ಕನ್ನಡದ ಮಹತ್ವದ ಕವಿಗಳು ಲೇಖಕರು ಆದ ಪಂಪ, ನಾರಣಪ್ಪ, ಕಾರಂತ, ಮಾಸ್ತಿ ಮತ್ತು ಕುವೆಂಪು ಮೊದಲಾದ ಯಾರಿಗೂ ದಕ್ಕದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪರಿಚಯವನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ಪಡೆಯುವಲ್ಲಿ ಅನಂತರದ ತಲೆಮಾರಿನ ಯು. ಆರ್‌. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌ ಮೊದಲಾದವರು ಯಶಸ್ವಿಯಾಗಿದ್ದಾರೆ. ಕುವೆಂಪು, ಬೇಂದ್ರೆ ಅಥವಾ ಕಾರಂತರಿಗಿಂತ ಮಾಸ್ತಿ ಕರ್ನಾಟಕದ ಹೊರಗಡೆ ಹೆಚ್ಚು ಪರಿಚಿತರಾಗಿದ್ದರು ಅಥವಾ ಮಾಸ್ತಿಯವರಿಗಿಂತ ಕಾರಂತರು ಹೆಚ್ಚು ಪರಿಚಿತರು ಎಂದು ಹೇಳಬಹುದೊ ಏನೊ. ಮಾಸ್ತಿ ಮತ್ತು ಕಾರಂತರು ಅನುವಾದದಲ್ಲಿ ಉಳಿದುಕೊಳ್ಳುವುದು ಅವರಿಗೆ ದಕ್ಕಿದ ಅಖಿಲ ಭಾರತ ಮಟ್ಟದ ಖ್ಯಾತಿಗೆ ಕಾರಣ ಎಂಬ ವಾದ ಇರಬಹುದಾದರೂ, ರಾಷ್ಟ್ರಮಟ್ಟದ ಸಂಪರ್ಕ ಆ ತರಹದ ಬೆಳವಣಿಗೆಗೆ ಕಾರಣವಾಗಿತ್ತು ಎಂಬುದನ್ನು ಸಹ ಮರೆಯಬರುವುದಿಲ್ಲ. ಆದರೆ ಅವರಾರಿಗೂ ಅನಂತಮೂರ್ತಿ, ಕಾರ್ನಾಡ್‌, ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರುಗಳಿಗೆ ದಕ್ಕಿದ ಪ್ರಮಾಣದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪರಿಚಯ ದೊರಕಿರಲಿಲ್ಲ. ‘ಮಲೆಗಳಲ್ಲಿ ಮದುಮಗಳು’ ಇಂಗ್ಲಿಷ್‌ ಮೊದಲಾದ ಭಾಷೆಗಳಿಗೆ ಇನ್ನೂ ಅನುವಾದ ಆಗಬೇಕಿದೆ.[1]

ನವೋದಯ ಕಾಲದ ಅತ್ಯಂತ ಮಹತ್ವದ ಲೇಖಕರಿಗೂ ದಕ್ಕದ ಆ ಪರಿಚಯ ನವ್ಯಕಾಲದ ಕೆಲ ಲೇಖಕರಿಗೆ ದಕ್ಕಿರುವುದು ಕನ್ನಡದ ಸಂದರ್ಭದಲ್ಲಿ ಹೊಸ ಬೆಳವಣಿಗೆ: ಕಾರಣವಾದ ಅಂಶಗಳನ್ನು ಗುರುತಿಸಲು ಸಾಧ್ಯವಾದಲ್ಲಿ ಕೆಲ ಸಂಗತಿಗಳು ಸ್ಪಷ್ಟಗೊಳ್ಳುವ ಕಾರಣ ಆ ಪ್ರಯತ್ನವನ್ನು ಇಲ್ಲಿ ಬಹಳ ಸಪೂರ ಮಾಡಲಾಗಿದೆ.

ಯುರೋಪಿನ ಸಾಹಿತ್ಯ ಸಂಪರ್ಕದಿಂದ ನವೋದಯ ಕಾಲದ ಕನ್ನಡ ಬರವಣಿಗೆಯು ಹಿಂದೆಂದೂ ಕಾಣದ ಪ್ರಫುಲ್ಲತೆ, ವೈವಿಧ್ಯ ಮತ್ತು ವಿಭವ ಪಡೆದುಕೊಂಡಿತಾದರೂ, ಆ ಪ್ರಭಾವ ಮತ್ತು ವೈಭವಕ್ಕೊಂದು ಮಿತಿ ಇತ್ತು; ಕತೆ, ಕಾದಂಬರಿ, ಭಾವಗೀತೆ, ಸುನೀತ, ಪ್ರಬಂಧ, ವಿಮರ್ಶೆ ಇತ್ಯಾದಿ ಹೊಸ ರೂಪಗಳನ್ನು ಯುರೋಪಿನಿಂದ ಆಮದು ಮಾಡಿಕೊಂಡು ಬರವಣಿಗೆ ಮಾಡಿದ ಅವರು, ಅಲ್ಲಲ್ಲಿ ಕೆಲ ವಾಕ್ಯಗಳಿಗೆ, ಸನ್ನಿವೇಶಗಳಿಗೆ ಅಥವಾ ಪಾತ್ರಚಿತ್ರಣಕ್ಕೆ ಮನಸೋತಿರಬಹುದು; ಅದರಾಚೆಯ ಪ್ರಭಾವಕ್ಕೆ ಸೋಲುವ ಅಗತ್ಯ ಅವರಿಗೆ ಕಂಡಿರಲಿಲ್ಲ. ನವ್ಯದ ಆಗಮನದನಂತರ ಪರಿಸ್ಥಿತಿ ಭಿನ್ನವಾಯಿತು. ಪಶ್ಚಿಮ ಜಗತ್ತಿನ ಲೇಖಕರು ಅನುಸರಿಸುವ ತಂತ್ರಗಾರಿಕೆ, ನಿರ್ವಹಣಾ ವಿಧಾನ ಮತ್ತು ವಸ್ತುವಿನ ಆಯ್ಕೆಯಲ್ಲಿ ಅವರು ತೋರುವ ಎಚ್ಚರವನ್ನು ಹತ್ತಿರದಿಂದ ಅಧ್ಯಯನ ಮಾಡಿದಂತೆ ಕಾಣುವ ನವ್ಯರು, ಆ ವಿಧಾನಗಳನ್ನು ಅನುಸರಿಸುವ ಪ್ರಯತ್ನಗಳಿಗೆ ಮೊದಲು ಮಾಡಿದರು. ಬದುಕನ್ನು ವಿಶ್ಲೇಷಿಸುವ, ನೋಡುವ ದೃಷ್ಟಿಕೋನವೂ ನವ್ಯರ ಕಾಲದ ದೊಡ್ಡ ಬದಲಾವಣೆ ಒಳಗಾಯಿತು. ಪಶ್ಚಿಮ ಜಗತ್ತಿನಿಂದ ಪಡೆಯುವ ಪ್ರಭಾವ ಪಡೆದರೂ ಮಾಸ್ತಿ, ಕುವೆಂಪು ಅಥವಾ ಕಾರಂತರ ವಸ್ತುವಿನ ಆಯ್ಕೆ, ನಿರ್ವಹಣೆ, ಅನುಭವ ಮಂಡನೆ ಹಾಗೂ ನೀಡುವ ದೃಷ್ಟಿ ಭಾರತೀಯವಾಗಿಯೇ ಉಳಿಯುತ್ತದೆ. ಭಾರತೀಯ ಸಂಸ್ಕೃತಿಯ ಲೋಪದೋಷಗಳನ್ನು ಟೀಕಿಸುವಾಗ ಸಹ ಆ ಮಿತಿಯನ್ನು ಉಲ್ಲಂಘಿಸ ಹೋಗುವುದಿಲ್ಲ. ಆ ತರಹದ ಧೋರಣೆ ಮಾರಣವೊ ಏನೋ ಹೋಮರ್‌, ವರ್ಜಿಲ್‌, ದಾಂತೆ, ಮಿಲ್ಟನ್‌ ಮೊದಲಾದವರ ಪ್ರಭಾವಕ್ಕೆ ಒಳಗಾಗಿಯೂ ಅವರ ತರಹದ ಎಪಿಕ್‌ ಮಾದರಿ ಕಾವ್ಯ ಬರೆಯಲು ಮುಂದಾದ ಕುವೆಂಪು ಅದೆಲ್ಲ ಮರೆತು ವಸ್ತುವಿನ ಆಯ್ಕೆ ಮಾಡುವಾಗ ಪಂಪನ ತರಹವೆ ವಾಲ್ಮೀಕಿಯ ರಾಮಾಯಣಕ್ಕೆ ಮರಳುತ್ತಾರೆ.

ಸಣ್ಣ ಕತೆ, ಕಾಂಬರಿ ಇತ್ಯಾದಿ ಕೆಲ ಹೊರ ರೂಪದ ಆಕಾರಗಳನ್ನು ಮಾತ್ರ ಆಮದು ಮಾಡಿಕೊಂಡರೆ ಸಾಕಾಗುವುದಿಲ್ಲ. ಅವರ ತರಹವೆ ಭಾರತೀಯ ಸಂದರ್ಭದ ಬದುಕನ್ನು ಅರ್ಥೈಸಲು ಪ್ರಯತ್ನಿಸಿದಾಗ ಮಾತ್ರ ಒಳನೋಟ ಬೀರುವ ಕೃತಿಗಳನ್ನು ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ಕಲಿತ ನವ್ಯರು, ಆ ವಿಧಾನದಲ್ಲಿ ಕನ್ನಡದಲ್ಲಿ ಬರವಣಿಗೆ ಮಾಡಲು ಪ್ರಯತ್ನಿಸಿದಂತೆ ತೋರುತ್ತದೆ. ಆ ಕಾರಣವೊ ಏನೊ ತಮಗೆ ಯಶಸ್ಸು ತಂದುಕೊಟ್ಟ ಅದೇ ತಂತ್ರವನ್ನು ಮತ್ತೆ ಮತ್ತೆ ಬಳಸಿಕೊಳ್ಳಲು ಆ ಮೂವರು ಪ್ರಯತ್ನಿಸುತ್ತಾರೆ. ಆ ಮೂವರು ಲೇಖಕರು ತಮ್ಮ ಕೃತಿಗಳಿಗೆ ನೀಡುವ ಹೆಸರು ನೋಡಿದರೆ ಸಾಕು. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್‌, ಸಂಸ್ಕಾರ, ಅವಸ್ಥೆ, ಭವ, ದಿವ್ಯ, ಯಯಾತಿ, ತುಘಲಕ್‌, ತಲೆದಂಡ ಇತ್ಯಾದಿ. ಯಶಸ್ಸು ತಂದುಕೊಟ್ಟ ಕೃತಿಯೊಂದರ ತಂತ್ರ ಮತ್ತು ನಿರ್ವಹಣಾ ವಿಧಾನವನ್ನು ಮತ್ತೆ ಮತ್ತೆ ಅನುಸರಿಸುವುದು ಬರವಣಿಗೆ ನಡಿಗೆಯನ್ನೇ ನಿಯಂತ್ರಣಗೊಳಿಸಿದರೆ, ಆ ಗುಂಗಿನಿಂದ ಬಿಡಿಸಕೊಳ್ಳಲು ಸಾಧ್ಯವಾಗದೆ ಹೋಗುವುದು ಮತ್ತೊಂದು ರೀತಿಯಲ್ಲಿ ಬರವಣಿಗೆಯ ಮಿತಿಯನ್ನು ಬಹಳವಾಗಿ ಸೀಮಿತಗೊಳಿಸುತ್ತದೆ. ಆ ಕಾರಣವೊ ಏನೊ, ‘ಸಂಸ್ಕಾರ’ಕ್ಕಿಂತ ಯಶಸ್ವಿ ಕೃತಿಯನ್ನು ಅನಂತಮೂರ್ತಿಯವರಿಗೆ ನೀಡಲು ಸಾಧ್ಯವಾಗಲಿಲ್ಲವಾದಂತೆ, ‘ಕರ್ವಾಲೋ’ಗಿಂತ ಹೆಚ್ಚು ಪ್ರಬುದ್ಧ ಕೃತಿಯನ್ನು ನೀಡಲು ತೇಜಸ್ವಿಗೆ ಈವರೆಗೂ ಸಾಧ್ಯವಾಗಿಲ್ಲ. ಯಾವುದೇ ದೃಷ್ಟಿಯಿಂದ ನೋಡಿದರೂ ‘ಯಯಾತಿ’ ಕಾರ್ನಾಡರ ಉತ್ತಮ ಕೃತಿ.

ಯಾವುದೇ ಕ್ಲಾಸಿಕ್‌ ಕೃತಿ ಅನೇಕ ರೀತಿಯಲ್ಲಿ ಓದಿಕೊಳ್ಳುತ್ತದೆ ಎಂಬ ಫ್ರಾಂಕ್‌ ಕರ್ಮೊಡನ ಆಧುನಿಕ ಸೂತ್ರಕ್ಕೆ ಹೇಳಿಮಾಡಿಸಿದ ರೀತಿಯಲ್ಲಿ ಆ ಮೂರು ಜನ ಕೃತಿಗಳನ್ನು ರಚಿಸಲು ಪ್ರಯತ್ನಿಸುತ್ತಾರೆ ಎಂದು ಕೆಲವರಿಗಾದರೂ ಅನ್ನಿಸಿದರೆ ಆಶ್ಚರ್ಯವೇನಿಲ್ಲ. ಅದರಲ್ಲೂ ‘ಕರ್ವಾಲೋ’ ಆ ತರಹ ಅನೇಕ ರೀತಿ ಓದಿಸಿಕೊಳ್ಳುವ ವಿಚಾರದಲ್ಲಿ ಯಶಸ್ಸು ಗಳಿಸಿದ ಕೃತಿ. ಆಧುನಿಕ ಶಿಕ್ಷಣ ಪಡೆದ ಕರ್ವಾಲೋ ಒಂದು ಮುಖವಾದರೆ, ಮಾನವ ಜನಾಂಗದ ಆದಿಸಂಸ್ಕೃತಿಯ ಸ್ವಾಭಾವಿಕ ಪ್ರತಿನಿಧಿಯಾದ ಮಂದಣ್ಣ ಅದರ ಮತ್ತೊಂದು ಮುಖ, ಕಾದಂಬರಿಯ ವಕೃ ಅಥವಾ ನಿರೂಪಕ ಮತ್ತು ಹಾರುವ ಓತಿ ಅದರ ಮತ್ತೊಂದು ಓದುವಿಕೆ. ಸಂಸ್ಕಾರ ಮತ್ತು ಶವಸಂಸ್ಕಾರ ಎಂಬ ಎರಡು ಹಂತದಲ್ಲಿ ಮುಂದುವರಿಯಲು ‘ಸಂಸ್ಕಾರ’ ಯತ್ನಿಸುತ್ತದೆ. ಆದರೆ ನಾರಣಪ್ಪನ ಶವಕ್ಕೆ ಚಂದ್ರಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ಆತನ ಶವಸಂಸ್ಕಾರದ ಪ್ರಶ್ನೆ ತನಗೆ ತಾನೆ ಇತ್ಯರ್ಥಗೊಳ್ಳುತ್ತದೆ, ಇಲ್ಲವೆ ಪ್ರಾಮುಖ್ಯ ಕಳೆದುಕೊಳ್ಳುತ್ತದೆ; ಉಳಿಯುವುದು ಸಂಸ್ಕಾರದ ಪ್ರಶ್ನೆ. ಸಂಸ್ಕಾರ ಎಂಬ ಮಾತಿಗಿರುವ ಅನೇಕ ಅರ್ಥವಲಯಗಳನ್ನು ಇಲ್ಲಿ ವಿವರಿಸುವುದು ಅನಗತ್ಯ. ಆ ಅಗ್ರಹಾರದ ಯಾವ ಬ್ರಾಹ್ಮಣರೂ ಸಂಸ್ಕಾರವಂತರಲ್ಲ. ಬಹಳ ಕಟುವಾಗಿ ಹೇಳುವುದಾದರೆ, ಅವರ ಸಂಸ್ಕಾರ – ವಿಹೀನತೆ ತೋರಿಸುವುದೇ ಆ ಕಾದಂಬರಿಯ ಪ್ರಮುಖ ಉದ್ದೇಶ. ಅಲ್ಲಿ ಬರುವ ಎಲ್ಲ ವ್ಯಕ್ತಿಗಳು ಸಂಸ್ಕಾರ – ವಿಹೀನವಾಗಿರುವಂತೆಯೇ ತಾನು ಕೂಡ ‘ಸಂಸ್ಕಾರವಂತನೇನಲ್ಲ’ ಎಂದು ಪ್ರಾಣೇಶಾಚಾರ್ಯ ಕೂಡ ಕೊನೆಗೆ ಕಂಡುಕೊಳ್ಳುವುದೆ ಕಾದಂಬರಿಯ ಮುಖ್ಯಗುರಿ.

ಅಲ್ಲಿ ಬರುವ ಇಡೀ ಸಮಾಜ ಸಂಸ್ಕಾರ – ವಿಹೀನವಾದುದಾಗಿದ್ದು, ಪ್ರಾಣೇಶಾಚಾರ್ಯನಂತಹ ಕೆಲವರು ‘ನನ್ನದೂ ಕೂಡ ಸಂಸ್ಕಾರ – ವಿಹೀನ ವ್ಯಕ್ತಿತ್ವ’ ಎಂದು ಕಂಡುಕೊಳ್ಳುವುದರ ಕಡೆಗೆ ಸಾಗುವುದು, ಅಲ್ಲಿನ ಆಶಯವಾಗಿರುವಂತೆ ತೋರುತ್ತದೆ. ಒಂದು ತರಹದಲ್ಲಿ ಇಡೀ ಭಾರತವೇ ಸಂಸ್ಕಾರ – ವಿಹೀನ ಸಮಾಜ ಎಂಬಂತೆ ಚಿತ್ರಿಸಲು ಪ್ರಯತ್ನಿಸಲಾಗಿದೆ ಎಂದು ಅನ್ನಿಸಿದರೆ ಆಶ್ಚರ್ಯವೇನಿಲ್ಲ. ‘ಕರ್ವಾಲೋ’ ಕೂಡ ಅದೇ ಧೋರಣೆಯನ್ನು ಪ್ರತಿಪಾದಿಸುತ್ತದೆ: ಇಡೀ ಭಾರತದ ‘ಪರಂಪರಾಗತ ತಿಳುವಳಿಕೆ’ ‘ಮಂದಣ್ಣ’ನ ಸ್ಥಿತಿಯಲ್ಲಿ ಹೂತುಹೋಗಿದ್ದು ಅದರ ಮಹತ್ವ ಅರಿಯಲು ಯುರೋಪಿನ ‘ಮಾದರಿ’ಯ ಆಧುನಿಕ ಶಿಕ್ಷಣ ಪಡೆದ ‘ಕರ್ವಾಲೋ’ನಂತಹ ವಿಜ್ಞಾನಿ ಅಥವಾ ಸುಶಿಕ್ಷಿತನ ಅವಶ್ಯಕತೆ ಇದೆ. ಅಥವಾ ಮಂದಣ್ಣ’ನ ತಿಳುವಳಿಕೆ ಏನಾದರೂ ಚಲಾವಣೆಗೆ ಬರಬೇಕಾದರೆ ‘ಕರ್ವಾಲೋ’ ತರದವರ ಅಗತ್ಯವಿದೆ ಎಂದು ತೋರಿಸಿಕೊಡುವುದು.

ಆ ಧೋರಣೆ ಹೊರಜಗತ್ತಿಗೆ ಮೆಚ್ಚುಗೆಯಾಗದಿರಲು ಸಾಧ್ಯವೆ? ಅದೇ ಅವರ ಯಶಸ್ಸಿನ ಗುಟ್ಟಾಗಿರಬಹುದೆ? ಹಲವಾರು ತರಹದಲ್ಲಿ ಓದಿಸಿಕೊಳ್ಳುವ ಕೃತಿಗಳು ಕನ್ನಡದಲ್ಲಿ ಹೆಚ್ಚು ಪ್ರಮಾಣದಲ್ಲಿ ಇಲ್ಲವೆ? ಕುವೆಂಪುಗೆ ಸಾಧ್ಯವಾಗದ್ದು ತೇಜಸ್ವಿಗೆ ಮತ್ತು ಮಾಸ್ತಿ ವಿಫಲವಾದ ಕಡೆ ಅನಂತಮೂರ್ತಿ ಯಶಸ್ಸು ಸಾಧಿಸಿದ್ದಾರೆ ಎಂದು ಅದರ ಅರ್ಥವೆ? ಕುವೆಂಪು ಹೆಗಲ ಮೇಲೆ ತೇಜಸ್ವಿ, ಮಾಸ್ತಿಯವರ ಹೆಗಲ ಮೇಲೆ ನಿಂತು ನೋಡುವ ಅವಕಾಶ ಅನಂತಮೂರ್ತಿಯವರಿಗೆ ದಕ್ಕಿತು. ಪರಂಪರೆ ಕಟ್ಟಿಕೊಳ್ಳುವ ರೀತಿಯೇ ಅದಾಗಿರುತ್ತದೆ. ಆದರೂ ಮಾಸ್ತಿಯವರಿಗಿಂತ ಅನಂತಮೂರ್ತಿ ಅಥವಾ ಕುವೆಂಪುಗಿಂತ ತೇಜಸ್ವಿ ದೊಡ್ಡ ಲೇಖಕರು ಎಂದು ಇದರ ಅರ್ಥವೆ? ಆ ರೀತಿಯ ವಿಚಿತ್ರ ಸನ್ನಿವೇಶವನ್ನು ವಿವರಿಸುವುದು ಅಥವಾ ಗ್ರಹಿಸುವುದಾದರೂ ಹೇಗೆ? ಆ ತರಹದ ಪರಿಚಯ ಪಡೆಯುವುದರ ಮೂಲಕ ಅನಂತಮೂರ್ತಿ, ತೇಜಸ್ವಿ, ಕಾರ್ನಾಡ್‌ ಮೊದಲಾದವರ ಕನ್ನಡ ನಿಜವಾಗಿಯೂ ಗಳಿಸಿದ್ದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಾಗಬೇಕು. ಪ್ರಭಾವವಿಲ್ಲದ ಪರಿಚಯದ ಅರ್ಥವಂತಿಕೆಯಾದರೂ ಎಂತಾದ್ದು? ಆ ಮಿತಿಗೆ ಕಾರಣವಾಗಿರಬಹುದಾದ ಕೊರತೆ ಅಥವಾ ಲೋಪದೋಷಗಳಾದರೂ ಏನಿರಬಹುದು?

ಯಾವುದೇ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿ ತನಗೆ ಬೇಕಾದುದನ್ನು ಬೇರೊಂದು ಭಾಷೆ ಮತ್ತು ಸಂಸ್ಕೃತಿಯಿಂದ ಎರವಲು ಪಡೆಯುವುದರ ಜತೆಗೆ, ಮರಳಿಕೊಡುವ ಸಾಮರ್ಥ್ಯದಿಂದ ತುಂಬಿ ತುಳುಕುತ್ತಿರಬೇಕಾದರೆ: ಕೊಳುಕೊಡುಗೆ ಅಥವಾ ಪ್ರಭಾವ ಎಂಬುದು ಯಾವಾಗಲೂ ಇಮ್ಮುಖವಾದುದು. ನಿರಂತರವಾಗಿ ಕಡ ಅಥವಾ ಎರವಲು ಪಡೆಯುವ ವ್ಯಕ್ತಿ, ಕುಟುಂಬ ಅಥವಾ ಸಮಾಜವೊಂದು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಿಲ್ಲವಾದಂತೆ: ಭಾಷಾ ಸಂಸ್ಕೃತಿಯ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ಹೇಳಬೇಕೆ? ಪ್ರತಿಭೆ ಮತ್ತು ಕವಿತ್ವಶಕ್ತಿಯಲ್ಲಿ ಯಾರಿಗೂ ಏನೂ ಕಡಿಮೆ ಇಲ್ಲದ ಪಂಪ, ನಾರಣಪ್ಪ ಮೊದಲಾದವರು ಆ ದಿಸೆಯಲ್ಲಿ ಯೋಚಿಸಲು ಹೋಗಲಿಲ್ಲ ಏಕೆ? ಅವರನ್ನು ನಿಯಂತ್ರಿಸಿದ ಪರಿಸ್ಥಿತಿಯಾದರೂ ಎಂಥದು?

ನವೋದಯ ಕಾಲದವರೆಗೂ ಸಂಸ್ಕೃತ ಸಾಹಿತ್ಯ ಹಿನ್ನೆಲೆ ಒಪ್ಪಿಕೊಂಡು ಬೆಳೆದುಬಂದ ಕನ್ನಡ ಸಾಹಿತ್ಯ ಪರಂಪರೆಯು ನಂತರದ ದಿನಗಳಲ್ಲಿ ಯುರೋಪಿನ ಸಾಹಿತ್ಯ ಪರಂಪರೆಯ ಪ್ರಭಾವ ಸ್ವೀಕರಿಸಬೇಕಾಗಿ ಬಂದಿತು ಎಂಬುದು, ಒಂದು ತರಹದಲ್ಲಿ ತರ್ಕಬದ್ಧ ಮತ್ತು ಸ್ವಾಭಾವಿಕವಾದ ಐತಿಹಾಸಿಕ ಬೆಳವಣಿಗೆಯಂತೆ ತೋರುತ್ತದೆ ಅಲ್ಲವೆ? ಇಲ್ಲಿ ಎದುರಾಗುವ ಸೂಕ್ಷ್ಮವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ಗಮನಿಸುವುದು ಅಗತ್ಯ. ಪಂಪ – ನಾರಣಪ್ಪರ ಪ್ರಭಾವ ಸ್ವೀಕರಿಸಿ ಬೆಳೆಯುವ ಅಗತ್ಯ, ಸಂಸ್ಕೃತ ಭಾಷೆಗೆ ಎದುರಾಗಲಿಲ್ಲ. ಏಕೆಂದರೆ, ಆಡುಭಾಷೆಯಾಗಿ ಪ್ರವಹಿಸುವ ಶಕ್ತಿಯನ್ನು ಸಂಸ್ಕೃತ ಕಳೆದುಕೊಂಡು ಅಷ್ಟರಲ್ಲಾಗಲೆ ಶತಮಾನಗಳೇ ಗತಿಸಿ ಹೋಗಿದ್ದವು. ಕನ್ನಡ ಅಥವಾ ಮತ್ತಾವುದೆ ಭಾಷೆಯಿಂದ ಪ್ರಭಾವ ಪಡೆದು ಬೆಳೆಯುವ ಅಗತ್ಯವನ್ನು ಸಂಸ್ಕೃತ ಕಳೆದುಕೊಂಡಿದ್ದಂತೆಯೇ: ಆ ಭಾಷೆಯಲ್ಲಿ ಕಾವ್ಯರಚನೆ ಮಾಡುವುದನ್ನು ಮುಂದುವರಿಸಿದ ಕವಿಗಳೂ ಕಳೆದುಕೊಂಡಿದ್ದರು. ಆದರೂ ಅಂತಹ ಸಂಸ್ಕೃತ ಭಾಷೆಯಲ್ಲಿ ಕಾವ್ಯ ರಚನೆ ಮಾಡುವುದನ್ನು ಅನೇಕ ಕವಿಗಳು ಮುಂದುವರಿಸಿಕೊಂಡು ಹೋದಂತೆ, ಆ ಸಂಸ್ಕೃತ ಭಾಷೆಗೆ ಹೋಗಿ ತಮಗೆ ಬೇಕಾದ ವಸ್ತು ಆರಿಸಿಕೊಳ್ಳುವುದನ್ನು ಕನ್ನಡದ ಅನೇಕ ಕವಿಗಳೂ ಸಹ ಮುಂದುವರಿಸಿಕೊಂಡು ಬಂದರು. ಅಲ್ಲಿನ ದ್ವಂದ್ವ ಅಥವಾ ಕಾಲನ ಅಪಹಾಸ್ಯ ಸಂಸ್ಕೃತ ಭಾಷೆಯ ಕವಿಗಳಿಗೂ ಅರ್ಥವಾಗಲಿಲ್ಲವಾದಂತೆ, ಕನ್ನಡ ಮೊದಲಾದ ಆಡುಭಾಷೆಯಲ್ಲಿ ಕೆಲಸ ಮಾಡುವ ಮತ್ತು ಕಟ್ಟುವ ಜವಾಬ್ದಾರಿಯಿಂದ ತುಂಬಿದ ಕವಿಗಳಿಗೂ ಅರ್ಥವಾಗಲಿಲ್ಲ ಏಕೆ?

ಅರ್ಥವಿಷ್ಟೆ: ಗ್ರೀಕ್‌ – ಲ್ಯಾಟಿನ್‌ ಪ್ರಭಾವವನ್ನು ಪಡೆಯಬೇಕಾದ ರೀತಿಯಲ್ಲಿ ಪಡೆದು ಸ್ವತಂತ್ರವಾಗಿ ಬೆಳೆಯಲು ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ರಷ್ಯನ್‌ ಮೊದಲಾದ ಅನೇಕ ಯುರೋಪಿನ ಭಾಷೆಗಳ ಲೇಖಕರಿಗೆ ಸಾಧ್ಯವಾದಂತೆ; ಕನ್ನಡ, ತಮಿಳು ಮೊದಲಾದ ಭಾರತೀಯ ಭಾಷೆಗಳ ಲೇಖಕರು ಮತ್ತು ಕವಿಗಳಿಗೆ ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗು ಆ ಕೊರತೆ ಭಾರತೀಯ ಕವಿಗಳನ್ನು ಕಾಡಲೆ ಇಲ್ಲವೆ? ಸಂಸ್ಕೃತದ ತರಹವೇ ಗ್ರಂಥಸ್ಥ ಭಾಷೆಯಾಗಿ ಮಾತ್ರ ಉಳಿದಿದ್ದ ಗ್ರೀಕ್‌ – ಲ್ಯಾಟಿನ್‌ ಪ್ರಭಾವ ಮತ್ತು ಸಂಸರ್ಗ ಅರಗಿಸಿಕೊಂಡು ತಮ್ಮ ಸಮಾಜ ನಿರ್ಮಿಸುವ ಉಮೇದು ಮತ್ತು ವಿವೇಕ ಯುರೋಪಿನ ಕವಿಗಳಿಗೆ ದಕ್ಕಿದಂತೆ ಭಾರತೀಯ ಭಾಷೆಗಳ ಕವಿಗಳಿಗೆ ದಕ್ಕಲಿಲ್ಲ, ಏಕೆ?

ಆ ಪ್ರಶ್ನೆಗಳು, ಕವಿ ಅಥವಾ ಸಾಹಿತಿಗಳ ನಿರ್ಮಾಣದಲ್ಲಿ ಪರಂಪರೆ ಮತ್ತು ಸಮಾಜ ನಿರ್ವಹಿಸುವ ಪಾತ್ರ ಕುರಿತ ಪ್ರಶ್ನೆಗಳಿಗೆ ದಾರಿಮಾಡಿಕೊಡುತ್ತವೆ: ಪರಂಪರೆ ಮತ್ತು ಸಮಾಜ ನಿರ್ಮಾಣದಲ್ಲಿ ಕವಿ ಅಥವಾ ಸಾಹಿತಿ ವಹಿಸುವ ಪಾತ್ರ ಕುರಿತ ಪ್ರಶ್ನೆಗಳಿಗೆ ಎಂದರೂ ಒಂದೆ; ಅವೆರಡೂ ಪರಸ್ಪರ ಮತ್ತು ಪೂರಕವಾದವು. ಪ್ರತಿಷ್ಠಾಪಿತ ಹಿತಾಸಕ್ತಿಯಾಗಿ ಮಾರ್ಪಡುವ ಸ್ಥಾಪಿತ ಪರಂಪರೆಯ ಜಾಡನ್ನು ಭಗ್ನ ಮಾಡಿ ಹೊಸ ಪರಂಪರೆ ಸ್ಥಾಪಿಸುವುದರ ಮುಖೇನ ಹಿಂದಿನ ಮತ್ತು ಮುಂದಿನದರ ನಡುವಿನ ಪರಸ್ಪರವಾದ ಜೀವಂತಿಕೆ ಹಾಗೂ ಸಾತತ್ಯತೆಯ ಮಾರ್ಗ ಕಂಡುಕೊಳ್ಳುವುದು ಯಾವುದೇ ಸಂಸ್ಕೃತಿ ಮತ್ತು ನಾಗರಿಕತೆಯ ಲಕ್ಷಣ. ಆ ತರಹದ ಆಂತರಿಕವಾದ ಒತ್ತಡ ಮತ್ತು ತುಡಿತಗಳ ಕಾರಣ ಬಿ. ಎಂ. ಶ್ರೀ., ಪಂಜೆ ಮಂಗೇಶರಾಯರು, ಕುವೆಂಪು, ಬೇಂದ್ರೆ ಮೊದಲಾದವರ ನೇತೃತ್ವದಲ್ಲಿ ನೂತನ ಬರವಣಿಗೆಯ ಹಲವಾರು ಮಾರ್ಗಗಳು ಕನ್ನಡದಲ್ಲಿ ಏಕಕಾಲದಲ್ಲಿ ತೆರೆದುಕೊಂಡಂತೆಯೇ; ನಂತರದ ತಲೆಮಾರಿನ ಗೋಪಾಲಕೃಷ್ಣ ಅಡಿಗ, ಜಿ. ಎಸ್‌. ಶಿವರುದ್ರಪ್ಪ, ಕೆ. ಎಸ್‌. ನ., ಯು. ಆರ್‌. ಅನಂತಮೂರ್ತಿ, ಪಿ. ಲಂಕೇಶ್‌, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ ಮೊದಲಾದ ಅನೇಕ ತುಡಿತಗಳಿಗೆ ಅನುಗುಣ ನೂತನ ಸಂಪ್ರದಾಯವೊಂದು ತೆರೆದುಕೊಂಡುದು ಸಹಜವಾಗಿ ಕಾಣಬೇಕಾಗಿತ್ತು? ಪರಂಪರೆ ಎಂದರೆ ನಿಜದ ಅರ್ಥದಲ್ಲಿ ಅದೇ ಅಲ್ಲವೆ? ಆ ತರಹದ ಬೆಳವಣಿಗೆಗಳು ವಿವಾದ ಮತ್ತು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುವುದು ಬೇರೆ. ಆದರೆ ತಲೆ ಎತ್ತಿದ ಅನೇಕ ತರಹದ[2] ಕಹಿ ವಾತಾವರಣ ಭಾರತೀಯ ಪರಿಸರಕ್ಕೆ ಮಾತ್ರ ಸಹಜವಾದುದೆ? ಅದರ ಪರಿಣಾಮ ಇಂದಿಗೂ ಉಳಿದುಬಂದಿರುವುದಕ್ಕೆ ವಿವೇಕದ ಅಭಾವ ಕಾರಣವೆ?

ನವ್ಯ ಮತ್ತು ನಂತರದ ತಲೆಮಾರಿನ ಲೇಖಕರು ನಡೆಸುವ ಪ್ರಯಗಗಳು ತಪ್ಪು ಎಂಬುದಾದಲ್ಲಿ ಅದೇ ಮಾತು ನವೋದಯ ಕಾಲದ ಪ್ರಯೋಗಗಳಿಗೂ ಅನ್ವಯವಾಗಬೇಕು ಅಲ್ಲವೆ? ಪ್ರಯೋಗಶೀಲತೆ ಮತ್ತು ಪರಂಪರೆ ನಿರ್ಮಾಣ ಬಹಳ ಮುಖ್ಯ ಎಂಬುದಾದಲ್ಲಿ, ಆ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆ ಭಿನ್ನಾಭಿಪ್ರಾಯಗಳ ಕಾರಣ, ಪ್ರಯೋಗಶೀಲತೆಯ ಪ್ರಾಮುಖ್ಯವನ್ನೇ ತಿರಸ್ಕರಿಸುವುದು ಎಷ್ಟು ಸರಿ? ನವ್ಯ ಮತ್ತು ಅನಂತರದ ತಲೆಮಾರಿನವರು ತಮ್ಮ ಹಿಂದಿನವರನ್ನು ಕುರಿತು ಆಡಿದ ಕೆಲವೊಂದು ಕಹಿ ಮಾತುಗಳು ಮತ್ತು ಕಟು ಟೀಕೆಗಳು ಇಡೀ ವಾತಾವರಣವನ್ನು ಕಹಿ ಮಾಡಲು ಕಾರಣವಾದುವೆ?

ನವೋದಯ ಕಾಲದ ಬೆಳವಣಿಗೆ ಇತಿಹಾಸದಪರವಾಗಿದ್ದಂತೆ, ಅನಂತರದ ಬೆಳವಣಿಗೆಗಳ ಚಲನಶೀಲತೆಯನ್ನು ಅದೇ ಕಾಲ ಸ್ವಾಗತಿಸಿದೆ. ಆ ತರಹದ ಬೆಳವಣಿಗೆಗಳಿಂದ ಆದ ಎಲ್ಲ ಬದಲಾವಣೆಗಳು ಎಲ್ಲರಿಗೂ ತೃಪ್ತಿ ತರಲು ಸಾಧ್ಯವಿಲ್ಲ. ಬಹಳ ವಿಶಾಲ ಅರ್ಥದಲ್ಲಿ ನೋಡುವುದಾದಲ್ಲಿ, ಪ್ರಯೋಗಶೀಲತೆಗಳು ಕಾಲನ ಪರವಾಗಿದ್ದವು ಎಂಬುದನ್ನು ಅದೇ ಕಾಲ ಸ್ವೀಕರಿಸಿದೆ. ಕೆಲ ಭಿನ್ನಾಭಿಪ್ರಾಯಗಳ ಅಥವಾ ಕಹಿ ವಾತಾವರಣದ ಕಾರಣ ಇಡೀ ಪ್ರಯೋಗ ಶೀಲತೆಯನ್ನೇ ಪ್ರಶ್ನಿಸುವುದು ಅಥವಾ ಲೇವಡಿ ಮಾಡುವುದು ಸರಿಯಾದ ಧೋರಣೆಯಾಗುವುದು ಕಷ್ಟಸಾಧ್ಯ. ಆ ತರಹದ ಪ್ರಯೋಗಶೀಲತೆಯ ಸಾತತ್ಯತೆಯ ಹಿನ್ನೆಲೆಯಲ್ಲಿ ಮಾಸ್ತಿ, ಕುವೆಂಪು, ಅನಂತಮೂರ್ತಿ, ಕಾರ್ನಾಡ್‌ ಮತ್ತು ತೇಜಸ್ವಿ ಮೊದಲಾದವರ ಸಾಧನೆಗಳ ಇತಿಮಿತಿ, ಸಾಫಲ್ಯ ಮತ್ತು ವೈಫಲ್ಯವನ್ನು ಅರಿಯುವ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಭಿನ್ನಾಭಿಪ್ರಾಯಗಳು ಉಂಟುಮಾಡಿರುವ ಕಹಿ ವಾತಾವರಣವನ್ನು ತಿಳಿಗೊಳಿಸದೆ ಸರಿಯಾದ ಅರ್ಥವಂತಿಕೆ ಕಷ್ಟಸಾಧ್ಯ.

ಅನಂತಮೂರ್ತಿ, ತೇಜಸ್ವಿಯವರಿಗಿಂತ ಮಾಸ್ತಿ, ಕುವೆಂಪು ಹೆಚ್ಚು ಬಲ್ಲವರು: ಪ್ರತಿಭಾ ಸಂಪನ್ನತೆ, ಅನುಭವ ಶ್ರೀಮಂತಿಕೆ, ವುತ್ಪತ್ತಿ, ಮಹಾತ್ವಾಕಾಂಕ್ಷೆ, ಸಾಧಿಸಬೇಕೆಂಬ ನಿರ್ಧಾರ ಇತ್ಯಾದಿ ಯಾವುದೇ ದೃಷ್ಟಿಯಿಂದ ನೋಡಿದರೂ ಮಾಸ್ತಿ ಮತ್ತು ಕುವೆಂಪು ಸಾಧನೆಗಳು ಇಂದಿಗೂ ಮಹತ್ವದ್ದಾಗಿ ಉಳಿದಿವೆ.

ಆದರೂ ಹೊರಜಗತ್ತಿನ ಗಮನ ಸೆಳೆಯುವ ವಿಚಾರದಲ್ಲಿ ಅನಂತಮೂರ್ತಿ, ಕಾರ್ನಾಡ್‌ ಮತ್ತು ತೇಜಸ್ವಿಗಳಿಗೆ ದಕ್ಕಿದ ಯಶಸ್ಸು ಮಾಸ್ತಿ ಮತ್ತು ಕುವೆಂಪು ಪಾಲಿಗೆ ಒದಗಿಬರಲಿಲ್ಲ. ನವ್ಯಕಾಲದ ಆ ಮೂವರು ಲೇಖಕರನ್ನು ಹೊರಜಗತ್ತಿಗೆ ಪರಿಚಯಿಸಲು ಕಾರಣವಾದ ಸಂಗತಿಗಳನ್ನು ಗುರುತಿಸಲು ಸಾಧ್ಯವಾದಲ್ಲಿ;ನವೋದಯ ಕಾಲದ ಕವಿಗಳಿಗೆ ದಕ್ಕದೆ ಹೋಗಿರಬಹುದಾದ ಅಂಶಗಳನ್ನು ಪರೋಕ್ಷವಾಗಿಯಾದರೂ ಗುರುತಿಸಲು ಸಾಧ್ಯವಾಗುತ್ತದೆ. ಏಕೆಂದರೆ, ಅವೆರಡೂ ಪರಸ್ಪರ ಹೊಂದಿಕೊಂಡಂತಿರುವುದು. ಕಾರ್ನಾಡರ ನಾಟಕಗಳ ಜನಪ್ರಿಯತೆಗೆ ಸ್ಪಷ್ಟ ಕಾರಣಗಳಿವೆ. ಆದರೆ ಅನಂತಮೂರ್ತಿ ಮತ್ತು ತೇಜಸ್ವಿ ಯಶಸ್ಸಿಗೆ ಕಾರಣವಾದ ಅಂಶಗಳೇನಿರಬಹುದು? ಪ್ರಾಣೇಶಾಚಾರ್ಯರ ಅಗ್ರಹಾರದ ತರಹವೆ ಇಡೀ ಭಾರತೀಯ ಸಮಾಜ ‘ಸಂಸ್ಕೃತಿ – ವಿಹೀನ’ವಾಗಿದೆ ಮತ್ತು ಭಾರತದ ‘ಪರಂಪರಾಗತ ತಿಳುವಳಿಕೆ ಮಂದಣ್ಣನ ಸ್ಥಿತಿಯಲ್ಲಿದೆ’ ಅದರ ಮಹತ್ವ ಗ್ರಹಿಸಲು ಯುರೋಪ್‌ ಮಾದರಿಯ ಮನಸ್ಸು ಪಡೆದ ಕರ್ವಾಲೋ ಅಂಥವರು ಬೇಕು[3] ಎಂಬ ಪ್ರತಿಪಾದನೆ ಆ ಕೃತಿಗಳ ಯಶಸ್ಸಿನ ಹಿಂದಿನ ಗುಟ್ಟು ಆಗಿರಬಹುದೆ?

ಚುರುಕುತನ ಪ್ರದರ್ಶಿಸುವುದರ ಮೂಲಕ ಅವರಿಬ್ಬರೂ ತಮ್ಮ ಕಾಲಕ್ಕೆ ಸ್ಪಂದಿಸಿದರು ಎಂದು ಅರ್ಥವೆ? ಇಡೀ ಬ್ರಾಹ್ಮಣ ಸಮಾಜ ಅಂದರೆ ಇಂಡಿಯಾ ಸಂಸ್ಕೃತಿ – ವಿಹೀನವಾಗಿದೆ ಮತ್ತು ಭಾರತದ ಪರಂಪರಾಗತ ತಿಳುವಳಿಕೆ ಮಂದಣ್ಣನ ಸ್ಥಿತಿಯಲ್ಲಿ ಉಳಿದುಕೊಂಡಿದೆ ಎಂಬ ಗ್ರಹಿಕೆಯನ್ನು ಅನೇಕರು ಒಪ್ಪಲು ಸಿದ್ಧವಿಲ್ಲ ಮತ್ತು ಒಪ್ಪದೇ ಹೋಗಬಹುದು. ಅದೊಂದು ದೃಷ್ಟಿಕೋನ ಎಂದು ವಾದಿಸುವುದರ ಮೂಲಕ, ಭಿನ್ನಾಭಿಪ್ರಾಯ ಅಥವಾ ಚರ್ಚೆಗೆ ಅವಕಾಶ ಮಾಡಿಕೊಡುವುದು ಒಂದು ತರಹದ ಯಶಸ್ಸಿನ ಭಾಗವೆ?

ಅಂದರೆ ಭಾರತೀಯತೆಯ ಅಥವಾ ಇಂಡಿಯಾದ ಕೊಳಕು ಅಥವಾ ಕಪ್ಪು ಮುಖವನ್ನು ಹೊರಜಗತ್ತಿಗೆ ಅದರ ತೀಕ್ಷ್ಣ ರೂಪದಲ್ಲಿ ಎತ್ತಿ ತೋರಿಸಿಕೊಡುವುದು – ಯಾವುದೇ ದೇಶ ಅಥವಾ ಸಂಸ್ಕೃತಿಯ ಒಂದು ಮುಖವನ್ನು ಮಾತ್ರ ತೋರಿಸಿಕೊಡುವುದರಿಂದ ಬರುವ ಹೊರಜಗತ್ತಿನ ಸಂಪರ್ಕ ಮತ್ತು ಪರಿಚಯ, ವ್ಯಾಪಕವಾದ ಪ್ರಭಾವವಾಗಿ ಮಾರ್ಪಡಲು ಸಾಧ್ಯವೆ? ಗೇಬ್ರಿಯಲ್‌ ಮಾರ್ಕೆಜ್‌ ಅಥವಾ ಅಕ್ವೇವಿಯಾ ಪಾಜ್ ತರಹದಲ್ಲಿ ಬೆಳೆದುಕೊಳ್ಳದಿರಲು ಆ ಮಿತಿಯೇ ಕಾರಣವಾಗಿರಬಹುದೆ? ಪರಂಪರೆ ಹೇಗೆ ಪ್ರತಿಭೆ ಮತ್ತು ಪ್ರಯತ್ನಗಳನ್ನು ನಿಯಂತ್ರಿಸುತ್ತದೆ ಎಂಬುದನ್ನು ಅದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಬೇಕಿರಲಾರದು! ನಿಯಂತ್ರಿಸುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ ಪರಂಪರೆಯ ಮಿತಿಯನ್ನು ಮೀರುವ ಕಷ್ಟ ಎಂಬುದು ಕನಕದಾಸರ ಪ್ರಯತ್ನಗಳು ನೆನಪಿಗೆ ಬಾರದಿರುವುದಿಲ್ಲ.

 

[1]‘ಕಾನೂರು ಹೆಗ್ಗಡತಿ’ ಸಿನಿಮಾ ಆದ ಮೇಲೆ ಅದರ ಇಂಗ್ಲಿಷ್‌ ಅನುವಾದವನ್ನು ಪೆಂಗ್ವಿನ್‌ ಪ್ರಕಾಶನದವರು ಹೊರತಂದರು. ಪರಿಸ್ಥಿತಿ ಅದರಿಂದ ಬದಲಾದಂತೇನೂ ಕಾಣುವುದಿಲ್ಲ.

[2]ಅದರಲ್ಲೂ ಬುಡದಲ್ಲಿ ಜಾತಿ ಮೂಲವಾದ ಮತ್ತು ಮತ್ಸರಗಳು-ನಾಡು ನುಡಿಯ ಹಿತವನ್ನೂ ಮೀರಿದ.

[3]ದುರ್ವಾಸಪುರಕ್ಕೆ ಮರಳಿ ಬರುವ ಹಾದಿಯಲ್ಲಿ ಸಂಪ್ರದಾಯಸ್ತ ಮನಸ್ಸಿನ ಬ್ರಾಹ್ಮಣ ಜನಾಂಗದ ಪ್ರತಿನಿಧಿ ಎಂಬಂತೆ ಚಿತ್ರಿಸಲಾಗಿರುವ ಪ್ರಾಣೇಶಾಚಾರ್ಯ, ಯುರೋಪ್‌ ಮೂಲದ ಆಧುನಿಕ ಇಂಗ್ಲಿಷ್‌ ಶಿಕ್ಷಣ ಪಡೆದ ವ್ಯಕ್ತಿಯ ತರಹ ಚಿಂತಿಸುವುದು ಕೇವಲ ಆಕಸ್ಮಿಕ ಬೆಳವಣಿಗೆಯಲ್ಲ.