IV

ಕುರುಕ್ಷೇತ್ರ ಯುದ್ಧದೊಂದಿಗೆ ನಿಜವಾದ ಮೂಲ ಮಹಾಭಾರತ ಕೊನೆಯಾಗುತ್ತದೆ ಎಂದಾದಲ್ಲಿ ಅನಂತರದ ಭಾಗಗಳು ಅನಂತರದ ತಲೆಮಾರಿನ ಕವಿಗಳ ಕೈಚಳಕ, ಆ ರೀತಿ ಮಹಾಭಾರತಕ್ಕೆ ತಮಗೆ ಬೇಕಾದ್ದು ಅನ್ನಿಸಿದ್ದೆಲ್ಲವನ್ನೂ ಸೇರಿಸುವ ಅವಕಾಶ ಬಹಳ ಇತ್ತು. ಆ ಕಾರಣವೇ ಮಹಾಭಾರತ ಬೆಳೆಯುತ್ತಾ ಹೋಗಿ ಸಮೂಹಸೃಷ್ಟಿಯಾಗಿ ಪರಿವರ್ತನೆಗೊಂಡಿತು. ಆ ರೀತಿ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಂಡಿತು. ಆ ರೀತಿ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಳ್ಳಲು ಪ್ರಧಾನವಾಗಿ ಎರಡು ಗುಣಗಳು ಹೆಚ್ಚು ಅವಕಾಶ ಕಲ್ಪಿಸಿರಬಹುದು. ಅಲಿಖಿತ ಪರಂಪರೆಯ ಚಾರಣ ಕವಿಯಾದ ಹೋಮರ್‌ ರಚಿಸಿದ ಕೃತಿಗಳನ್ನು ಬಹಳ ಹಿಂದೆಯೇ ಗ್ರಂಥಸ್ಥಗೊಳಿಸಿದಂತೆ ಕಾಣುತ್ತದೆ. ಲಿಪಿ ಮತ್ತು ವರ್ಣಮಾಲೆಯ ಸೌಲಭ್ಯವನ್ನು ಬಹಳ ಹಿಂದೆಯೇ ಕಂಡುಕೊಂಡ ಗ್ರೀಕರು, ಆ ಸೌಲಭ್ಯ ದೊರಕಿದ ಕೊಡಲೇ ಅವುಗಳನ್ನು ಗ್ರಂಥರೂಪದಲ್ಲಿ ಬರೆದಿಡಲು ಮೊದಲು ಮಾಡಿದರು. ಆದರೆ ಆ ಸೌಲಭ್ಯ ಅನೇಕ ಶತಮಾನಗಳ ಕಾಲದವರೆಗೂ ಮಹಾಭಾರತಕ್ಕೆ ದೊರಕಿದಂತೆ ಕಾಣುವುದಿಲ್ಲ. ಮಹಾಭಾರತದ ಹಲವಾರು ಆವೃತ್ತಿಗಳ ಪರಂಪರೆ – ದಕ್ಷಿಣ, ಉತ್ತರ, ಈಶಾನ್ಯ ಇತ್ಯಾದಿ – ಚಾಲತಿಗೆ ಬರಲು ಆ ಸನ್ನಿವೇಶವೂ ಒಂದು ಕಾರಣ. ಈಗಾಗಲೇ ಉದಹರಿಸಲಾಗಿರುವ ಬುತೆನೆನ್‌ ಮುನ್ನುಡಿಯಲ್ಲಿನ ಹಿಂದಿನ ವಾಕ್ಯಗಳನ್ನು ಉದಾಹರಿಸುವುದರಿಂದ ಪರಿಸ್ಥಿತಿ ಹೆಚ್ಚು ಸ್ಪಷ್ಟವಾಗುತ್ತದೆ :

The text of The Mahābhārata itself gives us some idea how we should picture its authorship. In its present form it is recited by the bard Ugrasravas, who recites after Vaisampāyana, who was one of the pupils of Krsna Dvaipāyana. In other words, we have right here three generations of reciters throught whom the text had been transmitted. One cannot expect that this transmission was a literal one, as it has been in the case of the Veda. ಪುಟ XXIII – XXIV

ಮೂಲ ಮಹಾಭಾರತ ಮೂಲ ರಾಮಾಯಣಕ್ಕಿಂತ ಹಿಂದಿನ ಕೃತಿ ಎಂಬುದಕ್ಕೆ ಅದಕ್ಕಿಂತ ಮತ್ತೊಂದು ಉತ್ತಮ ಕಾರಣ ಬೇಕಿಲ್ಲ. ಅಲಿಖಿತ ಎಪಿಕ್‌ ಪರಂಪರೆಯ ಕೃತಿಯಾದ ಮಹಾಭಾರತವು ಅದೇ ಸ್ಥಿತಿಯಲ್ಲಿ ಅನೇಕ ಸತಮಾನಗಳವರೆಗೆ ಹರಿದುಬಂದಂತೆ ಕಾಣುತ್ತದೆ. ‘ಆದಿಪರ್ವ’ಕ್ಕೆ ಸುಕ್ತಂಕರ್‌ ಬರೆದೆ ಉಪೋದ್ಘಾತದ ಕೆಲ ಮಾತುಗಳನ್ನು ಇಲ್ಲಿ ಉದಾಹರಿಸುವುದು ಸೂಕ್ತ :

Vyasa, we are told, taught his Bhārata to his fie pupils: Sumantu, Jaimini, Paila, Suka and Vaisampāyana. And the five rhapsodists – the direct pupils of the author – it is reported, published five separate versions of the epic: ಪುಟ LXXV – LXXVI

ಮಹಾಭಾರತ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಳ್ಳಲು ಬೇಕಾದ ಎಲ್ಲ ಅವಕಾಶಗಳು ಇದ್ದವು. ಸಂಪರ್ಕದ ಅಭಾವ ವಹಿಸಿರಬಹುದಾದ ಪಾತ್ರವನ್ನು ಕೇವಲ ಊಹಿಸಿಕೊಳ್ಳಬೇಕಷ್ಟೆ.

ಸಮೂಹಸೃಷ್ಟಿಯಾಗಿ ಪರಿವರ್ತಿಸಿದ ನಂತರ ಭಾರತದ ಜನ ಸಾಧಿಸಿದ್ದಾದರೂ ಏನು? ಮಹಾಭಾರತದ ತರಹವೇ ರಾಮಾಯಣವನ್ನು ಸಮೂಹಸೃಷ್ಟಿಯಾಗಿ ಪರಿವರ್ತಿಸಲು ಹೋದ ಜನರು, ಉತ್ತರಕಾಂಡ ಬರೆಯುವುದರ ಮೂಲಕ ವಾಲ್ಮೀಕಿ ಮತ್ತು ಆತನ ಕೊಡುಗೆಯಾದ ರಾಮಾಯಣವನ್ನೇ ತಿರಸ್ಕರಿಸಿದರು.[1] ಆದರೆ ಒಂದೇ ವ್ಯತ್ಯಾಸ ಎಂದರೆ, ರಾಮಾಯಣವನ್ನು ಸಮೂಹ ಸೃಷ್ಟಿಯಾಗಿ ಸಂಪೂರ್ಣವಾಗಿ ಪರಿವರ್ತಿಸಲು ಅವರ ಕೈಯಲ್ಲಿ ಆಗಲಿಲ್ಲ. ಆದರೆ ಮಹಾಭಾರತವನ್ನು ಸಮೂಹಸೃಷ್ಟಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರೂ, ಕುರುಕ್ಷೇತ್ರದ ಯುದ್ಧದವರೆಗಿನ ಮಹಾಭಾರತದ ಮೂಲ ಜಾಯಮಾನವನ್ನು ಕಂದಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ನಿಜಕ್ಕೂ ಬಹುದೊಡ್ಡ ಸಮಾಧಾನಕರ ಸಂಗತಿಯೇ ಸರಿ. ಆದರೆ ಅಪರಭಾರತವನ್ನು ಸೇರಿಸುವುದರ ಮೂಲಕ ಅದನ್ನು ಮೂಲ ಮಹಾಭಾರತದ ಭಾಗವಾಗಿ ಬಿಡುವಂತೆ ಮಾಡುವುದರಲ್ಲಿ ಅವರು ಗಳಿಸಿದ ಯಶಸ್ಸು, ಇಡೀ ಮಹಾಭಾರತವನ್ನು ಸಮೂಹ ಸೃಷ್ಟಿಯಾಗಿ ಪರಿವರ್ತಿಸಲು ಪೂರಕವಾಯಿತು; ಏಕೆಂದರೆ, ಉತ್ತರಕಾಂಡ ರಚಿಸಿದ ಕವಿಗಳಿಗಿಂತ, ಮಹಾಭಾರತವನ್ನು – ಸಮೂಹ ಸೃಷ್ಟಿಯಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾದ ಕವಿಗಳು ಹೆಚ್ಚು ಚಾಣಾಕ್ಷರು ಮತ್ತು ಕುಶಲಿಗಳು ಆಗಿದ್ದಂತೆ ತೋರುತ್ತದೆ. ಭಗವದ್ಗೀತೆ ಮತ್ತು ಅಪರಭಾರತದ ನಡುವೆ ಇರುವ ಸಾಮ್ಯ ಮತ್ತು ವೈಷಮ್ಯ ಆ ಮಾತಿಗೆ ಅತ್ಯುತ್ತಮ ಉದಾಹರಣೆ. ಕ್ಲೈಬ್ಯತೆಯನ್ನು ಗೆಲ್ಲುವಂತೆ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಶ್ರೀಕೃಷ್ಣನು ಸಹ ಮುಂದೆ ಅದೇ ಕ್ಲೈಬ್ಯತೆಗೆ ತುತ್ತಾಗಿಬಿಡುತ್ತಾನೆ. ಆ ಕ್ಲೈಬ್ಯತೆ ಗೆಲ್ಲುವಂತೆ ಧರ್ಮರಾಯನಿಗೆ ಬೋಧಿಸುವವರು ಯಾರೂ ಕಾಣುವುದಿಲ್ಲ.

‘ಇಲಿಯಡ್‌’ ಬರೆದನಂತರ ಬದುಕಿಗೆ ಮರಳುವ ‘ಒಡಿಸ್ಸಿ’ಯಂಥ ಮತ್ತೊಂದು ಎಪಿಕ್‌ ಅನ್ನು ಹೋಮರ್‌ ಸೃಷ್ಟಿಸಿದರೆ, ಬದುಕಿನಿಂದ ವಿಮುಖ ಮಾಡುವ ಅಪರಭಾರತವನ್ನು ಭಾರತದ ಆ ಕಾಲದ ಮನಸ್ಸುಗಳು ಸೃಷ್ಟಿಸಿದವು. ವಾಸ್ತವವಾಗಿ ನೋಡುವುದಾದರೆ, ಕುರುಕ್ಷೇತ್ರ ಯುದ್ಧದವರೆಗಿನ ಭಾಗ ಬದುಕಿನ ಪರವಾದ ಎಪಿಕ್‌. ಎಲ್ಲ ಕಷ್ಟಕೋಟಲೆ ಸಹಿಸಿಕೊಂಡು ಬಂದ ಪಾಂಡವರು ತಮ್ಮ ಅಸ್ತುತ್ವ ಉಳಿಸಿಕೊಳ್ಳಲು, ಕೌರವರು ತಮ್ಮ ಜ್ಞಾತಿಗಳು ಎಂದು ಗೊತ್ತಿದ್ದೂ ಅವರ ವಿರುದ್ಧ ಸಂಘರ್ಷ ಮಾಡಲು ಹಿಂಜರಿಯುವುದಿಲ್ಲ. ಅಪರಭಾರತದಲ್ಲಿ ಅದೇ ಅವರ ಪಾಲಿನ ಪಾಪ ಮತ್ತು ನರಕವಾಗಿಬಿಡುತ್ತದೆ.

ಆ ಅಪರಭಾರತವೇ ಭಾರತದ ಆಧ್ಯಾತ್ಮಿಕ ಅನುಭವದ ತುತ್ತತುದಿ ಮತ್ತು ಗರಿಮೆ ಎಂದು ವಾದಿಸುವವರೂ ಬಿಟ್ಟರೆ, ಕೌರವರ ನಾಶದ ಜತೆಗೆ ಪಾಂಡವರು ಕಂಡುಕೊಂಡ ನಾಶದ ಕತೆಯಾಗಿ ಕೊನೆಕೊನೆಗೆ ಪರಿವರ್ತನೆಗೊಳ್ಳುವಂತೆ ತೋರುತ್ತದೆ. ಆ ಎಲ್ಲ ಕಾರಣ ಮಹಾಭಾರತವನ್ನು ರಾಷ್ಟ್ರೀಯ ಎಪಿಕ್ ಆಗಿ ಗುರುತಿಸುವುದು ಅತ್ಯಂತ ಕಷ್ಟವಾಗುತ್ತದೆ. ಅದೇ ಅದರ ಅಪರ ದರ್ಶನ ಅಥವಾ ಕಾಣ್ಕೆಯೂ ಆಗಿದ್ದಿರಬಹುದೇ?

ಮೂಲಕ್ಕೆ ಹೋಗಿ ‘ಗಿಲ್ಗಮೆಷ್‌’ ಹಾಡಿದ ಷಿನ್‌ – ಎಖಿ – ಉನ್ನಿನ್ನಿ ಕಡೆಯಿಂದ ದೃಷ್ಟಿ ಹರಿಸುವುದಾದಲ್ಲಿ, ತನ್ನ ಕಾಲದ ಬಿಕ್ಕಟ್ಟಾದ ಆದಿಸಂಸ್ಕೃತಿ ಮತ್ತು ನಗರಪ್ರಜ್ಞೆ ನಡುವಣ ಒಳಹರಿವಿನ ಸಂಘರ್ಷ ಮತ್ತು ತನ್ನ ಮೂಲವಾದ ಆದಿಸಂಸ್ಕೃತಿಯ ಪ್ರತಿನಿಧಿಗಳುನ್ನು ನುಂಗುತ್ತಾ ಸಾಗುವ ನಗರ ಸಂಸ್ಕೃತಿಯ ಕತೆಯನ್ನು ಎಪಿಕ್‌ ಆಗಿಸಿದವನೇ ಆತ; ಇಂದೂ ಮುಂದುವರಿದಿರುವ ತನ್ನ ಕಾಲದ ಆ ಬಿಕ್ಕಟ್ಟನ್ನು ಎಲ್ಲ ಕಾಲದ ಕತೆಯಾಗಿ ಪರಿವರ್ತಿಸುವುದರ ಮುಖೇನ ಕಾಲನ ಪ್ರಭಾವವನ್ನು ಒಪ್ಪಿಕೊಳ್ಳುತ್ತಲೇ ಆ ಕಾಲನನ್ನು ಪ್ರಭಾವಿಸುವ ಮಟ್ಟಿಗೆ ಬೆಳೆದ ಎಪಿಕ್‌ ‘ಗಿಲ್ಗಮೆಷ್‌’. ಪ್ರಭಾವ ಹೋಮರನ ಮೇಲಾಗಿರುವ ಸಾಧ್ಯತೆಯನ್ನು ಗುರುತಿಸಲಾಗಿದೆ.

‘ಗಿಲ್ಗಮೆಷ್‌’ ನಂತರ ಈ ಜಗತ್ತಿನ ಎಪಿಕ್‌ ಭೂಪಟದಲ್ಲಿ ಕಾಣಿಸಿಕೊಳ್ಳುವ ನಿಜವಾದ ದೊಡ್ಡ ಹೆಸರೇ ಭಾರತೀಯರು ಮಹರ್ಷಿ ಎಂದು ಅತ್ಯಂತ ಗೌರವದಿಂದ ಕರೆಯುವ ವ್ಯಾಸ : ದೊಡ್ಡ ತಾಯಿ – ತಂದೆಯ ಮಕ್ಕಳು ಅಥವಾ ಕುಟುಂಬದವರ ನಡುವೆ ಏರ್ಪಡುವ ಬಿರುಕು ಮುಂದೆ ಕುರುಕ್ಷೇತ್ರಕ್ಕೆ ನಾಂದಿಯಾಗುವ ರಣರಂಗ ಕುರಿತು ಎಪಿಕ್‌ ಬರೆದವನೇ ಈ ವ್ಯಾಸ ಮಹರ್ಷಿ. ಕುರುಕ್ಷೇತ್ರ ಎಂದರೆ: ಜ್ಞಾತಿಗಳು ಅಥವಾ ದಾಯಾದಿಗಳಾದ ಅಣ್ಣ ತಮ್ಮಂದಿರ ನಡುವಿನ ಕಲಹ; ಆ ಅಣ್ಣ ತಮ್ಮಂದಿರು ಮುಂದೆ ತಮ್ಮ ಸಂಬಂಧ ಮರೆಯುತ್ತಾ ಹೋಗಿ ಪ್ರತ್ಯೇಕ ಸಂಸ್ಕೃತಿ, ಜನಾಂಗ ಮತ್ತು ನಾಗರಿಕ ಸಮುದಾಯವಾಗಿ ವಿಂಗಡಣೆಗೊಳ್ಳುತ್ತಿದ್ದ ಕಾಲದ ಬಿಕ್ಕಟ್ಟು ಕುರಿತು ಎಪಿಕ್‌ ಬರೆದಾತ ಹೋಮರ್‌ – ಅವರಲ್ಲಿ ಒಂದು ಗುಂಪು ಏಷ್ಯನ್ನರ ಪ್ರತಿನಿಧಿಗಳಾಗಿ ಮುಂದೆ ಕಾಣಿಸಿಕೊಂಡರೆ, ಮತ್ತೊಂದು ಗುಂಪು ಯುರೋಪಿನ ಪ್ರತಿನಿಧಿಗಳಾದರು.

ವ್ಯಾಸ ಮಹರ್ಷಿ ಹಾಡಿದ ಮೂಲ ಮಹಾಭಾರತದ ಪುರಾತನತೆಯ ಮಹತ್ವ ಪಾಶ್ಚಿಮಾತ್ಯ ವಿದ್ವಾಂಸರಿಗೆ ಮೊದಲು ಗೊತ್ತಾಗಲು ಕಾರಣವಾದ ಹಿನ್ನೆಲೆ ಇಲ್ಲಿದೆ.[2] ಏಕೆಂದರೆ ಮಹಾಭಾರತದ ಪುರಾತನತೆ ಬಗ್ಗೆ ಹರಿಸಬೇಕಾದ ಗಮನವನ್ನು ಮೊದಲು ಹರಿಸಿದವರೇ ಅವರು. ಮೂಲ ಮಹಾಭಾರತದ ಕಾಲ ರಾಮಾಯಣಕ್ಕಿಂತ ಕನಿಷ್ಠ ನಾಲ್ಕು ಶತಮಾನ ಹಿಂದಕ್ಕೆ ಹೋಗುತ್ತದೆ ಎಂಬ ಸಂಶಯವನ್ನು ಮೊದಲು ವ್ಯಕ್ತಪಡಿಸಿದವರು ಸಹ ಅವರೇ. ಅವರಿಗೆ ಮಾತ್ರ ಆ ಅನುಮಾನ ಮೂಡಲು ಕಾರಣಗಳನ್ನು ಒದಗಿಸಿದಾತ ಹುಡುಕಿಕೊಂಡು ಹೊರಟ ಅವರು ಷಿನ್‌ – ಎಖಿ – ಉನ್ನಿನ್ನಿಯ ದರ್ಶನ ಮಾಡಬೇಕಾಯಿತು. ಅವರಿಬ್ಬರ ನಡುವಣ ಘಟ್ಟವೇ ಭಾರತದ ವ್ಯಾಸ ಎಂದು ಕಂಡುಕೊಳ್ಳಲು ಚರಿತ್ರೆಯ ಕಾಲಗತಿಯ ತೆಳ್ಳನೆಯ ಅರಿವಿದ್ದ ಅವರಿಗೆ ಬಹಳ ಕಾಲ ಬೇಕಾಗಲಿಲ್ಲ. ಆ ವ್ಯಾಸ ಆ ಕಾರಣ ಹೋಮರನಿಗೂ ಹಿಂದಿನವನಾಗಿರಲೇಬೇಕು.

ಆದಿಸಂಸ್ಕೃತಿ ಮತ್ತು ನಗರಪ್ರಜ್ಞೆಯ ಪ್ರತಿನಿಧಿಗಳಾದ ಎಂಕಿಡು ಮತ್ತು ಗಿಲ್ಗಮೆಷ್‌ ಒಡನಾಡಿಗಳಾಗಿದ್ದಂತೆಯೇ, ಅದರ ನಂತರದ ನಂತರದ ಬೆಳವಣಿಗೆಯಾದ ಖಂಡಾಂತರ ವಿಭಜನೆಯು ಏಷ್ಯ ಮತ್ತು ಯುರೋಪ್‌ ಎಂಬುದಾಗಿ ಒಡಕು ಕಾಣಲು ಅಣಿಯಾಗುತ್ತಿದ್ದ ಕಾಲದ ಚಿತ್ರಣ ನೀಡಿದವನು ಹೋಮರ್‌ ಆ ಎರಡೂ ಕಾಲಘಟ್ಟಗಳ ಆ ನಡುವಿನ ಹಂತದ ಚಿತ್ರಣ ನೀಡುವ ಎಪಿಕ್‌ ಇರಬೇಕಾಗುತ್ತದೆ ಎಂಬ ಊಹನೆಯನ್ನು ಗಟ್ಟಿಗೊಳಿಸಿದವನೇ ವ್ಯಾಸ. ಕೌರವ – ಪಾಂಡವರ ತರಹವೇ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಟ್ರೋಜನ್ನರು ಮತ್ತು ಅಖೈಯನ್ನರು ಜ್ಞಾತಿಗಳಾಗಿದ್ದಿರಬೇಕು ಎಂಬ ಊಹೆ ಇತಿಹಾಸದ ಗತಿಗೆ ಅನುಗುಣವಾಗಿರುವುದೇ ಆದಲ್ಲಿ, ಅವರ ನಡುವಿನ ಘರ್ಷನೆಯ ಚಿತ್ರಣ ನೀಡಿದ ಕವಿ ಸ್ವಾಭಾವಿಕವಾಗಿ ಹೋಮರನಿಗೂ ಹಿಂದಿನವನಾಗಬೇಕಾಗುತ್ತದೆ ಅಲ್ಲವೇ? ಆ ತರಹದ ಊಹೆ ಮತ್ತು ಅನುಮಾನ, ಯುರೋಪ್‌ ಮೂಲದ ವಿದ್ವಾಂಸರನ್ನು ಮಹಾಭಾರತದ ಪುರಾತನತೆ ಕುರಿತಂತೆ ಬಹಳ ಗಂಭೀರ ಚಿಂತನೆಗೆ ಪ್ರೇರೇಪಿಸಿರಬಹುದು. ಅವರ ಚಿಂತನೆ ಅದೇ ಕಾಲನ ಪದಗತಿಗೆ ಅನುಗುಣವಾಗಿದೆ ಎಂಬುದನ್ನು ಅದೇ ಇತಿಹಾಸ ಸಾಬೀತುಪಡಿಸಿದೆ. ಮಾನವ ಜನಾಂಗಗಳು ತಾವು ನೆಲೆ ನಿಂತ ಭೌಗೋಳಿಕ ಹಿನ್ನೆಲೆಗೆ ಅನುಗುಣ ಭಿನ್ನ ಜನಾಂಗ ಮತ್ತು ರಾಷ್ಟ್ರೀಯ ಗುಂಪುಗಳಾಗಿ ಹಂಚಿಹೋಗುವ ಮೊದಲು ಜ್ಞಾತಿಗಳಾಗಿದ್ದ ಕಾಲದ ಚಿತ್ರಣ ಮತ್ತು ಅವರ ನಡುವಿನ ಸಂಘರ್ಷದ ಕತೆ ನೀಡಿದವನೇ ವ್ಯಾಸ: ಮತ್ತು ಆ ಮೂಲಕ ಮಾನವ ಚರಿತ್ರೆಯ ಗತಿಯ ಒಂದು ಪ್ರಮುಖ ಹಂತವನ್ನು ಆತ ಪ್ರತಿನಿಧಿಸುತ್ತಾನೆ.

ವ್ಯಾಸನನ್ನು ವಾಲ್ಮೀಕಿಗೂ ಮತ್ತು ಹೋಮರನಿಗೂ ಹಿಂದಿನ ಕವಿ ಎಂಬ ಯುರೋಪ್‌ ಮೂಲದ ಜನರ ವಾದವನ್ನು ಒಪ್ಪುವುದಾದಲ್ಲಿ ಭಾರತದ ಪ್ರಮುಖ ಆಧ್ಯಾತ್ಮಿಕ ಕಲ್ಪನೆಗಳ ಪೈಕಿ ಒಂದಾದ ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಇತ್ಯಾದಿ ಯುಗಗಳ ನಂಬಿಕೆಯ ಬುಡವೇ ಅಲುಗಾಡಬೇಕಾಗುತ್ತದೆ ಎಂಬ ಭಯ ಪಾಶ್ಚಿಮಾತ್ಯರ ವಾದವನ್ನು ಒಪ್ಪದಿರಲು ಕಾರಣವಾಗಿದ್ದಿರಬಹುದು. ಆ ತರಹದ ಭಯ ಅನಗತ್ಯ ಮತ್ತು ಆ ನಂಬಿಕೆ ಭಾರತೀಯ ಸಂಸ್ಕೃತಿಗೆ ಮಾತ್ರ ವಿಶೇಷವಾದುದೇನಲ್ಲ. ಜತೆಗೆ, ರಾಮನನ್ನು ತ್ರೇತಾಯುಗದ ಮತ್ತು ಕೃಷ್ಣನನ್ನು ದ್ವಾಪರದ ಪ್ರತಿನಿಧಿಗಳಾಗಿ ಕಾಣುವ ಬೆಳವಣಿಗೆ ತೀರ ಇತ್ತೀಚಿನದು. ಬೈಬಲ್‌ನ ಎಡೆನ್ ತೋಟದ ಆಡಂ ಮತ್ತು ಈ‌ವ್‌ ಕತೆಯಲ್ಲಿಯು ಆ ಕಲ್ಪನೆಯ ಎಳೆಗಳನ್ನು ಗುರುತಿಸಬಹುದು. ಈಗಾಗಲೇ ಕಳೆದುಹೋದ ಯುಗವು ಮುಗ್ಧ ಅಥವಾ ಸತ್ಯಯುಗವಾಗಿದ್ದು ಮುಂದೆ ಬರುವ ಕಾಲ ಅಂತಾದ್ದೇ ಆಗಿರುತ್ತದೆ ಎಂಬ ನಂಬಿಕೆ ಅನೇಕ ಸಂಸ್ಕೃತಿಗಳಿಗೆ ಸಮಾನವಾದುದು. ಭಾರತದ ನಾಲ್ಕು ಯುಗದ ಕಲ್ಪನೆ ಸುಗ್ಗಿ, ಮಳೆ, ಚಳಿ ಹಾಗೂ ಬೇಸಿಗೆ ಕಾಲದ ಮತ್ತೊಂದು ಅವತಾರ ಎಂದು ಡಿ.ಡಿ. ಕೋಸಾಂಬೀ ಭಾವಿಸುತ್ತಾರೆ.

ದುಡಿವ ವರ್ಗದ ಜನರ ಕೈಗೆ ಅಧಿಕಾರ ಬಂದನಂತರ ರಾಜ್ಯಗಳೇ ಇಲ್ಲವಾಗಿ ಸಮಾನತೆಯ ಸಮಾಜದ ಕೃತಯುಗ ಬರಲಿದೆ ಎಂಬ ಮಾರ್ಕ್ಸ್‌‌ವಾದಿಗಳ ನಂಬಿಕೆಯಲ್ಲೂ ಸಹ ಆ ಎಳೆಗಳನ್ನು ಗುರುತಿಸಬಹುದಾಗಿದೆ.

ಏನಾದರಿರಲಿ; ಮಹಾಭಾರತದ ವಸ್ತು, ಹುಟ್ಟುತ್ತಾ ಅಣ್ಣ ತಮ್ಮಂದಿರಾಗಿ ಬೆಳೆಯುತ್ತಾ ದಾಯಾದಿಗಳು ಮತ್ತು ವೈರಿಗಳಾಗಿ ಮಾರ್ಪಟ್ಟವರ ಸಂಘರ್ಷಕ್ಕೆ ಸಂಬಂಧಿಸಿದ್ದು, ‘ಗಿಲ್ಗಮೆಷ್‌’ ಎಪಿಕ್‌ ಅದರ ಹಿಂದಿನ ಅಧ್ಯಾಯವಾದ ಆದಿಸಂಸ್ಕೃತಿ ಮತ್ತು ನಗರಪ್ರಜ್ಞೆಗಳ ನಡುವಿನ ಸಂಘರ್ಷದ ಕತೆ ಹೇಳಿದರೆ, ವ್ಯಾಸರ ಕಾಲದಲ್ಲಿ ದಾಯಾದಿಗಳಾಗಿದ್ದವರು ಬೇರ್ಪಟ್ಟು ವಿಭಿನ್ನ ಸಂಸ್ಕೃತಿ ಮತ್ತು ಜನಾಂಗಗಳಾಗಿ ಮಾರ್ಪಡುವ ಮುಂದಿನ ಹಂತದ ಬಿಕ್ಕಟ್ಟಿನ ಸಂಘರ್ಷದ ಕತೆಯನ್ನು ನಿರುಪಿಸುವುದೇ ಹೋಮರನ ‘ಇಲಿಯಡ್‌’ ; ಅದರ ಮುಂದಿನ ಹಂತವಾಗಿ ಒಂದು ಗಂಡಿಗೊಂದು ಹೆಣ್ಣು ಮತ್ತು ಹೆಣ್ಣಿಗೊಂದು ಗಂಡು ಎಂಬ ಕೌಟುಂಬಿಕ ಸ್ಥಿರತೆಯ ನಾಗರಿಕ ಸಮಾಜದ ಚಿತ್ರಣ ನೀಡುವ ವಾಲ್ಮೀಕಿ “ ‘ರಾಮಾಯಣ’ ಬರುತ್ತದೆ. ಈ ಜಗತ್ತಿನಲ್ಲಿ ಇರುವುದು ಈ ನಾಲ್ಕೇ ಎಪಿಕ್‌ : ಅದು ಹೊರತು ಬೇರೆ ಯಾವ ಎಪಿಕ್‌ಗಳೂ ಇಲ್ಲ, ಎಪಿಕ್‌ ಎಂಬ ಪದ ಅನ್ವಯಿಸುವುದು ಈ ನಾಲ್ಕು ಕೃತಿಗಳಿಗೆ ಮಾತ್ರ: ಅವುಗಳನ್ನು ಹಾಡಿನ ಪ್ರಾಜ್ಞ ಷಿನ್‌ – ಎಖಿ – ಉನ್ನಿನ್ನಿ, ಮಹರ್ಷಿ ವ್ಯಾಸ, ರಾಜರ್ಷಿ ಹೋಮರ್‌ ಮತ್ತು ಋಷಿ ವಾಲ್ಮೀಕಿ ಮಾತ್ರವೇ ಈ ಜಗತ್ತಿನ ನಿಜವಾದ ಎಪಿಕ್‌ ಕವಿಗಳು.

ಈಗಾಗಲೇ ನಿರ್ಬಂಧವಿಲ್ಲ. ಅವರು ಬಂದ ಕಾಲದಲ್ಲಿ ಅವುಗಳ ಕಲ್ಪನೆ ಇರಲಿಲ್ಲ. ಅವರಿಗಿರುವುದು ಅವರು ಮೀರಬಯಸುವ ಭಾಷೆ, ಭೌಗೋಳಿಕ ಹಿನ್ನೆಲೆ ಮತ್ತು ಕಾಲನ ನಿರ್ಬಂಧದ ಮಿತಿ ಮಾತ್ರ. ಅವುಗಳ ಇರುವಿಕೆಯನ್ನು ಇದ್ದೂ ಇಲ್ಲದಂತೆ ಸ್ವೀಕರಿಸಿ ಕಾವ್ಯ ಹಾಡಿದವರೇ ಎಪಿಕ್‌ ಕವಿಗಳು. ಷಿನ್‌ – ಎಖಿ – ಉನ್ನಿನ್ನಿಗೆ ಆ ಬಂಧನವೂ ಇಲ್ಲ. ಏಕೆಂದರೆ, ಆತ ತಮ್ಮವನು ಎಂದು ಅಪ್ಪಿಕೊಳ್ಳಬಯಸುವ ಸಾಂಸ್ಕೃತಿಕ ಹಿನ್ನೆಲೆ, ವಾತಾವರಣ ಇರಾಕ್‌ ಮತ್ತು ಇರಾನ್‌ನಲ್ಲಿ ಇಂದು ಉಳಿದಿಲ್ಲ. ಮೆಸಪೊಟೋಮಿಯ ಭಾಗದಲ್ಲಿ ಬಾಳಿ ಬದುಕಿದ ಎಂಬ ತುಂಡು ನೆನಪು ಬಿಟ್ಟರೆ, ಒಂದು ತರಹದಲ್ಲಿ ನಿರಾಶ್ರಿತ ಎಪಿಕ್‌ ಕವಿಯಾತ. ಆದರೆ ಹೋಮರನಿಗೆ ಒಂದು ಬಲವಾದ ಭಾಷೆಯ ಹಿನ್ನೆಲೆಯಿದೆ ಮತ್ತು ಆತ ತಮ್ಮವನು ಎಂದು ಒಪ್ಪಿಕೊಂಡು ಹೆಮ್ಮೆಪಡುವ ಪ್ರಬಲ ಜನಾಂಗ ಮತ್ತು ದೇಶಗಳ ಸಮುದಾಯವೇ ಆತನ ಹಿಂದಿದೆ.

ಕವಿಯಾಗಿ ಎಪಿಕ್‌ ನಿರೂಪಿಸುವ ಹೋಮರನಿಗೆ ಯಾವುದೇ ಒಲವರ, ಪರ ಅಥವಾ ವಿರೋಧವಾದ ನಿಲುವು ಇರುವಂತೆ ಕಾಣುವುದಿಲ್ಲ. ಗೆದ್ದವರು ಗ್ರೀಕರಾದುದು. ಕಾಲ ಅವರ ಪರವಾಗಿದ್ದುದು ಒಂದಾದರೆ, ಗೆದ್ದ ಗ್ರೀಕರು ಪಶ್ಚಿಮ ಸಂಸ್ಕೃತಿ ಮತ್ತು ನಾಗರಿಕತೆಯ ಮೂಲಪುರುಷರಾಗಿ ಬಿಂಬಿತಗೊಂಡುದು ಮತ್ತು ಆ ಎಪಿಕ್‌ ಬರೆದ ಹೋಮರನನ್ನು ತಮ್ಮ ಕವಿ ಎಂದು ಅಪ್ಪಿಕೊಂಡವರು ಅದೇ ಗ್ರೀಕರ ಮುಂದಿನ ಸಂತತಿಗೆ ಸೇರಿದವರಾಗಿರುವುದು: ಆ ಬೆಳವಣಿಗೆಯೇ ಅದರ ಮುಂದಿನ ಬೆಳವಣಿಗೆಯಾಗಿಬಿಡುತ್ತದೆ. ಆ ಹೋಮರ್‌ ತಮ್ಮ ಕವಿ ಎಂದು ಕರೆದುಕೊಳ್ಳುವ ಅವಕಾಶ ಸಂಪೂರ್ಣ ನಿರ್ನಾಮವಾದ ಟ್ರೋಜನ್ನರಿಗೆ ದೊರಕದೆ ಹೋಗಿರಬಹುದು. ಆ ಟ್ರೋಜನ್ನರ ತರಹವೇ ‘ಇಲಿಯಡ್‌’ ಹಾಡಿದ ಹೋಮರ್‌ ಕೂಡ ಏಷ್ಯಾ ಮೈನರ್‌ ಭಾಗದವನಾಗಿದ್ದ ಎಂದು ನಂಬಲು ಅವಕಾಶವಿದೆ. ಆದರೆ ಆ ಭಾಗದ ಯಾವ ಮುಂದಿನ ಜನಾಂಗಗಳೂ ಹೋಮರ್‌ ಮತ್ತು ಆತನ ಎಪಿಕ್‌ಗಳನ್ನು ತಮ್ಮ ಸಂಸ್ಕೃತಿಯ ಮುಖಮುದ್ರೆಗಳಾಗಿ ಸ್ವೀಕರಿಸಲು ಅಥವಾ ಕಂಡುಕೊಳ್ಳಲು ಹೋಗಲಿಲ್ಲ. ಆ ಹಕ್ಕನ್ನು ಚಲಾಯಿಸಿದವರೇ ಯುರೋಪಿನವರಾಗಿದ್ದರು. ಒಂದಕ್ಕೊಂದರಂತೆ ತಳುಕು ಹಾಕಿಕೊಂಡಿರುವ ಆ ಬೆಳವಣಿಗೆಗಳನ್ನು ಹನುಮನ ಉಕ್ತಿಯಾದ ‘ಕಾಲಸ್ಯ ನಿಶ್ಚಯಃ’ ಎಂಬ ಮಾತಿನಿಂದ ಮಾತ್ರ ಗ್ರಹಿಸಲು ಪ್ರಯತ್ನಿಸಬಹುದಾಗಿದೆ.

ಆ ಟ್ರೋಜನ್ನರ ಹೆಮ್ಮೆಯ ಪುತ್ರನಾದ ಹೆಕ್ತರ್‌ ಮತ್ತು ಆತನ ತಂದೆಯ ಪಾತ್ರ ಚಿತ್ರಣ ಕಾಲದಲ್ಲಿ ಹೋಮರ್‌ ಪ್ರದರ್ಶಿಸುವ ಕಾಲದ ಸ್ಪಂದನದ ಮಹತ್ವ.

 

[1]ವಾಲ್ಮೀಕಿಗೆ ತೋರಿದ ಅಂತಹ ‘ಮರ್ಯಾದೆ’ಯನ್ನು ಈ ಜಗತ್ತಿನ ಯಾವ ಕವಿಗಳೂ ಅನುಭವಿಸಿದ ಉದಾಹರಣೆ ಖಂಡಿತ ಇಲ್ಲ.

[2]ಮಹಾಭಾರತವು ರಾಮಾಯಣಕ್ಕಿಂತ ಹಿಂದಿನದು ಎಂಬ ವಾದವನ್ನು ಪುರಸ್ಕರಿಸುವ ಹತ್ತಿರತ್ತಿರ ಬಂದ ಡಾ. ಕೃಷ್ಣಮೂರ್ತಿಗಳು ನಂತರ ಹಿಂಜರಿವ ಸಂಗತಿಯನ್ನು ಈಗಾಗಲೇ ನಮೂದಿಸಲಾಗಿದೆ. ಭಾರತದ ಅತ್ಯಂತ ಮಹಾ ಪಂಡಿತರು ಮತ್ತು ಉತ್ತಮ ಸಂಶೋಧಕರ ಪೈಕಿ ಒಬ್ಬರಾದ ಡಾ.ಪಿ.ವಿ.ಕಾಣೆಯವರು ಆ ವಿಚಾರದಲ್ಲಿ ಎದುರಿಸಿದ ಕಷ್ಟವನ್ನು ನಮೂದಿಸುವ ಸರದಿ ಈಗಿನದು. ಮಹಾಭಾರತವು ರಾಮಾಯಣಕ್ಕಿಂತ ಹಿಂದಿನದು ಎಂಬುದಕ್ಕೆ ಪುರಾವೆಯಾಗಿ ಪಾಶ್ಚಿಮಾತ್ಯ ವಿದ್ವಾಂಸರು ಮಂಡಿಸುವ ವಾದವನ್ನು ಬಹುತೇಕ ಗ್ರಹಿಸುವ ಕಾಣೆಯವರು ತಮ್ಮ ‘ಹಿಸ್ಟರಿ ಆಫ್‌ ಧರ್ಮಶಾಸ್ತ್ರ’ದ ಮೊದಲ ಸಂಪುಟದಲ್ಲಿ ಈ ರೀತಿ ಸಂಗ್ರಹಿಸಿರುತ್ತಾರೆ:

The discussions so far held make this clear that the main characters of the Mahābhārata were known long before Panini and that tales relating to Pāndava heroes had been embodied in a work or in works in verse long before Patanjali wrote i.e.that the core of the Mahābhārata existed before 500 B.C. The same cannot be said about the Rāmāyana. There is no evidence to show that the principal characters of the Rāmāyana were known to Pānini or even to Pātanjāli. At the most one can say that the three names, Dasaratha, Rāma and Sita, were probably known about 250-200 B.C. but not described as endowed with the qualities they bear in the extant Rāmāyana. Therefore, one may conclude that there was a Bharata epic long before there was a Rama Epic.

ಅದೇ ದಾಟಿಯಲ್ಲಿ ಮಾತುಗಳನ್ನು ಮುಂದಿನ ಪುಟದಲ್ಲಿ ಮುಂದುವರಿಸುತ್ತಾ :

It has been shown above that the Rāma story and characters are mentioned in the extant Mahābhārata and the legends and some well-known characters in the Mahābhārata are noted in the extant Ramayana. Therefore, all that one can say is that both works have influenced each other. But as the core of the Mahābhārata is much older than that of the Rāmāyana and as the Mahābhārata is four times as bulky as the Rāmāyana, it is the latter that most probably borrowed several matters from the great Epic.

Bhandarkar Oriental Research Institute, Pune ೧೯೬೮, ಪುಟ ೩೭೨-೩೭೩ ಎಂದು ಬರೆಯುವ ಅವರಿಗೆ ಆ ಕುರಿತಂತೆ ಪಾಶ್ಚಿಮಾತ್ಯ ವಿದ್ವಾಂಸರಾದ ವಿಂಟರ್‌ನಿಟ್ಜ್‌, ಹಾಪ್‌ಕಿನ್ಸ್‌ ಮೊದಲಾದವರು ಮಂಡಿಸುವ ವಾದವನ್ನು ಒಪ್ಪುವುದು ಕಷ್ಟವಾಗಿ ಕಾಣುತ್ತದೆ.