೊದಲಾದ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಮಹತ್ವಾಕಾಂಕ್ಷಿಗಳೇ. ಭಿನ್ನಾಭಿಪ್ರಾಯದ ಕಾರಣ ರಾವಣನನ್ನು ತ್ಯಜಿಸಿ ರಾಮನ ಪಾಳಯ ಸೇರುವ ವಿಭೀಷಣ ಸಂಕೀರ್ಣ ವ್ಯಕ್ತಿತ್ವದ ಒಂದು ರೂಪವಾದರೆ, ವಾಲಿಯನ್ನು ಕೊಲ್ಲಿಸುವುದರ ಮೂಲಕ ತನ್ನ ಪತ್ನಿಯ ಜತೆಗೆ ಮೃತನಾದ ಆ ಅಣ್ಣನ ಪತ್ನಿಯನ್ನು ಹೆಂಡತಿಯಾಗಿ ಸ್ವೀಕರಿಸುವ ಸುಗ್ರೀವ ಸರಳ ಮತ್ತು ಮುಗ್ಧ ವ್ಯಕ್ತಿತ್ವದ ಮಾದರಿಯಾಗಿರುವಂತೆಯೇ, ಅತ್ಯಂತ ಸಂಕೀರ್ಣತೆಯಿಂದ ತುಂಬಿದ ವ್ಯಕ್ತಿಯೂ ಹೌದು. ತನ್ನ ಆಸೆ – ಆಕಾಂಕ್ಷೆಗಳನ್ನು ಎಲ್ಲೂ ನೇರವಾಗಿ ಪ್ರಕಟಪಡಿಸಲು ಮುಂದೆ ಬಾರದ ರಾಮನಷ್ಟು ಸಂಕೀರ್ಣ ವ್ಯಕ್ತಿತ್ವದ ವ್ಯಕ್ತಿಯನ್ನು ಕಾಣುವುದು ಬಹಳ ಕಷ್ಟ. ಸೀತೆ ಮತ್ತು ಲಕ್ಷ್ಮಣ ಮತ್ತು ಲಕ್ಷ್ಮಣ ರಾಮನಿಗೆ ತಕ್ಕ ಜೋಡಿ. ಸೀತೆ ಅಪಹರಣವನ್ನೇ ನಿರ್ನಾಮ ಮಾಡುವ ರಾಮನ ವ್ಯಕ್ತಿತ್ವದ ಭಾಗವಾದ ಸಂಕೀರ್ಣತೆ – ರಾವಣನಿಂದ ಬಿಡುಗಡೆಗೊಂಡು ಎದುರುನಿಂತ ಸೀತೆಯ ಚಾರಿತ್ರ್ಯ ಪರೀಕ್ಷೆಗೆ ಮುಂದಾಗುವವರೆಗೆ ಬೆಳಿಗೆ ಬರುವುದಿಲ್ಲ.

ಸೀತೆ ಮತ್ತು ಲಕ್ಷ್ಮಣರ ವ್ಯಕ್ತಿತ್ವದ ಭಾಗವಾದ ಅವರ ಸಂಕೀರ್ಣ ರಚನೆಯ ಅಂಶವನ್ನು ಕಾಣಲು ಮರಳಿ ಮಾರೀಚನ ಪ್ರಸಂಗಕ್ಕೆ ಹೋಗಬೇಕು; ಮಾರೀಚ ಪ್ರಾಣಬಿಡುವಾಗ, ಲಕ್ಷ್ಮಣ ಮತ್ತು ಸೀತೆ ನಡೆದುಕೊಳ್ಳುವ ರೀತಿ ಅವರ ವ್ಯಕ್ತಿತ್ವದ ಸಂಕೀರ್ಣತೆಗೆ ಒಂದು ಸಣ್ಣ ಉದಾಹರಣೆ ಮಾತ್ರ. ಆಗ ಸೀತೆ ವ್ಯಕ್ತಪಡಿಸುವ ಪ್ರಬಲ ಅನುಮಾನ ಮತ್ತು ಸಂದೇಹ, ಅದು ಸಮರ್ಥನೆಯಾಗುವ ರೀತಿಯಲ್ಲಿ ಲಕ್ಷ್ಮಣ ನಡೆದುಕೊಳ್ಳುವ ಪರಿ, ಸರಳತೆಯಿಂದ ಕೂಡಿದ ವರ್ತನೆಗಳಲ್ಲ. ರಾಮನನ್ನು ಮಾರೀಚ ಸೋಲಿಸುವುದು ಅಸಾಧ್ಯ ಎಂಬುದು ಸೀತೆಗಿಂತಲೂ ಹೆಚ್ಚಾಗಿ ಲಕ್ಷ್ಮಣನಿಗೆ ಗೊತ್ತಿರುತ್ತದೆ. ಅದೆಲ್ಲ ಮಾರೀಚನ ಆವುಟ ಎಂಬುದು ಸಹ ಗೊತ್ತಿಲ್ಲದಿಲ್ಲ. ಆದರೂ ‘ನನ್ನನ್ನು ಬಯಸಿರುವ ನೀನು ಅಣ್ಣನಾದ ರಾಮನ ಸಾವನ್ನು ಬಯಸಿರುವೆ’ ಎಂಬ ಸೀತೆಯ ಆರೋಪಕ್ಕೆ ನೊಂದು ಲಕ್ಷ್ಮಣ ಒಬ್ಬಳನ್ನೇ ಬಿಟ್ಟು ಹೋಗುವುದು, ಸೀತೆಗೆ ಆ ಮಾತನ್ನಾಡುವ ಧೈರ್ಯ ಹೇಗೆ ಬಂತು ಎಂಬ ಪ್ರಶ್ನೆ ಉದ್ಭವಿಸುವಂತೆಯೆ, ಆರೋಪಕ್ಕೆ ಪ್ರತಿಯಾಗಿ ಲಕ್ಷ್ಮಣ ನಡೆದುಕೊಳ್ಳುವ ರೀತಿ ಅನೇಕ ತರಹದ ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ರಾಮಾಯಣದ ಸಂಕೀರ್ಣತೆ ಅಡಗಿರುವುದೇ ಅಲ್ಲಿ.

ಆದರೆ ಕಾಳಿದಾಸ ಬರುವ ಕಾಲಕ್ಕೆ ಆತನ ಕಾವ್ಯ ಜಗತ್ತಿಗೆ ವಸ್ತುವಾದ ಭಾರತದ ಬದುಕು ಮರಳಿ ಸರಳ ರೂಪ ಪಡೆದುಕೊಳ್ಳುತ್ತದೆ. ಆತನ ಕೃತಿಗಳ ಪ್ರಕಾರ ಎಂಬ ಮಾತು ಮತ್ತೆ ಅಗತ್ಯ. ಮರೆಯದೆ ಗಮನಿಸಬೇಕದ ಮತ್ತೊಂದು ಸಂಗತಿ ಎಂದರೆ ಮಹಾಭಾರತವು ಕೃಷಿ ಆಧಾರಿತ ಗ್ರಾಮೀಣ ಭಾರತದ ಎಪಿಕ್‌. ಅದೇ ಕೃಷಿ ಬದುಕು ನಗರ ಸಂಸ್ಕೃತಿ ಮತ್ತು ಸಾಮ್ರಾಜ್ಯ ಕಲ್ಪನೆಗೆ ದಾರಿ ಮಾಡಿಕೊಡಲು ಸಿದ್ಧವಾಗುತ್ತಿದ್ದ ಕಾಲದ ಬದುಕಿನ ಎಪಿಕ್‌, ರಾಮಾಯಣ; ಆ ರಾಮಾಯಣ ಬಂದ ಎರಡು ಶತಮಾನಗಳ ನಂತರ ಭಾರತ. ನೆಲದಲ್ಲಿ ಮೊದಲು ಅರಳಿದ ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಾಯಿತು. ಅಂತಃಪುರವಾಸಿಗಳಾದ ಜನರ ಬದುಕಿಗೆ ಹೆಚ್ಚಾಗಿ ಸಂಬಂಧಿಸಿದ ಕವಿ ಕಾಳಿದಾಸನ ಕೃತಿಗಳ ಎಲ್ಲ ನಾಯಕ ನಾಯಕಿಯರು ಯಕ್ಷ, ಕಿನ್ನರ, ಕಿಂಪುರುಷ, ಗಂದರ್ವಸೀಮೆಗೆ ಹತ್ತಿರವಾದ ರಾಜ ಮಹಾರಾಜರು, ರಾಣಿಯರು ಮತ್ತು ತಾಪಸಿಗಳಿಂದ ಕೂಡಿದವರಾಗಿರುವುದು ಸಹಜ ಇರಬಹುದು. ಅಲ್ಲಿ ಬರುವ ಅಗ್ನಿಮಿತ್ರ, ಅಗ್ನಿವರ್ಣ ಕೊನೆಗೆ ದುಷ್ಯಂತರಂಥ ಮಹಾರಾಜರೂ ಸಹ ದಿನನಿತ್ಯದ ಬದುಕಿನಿಂದ ದೂರ ನಿಂತವರೆ ಆಗಿರುತ್ತಾರೆ.[2]

ಕಣ್ವಮುನಿಗಳ ಆಶ್ರಮಕ್ಕೆ ಸಹಜವಾದ ಸರಳತೆ ಮತ್ತು ನಿರ್ಮಲತೆ ಕಾಳಿದಾಸನ ಕಾಲಕ್ಕೆ ಸಹಜವಾದುದೆ! ರಾಮಾಯಣ ಕಾಲದಲ್ಲಿ ಪಡೆದುಕೊಂಡ ಸಂಕೀರ್ಣತೆ ಇಲ್ಲವಾಗಿ ವ್ಯಾಸರ ಕಾಲಕ್ಕೆ ಹತ್ತಿರ ಬರುವ ಸರಳತೆಗೆ ಭಾರತೀಯ ಮನಸ್ಸು ಒಲಿದುದಾದರೂ ಹೇಗೆ?

ವೇದ ಇಲ್ಲವೆ ವೇದಪೂರ್ವಕಾಲದಿಂದಲೂ ಭಾರತ ಬದಲಾಗದೆ ಉಳಿದುಬಂದಿದೆ ಎಂಬುದು ಸಾಮಾನ್ಯ ಗ್ರಹಿಕೆ: ನಿರಂತರ ಹರಿದುಬಂದಿದೆ ಎಂದರೂ ಒಂದೆ, ಅಂತಹ ಗಮನಾರ್ಹ ಬದಲಾವಣೆ ಕಂಡಿಲ್ಲ ಎಂದರೂ ಒಂದೆ. ಆ ನಿರಂತರತೆ ಸಾಧ್ಯವಾದುದಾದರೂ ಹೇಗೆ? ಎಂಬ ಪ್ರಶ್ನೆಗಳು ಹಲವಾರು ಮನಸ್ಸುಗಳನ್ನು ಹಲವಾರು ರೂಪದಲ್ಲಿ ಕಾಡಿವೆ ಮತ್ತು ಕಾಡುತ್ತಲಿವೆ. ಆದರೆ ಭಾರತದ ಬದುಕು ತನ್ನದೇ ಆದ ರೀತಿಯಲ್ಲಿ ಬದಲಾವಣೆ ಕಂಡಿದೆ ಎಂಬುದಕ್ಕೆ ವ್ಯಾಸ – ವಾಲ್ಮೀಕಿ ಮತ್ತು ಕಾಳಿದಾಸರ ಕೃತಿಗಳೇ ಸಾಕ್ಷಿ; ಆ ಬದಲಾವಣೆ

ಹೋಮರ್‌ – ವರ್ಜಿಲ್‌ – ದಾಂತೆಯಲ್ಲಿ ವ್ಯಕ್ತವಾದಂತೆ ವಿಕಸನಗೊಂಡಿಲ್ಲ: ಬದಲಾಗಿ ವಿಸ್ತರಣೆಯ ಹಾದಿಯಲ್ಲಿ ಸುತ್ತುವರಿಯುತ್ತಾ ಸಾಗಿಬಂದಿದೆ. ಆ ಪ್ರಕ್ರಿಯೆಯನ್ನು ಅಂತರ್ಗತೀಕರಣ ಅಥವಾ ಒಳಗು ಮಾಡಿಕೊಳ್ಳುವಿಕೆ ಎಂದು ಕರೆಯಬಹುದಾಗಿದೆ. ವಲಸೆ ಬಂದವರ ಅಂತರ್ಗತೀಕರಣ ಮತ್ತು ಅವರಿಗೆ ಜಾತಿಶ್ರೇಣಿಯಲ್ಲಿ ಸೂಕ್ತ ಸ್ಥಾನ ಕಲ್ಪಿಸುವುದು, ಅದಕ್ಕನುಗುಣ ಹೊಸ ಹೊಸ ಜಾತಿಗಳ ಸೃಷ್ಟಿ ಮತ್ತು ಹಳೆಯ ಜಾತಿಗಳಿಗೆ ಹೊಸ ರೂಪಾಂತರದ ಪ್ರಕ್ರಿಯೆ ಮತ್ತು ಪ್ರಯೋಗ ಇಂದಿಗೂ ಮುಂದುವರಿದಿರುವುದನ್ನು ಗುರುತಿಸಬಹುದಾಗಿದೆ. ಆ ಅರ್ಥದಲ್ಲಿ ಪ್ರಶ್ನಾರ್ಹ[3]. ಭಾರತ ಕಂಡುಕೊಂಡ ಬದಲಾವಣೆಯ ದಿಕ್ಕು ಮತ್ತು ಗತಿ ಭಿನ್ನವಾಗಿರುವಂತೆಯೇ ಅದು ಭಾರತೀಯ ಸ್ಥಿತಿ ಮತ್ತು ಮನೋಧರ್ಮಕ್ಕೆ ಅನುಗುಣವಾಗಿರಬಹುದು. ಮಹಾಭಾರತ ಮತ್ತು ರಾಮಾಯಣ ಕಾಲದಲ್ಲೆ ಆರಂಭವಾದ ಆ ಪ್ರಕ್ರಿಯೆ ಕಾಳಿದಾಸನ ಕಾಲಕ್ಕೆ ಒಂದು ಖಚಿತ ರೂಪ ಪಡೆದುಕೊಂಡಂತೆ ತೋರುತ್ತದೆ.

ಆನಂತರ ಬಂದ ವಾಲ್ಮೀಕಿಗೆ ವ್ಯಾಸ ಮಹರ್ಷಿಯ ಪರಿಚಯವಿತ್ತೋ ಇಲ್ಲವೋ ಎಂದು ಖಚಿತವಾಗಿ ಹೇಳಲು ಸಾಧ್ಯವಾಗದ ರೀತಿಯಲ್ಲಿ ರಾಮಾಯಣದ ರಚನೆ ನಡೆದುಹೋಯಿತು. ಆದಿಕವಿ ಸ್ಥಾನ ವಾಲ್ಮೀಕಿಗೆ ದೊರಕಲು ಆ ಬಗೆಗಿನ ಅನಿಶ್ಚಿತತೆ ಮತ್ತು ಅಸ್ಪಷ್ಟತೆಯೂ ಒಂದು ಕಾರಣವಾಗಿದ್ದಿರಬಹುದು. ಭಾರತ ಎದುರಿಸಿದ ಮೊದಲ ಸಮಸ್ಯಗಳ ಪೈಕಿ ಇದೂ ಒಂದು. ಆದರೂ ವ್ಯಾಸನಿಗಿಂತ ತೀರ ಭಿನ್ನ ಜಾಡಿನಲ್ಲಿ ವಾಲ್ಮೀಕಿ ಸಾಗುವುದನ್ನು ನೋಡಿದರೆ, ಆತನಿಗೆ ಅಸ್ಪಷ್ಟವಾಗಿಯಾದರೂ ಮಹಾಭಾರತದ ಕತೆ ಮತ್ತು ಪುರಾಣದ ಹಿನ್ನೆಲೆಯ ಅರಿವಿರುವಂತೆ ಕಾಣಿಸುತ್ತದೆ ಅಥವಾ ಹೀಗೂ ಆಗಿದ್ದಿರಬಹುದು. ವ್ಯಾಸನ ತರಹವೇ ತನ್ನ ಯುಗದ ಬದುಕು, ಸಮಾಜ, ಭಾಷೆ ಮತ್ತು ಬಿಕ್ಕಟ್ಟುಗಳು ಮತ್ತು ಎಲ್ಲಕ್ಕೂ ಮಿಗಿಲಾಗಿ ಕಾಲಕ್ಕೆ ಸ್ಪಂದಿಸಿ ಎಪಿಕ್‌ ಸೃಷ್ಟಿಸಲು ವಾಲ್ಮೀಕಿಗೆ ಸಾಧ್ಯವಾದುದು ಆತನಿಗೆ ವಿಶಿಷ್ಟವಾದ ಅಭಿಜಾತತೆ ಮತ್ತು ಸ್ವಂತಿಕೆ ತಂದುಕೊಡಲು ಕಾರಣವಾಗಿದ್ದಿರಬಹುದು. ಆದರೂ ಹೋಮರ್‌ ಮತ್ತು ಆತ ಪ್ರತಿನಿಧಿಸುವ ಗ್ರೀಕ್‌ ಪರಂಪರೆಯನ್ನು ತನ್ನ ರಕ್ತಮಾಂಸದಲ್ಲಿ ತುಂಬಿಕೊಂಡು ಹೊಸ ಪರಂಪರೆ ನಿರ್ಮಿಸಲು ವರ್ಜಿಲ್‌ಗೆ ಸಾಧ್ಯವಾದಂತೆ, ವಾಲ್ಮೀಕಿಯೂ ಅಂತಹ ಸವಾಲನ್ನು ಎದುರಿಸಬೇಕಾಗಿದ್ದಲ್ಲಿ ಏನಾಗುತ್ತಿತ್ತು ಎಂಬ ಪ್ರಶ್ನೆ ಕುತೂಹಲಕ್ಕಾಗಿಯಾದರೂ ಉದ್ಭವಿಸದಿರುವುದಿಲ್ಲ. ಭಾರತೀಯ ಭಿನ್ನತೆ ಅಲ್ಲಿಂದಲೆ ಪ್ರಾರಂಭವಾಗುತ್ತದೆ. ಆ ಸವಾಲನ್ನು ಎದುರಿಸಲು ಹೋಗದೆ ಅಥವಾ ಆ ಅಗತ್ಯತೆ ಎದುರಾದಂತೆ ಕಾಣದ ವಾಲ್ಮೀಕಿಯ ಕೈಯಲ್ಲಿ ರಾಮಾಯಣದಂತಹ ಕೃತಿ ರಚಿಸಿ ಹಾಡಲು ಸಾಧ್ಯವಾದುದು, ಭಾರತದ ವಿಶಿಷ್ಟತೆಯಾಗಿದ್ದಿರಬಹುದು.

ಆದರೆ ಅದು ದೌರ್ಬಲ್ಯವಾಗಿ ಪರಿವರ್ತನೆಗೊಂಡುದೆ ಮುಂದೆ ಕಾಣಿಸಿಕೊಂಡ ಬೆಳವಣಿಗೆಗಳಿಗೆ ಕಾರಣವಾಗಿದ್ದಿರಬಹುದೆ?

‘ಇಲಿಯಡ್‌’ನಲ್ಲಿ ವ್ಯಕ್ತವಾಗುವ ಪ್ರಕಾರ, ಟ್ರೋಜನ್ನರು ಮತ್ತು ಅವರ ಸರ್ವನಾಶ ಮಾಡಲು ಹೊರಟ ಅಖೈಯನ್ನರ ನಡುವಿನ ಅಂತರ ಬಹಳ ಹೆಚ್ಚಿರುವಂತೆ ತೋರುವುದಿಲ್ಲ. ಆ ಇಬ್ಬರ ಆಡುಭಾಷೆಯೂ ಗ್ರೀಕ್‌ ಆಗಿತ್ತು ಎಂದು ನಂಬಲು ಅವಕಾಶವಿದೆ; ನೆಲಸಿದ್ದ ಪ್ರದೇಶಗಳ ನಡುವಿನ ಅಂತರ ಕೂಡ ಬಹಳ ಹೆಚ್ಚಾಗಿದ್ದಂತೆ ಸಹ ತೋರುವುದಿಲ್ಲ. ಅಡ್ಡಬರುವ ಸಮುದ್ರದ ಹೊರತು. ಹೆಲೆನ್‌ ಪ್ಯಾರಿಸ್‌ ಜತೆ ಪಲಾಯನ ಮಾಡಲು ಭೌಗೋಳಿಕ ಸಾಮೀಪ್ಯವೂ ಸಹಾರಿಯಾಗಿದ್ದಿರಬಹುದು. ಆ ಕಾರಣವೆ ಟ್ರೋಜನ್ನರು ಮತ್ತು ಅಖೈಯನ್ನರು ಕೌರವ – ಪಾಂಡವರ ತರಹವೆ ಒಂದು ಕಾಲದಲ್ಲಿ ದಾಯಾದಿಗಳಾಗಿದ್ದವರು ಎಂದು ವಾದಿಸುವುದಾದಲ್ಲಿ ಇತಿಹಾಸವನ್ನು ತಪ್ಪು ಅರ್ಥಮಾಡಿಕೊಂಡಂತಾಗುವುದಿಲ್ಲ. ಒಬ್ಬನೇ ತಂದೆಗೆ ಜನಿಸಿದ ಧೃತರಾಷ್ಟ್ರ ಮತ್ತು ಪಾಂಡುವಿನ ಮಕ್ಕಳಾದ ಕೌರವ ಪಾಂಡವರಿಗೆ ತಮ್ಮ ಹತ್ತಿರದ ಬಾಂಧವ್ಯ ಮರೆತು ಹೋಗುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿರಲಿಲ್ಲ; ಆದರೆ ಹೆಲೆನ್‌ ನೆಪದಲ್ಲಿ ಯುದ್ಧ ಆರಂಭವಾಗುವ ವೇಳೆಗೆ ಟ್ರೋಜನ್ನರು ಮತ್ತು ಅಖೈಯನ್ನರು ಬೇರೆ ಬೇರೆ ಭೌಗೋಳಿಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ಸೇರಿದವರಾಗಿ ಹಂಚಿಹೋಗಿದ್ದರು. ಮಹಾಭಾರತದ ವಸ್ತು ‘ಇಲಿಯಡ್‌’ಗೂ ಪೂರ್ವದ್ದು ಎಂಬ ವಾದಕ್ಕೆ ಆ ಅಂಶವೇ ಒಂದು ಪ್ರಬಲ ಸಮರ್ಥನೆ.

ಹೋಮರನಿಗೆ ಆ ಎರಡೂ ಜಗತ್ತಿನ ನಿಕಟ ಪರಿಚಯವಿದ್ದು ಎರಡಕ್ಕೂ ಹತ್ತಿರದವನಾಗಿರುವಂತೆ ತೋರುತ್ತದೆ. ಆ ಅರ್ಥದಲ್ಲಿ ಏಷ್ಯದವ ಆಗಿರುವಂತೆಯೆ ಯುರೋಪಿನವ ಕೂಡ ಹೌದು. ಆ ಕಾರಣವೊ ಏನೋ ನಿರೂಪಕನಾಗಿ ಅವನು ಎಲ್ಲೂ ಎಚ್ಚರ ತಪ್ಪುವುದಿಲ್ಲ ಮತ್ತು ಯಾರ ಪರ ವಕಾಲತ್ತು ವಹಿಸಲು ಹೋಗುವುದಿಲ್ಲ; ವಿವರಗಳು ಪುನರಾವರ್ತನೆಯಾಗುವುದನ್ನು ನೋಡಿ ‘ಹೋಮರ್‌ ಸಹ ತೂಕಡಿಸುತ್ತಾನೆ’ ಎಂಬ ಗಾದೆ ಮಾತು ಹುಟ್ಟಿಕೊಂಡಿರಬಹುದು. ಆದರೆ ವಸ್ತುನಿಷ್ಠ ನಿರೂಪಕನಾಗಿ ಹೋಮರ್‌ ಎಲ್ಲೂ ತೂಕಡಿಸುವುದಿಲ್ಲ. ಆ ಮಟ್ಟಿಗಿನ ಎಚ್ಚರವನ್ನು ಅವನು ವಹಿಸುತ್ತಾನೆ. ಗ್ರೀಕ್‌ ಭಾಷೆ ಮಾತನಾಡುವ ಜನ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಯುರೋಪಿನ ವಲಯಕ್ಕೆ ಸೇರಿಹೋದುದು, ಹೋಮರ್‌ ಮುಂದೆ ಗ್ರೀಕರ ಕವಿಯಾಗಿ ಮಾರ್ಪಡಲು ಕಾರಣವಾಗಿದ್ದಿರಬಹುದು. ಏನಾದರೂ ಇರಲಿ, ಆ ಹೋಮರ್‌ ಏಷ್ಯಾಕ್ಕೂ ಸಲ್ಲುತ್ತಾನೆ. ಷಿನ್‌ – ಎಖಿ – ಉನ್ನಿನ್ನಿಯಿಂದ ಬಹಳವಾಗಿ ಪ್ರಭಾವಿತನಾಗಿರಬಹುದಾದ ಹೋಮರ್‌, ಮೂಲತಃ ಏಷ್ಯಾದವನು ಮತ್ತು ಆ ಎಪಿಕ್‌ ಪರಂಪರೆಯ ಏಷ್ಯಾ ಮೂಲದ್ದು; ಕ್ರಿಶ್ಚಿಯನ್‌ ರಿಲಿಜನ್‌ನನ್ನು ತಮ್ಮದನ್ನಾಗಿ ಸ್ವೀಕರಿಸಿದಂತೆ, ಅದಕ್ಕೂ ಬಹಳ ಹಿಂದೆಯೇ ಏಷ್ಯಾ ಮೂಲದ್ದಾದ ಎಪಿಕ್‌ ಪರಂಪರೆಯನ್ನು ತಮ್ಮದಾಗಿಸಿಕೊಂಡರು ಎಂಬ ಅಭಿಪ್ರಾಯವಿದೆ. ಇರಲಿ,

ಪಾಂಡವರು ಕೌರವರನ್ನು ಸೋಲಿಸಲು ಅನೇಕರನ್ನು ತಮ್ಮ ವಲಯ ಅಥವಾ ಪಾಳಯಕ್ಕೆ ಸೇರಿಸಿಕೊಳ್ಳಲು ಮುಂದಾಗುವಂತೆಯೆ, ತಮ್ಮ ಮಿತ್ರಬಳಗದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಕೌರವರು ಸಹ ಪ್ರಯತ್ನಿಸುತ್ತಾರೆ. ಹಾಗಾಗಿ ಮಹಾಭಾರತದ ಯುದ್ಧ ಅವರವರ ಪ್ರಭಾವಿ ವಲಯವನ್ನು ಒಳಗೊಳ್ಳುತ್ತದೆ. ಮೂಲ ಮಹಾಭಾರತದ ವ್ಯಾಸಮಹರ್ಷಿಯು ಹೋಮರ್‌ ತರಹವೆ ಯಾವುದೇ ಬಣ ಅಥವಾ ಗುಂಪುಗಳ ಪರ ವಿರೋಧ ವಹಿಸಲು ಹೋಗದೆ ಯಥಾರ್ಥವಾಗಿ ಬದುಕನ್ನು ದಾಖಲಿಸಲು ಪ್ರಯತ್ನಪಟ್ಟಿದ್ದಾನೆ ಎಂದು ನಂಬಲು ಬೇಕಾದ ಅನೇಕ ವಿವರಗಳು ಮೂಲದಲ್ಲಿ ದೊರಕುತ್ತವೆ. ಆ ಮೂಲ ಜಾಯಮಾನಕ್ಕೆ ಸಲ್ಲದ ಮತ್ತು ಒಗ್ಗದ ಸೇರ್ಪಡೆಗಳನ್ನು ನಂತರದ ಕಾಲದಲ್ಲಿ ಕವಿಗಳು ತುರುಕಿರಬಹುದು. ನಿರೂಪಕನಾಗಿ ವ್ಯಾಸ ವಹಿಸುವ ಎಚ್ಚರ, ಹೋಮರನ ತರಹವೆ ಎಪಿಕ್‌ ಕವಿಯ ಸಾಕ್ಷೀ ಪ್ರಜ್ಞೆಯ ದ್ಯೋತಕವಾಗಿದೆ. ಪಗಡೆಯಾಟದಲ್ಲಿ ಧರ್ಮರಾಯ ತನ್ನನ್ನು ಸೇರಿದಂತೆ ರ್ಸ್ವಸ್ವವನ್ನೂ ಕಳೆದುಕೊಂಡಾಗ ಭೀಷ್ಮ ಆಡುವ ಮಾತುಗಳೆ ಅದಕ್ಕೆ ಉದಾಹರಣೆ. ಪಗಡೆಯಾಟದಲ್ಲಿ ತನ್ನನ್ನು ತಾನು ಸೋತು ವ್ಯಕ್ತಿಯೊಬ್ಬ ಆನಂತರ ಮತ್ತೊಬ್ಬರನ್ನು ಪಣವಾಗಿಡಲು ಬರುತ್ತದೆಯೆ ಎಂಬ ದ್ರೌಪದಿ ಪ್ರಶ್ನೆಗೆ ಉತ್ತರವಾಗಿ ಭೀಷ್ಮನು, ಆ ತರಹದ ಧರ್ಮಸೂಕ್ಷ್ಮದ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ ಎಂಬ ವಿವರಣೆ ನೀಡುತ್ತಾನೆ.[4]

ವಿರಾಟಪರ್ವ ಮುಗಿದ ಕೂಡಲೇ ಕೌರವ – ಪಾಂಡವರ ನಡುವೆ ರಾಜಿ – ಸಂಧಾನಕ್ಕೆ ಸಲಹೆ ಮಾಡುವ ಬಲರಾಮ, ಮಹಾಭಾರತ ಸಂಘರ್ಷಕ್ಕೆ ಬಹುವ್ಯಸನಿಯಾದ ಯುಧಿಷ್ಠಿರನ ದ್ಯೂತವ್ಯಸನವೂ ಒಂದು ಕಾರಣ ಎಂದು ಹೇಳುವುದರ ಮೂಲಕ ಮತ್ತೊಂದು ದೃಷ್ಟಿಕೋನವನ್ನು ಪ್ರತಿನಿಧಿಸುವಂತೆ, ವ್ಯಾಸಮಹರ್ಷಿ ಕೂಡ ಮಹಾಭಾರತ ಯುದ್ಧಕ್ಕೆ ಕಾರಣವಾದ ಎಲ್ಲ ಅಂಶಗಳನ್ನು ಪರಿಶೋಧಿಸಲು ನೋಡುತ್ತಾನೆ. ಯಾವುದೇ ಎಪಿಕ್‌ನ ಮೂಲ ತಕ್ಷಣವೇ ಅದು.

ತಮ್ಮದೇ ಆದ ಕಾರಣಗಳಿಗಾಗಿ ಸೇಡಿನ ಪ್ರತಿವಾದಕರಾಗಿ ಕಾಣಿಸಿಕೊಳ್ಳುವ ಕೌರವರು ಮುಂದಿನ ತಲೆಮಾರಿನ ಕವಿಗಳ ಕೈಯಲ್ಲಿ ಅತ್ಯಂತ ದುಷ್ಟರು ಮತ್ತು ಎಲ್ಲೆ ಮೀರಿದ ಕೇಡಿನ ಪ್ರತಿನಿಧಿಗಳಾಗಿ ಮಾರ್ಪಟ್ಟಿರಬಹುದಾದಂತೆ, ಭಿನ್ನ ಮನೋಧರ್ಮ ಮತ್ತು ಮನೋಭಾವದ ಜನರಾಗಿ ಮೂಲ ರಾಮಾಯಣದಲ್ಲಿ ಕಾಣಬರುವ ರಾಕ್ಷಸರು ಮುಂದೆ ಬರುಬರುತ್ತಾ ಇಂದಿನ ಅರ್ಥದಲ್ಲಿ ರಾಕ್ಷರಾಗಿ ಬದಲಾಗಿರಬಹುದು.

ರಾವಣನನ್ನು ಸೋಲಿಸಲು ವಾನರ ಸಖ್ಯ ಬೆಳೆಸಿದ ರಾಮ ಲಕ್ಷ್ಮಣರು ಅವರನ್ನು ಆ ಮೂಲಕ ತಮ್ಮ ಪ್ರಭಾವ ವಲಯದಲ್ಲಿ ತಂದುಕೊಂಡಂತೆ, ರಾವಣನ ಇತಿಹಾಸ ಮುಗಿದ ನಂತರ ವಿಭೀಷಣನ ಮೂಲಕ ಅವರನ್ನೂ ತಮ್ಮ ಪ್ರಭಾವವಲಯಕ್ಕೆ ತಂದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆ ತರಹದ ಪ್ರವೃತ್ತಿಗಳನ್ನು ಹೋಮರನ ಕಾಲದ ಅಖೈಯನ್ನರಲ್ಲಾಗಲಿ ಅಥವಾ ಟ್ರೋಜನ್ನರನ್ನಾಗಲಿ ಕಾಣಲಾಗುವುದಿಲ್ಲ. ಅವು ಕಾಣಿಸಿಕೊಳ್ಳುವುದು ರೋಮನ್‌ ಸಮಾಜದ ವರ್ಜಿಲ್‌ ಕೃತಿಯಲ್ಲಿ; ರೋಮನ್ನರ ಆ ಮಹತ್ವಾಕಾಂಕ್ಷೆಯ ಪ್ರವೃತ್ತಿಯನ್ನು ರಾಮಾಯಣ ಕಾಲದ ಅಂತರ್ಗತೀಕರಣದ ಪ್ರವೃತ್ತಿ ಜತೆ ಹೋಲಿಸಿ, ಅವೆರಡರ ನಡುವಿನ ಅಂತರ ಮತ್ತು ವ್ಯತ್ಯಾಸಗಳನ್ನು ಇಲ್ಲಿಯೆ ಗುರುತಿಸುವುದು ಉತ್ತಮ.

‘ಈನೀಡ್‌’ನಲ್ಲಿ ಅಭಿವ್ಯಕ್ತಗೊಳ್ಳುವುದು ಸಾಮ್ರಾಜ್ಯಷಾಹಿ ಪ್ರವೃತ್ತಿ; ಟರ್ನಸ್‌ನನ್ನು ದ್ವಂದ್ವ ಯುದ್ಧದಲ್ಲಿ ಅಂತ್ಯಗೊಳಿಸಿದ ಈನಿಯಾಸ್‌ ಮತ್ತಾತನ ಸಹಚರರು ತಮ್ಮ ಎಲ್ಲಾ ಟ್ರೋಜನ್‌ ಲಕ್ಷ್ಮಣಗಳನ್ನು ಕೈಬಿಟ್ಟು ರೋಮನ್‌ ವಿಧಿವಿಧಾನಗಳನ್ನು ಅನುಸರಿಸಬೇಕು ಎಂಬ ಷರತ್ತುಗಳನ್ನು ನೆನಪಿಗೆ ತಂದುಕೊಳ್ಳಬೇಕು. ರೋಮನ್‌ ನೆಲದಲ್ಲಿ ನೆಲೆಕಂಡುಕೊಳ್ಳಲು ಬಂದ ಈನಿಯಾಸ್‌, ರೋಮನ್‌ ಆಗಲು ಒಪ್ಪಿಕೊಂಡ ನಂತರವೆ ಆತನನ್ನು ಸ್ವೀಕರಿಸಲಾಯಿತು. ಯಾವುದೇ ಸಾಮ್ರಾಜ್ಯಷಾಹಿ ಪ್ರವೃತ್ತಿ ಮತ್ತು ಮನೋಧರ್ಮದ ಪ್ರಮುಖ ಲಕ್ಷಣವೇ ಅದು. ತಮ್ಮ ತರಹವೇ ಬೇರೊಬ್ಬರು ಚಿಂತಿಸಬೇಕು ಚಿಂತಿಸಬೇಕು ಮತ್ತು ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುವುದು ಮಾತ್ರವಲ್ಲ, ಅದನ್ನು ಯಾವುದಾದರೊಂದು ಮಾರ್ಗ ಅಥವಾ ರೂಪದಲ್ಲಿ ಕಡ್ಡಾಯಮಾಡುವುದು ಹಾಗೂ ಎಲ್ಲ ಅರ್ಥದಲ್ಲೂ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸುವ ಪ್ರವೃತ್ತಿ, ಯುರೋಪ್‌ ಮೂಲದ ಜನರಲ್ಲಿ ಕಾಲಕ್ಕನುಗುಣ ಪಡೆದುಕೊಂಡ ಬದಲಾವಣೆ ಅನುಸರಿಸಿ ಇಂದಿಗೂ ಮುಂದುವರಿದಿರುವುದನ್ನು ಕಾಣಬಹುದಾಗಿದೆ ಎಂಬ ಮಾತನ್ನು ಮತ್ತೆ ಪುನರುಚ್ಚರಿಸಬೇಕಾದ ಅಗತ್ಯವಿಲ್ಲ.

ಮಹಾಭಾರತದ ಕೌರವರಾಗಲಿ ಪಾಂಡವರಾಗಲಿ ತಮ್ಮ ಪಾಳಯದ ವ್ಯಾಪ್ತಿಗೆ ಬಂದ ಯಾರ ಮೇಲೂ ಯಾವುದೇ ಷರತ್ತುಗಳನ್ನು ವಿಧಿಸಿದ ಉದಾಹರಣೆ ಇಲ್ಲ. ಹಿಡಿಂಬೆಯನ್ನು ಮದುವೆಯಾದ ಭೀಮ ಕೂಡ ಆ ವರ್ತನೆ ತೋರುವುದಿಲ್ಲ: ಅವಳನ್ನು ಅವಳು ಇದ್ದ ಸ್ಥಿತಿ ಮತ್ತು ರೂಪದಲ್ಲಿ ಸ್ವೀಕರಿಸುತ್ತಾನೆ. ಅದೇ ತರಹದ ಪ್ರವೃತ್ತಿಗಳು ರಾಮಾಯಣ ಕಾಲದಲ್ಲೂ ಸ್ವಲ್ಪ ಬದಲಾವಣೆಗಳೊಡನೆ ಮುಂದುವರಿದಂತೆ ಕಾಣುತ್ತದೆ. ಸುಗ್ರೀವ ಮತ್ತು ರಾಮನ ನಡುವೆ ವಾಲಿಯ ವಿಚಾರವಾಗಿ ಏರ್ಪಡುವ ಒಪ್ಪಂದ ಮತ್ತು ಆಗ ವಿಧಿಸಲಾಗುವ ಷರತ್ತು ಬಿಟ್ಟರೆ, ವಾನರರನ್ನು ತಮ್ಮ ಪ್ರಭಾವವಲಯದ ಭಾಗವಾಗಿ ಸ್ವೀಕರಿಸುವಾಗ ರಾಮ ಯಾವುದೇ ತರಹದ ನಿಯಮಾವಳಿಗಳನ್ನು ವಿಧಿಸಲು ಹೋಗುವುದಿಲ್ಲ. ವಾನರರನ್ನು ಅವರು ಇದ್ದ ಸ್ಥಿತಿಯಲ್ಲಿಯ ಸ್ವೀಕರಿಸುವಂತೆಯೇ, ರಾವಣನ ಇತಿಹಾಸ ಮುಗಿದ ನಂತರ ವಿಭೀಷಣನನ್ನು ಅಷ್ಟೇ ಸಹಜವಾಗಿ ಯಥಾಸ್ಥಿತಿಯಲ್ಲಿ ಸ್ವೀಕರಿಸುತ್ತಾನೆ. ಅವರ ಮನೋಧರ್ಮ ಮತ್ತು ಮನೋಭಾವದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲು ಹೋಗುವುದಿಲ್ಲ.

ಮಾಲವಿಕೆಯನ್ನು ಅವಳಿದ್ದ ಸ್ಥಿತಿಯಲ್ಲಿಯೇ ಸ್ವೀಕರಿಸುವ ಅಗ್ನಿಮಿತ್ರ, ಊರ್ವಸಿಯ ಪುರು, ವನವಾಸಿ ಋಷಿಪುತ್ರಿಯನ್ನು ಅವಳಿದ್ದ ಸ್ಥಿತಿಯಲ್ಲಿಯೇ ಸ್ವೀಕರಿಸುವ ದುಷ್ಯಂತ; ಕಾಳಿದಾಸನ ಕಾಲದಲ್ಲೂ ಅದೇ ಮನೋಧರ್ಮ ಮುಂದುವರಿದು ಬಂದುದಕ್ಕೆ ಕೆಲ ನಿದರ್ಶನಗಳು ಮಾತ್ರ. ‘ಕುಮಾರಸಂಭವಂ’ನ ಶಿವ, ಪಾರ್ವತಿಯ ನಡವಳಿಕೆಯಲ್ಲಿ ಪ್ರೌಢಿಮೆ ಬಂದ ನಂತರ ಸ್ವೀಕರಿಸಲು ಮುಂದಾಗುವಂತೆ, ಅಗ್ನಿಪರೀಕ್ಷೆಯ ನಂತರ ರಾವಣನ ವಶದಿಂದ ಮರಳಿ ಬಂದ ಸೀತೆಯನ್ನು ಸ್ವೀಕರಿಸಲು ರಾಮ ಸಿದ್ಧನಾಗುತ್ತಾನೆ. ಹೆಲೆನ್‌ ಮೊದಲ ಪತಿ ಮೆನಲೊಸ್‌ ಆಗಲಿ, ಎರಡನೇ ಗಂಡನಾದ ಪ್ಯಾರಿಸ್‌ ಆಗಲಿ ಶಿವ ಅಥವಾ ರಾಮನ ತರಹ ಅವಳನ್ನು ಪರೀಕ್ಷಿಸಲು ಹೋಗುವುದಿಲ್ಲ. ಟರ್ನಸ್‌ನ ಜತೆ ಮದುವೆಗೆ ಸಿದ್ಧಳಾಗಿದ್ದ ಲ್ಯಾವಿನಿಯಾಳನ್ನು ಆತನ ಇತಿಹಾಸ ಮುಗಿದ ನಂತರ ಕೈಹಿಡಿಯಲು ಮುಂದಾದ ಈನಿಯಾಸ್‌, ಅವಳ ಹಿಂದಿನ ಅಧ್ಯಾಯದ ಬಗ್ಗೆ ಯಾವುದೇ ಸಂಕೋಚ ಅಥವಾ ಕುತೂಹಲ ತೋರಿಸದ ನಿರುಂಬಳದ ಮನಸ್ಥಿತಿಯಲ್ಲಿ ನಿಲ್ಲುತ್ತಾನೆ. ಆ ಮನೋಭಾವ ಮತ್ತು ಮನೋಧರ್ಮ ಇಂದಿಗೂ ಯುರೋಪ್‌ ಮೂಲದ ಬದುಕಿನಲ್ಲಿ ಕ್ರಿಯಾಶೀಲವಾಗಿದ್ದು ರಾಮ ಮತ್ತು ಶಿವನ ಮನೋಧರ್ಮದ ವಿವಿಧ ಮುಖಗಳನ್ನು ಭಾರತೀಯ ಮನಸ್ಸು ಮಹಿಳೆಯರ ವಿಚಾರದಲ್ಲಿ ಬೆಳೆಸಿಕೊಂಡಿತು.

ವ್ಯಾಸ ಮತ್ತು ವಾಲ್ಮೀಕಿಯರ ಕೃತಿಗಳಲ್ಲಿ ಭಾರತೀಯವಾದ ಹಿಂದೂ ಪರಂಪರೆಯ ಆರಂಭದ ಕೆಲ ಲಕ್ಷಣಗಳನ್ನು ಗುರುತಿಸಬಹುದಾದರೂ ಅವರಿಬ್ಬರೂ ಇಂದಿನ ಅರ್ಥದಲ್ಲಿ ಹಿಂದೂ ಕವಿಗಳಲ್ಲ ಎಂಬುದನ್ನು ಗಮನಿಸಬೇಕು – ಹೋಮರನಲ್ಲಿ ಯುರೋಪಿನ ಮೂಲಸೆಲೆಯನ್ನು ಗುರುತಿಸಬಹುದಾದರೂ ಆತ ದಾಂತೆಯ ಅರ್ಥದಲ್ಲಿ ಯುರೋಪಿಯನ್‌ ಕ್ರಿಶ್ಚಿಯನ್‌ ಕವಿಯಲ್ಲವಾದಂತೆ. ಆ ಕಾರಣವೆ, ಕ್ರಿಶ್ಚಿಯನ್‌ ರಿಲಿಜನ್‌ ಆಗಮನದಿಂದಾಗಿ ಯುರೋಪನ್ನು ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ ಎಂದು ಬಹಳ ಸುಲಭವಾಗಿ ವಿಭಜಿಸಬಹುದಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ವಿಭಜಿಸಲು ಬರುವುದಿಲ್ಲ. ಕ್ರಿಶ್ಚಿಯನ್‌, ಇಸ್ಲಾಂ ಅಥವಾ ಮತ್ತಾವುದೇ ರಿಲಿಜನ್‌ ಅನ್ನು ಸಾರಾಸಗಟಾಗಿ ಸ್ವೀಕರಿಸಬೇಕಾದ ಅಥವಾ ತಿರಸ್ಕರಿಸಬೇಕಾದ ಅಗತ್ಯ ಭಾರತಕ್ಕೆ ಈವರೆಗೂ ಎದುರಾಗದಿರುವುದು ಆ ತರಹದ ಕಾರಣಗಳಿಂದಾಗಿಯೇ ಇರಬಹುದು. ಭಾರತದ ಸಂಸ್ಕೃತಿ ವೇದಪೂರ್ವಕಾಲದಿಂದಲೂ ನಿರಂತರ ಬದಲಾವಣೆಗೆ ಒಳಗಾಗದೆ ಹರಿದು ಬಂದಿದೆ ಎಂಬ ಭಾವನೆ ಬರಲು ಅಂತಹ ಅನೇಕ ಅಂಶಗಳು ಪೂರಕವಾಗಿರಬಹುದು. ಪರಿಸ್ಥಿತಿ ಅಷ್ಟು ಸರಳವಾಗಿರುವಂತೆ ತೋರುವುದಿಲ್ಲ. ಭಾರತೀಯ ಸಮಾಜ ತನ್ನದೆ ರೀತಿಗನುಗುಣ ಕಂಡುಕೊಂಡಿರುವ ಬದಲಾವಣೆಗಳಿಗೆ ವ್ಯಾಸ – ವಾಲ್ಮೀಕಿ ಮತ್ತು ಕಾಳಿದಾಸರ ನಡುವಿನ ಅಂತರವೆ ಉದಾಹರಣೆ.

II

ಭಾರತೀಯ ಬದುಕಿನ ಮೂಲ ಆಶಯಗಳೆಂದು ಕೆಲವರು ಪರಿಗಣಿಸುವ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಮೊದಲಾದ ಪುರುಷಾರ್ಥಗಳಿಗೆ ಖಚಿತವಾಗಿ ಅಭಿವ್ಯಕ್ತಿ ನೀಡಿರುವ ಕವಿಯಂತೆ ಕಾಳಿದಾಸ ಮೇಲುನೋಟಕ್ಕೆ ತೋರಿ ಬರುತ್ತಾನಾದರೂ ಆತನ ನಿಜವಾದ ಆಸಕ್ಕಿ ಹಾಗೂ ಕಾಳಜಿಗಳು ಬೇರೆಯೇ ಆಗಿರುವಂತೆ ತೋರುತ್ತದೆ.

ತಪಸ್ಸಿನಲ್ಲಿ ನಿರತನಾದ ಶಂಬೂಕನ ಸಂಹಾರದ ಪ್ರಕರಣದ ಕತೆಯನ್ನು ಕೇವಲ ಐದು ಶ್ಲೋಕಗಳಲ್ಲಿ ಅತ್ಯಂತ ಯಾಂತ್ರಿಕವಾಗಿ ಬಹಳ ಸಂಗ್ರಹ್ಯವಾಗಿ ‘ರಘುವಂಶಂ’ ನಿರೂಪಿಸಿರುವುದನ್ನು ಬಿಟ್ಟರೆ, ಕಾಳಿದಾಸ ಎಲ್ಲೂ ವರ್ಣವ್ಯವಸ್ಥೆಗೆ ಪ್ರಾಮುಖ್ಯ ನೀಡಿದಂತೆ ಕಾಣುವುದಿಲ್ಲ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗಿಂತಲೂ ಹೆಚ್ಚಾಗಿ ಅರ್ಹನಾದ ಪುತ್ರನನ್ನು ಪಡೆಯುವುದೇ ಜೀವನದ ಸಾರ್ಥಕ್ಯ, ಅದೇ ನಿಜವಾದ ಪುರುಷಾರ್ಥ ಎಂಬುದಕ್ಕೆ ಕಾಳಿದಾಸ ಹೆಚ್ಚು ಒತ್ತು ನೀಡಿದಂತೆ ತೋರುತ್ತದೆ. ಅವನ ಎಲ್ಲ ಪ್ರಮುಖ ಕೃತಿಗಳ – ಮಾಲವಿಕಾಗ್ನಿಮಿತ್ರ ಹೊರತು – ನಾಯಕರ ಹಂಬಲ, ಕನಸು ಮತ್ತು ಗುರಿ ಅರ್ಹನಾದ ಪುತ್ರನನ್ನು ಪಡೆಯುವುದೇ ಆಗಿರುತ್ತದೆ. ಅಂಶೋದ್ಧಾರಕನಾದ ಪುತ್ರನನ್ನು ಪಡೆಯುವಲ್ಲಿ ವಿಫಲವಾದ ಕಾರಣ ರಘುವಂಶ ಅವನತಿಯ ಹಾದಿ ಹಿಡಿಯಿತು ಎಂಬ ಸೂಚನೆ ‘ರಘುವಂಶಂ’ ಕೃತಿಯಲ್ಲಿ ದೊರಕುತ್ತದಾದರೂ ಕಾವ್ಯ ಆಶಾವಾದದಲ್ಲಿ ಕೊನೆಗೊಳ್ಳುತ್ತದೆ. – ಸ್ರೀಲೋಲಪತೆ ಕಾರಣ ಕ್ಷಯಿಸಿ ಹೋದ ಅಗ್ನಿವರ್ಣನ ಗರ್ಭಿಣಿ ಪತ್ನಿಯೊಬ್ಬಳು ರಾಣಿಯಾಗಿ ಪಟ್ಟಕ್ಕೆ ಬರುವುದರೊಂದಿಗೆ. ಕವಿಗೆ ರಾಣಿಯ ಹೆಸರು ಕೂಡ ಅಷ್ಟು ಮುಖ್ಯವಾಗುವುದಿಲ್ಲ. ಏಕೆಂದರೆ, ಅವನ ಮೊದಲ ಕೃತಿಗಳಲ್ಲಿ ಒಂದಾದ ‘ಮಾಲವಿಕಾಗ್ನಿಮಿತ್ರಂ’ ಪ್ರಧಾನವಾಗಿ ವರ್ಣಸಂಕರದ ಕತೆ. ‘ಕುಮಾರಸಂಭವಂ’,‘ವಿಕ್ರಮೋರ್ವಶೀಯಂ’,‘ಅಭಿಜ್ಞಾನ ಶಾಕುನ್ತಲಂ’, ಮೊದಲಾದ ಎಲ್ಲ ಕೃತಿಗಳಲ್ಲಿ ಪ್ರಮುಖವಾಗಿ ಬರುವುದೇ ವರ್ಣಸಂಕರದ ಸಮಸ್ಯೆ.

ಕಾಳಿದಾಸ ಹಾಗೂ ಆತನ ಕೃತಿಗಳನ್ನು ಆ ಕಾರಣ ಕುರಿತಂತೆ ಹೊಸ ಓದು ಅಗತ್ಯ.

ಅವನ ಕೃತಿಗಳಲ್ಲಿ ಬ್ರಾಹ್ಮಣ ಪರಿಸರ ಅಥವಾ ಬ್ರಾಹ್ಮಣರು ಮಂತ್ರಿಗಳಾಗಿ ಅಧಿಕಾರ ನಡೆಸುವ ಚಿತ್ರಣ ಅಷ್ಟಾಗಿ ದೊರಕುವುದಿಲ್ಲ. ಕಾಣಿಸಿಕೊಳ್ಳುವುದು ಪುರೋಹಿತರಾಗಿ. ಅದರಲ್ಲೂ ಶಾಕುನ್ತಲೆ ನಾಟಕದಲ್ಲಿ ಬರುವ ಕಣ್ವ ಮತ್ತು ಮಾರೀಚ ಋಷಿಗಳು ತಾವು ಸಂಪಾದಿಸಿದ ಬ್ರಹ್ಮಜ್ಞಾನದ ಫಲದಿಂದ ಬ್ರಾಹ್ಮಣರಾದರೋ ಅಥವಾ ಹುಟ್ಟಿನಿಂದ ಬ್ರಾಹ್ಮಣರೋ ಎಂಬಿತ್ಯಾದಿ ವಿವರಗಳ ಬಗ್ಗೆ ಕಾಳಿದಾಸ ತೋರುವ ದಿವ್ಯನಿರ್ಲಕ್ಷ್ಯ ಒಟ್ಟಾರೆ ಎಪಿಕ್‌ ಮಾದರಿಯ ಕಾವ್ಯ ಪರಂಪರೆಗೆ ಸಹಜವಾದುದಾಗಿದೆ: ತಪಸ್ಸಿನ ಫಲ ಮತ್ತು ಬದುಕಿನ ಮಾರ್ಗದಿಂದಾಗಿ ಅವರು ಋಷಿಗಳು ಎಂಬ ವಿವರಕ್ಕೆ ಹೆಚ್ಚು ಒತ್ತು ನೀಡಿರುವಂತೆ ತೋರುತ್ತದೆ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಕಾಳಿದಾಸನ ನಾಟಕಗಳಲ್ಲಿ ಬರುವ ವಿದೂಷಕರು ಜಾತಿಯಲ್ಲಿ ಬ್ರಾಹ್ಮಣರಾಗಿರುವುದು ಮತ್ತು ಅವರ ವರ್ತನೆ ಲೇವಡಿಗೊಳಗಾಗುವುದೇ ಜಾಸ್ತಿ.

ಕೆಳಜಾತಿಯವರಾದ ಮೌರ್ಯವಂಶದ ರಾಜರನ್ನು ಮೂಲೋತ್ಪಾದನೆ ಮಾಡವುದರ ಮೂಲಕ ವರ್ಣವ್ಯವಸ್ಥೆಯನ್ನು ಧಿಕ್ಕರಿಸಿ ರಾಜರಾಗಿ ಅಧಿಕಾರ ನಡೆಸಿರಬಹುದಾದ ಬ್ರಾಹ್ಮಣ ವಂಶದ ರಾಜನೊಬ್ಬನ ಕತೆ ಹೇಳುವ ‘ಮಾಲವಿಕಾಗ್ನಿ ಮಿತ್ರಂ’ ನಾಟಕದ ಅಗ್ನಿಮಿತ್ರನ ಆಸ್ಥಾನದಲ್ಲೂ ಬ್ರಾಹ್ಮಣರಾರೂ ಅಮಾತ್ಯರಾಗಿರುವ ಸೂಚನೆ ದೊರಕುವುದಿಲ್ಲ: ರಘು ವಂಶದ ರಾಜಪುರೋಹಿತರಾಗಿ ವಸಿಷ್ಠರು ಇರುವಂತೆಯೇ, ಬ್ರಾಹ್ಮಣರ ಪಾತ್ರ ಅಗ್ನಿಮಿತ್ರನ ಆಸ್ಥಾನದಲ್ಲೂ ರಾಜಪುರೋಹಿತ ಅಥವಾ ರಾಜಗುರು ಇಲ್ಲವೇ ವಿದೂಷಕರ ನಗೆಪಾಟಲಿನ ಪಾತ್ರಕ್ಕೆ ಸೀಮಿತವಾಗಿರುತ್ತದೆ.

ಜಾತಿಯಲ್ಲಿ ಬ್ರಹ್ಮಣನಾಗಿದ್ದಿರಬಹುದಾದ ಅಗ್ನಿಮಿತ್ರ[5] ಹುಟ್ಟಿನಿಂದ ಕೀಳುಜಾತಿಯವರಾದ ಮಗಧ ರಾಜವಂಶಕ್ಕೆ ಸೇರಿದ ಮಾಲವಿಕಾಳನ್ನು ಮದುವೆಯಾಗಲು ಕಷ್ಟಪಡುವ ವರ್ಣಸಂಕರದ ಕತೆ ಮಾಲವಿಕಾಗ್ನಿ ಮಿತ್ರ. ಅದೇ ತರಹದ ವರ್ಣಸಂಕರದ ಸಮಸ್ಯೆ ವಿಕ್ರಮೋರ್ವಶೀಯ, ಅಭಿಜ್ಞಾನ ಶಾಕುನ್ತಲ, ಕುಮಾರಸಂಭವ ಕೃತಿಗಳಲ್ಲೂ ಮುಂದುವರಿಯುತ್ತದೆ. ಕ್ಷತ್ರಿಯನಾದ ಪುರೂರವ ಅಪ್ಸರ ಸ್ತ್ರೀಯಾದ ಊರ್ವಶಿಯಲ್ಲಿ ತನ್ನ ವಂಶದ ಉತ್ತರಾಧಿಕಾರಿಯನ್ನು ಪಡೆಯುವ ಕತೆಯನ್ನು ವಿಕ್ರಮೋರ್ವಶೀಯ ಹೇಳಿದರೆ, ಚಂದ್ರವಂಶದ ರಾಜನಾದೆ ದುಷ್ಯಂತ ವನವಾಸಿಯಾದ ಶಕುನ್ತಲೆಯಲ್ಲಿ ಚಕ್ರವರ್ತಿ ಮಗನನ್ನು ಪಡೆಯುವ ಕತೆ ಅಭಿಜ್ಞಾನ ಶಾಕುನ್ತಲದಲ್ಲಿ ಬರುತ್ತದೆ. ಅದೇ ತರಹ ವನವಾಸಿಯಾದ ಯಂಕ – ಮಂಕ ಶಿವ ಪರ್ವತರಾಜನ ಮಗಳಾದ ಪಾರ್ವತಿಯನ್ನು ಮದುವೆಯಾಗಿ, ವಂಶೋದ್ಧಾರಕನಾದ ವೀರಪುತ್ರನಿಗೆ ತಂದೆ ತಾಯಿಗಳಾಗಲು ಸಿದ್ಧವಾಗುವ ಕತೆಯೇ ಕುಮಾರ ಸಂಭವ. ಸ್ವಚ್ಛಂದ ಬದುಕಿಗೆ ಹೆಸರಾದವರನ್ನು ಅಪ್ಸರೆಯರು ಎಂಬುದಾಗಿ ವೈಭವೀಕರಿಸಲಾಗುತ್ತದೆ. ಎಂದು ಹೇಳುವುದು ಅಗತ್ಯವಿಲ್ಲವಾದಂತೆ, ಕುಮಾರಸಂಭವದಲ್ಲಿ ಬರುವ ಶಿವ ಮೂಲತಃ ಶ್ಮಶಾನವಾಸಿಯಾದ ಎಂಕಿಡು ತರಹದ ಮನುಷ್ಯ ಎಂದು ಹೇಳಬೇಕಾದ ಅಗತ್ಯವಿಲ್ಲ:

ವಿಭೂಷಣೋದ್ಭಸಿ ಪಿನದ್ಧಭೋಗಿ ವಾ ಗಜಾಜಿನಾಲಂಬಿ ದುಕೂಲಧಾರಿ ವಾ
ಕಪಾಲಿ ವಾ ಸ್ಯಾದಥವೇಂದುಶೇಖರಂ ನ ವಿಶ್ವಮೂರ್ತೇರವಧ್ಯಾತೇ ವಪುಃ || ೭೮ || ಸರ್ಗ ೫

ಶಾಕುನ್ತಲೆ ಕೂಡ ವರ್ಣಸಂಕರದಿಂದ ಹುಟ್ಟಿದವಳು. ಅವಳ ತಂದೆಯಾದ ವಿಶ್ವಾಮಿತ್ರ ರಾಜತ್ವ ಕೈಬಿಟ್ಟು ಬ್ರಹರ್ಷಿ ಪಟ್ಟಕ್ಕಾಗಿ ಘೋರ ತಪಸ್ಸು ಕೈಗೊಂಡ ತಾಪಸಿ. ಅವಳ ತಾಯಿ ಮೇನಕೆ, ಊರ್ವಶಿ ತರಹದ ರೂಪಸಿ; ಅವರಾರೂ ತಮಗೆ ಹುಟ್ಟಿದ ಮಕ್ಕಳನ್ನು ಪೋಷಿಸಿ ಬೆಳೆಸುವಷ್ಟು ತಾಳ್ಮೆ, ಸಮಾಧಾನ ಅಥವಾ ಪುರುಸೊತ್ತಿಲ್ಲದವರು. ಪುರು ಮತ್ತು ಊರ್ವಶಿಗೆ ಹುಟ್ಟಿದ ಆಯುವನ್ನು ಬೇರೆ ಯಾರೋ ಲಾಲಿಸಿ ಪೋಷಿಸುತ್ತಾರೆ. ಶಾಕುನ್ತಲೆಯನ್ನು ಪೋಷಿಸುವ ಹೊಣೆ ಕಣ್ವರು ಮತ್ತು ಗೌತಮಿ ಪಾಲಿಗೆ ಬರುತ್ತದೆ. ಮಕ್ಕಳನ್ನು ಹುಟ್ಟಿಸುವವರೆ ಬೇರೆ ಮತ್ತು ಲಾಲಿಸಿ ಪೋಷಿಸುವವರೆ ಬೇರೆ.[6] ಆ ತರಹದ ಸಮಸ್ಯೆಯ ಕಾರಣ ತಪೋವನದಲ್ಲಿ ಬೆಳೆಯಬೇಕಾಗಿ ಬಂದ ಬಾಲೆಯೊಬ್ಬಳು ಬದುಕಿನಲ್ಲೆದುರಿಸಬೇಕಾದ ಬಿಕ್ಕಟ್ಟಿನ ಕತೆಯನ್ನು ಕಾಳಿದಾಸ ಬಹಳ ಸಹಾನುಭೂತಿ ಮತ್ತು ಮಾನವೀಯ ಕಳಕಳಿಯಿಂದ ನಿರ್ವಹಿಸುತ್ತಾನೆ. ಹುಟ್ಟಿನ ಸಮಸ್ಯೆ ಮುಂದೆ ಬದುಕಿನ ಮೇಲೆ ಉಂಟುಮಾಡುವ ಪರಿಣಾಮ ಕುರಿತಂತೆ ಕೂಡ ಆತ ಆಗಲೇ ಯೋಚಿಸಿರುವುದು. ಊರ್ವಶಿ, ಮೇನಕೆ ಮೊದಲಾದವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ರಾಜರು, ಚಕ್ರವರ್ತಿಯಾಗಿ ಸ್ವೀಕರಿಸುವ ಮತ್ತು ಅವರನ್ನು ದೇಶದ ಸಂಸ್ಥಾಪಕರಾಗಿ ಒಪ್ಪಿಕೊಳ್ಳಲು ಸಿದ್ಧರಿದ್ಧ ಜನರ ಕಾಲದ ಕವಿಯಾಗಿ ಕಾಳಿದಾಸ ತೋರಿ ಬರುವುದು: ಭಾರತ ಎಂಬ ಹೆಸರು ಬರಲು ಕಾರಣನಾದ ಭರತ, ಶಾಕುನ್ತಲೆಯ ಪುತ್ರ, ಅವನಿಗೆ ತಾಯಿಯಾದ ಶಾಕುನ್ತಲೆ ಮೇನಕೆಯ ಮಗಳು ಎಂದು ಪ್ರತಿಪಾದಿಸಲು ಧೈರ್ಯಬೇಕು.

 

[1]ಅದಕ್ಕೂ ಪೂರ್ವದ್ದಾಗಿರಬಹುದಾದ ಮಹಾಭಾರತವು ಆ ಅಪೂರ್ವ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಿದ ಹಿನ್ನೆಲೆಯನ್ನು ಅರಿಯುವುದು ಇಲ್ಲಿನ ಪ್ರಮುಖ ಆಸಕ್ತಿಗಳ ಪೈಕಿ ಒಂದು.

[2]ವೀರಪುತ್ರನಿಗಾಗಿ ದನ ಕಾಯುವ ರಘುವಂಶದ ದಿಲೀಪ ಆ ಮಾತಿಗೆ ಆ ಮಟ್ಟಿಗಾದರೂ ಅಪವಾದವಾಗಿ ಕಾಣಬರುತ್ತಾನೆ.

[3]They assume that all societies change and that in a period stretching from 2500 B.C. to A.D. 1000 Indian society and its institutions must have undergone change; it is the work of the historian to study the nature of this change. The idea of a static society is clearly no longer tenable. – Romila Thapar Ancient Indian Social History, ಪುಟ ೨೧-೨೨

[4]ನ ಧರ್ಮಸೌಕ್ಷ್ಮ್ಯಾತ್ಸುಭಗೇ ವಿವಕ್ತುಂ

ಶಕ್ನೋಮಿ ತೇ ಪ್ರಶ್ನಮಿಮಂ ಯಥಾವತ್‌ |

ಅಸ್ವೋಹ್ಯಶಕ್ತಃ ಪಣಿತುಂ ಪರಸ್ವಂ

ಸ್ತ್ರೀಯಶ್ಚ ಭರ್ತುರ್ವಶತಾಂ ಸಮೀಕ್ಷ್ಯ || ೪೦ ||

ಯುಧಿಷ್ಠಿರಃ ಸತ್ಯಮಥೋ ನ ಜಹ್ಯಾತ್‌ |

ಉಕ್ತಂ ಜಿತೋsಸ್ಮೀತಿ ಚಪ್ಡಾವೇನ

ತಸ್ಮಾನ್ನ ಶಕ್ನೋಮಿ ವಿವೇಕ್ತುಮೇತತ್‌ || ೪೧ || ಸಭಾಪರ್ವ, ಅಧ್ಯಾ ೬೦

[5]Fifty years after him, Brhadraha was violently removed by the army commander Pusyamitra, while the last Sunga in the line of Pusyamitra was killed by the Brahmin minister who made himself king against all vedic precept or tradition.    -An Introduction to the Study of Indian History, ಪುಟ೨೦೧

[6]ಇಂದಿನಅಬಲಾಶ್ರಮಅಥವಾಅನಾಥಾಲಯಗಳಹಿಂದಿನರೂಪವಾಗಿಯಾರಾದರೂಕಣ್ವಋಷಿಗಳಆಶ್ರಮವನ್ನುಚಿತ್ರಿಸಿಕೊಂಡರೆ, ಅಂಥವರನ್ನುತಲೆಹರಟೆಗಳೆಂದುದೂಷಿಸಲುಬರುವುದಿಲ್ಲ.