ಮಹಾಭಾರತ ರಾಮಾಯಣಗಳ ಆಕರ್ಷಣೆಯ ಹಿಮಾಲಯದಿಂದ ಬಿಡಿಕೊಂಡು ವ್ಯಾಸ ವಾಲ್ಮಿಕಿಯರ ಪರಂಪರೆಯನ್ನು ಅದರ ನಿಜವಾದ ಅರ್ಥದಲ್ಲಿ ಮುಂದುವರಿಸಿದ ಕವಿ ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಕಾಣಸಿಗುವುದು ಒಬ್ಬಮಾತ್ರ. ಮೌಖಿಕ ಎಪಿಕ್‌ ಪರಂಪರೆಯಿಂದ ಪಡೆಯಬಹುದಾದನ್ನು ಪಡೆದು ಲಿಖಿತ ಎಪಿಕ್‌ ಮಾದರಿಯ ಕಾವ್ಯ ಪರಂಪರೆಯನ್ನು ನಿರ್ಮಿಸುವ ಹಾದಿಯಲ್ಲಿ ಮುನ್ನಡೆದ ಆತ, ಕಾಲ ಮತ್ತು ಬದುಕಿಗೆ ಸ್ಪಂದಿಸುವ ವಿಚಾರದಲ್ಲಿ ಅದೇ ವ್ಯಾಸ ಮತ್ತು ವಾಲ್ಮೀಕಿಯರ ಹಾದಿಯಲ್ಲಿ ಹಿಂದುಮುಂದಾಗಿ ಸಾಗುವುದು ಅತ್ಯಂತ ವಿಚಿತ್ರವಾಗಿ ಕಾಣದಿರುವುದಿಲ್ಲ. ಭಾರತದ ವೈಶಿಷ್ಟ್ಯ ಆಗಿದ್ದಿರಬಹುದಾದ ಕಾಲನ ಬಗೆಗಿನ ದಿವ್ಯನಿರ್ಲಕ್ಷ್ಯ ತೋರುವ ಪರಂಪರೆ ಕೂಡ, ಆತನಿಂದಲೇ ಮೊದಲಾದಂತೆ ಕಾಣುತ್ತದೆ. ಅಥವಾ ಭಾರತದ ಆ ಗುಣ ಮತ್ತು ಸ್ವಭಾವವನ್ನು ಪ್ರಧಾನಕ್ಷಣವಾಗಿ ಪ್ರಕಟಿಸಿದ ಕವಿ ಆತ ಆಗಿದ್ದಿರಬಹುದು. ಲಿಖಿತ ಎಪಿಕ್‌ ಮಾದರಿ ಕಾವ್ಯವನ್ನು ಭಾರತವನ್ನು ನೀಡಿದ ಮೊದಲ ಕವಿ ಕೂಡ ಆತನೆ ಆಗಿರುವುದು.

ಆತನ ವಿಶಿಷ್ಟತೆ ಅಲ್ಲಿಗೆ ನಿಲ್ಲುವುದಿಲ್ಲ.

ಆತನ ಮತ್ತೊಂದು ವಿಶೇಷತೆ ಎಂದರೆ, ಗ್ರಂಥಸ್ಥ ಭಾಷೆಯೊಂದನ್ನು ತನ್ನ ಕೃತಿಗಳ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆರಿಸಿಕೊಂಡು ಆಡುಭಾಷೆಯಲ್ಲಿ ಕೆಲಸ ಮಾಡುವ ಕವಿಗಳು ಅಊಯೆ ಪಡಬಹುದಾದಂತಹ ಅಪರೂಪದ ಸಾಧನೆ ಮಾಡಿರುವುದು. ಆತನಿಗೆ ಹೋಲಿಕೆಯಾಗಿ ನಿಲ್ಲಬಲ್ಲ ಮತ್ತೊಬ್ಬ ಕವಿ ಈ ಜಗತ್ತಿನ ಬೇರಾವುದೆ ಗ್ರಂಥಸ್ಥ ಭಾಷೆಯಲ್ಲಿ ಅವತರಿಸಿದ ಉದಾಹರಣೆ ಇಲ್ಲ. ಸಂಸ್ಕೃತದ ತರಹವೆ ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸಿದ ನಂತರ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಲ್ಲೂ ಅಂತಹ ಮಹತ್ವದ ಕವಿ ಹುಟ್ಟಲು ಸಧ್ಯವಾಗಿಲ್ಲ. ಅಂತಹ ಆತನ ಸಾಧನೆ, ಯಶಸ್ಸಿನ ಗುಟ್ಟು ಹಾಗೂ ಪರಂಪರೆ ಕಟ್ಟಲು ಆತ ನಡೆಸಿದ ಪ್ರಯತ್ನಗಳ ಹಿಂದಿನ ವಿಶೇಷತೆಯನ್ನು ಅರಿತುಕೊಳ್ಳಲು ಸಾಧ್ಯವಾಗಿದ್ದಲ್ಲಿ ಭಾರತದ ಸಾಹಿತ್ಯ ಚರಿತ್ರ್ಯ, ವಿಮರ್ಶೆ ಮತ್ತು ಕಾವ್ಯಮೀಮಾಂಸೆಯ ಗತಿ – ಸ್ವಲ್ಪ ಪ್ರಮಾಣದಲ್ಲಿಯಾದರೂ ಬದಲಾಗುತ್ತಿತ್ತು: (ಆ ಮೂಲಕ ಭಾರತದ ಇತಿಹಾಸ ಕೂಡ).

ಅಂತಹ ಅನೇಕ ವಿಚಿತ್ರ ಮತ್ತು ವಿಶಿಷ್ಟತೆಗಳ ಸಂಗಮವಾದ ಆತ ಬೇರಾರೂ ಅಲ್ಲ; ತೀರ ಪರಿಚಿತನಾಗಿಯೂ ಅಪರಿಚಿತನಾಗಿ ಉಳಿದ ಕಾಳಿದಾಸ.

ವ್ಯಾಸ – ವಾಲ್ಮೀಕಿಯರ ನಂತರ ಭಾರತದ ಗೌರವ ಕಾಪಾಡುವ ಕೆಲಸ ಮಾಡಿದ ‘ಏಕೈಕ ಪ್ರತಿಭೆ’ ಎಂಬುದನ್ನು ಭಾರತೀಯರು ಅಪ್ರಜ್ಞಾಪೂರ್ವಕವಾಗಿಯಾದರೂ ಕಂಡುಕೊಂಡಿದ್ದರು ಎಂಬುದಕ್ಕೆ ಅನಾಮಿಕನಾದ ಕವಿ – ವಿಮರ್ಶಕನೊಬ್ಬ ರಚಿಸಿದ ಪದ್ಯ ಒಂದು ಉದಾಹರಣೆ: ಆ ಪ್ರಕಾರ ಕಾಳಿದಾಸನಿಗೆ ಸಂಬಂಧಿಸಿದ ಬಹುತೇಕ ಕತೆಗಳು ಜರುಗುವ ಭೋಜನ ಆಸ್ಥಾನದಲ್ಲಿ ಒಮ್ಮೆ ಸಂಸ್ಕೃತ ಕವಿಗಳ ಪಟ್ಟಿ ಮಾಡುವಿಕೆ ಮುಂದುವರಿಯಲೆ ಇಲಲವಾದ ಕಾರಣ, ಉಂಗುರುದ ಬೆರಳಾದ ಎರಡನೇ ಬೆರಳಿಗೆ ಅನಾಮಿಕ ಎಂಬ ಹೆಸರು ಬರಲು ಕಾರಣವಾಯಿತು. ಕಾಳಿದಾಸನ ಸಮನಿಲ್ಲುವ ಮತ್ತೊಂದು ಹೆಸರು ಸಂಸ್ಕೃತ ಭಾಷೆಯಲ್ಲಿ ದೊರಕಲಿಲ್ಲ ಎಂಬುದಾಗಿ ಆ ಅನಾಮಿಕ ವಿಮರ್ಶಕ ಮಾಡಿದ ನಿರ್ಣಯ ; ಅದೇ ಮಾತುಗಳನ್ನು ಕುವೆಂಪು, ಕೃಷ್ಣಮೂರ್ತಿಗಳ ‘ಸಂಸ್ಕೃತ ಕಾವ್ಯ’ ಕೃತಿಗೆ ಬರೆದ ಮುನ್ನುಡಿಯಲ್ಲಿ ಬಹಳ ನಯವಾಗಿ ಹೇಳುತ್ತಾರೆ:

ಸಂಸ್ಕೃತ ಸಾಹಿತ್ಯ ಶೈಲದ ಗೌರೀಶಂಕರನಂತಿರುವ ಕಾಳಿದಾಸನಿಗೆ ಹೊಯ್‌ ಕೈಯಾಗಿ ನಿಲ್ಲಬಲ್ಲ ಮತ್ತೊಬ್ಬ ಸಂಕೃತ ಕವಿಯಿಲ್ಲ. ಪುಟ iv

ಆ ಅನಾಮಿಕ ವಿಮರ್ಶಕ, ವ್ಯಾಸ – ವಾಲ್ಮೀಕಿಯರನ್ನು ಆ ಸಾಲಿನಲ್ಲಿ ಸೇರಿಸಲು ಹೋಗಿಲ್ಲದಿರುವುದು ಮತ್ತು ಕಾಳಿದಾಸನಿಗೆ ಸಮನಾಗಿ ನಿಲ್ಲುವ ಮತ್ತೊಬ್ಬ ಕವಿ ಸಂಸ್ಕೃತ ಭಾಷೆಯಲ್ಲಿ ಬಂದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವುದು ಕುತೂಹಲ ಮೂಡಿಸುತ್ತದೆ: ಸತ್ಯವಾದ ಆ ತೀರ್ಮಾನ ತೆಗೆದುಕೊಳ್ಳಲು ಆತ ಅನುಸರಿಸಿದ ವಿಧಾನ ಮತ್ತು ಮೂಲಮಾನ ಯಾವುದು ಎಂಬುದರ ಕುರಿತಾಗಿ ಮುಂದೆ ಬಂದ ಕವಿಗಳಲ್ಲಾಗಲಿ, ಲಾಕ್ಷಣಿಕರಲ್ಲಾಗಲಿ ಕುತೂಹಲ ಮೂಡದೇ ಹೋದುದು ದೊಡ್ಡ ದೌರ್ಭಾಗ್ಯ ಎಂದರೆ ತಪ್ಪಾಗಲಾರದು. ಆ ಪರಿಸ್ಥಿತಿ ಭಾರತದ ಬಹುತೇಕ ಎಲ್ಲ ಭಾಷೆಯ ಕವಿಗಳಿಗೂ ಅನ್ವಯವಾಗಬಹುದೋ ಏನೋ ಎಂಬ ಅನುಮಾನ ಕೂಡ ಮೂಡದೇ ಹೋದುದು.

ಕೆಲ ಪ್ರಬುದ್ಧ ಚಿಂತನೆ, ಪ್ರೌಢ ಕಲ್ಪನೆ ಹಾಗೂ ಸತ್ಯಗಳು ಮಿಂಚಿನಂತೆ ಹೊಳೆಯುವುದು ಬೇರೆ : ಅನ್ವಯಿಸಬಹುದಾದ ಮೂಲಮಾನಗಳನ್ನು ಅನುಸರಿಸಿ ಬದುಕಿನಲ್ಲಿ ಅವುಗಳನ್ನು ವೈಧಾನಿಕವಾಗಿ ಕಂಡುಕೊಳ್ಳುವುದು ಬೇರೆ; ಅದಕ್ಕೆ ಬೇಕಾದ ಚಿಂತನಕ್ರಮ ಮತ್ತು ವಿಧಾನ ರೂಪಿಸಿಕೊಳ್ಳುವುದರ ಕಡೆಗೆ ಭಾರತೀಯರು ಗಮನಹರಿಸಿದ ಉದಾಹರಣೆ ಇಲ್ಲವೆಂದು ತೋರುತ್ತದೆ. ಆ ಅನಾಮಿಕ ವಿಮರ್ಶಕ ಮಾಡಿದ ನಿರ್ಣಯಗಳನ್ನು ಅನೇಕರು ಉದಾಹರಿಸಿದ್ದಾರೆ ಮತ್ತು ಆ ಮಾತನ್ನು ಮೆಚ್ಚಿ ಕೊಂಡಾಡಿದವರು ಸಾಧಾರಣ ಪ್ರತಿಭಾವಂತರಲ್ಲ! ಆದರೂ ಆ ತೀರ್ಮಾನ ಮತ್ತು ನಿರ್ಣಯ ತಲುಪಲು ಅನುಸರಿಸಬೇಕಾದ ಕ್ರಮ ಮತ್ತು ವಿಧಿವಿಧಾನಗಳನ್ನು ರೂಢಿಸಿಕೊಳ್ಳುವುದರ ಕಡೆಗೆ ಯಾರೂ ಅಷ್ಟಾಗಿ ಯೋಚಿಸಿದಂತೆ ಕಾಣುವುದಿಲ್ಲ. ಅಥವಾ ಹೀಗೂ ಇರಬಹುದು: ಆ ರೀತಿ ತಟ್ಟನೆ ಹೊಳೆದ ಸತ್ಯಗಳನ್ನು ಜೀವನ ವಿಧಾನವಾಗಿ ಮಾರ್ಪಡಿಸದ ಹೊರತು, ಪರಿಸ್ಥಿತಿ ಸುಧಾರಿಸಲು ಬರುವುದಿಲ್ಲ. ವ್ಯಕ್ತಿ ಮತ್ತು ಸಮೂಹ ಅಥವಾ ಸಮೂಹ ಮತ್ತು ವ್ಯಕ್ತಿ ಮಟ್ಟದಲ್ಲಿ ಜರುಗುವ ಆ ತರಹದ ಪ್ರಕ್ರಿಯೆಗಳು ಎಲ್ಲೋ ಒಂದು ಹಂತದಲ್ಲಿಯಾದರೂ ಸಂಧಿಸಬೇಕಾಗುತ್ತದೆ.

ಆ ರೀತಿ ಚಿರಪರಿಚಿತವಾಗಿಯೂ ಅಪರಿಚಿತರಾಗಿ ಉಳಿಯುವ ಇತಿಹಾಸ ಕಾಳಿದಾಸನಿಂದಲೆ ಮೊದಲುಗೊಂಡಂತೆ ಕಾಣುತ್ತದೆ ಎಂದು ಧೈರ್ಯವಾಗಿ ಹೇಳಲು ಬರುವುದಿಲ್ಲ. ಏಕೆಂದರೆ, ಅದೆ ಮರ್ಯಾದೆಯನ್ನು ಭಾರತದ ಜನ ವ್ಯಾಸ – ವಾಲ್ಮೀಕಿಯರಿಗೂ ವಿಸ್ತರಿಸಿದರು. ಇಲ್ಲದೆ ಹೋಗಿದ್ದಲ್ಲಿ ಅನಾಮಿಕ ಕವಿಗಳು ಬರೆದ ‘ಅಪರ ಭಾರತ’ ಮತ್ತು ‘ಉತ್ತರ ರಾಮಾಯಣ’ಗಳನ್ನು ಮಹಾಭಾರತ ಮತ್ತು ರಾಮಾಯಣಗಳ ಭಾಗಗಳಾಗಿ ಸ್ವೀಕರಿಸುವ ಉದಾರತೆ ಆ ಪ್ರಮಾಣದಲ್ಲಿ ವ್ಯಕ್ತವಾಗುತ್ತಿರಲಿಲ್ಲ.

ಅಂತಹ ಅನೇಕ ವಿಚಿತ್ರ ಸನ್ನಿವೇಶಗಳು ಮತ್ತು ಹಿನ್ನೆಲೆಯ ಸೃಷ್ಟಿ ಕಾಳಿದಾಸ.

I

ಭಾರತದಲ್ಲಿ ಲಿಖಿತ ಎಪಿಕ್‌ ಮಾದರಿಯ ಕಾವ್ಯಪರಂಪರೆಯ ಅಧ್ಯಾಯ ತೊರೆದುಕೊಂಡುದೆ ಕಾಳಿದಾಸನಿಂದ : ನಿಜವಾದ ಕೊನೆಯ ಕವಿಯೂ ಆತನೇ ಆಮದು ವಿಚಿತ್ರವೇ ಸರಿ! ರಾಮಾಯಣದ ಬಗೆಗಿನ ಅನುಮಾನ ಮತ್ತು ತಕರಾರುಗಳು ಏನೇ ಇರಬಹುದು ಆದರೆ ‘ಮಾದರಿ ಎಪಿಕ್‌’ ನೀಡಿದ ಕವಿ ವಾಲ್ಮೀಕಿಯಾದಂತೆ, ಬೇಕಾದ ಮಾನದಂಡಗಳನ್ನು ನೀಡುವ ಲಿಖಿತ ಕಾವ್ಯಪರಂಪರೆಯ ‘ಮಾದರಿ ಕೃತಿ’ಯೊಂದನ್ನು ನೀಡಿದ ಕವಿ ಕಾಳಿದಾಸ: ಆತ ನೀಡಿದ ಆ ಕೃತಿಯ ಬಗ್ಗೆ ತೆಗೆಯಬಹುದಾದ ತಕರಾರುಗಳನ್ನು ಗಮನದಲ್ಲಿಟ್ಟುಕೊಂಡು ಆ ಮಾತನ್ನು ಬಹಳ ಧೈರ್ಯದಿಂದ ನಮೂದಿಸಲಾಗಿದೆ.

ಗಯಟೆಯಂತಹ ಕವಿಯ ಮೇಲೆ ಪ್ರಭಾವ ಬೀರಿದ ಭಾರತದ ಏಕೈಕ ಕವಿ ಕೂಡ ಈ ಕಾಳಿದಾಸನೇ! ಅದೊಂದು ರೀತಿಯಲ್ಲಿ ತೀರ ಅಪೂರ್ವ ಎನ್ನಬಹುದಾದ ಘಟನೆ. ಅಂತಹ ಹಲವಾರು ವಿಚಿತ್ರಗಳ ಸಂಗಮ ಕಾಳಿದಾಸ. ಕಾಲನ ಬಗೆಗಿನ ಆ ತರಹದ ದಿವ್ಯನಿರ್ಲಕ್ಷ್ಯ, ಸ್ವಭಾವದಿಂದಾಗಿಯೆ ಬಂದುದಾಗಿರಬಹುದು. ಅಥವಾ ಆತ ಆರಿಸಿಕೊಂಡ ಗ್ರಂಥಸ್ಥ ಭಾಷಾ ಮಾಧ್ಯಮ ಕೂಡ ಆ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿರಬಹುದು. ಕಾಲನ ಬಗ್ಗೆ ದಿವ್ಯ ನಿರ್ಲಕ್ಷ್ಯವಿದ್ದ ಸಂದಿಗ್ಧ ವಾತಾವರಣದ ಕೊಡುಗೆ ಕಾಳಿದಾಸ ಆಗಿದ್ದಿರಲೂಬಹುದು. ಆ ಕಾರಣ ಕಾಳಿದಾಸನಿಗೆ ಕಾಲವನ್ನು ಎದುರು ಹಾಕಿಕೊಳ್ಳುವ ಅಥವ ಆ ವಿರುದ್ಧ ಹೋರಾಡುವ ಅಗತ್ಯವೇ ಉಂಟಾಗದಿರಬಹುದು. ಹಾಗಾಗಿ ಕಾಲನ ಇರುವಿಕೆಯನ್ನು ಅಷ್ಟಾಗಿ ಗಮನಕ್ಕೆ ತಂದುಕೊಳ್ಳದೆ ಬದುಕಿಗೆ ಸ್ಪಂದಿಸುತ್ತಲೆ ಕಾಲನಿಗೆ ಸ್ಪಂದಿಸಿ ಸ್ಟೀಫನ್‌ ಹಾಕಿನ್‌ ಕೂಡ ಬೆಚ್ಚಿ ನೋಡುವಂತಹ ಕೆಲ ಒಳನೋಟಗಳಿಂದ ಕೂಡಿದ ಕೃತಿಗಳನ್ನು ರಚಿಸಿ ಬಚಾವ್‌ ಆದ ಕವಿ ಯಾರಾದರೂ ದೊರಕುವುದಲ್ಲಿ, ಕಾಳಿದಾಸನ ಹೆಸರಲ್ಲದೆ ಮತ್ತೊಂದು ಹೆಸರನ್ನು ಹೇಳುವುದು ಕಷ್ಟಸಾಧ್ಯ.

ವರ್ಡ್ಸ್‌ವರ್ತ್‌ನ ಪ್ರಸಿದ್ಧ ಮುನ್ನುಡಿಯನ್ನೊಳಗೊಂಡ ‘ಲಿರಿಕಲ್‌ ಬ್ಯಾಲಡ್ಸ್‌’ ೧೭೯೮ರಲ್ಲಿ ಪ್ರಕಟವಾಗುವುದಕ್ಕೆ ಒಂಬತ್ತು ವರ್ಷ ಮೊದಲು ಬಂಗಾಳದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸರ್‌ ವಿಲಿಯಂ ಜೋನ್ಸ್‌, ಇಂಗ್ಲಿಷ್‌ ಗದ್ಯಕ್ಕೆ ಪರಿವರ್ತಿಸಿದ ‘ಶಾಕುನ್ತಲ’ ಕೃತಿ ೧೭೯೮ರಲ್ಲಿ ಪ್ರಕಟವಾಯಿತು. ಅದನ್ನು ಆಧರಿಸಿ ಜಾರ್ಜ್‌ ಫಾಸ್ಟರ್‌ ಎಂಬಾತ ೧೭೯೧ರಲ್ಲಿ ಪ್ರಕಟಿಸಿದ ಜರ್ಮನ್‌ ಗದ್ಯಾನುವಾದ ಓದಿದ ಗಯಟೆ ಪ್ರತಿಕ್ರಿಯಿಸಿದ ರೀತಿ ನೋಡಿ ರೋಮಾಂಚನಗೊಳ್ಳುವ ಭಾರತೀಯರಿಗೆ ಲೆಕ್ಕವಿಲ್ಲ. ಜರ್ಮನಿಯ ಅತ್ಯಂತ ಪ್ರತಿಭಾವಂತ ಪೇಗನ್‌ ಕವಿಯೊಬ್ಬ ಭಾರತದ ಪ್ರತಿಭಾವಂತ – ಪೇಗನ್‌ ಮನಸ್ಸನ್ನು ಅಭಿನಂದಿಸಿದ ರೀತಿಯಲ್ಲಿದೆ ಆ ಮೆಚ್ಚುಗೆ. ಶಾಕುಂತಲ ನಾಟಕದ ಪ್ರಭಾವ ‘ಫೌಸ್ಟ್‌’ ಕಾಳಿದಾಸನ ‘ಅಭಿಜ್ಞಾನ ಶಾಕುನ್ತಲಂ’ ತರಹವೆ ನಾಟಕ ರೂಪದ ಕಾವ್ಯ ಆಗಿರುವುದು. ಫೌಸ್ಟ್‌ ಅಥವಾ ಶಾಕುನ್ತಲಾ ಕೃತಿಗಳನ್ನು ರಂಗದ ಮೇಲೆ ಪ್ರಯೋಗಿಸಲಾಗುವುದಿಲ್ಲ ಎಂಬುದು ಆ ಮಾತಿನ ಅರ್ಥವಲ್ಲ. ಅವೆರಡೂ ಮೂಲತಃ ಕಾವ್ಯಗಳು – ನಾಟಕ ರೂಪದಲ್ಲಿ ಅಭಿವ್ಯಕ್ತಗೊಂಡಿರುವ ಮತ್ತು ರಂಗದ ಮೇಲೆ ಪ್ರಯೋಗಿಸಲು ಬರುವ ನಾಟಕೀಯ ಅಂಶಗಳನ್ನು ಒಳಗೊಂಡಿರುವ ಕಾವ್ಯಗಳು ಅವಾಗಿವೆ.

ಕವಿತ್ವ ಶಕ್ತಿ ಮತ್ತು ಪ್ರತಿಭೆಯಲ್ಲಿ ಕಾಳಿದಾಸ ಗಯಟೆಗಿಂತ ಹೆಚ್ಚು ಶ್ರೀಮಂತನಿರಬಹುದು; ಆದರೆ ತನಗೆ ಪ್ರಕೃತಿದತ್ತವಾಗಿ ಬಂದ ಪ್ರತಿಭೆ ಮತ್ತು ಕವಿತ್ವ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾಲಕ್ಕೆ ಸ್ಪಂದಿಸುವ ವಿಚಾರದಲ್ಲಿ ಗಯಟೆ ಸಾಧಿಸಿರುವ ಸಾಧನೆ ಅಪ್ರತಿಮವಾದುದು. ಅಂತಹ ಮನಸ್ಸಿನ ಮೇಲೆ ಪ್ರಭಾವ ಬೀರುವ ಅವಕಾಶ ಎಷ್ಟು ಜನರಿಗೆ ದೊರಕೀತು? ಅವನ ಮೇಘದೂತ ಓದಿ ಗಯಟೆ ಪುಳಕಿತಗೊಂಡ ರೀತಿ ಕೂಡ ಚರಿತ್ರಾರ್ಹ:

What more pleasant could man wish?
Sakontala, Nala, these must one kiss;
And Megha – Duta, the loud messenger,
Who would not send him to a soul sister![1]

ತಂತ್ರದ ದೃಷ್ಟಿಯಿಂದ ನೋಡುವುದಾದಲ್ಲಿ, ‘ಡಿವೈನ್‌ ಕಾಮಿಡಿ’ಯಲ್ಲಿ ದಾಂತೆ ಬಳಸುವ ತಂತ್ರಗಾರಿಕೆಯ ಮತ್ತೊಂದು ವಿಶಿಷ್ಟ ಬಗೆಯನ್ನು ಮೇಘದೂತದಲ್ಲಿ ಕಾಣಬಹುದು; ಮಾನವ ಜನಾಂಗ ಇರುವವರೆಗೂ ಓದುಗರನ್ನು ಪುಳಕಗೊಳಿಸುವ ನಿತ್ಯುನೂತನತೆ ಅದಕ್ಕಿದೆ. ೨೯ ತಲೆಮಾರಿನ ರಾಜರ ಕತೆ ಹೇಳುವ ಮೂಲಕ ಅವರ ವಂಶದ ಮತ್ತು ಸಮಾಜದ ಏಳುಬೀಳಿನ ಕತೆ ಹೇಳುವ ಪ್ರಯತ್ನ ಮಾಡಿದ ಕವಿ ಕಾಳಿದಾಸನಾದಂತೆ, ಶಿವ ಪಾರ್ವತಿಯರ ಕತೆ ಹೇಳುತ್ತಲೇ ಸೃಷ್ಟಿ ಸುರತಕ್ರಿಯೆಯಲ್ಲಿ ನಿರತವಾಗುವ ‘ಜಗದ ಮಾಪಿತ’ರಾದ ಎಲ್ಲ ಗಂಡುಹೆಣ್ಣುಗಳ ಕತೆ ಹೇಳುವ ಕವಿ.

ಅತ್ಯಂತ ಮಹತ್ವಾಕಾಂಕ್ಷೆಯಿಂದ ತುಂಬಿದ ಕವಿ ತನ್ನ ಜೀವಮಾನದ ಕೊನೆಯ ವೇಳೆಗೆ ಬಿಟ್ಟುಹೋಗುವುದು ಸಮಗ್ರವಾಗಿರಬಹುದಾದ ಒಂದೇ ಕೃತಿಯನ್ನು; ಆತನ ಆಸಕ್ತಿ ಮತ್ತು ಕಾಳಜಿಗಳು ಕೃತಿಯಿಂದ ಕೃತಿಗೆ ಬೆಳೆಯುತ್ತಲೇ ಹೋಗುತ್ತವೆ; ಅವುಗಳನ್ನು ಅನ್ವೇಷಿಸುವ ರೀತಿ ಮತ್ತು ತಂತ್ರ ಬದಲಾಗಬಹುದು. ಆದರೆ ಹೊಂದಾಣಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಏಕಸೂತ್ರತೆಯೊಂದು ಕೃತಿಗಳ ಉದ್ದಕ್ಕೂ ಪ್ರವಾಹದ ರೀತಿ ಪ್ರವಹಿಸುತ್ತದೆ ಎಂಬ ವಿಮರ್ಶಾ ಸೂತ್ರವನ್ನು ಭಾರತದಲ್ಲಿ ಪ್ರತಿಪಾದಿಸಿ ತೋರಿಸಿದವನು ಕಾಳಿದಾಸ.

ಅಂತಹ ಕವಿ ಯುರೋಪಿನ ಕೆಲವೊಂದು ವರ್ಗದ ಜನರಿಗಾದರೂ ಆಕರ್ಷಕವಾಗಿ ತೋರಿಬಂದುದು ಆಶ್ಚರ್ಯವೇನಲ್ಲ.

ಭಾರತದಲ್ಲಿ ಲಿಖಿತ ಕಾವ್ಯ ಪರಂಪರೆ ಆರಂಭವಾದ ನಂತರ ಕಾಣಿಸಿಕೊಂಡ ಮೊದಲ ಕವಿ ಅಶ್ವಘೋಷನಿರಬಹುದಾದರೂ, ಮಹತ್ವಾಕಾಂಕ್ಷೆಯಿಂದ ತುಂಬಿದ, ನಿಜವಾದ ಅರ್ಥದಲ್ಲಿ ಸೆಕ್ಯುಲರ್‌ ಮತ್ತು ಮಾದರಿಯಾದ ಲಿಖಿತ ಎಪಿಕ್‌ ರಚಿಸಿದ ಕ್ಲಾಸಿಕ್‌ ಮನೋಭಾವದ ಮೊದಲ ಕವಿ ಈ ಕಾಳಿದಾಸನೇ. ಆತ ಮತ್ತು ವಾಲ್ಮೀಕಿ ನಡುವೆ ಕನಿಷ್ಠ ಎಂಟು ಶತಮಾನಗಳ ಅಂತರವಿದೆ. ಕಾಳಿದಾಸ ಮತ್ತು ವ್ಯಾಸರ ನಡುವಿನ ಅಂತರ ಇನ್ನೂ ದೀರ್ಘವಾದುದು. ವಸ್ತುವಿನ ಆಯ್ಕೆ ಮತ್ತು ನಿರ್ವಹಣಾ ವಿಧಾನದಲ್ಲಿ ಆತ ತೋರುವ ಎಚ್ಚರ, ವ್ಯಾಸ – ವಾಲ್ಮೀಕಿ ಪರಂಪರೆಯ ಮೂಲದಿಂದ ಬಂದುದು. ಆದರೆ ಕಾವ್ಯ ಕಟ್ಟುವ ವಿಧಾನದಲ್ಲಿ ಆತ ಪ್ರದರ್ಶಿಸುವ ಕುಶಲತೆ ಆತನದೆ ಆಗಿರುವಂತೆ ತೋರುತ್ತದೆ. ಅದರಲ್ಲೂ ಕಾವ್ಯ ಅಥವಾ ನಾಟಕಗಳ ಒಟ್ಟಂದದ ಪ್ರತೀಕವಾಗಿ ನಿಲ್ಲುವ ಸಾಮರ್ಥ್ಯ ಪಡೆದಿರುವಂತೆಯೇ, ಬದುಕಿನ ಬಗೆಗಿನ ಅರ್ಥಪೂರ್ಣ ಗ್ರಹಿಕೆಗಳಾಗಿ ಒಡಮೂಡುವಂತೆ ನೋಡಿಕೊಳ್ಳುವುದು ಕಾಳಿದಾಸನಿಗೆ ದಕ್ಕಿದ ಅತ್ಯುತ್ತಮ ಮಟ್ಟದ ಕಲಾ ಕೌಶಲ್ಯ ಮತ್ತು ವಾಸ್ತುಶಿಲ್ಪಿಯ ಕರ್ತೃತ್ವಶಕ್ತಿಗೆ ಉದಾಹರಣೆ. ‘ಕುಮಾರ ಸಂಭವಂ’ನ ಆರಂಭದಲ್ಲಿ ಬರುವ ‘ಅಸ್ತ್ಯುತ್ತರಸ್ಯಾಂ.. ಪೃಥಿವ್ಯಾ ಇವ ಮಾನದಂಡ” ಆಗಲಿ, ‘ರಘುವಂಶ’ದ ಆರಂಭದ ಶ್ಲಖೊವಾದ “ವಗರ್ಥಾವಿವ ಸಂಪೃಕ್ತೌ…. ಪಾರ್ವತೀ ಪರಮೇಶ್ವರೌ” ಆಗಲಿ, ‘ಮಾಲತಿವಿಕಾಗ್ನಿಮಿತ್ರ’ದ “ಪುರಾಣಮಿತ್ಯೇವ ನಸಾಧು ಸರ್ವಂ”. ಆಗಲಿ ಅಥವಾ ‘ಮೇಘದೂತ’ದ ಆರಂಭದ “ಸ್ವಾಧಿಕಾರತ್ವ ಮತ್ತು ಶ್ಯಾಪೇನಾಸ್ತಂಗಮಿತಮಹಿಮಾ” ಸಾಲಾಗಲಿ ಆ ಮಾತಿಗೆ ಅತ್ಯುತ್ತಮ ನಿದರ್ಶನ. ಓದಿದ ಕೂಡಲೇ ಜನರ ಮನಸ್ಸಿನಲ್ಲಿ ಬಹಳ ಕಾಲ ಉಳಿಯಬಹುದಾದ ಚುರುಕು, ಲವಲವಿಕೆ ಮತ್ತು ಅರ್ಥವತ್ತಾದ ಸಾಲುಗಳನ್ನು ಬರೆಯಲು ಎಲಿಯಟ್‌ ಮಾಡಿದ ಪ್ರಯತ್ನಗಳನ್ನು ಕಾಳಿದಾಸ ತನ್ನ ಕಾಲಕ್ಕಾಗಲೆ ಮಾಡಿ ತೋರಿಸಿದ್ದನ್ನು ನೋಡಿದರೆ, ಆ ಸಾಮರ್ಥ್ಯ ಆತನಿಗೆ ನಿರಾಯಾಸಯಾಗಿ ಸಿಗುತ್ತವೆ. ಆರಂಭದ ಆ ಉಕ್ತಿಗಳು ಅವನ ಕಾವ್ಯಧರ್ಮದ ಉದ್ಘೋಷಗಳು ಆಗಿರುವಂತೆಯೇ, ಬದುಕಿನ ಬಗೆಗಿನ ಗಾಢ ತಿಳುವಳಿಕೆಯೂ ಆಗಿವೆ.[2]

ಭಾಷೆ ಬಳಸುವಾಗ ಕಾಳಿದಾಸ ತೋರುವ ಸುಭಗತೆ ಮತ್ತು ನಾಜೂಕು ನೋಡಿದರೆ, ಆಡುಭಾಷೆಯಲ್ಲಿ ಕಾವ್ಯ ರಚಿಸುವ ಕವಿ ಕೂಡ ಅಸೂಯೆಪಡುವಷ್ಟು ಲವಲವಿಕೆ ಆತನ ಕಾವ್ಯಗಳ ಭಾಷೆಗೆ ದಕ್ಕಿದೆ: ಮಾಧುರ್ಯ ಮತ್ತು ಲಾಲಿತ್ಯ ಆತನಿಗೆ ವಿಶಿಷ್ಟವಾದುದು. ಆದರೆ ಆ ಎಲ್ಲ ತರಹದ ವಿಶಿಷ್ಟತೆ ನಡುವೆಯೂ ಎದ್ದುಕಾಣುವ ಏಕತಾನತೆ, ವಸ್ತುವಿನ ಆಯ್ಕೆ, ನಿರ್ವಹಣೆ ಮತ್ತು ಭಾಷಾಬಳಕೆಯವರೆಗೆ ವಿಸ್ತರಿಸುತ್ತದೆ. ಸಂಸ್ಕೃತ ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸುವ ಹಂತದಲ್ಲಿದ್ದಾಗ ಅಥವಾ ನಿಲ್ಲಿಸಿದ ಕೆಲ ಶತಮಾನಗಳ ಅಂತರದಲ್ಲಿ ಕಾಳಿದಾಸ ಬಂದಂತೆ ಕಾಣುತ್ತದೆ. ಅಥವಾ ಈ ರೀತಿ ಇದ್ದಿರಲೂಬಹುದು; ಆಡುಭಾಷೆಯಲ್ಲದ ಸಂಸ್ಕೃತವನ್ನೇ ಹೆಚ್ಚಾಗಿ ಅವಲಂಬಿಸಿದ್ದ ವರ್ಗದ ಜನರ ನಡುವೆ ಉಳಿದು ಅವರಿಗಾಗಿ ಕಾವ್ಯ ರಚಿಸಿದಂತೆ ತೋರುತ್ತದೆ. ಆ ಕಾರಣವೇ ಏನೋ, ಆತನ ಭಾಷೆಗೆ ಜೀವಂತ ಭಾಷೆಯಲ್ಲಿ ಕೆಲಸ ಮಾಡುವ ಕವಿಗೆ ದಕ್ಕುವ ವೈವಿಧ್ಯ ಮತ್ತು ವಿಪುಲತೆ ಇಲ್ಲವಾದಂತೆ; ಕಾಳಿದಾಸ ಆರಿಸಿಕೊಂಡು ವಸ್ತುವಿನಲ್ಲಿ ಸಹ ಹೆಚ್ಚಿನ ವೈವಿಧ್ಯ ಕಾಣಲಾಗುವುದಿಲ್ಲ. ವಸ್ತುವಿನ ಆಯ್ಕೆ ಮತ್ತು ಭಾಷಾಬಳಕೆಯಲ್ಲಿನ ಮಿತಿಗೆ ಕೆಲಕೊರತೆ ಕಾರಣವಾಗಿರಬಹುದಾದಂತೆ, ಆತ ಬರವಣಿಗೆ ಮಾಡಲು ಆರಿಸಿಕೊಂಡ ಭಾಷೆ ಮತ್ತು ಅದನ್ನು ಬಳಸುತ್ತಿದ್ದ ಜನರ ಜತೆಗಿನ ಸಂಪರ್ಕದ ಮಿತಿ ಕೂಡ ಕಾರಣವಾಗಿದ್ದಿರಬಹುದು. ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸಿದ ಗ್ರಂಥಸ್ಥ ಭಾಷೆಯೊಂದರಲ್ಲಿ ಕಾವ್ಯ ರಚಿಸಲು ಮುಂದಾದುದು ಆತನ ಸಾಧನೆಯ ಸಾಫಲ್ಯತೆಯ ಸಾಧ್ಯತೆಗಳನ್ನು ಮಿತಗೊಳಿಸಿದಂತೆ, ಬದುಕಿನ ಬಗ್ಗೆ ತೆಳೆಯಬಹುದಾದ ದಷ್ಟಿಕೋನ ಅಥವಾ ನೀಡಬಹುದಾದ ಮುಂಗಾಣ್ಕೆಯ ಸಿರಿವಂತಿಕೆಯನ್ನು ಸೀಮಿತಗೊಳಿಸಿರಬಹುದು.

ಕಾಳಿದಾಸನ ಎಲ್ಲ ಕೃತಿಗಳಲ್ಲೂ ಎದ್ದು ಕಾಣುವ ಗುಣಲಕ್ಷಣಗಳಾದ ನಿಯಂತ್ರಿತ ಲವಲವಿಕೆ, ಮಾರ್ದವತೆ, ಲಾವಿತ್ಯ, ಸುಭಗತೆ ಮತ್ತು ಅದರಿಂದಾಗಿ ಬರುವ ಒಂದು ತರಹದ ಪರಿಶುದ್ಧತೆ ಬದುಕಿನ ನಿಜವಾದ ಸಂಪರ್ಕದಿಂದ ವಂಚಿತವಾದ ಅಥವಾ ದೂರವುಳಿದ ಸಮಾಜದ ಕೊಡುಗೆಯಾಗಿರಬಹುದಾದಂತೆಯೇ, ಆತ ಸೃಷ್ಟಿಸುವ ಬದುಕಿನ ಲೋಕ ಕೂಡ ನಿಜವಾದ ಬದುಕಿನ ಸಂಪರ್ಕದಿಂದ ವಂಚಿತವಾಗಿರುವಂತೆ ತೋರುತ್ತದೆ. ಹಾಗಾಗಿ ಕಾಳಿದಾಸನ ಕೃತಿಗಳಲ್ಲಿ ಅಭಿವ್ಯಕ್ತಗೊಳ್ಳುವ ಬದುಕಿನ ಪ್ರಧಾನ ಲಕ್ಷಣ ಕಾಲೀನತೆ ಮತ್ತು ಅದರಿಂದಾಗಿ ಬರುವ ಅಕೃತ್ರಿಮವಾಗಿದ್ದಿರಬಹುದಾದ ಕೃತಕತೆ, ಬದುಕಿನ ಸಂಪರ್ಕದಿಂದ ದೂರ ಉಳಿದು ತಮ್ಮದೇ ಆಗ ಖಾಸಾಲೋಕದಲ್ಲಿ ವಿಹರಿಸುವ ಹೆಣ್ಣುಮಕ್ಕಳ ರೀತಿಯಲ್ಲಿ ಕಾಳಿದಾಸನ ಇಡೀ ಸಾಹಿತ್ಯ ಲೋಕ ವಿಹರಿಸುತ್ತದೆ. ಆತನ ಕೃತಿಗಳಲ್ಲಿನ ಸಾರಥಿಗಳು, ಚೇಟಿಗಳು, ದಾಸಿಯರು ಮೊದಲಾದ ದುಡಿವ ವರ್ಗದ ಜನರು ಕೂಡ ನಿಜವಾದ ಬದುಕಿನಿಂದ ದೂರ ಉಳಿದು ತಾವು ಊಳಿಗಮಾಡುವ ಅರಮನೆ ಬದುಕಿಗೆ ಸಂಪೂರ್ಣ ಹೊಂದಿಕೊಂಡವರೇ ಆಗಿರುತ್ತಾರೆ. ‘ಕುಮಾರ ಸಂಭವಂ’ನ ಶಿವ ಮಾತ್ರ ಆ ಮಾತಿಗೆ ಅಪವಾದ: ಅಂತಹ ಯಂಕ – ಮಂಕನಂತಹ ಪಾತ್ರವನ್ನು ಬೇರೆ ಕಡೆ ಕಾಣುವುದು ಕಷ್ಟ.

ಆಡುಭಾಷೆಯಲ್ಲದ ಭಾಷೆಯೊಂದರಲ್ಲಿ ಮತ್ತೆಂತಹ ಕವಿ ಹುಟ್ಟಲು ಸಾಧ್ಯ ಎಂಬ ಪ್ರಶ್ನೆ ಮೂಡಬಹುದು. ಯಾವುದೇ ಜೀವಂತ ಭಾಷೆಯಲ್ಲಿ ಕೆಲಸ ಮಾಡುವ ಕವಿಗಳು ಅಸೂಯೆ ಪಡುವಷ್ಟರಮಟ್ಟಿಗೆ ಕಾಳಿದಾಸ ಸಾಧಿಸಿರುವ ನಿಯಂತ್ರಿತ ಮಾರ್ದವತೆ, ಲವಲವಿಕೆ, ಲಾಲಿತ್ಯ ಮತ್ತು ಮಾಧುರ್ಯವನ್ನು ಗ್ರಂಥಸ್ಥ ಭಾಷೆಯಲ್ಲಿ ಮಾತ್ರ ಸಾಧಿಸಲು ಸಾಧ್ಯ ಎಂಬ ಕುಹಕದ ಧ್ವನಿ ತಲೆ ಎತ್ತಲೂಬಹುದು. ಏಕೆಂದರೆ, ಕಾಳಿದಾಸ ಬಳಸುವ ಭಾಷೆ ದಿನನಿತ್ಯದ ಬದುಕಿನ ಸಂಪರ್ಕದಿಂದ ವಂಚಿತವಾದಂತೆ, ಆತ ಅನ್ವೇಷಣೆಗೆ ಗುರಿಪಡಿಸುವ ಬದುಕು ಕೂಡ ದಿನಿನಿತ್ಯದ ಬದುಕಿನ ಸಂಪರ್ಕದಿಂದ ದೂರ ಉಳಿದುದೇ ಆಗಿದೆ ಎಂದು ತೋರಲೂಬಹುದು. ಅವೆರಡೂ ಪರಸ್ಪರ ಪೂರಕ; ಒಂದಿಲ್ಲದೆ ಮತ್ತೊಂದಿಲ್ಲ ಎಂದು ಅನ್ನಿಸಲೂಬಹುದು. ಆದರೆ ವಸ್ತುಸ್ಥಿತಿ ಭಿನ್ನವಾಗಬಹುದಾದ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ, ದಿನನಿತ್ಯದ ಬದುಕಿನಿಂದ ದೂರ ಉಳಿದವರ ಬಗ್ಗೆ ಬರೆಯುತ್ತಲೆ ಅವರ ನಿಂತ ನೀರಾದ ಬದುಕಿನಲ್ಲಿ ಹುದುಗಿರುವ ಮಲಿನತೆ ಮತ್ತು ಕೊಳಕನ್ನು ಅನ್ವೇಷಿಸುವಾಗ ಕಾಳಿದಾಸ ತೋರುವ ಎಚ್ಚರವನ್ನು ಈ ಜಗತ್ತಿನ ಬೇರಾವ ಕವಿಯೂ ತೋರಿದಂತೆ ಕಾಣುವುದಿಲ್ಲ.

ಕಾಳಿದಾಸನನ್ನು ಓದುವಾಗ ಎದುರಿಸಬೇಕಾಗಿ ಬರುವ ವಿಚಿತ್ರ ದ್ವಂದ್ವಗಳ ಪೈಕಿ ಇವು ಕೆಲವು ಮಾತ್ರ.

ಹಾಗಾಗಿ ಅಂತಹ ಆ ಕಾಳಿದಾಸನ ಕೃತಿಗಳಲ್ಲಿ ಹುದುಗಿರುವ ಬದುಕಿನ ಬಗೆಗಿನ ಕಾಳಜಿ, ಅಸಾಮಾನ್ಯವಾದ ಜಾಗೃತ ಪ್ರಜ್ಞೆ, ಕಾಲನ ಬಗ್ಗೆ ದಿವ್ಯನಿರ್ಲಕ್ಷ್ಯ ತೋರುತ್ತಲೆ ಕಾಲನಿಗೆ ಸ್ಪಂದಿಸುವ ಗುಣ, ಮೊದಲಾದುವನ್ನು ಅರಿಯುವ ಪ್ರಯತ್ನವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ಲಿಖಿತ ಕಾವ್ಯ ಪರಂಪರೆ ಆರಂಭವಾದನಂತರ ಮೊದಲು ಕಾಣಸಿಗುವ ಅಶ್ವಘೋಷಣ ಸಾಧನೆಯನ್ನು ಕಟುವಾಗಿ ನಿಷ್ಕರ್ಷೆ ಮಾಡಲು ಹೊರಡುವುದು ಸಧುವೂ ಅಲ್ಲ, ಆತನ ಆಶಯವೆ ಸೀಮಿತವಾದುದು. ಎಪಿಕ್‌ ಮಾದರಿ ಕಾವ್ಯ ಬರೆಯುವ ಮಹಾತ್ವಾಕಾಂಕ್ಷೆ ಮತ್ತು ಘನವಾದ ಉದ್ದೇಶದಿಂದ ಆತ ಎಲ್ಲೂ ಪ್ರೇರಿತನಾದಂತೆ ತೋರುವುದಿಲ್ಲ. ತನ್ನ ಮೆಚ್ಚಿನ ಧಾರ್ಮಿಕ ಗುರುವಾದ ಬುದ್ಧ ಮತ್ತು ಆತ ಬೋಧಿಸಿದ ಸಂದೇಶ ಕುರಿತಂತೆ ಕಥನ ಕಾವ್ಯ ಬರೆಯುವುದು ಆತನ ಸೀಮಿತ ಆಶಯ. ಆ ಕಾರಣ ಅಶ್ವಘೋಷನನ್ನು ಎಪಿಕ್‌ ಮಾದರಿ ಕಾವ್ಯ ಪರಂಪರೆಯ ಕವಿಯಾಗಿ ಪರಿಗಣಿಸಲು ಹೋಗುವುದೆ ತಪ್ಪು.[3]

ಅನಂತರ ಬಂದವನೆ ಕಾಳಿದಾಸ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಈ ಕಾಳಿದಾಸ ಅಶ್ವಘೋಷನಿಗೂ ಮೊದಲೇ ಏಕೆ ಅವತರಿಸಬಾರದು? ಎಂಬಿತ್ಯದಿ ಪ್ರಶ್ನೆಗಳಿಗೆ ಉತ್ತರ ಕಷ್ಟ. ಏಕೆಂದರೆ, ಆತ ಬಂದ ಮತ್ತು ಬಿಟ್ಟುಹೋಗಿರುವ ಕಾವ್ಯ ಪರಿಸರ ಆ ತರಹ ಇದೆ. ಅಥವಾ ಹೀಗೂ ಆಗಿದ್ದಿರಬಹುದು. ಭಾರತ ಸ್ಥಿರತೆ ಕಂಡುಕೊಳ್ಳುತ್ತಿದ್ದ ಅಥವಾ ಗಳಿಸಿದ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದ ಕಾಲದ ಕವಿ ಆತನಾಗಿರುವಂತೆ ತೋರುತ್ತದೆ; ಏಕೆಂದರೆ; ಅವನ ಕೃತಗಳಲ್ಲಿ ಕಾಣಸಿಗುವ ನೆಮ್ಮದಿ, ಸುಖಸಮೃದ್ಧಿ ಮತ್ತು ಅವಿಚಲಿತ ಬದುಕಿನ ಮಾದರಿಯನ್ನು ಉಳಿದ ಕಡೆ ಕಾಣಲು ಬರುವುದಿಲ್ಲ. ಭಾರತ ಕಳೆದುಕೊಂಡ ಅಂಥ ಸುಖ ಸಮೃದ್ಧಿ ಮತ್ತು ನೆಮ್ಮದಿಯ ಕಾಲದ ಕವಿಯಾದ ಕಾಳಿದಾಸ, ಅವಿಚಲಿತ ಬದುಕಿನ ತೃಪ್ತ ಪದರುಗಳಲ್ಲಿ ಅಡಗಿ ಕುಳಿತಿರುವ ತಲ್ಲಣಗಳನ್ನು ಕುರಿತು ಮಾತನಾಡಲು ಹವಣಿಸುತ್ತಾನೆ; ಅವುಗಳನ್ನು ಮಗುಂ ಆಗಿ ಇಡುವುದು. ಆ ಕಾರಣವೊ ಏನೋ ಅಲಿಖಿತ ಪರಂಪರೆಯ ವ್ಯಾಸ – ವಾಮೀಕಿಯರ ಕಾಲವನ್ನು ಅಂದಾಜಿನ ಮೇಲೆ ನಿಷ್ಕರ್ಷೆ ಮಾಡಬೇಕಾದಂತೆ, ಲಿಖಿತ ಕಾವ್ಯ ಪರಂಪರೆಯ ಕಾಳಿದಾಸನ ಕಾಲವನ್ನು ನಿಷ್ಕರ್ಷೆ ಮಾಡಲು ಅದೆ ಅಂದಾಜು ಮತ್ತು ಊಹನೆಗಳ ಮಾರ್ಗವನ್ನು ಅನುಸರಿಸಬೇಕಾಗಿದೆ.

ಎಪಿಕ್‌ಗಳಲ್ಲಿ ಅಂತರ್ಗತವಾಗಿರುವ ವಿವರ ಹೊರತು ವ್ಯಾಸ ಮತ್ತು ವಾಲ್ಮೀಕಿ ಬಗ್ಗೆ ಹೆಚ್ಚಿಗೆ ಏನೂ ಗೊತ್ತಿಲ್ಲವಾದಂತೆ, ಲಿಖಿತ ಕಾವ್ಯ ಪರಂಪರೆಯ ಕವಿ ಕಾಳಿದಾಸ, ಆತನನ್ನು ನೀಡಿದ ಕಾಲ ಹಾಗ ಬದುಕಿನ ಬಗ್ಗೆ ಸಹ ಹೆಚ್ಚಿಗೆ ಏನೋ ಗೊತ್ತಿಲ್ಲ. ಮಹಾಭಾರತ ರಾಮಾಯಣಗಳನ್ನು ಎಚ್ಚರಿಕೆಯಿಂದ ಪೃಥಕ್ಕರಿಸಿ ವಿಶ್ಲೇಷಿಸುವುದರ ಮೂಲಕ ಅಲ್ಲಿ ಹುದುಗಿರಬಹುದಾದ ವ್ಯಾಸ – ವಾಲ್ಮೀಕಿಯರ ವ್ಯಕ್ತಿತ್ವ, ಮನೋಧರ್ಮ, ಅವರು ಬಂದ ಕಾಲದ ಬದುಕು ಮತ್ತಿರ ವಿವರಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಪ್ರಯತ್ನಿಸಬಹುದಾದಂತೆಯೆ, ಕಾಳಿದಾಸನ ವಿಚಾರದಲ್ಲೂ ಅದೇ ಮಾರ್ಗ ಅನುಸರಿಸಬೇಕಾಗುತ್ತದೆ.

ಕಾಲ ಮತ್ತು ಬದುಕಿಗೆ ಸ್ಪಂದಿಸುವ ವಿಚಾರದಲ್ಲಿ ಎಪಿಕ್‌ ಕವಿಗಳಾದ ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿಯರ ನಡುವೆ ಕಂಡುಬರುವ ಹೊಂದಾಣಿಕೆ, ಅವರೆಲ್ಲರಿಗೂ ಸಾಮಾನ್ಯ ಆಗಿದ್ದಿರಬಹುದಾದ ಒಂದೇ ಪರಂಪರೆಯ ಮೂಲದ ಕಡೆಗೆ ಗಮನ ಸೆಳೆಯುತ್ತದೆ. ಏಕೆಂದರೆ, ಅಮೂರ್ತ ಆಗಿದ್ದಿರಬಹುದಾದ ಕಾಲದ ಕಲ್ಪನೆಯನ್ನು ತಿಂಗಳು, ವರ್ಷ ಮತ್ತು ಶತಮಾನದ ಲೆಕ್ಕದಲ್ಲಿ ಮೂರ್ತವಾಗಿಸಿಕೊಳ್ಳುವ ವಿಧಾನ ಅವರ ಕಾಲದಲ್ಲಿ ಚಾಲತಿಗೆ ಬಂದಂತೆ ಕಾಣುವುದಿಲ್ಲ. ಬಂದಿದ್ದರೂ ಅದು ಅವರ ಬದುಕು ಮತ್ತು ಮನೋಧರ್ಮವನ್ನು ರೂಪಿಸಿರುವ ಸಾಧ್ಯತೆ ಕಡಿಮೆ. ಅವರು ಬದುಕಿಗೆ ಸ್ಪಂದಿಸುತ್ತಲೇ ಕಾಲನಿಗೂ ಅಥವಾ ಕಾಲನಿಗೆ ಸ್ಪಂದಿಸುತ್ತಲೆ ಬದುಕಿಗೂ ಸ್ಪಂದಿಸಿದಂತೆ ಕಾಣುತ್ತದೆ. ಆ ಅರ್ಥದಲ್ಲಿ ಅವರಿಗೆ ಕಾಲವೇ ಬದುಕು ಮತ್ತು ಬದುಕೇ ಕಾಲ ಆಗಿದ್ದಿರುವ ಸಾಧ್ಯತೆ ಹೆಚ್ಚಿರಬಹುದು. ಹಾಗಾಗಿ ಕಾಲ – ಬದುಕು ಅಥವಾ ಬದುಕು – ಕಾಲಕ್ಕೆ ಸ್ಪಂದಿಸುತ್ತಲೆ, ಎಲ್ಲ ಕಾಲ ಮತ್ತು ಬದುಕಿಗೆ ಸ್ಪಂದಿಸುವ ಗುಣ ಹಾಗೂ ಸ್ವಭಾವ ಅವರಿಗೆ ಸಹಜವಾಗಿ ಮತ್ತು ರಕ್ತಗತವಾಗಿ ಬಂದಂತೆ ಕಾಣುತ್ತದೆ.

ಅಂತಹ ಬದುಕು – ಕಾಲದ ಮತ್ತು ಕಾಲ – ಬದುಕಿನ ಕೊಡುಗೆಗಳಾದ ಎಪಿಕ್‌ಗಳ ಪ್ರಮುಖ ಗುಣಲಕ್ಷಣವೇ ಅದು. ತಿಂಗಳು, ವರ್ಷ ಮತ್ತು ಶತಮಾನಗಳ ಲೆಕ್ಕದಲ್ಲಿ ಕಾಲವನ್ನು ಮೂರ್ತಗೊಳಿಸಿಕೊಳ್ಳುವ ಜೀವನ ವಿಧಾನ ಮತ್ತು ಸಾಕ್ಷರ ಮನೋಭಾವ ಚಾಲತಿಗೆ ಬಂದಂತೆಯೇ ಎಪಿಕ್‌ ಪರಂಪರೆಯು ದಿಕ್ಕು ಬದಲಿಸಬೇಕಾಗಿ ಬಂದುದು ಅದೇ ಕಾಲಧರ್ಮಕ್ಕೆ ಸಹಜವಾದ ಬೆಳವಣಿಗೆಯಾಗಿದ್ದಿರಬಹುದು. ಅಮೂರ್ತವಾದ ಕಾಲಮಾನವನ್ನು ವರ್ಷ ಮತ್ತು ಶತಮಾನಗಳ ರೂಪದಲ್ಲಿ ಮೂರ್ತಿಕರಿಸಿಕೊಳ್ಳುವ ವಿಧಾನವು ಮನೋಧರ್ಮವಾಗಿ ರೂಪುಗೊಂಡಂತೆ, ಮೌಖಿಕವಾದ ಎಪಿಕ್‌ ಪರಂಪರೆಯನ್ನು ಲಿಖಿತ ಪರಂಪರೆಯಾಗಿ ಪರಿವರ್ತಿಸಿಕೊಳ್ಳಬೇಕಾದ ಒತ್ತಾಯಕ್ಕೆ ನಂತರದ ಕವಿಗಳು ಒಳಗಾದರು. ಅಂತಹ ಸಂದಿಗ್ಧ ಕಾಲದ ಕವಿಯಾದ ವರ್ಜಿಲ್‌, ಮೌಖಿಕವಾದ ಎಪಿಕ್‌ ಪರಂಪರೆಯನ್ನು ಲಿಖಿತ ಮಾದರಿಯ ಎಪಿಕ್‌ ಆಗಿ ಪರಿವರ್ತಿಸುವ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಅನಿವಾರ್ಯವಾಯಿತು. ಜತೆಗೆ, ತನ್ನ ಕಾಲದ ಬದುಕು ಮತ್ತು ಕಾಲವನ್ನು, ಬದುಕು – ಕಾಲವಾಗಿ ಪರಿವರ್ತಿಸುವ ದೊಡ್ಡ ಸವಾಲನ್ನು ಆತ ಎದುರಿಸಿದ ರೀತಿ; ಅಂದರೆ ತನ್ನ ಕಾಲದ ಬದುಕನ್ನು ಎಲ್ಲ ಕಾಲದ ಮತ್ತು ಕಾಲಮಾನವನ್ನು ಎಲ್ಲ ಕಾಲಕ್ಕೂ ಸಲ್ಲುವ ಕಾಲವಾಗಿ ಪರಿವರ್ತಿಸುವ ವಿಚಾರದಲ್ಲಿ ಆತ ಸಾಧಿಸಿದ ಯಶಸ್ಸು, ವರ್ಜಿಲನಿಗೆ ದಕ್ಕಿದ ಕೀರ್ತಿಗೆ ಪ್ರಮುಖ ಕಾರಣ ಎಂದು ಮತ್ತೆ ಉಚ್ಚರಿಸಬೇಕಾದ ಅಗತ್ಯವಿಲ್ಲ.

ಅದೇ ತರಹದ ಒತ್ತಡ ಮತ್ತು ಸವಾಲು ವಾಲ್ಮೀಕಿನಂತರ ಬಂದ ಕಾಳಿದಾಸನ ಮುಂದಿದ್ದವು. ವಸ್ತುವಿನ ಆಯ್ಕೆ ಭಾಷಾ ಬಳಕೆ, ಕಥನಕ್ರಮ, ಮಂಡನೆ, ಶೈಲಿ ಮತ್ತು ನಿರ್ವಹಣಾ ವಿಧಾನದಲ್ಲಿ ವರ್ಜಿಲ್‌ ರೀತಿಯಲ್ಲಿಯೇ ಎಪಿಕ್‌ ಪರಂಪರೆಯಿಂದ ಪಡೆಯಬಹುದಾದುದನ್ನು ಪಡೆದು, ತನ್ನದೇ ಆದ ಲಿಖಿತ ಎಪಿಕ್‌ ರೂಪದ ಕಾವ್ಯ ಮಾದರಿಯೊಂದನ್ನು ನೀಡುವುದರಲ್ಲಿ ಕಾಳಿದಾಸ ಸಾಧಿಸಿದ ಯಶಸ್ಸು ಈ ಜಗತ್ತಿನ ಯಾವುದೇ ಕವಿಗಳಿಗಿಂತ ಕಡಿಮೆಯಲ್ಲ. ಆದರೆ ಕಾಲಕ್ಕೆ ಸ್ಪಂದಿಸುವ ವಿಚಾರದಲ್ಲಿ ಕಾಳಿದಾಸ ತೋರುವ ‘ದಿವ್ಯ ನಿರ್ಲಕ್ಷ್ಯ’ ಮಾತ್ರ ಆತನಿಗೆ ವಿಶಿಷ್ಟವಾದುದು. ದಂಗುಬಡಿಸುವ ಆ ಸಾಮರ್ಥ್ಯವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ತುಂಬಿಕೊಂಡಿರುವ ದಾಂತೆಯ ವಿಧಾನಕ್ಕೂ, ಕಾಳಿದಾಸ ದಂಗುಬಡಿಸುವ ರೀತಿಗೂ ಅಗಾಧ ಅಂತರವಿದೆ. ದಾಂತೆಯದು ತಕ್ಷಣವೆ ಗೊತ್ತಾದರೆ, ಕಾಳಿದಾಸನ ಮೈಯೆಲ್ಲ ಕಣ್ಣಾಗಿ ಗಮನಿಸಬೇಕಾಗುತ್ತದೆ. ಆತ ಕಾಲ ಮತ್ತು ಬದುಕಿಗೆ ಸ್ಪಂದಿಸುವ ರೀತಿ ಅವುಳಲ್ಲಿ ಒಂದಷ್ಟೆ! ಕಾಲನಿಗೆ ದಿವ್ಯನಿರ್ಲಕ್ಷ್ಯ ತೋರುತ್ತಲೆ ಅದರ ತೆಳು ರೂಪದಲ್ಲಿಯಾದರೂ ಕಾಲಮಾನಕ್ಕೆ ಸ್ಪಂದಿಸಿ ಬಚಾವ್‌ ಆದ ಮತ್ತೊಬ್ಬ ಕವಿಯನ್ನು ಕಾಣುವುದು ಕಷ್ಟದ ವಿಚಾರ. ಈಜು ಕಲಿತ ನಂತರ ಈಜಿನ ಪಾಠಗಳನ್ನು ಮರೆತುಬಿಡುವಂತೆ, ಕಾಲನ ಸಾಗರದಲ್ಲಿ ತೇಲುವ ಕಲೆಯನ್ನು ಕರಗತಮಾಡಿಕೊಂಡ ಕವಿಗಳು ಮಾತ್ರ ಆ ರೀತಿ ಕಾಲನ ಬಗ್ಗೆ ‘ದಿವ್ಯ ನಿರ್ಲಕ್ಷ್ಯ’ದಿಂದಿರುವ ಅವಕಾಶ ಪಡೆಯಬಹುದೋ ಏನೋ! ಆದರೂ ಆತ ಬಳಸುವ ಭಾಷೆ, ಆಯ್ದುಕೊಂಡ ವಸ್ತು, ಬದುಕನ್ನು ಅರ್ಥೈಸುವ ರೀತಿ ಮೊದಲಾದ ಅನೇಕ ಅಂಶಗಳು ಮೇಳೈಸುವಿಕೆಯ ಫಲವಾಗಿ ರೂಪುಗೊಂಡಿರುವ ಕಾಳಿದಾಸನ ಕೃತಿಗಳು, ಅಂತಿಮವಾಗಿ ಅದೇ ಕಾಲನ ಕೊಡುಗೆ ಎಂಬುದನ್ನು ಮರೆಯಬಾರದು.

ಬಹುತೇಕ ಕ್ಲಾಸಿಕ್‌ ಗುಣಲಕ್ಣಗಳಿಗೆ ಒಗ್ಗುವ ಅಂತಹ ಕಾಳಿದಾಸನ ಶೈಲಿಯಲ್ಲೂ ದೋಷ ರತಹಿತವಾದ ಮತ್ತು ಪೂರ್ಣತೆಗೆ ಹತ್ತಿರವಾದ ಒಂದಾದರೂ ಕೃತಿಯನ್ನು ನೀಡಲಾಗಲಿಲ್ಲ ಎಂದರೆ! ಕಾಲದ ಬಗೆಗಿನ ‘ದಿವ್ಯ ನಿರ್ಲಕ್ಷ್ಯ’ ಅದಕ್ಕೆ ಕಾರಣವಾಯಿತೆ?

ಕಾಲನ ಬಗ್ಗೆ ತೋರುವ ‘ದಿವ್ಯ ನಿರ್ಲಕ್ಷ್ಯ’ ಕಾಳಿದಾಸನ ವಿಶೇಷ ಗುಣವಾದರೂ ಯಾವುದೋ ಒಂದು ಹಂತದಲ್ಲಿ ಅದು ದೌರ್ಬಲ್ಯವಾಗಿ ಮಾರ್ಪಟ್ಟಿರಬೇಕು. ಅದರ ಮುಂದಿನ ಅಧ್ಯಾಯವೆ ಭಾರತದ ಇತಿಹಾಸ ಮತ್ತು ಚರಿತ್ರೆ ಎಂದು ತೋರುತ್ತದೆ. ಆ ಕಾರಣ ವ್ಯಾಸ – ವಾಲ್ಮೀಕಿ ತರಹವೆ ಕಾಳಿದಾಸನನ್ನು ಕೂಡ ಬದುಕಿನ ಯಾವುದೋ ಒಂದು ಹಂ ಅಥವಾ ಘಟ್ಟದ ಕವಿ ಎಂದು ಗುರುತಿಸಬಹುದೆ ವಿನಃ ಇಂತಹ ಶತಮಾನದ ಕವಿ ಎಂದು ಗುರುತಿಸುವುದು ಕಷ್ಟಸಾಧ್ಯ. ಆ ಸ್ಥಿತಿ ಕೆಲ ಶತಮಾನಗಳ ಕಾಲ ಉಳಿದಿರಬಹುದು. ಅಥವಾ ಕಾಲದ ಯಾವುದೋ ಹಂತದಲ್ಲಿ ಕಾಣಿಸಿಕೊಂಡು ನಂರದಲ್ಲಿ ಕಣ್ಮರೆಯಾಗಿದ್ದಿರಬಹುದು.

ಹೋಮರ್‌ – ವರ್ಜಿಲ್‌ ಮತ್ತು ದಾಂತೆ ಮೊದಲಾದವರನ್ನು ಅಧ್ಯಯನ ಮಾಡುವುದರ ಮೂಲಕ ಯುರೋಪ್‌ ಮೂಲದ ಸಮಾಜ ಸಾಗಿ ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಗುರುತಿಸಬಹುದಾದಂತೆ, ವ್ಯಾಸ – ವಾಲ್ಮೀಕಿ ಮತ್ತು ಕಾಳಿದಾಸರನ್ನು ಸಕ್ರಮವಾಗಿ ಅಧ್ಯಯನ ಮಾಡುವುದರ ಮೂಲಕ ಏಷ್ಯಾ ಮೂಲದ ಭಾರತೀಯ ಬದುಕು ಸವೆಸಿದ ಹಾದಿಯ ಹಂತಗಳನ್ನು ಸಡಿಲವಾಗಿಯಾದರೂ ಗುರುತಿಸಬಹುದಾಗಿದೆ. ಯುರೋಪ್‌ ಮೂಲದ ಸಮಾಜ ಮತ್ತು ಮನಸ್ಸು ಕಾಲಕ್ಕನುಗುಣ ವಿಕಾಸವಾಗುತ್ತಾ ಸಾಗಿದರೆ, ಭಾರತೀಯ ಸಮಾಜ ಮತ್ತು ಮನಸ್ಸು ತನ್ನ ಹಾದಿಯಲ್ಲಿ ಬಂದ ಎಲ್ಲವನ್ನೂ ಅಂತರ್ಗತಗೊಳಿಸಿಕೊಳ್ಳುತ್ತಾ ಸಾಗಿದಂತೆ ತೋರುತ್ತದೆ. ಅದೇ ತರಹ ಯುರೋಪ್‌ ಮೂಲದ ಸಮಾಜ ಮತ್ತು ಮನಸ್ಸು, ಹೋಮರ್‌ ಮೂಲದ ಸರಳತೆಯನ್ನು ಒಳಗೊಂಡಂತೆ ಸಂಕೀರ್ಣತೆಯನ್ನು ಗ್ರಹಿಸಲು ಮುಂದಾದರೆ; ವಾಲ್ಮೀಕಿ ಕಾಲದಲ್ಲಿ ಸಂಕೀರ್ಣತೆ ಪಡೆದುಕೊಂಡ ಭಾರತೀಯ ಸಮಾಜ ಮತ್ತು ಮನಸ್ಸು, ಕಾಳಿದಾಸನ ಕಾಲಕ್ಕೆ ಮತ್ತೆ ಸರಳತೆಗೆ ಮಾರುಹೋಯಿತು. ದಾಂತೆಯ ಸಂಕೀರ್ಣತೆ ಭಾರತಕ್ಕೆ ಬೇಕಾಗಲಿಲ್ಲ ಎಂದು ಕಾಣುತ್ತದೆ.[4]

ವ್ಯಾಸರ ಕಾಲದ ಸರಳತೆ ತನ್ನ ಕಾಲದಲ್ಲಿ ಮತ್ತೊಂದು ರೀತಿಯಲ್ಲಿ ಅಭಿವ್ಯಕ್ತಗೊಂಡ ಕತೆಯನ್ನು ಕಾಳಿದಾಸ ಹೇಳುತ್ತಾನೆ. ವ್ಯಾಸರ ಕಾಲದ ಬದುಕಿಗೂ ಹೆಚ್ಚು ಸರಳವಾದುದು ಕಾಳಿದಾಸನ ಕಾಲದ ಬದುಕು. ಆ ಸರಳತೆ ಕಾಳಿದಾಸನಿಗೆ ಅತ್ಯಂತ ವಿಶಿಷ್ಟವಾದುದು. ವಿಚತ್ರವೆಂದರೆ, ವಾಲ್ಮೀಕಿ ಕಾಲದ ಸಂಕೀರ್ಣ ಬದುಕನ್ನು ಭಾರತೀಯ ಮನಸ್ಸು ಅತ್ಯಂತ ಸರಳವಾಗಿ ಸ್ವೀಕರಿಸಿದ ಅಂದರೆ ಸರಳತೆಗೆ ಮರಳಿದ ಭಾರತದ ರೀತಿಯನ್ನು ನೋಡಬೇಕಾದರೂ ಸಹ ಆತನ ‘ರಘುವಂಶಂ’ಗೆ ಹೋಗಬೇಕು. ಅನ್ಯಾಕ್ರಮಣ ಅಥವಾ ಅತಿಕ್ರಮಣದ ಭಯವಿಲ್ಲದ ನೆಮ್ಮದಿ, ಸ್ಥಿರತೆ, ಸುಖದ ಸಮಾಜ ಮತ್ತು ಕಾಲದ ಕವಿಯಾಗಿದ್ದಿರಬಹುದಾದ ಕಾಳಿದಾಸನ ಪ್ರೇಮಲೋಕದಲ್ಲಿ ಎದುರಾಗುವ ಅಗಲಿಕೆ, ವಿರಹ ಹಾಗೂ ಮತ್ತೆ ಮರಳಿ ಒಂದಾಗುವ ಮುನ್ನ ಎದುರಿಸಬೇಕಾದ ಆತಂಕ ಆ ಜನರನ್ನು ಬಹಳವಾಗಿ ಕಾಡಿರುವಂತೆ ಕಾಣುತ್ತದೆ. ಕಾಳಿದಾಸನ ಕೃತಿಗಳ ಪ್ರಕಾರ. ಮತ್ತು ಅವರೆಲ್ಲರ ಪ್ರಮುಖ ಹಾರೈಕೆ ವಂಶೋದ್ಧಾರಕನಾದ ವೀರ ಸುಪುತ್ರನನ್ನು ಪಡೆಯುವುದು. ಅಷ್ಟಾದರೆ ಅವರ ಬದುಕು ಸಾರ್ಥಕವಾದಂತೆಯೇ ಸರಿ. ಆ ತರಹದ ಸರಳ ಸಾರ್ಥಕತೆಗಾಗಿ ಹಾರೈಸಿದ ಕಾಲದ ಕವಿ ಕಾಳಿದಾಸ. ಹಾಗಾಗಿ ಅವನಲ್ಲಿ ಬರುವ ಶೃಂಗಾರ, ಬದುಕಿನ ಸಾರ್ಥಕತೆ ಮತ್ತು ಕೃತ್ಯಕೃತ್ಯತೆಯಾಗಿ ಮಾರ್ಪಡುವ ಅರ್ಥಪೂರ್ಣ ಸಾಧನವಾಗಿ ಬಳಕೆಯಾಗುತ್ತದೆ; ಶಿವ ಮತ್ತು ಪಾರ್ವತಿಯರ ‘ಕುಮಾರ ಸಂಭವಂ’ ಮುಕ್ತಾಯಗೊಳ್ಳುವುದು ಅದೇ ಆಶಯದಿಂದ.

ನೆಲದ ಮೇಲಿನ ಅಧಿಪತ್ಯ ಉಳಿಸಿಕೊಳ್ಳಲು ಸಂಘರ್ಷದ ಮಾರ್ಗ ಹಿಡಿಯುವ ಮೂಲ ಮಹಾಭಾರತ ಕಾಲದ ಜನರ ಸರಳ ಮತ್ತು ನೇರ ಬದುಕು, ಅದು ತರುವ ಸಂಘರ್ಷ ಮತ್ತು ಸರ್ವನಾಶದ ಫಲವಾಗಿ ಸಂಕೀರ್ಣತೆ ಪಡೆದುಕೊಳ್ಳುವುದನ್ನು ಈಗಾಗಲೇ ಗುರುತಿಸಲಾಗಿದೆ. ಚಾರಿತ್ರ್ಯದ ಮೇಲಿನ ಒತ್ತಿನಿಂದಾಗಿ, ಆದರೆ ರಾಮಾಯಣ ಕಾಲದ ಬದುಕು ಮತ್ತು ಸಮಾಜ, ಪಡೆದುಕೊಳ್ಳುವ ಸಂಕೀರ್ಣತೆ ಪಡೆದುಕೊಳ್ಳುವುದನ್ನು ಈಗಾಗಲೇ ಗುರುತಿಸಲಾಗಿದೆ. ಚಾರಿತ್ರ್ಯದ ಮೇಲಿನ ಒತ್ತಿನಿಂದಾಗಿ, ಆದರೆ ರಾಮಾಯಣ ಕಾಲದ ಬದುಕು ಮತ್ತು ಸಮಾಜ, ಪಡೆದುಕೊಳ್ಳುವ ಸಂಕೀರ್ಣತೆ ಆ ಕಾಲಕ್ಕೆ ಅತ್ಯಂತ ವಿಶಿಷ್ಟವಾದುದು. ಆ ಎರಡೂ ಕೃತಿಗಳಲ್ಲಿ ಚಿತ್ರಿತವಾಗುವ ಸಂಘರ್ಷದಲ್ಲಿ ವಿಭಿನ್ನ ಸಮಾಜಗಳು ಭಾಗಿಯಾಗುವುದನ್ನು ಕಾಣಬಹುದಾಗಿದೆ. ರಾಮನದೇ ಒಂದು ತರಹದ ಸಮಾಜವಾದರೆ, ವಾಲಿ, ಸುಗ್ರೀವ ಹನುಮಂತರದೇ ಮತ್ತೊಂದು ಬದುಕು; ರಾವಣನ ಸಮಾಜ ಪ್ರತಿನಿಧಿಸುವ ಬದುಕೇ ಬೇರೆ ರೀತಿಯದು. ಅವರ ನಡುವಿನ ಅಂತರ ಅಗಾಧವಾದುದು. ಮೂಲತಃ ದಾಯಾದಿಗಳಾದ ಕೌರವ – ಪಾಂಡವರ ಯುದ್ಧದಲ್ಲಿ ಭಾಗವಹಿಸುವವರ ಬದುಕಿನಲ್ಲಿ ಅಂತಹ ಗಮನಾರ್ಹ ಕಾಣುವ ಹಿಡಿಂಬೆ, ಘಟೋತ್ಕಜ ಮೊದಲಾದ ಕೆಲವರನ್ನು ಸಹ ಸಮಾನ ನೆಲೆಯಿಂದ ಬಂದವರ ತರಹವೆ ಸ್ವೀಕರಿಸುವುದನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಕರ್ಣನ ಜಾತಿ ಕುರಿತಂತೆ ಮಹಾಭಾರತದಲ್ಲಿ ಎದುರಾಗುವ ಸನ್ನಿವೇಶ ಮತ್ತು ಬಿಕ್ಕಟ್ಟುಗಳು ಮೂಲ ಮಹಾಭಾರತದ ಭಾಗವಾಗಿರುವ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ, ಕರ್ಣನ ಹುಟ್ಟಿನ ಹಿನ್ನೆಲೆ ಕುರಿತ ಸತ್ಯದ ಅರಿವು ಇದ್ದಲ್ಲಿ ಅದನ್ನು ಒಪ್ಪಿಕೊಳ್ಳಲು ಕುಂತಿ ಮೊದಲಾಗಿ ಯಾರೂ ಹಿಂಜರಿಯುತ್ತಿರಲಿಲ್ಲ. ಮೂಲ ಮಹಾಭಾರತ ಕಾಲದ ವಾತಾರವಣವೇ ಅಂಥದ್ದಾಗಿದೆ. ಬೆಸ್ತನ ಮಗಳಾದ ಸತ್ಯವತಿಯ ನಡವಳಿಕೆಗಿಂತ ಮತ್ತೊಂದು ಉತ್ತಮ ನಿದರ್ಶನ ಬೇಕಿಲ್ಲ. ಶಂತನು ಅವಳನ್ನು ಮದುವೆಯಾಗುವ ಕಾಲದಲ್ಲಿ ಅವಳ ಜಾತಿ ಅಡ್ಡ ಬರುವುದಿಲ್ಲ. ಕುಂತಿಯ ವ್ಯಕ್ತಿತ್ವ, ಮನೋಭಾವ ಮತ್ತು ಮನೋಧರ್ಮ ಅವಳಿಗಿಂತ ಭಿನ್ನವಾದುದೇನಲ್ಲ.

ಅಂಥ ಮಹಾಭಾರತ ಕಾಲದ ಜನರು ನೆಲದ ಮೇಲಿನ ಒಡೆತನದ ಹಕ್ಕು ತರುವ ಈರ್ಷ್ಯೆ ಮತ್ತು ಮಾತ್ಸರ್ಯದಿಂದ ನೆಲ ಉಳಿಸಿಕೊಳ್ಳುವ ನೆಪದಲ್ಲಿ ಸಂಘರ್ಷದ ಹಾದಿ ಹಿಡಿದರೆ; ಅಂತರ್ಗತೀಕರಣದ ಆಕಾಂಕ್ಷೆಯ ಫಲವಾಗಿ ರಾಮಾಯಣ ಕಾಲದ ಜನರು ಯುದ್ಧದಲ್ಲಿ ಭಾಗಿಯಾಗಬೇಕಾಗುತ್ತದೆ. ಆ ಪ್ರವೃತ್ತಿಗಳು ಬಹುತೇಕ ಅದೇ ರೂಪದಲ್ಲಿ ಉಳಿದು ಬಂದಿವೆ ಎಂದು ಭಾವಿಸಿ ಅವುಗಳನ್ನು ಪುನಃ ಕಾಣಲು ಜನ ಬಯಸಿದ್ದು, ಮಹಾಭಾರತ – ರಾಮಾಯಣ ಕೃತಿಗಳತ್ತ ಮತ್ತೆ ಮತ್ತೆ ಮರಳಿ ಹೋಗಲು ಅಥವಾ ಹಿಂತಿರುಗಿ ನೋಡಲು ಕಾರಣವಾದಂತೆ ತೋರುತ್ತದೆ. ಆ ಪ್ರಭಾವದಿಂದ ಬಿಡಿಸಿಕೊಂಡು ಸಾರ್ಥಕತೆಗಾಗಿ ಬದುಕಬಯಸಿದ ಅಥವಾ ತಾವು ರೂಪಿಸಿಕೊಂಡ ಸಾರ್ಥಕ್ಯವನ್ನು ಬದುಕಿನಲ್ಲಿ ಕಾಣಬಯಸಿದ ಜನರ ಕಾಲದ ಕವಿ ಕಾಳಿದಾಸ. ಆ ಅರ್ಥದಲ್ಲಿ ವ್ಯಾಸ – ವಾಲ್ಮೀಕಿ ಕಾಲದ ಬದುಕು ಸ್ಥಿರಿಕೃತಗೊಂಡುದೇ ಕಾಳಿದಾಸನ ಕಾಲದಲ್ಲಿ ಅಥವಾ ಅವು ಸ್ಥಿರೀಕೃತಗೊಂಡ ಕಾಲದಲ್ಲಿ ಕಾಳಿದಾಸ ಬಂದಂತೆ ಕಾಣುತ್ತದೆ. ಮಹಾಭಾರತ – ರಾಮಾಯಣಗಳಿಂದ ಆತ ಎಷ್ಟರ ಮಟ್ಟಿಗೆ ಬಿಡಿಸಿಕೊಳ್ಳುತ್ತಾನೆ ಎಂದರೆ: ಮಹಾಭಾರತ ಕಾಲದ್ದಾದ ಶಾಕುನ್ತಲೆಯ ಕತೆ[5] ಮತ್ತು ವಾಲ್ಮೀಕಿ ರಾಮಾಯಣ ಅವನದೇ ಆದ ಕಥಾಚೌಕಟ್ಟಿನ ಒಂದು ಭಾಗವಾಗಿ ಬಿಡುತ್ತವೆ. ರಾಮಾಯಣದಂತಹ ಎಪಿಕ್‌ ಅನ್ನು ಗಾತ್ರದಲ್ಲಿ ಅದಕ್ಕಿಂತಲೂ ಚಿಕ್ಕದಾದ ಮತ್ತೊಂದು ಕೃತಿಯ ಭಾಗವಾಗಿ ಸೀಮಿತಗೊಳಿಸಿ ಯಶಸ್ಸು ಸಾಧಿಸುವುದು ಸಾಧಾರಣ ಸಂಗತಿ ಏನಲ್ಲ.

 

[1]Walter Ruben, Kalidasa, Akademie-Verlag, Berlin, ೧೯೫೭, ಪುಟ ೯.

[2]ಸೂಕ್ತಿ ತರಹ ಮನಸ್ಸಿನಲ್ಲಿ ನಿಲ್ಲುವ ಸಾಲುಗಳನ್ನು ರಚಿಸುವುದರಲ್ಲಿ ವರ್ಜಿಲ್‌ ಇನ್ನೂ, ಹೆಸರುವಾಸಿ.

[3]ಅಶ್ವಘೋಷನ ತರಹವೆ ಬುದ್ಧನ ಜೀವನ ಆಧರಿಸಿ ಇಂಗ್ಲಿಷಿನಲ್ಲಿ ಬರೆದ ತನ್ನ ನೆಚ್ಚಿನ ಕವಿ ಎಡ್ವಿನ್‌ ಅರ್ನಾಲ್ಡನಿಗೆ ಮೈನರ್‌ ಕವಿ ಸ್ಥಾನಮಾನ ನೀಡುವಾಗ ಟಿ. ಎಸ್‌. ಎಲಿಯಟ್‌ ಸಂಕೋಚದಿಂದ ಮುಂದುವರಿಯುತ್ತಾನೆ ಎಂಬುದನ್ನು ಭಾರತೀಯರು ಮರೆಯದಿರುವುದು ಒಳ್ಳೆಯದು: ;;; that I came across, as a boy, a poem for which I have preserved a warm affection: The Light of Asia, by Sir Edwin Amold…. And an estimable minor work like The Light of Asia, – On Poetry and Poets, ಪುಟ ೪೨, ೪೫

[4]ದಾಂತೆಯ ಕಾಲದ ಆ ಸಂಕೀರ್ಣತೆಯನ್ನು ಕುರುಕ್ಷೇತ್ರ ಯುದ್ಧದಾನಂತರದ ಮಹಾಭಾರತದ ಭಾಗದಲ್ಲಿ ಕೆಲ ಪ್ರಮಾಣದಲ್ಲಿ ಕಾಣಬಹುದಾಗಿದೆ.

[5]ಆದಿಪರ್ವದಲ್ಲಿ ಬರುವ ಶಾಕುನ್ತಲೋಪಾಖ್ಯಾನ ಮೂಲ ಮಹಾಭಾರತ ಕಾಲದ್ದಾಗಿರಬಹುದು.