ಹಲವಾರು ಸಾಧ್ಯತೆಗಳ ಮಾಸ್ತಿಯವರ ‘ಕಾಕನಕೋಟೆ’ ಅತ್ಯಂತ ವಿಶಿಷ್ಟ ಕೃತಿ. ಆ ತರಹದ ವಸ್ತು ಕನ್ನಡದ ಮತ್ತೊಬ್ಬ ಕವಿಗೆ ದಕ್ಕಿರುವ ಸಾಧ್ಯತೆ ಬಹಳ ಕಡಿಮೆ. ಕೇವಲ ವಸ್ತುವಿನ ಆಯ್ಕೆಯ ದೃಷ್ಟಿಯಿಂದ ನೋಡುವುದಾದಲ್ಲಿ, ಅದೊಂದು ಆಧುನಿಕ ರಾಮಾಯಣಗಳ; ‘ಅಭಿಜ್ಞಾನ ಶಾಕುನ್ತಲಂ’ನ ಮತ್ತೊಂದು ರೂ. ವನವಾಸಿ ಕಾಕ, ಊರ ಹೆಗ್ಗಡೆ ಮತ್ತು ಮಹಾರಾಜ ಇತ್ಯಾದಿ ಮೂರು ಸ್ತರಗಳಲ್ಲಿ ಆ ನಾಟಕ ಪ್ರವಹಿಸುತ್ತದೆ; ಊರ ಕುರುಬರಿಂದ ಎದುರಾದ ತೊಂದರೆ ನಿವಾರಿಸಿಕೊಳ್ಳಲು ಕಾಡುಕುರುಬರ ಯಜಮಾನನೊಬ್ಬ ತನಗೆ ದೂರದ ಪರಿಚಯವಿದ್ದ ರಾಜರಿಂದ ರಕ್ಷಣೆ ಪಡೆಯುವುದು ಆ ನಾಟಕದ ವಸ್ತು.

ಭಾರತ ಮಾತ್ರವಲ್ಲ, ಇಡೀ ಜಗತ್ತು ಇಂದು ಆ ವಿಭಜನೆಯಿಂದ ತುಂಬಿದೆ: ಕಾಕ; ಊರ ಹೆಗ್ಗಡೆ ಮತ್ತು ಮಹಾರಾಜ ಒಂದು ದೇಶದೊಳಗಿನ ವಿವಿಧ ಜನಾಂಗಗಳ ಸ್ಥಿತಿಗತಿಗಳನ್ನು ಪ್ರತಿನಿಧಿಸುವಂತೆ, ಈ ಜಗತ್ತಿನ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೂ ಅವರಾಗಿ ಬಿಡುತ್ತಾರೆ. ಪ್ರಧಾನವಾಗಿ ರಾಜಕೀಯ ಕೃತಿಯಾದ ಆ ನಾಟಕದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಮಾನವ ಪ್ರಗತಿಯ ಇತಿಹಾಸ ಎಷ್ಟು ನಾಜೂಕಾಗಿ ಅಂತರ್ಗತವಾಗಿದೆ ಎಂದರೆ, ಅದರ ಅಂಗರಚನೆಯನ್ನು ಸ್ವಲ್ಪವೇ ಬದಲಿಸುವುದರ ಮೂಲಕ ಅದನ್ನು ಅತ್ಯಂತ ಸಂಕೀರ್ಣಗೊಳಿಸುವ ಎಲ್ಲಾ ಸಾಧ್ಯತೆಗಳಿದ್ದವು. ಅಂತಹ ಅಪಾರ ಸಾಧ್ಯತೆಗಳ ಆ ನಾಟಕ ಮಹಾರಾಜರ ಪ್ರವೇಶದೊಡನೆ ಸುಖಾಂತಗೊಳ್ಳುತ್ತದೆ.

ಕಾಕನ ಸಮಾಜ ಮತ್ತು ಅವನ ಸ್ಥಿತಿಯಲ್ಲಿ ಇಂದಿಗೂ ಉಳಿದಿರುವ ದೇಶ ಮತ್ತು ಸಮಾಜಗಳ ಪರಿಸ್ಥಿತಿ ಆ ಪ್ರಕಾರ ಇಷ್ಟರಲ್ಲಿ ಸುಧಾರಿಸಬೇಕಿತ್ತು. ಬದಲಾಗಿ, ಇನ್ನೂ ಹದಗೆಡುತ್ತಾ ಸಾಗಿದ್ದು ಕಾಕನ ಸಮಾಜ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಮತ್ತು ಅವುಗಳ ನಡುವೆ ಯಾವುದೇ ತರಹದ ಸಾಮರಸ್ಯದ ಸಾಧ್ಯತೆ ಕಡಿಮೆಯಾಗುತ್ತಿದ್ದು ಹೆಚ್ಚುತ್ತಿರುವ ಕಂದಕ ಹೆಚ್ಚುತ್ತಲೆ ಇದೆ. ಅಂದರೆ ‘ಕಾಕನಕೋಟೆ’ ನಾಟಕ ಈ ಜಗತ್ತಿನ ಪ್ರಮುಖ ಸಮಸ್ಯೆಯೊಂದನ್ನು ಬೀಜರೂಪದಲ್ಲಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ ಎಂದಾಯಿತು. ಅಂತಹ ಜಗತ್‌ ಗಾತ್ರದ ಸಮಸ್ಯೆಗೆ ಮಾಸ್ತಿಯವರು ತಮ್ಮ ನಾಟಕದಲ್ಲಿ ಆಶಿಸುವ ರೀತಿಯಲ್ಲಿ ಪರಿಹಾರ ದೊರಕುವುದು ಸಾಧ್ಯವಾಗಿದ್ದಲ್ಲಿ ಬದುಕಿನ ರೂಪವೇ ಇಷ್ಟರಲ್ಲಿ ಬದಲಾಗಿ ಹೋಗಬೇಕಾಗುತ್ತಿತ್ತು. ಈ ಜಗತ್ತಿನ ಯಾವುದೇ ಮಹತ್ವದ ನಾಟಕಗಳಿಗೂ ಸಮನಾಗಿ ನಿಲ್ಲುವ ಮತ್ತು ಹೊಸ ಒಳನೋಟ ನೀಡುವ ಸಾಧ್ಯತೆ ಪಡೆದಿರುವ ‘ಕಾಕನಕೋಟೆ’ ನಾಟಕದ ವಸ್ತು, ಬ್ರೆಕ್ಟ್‌ನಂತ ನಾಟಕಕಾರನ ಕೈಗೂ ದೊರಕಿರುವ ನಿದರ್ಶನ ಇಲ್ಲ. ಅಂಥ ವಸ್ತುವನ್ನು ಶೋಧಿಸುವಲ್ಲಿ ಅಸಾಧಾರಣ ಪ್ರತಿಭೆ ಮೆರೆದಿರುವ ಮಾಸ್ತಿಯವರು ಎಡವಿರುವುದಾದರೂ ಹೇಗೆ?

‘ಕಾಕನಕೋಟೆ’ ಅವರ ಎರಡೂ ಕಾದಂಬರಿಗಳ ಮುಂದುವರಿದ ಭಾಗ, ಅಥವಾ ಮತ್ತೊಂದು ಅಧ್ಯಾಯ. ಚೆನ್ನಬಸವನಾಯಕನನನ್ನು ನುಂಗಲು ಹೈದರಾಲಿ ಕುತಂತ್ರ ರೂಪಿಸಿದರೆ, ಅವನ ಮಗ ಟಿಪ್ಪುವಿನ ಆಕ್ರಮಣ ಎದುರಿಸಿಯೂ ಉಳಿದಿದ್ದ ಕೊಡಗು ರಾಜಮನೆತನದ ಚಿಕವೀರರಾಜೇಂದ್ರನನ್ನು ನುಂಗಲು ಬ್ರಿಟಿಷರು ನೆಪಕ್ಕಾಗಿ ಕಾದಿರುತ್ತಾರೆ. ನಾಗರಿಕತೆಯ ಸಂಪರ್ಕದಿಂದ ದೂರವುಳಿದೂ, ಆ ಎಲ್ಲ ನಾಗರಿಕತೆಗಳ ತಾಯಿಬೇರಾದ ತನ್ನ ಸಂಸ್ಕೃತಿಯ ವಿಶಿಷ್ಟತೆ ಉಳಿಸಿಕೊಳ್ಳಲು ಹೆಣಗುವ ವನವಾಸಿ ಕಾಕನ ದುಃಸ್ಥಿತಿ ಅವರ ಎರಡು ಮಹತ್ವಾಕಾಂಕ್ಷೆಯ ಕಾದಂಬರಿಗಳ ಸಮಾಜದ ದುಃಸ್ಥಿತಿಗಿಂತ ಹೆಚ್ಚು ಆಪತ್ಕಾರಿಯಾದುದು. ಏಕೆಂದರೆ; ಆತನ ಸಮಾಜಕ್ಕೆ ಅತಿಕ್ರಮಣಕಾರಕ ಶಕ್ತಿಗಳ ವಿರುದ್ಧ ಹೋರಾಡುವ ಯಾವುದೇ ತಂತ್ರ ಅಥವಾ ಕುತಂತ್ರಗಳ ಅರಿವೇ ಇರುವುದಿಲ್ಲ. ಆ ಕಾರಣವೇ ಆತ, ರಾಜನ ಜತೆಗಿನ ನೆಪ ಮಾತ್ರದ ಪರಿಚಯವನ್ನೇ ರಕ್ಷಣಾ ವ್ಯವಸ್ಥೆಯಾಗಿ ಬಳಸಬೇಕಾಗುತ್ತದೆ.

ಅಂದಿನ ಕಾಕನಿಗೆ ಆ ಆಸರೆಯಾದರೂ ಇತ್ತು. ಬರುಬರುತ್ತ ಕಾಕನಂತವರ ಪರಿಸ್ಥಿತಿ ಇನ್ನೂ ಹದಗೆಡುತ್ತಿದ್ದು, ಆತನ ಅಸ್ತಿತ್ವವನ್ನೇ ನಿರಾಕರಿಸುವ ಹಾದಿಯಲ್ಲಿ ಜಗತ್ತು ಸಾಗುತ್ತಿದೆ. ಮತ್ತು ಬಡರಾಷ್ಟ್ರಗಳ ಶ್ರೀಮಂತರ ವೈಭವ, ಕಾಕನಂತವರ ಮತ್ತು ಅದರ ಪರಿಸರದ ಅಸ್ತಿತ್ವದ ಅವಕುಂಚನದಿಂದ ಬಂದುದಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸುಖಾಂತ್ಯ, ಸರಳತೆಯ ಪ್ರತೀಕವಲ್ಲವೇ? ಸಂಕೀರ್ಣತೆ ಪಡೆದುಕೊಳ್ಳದ ಸರಳತೆಗೆ ಅರ್ಥವಿದೆಯೇ? ನಾಟಕಕಾರರಾಗಿಯೂ ಅಷ್ಟೇ ಮುಖ್ಯರಾಗುವ ಮಾಸ್ತಿಯವರು, ಕಾರ್ನಾಡರ ರೀತಿ ಪರಿಣಾಮವನ್ನುಂಟು ಮಾಡಲು ಸಾಧ್ಯವಾಗಲಿಲ್ಲ ಏಕೆ? ಕಾರ್ನಾಡರಿಗೆ ಅನುಕೂಲವಾಗಿ ಪರಿಣಮಿಸಿದ ಸಂಗತಿಗಳಾವುವು?

ನವ್ಯರಿಗೆ ಸಮಾನವಾದ ಕೆಲ ಗುಣಲಕ್ಷಣಗಳನ್ನು ಪಟ್ಟಿ ಮಾಡುವುದು ಒಳ್ಳೆಯದು. ಅಡಿಗರ ಮಹತ್ವಾಕಾಂಕ್ಷೆ ಕೂಡ ಸೀಮಿತವಾದುದು. ಅವರ ಮೇಲೆ ಪ್ರಭಾವ ಬೀರಿದ ಲೇಖಕ ಮತ್ತು ಕವಿಗಳಾರು – ಯೇಟ್ಸ್‌ ಮತ್ತು ಎಲಿಯಟ್‌ ಹೊರತು – ಯುರೋಪಿನ ಸಾಹಿತ್ಯ ಸಂದರ್ಭದಲ್ಲಿ ಮಹತ್ವದ ಲೇಖಕರೆಂದು ಪರಿಗಣಿತರಾದವರೇನಲ್ಲ. ಕಮೂವಿನ ಖ್ಯಾತಿ ನಿಂತಿರುವುದೇ ‘ಪ್ಲೇಗ್‌’ ಕಾದಂಬರಿಯ ಮೇಲೆ. ಆತನ ಮತ್ತೊಂದು ಮಹತ್ವದ ಕೃತಿಯಾದ ‘ಕಲಿಗುಲ’, ಉತ್ತಮ ಕೃತಿಯಷ್ಟೆ, ಇಬ್ಸನ್‌, ಜಾರ್ಜ್‌ ಬರ್ನಾಡ್‌ ಷಾ ಮತ್ತು ಬ್ರೆಕ್ಟ್‌ ನಂತರ ಯುರೋಪಿನಲ್ಲಿ ಮಹತ್ವದ ನಾಟಕಕಾರರು ಬಂದಿಲ್ಲ. ಕಾರ್ನಾಡರ ಮೇಲೆ ಪ್ರಭಾವ ಬೀರಿರುವ ಗುಮಾನಿಗೆ ತುತ್ತಾದ ಯುಜೀನ್‌ ಓನೀಲ್‌ ಮೊದಲಾದವರು ಅತ್ಯಂತ ಮಹತ್ವದ ನಾಟಕಕಾರರೇನಲ್ಲ.

ತಾವು ಹೇಳಬೇಕಾದುದನ್ನು ಚುರುಕಾಗಿ ತೀವ್ರತೆ ಮತ್ತು ಲವಲವಿಕೆಯಿಂದ ಹೇಳುವುದು ನವ್ಯರ ಗುಣ. ಅವರ ಯಶಸ್ವಿ ಕೃತಿಗಳಾವೂ ೧೦೦ – ೧೫೦ ಪುಟಗಳ ಮಿತಿಯನ್ನು ಮೀರುವುದಿಲ್ಲ. ಅವರು ಸಾಧಿಸಿದ ಯಶಸ್ಸಿಗೆ ಆ ತರಹದ ಸೀಮಿತ ದೃಷ್ಟಿಕೋನವೂ ಒಂದು ಕಾರಣವಾದರೆ, ಕೆರಳಿಸುವ ವಸ್ತುವಿನ ಆಯ್ಕೆಗೆ ಗಮನ ನೀಡುವುದು ಮತ್ತೊಂದು. ಅದಷ್ಟೆ ನಾಟಕಕಾರನಿಗೆ ಬೇಕಾದ ಮಹತ್ವ ತಂದುಕೊಡಲು ಸಾಕಾಗುವುದಿಲ್ಲ ಎಂಬುದು ಕಾರ್ನಾಡರಿಗೆ ಗೊತ್ತಿರದ ಸಂಗತಿ ಏನಲ್ಲ. ತಾವು ಆರಿಸಿಕೊಂಡ ವಸ್ತುವನ್ನು ನಾಟಕವಾಗಿಸುವ ಕಲೆ ಕಾರ್ನಾಡರಿಗೆ ಕರಗತವಾಗಿದೆ ಎಂದರೂ ಒಂದೆ, ನಾಟಕೀಯ ಸಾಧ್ಯತೆಗಳಿಂದ ತುಂಬಿರುವ ವಸ್ತುವಿನ ಆಯ್ಕೆಗೆ ಅವರು ಹೆಚ್ಚಿನ ಗಮನ ನೀಡುತ್ತಾರೆ ಎಂದರೂ ಒಂದೆ.

ಕಾರ್ನಾಡರ ಯಶಸ್ವಿ ಕೃತಿಗಳನ್ನು ಹೆಸರಿಸುವಾಗ ‘ಯಯಾತಿ’, ‘ತುಘಲಕ್‌’ ಮತ್ತು ‘ಹಯವದನ’ ನಾಟಕಗಳನ್ನು ಪಟ್ಟಿ ಮಾಡುವುದು ವಾಡಿಕೆ. ಕನ್ನಡದ ಯಾವುದೇ ಲೇಖಕರಿಗೂ ದಕ್ಕದ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಮತ್ತು ರಂಗದ ಮೇಲೆ ಅತ್ಯಂತ ಯಶಸ್ಸು ಸಾಧಿಸಿದ ‘ತುಘಲಕ್‌’ ನಾಟಕವನ್ನು ‘ನೆಹರು ಯುಗದ ಕೃತಿ’ ಎಂದೇ ಬಣ್ಣಿಸಲಾಗುತ್ತದೆ. ನೆಹರು ಯುಗ ಎಂಬುದು ಬೇರೆ ಇಲ್ಲ, ಗಾಂಧಿಯುಗಕ್ಕೆ ಅದೊಂದು ಪ್ರತಿಕ್ರಿಯೆಯಷ್ಟೆ.

‘ದೊರೆ ಈಡಿಪಸ್‌’ಗೆ ಹೊಯ್‌ಕೈಯಾಗಿ ನಿಲ್ಲಬಲ್ಲ ವಸ್ತು ಭಾರತದ ಪುರಾಣಗಳಲ್ಲಿ ದೊರಕುವುದಾದಲ್ಲಿ ಅದು ಯಯಾತಿ – ಪುರು ಕತೆ; ಯಯಾತಿ ಮತ್ತು ಪುರು ಒಂದು ಮುಖವಾದರೆ, ಶರ್ಮಿಷ್ಠೆ ಮತ್ತು ದೇವಯಾನಿ ಮತ್ತೊಂದು ಆಯಾಮ; ಆ ಪುರಾಣದ ಕೇಂದ್ರವಾದ ಶುಕ್ರಾಚಾರ್ಯ ಮತ್ತವನ ಶಿಷ್ಯ ಕಚ ಮತ್ತೊಂದು ರೂಪ. ಯಯಾತಿ ಮತ್ತು ಪುರು ಕೇವಲ ಮುಪ್ಪು ಮತ್ತು ಯೌವನಕ್ಕೆ ಸಂಕೇತವಲ್ಲ. ಅದಕ್ಕೂ ಮೀರಿದ ಪರಂಪರೆ ಮತ್ತು ಮುಂದಿನ ತಲೆಮಾರನ್ನು ಅವರು ಪ್ರತಿನಿಧಿಸುತ್ತಾರೆ. ಅದೇ ತರಹ ಶರ್ಮಿಷ್ಠೆ ಮತ್ತು ದೇವಯಾನಿಯರು ಕೇವಲ ಪ್ರತಿಷ್ಠೆ ಮತ್ತು ಅಹಂಗೆ ಮಾತ್ರ ಸಂಕೇತವಲ್ಲ, ಆಳುತನ ಮತ್ತು ಯಜಮಾನಿಕೆಯನ್ನು ಅವರು ಪ್ರತಿನಿಧಿಸುತ್ತಾರೆ. ದಾಸೀಪಟ್ಟವನ್ನು ಒಪ್ಪಿಕೊಳ್ಳುವುದರ ಮೂಲಕವೇ ಆಧಿಪತ್ಯ ಸ್ಥಾಪಿಸಲು ಪ್ರಯತ್ನಿಸುವ ಮನುಷ್ಯರ ಆಂತರಿಕ ತುಡಿತಕ್ಕೆ ಶರ್ಮಿಷ್ಠೆ ಉದಾಹರಣೆ. ಶರ್ಮಿಷ್ಠೆ ದಾಸಿ ಅಲ್ಲವೇ ಅಲ್ಲ, ದಾಸೀರೂಪದ ರಾಣಿ. ಅಂದರೆ ರಾಣಿಯಾದರೂ ರಾಣಿತನವನ್ನು ಅನುಭವಿಸಲಾಗದ ಆಂತರಿಕ ಅಭದ್ರತೆಗೆ ದೇವಯಾನಿ ಸಂಕೇತವಾಗಿ ನಡೆದುಹೋಗುವುದು, ರಾಣಿಯಾಗಿದ್ದು ರಾಣಿತನ ಅನುಭವಿಸಲಾಗದ ದೇವಯಾನಿಯ ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಶರ್ಮಿಷ್ಠೆಯನ್ನು ಬಯಸುವ ಮೂಲಕ ತನ್ನಲ್ಲಿ ಅಂತರ್ಗತವಾಗಿ ಹುದುಗಿರುವ ಆಳುತನ ಅಥವಾ ಸೇವಕ ಗುಣವನ್ನು ಕಳೆದುಕೊಳ್ಳಲಾಗದ ಮೂಲ ಸ್ಥಿತಿಗೆ ಉದಾಹರಣೆಯಾಗಿಯೂ ಸಹ ಯಯಾತಿ ನಿಲ್ಲುತ್ತಾನೆ.

ತಿಳುವಳಿಕೆ ಅಥವಾ ಅರಿವಿನಿಂದ ಬರುವ ಒಣಪ್ರತಿಷ್ಠೆ ಮತ್ತು ಲಾಭಕೋರತನಕ್ಕೆ ಶುಕ್ರಾಚಾರ್ಯ ಮತ್ತು ಕಚ ಸೂಕ್ತ ಉದಾಹರಣೆ. ಅರಿವು ಎಂಬ ಪದದ ಬದಲು ತಂತ್ರಜ್ಞಾನ ಎಂಬ ಮಾತನ್ನು ಉಪಯೋಗಿಸುವುದಾದಲ್ಲಿ! ಪುರು ಪಡೆಯಬಯಸುವ ಮುಪ್ಪು ಸಾವಿಗೆ ಹತ್ತಿರವಾದುದು ಮತ್ತು ಆ ಬದಲಾವಣೆ ತಾತ್ಕಾಲಿಕ ಎಂಬ ಸಂಗತಿಯನ್ನು ವಿನಿಮಯ ಮಾಡಿಕೊಡುವ ಸಂದರ್ಭದಲ್ಲಿಯೇ ಅವರಿಬ್ಬರೂ ಒಪ್ಪಿಕೊಂಡಿರುತ್ತಾರೆ. ಆ ಅರಿವು ಆ ಇಬ್ಬರಿಗೂ ಇರುತ್ತದೆ. ಯಯಾತಿ ತಾತ್ಕಾಲಿಕವಾಗಿ ಯೌವನ ಪಡೆಯಬಯಸಿದರೆ ಪುರು ಅದನ್ನು ತಾತ್ಕಾಲಿವಾಗಿ ಸ್ವೀಕರಿಸಬೇಕಾಗುತ್ತದೆ. ಅದರಾಚೆಯ ಸಾವು ಮಾತ್ರ ಖಾಯಂ ಎಂಬ ಅರಿವಿನಿಂದ ಇಬ್ಬರೂ ವಂಚಿತರಾಗಿಲ್ಲದಿರುವುದು ಅವರ ವ್ಯಕ್ತಿತ್ವದ ಒಂದು ಅಂಗ.

ಆ ವಸ್ತುವಿಗಿರುವ ಆ ಎಲ್ಲ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅನ್ವೇಷಿಸಲು ಕಾರ್ನಾಡರಿಗೆ ಸಾಧ್ಯವಾಗಿದೆಯೇ?

ತನಗೆ ದತ್ತವಾಗಿ ಬಂದಿದ್ದ ಆದರ್ಶ, ಒಕ್ಕಲುತನ ಮತ್ತು ತಿಳುವಳಿಕೆಯನ್ನು ಮರೆಸುವಷ್ಟು ಕ್ರೂರಿಯೂ, ಐಲು ಮತ್ತು ಹುಚ್ಚು ದೊರೆಯೂ ಆಗಿದ್ದ ಮಹಮದ್‌ – ಬಿನ್‌ – ತುಘಲಕ್‌ನಲ್ಲಿ ಪ್ರಧಾನವಾಗಿ ಕಾಣಿಸಿಕೊಂಡ ಕೆಲ ವಿಚಿತ್ರ ನಡವಳಿಕೆ ಮತ್ತು ಗುಣಲಕ್ಷಣಗಳು ಎಲ್ಲ ಕಾಲದವಾಗಿದ್ದು, ಎಲ್ಲರಲ್ಲೂ ಒಂದಲ್ಲ ಒಂದು ಪ್ರಮಾಣದಲ್ಲಿ ಇರಬಹುದಾದರೂ. ಇತಿಹಾಸದ ವಕ್ರಗಳಿಗೆ ಮತ್ತು ವಿಚಿತ್ರ ಸನ್ನಿವೇಶದ ಸೃಷ್ಟಿಯಾದ ತುಘಲಕ್‌, ನೆಹರೂ ಪ್ರತಿನಿಧಿಯಾಗಲು ಬರುತ್ತದೆಯೇ? ನೆಹರು ಮತ್ತು ಆ ಯುಗದ ದೌರ್ಬಲ್ಯಗಳು ಅಥವಾ ಕುಂದುಕೊರತೆಗಳು ಏನೇ ಆಗಿದ್ದಿರಬಹುದು.

ಕಮೂನ ‘ಕಲಿಗುಲ’ಕ್ಕಿರುವ ಇತ್ಯಾತ್ಮಕತೆಯನ್ನು ಗಮನಿಸುವುದು ಸೂಕ್ತ. ಜನಪರ ದೃಷ್ಟಿಕೋನ ಇಲ್ಲದ ಚಕ್ರಾಧಿಪತ್ಯದ ಅವನತಿ ಕಾಲದಲ್ಲಿ ಕಲಿಗುಲನಂಥ ದುಷ್ಟ, ಕ್ರೂರಿ ಮತ್ತು ವಿಚ್ಛಿದ್ರಕಾರಿ ವ್ಯಕ್ತಿತ್ವವುಳ್ಳ ನಾಯಕ ಬರಲು ಸಾಧ್ಯ ಎಂಬ ಉದಾರವಾದಿ ಅಥವಾ ಸಮಾಜವಾದಿ ದೃಷ್ಟಿಕೋನದಿಂದ ಪ್ರಸ್ತುತದಲ್ಲಿ ಕಲಿಗುಲ ಮತ್ತವನ ಕಾಲವನ್ನು ಅರ್ಥೈಸಲು ನೋಡುವ ಪ್ರಯತ್ನ, ಆ ನಾಟಕಕ್ಕೆ ಮಹತ್ವ ತಂದುಕೊಟ್ಟಿದೆ. ಇಂದಿನ ಯುಗದ ಜನರಿಗೆ ಅದೊಂದು ತರಹದ ಎಚ್ಚರಿಕೆ. ಕಲಿಗುಲ ಮತ್ತು ಆತನನ್ನು ನೀಡಿದ ಕಾಲ ಅಳಿಸಿಹೋಗಿಲ್ಲ, ಬದಲಾಗಿ ಎಲ್ಲರಲ್ಲೂ ಹಂಚಿಕೆಯಾಗಿದ್ದಾನೆ ಎಂಬ ಸತ್ಯದ ಅನಾವರಣ ಅಲ್ಲಿ ನಡೆದಿದೆ.

ಅವರ ಮತ್ತೊಂದು ಯಶಸ್ವಿ ನಾಟಕ ಎಂದು ಪರಿಗಣಿಸಲಾದ ‘ಹಯವದನ’ ಕೂಡ ಅಂತಾದ್ದೇ ವಿಚಿತ್ರ ಸನ್ನಿವೇಶದಲ್ಲಿ ಸಿಕ್ಕು ಬೀಳುತ್ತದೆ, ತಂತ್ರದ ಅಬ್ಬರ ನಾಟಕದ ವಸ್ತುವನ್ನು ಮಸಳಿಸುವಷ್ಟು ಹೆಚ್ಚಾಗಿರುವುದರ ಕಾರಣವೆ ಅದು ರಂಗನಿರ್ದೇಶಕರಿಗೆ ಮತ್ತು ನಟರಿಗೆ ಅಚ್ಚುಮೆಚ್ಚಿನ ಕೃತಿಯಾಗಿರಲಿಕ್ಕೂ ಸಾಕು. ಅವರ ಇತ್ತೀಚಿನ ‘ಅಗ್ನಿ ಮತ್ತು ಮಳೆ’ : ಯಜ್ಞ ಯಾಗಾದಿ ಇತ್ಯಾದಿ ಪರಂಪರಾಗತ ವೃತ್ತಿಯಲ್ಲಿ ತೊಡಗಿರುವ ಪುರೋಹಿತ ಬ್ರಾಹ್ಮಣರೆಲ್ಲ ‘ಅಶುದ್ಧ’ ವ್ಯಕ್ತಿಗಳು; ರಂಗಕಲೆ, ನಾಟಕ ಇತ್ಯಾದಿಗಳಲ್ಲಿ ತೊಡಗಿರುವ ತೊಡಗಿರುವ ಲೌಕಿಕ ಬ್ರಾಹ್ಮಣರಲ್ಲೇ ಇನ್ನೂ ಅಲ್ಪಸ್ವಲ್ಪವಾದರೂ ಋಜುತ್ವ ಉಳಿದುಕೊಂಡಿದೆ ಎಂಬುದನ್ನು ಪ್ರತಿಪಾದಿಸಲು ಆ ನಾಟಕ ಬರೆದಂತಿದೆ ಎಂದು ಸಹ ಅನ್ನಿಸಬಹುದು.

ನವ್ಯಕಾಲದ ಉತ್ತಮ ಸಾಧನೆಗಳ ಪೈಕಿ ಒಂದೆಂದು ಪರಿಗಣಿಸಲಾದ ಪಿ. ಲಂಕೇಶರ ‘ಸಂಕ್ರಾಂತಿ’ ನಿಂತಿರುವುದೇ ಅತ್ಯಾಚಾರದ ಸುತ್ತ: ಹರಿಜನ ಶರಣ ಮತ್ತು ಬ್ರಾಹ್ಮಣ ಯುವತಿಯ ನಡುವಿನ ಪ್ರೀತಿ ಅತ್ಯಾಚಾರ ಎಂದು ಪರಿಗಣನೆಗೊಳಗಾಗುವುದು ಮತ್ತು ಅದು ಪಡೆದುಕೊಳ್ಳುವ ತಿರುವಿನ ಮೇಲೆ ನಾಟಕ ನಿಂತಿದೆ. ಅಪಾರ ಸಾಧ್ಯತೆಯ ಅಂಶವೊಂದನ್ನು ‘ಸಂಕ್ರಾಂತಿ’ ಹುದುಗಿಕೊಂಡಿದ್ದು ಆ ಪ್ರಶ್ನೆ ಕೆಳಜಾತಿ ಮತ್ತು ಕೆಳವರ್ಗಗಳಿಂದ ಬರುವ ವ್ಯಕ್ತಿಗಳ ಬದಲಾವಣೆಗೆ ಸಂಬಂಧಿಸಿದ್ದಾಗಿದೆ. ಆ ಮಾತು ಮಹಿಳೆಯರಿಗೂ ಅನ್ವಯಿಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಗಂಡಸರಿಗೆ ಸಮನಾಗಿ ಅಥವಾ ಅವರಿಗೂ ಮೀರಿ ಸಾಧನೆ ಮಾಡಬಯಸುವ ಮಹಿಳೆಯರು ಪುರುಷರನ್ನು ಅನುಸರಿಸಬೇಕೇ ಅಥವಾ ಮಹಿಳೆಯಾಗಿ ಉಳಿದೂ ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆಯ ತರಹವೆ, ದಲಿತರು ದಲಿತರಾಗಿ ಉಳಿದುಕೊಂಡೇ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶರಣನಾಗಿ ಪರಿವರ್ತನೆಗೊಂಡ ದಲಿತನ ಜತೆಗಿನ ತನ್ನ ಹಿಂದಿನ ಸ್ನೇಹಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸುವುದರ ಮುಖೇನ ಆ ನಾಟಕ ಎತ್ತಿ ಹಿಡಿಯಬಯಸುವ ದೃಷ್ಟಿಕೋನ ಮತ್ತು ಮನೋಧರ್ಮ ಬೇರೆ ಆಗಿರುವಂತೆ ತೋರುತ್ತದೆ: ದಲಿತರನ್ನು ಅವರಿದ್ದ ಸ್ಥಿತಿಯಲ್ಲಿಯೆ ಸ್ವೀಕರಿಸಬೇಕು ಎಂಬ ಔದಾರ್ಯ ಕೂಡ ಬದಲಾವಣೆಯ ವಿರೋಧಿಯಾಗಿ ನೇತ್ಯಾತ್ಮಕವಾಗಿಬಿಡುವ ಅಪಾಯವೇ ಹೆಚ್ಚು.

ಇತಿಹಾಸ ಮತ್ತು ಪುರಾಣದ ಕತೆಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವ ಪ್ರಯೋಗವನ್ನು ನವ್ಯರು ತರುವ ಕಾಲಕ್ಕೆ ‘ಶ್ರೀ ರಾಮಾಯಣದ ದರ್ಶನಂ’ನಲ್ಲಿ ಕುವೆಂಪು ಮಾಡಿಯಾಗಿತ್ತು. ‘ಶೂದ್ರ ತಪಸ್ವಿ’ ಅಂತಹದ್ದೇ ಮತ್ತೊಂದು ಪ್ರಯತ್ನ, ಅಲ್ಲಿನ ಭಾಷೆ ಹೊರತು. ಹಸಿಸೌದೆಯಿಂದ ಒಲೆ ಹಚ್ಚಲು ಪ್ರಯತ್ನಪಡುತ್ತಿದ್ದ ಸೀತೆಯ ಗೋಳು ನೋಡಲಾಗದ ಲಕ್ಷ್ಮಣ ಒಣಕಟ್ಟಿಗೆ ತಂದು ತನ್ನ ಹೆಂಡತಿ ಊರ್ಮಿಳೆಯನ್ನು ಸ್ಮರಿಸಿದ ಕೂಡಲೇ ದಿಗ್ಗನೆ ಹತ್ತಿಕೊಳ್ಳುವ ದೃಶ್ಯ “ಕುಣಿದಳುರಿಯ ಊರ್ವಶಿ” ಎಂಬ ಅಧ್ಯಾಯದಲ್ಲಿ ಬರುತ್ತದೆ, “ನನಗೆ ಮೀರಿರ್ದುದಾ ಧೂಮದೃಶ್ಯಂ”! ಎಂಬ ಮಾತು ಕಂದ ಮೂಲ ತಿಂದು ವನವಾಸ ಕಳೆದ ರಾಮಸೀತೆಯರು ಕುವೆಂಪು ರಾಮಾಯಣದಲ್ಲಿ ಸ್ವತಃ ಬೇಯಿಸಿಕೊಂಡು ಸಹ್ಯಾದ್ರಿ ಭಾಗದಲ್ಲಿ ಅಲೆಯುವ ಮಲೆನಾಡು ರಾಮಸೀತೆಯರಾಗಿ ಪರಿವರ್ತನೆಗೊಳ್ಳುತ್ತಾರೆ – ಮಹಾಭಾರತದ ಅರ್ಜುನ ಪಂಪನ ಕೈಯಲ್ಲಿ ಅರಿಕೇಸರಿಯಾಗಿ ಪರಿವರ್ತನೆಗೊಂಡಂತೆ. ಜತೆಗೆ ಹಾಳುಹಂಪೆ, ಸಹ್ಯಾದ್ರಿ, ‘ಏಕಳುವೆ ತೇಜಸ್ವಿ’ ಇತ್ಯಾದಿ ಪ್ರಯೋಗಗಳು.

ಅರುವತ್ತರ ದಶಕದಲ್ಲಿ ಬರೆಯಲಾದ ‘ಮಲೆಗಳಲ್ಲಿ ಮದುಮಗಳು’ ವಿವೇಕಾನಂದರ ಸಮಕಾಲೀನ ಮಲೆನಾಡ ಸಮಾಜದ ಚಿತ್ರಣ ನೀಡಬಯಸಿದರೆ, ೩೦ರ ದಶಕದಲ್ಲಿ ‘ಕಾನೂರು ಹೆಗ್ಗಡಿತಿ’ ಗಾಂಧಿಯುಗದ ಕೃತಿ, ಆ ಎರಡು ಕಾದಂಬರಿಗಳಲ್ಲೂ ಕಾಣುವುದ, ಅಲ್ಲೋಲ ಕಲ್ಲೋಲ ಅಥವಾ ಬದಲಾವಣೆಯಿಂದ ತಲ್ಲಣಿಸುತ್ತಿರುವ ಮಲೆನಾಡ ಬದುಕು. ಹೆಗ್ಗಡಿತಿಯಲ್ಲಿ ಸೇರೆಗಾರ ರಂಗಪ್ಪ ಶೆಟ್ಟಿ, ಗಂಗೆ ಮೊದಲಾದವರು ಆ ಪಾತ್ರ ವಹಿಸಿದರೆ, ಮದುಮಗಳು ಕಾದಂಬರಿಯಲ್ಲಿ ‘ಪಾದ್ರಿ’ಗಳು ಮತ್ತು ಪುಡಿ ವ್ಯಾಪಾರಿ ‘ಸಾಬಿ’ಗಳು ಮಲೆನಾಡ ಬದುಕನ್ನು ತಲ್ಲಣಗೊಳಿಸುವ ಶಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಹೆಗ್ಗಡಿತಿಯ ಅಣ್ಣಯ್ಯಗೌಡರು ಮತ್ತವರ ಮಗ ಓಬಯ್ಯನ ಬದುಕು ಮುಂದೆ ನಡೆದ ಕಾಗೋಡು ಸತ್ಯಾಗ್ರಹಕ್ಕೆ ಕಾರಣವಾದ ಹಿನ್ನೆಲೆಯ ದಟ್ಟ ಚಿತ್ರಣ ನೀಡುತ್ತದೆ. ಅಲ್ಲಿ ಬರುವ ಸುಬ್ಬಮ್ಮ ಕೂಡ ಬದಲಾವಣೆಯ ಪ್ರತೀಕ. ಸಮಾಜದ ವಿವಿಧ ಸ್ತರಗಳ ಪ್ರತಿನಿಧಿಗಳಾದ ಮುಕುಂದಯ್ಯ – ಚಿನ್ನಮ್ಮ, ಐತ – ಪೀಂಚಲು ಮತ್ತು ನಾಯಿಗುತ್ತಿ – ತಿಮ್ಮಿ ಜೋಡಿಗಳು ಎದುರಿಸುವ ಸಮಸ್ಯೆ ಸಮಾನವಾದುದು. ಬದಲಾವಣೆಯ ಸವಾಲುಗಳನ್ನು ಎದುರಿಸಿ ತನ್ನತನ ಉಳಿಸಿಕೊಳ್ಳುವ ಸಾಮರ್ಥ್ಯ ಹಿಂದೂ ಸಮಾಜಕ್ಕಿದೆಯೇ ಎಂಬ ಪ್ರಶ್ನೆಯನ್ನು ಕೇಳುವ ಕುತೂಹಲವನ್ನು ಕುವೆಂಪು ತೋರಿಸುತ್ತಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ನಿರತರಾಗಿದ್ದ ಗಾಂಧೀಜಿ ಮುಂದೆ ಇದ್ದ ಕಾರ್ಯಕ್ರಮ ಅಥವಾ ಗುರಿಗಳು ಎರಡು: ಬ್ರಿಟಿಷರ ಹಿಡಿತದಿಂದ ಮುಕ್ತವಾದ ಭಾರತದನ್ನು ಯಾವ ರೀತಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿಕೊಂಡು ಹೋಗಬೇಕು ಎಂಬುದು, ಅದಕ್ಕಿಂತಲೂ ಹೆಚ್ಚು ಮಹತ್ವದ ಮತ್ತು ಸವಾಲಿನ ಅವರ ಮುಂದಿದ್ದ ಮತ್ತೊಂದು ಗುರಿಯಾಗಿತ್ತು. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಅವರು ನಡೆಸಿದ ಎಲ್ಲ ಪ್ರಯೋಗಗಳು ಮತ್ತು ಕಾರ್ಯಕ್ರಮಗಳು ಹೋರಾಟದ ಫಲವಾಗಿ ಜಾರಿಗೆ ಬಂದುವಾಗಿದ್ದವು. ಆದರೆ ನಂತರದ ಭಾರತವನ್ನು ಯಾವ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ಬಗ್ಗೆ ಅವರು ಅದೇ ಪ್ರಮಾಣದಲ್ಲಿ ಚಿಂತನೆ ನಡೆಸಿದ್ದಾರಾದರೂ, ಅವು ಅವರ ಆಶಯ ಮತ್ತು ಕನಸುಗಳಾಗಿ ಮಾತ್ರ ಉಳಿದಿದ್ದವು ಎಂಬ ವ್ಯತ್ಯಾಸವನ್ನು ಗಮನಿಸುವುದು ಬಹಳ ಮುಖ್ಯ. ಅವುಗಳ ಜಾರಿಗಾಗಿ ಹೋರಾಟ ಅಥವಾ ಪ್ರಯೋಗ ನಡೆಸುವ ಅವಕಾಶ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ತಲ್ಲೀನರಾಗಿದ್ದ ಅವರಿಗೆ ಬೇಕಾದ ಪ್ರಮಾಣದಲ್ಲಿ ದೊರಕಿರಲಿಲ್ಲ. ಅತ್ಯಂತ ಸುಸಜ್ಜಿತ ಬ್ರಿಟಿಷ್‌ ಸಾಮ್ರಾಜ್ಯವನ್ನು ಅಹಿಂಸೆ, ಕರ ನಿರಾಕರಣೆ, ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಮಣಿಸಲು ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸುವವರು ಇದ್ದಂತೆಯೇ, ವಿಜ್ಞಾನ – ತಂತ್ರಜ್ಞಾನ ಆಧಾರಿತ ಪಶ್ಚಿಮ ಜಗತ್ತಿನ ಎದುರು ಗ್ರಾಮೀಣ ಸಂಸ್ಕೃತಿ ಆಧಾರಿತ ಭಾರತವನ್ನು – ಗಾಂಧಿ ಹೇಳಿದ ಹಾಗೆ ನಿರ್ಮಿಸಲು ಸಾಧ್ಯವೆ ಎಂಬ ಅನುಮಾನ ವ್ಯಕ್ತಪಡಿಸುವವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಮೊದಲನೆಯದು ಗಾಂಧೀಜಿ ಮಾಡಿ ತೋರಿಸಿದರೆ, ತಮ್ಮ ಬದುಕಿನ ಎರಡನೇ ಮಹತ್ವದ ನಿಜವಾದ ಕನಸಾದ ಗ್ರಾಮ ಸ್ವರಾಜ್ಯ ಆಧಾರಿತ ಭಾರತ ರಾಷ್ಟ್ರ ನಿರ್ಮಿಸುವ ಅವಕಾಶ ಅವರಿಗೆ ಒದಗಿ ಬರಲೇ ಇಲ್ಲ. ಗ್ರಾಮ ಸ್ವರಾಜ್ಯ ಅವರ ಬದುಕಿನ ನಿಜವಾದ ಗುರಿಯಾದರೆ, ಸ್ವಾತಂತ್ರ್ಯ ಹೋರಾಟ ಅದನ್ನು ತಲುಪಲು ಬೇಕಾದ ಮಾರ್ಗ ಹಾಗೂ ಹಾದಿಯಾಗಿತ್ತು. ತಮಗೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ನೆಹರುರವರನ್ನು ಆರಿಸುವುದರ ಮೂಲಕ ಗಾಂಧೀಜಿಯವರನ್ನು ಪರೋಕ್ಷವಾಗಿಯಾದರೂ ಹಿಂಜರಿಕೆ ಅಥವಾ ಅನಿವಾರ್ಯವಾದ ನೊವನ್ನು ಒಪ್ಪಿಕೊಂಡಿದ್ದರೆ?

ಸ್ವಾತಂತ್ರ್ಯ ಬರುವವರೆಗಿನ ಭಾರತದ ಪ್ರತಿನಿಧಿ ಗಾಂಧೀಜಿಯವರಾಗಿದ್ದರೆ, ನಂತರದ ಪ್ರತಿನಿಧಿ ನೆಹರು: ಆ ನೆಹರು ಬೆಳೆದುಕೊಂಡದ್ದು ಗಾಂಧೀಜಿಗೆ ಪ್ರತಿಕ್ರಿಯೆಯಾಗಿ; ಹಾಗಾಗಿ ಗಾಂಧಿಯುಗದ ನಿಜವಾದ ಹೋರಾಟ ಮತ್ತು ದ್ವಂದ್ವವಿದ್ದುದು ಗಾಂಧಿ ಮತ್ತು ನೆಹರು ನಡುವೆ. ಈ ವಿಚಾರ ಗಾಂಧೀಜಿಗೂ ಗೊತ್ತಿತ್ತು. ಗಾಂಧೀಜಿಯವರಿಗಿಂತಲೂ ಹೆಚ್ಚಾಗಿ ನೆಹರುಗೆ ಗೊತ್ತಿತ್ತು. ಗಾಂಧಿಯುಗದ ನಿಜವಾದ ಸ್ಪರ್ಧಿ ನೆಹರು ಆಗಿದ್ದರು. ಸುಭಾಷ್‌ಚಂದ್ರ ಬೋಸ್‌, ಡಾ.ಬಿ. ಆರ್‌. ಅಂಬೇಡ್ಕರ್‌, ಮಹಮದ್‌ ಆಲಿ ಜಿನ್ನಾರನ್ನು ಎದುರಿಸುವಷ್ಟು ಸಲೀಸಾಗಿ ನೆಹರುರವರನ್ನು ಎದುರಿಸುವುದು ಗಾಂಧೀಜಿಯವರಿಗೆ ಸುಲಭವಾಗಿರಲಿಲ್ಲ. ಏಕೆಂದರೆ ಆ ನೆಹರು, ಗಾಂಧಿಯುಗದ ಅಥವಾ ಆಂದೋಲನದ ಅನಿವಾರ್ಯ ಭಾಗವೇ ಆಗಿದ್ದರು. ಅಂತಹ ನೆಹರುರವರನ್ನು ಗಾಂಧಿಯುಗದ ‘ನಾಯಕ’ ಅಥವಾ ‘ಖಳನಾಯಕ’ ಎಂದು ಬೇಕಾದರೂ ನೋಡ ಬಹುದಾಗಿದೆ – ಅದು ನೋಡುವವರ ದೃಷ್ಟಿಕೋನ ಆಧರಿಸಿರುತ್ತದೆ. ತಮ್ಮ ಬದುಕು ಮತ್ತು ಹೋರಾಟದ ಒಂದು ಭಾಗವಾಗಿದ್ದ ನೆಹರುವನ್ನು ಎದುರಿಸುವ ಸಂದರ್ಭ ಬರುವ ವೇಳೆಗೆ ಗಾಂಧೀಜಿ ಭಿನ್ನ ಹಾದಿ ಹಿಡಿದಿದ್ದರು ಎಂಬುದು ಇಲ್ಲಿ ಬಹಳ ಮುಖ್ಯ; ಬೋಸ್‌, ಅಂಬೇಡ್ಕರ್‌, ಜಿನ್ನಾ ಎದುರಿಸಿ ಬಹಳ ದೂರ ಸಾಗಿಬಂದಿದ್ದ ಗಾಂಧಿಜಿಯವರು ನೆಹರು ಎದುರಾಗುವ ವೇಳೆಗೆ – ಮತ್ತೊಂದು ಬಗೆಯ ಹೋರಾಟ ರೂಪಿಸುವ ಸ್ಥಿತಿಯಲ್ಲಿ ಇರಲಿಲ್ಲ.

ನೆಹರು ರೂಪದಲ್ಲೆದುರಾದ ಭಿನ್ನ ಮೌಲ್ಯಗಳನ್ನು ಎದುರಿಸುವುದಾದರೂ ಹೇಗೆ? ಬ್ರಿಟಿಷರು ಪ್ರತಿಪಾದಿಸುತ್ತಿದ್ದ ಕೆಲ ತತ್ವ ಮತ್ತು ಮೌಲ್ಯಗಳು ನೆಹರು ರೂಪದಲ್ಲಿ ಕಾಣಿಸಿಕೊಂಡುದರ ಅರಿವು ಗಾಂಧೀಜಿಯವರಿಗೆ ಇದ್ದಿರಬಹುದಲ್ಲವೆ?

ತಮ್ಮ ವಿರೋಧಿಗಳು ಅಥವಾ ಸಹಮತ ಇಲ್ಲದವರ ಜತೆ ನಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೂಡ ನೆಹರು, ಅತಿ ಜಾಣತನದಿಂದಲೇ ಬಹಳ ನಾಜೂಕಾಗಿ ವರ್ತಿಸುತ್ತಿದ್ದರು. ಸರ್ದಾರ್‌ ವಲ್ಲಭಬಾಯ್‌ ಪಟೇಲ್‌, ಅಂಬೇಡ್ಕರ್‌, ಚಕ್ರವರ್ತಿ ರಾಜಗೋಪಾಲಾಚಾರಿ, ಆಚಾರ್ಯ ಕೃಪಲಾನಿ ಮೊದಲಾದ ಘಟಾನುಗಟಿಗಳನ್ನು ಮೂಲೆಗುಂಪು ಮಾಡಿದ ರೀತಿ, ನೆಹರುಗಿದ್ದ ನಯನಾಜೂಕಿಗೆ ಉದಾಹರಣೆ. ಇನ್ನೂ ಡಾ.ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ್‌ ಮೊದಲಾದವರನ್ನು ಅವರು ಹಾಕಿಕೊಂಡ ಕಾರ್ಯಕ್ರಮಗಳ ಮಿತಿಯಲ್ಲೇ ಕಟ್ಟಿಹಾಕಲು ತುಘಲಕ್‌ ತರಹದ ಕ್ರೂರಮಾರ್ಗ ಅನುಸರಿಸಬೇಕಾದ ಅಗತ್ಯ ನೆಹರುಗಿರಲಿಲ್ಲ.

ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮೊದಲಾದ ಅವರು ಅನೇಕರು ತೀವ್ರವಾಗಿ ವಿರೋಧಿಸಬೇಕಾಗಿ ಬಂದ ಪ್ರಜಾತಂತ್ರ ಲೇಪಿತ ಪ್ರಚ್ಛನ್ನ ಶೈಲಿಯ ವಂಶಾಡಳಿತದ ಸಕಲ ಸದ್ಗುಣಗಳು ನೆಹರು ಅವರಲ್ಲಿ ಮನೆ ಮಾಡಿಕೊಂಡಿದ್ದಂತೆ ಕಾಣುತ್ತದೆ. ಆ ಎಲ್ಲ ಸೂಚನೆಗಳನ್ನು ಅವರ ‘ಗ್ಲಿಂಪ್ಸ್‌ಸ್‌ ಆಪ್‌ ವರ್ಲ್ಡ್ ಹಿಸ್ಟರಿ’ ಕೃತಿಯಲ್ಲಿಯೆ ಕಾಣಬಹುದಾಗಿದೆ. ಜಗತ್ತಿನ ಇತಿಹಾಸದ ಬಗ್ಗೆ ಭಾರತೀಯ ಒಳನೋಟ ಎಂದು ಕರೆಯಬಹುದಾದ ಆ ಕೃತಿ ಬರೆವ ಕಾಲದಲ್ಲಿ ನೆಹರು ಪ್ರದರ್ಶಿಸುವ ಗುರಿ ಮತ್ತು ದೃಷ್ಟಿಕೊಳದಲ್ಲಿನ ಹೊಂದಾಣಿಕೆ ಬಹಳ ವಿಶಿಷ್ಟವಾದುದಾಗಿದ್ದು ಆ ತರಹದ ದೃಷ್ಟಿಕೋನ ಮತ್ತು ನೆಲೆ, ಭಾರತದ ಅನೇಕ ಲೇಖಕರಿಗೂ ದೊರೆತ ಉದಾಹರಣೆ ಇಲ್ಲ. ಆ ದೃಷ್ಟಿಯಿಂದ ನೋಡುವುದಾದಲ್ಲಿ ಇಡೀ ಜಗತ್ತಿನ ಇತಿಹಾಸವನ್ನು ತನ್ನ ಮಗಳು [ದೇಶದ] ಮತ್ತು ತನ್ನ ಕಾಲದ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡ ಲೇಖಕ ನೆಹರು.

ಬ್ರಿಟಿಷ್‌ ಚಕ್ರಾಧಿಪತ್ಯ ಇಂದಲ್ಲ ನಾಳೆ ಕುಸಿದುಹೋಗಬೇಕಾಗುತ್ತದೆ, ಆದರೆ ಸಾಮ್ರಾಜ್ಯಷಾಹಿ ಪ್ರವೃತ್ತಿಗಳು ಹೋಗುವುದಿಲ್ಲ ಎಂಬ ಸರಳ ಸಂಗತಿಯನ್ನು, ಜಗತ್ತಿನ ಇತಿಹಾಸ ಸಾಗಿಬಂದ ಬಗೆಯನ್ನು ಅತ್ಯಂತ ಹತ್ತಿರದಿಂದ ಅಧ್ಯಯನ ಮಾಡಿದ ಫಲವಾಗಿ ದಕ್ಕಿದ ಒಳನೋಟದಿಂದ ಕಂಡುಕೊಂಡಿದ್ದ ನೆಹರುಗೆ, ಮುಂದೆ ಬರಲಿದ್ದ ಸಾಮ್ರಾಜ್ಯಷಾಹಿ ನೀತಿ ಬಗ್ಗೆ ಒಂದು ವಿಚಿತ್ರ ಕಲ್ಪನೆ ಇದ್ದಂತೆ ಕಾಣುತ್ತದೆ. ಅಮೆರಿಕ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಬೆಳೆಯಲಿದೆ ಎಂಬುದಾಗಿ ರಷ್ಯನ್‌ ಕ್ರಾಂತಿಗೆ ಕೆಲ ವರ್ಷ ಮೊದಲೇ ಬರೆದಿದ್ದ ಲಿಯೋ ಟ್ರಾಟ್‌ಸ್ಕಿ ಮೊದಲಾದ ಅನೇಕ ಸಮಾಜವಾದಿ ಲೇಖಕರ ಬರವಣಿಗೆಗಳನ್ನು ನೆಹರು ಓದಿರಬಹುದಾದರೂ, ಅಳಿಸಿಹೋಗಲಿರುವ ಬ್ರಿಟಿಷ್‌ ರಾಜಕೀಯ ಸಾಮ್ರಾಜ್ಯದ ಜಾಗದಲ್ಲಿ ತಂತ್ರಜ್ಞಾನ ಆಧಾರಿತ ಆರ್ಥಿಕ – ಸಾಮ್ರಾಜ್ಯದ ಉದಯವಾಗಲಿದೆ ಎಂಬುದಾಗಿ ಸ್ವಾತಂತ್ರ್ಯ ಬರುವುದಕ್ಕೆ ಎಷ್ಟೋ ವರ್ಷ ಮೊದಲೇ ತಮ್ಮ ಮಗಳಿಗೆಂದು ಬರೆದ ಇತಿಹಾಸದ ಪುಸ್ತಕದಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿರುವುದು ಸಾಧಾರಣ ಸಂಗತಿ ಏನಲ್ಲ. ತನ್ನ ಮಗಳನ್ನು ಮುಂದಿನ ಜವಾಬ್ದಾರಿ ಹೊರಲು ಸಿದ್ಧವಾಗುವಂತೆ ಪ್ರೇರೀಪಿಸುವ ಕೆಲಸವನ್ನು ನೆಹರು ಆ ಪುಸ್ತಕದ ರಚನೆಯ ಕಾಲದಿಂದಲೆ ಆರಂಭಿಸಿದಂತೆ ತೋರುತ್ತದೆ. ಆ ಇಡೀ ಪುಸ್ತಕವನ್ನು ತನ್ನ ಮಗಳನ್ನು ಸಿದ್ಧಗೊಳಿಸಲು ಬರೆಯಲಾಗಿದೆ ಎಂದರೂ ಸರಿಯೆ.

ಜವಹರಲಾಲ್‌ ನೆಹರು ಮಾತ್ರವಲ್ಲ, ಅವರ ತಂದೆ ಮೋತಿಲಾಲ್‌ ಕೂಡ ಅದೇ ತರಹದ ಭಾವನೆಗಳಿಂದ ಪ್ರೇರಿತರಾದ ವ್ಯಕ್ತಿಯಾಗಿದ್ದರು. ಇಂದಿರಾ ಪ್ರಿಯದರ್ಶಿನಿಯನ್ನು ಸಿದ್ಧಗೊಳಿಸಲು ಜವಹರಲಾಲ್‌ ನೆಹರು ಆ ಜತೆಗೆ ಪುಸ್ತಕ ಬರೆದರೆ, ತನ್ನ ಮಗ ಜವಹರಲಾಲ್‌ ಅವರನ್ನು ರಾಜಕೀಯದಲ್ಲಿ ಮುಂದೆ ತರಲು ಮೋತಿಲಾಲರು ಕಾಂಗ್ರೆಸ್‌ ಸಂಘಟನೆ ಮತ್ತು ಸ್ವಾತಂತ್ರ್ಯ ಚಳವಳಿಯನ್ನು ಉಪಯೋಗಿಸಿಕೊಂಡರು. ಮುಂದೆ ನೆಹರು ಪ್ರಧಾನಿಯಾಗಿ ಬಂದ ನಂತರ ಇಂದಿರಾಗಾಂಧಿಗೆ ಆಡಳಿತ ಮತ್ತು ರಾಜಕಾರಣದಲ್ಲಿ ದೊರಕಿದ ನೇರ ಅನುಭವ ಬಹಳ ವಿಶಿಷ್ಟವಾದುದಾಗಿತ್ತು.

ಬಾರ್ದೋಲಿ ಸತ್ಯಾಗ್ರಹದ ಕಾಲಕ್ಕೆ ೧೯೨೮ರ ಜುಲೈ ೧೧ ರಂದು ಮಹಾತ್ಮಾಗಾಂಧೀಜಿಯವರಿಗೆ ಮೋತಿಲಾಲ್‌ ಬರೆದಿದ್ದ ಪತ್ರದಲ್ಲಿ ಬಳಕೆಯಾಗುವ ಪದಗಳ ಬಗ್ಗೆ ಗಮನ ಹರಿಸುವುದು ಅಗತ್ಯ:

I am quite clear that the hero of the hour is Vallabhabhai, and the least we can do is to offer him the crown. Failing him, I think under all the circumstances Jawahar would be the best choice.[1]

ಅವರು ಬಳಸುವ ‘Crown’: ಜವಹರಲಾಲ್‌ ತಲೆ ಮೇಲಿಂದ ಮುಂದೆ ಇಂದಿರಾಗಾಂಧಿ ಮೂಲಕ ಮುಂದುವರಿದುದು ಸಹ ಈಗ ಇತಿಹಾಸ. ಆ ಹಂಬಲ ಮತ್ತು ಅದನ್ನು ಬದುಕಿನಲ್ಲಿ ಸಾಧಿಸಿ ತೋರಿಸಲು ಅವರು ಅನುಸರಿಸಿದ ಮಾರ್ಗ ಮತ್ತು ಅದರಲ್ಲಿ ಕಾಲ ವಹಿಸಿದ ಪಾತ್ರ ಕುರಿತಂತೆ ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ. ಆ ತರಹದ ಭಾವನೆಗಳಿಂದ ಪ್ರೇರಿತವಾದ ಎನ್ನುವುದಕ್ಕಿಂತ ಆಗಿಲ್ಲದ ತಂದೆ ತಾಯಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಸಿಗುತ್ತಾರೆ.[2] ಆ ಹಂಬಲ ಎಲ್ಲರ ಬದುಕಿನ ಸಂದರ್ಭದಲ್ಲೂ ನಿಜ ಆಗುವುದಿಲ್ಲ. ನೆಹರು ವಿಶಿಷ್ಟತೆ ಅಡಗಿರುವುದೇ ಕಾಲಕ್ಕೆ ಸ್ಪಂದಿಸುವ ಆ ಗುಣದಲ್ಲಿ ಎಂದು ತೋರುತ್ತದೆ.

ರಾಜಕೀಯ ಸಾಮ್ರಾಜ್ಯಗಳ ಕಾಲ ಮುಗಿಯಿತು. ಇನ್ನು ಮುಂದೆ ಆರ್ಥಿಕ ಸಾಮ್ರಾಜ್ಯಗಳ ಯುಗ ಆರಂಭವಾಗಲಿದೆ ಎಂಬುದಾಗಿ ನೆಹರು, ಇಂದಿರಾ ಪ್ರಿಯದರ್ಶಿನಿಗೆ ಫೆಬ್ರವರಿ ೨೮, ೧೯೩೩ ರಂದು ಬರೆದ ಇತಿಹಾಸ ಪಾಠದ ಬಹುಭಾಗ ಉಲ್ಲೇಖಾರ್ಹ.[3] ಇಂಗ್ಲೆಂಡಿನ ರಾಜಕೀಯ ಸಾಮ್ರಾಜ್ಯಷಾಹಿಯ ಅವನತಿ ಮತ್ತು ಉದಯಿಸಲಿರುವ ಅಮೆರಿಕದ ಆರ್ಥಿಕ ಸಾಮ್ರಾಜ್ಯಷಾಹಿ ನೀತಿಯ ಸೂಚನೆ ನೀಡಿ ಬರೆಯುವ ನೆಹರು ಬಳಸುವ ‘ಸಾಮ್ರಾಜ್ಯಷಾಹಿ’ ಎಂಬ ಪದವನ್ನು ಒಪ್ಪದ ಅನೇಕ ಅಮೆರಿಕವಾದಿಗಳು ಇಂದಿಗೂ ಇರಬೇಕಾದರೆ, ನೆಹರು ಆ ಪದವನ್ನು ಆ ಕಾಲದಲ್ಲೇ ಬಳಕೆ ಮಾಡಿದುದು ಸಹ ಗಮನಾರ್ಹ; ಯಾವುದು ಹೆಚ್ಚು ಅಪಾಯಕಾರಿ ಎಂಬುದಕ್ಕಿಂತ ಶೋಷಣೆ ವಿಧಾನ ಕೆಲಧರ್ಮಕ್ಕನುಗುಣ ಬದಲಾಗುತ್ತಾ ಸಾಗುತ್ತದೆ ಎಂಬುದನ್ನು ಅವರು ಆಗಲೇ ಗುರುತಿಸಿದ್ದರು ಎಂಬುದು ಸಹ ಮುಖ್ಯ.

ಮಿಶ್ರ ಆರ್ಥಿಕ ನೀತಿ ಆಧಾರಿತ ಸಮಾಜವಾದದ ಬಗ್ಗೆ ಮಾತನಾಡುತ್ತಲೇ ಬಂಡವಾಳಷಾಹಿ ವ್ಯವಸ್ಥೆ ಬಲಗೊಂಡು ಬೆಳೆಯಲು ಬೇಕಾದ ಬುನಾದಿ ಹಾಕಿದ್ದು ಸಹ ಅವರ ಕಾಲದಲ್ಲಿಯೇ. ಜನತಂತ್ರ ಆಧಾರಿತ ಪ್ರಜಾಸತ್ತಾತ್ಮಕ ಜನಪರ ವ್ಯವಸ್ಥೆ ಒಳಗಿಂದ ವಂಶಾಡಳಿತ ಪ್ರವೃತ್ತಿಗಳು ಬೆಳೆದುಕೊಂಡುದು.

ಅಂತಹ ಮುನ್ನೋಟ ನೆಹರುಗೆ ಬಂದುದಾದರೂ ಎಲ್ಲಿಂದ? ನೆಹರು ಅನುಸರಿಸಿದ ನಯನಾಜೂಕಿನ ರಾಜಕಾರಣವನ್ನು ಆಗಸ್ಟ್‌ನಲ್ಲಿ ಕಾಣಬಹುದಾಗಿದೆ. ಚಕ್ರವರ್ತಿ ಎಂದು ಎಲ್ಲೂ ಕರೆದುಕೊಳ್ಳದೆ ಪ್ರಜಾಸತ್ತೆ ಹೆಸರಿನಲ್ಲಿ ಆಡಳಿತ ನಡೆಸಿದ ಮತ್ತು ಪ್ರಜಾಸತ್ತೆ ಬಲಪಡಿಸುವುದಾಗಿ ಹೇಳುತ್ತಲೆ ಸೀಸರ್‌ ಆಡಳಿತ ಪರಂಪರೆಗೆ ಬೇಕಾದ ಬುನಾದಿ ಹಾಕಿದ ಆಗಸ್ಟಸ್‌[4] ರೀತಿಯಲ್ಲಿಯೇ ನೆಹರು ಕಾಲದಲ್ಲಿ ವಂಶಾಡಳಿತಕ್ಕೆ ಬೇಕಾದ ಎಲ್ಲ ಸಿದ್ಧತೆ ನಡೆಯಿತು ಮತ್ತು ನೆಹರು ಬರುವ ಕಾಲಕ್ಕೆ ಕ್ರೂರತೆಯ ಅರ್ಥವೇ ಬದಲಾಗಿಹೋಗಿತ್ತು. ಎಲ್ಲೂ ಕತ್ತಿ ಎತ್ತದೆ ಮತ್ತು ಯಾರನ್ನೂ ಕೊಲ್ಲಿಸದೆ ಮುಗಿಸುವ ರಾಜಕಾರಣ, ಅಷ್ಟರಲ್ಲಾಗಲೇ ಜಾರಿಗೆ ಬಂದಿತ್ತು. ವಾಲ್ಮೀಕಿ ಕಾಲದಲ್ಲಿ ರಾಮ ರಾಮನಾಗಿದ್ದ ರಾವಣ ರಾವಣನಾಗಿಯೇ ಉಳಿದಿದ್ದ. ಇನ್ನೊಬ್ಬನ ಪತ್ನಿಯನ್ನು ಬಯಸಿದ್ದೇನೆ ಮತ್ತು ಅದಕ್ಕಾಗಿ ಯಾವ ರೀತಿಯ ಬೆಲೆ ತೆರಲು ಸಿದ್ದ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಮತ್ತು ನೈತಿಕ ಸ್ಥೈರ್ಯ ರಾವಣನಿಗಿತ್ತು. ಅದನ್ನು ಒಪ್ಪುವುದು ಬಿಡುವುದು ಬೇರೆ ವಿಚಾರ. ಆದರೆ ನೆಹರು ಕಾಲಕ್ಕಾಗಲೆ ರಾವಣರೆಲ್ಲ ರಾಮ ವೇಷಧಾರಿಗಳಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಕಾಣಿಸಿಕೊಂಡಿತ್ತು. ರಾಮನ ಹೆಸರು ಹೇಳುವವರು ಸಹ ರಾಮವೇಷದ ರಾವಣರಾಗತೊಡಗಿದ್ದರು.

ಗಾಂಧೀಜಿ ಕಾಲದಲ್ಲಿ ಅವರಿದ್ದಾಗ ರಾಮನ ತರಹ ನಡೆದುಕೊಳ್ಳುತ್ತಿದ್ದ ಅನೇಕರು ಅವರು ಕಣ್ಮರೆಯಾದ ಕೆಲವೇ ವರ್ಷಗಳಲ್ಲಿ ಹಂತ ಹಂತವಾಗಿ ರಾಮವೇಷದ ರಾವಣರಾಗಿ ಪರಿವರ್ತನೆಗೊಳ್ಳತೊಡಗಿದರು. ವಲ್ಲಭಬಾಯಿ ಪಟೇಲ್‌ ಕಣ್ಮರೆಯಾಗಿ, ನೆಹರು ರಂಗದ ಮೇಲೆ ಭರ್ತಿಯಾಗಿ ವಿಜೃಂಭಿಸುವ ವೇಳೆಗೆ ಆ ಪ್ರಕ್ರಿಯೆ ಒಂದು ಹಂತ ತಲುಪಿತ್ತು. ಹಾಗಾಗಿ ಗಾಂಧಿಯುಗದ ನೆಹರು ತಲೆಮಾರಿನ ಜನರ ವೇಷಭೂಷಣ, ಮಾತಿನ ಕಲೆ ದಿರಿಸು ಮತ್ತು ರಂಗ ವೈಖರಿಗಳೇ ಬದಲಾಗಿ ಹೋಗಿದ್ದವು. ತುಘಲಕ್‌ ಕಾಲದ ವರ್ತನೆಗಳು ನೆಹರು ವೇಳೆಗಾಗಲೇ ಬೇರೆ ಬೇರೆ ರೂಪಾಂತರ ಧರಿಸಿ ಚಿತ್ರವಿಚಿತ್ರ ನಮೂನೆಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದವು.

ಯುರೋಪ್‌ ಮಾದರಿಗೆ ಸಂಪೂರ್ಣ ಭಿನ್ನವಾದ ಪರ್ಯಾಯ ಅಭಿವೃದ್ಧಿ ಮಾರ್ಗ ಮತ್ತು ವಿಧಾನವೊಂದರ ಕನಸಿನಿಂದ ತಲ್ಲಣಿಸಿದ ವ್ಯಕ್ತಿ ಗಾಂಧೀಜಿ: ಆ ಅಭಿವೃದ್ಧಿ ವಿಧಾನ, ಪಶ್ಚಿಮದ ಪ್ರಭಾವ ಎದುರಿಸಿ ಉಳಿಯಬಲ್ಲದೆ ಎಂಬ ಬಗ್ಗೆ ಅವರಿಗೆ ಅನುಮಾನವಿದ್ದಂತೆ ಕಾಣುತ್ತದೆ. ಪಟೇಲ್‌ಗೆ ಬದಲಾಗಿ ನೆಹರು ಅವರನ್ನೇ ಪ್ರಧಾನಿಯನ್ನಾಗಿ ಸ್ವೀಕರಿಸಲು ಆ ತರಹದ ಅಪನಂಬಿಕೆಗಳು ಕಾರಣವಾಗಿದ್ದಿರಬಹುದು. ಗಾಂಧೀಜಿ, ಸುಭಾಷ್‌, ಅಂಬೇಡ್ಕರ್‌, ಜಿನ್ನಾ, ನೆಹರು ಮತ್ತು ಪಟೇಲ್‌ ರೂಪದಲ್ಲಿ ವ್ಯಕ್ತವಾಗುವ ಮಹಾಸಂಘರ್ಷವನ್ನು ಸಮಗ್ರವಾಗಿ ಸಹ ಸಾಧ್ಯವಾಗಿಲ್ಲದಿರಲು ಅದಕ್ಕಿರುವ ಎಪಿಕ್‌ ಆಯಾಮವೇ ಕಾರಣವಾಗಿದ್ದಿರಬಹುದು.

ವಚನಕ್ರಾಂತಿ ಮತ್ತು ಗಾಂಧಿಯುಗಕ್ಕೆ ಸ್ಪಂದಿಸುವ ವಿಚಾರದಲ್ಲಿ ಭಾರತೀಯ ಸಾಹಿತ್ಯ ತೋರಿರುವ ಪ್ರತಿಕ್ರಿಯೆಯಲ್ಲಿ ಒಂದು ತರಹದ ಹೊಂದಾಣಿಕೆ ಇರುವಂತೆ ಕಾಣುತ್ತದೆ. ಒಂದು ಪ್ರಾದೇಶಿಕ ಮಟ್ಟದಲ್ಲಿ ನಡೆದ ರಾಷ್ಟ್ರೀಯ ಮಹತ್ವದ ಆಂದೋಲನವಾದರೆ, ಮತ್ತೊಂದು ರಾಷ್ಟ್ರವ್ಯಾಪ್ತಿ ಪಡೆದುಕೊಂಡ ರಾಷ್ಟ್ರೀಯ ಆಂದೋಲನ. ಆ ಹೋರಾಟದ ಹಿಂದಿನ ಶ್ರಮವನ್ನು ವಚನಕ್ರಾಂತಿಯಲ್ಲಿ ಕಾಣಬಹುದಾಗಿದೆ. ಬಸವಣ್ಣ ಕೂಡ ಒಂದು ತರಹದಲ್ಲಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ ಮತ್ತು ಹೋರಾಟ ನಡೆಸಿದ ವ್ಯಕ್ತಿ. ಮಹಾತ್ಮಾ ಗಾಂಧೀಜಿ ನೇತೃತ್ವದ ಆಂದೋಲನ ಅನೇಕ ರೀತಿಯ ಅಭೀಪ್ಸೆ, ಆಕಾಂಕ್ಷೆ ಮತ್ತು ಬಿಕ್ಕಟ್ಟುಗಳ ನಡುವಿನ ಸಂಘರ್ಷವನ್ನು ಹೊರಹಾಕಿದಂತೆ, ವಚನ ಕ್ರಾಂತಿ ಕೂಡ ತನ್ನದೇ ರೀತಿಯಲ್ಲಿ ಮಾನವ ಸ್ವಭಾವ ಮತ್ತು ಮನುಷ್ಯ ಸಮಾಜದ ವಿವಿಧ ಮುಖಗಳ ಅನಾವರಣ ಮಾಡಿ ಹೋಗಿದೆ. ಬ್ರಿಟನ್ನಿನ ಜನತಾಂತ್ರಿಕ ಹೋರಾಟ, ಫ್ರೆಂಚ್‌ ಕ್ರಾಂತಿ, ರಷ್ಯನ್‌ ಕ್ರಾಂತಿ, ಜಾಗತಿಕ ಸಮರ ಮುಂತಾದ ಅನೇಕ ಅಲ್ಲೋಲ ಕಲ್ಲೋಲಗಳಿಗೆ ಸ್ಪಂದಿಸಿ ಬಚಾವ್‌ ಆದ ನೂರಾರು ಕವಿಗಳು ಸಾಹಿತಿಗಳನ್ನು ಯುರೋಪ್‌ ತನ್ನ ಮೈ ತುಂಬ ತುಂಬಿಕೊಂಡಿರುವುದು ಭಾರತೀಯ ಕವಿಗಳು ಸಾಹಿತಿಗಳಿಗೆ ಅಪರಿಚಿತ ಸಂಗತಿ ಏನಲ್ಲ.

 

[1]Rajmohan Gandhi, Patel : A Life, Navajivan Publishing House, Ahmedabad, ೧೯೯೨, ಪುಟ ೧೭೧,

[2]ಅಂಥವರನ್ನು ಎಲ್ಲ ಜಾತಿ ಜನಾಂಗಗಳಲ್ಲೂ ಕಾಣಬಹುದಾಗಿದೆ. ಭಾರತದ ರಾಜಕಾರಣಿಗಳು ಮತ್ತು ಅಧಿಕಾರ ಸೂತ್ರ ಹಿಡಿದ ಜನ ತಂತಮ್ಮ ಸಾಮರ್ಥ್ಯಕ್ಕೆ ಅನುಗುಣ ಆ ಹಾದಿಯಲ್ಲಿ ಸಾಗುತ್ತಿದ್ದಾರೆ.

[3]We have seen in our glimpses of history imperialism of various kinds in different ages. Right at the beginning the victory of one people over another in war meant that the victors could do what they liked with conquered land and people. They annexed both the land and its inhabitants-that is to say, the conquered people became slaves. This was the ordinary custom. In the Bible one reads of the Jews being taken away into captivity. Because they were defeated in war by the Babylonians, and there are many other instances. Gradually this gave place to another type of imperialism, when only the land was annexed and the people were not made slaves. It was, no doubt, discovered that it was easier to make money out of them by taxation and other methods of exploitation. Most of us still think of empires of this kind, like the British in India, and we imagine that if the British were not in actual political control of India. India would be free. But this type of empire is already passing away, and giving place to more advanced, and perfected type. This latest kind of empire does not annex even the land; it only annexes the wealth or the wealth –producing elements in the country. By doing so it can exploit the country fully to its own advantage and can largely control it, and at the same time has to shoulder no responsibility for governing and repressing that country. In effect both the land and the people living there are dominated and largely controlled with the least amount of trouble.

In this way imperialism has perfected itself in the course of time, and the modern type of empire is the invisible economic empire. When slavery was abolished, and later when the feudal type of serfdom went, it was thought that men would be free. Soon, however, it was found that men were still exploited and dominated by those who controlled the money-power. From slaves and serfs, men became wage slavers; freedom for them was still far off. So also in the case of countries. People imagine that the only trouble is the political domination of one country by another, and that if this was removed, freedom would automatically come. But that is not so obvious, as we can see politically free countries entirely under the thumb of ohers because of economic domination. The British Empire in India is obvious enough. Britain has political control over India. Side by side with this visible empire. And as a necessary part of it, Britain has economic control over India. It is quite possible that Britain’s visible hold over India. Might go before long, and yet the economic control might remain as an invisible empire. If that happens, it means that the exploitation of India by Britain countinues.

Economic imperialism is the least troublesome form of domination for the dominating power. It does not give rise to so much resentment as political domination because many people do not notice it. But when the pinch is felt. People begin to appreciate its workings and resent it. In Latin America now there is not much love for the United States, and many efforts have been made to create a block of Latin American nations to oppose the dominance of North America. They are not likely to do much till they get over their habit of frequent palace revolutions and mutual quarrels.

The visible empire of the United States extends to the Philippine Islands. ಪುಟ ೫೭೦-೫೭೧,

[4]ಆತನ ಭಾರತೀಯ ರೂಪವಾದ ನೆಹರು, ಸಮಾಜವಾದದ ಬಗ್ಗೆ ಮಾತನಾಡುತ್ತಲೆ ಬಂಡವಾಳಷಾಹಿ ವ್ಯವಸ್ಥೆ ಮತ್ತು ಪ್ರಜಾಸತ್ತೆಯ ಹೆಸರಿನಲ್ಲಿ ಡೈನಾಸ್ಟಿ ಕಟ್ಟಿದ ಭಾರತದ ಸೀಸರ್‌ ಎಂದು ಹಂಗಿಸುವವರೂ ಇದ್ದಾರೆ. ಆದರೆ ಎಲ್ಲರೂ ಈಗ ಡೈನಾಸ್ಟಿ ಕಟ್ಟುತ್ತಿದ್ದು ನೆಹರು ಟೀಕಿಸುವ ನೈತಿಕ ಹಕ್ಕೂ ಇಲ್ಲವಾಗಿದೆ.