III

ಅದೇ ತರಹದ ಕುತೂಹಲಗಳು ಕುರುಕ್ಷೇತ್ರ ಯುದ್ಧಾನಂತರದ ಮುಂದಿನ ಪರ್ವಗಳ ರಚನೆಗೆ ಅವಕಾಶ ಒದಗಿಸಿರಬಹುದು. ರಾಮಾಯಣದಲ್ಲಿ ಮುಖ್ಯವಾಗುವುದು ತತ್ವ ಮತ್ತು ಸೈದ್ಧಾಂತಿಕ ಬಿಕ್ಕಟ್ಟುಗಳು: ಆದರೆ ಮಹಾಭಾರತದಲ್ಲಿ ಎದುರಾಗುವುದು ಅಳಿವು – ಉಳಿವಿಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳು.[1] ಅದು ಇತ್ಯರ್ಥಗೊಂಡ ನಂತರ ಪಾಂಡವರು ಏನು ಮಾಡಿದರು? ಜ್ಞಾತಿಗಳು, ಸಂಬಂಧಿಕರು ಮತ್ತು ಬಂಧುಬಳಗದ ಸಾಮೂಹಿಕ ಹತ್ಯಾಕಾಂಡದ ಕುರುಕ್ಷೇತ್ರ ಯುದ್ಧಾನಂತರ ಪಾಂಡವರ ಬದುಕು ಹೇಗೆ ಸಾಗಿತು? ಅದರಿಂದ ಅವರ ಮನಸ್ಸಿನ ಮೇಲಾದ ಪರಿಣಾಮ ಎಂತಾದ್ದು? ಇತ್ಯಾದಿ ಕುತೂಹಲ ಮತ್ತು ಪ್ರಶನೆಗಳ ಬೆನ್ನುಹತ್ತಿ ಎಪಿಕ್‌ ಮುಂದುವರಿಸುವ ಪ್ರಲೋಭನೆಗೊಳಗಾಗುವುದು ಸಹಜವೇ. ಆದರೆ ಮೂಲ ಮಹಾಭಾರತ ಮತ್ತು ಮೂಲ ರಾಮಾಯಣ ರಚಿಸಿದ ಕವಿಗಳು ರಚಿಸದೇ ಕೈಬಿಟ್ಟ ಭಾಗವನ್ನು ಎಪಿಕ್‌ ಆಗಿ ಪರಿವರ್ತಿಸುವ ಮೂಲಭೂತ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆಯೇ ಎಂಬ ಪ್ರಾಥಮಿಕ ಪ್ರಶ್ನೆಗೆ ಉತ್ತರ ಗುರುತಿಸಬೇಕಾಗುತ್ತದೆ. ವ್ಯಾಸ – ವಾಲ್ಮೀಕಿಯರು ಕೈಗೊಳ್ಳಲು ಹಿಂಜರಿದ ಆ ಸಾಹಸಯಾತ್ರೆ ಕೈಗೊಂಡ ನಂತರದ ತಲೆಮಾರಿನ ಕವಿಗಳ ಪ್ರಯತ್ನಗಳು ಮತ್ತು ಸಾಧನೆ ಬಗ್ಗೆ ಕೇಳಲೇಬೇಕಾದ ಪ್ರಶ್ನೆಗಳನ್ನು ಕೇಳುವುದೇ ಒಂದು ತರಹದಲ್ಲಿ ನೂತನ ಬೆಳವಣಿಗೆ.

ಕುರುಕ್ಷೇತ್ರ ಯುದ್ಧ ಮುಗಿಯುವವರೆಗಿನದು ಒಂದಾದರೆ, ನಂತರದ ವಾಹಿನಿ ಮತ್ತೊಂದು ಭಾಗವಾಗುತ್ತದೆ: ಅವುಗಳೆರಡರ ನಡುವಿರುವ ವ್ಯತ್ಯಾಸ, ರಾಮಾಯಣ ಮತ್ತು ಉತ್ತರ ರಾಮಾಯಣಗಳ ನಡುವಿನ ಅಂತರಕ್ಕಿಂತಲೂ ಬಹಳ ಅಗಾಧವಾದುದು. ಕುರುಕ್ಷೇತ್ರ ಯುದ್ಧದವರೆಗಿನ ಮಹಾಭಾರತ ಪಶ್ಚಿಮವಾದರೆ, ಅನಂತರದ ಭಾಗದ ಪೂರ್ವಾಭಿಮುಖ; ಹಾಗಾಗಿ ಕುರುಕ್ಷೇತ್ರ ಯುದ್ಧಾನಂತರದ ಭಾರತವನ್ನು ‘ಅಪರಭಾರತ’ ಎಂದು ಕರೆಯುವುದು ಯುಕ್ತ. ಮೂಲ ಭಾರತದ ಪಾಂಡವ – ಕೌರವರಿಗೆ ಈ ಬದುಕಿನ ಬವಣೆ ಮತ್ತು ಅಸ್ತಿತ್ವ ಮುಖ್ಯವಾದರೆ, ಕೌರವರನ್ನು ಸಂಹಾರಮಾಡಿ ಅಧಿಕಾರಕ್ಕೆ ಬಂದ ನಂತರದ ಪಾಂಡವರಿಗೆ ಮುಖ್ಯವಾದುದು – ಈ ಬದುಕಿನ ನಂತರದ ಬದುಕಿನ ಅಪರಕರ್ಮದ ಸಮಸ್ಯೆ. ಪಂಪನ ಮಾತನ್ನೇ ಪುನರುಚ್ಛರಿಸುವುದಾದರೆ, ಮೂಲ ಮಹಾಭಾರತ ಅಪ್ಪಟ ಲೌಕಿಕ ಎಪಿಕ್‌ ಎಂಬುದಾದಲ್ಲಿ: ಅಪರಭಾರತ ಅಲೌಕಿಕ; ಜಿನಾಗಮ ಎಂಬ ಮಾತಿಗೆ ಬದಲಾಗಿ ಆ ಪದ ಬಳಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಾಂತೆಯ ವಿಭಜನೆಯನ್ನು ಅನ್ವಯಿಸುವುದಾದರೆ; ಕುರುಕ್ಷೇತ್ರ ಯುದ್ಧ ಮುಗಿಯುವವರೆಗೂ ನರಕ ಮತ್ತು ಮಾರ್ಜಕಲೋಕದ ಹಾದಿಯಲ್ಲಿ. ಸಾಗಿಬರುವ ಪಾಂಡವರು ಅಪರಭಾರತದಲ್ಲಿ ಸ್ವರ್ಗಾಭಿಮುಖವಾಗಿ ಸಾಗತೊಡಗುತ್ತಾರೆ – ಹೋಲಿಕೆ ಕೇವಲ ಕುತೂಹಲಕ್ಕೆ ಮಾತ್ರ.

ಕೌರವರ ಸರ್ವನಾಶದೊಂದಿಗೆ ಮುಕ್ತಾಯಗೊಳ್ಳುವ ಕುರುಕ್ಷೇತ್ರ ಯುದ್ಧಾನಂತರದ ಭಾಗದಲ್ಲಿ ಈ ಲೋಕದ ಬದುಕಿನ ಸಮಸ್ಯೆಗಳಿಗಿಂತಲೂ ಹೆಚ್ಚಾಗಿ, ದೇಹತ್ಯಾಗಾನಂತರದ ಪರಲೋಕ ಕುರಿತ ಅಪರಕರ್ಮದ ಸಮಸ್ಯೆಗಳು ಬಹಳ ಮುಖ್ಯವಾಗಿ ಬಿಡುತ್ತವೆ. ಆ ಕಾರಣವೋ ಏನೋ ಅಪರಭಾರತ ನೇರವಾಗಿ ಬೋಧಪ್ರದವೂ, ತಾತ್ವಿಕವೂ, ಆಧ್ಯಾತ್ಮಿಕವೂ ಮತ್ತು ಜಿಜ್ಞಾಸುವೂ ಆಗುವುದರಿಂದ, ಕತೆ ಮತ್ತು ಕ್ರಿಯೆಗಿಂತಲೂ ಹೆಚ್ಚಾಗಿ ಆಖ್ಯಾನ ಮತ್ತು ಉಪಾಖ್ಯಾನಗಳಿಂದ ತುಂಬಿಹೋಗಿದೆ. ಅದೇ ಭಾರತ ದೇಶದ ಮತ್ತು ಒಟ್ಟಾರೆ ಮಹಾಭಾರತದ ವೈಶಿಷ್ಟ್ಯ ಎಂದು ಭಾವಿಸುವ ಜನರೇ ಹೆಚ್ಚು ಸಂಖ್ಯೆಯಲ್ಲಿ ದೊರಕಬಹುದು. ಯಾವ ಅನುಭವ ಮತ್ತು ಸಮಸ್ಯೆಗಳನ್ನು ‘ಡಿವೈನ್‌ ಕಾಮಿಡಿ’ಯ ಸ್ವರ್ಗದ ಭಾಗದಲ್ಲಿ ಅನ್ವೇಷಿಸಲು ೧೩ನೇ ಶತಮಾನದ ಕವಿಯಾದ ದಾಂತೆ ಪ್ರಯತ್ನಿಸಿದನೋ, ಅದೇ ತರಹದ ಅನುಭವ ಮತ್ತು ಭಯಗಳನ್ನು ಕಾವ್ಯದ ಚೌಕಟ್ಟಿನಲ್ಲಿ ಅನ್ವೇಷಿಸುವ ಪ್ರಯತ್ನಗಳನ್ನು ಅಪರಭಾರತದ ಕವಿಗಳು ಎಷ್ಟೋ ಶತಮಾನಗಳಿಗೂ ಹಿಂದೆಯೇ ನಡೆಸಿದ್ದರೂ ಎಂಬುದಾಗಿ ಅನೇಕ ಭಾರತೀಯರು ಹೆಮ್ಮೆ ಪಡಬಹುದು. ‘ಡಿವೈನ್‌ ಕಾಮಿಡಿ’ ಬಗ್ಗೆ ಎಲಿಯಟ್‌ ಪ್ರಾಸಂಗೀಕವಾಗಿ ಆಡುವ ಒಂದು ಮಾತನ್ನು ಗಮನಕ್ಕೆ ತಂದುಕೊಳ್ಳುವುದು ಉತ್ತಮ :

With Goethe, for instance, I often feel too acutely `this is what Goethe the man believed’. Instead of merely entering into world which Goethe has created; with Lucretius also; less with the Bhagavad – Gita, which is the next greatest philosophical poem to the Divine Comedy within my experience. Selected Essays, ಪುಟ ೨೫೮

ಮಹಾಭಾರತದ ಭಾಗ ಎಂದು ಪರಿಗಣಿಸಲಾದ ಭಗವದ್ಗೀತೆಯನ್ನು ಕಾವ್ಯವೆಂದು ಭಾರತೀಯ ಪ್ರತ್ಯೇಕವಾಗಿ ಗುರುತಿಸಿದ ಉದಾಹರಣೆ ಇಲ್ಲ. ಭಗವದ್ಗೀತೆಗೆ ಬೇರೆ ರೀತಿಲ್ಲಿ ಕೀರ್ತಿ ಗೌರವ ಲಭಿಸಿರಬಹುದು.

ಆದರೆ ಎಲಿಯಟ್‌ ಭಗವದ್ಗೀತೆಯನ್ನು ‘ಡಿವೈನ್‌ ಕಾಮಿಡಿ’ ಜತೆ ಸಮೀಕರಿಸಿ ನೋಡುವುದು ಆಶ್ವರ್ಯ ತರಿಸದಿರುವುದಿಲ್ಲ.

ಎಲಿಯಟ್‌ ಮೊದಲನೆಯದಾಗಿ, ಭಗವದ್ಗೀತೆಯನ್ನು ಇಂಗ್ಲಿಷ್‌ ಅನುವಾದದ ಮೂಲಕ ಅದನ್ನೊಂದು ಪ್ರತ್ಯೇಕ ಕೃತಿಯಾಗಿ ಓದಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಆ ಮಾತು ಬರೆಯುವ ಕಾಲಕ್ಕೆ ಮಹಾಭಾರತ ಎಪಿಕ್‌ ಇಡೀಯಾಗಿ ಇಂಗ್ಲಿಷಿಗೆ ಅನುವಾದಗೊಂಡಿರಲಿಲ್ಲ. ಹಾಗಾಗಿ ಹೋಮರ್‌ ಅಥವಾ ವರ್ಜಿಲರನ್ನು ಓದಿದ ರೀತಿ ವ್ಯಾಸ ಮಹರ್ಷಿಯನ್ನು ಸಮಗ್ರಲಿವಾಗಿ ಓದುವ ಅವಕಾಶ ಎಲಿಯಟ್‌ನಿಗೆ ಲೇಖನ ಬರೆಯುವ ಕಾಲಕ್ಕೆ ಒದಗಿಬಂದಿರಲಾರದು. ಭಗವದ್ಗೀತೆಯು ಮೂಲ ಮಹಾಭಾರತದ ಒಂದು ಅವಿಭಾಜ್ಯ ಅಂಗವಲ್ಲ ಎಂಬ ಇತ್ತೀಚಿನ ವಾದವನ್ನು ಸ್ವೀಕರಿಸಿ ಪ್ರತ್ಯೇಕವಾಗಿ ಮತ್ತು ಪರಂಪರಾಗತ ನಂಬಿಕೆಯಂತೆ ಮಹಾಭಾರತದ ಒಂದು ಭಾಗವಾಗಿ ಪರಿಗಣಿಸಿ ಓದಿದಾಗ ಆಗುವ ಅನುಭವ ಬೇರೆ ಬೇರೆಯಾಗಿರಲು ಸಾಧ್ಯ. ಭಗವದ್ಗೀತೆಗೆ ಕಾವ್ಯದ ಬಂಧ ಮತ್ತು ಅಂಶ ಇಲ್ಲ ಎಂಬುದು ಆ ಮಾತಿನ ಅರ್ಥವಲ್ಲ. ಅದಕ್ಕೆ ದಕ್ಕಿರುವ ಛಂದೋಬದ್ಧ ನಿರೂಪಣೆ, ಸಂಗೀತ, ಲಯ, ನಾದಮಾಧುರ್ಯ, ಕಲ್ಪನಾ ಸಾಮರ್ಥ್ಯ ಮತ್ತು ಅತ್ಯುತ್ತಮ ಗುಣಮಟ್ಟದ ಕಾವ್ಯಗಳಿಗೆ ಸಹಜವಾದ ಅಭಿವ್ಯಕ್ತಿ ವಿದಾನ ಅನೇಕ ಕಾವ್ಯಗಳಿಗೆ ದೊರಕಿಲ್ಲ, ನಿಜ. ಸಮೂಹ ಸೃಷ್ಟಿಯಾದ ಮಹಾಭಾರತವನ್ನು ವೈಧಾನಿಕ ಮತ್ತು ವೈಜ್ಞಾನಿಕವಾಗಿ ಸಂಪಾದಿಸುವ ಮಹಾಕಾರ್ಯ ಆರಂಭವಾದುದೇ ೧೯೧೮ರಲ್ಲಿ ಮತ್ತು ಅದು ಪೂರ್ಣಗೊಂಡುದು ೧೯೭೦ರ ವೇಳೆಗೆ. ಅದರ ಸಂಪಾದನಾ ಕಾರ್ಯಕ್ಕೆ ಬೇಕಾದ ತಳಹದಿ ಮತ್ತು ವಿಶಾಲ ಚೌಕಟ್ಟನ್ನು ಒದಗಿಸಿದ ವಿಷ್ಣು ಎಸ್‌. ಸುಕ್ತಂಕರ್‌ ಆ ಕುರಿತು ನಾಲ್ಕು ಉಪನ್ಯಾಸಗಳನ್ನು ನೀಡುವುದಿತ್ತು. ಮೂರನೇ ಉಪನ್ಯಾಸ ನೀಡುವ ಕಾಲದಲ್ಲೇ ೧೯೪೦ರ ಸುಮಾರಿನಲ್ಲಿ ನಿಧನರಾದ ನಂತರ, ಉಳಿದ ಪರ್ವಗಳ ಸಂಪಾದನಾ ಕಾರ್ಯದಲ್ಲಿ ಅವರಿದ್ದ ಕಾಲದಲ್ಲಿ ಪಡೆದಿದ್ದ ಗುಣಮಟ್ಟ ಮತ್ತು ಉನ್ನತಿಕೆಯನ್ನು ಮುಂದುವರಿಸಿಕೊಂಡು ಹೋಗಲಾಗಲಿಲ್ಲ ಎಂಬ ಅಭಿಪ್ರಾಯವೂ ಇದೆ.

ಅದೇನಾದರಿರಲಿ.

ವಿಯನ್ನಾದ ಪ್ರಖ್ಯಾತ ಸಂಸ್ಕೃತ ಪ್ರಾಧ್ಯಾಪಕ ಮತ್ತು ಪ್ರಾಚ್ಯ ಸಂಶೋಧಕ ಮೊರಿಜ್‌ ವಿಂಟರ್‌ನಿಟ್ಜ್‌ ಶಿಷ್ಯರಾದ ಸುಕ್ತಂಕರ್‌, ಭಾರತ ಗ್ರಂಥಸಂಪಾದನೆಗೆ ಬೇಕಾಗಿದ್ದ ಶಾಸ್ತ್ರೀಯ ಚೌಕಟ್ಟು, ಶಿಸ್ತು ಮತ್ತು ಅಂತರಾಷ್ಟ್ರೀಯ ಖ್ಯಾತಿ ತಂದುಕೊಟ್ಟವರು. ‘ಸ್ಯಾನ್ಸ್‌ಕ್ರಿಟ್‌ ಎಪಿಕ್‌ ಟೆಕ್ಸ್ಟ್‌ ಸೊಸೈಟಿ’ ಎಂಬ ಸಂಸ್ಥೆ ರಚಿಸಿಕೊಂಡು ಮಹಾಭಾರತವನ್ನು ವೈಜ್ಞಾನಿಕವಾಗಿ ಸಂಪಾದಿಸಿ ಪ್ರಕಟಿಸುವಂತೆ ೧೮೯೭ ರ ಸುಮಾರಿನಲ್ಲಿ ಮೊದಲ ಬಾರಿಗೆ ಕರೆನೀಡಿದವರೇ ವಿಂಟರ್‌ನಿಟ್ಜ್‌. ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಸಂಪಾದನಾ ಕಾರ್ಯಕ್ಕೆ ಚಾಲನೆ ನೀಡುವ ಪ್ರಯತ್ನಗಳನ್ನು ಜರ್ಮನಿಯ ಹಲವಾರು ಸಂಸ್ಕ್ರತ ಪ್ರಾಧ್ಯಾಪಕರು ನಡೆಸಿದರಾದರೂ, ಅಡ್ಡಬಂದ ಮೊದಲನೇ ಜಾಗತಿಕ ಸಮರದಿಂದಾಗಿ ಮಹಾಭಾರತವನ್ನು ಸಂಪಾದಿಸುವ ಮಹತ್ಕಾರ್ಯವನ್ನು ಪಾಶ್ಚಿಮಾತ್ಯ ವಿದ್ವಾಂಸರು ಕೈಗೊಳ್ಳಲಾಗಲಿಲ್ಲ ಎಂಬ ವಿಷಾದ ಅನೇಕರನ್ನು ಕಾಡಿದೆ.

ಗ್ರಂಥಸಂಪಾದನೆಯ ತವರುಭೂಮಿಯಾದ ಜರ್ಮನಿಯಲ್ಲಿ ಪಡೆಯಬೇಕಾದ ತರಬೇತಿ ಪಡೆದು ಆ ಶಿಸ್ತನ್ನು ತಮ್ಮ ಜತೆ ಭಾರತಕ್ಕೆ ತಂದ ಸುಕ್ತಂಕರ್‌, ತಮ್ಮದೇ ಆದ ವಿದ್ವತ್‌ ಜನರ ಸಮೂಹ ಕಟ್ಟಿಕೊಂಡು ಪುಣೆಯ ‘ಭಂಡಾರ್ಕರ್‌ ಓರಿಯಂಟಲ್‌ ರಿಸರ್ಚ ಇನ್‌ಸ್ಟಿಟ್ಯೂಟ್‌’ ಮೂಲಕ ಮಹಾಭಾರತದ ವೈಜ್ಞಾನಿಕ ಸಂಪಾದನೆಗೆ ಮೊದಲು ಮಾಡಿದಾಗ, ಅದು ಗುರಿ ತಲುಪುವ ಬಗ್ಗೆ ಬಹಳ ಜನರಲ್ಲಿ ವಿಶ್ವಾಸವಿರಲಿಲ್ಲ. ಸಂಪಾದನಾ ಕಾರ್ಯ ಯಶಸ್ವಿಯಾಗಿ ಮುಗಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಬೇರೆ; ಆದರೆ ಅದು ಅಸಾಧ್ಯದ ಕೆಲಸ ಎಂಬ ಭಾವನೆ ಇಟ್ಟುಕೊಂಡಿದ್ದವರೇ ಹೆಚ್ಚು ಮಂದಿ. ೧೯೩೩ರಲ್ಲಿ ಸುಕ್ತಂಕರ್‌ ಸುದೀರ್ಘ ಉಪೋದ್ಘಾತದೊಂದಿಗೆ ‘ಆದಿಪರ್ವ’ ಪ್ರಕಟವಾದಾಗ ವಿದ್ವತ್‌ ಜಗತ್ತು ನಿಬ್ಬೆರಗಾಗಿ ನೋಡುವಂತಾಯಿತು ಎಂಬುದರಲ್ಲಿ ಏನೇನೂ ಉತ್ಪ್ರೇಕ್ಷೆ ಇಲ್ಲ.

ಸುಕ್ತಂಕರ್‌ ನೇತೃತ್ವದಲ್ಲಿ ಮಹಾಭಾರತ ಸಂಪಾದನಾ ಏನೇನೂ ಉತ್ಪ್ರೇಕ್ಷೆ ಕೈಗೊಳ್ಳುವ ವೇಳೆಗಾಗಲೇ ಕಲ್ಕತ್ತ, ಮುಂಬೈ ಮತ್ತು ಕುಂಭಕೋಣಂ ಭಾಗದ ವಿದ್ವಾಂಸರು ಆಯಾ ಭಾಗದಲ್ಲಿ ಚಾಲತಿಯಲ್ಲಿದ್ದ ಪಾಠಾಂತರಗಳನ್ನು ಪ್ರಧಾನವಾಗಿ ಆಧರಿಸಿ ಮಹಾಭಾರತದ ಸಮಗ್ರ ಆವೃತ್ತಿಯನ್ನು ಪ್ರಕಟಿಸುವ ಸಾಹಸ ಮಾಡಿದ್ದರು. ಆಯಾ ಕೇಂದ್ರಗಳಿಂದ ಪ್ರಕಟವಾದ ಸಂಪುಟಗಳನ್ನು ಆಯಾ ಕೇಂದ್ರಗಳ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ೧೮೩೯ರಲ್ಲಿ ಪೂರ್ಣಗೊಂಡ ಕಲ್ಕತ್ತ ಆವೃತ್ತಿ ಎಂಬ ಹೆಸರಿದ್ದರೆ, ೧೮೬೩ರಲ್ಲಿ ಪೂರ್ಣಗೊಂಡ ಮುಂಬೈ ಭಾಗದ ಸಂಪುಟಗಳಿಗೆ ಮುಂಬೈ ಆವೃತ್ತಿ ಎಂದೇ ತಮಿಳ್ನಾಡು ಭಾಗದ ಪಿ.ಪಿ.ಎಸ್‌.ಶಾಸ್ತ್ರಿ ಸಂಪಾದಿಸಿದ ಮಹಾಭಾರತದ ಆವೃತ್ತಿ ೧೯೩೫ರಲ್ಲಿ ಪೂರ್ಣಗೊಂಡಿತು.

ಹಾಗಾಗಿ ಸಂಪಾದಿತ ಮಹಾಭರತವನ್ನು ಇಂಗ್ಲಿಷ್‌ ಮೊದಲಾದ ಆಧುನಿಮ ಯುರೋಪಿನ ಭಾಷೆಗಳಿಗೆ ಅನುವಾದಿಸುವ ಪ್ರಕ್ರಿಯೆ ಆರಂಭವಾದುದೆ ಬಹಳ ತಡವಾಗಿ. ಅಕ್ಬರ್‌ (೧೫೪೨ – ೧೬೦೫) ಕಾಲದಲ್ಲಿ ಪರ್ಷಿಯನ್‌ ಭಾಷೆಗೆ ಅನುವಾದಿಸಲು ನಡೆದ ಪ್ರಯತ್ನ ಬಿಟ್ಟರೆ, ಮಹಾಭಾರತವನ್ನು ಅದರ ಪೂರ್ಣ ರೂಪದಲ್ಲಿ ಬೇರೊಂದು ಭಾಷೆಗೆ ಯಶಸ್ವಿಯಾಗಿ ಅನುವಾದಿಸಿದ ಉದಾಹರಣೆ ಬಹಳ ಕಡಿಮೆ. ೧೧ನೇ ಶತಮಾನಕ್ಕಾಗಲೇ ಇಂಡೊನೇಷಿಯಾ ಮೊದಲಾದ ಭಾಷೆಗಳಿಗೆ ಅನುವಾದಿಸಲಾಗಿತ್ತು. ಅದು ಬೇರೆ ವಿಚಾರ. ಮಹಾಭಾರತದ ಕೆಲವೊಂದು ಆಯ್ದ ಭಾಗಗಳನ್ನು ಅನುವಾದಿಸುವ ಕೆಲಸ ಅಲ್ಲಲ್ಲಿ ನಡೆದಿದೆಯಾರೂ, ಆ ಎಪಿಕ್‌ಅನ್ನು ಸಮಗ್ರವಾಗಿ ಬೇರೊಂದು ಭಾಷೆಗೆ ಅನುವಾದಿಸುವ ಪ್ರಕ್ರಿಯರ ಆರಂಭವಾದುದೇ ತೀರ ಇತ್ತೀಚೆಗೆ. ಏಕೆಂದರೆ ಮಹಾಭಾರತದ ಬಗ್ಗೆ ಒಂದು ಕಲ್ಪನೆ ಬಂದುದೆ ಸುಕ್ತಂಕರ್‌ ಆವೃತ್ತಿ ಹೊರಬಂದ ನಂತರ.

ಭಗವದ್ಗೀತೆಯನ್ನು ಚಾರ್ಲಸ್‌ ವಿಲ್ಕಿನ್ಸ್‌ ಎಂಬಾತ ೧೭೮೫ರ ಸುಮಾರಿಗಾಗಲೇ ಇಂಗ್ಲಿಷಿಗೆ ಅನುವಾದಿಸಿದ್ದ; ಭಗವದ್ಗೀತೆಯನ್ನು ಇಂಗ್ಲಿಷ್‌ ಮತ್ತಿತರ ಯುರೋಪಿಯನ್‌ ಭಾಷೆಗಳಿಗೆ ಅನುವಾದಿಸುವ ಕಾರ್ಯ ನಂತರದಲ್ಲಿ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ.

ಮಹಾಭಾರತವನ್ನು ಅದರ ಸಮಗ್ರ ರೂಪದಲ್ಲಿ ಅನುವಾದಿಸಿ ಪ್ರಕಟಿಸುವ ಸಾಹಸಯಾತ್ರೆಯನ್ನು ಮೊದಲ ಕೈಗೊಂಡಾತನೆ ಫ್ರೆಂಚ್‌ ವಿದ್ವಾಂಸ ಮತ್ತು ಕವಿ ಹಿಪ್ಪೊಲಿತೆ ಫಾಸೆ; ೧೮೬೩ – ೭೦ರ ನಡುವೆ ಹತ್ತು ಸಂಪುಟಗಳಲ್ಲಿ ಕರ್ಣಪರ್ವದವರೆಗಿನ ಭಾಗವನ್ನು ಅನುವಾದಿಸಿ ಪೂರ್ಣಗೊಳಿಸುವ ವೇಳೆಗೆ ಆತ ಸಾವಿನ ಮನೆಗೆ ಸಾಗಬೇಕಾಗಿ ಬಂದುದು ಮಾತ್ರ ದುರ್ದೈವದ ಸಂಗತಿಯೇ ಸರಿ. ಅದರ ಅನುವಾದ ಕಾರ್ಯಾವನ್ನು ಮುಂದೆ ಬಹಳ ಕ್ರಮಬದ್ಧವಾಗಿ ಕೈಗೊಂಡವರೇ ರಷ್ಯನ್‌ ವಿದ್ವಾಂಸರು ಮತ್ತು ಕವಿಗಳು. ವಿ.ಐ.ಕಲ್ಯಾನೋವ್‌ ನೇತೃತ್ವದಲ್ಲಿ ಲೆನಿನ್‌ಗ್ರಾಡ್‌ನ ಅಕಾಡೆಮಿ ವತಿಯಿಂದ ಅನುವಾದಿತ ಕೃತಿಗಳನ್ನು ಪ್ರಕಟಿಸಲಾಗುತ್ತಿತ್ತು. ಅದು ಹೊರತು, ಪುಣೆ ಆವೃತ್ತಿಯ ಮಹಾಭಾರತ ಸಂಪುಟಗಳನ್ನು ಆಧರಿಸಿ ಇಂಗ್ಲಿಷಿಗೆ ಅನುವಾದಿಸಿ ಕ್ರಮಬದ್ಧವಾಗಿ ಪ್ರಕಟಿಸುವ ಮಹಾಕಾರ್ಯವನ್ನು ಮೊದಲ ಬಾರಿಗೆ ಕೈಗೊಂಡವರೇ ಅಮೆರಿಕದ ಸಂಸ್ಕ್ರತ ಪ್ರಾಧ್ಯಾಪಕ ಜೆ.ಎ.ಬಿ.ವಾನ್‌ ನುತೆನಿನ್‌. ಚಿಕಾಗೋ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಆ ಅನುವಾದ ಕಾರ್ಯ ೧೯೭೦ ರ ಸುಮಾರಿಗೆ ಮೊದಲಾಯಿತು.[2]

ಎಲಿಯಟ್‌ಗೆ ಇಡೀ ಮಹಾಭಾರತವನ್ನು ಮೂಲಕ್ಕೆ ಹತ್ತಿರವಾದ ರೂಪದಲ್ಲಿ ಓದಲು ಸಾಧ್ಯವಾಗಿದ್ದರೆ ! ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ‘ಭಗವದ್ಗೀತೆ’ಯನ್ನು ‘ಡಿವೈನ್‌ಕಾಮಿಡಿ’ಯ ಸ್ವರ್ಗ ಭಾಗದ ಜತೆ ಹೋಲಿಸುವಾಗ ಎಲಿಯಟ್‌ ಬಳಸುವ ‘ಫಿಲಾಸಫಿಕಲ್‌ ಪೊಯಂ’ ಎಂಬ ಮಾತನ್ನು ಗಮನಿಸಬೇಕ. ಭಗವದ್ಗೀತೆಯ ವಿಸ್ತೃತ ರೂಪವೇ ಅಪರಭಾರತ – ಕ್ಲೈಬ್ಯತೆ ಗೆಲ್ಲುವ ವಿಚಾರ ಹೊರತು. ನಿರ್ಮತ್ಸರ ನಿರಹಂಕಾರ ನಿರ್ಮಲ ಲೋಕವಾದ ಯಾವ ಸ್ವರ್ಗವನ್ನು ಬೆಳಗಿನ ಲೋಕವಾಗಿ ಅನುಭವಕ್ಕೆ ತಂದುಕೊಳ್ಳಲು ದಾಂತೆ ಪ್ರಯತ್ನಿಸುತ್ತಾನೆಯೋ, ಅದೇ ಅಪರಭಾರತದ ಕವಿಗಳಿಗೆ ಮಹಾಪ್ರಸ್ಥಾನ ಮತ್ತು ಸ್ವರ್ಗಾರೋಹಣ; ಪ್ರತಿಯೊಬ್ಬರೂ ತಮ್ಮ ತಮ್ಮ ಅಹಂಕಾರ, ಕಾಮನೆ ಮತ್ತು ಪ್ರತಿಷ್ಠೆಗಳನ್ನು ಕಳೆದುಕೊಂಡು ಬತ್ತಲಾಗುತ್ತಾ ಸಾಗುವ ಚಿತ್ರಣ ದೊರಕುವುದೇ ಈ ಭಾಗದಲ್ಲಿ.

ಕುರುಕ್ಷೇತ್ರ ಯುದ್ಧದವರೆಗಿನ ಕೌರವ – ಪಾಂಡವರ ಬದುಕನ್ನು ಎಪಿಕ್‌ ಆಗಿಸಲು ಬೇಕಾದ ಎಲ್ಲ ರೀತಿಯ ಸರಂಜಾಮುಗಳು ಬೇಕಾದುದಕ್ಕಿಂತ ಹೆಚ್ಚು ಪ್ರಮಾಣದಲ್ಲಿಯೇ ಲಭ್ಯವಿದ್ದವು. ವಸ್ತುವಿನ ಆಯ್ಕೆಯ ದೃಷ್ಟಿಯಿಂದ ನೋಡುವುದಾದಲ್ಲಿ, ಮಹಾಭಾರತದ ವಸ್ತು ಮಹಾಭಾರತದಷ್ಟೇ ಅಪೂರ್ವವಾದುದು. ಆ ವಿಚಾರದಲ್ಲಿ ಹೋಮರನನ್ನು ಮೀರಿಸುವ ಎಪಿಕ್‌ ಕವಿ ಈ ಜಗತ್ತಿನಲ್ಲಿ ಮತ್ತೊಬ್ಬ ಯಾರಾದರೂ ಇರುವುದಾದಲ್ಲಿ ಆತ ವ್ಯಾಸ ಮಹರ್ಷಿ ಮಾತ್ರ ಆಗಿರಲು ಸಾಧ್ಯ. ಒಂದೇ ತೆಂಡೆಗೆ ಸೇರಿದವರಾಗಿರಬಹುದಾದ ಒಂದೇ ಮೂಲದ ಜನರು ಏಷ್ಯನ್‌ ಮತ್ತು ಯುರೋಪಿಯನ್‌ ಆಗಿ ಖಂಡಾಂತರ ವಿಭಜನೆಗೆ ಅಣಿಯಾಗುತ್ತಿದ್ದ ಕಾಲದ ಸಂಘರ್ಷದ ಕತೆಯನ್ನು ಹೋಮರ್‌ ತನ್ನ ‘ಇಲಿಯಡ್‌’ನ ವಸ್ತುವಾಗಿ ಆರಿಸಿಕೊಂಡರೆ, ಅದಕ್ಕೂ ಪೂರ್ವದ ತನ್ನ ಎಪಿಕ್‌ನ ವಸ್ತುವಾಗಿ ಆರಿಸಿಕೊಂಡವರು ವ್ಯಾಸ ಮಹರ್ಷಿ; ಉತ್ತರ ಕರ್ನಾಟಕದ ಭಾಗದ ಮಾತನ್ನು ಉದಾಹರಿಸಿ ಹೇಳುವುದಾದಲ್ಲಿ, ಕರುಳಬಳ್ಳಿಗಳ ನಡುವೆ ಕಾಣಿಸಿಕೊಂಡ ಭೀಕರ ಹಣಾಹಣಿಯ ಕಾಳಗದ ಕತೆ. ಟ್ರೋಜನ್ನರು ಮತ್ತು ಅಖ್ಯೆಯನ್ನರು ಎಂಬುದಾಗಿ ಹಂಚಿ ಹೋದನಂತರ ‘ಇಲಿಯಡ್‌’ನ ವಸ್ತುವಾದ ಅವರು ಕೌರವ – ಪಾಂಡವರ ತರಹವೇ ಅದಕ್ಕೂ ಪೂರ್ವದ ಇತಿಹಾಸದ ಯಾವುದೋ ಒಂದು ಕಾಲದಲ್ಲಿ ಜ್ಞಾತಿಗಳಾಗಿರುವ ಸಾಧ್ಯತೆಯ ಬಗ್ಗೆ ಯೋಚಿಸುವುದರಿಂದ ಇತಿಹಾಸದ ಗತಿಗೆ ಅಪಚಾರ ಮಾಡಿದಂತಾಗುವುದಿಲ್ಲ. ಆ ತರಹದ ಚಿಂತನೆ ಕಾಲನ ಪದಗತಿಗೆ ಅನುಗುಣವಾಗಿರುವಂತೆ ತೋರುತ್ತದೆ.

ಮಹಾಭಾರತ ಮತ್ತು ಇಲಿಯಡ್‌ಗಳನ್ನು ಅಕ್ಕಪಕ್ಕ ಇಟ್ಟು ಓದಿದಾಗ ಅಸ್ಪಷ್ಟವಾಗಿರುವ ಇತಿಹಾಸದ ಹೆಜ್ಜೆ ಗುರುತುಗಳ ಸ್ಪಷ್ಟ ಚಿತ್ರಣ ದೊರಕುವ ಸಾಧ್ಯತೆ ಇಲ್ಲದಿಲ್ಲ. ಮಹಾಭಾರತ ‘ಮಹಾಭಾರತ’ವಾಗಿ ರೂಪುಗೊಂಡಿದ್ದರೆ, ಹೋಮನರ ಇಲಿಯಡ್‌ ‘ಇಲಿಯಡ್‌’ ಆಗುತ್ತದೆ. ಈ ಜಗತ್ತಿನ ಅಪೂರ್ವ ಸೃಷ್ಟಿ: ಅವುಗಳು ಒಂದರಂತೆ ಮತ್ತೊಂದಿರುವುದು ಅಸಾಧ್ಯದ ಮಾತು. ಆ ಪೂರ್ವ ಸೃಷ್ಟಿಯನ್ನು ನಂತರದ ತಲೆಮಾರಿನ ಕವಿ ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಾಥಮಿಕ ತಿಳುವಳಿಕೆಯನ್ನು ಇತಿಹಾಸದ ಆರಂಭದ ಕಾಲದಲ್ಲಿಯೇ ಪಡೆದವರು ಯುರೋಪಿಯನ್ನರಾಗಿದ್ದರು. ಈ ಜಗತ್ತಿನ ಪ್ರತಿಯೊಂದು ಸೃಷ್ಟಿಯೂ ಅಪೂರ್ವವಾದಂತೆ, ಮನುಷ್ಯ ಸೃಷ್ಟಿಗಳು ಅಪೂರ್ವವಾದಾಗ ಮಾತ್ರ ಅವುಗಳಿಗೆ ಅರ್ಥ ಪೂರ್ಣತೆಯ ಪಟ್ಟ ದಕ್ಕಲು ಸಾಧ್ಯ ಎಂಬುದನ್ನು ಕಂಡುಕೊಂಡಾತ ಹೋಮರ್‌. ಅದನ್ನು ಮುಂದುವರಿಸಿದಾತ ವರ್ಜಿಲ್‌. ನಿಜವಾದ ಪರಂಪರೆ ಎಂದರೆ ಅಪೂರ್ವತೆಯ ಮುಂದುವರಿಕೆ: ಕಾಲಕ್ಕೆ ಸ್ಪಂದಿಸಿದಾಗ ಮಾತ್ರ ಆ ಅಪೂರ್ವತೆ ದಕ್ಕುತ್ತದೆ ಎಂದರೂ ಒಂದೇ; ಅಪೂರ್ವವಾದ ಕೃತಿ ಕಾಲನ ಸ್ಪಂದನದಿಂದ ಬಂದ ಅದೇ ಕಾಲನ ಕೊಡುಗೆಯಾಗಿರುತ್ತದೆ ಎಂದರೂ ಒಂದೆ.

ಆ ಕಲೆಯನ್ನು ವರ್ಜಿಲ್‌ ಹೋಮರನಿಂದ ಕಲಿತಂತೆ ಷಿನ್‌ – ಎಖಿ – ಉನ್ನಿನ್ನಿಯಿಂದ ಹೋಮರ್‌ ಕಲಿತಿರಬಹುದು. ಆ ಸಾತತ್ಯತೆ ಭಾರತದಲ್ಲಿ ಎಡಬಿಡದೆ ಪ್ರವಹಿಸಿದಂತೆ ಕಾಣಬರುವುದಿಲ್ಲ. ಮೊದಲನೆಯದಾಗಿ, ವಾಲ್ಮೀಕಿಗೆ ವ್ಯಾಸ ಪರಂಪರೆಯ ನೇರ ಪರಿಚಯವಿರುವಂತೆ ತೋರುವುದಿಲ್ಲ. ಆ ವ್ಯಾಸನ ಪೂರ್ವಿಕರು ಜನಪದ ಮೂಲದವರು. ಭಾರತದ ಕತೆಯನ್ನು ಎಪಿಕ್‌ ಆಗಿ ಪರಿವರ್ತಿಸುವುದರ ಮುಖೇನ ಮೂಲದ್ಧಾಗಿರಬಹುದಾದ ಜನಪದ ಮೂಲದಿಂದ ಬಿಡಿಸಿಕೊಂಡು ಹೊಸದಾದ ಕಾವ್ಯ ರಚನಾ ಪರಂಪರೆಯನ್ನು ಕಟ್ಟಿದ ನಂತರವೂ, ಜನಪದದ ಜತೆಗಿನ ಸಂಬಂಧ ಯಾವುದೋ ಒಂದು ಹಂತದಲ್ಲಿ ಮುಂದುವರಿದಂತೆ ಕಾಣುತ್ತದೆ; ಮಹಾಭಾರತ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಳ್ಳಲು ಹಲವಾರು ಕಾರಣ ಗಳಿರಬಹುದಾದರೂ, ಜನಪದ ಮೂಲದ ಜತೆಗಿನ ಸಂಬಂಧದ ಮುಂದುವರಿಕೆಯೂ ಒಂದು ಪ್ರಮುಖ ಕಾರಣವಾಗಿರಬಹುದು. ಯುರೋಪ್‌ ಮೂಲದ ಜಗತ್ತಿನಲ್ಲಿ ಆ ತರಹ ಆಗಲಿಲ್ಲ ಎಂಬುದು ಗಮನಾರ್ಹ.

ಹೆಕ್ತರ್‌ ಸಂಹಾರದೊಂದಿಗೆ ಟ್ರಾಯ್‌ ನಗರ ನಿರ್ನಾಮವಾಗುವುದು ಆ ಕತೆಯ ಮುಂದಿನ ಅಧ್ಯಾಯವಷ್ಟೆ. ಆ ಎರಡೂ ಸಂಹಾರಗಳನ್ನು ನಿರ್ಮಮಕಾರದಿಂದ ಪೂರೈಸಿದ ನಂತರ ಹೆಲೆನಳನ್ನು ತಮ್ಮ ಜತೆ ಕರೆದುಕೊಂಡು ತಾವು ಬಂದ ಕೆಲಸ ಮುಗಿಯಿತು ಎಂಬಂತೆ ಕೈ ತೊಳೆದುಕೊಂಡು ಅಖೈಯನ್ನರು ತಮ್ಮ ನೆಲೆಗೆ ಹಿಂತಿರುಗುತ್ತಾರೆ: ಆ ಬಗ್ಗೆ ಅವರಲ್ಲಿ ಯಾವ ಹಳಹಳಿಕೆ ಅಥವಾ ಪಾಪಪ್ರಜ್ಞೆಯೂ ಇರುವುದಿಲ್ಲ. ಆ ಕೃತ್ಯವನ್ನು ತಮ್ಮ ಬದುಕಿನ ಅತ್ಯಂತ ಮಹತ್ವದ ಸಾಧನೆ ಎಂದೇ ಭಾವಿಸಿ ಮುಂದೆ ಸಾಗುವ ಅವರು, ಒಂದು ತರಹದ ಹೆಮ್ಮೆ, ಸಂಭ್ರಮ ಮತ್ತು ಮಹಾತ್ಕಾರ್ಯ ಸಾಧಿಸಿದ ತೃಪ್ತಿಯಿಂದ ತಮ್ಮ ಅಲೆದಾಟವನ್ನು ಸಹಿಸಿಕೊಂಡು ಊರಿಗೆ ಮರಳುವ ಸಾಹಸದ ಸಹಿಷ್ಣುತೆಯ ಚಿತ್ರಣ ‘ಒಡಿಸ್ಸಿ’ ಟ್ರೋಜನ್ನರು ಮತ್ತು ಟ್ರಾಯ್‌ ನಗರವನ್ನು ಸರ್ವನಾಶ ಮಾಡಿದ್ದು ತಪ್ಪೋ ಸರಿಯೋ ಎಂಬ ಪ್ರಶ್ನೆಗಳು ಮುಂದೆ ಗ್ರೀಕರನ್ನು ಕಾಡಿದ ಯಾವ ಸೂಚನೆಗಳೂ ದೊರಕುವುದಿಲ್ಲ.

ಆ ತರಹದ ಸಂಕಟಗಳು ಪಾಂಡವರನ್ನು ಮಾತ್ರ ಕಾಡಿದ್ದು ಏಕೆ? ಅದು ಭಾರತೀಯ ಮನೋಭಾವ ಮತ್ತು ಮನೋಧರ್ಮಕ್ಕೆ ವಿಶಿಷ್ಟವಾದುದೇ?

ವಾಲಿ ಮತ್ತು ರಾವಣರನ್ನು ಕೊಂದ ರಾಮಲಕ್ಷ್ಮಣರನ್ನು ಆ ಯಾವುದೇ ಸಮಸ್ಯೆಗಳು ಮುಂದೆ ಬಾಧಿಸುವುದಿಲ್ಲ. ರಾವಣನ ಸಂಹಾರಕ್ಕೆ ನೆಪವಾದರೂ ಇತ್ತು. ವಿನಾಕಾರಣ ವಾಲಿಯನ್ನು ಸಂಹರಿಸಬೇಕಾಗಿ ಬಂದುದು ರಾಮನನ್ನು ಒಂದು ಗಳಿಗೆಯಾದರೂ ಕಾಡಬೇಕಿತ್ತು. ಹಾಗಾಗಿ ಕೌರವರ ಸರ್ವನಾಶದನಂತರ ಪಾಂಡವರು ಎದುರಿಸಬೇಕಾಗಿ ಬಂದ ಪಾಪಭೀತಿ ಮತ್ತು ಸದ್ಗತಿ ಕುರಿತ ಭಯಗಳು ಅಪರಭಾರತಕ್ಕೆ ವಿಶಿಷ್ಟವಾಗಿರುವಂತೆ ತೋರುತ್ತದೆ. ವಾಲಿಯನ್ನು ಕೊಂದುದಕ್ಕಾಗಿ ರಾಮ ಮುಂದೆ ಎಲ್ಲೂ ಪಶ್ಚಾತ್ತಾಪಪಡುವುದಿಲ್ಲ ಅಥವಾ ವಿಚಲಿತನಾಗುವುದಿಲ್ಲ. ಆದರೆ ಅದೆ ಈನಿಯಾಸ್‌ ಪಿತೃಲೋಕದಲ್ಲಿ ಕಂಡುದಿದೊ ಮಾತನಾಡಿಸಲು ಹೋದಾಗ ಆಕೆ ಕಲ್ಲು ಮುಖ ಮಾಡಿಕೊಂಡು ಅಲ್ಲಿಂದ ಕಣ್ಮರೆಯಾಗುವ ಸನ್ನಿವೇಶದ ಹಿನ್ನೆಲೆ ಈಗಾಗಲೇ ಬಂದಿದೆ.

ವಾಲಿಯ ನೆನಪು ರಾಮನನ್ನು ಕಾಡಬೇಕಿತ್ತು ಅಥವಾ ಕಾಡಬಹುದಿತ್ತು. ಏಕೆಂದರೆ ವಾಲಿಯನ್ನು ವಧಿಸಲು ರಾಮನಿಗೆ ಯಾವುದೇ ಮಹತ್ವದ ಕಾರಣಗಳಿರಲಿಲ್ಲ. ತನ್ನಂತೆಯೇ ಪತ್ನಿಯನ್ನು ಕಳೆದುಕೊಂಡು ರಾಜ್ಯಭ್ರಷ್ಟನಾಗಿರುವ ಸುಗ್ರೀವನಿಗೆ ನೆರವು ನೀಡಬೇಕೆಂಬ ಭಾವನಾತ್ಮಕ ಬೆಸುಗೆ ಹೊರತು. ಆ ಒಂದು ಗುಪ್ತಗಾಮಿನಿಯಾದ ಸಂಬಂಧವೇ ಅವರಿಬ್ಬರನ್ನೂ ಹತ್ತಿರಕ್ಕೆ ತರುತ್ತದೆ. ಸಮಾನವ್ಯಸನಿ ಮತ್ತು ಸಮಾನದುಃಖಿಗಳಾದ ಅವರಿಬ್ಬರೂ ಮಿತ್ರರಾಗಲು ವಾಲಿ ಅಥವಾ ಮತ್ತೆ ಯಾರ ವಿರೋಧವು ಇರುವುದಿಲ್ಲ ಬೇರೆ ಯಾರ ಅನುಮೋದನೆಯೂ ಬೇಕಿರುವುದಿಲ್ಲ. ಆದರೂ ತನ್ನನ್ನು ವಧಿಸಲು ಅನುಸರಿಸಿದ ವಿಧಾನ ಕುರಿತು ವಾಲಿ ಕೇಳುವ ನೈತಿಕ ತಾತ್ವಿಕ ಪ್ರಶ್ನೆಗಳಿಗೆ ರಾಮ ಹೇಳುವ ಉತ್ತರ ಈ ರೀತಿ ಇದೆ:

“ಮೊದಲನೆಯದಾಗಿ, ವಾಲಿ – ಸುಗ್ರೀವರು ಆಧಿಪತ್ಯ ನಡೆಸುತ್ತಿರುವ ಭಾಗ ರಾಜನಾದ ಭರತನ ಅಧಿಪತ್ಯಕ್ಕೆ ಒಳಪಟ್ಟಿದೆ. ಧರ್ಮದ ಕಟ್ಟಳೆಗಳನ್ನು ಉಲ್ಲಂಘಿಸಿ ತಮ್ಮನ ಪತ್ನಿಯಾದ ರುಮೆಯ ಜತೆ ರತಿಸುಖದಲ್ಲಿ ತೊಡಗಿರುವ ನೀನು ತಮ್ಮನ ಪತ್ನಿ ಸೊಸೆಗೆ ಸಮಾನ ಎಂಬುದನ್ನು ಮರೆತಿರುವೆ. ಆ ಕಾರನ ಮಾಂಸಾರ್ಥಿಗಳಾದ ಜನರು ಬೇಟೆ ಮಾಡುವ ರೀತಿ ನಾನು ಶಾಖಾಮೃಗದ ತರಹ ಇರುವ ವಾನರನಾದ ನಿನ್ನನ್ನು ವಧಿಸಬಹುದಾಗಿದೆ. ಚಪಲರಲ್ಲಿ ಚಪಲರಾದ ನಿನ್ನಂತಹ ಮಾನರರಿಗೆ ಆ ಎಲ್ಲ ಧರ್ಮಸೂಕ್ಷ್ಮಗಳು ಅರ್ಥವಾಗುವುದಿಲ್ಲ. ಆ ಕಾರಣ ನಿನ್ನನ್ನು ವಧಿಸಲು ನಾನು ಅನುಸರಿಸಿದ ವಿಧಾನ ಸರಿಯೋ ತಪ್ಪೋ ಎಂದು ನಿರ್ಣಯಿಸುವ ಅವಕಾಶ ನಿನಗೆ ಇರುವುದಿಲ್ಲ’’ ಎಂಬುದಾಗಿ ಶ್ರೀರಾಮನ ಉತ್ತರದ ವೈಖರಿ ಸಾಗುತ್ತದೆ. ರಾಮ ನೀಡುವ ಸಮರ್ಥನೆ ಮುಂದಿನ ಸರ್ಗದಲ್ಲಿ ಅವನಿಂದಲೇ ಉಲ್ಲಂಘನೆಗೊಳ್ಳುವುದನ್ನು ಕಾಣಲು ಬಹಳ ತ್ರಾಸ ಪಡಬೇಕಿಲ್ಲ. ವಾಲಿಯ ಶವದ ಮೇಲೆ ಬಿದ್ದು ಹೊರಳಾಡುತ್ತಿದ್ದ ತಾರೆಯನ್ನು ಸಮಾಧಾನ ಪಡಿಸುವಾಗ ರಾಮನ ಬಾಯಿಂದ: “ಮೊದಲಿನಂತೆಯೇ ನೀನು ಎಲ್ಲ ಭೋಗಗಳನ್ನು ಅನುಭವಿಸುವೆ” ಎಂಬ ಮಾತು ಹೊರಬರುತ್ತದೆ:

ಪ್ರೀತಿಂ ಪರಾಂ ಪ್ರಾಪ್ಸ್ಯಸಿ ತಾಂ ತಥೈವ
ಪುತ್ರಸ್ತು ತೇ ಪ್ರಾಪ್ಸ್ಯತಿ ಯೌವರಾಜ್ಯಮ್‌ ||೪೩|| ಕಿಷ್ಕಿಂಧಾಕಾಂಡ, ಸರ್ಗ ೨೪

ತಾರೆ ಮತ್ತು ವಾಲಿಯರ ಪುತ್ರನಾದ ಅಂಗದನಿಗೆ ಯುವರಾಜ ಪದವಿ ದೊರಕುತ್ತದೆ ಎಂಬುದೇನೋ ನಿಜ. ಆದರೆ ಮುಂದೆ ಎಲ್ಲ ಸುಖಗಳನ್ನೂ ತಥಾರೂಪದಲ್ಲಿ ಅನುಭವಿಸುವೆ ಎಂದು ಗಂಡನನ್ನು ಕಳೆದುಕೊಂಡ ತಾರೆಗೆ ಹೇಳುವ ಮಾತಿನ ಅರ್ಥವಾದರೂ ಏನು? ಅದರಂತೆಯೇ ವಾಲಿಯ ವಧೆಯಾದನಂತರ ಸುಗ್ರೀವನು ಪತ್ನಿ ರುಮೆ ಮತ್ತು ಅತ್ತಿಗೆ ತಾರೆಯ ಜತೆ ರತಿಕ್ರೀಡೆಯಲ್ಲಿ ತೊಡಗಿರುವ ಚಿತ್ರಣವನ್ನು ಅದೇ ರಾಮಾಯಣವು ೨೯ನೇ ಸರ್ಗದಲ್ಲಿ ನೀಡುತ್ತದೆ:

ನಿವೃತ್ತಕಾರ್ಯಂ ಸಿದ್ಧಾರ್ಥಂ ಪ್ರಮದಾಭಿರತಂ ಸದಾ |
ಪ್ರಾಪ್ತವಂತಮಭಿಪ್ರೇತಾನ್‌ ಸರ್ವಾನಪಿ ಮನೋರಥಾನ್‌ ||೩||
ಸ್ವಾಂಚ ಪತ್ನೀಮಭಿಪ್ರೇತಾಂ ತಾರಾಂ ಚಾಪಿ ಸಮೀಪ್ಸಿತಾಮ್‌ |
ವಿಹರಂತಮಹೋರಾತ್ರಂ ಕೃತಾರ್ಥಂ ವಿಗತಜ್ವರಮ್‌ ||೪||

ಸೊಸೆಯಂತಿರುವ ತಮ್ಮನ ಪತ್ನಿ ಮತ್ತು ಹೆಂಡತಿಯ ಜತೆ ರತಿಕ್ರಿಯೆಯಲ್ಲಿ ತೊಡಗುವ ವಾಲಿಯು ವಧೆಗೆ ಅರ್ಹನಾದರೆ, ತಾಯಿಯಂತಿರುವ ಅದೇ ಅಣ್ಣನ ಪತ್ನಿ ಮತ್ತು ತನ್ನ ಹೆಂಡತಿ ಜತೆ ರತಿಕ್ರಿಯೆಯಲ್ಲಿ ಅಹೋರಾತ್ರಿ ನಿರತನಾಗುವ ಸುಗ್ರೀವ ಯಾವ ಶಿಕ್ಷೆಗೆ ಅರ್ಹ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಸಾಯುವ ಮೊದಲು ವಾಲಿ ಕೇಳುವ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ ಎಂಬುದನ್ನು ಆ ಮೂಲಕ ವಾಲ್ಮೀಕಿ ಶ್ರುತಪಡಿಸಿದಂತೆ ತೋರುತ್ತದೆ.

“ನಾವಾದರೋ ವನಚರರು. ಮೃಗಜಾತಿಗೆ ಸೇರಿದವರು. ಮತ್ತು ಫಲಮೂಲಗಳನ್ನು ತಿಂದು ಜೀವಿಸುವವರು. ಆದರೆ ನೀವಾದರೋ ಮನುಶ್ಯೇಶ್ವರರು. ರಾಜರು. ಉತ್ತಮ ಕುಲದಲ್ಲಿ ಹುಟ್ಟಿದವರು. ಧರ್ಮಸೂಕ್ಷ್ಮಗಳನ್ನು ಬಲ್ಲವರು. ನಿನ್ನೊಡನೆ ಯುದ್ಧಕ್ಕೆ ಬಾರದ ವ್ಯಕ್ತಿ ಮತ್ತೊಬ್ಬನೊಡನೆ ಯುದ್ಧದಲ್ಲಿ ತಲ್ಲೀನನಾಗಿರುವಾಗ ಮರೆಯಾಗಿ ನಿಂತು ಕೊಲ್ಲುವುದು ಯಾವ ಧರ್ಮ? ಎಲ್ಲಿಯ ನೀತಿ?” ಎಂಬುದಾಗಿ ವಾಲಿ ಕಿಷ್ಕಿಂಧಾಕಾಂಡದಲ್ಲಿ ಕೇಳುವ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಹೇಳುವ ಸ್ಥಿತಿಯಲ್ಲಿ ಈ ಜಗತ್ತು ಇರುವಂತೆ ತೋರುವುದಿಲ್ಲ. ಶೋಕದಲ್ಲಿ ಮುಳುಗಿದ್ದ ತಾರೆಗೆ ಸಮಾಧಾನ ನೀಡುತ್ತಾ ಹನುಮಂತನು ಆಡುವ “ಕಾಲಸ್ಯ ನಿಶ್ಚಯಃ”[3] ಎಂಬ ಮಾತನ್ನು ಯಾವ ರೀತಿಯಲ್ಲಿ ಬೇಕಾದರೂ ಅರ್ಥೈಸಬಹುದಾಗಿದೆ: ವ್ಯಂಗ್ಯ, ಲೇವಡಿ, ಟೀಕೆ ಅಥವಾ ಗ್ರಹಿಸಲಾಗದ ಮಹಾಸತ್ಯ. ಅದೇ ಮಾತುಗಳನ್ನು ಶ್ರೀರಾಮ ಮುಂದಿನ ಸರ್ಗದಲ್ಲಿ ಬೇರೆ ರೂಪ ಮತ್ತು ಸನ್ನಿವೇಶದಲ್ಲಿ ಆಡುವ ಮಾತುಗಳ ಜತೆ ಹೋಲಿಸಿ ನೋಡಬೇಕು. “ಸಕಲವೂ ಕಾಲದ ಪರಿಣಾಮವಾಗಿ ಸಂಭವಿಸುತ್ತದೆ. ಅದೇ ತರಹ ಧರ್ಮಅರ್ಥಕಾಮಗಳು ಕಾಲಕ್ರಮದಲ್ಲಿ ಸಮಾಹಿತವಾಗುತ್ತವೆ ಎಂಬುದನ್ನು ಮನಗಾಣಬೇಕು” ಎಂಬ ರಾಮನ ಮಾತು “ಕಾಲಸ್ಯ ನಿಶ್ಚಯಃ” ಎಂಬ ಹುಮಾನ ವಾಕ್ಯದ ಜತೆ ಹೋಲಿಕೆ ನಿಲ್ಲಲು ಸಾಧ್ಯವೇ?

ಪ್ರಾಣ ಬಿಡುವ ಮೊದಲು ವಾಲಿಯು ಆಡುವ ಕೆಲ ಮಾತುಗಳು ಮತ್ತು ನಡೆದುಕೊಳ್ಳುವ ರೀತಿಯನ್ನು ಬಹಳ ಎಚ್ಚರಿಕೆ ಮತ್ತು ಗೌರವದಿಂದ ಗಮನಿಸುವುದು ಅಗತ್ಯ:

ಮಾಮಪ್ಯಗತಧರ್ಮಾಣಂ ವ್ಯತಿಕ್ರಾಂತಪುರಸ್ಕೃತಮ್‌ |
ಧರ್ಮಸಂಹಿತಯಾ ವಾಚಾ ಧರ್ಮಜ್ಞ ಪರಿಪಾಲಯ ||೫೦|| ಅಲ್ಲಿಯೇ ಸರ್ಗ ೧೮

ತನ್ನನ್ನು ತಾನು ಧರ್ಮಜ್ಞಾನವಿಲ್ಲದವನು, ಧರ್ಮಬಾಹಿರರಲ್ಲಿ ಅಗ್ರಗಣ್ಯ ಎಂದು ಬಣ್ಣಿಸಿಕೊಳ್ಳುವ ವಾಲಿಯು, ಶ್ರೀರಾಮನನ್ನು ಧರ್ಮಸಂಹಿತಯಾ ಮತ್ತು ಧರ್ಮಜ್ಞಪರಿಪಾಲಯ ಎಂದು ಗೌರವದಿಂದ ಕರೆಯುತ್ತಾನಾದರೂ, ಸನ್ನಿವೇಶದ ಸಂದರ್ಭದಿಂದಾಗಿ ಆ ಎಲ್ಲಾ ಮಾತುಗಳು ವ್ಯಂಗ್ಯವಾಗಿ ಪರಿವರ್ತನೆಗೊಳ್ಳುವ ಸಂಭವವೇ ಅಧಿಕ. ಮತ್ತು ವಾಲಿಯ ಆ ಮಾತುಗಳನ್ನು ತಿರುಗ ಮುರುಗ ಓದಿದಾಗ ವ್ಯಕ್ತವಾಗುವ ಅರ್ಥವೇ ಬೇರೆ.. ತಾರೆಯನ್ನು ತಾರಾಂ ತಪಸ್ವಿನೀಂ – ತಪಸ್ವಿನಿ ಎಂದು ಬಣ್ಣಿಸುವ ವಾಲಿಯು, ತನ್ನ ತಪ್ಪಿಗಾಗಿ ಆಕೆಯನ್ನು ಅಗೌರವದಿಂದ ಕಾಣದಂತೆ ಸುಗ್ರೀವನಿಗೆ ತಿಳಿಸು ಎಂದು ಕೋರುವ ವಾಲಿಯು, ಚಿಕ್ಕ ಹುಡುಗನಾದ ಮತ್ತು ಸುಖದಲ್ಲಿ ಬೆಳೆದ ತನ್ನ ಮಗ ಅಂಗದನನ್ನು ಸಹ ಗೌರವದಿಂದ ನಡೆಸಿಕೊಳ್ಳುವಂತೆ ಬೇಡುತ್ತಾನೆ. ಅದೇ ಧ್ವನಿಯಲ್ಲಿ ಮುಂದುವರಿಯುತ್ತಾ ತಾರೆಯನ್ನು ಕುರಿತಂತೆ ಸುಗ್ರೀವನಿಗೆ ತಿಳಿಸುವ ಕೆಲ ಮಾತುಗಳು ಬಹಳ ಅರ್ಥಗರ್ಭೀತವಾಗಿವೆ. ಸೂಕ್ಷ್ಮಾರ್ಥಗಳನ್ನು ಬಲ್ಲ ತಾರಾ ಹೇಳಿದಂತೆ ನಡೆದುಕೋ. ಆಕೆಯ ಮಾತನ್ನು ಉಲ್ಲಂಘಿಸಬೇಡ ಎಂದುಸುಗ್ರೀವನಿಗೆ ತಿಳಿಸುವ ವಾಲಿಯು ರಾಮನ ಅಭೀಪ್ಸೆಯನ್ನು ಆದಷ್ಟು ಬೇಗನೆ ನೆರವೇರಿಸುವಂತೆ ಸಹ ಆದೇಶಿಸುತ್ತಾನೆ. ತನ್ನ ಕೊರಳಲ್ಲಿದ್ದ ದಿವ್ಯ ತೇಜಸ್ಸಿನ ಕಾಂಚನಮಾಲೆಯನ್ನು ಸುಗ್ರೀವನ ಕೊರಳಿಗೆ ಹಾಕುವ ದೃಶ್ಯವಂತೂ ಎಂಥವರ ಕಣ್ಣಲ್ಲೂ ನೀರು ತಾರದಿರುವುದಿಲ್ಲ. ಇನ್ನು ಮುಂದೆ ದೇಶ ಕಾಲಗಳ ಪರಿಸ್ಥಿತಿ ತಿಳಿದುಕೊಂಡು ಪ್ರಿಯ – ಅಪ್ರಿಯ, ಸುಖ – ದುಃಖ ಇತ್ಯಾದಿ ಎಲ್ಲ ಸಂದರ್ಭಗಳಲ್ಲೂ ತಾಳ್ಮೆಯಿಂದ ಅನುಭವಿಸಲು ಸಿದ್ಧನಾಗು. ಸುಗ್ರೀವ ಹೇಳಿದಂತೆ ಕೇಳಿಕೊಂಡಿರು ಎಂಬುದಾಗಿ ತನ್ನ ಮಗ ಅಂಗದನಿಗೆ ಹೇಳುವ ಮಾತಂತೂ ಅತ್ಯಂತವಾದ ಅನುಭವ ಮತ್ತು ಪ್ರೌಢ ತಿಳುವಳಿಕೆಯಿಂದ ಬಂದುದಾಗಿದೆ. ಅಂತಹ ವಾಲಿ ವಾನರ ಎಂದು ನಂಬಲು ಬರುತ್ತದೆಯೇ?

ತನ್ನ ಕೊರಳಲ್ಲಿದ್ದ ಸರ್ವೋತ್ತಮ ಕಾಂಚನಮಾಲೆಯನ್ನು ತನ್ನ ಮಗನ ಕೊರಳಿಗೆ ಹಾಕುವ ಬದಲು ತನ್ನ ವಧೆಗೆ ನಿಮಿತ್ತ ಮಾತ್ರನಾದ ತಮ್ಮ ಸುಗ್ರೀವನ ಕೊರಳಿಗೆ ಹಾಕುವ ವಾಲಿಯು, ಅದಕ್ಕೂ ಮೊದಲು ಅವರಿಬ್ಬರ ಸಂಬಂಧ ಕುರಿತಂತೆ ಆಡುವ ಮರುವಿಮರ್ಶೆಯ ಈ ಮಾತುಗಳು[4] ಸಂಗ್ರಾಹ್ಯಯೋಗ್ಯ.

“ನಾವಿಬ್ಬರೂ ಒಟ್ಟಿಗೆ ಬಾಳುವುದು ಕೂಡಿ ಬರಲಿಲ್ಲ. ಆ ಕಹಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ. ಆಗ ಬುದ್ಧಿಗೆ ಮಂಕು ಕವಿದಿರಬಹುದು” ಎಂದು ಹೇಳಿ ಪ್ರಾಣ ಬಿಡುವ ವಾಲಿಯು ಕೊನೆಗೆ ನಿರ್ವಾಣ ಸ್ಥಿತಿಯನ್ನು ತಲುಪುತ್ತಾನೆ. ಅಂತಹ ವಾಲಿಯನ್ನು ಸೃಷ್ಟಿಸುವ ವಾಲ್ಮೀಕಿಗೆ ಎಲ್ಲ ಸಂಸ್ಕೃತಿಗಳ ಗಾಢ ಪರಿಚಯ ಇದ್ದಿರಬೇಕು. ಅತ್ಯಂತ ಧೀರ ಮತ್ತು ಉದಾತ್ತನಾದ ಸುಸಂಸ್ಕೃತ ವಾಲಿಯ ಪಾತ್ರ ಚಿತ್ರಿಸುವುದರ ಮುಖೇನ ವಾಲ್ಮೀಕಿಯು ಬದುಕಿನ ಮತ್ತೊಂದು ಸಾಧ್ಯತೆಯನ್ನು ತೆರೆದಿಟ್ಟಂತೆ ಕಾಣುತ್ತದೆ. ಮುಂದೆ ಆಳುವ ಸರದಿ ಸುಗ್ರೀವನದು: “ಭ್ರಾತೃಹತ್ಯಾದೋಷಕ್ಕೆ ಗುರಿಯಾದ ನಾನು ಪ್ರಜೆಗಳ ಗೌರವಕ್ಕೆ ಅರ್ಹನಲ್ಲ, ಯುವರಾಜ ಪದವಿಗೂ ಅರ್ಹನಲ್ಲ. ನನಗೆ ಇನ್ನು ರಾಜನಾಗುವ ಅರ್ಹತೆ ಎಲ್ಲಿದೆ?” ಎಂದು ಪ್ರಶ್ನಿಸುವ ಸುಗ್ರೀವನು ವಾಲಿಯ ಚಿತೆಗೆ ಹಾರಿ ಪ್ರಾಣ ಕಳೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತಾನೆ.

ಆಗ ತಾರಾ ಆಡುವ ಕೆಲ ಮಾತುಗಳು[5] ಇನ್ನೂ ಹೆಚ್ಚಿನ ವ್ಯಂಗ್ಯದಿಂದ ತುಂಬಿವೆ. ಅದರಲ್ಲೂ ಶ್ರೀರಾಮನನ್ನು ಕುರಿತು

“ದೃಢಕಾಯನೂ, ಮನುಷ್ಯ ರೂಪಲಕ್ಷಣಗಳಿಗೂ ಮೀರಿದ ದಿವ್ಯವಾದ ದೇಹ ಸೌಭಾಗ್ಯವನ್ನು ಪಡೆದು ಮಹಾವೀರನೂ, ಜಿತೇಂದ್ರಿಯನೂ ಮತ್ತು ಧರ್ಮನಿಷ್ಠನೂ ಆಗಿರುವ ನೀನು ಅದೇ ಬಾಣದಿಂದ ನನ್ನನ್ನು ಕೊಂದುಬಿಡು. ನಾನು ಸತ್ತು ನನ್ನ ಪ್ರಿಯನಾದ ವಾಲಿಯ ಬಳಿಗೆ ಹೋಗುವೆನು” ಎನ್ನುವ ತಾರೆಯ ಪ್ರತಿ ಮಾತುಗಳೂ ವಿರುದ್ಧಾರ್ಥದ ವ್ಯಂಗ್ಯದಿಂದ ತುಂಬಿದ್ದು ಆ ಮಾತುಗಳಿಂದ ಹರಿತವಾದ ಬಾಣಗಳನ್ನು ಬಳಸುವುದು ಸಾಧ್ಯವಿಲ್ಲ. ಆ ಯಾವ ಮಾತುಗಳೂ ರಾಮನನ್ನು ವಿಚಲಿತಗೊಳಿಸುವುದಿಲ್ಲ ಮತ್ತು ತನ್ನ ಕರ್ತವ್ಯದಿಂದ ವಿಮುಖನಾಗುವಂತೆ ಮಾಡುವುದಿಲ್ಲ. ತಾನೇ ನಿಂತು ಲಕ್ಷ್ಮಣನ ಮೂಲಕ ವಾಲಿಯ ಶವಸಂಸ್ಕಾರ ನೆರವೇರಿಸುವ ರಾಮನು, ಊರಿನ ಹೊರಗುಳಿದು ಸುಗ್ರೀವ ಮತ್ತು ಅಂಗದರ ಪಟ್ಟಾಭಿಷೇಕ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಾನೆ. ವಾಲಿಯ ವಿನಾಕಾರಣ ವಧೆ, ಆತ ಎತ್ತುವ ಪ್ರಶ್ನೆಗಳು, ಅದಕ್ಕೆ ಉತ್ತರ ನೀಡಲಾಗದ ಅಸಹಾಯಕ ಸ್ಥಿತಿ, ತಾರೆ ಮತ್ತು ಸುಗ್ರೀವರ ವಿಲಾಪ ಮತ್ತು ಪಶ್ಚಾತ್ತಾಪ ಮೊದಲಾದ ಯಾವ ಇರಿತಗಳು ರಾಮನನ್ನು ಕರ್ತವ್ಯವಿಮುಖನನ್ನಾಗಿ ಮಾಡುವುದಿಲ್ಲ. ವಿಚತಲಿತನಾಗದ ರಾಮನನ್ನು ಯಾವುದೇ ಪಾಪ ಅಥವಾ ಪುಣ್ಯದ ಪ್ರಜೆಗಳು ಕಾಡುವುದಿಲ್ಲ. ಪಶ್ಚಾತ್ತಾಪವೂ ಇಲ್ಲ. ಪುನರ್‌ ವಿಮರ್ಶೆಯೂ ಇಲ್ಲ. ಟ್ರಾಯ್‌ ಮತ್ತು ಟ್ರೊಜನ್ನರನ್ನು ನಿರ್ನಾಂ ಮಾಡಿದ ಗ್ರೀಕರ ತರಹವೆ ಬದುಕಿನಲ್ಲಿ ಮುನ್ನಡೆಯುತ್ತಾನೆ.

ಹಾಗಾದರೆ, ಕೌರವರನ್ನು ಸಂಹಾರ ಮಾಡಿ ರಾಜ್ಯವಾಳುವ ಅವಕಾಶ ಪಡೆದ ಪಾಂಡವರನ್ನು ಪಾಪಪ್ರಜ್ಞೆ, ಧರ್ಮಕರ್ಮಗಳ ಭೀತಿ ಮತ್ತು ಬದುಕಿನ ನಂತರದ ಬದುಕಿನ ಅರ್ಥ ಕುರಿತ ಸಂಕ್ಲೇಶಗಳು ಕಾಡತೊಡಗಲು ಕಾರಣಳಾದರೂ ಏನಿರಬಹುದು? ದಿದೊ ಆತ್ಮಹತ್ಯೆ ಕಂಡು ಒಂದು ಗಳಿಗೆಯಾದರೂ ತಲ್ಲಣಗೊಳ್ಳುವ ಈನಿಯಾಸ್‌ನ ವ್ಯಕ್ತಿತ್ವ ನಂತರದ ಬೆಳವಣಿಗೆಯಾದಂತೆ, ಅಪರಭಾರತದಲ್ಲಿ ಬರುವ ಪಾಂಡವರ ವ್ಯಕ್ತಿತ್ವದ ಚಿತ್ರಣ ಸಹ ನಂತರದ ಬೆಳವಣಿಗೆಯಾಗಿದ್ದಿರಬಹುದು.

ಆ ಪ್ರಶ್ನೆಗಳಿಗೆ ಹೋಗುವ ಮೊದಲು ಮಹಾಭಾರತ – ರಾಮಾಯಣಗಳು ಬಂದ ಕಾಲ ಕುರಿತಂತೆ ಒಂದು ಲಕ್ಷ ಅಂದಾಜು ಮಾಡಿಕೊಳ್ಳುವುದು ಉಚಿತ.

ದಿದೊ ಆತ್ಮಹತ್ಯೆ ಕುರಿತಂತೆ ಈನಿಯಾಸ್‌ ಕಾಣಿಸಿಕೊಳ್ಳುವ ತಲ್ಲಣ ಕ್ರಿಶ್ಚಿಯನ್‌ ಸಂವೇದನೆಗಳಿಗೆ ಹತ್ತಿರವಾದುದು. ಅಂತಹ ವ್ಯಕ್ತಿತ್ವದ ಚಿತ್ರಣ ನೀಡಿದ ವರ್ಜಿಲ್‌ ಕ್ರಿಸ್ತನ ಆಗಮನವಾಗುವುದಕ್ಕೆ ಸುಮಾರು ೭೦ ವರ್ಷ ಮೊದಲು ಹುಟ್ಟಿದವನು. ಆ ತರಹದ ಯಾವುದೇ ತಲ್ಲಣ ಕಾಣದ ಹೋಮರನ ಕಾಲ ಏನಿಲ್ಲವೆಂದರೂ ಕ್ರಿ. ಪೂ. ೯ನೇ ಶತಮಾನಕ್ಕೂ ಹಿಂದಕ್ಕೆ ಹೋಗುತ್ತದೆ. ಸಮೂಹಸೃಷ್ಟಿಯಾದ ಮಹಾಭಾರತದ ಮೇಲೆ ಹಲವಾರು ಶತಮಾನಗಳ ಅಂಕಿತ ದಾಖಲಾಗಿದ್ದರೆ, ರಾಮಾಯಣವನ್ನು ಸಮೂಹ ಸೃಷ್ಟಿಯಾಗಿ ಪರಿವರ್ತಿಸುವ ಕೆಲಸಕಾರ್ಯ ಮತ್ತು ದಾಳಿಗಳು ಬಹಳ ಹಿಂದಿನಿಂದಲೂ ಅವ್ಯಾಹತವಾಗಿ ನಡೆದವು. ಆ ಎಲ್ಲ ತರಹದ ಒತ್ತಡಗಳ ಕೆಸರನ್ನು ಅತ್ತ ಬದಿಗೆ ಸರಿಸಿ ಮೂಲ ರಾಮಾಯಣದ ಮೂಲ ಭಾಗ ಇದಾಗಿರಬಹುದೆಂದು ಗುರುತಿಸಬಹುದಾದಂತೆಯೆ, ಮೂಲಭಾರತದ ಮೂಲಭಾಗ ಇದಿರಬಹುದೆಂದು ಕುರುಡು ಅಂದಾಜು ಮಾಡಬಹುದಾಗಿದೆ. ವಾಲಿ ವಧೆ ಮತ್ತು ಆ ಸನ್ನಿವೇಶದ ಚಿತ್ರಣ ಮೂಲ ರಾಮಾಯಣದ ಭಾಗ: ಅಲ್ಲಿ ಬರುವ ಕೆಲ ಸರ್ಗ, ಶ್ಲೋಕ ಹಾಗೂ ಪದಗಳನ್ನು ಮುಂದಿನ ತಲೆಮಾರಿನ ಕವಿಗಳು ಲಿಪಿಕಾರರು ತಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಬದಲಿಸಿರಬಹುದು ಅಥವಾ ಪರಿಷ್ಕರಿಸಲು ಪ್ರಯತ್ನಿಸಿರಬಹುದು. ಆ ಯಾವ ಪ್ರಯತ್ನಗಳೂ ವಾಲಿವಧೆಯ ಕಾಲದಲ್ಲಿ ಪ್ರಕಟವಾಗುವ ಮೂಲ ರಾಮಾಯಣದ ಮೂಲ ಸನ್ನಿವೇಶವನ್ನು ಸಂಪೂರ್ಣ ಬದಲಿಸಲು ಸಮರ್ಥವಾಗಿಲ್ಲ.

ಹಾಗಾಗಿ ವಾಲಿಯ ಸುಸಂಸ್ಕೃತ ನಡವಳಿಕೆ, ಧೀರತನ ಮತ್ತು ಉದಾತ್ತತೆಯಿಂದ ತುಂಬಿದ ವ್ಯಕ್ತಿಚಿತ್ರಣ ಮಾಸದೆ ಉಳಿದುಬಂದಿದೆ. ಅದರಲ್ಲೂ ಅಲ್ಲಿ ಮಾತು ಮಾತಿಗೆ ವ್ಯಕ್ತವಾಗುವ ವ್ಯಂಗ್ಯ, ಸಂಸ್ಕೃತ ಸಾಹಿತ್ಯ ಲೋಕದಲ್ಲೇ ಅಪೂರ್ವವಾದ ಹೊಳಪಿನಿಂದ ಕೂಡಿದ್ದು ಆ ತರಹದ ವ್ಯಂಗ್ಯವನ್ನು ಕಾಳಿದಾಸನಲ್ಲೂ ಕಾಣಲಾಗುವುದಿಲ್ಲ ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಕಾಳಿದಾಸನಲ್ಲಿ ಪ್ರಕಟವಾಗುವುದು ಸನ್ನಿವೇಶದ ಒತ್ತಡದಿಂದ ನಿರ್ಮಾಣಗೊಳ್ಳುವ ವ್ಯಂಗ್ಯ. ಆಡುವ ಭಾಷೆಯಲ್ಲಿ ತರುವ ವ್ಯಂಗ್ಯವನ್ನು ಗ್ರಂಥಸ್ಥ ಭಾಷೆಯಲ್ಲಿ ತರುವುದಕ್ಕೊಂದು ಮಿತಿ ಇದೆ ಆ ಮಿತಿಗೆ ಕಾಳಿದಾಸನಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಅದೇ ವಾಲ್ಮೀಕಿಯ ತಾರೆ – ವಾಲಿ ಮೊದಲಾದವರು ಆಡುವ ಮಾತುಗಳು ವ್ಯಂಗ್ಯದಿಂದ ಪುಟಿಯುಉದು; ಮತ್ತು ಆ ವ್ಯಂಗ್ಯದ ಸೊಗಸು ಮತ್ತು ಸೊಗಡು ಇಂದಿಗೂ ಉಳಿದುಬಂದಿರುವುದನ್ನು ನೋಡಿದರೆ, ಆಡುಭಾಷೆ ಜತೆ ವಾಲ್ಮೀಕಿಗಿದ್ದ ಜೀವಂತ ಸಂಪರ್ಕಕ್ಕೆ ಅದಕ್ಕಿಂತ ಹೆಚ್ಚಿನ ನಿದರ್ಶನ ಮತ್ತೊಂದು ಬೇಕಾಗಲಾರದು. ಆ ಎಲ್ಲ ವ್ಯಂಗ್ಯಗಳ ನಡುವೆ ಎದ್ದು ಕಾಣುವ ವಾಲಿಯ ಬದುಕೇ ಒಂದು ದೊಡ್ಡ ವ್ಯಂಗ್ಯ. ಅಂಥ ಸುಸಂಸ್ಕೃತ ವಾಲಿಯ ವಧೆಗೆ ಕಾರಣಕರ್ತನಾಗುವ ‘ಸುಸಂಸ್ಕೃತ’ ಶ್ರೀರಾಮ ಮುಂದೆ ಎಲ್ಲೂ ಆ ಕುರಿತಂತೆ ಯೋಚಿಸಲು ಹೋಗುವುದಿಲ್ಲ ಅಥವಾ ಒಂದು ಗಳಿಗೆಯಾದರೂ ತಳಮಳಿಸಿದ ಉದಾಹರಣೆ ದೊರಕುವುದಿಲ್ಲ.

ದಿದೊ ಮತ್ತು ವಾಲಿಯ ಪಾತ್ರದ ನಡುವೆ ಹೊಂದಾಣಿಕೆ ಇಲ್ಲದಿಲ್ಲ. ಮಾರೀಚನು ಅಂಥವರ ಸಾಲಿನಲ್ಲಿ ಮತ್ತೊಬ್ಬನಷ್ಟೆ. ತನ್ನ ಉದ್ದೇಶದ ಈಡೇರಿಕೆಗೆ ಬಳಕೆಯಾದ ಮಾರೀಚನ ಅಸಹಜ ಸಾವಿನ ಬಗ್ಗೆ ರಾವಣ ಕೂಡ ಯೋಚಿಸಲು ಹೋಗುವುದಿಲ್ಲವಾದಂತೆ, ಅದೇ ತರಹ ವಾಲಿ ಕೂಡ ರಾಮನ ಮುಂದಿನ ಉದ್ದೇಶ ಮತ್ತು ಗುರಿಸಾಧನೆಗೆ ಮೆಟ್ಟಲಾಗಿ ಬಿಡುತ್ತಾನೆ. ಇಟಲಿಯೇ ತನ್ನ ಮುಂದಿನ ಉದ್ದೇಶ ಮತ್ತು ಗುರುಸಾಧನೆಗೆ ಮೆಟ್ಟಲಾಗಿ ಬಿಡುತ್ತಾನೆ. ಇಟಲಿಯೇ ತನ್ನ ಮುಂದಿನ ಗುರಿ ಎಂದು ದೃಢ ನಿಶ್ಚಯ ಮಾಡಿಕೊಂಡಿದ್ದ ಈನಿಯಾಸ್‌ನ ವ್ಯಕ್ತಿತ್ವದ ಪರಿಚಯವೇ ಇಲ್ಲದೆ ಆತನ ಜತೆ ಪರಿಣಯಕ್ಕೆ ತೊಡಗುವದಿದೊ, ತನಗೆ ಗೊತ್ತಿಲ್ಲದೆಯೆ ಈನಿಯಾಸ್‌ನ ಮುಂದಿನ ಬದುಕು ಮತ್ತು ಗುರಿ ಸಾಧನೆಗೆ ಮೆಟ್ಟಿಲಾಗಿ ಬಳಕೆಯಾಗಿ ಬಿಡುತ್ತಾಳೆ. ಆದರೆ ಈನಿಯಾಸ್‌ ಆಕೆಯ ಜತೆಗಿನ ತನ್ನ ಸಂಬಂಧವನ್ನು ಆ ಅರ್ಥದಲ್ಲಿ ಪರಿಗಣಿಸಲು ಹೋಗುವುದಿಲ್ಲ ಪಿತೃಲೋಕದಲ್ಲಿ ಭೇಟಿಯಾದ ದಿದೊ ಜತೆ ಮಾತನಾಡಿ ಎದೆ ಭಾರವನ್ನು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ; ಕಾಲ ಅಥವಾ ಇತಿಹಾಸ ಅದಕ್ಕೆ ಅವಕಾಶ ಕೊಡುವುದಿಲ್ಲ.

ಯಾವ ಮನುಷ್ಯ ದೌರ್ಬಲ್ಯವನ್ನು ‘ಈನೀಡ್‌’ ಕಲ್ಪಂ ಎಂದು ಗುರುತಿಸುತ್ತದೆಯೋ ಅದು ಕಾಳಿದಾಸನ ಕೃತಿಗಳಲ್ಲಿ ಪ್ರಮತ್ತತೆ ಅಥವಾ ಅದಕ್ಕೆ ಹತ್ತಿರವಾದ ಪ್ರಮಾದವಾಗಿ ಬಿಡುತ್ತದೆ. ಬದುಕಿನ ಭಾಗವಾದ ಆ ದೌರ್ಬಲ್ಯಗಳನ್ನು ವಾಲ್ಮೀಕಿಯೂ ಗುರುತಿಸುತ್ತಾನೆ. ಸೀತೆಯ ಮೇಲಿನ ಮೋಹ ರಾವಣನ ಬದುಕಿನ ಕಲ್ಪಂ : ಸುಗ್ರೀವನ ಜತೆ ಅನುಚಿತವಾಗಿ ನಡೆದುಕೊಂಡುದೇ ವಾಲಿಯ ಬದುಕಿನ ಇತಿಮಿತಿಯನ್ನು ನಿರ್ಧರಿಸಿಬಿಡುತ್ತದೆ. ಆ ತಿಳುವಳಿಕೆ ಮೂಡುವ ವೇಳೆಗೆ ವಾಲಿಯ ಬದುಕು ಅವನ ಕೈಯಲ್ಲಿ ಇರುವುದಿಲ್ಲ : ರಾಮನ ಬಾಣದ ಹಂಗು ಮತ್ತು ಅಧೀನಕ್ಕೆ ಒಳಪಟ್ಟಿರುತ್ತದೆ. ಆ ಎಲ್ಲ ಅಲ್ಲಟ ಪಲ್ಲಟಗಳನ್ನು ‘ಕಾಲಸ್ಯ ನಿಶ್ಚಯಃ’ ಎಂಬ ಮಾತಿನಲ್ಲಿ ಗ್ರಹಿಸಲು ಹನುಮಂತ ಪ್ರಯತ್ನಿಸುತ್ತಾನೆ.

ರಾಮ, ಸೀತೆ, ಲಕ್ಷ್ಮಣರ ವ್ಯಕ್ತಿತ್ವ ಮತ್ತು ನಡವಳಿಕೆ ಪರಿಶೋಧಿಸುವಾಗ ಸುಕ್ಷ್ಮವಾಗುವ ವಾಲ್ಮೀಕಿ ಕೆಲ ವಿಚಾರಗಳಲ್ಲಿ ವರ್ಜಿಲ್‌ ಪರಂಪರೆಗೆ ಹತ್ತರ ಬರುತ್ತಾನಾದರೂ, ತಾವು ನಡೆಸಿದ ಕೃತ್ಯ ಅಕೃತ್ಯಗಳನ್ನು ಆಯಾ ಪಾತ್ರಗಳು ಮರುಪರಿಶೀಲಿಸಿಕೊಳ್ಳದಿರುವ ವಿಚಾರದಲ್ಲಿ ಹೋಮರ್‌ ಪರಂಪರೆಗೆ ಹತ್ತಿರವಾಗಿಯೇ ಉಳಿಯುತ್ತಾನೆ. ಹೋಮರನ ಯಾವ ನಾಯಕರೂ ತಮ್ಮ ಕ್ರಿಯೆ ಮತ್ತು ಚಟುವಟಿಕೆಗಳನ್ನು ಮರುಪರಿಶೀಲಿಸಿಕೊಳ್ಳದಿರುವ ವಿಚಾರದಲ್ಲಿ ಹೋಮರ್‌ ಪರಂಪರೆಗೆ ಹತ್ತಿರವಾಗಿಯೇ ಉಳಿಯುತ್ತಾನೆ. ಹೋಮರನ ಯಾವ ನಾಯಕರೂ ತಮ್ಮ ಕ್ರಿಯೆ ಮತ್ತು ಚಟುವಟಿಕೆಗಳನ್ನು ಮರುಪರಿಶೀಲನೆ ಅಥವಾ ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳಲು ಹೋಗುವುದಿಲ್ಲ. ಆ ಯುಗದ ಪ್ರಮುಖ ಲಕ್ಷಣವೇ ಅದು. ರಾಮಾಯಣದಲ್ಲೂ ಅದೇ ತರಹದ ಗುಣಲಕ್ಷಣಗಳನ್ನು ಕಾಣಬಹುದಾಗಿದೆ. ಆತ್ಮ ವಿಮರ್ಶೆಗೆ ಹತ್ತಿರವಾದ ಮರುಪರಿಶೀಲನಾ ಪ್ರವೃತ್ತಿಯ ಸೂಚನೆಗಳು ಕಾಣಿಸಿಕೊಳ್ಳುವುದೇ ವರ್ಜಿಲನಲ್ಲಿ. ಆ ತರಹದ ಆತ್ಮನಿರೀಕ್ಷೆಯ ಪ್ರವೃತ್ತಿಗಳು ಹೋಮರನ ಕಾಲದಲ್ಲಿ ಕಾಣಬರುವುದಿಲ್ಲವಾದಂತೆ, ಮೂಲ ರಾಮಾಯಣ ಕಾಲದಲ್ಲೂ ಸಿಗುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಅಗ್ನಿಪರೀಕ್ಷೆಗೆ ಗುರಿಪಡಿಸುವ ಮೂಲಕ ಸೀತೆಯ ಚಾರಿತ್ರ್ಯದ ಋಜುತ್ವವನ್ನು ಖಚಿತಪಡಿಸಿಕೊಳ್ಳಲು ರಾಮ ಪ್ರಯತ್ನಿಸುತ್ತಾನಾದರೂ, ಅದು ಅವರಿಬ್ಬರ ಸಂಬಂಧದ ಮರುಪರಿಶೀಲನೆಯಾಗುವುದಿಲ್ಲ. ಆ ಮೂಲಕ ತಮ್ಮ ನಡವಳಿಕೆಯನ್ನು ಮರುವಿಮರ್ಶಿಸಿಕೊಳ್ಳಲು ರಾಮ ಅಥವಾ ಸೀತೆ ಹೋಗುವುದಿಲ್ಲ.

ಹಾಗಾದರೆ ಮಹಾಭಾರತದಲ್ಲಿ ಕಾಣಲಾಗುವ ಮರುಪರಿಶೀಲನಾ ಪ್ರವೃತ್ತಿ, ಪಾಪ – ಪುಣ್ಯಗಳ ತುಲನೆ ಮತ್ತು ಸ್ವರ್ಗನರಕಗಳ ಭಯ ಹಾಗೂ ಭೀತಿ ಬಂದುದಾದರೂ ಎಲ್ಲಿಂದ? ಅದು ನಂತದ ಬೆಳವಣಿಗೆಯಾಗಿರಬಹುದೇ? ಮೂಲ ರಾಮಾಯಣದಲ್ಲಿ ಮತ್ತು ‘ಈನೀಡ್‌’ನಲ್ಲೂ ಆ ತರಹದ ಲಕ್ಷಣಗಳನ್ನು ಕಾಣಲಾಗುವುದಿಲ್ಲ ಎಂದ ಮೇಲೆ, ಅಪರಭಾರತ ರಾಮಾಯಣಕ್ಕಿಂತ ಬಹಳ ಇತ್ತೀಚಿನ ರಚನೆ ಎಂದಾಗುತ್ತದೆ ಅಲ್ಲವೇ? ಅರ್ಜುನನ ಕ್ಲೆಬ್ಯತೆ ಹೋಗಲಾಡಿಸಲು ಕೃಷ್ಣ ಉಪದೇಶಿಸುವ ಭಗವದ್ಗೀತೆ ಅಪರಭಾರತಕ್ಕೂ ಹಿಂದಿನ ರಚನೆಯಾಗುತ್ತದೆ.

ಮೂಲಭಾರತ ಕಾಲ ನಿಷ್ಕರ್ಷೆ ಕುರಿತ ವಿಚಾರಗಳಿಗೆ ಹೋಗುವ ಮೊದಲು ಮೂಲ ರಾಮಾಯಣ ಕುರಿತಂತೆ ಒಂದು ನಿರ್ಧಾರಕ್ಕೆ ಬಂದಿರುವ ಬ್ರಾಂಕಿನ್‌ಟನ್‌ ಅವರ ಮಾತುಗಳು ಈ ರೀತಿ ಇವೆ :

……………that first stage can hardly be earlier than about the sixth century BC. On balance, the fifth century seems the most plausible date for its original composition, with some expansion and modification in the course of oral transmission during the next century also falling within the first stage.ಪುಟ ೩೦೯ – ೩೧೦

ಮೂಲ ಮಹಾಭಾರತದ ಕಾಲ ಕುರಿತಂತೆ ಜೆ.ಎ.ಬಿ.ವಾನ್‌ ಬುತೆನೆನ್‌ ತಮ್ಮ ‘ಆದಿಪರ್ವ’ದ ಇಂಗ್ಲಿಷ್‌ ಅನುವಾದಕ್ಕೆ ಬರೆದ ಮುನ್ನುಡಿಯಲ್ಲಿ ದಾಖಲಿಸುವ ಕೆಲ ಮಾತುಗಳು ವಸ್ತುಸ್ಥಿತಿಗೆ ಅತ್ಯಂತ ಹತ್ತಿರವಾಗಿರುವಂತೆ ತೋರುತ್ತದೆ.

That the main story of The Mahābhārata was a conscious composition is, to me, undeniable, and one poet, or a small group of them, must have been responsible for it. The original story is now irrecoverable, but it is likely to have been substantially shorter than the shortest recorded summary. It is from this modest beginning and from a bard whose name has since been forgotten, that The Mahābhārata began its incredible career.

When was this old Bhārata lay first composed? Certainly after the very early Vedic period, for the area where the conflict is localized lies well east of the Punjāb which is the home of The Rgveda. On the other hand, knowledge o the countries farther east of the Mesopotamia of the rivers Ganges and Yamunā is only sketchy. Whatever one might believe of the historicity of the conflict, a struggle for control over the upper Ganges and the Yamunā was obviously credible to the audience and is likely to have been part of the movement east of the āryans. The eastern countries of Kosala, which in The Rāmāyana is the center of the world, and Magadha where but Buddha preached and where the first Indian “empire” was to rise in the third century B.C., do not play an important role in the great epic. On the basis of the meager data, it seems more likely than not that the origins of The Mahābhārata fall some where in the eighth or ninth century. There is a general agreement that the oldest portions preserved are hardly older than 400 B.C. The oldest testimony of the existence of Bhārata text is barely before this period, in two of the ritual manual and in the grammar of Pānini.

While this terminus a quo is reasonable and generally agreed upon, it is far more difficult to set a date ante quem;

Views on this depend on what one accepts as the “real” Mahābhārata. In particular, the didactic portions of what has been called the pseudo – epic were added to very late, perhaps as late as the fourth century A.D.

…It makes sense when we look upon the text not so much as one opus but as a library of opera.[6]

ಅಪರಭಾರತ ಮತ್ತು ಅದರ ಹಿಂದಿನ ಭಾಗವಾಗಿ ಕಾಣುವ ಭಗವದ್ಗೀತೆ ರಾಮಾಯಣದ ನಂತರ ಕ್ರಿ. ಪೂ. ೧ ರಿಂದ ಕ್ರಿ. ಶ. ೪ನೇ ಶತಮಾನದ ನಡುವೆ ರಚಿತವಾಗಿ ಮಹಾಭಾರತಕ್ಕೆ ಸೇರಿಕೊಂಡಿರಬಹುದು. ಮರುಪರಿಶೀಲನಾ ಪ್ರವೃತ್ತಿಯ ಉತ್ತರಕಾಂಡ ಕೂಡ ಅದೇ ಕಾಲ ಮತ್ತು ಮನಃಸ್ಥಿತಿಯ ರಚನೆಯಾಗಿದ್ದಿರಬಹುದು. ಸೋದರರ ಮತ್ತು ಬಂಧುಗಳ ವಧೆಯನ್ನು ಮಾಡುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿ ತೊಡಗಿದ ಅರ್ಜುನನ ಕ್ಲೈಬ್ಯತೆಯನ್ನು ಹೋಗಲಾಡಿಸಿ ಆತನಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಲು ಶ್ರೀಕೃಷ್ಣ ಭಗವದ್ಗೀತೆ ಬೋಧಿಸಿದರೆ, ಮಹಾಭಾರತ ಯುದ್ಧಾನಂತರ ಪಾಂಡವರು ಅದರಲ್ಲೂ ವಿಶೇಷವಾಗಿ ಧರ್ಮರಾಯ ಅದೇ ಕ್ಲಬ್ಯತೆಗೆ ಮರಳುತ್ತಾನೆ. ಆ ಮರುಳುವಿಕೆಯ ಚಿತ್ರಣವೇ ಅಪರಭಾರತ.

ಧರ್ಮರಾಯನಿಗೆ ಸ್ವರ್ಗದ ದರ್ಶನ ಆಗುತ್ತದೆ. ತನ್ನನ್ನು ಹಿಂಬಾಲಿಸಿದ ಶುನಕ ಸಹಿತ ತನ್ನ ಎಲ್ಲ ಸಹೋದರರು ಮತ್ತು ದ್ರೌಪದಿಗೂ ಆ ಸ್ವರ್ಗಕ್ಕೆ ಅವಕಾಶ ದೊರಕುವಂತೆ ಧರ್ಮರಾಯ ಮಾಡುವ ಇತ್ಯಾತ್ಮಕ ಬೆಳವಣಿಗೆ ಬಿಟ್ಟರೆ, ಅಪರಭಾರತದ ತುಂಬ ತುಂಬಿರುವುದು ನಿರಾಶೆ ಮತ್ತು ಕ್ಲೈಬ್ಯತೆ ಮಾತ್ರ. ಅಲ್ಲಿ ಬರುವ ಎಲ್ಲರೂ ಸರ್ವನಾಶ ಆಗುತ್ತಾರೆ. ಕೌರವರ ಸರ್ವನಾಶ ಮೊದಲು ನಡೆದರೆ, ಯಾದವರ ಸರ್ವನಾಶ ಕೊನೆಯಲ್ಲಿ ಆಗುತ್ತದೆ. ಪಾಂಡವರು ಸ್ವರ್ಗಾಭಿಮುಖವಾಗಿ ಸಾಗುವುದು, ಆ ಬೆಳವಣಿಗೆಯ ಮತ್ತೊಂದು ಮುಖವಾಗಿ ಬಿಡುವ ಅಪಾಯವೇ ಹೆಚ್ಚು. ಆ ಪ್ರಮಾಣದಲ್ಲಿ ನಿರಾಶೆ, ಜಿಗುಪ್ಸೆ ಮತ್ತು ಕ್ಲೈಬ್ಯತೆಯನ್ನು ಚಿತ್ರಿಸುವ ಮಹಾಭಾರತ – ಪರಭಾರತವನ್ನು ಆ ಮಹಾಭಾರತದ ಭಾಗ ಎಂದು ಪರಿಗಣಿಸಿ ನೋಡಿದಾಗ – ರಾಷ್ಟ್ರೀಯ ಎಪಿಕ್‌ ಆಗಲು ಸಾಧ್ಯವೇ?

ಕ್ಲೈಬ್ಯತೆ ಮತ್ತು ಪಾಪಭೀತಿ ಪಾಂಡವರನ್ನು ಆ ಪ್ರಮಾಣದಲ್ಲಿ ಕಾಡತೊಡಗಿದ್ದಾದರೂ ಏಕೆ? ಜ್ಞಾತಿಗಳನ್ನು ವಧಿಸಿದ್ದೇ ಆ ತರಹದ ಬೆಳವಣಿಗೆಗೆ ಕಾರಣವಾಗಿದ್ದಿರಬಹುದೆ? ಸ್ವರ್ಗಸ್ಥರಾದ ತಮ್ಮ ಸಮಸ್ತ ಬಂಧುಗಳಿಗೆ ತರ್ಪಣ ನೀಡಿದ ಮೇಲೆ ‘ಶಾಂತಿಪರ್ವ’ದಲ್ಲಿ ಧರ್ಮರಾಯ ಆಡುವ ಮಾತು ಈ ರೀತಿ ಇದೆ :

 “ಅರ್ಜುನ! ನಾವು ಯಾದವರ ರಾಜ್ಯದಲ್ಲಿ ಭಿಕ್ಷೆ ಎತ್ತಿಕೊಂಡೇ ಜೀವಿಸುತ್ತಿದ್ದರೆ ಹೀಗೆ ಒಬ್ಬ ಗಂಡುಪ್ರಾಣಿಯಿಲ್ಲದಂತೆ ಜ್ಞಾತಿಗಳನ್ನೆಲ್ಲ ಕೊಂದು ದುರ್ಗತಿ ಪಡೆಯುತ್ತಿರಲಿಲ್ಲ. ನಮ್ಮನ್ನು ನಾವು ಕೊಂದುಕೊಂಡು ಏನು ಧರ್ಮಫಲ ಸಾಧಿಸಿದ ಹಾಗಾಯಿತು? ಈ ಕ್ಷತ್ರಿಯ ಕರ್ಮ ಹಾಳಾಯಿತು! ಅರಣ್ಯವಾಸಿಗಳ ಶಮ ದಮ ಸತ್ಯ ಶೌಚ ಅಹಿಂಸೆ ವಿರೋಧ ಇವೇ ಮೇಲು. ನಾವು ಲೋಭ ಮೋಹಗಳಿಂದಲೂ ದಂಭ ದುರಭಿಮಾನಗಳಿಂದಲೂ ಈ ದುರವಸ್ಥೆಗಿಳಿದು ರಾಜ್ಯವಾಳುವ ಕ್ಲೇಶವನ್ನು ಕಟ್ಟಿಕೊಂಡೆವು. ಮಾಂಸದ ತುಂಡಿಗಾಗಿ ನಾಯಿಗಳು ಕಚ್ಚಾಡುವಂತೆ ಕಚ್ಚಾಡಿದೆವು. ಆದರೆ ಗೆದ್ದ ನಾಯಿಗೆ ಮಾಂಸದ ಸುಖವಿಲ್ಲದಂತಾಗಿದೆ. ಲೋಕವನ್ನೆಲ್ಲಾ ನಾಶಗೊಳಿಸಿದವರು ಎಂದು ನಮ್ಮ ಮೇಲೆ ಅಪಖ್ಯಾತಿ. ಇವರು ವಂಶವನ್ನು ನಿರ್ವಂಶ ಮಾಡಿದರು ಎಂದು ಧೃತರಾಷ್ಟ್ರನ ಭಾವನೆ. ನಾವು ಶತ್ರುಗಳನ್ನು ಕೊಂದದ್ದರಿಂದ ನಮ್ಮ ಕೋಪವೇನೋ ಇಳಿಯಿತು; ಆದರೆ ಪಾಪವನ್ನು ಗಳಿಸಿಕೊಂಡೆವು. ಎಲ್ಲವನ್ನೂ ತ್ಯಾಗಮಾಡಿ ಹೋದವನು ಮತ್ತೆ ಪಾಪಮಾಡದೆ ಜನನ ಮರಣಗಳನ್ನು ನೀಗಿ, ಸದ್ಗತಿ ಪಡೆಯುತ್ತಾನೆಂದು ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ ಈ ದೇಶಕೋಶ ಸುಖಸೌಖ್ಯಗಳನ್ನೆಲ್ಲಾ ತ್ಯಾಗಮಾಡಿ ನಾನು ಎಲ್ಲಿಯಾದರೂ ಹೋಗಿ ನಿಶ್ಚಿಂತೆಯಿಂದಲೂ ನಿರ್ಮಮತೆಯಿಂದಲೂ ಇದ್ದು ಬಿಡುತ್ತೇನೆ. ನೀವು ನಿಷ್ಕಂಟಕವಾಗಿರುವ ಈ ರಾಜ್ಯವನ್ನು ಕ್ಷೇಮದಿಂದ ಆಳಿಕೊಂಡಿರಿ!”[7] ವಚನ ಭಾರತ, ಪುಟ ೩೧೩

“ಅದರಲ್ಲೂ ಭಿಕ್ಷೆ ಎತ್ತಿಕೊಂಡೇ ಜೀವಿಸುತ್ತಿದ್ದರೆ ಜ್ಞಾತಿಗಳನ್ನೆಲ್ಲಾ ಕೊಂದು ದುರ್ಗತಿ ಪಡೆಯುತ್ತಿರಲ್ಲಿಲ್ಲ ….. ನಮ್ಮನ್ನು ನಾವು ಕೊಂದುಕೊಂಡು ಏನು ಧರ್ಮಫಲ ಸಾಧಿಸಿದ ಹಾಗಾಯಿತು?” ಎಂಬ ಮಾತು ಗಮನಾರ್ಹ.

‘ಅನುಶಾಸನಪರ್ವ’ದಲ್ಲಿ ಶರಶಯನನಾಗಿರುವ ಭೀಷ್ಮನ ಎದುರು ನಿಂತು: “ಕೈಯಾರ ದುಷ್ಕೃತ್ಯ ಮಾಡಿ ಶಾಂತಿಯನ್ನು ಬಯಸಿದರೆ ಹೇಗೆ ಬಂದೀತು?” ಎಂಬ ಮಾತು. ‘ಆಶ್ವಮೇಧಿಕ ಪರ್ವ’ದಲ್ಲಿನ : “ಏಳು ಯುಧಿಷ್ಠಿರ! ಮುಂದಿನ ಕೆಲಸಗಳನ್ನು ನೋಡು! ಕ್ಷತ್ರೀಯ ಧರ್ಮದಿಂದ ಗೆದ್ದ ರಾಜ್ಯವನ್ನು ಆಳು” ಎಂಬ ಧೃತರಾಷ್ಟ್ರನ ಮಾತು[8] ವ್ಯಂಗ್ಯವಾಗಿ ಬಿಡುವುದೇ ಹೆಚ್ಚು. ಅಪರಭಾರತದ ಉದ್ದಕ್ಕೂ ಕಾಡುವುದು ಜ್ಞಾತಿಗಳ ವಧೆ ತಂದ ಪಾಪಕರ್ಮದ ಭೀತಿ ಮತ್ತು ಸ್ವರ್ಗನರಕಗಳ ಭಯ.

ಆ ಪಾಪಕರ್ಮದ ಭೀತಿಯನ್ನು ಹೋಗಲಾಡಿಸಿಕೊಳ್ಳಲು ವ್ಯಾಸರ ಸಲಹೆಯಂತೆ ಅಶ್ವಮೇಧ ಯಾಗ ಮಾಡಲು ಧರ್ಮರಾಯ ಮುಂದಾಗುತ್ತಾನೆ. ಆಗ ಮಾತ್ರ “ನಾನು ಅದಕ್ಕೆ ಬೇಕಾದ ಧನವನ್ನೆಲ್ಲಿ ತರಲಿ? ಈ ಹುಡುಗರನ್ನು ಹಣ ಸಂಪಾದಿಸಿಕೊಂಡು ಬನ್ನಿ ಎಂದು ಹೇಳುವುಕ್ಕೆ ನನಗೆ ಸ್ವಲ್ಪವೂ ಉತ್ಸಾಹವಿಲ್ಲ” ಎಂಬುದಾಗಿ ಆತ ಕೊರಗುವ ಪರಸ್ಥಿತಿ ವ್ಯಕ್ತವಾಗುತ್ತದೆಯಾದರೂ, ಅಲ್ಲಿ ಕಾಣುವುದು ಸಹ ನಿರುತ್ಸಾಹ ಮತ್ತು ಅಭದ್ರತೆಯ ಭೀತಿ. ಪಾಂಡವರ ಕುಲ ನಾಶವಾದ ನಂತರ ಉಳಿಯುವುದು ಒಬ್ಬ ಮಾತ್ರ. ಆತನೇ ಪರಿಕ್ಷಿತ ಮಹಾರಾಜ.[9]

 

[1]ಆ ಅರ್ಥದಲ್ಲೂ, ಕೂಡ ರಾಮಾಯಣ ಮಹಾಭಾರತದ ನಂತರದ ರಚನೆ

[2]ಮಹಾಭಾರತವನ್ನು ಇಡಿಯಾಗಿ ಇಂಗ್ಲಿಷಿಗೆ ಅನುವಾದಿಸುವ ಕೆಲಸ ಸುಮಾರಿಗಾಗಲೇ ಕಲ್ಕತ್ತದಲ್ಲಿ ಆರಂಭಗೊಂಡಿತ್ತು. ಪಿ. ಸಿ. ರಾಯ್‌ ಕೈಗೊಂಡ ಆ ಕೆಲಸವನ್ನು ಕೇಸರಿ ಮೋಹನ್‌ ಗಂಗೂಲಿ ೧೮೬೯ರ ಸುಮಾರಿಗೆ ಪೂರ್ಣಗೊಳಿಸಿದರು. ಹನ್ನೊಂದು ಸಂಪುಟಗಳಲ್ಲಿ ಪ್ರಕಟವಾಗಿರುವ ಆ ಇಂಗ್ಲಿಷ್‌ ಅನುವಾದಕ್ಕೆ ಸಿಗಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಯುರೋಪಿನಲ್ಲಿ ಹೋಗಲಿ, ಭಾರತದಲ್ಲೂ ಸಿಗಲಿಲ್ಲ. ಹಾಗಾಗಿ ಆ ಅನುವಾದ ಕಾರ್ಯ ಓದುಗರ ಗಮನಕ್ಕೆ ಹೆಚ್ಚಾಗಿ ಬರಲಿಲ್ಲ ಎಂಬ ಮಾತಿದೆ. ಆ ಎಲ್ಲ ಸಂಪುಟಗಳನ್ನು ಕಲ್ಕತ್ತದ ಓರಿಯಂಟಲ್‌ ಪಬ್ಲಿಷಿಂಗ್‌ ಕಂಪನಿ ನಿಯಮ ೧೯೫೨-೬೨ರ ನಡುವೆ ಮರು ಮುದ್ರಿಸಿರುತ್ತಾರೆ. ಮಹಾಭಾರತವನ್ನು ಇಂಗ್ಲಿಷಿಗೆ ಅನುವಾದಿಸುವ ಪ್ರಯತ್ನವನ್ನು ಮನ್ಮಥ ಎನ್‌. ದತ್‌, ಪಿ. ಲಾಲ್‌ ಮೊದಲಾದವರು ಸಹ ಮಾಡಿರುತ್ತಾರೆ.

[3]ಕಿಷ್ಕಿಂಧಾಕಾಂಡ, ೨೧ನೇ ಸರ್ಗ, ೧೦ನೇ ಶ್ಲೋಕದ ಕೊನೆಯ ಮಾತು.

[4]ಸುಗ್ರೀವ ದೋಷೇಣ ನ ಮಾಂ ಗಂತುಮರ್ಹಸಿ ಕಿಲ್ಪಿಷಾತ್‌ |
ಕೃಷ್ಣಮಾಣಂ ಭವಿಷ್ಯೇಣ ಬುದ್ಧಿಮೋಹೇನ ಮಾಂ ಬಲಾತ್‌ || ೩||
ಯುಗಪದ್ವಿಹಿತಂ ತಾತ ನ ಮನ್ಯೇ ಸುಖಮಾವಯೋಃ ||೪||
ಪ್ರತಿಪದ್ಯ ತ್ವಮದ್ವೈವ ರಾಜ್ಯಮೇಷಾಂ ವನೌಕಸಾಮ್‌ |
ಮಾನಮಪ್ಯದೈವ ಗಚ್ಛಂತಂ ವಿದ್ಧಿ ವೃವಸ್ವತಕ್ಷಯಮ್‌ ||೫||  ಅಲ್ಲಿಯೇ ಸರ್ಗ ೨೨

[5]ತ್ವಮಾತ್ತ ಬಾಣಾಸನಬಾಣಪಾಣಿರ್ಮಹಾಬಲಃ ಸಂಹನನೋಪಪನ್ನಃ|
ಮನುಷ್ಯದೇಹಾಭ್ಯುದಯಂ ವಿಹಾಯ ದಿವ್ಯೇನ ದೇಹಾಭ್ಯುದಯೇನ ಯುಕ್ತಃ || ೩೨||
ಯೋನೈಕಬಾಣೇನ ಹತಃ ಪ್ರಿಯೋ ಮೇ ತೇನೈವ ಮಾಂ ತ್ವಂ ಜಹಿ ಸಾಯಕೇನ |
ಹತಾ ಗಮಿಷ್ಯಾಮಿ ಸಮೀಪಮಸ್ಯ ನ ಮಾಮೃತೇ ರಾಮ ರಮೇತ ವಾಲೀ ||೩೩||   ಸರ್ಗ ೨೪

[6]Mahabharatha, The Book of Beginning, The University Chicago Press, ೧೯೭೩, ಪುಟ XXIV-XXV

[7]ಯದ್‌ ಭೈಕ್ಷಮಾಚರಿಷ್ಯಾಮ ವೃಷ್ಣ್ಯಂಧಕಪುರೇ ವಯಮ್‌ |
ಜ್ಞಾತೀನ್‌ ನಿಷ್ಪುರುಷಾನ್‌ಕೃತ್ವಾ ನೇಮಾಂ ಪ್ರಾಪ್ಸಾಮ ದುರ್ಗತಿಮ್‌
ಅಮಿತ್ರಾ ನಃಸ್ಸಮೃದ್ಧಾರ್ಥಾ ವೃತ್ತಾಂತಾಃ ಕುರುವಃ ಕಿಲ |
ಆತ್ಮಾನಮಾತ್ಮನಾ ಹತ್ವಾ ಕಿಂ ಧರ್ಮ ಫಲಮಾಪ್ನುಮಃ ||
ಧಿಗಸ್ತು ಕ್ಷಾತ್ರಮಾಚಾರಂ ಧಿಗಸ್ತು ಬಲಮೌರಸಮ್‌ |
ಧಿಗಸ್ತ್ವಮರ್ಪಂ ಯೇನೇಮಾಮಾಪದಂ ಗಮಿತಾ ವಯಮ್‌ ||
ಸಾಧು ಕ್ಷಮಾ ದಮಃ ಶೌಚಮವೈರೋಧ್ಯಮತ್ಸರಃ |
ಅಹಿಂಸಾ ಸತ್ಯವಚನಂ ನಿತ್ಯಾನಿ ವನಚಾರಿನಾಮ್‌ ||
ವಯಂ ತು ಲೋಭಾನ್ಮೋಹಾಚ್ಚ ಸ್ತಂಭಂ ಮಾನಂ ಚ ಸಂಶ್ರೀತಾಃ |
ಇಮಾಮವಸ್ಥಾಮಾಪನ್ನಾ ರಾಜ್ಯಕ್ಲೇಶಬುಭುಕ್ಷಯಾ ||
ತ್ರೈಲೋಕ್ಯಸ್ಯಾಪಿ ರಾಜ್ಯೇನ ನಾಸ್ಮಾನ್‌ ಕಶ್ಚಿತ್‌ ಪ್ರಹರ್ಷಯೇತ್‌ |
ಬಾಂಧವಾನ್‌ ನಿಹತಾನ್‌ ದೃಷ್ಟ್ವಾ ಪೃಥಿವ್ಯಾಮಾಮಿಷ್ಠೆಷಿಭಿಃ ||
ತೇ ವಯಂ ಪೃಥಿವೀಯೇತೋರವಧ್ಯಾನ್‌ ಪೃಥಿವೀಸಮಾನ್‌ |
ಸಂಪರಿತ್ಯಜ್ಯ ಜೀವಾಮೋ ಹೀನಾರ್ಥಾ ಹತಬಾಂಧವಾಃ |
ಆಮಿಷೇ ಗೃಧ್ಯಮಾನಾನಾಮಶುಶಾಂ ನಃ ಶುನಾವಿವ |
ಆಮಿಷಂ ಜೈವ ನೋ ನಷ್ಟಮ್‌ ಆಮಿಷಸ್ಯ ಚ ಭೋಜಿನಃ ||   ಶಾಂತಿಪರ್ವ, ಅಧ್ಯಾಯ ೭, ೩-೧೦

[8]ಉತ್ತಿಷ್ಠ  ನರಶಾರ್ದೂಲ ಕುರು ಕಾರ್ಯಮನಂತರಮ್‌ |
ಕ್ಷತ್ರಧರ್ಮೇಣ ಕೌರವ್ಯ ಜಿತೇಯಮವಸ್ತ್ವಯಾ
ತಾಂ ಭುಂಕ್ಷ್ವ ಭ್ರಾತೃಭಿಸ್ಸಾರ್ಧಂ ಸುಹೃದ್ಭಿಶ್ಚಜನೇಶ್ವರ ಅಧ್ಯಾಯ ೧, ೭-೮

[9]ಆ ಸಂದರ್ಭ ಕೃಷ್ಣಶಾಸ್ತ್ರೀಗಳ ‘ವಚನಭಾರತ’ದಲ್ಲಿ ಈ ರೀತಿ ಚಿತ್ರಣಗೊಳ್ಳುತ್ತದೆ:

….ಕುಂತಿ, ದ್ರೌಪದಿ, ಸುಭದ್ರೆ, ಎಲ್ಲರೂ ಕೃಷ್ಣನಲ್ಲಿ ಮೊರೆಯಿಟ್ಟರು. “ಅವನು ಸತ್ತು ಹುಟ್ಟಿದರೆ ನಾನು ಬದುಕಿಸುತ್ತೇನೆ-ಎಂದು ಹೇಳಿದ್ದೆಯಂತಲ್ಲಾ ಕೃಷ್ಣ! ಇಗೋ ಮಗು ಸತ್ತು ಹುಟ್ಟಿದೆ; ನೋಡು ಬಾ ಕೃಷ್ಣ; ಅದನ್ನು ಬದುಕಿಸಿದರೆ ನಾವೆಲ್ಲರೂ ಬದುಕಿಕೊಳ್ಳುತ್ತೇವೆ! ನಮ್ಮೆಲ್ಲರ ಪ್ರಾಣವೂ ಈಗ ಆ ಮಗುವಿನಲ್ಲಿದೆ!” ಎಂದು ಅವನನ್ನು ಬೇಡಿಕೊಂಡರು. ಆಗ ಕೃಷ್ಣನು ಹೊಲೆಮನೆಗೆ ಹೋಗಿ ನಿಶ್ಚೇತನವಾಗಿ ಬಿದ್ದಿದ್ದ ಮಗುವನ್ನು ನೋಡಿ… ಹೆಜ್ಜೆಯಿಂದ ತಲೆಯವರೆಗೆ ಅದರ ಮೇಲೆ ಕೈಯಾಡಿಸಿದನು. ಕೂಡಲೆ ಮಗುವು ಉಸಿರಾಡುವುದಕ್ಕೆ ಮೊದಲು ಮಾಡಿತು. ಕುರುಕುವೆಲ್ಲಾ ಪರಿಕ್ಷೀಣವಾದ ಮೇಲೆ ಹುಟ್ಟಿದ ಮಗುವಾದ್ದರಿಂದ ಅದಕ್ಕೆ ‘ಪರಿಕ್ಷಿತ್ತು’ ಎಂದು ಹೆಸರಾಯಿತು. ಪುಟ ೩೪೫

ಪರಿಕ್ಷೀಣೇ ಕುಲೇ ಯಸ್ಮಾಜ್ಜಾತೋsಯಮಭಿಮನ್ಯುಜಃ |
ಪರೀಕ್ಷಿದಿತಿ ನಾಮಾಸ್ಯ ಭವತ್ವಿತ್ಯಬ್ರವೀತ್‌ ತದಾ ||  ಅಶ್ವಮೇಧಿಕಪರ್ವ, ಅಧ್ಯಾಯ ೭೩, ೧೨