ಕೃತಿ ಸ್ವೀಕರಿಸುವ ಓದುಗ ಮನಸ್ಸುಗಳಿಗೆ ಒಗ್ಗರಣೆ ರೂಪದಲ್ಲಿ ಹೇಳುವಂತಾದ್ದು ಪ್ರತ್ಯೇಕ ಏನೂ ಇರಲಾರದು. ವಿಧಾನ ಇತ್ಯಾದಿ ನಿಬಂಧನೆಗಳಿಂದಾಗಿ ವಾಚ್ಯವಾಗಿ ಹೇಳಲಾಗದ ಕೆಲ ಮಾತುಗಳನ್ನು ಮನವರಿಕೆ ಮಾಡಿಕೊಳ್ಳುವ ಉದ್ದೇಶದಿಂದ ಪೀಠಿಕೆ, ಅರಿಕೆ, ಮೊದಲ ಮಾತು ಇಲ್ಲವೆ ಬಿನ್ನಹದ ರೂಪದಲ್ಲಿ ಕೆಲ ಮುಮ್ಮಾತುಗಳನ್ನು ಬರೆಯುವ ಸಂಪ್ರದಾಯ ಚಾಲತಿಗೆ ಬಂದಿರಬಹುದು.

ದಿನನಿತ್ಯದ ಬದುಕಿನ ಒಂದೆರಡು ಸರಳ ಪ್ರಶ್ನೆಗಳಿಗೆ ಆದಷ್ಟು ಸರಳ ರೀತಿಯಲ್ಲಿ ಉತ್ತರ ಕಾಣಲು ಯತ್ನಿಸುವುದು ಇಲ್ಲಿನ ಉದ್ದೇಶ. ಅದಕ್ಕಾಗಿ ಅಷ್ಟೇ ಸರಳವಾದ ಆದರೆ ವಿನೂತನ ಮಾರ್ಗವೊಂದನ್ನು ಅನುಸರಿಸಬೇಕಾಗುತ್ತದೆ. ಉತ್ತರ ಹುಡುಕುವಂತೆ ಮನಸ್ಸನ್ನು ಬಿಚ್ಚಿದ ಪ್ರಶ್ನೆಯು ಅದರ ಬೀಜರೂಪದಲ್ಲಿ ಈ ರೀತಿ ಕಾಣುತ್ತದೆ; ಕನ್ನಡ, ಬಂಗಾಳಿ ಅಥವಾ ಮತ್ತಾವುದೇ ಭಾರತೀಯ ಭಾಷೆಗಳಲ್ಲಿ ಬರೆಯುವ ಹಾಗೂ ಮಾತನಾಡುವವರು ಸಹ ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌ ಮೊದಲಾದ ಭಾಷೆಗಳನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡಿರುವವರಂತೆಯೇ ಸಮಾನ ನೆಲೆಯಲ್ಲಿ ಅಷ್ಟೇ ಸ್ವಾಭಿಮಾನದಿಂದ ಬದುಕುವ ವಾತಾವರಣ, ಪರಿಸ್ಥಿತಿ, ಪರಿಸರ ಮುಂದೆಯಾದರೂ ಒಂದು ದಿನ ನಿರ್ಮಾಣವಾದೀತೆ!

ಗುಜರಾತಿ ಮೊದಲಾದ ಭಾರತೀಯ ಭಾಷೆಗಳನ್ನು ಮಾತನಾಡುವ ಜನರು ಸಮಾನ ನೆಲೆಯಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಯು, ಯಾವುದೋ ಒಂದು ಹಂತದಲ್ಲಿ ಅವರ ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿಯೂ ಮಾರ್ಪಡಬಹುದು. ಜತೆಗೆ, ಹಲವಾರು ಶತಮಾನಗಳ ಬದುಕಿನ ಇತಿಹಾಸ ಪಡೆದಿರುವ ತಮಿಳಿನಂತಹ ಭಾಷಾಸಮುದಾಯಕ್ಕೆ ‘ಸಂಚಕಾರ’ ತರುವ ಸ್ಥಿತಿ ತಲುಪಿದ ಮತ್ತೊಂದು ಭಾಷಾ ಸಂಸ್ಕೃತಿಯು ಅದಕ್ಕೆ ತದ್ವಿರುದ್ಧವಾದ ದಿಕ್ಕಿನಿಂದಲಾದರೂ ಎದುರಾಗಬಹುದಾದ ಅಂತಹದ್ದೇ ಪರಿಸ್ಥಿತಿಗೆ ತನ್ನನ್ನು ತಾನು ತೆರೆದುಕೊಳ್ಳಬೇಕಾಗಿಬರಬಹುದು; ಏಕೆಂದರೆ, ‘ಸಂಚಕಾರ ತರುವ’ ಮತ್ತು ‘ಸಂಚಕಾರಕ್ಕೆ ತುತ್ತಾಗುವ’ ಸ್ಥಿತಿಗಳು ಸಾಮಾನ್ಯವಾಗಿದ್ದಿರಬಹುದಾದ ಒಂದೇ ಶಕ್ತಿಯ ಆಚೀಚೆ ತುದಿಗಳಾಗಿರುವ ಸಂದರ್ಭ ಇಲ್ಲದಿಲ್ಲ. ಸಂಚಕಾರ ಎದುರಿಸಬೇಕಾದ ಭಯದ ಮಾತಿರಲಿ, ಅಂತಹ ಸ್ಥಿತಿ ನಿರ್ಮಾಣವಾಗಲು ಪೂರಕವಾಗಿ ಬಿಡಬಹುದಾದ ಸನ್ನಿವೇಶ ಸೃಷ್ಟಿಸುವುದಕ್ಕಿಂತ ಹೆಚ್ಚಿನ ಅಪಾಯ ಮತ್ತೊಂದಿರಲಾರದು. ಮತ್ತು ಅಂತಹ ಬೆಳವಣಿಗೆಗಳು ಅಚಾನಕ್‌ ಆಗಿರುವ ಸಾಧ್ಯತೆ ಬಹಳ ಕಡಿಮೆ.

ಭಾಷಾ ಸಮುದಾಯವೊಂದು ಎದುರಿಸುತ್ತಿರುವ ಸ್ಥಿತಿಯನ್ನು ಅರಿಯಲು ನಡೆಸುವ ಯಾವುದೇ ಪ್ರಯತ್ನಗಳು, ಆ ಸ್ಥಿತಿ ನಿಮಾರ್ಣವಾಗಲು ಪರೋಕ್ಷವಾಗಿಯಾದರೂ ಕಾರಣವಾಗಿದ್ದಿರಬಹುದಾದ ಮತ್ತೊಂದು ಭಾಷಾ ಸಮುದಾಯದ ಮತ್ತು ಸನ್ನಿವೇಶಗಳ ಅರಿಯುವಿಕೆಯಾಗಿ ಮಾರ್ಪಡುವುದು ಅನಿವಾರ್ಯವಾಗಿಬಿಡುತ್ತದೆ. ಅದನ್ನರಿಯದೆ ಇದನ್ನರಿಯುವುದು ಸಾಧ್ಯವಿಲ್ಲವಾದಂತೆ, ಇದನ್ನರಿಯದೆ ಅದನ್ನರಿಯುವುದು ಅಸಾಧ್ಯದ ಮಾತುಹ ಮತ್ತು ಆ ಸಂಗತಿಗಳು ಪ್ರತ್ಯೇಕವಾದುವಲ್ಲ. ಯಾವುದೇ ಭಾಷೆಯನ್ನಾಡುವ ಜನರು ರೂಪಿಸಿಕೊಂಡ ಬದುಕು, ಸಂಸ್ಕೃತಿ, ನಾಗರಿಕತೆ, ಮನೋಭಾವ ಮತ್ತು ಮನೋಧರ್ಮಗಳ ಚರಿತ್ರೆ ಆ ಎಲ್ಲವುಗಳ ಹಿಂದೆ ಕಾರ್ಯನಿರತವಾಗುವ ಮನಸ್ಸನ್ನು ಹೊಂದಿಕೊಂಡಿರುವಂತೆಯೇ, ಕಾಲವನ್ನು ಸರಿಗಟ್ಟಿರಬೇಕಾಗುತ್ತದೆ. ಆ ಎಲ್ಲವೂ ಕಾಲದ – ಮನಸ್ಸಿನ ಮತ್ತು ಮನುಷ್ಯ ಮನಸ್ಸಿನ ವಿವಿಧ ಅಭಿವ್ಯಕ್ತಿ ನಮೂನೆಗಳಾಗಿದ್ದಿರಬಹುದು.

ಇಲ್ಲಿ ಎದುರಾಗುವ ಶ್ರೇಷ್ಠತೆಗೆ ಸಂಬಂಧಿಸಿದ ಸಂಗತಿಗಳನ್ನು ನಿಭಾಯಿಸುವುದಾದರೂ ಹೇಗೆ? ಒಬ್ಬರಿಗೆ ಶ್ರೇಷ್ಠ ಮತ್ತು ಅತ್ಯುತ್ತಮವಾಗಿ ಕಂಡುದು ಮತ್ತೊಬ್ಬರಿಗೆ ಅದೇ ತರಹ ಕಾಣಿಸದೆಯೂ ಹೋಗಬಹುದು. ಸಾಪೇಕ್ಷತಾ ಅಂಶಗಳನ್ನು ಒಪ್ಪಿಕೊಂಡರು ಸಹ, ಎಲ್ಲರಿಗೂ ಸಮ್ಮತವಾಗುವ ಕೆಲ ಮಾನದಂಡಗಳನ್ನು ಗುರುತಿಸಿಕೊಳ್ಳದೆ ಆ ಹಾದಿಯಲ್ಲಿ ಬಹುದೂರ ಮುಂದುವರಿಯಲು ಬರುವುದಿಲ್ಲ. ಆ ಮೂಲಮಾನಗಳು ಬೇರೆಯವರಿಂದ ಎರವಲು ಪಡೆದುವಾಗಿರಬಹುದು, ಸ್ವತಃ ರೂಢಿಸಿಕೊಂಡುವಾಗಿರಬಹುದು: ಇಲ್ಲವೆ ಅವೆರಡರ ಕಲಬೆರಕೆಯಾಗಿರಬಹುದು. ಒಮ್ಮೆ ಕಂಡುಕೊಂಡ ಮೂಲಮಾನ ಮತ್ತು ಮಾನದಂಡಗಳು ವಿಶ್ವಸಾಮಾನ್ಯವಾಗಿ ಬೆಳೆದುಬಿಡುವ ರೀತಿ, ಮತ್ತು ಚಾಲ್ತಿಗೆ ಬಂದ ನಂತರ ಅವುಗಳನ್ನು ಉಳಿದವರು ಒಪ್ಪಿಕೊಳ್ಳಬೇಕಾಗಿ ಬರುವ ಸ್ಥಿತಿಯನ್ನು ಅದರ ಐತಿಹಾಸಿಕ ಹಿನ್ನೆಲೆಯೊಂದಿಗೆ ಅರಿಯುವ ಪ್ರಯತ್ನ ನಡೆಸುವುದರ ಜತೆ ಜತೆಗೆ ಅವುಗಳನ್ನು ರೂಪಿಸಿದ ಮನಸ್ಸುಗಳು ರೂಪುಗೊಂಡ ಬಗೆಯನ್ನು ಅರಿಯುವ ಪ್ರಯತ್ನ ಸಹ ಏಕಕಾಲದಲ್ಲಿ ಇಲ್ಲಿ ಜರುಗುತ್ತದೆ. ಪರಿಣಾಮವಾಗಿ, ಮನುಷ್ಯ ಜನಾಂಗ ರೂಪಿಸಿಕೊಂಡ ಸಂಸ್ಕೃತಿ ಮತ್ತು ನಾಗರಿಕತೆಯ ಮುಂದಿನ ಹಿಂದಿನ ಕತೆ ಬೇಕಾದಷ್ಟು ಪ್ರಮಾಣದಲ್ಲಿಯಾದರೂ ಇಲ್ಲಿ ತಂತಾನೇ ತೆರೆದುಕೊಳ್ಳುತ್ತಾ ಹೋಗುವುದು ಅನಿವಾರ್ಯ.

ಅನುಸರಿಸಲಾಗುವ ಈ ವಿಧಾನ ತೀರ ಸರಳವಾಗಿ ಕಂಡರೂ ಅದು ಒತ್ತಾಯಿಸುವ ಜರೂರಿನಿಂದಾಗಿ ಸಂಕೀರ್ಣವಾದುದಾಗಿಬಿಡಬಹುದು. ಕಾವ್ಯ ಪರಂಪರೆ ಮತ್ತು ಅದರ ಪ್ರಮುಖ ಧಾರೆಗಳು ಸಾಗಿ ಬಂದ ಹಾದಿಯನ್ನು ಗುರುತಿಸುವುದರ ಮುಖೇನ ಅದರಲ್ಲಿ ಅಭಿವ್ಯಕ್ತಗೊಂಡಂತೆ ಬದುಕಿನ ಎಲ್ಲ ಮುಖಗಳನ್ನು ಗ್ರಹಿಸುವ ಪ್ರಯತ್ನ ಇಲ್ಲಿ ನಡೆಯುವುದು ಕಾರಣವಿದ್ದಿರಬಹುದು. ಮೊದಲ ಬಾರಿಗೆ ಎಂಬ ಪದದ ಬಳಕೆ ಅನೇಕರಲ್ಲಿ ಕಿರಿಕಿರಿ ಉಂಟುಮಾಡಬಹುದು ಮತ್ತು ಕೆಲವರ ಹುಬ್ಬೇರಿಸುವಿಕೆಗೆ ಕಾರಣವಾಗಬಹುದು. ವಾಸ್ತವವಾಗಿ ನೋಡುವುದಾದಲ್ಲಿ, ಆ ಪದರ ಬಳಕೆ ಸಮರ್ಪಕವಲ್ಲ. ಅಥವಾ, ಅದಕ್ಕೆ ಕಾರಣ ಈ ರೀತಿ ಇರಲೂಬಹುದು: ಎಪಿಕ್‌ಗಳು ಮತ್ತಾನಂತರ ರೂಪುಗೊಂಡ ಕಾವ್ಯ ಮತ್ತು ಸಾಹಿತ್ಯ ಪರಂಪರೆ ನಿರ್ಮಿಸುವಲ್ಲಿ ಕ್ರಿಯಾಶೀಲವಾದ ಸೃಷ್ಟಿಶೀಲ ಮನಸ್ಸುಗಳು ವಿವಿಧ ಮುಖಮುದ್ರೆಗಳ ನಿರ್ಮಾಣ ಕಾಲದಲ್ಲಿ ಒಟ್ಟಾರೆ ಕಾರ್ಯನಿರತವಾಗುವ ರೀತಿಯನ್ನು ಅರಿಯುವ ಯತ್ನ ಇದಾಗಿರುವುದು ಆ ಮೋಹಕ್ಕೆ ಇಂಬು ನೀಡಿರಬಹುದು.

ಆ ತರಹದ ಪ್ರಯತ್ನವೆ ಒಂದು ರೀತಿಯಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ಕೂಡಿದ್ದು ಅದನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಅನುಮಾನಗಳು ಮೂಡಬಹುದಾದಂತೆಯೇ, ಹಲವಾರು ಸತಮಾನಗಳ ಅಂತರದಲ್ಲಿ ಹಲವಾರು ಜ್ಞಾನಶಾಖೆಗಳಲ್ಲಿ ಹಂಚಿಹೋಗಿರುವ ಹಲವಾರು ಪರಂಪರೆಗಳನ್ನು ಒಂದೇ ಪಾತಳಿಯಲ್ಲಿ ತಂದು ನೋಡುವ ಯತ್ನ ಅನೇಕರಿಗೆ ಮೆಚ್ಚಿಗೆಯಾಗದೆ ಹೋಗಲೂಬಹುದು. ಅಂತಹ ಸಮಸ್ಯೆಯನ್ನು ತನಗೂ ಹಿಂದೆ ಯುಕ್ತ ರೀತಿಯಲ್ಲಿ ನಿರ್ವಹಿಸಿದ ಎಚ್‌. ಜಿ. ವೆಲ್ಸ್‌ ಸಂದರ್ಭದಲ್ಲಿ ಅರ್ನಾಲ್ಡ್‌ ಟಾಯ್ನಬಿ ಆಡಿರುವ ಮಾತುಗಳು ಉಲ್ಲೇಖಾರ್ಹ. ಅದರಲ್ಲೂ reliving the entire life of Mankind as a single imaginative experience[1] ಎಂಬ ಬಹಳ ಮುಖ್ಯವಾದ ನುಡಿಯನ್ನು ಸ್ವಲ್ಪವೇ ಮಾರ್ಪಡಿಸುವುದರ ಮೂಲಕ ಇಲ್ಲಿ ಅನುಸರಿಸಲಾಗುವ ವಿಧಾನವನ್ನು ಒಂದೇ ಮಾತಿನಲ್ಲಿ ಹೇಳಬಹುದಾಗಿದೆ. ಆದರೆ ವ್ಯತ್ಯಾಸವಿಷ್ಟೆ : ಇಡೀ ಮಾನವ ಜನಾಂಗದ ಬದುಕು ಮತ್ತು ಸಾಧನೆಯನ್ನು single imaginative experience ಆಗಿ ಕಾವ್ಯ ಜಗತ್ತಿನ ಮೂಲಕ ಕಾಣಲು ನಡೆಸುವ ಪ್ರಯತ್ನ. ಟಿ. ಎಸ್‌. ಎಲಿಯಟ್‌, ಬಳಸುವ ಮತ್ತೊಂದು ಮಾತನ್ನು ಉದಹರಿಸುವುದರ ಮೂಲಕ ಆ ಗುರಿ ತಲುಪಲು ಅನುಸರಿಸಲಾಗುವ ವಿಧಾನ ಮತ್ತು ಮಾನದಂಡವನ್ನು ವಿವರಿಸಬಹುದಾಗಿದೆ. ತನ್ನ ನೇತೃತ್ವದಲ್ಲಿ ಹೊರಬರುತ್ತಿದ್ದ “ದಿ ಕ್ರೈಟೀರಿಯನ್‌” ಸಂಪಾದಿಸಲು ಅನುಸರಿಸಲಾದ ವಿಧಾನ ಕುರಿತು ಹೇಳುವಾಗ ಈ ಮಾತು ಬರೆಯುತ್ತಾನೆ. I should say that it was a common concern for the highest standards both of thought and of expression[2]… ಎಂಬ ವಾಕ್ಯದಲ್ಲಿ ಬರುವ highest standards both of thought and of expression, ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಅದೇ ಕೃತಿಯ ಪುಟ ೧೨೩ರಲ್ಲಿ ಶ್ರುತಪಡಿಸುವುದು ಹೀಗೆ : ….and in so far as men are capable of it, …ಅಂತಹ ಕೃತಿಗಳನ್ನು ಮಾದರಿಗಳನ್ನಾಗಿ ಸ್ವೀಕರಿಸಿ ಅವುಗಳಿಂದ ಪ್ರಣೀತವಾಗುವ ಮಾನದಂಡ ಮತ್ತು ಮೂಲಮಾನಗಳ ನೆರವಿನಿಂದ ನಿಲುಕಬಹುದಾದ ಎತ್ತರವನ್ನು ನಿಲುಕುವ ಪ್ರಯತ್ನ : ಆ ಮಾದರಿ ಮತ್ತು ಮೂಲಮಾನಗಳನ್ನು ಹುಡುಕುವಾಗ ವಹಿಸುವ ಎಚ್ಚರವೆ ಉಳಿದ ಎಲ್ಲವನ್ನು ಕೃತಿಯ ಚಲನೆ ಮತ್ತು ಹಾಸನ್ನು ನಿಯಂತ್ರಿಸುತ್ತಾ ಹೋಗುವುದು ಇಲ್ಲಿನ ಮತ್ತೊಂದು ಲಕ್ಷಣ.

ಪಶ್ಚಿಮ ಜಗತ್ತಿನ ಜನರಿಗೆ ಅತ್ಯುತ್ತಮ ಮತ್ತು ಶ್ರೇಷ್ಠವಾಗಿ ಕಂಡುದನ್ನು ಉಳಿದವರು ಅದೇ ತರಹ ಏಕೆ ಸ್ವೀಕರಿಸಬೇಕು ಎಂಬ ಪ್ರಶ್ನೆಯು, ಆರಂಭದಲ್ಲಿ ಕೇಳಲಾದ ಪ್ರಶ್ನೆಯ ಮತ್ತೊಂದು ರೂಪವೇ ಆಗಿದೆ. ಭಾಷಾ ಸಮುದಾಯವೊಂದು ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ ತಿಳಿಯಲು ಆ ಪರಿಸ್ಥಿತಿ ನಿರ್ಮಾಣವಾಗಲು ಪರೋಕ್ಷವಾಗಿಯಾದರೂ ಕಾರಣವಾಗಿರಬಹುದಾದ ಮತ್ತೊಂದು ಸಂಸ್ಕೃತಿ ಮತ್ತು ಭಾಷಾ ಸಮುದಾಯಗಳ ಹಿನ್ನೆಲೆ ಮತ್ತು ಮಹತ್ವವನ್ನು ಗುರುತಿಸಲು ಹೆಚ್ಚು ಶ್ರಮ ಹಾಗೂ ಕಾಲವನ್ನು ವ್ಯಯಿಸಬೇಕಾದುದು ಅಗತ್ಯವಾದಂತೆಯೇ, ಅದಕ್ಕೆ ಮೂಲವಾದ ಶ್ರೇಷ್ಠತೆಯ ಅಂಶಗಳನ್ನು ಹುಡುಕಲು ಇನ್ನೂ ಹೆಚ್ಚಿನ ಶ್ರಮ ಮತ್ತು ಕಾಲವನ್ನು ವಿನಿಯೋಗಿಸಬೇಕಾಗುತ್ತದೆ. ಅದಿಲ್ಲದೆ ಅನ್ವೇಷಣೆಯ ಹಾದಿಯಲ್ಲಿ ಬಹಳ ದೂರ ಸಾಗಲು ಬರುವುದಿಲ್ಲ: ರೋಗದ ಮೂಲ ತಿಳಿಯಲು ಆರೋಗ್ಯ ವಿಜ್ಞಾನವನ್ನು ಒಂದು ಹಂತದವರೆಗಾದರೂ ರೋಗವಿಜ್ಞಾನವಾಗಿ ಪರಿವರ್ತಿಸಬೇಕಾದಂತೆಯೇ, ಭಾರತದ ಭಾಷಾ ಸಮುದಾಯಗಳ ‘ಆಪತ್‌ ಸ್ಥಿತಿ’ ತಿಳಿಯಲು ‘ಸುಪ್ಪತ್ತಿನ ಸ್ಥಿತಿ’ಯಲ್ಲಿರುವ ಯುರೋಪ್‌ ಮೂಲದ ಭಾಷಾ ಸಮುದಾಯ ಮತ್ತು ಸಂಸ್ಕೃತಿಯ ಆರೋಗ್ಯದ ನಾಡಿಮಿಡಿತ ನೋಡಬೇಕಾಗುತ್ತದೆ.

ವಿಚಿತ್ರವೆಂದರೆ, ಎಲಿಯಟ್‌ ಹೇಳುವ ಚಿಂತನೆ ಮತ್ತು ಅಭಿವ್ಯಕ್ತಿಯಲ್ಲಿನ ಅತ್ಯುತ್ತಮಿಕೆ ಮತ್ತು ಶ್ರೇಷ್ಠತೆ ಒಂದು ಕಾಲದಲ್ಲಿ ಭಾರತದ್ದೂ ಆಗಿತ್ತು. ಅಂತಹ ಪರಂಪರೆ ಬೆಳೆದುಬಂದ ರೀತಿಯಲ್ಲಿನ ಹೊಂದಾಣಿಕೆ ಮತ್ತು ಸಾಮ್ಯತೆಯ ಮೂಲವನ್ನು ಗುರುತಿಸುವುದರ ಜತೆಜತೆಗೆ ಮುಂದೆ ಭಿನ್ನ ದಾರಿಯಲ್ಲಿ ಸಾಗುವಾಗ ಕಾಣಿಸಿಕೊಂಡ ಮಾರ್ಪಾಡುಗಳು ಮತ್ತು ಆ ಮೂಲ ಪರಂಪರೆಯನ್ನು ಮುಂದುವರಿಸಿಕೊಂಡು ಬರಲು ಕೆಲವರಿಗೆ ಮಾತ್ರ ಸಾಧ್ಯವಾದ ಕತೆ ಹೇಳುತ್ತಲೇ, ಇಂದಿನ ಸ್ಥಿತಿಯ ಹಿನ್ನೆಲೆ ಅರಿಯಲು ಮತ್ತು ಮುಂದಿನದರತ್ತ ಕಣ್ಣು ಹಾಯಿಸಲು ಪ್ರಯತ್ನಿಸಲಾಗಿದೆ. ಹಾಗಾಗಿ ಸಮಾನವಾಗಿದ್ದಿರಬಹುದಾದ ಮೂಲದ ಆ ಪರಂಪರೆಯಿಂದ ದೂರ ಸರಿದಿರಬಹುದಾದ ಕೆಲವರು ಕಳೆದುಕೊಂಡ ಅವಕಾಶಗಳ ಮತ್ತು ಮುಂದುವರಿಸಿಕೊಂಡು ಬಂದ ಕೆಲವರು ದಕ್ಕಿಸಿಕೊಂಡ ಸಾಧ್ಯಾಸಾಧ್ಯತೆಗಳ ಕತೆ ಇದಾಗಿ ಬಿಡುತ್ತದೆ, ಕಳೆದುಕೊಂಡ ಎಂಬುದಕ್ಕಿಂತಲು ಹೆಚ್ಚಾಗಿ ತಾವು ಬಂದ ಯುಗದ ಮಹತ್ವವನ್ನು ಅರಿತುಕೊಂಡು ಮುಂದುವರಿಯಲು ಆಗದೆ ಹೋದವರ ಕತೆ ಅದರಲ್ಲಿ ಕಾಲದ ಪಾತ್ರ ಅಥವಾ ಕಾಲನ ನಡಿಗೆಗೆ ಸ್ಪಂದಿಸಿದ ರೀತಿಯೂ ಸೇರಿಬಿಡುತ್ತದೆ ಯೂರೋಪ್‌ – ಏಷ್ಯಾ, ಪೂರ್ವ – ಪಶ್ಚಿಮ, ಉತ್ತರ – ದಕ್ಷಿಣ, ಹಿಂದು – ಮುಂದು, ಹಿನ್ನೆಲೆ – ಮುನ್ನೆಲೆ, ಕಳೆದುಹೋದ ಅಥವಾ ಇದ್ದಿರಬಹುದಾದ ಅವಕಾಶಗಳ ಪ್ರಶ್ನೆಗಳನ್ನು ಎದುರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದ ಮತ್ತು ಹೊತ್ತೇ ತೀರಬೇಕಾದ ಆ ಜವಾಬ್ದಾರಿಯನ್ನು ಮತ್ತೆ ಕಂಡುಕೊಳ್ಳುವ ಉದ್ದೇಶ : ಎಪಿಕ್‌ಗಳು ಹಾಗೂ ಅವುಗಳಿಂದ ರೂಪಿತವಾದ ಮತ್ತು ಎಲ್ಲರದ್ದೂ ಆಗಿರಬಹುದಾದ ಆ ಕತೆಯನ್ನು ಮೂಲಕ್ಕೆ ಹೋಗಿ ಅಲ್ಲಿಂದ ನಿರೂಪಿಸಲು ಪ್ರಯತ್ನಿಸಲಾಗಿದೆ.

ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಎಪಿಕ್‌ ಕವಿಗಳ ಪರಂಪರೆಯು, ಕಾಲ ಮತ್ತು ಯುಗಧರ್ಮಕ್ಕೆ ಸ್ಪಂದಿಸಿ ಅದೇ ಕಾಲವನ್ನು ರೂಪಿಸಲು ನಡೆಸಿದ ಪ್ರಯತ್ನಗಳ ಕ್ರಮಾಗತ ಬೆಳವಣಿಗೆಯನ್ನು ಗುರುತಿಸುವುದರ ಮೂಲಕ ಆ ಹಿಂದೆ ಕಾರ್ಯಪ್ರವೃತ್ತವಾಗುವ ಸೃಜನಶೀಲ ಮನಸ್ಸು ವಿಕಸನಗೊಂಡ ರೀತಿಯನ್ನು ಗಮನಿಸುವ ಪ್ರಯತ್ನ. ಹಾಗಾಗಿ ಇದು ಮನುಷ್ಯರ ಸೃಜನಶೀಲ ಮನಸ್ಸಿನ ಕಥೆಯಾದಂತೆ, ಕಾಲದ ಕತೆಯೂ ಹೌದು. ಸೃಜನಶೀಲತೆಯ ಸಾಧನೆಯ ಹಾದಿಯಲ್ಲಿ ಕೆಲವರು ಏರಿದ ಎತ್ತರದ ಮತ್ತು ಸಾಧಿಸಬಹುದಾದುದ್ದನ್ನು ಸಾಧಿಸಲಾಗದೇ ಹೋದ ಕೆಲವರ ಕತೆ. ಕಾಲನ ವಂಚನೆ ಅಥವಾ ಕೆಲ ಮನಸ್ಸುಗಳು ಗ್ರಹಿಸಲಾಗದೇ ಹೋದ ಕಾಲನ ನಡವಳಿಕೆಯ ಜತೆ ಎನ್ನಬಹುದೋ ಏನೋ! ಆ ಕಾಲನಿಗೆ ಸ್ಪಂದಿಸುತ್ತಲೇ ಅದೇ ಕಾಲವನ್ನು ಪ್ರಭಾವಿಸಲು ಸೃಜನಶೀಲ ಮನಸ್ಸುಗಳು ನಡೆಸಿದ ಪ್ರಯತ್ನಗಳ, ಅಥವಾ ತಮ್ಮನ್ನು ಸ್ಪಂದಿಸಲು ಅವಕಾಶ ನೀಡುತ್ತಲೇ ತನ್ನ ಹಾದಿಯಲ್ಲಿ ತಾನು ಸಾಗಿರಬಹುದಾದ ಕಾಲದ ಕತೆ: ಕಾಲವನ್ನು ಪ್ರಭಾವಿಸುತ್ತಿದ್ದೇವೆ ಎಂದು ಅಂದುಕೊಂಡು ಕಾಲದ ಹಾದಿಯಲ್ಲಿಯೇ ಸಾಗಿರಬಹುದಾದ ಮನುಷ್ಯ ಯತ್ನಗಳ ಕತೆಯೂ ಇದಾಗಿರಬಹುದು.

ಪರಿಣಾಮವಾಗಿ, ಸೃಜನಶೀಲ ಮನಸ್ಸು ಮತ್ತು ಕಾಲದ ಅಭಿವ್ಯಕ್ತಿ ನಮೂನೆಗಳಾದ ವಿಜ್ಞಾನ, ರಾಜಕೀಯ, ಆಧ್ಯಾತ್ಮ ಮತ್ತು ಕಲಾ ಕ್ಷೇತ್ರಗಳಲ್ಲಿನ ಆವಿಷ್ಕಾರದ ಕತೆಯ ಜತೆಗೆ ಸಾಮಾಜಿಕ, ಆರ್ಥಿಕ, ನೈತಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಇಲ್ಲಿಯ ವ್ಯಾಪ್ತಿಗೆ ಬಂದುಬಿಡುತ್ತವೆ. ಕನಸುಗಳನ್ನು ಬದುಕಿನಲ್ಲಿ ಕಾಣಲು ನಡೆಸಿದ ಹೋರಾಟ ಮತ್ತು ಹಂಬಲಗಳ ಕತೆಯೂ ಆಗಿಬಿಡುವುದರಿಂದಾಗಿ ಇದು, ಮಹತ್ವಾಕಾಂಕ್ಷೆ ಮತ್ತು ಮಹತ್ವಾಕಾಂಕ್ಷಿಗಳ ಕತೆಯೂ ಹೌದು. ಮಹತ್ವದ ಸಾಧನೆಯ ಮಾರ್ಗಗಳನ್ನು ಕಂಡುಕೊಂಡ ಕೆಲವರು ಅದೆ ಹಾದಿಯಲ್ಲಿ ಮುಂದೆ ಸಾಗಲು ಅನುಸರಿಸಿದ ಅನ್ವೇಷಣಾ ಕ್ರಮ, ಅಭಿವ್ಯಕ್ತಿ ವಿಧಾನ ಮತ್ತು ಕಲೆ, ಓದುವ ಕ್ರಮ, ಸಂವಹನ ಕುಶಲತೆ ಹಾಗೂ ಮಾತುಗಾರಿಕೆಯ ಮಾಯಾಬಜಾರದ ಕತೆಯೂ ಇಲ್ಲಿ ಬಂದು ಸೇರಿಕೊಳ್ಳುತ್ತವೆ. ಆ ಎಲ್ಲವನ್ನು ಸೃಜನಶೀಲ ಮತ್ತು ಪ್ರಯೋಗಶೀಲ ಮನಸ್ಸಿನ ವಿವಿಧ ಅಭಿವ್ಯಕ್ತಿಗಳಾಗಿ ನೋಡುವುದರಿಂದಾಗಿ, ತತ್ಸಂಬಂಧವಾದ ವಿಷಯಗಳು ಎಷ್ಟು ಬೇಕೋ ಅಷ್ಟು ಮಾತ್ರ ಚರ್ಚೆಗೆ ಬರುತ್ತವೆ. ಮತ್ತು ಆ ಯಾವುದೇ ಚರ್ಚೆ ಕಾವ್ಯ ಮತ್ತು ಸಾಹಿತ್ಯದ ಸರಹದ್ದು ಮೀರದಂತೆ ನೋಡಿಕೊಳ್ಳುವ ನಿಯಂತ್ರಣ ಗುಣ ಸದಾ ಕಾರ್ಯನಿರತವಾಗುವುದು ಇಲ್ಲಿನ ಮತ್ತೊಂದು ವಿಧಾನ. ಅದರಿಂದಾಗಿ ಇಡೀ ಕೃತಿಗೆ ದಕ್ಕುವ ಏಕಸೂತ್ರತೆ.

ಆ ಎಲ್ಲ ಅಭಿವ್ಯಕ್ತಿಗಳನ್ನು ಒಂದೇ ಸೃಜನಶೀಲ ಪ್ರವಾಹದ ವಿವಿಧ ಮುಖಗಳಾಗಿ ಕಾಣುವುದರ ಮೂಲಕ ಆ ಹಾದಿಯಲ್ಲಿ ತಲುಪಬಹುದಾದ ಎತ್ತರವನ್ನು ತಲುಪಿದವರನ್ನು ಮಾದರಿಯಾಗಿ ಸ್ವೀಕರಿಸುವುದರ ಜತೆಗೆ, ಆ ಅವಕಾಶವನ್ನು ಒಂದಲ್ಲ ಒಂದು ಕಾರಣ ಕಳೆದುಕೊಂಡವರು ಮಾತ್ರ ಇಲ್ಲಿನ ವ್ಯಾಪ್ತಿಗೆ ಬರುವ ರೀತಿಯಲ್ಲಿ ಚೌಕಟ್ಟು ರೂಪುಗೊಂಡಿದೆ. ಆ ರೀತಿ ಎತ್ತರದ ಸಾಧನೆ ಮಾಡಲು ಪೂರಕವಾಗಿ ಒದಗಿ ಬಂದಿರಬಹುದಾದ ಸಂಗತಿಗಳನ್ನು ಗುರುತಿಸುತ್ತಲೇ ಕೆಲವರು ಕಳೆದುಕೊಂಡಿರಬಹುದಾದ ಅವಕಾಶಗಳ ಕತೆಯನ್ನು ಅಷ್ಟೇ ಯಥಾರ್ಥತೆ ಮತ್ತು ಮಮಕಾರ ಮೀರಿದ ಆಪ್ತತೆಯಿಂದ ಗುರುತಿಸಬಹುದು : ಆ ರೀತಿ ಏಕೆ ಆಯಿತು ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕುವ ರೀತಿಯಲ್ಲಿ ಅನ್ವೇಷಣಾಕ್ರಮ ಸಾಗುತ್ತದೆ. ಇಲ್ಲಿನ ಪ್ರಮುಖ ಉದ್ದೇಶವೇ ಅದು.

ಯಾವುದೇ ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆ, ಕಡ ಅಥವಾ ಎರವಲು ಆಧರಿಸಿ ಬಹಳ ಕಾಲ ಉಳಿಯಲು ಬರುವುದಿಲ್ಲ. ತಮ್ಮದೇ ಆದ ಭಿನ್ನ ಭೌಗೋಳಿಕ ಹಿನ್ನೆಲೆ, ಪರಿಸರದ ವೈವಿಧ್ಯ ಮತ್ತು ಅದಕ್ಕನುಗುಣ ರೂಪುಗೊಂಡ ಬದುಕಿನ ಭಿನ್ನತೆ ಆಧಾರಿತ ಸಾಂಸ್ಕೃತಿಕ ಮತ್ತು ನಾಗರಿಕತೆಯ ಸೆಲೆ – ನೆಲೆಗಳನ್ನು ಪೋಷಿಸಿಕೊಂಡು ಬರುವ ಜವಾಬ್ದಾರಿಯನ್ನು ನಿರ್ವಹಿಸುವುದರ ಜತೆಗೆ ಮತ್ತೊಂದು ಭಾಷೆ ಮತ್ತು ಸಂಸ್ಕೃತಿಯ ಜನರೂ ಮೆಚ್ಚಿಕೊಂಡು ಅರ್ಥಪೂರ್ಣವಾಗಿ ಸ್ವೀಕರಿಸಲು ಬರುವ ಮತ್ತು ಅವರಿಗೂ ಪೂರಕವಾಗುವ ಕೃತಿಗಳನ್ನು ಸೃಷ್ಟಿಸುವ ಅತ್ಯಂತ ಕಷ್ಟದ ಜವಾಬದಾರಿಯನ್ನು ಒಟ್ಟಿಗೆ ನಿರ್ವಹಿಸಬೇಕಾಗುತ್ತದೆ. ದ್ವಿಮುಖಿ ಅಥವಾ ಇಮ್ಮುಖಿಯಾದ ಆ ಎರಡೂ ಕರ್ತವ್ಯಗಳು ಒಂದೇ ಕೃತಿಯ ಗರ್ಭದಲ್ಲಿ ಏಕಕಾಲದಲ್ಲಿ ರೂಪೊಗೊಂಡಿರಬೇಕು. ಕೊಡುವ ಮತ್ತು ಪಡೆಯುವ ಹಾಗೂ ಪಡೆಯುವ ಮತ್ತು ಕೊಡುವ ಕರ್ತವ್ಯಗಳು ಒಂದೇ ಆದವುಗಳು; ಪಡೆಯುವುದು ಏನೆಂಬುದು ಗೊತ್ತಿದ್ದವರಿಗೆ ಮಾತ್ರ ಕೊಡುವುದರ ಬೆಲೆ ಮತ್ತು ಮಹತ್ವದ ಅರಿವಿರುವಂತೆಯೇ, ಕೊಡುವುದನ್ನು ಕಲಿತವರು ಪಡೆಯುವುದನ್ನು ಕಲಿತವರಾಗಿರುತ್ತಾರೆ. ಅದಿಲ್ಲದೆ ವಿಶ್ವ, ವಿಶ್ವಸಾಮಾನ್ಯ, ಮಾನವಜನಾಂಗ, ಭಾಷೆ, ಸಂಸ್ಕೃತಿ, ವೈವಿಧ್ಯ, ಭಿನ್ನ ಭೌಗೋಳಿಕ ಹಿನ್ನೆಲೆ, ಪರಿಸರ, ಪ್ರಕೃತಿ ಮೊದಲಾದವು ಅರ್ಥಹೀನವಾದುವಾಗಿಬಿಡಬೇಕಾಗುತ್ತದೆ; ಭಾವಕೋಶ ಮತ್ತು ಜೀವಕೋಶಗಳಿಗೆ ಯಾವ ಅರ್ಥವೂ ಉಳಿದಿರುವುದಿಲ್ಲ.

ಮಹಾಭಾರತ, ರಾಮಾಯಣಗಳನ್ನು ತಾವು ರೂಢಿಸಿಕೊಂಡು ಬಂದ ಓದುವ ಕ್ರಮ ಮತ್ತು ಸಂವಹನ ಕೌಶಲ್ಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿಕೊಂಡ ಭಾರತದ ಜನರು ಅದೇ ಹಾದಿಯಲ್ಲಿ ಮುಂದುವರಿದು ಕಾಳಿದಾಸ, ಪಂಪ ಮೊದಲಾದ ಅಕ್ಷರ ಸಂಸ್ಕೃತಿಯ ಸಮರ್ಥ ಪ್ರತಿನಿಧಿಗಳನ್ನು ಆ ವ್ಯಾಪ್ತಿಗೆ ತಂದುಕೊಳ್ಳುವುದರ ಮುಖೇನ ಬದಲಾದ ಸನ್ನಿವೇಶ ಮತ್ತು ಪರಿಸ್ಥಿತಿಗೆ ಅನುಗುಣ ಅವುಗಳನ್ನು ಹೊಸ ಅರ್ಥದೊಡನೆ ಹೊಸ ಪರಿಸರದಲ್ಲಿ ಮತ್ತೆ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಮೌಖಿಕ ಪರಂಪರೆಯಿಂದ ಅಕ್ಷರ ಸಂಸ್ಕೃತಿಗೆ ಸಾಗಿ ಬಂದ ರೀತಿಯಲ್ಲಿಯೇ ಅಲ್ಲಿಂದ ಕ್ರಮವಾಗಿ ಮುಂದುವರಿಯಲು ಪಶ್ಚಿಮ ಜಗತ್ತಿನ ಜನರಿಗೆ ಸಾಧ್ಯವಾದುದೇ ಅವರು ಗಳಿಸಿದ ಹಿರಿಮೆಗೆ ಪೂರಕವಾ ಗಿಒದಗಿ ಬಂದಿರಬಹುದಾದರೆ, ಜನಸಾಮಾನ್ಯರು ಮತ್ತು ಮಹತ್ವದ ಸಾಧನೆ ತರುವ ತಿಳಿವಳಿಕೆ ನಡುವಿನ ಅಂತರ ಕುಗ್ಗಿಸುವ ಉದ್ದೇಶದಿಂದ ರೂಪಿಸಿಕೊಳ್ಳಲಾಗುವ ‘ಸಂವಹನ ಕುಶಲತೆ’ ಮತ್ತು ಲೌಕಿಕ ‘ಬದುಕಿನ ಜಾಣ್ಮೆ’ಗಳನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುವ ವಿಚಾರದಲ್ಲಿ ಪೂರ್ವ ಜಗತ್ತು ತೋರಿದ ಉದಾಸೀನ ಅವರ ದೌರ್ಬಲ್ಯವಾಗಿ ಪರಿಣಮಿಸಿತೆ?

ಅಂತಹ ಜವಾಬ್ದಾರಿಯನ್ನು ನಿರ್ವಹಿಸಲು ಪಶ್ಚಿಮದವರಿಗೆ ಮಾತ್ರ ಸಾಧ್ಯವಾದುದನ್ನು ಕುರಿತು ಚಿಂತಿಸುತ್ತಲೇ, ಉಳಿದವರಿಗೆ ಅದು ಸಾಧ್ಯವಾಗದೆ ಹೋದ ಅಥವಾ ತಮಗೆ ಒದಗಿಬಂದ ಅವಕಾಶದ ಸಾಧ್ಯತೆಗಳನ್ನು ಅವರು ಗಮನಕ್ಕೆ ತಂದುಕೊಳ್ಳಲಾಗದೆ ಹೋದ ಸಂಗತಿಯ ಹಿನ್ನೆಲೆಗಳನ್ನು ಆ ಜತೆಜತೆಗೆ ನೋಡುವ ಪ್ರಯತ್ನ ಇಲ್ಲಿ ಸಾಗುತ್ತದೆ. ಹಾಗಾಗಿ ಸಂಸ್ಕೃತಿ ಮತ್ತು ನಾಗರಿಕತೆ ನಿರ್ಮಾಣದ ಪರ್ವಕಾಲದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸಿದವರು ಮತ್ತು ನಿರ್ವಹಿಸಲಾಗದೆ ಹೋದವರು ಎಂಬ ಎರಡು ಗುಂಪುಗಳು ಕಾಣುತ್ತವೆ. ವಿಚಿತ್ರವೆಂದರೆ, ಆ ರೀತಿ ಸಲ್ಲಬೇಕಾದ ಜವಾಬ್ದಾರಿಯನ್ನು ಸಲ್ಲಿಸಿದ ಮತ್ತು ಸಲ್ಲಿಸದೆ ಹೋದ, ಎರಡೂ ಕಾವ್ಯ ಜಗತ್ತುಗಳ ಪರಿಸ್ಥಿತಿ ಇಂದು ಒಂದೆ ಆಗಿದ್ದು ಒಟ್ಟಾರೆ ಕಾವ್ಯ ಪರಂಪರೆ ಮತ್ತು ಪರಿಸರ ಎದುರಿಸುತ್ತಿರುವ ಬಿಕ್ಕಟ್ಟಿನಲ್ಲಿನ ಹೊಂದಾಣಿಕೆಯನ್ನು ಬಹಳ ಎಚ್ಚರದಿಂದ ಗುರುತಿಸುವುದು ಇಲ್ಲಿ ಎದುರಾಗುವ ಕೌತುಕಗಳಲ್ಲಿ ಮತ್ತೊಂದು; ಕವಲು ದಾರಿ ಅಥವಾ ದಿಕ್ಕೆಟ್ಟುಹೋದ ಆಸಕ್ತಿಗಳು ಎಂದು ಬೇಕಾದರೂ ಆ ಸ್ಥಿತಿಯನ್ನು ಬಣ್ಣಿಸಬಹುದಾಗಿದೆ. ಕೆಲವು ವಿವರಗಳಲ್ಲಿ ಹೊರತು ಉಳಿದಂತೆ ಕನ್ನಡ ಕಾವ್ಯ ಪರಂಪರೆಯನ್ನೇ ಹೋಲುವ ಭಾರತದ ಅನೇಕ ಭಾಷಾ ಸಮುದಾಯಗಳು ಎದುರಿಸುತ್ತಿರುವ ಸ್ಥಿತಿ, ವಿಶ್ವಮಟ್ಟದಲ್ಲಿ ಒಟ್ಟಾರೆ ಕಾವ್ಯ ಪರಂಪರೆ ಎದುರಿಸುತ್ತಿರುವ ಆತಂಕಕಾರಕ ಬಿಕ್ಕಟ್ಟಿನ ಜತೆ ಹೊಂದಿಕೊಂಡಿರುವುದು.

ಈ ಹಿನ್ನೆಲೆಯಲ್ಲಿ ಬರೆಯಲಾದ ಕನ್ನಡದ ಕೃತಿಯೊಂದು ‘ಮುಂದೇನು’ ಎಂಬ ಪ್ರಶ್ನೆಯ ತುದಿಯವರೆಗೂ ಎಟುಕಿಸುವ ಸಾಹಸಕ್ಕೆ ಮುಂದಾಗುವುದು ಕೃತಿಯ ಬಗೆಗಿನ ಅಹಂ ಅಥವಾ ಪ್ರತಿಷ್ಠೆಗಿಂತಲೂ ಹೆಚ್ಚಾಗಿ, ಅಭಿವ್ಯಕ್ತಿಯ ಹಾದಿಯಲ್ಲಿ ಕನ್ನಡ ಭಾಷೆ ತಲುಪಿದ ಪ್ರೌಢಿಮೆ ಮತ್ತು ನೈಪುಣ್ಯತೆಯ ಬಗೆಗಿನ ಅರಿವಿನಿಂದ ಬಂದ ವಿನಯದ ಮಾತೂ ಹೌದು. ಹೆಮ್ಮೆ ಪಡುವಂಥದ್ದು ಅಲ್ಲಿ ಏನೂ ಉಳಿದಿಲ್ಲ ಎಂಬುದನ್ನು ಕಂಡುಕೊಂಡ ನಂತರ, ಯಾವುದೇ ಅಹಂ ಉಳಿಯಲಾರದು.[3]

ನ್ಯೂಟನ್‌ ತರಹ ಮಹತ್ವದ ಸಿದ್ಧಾಂತವೊಂದನ್ನು ಆವಿಷ್ಕರಿಸುವ ‘ಮಹಾಘನ ಕಾರ್ಯ’ ಮಾಡಲಾಗಿದೆ ಎಂದೇನು ಆ ಮಾತಿನ ಅರ್ಥವಲ್ಲ. ಎಲ್ಲರನ್ನೂ ಕಾಡುವ ಮತ್ತು ಕಾಡಲೇಬೇಕಾದ ಹಾಗೂ ಇಲ್ಲಿಯೇ ಸುತ್ತಮುತ್ತ ಆಡಿಕೊಂಡಿರುವ ಕೆಲ ಪ್ರಶ್ನೆಗಳಿಗೆ ಈ ಮೊದಲೇ ಹೇಳಿದಂತೆ ತೀರ ಸರಳ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ; ಕನ್ನಡದ ಮೂಲಕ, ಕನ್ನಡದ ಮನಸ್ಸೊಂದು ಅಲ್ಲಿ ನಿರತವಾಗುವುದು. ಆ ರೀತಿಯ ಹೊಸತನಕ್ಕೆ ಇಂಬು ನೀಡುವ ಹಿನ್ನೆಲೆ ಕನ್ನಡಕ್ಕೆ ಇರುವುದಾದಲ್ಲಿ ಅದರ ಮೂಲ ಯಾವುದಿರಬಹುದು ಎಂಬ ಕುತೂಹಲವನ್ನು ಅದರ ಸರಿಯಾದ ಹಿನ್ನೆಲೆಯೊಂದಿಗೆ ಇಟ್ಟು ನೋಡುವ ಪ್ರಯತ್ನದಲ್ಲಿನದು. ಜತೆಗೆ ಅದು ಮುಂದುವರಿಯುವ ಅವಕಾಶವಿದೆಯೇ ಎಂಬ ಪ್ರಶ್ನೆಯನ್ನು ಅದರ ಎಲ್ಲ ಅನುಮಾನಗಳೊಂದಿಗೆ ನಿರ್ವಹಿಸಲು ನೋಡುವುದು.

ಹಾಗಾಗಿ ತನ್ನತನ ಮತ್ತು ತಾನು ಬಂದ ಹಿನ್ನೆಲೆಯನ್ನು ಗುಮಾನಿಯಿಂದ ನೋಡುವ ಪರಿಸ್ಥಿತಿ ಯಾರಿಗೂ ಬರಬಾರದು. ಅದರಿಂದ ತಪ್ಪಿಸಿಕೊಳ್ಳಲು ಹೋಗಿ, ಇಂಗ್ಲಿಷ್‌ ಭಾಷೆಯನ್ನು ತಮ್ಮ ಬರವಣಿಗೆ ಮತ್ತು ಚಿಂತನೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡ ಭಾರತದ ಅನೇಕ ಬರಹಗಾರರು ತಲುಪಿರುವ ಎತ್ತರ ಮತ್ತು ಪರಿಸ್ಥಿತಿ, ಭಾರತೀಯ ಭಾಷೆಗಳ ಬರಹಗಾರರು ತಲುಪಿದ ಎತ್ತರ ಮತ್ತು ಮನಸ್ಸಿನ ನೆಲೆಗಿಂತ ಬಹಳ ಭಿನ್ನವಾಗಿರುವಂತೆಯೇನೂ ಕಾಣುವುದಿಲ್ಲ: ಬೇರೆ ದಿಕ್ಕಿನಲ್ಲಿ ಸಾಗಿಬಂದರೂ ಕೊನೆಯಲ್ಲಿ ತಲುಪುವ ಪರಿಸ್ಥಿತಿ ಮತ್ತು ಲುಕುವ ಎತ್ತರ ಒಂದೇ ಆಗಿರುವಂತೆ ಕಾಣುವುದು ಇಲ್ಲಿ ಎದುರಾಗಬೇಕಾದ ಕೌತುಕಗಳಲ್ಲಿ ಮತ್ತೊಂದು.

ನಿಜವಾದ ಅರ್ಥದಲ್ಲಿ ಹೇಳುವುದಾದಲ್ಲಿ, ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯಲ್ಲ; ನುಸಂಧಾನ, ಸಂಶೋಧನೆ ಅಥವಾ ಅವಲೋಕನ, ಅನ್ವೇಷಣೆ ಮೊದಲೇ ಅಲ್ಲ; ಆ ಎಲ್ಲವನ್ನು ಒಳಗೊಂಡು ಅವುಗಳ ವ್ಯಾಪ್ತಿಯನ್ನು ಮೀರಿ, ಸಾಗಿಬಂದ ಈ ಹಾದಿಯನ್ನು ಹೊತ್ತುಕೊಂಡು ಮುಂದೆ ತುಳಿಯಬೇಕಾದ ಅಥವಾ ದಕ್ಕಬಹುದಾದ ಕನಸುಗಳ ಹಂಬಲ. ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಮೀಮಾಂಸೆ, ಚಿಂತನೆ, ಚರಿತ್ರೆ, ಮಾತುಕತೆ, ಚರ್ಚೆ, ಸಂವಹನ ಕಲೆ, ಮಂಥನ ಮೊದಲಾದ ಎಲ್ಲವೂ ಆದ ಮತ್ತು ಅವೆಲ್ಲವುಗಳಿಗಿಂತಲೂ ಹೆಚ್ಚಾಗಿ, ಸೃಜನಶೀಲತೆಯ ಹಾದಿಯಲ್ಲಿ ಅರ್ಥಪೂರ್ಣತೆಯ ಸಾರ್ಥಕತೆಗಾಗಿ ಏಗಬಯಸುವ ಭಾರತದ ಮನಸ್ಸೊಂದರ ಆತ್ಮಕಥೆ ಅಥವಾ ಸುದೀರ್ಘ ನಿಟ್ಟುಸಿರು; ಸೃಜನಶೀಲ ಬದುಕಿನ ಕಲೆಗಾಗಿ ಹಾತೊರೆಯುವ ಮನಸ್ಸೊಂದರ ಹುಡುಕಾಟ.

ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಥವಾ ವಾದವಿವಾದಗಳಿಗೆ ಈ ಕೃತಿ ಅತೀತವಾದುದು ಎಂದೇನೂ ಆ ಮಾತಿನ ಒಡಂಬಡಿಕೆಯಲ್ಲ. ಅದು ಏನಿದ್ದರೂ ಮೂಲಮಾನ ನೀಡಿದ ಮಾದರಿ ಕೃತಿಗಳ ಜತೆ ಹೊರತು, ಬರಹದ ರೂಪದಲ್ಲಿ ಕೃತಿಗಿಳಿಸಿದ ಕೈಗಳು ಮತ್ತು ಚಿಂತಿಸಿದ ಮನಸ್ಸಿನ ಜತೆ ವೈಯಕ್ತಿವಾಗಿ ಜಗಳ ತೆಗೆಯುವಂಥದ್ದು ಏನೂ ಇರಲಾರದು. ಒಪ್ಪಬಹುದು ಅಥವಾ ಬಿಡಬಹುದು. ಅನುಸರಿಸಲಾದ ವಿಧಾನ ಕುರಿತಂತೆ ಭಿನ್ನ ನಿಲುವು ಬೆಳೆಯುವುದು ಬೇರೆ ವಿಚಾರ. ಆದರೆ ಅದರಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ ಎಂಬ ಮಾತನ್ನು ವಿನಯ ಸಹಜದಿಂದ ದಾಖಲಿಸಬೇಕು. ಆ ಎಲ್ಲ ಕಾರಣ ಭಾಷಾ ಬಳಕೆ ಮತ್ತು ತುಂಡನ ಕ್ರಮದಲ್ಲಿ ಬಹಳ ಎಚ್ಚರ, ಪ್ರಶ್ನೆ ಕೇಳುವ ಮತ್ತು ಅರಿತುಕೊಳ್ಳಲು ಯತ್ನಿಸುವ ಹಂಬಲದ ರೂಪದಲ್ಲಿ ವಿಷಯ ಮಂಡನೆ : ಅದು ವಿನಾ, ಯಾವುದೇ ಅಭಿಪ್ರಾಯಗಳು ತೀರ್ಪು ಅಥವಾ ತೀರ್ಮಾನದ ಧಾಟಿಯಲ್ಲಿ ಹೊರಬೀಳದಂತೆ ಆದಷ್ಟೂ ಶ್ರಮಿಸಬೇಕಾದುದು ಅನಿವಾರ್ಯ.

ಪ್ರಮುಖವಾಗಿ ಸಂಸ್ಕೃತ ಸಾಹಿತ್ಯ ಓದಿಕೊಂಡು ಆ ಹಿನ್ನೆಲೆಯಿಂದ ಕನ್ನಡ ಓದಬಯಸುವವರು ಒಂದು ವರ್ಗದ ಜನರಾದರೆ, ಇಂಗ್ಲಿಷ್‌ ಮತ್ತಿತರ ಪಶ್ಚಿಮ ಜಗತ್ತಿನ ಸಾಹಿತ್ಯ ವಲಯದ ಪ್ರಭಾವಕ್ಕೆ ಒಳಗಾಗಿರುವವದು ಮತ್ತೊಂದು ಗುಂಪು; ಈ ನಡುವೆ ಕನ್ನಡವನ್ನೇ ನಂಬಿಕೊಂಡಿರುವ ಮತ್ತೊಂದು ಗುಂಪಿನ ಜನರಿದ್ದಾರೆ. ಸಂಸ್ಕೃತ ಪ್ರದೇಶದಿಂದ ಬಂದ ಜನರ ಪ್ರಭಾವ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದ್ದು (ಒಂದು ತರಹದಲ್ಲಿ ಅದೆಲ್ಲ, ಹಿಂದಿನ ತಲೆಮಾರಿನ ಕತೆ). ಆದರೆ ಪಶ್ಚಿಮ ಜಗತ್ತಿನ ಪ್ರಭಾವ ವಲಯದ ವ್ಯಾಪ್ತಿಗೆ ಸೇರುತ್ತಿರುವವರ ಸಂಖ್ಯೆ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಾ ನಡೆದಿದೆ. ವರ್ಗ – ಜಾತಿ – ವರ್ಣ, ಲಿಂಗ, ಕಸುಬು ವಿವಿಧ ಸಿದ್ಧಾಂತ ಮತ್ತು ದೃಷ್ಟಿಕೋನ ಆಧರಿಸಿ ನೋಡುವ ಆಸಕ್ತಿಗಳು ಅದೇ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ತೊಡಗಿರುವುದು. ಪರಿಣಾಮವಾಗಿ, ನವೋದಯ ಕಾಲದಲ್ಲಿ ಇದ್ದ ಒಮ್ಮನ್ನಸ್ಸು ಇಂದು ಉಳಿದಿಲ್ಲ. ಆ ಜತೆಗೆ ಹೆಚ್ಚುತ್ತಿರುವ ಪರಸ್ಪರ ಅನುಮಾನ. ವ್ಯತ್ಯಾಸಗಳು ಮತ್ತು ಭಿನ್ನಾಭಿಪ್ರಾಯಗಳು ಇರಬೇಕು. ಅದು ಜೀವಂತಿಕೆಯ ಲಕ್ಷಣ. ಆದರೆ ಪ್ರಭಾವ ವಲಯಗಳ ಒತ್ತಡದಿಂದುಂಟಾಗುವ ಅನುಮಾನ ಮತ್ತು ಗುಮಾನಿಗಳ ಜತೆಗೆ ಸ್ವಂತಿಕೆಯ ಅಭಾವವು ಸೇರಿಕೊಳ್ಳುವುದಾದಲ್ಲಿ ಸೃಷ್ಟಿಯಾಗುವ ವಾತಾವರಣದ ವಿಷಮತೆಯನ್ನು ಊಹಿಸಲಾಗುವುದಿಲ್ಲ. ನಿಜವಾದ ಸ್ವಂತಿಕೆಯ ಕಾರಣಗಳಿಗಾಗಿ ಉಂಟಾಗಬಹುದಾದ ಭಿನ್ನಾಭಿಪ್ರಾಯಗಳನ್ನು ಮೀರುತ್ತಲೆ ಒಟ್ಟಿಗೆ ಬದುಕುವುದು ಮತ್ತು ಪರಸ್ಪರ ಗೌರವದಿಂದ ಇರುವುದು ಅಂತಹ ಕಷ್ಟವಾಗಲಾರದು.

ಅಂತಹ ಪ್ರಯತ್ನ ಇದಾಗಿರುವುದಾದಲ್ಲಿ ಉತ್ತಮ ಬದುಕಿನಲ್ಲಿ ದೊರಕಬಹುದಾದ ಕನಿಷ್ಠ ಸಂತೋಷ ಮತ್ತೊಂದಿರಲಾರದು.

ಜತೆಗೆ, ಆ ಸ್ವಾಭಿಮಾನದ ಮಿತಿ ಏನೆಂಬುದನ್ನು ಕಂಡುಕೊಳ್ಳುವುದರ ಮೂಲಕ ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗಾಗಿ.

ದಟ್ಟ ಭಾಷಾ ಪ್ರಜ್ಞೆಯ ಕೃತಿ, ಮೊದಲು ಬಂದುದೇ ಕನ್ನಡದಲ್ಲಿ : ಇಡೀ ಭಾರತದಲ್ಲಿಯೇ ಪ್ರಾಯಶಃ ಇಡೀ ಜಗತ್ತಿನಲ್ಲಿಯೇ – ಮೊದಲ ಬಾರಿಗೆ ಸ್ಫೋಟಗೊಂಡ ಸಮಾನತಾ ಮನೋಭಾವದ ಆಂದೋಲನವೊಂದು ದಟ್ಟ ಭಾಷಾ ಪ್ರಜ್ಞೆಯ ರೂಪ ಧರಿಸಿ ಅವತರಿಸಿರುವುದು ಸಹ ಕನ್ನಡದಲ್ಲಿಯೇ. ಅಂಥ ಕೃತಿ ಮತ್ತು ಆಂದೋಲನವನ್ನು ಈ ಜಗತ್ತಿನ ಬೇರಾವುದೇ ಭಾಷೆಯಲ್ಲಿಯೂ ಕಾಣಲಾಗುವುದಿಲ್ಲ ಎಂಬುದು ಹೆಮ್ಮೆಯ ವಿಚಾರವಾದರೂ, ಅದು ಹೆಮ್ಮೆಗಿಂತಲೂ ಹೆಚ್ಚಾಗಿ ನೋವಿನ ಸಂಗತಿಯಾಗಿ ಮಾರ್ಪಡಬೇಕಾಯಿತು. ವಿವಿಧ ಹಂತಗಳಲ್ಲಿ ಕ್ರಿಯಾಶೀಲವಾಗುವ ಭಾಷೆಯ ಬಗೆಗಿನ ಪ್ರೇಮ, ಅಭಿಮಾನ ಮತ್ತು ಪ್ರಜ್ಞೆ. ಬೇರೆಬೇರೆಯಾಗಿ ಕಾಣಬಹುದಾದರೂ ಆ ಎಲ್ಲವನ್ನೂ ಒಳಗೊಂಡ ಮನಸ್ಸೊಂದು ಅಂತಿಮವಾಗಿ ವಿಶ್ವಪ್ರಜ್ಞೆಯಲ್ಲಿ ಒಂದಾಗಿಬಿಡುವುದೇ ಭಾಷಾ ಮನಸ್ಸು ಎಂಬುದನ್ನು ಗ್ರೀಕ್‌ ಮತ್ತು ಲ್ಯಾಟಿನ್‌ ನಂತರ ತೋರಿಸುವ ಪ್ರಯೋಗ ಮೊದಲು ಆರಂಭವಾದುದೇ ಕನ್ನಡದಲ್ಲಿ ಎಂದು ಕಾಣುತ್ತದೆ. ಕಾಳಿದಾಸನವರೆಗಿನ ಸಂಸ್ಕೃತ ಕೂಡ ಆ ಮಾತಿಗೆ ಅತ್ಯುತ್ತಮ ಉದಾಹರಣೆ. ಅನಂತರದ ಶತಮಾನಗಳಲ್ಲಿ ಆ ಸಾಧ್ಯತೆಗಳನ್ನು ಬಾಚಿಕೊಳ್ಳುವ ಅವಕಾಶ ಹೆಚ್ಚಾಗಿ ದೊರಕಿದುದು ಇಂಗ್ಲಿಷ್‌ ಮೊದಲಾದ ಯುರೋಪ್‌ ಮೂಲದ ಭಾಷೆಗಳಿಗೆ.

ಆ ಸಾಧ್ಯತೆ ಕಂಡುಕೊಂಡಂತೆ ಕಾಣುವ ಕನ್ನಡದ ಮನಸ್ಸಿಗೆ ಆ ದಿಕ್ಕಿನಲ್ಲಿ ಮುಂದುವರಿಯುವ ಬೆಳವಣಿಗೆ ಏಕೆ ಸಾಧ್ಯವಾಗಲಿಲ್ಲ? ಸಾಧ್ಯವಾಗಿದ್ದಲ್ಲಿ ಭಾರತದ ಮತ್ತು ಆ ಮೂಲಕ ಇಡೀ ಜಗತ್ತಿನ ಇತಿಹಾಸದ ಗತಿ ಕೆಲ ಪ್ರಮಾಣದಲ್ಲಿಯಾದರೂ ಬದಲಾಗುವುದು ಅನಿವಾರ್ಯವಾಗುತ್ತಿತ್ತೆ? ಮತ್ತು ಆ ಸೂಚನೆಗಳನ್ನು ಕನ್ನಡದ ಮೊದಲ ಕೃತಿ ಮತ್ತು ಆಂದೋಲನದಲ್ಲಿಯೇ ಕಾಣಬಹುದಾಗಿದೆ ಎಂಬುದನ್ನು ಕಂಡುಕೊಳ್ಳಲಾಗಲಿಲ್ಲ ಏಕೆ? ಇತ್ಯಾದಿ ಪ್ರಶ್ನೆ ಮತ್ತು ಸಮಸ್ಯೆಯ ವಿವರಗಳು ಈ ಕೃತಿಯ ಹಂದರದೊಳಗೆ ಅದರ ಹಲವು ಆಯಾಮಗಳ ಪೈಕಿ ಒಂದಾಗಿ ಸಹಜ ತೆರೆದುಕೊಳ್ಳುತ್ತಾ ಹೋಗುವುದು ಇಲ್ಲಿನ ಮತ್ತೊಂದು ದಿಗ್ಭ್ರಮೆ.

ಅಭಿಮಾನ, ಭಾಷಾಪ್ರಜ್ಞೆ ಮತ್ತು ತನ್ನತನ ಎಂಬುವು ಹಾಸ್ಯಾಸ್ಪದ ಇಲ್ಲವೇ ಲೇವಡಿಗೆ ವಸ್ತುವಾಗುತ್ತಿರುವ ಈ ದಿನಗಳಲ್ಲಿ ಆ ಕುರಿತು ಮಾತನಾಡುವುದೇ ಅನೇಕರಿಗೆ, ಗಂಭೀರ ಪರಿಗಣನೆಗೆ ಅರ್ಹವಾದ ಸಂಗತಿಯಾಗಿ ತೋರದೆಯೂ ಹೋಗಬಹುದು; ಭಾಷಾಪ್ರಜ್ಞೆ ಮತ್ತು ಮನಸ್ಸು ಇಲ್ಲದ ಕಡೆ ನಿಜವಾದ ಸೃಜನಶೀಲತೆ ಸಾಧ್ಯವಿಲ್ಲ: ಅಪೇಕ್ಷಣೀಯ ಪ್ರಮಾಣದ ಭಾಷಾ ಮನಸ್ಸು ಇಲ್ಲವಾದ ಕಡೆ, ನೀರದ್‌ ಚೌಧುರಿ ಮತ್ತು ಸಲ್ಮಾನ್‌ ರಶ್ದಿಯಂತಹ ಲೇಖಕರು ಹುಟ್ಟಲು ಸಾಧ್ಯವೇ ವಿನಾ ಹೋಮರ್‌, ವರ್ಜಿಲ್‌, ಸೊಪೊಕ್ಲೆಸ್‌, ಕಾಳಿದಾಸ, ಷೇಕ್ಸ್‌ಪಿಯರ್‌, ಗಯಟೆ, ಟಾಲ್‌ಸ್ಟಾಯ್‌, ಯೇಟ್ಸ್‌ ಅಥವಾ ಎಲಿಯಟ್‌ನಂತಹ ಕವಿಗಳು ಬರುವುದು ಸಾಧ್ಯವಿಲ್ಲ ಎಂಬುದು ಇಂದಿಗೂ ಸತ್ಯ. ವಿ. ಎಸ್‌. ನೈಪಾಲ್‌ ಅಥವಾ ರಶ್ದಿಯಂತವರು ಬರಬಾರದು ಎಂಬುದು ಆ ಮಾತಿನ ಒಳಾರ್ಥವಲ್ಲ. ಅವರ ಪಾತ್ರ ಮತ್ತು ಸ್ಥಾನವೇ ಬೇರೆ.

ಕನ್ನಡ ಮೊದಲಾದ ಭಾಷೆಗಳು ಎದುರಿಸುತ್ತಿರುವ ಆತಂಕದ ಸ್ಥಿತಿ ಕೆಲವರಲ್ಲಾದರೂ ಆ ಮನಸ್ಸಿನ ದಟ್ಟತೆಯನ್ನು ಹೆಚ್ಚಿಸುತ್ತಿರುವುದು ಅದರ ಪರಿಣಾಮವೇ ಆಗಿದೆ; “ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು” ಹಾಗೂ “ತೇಲಲೀಯದು ಗುಂಡು, ಮುಳುಗಲೀಯದು ಬೆಂಡು” ಎಂಬ ಬಸವಣ್ಣನವರ ಪ್ರತಿಮೆಗಳು ಕನ್ನಡ – ಮನಸ್ಸು ಎದುರಿಸುತ್ತಿರುವ ಆತಂಕದ ಸನ್ನಿವೇಶವನ್ನು ಗಮನಿಸಿ ಬರೆದಂತಿವೆ. ಆ ಕಾರಣ ಭಾರತದಲ್ಲಿ ಈವರೆಗೆ ಬಂದುದೆಲ್ಲ ಜಳ್ಳು ಎಂಬ ತೀರ್ಮಾನಕ್ಕೆ ಬಂದು ಆತ್ಮನಿಂದನೆ ಅಥವಾ ಹಳಹಳಿಕೆಗೆ ಪಕ್ಕಾಗುವುದು ಅತ್ಯಂತ ಅಪಾಯಕಾರಿಯಾಗಬಹುದಾದಂತೆಯೇ, ಮುಂದೆ ಉಜ್ವಲ, ಭವಿಷ್ಯ ಕಾದಿದೆ ಎಂಬ ತರದೂದಿಗೆ ತುತ್ತಾಗುವುದು ಇನ್ನೂ ಹೆಚ್ಚು ಅಪಾಯಕಾರಿ : ಆ ಎರಡೂ ವೈರುದ್ಧ ಜತೆಜತೆಗೆ ಒಡಮೂಡಲು ಕಾರಣವಾದ ಹಿನ್ನೆಲೆ ಮತ್ತು ಆ ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನಲ್ಲಿ ಸರ್ವಶ್ರೇಷ್ಠ ಎಂದು ಕಂಡುಕೊಂಡುದನ್ನು ಮುಂದುವರಿಸಿಕೊಂಡು ಹೋಗುವುದರಕ್ಕಿಂತಲೂ ಹೆಚ್ಚಾಗಿ ಬಿಟ್ಟುಕೊಡಬೇಕಾಗಿ ಬಂದಿರುವ ಸ್ಥಿತಿಯನ್ನು ಗಮನಿಸಬೇಕಾಗುತ್ತದೆ.

ಸಾಮೂಹಿಕ ಅಭೀಪ್ಸೆ ಮತ್ತು ವ್ಯಕ್ತಿಗತವಾದ ಮಹಾತ್ವಾಕಾಂಕ್ಷೆ ಮೇಳವಿಸಿದಾಗ ಅಥವಾ ಸಾಮೂಹಿಕವಾದ ಮಹತ್ವಾಕಾಂಕ್ಷೆ ವ್ಯಕ್ತಿರೂಪದ ಅಭೀಪ್ಸೆಯಾಗಿ ಏಕೀಭವಿಸಿದಾಗ ಘಟಿಸಬಹುದಾದ ಪ್ರತಿಭೆ: ಆ ಕಾರಣವೇ ಯಾವುದೇ ಸಾಧನೆಯನ್ನು ವ್ಯಕ್ತಿಯೊಬ್ಬರ ಹೆಸರಿನಲ್ಲಿ ಗುರುತಿಸುವುದು ನಾಮಮಾತ್ರವಾದಂತೆ, ಭಾಷಾ ಸಮುದಾಯವೊಂದರ ಹಿರಿಮೆಯನ್ನು ಅವರಾಡುವ ಭಾಷೆಯ ಹೆಸರಿನಲ್ಲಿ ಕಾಣುವುಉದ ಅದರ ಮೇಲ್ಪದರ ಮಾತ್ರ. ಆ ಒಳಗೆ ಹರಿಯುವ ಕಾಲ ಮತ್ತು ವಿಶ್ವಮನಸ್ಸಿನ ಸಮಾನ ತಂತುಗಳನ್ನು ಅರಿತುಕೊಂಡು ಮೀರಿ ಬೆಳೆಯುವ ಸಾಮರ್ಥ್ಯ ಬರಲಿ ಎಂಬ ಸದಾಶಯದಿಂದ ಈ ಕೃತಿಯನ್ನು ಕನ್ನಡದ ಮುಖೇನ ಭಾರತೀಯರಿಗೆ ಒಪ್ಪಿಸಲಾಗುತ್ತಿದೆ.

ಏಕೆಂದರೆ, ಇಲ್ಲಿ ನಿರೂಪಿತವಾಗುವ ಸಮಸ್ಯೆ ಮತ್ತು ಆತಂಕಗಳನ್ನು ಗಮನಕ್ಕೆ ತಂದುಕೊಳ್ಳದೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬ ಆತ್ಮವಿಶ್ವಾಸ ಯಾರಿಗಾದರೂ ಇದ್ದಲ್ಲಿ ಅಥವಾ ಬಂದಿರುವುದಾದಲ್ಲಿ ; ಅಂಥವರು ಹುಟ್ಟಾ ಜೀನಿಯಸ್‌ ಇರಬೇಕು – ಉಳಿದವರ ಬಗ್ಗೆ ಮಾತನಾಡುವುದು ಅಷ್ಟು ಒಳ್ಳೆಯದಲ್ಲ.

 

[1]Arnold Toynbee, A Study of History, The First Abridged One – Volume Edition, Oxford University Press, London, ೧೯೭೨, ಪುಟ ೩೨

[2]Notes towards the Definition of Culture, Faber and Faber, ೧೯೯೨, ಪುಟ ೧೧೭

[3]ಇಲ್ಲಿ ಬರುವ ಸಂಗತಿಗಳನ್ನು ಕಾವ್ಯ, ಕಾದಂಬರಿ ಅಥವಾ ನಾಟಕದ ರೂಪದಲ್ಲಿ ಅನ್ವೇಷಿಸಲು ಸಾಧ್ಯವಾಗಿದ್ದಲ್ಲಿ, ಅದು ಬೇರೆ ವಿಚಾರ