II

ಯುದ್ಧಾನಂತರದ ಮಹಾಭಾರತ ಮತ್ತು ರಾಮಾಯಣಗಳ ಬೆಳವಣಿಗೆಯನ್ನು ನೋಡುವುದಾದಲ್ಲಿ, ನಿಜವಾದ ಬದುಕಿನ ಜತೆಗಿನ ನೇರ ಸಂಘರ್ಷ ಪ್ರಾರಂಭವಾಗುವುದೇ ಕುರುಕ್ಷೇತ್ರದ ನಂತರ; ಮತ್ತು ಶ್ರೀರಾಮ ಬದುಕನ್ನು ಎದುರಿಸುವ ಸಂದರ್ಭಗಳು ಬರುವುದೇ ಉತ್ತರಕಾಂಡದಲ್ಲಿ. ಕವಿಗಳ ಸ್ವಂತಿಕೆ ಮತ್ತು ಪ್ರತಿಭೆಯ ಸತ್ವ ಪರೀಕ್ಷೆಯಾಗುವುದೇ ಅಲ್ಲಿ. ಆ ಎರಡೂ ಎಪಿಕ್‌ಗಳ ಆ ಮುಂದಿನ ಭಾಗಗಳನ್ನು ಸಮರ್ಪಕವಾಗಿ ಅರಿಯುವುದರಿಂದ ಭಾರತದ ಸಾಮೂಹಿಕ ಮನಸ್ಸನ್ನು ಅರಿಯಲು ದೊರಕುವ ಅವಕಾಶ ಬಹಳ ಹೆಚ್ಚು.

ನಗರ ಮತ್ತು ಸಾಮ್ರಾಜ್ಯ ಸಂಸ್ಕೃತಿಯ ಪ್ರಾರಂಭದ ಕೊಡುಗೆಯಾದ ರಾಮಾಯಣದಲ್ಲಿ ಮಹಿಳೆ ಮತ್ತು ಪುರುಷ ಸಂಬಂಧಗಳನ್ನು ವಿಶ್ಲೇಷಿಸಲು ನೀಡಲಾಗಿರುವ ಪ್ರಾಮುಖ್ಯವನ್ನು ಬಹಳ ಹತ್ತಿರದಿಂದ ನೋಡುವುದು ಅಗತ್ಯ. ಮಹಿಳೆ ಮತ್ತು ಪುರುಷರ ಸಂಬಂಧದ ವಿಚಾರವಾಗಿ ಅಲ್ಲಿ ದೊರಕುವ ಮಾದರಿ ಮತ್ತು ವಿಭಿನ್ನತೆಗಳನ್ನು ಬೇರಾವುದೇ ಎಪಿಕ್‌ಗಳಲ್ಲಿ ಕಾಣಲಾಗುವುದಿಲ್ಲ. ವಿವಾಹ ಬಂಧನಕ್ಕೆ ಒಳಗಾಗದೆ ಒಂದು ಹೆಣ್ಣು ಮತ್ತು ಗಂಡು ಸ್ನೇಹಿತರ ತರಹ ಒಟ್ಟಿಗೆ ಬದುಕುವ ಸಾಧ್ಯತೆ ಮತ್ತು ಅದರಿಂದ ಉದ್ಭವಿಸಬಹುದಾದ ಸಮಸ್ಯೆಗಳ ಹೊರತು, ಉಳಿದೆಲ್ಲ ಮಾದರಿಗಳನ್ನು ರಾಮಾಯಣ ತನ್ನ ವ್ಯಾಪ್ತಿಗೆ ತಂದುಕೊಂಡಿರುವಂತೆ ತೋರುತ್ತದೆ. ಸ್ವಯಂವರದಲ್ಲಿ ಗೆದ್ದು ಸೀತೆಯನ್ನು ತನ್ನ ಪತ್ನಿಯಾಗಿ ಪಡೆದ ಶ್ರೀರಾಮನು ರಾವಣನನ್ನು ಸಂವಹರಿಸುವುದರ ಮುಖೇನ ಎರಡನೇ ಬಾರಿಗೆ ಅದೇ ಸೀತೆಯನ್ನು ಮರಳಿ ಗೆಲ್ಲುವ ಕತೆಯೇ ರಾಮಾಯಣ ಎಂದರೂ ನಡೆಯುತ್ತದೆ. ಶತ್ರು ರಾವಣನ ವಶದಲ್ಲಿದ್ದ ಆಕೆಯನ್ನು ಪರಿಶ್ರಮದಿಂದ ಗೆದ್ದು ತಂದಿರುವುದಾಗಿ ರಾಮ ಆಕೆಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ನುಡಿಯುತ್ತಾನೆ.[1]

ಆ ರೀತಿ ಗೆದ್ದು ತರುವುದು ತನ್ನ ಕರ್ತವ್ಯ ಎಂಬ ಮಾತು ಸಹ ರಾಮನ ಬಾಯಿಂದ ಬರುತ್ತದೆ. ಹೆಣ್ಣು ಮತ್ತು ಗಂಡಿನ ಸಂಬಂಧದ ವಿಚಾರದಲ್ಲಿ ಪೌರುಷ ವಹಿಸುವ ಪ್ರಮುಖ ಪಾತ್ರದ ವಿಚಾರವೂ ಜತೆಜತೆಗೆ ಅನ್ವೇಷಣೆಗೊಳ್ಳುತ್ತಾ ಹೋಗುತ್ತದೆ.

ರಾಮ, ರಾವಣ ಮತ್ತು ವಾಲಿ – ಸುಗ್ರೀವ, ಹೀಗೆ ಮೂರು ಸ್ತರಗಳಲ್ಲಿ ಮುಖಾಮುಖಿಯಾಗುವ ಪುರುಷ – ಮಹಿಳೆಯರ ಒಳಸಂಬಂಧದ ಬಿಕ್ಕಟ್ಟುಗಳು ಇತ್ಯರ್ಥಗೊಳ್ಳುವುದನ್ನು ರಾಮಾಯಣದಲ್ಲಿ ತೆರೆದ ಮನಸ್ಸಿನಿಂದ ಅನ್ವೇಷಿಸಲಾಗಿದೆ. ಸುಗ್ರೀವನನ್ನು ಹೊಡೆದಟ್ಟಿದ ನಂತರ ಆತನ ಮತ್ತು ತನ್ನ ಪತ್ನಿ ಜತೆಗೆ ವಾಲಿಯು ಯಾವುದೇ ಸಂಕೋಚವಿಲ್ಲದೆ ಸಂಸಾರ ನಡೆಸಿದಷ್ಟೇ ಸಲೀಸಾಗಿ ಸುಗ್ರೀವನು ಆ ವಾಲಿಯನ್ನು ಸಂಹರಿಸಿದ ನಂತರ ಆತನ ಪತ್ನಿ ತಾರಾ ಮತ್ತು ತನ್ನ ಪತ್ನಿ ರುಮೆಯ ಜತೆ ಯಥಾಸ್ಥಿತಿ ಸಂಸಾರ ಮುಂದುವರಿಸುತ್ತಾನೆ. ವಾಲಿ ಹೋಗಿ ಆತನ ಸ್ಥಾನದಲ್ಲಿ ಸುಗ್ರೀವ ಬರುತ್ತಾನೆ. ಅದು ಹೊರತು ರುಮೆ ಮತ್ತು ತಾರಾಳ ಬದುಕಿನಲ್ಲಿ ಹೆಚ್ಚಿನ ವ್ಯತ್ಯಯಗಳು ಕಾಣುವುದಿಲ್ಲ. ವಾಲಿ ಬದುಕಿದ್ದಾಗ ಸುಗ್ರೀವನ ಪತ್ನಿಯನ್ನು ಸವತಿಯಾಗಿ ತಾರಾ ಸ್ವೀಕರಿಸಿದರೆ, ವಾಲಿಯ ಸಂಹಾರದ ನಂತರ ರುಮೆಯು ಅದೇ ತಾರಾಳನ್ನು ತನ್ನ ಸವತಿಯನ್ನಾಗಿ ಸ್ವೀಕರಿಸಬೇಕಾಗಿ ಬರುತ್ತದೆ. ಆ ಬದಲಾವಣೆಗಳನ್ನು ವಾಲಿ – ಸುಗ್ರೀವರು ಯಾವುದೇ ಸಂಕೋಚವಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಸ್ವೀಕರಿಸಿ ಸಂಸಾರ ಮುಂದುವರಿಸುವಂತೆಯೇ, ತಾರಾ – ರುಮೆಯರು ಸಹ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ರಾಮಾಯಣ ನೀಡುವ ಪುರುಷ – ಮಹಿಳಾ ಸಂಬಂಧದ ಒಂದು ಮುಖ.

ಮತ್ತೊಬ್ಬನ ಪತ್ನಿಗಾಗಿ ಕಾತರಿಸಿ ದುರಂತವನ್ನು ಸ್ವಾಗತಿಸುವ ರಾವಣದು ಅದೇ ಬದುಕಿನ ಮತ್ತೊಂದು ಮುಖ.

ಸೀತೆಯ ಬಗೆಗಿನ ತನ್ನ ಎಲ್ಲ ಅನುಮಾನ ಮತ್ತು ಸಂಶಯಗಳಿಗೆ ಪರಿಹಾರ ದೊರಕಿದ ನಂತರ ಆಕೆಯನ್ನು ಮರಳಿ ತನ್ನ ಪತ್ನಿಯಾಗಿ ಶ್ರೀರಾಮ ಸ್ವೀಕರಿಸುವ ಸುಖಾಂತದ ಚಿತ್ರಣವನ್ನು ಅದೇ ರಾಮಾಯಣ ಅದೇ ಬದುಕಿನ ಮತ್ತೊಂದು ಮುಖವನ್ನಾಗಿ ತೋರಿಸುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸುವ ತಾರಾ – ರುಮೆಯರದು ಒಂದು ಮುಖವಾದರೆ, ತತ್ವನಿಷ್ಠೆಗಾಗಿ ಬದುಕಬಯಸುವ ಸೀತೆಯದು ಮತ್ತೊಂದು ಮುಖ; ಸ್ಚಚ್ಚಂದ ಪ್ರವೃತ್ತಿಯ ರ್ಶೂನಖೀಯ ಬದುಕಿನ ಚಿತ್ರಣವನ್ನು ಅದೇ ರಾಮಾಯಣ ತೆರೆಡಿದುತ್ತದೆ. ಪತ್ನಿ ಮತ್ತು ಪತಿಗೆ ನಿಷ್ಠುರಾದ ರಾಮ – ಸೀತೆಯರದು ಒಂದು ದೃಷ್ಟಿಕೋನವಾದರೆ, ಅದಕ್ಕೆ ತದ್ವಿರುದ್ಧ ಮನೋಭಾವವನ್ನು ರಾವಣ ಮತ್ತು ಆತನ ತಂಗಿ ಶೂರ್ಪನಖಿ ಪ್ರತಿನಿಧಿಸುತ್ತಾರೆ. ಮಹಿಳೆ ಮತ್ತು ಪುರುಷ ಸಮಾಜದ ವಿವಿಧ ಮುಖಗಳ ಪ್ರತಿನಿಧಿಗಳಾಗಿ ವಾಲಿ – ಸುಗ್ರೀವ, ರಾಮ – ರಾವಣ, ಸೀತೆ – ಮಂಡೋದರಿ, ತಾರಾ – ರುಮೆ ಮೊದಲಾದವರ ರೂಪದಲ್ಲಿ ಕಂಡಂತೆಯೇ ರಾಮಾಯಣವು ಶೂರ್ಪನಕೀಯ ಚಿತ್ರಣವನ್ನೂ ನೀಡುತ್ತದೆ. ಲಕ್ಷ್ಮಣ – ಹನುಮಂತರದು ಮತ್ತೊಂದು ಮುಖ. ಸುಂದರ ಸ್ತ್ರೀಯರ ಸಂಗ ಬಯಸುವ ತನ್ನ ಅಣ್ಣ ರಾವಣನ ತರಹವೇ ಸುಂದರ ಪುರುಷರ ಸಂಗ ಬಯಸುವ ಶೂರ್ಪನಖಿ, ತನ್ನ ಆಸೆ ತಿರಸ್ಕೃತಗೊಂಡ ನಂತರ ಸೇಡಿನ ಕ್ರಮವಾಗಿ ಸೀತೆಯ ಅಪಹಹರಣಕ್ಕೆ ಕಾರಣಳಾಗುವ ಚಿತ್ರಣವನ್ನು ರಾಮಾಯಣ ನೀಡುತ್ತದೆ.

ಆದರೆ ಶೂರ್ಪನಖಿಯ ಜತೆ ರಾಮ – ಲಕ್ಷ್ಮಣರು ನಡೆದುಕೊಳ್ಳುವ ರೀತಿಗೂ, ತನ್ನ ವಶದಲ್ಲಿ ಬರುವ ಸೀತೆಯ ರಾವಣ ನಡೆದುಕೊಳ್ಳುವುದಕ್ಕೂ ಅಗಾಧ ಅಂತರವಿದೆ. ತಮ್ಮನ್ನು ಕಂಡು ಕಾಮಮೋಹಿತೆಯಾಗಿ ಬರುವ ಶೂರ್ಪನಖಿಯ ಕಿವಿ ಮೂಗುಗಳನ್ನು ಕೊಯ್ದು ಕಳಿಸುವ ಶ್ರೀರಾಮ ಲಕ್ಷ್ಮಣರು. ಆ ಯಾವುದೇ ದೈಹಿಕ ತೊಂದರೆ ನೀಡದೆ ಆದರೆ ಒತ್ತಡ ರಾಜಕಾರಣದ ಮೂಲಕ ತನ್ನ ವಶದಲ್ಲಿನ ಸೀತೆಯನ್ನು ಅನುನಯದಿಂದಲೇ ಒಲಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುವ ರಾವಣನೆಲ್ಲಿ? ಶೂರ್ಪನಖಿಯ ಜತೆಗಿನ ರಾಮನ ವರ್ತನೆಯ ಮಾತಿರಲಿ, ಸೀತೆಯ ಜತೆ ರಾವಣ ನಡೆದುಕೊಳ್ಳುವ ರೀತಿ ಮತ್ತು ಅದೇ ಸೀತೆಯ ವಿಚಾರದಲ್ಲಿ ರಾಮನ ನಡವಳಿಕೆಯನ್ನು ಪರಸ್ಪರ ಹೋಲಿಸಿದಾಗ ಕಂಡುಬರುವ ವ್ಯತ್ಯಾಸ ಗಮನ ಸೆಳೆಯದಿರುವುದಿಲ್ಲ. ಅಪಹರಿಸಿಕೊಂಡು ಬರುವ ಸಂದರ್ಭದಲ್ಲಿ ತೋರಿಸುವ ಜಬರದಸ್ತು ಹೊರತು, ಸೀತೆಯ ಜತೆ ನಡೆದುಕೊಳ್ಳುವಾಗ ರಾವಣ ತೋರಿಸುವ ಎಚ್ಚರ ಕುರಿತಂತೆ ಹಲವಾರು ತರಹದ ವಿವರಣೆಗಳಿವೆ. ಆದರೆ ರಾಮಾಯಣದಲ್ಲಿ ವ್ಯಕ್ತವಾಗುವ ಆಂತರಿಕ ಮಾಹಿತಿಗಳ ಪ್ರಕಾರ, ಸೀತೆಯ ಮೌನ ಪ್ರತಿರೋಧ ಮತ್ತು ಆಕೆಯ ಖಚಿತ ನಿಲುವು ರಾವಣನ ಮುಂದಿನ ನಡವಳಿಕೆಯನ್ನು ನಿರ್ಬಂಧಿಸಿರಬಹುದು. ರಾಮನ ಬಗೆಗಿನ ಸೀತೆಯ ಅನ್ರಕ್ತಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಆಕೆಯ ನಿಷ್ಠೆ ಮತ್ತು ದೃಢ ನಿಲುವು, ಘನತೆಯಿಂದ ನಡೆದುಕೊಳ್ಳುವಂತೆ ರಾವಣನ ಮೇಲೆ ಪರೋಕ್ಷ ಪ್ರಭಾವ ಬೀರಿರಬಹುದಾದಂತೆಯೇ ತನ್ನನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧಪಡಿಸಿದಂತೆ ತೋರುತ್ತದೆ. ಕೊನೆಯಲ್ಲಿ ನಡೆಯಿತು ಎನ್ನುವ ಅಗ್ನಿಪರೀಕ್ಷೆ, ಕಾವ್ಯಾತ್ಮಕವಾದುದು ಎನ್ನುವುದಕ್ಕಿಂತಲೂ ಹೆಚ್ಚಾಗಿ, ಎಪಿಕ್‌ಗೆ ಸಹಜವಾದ ವಾಸ್ತವ ಮಾಂತ್ರಿಕತೆಯ ಎಪಿಕ್‌ ಪ್ರತಿಮೆ.

ಸೀತೆಯ ಅಪಹರಣದ ನಂತರ ಅವರೆಲ್ಲರಲ್ಲಿ ಆಗಿರುವ ಮಾರ್ಪಾಡನ್ನು ರಾಮಾಯಣದ ಕವಿ ಗುರುತಿಸುತ್ತಾ ಹೋಗುತ್ತಾನೆ. ಮಾರೀಚನ ಮರುಳು ಜಿಂಕೆಗೆ ಮನಸೋತ ಸೀತೆ, ಅವನು ರಾಮನ ಕೈಯಲ್ಲಿ ಹತನಾಗುವ ಎಬ್ಬಿಸುವ ಆರ್ತನಾದದಿಂದ ಗಲಿಬಿಲಿಗೊಂಡು ಲಕ್ಷ್ಮಣನ ಮೇಲೆ ಹುಚ್ಚಾಬಟ್ಟೆ ಎಗರಾಡುವ ಸನ್ನಿವೇಶ ಮತ್ತು ರಾವಣನ ಸಂಹಾರದ ನಂತರ ಅಗ್ನಿಪರೀಕ್ಷೆಗೆ ಮೊದಲು ರಾಮನ ಜತೆ ನಡೆದುಕೊಳ್ಳುವ ರೀತಿಯನ್ನು ತುಲನೆ ಮಾಡಿನೋಡಬೇಕು.

ರಾವಣನ ಹತ್ಯೆಯ ಸುದ್ದಿಯನ್ನು ಹನುಮಂತನು ಹೊತ್ತು ತಂದಾಗ ಸ್ನಾನವಿಲ್ಲದೆ ಮರದ ಬುಡವೊಂದರಲ್ಲಿ ಖಿನ್ನಳಾಗಿ ಕುಳಿತಿದ್ದ ಸೀತೆಗೆ – ಮಾತೇ ಹೊರಡದಾಯಿತು:

ವೃಕ್ಷಮೂಲೇ ನಿರಾನಂದಾಂ ರಾಕ್ಷಸೀಭಿಃ ಸಮಾವೃತಾಮ್‌ |
ನಿಭೃತಃ ಪ್ರಣತಃ ಪ್ರಹ್ವಃ ಸೋsಭಿಗಮ್ಯಾಭಿವಾದ್ಯ || ೩ || ಯುದ್ಧಕಾಂಡ, ಸರ್ಗ ೧೧೬

ಕಿರುಕುಳ ನೀಡುತ್ತಿದ್ದ ಎಲ್ಲ ರಾಕ್ಷಸಿಯರನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಬಯಕೆಯನ್ನು ಹನುಮಂತ ವ್ಯಕ್ತಪಡಿಸಿದಾಗ ಸಾವರಿಸಿಕೊಂಡು ಆಡುವ ಮಾತು ಬದುಕಿನಲ್ಲಿ ಮಾಗಿದನಂತರ ದಕ್ಕುವ ಮಾನವೀಯತೆಗೆ ಸಾಕ್ಷಿಯಾಗಿವೆ: “ರಾಜಾಜ್ಞೆಗೆ ಅಧೀನರಾಗಿ ನನಗೆ ಹಿಂಸೆ ನೀಡುತ್ತಿದ್ದ ರಾಕ್ಷಸಿಯರಿಗೆ ಹಿಂಸೆ ನೀಡಿ ಕೊಲ್ಲುವುದು ತರವಲ್ಲ. ತಪ್ಪು ಮಾಡದವರು ಈ ಲೋಕದಲ್ಲಿ ಯಾರೂ ಇಲ್ಲ. ಅವರಿಗೆ ಪ್ರತಿಹಿಂಸೆ ನೀಡುವುದು ಚಾರಿತ್ರ್ಯದಿಂದ ತುಂಬಿದವರಿಗೆ ಭೂಷಣವಲ್ಲ” ಎಂಬ ಸೀತೆಯ ನುಡಿಗಳು ತನಗೆ ತಾನೇ ಹೇಳಿಕೊಂಡಂತಿವೆ.

ಸ್ನಾನ ಮಾಡಿ ದಿವ್ಯಾಭರಣಗಳಿಂದ ಭೂಷಿತಳಾಗಿ ತನ್ನನ್ನು ನೋಡಲು ಬರುವಂತೆ ರಾಮ ಹೇಳಿಕಳುಹಿಸಿದ್ದಾನೆ ಎಂದು ವಿಭೀಷಣನನು ಅಂತಃಪುರದಲ್ಲಿನ ಸ್ತ್ರೀಯರ ಮೂಲಕ ಹೇಳಿ ಕಳುಹಿಸಿದಾಗ ಸೀತೆಯು, ತಾನು ಇದ್ದ ಸ್ಥಿತಿಯಲ್ಲಿಯೇ ರಾಮನನ್ನು ನೋಡಲು ಬಯಸುವುದಾಗಿ ನುಡಿಯುತ್ತಾಳೆ :

ಅಸ್ನಾತಾ ದ್ರಷ್ಟುಮಿಚ್ಛಾಮಿ ಭರ್ತಾರಂ ರಾಕ್ಷಸಾಧಿಪ ||೧೦|| ಯುದ್ಧಕಾಂಡ, ಸರ್ಗ ೧೧೭

ರಾಮನ ಇಚ್ಛೆ ಆ ರೀತಿ ಇದ್ದು ಅದನ್ನು ಪಾಲಿಸುವುದು ಯುಕ್ತ ಎಂದು ವಿಭೀಷಣ ಹೇಳಿ ಕಳುಹಿಸಿದಾಗ, ಸೀತೆ ಮರುಮಾತನಾಡದೆ ಅದನ್ನು ಪಾಲಿಸುವ ಸಂದರ್ಭದಲ್ಲಿ: “ಭರ್ತೃ ಭಕ್ತಿವ್ರತಾ ಸಾಧ್ವೀ” ಎಂಬ ಮಾತುಗಳನ್ನು ಬಳಸಲಾಗುತ್ತದೆ ಎಂಬುದನ್ನು ಮರೆಯದೆ ಗಮನಿಸಬೇಕು.

ಎಚ್ಚರತಪ್ಪಿದ ಅಥವಾ ಸರಳ ನಡವಳಿಕೆಯೇ ಆಕೆಯ ಅಪಹರಣಕ್ಕೆ ಬೇಕಾದ ಹಿನ್ನೆಲೆ ಒದಗಿಸಿದಂತೆ ತೋರುತ್ತದೆ ಎಂದು ಚಿಂತಿಸಲು ಅವಕಾಶ ಕಲ್ಪಿಸುವ ರೀತಿಯಲ್ಲಿ ಸೂಕ್ಷ್ಮವಾಗುವ ಎಪಿಕ್‌ ರಾಮಾಯಣವು, ಕೂಡಲೇ ಎಚ್ಚೆತ್ತುಕೊಂಡ ಸೀತೆಯ ನಡವಳಿಕೆ ಮತ್ತು ಸನ್ಮತಿಯೇ ಆಕೆಯನ್ನು ರಾವಣನನ ಪ್ರಲೋಭನೆಯ ಆಮಿಷದ ಬಂಧನದಿಂದ ಚಿತ್ತಶುದ್ಧಿ ಎಂಬ ಅತಿಸೂಕ್ಷ್ಮ ಚಿತ್ರಣವನ್ನು ಸಹ ನೀಡುತ್ತದೆ. ಕೊನೆಯದಾಗಿ, ಆಕೆಯನ್ನು ರಕ್ಷಿಸುವುದು ಆಕೆಯ ಮನೋಭಾವ ಮತ್ತು ಮನೋಧರ್ಮವೇ.

ಸೀತೆಯ ಅಪಹರಣವನ್ನು ತನಗೊದಗಿದ ಕಳಂಕ ಅಥವಾ ಅವಮಾನ ಎಂದು ಭಾವಿಸುವ ಅದೇ ರಾಮನು, ತನ್ನ ಕೈಯಲ್ಲಿ ಸಾಧ್ಯವಿದ್ದುದನ್ನೆಲ್ಲ ಮಾಡಿ ಶತ್ರುವನ್ನು ಸಂಹರಿಸಿ ಆಕೆಯನ್ನು ಮರಳಿ ಗಳಿಸಿದುದಾಗಿ ನುಡಿಯುತ್ತಾನೆ.

ಆದರೆ ಅಲ್ಲಿ ನಿಜವಾಗಿ ಗೆದ್ದವಳು ಸೀತೆ. ರಾಮ ಮತ್ತು ರಾವಣರನ್ನು ತನ್ನ ಅಗಲಿಕೆ ಮತ್ತು ಇರುವಿಕೆಯಿಂದ ಸದಾ ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದ ಸೀತೆ ಕೊನೆಗೆ ನಡೆದ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವುದರ ಮೂಲಕ ಆ ಮಾತಿಗೆ ಹೊಸ ಅರ್ಥ ನೀಡುತ್ತಾಳೆ. ಈಗಾಗಲೇ ನಮೂದಿಸಲಾದಂತೆ ಅಗ್ನಿಪರೀಕ್ಷೆ ಎಂಬುದೊಂದು ಎಪಿಕ್‌ – ಪ್ರತಿಮೆ. ಪರಿಶುದ್ಧತೆ, ಋಜುತ್ವ ಇತ್ಯಾದಿ ಪದಗಳೇ ಇಂದಿನ ಸಂದರ್ಭದಲ್ಲಿ ಅನೇಕರಿಗೆ ನಗೆಪಾಟಲಿನ ಸಂಗತಿಯಾಗಿ ತೋರಬಹುದು. ರಾವಣನ ವಶದಲ್ಲಿದ್ದರೂ ತನ್ನ ಮನಸ್ಸು – ದೇಹ ಎಂಬ ಪದದ ಬಳಕೆಯ ಅಗತ್ಯವಿಲ್ಲ. ಕೆಡದಂತೆ ಕಾಪಾಡಿಕೊಂಡಿದ್ದವಳು ಎಂಬುದು ಆ ಅಗ್ನಿಪರೀಕ್ಷೆಯಿಂದ ಹೊರಬರುವ ಒಂದು ಅರ್ಥವಾದರೆ; ರಾವಣನ ಆಮಿಷದ ಸತತ ಅಗ್ನಿಪರೀಕ್ಷೆಯಲ್ಲಿ ಗೆದ್ದು ನಿಷ್ಕಲ್ಮಷ ಮನಸ್ಸಿನಿಂದ ಪರಾಗಿ ಬಂದುದು ಅದರ ಮತ್ತೊಂದು ಮುಖವಾಗುತ್ತದೆ. ಶ್ರೀರಾಮನ ನಿರೀಕ್ಷೆಯ ಸತ್ವಪರೀಕ್ಷೆಯಲ್ಲಿ ಗೆದ್ದುಬರುವುದು ಆ ಅಗ್ನಿಪರೀಕ್ಷೆಯ ಮತ್ತೊಂದು ಮುಖ: ಅದರಲ್ಲಿ ಸೀತೆ ಜಯ ಗಳಿಸಿದಂತೆಯೇ ರಾಮ ಮತ್ತು ರಾವಣರು ಮತ್ತೊಂದು ರೀತಿಯ ಜಯ ಗಳಿಸುತ್ತಾರೆ. ಒಲಿದು ಬಾರದ ಹೆಣ್ಣನ್ನು ಅಗ್ನಿಪರೀಕ್ಷೆಯಲ್ಲಿ ಗೆದ್ದು ಸೀತೆಯನ್ನು ಪತ್ನಿಯನ್ನಾಗಿ ಮರಳಿ ಪಡೆಯುತ್ತಾನ; ಮತ್ತೊಬ್ಬರನ್ನು ಬಯಸದ ಪತ್ನಿಯನ್ನು ಮರಳಿ ಪಡೆಯುವಾಗ ದೊರಕುವ ಆನಂದ ಮತ್ತು ಹೆಮ್ಮೆ ಮತ್ತು ಅದಕ್ಕಾಗಿ ಸಿದ್ಧವಾಗಬೇಕಾದ ಅಗ್ನಿಪರೀಕ್ಷೆಯಲ್ಲಿ ರಾಮ ಹಲವಾರು ವರ್ಷ ಕಾಲ ಪರೀಕ್ಷೆಗೊಳಗಾಗಿರುತ್ತಾನೆ.

ರಾಮ – ಸೀತೆ ಮತ್ತು ಒಂದಾಗುವುದರೊಂದಿಗೆ ಬಿಕ್ಕಟ್ಟು ಇತ್ಯರ್ಥಗೊಂಡಂತಾಗುತ್ತದೆ. ಸೀತೆಯನ್ನು ಮರಳಿ ಪಡೆದ ನಂತರ ರಾಮನು ಅತ್ಯಂತ ಸುಖದಲ್ಲಿದ್ದನು – ಸುಖಂ ಸುಖಾರ್ಹೋsನುಬಭೂವ ರಾಘವಃ – ಎಂಬುದಾಗಿ ಆ ಸರ್ಗದ ಕೊನೆಯ ಪದ್ಯ ಸ್ಪಷ್ಟವಾಗಿ ಹೇಳುತ್ತದೆ. ಆ ಕಾಲದ ಸಮಾಜ ಆ ನಡವಳಿಕೆಯನ್ನು ಮೆಚ್ಚಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿತು ಎಂಬುದು ಇಲ್ಲಿ ಬಹಳ ಮುಖ್ಯ. ಸೀತೆಯನ್ನು ಮರಳಿ ಸ್ವೀಕರಿಸಿದ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ, ಆದರ್ಶಪತಿ, ಆದರ್ಶಪುತ್ರ, ಆದರ್ಶಸೋದರ, ಆದರ್ಶಮಿತ್ರ ಮತ್ತು ಆದರ್ಶರಾಜ ಎಂಬ ಗೌರವಿಸಿತು. ಮತ್ತು ಆ ಎಲ್ಲ ಗುಣಗಳು ರಾಮನಲ್ಲಿ ಇರಬೇಕಾದ ಪ್ರಮಾಣದಲ್ಲಿ ಇರುವುದಾಗಿ ಆಗಿನ ಸಮಾಜ ಭಾವಿಸಿತು.

ಅಷ್ಟಾದರೂ ಮುಂದಿನ ತಲೆಮಾರಿನ ಕವಿಗಳು ಉತ್ತರಾಖಂಡ ಬರೆದು ಅದನ್ನು ವಾಲ್ಮೀಕಿ ತಲೆಗೆ ಕಟ್ಟುವ ಅತ್ಯಂತ ದುಸ್ಸಾಹಸಕ್ಕೆ ಕೈಹಾಕಿದ್ದಾದರೂ ಏಕೆ? ಅದನ್ನು ಮೂಲ ರಾಮಾಯಣದ ಭಾಗವೆಂದು ಸ್ವೀಕರಿಸುವ ಮನಃಸ್ಥಿತಿ ನಂತರ ಬಂದ ಕವಿಗಳಿಗೆ ಮತ್ತು ಜನರಿಗೆ ಬಂದುದಾದರೂ ಹೇಗೆ? ಉಳಿದವರ ಮಾತಿರಲಿ, ಕಾಳಿದಾಸ, ಭವಭೂತಿ, ಲಕ್ಷ್ಮೀಶನಂತಹ ಹಲವಾರು ಮನಸ್ಸುಗಳು ಮತ್ತು ಪ್ರತಿಭೆಗಳು ಅದೇ ಹಾದಿಯಲ್ಲಿ ಸಾಗುವುದು ಆಶ್ಚರ್ಯ ಮೂಡಿಸದಿರಲು ಸಾಧ್ಯವೇ? ಅಗ್ನಿಪರೀಕ್ಷೆಯನಂತರ ಮೂಲ ರಾಮಾಯಣದಲ್ಲಿ ರಾಮಸೀತೆಯರು ಒಂದಾಗುವುದರೊಂದಿಗೆ ಎಪಿಕ್‌ ಕೊನೆಗೊಳ್ಳುವುದು ನಿರ್ಧಾರಿತ ಸಂಗತಿ. ಆದರೆ ಉತ್ತರಾಕಾಂಡದ ರಾಮ ಮತ್ತೊಮ್ಮೆ ಅದೇ ತರಹದ ಪರೀಕ್ಷೆಗೆ ಸಿದ್ಧನಾದಾಗ ಸೀತೆ ಬೇರೆ ದಾರಿಕಾಣದೆ ಭೂಮಿಯಲ್ಲಿ ಐಕ್ಯಳಾಗುತ್ತಾಳೆ ಎಂಬ ರೂಪಕವನ್ನು ಯಾವ ರೀತಿಯಲ್ಲಿ ಬೇಕಾದರೂ ಅರ್ಥೈಸಬಹುದು:

ತಥಾ ಶಪಂತ್ಯಾಂ ವೈದೇಹ್ಯಾಂ ಪ್ರಾದುರಾಸೀತ್ತದದ್ಭುತಮ್ |
ಭೂತಲಾದುತ್ಥಿತಂ ದಿವ್ಯಂ ಸಿಂಹಾಸನಮನುತ್ತಮಮ್‌ ||೧೮ || ಉತ್ತರಕಾಂಡ, ಸರ್ಗ ೯೭

ಮೂಲ ರಾಮಾಯಣ ಸುಖಿ ಮತ್ತು ನೆಮ್ಮದಿಯ ವಾತಾವರಣದಲ್ಲಿ ಅಂತ್ಯಗೊಂಡರೆ, ಉತ್ತರಖಾಂಡ ಸಂಪೂರ್ಣವಾಗಿ ಟ್ರಾಜಿಡಿ; ಮಹಾಭಾರತದ ಮತ್ತೊಂದು ದುರಂತದ ರೂಪವಾಗಿ ಪರಿವರ್ತಿಸುವ ಉದ್ದೇಶದಿಂದ ಉತ್ತರಕಾಂಡ ಬರೆದಂತೆ ಕಾಣುತ್ತದೆ. ಭಾರತದಲ್ಲಿ ಟ್ರಾಜಿಡಿ ಕಲ್ಪನೆ ಬೆಳೆದು ಬರಲಿಲ್ಲ ಎಂದು ನಂಬುವ ಜನರು, ಕ್ರಿಸ್ತಶಕೆಯ ಆಜುಬಾಜಿನ ಸೃಷ್ಟಿಯಾಗಿದ್ದಿರಬಹುದಾದ ಉತ್ತರಕಾಂಡವನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಓದುವುದು ಉತ್ತಮ.

ಉತ್ತರಕಾಂಡದಲ್ಲಿ ಪ್ರಮುಖವಾಗಿ ಕೇಳಲಾಗುವ ಪ್ರಶ್ನೆಗಳು ಮೂರು;[2] ಅವು ಪ್ರಶ್ನೆಗಳಲ್ಲ ಅನುಮಾನ ಅಥವಾ ಸಂಶಯಗಳು: ರಾವಣ ಸೀತೆಯನ್ನು ಅಪಹರಣದ ಕಾಲದಲ್ಲಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೋದ ಎಂಬುದು ಒಂದಾದರೆ, ರಾವಣನ ವಶದಲ್ಲಿ ಹಲವಾರು ವರ್ಷ ಕಾಲವಿದ್ಧ ಸೀತೆಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ ಶ್ರೀರಾಮ ಸ್ವೀಕರಿಸಿದ್ದು ಎಷ್ಟು ಸರಿ ಎಂಬುದು ಎರಡನೆಯದು, ಮತ್ತು ರಾಜನ ಆ ತರಹದ ವರ್ತನೆಯ ಪರಿಣಾಮ ಪ್ರಜೆಗಳ ಮೇಲಾಗುವುದಕ್ಕೆ ಸಂಬಂಧಿಸಿದ್ದು ಮೂರನೆಯದು.

ಅದಕ್ಕಿಂತಲೂ ತೀವ್ರವಾದ ಪ್ರಶ್ನೆಗಳು ಮತ್ತು ಭಯಂಕರವಾದ ಭಯಗಳನ್ನು ಸ್ವತಃ ರಾಮನೇ ಒಂದಲ್ಲ ಒಂದು ಸಂದರ್ಭದಲ್ಲಿ ವ್ಯಕ್ತಪಡಿಸುತ್ತಾನೆ. ಅಪಹರಿಸಿಕೊಂಡು ಹೋಗುವಾಗ ರಾವಣ ಸೀತೆಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೋದ ಎಂಬ ಬಗ್ಗೆ ಹೆಚ್ಚಿನ ಚರ್ಚೆಗೆ ಹೋಗದಿರುವುದು ಒಳ್ಳೆಯದು. ಅಂತಹ ಮನಃಸ್ಥಿತಿ ಇರುವ ಜನರಿಗೆ ಯಾವುದೇ ತರಹದ ಉತ್ತರ ಅಥವಾ ಸಮಜಾಯಿಷಿ ಸಮಾಧಾನ ತರುವ ಸಾಧ್ಯತೆ ಇಲ್ಲ. ಆದರೂ ಆ ಸಾಧ್ಯತೆಗಳನ್ನು ಕುರಿತು ರಾಮ ಆಡುವ ಮಾತುಗಳನ್ನು ಮತ್ತೊಮ್ಮೆ ಗಮನಿಸುವುದು ಉತ್ತಮ.

ಕೆಂಪಗಿನ ದುಂಡು ಮೂಲೆಗಳ ಸೀತೆಯನ್ನು ರಾಕ್ಷಸರು ಮರ್ದಿಸುವಾಗ ಅಥವಾ ಹಿಚುಕುವಾಗ ಅವು ಪಡೆದುಕೊಳ್ಳುವ ರೂಪ ಅಥವಾ ಬಣ್ಣದ ಕಲ್ಪನೆ ರಾಮನಲ್ಲಿ ಅತ್ಯಂತ ಭಯ ತರಿಸುತ್ತದೆ:

ತೌ ಲೋಹಿತಸ್ಯ ಪ್ರಿಯದರ್ಶನಸ್ಯ ಸದೋಚಿತಾವುತ್ತಮಚಂದನಸ್ಯ |
ವೃತ್ತೌಸ್ತನೌ ಶೋಣಿತಪಂಕದಿಗ್ಧೌ ನೂನಂ ಪ್ರಿಯಾಯಾ ಮಮ ನಾಭಿಪಾತಃ || ೮||ಅರಣ್ಯ ಕಾಂಡ, ಸರ್ಗ ೬೩

ಆ ದೃಶ್ಯವನ್ನು ಊಹಿಸಿಕೊಳ್ಳಲು ಪ್ರಯತ್ನಿಸುವ ರಾಮನು, “ನಗೆ ಸಾವು ಬರಬಾರದೆ?” ಎಂದು ಹಲಬುತ್ತಾನೆ. ರಾಮ ಕಲ್ಪಿಸಿಕೊಳ್ಳಲು ಬಯಸುವ ಆ ದೃಶ್ಯದ ಜತೆ ಹೋಲಿಸಿದರೆ, ರಾವಣ ಸೀತೆಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೋದ[3] ಆರೋಪ ಅಷ್ಟು ಹೀನಾಯವಲ್ಲ. ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೋದ ಎಂಬ ಮಾತುಗಳಿಗಿಂತಲೂ ಮತ್ತೊಂದು ಗಂಭೀರ ಆರೋಪವನ್ನು ರಾವಣನ ಸಂಹಾರದ ನಂತರ ಸೀತೆಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಸ್ವತಃ ರಾಮ ನೆರೆದ ಎಲ್ಲ ವಾನರ ಮತ್ತು ರಾಕ್ಷಸ ಸೇನೆಯ ಎದುರೇ ಆಡುತ್ತಾನೆ, “ರಾವಣನ ಕೆಟ್ಟ ಕಣ್ಣಿಗೆ ಬಿದ್ದ ನೀನು ಅವನ ಮಡಿಲಿನಿಂದ ಈಗ ತಾನೇ ಜಾರಿ ಬಂದಿರುವೆ” ಎಂಬ ಅರ್ಥ ಕೊಡುವ ನಿಂದನೆ ಅವನ ಬಾಯಿಂದ ಸಲೀಸಾಗಿ ಹೊರಬರುತ್ತದೆ. ತನ್ನ ಕುಲವನ್ನು ಮಹಾಕುಲ ಎಂದು ಕರೆದುಕೊಳ್ಳುವ ರಾಮ, ಬೇರೆಯವರ ಗೃಹದಲ್ಲಿ ಬಹಳ ಕಾಲ ಉಳಿದ ಆಕೆಯ ಚಾರಿತ್ರ್ಯದ ಬಗ್ಗೆ ಆಡುವ ಮಾತುಗಳು ಉತ್ತರಕಾಂಡದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಮತ್ತು ಅನುಮಾನಗಳಿಗಿಂತ ಹೆಚ್ಚು ಕ್ರೂರವೂ ಕಠಿಣವಾದವೂ ಆಗಿವೆ. ಅಂಥಾಕೆಯನ್ನು ಸ್ವೀಕರಿಸಲು ನಿರಾಕರಿಸುತ್ತಾನೆ. ಬೇರೆ ಎಲ್ಲಿಗಾದರೂ ಹೋಗಲು ಈಗ “ನೀನು ಸ್ವತಂತ್ರಳಿದ್ದೀಯೆ” ಎಂಬುದಾಗಿ ಸೀತೆಗೆ ಹೇಳುವುದರ ಜತೆಗೆ ವಿಭೀಷಣ, ಸುಗ್ರೀವ, ಲಕ್ಷ್ಮಣ ಅಥವಾ ಭರತ ಇವರಲ್ಲಿ ಯಾರ ಬಳಿಗಾದರೂ ಹೋಗಬಹುದಾಗಿದೆ ಎನ್ನುತ್ತಾನೆ. ರಾವಣನ ವಶದಲ್ಲಿದ್ದ ಸೀತೆ ಮತ್ತೊಬ್ಬರ ವಶದಲ್ಲಿ ಮಾತ್ರ ಇರಲು ಲಾಯಕ್ಖಾದವಳು ಎಂಬ ವ್ಯಂಗ್ಯ, ಅಪಹೃತಳಾದ ಹೆಂಡತಿಯ ವಿಚಾರದಲ್ಲಿ ಬಹಳ ಸಾಧಾರಣ ಗಂಡಸೊಬ್ಬ ಏನೆಲ್ಲ ಪ್ರಶ್ನೆ ಕೇಳಬಹುದು, ಏನೆಲ್ಲ ಮಾತನಾಡಬಹುದು ಮತ್ತು ಯಾವ ರೀತಿ ನಡೆದುಕೊಳ್ಳಬಹುದೋ ಆ ತರಹವೇ ರಾಮ ನಡೆದುಕೊಳ್ಳುತ್ತಾನೆ.

ಅದರ ಜತೆಗೆ ಹೋಲಿಸಿದರೆ ಉತ್ತರಕಾಂಡದಲ್ಲಿ ಎತ್ತಲಾದ ಪ್ರಶ್ನೆಗಳು ಮತ್ತು ಅಲ್ಲಿನ ರಾಮನ ವರ್ತನೆ ತೀರ ಸಪ್ಪೆ ಮತ್ತು ಅತ್ಯಂತ ಪೇಲವ; ನಿಜವಾದ ರಾಮನ ನಿಜವಾದ ಕೋಪತಾಪ, ರೋಷ, ಅಸಹನೆ ಮತ್ತು ಸಿಟ್ಟು ಸ್ಫೋಟಗೊಳ್ಳುವುದೇ ಮೂಲ ರಾಮಾಯಣದ ಯುದ್ಧಕಾಂಡದಲ್ಲಿ. ಆ ಸಿಟ್ಟಿನ ಭರದಲ್ಲಿ ತನ್ನ ನಡವಳಿಕೆ ಸುಸಂಸ್ಕೃತವೋ ಎಂದು ಯೋಚಿಸುವ ತಾಳ್ಮೆಯೂ ಆತನಲ್ಲಿ ಉಳಿದಿರುವುದಿಲ್ಲ.

ನಡವಳಿಕೆಗೆ ಸಂಬಧಿಸಿದಂತೆ ಎಚ್ಚರಿಕೆಯ ಮಾತು ಬರುವುದೇ ಸೀತೆಯ ಬಾಯಿಂದ ‘ಪ್ರಾಕೃತರ’ ತರಹ ಆಡುತ್ತಿರುವೆ ಎನ್ನುವ ಸೀತೆ ಪೌರುಷದ ಸಂಕೇತವಾಗಿ ಬಳಸುವ ‘ಮಹಾಬಾಹು’ ಎನ್ನುವ ಪದ ವ್ಯಂಗ್ಯವಾಗಿ ಬಿಡುತ್ತದೆ. ಕೆಲ ಹೆಂಗಸರ ನಡವಳಿಕೆ ಆಧರಿಸಿ ಎಲ್ಲ ಹೆಂಗಸರನ್ನು ಶಂಕಿಸುವುದು ತರವಲ್ಲ ಎನ್ನುವ ಆಕೆ, ಆ ತರಹದ ರೂಕ್ಷ ಮಾತುಗಳು ನಿನ್ನ ಬಾಯಿಂದ ಬರುವುದು ಸರಿಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅಪಹರಣದ ಕಾಲದಲ್ಲಿ ಆಗಿರಬಹುದಾದ ದೇಹಮಾತ್ರದ ಸಂಸ್ಪರ್ಶ ಕುರಿತು ಸೀತೆ ನೀಡುವ ವಿವರಣೆ ಕೂಡ ಮನನೀಯ ಮತ್ತು ವಾಸ್ತವ ಸತ್ಯದಿಂದ ಕೂಡಿದೆ: ನಡೆದುಹೋದ ಆ ಸಂಸ್ಪರ್ಶವನ್ನು “ದೈವಂ ತತ್ರಾಪರಾಧ್ಯತಿ” ಎನ್ನುವ ಸೀತೆಯು, “ಪರಾಧೀನೆಯಾದ ನಾನು ಅದನ್ನು ತಡೆಯುವುದು ಸಾಧ್ಯವಿತ್ತೆ?” ಎಂದು ಕೇಳುವ ಪ್ರಶ್ನೆ, ನೊಂದ ಮಹಿಳೆಯೊಬ್ಬಳ ಆರ್ತಧ್ವನಿಯಂತೆ ನಡುಗುಸುವ ಸಾಮರ್ಥ್ಯ ಕಳೆದುಕೊಂಡಿಲ್ಲದಿರುವುದು.

ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಪಾತಿವ್ರತ್ಯ ಪದಗಳ ಬಳಕೆ ಮೂಲ ರಾಮಾಯಣ ಕಾಲದಲ್ಲಿ ಚಾಲತಿಯಲ್ಲಿದ್ದಂತೆ ಕಾಣುವುದಿಲ್ಲ: ಚಾರಿತ್ರ್ಯ, ಅಪವಾದ, ಅಪರಾಧ, ಪ್ರಖ್ಯಾತ ವಂಶ, ಕುಲ ಮೊದಲಾದ ಕೆಲ ಮಾತುಗಳು ಬರುತ್ತವೆ. ಚಾರಿತ್ರ್ಯ ಎಂಬ ಪದ ಬಳಸುವವಳೇ ಸೀತೆ. ತನ್ನ ನಡತೆಯ ಶುದ್ಧತ್ವ ಸಮರ್ಥಿಸಿಕೊಳ್ಳಲು ಸೀತೆ ತನ್ನ ಚಾರಿತ್ರ್ಯದ ಆಣೆ ಇಡುತ್ತಾಳೆ. ತನ್ನ ‘ಮಾನ’ ಕಾಪಾಡುವ ಹೊಣೆ ಒಟ್ಟಾಗಿ ಬಾಳಿದ ಮತ್ತು ಒಡನಾಡಿ ಯಾದ ರಾಮನದು ಎನ್ನುವ ಸಂದರ್ಭದಲ್ಲಿ ಸೀತೆ ‘ಮಾನ’ ಎಂಬ ಪದವನ್ನು ಬಳಸುತ್ತಾಳೆ ಎಂಬುದು ಗಮನಾರ್ಹ.

ಸೀತೆಯ ಅಗ್ನಿ ಪರೀಕ್ಷೆ ನಡೆಯುವುದು ನೆರೆದಿದ್ದ ಎಲ್ಲರ ಎದುರು. ಆಕೆ ಎಲ್ಲರ ಎದುರೇ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಅದೊಂದು ರೀತಿಯ ಬಹಿರಂಗ ವಿಚಾರಣೆ, ಚಾವಡಿ ನ್ಯಾಯ. ಆರೀತಿ ನೆರೆದ ಬೃಹತ್‌ ಸಮುದಾಯದ ಎದುರು ತನ್ನ ಪರಿಸ್ಥಿ ಸಮರ್ಥಿಸಕೊಳ್ಳಬೇಕಾಗಿ ಬಂದುದು ಅಗ್ನಿ ಪರೀಕ್ಷೆಯಲ್ಲದೆ ಮತ್ತೇನು?

ಉತ್ತರಕಾಂಡದಲ್ಲಿ ಎತ್ತಲಾಗುವ ಎಲ್ಲ ಪ್ರಶ್ನೆ, ಅನುಮಾನ ಮತ್ತು ಸಂಶಯಗಳಿಗೂ ಸಮರ್ಪಕ ಉತ್ತರ ದೊರಕಿದನಂತರವೇ ರಾಮ – ಸೀತೆಯರು ಒಂದಾಗುತ್ತಾರೆ ಎಂಬುದು ಆ ಭಾಗ ರಚಿಸಿದ ಕವಿಗಳಿಗೆ ಮತ್ತು ಅದನ್ನು ಮೆಚ್ಚಕೊಂಡ ಜನರಿಗೆ ಹೊಳೆಯಲಿಲ್ಲವೇ? ಅಥವಾ, ರಾಮಾಯಣದ ವಾಲ್ಮೀಕಿಯ ಅತ್ಯಂತ ಮಾನವೀಯ ಜನಪರ ಮತ್ತು ಉದಾರವಾದಿ ಧೋರಣೆಯನ್ನು ಒಪ್ಪಿಕೊಳ್ಳಲು ಮುಂದಿನ ತಲೆಮಾರಿನ ಜನ ನಿರಾಕರಿಸಿದುದೇ ಉತ್ತರಕಾಂಡ ರಚನೆಗೆ ಕಾರಣವಾಯಿತೇ? ಆ ಮೂಲಕ ರಾಮಾಯಣ ಮತ್ತು ವಾಲ್ಮೀಕಿಯ ಕಾಣ್ಕೆಯನ್ನು ಮರುಪರಿಶೀಲನೆಗೊಳಪಡಿಸುವ ಅಗತ್ಯ ಅವರಿಗೆ ಎದುರಾಯಿತೇ? ಅಪಹರಣಕ್ಕೆ ತುತ್ತಾದ ‘ಸೀತೆ’ಯಂಥ ಮಹಿಳೆ ಜತೆ ‘ರಾಮ’ನಂಥ ಪುರುಷನೊಬ್ಬ ಮರ್ಯಾದೆ ಮತ್ತು ನೆಮ್ಮದಿಯಿಂದ ಆದರ್ಶಯುತವಾಗಿ ಬದುಕಲು ಸಾಧ್ಯ ಎಂಬುದನ್ನು ನಿರಾಕರಿಸಬಯಸುವ ಕಹಿ ಮತ್ತು ಹುಳಿ ಮನಸ್ಸುಗಳ ಸೃಷ್ಟಿ ಉತ್ತರಕಾಂಡ ಆಗಿದ್ದಿರಬಹುದೇ? ಅಂಥ ಉತ್ತರಕಾಂಡದಂಥ ತೇಪೆಯನ್ನು ಮೂಲ ರಾಮಾಯಣದ ಭಾಗ ಎಂದು ಪ್ರಶ್ನಾತೀತವಾಗಿ ಸ್ವೀಕರಿಸುವ ಸಾಮೂಹಿಕ ಮನಃಸ್ಥಿತಿ ಬಂದುದಾದರೂ ಹೇಗೆ? ಆ ಬೆಳವಣಿಗೆ, ಭಾರತದ ಜನರ ಅಪ್ರಬುದ್ಧ ಅವಿವೇಕ ಅಥವಾ ಅಜ್ಞಾನದ ಪ್ರತೀಕವೇ? ಅಥವಾ ಅದುವೆ ಬದುಕಿನ ಬಗೆಗಿನ ಭಾರತೀಯರಿಗೆ ದಕ್ಕಿದ ಒಳನೋಟದ ಕೊಡುಗೆಯಾಗಿದ್ದಿರಬಹುದೇ? ಏಕೆಂದರೆ, ಮೊದ್ದುತನ ಮತ್ತು ಅಪಾರ ತಿಳುವಳಿಕೆ ಪರಸ್ಪರ ಸಂಬಂಧಿಯಾದುವಲ್ಲವೇ?

ಸೀತೆಯ ಅಪಹರಣದ ಬಿಕ್ಕಟ್ಟಿಗೆ ರಾವಣನ ಸಾವೇ ಪರಿಹಾರ ಎಂಬುದಾದಲ್ಲಿ ಈ ಧರೆಯ ಮೇಲಿನ ಬಹುತೇಕ ಗಂಡಸರು ಬದುಕುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಗಾಢ ತಿಳುವಳಿಕೆ ಆ ಬೆಳವಣಿಗೆಗೆ ಕಾರಣವಾಯಿತೇ? ರಾಮನ ಸೀತೆಯನ್ನು ಅಪಹರಿಸುವ ಮತ್ತು ಅದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ ಎಂಬ ರಾವಣ – ಗುಣ ಬದಲಾಗುತ್ತಿದ್ದು, ರಾಮ ವೇಷದ ರಾವಣರ ಸಂಖ್ಯೆ ಹೆಚ್ಚುತ್ತಿರುವ ಜಗತ್ತಿನಲ್ಲಿ ರಾವಣನಂಥವರ ಹತ್ಯೆ ಸಾಧ್ಯವೇ ಎಂಬ ಮರುಚಿಂತನೆಗಳು ಆ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದೇ? ಅಪಹರಣದ ಸಮಸ್ಯೆ ಬದುಕಿನ ಯಾವುದೇ ಸಂದರ್ಭದಲ್ಲಿ ಮರಳಿ ಕಾಡುವ ಸಾಧ್ಯತೆಯನ್ನು ಉತ್ತರಕಾಂಡ ಬರೆಯುವುದರ ಮೂಲಕ ಅರಿಯಲು ಭಾರತೀಯರು ಪ್ರಯತ್ನಪಟ್ಟರೇ?

ಆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರಾಕಾಂಡದ ಹಿನ್ನೆಲೆಯಲ್ಲಿ ಪ್ರಕಟವಾಗುವ ಭಾರತೀಯ ಗುಣಧರ್ಮ ಮತ್ತು ಮನಃಸ್ಥಿತಿಯನ್ನು ಎರಡು ರೀತಿಯಲ್ಲಿ ಗ್ರಹಿಸಬಹುದಾಗಿದೆ: ಮೂಲ ರಾಮಾಯಣದಲ್ಲೇ ಇತ್ಯರ್ಥಗೊಂಡ ಪ್ರಶ್ನೆ ಮತ್ತು ಬಿಕ್ಕಟ್ಟನ್ನು ಮತ್ತೆ ಅನ್ವೇಷಿಸಲು ಪ್ರಯತ್ನ ನಡೆಸುವ ಉತ್ತರಕಾಂಡವು, ಭಾರತೀಯ ಪೆದ್ದುತನದ ಪ್ರತೀಕ ಎಂಬುದು ಒಂದಾದರೆ, ಮೂಲ ರಾಮಾಯಣದ ಕಾಣ್ಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಅದೇ ಭಾರತೀಯರ ಬಂಡಾಯ ಪ್ರವೃತ್ತಿಯ ಕಿಲಾಡಿತನದ ಸಂಕೇತವಾಗಿಯೂ ಅದನ್ನು ಅರ್ಥೈಸಬಹುದಾಗಿದೆ. ಅವೆಲ್ಲ ಇರಲಿ. ಬಂಡಾಯ ಅಥವಾ ಭಿನ್ನ ರೀತಿಯ ಧೋರಣೆಯಿಂದ ತುಂಬಿದ ಕಾವ್ಯಗಳನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸುವ ಧೈರ್ಯಮಾಡದೆ ಮೂಲ ಕವಿಗಳ ಹೆಸರಿಗೆ ತಗುಲಿಸುವುದು ಸರಿಯೇ? ಕೆಲವರ ಕಣ್ಣಿಗೆ ಆ ಪ್ರಯತ್ನಗಳು ವಿನಯ, ಸಮರ್ಪಣಾ ಮನೋಭಾವ ಅಥವಾ ವ್ಯಕ್ತಿತ್ವ ನಿರಾಕರಣೆಯ ಸೂಚಕವಾಗಿಯೂ ಕಾಣಬಹುದು; ಆ ವಿನಯ ವಿನಯವಾಗಲು ಸಾಧ್ಯವಿಲ್ಲ, ಸಮರ್ಪಣಾ ಮನೋಭಾವದ ಪ್ರತೀಕವೂ ಅಲ್ಲ; ಉತ್ತರಕಾಂಡದಂತಹ ಅನಾಮಿಕ ಪ್ರಯತ್ನಗಳು ಆಯಾ ಮೂಲಕವಿಗಳ ಹೆಸರಿಗೆ ಅಂಟಿಸಲಾದ ಕಳಂಕ ಅಥವಾ ವಿಡಂಬನೆ ತಿರಸ್ಕರಿಸಲು ಬರುತ್ತದೆಯೇ?

ಹತ್ತು ತಲೆ ಮತ್ತು ಇಪ್ಪತ್ತು ಭುಜಗಳ ವ್ಯಕ್ತಿ ರಾವಣ ಎಂಬ ಚಿತ್ರಣ ಮೂಲ ರಾಮಾಯಣದಲ್ಲೇ ದೊರಕುತ್ತದೆ: ರಾವಣ ನಿಜವಾಗಿಯೂ ಮತ್ತು ತಲೆಗಳಿದ್ದ ವ್ಯಕ್ತಿಯೇ ಅಥವಾ ಅದು ಕೇವಲ ಎಪಿಕ್‌ ಭಾಷೆಯೇ ಎಂಬ ಚರ್ಚೆ ಅನಗತ್ಯ. ಅದೇ ತರಹ ವಾಲಿ – ಸುಗ್ರೀವರನ್ನು ವಾನರು ಎಂದು ಕರೆಯುವಂತೆಯೇ, ರಾವಣ – ವಿಭೀಷಣ ಮೊದಲಾದವರನ್ನು ರಾಕ್ಷಸರು ಎಂದು ಗುರುತಿಸುವುದು ರಾಮಾಯಣದಲ್ಲಿ ಸಾಮಾನ್ಯ. ಆದರೆ ಇಂದಿನ ಅರ್ಥದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ರಾಕ್ಷಸ ಎಂಬ ಪದ ಬಳಕೆಯಾಗಿಲ್ಲ; ಭಿನ್ನ ಮನೋಧರ್ಮ ಮತ್ತು ತಮ್ಮದೇ ಆದ ಸಂಸ್ಕೃತಿಯ ಪರಿಕಲ್ಪನೆ ಇದ್ದ ಜನರಾಗಿ ರಾವಣನ ಪಂಗಡದವರು ರಾಮಾಯಣದಲ್ಲಿ ಚಿತ್ರಣಗೊಂಡಿದ್ದಾರೆ. ಅವರಿಗಿದ್ದ ಏಕೈಕ ವಿಶೇಷತೆ ಎಂದರೆ ಮಾಯಾವಿತನ, ಕುತಂತ್ರ ಮತ್ತು ಕುಯುಕ್ತಿ.

ಇದ್ದಕ್ಕಿದ್ದಂತೆ ಮಾಯವಾಗಿ ಮರೆಯಿಂದ ಬಂದು ಯುದ್ಧ ಮಾಡುವುದು, ಅದರಲ್ಲಿ ಇಂದ್ರಜಿತುವಿಗಿದ್ದ ವಿಶೇಷತೆ ಮೊದಲಾದ ಅವರ ಕುತಂತ್ರಗಳು ಒಟ್ಟಾರೆ ರಾಮಾಯಣದಲ್ಲಿ ದೂಷಣೆಗೊಳಗಾಗುವುದಿಲ್ಲ[4] ಎಂಬ ಬ್ರಾಕಿಂಗ್‌ಟನ್‌ ಗ್ರಹಿಕೆ, ಕರಾರುವಕ್ಕಾದುದು.

ರಾಮ, ರಾವಣ ಮತ್ತು ವಾನರ ಪಂಗಡದವರು ಆಡುತ್ತಿದ್ದ ಭಾಷೆಯ ನಡುವೆ ಹೆಚ್ಚಿನ ಅಂತರವಿರುವುದನ್ನು ರಾಮಾಯಣ ಗುರುತಿಸುವುದಿಲ್ಲ. ಒಂದೇ ಭಾಷೆಯನ್ನಾಡುವ ಆದರೆ ವಿಭಿನ್ನ ಜನಾಂಗ ಅಥವಾ ಪಂಗಡಕ್ಕೆ ಸೇರಿದವರಾಗಿದ್ದಿರಬಹುದು. ಹನುಮಂತ ಆಡುತ್ತಿದ್ದ ಭಾಷೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುವ ಶ್ರೀರಾಮ ಆತನ ವ್ಯಾಕರಣ ಶಾಸ್ತ್ರಬಧ್ಧವಾಗಿದ್ದು ಅಸ್ಖಲಿತವಾಗಿದೆ ಎನ್ನುತ್ತಾನೆ; ಹಾಗಾಗಿ ಅವರಾಡುತ್ತಿದ್ದ ಭಾಷೆ, ಸಂವಹನ, ಕೌಶಲ್ಯ ಮತ್ತು ಮಾತುಗಾರಿಕೆಯ ನೈಪುಣ್ಯದ ಮಟ್ಟದಲ್ಲಿ ಹೆಚ್ಚಿನ ಅಂತರ ಇರುವಂತೆ ಕಾಣುವುದಿಲ್ಲ. ಆದರೆ ನಡೆ – ನುಡಿ ಮತ್ತು ಆಚಾರ – ವಿಚಾರದಲ್ಲಿ ಅಂತರ ಇರುವುದನ್ನು ಗುರುತಿಸುವ ರಾಮಾಯಣವು, ಬಣ್ಣ ಅಥವಾ ವರ್ಣ ಕುರಿತಂತೆ ಹೆಚ್ಚಿನ ವಿವರ ನೀಡುತ್ತದೆ. ವರವರ್ಣಿ ಮತ್ತು ಕಾಂಚನವರ್ಣಿ ಎಂಬ ಮಾತುಗಳು ರಾಮಾಯಣದಲ್ಲಿ ಉದ್ದಕ್ಕೂ ಪದೇ ಪದೇ ಬರುತ್ತವೆ. ರಾಮ – ಲಕ್ಷ್ಮಣ ಮೊದಲಾದ ಎಲ್ಲರನ್ನೂ ಸಾಮಾನ್ಯವಾಗಿ ವರವರ್ಣಿ ಎಂದು ಬಣ್ಣಿಸಲಾದರೆ, ಸೀತೆಯನ್ನು ರಾವಣ ಮೆಚ್ಚಿಕೊಳ್ಳುವುದೇ ಆಕೆಯ ಕಾಂಚನವರ್ಣದ ಮಹಿಮೆಯಿಂದಾಗಿ. ಸುಗ್ರೀವ ಮತ್ತು ಹನುಮಂತರ ಪಂಗಡದ ವಾನರರು ಹಾಗೂ ರಾವಣನ ಗುಂಪಿನ ರಾಕ್ಷಸರು ಕಪ್ಪು ಬಣ್ಣದ ಜನರಾಗಿರಬಹುದು ಎಂದು ಗುರುತಿಸುವುದು ರಾಮಾಯಣದ ಎಪಿಕ್‌ ಭೂಮಿಕೆಗೆ ಸರಿಹೊಂದಬಹುದು. ಆದರೆ ಆ ತರಹದ ವರ್ಣನೆಗಳಿಂದ ಉತ್ತೇಜಿತರಾಗಿ ರಾಮನ ಗುಂಪಿನವರನ್ನು ಉತ್ತರ ಭಾರತದವರು ಮತ್ತು ಗೌರವರ್ಣದ ಆರ್ಯರು ಎಂತಲೂ, ವಾನರರು ಮತ್ತು ರಾಕ್ಷಸರನ್ನು ಕಪ್ಪು ಅಥವಾ ಕಂದುಬಣ್ಣದ ದಾಕ್ಷಿಣಾತ್ಯರು ಎಂದು ಗುರುತಿಸಲು ಪ್ರಯತ್ನಿಸುವುದು ಆತುರದ ತೀರ್ಮಾನವಾಗಿ ಬಿಡುವ ಅಪಾಯವಿದೆ. ಬ್ರಾಕಿಂಗ್‌ಟನ್‌ ಮಾತುಗಳನ್ನು ಅತ್ಯಂತ ಎಚ್ಚರದಿಂದ ಗಮನಿಸುವುದು ಸೂಕ್ತ:

The hostility of the Rāksasas to the ascetics is very clearly portrayed at all stages ….Despite their opposition to wuch Aryan penetration, the Rāksasas are not portrayed as low or despicable, although their contempt for men is mentioned (e.g.3.20.16 – 17. 384 – 5 and 6.99.16) Rather their cultured behavior is alluded to and they are placed on a level with the northerners: thus, Indrajit insults his uncle Vibhisana by calling him anārya (‘ignoble’ or ‘non – Aryan’, 6.68.26d) and Rāvana is called āryapura (e.g. 6.23.34a and 984a). The Raksas therefore may be considered to feflect, not so much a forest – tribe like the Vānaras, but rather another relatively advanced culture to the south with whom the Aryans were just coming into contact. It is tempting to speculate and to attempt to link the bloodthirstiness of the of the speculate and to attempt to link the bloodthirstiness of the Rāksasas with the warlike strain apparent in some early. Tamil poetry, but there is not really enough evidence on which to base any meaningful conclusions.* The occasional differences in the customs and behavior of the Rāksasas or for that matter the Vanaras – which we shall observe in the next chapters are perhaps pointers in the right direction but are overlaid in any case with the mythologizing element which increasingly dominates the later stages of the epic. – Righteous Rama, ಪುಟ ೧೨೩

ಸೀತೆ, ಶೂರ್ಪನಖಿ ವರ್ಣನೆ ಹಾಗೂ ಅವರ ವ್ಯಕ್ತಿತ್ವದ ಚಿತ್ರಣ ಮಾಡುವಾಗ ಬಳಸಲಾಗುವ ಭಾಷೆ ಮತ್ತು ಸನ್ನಿವೇಶಗಳನ್ನು ಕೂಡ ಹತ್ತಿರದಿಂದ ಅಧ್ಯಯನ ಮಾಡುವ ಅಗತ್ಯವಿದೆ. ಅವರ ವರ್ಣನೆ ಕಾಲದಲ್ಲಿ ಬರೆಯಲಾಗಿರುವ ಹಲವಾರು ಶ್ಲೋಕ ಮತ್ತು ಬಳಸಲಾಗುವ ಪದಗಳಲ್ಲಿ ಆನಂತರದ ತಲೆಮಾರಿನ ಕವಿಗಳ ಮತ್ತು ಜನರ ಕೈಚಳಕ ಇರಬಹುದಾದ ಸಾಧ್ಯತೆಗಳ ಬಗ್ಗೆ ಅನುಮಾನ ಇದ್ದರೂ ಸಹ, ಒಟ್ಟಾರೆ ಸನ್ನಿವೇಶ ನಿರ್ಮಾಣದಲ್ಲಿ ಬಹಳ ಬದಲಾವಣೆಯಾಗಿರುವಂತೆ ತೋರುವುದಿಲ್ಲ. ರಾವಣನ ಎದುರು ಸೀತೆಯನ್ನು ಬಣ್ಣಿಸುವಾಗ ಅಕಂಪನ ಮತ್ತು ಶೂರ್ಪನಖಿ ಬಳಸುವ ಭಾಷೆ ಮತ್ತು ವಿವರಣೆಗಳಲ್ಲಿ ಬಹಳ ಹೊಂದಾಣಿಕೆ ಇದೆ. ಖರನ ಸಂಹಾರದ ನಂತರ ಓಡಿಬಂದು ಆ ವಿವರ ನೀಡುವ ಅಕಂಪನನೇ ಸೀತೆಯ ಅಪಹರಣದ ಕುತಂತ್ರವನ್ನು ರಾವಣನ ತಲೆಗೆ ತುಂಬಿದ್ದು. ನಂತರ ಬರುವ ಶೂರ್ಪನಖಿ ಅದಕ್ಕೆ ಬೇಕಾದ ಮಸಾಲೆ ಹಚ್ಚುತ್ತಾಳೆ. ಅದೇ ಶೂರ್ಪನಖಿಯನ್ನು ವರ್ಣಿಸುವಾಗ ಬಳಸುವ ಭಾಷೆಗೆ ಯಾವುದೇ ಸೌಜನ್ಯದ ಲೇಪ ಇರುವಂತೆ ತೋರುವುದಿಲ್ಲ.

ಸೀತೆಯನ್ನು ವರ್ಣಿಸುವಾಗ ಅಕಂಪನನು ಆಕೆಯನ್ನು :

ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ |
ಶ್ಯಾಮಾ ಸಮವಿಭಕ್ತಾಂಗೀ ಸ್ತ್ರೀರತ್ನಂ ರತ್ನಭೂಷಿತಾ || ೨೯ ||
ನೈವ ದೇವೀ ನ ಗಂಧರ್ವೀ ನಾಪ್ಸರಾ ನಾಪಿ ದಾನವೀ |
ತುಲ್ಯಾ ಸೀಮಂತಿನೀ ತಸ್ಯಾ ಮಾನುಷೀಷು ಕುತೋ ಭವೇತ್‌ || ೩೦ || ಅರಣ್ಯಕಾಂಡ, ಸರ್ಗ ೩೧

ಎಂದು ಕರೆದರೆ, ಶೂರ್ಪನಖಿಯು,

“ವಿಶಾಲಾಕ್ಷೀ,.. ಪೂರ್ಣೇಂದುಸದೃಶಾನನಾ…. ಸುಕೇಶೀ…. ಸುರೂಪಿಣಿ… ಯಶಸ್ವಿನೀ… ವನದೇವತೆ…. ಕಾಂಚನವವರ್ಣೀ ತನುಮಧ್ಯಮಾ… ವಿಸ್ತೀರ್ಣ ಜಘನೆ… ದೇವೀ…. ಗಂಧರ್ವೀ…. ಯಕ್ಷೀ…. ಕಿಂನರೀ…. ಸುಶೀಲೆ….. ಪೀನಶ್ರೋಣಿಪಯೋಧರೆ” ಎಂಬಿತ್ಯಾದಿ ಹಲವಾರು ವಿಶೇಷಣಗಳನ್ನು ಬಳಸುತ್ತಾಳೆ.

ಆದರೆ ಅದೇ ಶೂರ್ಪನಖಿಯ ವರ್ಣನೆ ಮಾಡುವಾಗ ಬಳಸಲಾಗುವ ಪದಗಳು ಈ ರೀತಿ ಇವೆ: ದುರ್ಮುಖೀ… ಮಹೋದರೀ… ವಿರೂಪಾಕ್ಷೀ… ತಾಮ್ರಮೂರ್ಧಜೆ…. ಭೈರವಸ್ಟರೆ… ದಾರುಣಾವೃದ್ಧೆ… ವಾಮಭಾಷಿಣೀ… ಶರೀರ ಜಸಮಾವಿಷ್ಟಾ ರಾಕ್ಷಸೀ…ಇತ್ಯಾದಿ. ಅದೇ ಮಾತುಗಳನ್ನು ಕನ್ನಡ ಮೊದಲಾದ ಯಾವುದೇ ಆಡುಭಾಷೆಯಲ್ಲಿ ಆಡಿದಾಗ ಅದು ಪಡೆದುಕೊಳ್ಳುವ ರೂಪ ಮತ್ತು ಪರಿಣಾಮವೇ ಬೇರೆಯಾಗುತ್ತದೆ.

ರಾವಣನ ಕಣ್ಣಿಗೆ ಸೀತೆ ಅತ್ಯಂತ ಆಕರ್ಷಕವಾಗಿ ಕಾಣಲು ಆಕೆಗಿದ್ದ ಕಾಂಚನವರ್ಣ ಪ್ರಭೆಯ ಜತೆಗೆ ಮಾಟವಾದ ದೇಹವೂ ಕಾರಣವಾಗಿತ್ತು; “ನಿನ್ನನ್ನು ಕಂಡನಂತರ ಉಳಿದ ಹೆಂಗಸರಲ್ಲಿ ಆಕರ್ಷಣೆಯೇ ಇಲ್ಲವಾಗಿದೆ” ಎಂದು ಆರ್ತನ ತರಹ ಒಪ್ಪಿಕೊಳ್ಳುವ ರಾವಣ ಕೂಡ ಕಾಂಚನ ವರ್ಣದ ಮಹಿಮೆಯನ್ನು ಬಹಳವಾಗಿ ಮೆಚ್ಚಿಕೊಂಡಾಡುತ್ತಾನೆ.

ರಾಮಾಯಣದ ಸಮಸ್ಯೆ ಮತ್ತು ಬಿಕ್ಕಟ್ಟಿಗೆ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ಆಸೆ ಆಕಾಂಕ್ಷೆಗಳು ತನ್ನದೇ ರೀತಿಯಲ್ಲಿ ಕಾರಣೀಭೂತವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ರಾಮಾಯಣವನ್ನು ಅನೇಕ ರೀತಿಯಲ್ಲಿ ಓದಬಹುದಾದರೂ ಅದು ಪ್ರಮುಖವಾಗಿ ಭಿನ್ನ ಸಂಸ್ಕೃತಿ, ಮನೋಧರ್ಮ ಮತ್ತು ಮನೋಭಾವಗಳ ನಡುವಿನ ಸಂಘರ್ಷದ ಕತೆ. ಆದರೆ ರಾವಣ ಖಳನಾಯಕನೂ ಅಲ್ಲ ಮತ್ತು ಸಾಂಪ್ರದಾಯಿಕ ಅರ್ಥದಲ್ಲಿ ಪ್ರತಿನಾಯಕನೂ ಅಲ್ಲ, ಆತ ವಿಭಿನ್ನ ನಾಯಕ ಮತ್ತು ರಾಮನ ಮನೋಧರ್ಮಕ್ಕೆ ವಿರುದ್ಧವಾದ ತತ್ವ ಮತ್ತು ಸಿದ್ಧಾಂತಗಳಲ್ಲಿ ನಂಬಿಕೆ ಉಳಿಸಿಕೊಂಡ ಮತ್ತು ಆ ವಿಭಿನ್ನತೆಯನ್ನೇ ಜೀವನಧರ್ಮ ಎಂಬುದನ್ನು ನಂಬಿ ಪ್ರತಿಪಾದಿಸಿದ ವ್ಯಕ್ತಿ. ಆ ಕಾರಣವೇ ಸೀತೆ ಮತ್ತು ಪರಿಣಾಮವಾಗಿ ರಾಮನಂಥ ವ್ಯಕ್ತಿತ್ವ ಪಡೆದಿದ್ದ ವ್ಯಕ್ತಿಗಳ ವೈರ ಕಟ್ಟಿಕೊಂಡು ಅವರ ಜತೆ ಸಂಘರ್ಷಕ್ಕಿಳಿಯಬೇಕಾಯಿತು ಎಂಬ ವಿಷಾದದ ಧ್ವನಿ ರಾಮಾಯಣದಲ್ಲೇ ಹುದುಗಿದೆ; ರಾಮ ಮತ್ತು ರಾವಣರ ನಡುವಿನ ಸಂಘರ್ಷದ ಕತೆ ಮಾತ್ರವಲ್ಲ: ಅವರು ಪ್ರತಿನಿಧಿಸುವ ಭಿನ್ನ ಮನೋಧರ್ಮ, ಮನೋಭಾವ ಮತ್ತು ಮೌಲ್ಯಗಳ ನಡುವಿನ ಸಂಘರ್ಷದ ಕತೆ.

ಯಜ್ಞಯಾಗಾದಿಗಳು ಮತ್ತು ಅವುಗಳನ್ನು ನಡೆಸುವ ವ್ಯಕ್ತಿಗಳನ್ನು ಕುರಿತು ರಾವಣನ ಪಂಗಡದವರಾಗಿದ್ದ ದ್ವೇಷ ಮತ್ತು ಅಸಹನೆಯನ್ನು ಇಲ್ಲಿ ಉಲ್ಲೇಖಿಸಬೇಕಾದ ಅಗತ್ಯವಿಲ್ಲ: ರಾಮ ಮತ್ತು ರಾವಣರ ನಡುವಿನ ಸಂಘರ್ಷಕ್ಕೆ ಪೂರಕ ಹಿನ್ನೆಲೆ ಒದಗಿಸಿರಬಹುದಾದ ಆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಆಚರಣೆಗೆ ಸಂಬಂಧಿಸಿದವು. ಸೀತೆಯ ಅಪಹರಣ ಇಡೀ ಕೃತಿಗೆ ಹೊಸ ತಿರುವು ನೀಡುತ್ತದೆ. ಸೀತೆಯನ್ನು ಅಪಹರಿಸುವುದಾದಲ್ಲಿ ಆಕೆಯ ಪತಿಯಾದ ಶ್ರೀರಾಮನು ವಿರಹ ತಡೆಯಲಾರದೆ ಕಾಡಿನಲ್ಲಿ ಅಲೆಯುತ್ತಾ ಪ್ರಾಣಬಿಡಬೇಕಾಗುತ್ತದೆ ಎಂದು ಅಕಂಪನನು ಅಭಿಪ್ರಾಯಪಡುತ್ತಾನೆ. ಆ ಸಂದರ್ಭದಲ್ಲಿ ಅವನು ರಾಮನನ್ನು ಕಾಮಿ ಎಂದು ಕರೆಯುವುದು ಗಮನಾರ್ಹ.

ಸೀತೆ ಅಪಹರಣದ ನಂತರ ಅಕಂಪನ ಹೇಳಿದ ‘ಕಾಮಿ’ಯ ತರಹವೇ ರಾಮ ವರ್ತಿಸುವುದು ರಾಮನ ವ್ಯಕ್ತಿತ್ವವನ್ನು ಅಂದಾಜು ಮಾಡುವ ವಿಚಾರದಲ್ಲಿ ಅಕಂಪನಿಗಿದ್ದ ಬುದ್ಧಿ ಚಾತುರ್ಯಕ್ಕೆ ಉದಾಹರಣೆ. ‘ಕಾಮಿ’ ಎಂಬ ಪದ ವಾಲ್ಮೀಕಿ ಕಾಲದಿಂದಲೂ ಇಂದಿನವರೆಗೆ ತನ್ನ ಸ್ವಂತಿಕೆ ಉಳಿಸಿಕೊಂಡು ಬಂದಿದೆ.

ಆದರೆ ಅಕಂಪನ ಹೇಳಿದಂತೆ ರಾಮ ಸಾಯುವುದಿಲ್ಲ. ಬದಲಾಗಿ ಅದು ರಾವಣನ ಸಂಹಾರದಲ್ಲಿ ಮುಕ್ತಾಯಗೊಳ್ಳುತ್ತದೆ ಎಂಬ ದೂರದೃಷ್ಟಿ ಆ ತಂತ್ರ ಶಿಫಾರಸು ಮಾಡಿದ ಅಕಂಪನನಿಗೂ ಇರಲಿಲ್ಲವಾದಂತೆ, ಆ ಮಾರ್ಗದಲ್ಲೇ ಸಾಗಿದ ರಾವಣನಿಗೂ ದಕ್ಕಲಿಲ್ಲ. ಅಕಂಪನನ ಸಲಹೆಯನ್ನು ಕುರುಡಾಗಿ ಅನುಸರಿಸುವ ರಾವಣ, ರಾಮನನ್ನು ಹತ್ತಿರದಿಂದ ಬಲ್ಲ ಮಾರೀಚನ ಹಿತವಚನವನ್ನು ಲೆಕ್ಕಿಸುವುದಲ್ಲ. ರಾವಣನಿಗೆ ದಕ್ಕದೇ ಹೋದ ವಿವೇಕ ಮತ್ತು ದೂರದೃಷ್ಟಿಯ ಅಭಾವ ದುರಂತಕ್ಕೆ ಒಂದು ಕಾರಣವಾದರೆ, ಕಾಮಭೋಗದ ವಿಚಾರದಲ್ಲಿ ಆತನಿಗಿದ್ದ ಪ್ರಮತ್ತತೆಯೂ ಮತ್ತೊಂದು ಕಾರಣ. ಅಕಂಪನನ ಮಾತನ್ನು ಕೇಳಿದ ಕೂಡಲೇ ಮಾರೀಚನ ಆಶ್ರಮಕ್ಕೆ ಹಾರಿ ಹೋಗಿ ಆತ ನೀಡಿದ ಸಲಹೆಯಂತೆ ಸೀತೆಯನ್ನು ಅಪಹರಿಸದೆ ಮರಳಿ ಬಂದಿದ್ದ ರಾವಣನನ್ನು ಕಂಡ ಶೂರ್ಪನಖಿ ಆಡುವ ಮಾತುಗಳು ಈ ರೀತಿ ಇವೆ:

ಪ್ರಮತ್ತಃ ಕಾಮಭೋಗೇಷು ಸ್ಟೈರವೃತ್ತೋ ನಿರಂಕುಃ |
ಸಮುತ್ಪನ್ನಂ ಭಯಂ ಘೋರಂ ಬೋದ್ಧವ್ಯಂ ನಾವಬುಧ್ಯಸೇ ||೨ ||
ಸಕ್ತಂ ಗ್ರಾಮ್ಯೇಷು ಭೋಗೇಷು ಕಾಮವೃತ್ತಂ ಮಹೀಪತಿಮ್‌ |
ಲುಬ್ಧಂ ನ ಬಹು ಮನ್ಯಂತೇ ಶ್ಮಶಾನಾಗ್ನಿಮಿವ ಪ್ರಜಾಃ ||೩|| ಅರಣ್ಯಕಾಂಡ, ಸರ್ಗ ೩೩

ಹೆಣ್ಣುಗಂಡಿನ ನಡುವಿನ ಸಂಬಂಧದ ಎಲ್ಲ ಮಗ್ಗುಲುಗಳನ್ನು ಅನ್ವೇಷಿಸುವ ರಾಮಾಯಣ ರಾಜಕೀಯ ಎಪಿಕ್‌ ಕೂಡ ಹೌದುಃ ಅದರಲ್ಲಿ ಕೊನೆಯಿಂದ ಮೊದಲವರೆಗೆ ರಾಜಕೀಯ ಎಷ್ಟು ನವಿರಾಗಿ ಬೆರೆತು ಹೋಗಿದೆ ಎಂದರೆ ಆ ರೀತಿ ಮನುಷ್ಯ ಸಂಬಂಧಗಳ ಕತೆ ಹೇಳುತ್ತಲೇ, ರಾಜಕೀಯ ಕುರಿತು ಮಾತನಾಡುವ ಮತ್ತೊಂದು ಎಪಿಕ್‌ ಈ ಜಗತ್ತಿನಲ್ಲಿ ಇಲ್ಲ. ಮಾರೀಚನ ಮಾತು ಕೇಳಿ ಸೀತೆಯನ್ನು ಅಪಹರಿಸದೆ ಮರಳಿ ಬಂದ ರಾವಣನನ್ನು ಕುರಿತು ಶೂರ್ಪನಖಿ ಆಡುವ ಒಂದೊಂದು ಮಾತುಗಳು ರಾಜಕೀಯ ಪ್ರೇರಿತವಾದವು. “ಪ್ರಮತ್ತನಾಗಿ ಕಾಮಭೋಗದಲ್ಲಿ ಮುಳುಗಿರುವ ನೀನು ಗ್ರಾಮ್ಯನಂತೆ ವರ್ತಿಸುತ್ತಿದ್ದೀಯೆ. ನಿರಂಕುಶನಾಗಿ ಸ್ಟೈರವೃತ್ತನಾಗಿ ಮನೆ ಬಾಗಿಲಲ್ಲಿ ಕಾಣಿಸಿಕೊಂಡಿರುವ ಘೋರಭಯದ ಪರಿಣಾಮವನ್ನು ಅರಿಯದೆ ಇದ್ದೀಯೆ” ಎಂದು ಛೇಡಿಸುತ್ತಾಳೆ. ರಾವಣನು ಸೀತೆಯ ಎದುರು ತನ್ನನ್ನು ತಾನು ವರ್ಣಿಸಿಕೊಳ್ಳುವಾಗ ಹೆಚ್ಚಾಗಿ ಮಾತನಾಡುವುದು ಕಾಮಭೋಗ ಕುರಿತು; ಹಲವಾರು ಶ್ಲೋಕಗಳಲ್ಲಿ ಪದೇ ಪದೇ ಹೇಳುತ್ತಾನೆ.

ರಾವಣನ ಸುಖ, ಭೋಗ ಮತ್ತು ಲಾಲಸೆಯ ಕಲ್ಪನೆಯೇ ಸೀಮಿತವಾದುದು. ಅವನ ಸುಖದ ಕಲ್ಪನೆ ಹೆಣ್ಣಿನ ಸುತ್ತವೇ ಸುತ್ತುತ್ತಿರುತ್ತದೆ. ತಕ್ಷಕ ಮೊದಲಾದವರನ್ನು ಸೋಲಿಸಿ ಅವರ ಪತ್ನಿಯರನ್ನು ಅಪಹರಿಸಿದ್ದವನು. ಆ ವಿಷಯದಲ್ಲಿ ಅವನ ಖ್ಯಾತಿ ಎಷ್ಟಿತ್ತೆಂದರೆ ಬೇರೊಬ್ಬರ ಪತ್ನಿಯನ್ನು ಅಪಹರಿಸುವುದು ಅವನ ಬದುಕಿನ ಧರ್ಮವಾಗಿ ಹೋಗಿತ್ತು:

ಉಚ್ಛೇತ್ತಾರಂ ಚ ಧರ್ಮಾಣಾಂ ಪರದಾರಾಭಿರ್ಶನಮ್‌ || ೧೨|| ಅರಣ್ಯಕಾಂಡ ಸರ್ಗ ೩೨

ಧರ್ಮವನ್ನು ನಿರಾಕರಿಸುವುದು ಮತ್ತು ಪರಸ್ತ್ರೀಯರನ್ನು ಅಪಹರಿಸುವುದು. ವಿಷಯ ಲಂಪಟತೆಯಿಂದಾಗಿ ಆಡತಳಿದಲ್ಲಿ ಉಳಿಯಬೇಕಾದ ಆಸಕ್ತಿ ಉಳಿದಂತೆ ಕಾಣುವುದಿಲ್ಲ ಎಂದು ಶೂರ್ಪನಖಿ ಹಂಗಿಸುವ ಮಟ್ಟಕ್ಕೆ ಹೋಗುತ್ತಾಳೆ. ಅಂತಹ ರಾವಣನಿಗೆ ಹಲವಾರು ತಲೆಗಳಿರುವುದು ಸಹಜ ತಾನೇ. ರಾವಣಿಗಿದ್ದ ಪರಸ್ತ್ರೀಯರ ಆ ಆಕರ್ಷಣೆಯನ್ನು ವರ್ಣಿಸಬೇಕಾದರೆ ಸಹಸ್ರಾರು ತಲೆಗಳಿರುವ ವ್ಯಕ್ತಿಯ ಚಿತ್ರಣವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಅಂತಹ ಎಪಿಕ್‌ ಪ್ರತಿಮೆಯ ಎಪಿಕ್‌ ಸೃಷ್ಟಿ ರಾವಣ.

ಏಕಪತ್ನಿತ್ವ ಮತ್ತು ಏಕಪತಿತ್ವ ಒಂದು ವ್ಯವಸ್ಥೆಯಾದಂತೆ ಅದೊಂದು ತತ್ವ, ಸಿದ್ಧಾಂತ, ನಂಬಿಕೆ, ಮನೋಭಾವ ಮತ್ತು ಜೀವನಧರ್ಮವೂ ಹೌದು. ಆ ಧರ್ಮ ಬದುಕಿನಲ್ಲಿ ಪಾಲನೆಗೊಳ್ಳಬೇಕಾದರೆ, ಅದೇ ಬದುಕಿನಲ್ಲಿ ಬರುವ ಶೂರ್ಪನಖಿ ಮೊದಲಾದವರ ಆಮಿಷ, ರಾವಣನಂತವರು ನಡೆಸಬಯಸುವ ಅಪಹರಣ ಮೊದಲಾದ ಹಲವಾರು ಏರಿಳಿತ ಮತ್ತು ಎಡರು ತೊಡರುಗಳನ್ನು ಎದುರಿಸಿ ಮುಂದೆ ಸಾಗಬೇಕಾಗುತ್ತದೆ. ಬದುಕೆಂದರೆ ಅದು ಎಂಬ ಸರಳ ಸತ್ಯದ ಕಾಣ್ಕೆ ನೀಡುವಂತೆ ತೋರುವ ರಾಮಾಯಣ, ಕುಟುಂಬದ ಆದರ್ಶ ಚಿತ್ರಣವನ್ನು ಕಟ್ಟಬಯಸುತ್ತದೆ; ಕೌಟುಂಬಿಕ ವ್ಯವಸ್ಥೆ ತಳಹದಿಯಾದ ಯಾವುದೇ ದೇಶ, ಸಂಸ್ಕೃತಿ ಮತ್ತು ಜನಾಂಗ ಅಥವಾ ವಿಶ್ವದ ವ್ಯವಸ್ಥೆ – ಅಂತಿಮವಾಗಿ, ಅದರ ವಿಸ್ತೃತ ರೂಪ.

ಉತ್ತರಕಾಂಡ ಬರೆದು ಮತ್ತು ಅದನ್ನು ರಾಮಾಯಣದ ಒಂದು ಭಾಗ ಎಂದು ಸ್ವೀಕರಿಸುವುದರ ಮುಖೇನ ವಾಲ್ಮೀಕಿಯ ಆ ನಿಲುವು ಮತ್ತು ಕಾಣ್ಕೆಯನ್ನೇ ಪ್ರಶ್ನಿಸಲಾಗಿದೆ. ಭಾರತದ ಕಾವ್ಯ ಪ್ರಪಂಚದಲ್ಲಿ ಸದ್ದಿಲ್ಲದೆ ನಡೆದುಹೋದ ಬಂಡಾಯ ಅಥವ ಪ್ರತಿಭಟನೆ ಉತ್ತರಕಾಂಡ, ಆ ಮೂಲಕ ವಾಲ್ಮೀಕಿಯನ್ನು ರಾಮಾಯಣವನ್ನು ಉತ್ತರಕಾಂಡದ ಕವಿಗಳು ಮರುಪರಿಶೀಲನೆಗೊಳಪಡಿಸಿ ತಿರಸ್ಕರಿಸಿದರು.

 

[1]ಯತ್ ಕರ್ತವ್ಯಂ ಮನುಷ್ಯೇಣ ಧರ್ಷಣಾಂ ಪರಿಮಾರ್ಜತಾ
ತತ್ ಕೃತಂ ಸಕಲಂ ಸೀತೇ ಸತ್ರುಹಸ್ತಾದಮರ್ಪಣಾತ್ || ೧೩ || ಯುದ್ಧಕಾಂಡ, ಸರ್ಗ ೧೧೮

[2]ಹತ್ವಾಚ ರಾವಣಂ ಸಂಖ್ಯೇ ಸೀತಾಮಾಹೃತ್ಯ ರಾಘವಃ |
ಅಮರ್ಷಂ ಪೃಷ್ಠತಃ ಕೃತ್ವಾ ಸ್ವವೇಶ್ಮ ಪುನರಾನಯತ್‌ ||೧೬||

ಕೀದೃಶಂ ಹೃದಯೇ ತಸ್ಯ ಸೀತಾಸಂಭೋಗಜಂ ಸುಖಮ್‌ |
ಅಂಕಮಾರೋಪ್ಯ ತು ಪುರಾ ರಾವಣೇನ ಬಲಾದ್ದೃತಾಮ್‌ || ೧೭ |

ಲಂಕಾಮಪಿ ಪುರಾ ನೀತಾಮಶೋಕವನಿಕಾಂ ಗತಾಮ್‌ |
ರಕ್ಷಸಾಂ ವಶಮಾಪನ್ನಾಂ ಕಥಂ ರಾಮೋ ನ ಕುತ್ಸತೇ || ೧೮||

ಅಸ್ಮಾಕಮಪಿ ದಾರೇಷು ಸಹನೀಯಂ ಭವಿಷ್ಯತಿ |
ಯಥಾ ಹಿ ಕುರುತೇ ರಾಜಾ ಪ್ರಜಾ ತಮನುವರ್ತತೇ || ೧೯ ||   ಅಲ್ಲಿಯೇ, ಸರ್ಗ ೪೩

[3]ಸೀತೆಯನ್ನು ಅಪಹರಿಸುವಾಗ ರಾವಣ ಬಲಗೈಯಿಂದ ಅವಳ ತೊಡೆಗಳ ಹಿಂಭಾಗವನ್ನು ಹಿಡಿದನೆಂಬ ವರ್ಣನೆ-ಊರ್ವೋಸ್ತು ದಕ್ಷಿಣೇನೈನ ಪರಿಜಗ್ರಾಹ ಪಾಣಿನಾ-ಬರುತ್ತದೆ. ಅರಣ್ಯಕಾಂಡ, ಸರ್ಗ ೪೯, ೧೮ನೇ ಶ್ಲೋಕದ ಮೊದಲ ಪಾದ.

[4]The use of deceit in war in fact a fairly regular tactic of the Raksasas but one which draws remarkably little condemnation from anyone; for example Garuda’s remark, as he frees Rama and Laksmana from Indrajit’s arrows, that the Raksas are always croocked fighters (kutayodhin. 6.40.53) is more of a statement of fact and a warning to be more careful in future than a moral judgement. Furthermore, while Indrajit renders himself invisible in combat on two occasions (6.34 and 60), Hanuman considers disguise before entering Lanka to reconnoiter and then becomes some kind o animal (prsadmsaka. 5.2.31-3 and 46).

*The suggestion has been made from time to time (e.g. F.E.Pagiter, Ancient Indian Historical Tradition, Oxford, 1922 (repr. Delhi, 1962)), p242n.5; G.L. Hart III. The Poems of Ancient Tamil; their milieu and their Sanskrit counterparis. Berkely, 195,. P.13 that Rāvana’s name is a sanskritised version of the Tamil iraivan ‘king, sovergeign, lord’, is plausible but not decisive.