ಕನ್ನಡ ಸಾಹಿತ್ಯ ಚರಿತ್ರೆ ಎಂದರೆ ಅದೇ ವೃತ್ತ, ಕಂದ, ಷಟ್ಟದಿ, ಸಾಂಗತ್ಯ ಇತ್ಯಾದಿಗಳ ರಗಳೆ ಎಂದು ಯಾರಾದರೂ ಹಂಗಿಸುವುದನ್ನು ಸಹಿಸಿಕೊಳ್ಳಬಹುದೋ ಏನೋ; ಆದರೆ ಸುಮಾರು ಒಂದು ವರ್ಷಗಳಿಗೂ ಹಿಂದೆ ಆ ಪಂಪ ಹಾಕಿದ ಪರಂಪರೆಯ ಆಲದ ಮರದ ಬಿಳಿಲುಗಳು ಬಲವಾಗುತ್ತಲೇ ಸಾಗಿವೆ ಎಂದರೆ ಆಶ್ಚರ್ಯವೇನು ಬಂತು, ಎಂಥವರಿಗೂ ಎದೆಬಡಿತ ಹೆಚ್ಚಾಗಬೇಕು! ಆಂದೋಲನವೊಂದರ ಭಾಗವಾಗಿ ಬಂದ ಹರಿಹರ, ರಾಘವಾಂಕ, ಜನರ ಭಾಷೆಯನ್ನೇ ಲಿಖಿತ ಎಪಿಕ್‌ ಮಾದರಿ ಕಾವ್ಯದ ಭಾಷೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅದ್ಭುತ ಪ್ರಯೋಗ ನಡೆಸಿ ಕಣ್ಣು ಕೋರೈಸುವ ಸಾಧನೆ ಮಾಡಿದ ನಾರಾಣಪ್ಪ ಮತ್ತು ಕನ್ನಡದ ವಿಶಿಷ್ಟ ಪ್ರತಿಭೆಯಾದ ಕುವೆಂಪು ಸಾಗುವುದು ಪಂಪನ ಹಾದಿಯಲ್ಲಿ. ಆ ಪಂಪನ ಪ್ರಾಮುಖ್ಯವನ್ನು ಪ್ರಶ್ನಿಸಿ ಲೇವಡಿ ಮಾಡುವ ಮಟ್ಟಕ್ಕೆ ಹೋದ ಶಿವರಾಮ ಕಾರಂತರು ಸ್ವತಃ ಸಾಗುವುದು ಅದೇ ಹಾದಿಯಲ್ಲಿ; ಅವರಿವರ ಮಾತಿರಲಿ, ಜನರ ನಾಲಗೆಯ ಮೇಲಿನ ವಸ್ತುವೊಂದನ್ನು ಲಿಖಿತ ಎಪಿಕ್‌ – ಮಾದರಿ ಕಾವ್ಯವಾಗಿ ಪರಿವರ್ತಿಸುವ ಅಪರೂಪದ ಪ್ರಯತ್ನವನ್ನು ಬಹಳ ಹಿಂದೆಯೇ ನಡೆಸುವುದರ ಮುಖೇನ ಭಿನ್ನದಾರಿಯಲ್ಲಿ ಸಾಗಲು ಯತ್ನಿಸಿದ ಕನಕದಾಸರ ಕೈಯಲ್ಲೂ ಆ ಪಂಪ ಪರಂಪರೆಯ ಪ್ರಭಾವದಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಯುರೋಪಿನ ಪ್ರಭಾವದಿಂದಾಗಿ ಅವರ ಸಾಹಿತ್ಯ ಮಾದರಿಗಳನ್ನು ಸ್ವೀಕರಿಸಿದ ನವೋದಯ ಕಾಲದವರ ಮಾತಿರಲಿ; ಅದಕ್ಕೂ ಮುಂದೆ ಹೋಗಿ ವಸ್ತುವಿನ ಆಯ್ಕೆ, ನಿರ್ವಹಣಾ ವಿಧಾನ, ಮಂಡನಾ ಕ್ರಮ, ತಂತ್ರಗಾರಿಕೆ, ತಳೆಯಬಹುದಾದ ದೃಷ್ಟಿಕೋನ ಮುಂತಾದ ಅನೇಕ ಆಂತರಿಕ ವಿಚಾರಗಳಲ್ಲೂ ಯೂರೋಪಿನ ಮಾದರಿಗಳನ್ನು ಅನುಸರಿಸಬಯಸಿದ ನವ್ಯ ಕಾಲದ ಲೇಖಕರ ಕೈಯಲ್ಲೂ ಪಂಪ ಪರಂಪರೆಯ ಬಿಗಿಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ!

ಅಂಥ ಪ್ರತಿಷ್ಠಾಪಿತ ಪರಂಪರೆಯ ಜತೆ ಯಾವುದೇ ರೀತಿಯ ತಗಾಧೆ ಅಥವಾ ವಾಗ್ವಾದಕ್ಕೂ ಹೋಗದೆ, ಅತ್ಯಂತ ಭಿನ್ನ ರೀತಿಯ ಕಾವ್ಯರಚನೆ ಮಾಡಿದವರೆಂದರೆ – ವಚನಕಾರರು ಮತ್ತು ದಾಸರು ಮಾತ್ರ; ಅವರಾರೂ ಕನ್ನಡ ಸಾಹಿತ್ಯ ಲೋಕ ಬಹಳವಾಗಿ ಗೌರವಿಸುವ ಎಪಿಕ್‌ ಮಾದರಿಯ ಕಾವ್ಯಪರಂಪರೆಗೆ ಸಲ್ಲುವುದಿಲ್ಲ. ಮೊದಲ ವರ್ಗದವರು ನಡುಗಡ್ಡೆಯ ತರಹ ಉಳಿದುಕೊಂಡಿದ್ದರೆ, ಆ ಆಪತ್‌ ಸ್ಥಿತಿಯಿಂದ ದಾಸಸಾಹಿತ್ಯ ಸ್ವಲ್ಪದರಲ್ಲಿ ಬಚಾವ್‌ ಆಗಿದ್ದಲ್ಲಿ, ಆ ಎಲ್ಲ ಕೀರ್ತಿ ಕನಕದಾಸರಿಗೆ ಸಲ್ಲಬೇಕು. ಎಪಿಕ್‌ ಮಾದರಿಯ ಮೂರು ಕಾವ್ಯಗಳನ್ನು ಬರೆದಿರುವ ಕನಕದಾಸರು; ಮಹತ್ವಾಕಾಂಕ್ಷೆಯ ಕವಿಯೂ ಹೌದು, ಈ ಕಡೆ ದಾಸರೂ ಹೌದು. ಪಂಪ ಮತ್ತು ದಾಸ ಸಾಹಿತ್ಯ ಪರಂಪರೆ ನಡುವಿನ ಸೇತುವಾಗಿ ಬಂದ ಅವರಿಂದಾಗಿ ಇಡೀ ದಾಸವಾಙ್ಮಯ ಕನ್ನಡ ಸಾಹಿತ್ಯ ಲೋಕದ ಒಂದು ಅವಿಭಾಜ್ಯ ಅಂಗವಾಗಿ ಪರಿವರ್ತನೆಗೊಳ್ಳಲು ಸಾಧ್ಯವಾಯಿತಲ್ಲದೆ ಹಲವಾರು ಏರಿತಗಳೊಡನೆ ಮುಂದುವರಿಯುವ ಅವಕಾಶ ಕಂಡುಕೊಂಡಿತು. ಕುವೆಂಪು ಆಗಮನವನ್ನು ಈ ಹಿನ್ನೆಲೆಯಲ್ಲಿ ಯೋಚಿಸಬೇಕಿದೆ; ನವೋದಯ ಮತ್ತು ಆವರೆಗಿನ ಸಾಹಿತ್ಯ ಪರಂಪರೆ ನಡುವಿನ ಸೇತು ಅವರು.

ವಚನಪರಂಪರೆಗೆ ಆ ಅವಕಾಶ ಒದಗಿಬರಲೇ ಇಲ್ಲ ಅದರ ನವೀಕರಣಕ್ಕೆ ನವೋದಯ ಮತ್ತು ನಂತರದ ಕಾಲದಲ್ಲಿ ನಡೆಸಲಾಗದ ಪ್ರಯೋಗ ಮತ್ತು ಚಿಕಿತ್ಸೆಗಳಿಂದ ಹೆಚ್ಚಿನ ಪ್ರಯೋಜನವಾದಂತೆ ಕಾಣುವುದಿಲ್ಲ; ಪ್ರತಿಷ್ಠಾಪಿತ ಪಂಪ – ಪರಂಪರೆ ಜತೆ ಯಾವುದೇ ತರಹದ ಹೊಂದಾಣಿಕೆ ಅಥವಾ ಸಂವಾದ ಸಾಧ್ಯವಾಗಲಿಲ್ಲವಾದುದು ಕಾರಣವಾಗಿರಬಹುದು. ವಚನ ಪರಂಪರೆ ಮುಂದುವರಿಸುವುದು ಅಂದರೆ ಬೇರೇನೂ ಅಲ್ಲ: ದೇವರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮೊದಲಾವರ ತರಹವೆ ವೈಯಕ್ತಿಕ ತುರ್ತು ಮತ್ತು ಸ್ಪಂದನವನ್ನು ಕಾಲ ಮತ್ತು ಬದುಕಿನ ಜತೆ ಸಮೀಕರಿಸಿ, ಜರೂರಿನಿಂದ ಕಾವ್ಯ ಬರೆಯುವುದು. ಕಾಲ ಮತ್ತು ಬದುಕಿನ ಸ್ಪಂದನದಲ್ಲಿ ವೈಯಕ್ತಿಕವಾದುದು ಲೀನವಾಗುತ್ತಾ ಹೋದಂತೆಲ್ಲಾ, ಕವಿಗಳು ಔನ್ನತ್ಯದ ಹಾದಿಯಲ್ಲಿ ಮೇಲಕ್ಕೇರುತ್ತಾ ಹೋಗುತ್ತಾರೆ. ಎಪಿಕ್‌ – ಕವಿಯ ಪ್ರಧಾನ ಗುಣಲಕ್ಷಣವೆ – ಅದು. ಕವಿಯ ತುರ್ತು ಮತ್ತು ಸಮಕಾಲೀನ ಭಾವನೆಗಳು, ಅವರನ್ನು ಸೃಷ್ಟಿಸುವ ಕಾವ್ಯಸಾಗರದಲ್ಲಿ ಮಳೆಹನಿಯಂತೆ ಸಂಪೂರ್ಣ ಲೀನವಾಗಿಬಿಡುವುದು.

ವಚನ ಮಾಧ್ಯಮ ಮತ್ತು ವಚನಕಾರರ ವೈಶಿಷ್ಟ್ಯ ಅಡಗಿರುವುದೇ ಅಲ್ಲಿ; ಕನ್ನಡ ಸಾಹಿತ್ಯ ಲೋಕದ ಮಾತಿರಲಿ, ಪ್ರಾಯಶಃ ಭಾರತದ ಇತಿಹಾಸದಲ್ಲಿಯೇ ಅಂಥ ಬರವಣಿಗೆಗೆ ಮೊದಲು ಮಾಡಿದ ಮೊದಲಿಗರು ಅವರಾಗಿದ್ದಿರಬಹುದು. ಆ ದೃಷ್ಟಿಯಿಂದ ನೋಡುವುದಾದರೆ ಕನ್ನಡದ ಎಪಿಕ್‌ ಸ್ವಭಾವದ ‘ಮೊದಲ ಕವಿ’ ದೇವರ ದಾಸಿಮಯ್ಯ. ಆ ಕೃತಿ ಮತ್ತು ರೂಪದಲ್ಲಿ ಎಪಿಕ್‌ ಕಾವ್ಯ ಮಾದರಿಗೆ ಸ್ವಲ್ಪವೂ ಹೊಂದಿಕೆಯಾಗದ ವಚನಗಳನ್ನು ಬರೆದ ವಚನಕಾರರು, ಮನೋಭಾವ ಮತ್ತು ಮನೋಧರ್ಮದಲ್ಲಿ ಎಪಿಕ್‌ ಕವಿಯ ಗುಣಲಕ್ಷಣ ಮತ್ತು ಸ್ವಭಾವಗಳನ್ನು ಅಂತರ್ಗತ ಮಾಡಿಕೊಂಡವರಾಗಿದ್ದರು ಎಂಬುದು. ಅವರ ಹೊರತು ವಸ್ತುವಿನ ಆಯ್ಕೆಯಲ್ಲಿ, ಸ್ವಲ್ಪವಾದರೂ ಭಿನ್ನವಾಗಿ ಯೋಚಿಸಿದವರೆಂದರೆ ಹರಿಹರ – ರಾಘವಾಂಕ, ಜನ್ನ, ಕನಕದಾಸ, ನಂಜುಂಡ ಮೊದಲಾದ ಕೆಲವೇ ಕೆಲವರು. ಅದರಲ್ಲೂ ಕನಕದಾಸರ ‘ರಾಮಧಾನ್ಯ ಚರಿತೆ’ ಅವರ ವ್ಯಕ್ತಿತ್ವದ ತರಹವೇ ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಕೃತಿ. ಆದರೂ ಅವರಾರ ಕೈಯಲ್ಲೂ ಪರಂಪರೆಯ ಹಿಡಿತದಿಂದ ಬಿಡಿಸಿಕೊಂಡು, ಕಾವ್ಯ ರಚಿಸಲಾಗಲಿಲ್ಲ. ಪರಂಪರೆಯ ಕವಿಯೊಬ್ಬನ ವಿಶಿಷ್ಟ ಪ್ರತಿಭೆಯನ್ನು ನಿಯಂತ್ರಿಸುವ ರೀತಿಗೆ, ಕನಕದಾಸರು ಅತ್ಯುತ್ತಮ ಉದಾಹರಣೆ.

ಅಂಥ ಪಂಪ ಪರಂಪರೆಯ ಬಿಗಿ ಹಿಡಿತದಿಂದ ಸಂಪೂರ್ಣ ಬಿಡಿಸಿಕೊಂಡು ಕಾವ್ಯ ರಚಿಸಿದವರು ವಚನಕಾರರು ಮಾತ್ರ. ಮನೋಧರ್ಮ ಮತ್ತು ಮನೋಭಾವದಲ್ಲಿ ಮಾತ್ರ ‘ಎಪಿಕ್‌ ಕವಿ’ಗಳಾದ ಅವರಾರೂ, ಲಿಖಿತ ಎಪಿಕ್‌ ರೂಪದ ಕಾವ್ಯ ಬರೆಯುವ ಮಹತ್ವಾಕಾಂಕ್ಷೆಯಿಂದ ಎಂದೂ ಪ್ರೇರಿತರಾಗಿರಲಿಲ್ಲ. ಅವರು ಬರೆದುದು ಕಾವ್ಯವಾಯಿತು ಅಷ್ಟೆ. ಎಂತಹ ವೈರುದ್ಧ್ಯ!

ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ ಪ್ರತಿಸ್ಪಂದನದ ನಂತರ ಕನ್ನಡ ಸಾಹಿತ್ಯಲೋಕ ಮತ್ತು ಭಾಷೆ, ವೈವಿಧ್ಯಮಯ ಕಾಲದಲ್ಲಿ. ಆದರೆ ಸೃಜನಶೀಲಶಕ್ತಿಯ ಪ್ರತೀಕವಾದ ಭಟಖಡ್ಗ ಮಂಡಲೋತ್ಪಲವನ ವಿಭ್ರಮಭ್ರಮರಿಯಪ್ಪ ಚಲಾಚಲ ರಾಜಲಕ್ಷ್ಮಿ ನವೋದಯ ಕಾಲದ ಕವಿಗಳ ಎದೆಯಲ್ಲಿ ನೆಲಸಬೇಕಾದ ಪ್ರಮಾಣದಲ್ಲಿ ನಿಶ್ಚಲವಾಗಿ ನೆಲಸಿದಂತೆ ಕಾಣುವುದಿಲ್ಲ. ಸೃಜನಶೀಲ – ಲಕ್ಷ್ಮಿಯನ್ನು ಪಡೆದವರು, ಅದನ್ನು ಉಳಿಸಿಕೊಳ್ಳಲು ರಾಜಲಕ್ಷ್ಮಿಯನ್ನು ಧರಿಸಲು ಬೇಕಾದಷ್ಟೆ ಅವಿರತ ಶ್ರಮ ಮತ್ತು ಹೋರಾಟ ನಡೆಸುತ್ತಿರಬೇಕಾಗುತ್ತದೆ ಎಂಬುದು; ಆ ಅರ್ಥ ಧ್ವನಿಸುವ ಪದ್ಯ ಬರೆದ ಪಂಪನಿಗೂ ಪ್ರಾಯಶಃ ಹೊಳೆಯದೆ ಹೋಗಿರಬಹುದು! ಮೇಲ್ನೋಟಕ್ಕೆ ಕಾಣುವಂತೆ, ಯಾವುದೇ ರೀತಿಯ ಹೊರಗಿನ ಪ್ರಭಾವಕ್ಕೊಳಗಾಗದೆ, ಕೇವಲ ಆಂತರಿಕವಾದ ತುಡಿತ ಮತ್ತು ಒತ್ತಡದಲ್ಲಿ ಕಾವ್ಯ ಬರೆದ ವಚನಕಾರರಿಗೆ ಮಾತ್ರ ಪಂಪ ಪರಂಪರೆಯಿಂದ ದೂರ ಉಳಿಯಲು ಸಾಧ್ಯವಾಯಿತು. ಆದರೆ ಯುರೋಪಿನ ಮೂಲದ ಸಾಹಿತ್ಯ ಪ್ರಭಾವಕ್ಕೊಳಗಾಗಿ, ಅವರಿಂದ ಪಡೆಯಬಹುದಾದುದನ್ನು ಪಡೆದು ತಮ್ಮದೇ ಆದ ಸ್ವಂತಿಕೆ ಆಧರಿಸಿ ಸಾಹಿತ್ಯ ರಚನೆ ಮಾಡಿದ ನವೋದಯ ಕಾಲದ ಮಹತ್ವದ ಲೇಖಕರ ಕೈಯಲ್ಲೂ ಪಂಪ ಪರಂಪೆಯ ಬಿಗಿ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಹೋದುದಕ್ಕೆ ಕಾರಣವಾದ ಮಿತಿಗಳನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕದ ಮುಂದಿನ ಬೆಳವಣಿಗೆ ದೃಷ್ಟಿಯಿಂದ ಕಂಡುಕೊಳ್ಳುವುದು ಬಹಳ ಮುಖ್ಯ.

ಮೊದಲನೆಯದಾಗಿ, ಬದುಕನ್ನೇ ಶಿಕ್ಷಣರಂಗ ಎಂದು ತೆಗೆದುಕೊಂಡ ಶಿವರಾಮ ಕಾರಂತರಿಂದಲೇ ಆರಂಭಿಸುವುದಾದಲ್ಲಿ, ಮಾಸ್ತಿ, ಬೇಂದ್ರೆ ಅಥವಾ ಪುಟ್ಟಪ್ಪ ಅವರ ರೀತಿಯಲ್ಲಿ ಬರವಣಿಗೆಯನ್ನು ಜೀವನದ ಗುರಿ ಅಥವಾ ಬದುಕಿನ ಸಾಧನೆಯ ಏಕೈಕ ಮಾರ್ಗವನ್ನಾಗಿ ಸ್ವೀಕರಿಸಿದವರೇನಲ್ಲ: ಬರವಣಿಗೆ ಅವರ ಬದುಕಿನ ಅನೇಕ ಚಟುವಟಿಕೆಗಳ ಪೈಕಿ ಒಂದಾಗಿತ್ತು. ಅಥವಾ ಉಳಿದ ಕ್ಷೇತ್ರಗಳಿಗಿಂತ ಬರವಣಿಗೆಗೆ ಸಾಪೇಕ್ಷವಾಗಿ ಹೆಚ್ಚು ಸಮಯವನ್ನು ವಿನಿಯೋಗಿಸಿದ್ದಿರಬಹುದು ಅಥವಾ ಹೆಚ್ಚು ಪ್ರಾಮುಖ್ಯ ನೀಡಿರಬಹುದು. ಯಕ್ಷಗಾನ ಮತ್ತು ಬರವಣಿಗೆ ನಡುವಿನ ಅವರ ಸಂಬಂಧವನ್ನು ಆ ಮಾತಿಗೆ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬರವಣಿಗೆಯ ನೈಪುಣ್ಯ ಮತ್ತು ಕಲಾತ್ಮಕತೆ ಉತ್ತಮಪಡಿಸುವ ಕಡೆಗೆ ನೀಡಬೇಕಾದ ಪ್ರಮಾಣದಲ್ಲಿ ಗಮನ ನೀಡಲಾಗದಿದ್ದರೂ ಕೂಡ, ಕೆಲವೊಂದು ಉತ್ತಮ ಕಾದಂಬರಿಗಳನ್ನು ನೀಡಲು ಕಾರಂತರಿಗೆ ಸಾಧ್ಯವಾಗಿರುವುದಕ್ಕೆ ಅವರಿಗಿದ್ದ ಬದುಕಿನ ದಟ್ಟ ಅನುಭವ ಶ್ರಿಮಂತಿಕೆ ಮತ್ತು ಪ್ರಫುಲ್ಲತೆಯೇ ಕಾರಣ ಎಂಬ ಬಗ್ಗೆ ಭಿನ್ನಾಭಿಪ್ರಾಯ ಇದ್ದಿರಲಾರದು. ಆದರೆ ಅವರ ಯಶಸ್ವಿ ಕೃತಿಗಳಲ್ಲಿ ತಲುಪುವ ಕಲಾತ್ಮಕತೆಯ ಎತ್ತರ ಮತ್ತು ಪ್ರಮಾಣದ ಬಗ್ಗೆ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲದಿಲ್ಲ.

ತಮ್ಮ ಅನುಭವದ ಆಧಾರದ ಮೇಲೆ ಬದುಕನ್ನು ವಿಶ್ಲೇಷಿಸಿ, ಅರ್ಥೈಸಿ ಮತ್ತು ವ್ಯಾಖ್ಯಾನಿಸುವ ಮುಖೇನ, ಒಂದು ನಿರ್ದಿಷ್ಟ ದೃಷ್ಟಿಕೋನ ತಳೆಯುವ ಕಾದಂಬರಿಗಳನ್ನು ರಚಿಸುವ ಪರಂಪರೆಯನ್ನು ಕನ್ನಡದಲ್ಲಿ ಆರಂಭಿಸಿದ ಕೆಲವೇ ಮೊದಲಿಗರ ಪೈಕಿ ಕಾರಂತರೂ ಒಬ್ಬರು. ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಸರಸಮ್ಮನ ಸಮಾಧಿ’, ‘ಚೋಮನ ದುಡಿ’ ಇತ್ಯಾದಿ ಅವರ ಕೆಲ ಕಾದಂಬರಿಗಳ ಹೆಸರೇ ಹೇಳುವಂತೆ, ದೃಷ್ಟಿಕೋನ ಆಧಾರಿತ ಕಾದಂಬರಿಗಳನ್ನು ನವ್ಯರು ಬರುವುದಕ್ಕೆ ದಶಕಗಳಿಗೂ ಮೊದಲೇ ಕಾರಂತರು ಬರೆದಿರುವುದು ಕೆಲವರಿಗೆ ಸಂತಸದ ಸಂಗತಿಯಾಗಿ ತೋರಬಹುದು. ಅದರಲ್ಲಿ ಹೊಸತೇನಿಲ್ಲ. ಏಕೆಂದರೆ, ಆ ಪರಂಪರೆಗೆ ಕನ್ನಡದ ‘ಆದಿಕವಿ’ ಪಂಪನಿಂದಲೇ ಮೊದಲಾಯಿತು. ಆ ಪರಂಪರೆಯನ್ನು ಕಾದಂಬರಿ ಕ್ಷೇತ್ರದಲ್ಲಿ ಅನುಸರಿಸಿದ ಮೊದಲಿಗರು ಕಾರಂತರಾಗಿದ್ದಿರಬಹುದು. ಆ ಅರ್ಥದಲ್ಲೂ ಕೂಡ ಕಾರಂತರು ಪಂಪನ ಹಾದಿಯಲ್ಲೇ ಸಾಗುತ್ತಾರೆ ಮತ್ತು ಅವರ ಯಶಸ್ವಿ ಕೃತಿಗಳೆಂದು ಪರಿಗಣಿತವಾದ ‘ಸಮೀಕ್ಷೆ’, ‘ಒಂಟಿ ದನಿ’, ‘ಅಳಿದ ಮೇಲೆ’, ‘ಸರಸಮ್ಮನ ಸಮಾಧಿ’ ಮೊದಲಾದವು ಅವರ ಮಹತ್ವಾಕಾಂಕ್ಷೆಯ ಕೃತಿಗಳೇನಲ್ಲ. ‘ಮರಳಿ ಮಣ್ಣಿಗೆ’ ಅವರು ಸಾಧನೆಯ ಹಾದಿಯಲ್ಲಿ ತಲುಪಿದ ಎತ್ತರಕ್ಕೆ ಸಾಕ್ಷಿ ಎಂಬುದು ಸಾಮಾನ್ಯವಾಗಿ ಒಪ್ಪಿತವಾದ ವಿಚಾರ. ಆದರೆ ಅಲ್ಲಿ ಅಡಗಿರುವ ಬಿಸಿತುಪ್ಪದ ರೀತಿಯ ಸಮಸ್ಯೆಯೊಂದನ್ನು ಕನ್ನಡ ಸಾರಸ್ವತ ಲೋಕ ಪರಿಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ.

ಏಕೆಂದರೆ, ‘ಚೋಮನ ದುಡಿ’ ಮತ್ತು ‘ಮರಳಿ ಮಣ್ಣಿಗೆ’ ಅವರು ಬರೆಯದೇಹೋದ ಒಂದೇ ಕಾದಂಬರಿಯ ಭಾಗಗಳು. ಚೋಮ ತನ್ನದೇ ಆದ ಒಂದು ತುಂಡು ಭೂಮಿಯ, ಅಂದರೆ ನೆಲೆ ಈನಿಯಾಸ್‌ನ ಅರ್ಥದಲ್ಲಿ ಕಂಡುಕೊಳ್ಳಲು ಹಂಬಲಿಸಿದರೆ, ಅಂಥ ಭೂಮಿ ಮೇಲಿನ ಒಡೆತನದ ಹಕ್ಕು ಪಡೆದಿದ್ದ ಕುಟುಂಬವೊಂದರ ಕುಡಿಯೊಂದು ಮರಳಿ ಅದೇ ಭೂಮಿ ಜತೆ ಅರ್ಥಪೂರ್ಣತೆ ಕಂಡುಕೊಳ್ಳುವುದರ ಮೂಲಕ ಮೂಲನೆಲೆಯ ಜತೆ ಸಂಬಂಧವನ್ನು ಪುನರ್‌ ಸ್ಥಾಪಿಸಿಕೊಳ್ಳಲು ನಡೆಸುವ ಯತ್ನಗಳ ಕತೆಯನ್ನು ‘ಮರಳಿ ಮಣ್ಣಿಗೆ’ ಅನ್ವೇಷಿಸುತ್ತದೆ.

‘ಮಣ್ಣಿಗೆ’ ಎಂಬ ಮಾತಿಗಿರುವ ಅರ್ಥಛಾಯೆ ಕೂಡ ಚೋಮನ ‘ದುಡಿ’ ಎಂಬ ಮಾತಿಗಿರುವ ವಿಭಿನ್ನ ಅರ್ಥಛಾಯೆಯ ಜತೆ ಸುಲಭವಾಗಿ ಹೊಂದಿಕೊಳ್ಳುವುದು. ಸತ್ತ ನಂತರ ಎಲ್ಲರೂ ಮರಳುವುದು ಮಣ್ಣಿಗೆ ಎಂಬ ಮಾತು ಮತ್ತು ದುಡಿಯ ಎದೆ ಅಥವಾ ಹೃದಯದ ಬಡಿತ ನಿಂತಾಗ ಎಲ್ಲರೂ ಸೇರುವುದು ಅದೇ ಮಣ್ಣನ್ನು ಎಂಬ ಮಾತುಗಳ ನಡುವಿನ ಅರ್ಥಸಾಮ್ಯ; ಹಾಗಾಗಿ ಚೋಮ ಮತ್ತು ಸರಸೋತಿ, ಪಾರೋತಿ ಮುಂತಾದವರು ಸೇರಿದ ಐತಾಳರ ಕುಟುಂಬದ ಸಮಸ್ಯೆಗಳು ಸಮಾನವಾದವು. ಪ್ರಮುಖ ವ್ಯತ್ಯಾಸವೆಂದರೆ, ಇದ್ದ ಅಥವಾ ಕಳೆದುಕೊಂಡ ನೆಲೆಯಲ್ಲಿ ಅರ್ಥಪೂರ್ಣತೆ ಕಂಡುಕೊಳ್ಳುವುದು ಐತಾಳರ ಕುಟುಂಬದ ಸಮಸ್ಯೆಯಾದರೆ, ಇಲ್ಲದ ನೆಲ ಹಾಗೂ ನೆಲೆಯಲ್ಲಿ ಇಲ್ಲದ ಅರ್ಥಪೂರ್ಣತೆ ಕಂಡುಕೊಳ್ಳುವುದು ಚೋಮನ ಕುಟುಂಬದ ಸಮಸ್ಯೆ. ಮತ್ತು ಅವೆರಡೂ ಬೇರೆ ಬೇರೆಯಲ್ಲ. ಒಂದೇ ನೆಲ ಮತ್ತು ಪ್ರದೇಶದಲ್ಲಿ ಒಟ್ಟೊಟ್ಟಿಗೆ ಅಕ್ಕಪಕ್ಕ ಇರುವಂಥವು; ಚೋಮನ ಸಮಸ್ಯೆಯು ಐತಾಳರ ಕುಟುಂಬದ ಸಮಸ್ಯೆಯ ಮತ್ತೊಂದು ಮುಖವಾದರೆ, ಆ ಐತಾಳರ ಕುಟುಂಬದ ಬಿಕ್ಕಟ್ಟು ಚೋಮನ ಸಮಸ್ಯೆಯ ಮತ್ತೊಂದು ಆಯಾಮ:

ಬೇಸಾಯಗಾರನಾಗಬೇಕೆಂಬ ಬಯಕೆ ಕುತ್ತಿಗೆಯವರೆಗಿದೆ. ಆದರೆ, ಅವನ ಊರಲ್ಲಿ ಹೊಲೆಯ ಬೇಸಾಯಗಾರನೆಂಬ ಜಾತಿಯೇ ಇಲ್ಲ. ಹಾಗಾಗುವ ಆಸೆ ಹಿಡಿದು – ಯಾರನ್ನಾದರೂ, ಯಾರನ್ನೆಂದರೇನು – ಸಂಕಪ್ಪಯ್ಯನವರನ್ನು ‘ನಾಲ್ಕು ಗೇಣು ಜಾಗ ನನಗೆ ಕೊಡಿ’ ಎಂದು ಕೇಳುವ ಸಾಹಸವಿಲ್ಲ. ಆದರೆ ಒಂದಲ್ಲ ಒಂದು ದಿವಸ, ನೇಗಿಲನ್ನು ಹಿಡಿದು ಮೆರೆದೇನು ಎಂಬ ಆಸೆಯಿದೆ.ಪುಟ ೧೦ ಮತ್ತು ೧೧

ಹಣ ದೊರೆತ ವಾರದೊಳಗಾಗಿ ರಾಮರಾಯ ರಾಮ ಐತಾಳರ ಕುಟುಂಬದ ಆಸ್ತಿಯ ಚೂರೊಂದಕ್ಕೆ ತಿರುಗಿ ಹಕ್ಕುದಾರನಾದನು. ಆಸ್ತಿ ತಿರುಗಿ ತಮ್ಮ ಹೆಸರಿಗೆ ‘ರಿಜಿಸ್ಟ್ರಿ’ಯಾದ ದಿನ ನಾಗವೇಣಿಯ ಮನದ ಉಕ್ಕು ಹೇಳತೀರದು. ಇಪ್ಪತ್ತು ವರ್ಷಗಳ ಹಿಂದೆ ಲಚ್ಚನು ಅವಳನ್ನು ಉಡುಪಿಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ, ಬದಲು ಬ್ರಹ್ಮಾವರಕ್ಕೆ ಕರೆದೊಯ್ದು, ಅವಳ ಹೆಸರಿಗಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದ. ಅದಾದ ತಿಂಗಳೊಂದರಲ್ಲಿಯೇ ಆಸ್ತಿ ಕೈಬಿಟ್ಟುಹೋಯಿತು. ನಾರಾಯಣ ಅಜ್ಜಯ್ಯನ ಬಲವಿಲ್ಲದೆ ಹೋಗಿದ್ದರೆ ಅದು ಮೂಲಗೇಣಿಗೂ ಸಿಗುತ್ತಿರಲಿಲ್ಲ. ತಿರುಗಿ ಆ ತಾವಿನಲ್ಲಿ ತಾವು ವಾಸವಾಗುವ ಆಸೆಯೂ ಉಳಿಯುತ್ತಿರಲಿಲ್ಲ. ಈಗ ತಿರುಗಿ ಆ ಮಣ್ಣಿನ ಋಣ ತಮಗೆ ದೊರೆಯಿತೆಂದು ಅವರು ಬಲುವಾಗಿ ಹಿಗ್ಗಿದರು. – ಪುಟ ೪೦೨

ಒಂದರಲ್ಲಿ ಸಮಾಜದ ಅತ್ಯಂತ ಕೆಳಸ್ತರದಿಂದ ಬಂದವರು ಪಾತ್ರಧಾರಿಗಳಾದರೆ, ಮತ್ತೊಂದರಲ್ಲಿ ಅದೇ ಸಮಾಜದ ಮೇಲ್‌ಸ್ತರದಿಂದ ಬಂದವರು; ಆ ಎಲ್ಲ ವರ್ಗದ ಜನ ಒಟ್ಟಿಗೆ ಬದುಕುತ್ತಾರೆ ಮತ್ತು ಅವರೆಲ್ಲ ಸೇರಿಯೇ ಭಾರತೀಯ ಸಮಾಜವಾಗಿದೆ. ಆ ರೀತಿಯ ಭಾರತೀಯ ಬದುಕನ್ನು ಅದರ ಎಲ್ಲ ವಿವಿಧ ಹಂತ ಮತ್ತು ಮಗ್ಗುಲುಗಳಲ್ಲಿ ಸಮಗ್ರವಾಗಿ ಗ್ರಹಿಸಲು ಕುವೆಂಪು ತಮ್ಮ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಪ್ರಯತ್ನಿಸಿದಂತೆ ತೋರುತ್ತದೆ. ಅವರು ಬ್ರಾಹ್ಮಣ ಸಮಾಜವನ್ನು ನೋಡುವ ಇತಿಮಿತಿಗಳು ಮತ್ತು ಪೂರ್ವಗ್ರಹಗಳೇನಾದರೂ ಇರಲಿ; ತಮಗೆ ಪರಿಚಿತವಾದ ಮಲೆನಾಡ ಬದುಕನ್ನು ಸಾಧ್ಯವಾದ ಮಟ್ಟಿಗೂ ಸಮಗ್ರವಾಗಿ ನೋಡಲು ಪ್ರಯತ್ನಿಸುತ್ತಾರೆ ಎಂಬುದು ಬಹಳ ಮುಖ್ಯ. ಆದರೆ ಕಾರಂತರಿಗೆ ಚೋಮನ ಪ್ರಪಂಚ ‘ಚೋಮನ ದುಡಿ’ ಎಂಬ ಪ್ರತ್ಯೇಕ ಕಾದಂಬರಿಗೆ ವಸ್ತುವಾದರೆ, ಐತಾಳರ ಕುಟುಂಬದ ಜಗತ್ತು ‘ಮರಳಿ ಮಣ್ಣಿಗೆ’ ಎಂಬ ಮತ್ತೊಂದು ವಿಭಿನ್ನ ಕಾದಂಬರಿಗೆ ವಸ್ತುವಾಗುತ್ತದೆ.

ಅದಕ್ಕೆ ಕಾರಣವಿಷ್ಟೆ: ಆ ಎರಡನ್ನೂ ಮುಖಾಮುಖಿಯಾಗಿಸಿ ಒಂದೇ ಭೂಮಿಕೆಯಲ್ಲಿ ನೋಡಲಾಗದಿರುವುದು. ಆ ಎರಡರಲ್ಲಿ ಯಾವುದನ್ನು ಮೊದಲು ಬರೆಯಲಾಯಿತು ಮತ್ತು ಯಾವುದು ನಂತರ ಬಂತು ಎಂಬ ತೇದಿಗೆ ಸಂಬಂಧಿಸಿದ ವಿಚಾರ ಅಥವಾ ತರ್ಕ ಅಷ್ಟು ಪ್ರಸ್ತುತವಾಗುವುದಿಲ್ಲವಾದಂತೆ, ಭಾರತೀಯ ಸಮಾಜದ ಕೆಳಜಾತಿಯ ವಿವಿಧ ಜನಾಂಗಗಳ ಬದುಕನ್ನು ಕುರಿತು ಕಾದಂಬರಿ ಬರೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದವರ ಪೈಕಿ ಕಾರಂತರಿಗೆ ಮೊದಲ ಸ್ಥಾನ ನೀಡಬೇಕು ಎಂಬ ವಾದವೂ ಅಷ್ಟು ಪ್ರಮುಖವಾಗುವುದಿಲ್ಲ. ‘ಕುಡಿಯರ ಕೂಸು’ ಮೊದಲಾದವುಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ಎರಡನೇ ಗುಂಪಿನವರು ಬಳಸಿಕೊಳ್ಳಬಹುದಾದರೂ, ಅದು ಅಷ್ಟು ಸಮಂಜಸವಾಗಿ ಉಳಿಯುವುದಿಲ್ಲ. ಪಂಪನಿಗೆ ಲೌಕಿಕ ಭಾರತ ಮತ್ತು ಅಲೌಕಿಕ ಜಿನಾಗಮ ಬೇರೆ ಬೇರೆಯಾದಂತೆ, ಚೋಮನ ‘ಲೌಕಿಕ ಲೋಕದ ಅಧೋಜಗತ್ತು’ ಮತ್ತು ‘ಅಲೌಕಿಕತೆಗೆ ಹತ್ತಿರವಾದ ಐತಾಳರ ಲೌಕಿಕ ಜಗತ್ತು’ ಬೇರೆ ಬೇರೆಯಾಗಿ ಕಾಣುತ್ತವೆ.

ವಾಸ್ತವವಾಗಿ ಅವೆರಡೂ ಬೇರೆಬೇರೆಯಲ್ಲ. ಲೌಕಿಕವಿಲ್ಲದ ಅಲೌಕಿಕ ಸಾಧ್ಯವಿಲ್ಲವಾದಂತೆ, ಚೋಮನಿಲ್ಲದ ಐತಾಳರ ಸಮಾಜದ ಕಲ್ಪನೆ ಕಷ್ಟಸಾಧ್ಯ. ಒಂದೇ ಆದ ಅವುಗಳ ವಿವಿಧ ಮುಖಗಳು ಮತ್ತು ಆಶಯಗಳನ್ನು ಒಂದೇ ಭೂಮಿಕೆ ಮತ್ತು ಪಾತಳಿಯಲ್ಲಿ ಅನ್ವೇಷಿಸಲು ಪ್ರಯತ್ನಿಸಿದ್ದಲ್ಲಿ ಪಂಪನ ಬರವಣಿಗೆಯ ವೈಖರಿಯೇ ಬದಲಾಗುತ್ತಿದ್ದಂತೆ, ಕಾರಂತರ ಸಾಹಿತ್ಯ ಕೃಷಿ ಬೇರೆ ಜಾಡನ್ನು ಹಿಡಿಯಬೇಕಾಗುತ್ತಿತ್ತು. ಮೇಲ್‌ಸ್ತರ ಮತ್ತು ಕೆಳಸ್ತರಗಳಲ್ಲಿ ಹಂಚಿ ಹೋಗಿರುವ ಸಮಾಜವನ್ನು, ಆ ಬದುಕಿನಲ್ಲಿ ಇರುವಂತೆಯೇ ಅಕ್ಕಪಕ್ಕ ಇಟ್ಟು ಮುಖಾಮುಖಿಯಾಗಿಸಿ ನೋಡುವ ಅವಕಾಶ ಕುರಿತು ಅವರು ಹೆಚ್ಚಿಗೆ ಯೋಚಿಸಿದಂತೆ ಕಾಣುವುದಿಲ್ಲ.

ಕಾರಂತರ ಮಹತ್ವಾಕಾಂಕ್ಷೆ ಹಾಗಾಗಿ ಪ್ರತೀಕ್ಷೆಗೊಳಗಾಗುತ್ತದೆ. ಮತ್ತು ಆ ಮಹತ್ವಾಕಾಂಕ್ಷೆ ಮತ್ತೆ ಮತ್ತೆ ಅವರ ಪ್ರತಿಭಾ ಸಾಮರ್ಥ್ಯವನ್ನು ಸತ್ವಪರೀಕ್ಷೆಗೊಳಪಡಿಸಿದಂತೆ ಕಾಣುವುದಿಲ್ಲ. ‘ಅಳಿದ ಮೇಲೆ’, ‘ಸರಸಮ್ಮನ ಸಮಾಧಿ’, ‘ಸಮೀಕ್ಷೆ’ ಮೊದಲಾದ ಕೆಲ ಕಿರು ಕಾದಂಬರಿಗಳನ್ನು ಅವರ ಯಶಸ್ವಿ ಕೃತಿಗಳೆಂದು ಗುರುತಿಸುವುದರ ಮೂಲಕ ಕನ್ನಡ ವಿಮರ್ಶಾಲೋಕ ಕಾರಂತರ ತರಹದ್ದೇ ವಿಚಿತ್ರ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿರುವಂತೆ ತೋರುತ್ತದೆ. ಅವರ ಏಕೈಕ ಮಹತ್ವಾಕಾಂಕ್ಷೆಯ ಕೃತಿಯಾದ ‘ಮರಳಿ ಮಣ್ಣಿಗೆ’ ನಿರ್ವಹಿಸುವಲ್ಲಿ ಈ ಮೇಲೆ ವಾದಿಸಿದ ಅಸಮಗ್ರತೆಯ ಕಾರಣದಿಂದಾಗಿ ಸಫಲವಾಗಿಲ್ಲದ ಕಾರಂತರು ‘ಸರಸಮ್ಮನ ಸಮಾಧಿ’, ‘ಅಳಿದ ಮೇಲೆ’, ‘ಸಮೀಕ್ಷೆ’ ಇತ್ಯಾದಿ ಕಿರು ಕಾದಂಬರಿಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಮರ್ಶೆ ಬರೆಯಲು ಬರುತ್ತದೆಯೇ? ‘ಅನ್ನಾಕರೆನಿನಾ’ ಮತ್ತು ‘ವಾರ್‌ ಅಂಡ್‌ ಪೀಸ್‌’ ಕಾದಂಬರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವ ಟಾಲ್ಸ್‌ಸ್ತಾಯ್‌, ‘ದಿ ಡೆತ್ ಆಫ್‌ ಇವಾನ್‌ ಇಲಿಚ್‌’ ಮೊದಲಾದ ಕೆಲ ಕಿರುಕಾದಂಬರಿ ಮತ್ತು ಕತೆಗಳ ನಿರ್ವಹಣೆಯಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ ಎಂಬುದಾದಲ್ಲಿ, ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ದಕ್ಕಿರುವ ಸ್ಥಾನಮಾನ ತಂದುಕೊಡುತ್ತಿದ್ದುವೆ?

ಅಂಥ ನಾಜೂಕಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಜವಾಬ್ದಾರಿಯನ್ನು ಕಾರಂತರ ಭಕ್ತವೃಂದಕ್ಕೆ ಒಪ್ಪಿಸಿ ಮುನ್ನಡೆಯುವುದು ಒಳ್ಳೆಯದು.

ಸೀಮಿತ ಮಹತ್ವಾಕಾಂಕ್ಷೆಯ ಕವಿಯಾದ ಬೇಂದ್ರೆಯವರ ಕಾವ್ಯಜಗತ್ತು ಮತ್ತು ಅದರ ಆಶಯಗಳೂ ಹೆಚ್ಚಾಗಿ ಕೌಟುಂಬಿಕ: ಕಾಮ – ಪ್ರೇಮ, ಒಲವು – ನಲಿವು, ಸಾಮಾಜಿಕ ಬಿಕ್ಕಟ್ಟುಗಳು, ಆಧ್ಯಾತ್ಮಿಕ ಮೂಲದ ಅನುಭಾವದ ಹಂಬಲ ಮೊದಲಾದ ಅನೇಕ ತುಡಿತ ಮತ್ತು ಆಶಯಗಳನ್ನು ಆ ವ್ಯಾಪ್ತಿಯಲ್ಲಿಯೇ ನಿರ್ವಹಿಸಲು ನೋಡುವುದರ ಮೂಲಕ ಕೌಟುಂಬಿಕ ಎಂಬ ಪರಿಕ್ಪನೆಗೆ ಈ ವಿಶ್ವದಷ್ಟೇ ವಿಶಾಲ ಅರ್ಥ ನೀಡಲು ಬಯಸಿದ ಕವಿ ಬೇಂದ್ರೆ. ಆ ಅರ್ಥದಲ್ಲಿ ಅವರು ಒಳಗೊಳ್ಳಬಯಸುವ ಮಹತ್ವಾಕಾಂಕ್ಷೆ, ಅವರು ವಿಸ್ತೃತಗೊಳಿಸಲು ಬಯಸುವ ಕೌಟುಂಬಿಕ ಪರಿಕಲ್ಪನೆಯಷ್ಟೇ ವಿಶಿಷ್ಟವಾದುದು. ಆದರೂ ಬೇಂದ್ರೆಯವರು ಕೊನೆಗೂ ದೇಶೀಯವಾಗಿಯೇ ಉಳಿಯುತ್ತಾರೆ. ಅದೇ ಕಾರಣವೋ ಏನೋ, ಬೇಂದ್ರೆಯವರ ಭಾಷಾಬಳಕೆಯ ವೈಖರಿ, ವಸ್ತುವಿನ ಆಯ್ಕೆ ಮತ್ತು ನಿರ್ವಹಣಾ ವಿಧಾನಗಳು ಎಪಿಕ್‌ ಅಥವಾ ಕ್ಲಾಸಿಕ್‌ ಚೌಕಟ್ಟಿಗೆ ಹೊಂದುವುದಿಲ್ಲ. ಆ ಗ್ರಾಮೀಣತೆ, ಹಳ್ಳಿಗುಣ, ದೇಶೀತನ ಮತ್ತು ನಾಟಿ ಅಂಶ ಅವರ ಗಟ್ಟಿತನವಾಗುವಂತೆ ದೌರ್ಬಲ್ಯವೂ ಆಗಿಬಿಡಬಹುದು. ತಮಗೆ ದಕ್ಕಿ ಬಂದ ಪ್ರತಿಭೆಯನ್ನು ಅವರು ಯಾವ ರೀತಿಯಲ್ಲಿ ಚೆಲ್ಲಿಬಿಡುತ್ತಾರೆ ಎಂಬುದನ್ನು ಒಂದು ನಿದರ್ಶನ ಸಾಕು ಎಂದು ತೋರುತ್ತದೆ; ‘ನಾದಲೀಲೆ’ ಸಂಕಲನದ:

ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

ಎಂಬ ರೂಪಕ ಅಥವಾ ಪ್ರತಿಮೆಯಂತಹ ಶಕ್ತಿಯುತವಾದ ಕಲ್ಪನೆಯನ್ನು ಈ ಜಗತ್ತಿನ ಮಹಾಕವಿಗಳ ಕೃತಿಗಳಲ್ಲು ಬಹಳ ಕ್ವಚಿತ್ತಾಗಿ ಮಾತ್ರ ಕಾಣಲು ಸಾಧ್ಯ. ದಾಂತೆಯ ನರಕದಲ್ಲಿ ಬರುವ …and sharpened their vision (Knitted their brows)at us, like an old tailor peering at the eye of his needless ಎಂಬ ಉಪಮೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದವರೆ ಇಲ್ಲ. ಹುಡುಕುತ್ತಾ ಹೋದಲ್ಲಿ ಅಂತಹ ಉಪಮೆ ಮತ್ತು ರೂಪಕಗಳು ಭಾರತೀಯ ಸಾಹಿತ್ಯ ಲೋಕದಲ್ಲಿ ದಂಡಿಯಾಗಿ ಸಿಗುತ್ತವೆ. ಕುಮಾರವ್ಯಾಸನಲ್ಲಂತೂ ಲೆಕ್ಕವಿಲ್ಲ; ಹೇಳಿ ಕೇಳಿ ಅವನ ಹೆಸರೇ ರೂಪಕಸಾಮ್ರಾಜ್ಯ ಚಕ್ರವರ್ತಿ. ಗಮನಿಸಬೇಕಾದ ಸಂಗತಿ ಎಂದರೆ, ಅಂತಹ ರೂಪಕ ಅಥವಾ ಉಪಮೆಗಳು ಯುರೋಪ್‌ ಮೂಲದ ಕಾವ್ಯಗಳಲ್ಲಿ ಆ ಪ್ರಮಾಣದಲ್ಲಿ ಸಿಗುವಂತೆ ಕಾಣುವುದಿಲ್ಲ. ಆದರೂ ಯುರೋಪ್‌ ಮೂಲದ ಕವಿಗಳು ಉಪಮೆ, ಪ್ರತಿಮೆ ಮತ್ತು ರೂಪಕಗಳ ಬಳಕೆಯಲ್ಲಿ ಭಿನ್ನವಾಗುವುದಾದರೂ ಎಲ್ಲಿ ಎಂಬ ಪ್ರಶ್ನೆ ಕುತೂಹಲಕ್ಕಾದರೂ ಮೂಡುತ್ತದೆ.

ದಾಂತೆಯು ಗುರು ವರ್ಜಿಲ್‌ ಮತ್ತು ಬಿಯಾತ್ರಿಸ್‌ ಮೂಲಕ ನರಕ, ಮಾರ್ಜಕಲೋಕ ಮತ್ತು ಸ್ವರ್ಗ ಕಾಣಲು ಬಳಸುವ ವಿಧಾನ ಅದೇ ಆಗಿರುತ್ತದೆ; ಮುದಿ ದರ್ಜಿಯು ಸೂಜಿಗೆದಾರ ಪೋಣಿಸದ ರೀತಿಯಲ್ಲಿಯೇ, ಅವರು ಹಂತಹಂತವಾಗಿ ತಮ್ಮ ನೋಟವನ್ನು ಸೂಕ್ಷ್ಮಗೊಳಿಸುತ್ತಾ ಸಾಗಬೇಕಾಗುತ್ತದೆ. ರೂಪಕವೂ ಆಗಿಬಿಡುವ ಆ ಉಪಮೆ ಆ ಸಂದರ್ಭದಲ್ಲಿ ಉಪಮೆಯಾಗಿ ಬಳಕೆಯಾಗುವುದರ ಜತೆಗೆ, ಇಡೀ ಕಾವ್ಯಕ್ಕೆ ಒಟ್ಟಾರೆ ಪ್ರತಿಮೆಯಾಗಿ ನಿಲ್ಲುತ್ತದೆ. ಪ್ರತಿಮೆ, ರೂಪಕ ಅಥವಾ ಉಪಮೆಯ ಸಾಮರ್ಥ್ಯವನ್ನು ಸೀಮಿತ ಅಥವಾ ವ್ಯರ್ಥಗೊಳಿಸಲು ಅವರು ಹೋಗುವುದಿಲ್ಲ. ಆ ಲ್ಲವೂ ಕಾವ್ಯದ ಒಟ್ಟಂದಕ್ಕೆ ಬಳಕೆಯಾಗುತ್ತವೆ. ಕಾಳಿದಾಸನ ‘ಶಾಕುನ್ತಲ’ದಲ್ಲಿ ಬರುವ “ಮಲ್ಲಿಗೆಯ ಬಳ್ಳಿಗೆ ಬಿಸಿ ನೀರು ಎರೆಯಲು ಯಾರು ಬಯಸುತ್ತಾರೆ” ಎಂಬ ಸಾಧಾರಣ ಉಕ್ತಿ, ಉಪಮೆ ಮತ್ತು ರೂಪಕವಾಗಿ ಆ ಸಂದರ್ಭಕ್ಕೆ ತಕ್ಕಂತೆ ಬಳಕೆಯಾಗುವುದರ ಜತೆಗೆ ಇಡೀ ಕಾವ್ಯಕ್ಕೆ ಪ್ರತಿಮೆಯಾಗಿ ಬೆಳೆದುಕೊಳ್ಳುವುದನ್ನು ನಿದರ್ಶನಕ್ಕೆ ಗಮನಿಸಬಹುದು. ಆಶ್ರಮದ ವಾತಾವರಣದಲ್ಲಿ ಮಲ್ಲಿಗೆ ಬಳ್ಳಿಯಾಗಿ ಬೆಳೆದ ಶಾಕುನ್ತಲೆಯ ಮೇಲೆ ಬಿಸಿನೀರು ಬಿಡುವ ವಾತಾವರಣ ಸೃಷ್ಟಿಯಾಗಲು, ಆಕೆಯ ಪ್ರಮತ್ತತೆಯೇ ಕಾರಣ ಎಂಬ ಸೂಚನೆ ಕೃತಿಯಲ್ಲಿಯೇ ದೊರಕುವುದರ ಜತೆಗೆ, ಬದುಕಿನಲ್ಲಿ ಬರುವ ಅಂಥ ಬಿಸಿನೀರಿನ ಸನ್ನಿವೇಶಗಳನ್ನು ಎದುರಿಸಿ ಆಕೆ ಮಾಗುವುದರೊಂದಿಗೆ ಆ ಪ್ರತಿಮೆಯೂ ಮಾಗುತ್ತಾ ಹೋಗುತ್ತದೆ, ಶಕುನ್ತಲೆ ಬಳೆದಂತೆಲ್ಲ ಆ ಪ್ರತಿಮೆಯೂ ಬೆಳೆದುಕೊಳ್ಳುವ ರೀತಿಯಲ್ಲಿ ನಿರ್ಮಾಣಗೊಂಡಿರುವ ಕಾಳಿದಾಸನ ಆ ಕೃತಿ.

ಕುಮಾರವ್ಯಾಸ ಬಳಸುವ ರೂಪಕವೊಂದು, ಕಾವ್ಯ ಬೆಳೆದಂತೆ ಬೆಳೆದುಕೊಂಡು ವ್ಯಾಪಿಸುತ್ತಾ ಹೋಗುವ ರೀತಿಗೆ ಮತ್ತೊಂದು ಉದಾಹರಣೆ: ಕೌರವರು ಮತ್ತು ಪಾಂಡವರ ನಡುವಿನ ವೈರವನ್ನು ಅದರ ಬೀಜರೂಪದಲ್ಲಿ ಗಮನಿಸಿದ ಭೀಷ್ಮರು ಆಡುವ “ಮಂಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ” ಎಂಬ ಮಾತು. ““ಮಂಗಳದ ಬೆಳೆಗೆ ಇಂಗಳಿನ ಮಳೆ” ಎಂಬ ಸಾಲಿನಲ್ಲೆ ಪಯಿರು ಎಂಬ ಅರ್ಥ ಛಾಯೆಯೂ ಇದ್ದು, ಆರಂಭದಲ್ಲೇ ಹೀಗಾಯಿತಲ್ಲ ಎಂಬ ಮರುಕವೂ ಇಲ್ಲದಿಲ್ಲ. ಬೆಳೆವ ಸಿರಿ ಮೊಳಕೆಯಲ್ಲಿಯೇ ಎಂಬ ಅರ್ಥವನ್ನು ಸಹ, ಆ ತರಹದ ಯಾವುದೇ ಗಾದೆ ಮಾತನ್ನು ಬಳಸದೆ ಹಿಡಿಯುವ ಕುಮಾರವ್ಯಾಸ, ಆ ಒಂದು ಮಾತಿನಲ್ಲಿ ಇಡೀ ಮಹಾಭಾರತವನ್ನು ಗ್ರಹಿಸಲು ನೋಡುತ್ತಾನೆ. ಕೌರವ – ಪಾಂಡವರ ದ್ವೇಷ ಬೆಳೆಯುತ್ತಾ ಹೋದಂತೆ, ನಿಗಿನಿಗಿ ಕೆಂಡದ – ಇಂಗಳದ – ಮಳೆಯ ರೂಪಕ ಪ್ರತಿಮೆಯಾಗಿ ವ್ಯಾಪಕಗೊಳ್ಳುತ್ತಾ ಹೋಗುತ್ತದೆ. ಮುಂದೆ ಮಹಾಭಾರತದಲ್ಲಿ ಬೆಳೆಯಲಾದುದು ಮಂಗಳದ ಪಯರಿನ ಕಾಲದಲ್ಲಿ ಸುರಿದ ಇಂಗಳದ ಮಳೆಯ ಫಸಲಾದ ನಿಗಿನಿಗಿ ಕೆಂಡದ ದ್ವೇಷವನ್ನು ಮಾತ್ರ. ಇಡೀ ಕಾವ್ಯಕ್ಕೆ ಪ್ರತಿಮೆಯಾಗಿ ಉಳಿಯುವ ಎಂತಹ ಶಕ್ತಿಶಾಲಿ ರೂಪಕ!

ಈ ಹಿನ್ನೆಲೆಯಲ್ಲಿ ನೋಡುವುದಾದಲ್ಲಿ, ‘ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ’ ಎಂಬ ಬೇಂದ್ರೆಯವರ ಮಾತು: ಈ ಜಗತ್ತಿನ ಸಾಹಿತ್ಯಲೋಕದಲ್ಲಿಯೆ ಅತ್ಯುತ್ತಮ, ಅತ್ಯದ್ಭುತ ಮತ್ತು ಅತ್ಯಂತ ಶಕ್ತಿಶಾಲಿಯಾದ ಅಪರೂಪದ ಉಪಮೆ ಪ್ರತಿಮೆ ಅಥವಾ ರೂಪಕ. ಹೋಮರ್‌ – ವ್ಯಾಸ – ವಾಲ್ಮೀಕಿ, ವರ್ಜಿಲ್‌, ಕಾಳಿದಾಸ, ದಾಂತೆ ಮೊದಲಾದವರ ಕೃತಿಗಳಲ್ಲೂ, ಎಪಿಕ್‌ ಸಾಧ್ಯತೆಯ ಮತ್ತೊಂದು ಅಂಥ ಎಪಿಕ್‌ ಪ್ರತಿಮೆಯನ್ನು ಕಾಣುವ ಸಾಧ್ಯತೆ ಬಹಳ ಕಡಿಮೆ. ಎಪಿಕ್‌ ಮತ್ತು ಎಪಿಕ್‌ ಕಾವ್ಯದ ಚೌಕಟ್ಟಿನಲ್ಲಿ ಮಾತ್ರ ನಿಭಾಯಿಸಬಹುದಾದ ಅಂಥ ಅದ್ಭುತ ಪ್ರತಿಮೆಯನ್ನು, ಬೇಂದ್ರೆಯವರು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಭಾವಿಸಲು ಬರುತ್ತದೆಯೆ? ಅಂಥ ಪ್ರತಿಮೆಯನ್ನು ಪೋಷಿಸಲು ಬೇಕಾದ ಅಗಾಧ ವೈಶಾಲ್ಯ ಮತ್ತು ಭೂಮಿಕೆ ಅವರ ಆ ಕೃತಿಗಿದೆಯೇ?

ಯುರೋಪಿನ ಕ್ಲಾಸಿಕ್‌ ಸಾಹಿತ್ಯ ಪರಂಪರೆಯನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡಿ, ಆ ತರಹದ ಮಹತ್ವದ ಕೃತಿಗಳು ಕನ್ನಡದಲ್ಲೂ ಬರಬೇಕು ಎಂಬ ಮಹದಾಸೆಯಿಂದ ಬರವಣಿಗೆ ಮಾಡಿದವರ ಪೈಕಿ ಮಾಸ್ತಿ ದೊಡ್ಡ ಹೆಸರು. ಕರ್ನಾಟಕದ – ಅದರಲ್ಲೂ ಹಳೆಯ ಮೈಸೂರು ಭಾಗದ – ಸಂಸ್ಕೃತಿಯನ್ನು ಪರಿಚಯಿಸಿಕೊಡಲು, ಮಾಸ್ತಿಯವರ ಕೃತಿಗಳನ್ನು ನೀಡಿದರೆ ಸಾಕು. ಮೂಲತಃ ಉತ್ತಮ ಕತೆಗಾರರಾದ ಅವರು, ಕಥನಕ್ರಮ ಮತ್ತು ನಿರೂಪಣಾ ವಿಧಾನದಲ್ಲಿ ಹೋಮರ್‌ – ವ್ಯಾಸ ಮೊದಲಾದವರ ಮೌಖಿಕ ಪರಂಪರೆಗೆ ಬಹಳ ಹತ್ತಿರ ನಿಲ್ಲುತ್ತಾರೆ. ಅಲಿಖಿತ ಕಾವ್ಯಪರಂಪರೆಯ ಆಧುನಿಕ ರೂಪವಾದ ಮಾಸ್ತಿಯವರಿಗೆ ಕಥನಕಲೆ ಸಿದ್ಧಿಸಿದ ರೀತಿಯಲ್ಲಿ, ಮತ್ತಾವ ಲೇಖಕರಿಗಾದರೂ ಒಲಿದ ಉದಾಹರಣೆ ಬಹಳ ಕಡಿಮೆ. ಅದೇ ಅವರ ಮಿತಿಯೂ ಕೂಡ. ಹಾಗಾಗಿ ಅವರ ಬರವಣಿಗೆ ಪಡೆದುಕೊಳ್ಳಬೇಕಾದ ವೈವಿಧ್ಯ ಪಡೆದುಕೊಳ್ಳಲಿಲ್ಲ: ಅತ್ಯುತ್ತಮ ಗುಣವಾದ ಕಥನಕಲೆಯು ಎಚ್ಚರಿಕೆ ಕಳೆದುಕೊಂಡಾಗ, ಯಾವುದೋ ಒಂದು ಹಂತದಲ್ಲಿ ದೌರ್ಬಲ್ಯವಾಗಿ ಬಿಡಬಹುದು ಎಂಬುದಕ್ಕೆ ಮಾಸ್ತಿಯವರೇ ಉದಾಹರಣೆಯಾಗಿ ಸಹ ದೊರಕುತ್ತಾರೆ.

ಕಥನ ಕ್ರಮದಲ್ಲಿ ಹೋಮರ್‌ – ವ್ಯಾಸ ಪರಂಪರೆಗೆ ಹತ್ತಿರವಾಗುವ ಮಾಸ್ತಿ, ಅವರ ತರಹವೆ ಸೆಕ್ಯುಲರ್‌ ಆದ ಬರಹಗಾರರು. ಲೇಖನ, ವಿಮರ್ಶೆ ಅಥವಾ ವಿಚಾರಮಂಡನೆ ಕಾಲದಲ್ಲಿ ಅವರು ತಳೆಯುವ ನಿಲುವು ಮತ್ತು ಪ್ರತಿಪಾದಿಸುವ ಧೋರನೆಗಳು ಏನೆ ಇರಬಹುದು. ಆದರೆ ಕತೆ, ಕಾದಂಬರಿ ಮತ್ತು ನಾಟಕಕಾರರಾಗಿ ಮಾಸ್ತಿ ಅತ್ಯಂತ ಸೆಕ್ಯುಲರ್‌ ಆದ ಬರವಣಿಗೆ ಮಾಡಿದವರು. ಆ ಪೇಗನ್‌ ಮನೋಭಾವ ಧರ್ಮವಾಗಿ ಪರಿವರ್ತನೆಗೊಳ್ಳುವುದನ್ನು ಕಾಣಲು ಅವರಲ್ಲಿಗೆ ಹೋಗಬೇಕು. ಭಾಷಾಬಳಕೆಯಲ್ಲೂ ಕೂಡ ಹೋಮರ್‌ – ವ್ಯಾಸ ಮೊದಲಾದವರ ಕ್ಲಾಸಿಕ್‌ ಪರಂಪರೆಯ ಜಾಡಿನಲ್ಲಿ ಸಾಗು ಮಾಸ್ತಿ, ಅನುವಾದದಲ್ಲೂ ಉಳಿಯಲು ಆ ಹಿನ್ನೆಲೆ ಕಾರಣ. ಸರಳವಾದುದು ಮಾತ್ರ ಸಂಕೀರ್ಣವಾಗಲು ಸಾಧ್ಯ ಎಂಬ ಅದೇ ಕ್ಲಾಸಿಕ್‌ ತತ್ವಕ್ಕೆ ಅನುಗುಣ ಬರವಣಿಗೆ ಮಾಡುವ ಅವರು, ಭಾಷಾ ಬಳಕೆಯಲ್ಲಿ ಒಂದು ತರಹದ ಸಲೀಸು ಮತ್ತು ನಿರರ್ಗಳತೆಯ ಹಾದಿಯಲ್ಲಿ ಸಾಗುತ್ತಾರೆ.

ಆದರೆ ಆ ಸರಳತೆಯ ಹಿಮದಿನ ಸಂಕೀರ್ಣತೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಅಡಗಿ ಕುಳಿತಿರಬಹುದಾದ ಉಳಿದ ಸಾಧ್ಯತೆಗಳ ಬಗ್ಗೆ ಮಾಸ್ತಿಯವರು ಯವುದೇ ಕುತೂಹಲ ಕೂಡ ತೋರಿಸದೆ ಮುಂದೆ ಸಾಗುತ್ತಾರೆ, ಅಥವಾ ಆ ಬಗ್‌ಎ ತೋರಬೇಕಾದ ಹೆಚ್ಚಿನ ಆಸ್ಥೆ ವಹಿಸುವುದಿಲ್ಲ.

ತಮಗೆ ಪರಿಚಿತವಾದ ಕರ್ನಾಟಕ ಸಮಾಜದ ವಿವಿಧ ಮುಖಗಳ ಹಿರಿಮೆಯನ್ನು ಲೀಲಾಚಾಲವಾಗಿ ಅನಾವರಣ ಮಾಡುತ್ತಾ ಹೋಗುವ ಮಾಸ್ತಿಯವರು, ಅದೇ ಸಂಸ್ಕೃತಿ ಹಿಡಿದಿರುವ ಹಾದಿಯ ಅವನತಿಯನ್ನು ಗುರಿತಿಸುತ್ತಾರೆ, ನಿಜ. ಆದರೆ ಆ ಹಿಂದೆ ಕಾರ್ಯನಿರತವಾಗುವ ಎಲ್ಲ ಸಂಗತಿಗಳು ಅವರಿಗೆ ಅಷ್ಟಾಗಿ ಮುಖ್ಯವಾಗುವುದಿಲ್ಲ. ಅವನತಿಯ ಮೂಲವನ್ನು ಹೆಚ್ಚಾಗಿ ವಯಕ್ತಿಗಳ ನಡವಳಿಕೆಯಲ್ಲಿ ಶೋಧಿಸುವುದಕ್ಕೆ ತಮ್ಮ ಅನ್ವೇಷಣೆಯನ್ನು ಸೀಮಿತಗೊಳಿಸುವ ಅವರು ಉಳಿದ ಅಂಶಗಳನ್ನು ನಮೂದಿಸಲು ಹಿಂಜರಿಯುವಂತೆ ತೋರುತ್ತದೆ.

ಅವರದೊಂದು ಕಾದಂಬರಿ ಹೈದರಾಲಿಯ ಪ್ರವೇಶವಾದೊಡನೆ ಮುಕ್ತಾಯಗೊಂಡರೆ, ಮತ್ತೊಂದು ಬ್ರಿಟಿಷರ ಅಧಿಪತ್ಯ ಪ್ರಬಲವಾಗುವುದರೊಂದಿಗೆ ಮುಕ್ತಾಯಗೊಳ್ಳುವುದು ಕೇವಲ ಆಕಸ್ಮಿಕವಲ್ಲ: ಪರಕೀಯರ ಹಸ್ತಕ್ಷೇಪ, ಆಕ್ರಮಣ ಅಥವಾ ಆಡಳಿತಕ್ಕೆ ಸಜ್ಜಾಗುತ್ತಿರುವ ಕರ್ನಾಟಕದ ಸಮಾಜ ಮತ್ತು ಬದುಕು ಅವರ ಎರಡು ಕಾದಂಬರಿಗಳ ವಸ್ತು. ಹಾಗಾಗಿ ಬಹಳ ಜನ ಭಾವಿಸಿರುವಂತೆ, ಆ ಎರಡೂ ಕೃತಿಗಳು ಐತಿಹಾಸಿಕ ಕಾದಂಬರಿಗಳಲ್ಲ. ಇಂದಿಗೂ ಮುಂದುವರಿದಿರುವ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಅವನತಿಯ ಅನ್ವೇಷಣೆಗೆ ಸಾಕಷ್ಟು ಅವಕಾಶ ಒದಗಿಸುವ ಅವರ ಆ ಎರಡು ಕಾದಂಬರಿಗಳು: ಯಾವುದೇ ಮಹತ್ವದ ಸಾಮಾಜಿಕ ಕಾದಂಬರಿಗಳಿಗಿಂತ ಹೆಚ್ಚು ಸಾಮಾಜಿಕವಾಗುವ ಆಯಾಮ ಪಡೆದುಕೊಳ್ಳುವ ವ್ಯಾಪಕತೆಯಿಂದ ಕೂಡಿವೆ. ಅನ್ಯಾಕ್ರಮಣಕ್ಕೆ ತುತ್ತಾಗುವ ಕಾಲದಲ್ಲಿ ಆ ಎರಡೂ ಪ್ರಾಂತ್ಯಗಳ ಆಡಳಿತ ಲಿಂಗಾಯತ ರಾಜಮನೆತನಗಳ ಕೈಯಲ್ಲಿತ್ತು ಎಂಬುದು ಕೇವಲ ಆಕಸ್ಮಿಕ.

ಯಾವುದೆ ಅವನತಿ ಸಾಂಸ್ಕೃತಿಕವಾಗಿರುವಂತೆಯೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನೆಲೆ ಹಾಗೂ ವ್ಯಕ್ತಿತ್ವದ ಮಟ್ಟದಲ್ಲೂ ಆಗಿರುತ್ತದೆ; ಬದುಕಿನ ಆ ಎಲ್ಲ ಸ್ತರಗಳಲ್ಲಾಗುವ ಅವನತಿಯ ಸಮಗ್ರ ಚಿತ್ರಣ ಅವುಗಳಲ್ಲಿ ದೊರಕುವುದಿಲ್ಲ. ದುರಂತವೆಂದರೆ, ಅ ಎರಡೂ ಕಾದಂಬರಿಗಳು ಬೇರೆ ಬೇರೆಯಲ್ಲ: ಒಂದೇ ಸಮಾಜದ ವಿಭಿನ್ನ ಮುಖಗಳು ಅಥವಾ ಘಟ್ಟಗಳು. ಹೈದರಾಲಿ ಮತ್ತು ಬ್ರಿಟಿಷರ ಆಗಮನದ ನಡುವಿನ ಕಾಲದ ಅಂತರ ಗಣನೆಗೆ ತೆಗೆದುಕೊಂಡರೂ ಕೂಡ ‘ಚಿಕವೀರರಾಜೇಂದ್ರ’ ಮತ್ತು ‘ಚೆನ್ನಬಸವನಾಯಕ’ ಕಾದಂಬರಿಯಲ್ಲಿ ಆಕ್ರಮಣಕಾರಿ ಶಕ್ತಿಯಾಗಿ ಬರುವ ಹೈದರಾಲಿಯ ಮಗ ಟಿಪ್ಪು, ‘ಚಿಕವೀರರಾಜೇಂದ್ರ’ ಕಾಲಕ್ಕಾಗಲೇ ನಿರ್ನಾಮವಾಗಿರುತ್ತಾನೆ. ಹೈದರಾಲಿ ಮತ್ತು ಬ್ರಿಟಿಷರ ಪ್ರವೇಶವನ್ನು ಯಾವುದೇ ತರಹದ ಆಕ್ರಮಣಶೀಲ ಪ್ರವೃತ್ತಿಗಳ ಜತೆ ಹೋಲಿಸಿ ನೋಡುವ ರೀತಿಯಲ್ಲಿ ಕಾದಂಬರಿ ರಚಿಸುವ ಅವಕಾಶ ಮಾಸ್ತಿಯವರಿಗಿತ್ತು.

ಮಹತ್ವಾಕಾಂಕ್ಷೆಯಿಂದ ಕುವೆಂಪು ಅವರಷ್ಟು ತುಂಬಿತುಳುಕುವ ಮತ್ತೊಬ್ಬ ಕವಿಯನ್ನು ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಕಾಣುವುದು ಕಷ್ಟ: ‘ಮಹಾಲೇಖಕ’, ‘ಮಹಾಕವಿ’, ‘ಮಹಾತಪಸ್ವಿ’ ಎಂದೆಲ್ಲಾ ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದರ ಜತೆಗೆ, ತಾವು ಬಳಸುವ ಛಂದಸ್ಸು ಕೂಡ ‘ಮಹಾಛಂದಸ್ಸು’ ಎಂದು ಉದ್ಘೋಷಿಸಿಕೊಳ್ಳುವಷ್ಟರ ಮಟ್ಟಿಗೆ ಹೋಗುತ್ತಾರೆ. ಅವರು ಅನುಭವಿಸಬೇಕಾಗಿ ಬಂದ ಏಕಾಂಗಿತನ ಮತ್ತು ವಾತಾವರಣ ಕೂಡ ಆ ತರಹದ ಪ್ರಕಟಣೆಗೆ ಕಾರಣವಾಗಿದ್ದಿರಬಹುದು. ಹೋಮರ್‌, ವರ್ಜಿಲ್‌, ದಾಂತೆ, ಮಿಲ್ಟನ್‌ ಮೊದಲಾದವರ ಮಟ್ಟಕ್ಕೇರುವ ಆಶಯದಿಂದ, ಲಿಖಿತ ಎಪಿಕ್‌ ಶೈಲಿಯ ಕಾವ್ಯ ರಚಿಸಲು ಮುಂದಾಗುವ ಅವರು, ಅದೇ ಉದ್ದೇಶದಿಂದ ವಾಲ್ಮೀಕಿ ರಾಮಾಯಣವನ್ನು ವಸ್ತುವನ್ನಾಗಿ ಆರಿಸಿಕೊಳ್ಳುತ್ತಾರೆ. ಆದರೆ ಪಂಪ, ನಾರಣಪ್ಪ ಮೊದಲಾದವರಿಗೆ ದಾಂತೆಯ ಪರಿಚಯವಿರಲಿಲ್ಲ. ಅವರ ಹತ್ತಿರದ ಪರಿಚಯವಿದ್ದ ಕುವೆಂಪು ಕೂಡ ವಸ್ತುವಿನ ಆಯ್ಕೆಯಲ್ಲಿ ಪಂಪ – ಕುಮಾರವ್ಯಾಸರ ಹಾದಿಯಲ್ಲಿಯೆ ಸಾಗುವುದು: ಭಾಷಾಬಳಕೆಯಲ್ಲಿ ಮಾದರಿ ಮಿಲ್ಟನ್‌.

ತನ್ನ ಭಾಷೆಗೊಂದು ಲಿಖಿತ ಎಪಿಕ್‌ ಮಾದರಿ ಕಾವ್ಯ ನೀಡುವ ಮಹತ್ವಾಕಾಂಕ್ಷೆಯಿಂದ ಹೊರಟ ಮಿಲ್ಟನ್‌, ಸಿದ್ಧಮಾದರಿ ಹುಡುಕಿಕೊಂಡು ಗ್ರೀಕ್‌ – ಲ್ಯಾಟಿನ್‌ಗೆ ಶರಣುಹೋಗುವುದು ಅಗತ್ಯವಾಗಿತ್ತು ಮತ್ತು ಆತ ಆರಿಸಿಕೊಂಡಿದ್ದ ವಸ್ತು ಬೈಬಲ್‌ಗೆ ಸಂಬಂಧಿಸಿದ್ದಾದ ಕಾರಣ, ಆ ಹಿನ್ನೆಲೆ ವ್ಯಕ್ತವಾಗುವಂತೆ ಮಾಡಲು ಹೀಬ್ರು, ಗ್ರೀಕ್‌ ಮತ್ತು ಲ್ಯಾಟಿನ್‌ ನುಡಿಗಟ್ಟುಗಳಿಂದ ಸಂಇಶ್ರಿತವಾದ ಆದರೆ ತನ್ನದೇ ಆದ ಇಂಗ್ಲಿಷ್‌ ಭಾಷಾ ಶೈಲಿಯೊಂದನ್ನು ರೂಢಿಸಿಕೊಳ್ಳುವುದು ಆತನಿಗೆ ಅನಿವಾರ್ಯವಿತ್ತು. ಇಂಗ್ಲಿಷ್‌ಗೆ ಎಪಿಕ್‌ ಶೈಲಿಯ ಗತ್ತಿನ ಭವ್ಯತೆ ದಕ್ಕಿರಲಿಲ್ಲ. ಕುವೆಂಪುಗೆ ಪಂಪ – ಕುಮಾರವ್ಯಾಸರ ರೂಪದಲ್ಲಿ ಸಿದ್ಧಮಾದರಿಗಳಿದ್ದವು: ಕನ್ನಡದ ಕಾವ್ಯಪರಂಪರೆಯ ಸುದೀರ್ಘ ಇತಿಹಾಸವೇ ಅದು. ಅಷ್ಟಾದರೂ ಕುವೆಂಪು ಭಾಷಾಬಳಕೆಯಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಿದಂತೆ ತೋರುತ್ತದೆ. ಎಪಿಕ್‌ಗಳ ಕಾಲ ಮುಗಿದುಹೋಯಿತು ಎಂಬ ಭಾವನೆ ಪ್ರಬಲವಾಗಿದ್ದ ಕಾಲದಲ್ಲಿ ಮಿಲ್ಟನ್‌ ಆ ಸಾಹಸಕ್ಕೆ ಮುಂದಾಗುತ್ತಾನೆ; ಎಲಿಯಟ್‌ನಂತರದ ತಲೆಮಾರಿನ ಕುವೆಂಪು ಕಾಲಕ್ಕೆ ಆ ಭಾವನೆಗಳು ಇನ್ನೂ ಪ್ರಬಲವಾಗಿದ್ದವು. ಆ ತರಹದ ವಿರುದ್ಧ ಸನ್ನಿವೇಶ ಎದುರಿಸಲು ಮತ್ತು ವಾತಾವರಣದ ಗಾಂಭೀರ್ಯ ಕಂಡುಕೊಳ್ಳಲು ಹಳಗನ್ನಡ, ನಡುಗನ್ನಡ ಮತ್ತುಹೊಸಗನ್ನಡ ಸಂಮಿಶ್ರವಾದ ಶೈಲಿಯೊಂದನ್ನು ಕಂಡುಕೊಳ್ಳುವುದು ಅವರಿಗೂ ಅನಿವಾರ್ಯವಾಗಿ ಕಂಡಿರಬಹುದು. ತತ್‌ಕ್ಷಣದ ಸಮಕಾಲೀನತೆಯ ಸಂಪರ್ಕದಿಂದ ಬಿಡಿಸಿಕೊಳ್ಳಲು ಮತ್ತು ಎಪಿಕ್‌ ಶೈಲಿಗೆ ತಕ್ಕುದಾದ ಭಾಷಾಮಾಧ್ಯಮ ಕಂಡುಕೊಳ್ಳಲು ಹಿಂದಕ್ಕೆ ಹೋಗುವ ಕುವೆಂಪು, ಅದೇ ರಾಮ – ಸೀತೆಯರನ್ನು ತಮ್ಮ ಸಮಕಾಲೀನ ಸಮಾಜದ ಸಂದರ್ಭದಲ್ಲಿಟ್ಟು ನೋಡುವ ಪ್ರಯೋಗಗಳನ್ನು ಸಹ ಮಾಡುತ್ತಾರೆ. ಇತಿಹಾಸ ಪುರಾಣ ಆಧಾರಿತ ವಸ್ತುವನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನಾಟಕ ಬರೆಯುವ ಪ್ರಯೋಗಗಳನ್ನು ಕೆಲ ನವ್ಯ ಲೇಖಕರು ನಡೆಸುವ ಮೊದಲೆ ಕುವೆಂಪು ಆ ಪ್ರಯೋಗಗಳನ್ನು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಸೀಮಿತ ಪ್ರಮಾಣದಲ್ಲಿಯಾದರೂ ಮಾಡಿದಂತೆ ತೋರುತ್ತದೆ.

ಅದೇ ಮಹತ್ವಾಕಾಂಕ್ಷೆಯಿಂದ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಗದ್ಯ ಕೃತಿಗಳನ್ನು ಬರೆದಿರುವ ಕುವೆಂಪು ಅವರ ಆ ಮೂರು ಕೃತಿಗಳಿಗೂ – ‘ಶ್ರೀ ರಾಮಾಯಣ ದರ್ಶನಂ’ ಸೇರಿದಂತೆ – ಸಮಾನವಾಗಿರುವ ಕೆಲ ಅಂಶಗಳನ್ನು ವಿಮರ್ಶಕ ಲೋಕ ಗಮನಿಸಿದಂತೆ ಕಾಣುವುದಿಲ್ಲ.

ಸ್ವಾತಂತ್ರ್ಯ ಚಳವಳಿ ತೀವ್ರವಾಗಿದ್ದ ೧೯೩೬ರ ಸುಮಾರಿನಲ್ಲಿ ‘ಕಾನೂರು ಹೆಗ್ಗಡತಿ’ ಪ್ರಕಟವಾದರೆ, ನಾಲ್ಕು ದಶಕಗಳ ನಂತರ ೧೯೬೭ರ ಸುಮಾರಿನಲ್ಲಿ ‘ಮಲೆಗಳಲ್ಲಿ ಮದುಮಗಳು’ ಪ್ರಕಟವಾಯಿತು: ಆ ನಡುವೆ ಕಾಣಿಸಿಕೊಂಡ ‘ಶ್ರೀರಾಮಾಯಣ ದರ್ಶನಂ’ವನ್ನು ಗಾಂಧಿಯುಗದ ಪುರಾಣ – ತಿಹಾಸವನ್ನಾಗಿಸಲು ಕುವೆಂಪು ಪ್ರಯತ್ನಿಸಿದ್ದಾರೆ. ರಾಮಾಯಣ ರಚನೆಯ ಕಾಲದಲ್ಲಿ ‘ಕಾನೂರು ಹೆಗ್ಗಡತಿ’ಯ ಗದ್ಯದ ಮತ್ತು ಬದುಕಿನ ಪ್ರಭಾವದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲದೆ ಹೋಗಿರಬಹುದಾದ ಆ ರಾಮಾಯಣದ ಶೈಲಿ ಮತ್ತು ದರ್ಶನದ ಪ್ರಭಾವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೇಲೆ ಸವಾರಿ ಮುಂದುವರಿಸುವುದನ್ನು ಕಾಣಬಹುದಾಗಿದೆ.

‘ಕಾನೂರು ಹೆಗ್ಗಡತಿ’ಯ ಪ್ರತಿ ಅಧ್ಯಾಯಕ್ಕೂ ಶೀರ್ಷಿಕೆ ನೀಡಿರುವ ರೀತಿಯಲ್ಲಿಯೇ, ರಾಮಾಯಣದ ನಾಲ್ಕು ಸಂಪುಟಗಳ ಪ್ರತಿ ಅಧ್ಯಾಯಕ್ಕೂ ಹೆಸರು ನೀಡಲಾಗಿದೆ. ಅದು ಹೊರ ರಚನೆಗೆ ಸಂಬಂಧಿಸಿದ ವಿಚಾರವಾದರೆ, ರಾಮ – ಸೀತೆಯರ ಪಾತ್ರಚಿತ್ರಣ ಕಾಲದಲ್ಲಿ ಹೂವಯ್ಯ ಸೀತೆಯರ ಪ್ರಭಾವ ಆಗಿರುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಲು ಬರುವಂತಿಲ್ಲ. ಕಾನೂರಿನ ಚಂದ್ರಯ್ಯಗೌಡರೇ ಮುಂದೆ ರಾವಣನಾಗಿ ಪರಿವರ್ತನೆಗೊಂಡಿರುವ ಸಾಧ್ಯತೆ ಇದ್ದಿರಬಹುದು. ಚಂದ್ರಯ್ಯಗೌಡರ ದರ್ಪ ಮತ್ತು ಕ್ರೌರ್ಯ ಮಾಗುವಂತೆ, ರಾಮನ ಕೈಯಲ್ಲಿ ಹತನಾಗುವ ವೇಳೆಗೆ ರಾವಣನ ವ್ಯಕ್ತಿತ್ವ ಮಾರ್ಪಾಡಾಗುವುದನ್ನು ‘ಶ್ರೀ ರಾಮಾಯಣ ದರ್ಶನಂ’ ಪರಿಭಾವಿಸುತ್ತದೆ.

ಅಲ್ಲಿ ಚಂದ್ರಯ್ಯಗೌಡರು, ಹೂವಯ್ಯ, ಸುಬ್ಬಮ್ಮ ಮತ್ತು ಗಂಗೆ: ಇಲ್ಲಿ ರಾವಣ, ರಾಮ, ಮಂಡೋದರಿ ಹಾಗೂ ಸೀತೆ. ರಾಮಾಯಣ ದರ್ಶನಂ ಪ್ರಭಾವ ‘ಮಲೆಗಳಲ್ಲಿ ಮದುಮಗಳು’ ಮೇಲೆ ಇನ್ನೂ ಡಾಳಾಗಿದೆ. ಅಲ್ಲಿ ಬರುವ ದೊಡ್ಡಣ್ಣ ಹೆಗ್ಗಡೆ ಮತ್ತು ಆತನ ಪತ್ನಿ ರಂಗಮ್ಮನ ಸಾವಿನ ರೀತಿ, ಹುಲಿಕಲ್ಲನೆತ್ತಿಯ ಮೇಲೆ ತಿಮ್ಮಿ ಮತ್ತು ಆಕೆಯ ಗೆಣೆಕಾರ ಗುತ್ತಿಗೆ ಆಗುವ ವಿಚಿತ್ರ ಅನುಭವಗಳು ಮತ್ತು ಕಲ್ಲೂರು ಗಡ್ಡದಯ್ಯ ನೀಡುವ ಪುನರ್ಜನ್ಮದ ವಿವರಗಳು ‘ಶ್ರೀರಾಮಾಯಣ ದರ್ಶನಂ’ನಲ್ಲಿ ದೊರಕುವ ಕೆಲ ವಿವರಗಳನ್ನು ಬಹಳವಾಗಿ ಹೋಲುತ್ತವೆ. “ದಶಾನನ ಸ್ವಪ್ನಸಿದ್ಧಿ” ಅಧ್ಯಾಯದಲ್ಲಿ ಬರುವ ಕೆಲವೊಂದು ವರ್ಣನೆಗಳನ್ನು ಉದಾಹರಣೆಗೆ ಗಮನಿಸಿದರೆ ಸಾಕು ಎಂದು ತೋರುತ್ತದೆ.

ಜತೆಗೆ ದೊಡ್ಡಣ್ಣ ಹೆಗ್ಗಡೆಯ ಪತ್ನಿ ರಂಗಮ್ಮ ತನ್ನನ್ನು ತಾನು ಸಾವಿಗೆ ಒಡ್ಡಿಕೊಳ್ಳುವ ರೀತಿ, ರಾಮಾಯಣದ ಸೀತೆಯ ಜತೆ ರಾಮನೂ ಅಗ್ನಿಪರೀಕ್ಷೆಗೊಳಗಾಗುವ ರೀತಿಯನ್ನು ನೆನಪಿಗೆ ತಾರದಿರುವುದಿಲ್ಲ. ವ್ಯತ್ಯಾಸವೆಂದರೆ, ರಂಗಮ್ಮ ಅಲ್ಲಿ ತನ್ನ ಗಂಡನ, ದೇಹದ ಜತೆ ಚಿತೆಯೇರಿದರೆ: ಇಲ್ಲಿನ ರಾಮ ಸೀತೆ ಅಗ್ನಿದರ್ಶನದಿಂದ ಪಾವನರಾಗಿ ಹೊರಬರುತ್ತಾರೆ.

ಅವರ ಮಹತ್ವಾಕಾಂಕ್ಷೆಯ ಸೃಷ್ಟಿಗಳಾದ ‘ಕಾನೂರು ಹೆಗ್ಗಡತಿ’, ‘ಶ್ರೀರಾಮಾಯಣ ದರ್ಶನಂ’ ಮತ್ತು ‘ಮಲೆಗಳಲ್ಲಿ ಮದುಮಗಳು’ಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಪ್ರವಹಿಸುವ ಕೆಲ ಸಮಾನ ತಂತುಗಳಲ್ಲಿ ಆಶ್ಚರ್ಯತರಿಸುವಷ್ಟು ಸಾತತ್ಯತೆ ಇದೆ. ರಾಮಾಯಣದಲ್ಲಿ ಅವರು ಬಳಸುವ ಪಗದ್ಯಮಾಧ್ಯಮ ಬಿಟ್ಟರೆ, ಅವರ ಬರವಣಿಗೆ ಒಂದರಿಂದ ಮತ್ತೊಂದಕ್ಕೆ ಹಂತಹಂತವಾಗಿ ಸಾಗಿಬಂದಿದೆ. ಈ ಮೊದಲೇ ಗುರಿತಿಸಲಾದಂತೆ ಅವುಗಳ ವಸ್ತು, ಕಾಲ, ಹಿನ್ನೆಲೆ, ಭೂಮಿಕೆ ಮತ್ತು ಅನ್ವೇಷಣೆಯಾಗುವ ಸತ್ಯಗಳು ಮೇಲುನೋಟಕ್ಕೆ ಬೇರೆ ಎಂಬಂತೆ ತೋರಿಬಂದರೂ, ಪ್ರವಹಿಸುವ ಅಂಶಗಳು ಬಹಳಮಟ್ಟಿಗೆ ಸಮಾನವಾದುದಾಗಿ ತೋರಬಹುದು.

ಆ ಮೂರು ಕೃತಿಗಳ ಮುಖೇನ ಕುವೆಂಪು ಹೇಳಬಯಸುವ ಮತ್ತು ಅನ್ವೇಷಿಸುವುದಾದರೂ ಏನನ್ನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಂದಿನ ತಲೆಮಾರಿನ ಕವಿಗಳ ಲೇಖಕರ ಜವಾಬ್ದಾರಿ ಹಾಗೂ ಕರ್ತವ್ಯವಾಗಬೇಕಿತ್ತು.