V

ಟ್ರಾಯ್‌ ಯುದ್ಧಾನಂತರ ಟ್ರೋಜನ್ನರ ಸರ್ವನಾಶವಾದಂತೆ, ಕೌರವರ ನಿರ್ನಾಮದೊಂದಿಗೆ ಕುರುಕ್ಷೇತ್ರ ಯುದ್ಧ ಮುಕ್ತಾಯಗೊಳ್ಳುತ್ತದೆ. ಗೆದ್ದ ಗ್ರೀಕರ ಕವಿ ಹೋಮರ್‌ ಎಂದು ನಿಶ್ಚಹಿಸಿದಂತೆ, ಮಹಾಭಾರತ ಪಾಂಡವರ ಮತ್ತು ರಾಮಾಯಣ ಗೆದ್ದ ರಾಮನ ಕೃತಿಗಳು ಎಂಬ ಭಾವನೆಗಳನ್ನು ಅದೇ ಕಾಲವೇ ಗಟ್ಟಿಗೊಳಿಸಿದಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿರುವಂತೆ ತೋರುವುದಿಲ್ಲ. ಪಾಂಡವ ಕೌರವರ ಹಿತಾಸಕ್ತಿಗಳಾಚೆಯ ಸತ್ಯ ಮತ್ತು ಮಾನವ ಚರ್ಯೆಗಳನ್ನು ಮೂಲ ಮಹಾಭಾರತದ ಕವಿಯಾದ ವ್ಯಾಸ ಗುರುತಿಸಲು ಪ್ರಯತ್ನಿಸಿದಂತೆ, ಹೋಮರ್‌ ಸಹ ಟ್ರೋಜನ್ನರು ಮತ್ತು ಅಖೈಯನ್ನರ ಪೌರುಷ, ಅಹಂ ಮತ್ತು ಪ್ರತಿಷ್ಠೆಗಳಿಗೂ ಮೀರಿದ ಮಾನವ ನಡವಳಿಕೆಯ ಹಿಂದಿನ ಮೂಲಸೂತ್ರಗಳನ್ನು ಗ್ರಹಿಸಲು ಯತ್ನಿಸುತ್ತಾನೆ. ರಾಜರ್ಷಿ ಹೋಮರ್‌ ಗ್ರೀಕ್‌ ಕವಿಯಾಗಿ ಮಾರ್ಪಡಲು ಕಾಲಕ್ಕೆ ಅನುಗುಣ ಆದ ಬದಲಾವಣೆಗಳು ಕಾರಣವಾಗಿದ್ದಿರಬಹುದಾದಂತೆ, ವ್ಯಾಸ ಮಹರ್ಷಿ ಭಾರತದ ಅಂದರೆ ಪಾಂಡವರ ಕವಿಯಾಗಿ ರೂಪುಗೊಳ್ಳಲು ಅದೇ ಕಾಲನ ಪದಗತಿಯೇ ಪೂರಕವಾಗಿದ್ದಿರಬಹುದು. ಮುಂದಿನ ರಾಜ ಯಾರಾಗಬೇಕು ಎಂಬ ವಿವಾದ ಕುರಿತಂತೆ ಇದ್ದ ಅಸ್ಪಷ್ಟತೆ ಮತ್ತು ಅನಿಶ್ಚತತೆ ಕುರುಕ್ಷೇತ್ರ ಯುದ್ಧಕ್ಕೆ ಮೂಲ ಕಾರಣವಾದಂತೆಯೇ, ಕೆಲವೊಂದು ಧರ್ಮಸೂಕ್ಷ್ಮಗಳು ಭೀಷ್ಮ, ದ್ರೋಣ ಮೊದಲಾದವರ ಕೈಕಟ್ಟಿರಬಹುದು. ಅದೇ ತರಹದ ಕೆಲ ಸೂಕ್ಷ್ಮಗಳು ಹೆಲೆನಳನ್ನು ಅಪಹರಿಸಿಕೊಂಡುಹೋದ ಪ್ಯಾರಿಸ್‌ನ ಸೋದರ ಹೆಕ್ತ್‌ನ ನಡವಳಿಕೆಯನ್ನು ನಿರ್ಬಂಧಿಸಿದಂತೆ ತೋರುತ್ತದೆ. ವಿವೇಚನೆ ಮತ್ತು ವಿವೇಕದ ಕೊರತೆ ಕುರುಕ್ಷೇತ್ರ ಯುದ್ಧಕ್ಕೆ ಅವಕಾಶ ಕಲ್ಪಿಸಿದಂತೆ, ಅದೇ ಕೊರತೆಗಳು ಟ್ರಾಯ್‌ ಪತನಕ್ಕೆ ದಾರಿಕೊಟ್ಟಿರಬಹುದು ಎಂಬುದನ್ನು ಗುರುತಿಸುವ ವ್ಯಾಸ ಮತ್ತು ಹೋಮರನ ದೃಷ್ಟಿಕೋನದಲ್ಲಿ ಬಹಳ ಹೊಂದಾಣಿಕೆ ಇರುವಂತೆ ತೋರುತ್ತದೆ. ಗಮನಿಸಬಹುದಾದ ಮತ್ತೊಂದು ಸಂಗತಿ ಎಂದರೆ, ‘ಮಹಾಭಾರತ’ ಮತ್ತು ‘ಇಲಿಯಡ್‌’ ದುರಂತದಲ್ಲಿ ಸಮಾನ ಪಾತ್ರವಹಿಸುವ ಪುತ್ರವ್ಯಾಮೋಹ; ಧೃತರಾಷ್ಟ್ರನ ನೂರು ಜನ ಮಕ್ಕಳು ಪಾಂಡವರ ಕೈಯಲ್ಲಿ ಹತರಾದರೆ, ಪ್ರಿಅಂನ ಅರ್ಧ ನೂರು ಮಕ್ಕಳು ಅಖ್ಯೆಯನ್ನರ ಕೈಲ್ಲಿ ಗತಿ ಕಾಣುತ್ತಾರೆ. ಧೃತರಾಷ್ಟ್ರ ತನ್ನ ಮಕ್ಕಳಿಗೆ ಬಹಳ ಅಗತ್ಯವಾಗಿದ್ದ ವಿವೇಕ ಕಲಿಸಲು ಪ್ರಯತ್ನಿಸಲಿಲ್ಲವಾದಂತೆ, ಮಕ್ಕಳು ಮಾಡಿದ್ದೆಲ್ಲ ಪ್ರಿಅಂಗೆ ಪ್ರಿಯವಾಗಿ ಕಾಣುತ್ತದೆ. ಇಡೀ ಮಹಾಭಾರತದಲ್ಲಿ ವಿವೇಕದ ಸಾಕಾರವಾಗಿ ಕಾಣುವ ವಿದುರ ಒಬ್ಬಂಟಿ, ಪಾಂಡವ ಪಕ್ಷಪಾತಿಯಾಗಿ ಬಿಡುತ್ತಾನೆ. ಅದೇ ತರಹದ ವಿವೇಕದಿಂದ ತುಂಬಿದ ಸಲಹೆಯೊಂದು ‘ಇಲಿಯಡ್‌’ನಲ್ಲೂ ಬರುತ್ತದೆ.[1] ಪ್ಯಾರಿಸ್‌ ಮತ್ತು ಮೆನಲೋಸ್‌ ನಡುವೆ ದ್ವಂದ್ವ ಯುದ್ಧ ನಡೆದು ಅವರಲ್ಲಿ ಯಾರು ಗೆಲ್ಲುತ್ತಾರೋ ಅವರ ಜತೆ ಹೆಲೆನ್‌ ಹೋಗಲಿ ಎಂಬ ಸಲಹೆ ಒಪ್ಪಿತವಾಗಿ, ಅದರಂತೆ ದ್ವಂದ್ವ ಯುದ್ಧ ನಡೆಯುತ್ತದೆ.

ವಿಚಿತ್ರವೆಂದರೆ, ಆ ಸಲಹೆ ಮಾಡುವವನೇ ಪ್ಯಾರಿಸ್‌. ಹೆಲೆನ್‌ ಮೆಚ್ಚಿಕೊಂಡು ಓಡಿಬಂದ ಆತ ಬಹಳ ಪುಕ್ಕಲು ಸ್ವಭಾವದ ವ್ಯಕ್ತಿ. ಶೌರ್ಯ ಮತ್ತು ಪೌರುಷಕ್ಕೆ ಹೆಸರಾದವರು ಮಾತ್ರ ಗಂಡಸರು ಎಂಬ ವಾತಾವರಣವಿದ್ದ ಆ ಕಾಲ. ಯುದ್ಧರಂಗದಲ್ಲಿ ಪೌರುಷಶಾಲಿಯಾದ ಮೆನಲೊಸ್‌ನನ್ನು ನೋಡಿದ ಕೂಡಲೇ ಪ್ಯಾರಿಸ್‌ ಅಲ್ಲಿಂದ ಹೆದರಿ ಕಾಲು ತೆಗೆದು ಗುಂಪಿನಲ್ಲಿ ಒಂದಾಗುವುದನ್ನು ಕಂಡ ಹೆಕ್ತರ್‌, ಹೀನಾಮಾನ ಝಂಕಿಸಿದಾಗ ಆತ ಅನಿವಾರ್ಯವಾಗಿ ದ್ವಂದ್ವ ಯುದ್ಧದ ಸಲಹೆ ಮುಂದಿಡುತ್ತಾನೆ.

ಅದು ಎಲ್ಲ ಟ್ರೋಜನ್ನರಿಗೂ ಅಖೈಯನ್ನರಿಗೂ ಒಪ್ಪಿಗೆಯಾಗುತ್ತದೆ. ಟಗರುಗಳನ್ನು ಕಡಿದು ದ್ರಾಕ್ಷಾರಸ ಸುರಿದು ಜ್ಯೂಸ್‌ ದೇವರ ಹೆಸರಿನಲ್ಲಿ ಎರಡೂ ಗುಂಪಿನವರು ಪ್ರಮಾಣ ಮಾಡುತ್ತಾರೆ. ತನ್ನ ಮಗ ಪ್ಯಾರಿಸ್‌, ಮೆನಲೊಸ್‌ ವಿರುದ್ಧ ಮುಖಾಮುಖಿ ಯುದ್ಧ ಮಾಡುವುದನ್ನು ನೋಡಲಾಗದೆ ಆತನ ತಂದೆ ಪ್ರಿಅಂ ರಣರಂಗದಿಂದ ಹಿಂದಕ್ಕೆ ಮನೆಗೆ ಹೋಗುತ್ತಾನೆ. ಈ ಕಡೆ ಮೆನಲೊಸ್‌ನನ್ನು ಎದಿರುಸಲಾಗದ ಪ್ಯಾರಿಸ್‌ ಯುದ್ಧಭೂಮಿಯಿಂದ ಪಲಾಯನ ಮಾಡುವುದೇ ಅಲ್ಲದೆ, ಆ ನಡುವೆಯೂ ಹೆಲೆನ್‌ ಜತೆ ರತಿಕ್ರೀಡೆಯ ಉತ್ತುಂಗದಲ್ಲಿ ತೊಡಗುವ ಚಿತ್ರಣ ದೊರಕುತ್ತದೆ. ಅಂತಹ ಕಾಮಲೋಲುಪತೆಯನ್ನು ರಾವಣನಲ್ಲೂ ಕಾಣಲಾಗುವುದಿಲ್ಲ. ಪರಿಸ್ಥಿತಿ ಹೀಗಿರಬೇಕಾದರೆ ಟ್ರೋಜನ್ನರ ಗುಂಪಿನ ಸೈನಿಕನೊಬ್ಬ ಬಿಟ್ಟ ಬಾಣವೊಂದು ಮೆನಲೊಸ್‌ನನ್ನು ಗಾಯಗೊಳಿಸುತ್ತದೆ.

ಮತ್ತೆ ಆರಂಭವಾದ ಟ್ರಾಯ್‌ ಯುದ್ಧ ಅದರ ಸರ್ವನಾಶದಲ್ಲಿ ಕೊನೆಗೊಳ್ಳುತ್ತದೆ. ಕೌರವರ ಅವಿವೇಕದಿಂದ ತುಂಬಿದ ಹಠಮಾರಿತನವೇ ಕುರುಕ್ಷೇತ್ರ ಯುದ್ಧಕ್ಕೆ ಕಾರಣ ಎಂಬ ಭಾವನೆ ಉಳಿಯುವ ತರಹವೆ, ಟ್ರೋಜನ್ನರ ಅವಿವೇಕವೇ ಟ್ರಾಯ್ ಪತನಕ್ಕೆ ಕಾರಣ ಎಂಬ ಭಾವನೆ ಉಳಿಯುತ್ತದೆ. ಹಾಗಾಗಿ ‘ಮೂಲ ಮಹಾಭಾರತ’ದ ವ್ಯಾಸ ಮತ್ತು ‘ಇಲಿಯಡ್‌’ನ ಹೋಮರ್‌ ಯಾರ ಪರ ಎಂಬ ಪ್ರಶ್ನೆಗೆ ಅಷ್ಟು ಮಹತ್ವ ದೊರಕದ ರೀತಿಯಲ್ಲಿ ಪರಿಸ್ಥಿತಿಯ ಚಿತ್ರಣ ತಂತಾನೆ ನಿರ್ವಹಣೆಗೊಳ್ಳುತ್ತದೆ. ಕಾಲನಿಗೆ ಸ್ಪಂದಿಸುವ ರೀತಿಯಲ್ಲಿ ಹೋಮರ್‌ ಮತ್ತು ವ್ಯಾಸರ ನಡುವಿನ ಅರ್ಥವಂತಿಕೆಯ ಹೊಂದಾಣಿಕೆ ಅಪೂರ್ವವಾದುದು. ಟ್ರಾಯ್‌ ದುರಂತಕ್ಕೆ ಕಾರಣ ಹುಡುಕುತ್ತಾ ಹೋಗುವಂತೆ, ಮಹಾಭಾರತದಲ್ಲೂ ದುರಂತಕ್ಕೆ ಕಾರಣವಾಗುವ ಅಂಶಗಳ ಅನ್ವೇಷಣೆ ಸಾಗುತ್ತದೆ; ರಾಮಾಯಣದಲ್ಲೂ ನಡೆಯುವುದು ಅದೇ ಹುಡುಕಾಟ.

ಅ – ರಾಷ್ಟ್ರೀಯ ಹಿನ್ನೆಲೆಯ ಹೋಮರ್‌ನ ಎಪಿಕ್‌ಗಳು ರಾಷ್ಟ್ರೀಯ ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಳ್ಳುವ ಸಾಧ್ಯತೆಯಿಂದ ಕೂಡಿರುವುದರಿಂದಾಗಿಯೇ, ಯುರೋಪ್‌ ಮೂಲದ ಜನ ಅವುಗಳನ್ನು ತಮ್ಮ ಪರಂಪರೆಯ ಒಂದು ಭಾಗವಾಗಿ ಕಂಡುಕೊಳ್ಳಲು ಅವಕಾಶವಾಯಿತು. ಆ ರಾಷ್ಟ್ರೀಯ ಪರಿಮಿತಿಯನ್ನು ಮೀರಿ ಎಲ್ಲರನ್ನು ತಲುಪುವ ಗುಣ ಅವುಗಳಲ್ಲಿ ಅಂತರ್ಗತವಾಗಿರುವುದು ಉಳಿದವರಿಗೂ ಅವು ಮೆಚ್ಚುಗೆಯಾಗುವ ಮಹತ್ವ ಪಡೆಯಲು ಕಾರಣವಾಗಿದೆ. ಮಹಾಭಾರತದ ಬಗ್ಗೆ ಅದೇ ಮಾತುಗಳು ಅನ್ವಯವಾಗುತ್ತವೆಯಾದರೂ ಅವುಗಳಲ್ಲಿನ ಅ – ರಾಷ್ಟ್ರೀಯತೆಯ ಅಂಶಗಳು ಬಹಳ ಹೆಚ್ಚಾಗಿವೆ. ಮಹಾಭಾರತವನ್ನು ಭಾರತೀಯವಾದ ಸಂಸ್ಕೃತದ ಎಪಿಕ್‌ ಎಂದು ನೋಡಿದಾಗ ಹೊಳೆಯುವ ಅರ್ಥವೇ ಬೇರೆಯಾದಂತೆ, ಮಾನವ ಜನಾಂಗವು ವಿಭಿನ್ನ ವರ್ಗ, ಜಾತಿ, ಜನಾಂಗ, ವರ್ಣ ಮತ್ತು ಪಂಗಡಗಳಲ್ಲಿ ಹಂಚಿಹೋಗುವುದಕ್ಕೂ ಪೂರ್ವದ ಜ್ಞಾತಿಗಳ ನಡುವಿನ ಕುರುಕ್ಷೇತ್ರ ಕುರಿತ ಎಪಿಕ್‌ – ಎಂಬ ದೃಷ್ಟಿಯಿಂದ ಓದುವುದರಿಂದ ಹೊಳೆಯುವ ಅರ್ಥಗಳೇ ಬೇರೆ.

ಮಹಾಭಾರತವನ್ನು ರಾಮಾಯಣಕ್ಕಿಂತ ಇತ್ತೀಚಿನ ಎಪಿಕ್‌ ಎಂದು ಪರಿಗಣಿಸುವುದರ ಮೂಲಕ ಭಾರತೀಯರೇ ಅದಕ್ಕೆ ಸಹಜವಾಗಿ ದಕ್ಕಬೇಕಾದ ಪುರಾತನತೆಯ ಪ್ರಾಮುಖ್ಯವನ್ನು ನಿರಾಕರಿಸಿದಂತೆಯೇ, ಅದು ಎಲ್ಲರಿಗೂ ಸಲ್ಲುವ ಮಾನವ ಜನಾಂಗದ ಮೂಲ ಎಪಿಕ್‌ ಎಂಬ ಪ್ರಾಮುಖ್ಯವನ್ನೂ ಕಳೆದುಹಾಕಲು ಕಾರಣವಾದರು ಎಂದು ಅತ್ಯಂತವಾದ ನೋವು ಮತ್ತು ವಿಷಾದದಿಂದ ದಾಖಲಿಸಿದೆ ಬೇರೆ ದಾರಿಯೇ ಇಲ್ಲ.

ಟ್ರಾಯ್‌ ಯುದ್ಧಾನಂತರ ಬದುಕಿಗೆ ಹಂಬಲಿಸುವ ಒದಿಸ್ಯೂಸ್‌ ಎಲ್ಲಿ? ಸ್ವರ್ಗಾಭಿಮುಖನಾಗಿ ಸಾಗುವ ಧರ್ಮರಾಯನೆಲ್ಲಿ? ಅಶ್ವಮೇಧಯಾಗ[2] ಮತ್ತು ಪರಿಕ್ಷಿತನಿಗೆ ಮಾಡುವ ಪಟ್ಟಾಭಿಷೇಕ ಹೊರತು ಪಾಂಡವರು ಕುರುಕ್ಷೇತ್ರದನಂತರ ಸಾಧಿಸಿದ್ದಾದರೂ ಏನು? ಕುರುಕ್ಷೇತ್ರ ಯುದ್ಧಾನಂತರದ ಬದುಕಿನಲ್ಲಿ ಸ್ವರ್ಗಾಭಿಮುಖ ಸಾಗುವ ಸಮಸ್ಯೆ ಹೊರತು ಅವರನ್ನು ನಿಜವಾಗಿಯೂ ಕಾಡಿದ ಸಮಸ್ಯೆಗಳಾದರೂ ಯಾವುವು? ಅವುಗಳನ್ನು ಪಾಂಡವರು ಯಾವ ರೀತಿ ಎದುರಿಸಿದರು? ಎಂಬ ಪ್ರಶ್ನೆಗಳನ್ನು ಮುಂದೆ ಬಂದ ಭಾರತದ ಎಲ್ಲ ತಲೆಮಾರಿನ ಜನರು ಕೇಳಿಕೊಳ್ಳಬೇಕಾದ ಅಗತ್ಯವಿತ್ತಲ್ಲವೇ? ಅದು ಹೊರತು ಅಪರಭಾರತ ರಚಿಸಿದ ಕವಿಗಳಿಗೆ ಮತ್ತು ಅದನ್ನು ಮೆಚ್ಚಿಕೊಂಡ ಜನರಿಗೆ ಬೇರೆ ಬದುಕೇ ಇರಲಿಲ್ಲವೇ? ಸಮರ್ಥನೆಯಾಗಿ ಇತ್ಯಾದಿ ಪ್ರಶ್ನೆಗಳಿಗೆ ‘ಭಗವದ್ಗೀತೆ’ಯ ವಾದಸರಣಿಯನ್ನು ಮುಂದೊಡ್ಡಬಹುದಾದರೂ, ‘ಅಪರಭಾರತ’ ಅದಕ್ಕೂ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಮರೆಯಬಾರದು.

ಯಾವ ಸ್ವರ್ಗದ ಹಂಬಲವನ್ನು ಯುರೋಪ್‌ ಮೂಲದ ಜನ ‘ಡಿವೈನ್‌ ಕಾಮಿಡಿ’ ಮೂಲಕ ಕಾಣಲು ಹಂಬಲಿಸಿದರೋ ಅದನ್ನು ಭಾರತದ ಜನ ಅಪರಭಾರತದ ಕಾಲಕ್ಕಾಗಲೇ ಕಂಡುಕೊಂಡಿದ್ದರು. ಅದೇ ಭಾರತದ ವಿಶೇಷತೆ ಎಂದು ವಾದಿಸುವವರೇ ಹೆಚ್ಚು ಮಂದಿ. ಆ ನಿಲುವನ್ನು ಬೆಂಬಲಿಸುವ ಪಾಶ್ಚಿಮಾತ್ಯ ವಿದ್ವಾಂಸರೂ ಇರಬಹುದು.

ಅಲ್ಲಿ ಬರುವ ಒಂದು ವ್ಯತ್ಯಾಸವನ್ನು ಗಮನಕ್ಕೆ ತಂದುಕೊಳ್ಳುವುದು ಉತ್ತಮ. ದಾಂತೆ ಹೋಮರನ ಅರ್ಥದಲ್ಲಿ ಎಪಿಕ್‌ ಕವಿಯಲ್ಲ. ಷಿನ್‌ – ಎಖಿ – ಉನ್ನಿನ್ನಿ, ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿಯಂಥ ಎಪಿಕ್‌ ಕವಿಗಳು ಎಲ್ಲ ಕಾಲದಲ್ಲೂ ಮತ್ತು ಎಲ್ಲ ಯುಗದಲ್ಲೂ ಬರುವುದು ಸಾಧ್ಯವಿಲ್ಲ. ಯಾವುದೋ ಒಂದು ಖಚಿತ ಕಾಲಮಾನ, ಪರಿಸ್ಥಿತಿ ಮತ್ತು ಸಂದರ್ಭದ ಕೊಡುಗೆಯಾದ ಅವರು: ಅದೇ ಕಾಲಮಾನ, ಪರಿಸ್ಥಿತಿ ಮತ್ತು ಸಂದರ್ಭಗಳ ಮೇಲೆ ನಿರಂತರ ಪ್ರಭಾವ ಬೀರುವವರು ಆಗಿರುತ್ತಾರೆ. ಕಾಲನ ಸೃಷ್ಟಿಯಾದ ಅವರಿಗೆ ಅದೇ ಕಾಲನನ್ನು ಸೃಷ್ಟಿಸುವ ಅವಕಾಶವೂ ದಕ್ಕಿರುತ್ತದೆ. ಆ ಕಾರಣ ಎಪಿಕ್‌ಗಳನ್ನು ನಿರ್ಮಿಸುವ ಅವಕಾಶ ಪಡೆದ ಕವಿಗಳು ಅಥವಾ ಕವಿಗಳನ್ನು ರೂಪಿಸುವ ಎಪಿಕ್‌ಗಳು ತಳೆಯುವ ದೃಷ್ಟಿಕೋನ, ನಿಲುವು ಮತ್ತು ಜೀವನಧರ್ಮ ಬಹಳ ಮುಖ್ಯವಾಗಿಬಿಡುತ್ತದೆ. ಒಮ್ಮೆ ಅವತರಿಸಿದ ಅವುಗಳನ್ನು ಬದಲಿಸುವುದು ಮತ್ತು ತಿದ್ದುವುದು ಅಥವಾ ಮಾರ್ಪಡಿಸುವುದು ಅಸಾಧ್ಯದ ಮಾತು. ಆ ಕಾರಣವೇ ಎಪಿಕ್‌ಗಳ ಜವಾಬ್ದಾರಿ ಬಹಳ ಗುರುತರ ಮತ್ತು ಮುಖ್ಯವಾದುದು.

‘ಡಿವೈನ್‌ ಕಾಮಿಡಿ’ಯಲ್ಲಿ ವ್ಯಕ್ತವಾಗುವ ಸ್ವರ್ಗದ ಹಂಬಲ ಬದುಕಿನ ವಿವಿಧ ಸಂದರ್ಭ ಮತ್ತು ಸ್ತರಗಳಲ್ಲಿ ವ್ಯಕ್ತವಾಗುವಂತಾದ್ದು: ನರಕ, ಮಾರ್ಜಕಲೋದಿಂದ ತುಂಬಿದ ಅದೇ ಬದುಕಿನಲ್ಲೇ ಸ್ವರ್ಗವೂ ಇದೆ ಎಂಬ ಮತ್ತು ಆ ಸ್ವರ್ಗ ಸ್ಪರ್ಶಕ್ಕಾಗಿ ಹಾತೊರೆಯುವ ಹಂಬಲ ದಾಂತೆ. ಆದರೆ ಬದುಕಿನ ಒಳಿತಿಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳುವ ಧರ್ಮರಾಯ ಅಲ್ಲಿ ಜಯಗಳಿಸಿದ ಕೂಡಲೇ ಅದರಿಂದ ವಿಮುಖನಾಗಿಬಿಡುವುದು ಒಂದು ತರಹದಲ್ಲಿ ಉಲ್ಟಾ ಬೆಳವಣಿಗೆಯಲ್ಲವೇ? ಮಹಾಭಾರತದ ಮುಂದಿನ ಸಹಜ ಭಾಗದಂತೆ ತೋರುವ ಅಪರಭಾರತವು ಆಂತರ್ಯದಲ್ಲಿ ಅದಕ್ಕೆ ವಿರುದ್ಧದ ಬೆಳವಣಿಗೆ. ಅಪರಭಾರತ ಅನ್ವೇಷಿಸುವ ಹತಾಶೆ ಅಥವಾ ಪಾಪಪ್ರಜ್ಞೆ: ಬದುಕಿನ ಬಗೆಗಿನ ಗಾಢ, ನಿಷ್ಠುರ ಅಥವಾ ದಟ್ಟ ತಿಳುವಳಿಕೆಯಿಂದ ಬಂದುದಾಗಿರಬಹುದು. ಇಡೀ ಮಾನವ ಜನಾಂಗವನ್ನು ಕೌರವ – ಪಾಂಡವರ ತರಹ ಪರಿಗಣಿಸಿ ಒಬ್ಬರನ್ನು ಒಬ್ಬರು ಕೊಂಡುಕೊಳ್ಳಲು ಮುಂದಾಗುವುದಾದಲ್ಲಿ, ಉಳಿಯುವುದು ಪಾಪಪ್ರಜ್ಞೆ ಮತ್ತು ಹತಾಶೆ ಎಂಬ ಅ – ರಾಷ್ಟ್ರೀಯ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಅಪರ ಭಾರತಕ್ಕೊಂದು ಅರ್ಥ ದೊರಕುತ್ತದೆ. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಮೂಲ ಭಾರತದ ಜಾಡನ್ನು ಕರಾರುವಕ್ಕಾಗಿ ಅರ್ಥ ಮಾಡಿಕೊಂಡು ಮುಂದುವರಿದವರಾಗಿ ಅಪರ ಭಾರತದ ಕವಿಗಳು ಕಾಣಿಸುತ್ತಾರೆ.

ಭಾರತೀಯ ಮನಸ್ಸು ಅಪರಭಾರತ ಮತ್ತು ಉತ್ತರ ರಾಮಾಯಣಗಳ ಸ್ಥಿತಿಯಲ್ಲಿ ಮುಳುಗಿರುವಾಗ ಕಾಳಿದಾಸನ ಆಗಮನವಾಗುತ್ತದೆ; ಆತನ ಆಗಮನವೆಂದರೆ, ಅಪರಭಾರತ, ಉತ್ತರ ರಾಮಾಯಣದಂತಹ ಮರುಪರಿಶೀಲನಾ ಪ್ರವೃತ್ತಿಯಿಂದ ಬಿಡಿಸಿಕೊಂಡು ನಿಜವಾದ ಸೃಜನಶೀಲತೆ ಕಂಡುಕೊಳ್ಳುವ ಪ್ರಯತ್ನಗಳ ಪುನರ್‌ ಆಗಮನ ಎಂದೇ ಅರ್ಥ. ವ್ಯಾಸ – ವಾಲ್ಮೀಕಿಯರ ನಂತರ ಕಾವ್ಯ ನಿರ್ಮಾಣ ಕಲೆ, ಮತ್ತು ಅಭಿವ್ಯಕ್ತಿ ಕಂಡುಕೊಂಡುದೇ ಕಾಳಿದಾಸನ ರೂಪದಲ್ಲಿ: ಆ ಇಬ್ಬರು ಎಪಿಕ್ ಕವಿಗಳ ನಂತರ ಭಾರತದ ಕಾವ್ಯಲೋಕದಲ್ಲಿ ಸ್ಫೋಟಗೊಂಡ ಅತ್ಯಂತ ಎತ್ತರದ ಪ್ರತಿಭಾಶಾಲಿ ಸೃಜನಶೀಲ ಶಕ್ತಿಯೇ ಕಾಳಿದಾಸ. ಮೊದಲೇ ಆಕರ್ಷಕವಾದ ಆತನ ಶೃಂಗಾರಪ್ರಿಯತೆ ಇನ್ನೂ ಹೆಚ್ಚು ಆಕರ್ಷಕವಾಗಲು ಆತನ ಮಂಡನಾ ವಿಧಾನವೂ ಕಾರಣವಾಗಿರುವಂತೆಯೇ, ಆತ ಬಂದ ಹಿನ್ನೆಲೆ ಮತ್ತು ಕಾಲವೂ ಕಾರಣವಾಗಿರಬಹುದು. ಅಪರಭಾರತ ಮತ್ತು ಉತ್ತರ ರಾಮಾಯಣಗಳ ಮನಃಸ್ಥಿತಿಯಲ್ಲಿ ಮುಳುಗಿದ್ದ ಜನರಿಗೆ, ಕಾಳಿದಾಸನ ಶೃಂಗಾರಪ್ರಿಯತೆ ಬಿಡುಗಡೆ ಎಂಬಂತೆ ತೋರಿಬಂದಿದ್ದರೆ ಆಶ್ಚರ್ಯವಿಲ್ಲ. ಆತನ ಆಗಮನದೊಂದಿಗೆ ಜೀವಪರವಾದ ತುಡಿತ ಮತ್ತು ಬದುಕಿನ ಮೋಡಿ ಮತ್ತೆ ಚೇತರಿಕೆ ಕಂಡುಕೊಂಡಿಬೇಕು. ಆ ಕಾರಣ ವ್ಯಾಸ ವಾಲ್ಮೀಕಿಯರ ಮುಂದಿನ ಹಂತವಾಗಿ ಕಾಳಿದಾಸ ಬೆಳೆದುಬಂದ ಬಗೆ, ಕಾವ್ಯ ಕಟ್ಟುವ ಕಲೆ ಮತ್ತು ಪರಂಪರೆಯ ನಿರ್ಮಾತೃವಾಗಿ ಆತ ವಹಿಸಿದ ಪಾತ್ರವನ್ನು ಬಹಳ ಆಪ್ತವಾಗಿ ಮತ್ತೆ ಮತ್ತೆ ಅವಲೋಕಿಸಬೇಕಾಗುತ್ತದೆ. ಏಕೆಂದರೆ ಭಾರತೀಯ ಕಾವ್ಯ, ಸಾಹಿತ್ಯ, ಮೀಮಾಂಸೆ, ವಿಮರ್ಶೆ ಮತ್ತು ಸಂಸ್ಕೃತಿಯ ಪರಂಪರೆ ಎಂದರೆ ಪ್ರಮುಖವಾಗಿ ವ್ಯಾಸ – ವಾಲ್ಮೀಕಿ ಮತ್ತು ಕಾಳಿದಾಸರು ಕಟ್ಟಿದ ಪರಂಪರೆಯ ಮೊತ್ತ.

ಇಡೀ ಭಾರತೀಯ ಮನಸ್ಸು ಸ್ವಂತವಾಗಿ ಕಾವ್ಯ ರಚಿಸುವುದನ್ನು ಕೈಬಿಟ್ಟು ಅಪರಭಾರತ ಮತ್ತು ಉತ್ತರ ರಾಮಾಯಣಗಳ ಕಲಬೆರಕೆ ತಟಾಕದಲ್ಲಿ ಮುಳುಗಿ ಸಾಗರದ ತಳ ಮತ್ತು ಆಕಾಶದ ಎತ್ತರ ಕಾಣಲು ಹೆಣಗುತ್ತಿರಬೇಕಾದರೆ, ಸಾಗರ ಮತ್ತು ಆಕಾಶವನ್ನು ಅಂತಃಪುರದ ಬಯಲಿನಿಂದಾದರೂ ನೋಡಿ ಕಾವ್ಯ ರಚಿಸುವ ಪ್ರಯತ್ನ ನಡೆಸಿದವನೇ ಈ ಕಾಳಿದಾಸ. ಆದರೂ ಹಲವಾರು ಕಾರಣಗಳಿಂದಾಗಿ ಪರಂಪರೆಯ ನಿರ್ಮಾಣಕಾರ್ಯ ಆತನ ಕಾಲಕ್ಕಾಗಲೇ ತ್ರುಟಿತಗೊಂಡಿದ್ದಂತೆ ಕಾಣುತ್ತದೆ. ಮೊದಲನೆಯದಾಗಿ, ಕಾಳಿದಾಸನಂತಹ ಅತ್ಯಂತ ಎತ್ತರದ ಸೃಜನಶೀಲ ಪ್ರತಿಭಾವಂತ ಮನಸ್ಸು ‘ರಘುವಂಶಂ’ ಬರೆಯುವಾಗ ಉತ್ತರ ರಾಮಾಯಣವನ್ನು  –  –  –  –  –  –  – ರಾಮಾಯಣದ ಒಂದು ಭಾಗ ಎಂದು ಸ್ವೀಕರಿಸುವುದು, ಗಾಬರಿ ಹುಟ್ಟಿಸದಿರುವುದಿಲ್ಲ. ಕಾಳಿದಾಸ ಬರುವುದಕ್ಕೆ ಮೊದಲೇ ಉತ್ತರ ರಾಮಾಯಣ ರಚನೆಯಾಗಿತ್ತು ಎಂಬ ಸಂಗತಿ ಅದರಿಂದ ವ್ಯಕ್ತವಾಗುತ್ತದೆಯಾದರೂ, ಆ ಬೆಳವಣಿಗೆಯನ್ನು ಕಾಳಿದಾಸ ಸ್ವೀಕರಿಸುವ ರೀತಿ.

ಮೂಲ ಮಹಾಭಾರತ ಮತ್ತು ಮೂಲ ರಾಮಾಯಣಗಳ ಕೆಲ ಶ್ಲೋಕಗಳ ನಡುವೆ ಇರುವ ಹೊಂದಾಣಿಕೆಯನ್ನು ಯುರೋಪ್‌ ಮೂಲದ ಸಂಸ್ಕ್ರತ ವಿದ್ವಾಂಸರು ಗುರುತಿಸಿದ್ದಾರಾದರೂ, ರಾಮಾಯಣದ ಮೇಲಾಗಿದ್ದಿರಬಹುದಾದ ಮೂಲಭಾರತದ ಪ್ರಭಾವವನ್ನು ಸ್ಪಷ್ಟವಾಗಿ ಅರಿಯಲು ಆ ಎರಡೂ ಎಪಿಕ್‌ಗಳ ಪ್ರತಿ ಶ್ಲೋಕ ಮತ್ತು ಆ ಶ್ಲೋಕಗಳಲ್ಲಿ ಬಳಕೆಯಾಗುವ ಪ್ರತಿಪದಗಳ ಕಾಲನಿರ್ಣಯ ಮಾಡಬೇಕಾಗುತ್ತದೆ. ಅದು ಹೊರತು ರಾಮಾಯಣದ ಮೇಲಾಗಿದ್ದಿರಬಹುದಾದ ಮಹಾಭರತದ ಪ್ರಭಾವ ಗುರುತುಸಲು ಬೇರೆ ದಾರಿಯೇ ಇರುವಂತೆ ಕಾಣುವುದಿಲ್ಲ. ಅದು ಸಾಧ್ಯವಾಗುವವರೆಗೆ ರಾಮಾಯಣದ ಮೇಲಾಗಿರಬಹುದಾದ ಮಹಾಭಾರತದ ಪ್ರಭಾವವನ್ನು ಒಪ್ಪಿಕೊಂಡರು ಸಹ, ವ್ಯಾಸನ ಇರುವುಕೆಯನ್ನು ನಂತರ ಬಂದ ಕವಿಯೊಬ್ಬ ಸ್ವೀಕರಿಸಬಹುದಾದ ರೀತಿಯಲ್ಲಿ ಪ್ರಜ್ಞಾ ಪೂರ್ವಕವಾಗಿ ಸ್ವೀಕರಿಸಿ ವಾಲ್ಮೀಕಿ ಎಪಿಕ್‌ ರಚಿಸಿದಂತೆ ತೋರುವುದಿಲ್ಲ.

ಆ ಕಾರಣವೇ, ವ್ಯಾಸ – ವಾಲ್ಮೀಕಿ ನಡುವಿನ ಸಂಬಂಧವನ್ನು ಷಿನ್‌ – ಎಖಿ—ಉನ್ನಿನ್ನಿ ಮತ್ತು ಹೋಮರನ ನಡುವಿನ ಸಂಬಂಧದ ಅರ್ಥದಲ್ಲಿ ವಿಶ್ಲೇಷಿಸಲು ಬರುವುದಿಲ್ಲ. ಏಕೆಂದರೆ, ಉನ್ನಿನ್ನಿಯ ಹಾದಿಯಲ್ಲಿ ತಾನು ಮುಂದಕ್ಕೆ ಸಾಗುತ್ತಿದ್ದೇನೆ ಎಂದು ತಿಳಿದುಕೊಂಡು ಹೋಮರ್‌ ಎಪಿಕ್‌ ರಚಿಸಿದರೆ, ಷಿನ್‌ – ಎಖಿ – ಉನ್ನಿನ್ನಿ, ವ್ಯಾಸ ಮತ್ತು ಹೋಮರ್‌ ಹಾದಿಯಲ್ಲಿ ಸಾಗುತ್ತಿದ್ದೆನೆ ಎಂಬುದು ಬಹುತೇಕ ಗೊತ್ತಿಲ್ಲದೆಯೂ ವಾಲ್ಮೀಕಿ ಕೂಡ ಅದೇ ಹಾದಿಯಲ್ಲಿ ಸಾಗುವ ಸಾಧ್ಯತೆಗೆ ಅವರೆಲ್ಲರಿಗೂ ಸಾಮಾನ್ಯವಾದ ಪ್ರತಿಭೆ ಹಾಗೂ ಕಾಲಕ್ಕೆ ಸ್ಪಂದಿಸುವ ಗುಣ ಕಾರಣ ಎಂಬ ಮಾತನ್ನು ಮತ್ತೆ ಉಲ್ಲೇಖಿಸಬೇಕಾದ ಅಗತ್ಯವಿಲ್ಲ. ವಸ್ತುವಿನ ಆಯ್ಕೆ, ನಿರೂಪಣೆ, ನಿರ್ವಹಣೆ ಮತ್ತು ಕಾಲಕ್ಕೆ ಸ್ಪಂದಿಸಿ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುವ ರೀತಿಯಲ್ಲಿ ಆ ನಾಲ್ಕು ಜನರ ನಡುವೆ ಬಹಳ ಹೊಂದಾಣಿಕೆ ಇರುವುದನ್ನು ಕಾಣಬಹುದಾಗಿದೆ. ಅದರಲ್ಲೂ ಕಾಲಕ್ಕೆ ಬದ್ಧವಾದ ವಸ್ತವನ್ನು ಆಯ್ಕೆಮಾಡಿಕೊಂಡು ಅದನ್ನು ಮೀರುವ ವಿಚಾರದಲ್ಲಿ ವ್ಯಾಸ ಮತ್ತು ವಾಲ್ಮೀಕಿ ತೋರುವ ಪ್ರತಿಭಾ ಸಂಪನ್ನತೆ, ನಿರ್ವಹಣಾ ಸಾಮರ್ಥ್ಯ ಮತ್ತು ಕುಶಲತೆಯಿಂದಾಗಿ ಇಡೀ ಭಾರತೀಯ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಇಂದಿಗೂ ಅತ್ಯಂತ ವಿಭಿನ್ನರಾಗಿ ಉಳಿಯುವ ಅವರು ತಮ್ಮ ಅದೇ ಗುಣದಿಂದಾಗಿ ಹೋಮರನಿಗೆ ಬಹಳ ಹತ್ತಿರದವರಾಗಿಬಿಡುತ್ತಾರೆ. ಹಾಗಾಗಿ ಆ ನಾಲ್ಕು ಜನರನ್ನು – ಉನ್ನಿನ್ನಿ, ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿವರೆಗೆ – ಕ್ರಮವಾಗಿ ಓದಿದಾಗ ಮಾತ್ರ ಮಾನವಜನಾಂಗದ ಸಾಹಿತ್ಯ ಮತ್ತು ಸಂಸ್ಕ್ರತಿಯ ಆರಂಭದ ಹೆಜ್ಜೆ ಗುರುತುಗಳನ್ನು ಅದರ ನಿಜವಾದ ಹಿನ್ನೆಲೆಯಲ್ಲಿ ಗ್ರಹಿಸಲು ಸಾಧ್ಯವಾಗಬಹುದು.

ಆದರೂ ವ್ಯಾಸ ಮತ್ತು ವಾಲ್ಮೀಕಿಯರ ನಡುವಿನ ತ್ರುಟಿತತೆಯನ್ನು ಗಮನಿಸದಿರಲಾಗುವುದಿಲ್ಲ. ಸಂಪರ್ಕದ ಅಭಾವದಿಂದಾಗಿ ಬೀಜರೂಪದಲ್ಲಿ ಕಾಣಿಸಿ ಕೊಂಡಿರಬಹುದಾದ ಆ ತ್ರುಟಿತತೆ, ಕಾಳಿದಾಸನ ಕಾಲಕ್ಕೆ ಮತ್ತೂ ವಿಸ್ತಾರಗೊಂಡಂತೆ ಕಾಣುತ್ತದೆ. ವ್ಯಾಸರ ಇರುವಿಕೆಯನ್ನು ಅಜ್ಞಾಪೂರ್ವಕವಾಗಿ ಸ್ವೀಕರಿಸಿರಬಹುದಾದ ವಾಲ್ಮೀಕಿ ಅದನ್ನು ಪ್ರಜ್ಞಾಪೂರ್ವಕವಾಗಿ ಅರಿತುಕೊಂಡು ಎಪಿಕ್ ರಚಿಸಿದಂತೆ ಕಾಣುವುದಿಲ್ಲ ಎಂಬುದು ಆ ತ್ರುಟಿತತೆಯ ಬಿತ್ತನೆಗೆ ಕಾರಣವಾಗಿದ್ದಿರಬಹುದಾದರೂ, ಅಪರ ಭಾರತ ಮತ್ತು ಉತ್ತರ ರಾಮಾಯಣ ಕಾಲದ ಅಜ್ಞಾತ – ಜ್ಞಾತ ಕವಿಗಳಿಂದಾಗಿ ಆ ತ್ರುಟಿತತೆ ಕಾಳಿದಾಸನ ಕಾಲಕ್ಕೆ ಹೆಮ್ಮರವಾಗಿ ಬೆಳೆದು ನಿಂತಿತ್ತು. ಕಾಳಿದಾಸ ಮತ್ತು ವಾಲ್ಮೀಕಿ ನಡುವೆ ಬಂದವರೆಲ್ಲ ಅಪರಭಾರತ ಮತ್ತು ಉತ್ತರ ರಾಮಾಯಣಗಳ ತರಹದ ಕವಿಗಳಾಗಿದ್ದುದು ಮತ್ತೊಂದು ಕಾರಣವಾಗಿದ್ದಿರಬಹುದು. ತ್ರುಟಿತತೆಯ ಮೊತ್ತವೇ ಭಾರತದ ಪರಂಪರೆಯಾಗಿದ್ದಿರಲೂಬಹುದು. ಅದುವೆ ಭಾರತದ ವಿಶೇಷತೆ ಆಗಿದ್ದಿರಲೂಬಹುದು.

ಕಾಲವನ್ನು ಶತಮಾನಗಳ ಲೆಕ್ಕದಲ್ಲಿ ಗ್ರಹಿಸಬೇಕಾದ ಒತ್ತದ ಇಲ್ಲದಿದ್ದ ಕಾಲದ ಅಲಿಖಿತ ಎಪಿಕ್‌ ಪರಂಪರೆಯ ಕವಿಗಳಾದ ವ್ಯಾಸ ಮತ್ತು ವಾಲ್ಮೀಕಿಯರು ಆ ಕಾಲವನ್ನು ಸೂರ್ಯಾಸ್ತ ಮತ್ತು ಸೂರ್ಯೋದಯಗಳ ತರಹವೇ ಒಂದು ಅನುಭವ ಮತ್ತು ನಾಡಿ ಮಿಡಿತವಾಗಿ ಗ್ರಹಿಸಲು ಸಾಧ್ಯವಾಗುವ ಅವಕಾಶವನ್ನು ಅವರು ಆ ಕಾರಣದಿಂದಾಗಿಯೇ ಪಡೆದಿದ್ದಂತೆ ತೋರುತ್ತದೆ. ಕಾಳಿದಾಸ ಬರುವ ಕಾಲಕ್ಕೆ ಆ ಪರಿಸ್ಥಿತಿ ಬದಲಾಗಿ ಅಕ್ಷರ ಸಂಸ್ಕ್ರತಿಗೆ ಅನುಗುಣ ಶತಮಾನ, ವರ್ಷ ಮತ್ತು ದಿನಾಂದಕ ಲೆಕ್ಕದಲ್ಲಿ ಗ್ರಹಿಸುವ ವಿಧಾನ ಚಲಾವಣೆಗೆ ಬಂದಿತ್ತು: ಆ ಬಗ್ಗೆ ಆತ ತೋರುವ ದಿವ್ಯನಿರ್ಲಕ್ಷ್ಯ.

ಅಲಿಖಿತ ಎಪಿಕ್‌ ಪರಂಪರೆಯ ಎಪಿಕ್‌ ಕವಿಗಳಾದ ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿಯರಿಗೆ ತಾವು ಬಂದ ಕಾಲ ಮತ್ತು ಇತರೇ ಕುಲಗೋತ್ರಗಳ ಪ್ರವರ ಹೇಳಿಕೊಳ್ಳುವ ಅಗತ್ಯವೂ ಇರಲಿಲ್ಲ. ಅವರು ಹಾಡಿದ್ದನ್ನು ತಮಗೆ ತೋಚಿದ ರೀತಿ ನೆನಪಿನ ಆಧಾರದ ಮೇಲೆ ಉಳಿಸಿಕೊಂಡು ಬಂದ ಮುಂದಿನ ತಲೆಮಾರಿನವರು ಅವರ ಹೆಸರನ್ನು ತಮ್ಮ ನಾಲಗೆಯ ಮೇಲೆ ದಾಖಲಿಸಿಕೊಂಡು ಬಂದರು. ಆ ವಿಚಾರದಲ್ಲಿ ಉನ್ನಿನ್ನಿ ಮಾತ್ರ ಹೆಚ್ಚು ಅದೃಷ್ಟಶಾಲಿ. ಆ ಸೌಲಭ್ಯ ಹೋಮರನಿಗೆ ದೊರಕಿದುದು ಸ್ವಲ್ಪ ತಡವಾಗಿ. ವ್ಯಾಸ – ವಾಲ್ಮೀಕಿಯರಿಗೆ ಆ ಸೌಲಭ್ಯ ದೊರಕುವ ವೇಳೆಗೆ ಮಹಾಭಾರತ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಂಡಿದ್ದರೆ, ರಾಮಾಯಣವನ್ನು ಆ ಹಾದಿಯಲ್ಲಿ ಬಹುದೂರ ಕರೆದೊಯ್ಯಲಾಗಿತ್ತು. ಹಾಗಾಗಿ ಅಪರಭಾರತ ಮತ್ತು ಉತ್ತರ ರಾಮಾಯಣದ ಕವಿಗಳಿಗೆ ತಮ್ಮ ಪ್ರವರ ಹೇಳಿಕೊಳ್ಳುವ ಅಗತ್ಯ ಕಾಣಿಸಲಿಲ್ಲವಾದಂತೆ, ಅವರ ಉದ್ದೇಶವೂ ಅದಾಗಿರಲಿಲ್ಲ ಎಂಬುದು ಮುಖ್ಯ.

ವ್ಯಾಸ ಅಲ್ಲದೆ ಶುಕ್ರಾಚಾರ್ಯ, ವೈಶಂಪಾಯನ, ಲೋಮಹರ್ಷಣ, ಉಗ್ರಶ್ರವ ಮುಂತಾದವರು ಮಹಾಭಾರತದ ಕಥನವನ್ನು ಮುಂದುವರಿಸಿದ ಸೂಚನೆಗಳು ಅದರಲ್ಲಿಯೇ ದೊರಕ್ಕುತ್ತವಾದರೂ, ಸಮೂಹಸೃಷ್ಟಿಯಾದ ಮಹಾಭಾರತ ಒಂದು ತರಹದ ವಿಚಿತ್ರ ಸೃಷ್ಟಿಯೂ ಹೌದು. ಸ್ವತಂತ್ರ ಕವಿಗಳಾದ ಅವರು ತಾವು ರಚಿಸಿ ಬರೆದ ಭಾಗವನ್ನು ಮೂಲ ಕೃತಿಯ ಹೆಸರಿಗೆ ಅಂಟಿಸುವ ಪ್ರಯತ್ನಗಳನ್ನು ನಡೆಸಿದ್ದೂ ಅಲ್ಲದೆ ಅಜ್ಞಾತರಾಗಿ ಉಳಿಯುವುದು ಆ ಕಾರಣವೇ ಅನಿವಾರ್ಯವಾಯಿತು.

ವಸ್ತುವಿನ ಆಯ್ಕೆ ಮಾಡುವಾಗ ವಿಶಾಲ ಅರ್ಥದಲ್ಲಿ ಕಾಲಕ್ಕೆ ಸ್ಪಂದಿಸುತ್ತಾನೆ ವಿನಾ, ಅಕ್ಷರ ಸಂಸ್ಕ್ರತಿಗೆ ಸಹಜವಾದ ರೀತಿಯನ್ನು ಅನುಸರಿಸಲು ಹೋಗುವುದಿಲ್ಲ. ವ್ಯಾಸ ಮತ್ತು ಹೋಮರ್‌ ಪರಂಪರೆ ಎಂದರೆ ತಾವು ಬಂದ ಕಾಲಕ್ಕೆ ಬದ್ಧವಾದ ಕೃತಿಗಳನ್ನು ಬರೆಯುವುದರ ಮೂಲಕ ಅದನ್ನು ಮೀರಿ ಎಲ್ಲ ಕಾಲಕ್ಕೂ ಸಲ್ಲುವ ಕೃತಿಗಳನ್ನು ಸೃಷ್ಟಿಸುವುದು ಎಂದರ್ಥ. ಅದನ್ನು ತಿರುಗಮುರುಗ ಮಾಡಿ ನೋಡುವ ಕಾಳಿದಾಸ ಎಲ್ಲ ಕಾಲಕ್ಕೂ ಸಲ್ಲುವ ವಸ್ತುವನ್ನು ಆರಿಸಿಕೊಳ್ಳುವುದರ ಮೂಲಕ ಏಕ್‌ದಂ ನಿತ್ಯಕಾಲೀನ ಅಥವಾ ಸದಾ – ಸಮಕಾಲೀನ ಆಗಲು ಹವಣಿಸುತ್ತಾನೆ. ಪುರಾಣ ಆಧರಿಸಿದ ಕೃತಿಗಳನ್ನು ಬರೆಯುವಾಗ ಹೋಗಲಿ, ಮಾಳವಿಕ್ಕಾಗ್ನಿಮಿತ್ರದಂತಹ ಐತಿಹಾಸಿಕವಿದ್ದಿರಬಹುದಾದ ನಾಟಕಗಳನ್ನು ಬರೆಯುವಾಗ ಸಹ. ಅಂಥವನ ಮನಸ್ಸಿನ ಹಾಳೆಗಳ ಮೇಲು ಕಾಲ ತನ್ನ ಸಹಿ ಹಾಕುವುದು ಬೇರೆ ವಿಚಾರ.

ವಸ್ತುವಿನ ಆಯ್ಕೆ ಮತ್ತು ನಿರ್ವಹಣಾ ಸಾಮರ್ಥ್ಯಗಳು ಕಾಳಿದಾಸ ಹೇಳುವ ವಾಗರ್ಥವಿದ್ದಂತೆ: ಒಂದರಲ್ಲಿ ವಿಫಲವಾದ ಕವಿ ಮತ್ತೊಂದರಲ್ಲಿ ಸಫಲನಾಗುವುದು ಕಷ್ಟಸಾಧ್ಯ. ಕಾಳಿದಾಸನ ಸಂದರ್ಭದಲ್ಲಿ ಆ ಬಿರುಕು ಮತ್ತು ತ್ರುಟಿತತೆ ಎದುರಾಗುವುದಿಲ್ಲ. ವಸ್ತುವಿನ ಆಯ್ಕೆಯಲ್ಲಿ ಯಶಸ್ವಿಯಾಗುವ ಆತ ನಿರ್ವಹಣಾ ಸಾಮರ್ಥ್ಯದಲ್ಲೂ ಅಪ್ರತಿಮ ಸಾಮರ್ಥ್ಯ ಮೆರೆಯುತ್ತಾನೆ. ಆದರೂ ಕಾಳಿದಾಸ ಎದುರಿಸಿದ ತೊಡಕುಗಳಾದರೂ ಯಾವುವು?

ಅಪರಭಾರತ, ಉತ್ತರ ರಾಮಾಯಣಗಳ ಕಾಲದ ಮನಃಸ್ಥಿತಿಯಿಂದ ಬಿಡಿಸಿಕೊಂಡು ಜೀವಪರವಾದ ಲವಲವಿಕೆಯಿಂದ ತುಂಬಿದ ಕಾವ್ಯ ಬರೆದವನೇ ಕಾಳಿದಾಸ; ಉತ್ತರಕಾಂಡ ಮತ್ತು ಕುರುಕ್ಷೇತ್ರ ಯುದ್ಧಾನಂತರದ ಪರ್ವಗಳನ್ನು ಓದಿದನಂತರ ಕಾಳಿದಾಸನನ್ನು ಓದುವುದೆಂದರೆ, ಲೌಕಿಕ ಬದುಕಿನ – ಅದರಲ್ಲಿ ಶೃಂಗಾರ ಪ್ರಧಾನವಾದ – ರೋಚಕ ಜಗತ್ತಿಗೆ ಮರಳಿದಂತೆಯೇ ಸರಿ. ಮತ್ತೊಂದು ಅರ್ಥದಲ್ಲೂ ಸಹ ಆತನು ಅಪರಭಾರತದ ಉಸಿರು ಕಟ್ಟಿಸುವ ಆಪತ್‌ ಸ್ಥಿತಿಯಿಂದ ಬಿಡಿಕೊಂಡು ಭಿನ್ನವಾಗಿ ಯೋಚಿಸುವ ಸಾಮರ್ಥ್ಯ ಪ್ರದರ್ಶಿಸುತ್ತಾನೆ. ಚಿತ್ರಾಂಗದೆಯಲ್ಲಿ ಹುಟ್ಟಿದ ಅರ್ಜುನನ ಮಗ ಬಭ್ರುವಾಹಣನಿಗೆ ಪಟ್ಟ ಕಟ್ಟಲು ಅಪರಭಾರತ ನಿರಾಕರಿಸುತ್ತದೆ. ಅಧಿಕಾರ ನಡೆಸುವ ಹಕ್ಕು ದತ್ತವಾಗಿ ಬರುವುದು ವಿರಾಟರಾಜನ ಮಗಳಾದ ಉತ್ತರೆಯಲ್ಲಿ ಅಭಿಮನ್ಯುವಿಗೆ ಹುಟ್ಟಿದ ಪರೀಕ್ಷಿತನಿಗೆ, ಅದರಲ್ಲೂ ಸತ್ತು ಹುಟ್ಟಿದ ಆ ಮಗುವಿಗೆ. ಅರ್ಜುನನ ಮಗನೂ ಮತ್ತು ತನ್ನ ತಂದೆಯನ್ನೇ ಸೋಲಿಸಿದ ಅಪ್ರತಿಮ ಶೌರ್ಯಶಾಲಿಯಾದ ಬಭ್ರುವಾಹನನೇ ಇರುವಾಗ, ಅದೇ ಅರ್ಜುನನ ಮೊಮ್ಮಗನಾದ ಪರಿಕ್ಷಿತನಿಗೆ ಪಟ್ಟಕಟ್ಟುವ ಅಗತ್ಯವಾದರೂ ಏಕೆ ಬಂತು? ಪರಿಕ್ಷಿತನಿಗೆ ಪಟ್ಟ ಕಟ್ಟುವುದರ ಮೂಲಕ ಅಪರಭಾರತ ಕಾಲದ ಜನ ವರ್ಣ ಸಂಕರವನ್ನು ತಿರಸ್ಕರಿಸಿರಬಹುದು. ಆ ವಿಚಾರದಲ್ಲಿ ಅಪರಭಾರತ ಮತ್ತು ಉತ್ತರ ರಾಮಾಯಣ ಕಾಲದ ಕವಿಗಳ ನಡುವೆ ಹೊಂದಾಣಿಕೆ ಬಹಳ. ರಾವಣನ ವಶದಲ್ಲಿದ್ದಳು ಎಂಬ ಒಂದೇ ಕಾರಣಕ್ಕೆ ಇರುವ ಸೀತೆಯನ್ನು ಮತ್ತೆ ಕಾಡಿಗಟ್ಟಲು ಸಿದ್ಧರಾದ ಆ ಕಾಲದ ಜನ, ವರ್ಣಸಂಕರದ ಫಲ ಎಂಬ ಏಕೈಕ ಕಾರಣಕ್ಕೆ ಬಭ್ರುವಾಹನನನ್ನು ರಾಜನನ್ನಾಗಿ ಸ್ವೀಕರಿಸುವ ಉದಾರತೆ ತೋರದಿರಬಹುದು. ಆದರೆ ಕಾಳಿದಾಸನ ಕೃತಿಗಳಲ್ಲಿ ವರ್ಣಸಂಕರ ವಿಜೃಂಭಸುತ್ತದೆ.

ಅಪರಭಾರತದಲ್ಲಿ ವಾನಪ್ರಸ್ಥಾಶ್ರಮದ ಚಿತ್ರಣ ಮತ್ತು ಕಲ್ಪನೆ ಬರುತ್ತದಾದರೂ ಆ ಅರ್ಥವತ್ತತೆ ಪಡೆದುಕೊಳ್ಳುವುದಿಲ್ಲ. ಭೀಷ್ಮನು ಶರಶಯ್ಯೆಯಲ್ಲಿ ಮಲಗಿದಂತೆ ಪ್ರಾಣತ್ಯಾಗ ಮಾಡಿದರೆ, ಪಾಂಡವರು ಸಶರೀಗಳಾಗಿ ಸ್ವರ್ಗ ಕಾಣಲು ಹೊರಡುತ್ತಾರೆ. ಕೃಷ್ಣ ಮೊದಲಾದ ಎಲ್ಲ ಯಾದವರ ಸಾವು ಬಹಳ ದುರಂತ ರೀತಿಯಲ್ಲಿ ನಡೆದುಹೋಗುತ್ತದೆ. ವಾನಪ್ರಸ್ಥಾಶ್ರಮಕ್ಕೆ ಹೊರಟ ಧೃತರಾಷ್ಟ್ರ, ಗಾಂಧಾರಿ ಮೊದಲಾದವರು ಕಾಳ್ಗಿಚ್ಛಿಗೆ ಸಿಕ್ಕು ಪ್ರಾಣ ಬಿಡುತ್ತಾರೆ. ತನ್ನ ಉಳಿದ ಎಲ್ಲ ಕೃತಿಗಳಲ್ಲಿ ಅಪರಭಾರತ ಮತ್ತು ಉತ್ತರ ರಾಮಾಯಣಗಳ ಮನಃಸ್ಥಿತಿಯಿಂದ ಸಂಪೂರ್ಣ ಬಿಡಿಸಿಕೊಂಡು ಕಾವ್ಯರಚನೆ ಮಾಡುವ ಕಾಳಿದಾಸ, ‘ರಘುವಂಶ’ ಕಾವ್ಯದಲ್ಲಿ ಅದೇ ಜಾಡಿನಲ್ಲಿ ಸಾಗುತ್ತಾನೆ. ಅಪರಭಾರತದ ‘ಸರ್ವನಾಶ’ದ ಕತೆ ‘ರಘುವಂಶಂ’ನಲ್ಲಿ ಮತ್ತೊಂದು ರೂಪದಲ್ಲಿ ನಿರೂಪಣೆಗೊಳ್ಳುತ್ತದೆ. ಅಪರಭಾರತದಲ್ಲಿ ಸತ್ತು ಬದುಕಿದ ಪರಿಕ್ಷಿತನಿಗೆ ಪಟ್ಟಾಭಿಷೇಕವಾದರೆ, ‘ರಘುವಂಶಂ’ನಲ್ಲಿ ಅಗ್ನಿವರ್ಣನ ಗರ್ಭಿಣಿ ಪತ್ನಿಗೆ ಪಟ್ಟಾಭಿಷೇಕ. ಅಂದರೆ ಆಕೆಯ ಗರ್ಭದಲ್ಲಿನ ಮಗುವಿಗೆ – ಎಂತಹ ಹೊಂದಾಣಿಕೆ! ಅಪರಭಾರತ, ಉತ್ತರ ರಾಮಾಯಣದ ಮನಃಸ್ಥಿತಿ ಕಾಳಿದಾಸನ ಕಾಲದಲ್ಲೂ ಯಾವುದೋ ಒಂದು ಹಂತದಲ್ಲಿ ಮುಂದುವರಿದಿತ್ತು ಎಂದು ಅದರ ಅರ್ಥವೇ? ಉತ್ತರ ರಾಮಾಯಣ, ಅಪರ ಭಾರತ ಮತ್ತು ಕಾಳಿದಾಸ ಬಂದ ಆಜುಬಾಜಿನ ಕಾಲದ ಒಟ್ಟಾರೆ ಭಾರತದ ಮನಃಸ್ಥಿತಿಯೇ ಆದಾಗಿತ್ತೇ? ಉಳಿದೆಲ್ಲ ಕೃತಿಗಳಲ್ಲಿ ಜೀವಪರವಾದ ಲವಲವಿಕೆ ತೋರುವ ಕಾಳಿದಾಸನು ‘ರಘುವಂಶಂ’ನಲ್ಲಿ ಅಪರಭಾರತ – ಉತ್ತರ ರಾಮಾಯಣದ ಮನಃಸ್ಥಿತಿಗೆ ಮರಳುವುದು ಆತ ಬಂದ ಕಾಲ ಅಥವಾ ಯುಗದ ಪ್ರತಿಫಲನವೇ?

ಕಾಳಿದಾಸನ ಕಾಲಕ್ಕಾಗಲೇ ಭಾರತದಲ್ಲಿ ಭಿನ್ನವಾದ ಆದರೆ ಪರಸ್ಪರವಾದ ಮೂರು ಸಾಹಿತ್ಯ ಪರಂಪರೆಗಳು ನಿರ್ಮಾಣಗೊಂಡಂತೆ ಕಾಣುತ್ತದೆ. ಹೋಮರನ ಅರ್ಥದಲ್ಲಿ ತನ್ನ ಕಾಲಕ್ಕೆ ಬದ್ಧವಾದ ಕೃತಿಗಳನ್ನು ರಚಿಸುತ್ತಲೇ ಆ ಕಾಲನ ಮಿತಿಯನ್ನು ಮೀರುವ ಮತ್ತು ಕಾಲಕ್ಕೆ ಸ್ಪಂದಿಸುತ್ತಲೇ ಆ ಕಾಲದಲ್ಲಿ ಪ್ರಭಾವಿಸುವ ವ್ಯಾಸ – ವಾಲ್ಮೀಕಿಯರ ಎಪಿಕ್‌ ಪರಂಪರೆ ಒಂದಾದರೆ, ಆ ವ್ಯಾಸ – ವಾಲ್ಮೀಕಿಯರ ಕೃತಿಗಳಿಗೆ ತಮ್ಮದೇ ಆದ ಭಾಗಗಳನ್ನು ಸೇರಿಸುತ್ತ ಅವುಗಳನ್ನು ಮರುವಿಮರ್ಶೆ ಅಥವಾ ಮರುಪರಿಶೀಲನೆಗೊಳಪಡಿಸುವ ಅಪರಭಾರತ ಮತ್ತು ಉತ್ತರ ರಾಮಾಯಣದ ಕವಿಗಳ ಅಜ್ಞಾತ – ಜ್ಞಾತ ಪರಂಪರೆ; ಮತ್ತು ಸರ್ವಕಾಲೀನ, ನಿತ್ಯ ಕಾಲೀನ ಅಥವಾ ಕಾಲಾತೀತವಾದ ವಸ್ತುಗಳನ್ನು ಆರಿಸಿಕೊಳ್ಳುವುದರ ಮೂಲಕ ಎಲ್ಲರಿಗೂ ಮತ್ತು ಎಲ್ಲ ಕಾಲಕ್ಕೂ ಸಲ್ಲುವ ಕೃತಿ ನೀಡಲು ಹವಣಿಸುತ್ತಲೇ ಕಾಲನ ಸೆರಗನ್ನು ಸೋಂಕುವ ಮೂಲಕ ಸೀಮಿತ ಪ್ರಮಾಣದಲ್ಲಿಯಾದರೂ ಯಶಸ್ಸು ಸಾಧಿಸುವ ಕಾಳಿದಾಸ ಪರಂಪರೆ. ಭಾರತೀಯ ಕಾವ್ಯಪರಂಪರೆಯ ಆ ಮೂರು ಪ್ರಮುಖ ವಾಹಿನಿಗಳು ಪರಸ್ಪರ ಸಂಬಂಧಿಸಿದವಾದುವಾದರೂ, ಒಂದರಿಂದ ಮತ್ತೊಂದಕ್ಕೆ ಹಂತಹಂತವಾಗಿ ಬೆಳೆದುಬಂದುವಾಗಿ ತೋರುವುದಿಲ್ಲ. ಏಕೆಂದರೆ, ಅಪರಭಾರತ – ಉತ್ತರ ರಾಮಾಯಣಗಳು ನಿಜವಾದ ಅರ್ಥದಲ್ಲಿ ಅಲಿಖಿತ ಎಪಿಕ್‌ ಪರಂಪರೆಗೂ ಸಲ್ಲುವುದಿಲ್ಲ, ಈ ಕಡೆ ಲಿಖಿತ ಕಾವ್ಯಪರಂಪರೆಗೂ ಸೇರುವುದಿಲ್ಲ. ಹಾಗಾಗಿ ಅವುಗಳ ನಡುವೆ ಸಾತತ್ಯತೆಯನ್ನು ಕಾಣಲಾಗುವುದಿಲ್ಲ. ಆ ಮೂರು ಪರಂಪರೆಗಳೂ ತ್ರುಟಿತಗೊಂಡುವಾಗಿ ಕಾಣಬರುತ್ತವೆ:

ಎಳವೆಯಲ್ಲಿಯೇ ವಿವಾಹ ಬಂಧನದ ಹೊರಗೆ ಬಸಿರಾಗುವ ಹೆಣ್ಣುಮಕ್ಕಳ ಸಮಸ್ಯೆ ಕಾಲ ಕಳೆದಂತೆ ತೀವ್ರವಾಗುತ್ತಲೇ ಸಾಗಿದೆ: ‘ಅಭಿಜ್ಞಾನ ಶಾಕುನ್ತಲಂ’ನಲ್ಲಿ ಹುದುಗಿರುವ ಅನೇಕ ಸಮಸ್ಯೆಗಳ ಪೈಕಿ ಒಂದಾಗಿ ಅದನ್ನು ಇನ್ನೂ ತೀವ್ರತರದಲ್ಲಿ ನಿರ್ವಹಿಸಬಹುದಿತ್ತು ಎಂಬುದನ್ನು ಈ ಹಿಂದೆ ಗುರುತಿಸಲಾಗಿದೆ. ತನ್ನ ಕಾಲದ ಬದುಕು, ಸಮಾಜ ಮತ್ತು ಆಡುಭಾಷೆಯ ಕಡೆಗೆ ನೀಡಬೇಕಾದ ಗಮನ ನೀಡಲಾಗದೆ ಹೋದುದು ಆ ರೀತಿಯ ಮಿತಿಗಳಿಗೆ ಕಾರಣವಾಗಿದ್ದಿರಲೂಬಹುದು ಮತ್ತು ಆ ಎಲ್ಲ ಹಂಗನ್ನು ಮೀರಿದ ಕಾಲಾತೀತ ಕವಿಯಾಗಿ ಕಾಳಿದಾಸ ಕಾಣಬರಲು ಕೂಡ ಆ ಅಂಶಗಳೇ ಕಾರಣವಾಗಿರಬಹುದು. ಆ ಎಲ್ಲ ರೀತಿಯ ಮಿತಿಗಳ ನಡುವೆಯೂ ಶಾಕುನ್ತಲೆ ಭಾರತದ ಸಾಹಿತ್ಯ ಲೋಕದ ಹಿಮಾಲಯವಾಗಿ ನಿಲ್ಲುತ್ತದೆ ಎಂಬುದು ಸಹ ನಮೂದಾಗಿದೆ. ತನ್ನೆಲ್ಲ ಆ ಮಿತಿಯ ನಡುವೆಯೂ ಅಂತಹ ಅದ್ಭುತ ಕೊಡುಗೆ ನೀಡಿದ ಕಾಳಿದಾಸನಿಂದಲಾದರೂ ಕಲಿಯಬಹುದಾದ ಪಾಠವನ್ನು ಮುಂದಿನ ತಲೆಮಾರಿನ ಕವಿಗಳಿಗೆ ಕಲಿಯಲಿಲ್ಲವೆ?

ಆ ನಂತರ ಬಂದ ಕವಿಗಳಾದರೂ ಕಾಳಿದಾಸ ನಿರ್ಮಿಸಿದ ಪರಂಪರೆಯ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಕೊಂಡು ಅದನ್ನು ಉತ್ತಮಪಡಿಸುವ ಕಡೆಗೆ ನೀಡಬೇಕಾದ ಕನಿಷ್ಠ ಗಮನ ನೀಡಲಾಗದೆ ಹೋದುದು ತ್ರುಟಿತತೆಯ ಪ್ರಮಾಣ ವಿಸ್ತಾರಗೊಳ್ಳಲು ಸಹಾಯ ಮಾಡಿತು. ವ್ಯಾಸ – ವಾಲ್ಮೀಕಿಯರ ಪರಂಪರೆ ಮುಂದುವರಿಸುವುದು ಎಂದರೆ, ಮಹಾಭಾರತ ರಾಮಾಯಣದ ಕತೆಗಳನ್ನು ಆಧರಿಸಿ ಕಾವ್ಯಗಳನ್ನು ತಮ್ಮ ಶಕ್ತ್ಯಾನುಸಾರ ನಿರ್ವಹಿಸುವುದು, ಎಂಬ ಅತ್ಯಂತ ಸರಳ ಮತ್ತು ಸಡಿಲ ತೀರ್ಮಾನಕ್ಕೆ ಭಾರತದ ಮುಂದಿನ ತಲೆಮಾರಿನ ಅನೇಕ ಕವಿಗಳು ಬಂದಂತೆ ಕಾಣುತ್ತದೆ.

ಹಾಗಾದರೆ ಕಾಳಿದಾಸನ ಕಾಲದ ಬಿಕ್ಕಟ್ಟು ಯಾವುದಾಗಿರಬಹುದು?


 

[1]So he, spoke, and they stopped fighting and suddenly all fell
silent but Hektor between them spoke now to both sides:
‘Hear from me, Trojans and strong-greaved Achaians, the word
of Alexandros, for whose sake this sirife has arisen.
He would have all the rest of the Trojans and all the Achains
lay aside on the bountiful earth their splendid armour
while he himself in the middle and warlike Menelaos
fight alone for the sake of Helen and all her possessions.
that one of them who wins and is proved stronger, let him
take the possessions fairly and the woman, and lead her homeward
while the rest of us cut our oaths of faith and friendship.’   ಪುಟ ೧೦೨

[2]ಅದೂ ಕೂಡ ಪಾಪ ಪರಿಹಾರಾರ್ಥವಾಗಿ ನಡೆದುದು.