ವಸ್ತುವಿನ ಆಯ್ಕೆ, ನಿರ್ವಹಣೆ, ಪ್ರತಿಭೆ, ಕವಿತಾ ಸಾಮರ್ಥ್ಯ, ಕಥನ ಕಲೆ, ಪ್ರಾಮಾಣಿಕತೆ, ಬದುಕು ಮತ್ತು ಕಾಲಕ್ಕೆ ಸ್ಪಂದಿಸುವ ರೀತಿ ಇತ್ಯಾದಿ ಯಾವುದೇ ದೃಷ್ಟಿಯಿಂದ ನೋಡಿದರೂ, ಮೂಲ ಮಹಾಭಾರತ ಮತ್ತು ಮೂಲ ರಾಮಾಯಣಗಳು ಹೋಮರ್‌ – ವರ್ಜಿಲರ ಕೃತಿಗಳಿಗಿಂತಲೂ ಹೆಚ್ಚು ಮಹತ್ವಾಕಾಂಕ್ಷೆಯಿಂದ ಪ್ರೇರಿತವಾದವು. ಅಂಥ ಕೃತಿಗಳನ್ನು ಅಕ್ಷರ ಸಂಸ್ಕೃತಿ ಕಾಣಿಸಿಕೊಳ್ಳುವುದಕ್ಕೆ ಹಲವಾರು ಶತಮಾನ ಮೊದಲೇ ಸೃಷ್ಟಿಸಿದ ಭಾರತೀಯ ಮನಸ್ಸು ಬರುಬರುತ್ತಾ ಮುಂದೆ, ಅದೇ ವ್ಯಾಸ – ವಾಲ್ಮೀಕಿಯರ ಸಹಜ ಬಂಧುಗಳಾದ ‘ಇಲಿಯಡ್‌’, ‘ಒಡಿಸ್ಸಿ’ ಮತ್ತು ‘ಇನೀಡ್‌’ ನೀಡಿದ ಯುರೋಪ್‌ ಮೂಲದ ಪ್ರಭಾವವನ್ನು ಬಹಳ ನಮ್ರತೆಯಿಂದ ಸ್ವೀಕರಿಸಬೇಕಾಗಿ ಬಂದುದು, ಅಳಿಸಲಾಗದ ಕಣ್ಣೆದುರಿನ ಐತಿಹಾಸಿಕ ಸತ್ಯ. ಮತ್ತೊಂದು ಸಂಸ್ಕೃತಿಯ ಚೆಲುವಿನ ಹೊಸತನ ಮತ್ತು ಸೆಳೆತದ ಅರ್ಥಪೂರ್ಣತೆಗೆ ಮಾರುಹೋಗಿ ಪ್ರಭಾವಿತರಾಗುವುದು ಬೇರೆ, ಆಕ್ರಮಣಕಾರಕ ಪ್ರವೃತ್ತಿಯ ಪ್ರಭಾವಗಳನ್ನು ಧನ್ಯತೆಯಿಂದ ಸ್ವಾಗತಿಸಿ’ ಸ್ವೀಕರಿಸಿರುವುದು ಬೇರೆ.

ವೈವಿಧ್ಯತೆ ಕಾರಣ ರೂಪುಗೊಂಡಿರಬಹುದಾದ ಯಾವುದೇ ಸಾಂಸ್ಕೃತಿಕ ವಿಭಿನ್ನತೆಗಳು ಅವು ಸಹಜವಾದುವೇ ಆಗಿದ್ದಲ್ಲಿ, ಕಾಲಕಾಲಕ್ಕೆ ಎರಗಬಹುದಾದ ಅನ್ಯಪ್ರಭಾವಗಳ ಒತ್ತಡವನ್ನು ಅರಗಿಸಿಕೊಂಡು ತಮ್ಮದೇ ಆದ ಸ್ವಂತಿಕೆಯ ಸದೃಢ ಪರಂಪರೆಯ ನಿರ್ಮಾಣ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುವುದಾಗಬೇಕು; ಅದು ವಿನಾ, ಸಾರಾಸಗಟಾಗಿ ಸ್ವೀಕರಿಸಬೇಕಾದ ಮನಃಸ್ಥಿತಿ ಯಾರಿಗೂ ಬರುವುದಾಗಬಾರದು. ಆ ರೀತಿಯ ಬೆಳವಣಿಗೆಗೆ ಕಾರಣವಾದ ಅಂಶಗಳು ಮತ್ತು ಅವುಗಳ ಹಿನ್ನೆಲೆ ಗ್ರಹಿಸಲು ಈವರೆಗೆ ನಡೆಸಲಾದ ಪ್ರಯತ್ನದ ಸಂದರ್ಭದಲ್ಲಿ, ಈ ಮೊದಲೇ ಕೇಳಲಾದ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಏಕೆಂದರೆ, ಅದೇ ಪ್ರಶ್ನೆಗಳು ಸಂದರ್ಭಕ್ಕೆ ತಕ್ಕಂತೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವ ಸಾಮರ್ಥ್ಯ ಪಡೆದಿರುವುದು. ಅವುಗಳ ಮೂಲವನ್ನು ಅನ್ವೇಷಿಸುವಾಗ ಪ್ರಮುಖವಾಗಿ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಎಪಿಕ್‌ಗಳು, ತದನಂತರದ ಬೆಳವಣಿಗೆ ಮತ್ತು ಅವುಗಳಿಗೆ ಪ್ರತಿಕ್ರಿಯೆಯಾಗಿ ಇಲ್ಲವೇ ತಮ್ಮದೇ ಆದ ರೀತಿಯಲ್ಲಿ ಮುಂದಿನ ತಲೆಮಾರಿನ ಜನರು ಕಂಡುಕೊಂಡ ಅನ್ವೇಷಣೆ ಮತ್ತು ಅಭಿವ್ಯಕ್ತಿ ವಿಧಾನ, ಸಂವಹನ ಕುಶಲತೆ ಮತ್ತು ಮಾತುಗಾರಿಕೆಯ ನೈಪುಣ್ಯ.

ಹಾಗಾದರೆ ಭಾರತದ ಎಡವುವಿಕೆ ಮಹಾಭಾರತ – ರಾಮಾಯಣ ಅಥವಾ ನಂತರದ ಕಾಲದಿಂದಲೇ ಆರಂಭವಾಗಿರಬಹುದೇ? ವ್ಯಾಸ – ವಾಲ್ಮೀಕಿಯರು ಹಾಕಿದ ಪರಂಪರೆ ಭಾರತದಲ್ಲಿ ಮುಂದುವರಿಯಲಿಲ್ಲ ಎಂದರೆ ಏನು? ಅದು ನಿಜವಿದ್ದಲ್ಲಿ ಅದಕ್ಕೆ ಅವರು ಮಾತ್ರ ಕಾರಣರೇ? ಅಥವಾ ನಂತರ ಬಂದ ಮುಂದಿನ ತಲೆಮಾರುಗಳ ಜನತೆಯೇ? ಅದು ಸಾಮೂಹಿಕವಾದುದೆ ಅಥವಾ ಕೇವಲ ವ್ಯಕ್ತಿಮೂಲವಾಗಿ ಬಂದಿರುವುದು ಸಾಧ್ಯವೆ? ವ್ಯಕ್ತಿಮೂಲದ್ದಿರಬಹುದಾದ ಪ್ರಮಾದಗಳು ಸಾಮೂಹಿಕವಾಗಿ ಮತ್ತು ಸಾಮೂಹಿಕವಾದ ಪ್ರಮಾದಗಳು ವ್ಯಕ್ತಿಮೂಲದ್ದಾಗಿ ಪರಿವರ್ತನೆಗೊಳ್ಳುವುದು ಎಲ್ಲಿ ಮತ್ತು ಯಾವ ಹಂತದಲ್ಲಿ?

ಇಲಿಯಡ್‌ – ಒಡಿಸ್ಸಿಗಳನ್ನು ರಚಿಸಿದಾತ ಒಬ್ಬನೇ ಅಥವಾ ಇಬ್ಬರೇ ಎಂಬ ಬಗ್ಗೆ ಬಹಳ ಚರ್ಚೆ ನಡೆದಿರುವಂತೆಯೇ, ಕುರುಕ್ಷೇತ್ರ ಯುದ್ಧಾನಂತರದ ಪರ್ವಗಳನ್ನು ರಚಿಸಿ ಹಾಡಿದ ಕವಿ ಅಥವಾ ಕವಿಗಳ ಬಗ್ಗೆ ಸಹ ದೊಡ್ಡ ವಿವಾದವಿದೆ. ಆದರೆ ಕುರುಕ್ಷೇತ್ರ ಯುದ್ಧಾನಂತರದ ಭಾಗಗಳು ಮೂಲ ಮಹಾಭಾರತವನ್ನು ಪೂರ್ವದ ರಚನೆಗಳಲ್ಲ ಎಂಬುದು ಬಲ್ಲ ವಿಚಾರ. ಅದೇ ರೀತಿ ಉತ್ತರಕಾಂಡ ಮತ್ತು ಬಾಲಕಾಂಡಗಳು ಕೂಡ ವಾಲ್ಮೀಕಿ ರಾಮಾಯಣದ ಒಂದು ಭಾಗವಲ್ಲ ಎಂಬ ತೀರ್ಮಾನ ಈಗ ನಿರ್ಧರಿತ ವಿಚಾರ. ರಾವಣನ ಸಂಹಾರದ ನಂತರ ನಡೆಯುವ ಅಗ್ನಿಪರೀಕ್ಷೆಯೊಂದಿಗೆ ರಾಮ – ಸೀತೆಯರು ಮುಂದೆ ಒಟ್ಟಾಗಿ ಬದುಕುವ ಸೂಚನೆ ನೀಡುತ್ತ ರಾಮಾಯಣ ಕೊನೆಗೊಳ್ಳುವಂತೆಯೇ, ಕುರುಕ್ಷೇತ್ರ ಯುದ್ಧಾನಂತರ ಪಾಂಡವರಿಗೆ ಅಧಿಕಾರ ಹಸ್ತಾಂತರಗೊಳ್ಳುವ ಸೂಚನೆ ದೊರಕುವುದರೊಂದಿಗೆ ಮಹಾಭಾರತ ಮುಕ್ತಾಯಗೊಳ್ಳುತ್ತದೆ. ಆ ಭಾಗವನ್ನು ಮೊದಲು ಜಯ ಎಂದು ಕರೆಯಲಾಗುತ್ತಿತ್ತು. ಜಯ ಭಾಗವೇ ಭಾರತ ಮತ್ತು ಅದನ್ನೇ ಸಮಸ್ತ ಭಾರತ ಎಂದು ಕರೆಯಲಾಗುತ್ತಿತ್ತು ಎಂಬ ನಿಲುವನ್ನು ಪಂಪ ಮೊದಲಾದವರು ಸಹ ಬೆಂಬಲಿಸುತ್ತಾರೆ.

ಮೂಲ ಮಹಾಭಾರತ ಮತ್ತು ಮೂಲ ರಾಮಾಯಣದಲ್ಲಿ ಕಾಣಲಾಗದ ಏನನ್ನು ಕಾಣುವ ಉದ್ದೇಶದಿಂದ ನಂತರದ ತಲೆಮಾರಿನ ಜನ ಮತ್ತು ಕವಿಗಳು ಕುರುಕ್ಷೇತ್ರ ಯುದ್ಧಾನಂತರದ ಪರ್ವಗಳು ಹಾಗೂ ಉತ್ತರಕಾಂಡ ರಚಿಸಿದರು ಎಂಬುದೊಂದು ಪ್ರಶ್ನೆಯಾದರೆ, ಮೂಲದಲ್ಲಿ ಏಕವ್ಯಕ್ತಿ ರಚನೆಯಾಗಿರುವ ಆ ಎಪಿಕ್‌ಗಳನ್ನು ಯಾವ ಉದ್ದೇಶದಿಂದ ಸಮೂಹ ಸೃಷ್ಟಿಯಾಗಿ ಪರಿವರ್ತಿಸಿದರು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಹಾಗಾಗಿ ಮಹಾಭಾರತ ಮತ್ತು ರಾಮಾಯಣ ಎಪಿಕ್‌ಗಳನ್ನು ನೋಡುವಾಗ ಎರಡು ದೃಷ್ಟಿಕೋನದಿಂದ ಪ್ರವೇಶಿಸಬೇಕಾಗುತ್ತದೆ. ಬಹಳ ಪ್ರಯಾಸದಿಂದ ಗುರುತಿಸಬಹುದಾದ ಮೂಲ ಮಹಾಭರತ ಮತ್ತು ಮೂಲ ರಾಮಾಯಣಗಳು ಒಂದು ಕಡೆಯಾದರೆ, ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಂಡ ಮಹಾಭಾರತ ಮತ್ತು ರಾಮಾಯಣಗಳು ಮತ್ತೊಂದು ಕಡೆ ಬರುತ್ತವೆ. ಭಾರತದ ಮನಸ್ಸನ್ನು ಅದರ ಸಮೂಹ ರೂಪದಲ್ಲಿ ಕಾಣಬೇಕಾದರೆ ಸಮೂಹ ಮಹಾಭಾರತ – ರಾಮಾಯಣಗಳನ್ನು ಅರಿಯದೆ ಬೇರೆ ದಾರಿ ಇಲ್ಲ. ಆ ಮಹಾಭಾರತ – ರಾಮಾಯಣಗಳನ್ನು ಅರಿಯದೆ ಬೇರೆ ದಾರಿ ಇಲ್ಲ. ಆ ಮಹಾಭಾರತ – ರಾಮಾಯಣಗಳನ್ನು ಸಮೂಹ ಸೃಷ್ಟಿಯಾಗಿ ಪರಿವರ್ತಿಸಲು ಭಾರತೀಯ ಮನಸ್ಸು ಸಾಮೂಹಿಕವಾಗಿ ನಡೆಸಿದಷ್ಟು ಪ್ರಯತ್ನಗಳನ್ನು ಮತ್ತಾವುದೇ ಮಹತ್ವದ ಕೆಲಸ ಕಾರ್ಯಗಳಿಗೆ ಮೀಸಲಿಟ್ಟ ಉದಾಹರಣೆ ಇಲ್ಲ. “ತಿಣಿಕಿದನು ಪಣಿರಾಯ [ಮಹಾಭಾರತ] ರಾಮಾಯಣದ ಕವಿಗಳ ಭಾರದಲಿ” ಎಂಬ ಕುಮಾರವ್ಯಾಸನ ನಿಟ್ಟುಸಿರು ಬೆರೆತ ಉದ್ಗಾರವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಮಹಾಭಾರತ ಮತ್ತು ರಾಮಾಯಣಗಳನ್ನು ಸಮೂಹ ಸೃಷ್ಟಿಯಾಗಿ “ಪರಿವರ್ತಿಸುವುದರ ಮೂಲಕ ಭಾರತೀಯರು ತಮ್ಮ ಸಾಮೂಹಿಕ ಮನಸ್ಸಿನ ಅಭಿವ್ಯಕ್ತಿಯನ್ನು ಕಾಣಲು ಪ್ರಯತ್ನಪಟ್ಟಂತೆ ತೋರುತ್ತದೆ.”[1]

ಕುರುಕ್ಷೇತ್ರ ಯುದ್ಧಾನಂತರದ ಭಾಗ ಮತ್ತು ರಾಮಾಯಣ ಮುಗಿದನಂತರದ ಉತ್ತರ ರಾಮಾಯಣದ ಭಾಗಗಳನ್ನು ವಸ್ತುವನ್ನಾಗಿ ಆರಿಸಿಕೊಂಡು ಎಪಿಕ್‌ ಬರೆಯಲು ಮುಂದಾದ ಕವಿ ಅಥವಾ ಕವಿಗಳು, ಅದರಲ್ಲಿ ಯಶಸ್ಸು ಗಳಿಸಿದ್ದಾರೆಯೇ ಎಂಬುದು ಒಂದು ಗುಂಪಿನ ಪ್ರಶ್ನೆಯಾದರೆ, ಅದೇ ವಸ್ತುವನ್ನು ಆಧರಿಸಿ ಕಾವ್ಯ ಬರೆಯಲು ಏಕೆ ಮುಂದಾದರು ಎಂಬುದು ಮತ್ತೊಂದು ಗುಂಪಿನ ಪ್ರಶ್ನೆ. ಮತ್ತು ಆ ರೀತಿ ಬರೆಯಲು ಮುಂದಾದ ಜನ, ಆ ಕೃತಿಗಳನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸುವ ಧೈರ್ಯ ಮಾಡದೆ ವ್ಯಾಸ ಮತ್ತು ವಾಲ್ಮೀಕಿ ಹೆಸರಿನಲ್ಲಿ ಏಕೆ ಬರೆದರು ಎಂಬ ಪ್ರಶ್ನೆಗಳು ಅಷ್ಟೇ ಮುಖ್ಯ. ಮೇಲುನೋಟಕ್ಕೆ ಆ ಮೂರು ಗುಂಪಿನ ಪ್ರಶ್ನೆಗಳು ಬೇರೆ ಬೇರೆ ಎಂಬಂತೆ ತೋರಿಬಂದರೂ ಪರಸ್ಪರ ಸಂಬಂಧಿಯಾದವು. ಕೊನೆಯದಾಗಿ, ಬಹಳ ಮುಖ್ಯವಾದ ಪ್ರಶ್ನೆ ಎಂದರೆ, ಆ ರೀತಿ ತಾವು ಬರೆದ ಕಾವ್ಯಗಳನ್ನು ಲಿಖಿತ ಕವಿಗಳು ಬೇರೊಬ್ಬರ ಹೆಸರಿನಲ್ಲಿ ಪ್ರಚುರಕ್ಕೆ ತರುವುದು ವಿನಯ ಮತ್ತು ಸುಸಂಸ್ಕೃತಿಯ ಲಕ್ಷಣವಾಗುತ್ತದೆಯೇ? ಅಂಥ ಬೆಳವಣಿಗೆಗಳು ಭಾರತೀಯ ಮನೋಧರ್ಮ ಮತ್ತು ಸುಸಂಸ್ಕೃತಿಯ ದ್ಯೋತಕವೆ? ಆ ಮನಃಸ್ಥಿತಿ ಭಾರತೀಯರಿಗೆ ಏತಕ್ಕಾದರೂ ಬಂತು? ಸುಸಂಸ್ಕೃತ ಮನಸ್ಸಿನ ಸುಂದರ ಅಭಿವ್ಯಕ್ತಿಯ ಪ್ರತೀಕವಾದ ಅನಾಮಿಕ ಬರವಣಿಗೆಗಳು ಮತ್ತೊಬ್ಬರ ಹೆಸರಿನಲ್ಲಿ ಪ್ರಚುರಕ್ಕೆ ಬಂದಾಗ, ನಿಜವಾಗಿಯೂ ಸುಸಂಸ್ಕೃತವಾಗಿ ಉಳಿಯಲು ಸಾಧ್ಯವೆ?

ಟ್ರಾಯ್‌ ಮತ್ತು ಟ್ರೋಜನ್ನರನ್ನು ನಿರ್ನಾಮ ಮಾಡಲು ಮರದ ಕುದುರೆಯ ತಂತ್ರ ರೂಪಿಸುವ ಒದಿಸ್ಯೂಸ್‌, ಆನಂತರದ ಸಹಜ ಬದುಕಿಗೆ ಮರಳಲು ಪಡುವ ಕಷ್ಟ ಕೋಟಲೆ, ಅಲೆದಾಟ, ಬವಣೆ, ಯಾತನೆ, ಸುಖ – ಸಂತೋಷ ಮತ್ತು ಸಾಹಸಗಳ ಚಿತ್ರಣ ‘ಇಲಿಯಡ್‌’ ಮುಂದಿನ ಭಾಗವಾದ ‘ಒಡಿಸ್ಸಿ’ಯಲ್ಲಿ ದೊರಕುತ್ತದೆ. ಈ ಲೋಕದ ಕವಿಯಾದ ಹೋಮರನಿಗೆ ಈ ಲೋಕದ ಆ ಎಲ್ಲವೂ ಮುಖ್ಯ. ಎಷ್ಟೇ ನಿರಾಶೆ, ದುಃಖದುಮ್ಮಾನ ಮತ್ತು ಜಂಜಾಟಗಳಿಂದ ತುಂಬಿದ್ದರೂ ಈ ಬದುಕನ್ನು ಬದುಕದೇ ಅನ್ಯ ಮಾರ್ಗವಿಲ್ಲ ಎಂಬ ಧೋರಣೆಯ ಮುಂದಿನ ಸೃಷ್ಟಿ ‘ಒಡಿಸ್ಸಿ’ ಹಾಗಾಗಿ ‘ಇಲಿಯಡ್‌’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಒಡಿಸ್ಸಿ’.

ಆ ಎರಡರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಕೂಡ ದೊಡ್ಡ ಚರ್ಚೆ ನಡೆದಿದೆ. ‘ಇಲಿಯಡ್‌’ ಕೃತಿಯೇ ಅತ್ಯುತ್ತಮ ಎಂಬ ಗ್ರೀಕರ ಪರಂಪರಾಗತ ನಂಬಿಕೆ ಸರಿ ಎಂಬುದು ವಿದ್ವಾಂಸರ ಸರ್ವಸಮ್ಮತ ಅಭಿಪ್ರಾಯ. ಅಲೆಗ್ಸಾಂಡರ್‌ ತನ್ನ ಪೌರುಷಯಾತ್ರೆಯ ಕಾಲದಲ್ಲಿ ತನ್ನೊಂದಿಗೆ ತೆಗೆದುಕೊಂಡು ಹೋದುದು ‘ಇಲಿಯಡ್‌’ ಕೃತಿಯನ್ನು, ‘ಒಡಿಸ್ಸಿ’ಯನ್ನಲ್ಲ; ‘ಇಲಿಯಡ್‌’ ಟ್ರಾಜಿಡಿಯಾದರೆ, ಸುಖದಲ್ಲಿ ಅಂತ್ಯಗೊಳ್ಳುವ ‘ಒಡಿಸ್ಸಿ’ ನವಿರೇಳಿಸುವ ಸಾಹಸ ಮತ್ತು ಉಲ್ಲಾಸಗೊಳಿಸುವ ರೋಮ್ಯಾಂಟಿಕ್‌ ಅಂಶಗಳಿಂದ ತುಂಬಿದೆ. ಹಾಗಾಗಿ ‘ಒಡಿಸ್ಸಿ’ಗೆ ಸಾಹಿತ್ಯಲೋಕದಲ್ಲಿ ‘ಇಲಿಯಡ್‌’ಗಿರುವ ಮಹತ್ವದ ಸ್ಥಾನವಿಲ್ಲ. ಆದರೂ ‘ಒಡಿಸ್ಸಿ’ಗಿರುವ ಪ್ರಾಮುಖ್ಯ ಮತ್ತು ಅದನ್ನು ಎಪಿಕ್‌ ಆಗಿಸುವಲ್ಲಿ ಹೋಮರ್‌ ಸಾಧಿಸಿರುವ ಸಾಧನೆಯ ಮಹತ್ವವನ್ನು ಯಾರೂ ನಿರಾಕರಿಸಿಲ್ಲ. ಅವೆರಡನ್ನೂ ಪರಸ್ಪರ ಹೋಲಿಸಿದಾಗ ‘ಒಡಿಸ್ಸಿ’ಗಿಂತ ‘ಇಲಿಯಡ್‌’ ಹೆಚ್ಚು ಮಹತ್ವಪೂರ್ಣ ಕೃತಿ ಮತ್ತು ಅದುವೆ ನಿಜವಾದ ಹೋಮರ್‌ ಶೈಲಿಯ ಎಪಿಕ್‌. ‘ಒಡಿಸ್ಸಿ’ಯನ್ನು ಬಹಳ ಸುಲಭವಾಗಿ ಆಧುನಿಕ ರೋಮ್ಯಾಂಟಿಕ್‌ ಕಾದಂಬರಿಯಾಗಿ ಪರಿವರ್ತನೆಗೆ ನಿಲುಕುವುದಿಲ್ಲ. ‘ಇಲಿಯಡ್‌’ಗಿರುವ ಶ್ರೀಮಂತ ಗಾಂಭೀರ್ಯ, ಟ್ರಾಜಿಡಿಯ ಮಹತ್ವ ಮತ್ತು ತುರ್ತು, ವಸ್ತು ಮತ್ತು ಸನ್ನಿವೇಶದ ಪರಿಣಾಮದಿಂದ ಬಂದುದು.

‘ಒಡಿಸ್ಸಿ’ ಆರಂಭವಾಗುವುದೇ ತಂದೆಯನ್ನು ಹುಡುಕಿಕೊಂಡು ಹೊರಡುವ ಆತನ ಮಗ ತೆಲೆಮಖೋಸ್‌ನ ಪರಿಸ್ಥಿತಿಯ ಚಿತ್ರಣದ ಮೂಲಕ. ಬದುಕಿರುವಾಗಲೇ ದಂತಕತೆಯಾಗಿ ಹೋದ ಒದಿಸ್ಯೂಸ್‌, ಪರಂಪರೆಯೊಂದರೆ ನಿರ್ಮಾತೃ ಮತ್ತು ಅದರ ಸಮರ್ಥ ಪ್ರತಿನಿಧಿ; ಬಹಳ ಎತ್ತರದ ಸಾಧನೆ ಮಾಡಿದ ತಂದೆಯ ಎತ್ತರಕ್ಕೆ ಏರಬೇಕಾದ ಅಥವಾ ಆ ಮಟ್ಟ ಕಾಪಾಡಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕುವ ಮಕ್ಕಳ ಸಮಸ್ಯೆ ಮತ್ತು ಒತ್ತಡ, ಆ ಪರಂಪರೆ ಮುಂದುವರಿಸಿಕೊಂಡು ಹೋಗುವ ಸಂಕಟಕ್ಕೆ ಸಿಲುಕುವ ಮುಂದಿನ ತಲೆಮಾರು ಮತ್ತು ಸಾತತ್ಯತೆಯ ನೇರ ಪ್ರತಿನಿಧಿ ತೆಲೆಮಖೋಸ್‌. ಹುಟ್ಟಿದಂದಿನಿಂದಲೂ ಕಾಣದ ತಂದೆಯ ಮುಖವನ್ನು ಹುಡುಕಿಕೊಂಡು ಹೊರಡುವ ಆತ ಆ ಸಂದರ್ಭದಲ್ಲಿ ಆಡುವ ಮಾತುಗಳು:

‘Friend, let me put it in the plainest way.
My mother says I am his osn; I know not
surely. Who has known his own engendering?’
ಪುಟ ೨೦

ಏಕೆಂದರೆ, ಪ್ರತಿಯೊಬ್ಬ ತಂದೆಯೂ ಮಗನಾಗಿ ತೆಲೆಮಖೋಸ್‌ ಅನುಭವಿಸಿದ ಒತ್ತಡಕ್ಕೆ ಸಿಲುಕಿದವರೇ ಆಗಿರುತ್ತಾರೆ. ತಾಯಿ ಹೇಳಿದ ವಿವರ ಅನುಸರಿಸಿ ಹುಟ್ಟಿದಂದಿನಿಂದಲೂ ಕಾಣದ ತಂದೆಯ ಮುಖವನ್ನು ಅನ್ವೇಷಿಸಲು ಹೊರಟಿರುತ್ತಾನೆ; ಆ ಪರಂಪರೆ ಎಂಬುದು ಆಸ್ತಿ ತರಹ ತಂದೆಯಿಂದ ವರ್ಗಾವಣೆಯಾಗಿ ಬರುವಂತದ್ದಲ್ಲ; ಪ್ರತಿಯೊಂದು ತಲೆಮಾರಿನ ಜನರೂ ತಮ್ಮ ಬದುಕಿನ ಮತ್ತು ಮನಸ್ಸಿನ ಸಿದ್ಧತೆಯ ಹಿನ್ನೆಲೆಯಲ್ಲಿ ಅರ್ಜಿಸಿಕೊಳ್ಳಬೇಕಾದುದು. ಸೃಜನಶೀಲ ಮನಸ್ಸುಗಳಿಗೆ ಹೆಚ್ಚಾಗಿ ತಟ್ಟುವ ಆ ಸಮಸ್ಯೆ ಗುರುತಿಸ ಎಪಿಕ್‌ ಬರೆದ ಮೊದಲಿಗೆ ಹೋಮರ್‌; ಆಧ್ಯಾತ್ಮ ಇತ್ಯಾದಿ ಯಾವುದೇ ಕ್ಷೇತ್ರಕ್ಕೂ ಅನ್ವಯಿಸಬಹುದಾದ ಆ ಸತ್ಯವನ್ನು ತನ್ನ ಎಪಿಕ್‌ನ ವಸ್ತುವಿನ ಭಾಗವಾಗಿ ಶೋಧಿಸಿದವನು.

ತಂದೆಯನ್ನು ಹುಡುಕಿಕೊಂಡು ಹೊರಡುವ ತೆಲೆಮಖೋಸ್‌ನ ಸಾಹಸದೊಂದಿಗೆ ಆರಂಭವಾಗುವ ಎಪಿಕ್‌ ಒದಿಸ್ಯೂಸ್‌ನ ಎಲ್ಲ ಸಾಹಸ ಯಾತ್ರೆ ಮತ್ತು ಅಲೆದಾಟದ ಚಿತ್ರಣ ನೀಡುತ್ತಲೇ, ದಾಂಡಿಗರನ್ನು ಮಟ್ಟ ಹಾಕಿದ ನಂತರ ತಂದೆ – ತಾಯಿ ಮತ್ತು ಮಗ ಒಂದಾಗುವ ಸುಖ ಸನ್ನಿವೇಶದೊಂದಿಗೆ ಕೊನೆಗೊಳ್ಳುತ್ತದೆ. ‘ಇಲಿಯಡ್‌’ನಲ್ಲಿ ದೊರಕುವ ಬದುಕು ಮತ್ತು ಚಿತ್ರಣಕ್ಕೆ ತೀರ ತದ್ವಿರುದ್ಧ ಮುಖವನ್ನು “ಒಡಿಸ್ಸಿ” ನೀಡುತ್ತದೆ. ‘ಇಲಿಯಡ್‌’ನಲ್ಲಿ ಹೆಲೆನಳನ್ನು ಸೃಷ್ಟಿಸುವ ಅದೇ ಹೋಮರ್‌, ‘ಒಡಿಸ್ಸಿ’ಯಲ್ಲಿ ಪೆನಲೋಪೆಯ ವ್ಯಕ್ತಿತ್ವವನ್ನು ಸೃಷ್ಟಿಸುತ್ತಾನೆ. ತನ್ನನ್ನು ವರಿಸಲು ಸಿದ್ಧರಿರುವ ಒಂದು ದಂಡನ್ನೇ ಹಲವಾರು ತಂತ್ರ – ಕುತಂತ್ರಗಳಿಂದ ಎದುರಿಸುತ್ತ ೨೦ ವರ್ಷಗಳಿಂದಲೂ ದೂರ ಉಳಿದ ಗಂಡ ಒದಿಸ್ಯೂಸ್‌ನಿಗಾಗಿ ಕಾದಿರುವ ಪೆನಲೋಪೆ. ಟ್ರಾಯ್‌ ಯುದ್ಧಾನಂತರ ಮರಳಿ ಬಂದು ತನ್ನ ಮೊದಲನೇ ಗಂಡ ಮೆನಲೊಸ್‌ ಜತೆ ನೆಮ್ಮದಿ ಬದುಕು ಸಾಗಿಸುವ ಹೆಲೆನ್‌ ಚಿತ್ರಣ ಸಿಗುವುದು ಸಹ ‘ಒಡಿಸ್ಸಿ’ಯಲ್ಲೇ:

……………………….. Helen came
out of her scented chamber, a moving grace
like Artemis, straight as a shaft of gold.
– ಪುಟ ೬೩

ತನ್ನ ಒಲವಿಗಾಗಿ ಕಾದಿದ್ದ ಎಲ್ಲರನ್ನೂ ಸೋಲಿಸಿದನಂತರ ವೇಷ ಮರೆಸಿಕೊಂಡು ಬಂದಿದ್ದ ಒದಿಸ್ಯೂಸ್‌ನನ್ನು ಸ್ವೀಕರಿಸುವಾಗ ಪೆನಲೋಪೆ ಆಡುವ ಮಾತುಗಳು :

‘Do not rage at me, Odysseus!
No one ever matched your caution! Think
what difficulty the gods gave: they denied us
life together in our prime and flowering years,
kept us from crossing into age together.
Forgive me, don’t be angry. I could not
welcome you with love on sight! I armed myself
long ago against the frauds of men,
impostors who might come – and all those many
whose underhanded ways bring evil on!
– ಪುಟ ೪೦೪

ಮತ್ತು ಅದಕ್ಕೆ ಪ್ರತಿಯಾಗಿ ಒದಿಸ್ಯೂಸ್‌ ತೋರಿಸುವ ಪ್ರತಕ್ರಿಯೆ:

Now from his breast into his eyes the ache
of longing mounted, and he wept at last,
his dear wife, clear and faithful, in his arms,
longed for
as the sunwarmed earth is longed for by a swimmer
spent in rough water where his ship went down
under Poseidon’s blows, gale winds and tons of sea.
ಅಲ್ಲಿಯೆ

ಕುಯುಕ್ತಿಗೆ ಮತ್ತೊಂದು ಹೆಸರಾದ ಒದಿಸ್ಯೂಸ್‌, ಯಾವುದೇ ತರಹದ ಕಠಿಣ ಪರಿಸ್ಥಿತಿಯನ್ನು ಎದುರಿಸಿಯೂ ತನ್ನತನ ಮತ್ತು ಹಿಡಿದ ಗುರಿ ಬಿಟ್ಟುಕೊಡದ ಕಠಿಣ ವ್ಯಕ್ತಿತ್ವಕ್ಕೆ ನಿದರ್ಶನ; ಆದರೆ ತನಗಾಗಿ ಕಾದಿದ್ದ ಹೆಂಡತಿಯನ್ನು ಕಂಡ ಕೂಡಲೇ ಮೃದುವಾಗುತ್ತಾನೆ. ಅವನ ಗಟ್ಟಿತನ, ಉಕ್ಕಿನಂತಹ ಮನಸ್ಸು ಮಾಡಿದ ಕಬ್ಬಿಣದ ದೇಹ ಮತ್ತು ಎಂದೂ ಕಳೆದುಕೊಳ್ಳದ ಉತ್ಸಾಹ ಕುರಿತು ಅವನ ಸಹಚರರೇ ಆಡುವ ಮಾತುಗಳು ಅವನ ವ್ಯಕ್ತಿತ್ವದ ಮತ್ತೊಂದು ಮುಖದ ಚಿತ್ರಣ ನೀಡುತ್ತವೆ:

Are you flesh and blood, Odysseus, to endure
more than a man can? Do you never tire?
God, look at you, iron is what you’re made of
Here we all are, half – dead with weariness,
ಪುಟ ೨೦೯

…………………………..,
You! You chameleon!
Bottomless bag of tricks!
ಪುಟ ೨೨೭

ಊಸರವಳ್ಳಿ ಎಂದು ಕರೆಯುವ ಆತನ ಸ್ನೇಹಿತರೆ ಅವನಿಗೆ ಪ್ರಕೃತಿದತ್ತವಾಗಿ ಬಂದ ಕೆಲವೊಂದು ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗುರಿ ತಲುಪಲು ಯಾವುದೇ ತರಹದ ತಂತ್ರ ಬಳಸಲು ಸಿದ್ಧನಿರುವ ಅತ್ಯಂತ ಬುದ್ಧಿವಂತನಾದ ಬೆದಿಸ್ಯೂಸ್‌, ದಾರಿಯಲ್ಲಿ ಅಲೆದು ಬರುವಾಗ ಎದುರಾದ ಅನೇಕ ಹೆಂಗಸರು ನೀಡಿದ ಸಂಗಸುಖ ಅನುಭವಿಸಿಯೂ ಮುಂದೆ ಸೇರಬೇಕಾದ ಹೆಂಡತಿ, ಮಕ್ಕಳು ಮತ್ತು ಕುಟುಂಬವನ್ನು ಮರೆಯದ ವ್ಯಕ್ತಿ; ತಾನು ಹಾಕಿಕೊಂಡ ಗುರಿ ಮತ್ತು ಉದ್ದೇಶದಿಂದ ಒಂದು ಗಳಿಗೆಯೂ ವಿಚಲಿತನಾಗುವುದಿಲ್ಲ. ಅಮರತ್ವ ನಿರಾಕರಿಸಿ ಈ ಲೋಕದ ಬದುಕಿನ ಕಷ್ಟಸುಖಗಳಿಗೆ ಮರಳುವ ಒದಿಸ್ಯೂಸ್‌, ಬದುಕಿನ ಬಗೆಗಿನ ತಣಿಯದ ಕುತೂಹಲ, ಮುನ್ನುಗ್ಗುವ ಸಾಹಸ ಪ್ರವೃತ್ತಿ, ಸಾಹಸಕ್ಕಾಗಿ ಮಾಡದೆ ಅರ್ಥಪೂರ್ಣ ಬದುಕಿಗಾಗಿ ಆಧ್ಯಾತ್ಮಿಕ ಹಂಬಲವನ್ನು ಈ ಲೌಕಿಕ ಬದುಕಿನ ಚೌಕಟ್ಟಿನಲ್ಲಿ ಕಾಣದೇ ಅನ್ಯದಾರಿಯಲ್ಲ ಎಂಬ ವಾಸ್ತವವಾದಿ; ಯುರೋಪ್‌ ಮೂಲದ ಕೆಲ ಪ್ರಧಾನ ಗುಣಲಕ್ಷಣಗಳು, ಮನೋಧರ್ಮ ಮತ್ತು ಮನೋಭಾವವನ್ನು ಅದರ ಪ್ರಾತಿನಿಧಿಕ ಪುರಾಣಾಕೃತಿ ರೂಪದಲ್ಲಿ ಪ್ರತಿನಿಧಿಸುವ ಅಸಲಿ ವ್ಯಕ್ತಿ. ಈನಿಯಾಸ್‌ ಎಲ್ಲೂ ಕುತಂತ್ರ ಆಧಾರಿತ ತಂತ್ರ ಅನುಸರಿಸಲು ಹೋಗುವುದಿಲ್ಲ. ಅಂಥ ವರ್ಜಿಲನನ್ನು ತಮ್ಮ ಸಂಸ್ಕೃತಿಯ ಪಿತ ಎಂದು ಯುರೋಪ್‌ ಮೂಲದ ಜನರು ಪರಿಗಣಿಸಲು ಕಾರಣವಾದ ಹಿನ್ನೆಲೆ ಇಲ್ಲಿರುವಂತೆ ತೋರುತ್ತದೆ. ಅವರಿಗೆ ಆದರ್ಶವಾಗಿ ಕಾಣಿಸಿದವನು ಈನಿಯಾಸ್‌ನಂತಹ ವ್ಯಕ್ತಿತ್ವ ನೀಡಿದ ವರ್ಜಿಲನೇ ವಿನಾ, ಯುರೋಪ್‌ ಮೂಲದ ಜನರ ಪ್ರಧಾನ ಗುಣಲಕ್ಷಣ ಮತ್ತು ಮನೋಭಾವದ ಪುರಾಣಾಕೃತಿಯಾದ ಒದಿಸ್ಯೂಸ್‌ನನ್ನು ಅದರ ಕಟು ವಾಸ್ತವ ರೂಪದಲ್ಲಿ ಸೃಷ್ಟಿಸಿದ ಹೋಮರನಲ್ಲ.[2]

ಅಮರತ್ವದ ಆಮಿಷ ತೋರುವ ದೇವತೆಯ ಪ್ರಲೋಭನೆ ನಿರಾಕರಿಸಿ ಯಾವುದನ್ನು ಭಾರತೀಯರು ಕ್ಷಣಿಕ ಮತ್ತು ಮರ್ತ್ಯ ಎಂದು ಪರಿಗಣಿಸಿದರೋ ಆ ಲೌಕಿಕ ಬದುಕಿಗೆ ಮರಳುವ ಒದಿಸ್ಯೂಸ್‌ನ ಚಿತ್ರಣ ನೀಡಿದ ಹೋಮರನಿಗೆ ಆಧ್ಯಾತ್ಮಿಕ ಹಂಬಲ ಇರಲಿಲ್ಲ ಎಂದು ಅರ್ಥವಲ್ಲ. ಲೌಕಿಕ ಬದುಕಿನ ಲೋಕಭಾಷೆಯಲ್ಲಿ ಆ ಆಧ್ಯಾತ್ಮಿಕ ಎಂಬುದನ್ನು ಸಾಧ್ಯವಾಗಿಸಿಕೊಳ್ಳುವ ಹಂಬಲದ ಕವಿಯಾದ ಹೋಮರನಿಗೆ, ಬದುಕನ್ನು ಅರ್ಥಪೂರ್ಣ ಮತ್ತು ಸುಂದರವಾಗಿ ಬದುಕುವುದೇ ಆಧ್ಯಾತ್ಮವಾಗಿ ಕಂಡಿರಬಹುದು. ಭಾರತದ ಜನ ಕಲ್ಲು, ಮರಳು, ಹರಿವ ನದಿ, ಗಿಡಮರ ಎಲ್ಲದರಲ್ಲೂ ದೇವರನ್ನು ಕಂಡಂತೆ, ತಾವು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಪ್ರತಿಯೊಂದು ಕೆಲಸದಲ್ಲೂ ದೈವತ್ವಕ್ಕೆ ಹತ್ತಿರವಾದ ಆಧ್ಯಾತ್ಮವನ್ನು ಅವರು ಕಂಡುಕೊಂಡುದರ ಮುನ್ಸೂಚನೆಯೇ ಹೋಮರ್‌ ಆಗಿದ್ದಿರಬಹುದು.

 

[1]ಆದರೆ ರಾಮಾಯಣವು ಮಹಾಭಾರತದ ಅರ್ಥ, ವ್ಯಾಪ್ತಿ ಮತ್ತು ಪ್ರಮಾಣದಲ್ಲಿ ಸಮೂಹ ಸೃಷ್ಟಿಯಲ್ಲ.

However, if the Uttarakannada was extant in substantially its present from by the fourth century, and in all probability by the third, it is scarcely feasible to assign the Balakanda, which is in general earlier, to the end of the fourth century or later. As Kirfel seeks to do on the basis of the Sagara episode (1.37-43). It may well be that certain passages, including this one were added to the Balakanda long after the main period of its composition, but external allusions and internal evidence alike suggest that the bulk of it was in existence by the third century AD.

ಜತೆಗೆ, ಮೂಲ ರಾಮಾಯಣಕ್ಕೆ ಕಾಲಾಂತರದಲ್ಲಿ ಸೇರ್ಪರ್ಡೆಯಾದ ಭಾಗಗಳು ಮತ್ತು ವಾಕ್ಯಗಳನ್ನಲ್ಲದೆ ಪದಗಳನ್ನೂ ಬೇರ್ಪಡಿಸಲು ಸಾಧ್ಯವೆಂದು ಸಹ ಬ್ರಾಕಿಂಗ್‌ಟನ್‌ ತೋರಿಸಿಕೊಟ್ಟಿದ್ದಾನೆ.  Righteous Rama, – ಪುಟ ೩೧೫

[2]ಈನಿಯಾಸ್‌, ಕ್ರಿಶ್ಚಿಯನ್‌ ಸಂವೇದನೆಗಳಿಗೆ ಹತ್ತಿರವಾಗುವುದು ಅದಕ್ಕೆ ಕಾರಣ ಮತ್ತು ಎಂಬ ಮೂಲಸತ್ಯವನ್ನು ಮರೆಯಬಾರದು. ಒದಿಸ್ಯೂಸ್‌ ಪೇಗನ್‌ ಆದರೆ, ಈನಿಯಾಸ್‌ ‘ಕ್ರಿಸ್ತಪೂರ್ವದ ಕ್ರಿಶ್ಚಿಯನ್‌’.