ತಿಣಿಕಿದನು ಫನಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ

ಎಂದು ನಾರಣಪ್ಪ ಯಾವ ಅರ್ಥದಲ್ಲಿ ಹೇಳಿದನೋ ಮತ್ತು ಆ ಸುದೀರ್ಘ ನಿಟ್ಟುಸಿರು ಬೆರೆತ ಉದ್ಗಾರವನ್ನು ಭಾರತದ ಮತ್ತಾವ ಕವಿಗಳು ಮತ್ತಾವ ರೂಪದಲ್ಲಿ ವ್ಯಕ್ತಪಡಿಸಿದ್ದಾರೆಯೋ, ಚಿನ್ನದ ಅಲಗಿನ ಮಾತನ್ನು ದಾಖಲಿಸುವುದರ ಮೂಲಕ, ಸೃಜನಶೀಲ ಭಾರತೀಯ ಮನಸ್ಸು ತುಳಿಯಬಯಸಿದ ಮಾರ್ಗ ಕುರಿತಂತೆ ಪರಮಸತ್ಯವೊಂದನ್ನು ಆ ಮಹಾನುಭಾವ ನುಡಿದು ಹೋಗಿದ್ದಾನೆ: ‘ಮಹಾಭಾರತ ರಾಮಾಯಣ ಕವಿಗಳ ಭಾರದಲಿ’ ಎಂದು ಸೇರಿಸಿದ್ದಲ್ಲಿ ಪೂರ್ಣವಾಗುತ್ತಿತ್ತು ಅಷ್ಟೇ!

ಅದೇ ಉರುಸು ಮತ್ತು ಧಾಟಿಯಲ್ಲಿ ಮುಂದುವರಿಯುತ್ತಾ ಅದೇ ಪದ್ಯದ ಉಳಿದರ್ಧ ಭಾಗದಲ್ಲಿ:

ಬಣಗು ಕವಿಗಳ ಲೆಕ್ಕಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ

ಎಂದು ಯಾವುದೇ ಸಂಕೋಚ ಅಥವಾ ಹಿಂಜರಿಕೆಯಿಲ್ಲದೆ ತನ್ನನ್ನು ತಾನು ‘ಕುಮಾರವ್ಯಾಸ’ ಎಂದು ಹೆಮ್ಮೆಯಿಂದ ಕರೆದುಕೊಂಡ ಕವಿ ನಾರಣಪ್ಪ ಮತ್ತು ಆ ಬಿರುದನ್ನು ಪುರಸ್ಕಾರವೋ ಎಂಬಂತೆ ಒಪ್ಪಿಕೊಂಡು ಚಲಾವಣೆಗೆ ತರುವುದರ ಮುಖೇನ ಇಡೀ ಕನ್ನಡ ಸಾಹಿತ್ಯ ಲೋಕವೇ ಆತನ ಸ್ಥಾನಮಾನ ಏನು ಎಂಬುದನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದೆ. ‘ಕುಮಾರ ವ್ಯಾಸ’ ಅಥವಾ ‘ಕುಮಾರ ವಾಲ್ಮೀಕಿ’ ಆದವರು ವ್ಯಾಸ – ವಾಲ್ಮೀಕಿಯರಿಗೆ ಸಮನಾಗಿ ನಿಂತು ಹೊಯ್‌ಕೈಯಾದ ಎಪಿಕ್‌ ಮಾದರಿ ಕಾವ್ಯಗಳನ್ನು ರಚಿಸಿದವರು ಎನ್ನಲು ಬರುತ್ತದೆಯೆ? ಅದೇ ಮಾತುಗಳನ್ನು ಆದಿಕವಿ ಪಂಪ ಬೇರೊಂದು ರೂಪದಲ್ಲಿ ಪ್ರತಿಧ್ವನಿಸುತ್ತಾನೆ: ‘ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ.’

ವ್ಯಾಸ ಮತ್ತು ಆತನ ಮಹಾಭಾರತ ಮೀರಿಸುವ ಕಾವ್ಯ ಬರೆಯಬೇಕು ಎಂಬ ಆತ್ಮ ಪ್ರತ್ಯಯ ಕನ್ನಡ ಅಥವಾ ಮತ್ತಾವುದೇ ಭಾರತೀಯ ಭಾಷೆಯ ಕವಿಗಳಿಗೆ ಬಂದಲ್ಲಿ ಅದು ತಪ್ಪೆ? ಆ ತರಹದ ಆತ್ಮಪ್ರತ್ಯಯ ಗರ್ವ ಹೇಗಾಗುತ್ತದೆ? ಕುಮಾರವ್ಯಾಸ ಆದವರು ವ್ಯಾಸ ಆಗಲು ಬರುತ್ತದೆಯೆ? ಕುಮಾರವ್ಯಾಸ, ಕುಮಾರ ವಾಲ್ಮೀಕಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಪ್ರತಿಭಾವಂತ ಕವಿಯಾಗಿದ್ದಿರಬಹುದು. ಆದರೆ ಭಾರತದ ಮತ್ತು ಈ ಜಗತ್ತಿನ ಸಾಹಿತ್ಯ ಸಂದರ್ಭದಲ್ಲಿ, ಕುಮಾರವ್ಯಾಸ ಮತ್ತು ಕುಮಾರ ವಾಲ್ಮೀಕಿಯರ ಸ್ಥಾನಮಾನ ಭಿನ್ನವಾಗಲು ಬರುತ್ತದೆಯೆ? ‘ಕರ್ಣಾಟ ಭಾರತ ಕಥಾಮಂಜರಿ’ ನಿರ್ಮಿಸಿದ ನಾರಣಪ್ಪನನ್ನು ‘ಕುಮಾರವ್ಯಾಸ’ ಎಂದು ಕರೆಯುವುದಕ್ಕಿಂತ ಹೆಚ್ಚಿನ ವಿಮರ್ಶೆ ಮತ್ತೊಂದಿದೆಯೆ? ತನ್ನನ್ನು ತಾನು ಕುಮಾರವ್ಯಾಸ ಅಥವಾ ವ್ಯಾಸತನಯ ಎಂದು ಕರೆದುಕೊಳ್ಳುವ ಮಟ್ಟಕ್ಕೆ ಪಂಪ ಹೋಗಲಿಲ್ಲ. ಹೋಗಿದ್ದಲ್ಲಿ ಆ ಅವಕಾಶ ನಾರಣಪ್ಪನಿಗೆ ದಕ್ಕುತ್ತಿರಲಿಲ್ಲ. ಆದರೂ ಪಂಪ ಮತ್ತು ನಾರಣಪ್ಪರ ನಡುವೆ ಅಂತರ ಇರುವುದಾದರೂ ಎಲ್ಲಿ? ಅಂತರ ಇರುವುದು ಅಭಿವ್ಯಕ್ತವಾಗುವ ಕಾವ್ಯ ಪ್ರತಿಭೆಯ ಪ್ರಮಾಣ ಮತ್ತು ಗುಣದಲ್ಲಿ ಮಾತ್ರ. ಹಿಡಿದ ಮಾರ್ಗ ಅನುಸರಿಸಿದ ವಿಧಾನ ಮತ್ತು ಲಕ್ಷಣದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಅಂತಹ ‘ಪಂಪ’, ‘ಕುಮಾರವ್ಯಾಸ’, ‘ಕುಮಾರ ವಾಲ್ಮೀಕಿ’ಯರನ್ನು ಸಾಲಾಗಿ ಪಡೆದ ಯಾವುದೇ ಭಾಷೆ: ಆ ಬೆಳವಣಿಗೆಗೆ ಆಧಾರವಾಗಿ ಉಳಿದ ಮೂಲಭಾಷೆಯ ಅದು ಸಂಸ್ಕೃತ ಆಗಿದ್ದಿರಬಹುದು ಅಥವಾ ಮತ್ತೊಂದಿರಬಹುದು – ವ್ಯಾಸ ವಾಲ್ಮೀಕಿಯರಿಗೆ ಸಮನಾಗಿ ನಿಲ್ಲಲು ಸಾಧ್ಯವೆ? ‘ಕುಮಾರ ವಾಲ್ಮೀಕಿ’, ‘ಕುಮಾರವ್ಯಾಸ’ ಎಂಬ ಹೆಸರಿನಿಂದ ಕರೆದುಕೊಳ್ಳುವುದು ಮತ್ತು “ವ್ಯಾಸನು ನಾನು ಎಂಬ ಗರ್ವ ಎನಗಿಲ್ಲ” ಎಂದು ಹೇಳಿಕೊಳ್ಳುವುದು ವಿನಯದ ಪ್ರತೀಕ ಎಂದು ಕೆಲವರು ವಾದಿಸಬಹುದು. ಆದರೆ ಅದು ನಿಜವಾದ ವಿನಯವಲ್ಲ: ಗರ್ವಿಯಾದವನು ಮಾತ್ರ ನಿಗರ್ವಿಯಾಗಲು ಸಾಧ್ಯವಿರುವಂತೆ, ಉತ್ತಮ ಮಟ್ಟದ ಸ್ವಾಭಿಮಾನ ಮತ್ತು ಆತ್ಮ ಪ್ರತ್ಯಯದಿಂದ ತುಂಬಿದ ವ್ಯಕ್ತಿ ಮಾತ್ರ ನಿಜವಾದ ವಿನಯಶಾಲಿಯಾಗಲು ಬರುತ್ತದೆ.

ಹೋಮರ್‌ – ವರ್ಜಿಲ್‌ ಒಂದು ಖಚಿತ ಕಾಲಮಾನದ ಕೊಡುಗೆಯಾದಂತೆ, ಮೂಲ ಮಹಾಭಾರತ – ರಾಮಾಯಣ ಸಹ ಒಂದು ನಿರ್ದಿಷ್ಟ ಕಾಲಮಾನದ ಸೃಷ್ಟಿಗಳು: ತಾವು ಬಂದ ಕಾಲ ಮತ್ತು ಬದುಕಿಗೆ ಬದ್ಧವಾಗಿ ಸ್ಪಂದಿಸಿವುದರ ಮೂಲಕ ಆ ಕಾಲಮಾನದ ಮಿತಿಯನ್ನು ಮೀರಿ ಎಲ್ಲ ಕಾಲಕ್ಕೂ ಸಲ್ಲಲು ಸಾಧ್ಯ ಎಂಬ ತತ್ವವನ್ನು ಇಲಿಯಡ್‌ – ಒಡಿಸ್ಸಿ – ಈನೀಡ್‌ಗಳು ಪ್ರತಿಪಾದಿಸುವಂತೆಯೇ; ವಾಲ್ಮೀಕಿಯರು ಪ್ರತಿಪಾದಿಸಿ ತೋರಿಸಿದ್ದಾರೆ. ಆ ಅರ್ಥದಲ್ಲಿ ಹೋಮರ್‌ – ವ್ಯಾಸ – ವಾಲ್ಮೀಕಿ – ವರ್ಜಿಲ್ ನಡುವೆ ಯಾವುದೇ ಅಂತರ ಮತ್ತು ಭಿನ್ನಾಭಿಪ್ರಾಯ ಇರಲು ಸಾಧ್ಯವಿಲ್ಲ; ತಾನು ಬಂದ ಕಾಲ, ಆ ಕಾಲದ ಬದುಕು, ಸಂಸ್ಕೃತಿ, ಪರಿಸರ ಮತ್ತು ಅವು ಸೃಷ್ಟಿಸುವ ಬಿಕ್ಕಟ್ಟಿಗೆ ಸ್ಪಂದಿಸಿ ಹೋಮರ್‌ ಕಾವ್ಯ ಬರೆದಂತೆ, ವ್ಯಾಸ ಕೂಡ ಕಾವ್ಯ ರಚಿಸಿದ್ದಾನೆ. ಹೋಮರನ ಕೃತಿಗಳು ಅವುಗಳ ಮೂಲರೂಪದಲ್ಲಿ ಉಳಿದುಬಂದರೆ, ಮಹಾಭಾರತ ರಾಮಾಯಣಗಳು ಬೆಳೆಯುತ್ತಾ ಹೋದವು.

ಆ ವಿಸ್ತರಣೆಗೆ ವ್ಯಾಸ – ವಾಲ್ಮೀಕಿಯರು ಕಾರಣರೆ? ನಿಮ್ಮ ನಿಮ್ಮ ಕಾಲದ ಇಲಿಯಡ್‌ – ಒಡಿಸ್ಸಿಗಳನ್ನು ಕಂಡುಕೊಳ್ಳುವುದು ನಿಮ್ಮ ನಿಮ್ಮ ಜವಾಬ್ದಾರಿ ಎಂದು ಹೋಮರ್‌ ತನ್ನನಂತರ ಬಂದ ಕವಿಗಳಿಗೆ ಉಪದೇಶಿಸಲಿಲ್ಲವಾದಂತೆ, ವ್ಯಾಸ – ವಾಲ್ಮೀಕಿಯರು ಸಹ ಹೇಳಲು ಹೋಗಲಿಲ್ಲ. ಅದನ್ನು ಕಂಡುಕೊಳ್ಳುವುದು ಆ ನಂತರ ಬಂದ ಗ್ರೀಕ್‌ – ಲ್ಯಾಟಿನ್‌ ಕವಿಗಳ ಜವಾಬ್ದಾರಿಯಾಗಿದ್ದಂತೆ; ವ್ಯಾಸ – ವಾಲ್ಮೀಕಿನಂತರ ಬಂದ ಕವಿಗಳ ಕರ್ತವ್ಯವೂ ಆಗಿರಲಿಲ್ಲವೆ?

ಹೋಮರನಿಗೆ ಹೋಮರನೇ ಮಾದರಿಯಾದಂತೆ[1] ವ್ಯಾಸನಿಗೆ ವ್ಯಾಸನೇ ಮಾದರಿ. ಅನಂತರ ಬಂದ ವಾಲ್ಮೀಕಿಗೆ ವ್ಯಾಸಭಾರತದ ಅರಿವಿತ್ತೋ ಅಥವಾ ಎಂಬ ಬಗ್ಗೆ ಕಾಲ ಮಾತ್ರ ಉತ್ತರ ನೀಡಬಲ್ಲುದು. ಆದರೆ ವರ್ಜಿಲನಿಗೆ ಹೋಮರ್‌ ಮಾದರಿಯಾಗಿದ್ದಂತೆ, ಕಾಳಿದಾಸನಿಗೆ, ವ್ಯಾಸ ವಾಲ್ಮೀಕಿ ಎಂಬ ಎರಡು ಹಿಮಾಲಯಗಳ ಮಾದರಿ ಕಣ್ಮುಂದೆ ಇತ್ತು. ಪ್ರತಿಭೆಯಲ್ಲಿ ಕಾಳಿದಾಸ ವರ್ಜಿಲನಿಗಿಂತ ಯಾವ ರೀತಿಯಲ್ಲಿ ಕಡಿಮೆ? ಹಾಗೆ ನೋಡಿದರೆ ವರ್ಜಿಲನಿಗಿಂತ ಹತ್ತು ಪಟ್ಟು ಹೆಚ್ಚು ಪ್ರತಿಭಾವಂತನಾದ ಕಾಳಿದಾಸ ವಿಫಲವಾದುದಾದರೂ ಎಲ್ಲಿ? ತನಗೂ ಹಿಂದಿನ ಭಾಸ – ಅಶ್ವಘೋಷರನ್ನು ಮಾದರಿಯಾಗಿ ಸ್ವೀಕರಿಸಲು ಸಾಧ್ಯವಿರಲಿಲ್ಲವಾದರೂ, ಅವರ ಸಾಧನೆಯ ಸಫಲತೆ – ವಿಫಲತೆ ಕಾಳಿದಾಸನಿಗೆ ಗೊತ್ತಿತ್ತು. ಭಾಸ ಮೂಲತಃ ನಾಟಕಕಾರನಾಗಿದ್ದರೆ, ಅಶ್ವಘೋಷ ಮಹತ್ವಾಕಾಂಕ್ಷೆಯ ಕವಿಯಾಗಿರಲಿಲ್ಲ. ‘ಅಭಿಜ್ಞಾನ ಶಾಕುನ್ತಲಂ’ ಕೃತಿಯಲ್ಲಿ ಸೀಮಿತ ಪ್ರಮಾಣದಲ್ಲಿಯಾದರೂ ಯಶಸ್ಸು ಸಾಧಿಸಲು ಸಾಧ್ಯವಾದ ಕಾಳಿದಾಸನಿಗೆ, ‘ಕುಮಾರ ಸಂಭವಂ’ ಮತ್ತು ‘ರಘುವಂಶಂ’ ರಚನೆ ಕಾಲದಲ್ಲಿ ಸಾಧ್ಯವಿರುವ ಎಲ್ಲ ಸಾಧ್ಯತೆಗಳ ಸುಲಿಗೆ ಮಾಡಲಾಗದಿರಲು ಕಾರಣಗಳೇನಿರಬಹುದು!

ಪಂಪನಿಗೆ ಸಿದ್ಧಮಾದರಿಯೊಂದಿತ್ತು – ಕಾಳಿದಾಸನ ರೂಪದಲ್ಲಿ. ಸಂಸ್ಕೃತ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಎಪಿಕ್‌ – ಕ್ಲಾಸಿಕ್‌ ಪರಂಪರೆ ಮತ್ತು ಗುಣಲಕ್ಷಣಗಳಿಗೆ ಬಹಳ ಹತ್ತಿರ ಬರುವ ಕವಿ ಕಾಳಿದಾಸನಾದಂತೆ: ಭಾಷಾ ಬಳಕೆ, ನಿರ್ವಹಣೆ ಮತ್ತು ನಿರೂಪಣೆಯಲ್ಲಿ ಕನ್ನಡದ ಪಂಪ ಆ ಪರಂಪರೆಗೆ ಸ್ವಲ್ಪವಾದರೂ ಹತ್ತಿರವಾಗುತ್ತಾನೆ. ಅಷ್ಟಾದರೂ, ವಸ್ತುವಿನ ಆಯ್ಕೆಯಲ್ಲಿಯೇ ಕವಿಯೊಬ್ಬನ ನೈಪುಣ್ಯ ಸಾಕಷ್ಟು ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ ಎಂಬುದು ಆತನಿಗೆ ಹೊಳೆಯಲೇ ಇಲ್ಲವೆ!

ಈ ದೇಶದ ಇತಿಹಾಸದುದ್ದಕ್ಕೂ ಹಲವಾರು ಕವಿಗಳು, ಹಲವಾರು ಶತಮಾನಗಳ ಅಂತರದಲ್ಲಿ ಬೆಳೆದುಬಂದಿರುವ ಮಹಾಭಾರತ – ರಾಮಾಯಣ ಆಧರಿಸಿ ಕಾವ್ಯ ಬರೆದಿದ್ದಾರೆ. ಯುರೋಪಿನ ಸಾಹಿತ್ಯ ಜಗತ್ತಿನಲ್ಲಿ ಬಹಳವಾಗಿ ಪ್ರಚಲಿತವಿರುವ ನಿರ್ದಿಷ್ಟ ದೃಷ್ಟಿಕೋನ ಆಧರಿಸಿ ಕಾದಂಬರಿ ಬರೆಯುವ ವಿಧಾನವನ್ನು ಪಂಪ, ರನ್ನ, ಕುಮಾರವ್ಯಾಸ ಮೊದಲಾದವರು ಅನೇಕ ಶತಮಾನಗಳ ಹಿಂದೆಯೇ ಚಾಲತಿಗೆ ತಂದಿದ್ದರು; ಪಂಪ ಅರ್ಜುನನ ಮೂಲಕ ಮಹಾಭಾರತ ನೋಡಿದರೆ, ರನ್ನ ಭೀಮನ ಮೂಲಕ ನೋಡುತ್ತಾನೆ; ಕುಮಾರವ್ಯಾಸನಿಗೆ ಕೃಷ್ಣಕತೆಯಾಗಿ ಮಾರ್ಪಡುತ್ತದೆ. ಅರ್ಜುನನ ಪ್ರತಿಸ್ಪರ್ಧಿ ಕರ್ಣನಿಗೆ ತೋರಿಸಬೇಕಾದ ಸಹಾನುಭೂತಿ ತೋರಿಸುವುದು ಆ ಕಾರಣ ಪಂಪನಿಗೆ ಅನಿವಾರ್ಯವಾದರೆ, ಭೀಮನ ಪ್ರತಿಸ್ಪರ್ಧಿಯಾದ ದುರ್ಯೋಧನನನ್ನು ತನ್ನ ನಾಯಕನಿಗೆ ಸರಿಗಟ್ಟುವ ಪ್ರತಿನಾಯಕನನ್ನಾಗಿ ಚಿತ್ರಿಸುವುದು ರನ್ನನಿಗೆ ಸಹಜ ಕಾಣುತ್ತದೆ. ತನ್ನ ಕಡೆಯವರೆಲ್ಲಾ ಸೋತು ನಿರ್ನಾಮವಾದ ನಂತರ ರಣರಂಗದ ಮೂಲಕ ಒಬ್ಬಂಟಿಯಾಗಿ ಹಾದು ಹೋಗಬೇಕಾಗಿರುವ ದುರ್ಯೋಧನನನ್ನು ಚಿತ್ರಿಸುವಲ್ಲಿ ರನ್ನನ ಅಸಾಧಾರಣ ಪ್ರತಿಭೆ ವ್ಯಕ್ತವಾಗುತ್ತದೆ. ಅಂತಹ ಅನೇಕ ಬಿಡಿಬಿಡಿ ಪ್ರಸಂಗಗಳು ಪಂಪ, ರನ್ನ, ಕುಮಾರವ್ಯಾಸ ಭಾರತದಲ್ಲಿ ದಂಡಿಯಾಗಿ ಸಿಗುತ್ತವೆ.

ಆ ಎಲ್ಲ ಆಯ್ದ ಭಾಗಗಳನ್ನು ಸಂಸ್ಕೃತಕ್ಕೆ ಬಹಳ ಅತ್ಯುತ್ತಮವಾಗಿ ಅನುವಾದಿಸಿ ಮೂಲ ಮಹಾಭಾರತಕ್ಕೆ ಸೇರಿಸುವುದಾದಲ್ಲಿ ಆಗುವ ಪರಿಣಾಮ ಮತ್ತು ಲಾಭವಾದರೂ ಏನು?

ಕನ್ನಡ ಸಾರಸ್ವತಲೋಕ ಬಹಳವಾಗಿ ಮೆಚ್ಚಿಕೊಂಡಿರುವ ಪಂಪಭಾರತದ ಕರ್ಣನು ದುರ್ಯೋಧನನ ಪತ್ನಿ ಭಾನುಮತಿಯ ಕುತ್ತಿಗೆಗೆ ಕೈಹಾಕುವ ಪ್ರಸಂಗವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದಲ್ಲಿ:

ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ |
ಡುತ್ತಿರೆ ಲಂಬಣಂ ಪಱೆಯೆ ಮುತ್ತಿನ ಕೇಡನೆ ನೋಡಿ ಬ ||
ಳ್ಕುತ್ತಿರೆಯೇವಮಿಲ್ಲದಿವನಾ [ಯ್ವು]ದೊ ತಪ್ಪದೆ ಪೇೞೆಮೆಂಬ ಭೂ|
ಪೋತ್ತಮನಂ ಬಿಸುಟ್ಟಿರದೆ ನಿಮ್ಮೊಳಕ್ಕೂಡೆ ಬೇಡನಲ್ಲೆನೇ ||೬೯||

ಕರ್ಣ ಮತ್ತು ದುರ್ಯೋಧನರ ನಡುವಣ ಮಧುರ ಬಾಂಧವ್ಯ ಎಷ್ಟು ವಿಶಾಲ ಹೃದಯದಿಂದ ಕೂಡಿತ್ತೆಂದರೆ, ತನ್ನ ಪತ್ನಿಯ ಕೊರಳಿಗೆ ಕೈಹಾಕುವ ಸದರ ತೆಗೆದುಕೊಂಡರೂ ತಪ್ಪುಳಿದುಕೊಳ್ಳದ ದುರ್ಯೋಧನನು ಚೆಲ್ಲಾಪಿಲ್ಲಿಯಾದ ಮುತ್ತುಗಳನ್ನು ಆಯ್ದುಕೊಡುವ ಔದಾರ್ಯ ಮತ್ತು ಸ್ನೇಹದ ಶ್ರೀಮಂತಿಕೆ ಪ್ರದರ್ಶಿಸುತ್ತಾನೆ ಎಂಬುದಾಗಿ ಅನೇಕರು ಪರಿಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಆ ಘಟನೆ ಧ್ವನಿಸುವ ನಿಜವಾದ ಅರ್ಥವೇ ಬೇರೆ.

ಕೌರವರ ಮೂಲ ಉದ್ದೇಶ ಪಾಂಡವರ ಸರ್ವನಾಶ ಮಾಡುವುದು; ಅದರಲ್ಲಿ ಕರ್ಣನ ನೆರವು ಅತ್ಯಗತ್ಯ ಎಂಬುದನ್ನು ಮನಗಂಡಿದ್ದ ದುರ್ಯೋಧನನು, ತನ್ನ ಪಟ್ಟದರಸಿಯ ಜತೆ ಏಕಾಂತದಲ್ಲಿ ಸರಸದಿಂದ ನಡೆದುಕೊಳ್ಳುವುದನ್ನು ಅನಿವಾರ್ಯ ಎಂಬಂತೆ ತೆಗೆದುಕೊಂಡಿದ್ದ: ಅದು ಗೊತ್ತಿದ್ದ ಕರ್ಣ ತನಗೆ ಆಶ್ರಯ ನೀಡಿದಾತನ ಪತ್ನಿಯೊಂದಿಗೆ ಸರಸ ಆಡುವುದರ ಜತೆಗೆ, ಕುತ್ತಿಗೆಗೆ ಕೈಹಾಕಲು ಹಿಂದುಮುಂದು ನೋಡುವುದಿಲ್ಲ. ಆದರೆ ಭಾನುಮತಿಯ ನಿಜವಾದ ಭಾವನೆಗಳು ಏನಾಗಿದ್ದವು ಎಂಬುದು ಮಾತ್ರ ಗೊತ್ತಾಗುವುದಿಲ್ಲ. ಏಕೆಂದರೆ, ಕವಿ ಆ ಕಡೆಗೆ ನೀಡಬೇಕಾದ ಗಮನ ನೀಡುವುದಿಲ್ಲ. ಅಥವಾ ಪರಿಸ್ಥಿತಿಯೇ ಹಾಗಿತ್ತು ಎಂಬುದನ್ನು ಮಗುಂ ಆಗಿ ತೋರಿಸುವ ಉದ್ದೇಶವಿರಬಹುದು. ಹಿನ್ನೆಲೆ ಗೊತ್ತಿದ್ದ ಕಾರಣ ಭಾನುಮತಿ ಮೌನವಾಗಿ ಸಹಿಸಿಕೊಳ್ಳಬೇಕಾಯಿತು ಅಥವಾ ಸ್ವಾಗತಿಸಬೇಕಾಯಿತು ಎಂದು ಆಕ್ಷೇಪಿಸುವ ಇಲ್ಲವೆ ಸಮರ್ಥಿಸಬಹುದಾದ ರೀತಿಯಲ್ಲಿ ಆ ಸನ್ನಿವೇಶ ಚಿತ್ರಣಗೊಂಡಿದೆ.

ಹಾಗಾಗಿ ಆ ಮೂವರ ನಡವಳಿಕೆಯೂ ಸುಸಂಸ್ಕೃತ ಮಟ್ಟದ್ದಾಗಿ ತೋರುತ್ತದೆಯೆ? ಅದಿರಲಿ, ಆ ಘಟನೆಯಿಂದ ಮೂಲ ಮಹಾಭಾರತ ಒಟ್ಟಂದದ ಮೇಲಾಗುವ ಪರಿಣಾಮವಾದರೂ ಏನು?

ವ್ಯಾಸಭಾರತವನ್ನು ತಮ್ಮ ಕಾಲದ ಹಿನ್ನೆಲೆಯಲ್ಲಿ ಅರ್ಥೈಸುವ ಮತ್ತು ಅದರ ಮಹತ್ವವನ್ನು ತಮ್ಮ ಬದುಕಿನ ಹಿನ್ನೆಲೆಯಲ್ಲಿ ಮತ್ತೆ ಕಂಡುಕೊಳ್ಳುವ ಕೆಲಸವನ್ನು ಪಂಪ, ರನ್ನ ಮತ್ತು ನಾರಣಪ್ಪ ಮಾಡಿದ್ದಾರೆ ಎಂಬ ವಾದವನ್ನು ಕೆಲವರು ಮುಂದೊಡ್ಡಬಹುದು. ಭಾರತ ಬರೆಯಲು ಪಂಪ ಮುಂದಾದುದು ಗೊತ್ತಿರುವ ವಿಚಾರ. ‘ಈನೀಡ್‌’ ಬರೆಯುವಾಗ ವರ್ಜಿಲ್‌ ಸಹ ಅದೇ ತರಹದ ಭಾವನೆಯಿಂದ ಪ್ರೇರಿತವಾದಂತೆ ತೋರುತ್ತದೆ ಎಂಬ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ರೋಮನ್‌ ಸಾಮ್ರಾಜ್ಯದ ಸಂಸ್ಥಾಪಕ ಎಂದು ಗುರುತಿಸಬಹುದಾದ ತನ್ನ ಸಮಕಾಲೀನ ಅಗಸ್ಟಸ್‌ ಸೀಸರ್‌ ಮತ್ತವನ ಪೂರ್ವಿಕರ ಕತೆ ಬರೆಯಲು ವರ್ಜಿಲ್‌ ಮುಂದಾದ ಎಂದು ಸಹ ನಂಬಲಾಗಿದೆ. ಅದರ ಫಲವೇ ಆತನ ‘ಈನೀಡ್‌’ ಅಂದರೆ ಪಂಪ ಮತ್ತು ವರ್ಜಿಲರ ಮೂಲ ಆಶಯಗಳ ನಡುವೆ ಹೊಂದಾಣಿಕೆ ಇದೆ ಎಂದಾಯಿತು! ಆದರೆ ಅವರಿಬ್ಬರೂ ಹಿಡಿದ ದಾರಿ ಸಂಪೂರ್ಣ ಭಿನ್ನ ಮಾತ್ರವಲ್ಲ, ಅನುಸರಿಸಿದ ವಿಧಾನ ಕೂಡ ಅತ್ಯಂತ ವಿಭಿನ್ನವಾದುದು.

ಆ ಕುರಿತ – ಈಗಾಗಲೇ ಪ್ರಸ್ತಾಪಿಸಲಾಗಿರುವ – ವಿವರಗಳಿಗೆ ಮತ್ತೆ ಹೋಗುವ ಮೊದಲು ಪ್ರಮುಖವಾದ ಪ್ರಶ್ನೆ ಕೇಳಿಕೊಳ್ಳುವುದು ಬಹಳ ಅಗತ್ಯ. ಪಂಪ – ಕುಮಾರವ್ಯಾಸರ ತರಹವೆ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ವರ್ಜಿಲ್‌ ಕೂಡ ‘ಇಲಿಯಡ್‌’ ಅಥವಾ ‘ಒಡಿಸ್ಸಿ’ಯನ್ನು ತನ್ನ ಭಾಷೆಯಾದ ಲ್ಯಾಟಿನ್‌ನಲ್ಲಿ ಬರೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಲ್ಲಿ ವರ್ಜಿಲನಿಗೆ ಇಂದು ವಿಶ್ವ ಸಾಹಿತ್ಯದಲ್ಲಿ ದೊರಕಿರುವ ಗೌರವ ದೊರಕುತ್ತಿತ್ತೆ! ಪಂಪನ ಮಾರ್ಗದಲ್ಲಿಯೆ ವರ್ಜಿಲ್‌ ಸಾಗಿದ್ದಲ್ಲಿ ಯುರೋಪಿನ ಸಾಹಿತ್ಯ ಚರಿತ್ರೆಯ ದಿಕ್ಕು ಅಥವಾ ಗತಿ ಏನಾಗುತ್ತಿತ್ತು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಒಂದು ಅರ್ಥದಲ್ಲಿ ಅತ್ಯಂತ ಸುಲಭ ಅಥವಾ ಕಷ್ಟದ ವಿಚಾರ. ಕಷ್ಟದ ವಿಚಾರ ಏಕೆಂದರೆ, ಯುರೋಪಿನ ಪ್ರಜ್ಞಾಕೇಂದ್ರವೇ ವರ್ಜಿಲ್‌; ಕವಿಯೊಬ್ಬ ಅಂತಹ ಮಹತ್ವದ ಪಾತ್ರವಹಿಸಲು ಪೂರಕವಾದ ಹಿನ್ನಲೆ, ಶಕ್ತಿಗಳನ್ನು ವಿಶ್ಲೇಷಿಸುವುದು ಎಂದರೆ: ಯುರೋಪಿನ ಜನ, ಅವರು ಕಟ್ಟಿದ ಸಂಸ್ಕೃತಿ ಮತ್ತು ನಾಗರಿಕತೆಯ ನಿರ್ಮಾಣದ ಹಿಂದೆ ಕೆಲಸ ಮಾಡಿದ ಮನಸ್ಸುಗಳನ್ನು ಅಧ್ಯಯನ ಮಾಡಿದಂತಾಗುತ್ತದೆ. ಇಲ್ಲಿನ ಪ್ರಮುಖ ಉದ್ದೇಶಗಳ ಪೈಕಿ ಅದೂ ಒಂದು ತಾನೆ.

ಕವಿಯೊಬ್ಬ ಅದರಲ್ಲೂ ಯುರೋಪ್‌ ಮೂಲದ ಜನರು ನಿರ್ಮಿಸಿದ ಅತ್ಯಂತ ಸಂಕೀರ್ಣ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರಜ್ಞಾಕೇಂದ್ರವಾಗಿ ಒಡಮೂಡುವ ವಿಚಾರವೆ ಭಾರತೀಯ ಮನಸ್ಸಿಗೆ ಉತ್ಪ್ರೇಕ್ಷೆಯ ಇಲ್ಲವೆ ಉಡಾಫೆಯ ಅಥವಾ ಬೇಜವಾಬ್ದಾರಿಯಿಂದ ಕೂಡಿದ ಹೇಳಿಕೆಯಾಗಿ ತೋರಬಹುದು. ಆ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಇಡೀ ಯೂರೋಪ್‌ ಆ ಮಾತನ್ನು ಹೆಚ್ಚಿನ ಚರ್ಚೆ ಇಲ್ಲದೆ ಒಪ್ಪಿಕೊಂಡಿದೆ ಎಂಬುದಕ್ಕೆ ಈ ಮೂವರು ವಿದ್ವಾಂಸರ ಅಭಿಪ್ರಾಯಗಳು ಸಾಕು. ಜಗತ್ತಿನ ಇತಿಹಾಸ ಆ ಮಾತಿಗೆ ಬಹುದೊಡ್ಡ ಸಾಕ್ಷಿ:

Virgil is the only pagan who takes rank with the Jewish and Christian prophets ; the Aeneid is the only book, apart from Holy Scriptures, to contain sayings that are valid beyond the particular hour and circumstance of their day. Prosphecies that re – echo from the doors of eternity, whence they first draw their breath… For whether we like it or not, whether we know it or not, we are all still members of that Imperium Romanum, which finally and after terrible errors accepted Christinity sua sponte, of its own free will a Christinaity which it could not abandon now without abandoning itself and humanism too.[2]

The Aeneid was seen by scholars such as E. K. Rand as a classic, a foretaste of Christinaity and a fundamental document of Western Civilization, and T. S. Eliot’s well known assertion of this view in What is a Classic? (1945) and ‘Virgil and the Christian World’ (1951) acknowledges a direct debt to the German scholar Haecker, who had presented Virgil as ‘Father of the West’ in 1931. J. W. Mackail’s edition of the West’ in 1931. J. W. Mackail’s edition. Of the Aeneid (1930), likewise part of the himillenary festivities, pursued a similar line. This Positive presentation of the Aeneid as a classic vindication of the European world – order, happily consonant with Roman imperialism and the achievements and political settlement of Augustus, found few dissenters between the two World War.[3]

Although the political readings range from conservative to totalitarian, the religious views from pagan to Christian, and the ethnic stamp from narrowly national to broadly occidental, the response was triggered in every case by the powerful conviction that Virgil in his works offers a message of compelling relevance for the morally chaotic and socially anarchic present entre deux guerres – a view that strikes us, in retrospect, as particularly poignant because we know today what followed those hopeful bimillennial appeals to Virgilian ordo, pietas, and humanities.[4]

ತನ್ನ ಆಶ್ರಯದಾತನಾದ ಅರಿಕೇಸರಿಯನ್ನು ಓಲೈಸುವುದು ಅಥವಾ ಆತನ್ನು ಎತ್ತರಕ್ಕೇರಿಸುವುದು ಪಂಪನ ಉದ್ದೇಶ. ಅದಕ್ಕಾಗಿ ಎಷ್ಟೋ ಶತಮಾನಗಳಿಗೂ ಮೊದಲೇ ರಚಿತವಾದ ಮಹಾಭಾರತದ ಮೊರೆಹೋಗುವ ಪಂಪ, ಅರಿಕೇಸರಿಯೇ ಅರ್ಜುನ ಎಂದು ಭಾವಿಸಿ ಕಾವ್ಯ ಬರೆಯಲು ಹೋಗಿ ಮಾಡಿಕೊಳ್ಳಬೇಕಾಗಿ ಬಂದ ಮಾರ್ಪಾಡುಗಳು, ಮತ್ತನೇಕ ರಾಜಿ ಖಬೂಲಿಗಳ ಬಗ್ಗೆ ಕನ್ನಡ ಸಾರಸ್ವತಲೋಕ ಸುದೀರ್ಘ ಚರ್ಚೆ ನಡೆಸಿದೆ. ತನ್ನ ಆಶ್ರಯದಾತನ ಕತೆ ಬರೆಯಲು ಪಂಪ ಮಹಾಭಾರತದ ಮೊರೆ ಹೋದಂತೆ, ತನ್ನ ಸ್ನೇಹಿತನಾದ ಅಗಸ್ಟಸ್‌ ಸೀಸರ್‌ ಮತ್ತಾತನ ಪೂರ್ವಿಕರ, ಹಾಗೂ ತನ್ನ ಕಾಲದ ಜನರ ಕತೆ ಬರೆಯಲು ಹೋದ ವರ್ಜಿಲ್‌ ಕೂಡ, ಹೋಮರನ ‘ಇಲಿಯಡ್‌’ಗೆ ಕೈ ಹಾಕುತ್ತಾನೆ. ಆದರೆ ಮಹಾಭಾರತವನ್ನು ಅನಾಮತ್ತಾಗಿ ತನ್ನ ಕಾಲದ ಕತೆ ಎಂಬಂತೆ ಪಂಪ ಸ್ವೀಕರಿಸಿದರೆ, ವರ್ಜಿಲ್‌,‘ಇಲಿಯಡ್‌’ನಲ್ಲಿ. ಬರುವ ಒಂದು ಸಣ್ಣ ಪಾತ್ರವನ್ನು ಮಾತ್ರ ತನ್ನ ಕಾವ್ಯದ ನಾಯಕನನ್ನಾಗಿ ಆಯ್ದುಕೊಳ್ಳುತ್ತಾನೆ. ಆತ ಸೋತ ಟ್ರೋಜನ್ನರ ಸಂತತಿಗೆ ಸೇರಿದವನು. ಯುರೋಪ್‌ ಮೂಲದ ಗ್ರೀಕರ ಕೈಯಲ್ಲಿ ಸೋತ ಏಷ್ಯನ್ನರ ಟ್ರೋಜನ್ ಕುಡಿಯೊಂದು, ಮುಂದೆ ಬಹಳ ಪ್ರಸಿದ್ಧಿಗೆ ಬಂದ ರೋಮನ್‌ ಸಾಮ್ರಾಜ್ಯದ – ಆ ಮೂಲಕ ಪಶ್ಚಿಮ ಸಂಸ್ಕೃತಿ ಮತ್ತು ನಾಗರಿಕತೆಯ ಸ್ಥಾಪನೆಗೆ ಕಾರಣನಾದ ಎಂದು ಪ್ರತಿಪಾದಿಸುವುದು ಎಂತಹ ಅದ್ಭುತ ಸಾಹಸ! ಜೂಲಿಯಸ್‌ ಸೀಸರ್‌ನ ಪೂರ್ವಿಕರು ಏಷ್ಯದ ಟ್ರೋಜನ್ ಮೂಲದಿಂದ ಬಂದವರು ಎಂಬುದಾಗಿ ಪ್ರತೀತಿ. ಟ್ರಾಯ್‌ ಪತನದ ಕತೆಯನ್ನು ತನ್ನ ಬದುಕಿನ ಒಂದು ಘಟ್ಟದ ಕಹಿ ಅನುಭವ ಎಂಬಂತೆ, ಆ ಯುದ್ಧದಲ್ಲಿ ಭಾಗಿಯಾಗಿದ್ದ ಈನಿಯಾಸ್‌ ಇನ್ನೊಬ್ಬರ ಕೋರಿಕೆ ಮೇರೆ ನಿರೂಪಿಸುವ ರೀತಿಯಲ್ಲಿ ವರ್ಜಿಲ್‌ ಕಾವ್ಯ ರಚಿಸುತ್ತಾನೆ. ಆ ಮೂಲಕ ಹೋಮರನ ‘ಇಲಿಯಡ್‌’ ಮತ್ತು ತನ್ನ ಕಾವ್ಯದ, ಕಾಲದ ನಡುವಿರುವ ಅಂತರವನ್ನು ಗುರುತಿಸುತ್ತಲೇ, ಅದು ಮುಂದಿನ ಬದುಕಿನ ಮೇಲೆ ಪ್ರಭಾವ ಬೀರುವ ರೀತಿಯನ್ನು ಸಂಗತಗೊಳಿಸುವ ಕ್ರಮ ಇಂದಿಗೂ ಅನನ್ಯವಾಗಿ ಉಳಿದಿದೆ.

ತಾನು ಮುಂದೆ ಸ್ಥಾಪಿಸಲಿರುವ ರೋಮನ್‌ ಸಾಮ್ರಾಜ್ಯದ ಭವ್ಯ ಭವಿತವ್ಯ ಕೇಳುವ ಉದ್ದೇಶದಿಂದ ಪಿತೃಲೋಕಕ್ಕೆ ಈನಿಯಾಸ್‌ ಹೋದಾಗ, ಆತನ ತಂದೆ ಅಂಖೈಸಸ್ ಬಾಯಲ್ಲಿ ಆ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಮುಖ್ಯ ಪಾತ್ರವಹಿಸುವ ಪ್ರಮುಖರ ಸಾಲಿನಲ್ಲಿ ಜೂಲಿಯಸ್‌ ಸೀಸರ್‌, ಅಗಸ್ಟಸ್‌ ಮೊದಲಾದವರ ಹೆಸರು ಬರುತ್ತದೆ.[5] ಆದರೆ ಈನಿಯಾಸ್‌ನ ಪಾತ್ರ ನಿಮಾರ್ಣದಲ್ಲಿ ಅಗಸ್ಟಸ್‌ ಪ್ರಭಾವವಿರುವುದನ್ನು ಗುರುತಿಸಲಾಗಿದೆ; ಅಗಸ್ಟಸ್‌ನ ಕಾವ್ಯ ರೂಪವೆ ಈನಿಯಾಸ್‌. ಹಾಗಾಗಿ ತನ್ನ ಕಾಲದ ಬಿಕ್ಕಟ್ಟು ಮತ್ತು ಇತಿಹಾಸಕ್ಕೆ ಸ್ಪಂದಿಸಿ ಕವಿಯೊಬ್ಬ ಕಾವ್ಯ ಬರೆಯುವ ರೀತಿಗೆ ವರ್ಜಿಲ್‌ ಇಂದಿಗೂ ಅತ್ಯತ್ತಮ ಉದಾಹರಣೆಯಾಗಿ ಉಳಿದಿದ್ದಾನೆ.

ಆ ರೀತಿ ಕಾವ್ಯ ರಚಿಸುವುದರ ಮೂಲಕ ಯುರೋಪಿಯನ್ನರಿಗೆ ಬಹಳ ಬೇಕಾದ ಸಿದ್ಧಾಂತ, ಮೀಮಾಂಸೆ, ಜೀವನದರ್ಶನ ಮತ್ತು ವಿಮರ್ಶಾ ವಿಧಾನವನ್ನು ನೀಡಿ ಹೋದವನು ವರ್ಜಿಲ್‌. ‘ಇಲಿಯಡ್‌’ ಅಥವಾ ‘ಒಡಿಸ್ಸಿ’ಗಳನ್ನು ಮತ್ತೆ ಲ್ಯಾಟಿನ್‌ನಲ್ಲಿ ಬರೆಯುವ ಅಗತ್ಯ ಆ ಕಾರಣವೇ ಆತನಿಗೆ ಕಾಣಲಿಲ್ಲ. ಮಹಾನ್‌ ಪ್ರತಿಭಾವಂತ ಕವಿಯೊಬ್ಬ ಕಾಲದ ಒಂದು ಹಂತದಲ್ಲಿ ಸೃಷ್ಟಿಸಿದ ಕೃತಿಗಳನ್ನು ಮತ್ತೊಬ್ಬ ಕವಿ ತನ್ನದಾಗಿಸಿಕೊಳ್ಳಲು ಬರುವುದಿಲ್ಲ ಎಂಬುದಾಗಿ ವರ್ಜಿಲ್‌ ತೆಗೆದುಕೊಂಡ ತೀರ್ಮಾನ ಸರಿಯಾದುದಾಗಿತ್ತು ಎಂಬುದನ್ನು ಅದೇ ಕಾಲ ಮತ್ತೆ ಮತ್ತೆ ರುಜುವಾತುಪಡಿಸುತ್ತಿದೆ ಎಂಬುದನ್ನು ಪದೆ ಪದೆ ಹೇಳಬೇಕಾದ ಅಗತ್ಯವಿಲ್ಲ.

ಹಿಮಾಲಯವನ್ನು ಪ್ರತಿಸೃಷ್ಟಿ ಮಾಡಲಾಗುವುದಿಲ್ಲ, ಮಾಡಲು ಪ್ರಯತ್ನಿಸಿದಲ್ಲಿ ಹಿಮಾಲಯ ಹಿಮಾಲಯವಾಗುತ್ತದೆ ವಿನಾ ಬೇರೆ ಆಗುವುದಿಲ್ಲ; ಎಂಬ ಅರ್ಥ ನೀಡುವ ಪದ್ಯ ಬರೆದ ಕವಿ ಕಾಳಿದಾಸ: ಆದರೆ ಅದನ್ನೊಂದು ಒಳನೋಟ ಮತ್ತು ಜೀವನಧರ್ಮವನ್ನಾಗಿ ಅನುಸರಿಸಿಕೊಂಡು ಬಂದವರು ಯುರೋಪಿಯನ್ನರು. ಅವರು ‘ಇಲಿಯಡ್‌’, ‘ಒಡಿಸ್ಸಿ’ ಅಥವಾ ಮತ್ತಾವುದೇ ಗ್ರೀಕ್‌ ಕೃತಿಗಳನ್ನು ತಮ್ಮ ಭಾಷೆಗೆ ಸಮರ್ಪಕವಾಗಿ ಅನುವಾದಿಸಲು ಪ್ರಯತ್ನಪಟ್ಟರು. ಅದು ವಿನಾ ಹೊಸದಾಗಿ ಬರೆಯಲು ಹೋಗಲಿಲ್ಲ.[6] ಅಯ್‌ಸ್ಖು ಲೋಸ್‌, ಸೊಫೊಕ್ಲೆಸ್‌, ಯುರಿಪಿದೇಸ್‌ ಮೊದಲಾದ ನಾಟಕಕಾರು ಹೋಮರನಲ್ಲಿ ಬರುವ ಕೆಲ ಸನ್ನಿವೇಶ ಅಥವಾ ಪಾತ್ರಗಳನ್ನು ಆಧರಿಸಿ ನಾಟಕ ಬರೆಯುತ್ತಾರಾದರೂ, ಆ ವಸ್ತು ಅವರ ಕೈಯಲ್ಲಿ ಪಡೆದುಕೊಳ್ಳುವ ರೂಪ ಮತ್ತು ತಿರುವೇ ಬೇರೆಯಾಗಿರುತ್ತದೆ. ಆ ಮೂವರು ಮೂಲತಃ ನಾಟಕಕಾರರು, ಅವರ ಮಾಧ್ಯಮ ಮತ್ತು ನಿರ್ವಹಣಾ ವಿಧಾನವೇ ಬೇರೆ. ವರ್ಜಿಲ್‌ ಸೂಕ್ತ ಪಾತ್ರವೊಂದನ್ನು ಆಯ್ದುಕೊಳ್ಳಲು ಅದೇ ತರಹ ಹೋಮರನಿಗೆ ಹೋಗುತ್ತಾನೆ. ಆದರೆ ಅವರಾರೂ ಹೋಮರನ ಕೃತಿಗಳನ್ನು ಅಲ್ಪ ಸ್ವಲ್ಪ ಬದಲಾವಣೆಗಳೊಡನೆ ಮತ್ತೆ ಮತ್ತೆ ಬರೆಯುವ ಸಾಹಸಕ್ಕೆ ಕೈಹಾಕುವುದಿಲ್ಲ.

ಮಹಾಭಾರತ ಮತ್ತು ರಾಮಾಯಣದ ಕತೆಯನ್ನು ತಮ್ಮ ಭಾಷೆಯಲ್ಲಿ ಮತ್ತೆ ನಿರೂಪಿಸುವುದರ ಮೂಲಕ ಸಂಸ್ಕೃತಿ ಪ್ರಸಾರ ಮಾಡುವುದು ಪಂಪ, ನಾರಣಪ್ಪ ಮೊದಲಾದವರ ಉದ್ದೇಶ ಎಂದು ಕೆಲವರು ವಾದಿಸಬಹುದು. ಅವರ ಉದ್ದೇಶ ಅದೇ ಆಗಿರುವುದಾದಲ್ಲಿ ಅವರನ್ನು ಸ್ವತಂತ್ರ ಕವಿಗಳು ಎಂದು ಕರೆಯುವುದು ಎಷ್ಟು ಸರಿ? ಕತೆ, ಕತೆಯ ಹಂದರ ಮತ್ತು ಚೌಕಟ್ಟು, ವಸ್ತು, ಧೋರಣೆ ಮತ್ತು ಬದುಕನ್ನು ಅರ್ಥೈಸುವ ರೀತಿ ಮೂಲಭೂತವಾಗಿ ವ್ಯಾಸ ವಾಲ್ಮೀಕಿಯರದು: ನಿರ್ವಹಣಾ ವಿಧಾನ ಮತ್ತು ಭಾಷಾಬಳಕೆಯಲ್ಲಿನ ಹೊಸತನ ಬಿಟ್ಟರೆ, ಹೆಚ್ಚಿನ ದೇನನ್ನೂ ಸೇರಿಸಲು ಪಂಪ ನಾರಣಪ್ಪ ಮೊದಲಾದವರಿಗೂ ಸಾಧ್ಯವಾಗಿರುವುದಿಲ್ಲ: ಅವರ ಪ್ರಯತ್ನಗಳು ಮುಕ್ತ ಅನುವಾದ ಎಂದಾಗುತ್ತದೆ. ಭಾರತದಲ್ಲಿ ಅನುವಾದ ಕಲೆ ಕ್ರಮಬದ್ಧವಾಗಿ ಬೆಳೆದು ಬಾರದಿರಲು ಆ ತರಹದ ಧೋರಣೆ ಕೂಡ ಕಾರಣವಾಗಿರಬಹುದೆ?

ಎ.ಆರ್‌. ಕೃಷ್ಣಶಾಸ್ತ್ರೀಗಳು ತಮ್ಮ ‘ವಚನ ಭಾರತ’ಕ್ಕೆ ಬರೆದ ಪೀಠಿಕೆಯಲ್ಲಿ ಬಳಸುವ ಒಂದು ಪದವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಕುಮಾರವ್ಯಾಸನಂಥವರು ಅದನ್ನು ಕನ್ನಡಿಸಿದರು, ಎಂಬ ಮಾತನ್ನು ಪೀಠಿಕೆಯ ಆರಂಭದಲ್ಲಿಯೇ – ಪುಟ ೧೭ – ಬಳಸುವ ಕೃಷ್ಣಶಾಸ್ತ್ರೀಗಳು ಮುಂದುವರಿಯುತ್ತಾ: “ನಾರಾಣಪ್ಪನ ಭಾರತ ಕನ್ನಡ ಸಾಹಿತ್ಯದ ಗೋಪುರಕ್ಕೆ ಇಟ್ಟಿರುವ ಬಂಗಾರದ ಕಳಶಗಳಲ್ಲಿ ಒಂದು” ಎಂಬ ಮಾತನ್ನು ಸೇರಿಸುತ್ತಾರೆ. “ಮಹಾಭಾರತವನ್ನು ಕನ್ನಡಿಸಿದ ನಾರಾಣಪ್ಪ” ಎಂದು ಹೇಳುವ ಕೃಷ್ಣಶಾಸ್ತ್ರೀಗಳೇ ಅದನ್ನು “ಕನ್ನಡದ ಬಂಗಾರದ ಕಳಶಗಳಲ್ಲಿ ಒಂದು” ಎಂದು ಪರಿಗಣಿಸುವುದು ಪರಸ್ಪರ ವಿರೋಧಾಭಾಸದಿಂದ ಕೂಡಿದ ಮಾತಾಗುವುದಿಲ್ಲವೆ? ಆ ದ್ವಂದ್ವ ಸ್ವತಃ ಕೃಷ್ಣಶಾಸ್ತ್ರೀಗಳ ಮನಸ್ಸನ್ನು ತಟ್ಟಲಿಲ್ಲವಾದಂತೆ, ಸಮಸ್ತ ಕನ್ನಡಿಗರನ್ನು ಅಷ್ಟಾಗಿ ಬಾಧಿಸಿದ ಉದಾಹರಣೆ ಇಲ್ಲ. ಕುಮಾರವ್ಯಾಸ ಭಾರತವನ್ನು ಕನ್ನಡದ ‘ಬಂಗಾರದ ಕಳಶ’ ಎಂದು ಪರಿಗಣಿಸುವುದಾದಲ್ಲಿ, ಅದೇ ರೀತಿ ಕನ್ನಡಿಸುವ ಕೆಲಸವನ್ನು ನಿರ್ವಹಿಸಿರುವ ಶಾಸ್ತ್ರೀಗಳ ‘ವಚನ ಭಾರತ’ವನ್ನು ಕನ್ನಡದ ಮತ್ತೊಂದು “ಬಂಗಾರದ ಕಳಶ” ಎಂದು ಏಕೆ ಪರಿಗಣಿಸಬಾರದು? ಮಹಾಭಾರತದ ೧೮ ಪರ್ವಗಳನ್ನು ಕನ್ನಡಿಸಿರುವುದರಿಂದ ಶಾಸ್ತ್ರಿಗಳ ಸ್ಥಾನಮಾನ ಇನ್ನೂ ಹೆಚ್ಚಾಗಬೇಕಾಗುತ್ತದೆಯೋ ಏನೋ! ಪಂಪ, ಕುಮಾರವ್ಯಾಸ ಮತ್ತು ಕೃಷ್ಣಶಾಸ್ತ್ರೀಗಳ ನಡುವೆ ಅಂತರ ಇರುವುದಾದರೂ ಎಲ್ಲಿ? ಬಾಣಭಟ್ಟನ ಸಂಸ್ಕೃತದ ‘ಕಾದಂಬರಿ’ಯನ್ನು ಕನ್ನಡಕ್ಕೆ ಪರಿವರ್ತಿಸಿದ ನಾಗವರ್ಮನಿಗೆ, ಪಂಪ – ನಾರಣಪ್ಪರಿಗೆ ದಕ್ಕಿದ ಗೌರವ ಮತ್ತು ಸ್ಥಾನಮಾನ ದಕ್ಕಲಿಲ್ಲ, ಏಕೆ?

ಆ ಪ್ರಶ್ನೆಗೆ ಅದೇ ಕೃಷ್ಣಶಾಸ್ತ್ರೀಗಳು ಅದೇ ಪೀಠಿಕೆಯಲ್ಲಿ ಈ ರೀತಿ ಉತ್ತರ ನೀಡುತ್ತಾರೆ: “ಸರಸ್ವತೀ ವರಪ್ರಸಾದವೂ ಉಳ್ಳ ‘ಕುಮಾರವ್ಯಾಸ’ನಂಥವರು” ಅದನ್ನು ಕನ್ನಡಿಸಿದ್ದು ವಿಶೇಷ ಗೌರವಕ್ಕೆ ಕಾರಣವಾಯಿತು. ಆ ಮಾತು ಪಂಪನಿಗೂ ಯಥಾವತ್ತಾಗಿ ಅನ್ವಯವಾಗುತ್ತದೆ. ಆ “ಸರಸ್ವತೀ ವರಪ್ರಸಾದ” ನಾಗವರ್ಮನಿಗೆ ಸ್ವಲ್ಪ ಕಡಿಮೆಯಿತ್ತು. ಜತೆಗೆ ನಾರಣಪ್ಪ ಮತ್ತು ಪಂಪ ಆರಿಸಿಕೊಂಡ ವಸ್ತು, ಜನರು ‘ಪಂಚಮವೇದ’ ಎಂದು ಪೂಜಿಸುವ ಮಹಾಭಾರತದ್ದಾಗಿತ್ತು ಎಂಬುದನ್ನು ಮರೆಯಬಾರದು. ಆ ಗೌರವ ಬಾಣಭಟ್ಟನ ‘ಕಾದಂಬರಿ’ಗೆ ಅಂದೂ ದೊರಕಿರಲಿಲ್ಲ ಮತ್ತು ಇಂದೂ ದೊರಕುವುದು ಸಾಧ್ಯವಿಲ್ಲ. ಪ್ರತಿಭೆ ಮತ್ತು ಸರಸ್ವತೀ ವರ ಪ್ರಸಾದದ ಜತೆಗೆ ಅವರು ಆರಿಸಿಕೊಂಡ ವಸ್ತುವೂ ಕನ್ನಡ ಸಾಹಿತ್ಯಲೋಕದಲ್ಲಿ ಅವರಿಗೆ ಅತ್ಯಂತ ಎತ್ತರದ ಸ್ಥಾನಮಾನ ತಂದುಕೊಡಲು ಕಾರಣವಾಯಿತು ಎಂಬ ಅಂಶ ಕೃಷ್ಣಶಾಸ್ತ್ರೀಗಳ ಮಾತಿನಿಂದ ವ್ಯಕ್ತವಾಗುತ್ತದೆ.

ಆದರೆ ವ್ಯಾಸರ ತರಹವೇ ಪಂಪ – ಕುಮಾರವ್ಯಾಸರು ತಮ್ಮ ಕಾಲದ ಮತ್ತು ತಮ್ಮದೇ ಆದ ಮಹಾಭಾರತ ಕಂಡುಕೊಳ್ಳಲು ಪ್ರಯತ್ನಿಸಿದ್ದಲ್ಲಿ ಏನಾಗುತ್ತಿತ್ತು? ಕಾವ್ಯ ಪರಂಪರೆಯ ನಿರ್ಮಾಣದ ಹಾದಿಯಲ್ಲಿ ಯುರೋಪಿನ ಮತ್ತು ಭಾರತದ ಕವಿಗಳು ಹಿಡಿದ ಭಿನ್ನ ಮಾರ್ಗ ಇದೀಗ ಹೆಚ್ಚು ಸ್ಪಷ್ಟವಾಗುತ್ತದೆ; ಪಂಪ – ನಾರಣಪ್ಪ ಮೊದಲಾದವರ ಸೃಜನಶೀಲ ಚಟುವಟಿಕೆಗಳು ಅನುವಾದ ಮತ್ತು ಸೃಷ್ಟಿಕ್ರಿಯೆಯ ಸ್ವಂತಿಕೆಯ ನಡುವಣ ವ್ಯತ್ಯಾಸವನ್ನೇ ಅಲ್ಲಗಳೆದರೆ, ಅನುವಾದ ಮತ್ತು ಸೃಷ್ಟಿಕ್ರಿಯೆ ನಡುವಿನ ಅಂತರವನ್ನು ಬಹಳ ಹಿಂದೆಯೇ ಸ್ಪಷ್ಟವಾಗಿ ಕಂಡುಕೊಂಡ ಯುರೋಪಿನ ಕವಿಗಳು, ಅದೇ ಹಾದಿಯಲ್ಲಿ ಸಾಗಿಬಂದರು.

ಮಹಾನ್‌ ಮಹಾಕವಿಯೊಬ್ಬ ಸೃಷ್ಟಿಸಿದ ಎಪಿಕ್‌ ಕೃತಿಯನ್ನು ಎಷ್ಟೋ ಶತಮಾನಗಳ ನಂತರ ಬಂದ ಪ್ರತಿಭಾವಂತ ಕವಿಯೊಬ್ಬ – ಆತನ ಪ್ರತಿಭೆ ಎಷ್ಟೇ ಮಹತ್ವಪೂರ್ಣವಾದುದಾಗಿರಲಿ – ತನ್ನ ಮತ್ತು ತನ್ನ ಕಾಲದ ಕೃತಿಯಾಗಿ ಪುನರ್‌ಸೃಷ್ಟಿ ಮಾಡಲು ಸಾಧ್ಯವೆ? ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ಯುರೋಪಿನ ಕವಿಗಳು, ಭಿನ್ನ ಮತ್ತು ಸ್ವತಂತ್ರ ಜಾಡಿನಲ್ಲಿ ಸಾಗಿದರು. ಮರುಸೃಷ್ಟಿ ಮಾಡಲು ಸಾಧ್ಯ ಎಂದು ಭಾವಿಸಿದ ಪಂಪ, ನಾರಣಪ್ಪ ಮೊದಲಾದ ಭಾರತದ ಅನೇಕ ಕವಿಗಳು ಮಹಾಭಾರತ, ರಾಮಾಯಣ ಕಾವ್ಯಗಳ ವಸ್ತು ಆಧರಿಸಿ ಕಾವ್ಯ ಬರೆಯುತ್ತಲೇ ಹೋದರು. ವ್ಯಾಸ – ವಾಲ್ಮೀಕಿಯರ ಕೃತಿಗಳು ಬೆಳೆಯುತ್ತಲೆ ಹೋಗಲು ಆ ತರಹದ ಮನೋಧರ್ಮವೇ ಕಾರಣ ಎಂದು ಪ್ರತ್ಯೇಕ ಹೇಳಬೇಕಾದ ಅಗತ್ಯವಿಲ್ಲ. ಪಂಪ – ನಾರಣಪ್ಪ ಮೊದಲಾದ ಕವಿಗಳು ಅನುಸರಿಸಿದ ಮಾರ್ಗ ಸರಿಯಾಗಿದೆ ಎಂದು ವಾದಿಸುವುದಾದಲ್ಲಿ ಮತ್ತು ಆ ಮಾರ್ಗ ಸರಿಯಾದುದಾಗಿರುವುದಾದಲ್ಲಿ, ೧೯ನೇ ಶತಮಾನದ ನಂತರ ಭಾರತೀಯ ಮನಸ್ಸು, ಯುರೋಪ್‌ ಮೂಲದ ಪ್ರಭಾವಕ್ಕೆ ಸಾರಾಸಗಟಾಗಿ ಈ ಪ್ರಮಾಣದಲ್ಲಿ ತನ್ನನ್ನು ತಾನು ತೆತ್ತುಕೊಂಡು ಅದಕ್ಕೆ ತುತ್ತಾಗಬೇಕಾದ ಅಗತ್ಯ ಎದುರಾಗುತ್ತಿರಲಿಲ್ಲ ಅಲ್ಲವೆ?

ವ್ಯಾಸಭಾರತವನ್ನು ಪಂಪ – ನಾರಣಪ್ಪ ಮೊದಲಾದವರು ತಮ್ಮ ಕಾಲದ ಹಿನ್ನೆಲೆಯಲ್ಲಿ ಅರ್ಥೈಸಲು ಪ್ರಯತ್ನಿಸಿದ್ದಾರೆ ಎಂಬ ಪ್ರಶ್ನೆ ನಿಮ್ಮ ತೊಡಕಿನದು ಎಂಬುದನ್ನು ಸರಿಯಾಗಿ ಗ್ರಹಿಸಿದಂತೆ ಕಾಣುವುದಿಲ್ಲ. ಮಹಾಭಾರತದ ವಸ್ತು ಕಾಳಿದಾಸನ ಶಾಕುನ್ತಲೋಪಾಖ್ಯಾನದ ಕತೆಯಂತೆ ಕೇವಲ ಕತೆ ಅಥವಾ ಪುರಾಣವಾಗಿ ಉಳಿದಿಲ್ಲ. ಆ ವಸ್ತುವಿಗಿರುವ ಎಲ್ಲ ಸಾಧ್ಯತೆ ಮತ್ತು ಆಯಾಮಗಳನ್ನು ಕವಿ ವ್ಯಾಸರು ಮಹಾಭಾರತದ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಪರಿಶೋಧಿಸಿ ಅನ್ವೇಷಿಸಿ ಅದಕ್ಕೊಂದು ಪರಿಪೂರ್ಣತೆಗೆ ಹತ್ತಿರವಾದ ರೂಪ ನೀಡಿಯಾಗಿತ್ತು. ಪರಿಪೂರ್ಣತೆಗೆ ಹತ್ತಿರ ಬರುವ ರೂಪ ಎಂಬ ಮಾತು ಬಹಳ ಮುಖ್ಯ. ಆದರೆ ಶಾಕುನ್ತಲೆಯ ಕತೆ ಆಧರಿಸಿ ಆ ಪ್ರಮಾಣದ ಅತ್ಯುತ್ತಮ ಕಾವ್ಯ ಅಥವಾ ನಾಟಕ ಬರೆದು ಅದನ್ನೊಂದು ಸಂಪೂರ್ಣ ಕಲಾಕೃತಿಯನ್ನಾಗಿಸುವ ಪ್ರಯತ್ನವನ್ನು ಕಾಳಿದಾಸಲನಿಗೂ ಮೊದಲು ಬಂದ ಯಾವ ಕವಿಗಳೂ ಮಾಡಿರಲಿಲ್ಲ. ಶಾಕುನ್ತಲೆಯ ಕತೆ ಮಹಾಭಾರತದಲ್ಲಿನ ಕತೆಯೊಳಗಿನ ಒಂದು ಸಣ್ಣ ಉಪಕತೆ ಅಥವಾ ಆಖ್ಯಾನ ಮಾತ್ರ. ಮಹಾಭಾರತದ ಬಗ್ಗೆ ಆ ಮಾತನ್ನು ಹೇಳಲು ಸಾಧ್ಯವಿಲ್ಲ. ಮಹಾಭಾರತ ಒಂದು ಕಾಲಮಾನದ ಕೊಡುಗೆಯಾದಂತೆ, ಅಲ್ಲಿನ ಪಾತ್ರ, ಸನ್ನಿವೇಶ, ಮಾತು, ಕ್ರಿಯೆ, ಭಾಷೆ, ವಾತಾವರಣ ಮತ್ತು ಪರಿಸರ ಪ್ರತಿಯೊಂದೊಂದು ಒಂದು ಖಚಿತ ಕಾಲಮಾನದ ಕೊಡುಗೆ. ಆ ಎಲ್ಲ ಮಿತಿಗಳನ್ನು ಮೀರಿ ಎಲ್ಲ ಕಾಲಕ್ಕೂ ಸಲ್ಲುವ ಕೃತಿಯಾಗಿದೆ ಎಂಬ ಏಕೈಕ ಕಾರಣಕ್ಕೆ ವ್ಯಾಸರ ಭಾರತ, ಪಂಪ – ನಾರಣಪ್ಪರ ಮತ್ತು ಅವರ ಕೃತಿಯಾಗಲು ಸಾಧ್ಯವೇ? ಆ ಕೃತಿಯನ್ನು ಬರೆಯುವಾಗ ಪಂಪ – ನಾರಣಪ್ಪ ಬದ್ಧರಾಗಬೇಕಾದುದು ಮೂಲ ಮಹಾಭಾರತದ ಕಾಲಕ್ಕೊ ಅಥವಾ ತಮ್ಮ ಕಾಲಕ್ಕೊ? ವ್ಯಾಸರ ಕಾಲಕ್ಕೆ ತಮ್ಮ ಕಾಲವನ್ನು ಅಥವಾ ತಮ್ಮ ಕಾಲಕ್ಕೊ? ವ್ಯಾಸರ ಕಾಲಕ್ಕೆ ಕಾಲವನ್ನು ಅಥವಾ ತಮ್ಮ ಕಾಲದ ಬದುಕಿಗೆ ವ್ಯಾಸರ ಕಾಲದ ಬದುಕನ್ನು ಸೇರಿಸಲು ಹೋದಲ್ಲಿ ಮತ್ತೊಂದಕ್ಕೆ ಅಪಚಾರ ಎಸಗಿದಂತಾಗುವುದಿಲ್ಲವೆ? ಮಿಶ್ರಣ ಅಥವಾ ಕಲಬೆರಕೆಯಾಗುವುದಿಲ್ಲವೆ?

ಆ ತಾತ್ವಿಕ ಮತ್ತು ನೈತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕಡೆಗೆ ಪಂಪ – ನಾರಣಪ್ಪ ಮೊದಲಾದವರು ನೀಡಬೇಕಾದ ಗಮನ ನೀಡಿದರೆ? ಕಾರಣದಿಂದಾಗಿಯೇ ಯುರೋಪಿನ ಕವಿಗಳಿಗೆ ಸೂಕ್ತವಾದ ಮೀಮಾಂಸೆ, ವಿಮರ್ಶೆ ಮತ್ತು ಕಾವ್ಯ ಪರಂಪರೆ – ಸಂಸ್ಕೃತಿ ಮತ್ತು ನಾಗರಿಕತೆಯನ್ನು ಕ್ರಮಬದ್ಧವಾಗಿ ಬೆಳೆಸಲು ಸಾಧ್ಯವಾಯಿತು ಎಂದು ಹೇಳಬೇಕಾದ ಅಗತ್ಯ ಮತ್ತೆ ಬರಬಾರದು.[7]

 

[1]‘ಗಿಲ್ಮಮೆಷ್‌’ ರಚಿಸಿದ ಷಿನ್‌-ಎಖಿ-ಉನ್ನಿನ್ನಿಯಿಂದ ಪಡೆಯಬಹುದಾದ ಪ್ರೇರಣೆ ಪಡೆದಿದ್ದಾನೆ ಎಂದಿಟ್ಟುಕೊಂಡರೂ ಸಹ.

[2]Theodor Haecker, A. W. Wheen (tr), Virgil: Father of the West, London and New York, ೧೯೩೪, ಪುಟ ೭೭-೭೮

[3]S. J. Harrison (ed), Oxford Reading in Vergil’s Aeneid, ೧೯೯೦, ಪುಟ ೩-೪

[4]Theodore Ziokowski, virgil the moderns, Princeton, ೧೯೯೩, ಪುಟ ೫೬

[5]ಈನಿಯಾಸ್‌ನ ತಾಯಿ ವೀನಸ್‌ ದೇವತೆ ಕೊಟ್ಟ ವಿಶೇಷ ಕತ್ತಿಯನ್ನು ನೋಡಿದಾಗ ೮ನೇ ಸರ್ಗದಲ್ಲಿ ಮತ್ತೆ ರೋಮನ್‌ ಸಾಮ್ರಾಜ್ಯದ ಭವ್ಯ ಭವಿತವ್ಯ ಆತನ ಕಣ್ಮುಂದೆ ತೆರೆದುಕೊಳ್ಳುತ್ತದೆ.

[6]ವರ್ಜಿಲ್ ಬರುವುದಕ್ಕೆ ಲಿವಿಯಸ್‌ ಆಂಡ್ರೋನಿಕಸ್‌ ಮೊದಲಾದವರು ಹೋಮರನ ಕೃತಿಗಳನ್ನು ಅನುವಾದಿಸಲು ಪ್ರಯತ್ನಿಸುವುದರ ಮೂಲಕ ಲ್ಯಾಟಿನ ಭಾಷೆಯನ್ನು ಕಾವ್ಯ ಭಾಷೆಯಾಗಿ ಪರಿವರ್ತಿಸುವ ಸಿದ್ಧತೆ ಮಾಡಿದ್ದರು.

[7]ಮಹಾಭಾರತ-ರಾಮಾಯಣಗಳಲ್ಲಿ ವ್ಯಕ್ತವಾಗುವ ‘ಸತ್ಯ ಶಾಶ್ವತ’ವಾದುದಾಗಿದ್ದು ತಮ್ಮ ಬದುಕಿನ ಸಂದರ್ಭದಲ್ಲಿ ಅದೇ ‘ಸತ್ಯ’ಗಳನ್ನು ಮತ್ತೆ ಕಂಡುಕೊಳ್ಳುವ ಉದ್ದೇಶದಿಂದ ನಂತರ ಬಂದ ಕವಿಗಳು ಅವುಗಳಿಗೆ ಮರಳಿ ಹೋಗುತ್ತಾರೆ ಎಂಬ ವಾದವಿದೆ. ಹೋಮರನಲ್ಲಿ ವ್ಯಕ್ತವಾಗುವ ಬದುಕಿನ ಅದೇ ‘ಶಾಶ್ವತ ಸತ್ಯ’ವನ್ನು ಕಂಡುಕೊಳ್ಳುವ ಕೆಲಸವನ್ನು ವರ್ಜಿಲ್‌, ದಾಂತೆ, ಮಿಲ್ಟನ್‌ ಮೊದಲಾದವರು ಮಾಡುತ್ತಾರೆ ಎಂಬ ಸತ್ಯವನ್ನು ವಾದ ಮಂಡಿಸುವವರು ಖಂಡಿತ ಮರೆಯಬಾರದು.