III

ಯುರೋಪ್‌ ಮೂಲದ ಪ್ರಭಾವವನ್ನು ತಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವುದರ ಜತೆಜತೆಗೆ ಆಂತರಿಕವಾದ ಭಿನ್ನತೆ, ವಿಶಿಷ್ಟತೆ ಮತ್ತು ವೈವಿಧ್ಯಗಳನ್ನು ಕಾಪಾಡಿಕೊಂಡು ಅನನ್ಯತೆ ಉಳಿಸಿಕೊಳ್ಳುವ ದ್ವಿಮುಖ ಬಿಕ್ಕಟ್ಟನ್ನು ಏಷ್ಯಾ ಮತ್ತು ಆಫ್ರಿಕಾದ ಜನ ಎದುರಿಸುತ್ತಿದ್ದಾರೆ. ಪರಸ್ಪರವಾದ ಅವೆರಡೂ ಬಿಕ್ಕಟ್ಟುಗಳು ಏಕಕಾಲದಲ್ಲಿ ಎದುರಾಗಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಆದರೆ ಯುರೋಪ್ ಮೂಲದ ಜನ ಎದುರಿಸುತ್ತಿರುವ ಸಮಸ್ಯೆ ಮತ್ತು ಬಿಕ್ಕಟ್ಟು ಅದಕ್ಕಿಂತಲೂ ಹೆಚ್ಚು ತೀವ್ರವಾದುವು. ಏಷ್ಯಾ, ಆಫ್ರಿಕಾ ಮತ್ತು ಇತರೇ ಜನಾಂಗಗಳ ಪ್ರಭಾವವನ್ನು ಎದುರಿಸಿ ಅವರಲ್ಲಿ ಸಂಗತವಾಗುವ ಕೆಲಸವನ್ನಾದರೂ ತಮ್ಮದಾಗಿಸಿಕೊಂಡು ತಮ್ಮ ಸಾಂಸ್ಕೃತಿಕ ವಿಶಿಷ್ಟತೆಯನ್ನು ಉಳಿಸಿಕೊಳ್ಳುವುದರ ಜತೆಗೆ ತಾವು ನಿರ್ಮಿಸಿಕೊಂಡು ಬಂದಿರುವ ಆಧಿಪತ್ಯವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಈ ಜಗತ್ತಿನ ಎಲ್ಲ ಒಳ್ಳೆಯದರ ಮತ್ತು ಉತ್ತಮವಾದುದರ ವಾರಸುದಾರರು ತಾವೆಂಬ ಹಕ್ಕುದಾರಿಕೆಯ ಹೊಸ್ತಿಲಲ್ಲಿ ನಿಂತಿರುವ ಅವರು, ಈ ಮಧ್ಯೆ ತಮ್ಮತನ ಉಳಿಸಿಕೊಳ್ಳಲು ಹೆಣಗಬೇಕಾಗಿದೆ. ಹಾಗೆ ನೋಡಿದರೆ ಯುರೋಪ್‌ ಜನ ಎದುರಿಸುತ್ತಿರುವ ಬಿಕ್ಕಟ್ಟುಗಳು ಏಷ್ಯಾ ಅಥವಾ ಆಫ್ರಿಕಾದ ಜನದ್ದಕ್ಕಿಂತ ಹೆಚ್ಚು ಸಂಕೀರ್ಣವೂ ಸಮಸ್ಯಾತ್ಮಕವಾದವೂ ಆಗಿವೆ. ಅದರಲ್ಲೂ ರಿಲಿಜನ್‌ ಮುಂದೆ ಮಾಡಿಕೊಂಡು ಇಸ್ಲಾಮಿನ ಒಂದು ಪ್ರಬಲ ಗುಂಪಿನ ಜನ ಒಡ್ಡಿರುವ ಸವಾಲುಗಳು ಹೆಚ್ಚು ತೀಕ್ಷ್ಣವಾದವು. ಹೋಮರ್‌ ಚಿತ್ರಿಸಿದ ಖಂಡಾಂತರ ಸಂಘರ್ಷ ಅನೇಕ ರೂಪದಲ್ಲಿ ಇಂದು ಎದುರಾಗಿದೆ.*

ವರ್ಜಿಲ್‌ ನೀಡಿದ ದುಡಿಮೆ (labour), ನಿಯತ್ತು (pietas) ಮತ್ತು ನಿಯತಿ ಅಥವಾ ಕಾಲದ (fatum) ಅರಿವು ಮುಂದೆಯೂ ಅವರ ಪರವಾಗಿ ನಿಲ್ಲುವುದೇ!

ಯುರೋಪ್‌ ಎಂದರೆ ಪ್ರಧಾನವಾಗಿ ಇಟಾಲಿಯನ್‌, ಫ್ರೆಂಚ್‌, ಇಂಗ್ಲಿಷ್‌, ಜರ್ಮನ್‌, ಸ್ಪ್ಯಾನಿಷ್‌, ಪೋರ್ಚುಗೀಸ್‌ ಮತ್ತು ಸ್ವಲ್ಪ ಮಟ್ಟಿಗೆ ರಷ್ಯನ್ ಭಾಷೆಗಳನ್ನು ಮಾತನಾಡುವ ಜನ ರೂಪಿಸಿದ ಸಾಹಿತ್ಯ ಸಂಸ್ಕೃತಿ ಎಂದರ್ಥ. ಆ ಯುರೋಪಿನ ಸಂಸ್ಕೃತಿಗೆ ಸಾಹಿತ್ಯಿಕವಾಗಿ ಅಂತಹ ಮಹತ್ವದ ಕಾಣಿಕೆ ನೀಡದಿರುವ ಅನೇಕ ಭಾಷೆಗಳ ಜನ ಸಹ ಅಲ್ಲಿ ಸೇರಿದ್ದಾರೆ. ಯುರೋಪ್‌ ಭಾಗದಿಂದ ಸದ್ಯದಲ್ಲಿ ವಿಶ್ವಸಾಹಿತಿಯಾಗಿ ಹೆಸರು ಪಡೆದಿರುವ ಮಿಲನ್‌ ಕುಂದೆರಾ ಅಂತಹ ಯುರೋಪಿಗೆ ಸೇರಿದ ಜೆಕ್‌ ಮೂಲದವನು; ಈವರೆಗೆ ಹೆಸರು ಮಾಡದಿರುವ ಯುರೋಪ್‌ ಭಾಗದಿಂದ ಬಂದು ಹೆಸರು ಮಾಡಿದ ಮೊದಲ ಸಾಹಿತಿ ಆತ. ಅದೇ ತರಹ ಸ್ಪ್ಯಾನಿಷ್‌ ಭಾಷೆಯಲ್ಲಿ ಬರೆಯುತ್ತಿರುವ ಕೊಲಂಬಿಯಾ ಭಾಗದ ಮಾರ್ಕೆಜ್‌ ಮತ್ತು ಮೆಕ್ಸಿಕೋದ ಅಕ್ಟೇವಿಯಾ ಪಾಜ್‌ ಸಹ ಆ ಭಾಗದಿಂದ ಹೆಸರು ಮಾಡಿದ ಮೊದಲ ಪಂಕ್ತಿಯ ಬರಹಗಾರರು. ಆ ತರಹದ ಬೆಳವಣಿಗೆಯ ಹಿಂದೆ ಏನೋ ಒಂದು ತರಹದ ಸೂತ್ರ ಇರುವಂತೆ ಕಾಣುತ್ತದೆ. ಉತ್ತಮ ಸಾಹಿತ್ಯಿಕ ಕೊಡುಗೆ ನೀಡಿರುವ ಇಟಾಲಿಯನ್‌, ಫ್ರೆಂಚ್‌, ಇಂಗ್ಲಿಷ್‌, ಜರ್ಮನ್‌, ರಷ್ಯನ್ ಮೊದಲಾದ ಭಾಷೆಗಳು ಮುಂದಿನ ಬೆಳವಣಿಗೆಗೆ ಕಾಲಾವಕಾಶ ಬೇಡುವಂತಿದ್ದರೆ: ಈವರೆಗೆ ಅಷ್ಟೊಂದು ಪ್ರಾಮುಖ್ಯತೆ ಕಾಣದಿರುವ ಭಾಷಾ ಭಾಗಗಳಿಂದ ಕೆಲವರಾದರೂ ಪ್ರಮುಖ ಬರಹಗಾರರು ಬೆಳೆದುಕೊಂಡಂತೆ ಕಾಣುತ್ತದೆ.

ಪೋರ್ಚುಗೀಸ್‌ ಭಾಷೆಯಲ್ಲೊಂದು ‘ಈನೀಡ್‌’ ನಿರ್ಮಿಸಲು ಹೊರಟ ಕವಿ ಲೂಯಿ ಡೆ ಕಮೊ ಭಾರತ ಮತ್ತು ಏಷ್ಯಾ ಕುರಿತಂತೆ ಆಡಿರುವ ಒಂದು ಮಾತು ಅತ್ಯಂತ ಮನನೀಯ. ವಾಸ್ಕೋ – ಡಗಾಮನ ಹಿನ್ನೆಲೆಯಲ್ಲಿ ಬಹಳ ವರ್ಷ ಕಾಲ ಗೋವಾದಲ್ಲಿ ಬದುಕಿದ್ದು ‘ಲೂಸುಸ್‌ನ ಮಕ್ಕಳು’ ಎಂಬ ಕಾವ್ಯ ಬರೆದಿರುವ ಆತ, ಭಾರತ ಮತ್ತು ಏಷ್ಯನ್ ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ಬಲ್ಲವ. ಆದರೆ ಆತ ಬರೆದುದು ‘ಈನೀಡ್‌’ ಆಗಲಿಲ್ಲ. ವಾಸ್ಕೋ – ಡಗಾಮನ ವ್ಯಕ್ತಿತ್ವದಿಂದ ಪಡೆಯಬಹುದಾದ ಪ್ರೇರಣೆ ಮತ್ತು ಸ್ಫೂರ್ತಿ ಪಡೆದು ರಚಿಸಿದ ನಾಯಕ ಈನಿಯಾಸ್‌ ಆಗಲಿಲ್ಲ. ಜತೆಗೆ ಪೋರ್ಚುಗೀಸ್‌ ಜನರು ನಿರ್ಮಿಸಬಯಸಿದ ಸಾಮ್ರಾಜ್ಯ ರೋಮ್‌ ಸಾಮ್ರಾಜ್ಯದ ತರಹ ಬಹಳ ಕಾಲ ಬದುಕಲಿಲ್ಲ. ಏಷ್ಯಾದ ಹೆಬ್ಬಾಗಿಲು ತೆರೆದು ಯುರೋಪಿನ ಮುಂದಿನ ಬೆಳವಣಿಗೆಗೆ ಸಹಾಯ ಮಾಡಿದ ವಾಸ್ಕೋ – ಡ – ಗಾಮನನ್ನು ನೀಡಿದ ಪೋರ್ಚುಗಲ್‌, ಕಮೊ ಸತ್ತ ವರ್ಷವೇ ಅಂದರೆ ೧೫೮೦ರಲ್ಲಿ ತನ್ನ ಸ್ವಾತಂತ್ರ್ಯ ಕಳೆದುಕೊಂಡು ಸ್ಪೇನಿನ ಆಧಿಪತ್ಯಕ್ಕೆ ಒಳಪಟ್ಟಿತು. ಪೋರ್ಚುಗಲ್, ರೋಮ್‌ ಅಥವಾ ಬ್ರಿಟನ್‌ ತರಹ ದೊಡ್ಡ ಸಾಮ್ರಾಜ್ಯದ ಕೇಂದ್ರವಾಗಲಿದೆ ಮತ್ತು ವಾಸ್ಕೋ – ಡ – ಗಾಮ ಈನಿಯಾಸ್‌ ತರಹ ಆದರ್ಶ ಪುರುಷನಾಗಲಿದ್ದಾನೆ ಎಂಬ ಕಮೊನ ಹಾರೈಕೆ ಅವನು ಸತ್ತ ವರ್ಷವೆ ತಲೆಕೆಳಕಾದುದು ವಿಚಿತ್ರವೇ ಸರಿ. ಕಾಲಕ್ಕೆ ಸ್ಪಂದಿಸಿ ಈಗಾಗಲೇ ಬರೆಯಲಾದ ಕಾವ್ಯವನ್ನು ಅನುಸರಿಸಿ ಮತ್ತೊಂದು ಕಾವ್ಯ ಸೃಷ್ಟಿಸಲು ಬರುವುದಿಲ್ಲ ಎಂಬುದಕ್ಕೂ ಸಹ ಅದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದು ಬೇಕಿಲ್ಲ. ವ್ಯಾಸ, ಹೋಮರ್‌, ವಾಲ್ಮೀಕಿ ಅಥವಾ ವರ್ಜಿಲ್‌ ನಡೆಸಿದ ಪ್ರಯೋಗಗಳನ್ನು ಕಾಪಿ ಮಾಡಲಾಗುವುದಿಲ್ಲ ಮತ್ತು ಕಾಲವನ್ನು ಸೃಷ್ಟಿಸುವ ಕಾಲನ ಸೃಷ್ಟಿಯಾದ ಅವು ಪುನರಾವರ್ತನೆಯಾಗಲು ಸಾಧ್ಯವಿಲ್ಲ ಎಂಬುದಕ್ಕೆ ಕಮೊನ ಕೃತಿ ಮತ್ತೊಂದು ಉದಾಹರಣೆ.

ಆದರೆ ತಾನು ಹಾಕಿಕೊಂಡ ಮಹತ್ವಾಕಾಂಕ್ಷೆಯಲ್ಲಿ ವಿಫಲನಾದ ಆತ, ಏಷ್ಯಾ ಮತ್ತು ಯುರೋಪ್‌ ಕುರಿತಂತೆ ನೀಡುವ ಕೆಲವೊಂದು ಒಳನೋಟಗಳಿಂದಾಗಿ ಗಮನ ಸೆಳೆಯುತ್ತಾನೆ.

ಅತ್ಯಂತ ಪುರಾತನ ಸಂಸ್ಕೃತಿಯ, ಪ್ರಕೃತಿ ಮತ್ತು ಮಾನವ ಸಂಪನ್ಮೂಲಭರಿತ ನಾಡಾದ ಭಾರತದ ದೌರ್ಬಲ್ಯ ಅಥವಾ ಹಿಂದುಳಿದಿರುವಿಕೆ ಕುರಿತಂತೆ ಹಲವಾರು ಜನ ಹಲವಾರು ತರಹದ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ: ಏಷ್ಯಾ, ಅದರಲ್ಲೂ ಭಾರತ ಮತ್ತು ಯುರೋಪ್‌ ಕುರಿತಂತೆ ಕಮೊ ಆಡುವ ಕೆಲವೊಂದು ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ. ಏಷ್ಯಾ ಮತ್ತು ಆಫ್ರಿಕಾದ ಸಂಪರ್ಕಕ್ಕೆ ಬಂದ ನಂತರ ಯುರೋಪ್‌ ಅಭಿವೃದ್ಧಿಪಥದಲ್ಲಿ ಸಾಗಿದರೆ, ಈ ಕಡೆ ಅದೇ ರೀತಿ ಆ ಯುರೋಪ್‌ನ ಸಂಪರ್ಕಕ್ಕೆ ಬಂದ ಏಷ್ಯಾ ಮತ್ತು ಜಗತ್ತಿನ ಇತರೇ ಭಾಗಗಳಲ್ಲಿ ಅನೇಕ ರೀತಿಯ ತಳಮಳ ಮತ್ತು ಬಡತನಗಳು ಕಾಣಿಸಿಕೊಂಡವು. ಆ ಸಾಧ್ಯತೆಗಳನ್ನು ಆಗಲೇ ಗ್ರಹಿಸಿದಂತೆ ಕಾಣುವ ಕಮೊ : “ಮಾನವೀಯ ಶಕ್ತಿಗಳು ಚಲನಶೀಲತೆ ಕಳೆದುಕೊಂಡುದೇ ಭಾರತದಂತಹ ರಾಷ್ಟ್ರ ಅಂತಿಮವಾಗಿ ಅನಾಗರಿಕ ರಾಷ್ಟ್ರವಾಗಿ ಉಳಿಯಲು ಕಾರಣ” ಎಂಬ ಭಾವನೆ ತಳೆಯುತ್ತಾನೆ. ಆತ ಬಳಸುವ ‘ಅನಾಗರಿಕ’ ಎಂಬ ಪದವನ್ನು ಅನೇಕ ಭಾರತೀಯರು ಒಪ್ಪಲು ಸಿದ್ಧರಿಲ್ಲದಿರಬಹುದು. ಆ ಮೂಲಕ ಕಟುಸತ್ಯವೊಂದನ್ನು ಗ್ರಹಿಸಲು ಆತ ಪ್ರಯತ್ನಿಸಿದ್ದಾನೆ ಎಂಬ ಅಂಶವನ್ನು ಮೆಚ್ಚಲಾಗದಿರುವುದಿಲ್ಲ. ಭಾರತದಲ್ಲಿ ಮಾನವೀಯ ಶಕ್ತಿಗಳು ಚಲನಶೀಲತೆ ಕಳೆದುಕೊಂಡದ್ದಕ್ಕಿಂತಲೂ ಹೆಚ್ಚಾಗಿ ಸಂಪೂರ್ಣ ನಿಶ್ಚೇಶ್ಚಿತವಾಗಿದ್ದವು ಎಂಬುದು ಸತ್ಯ ಮತ್ತು ವಾಸ್ತವಕ್ಕೆ ಹತ್ತಿರವಾಗಿರುವಂತೆ ತೋರುತ್ತದೆ. ಆದರೆ ಅದೇ ಏಷ್ಯಾ ಸಂಪರ್ಕಕ್ಕೆ ಬಂದ ನಂತರ ಯುರೋಪಿನ ರಂಗೇ ಬದಲಾಗಿಹೋಯಿತು. ತಮ್ಮ ಭೂತ ಮತ್ತು ಭವಿಷ್ಯತ್ತಿನ ಎಲ್ಲಾ ಚೇತನ ಮತ್ತು ಸಮಸ್ತ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಾತತ್ಯತೆ ಕಾಪಾಡಿಕೊಳ್ಳಲು ಸಾಧ್ಯವಾದಲ್ಲಿ ಮಾತ್ರ, ಮುಂದಿನ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂಬ ಎಚ್ಚರಿಕೆಯನ್ನು ಕಮೊ ಆಗಲೇ ನೀಡಿದ್ದ. ಯುರೋಪ್‌ ಅದೇ ಹಾದಿಯಲ್ಲಿ ಸಾಗಿತು ಎಂಬುದು ಈಗ ಇತಿಹಾಸ. ಆ ಒಂದು ಕಾರಣಕ್ಕಾಗಿಯಾದರೂ ಆತನನ್ನು ಸ್ಮರಿಸಬೇಕಾಗುತ್ತದೆ.

ಇಂಗ್ಲಿಷಿನಲ್ಲಿ ಬರವಣಿಗೆ ಮಾಡಿ ಹಣ ಮತ್ತು ಹೆಸರು ಗಳಿಸಿ ರಂಗೇರಿರುವ ಲ್ಮಾನ್‌ ರಶ್ದಿ, ವಿಕ್ರಂ ಸೇಠ್‌ ಮತ್ತು ಅರುಂಧತಿ ರಾಯ್‌ ಮೊದಲಾದವರ ಆಗಮನವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಅವರನ್ನು ಸಾಹಿತ್ಯ ಲೋಕದ ಉಪಗ್ರಹಗಳೆಂಬಂತೆ ಉಡಾಯಿಸುವುದರ ಮೂಲಕ ಯುರೋಪಿನ ಜನ ಸಾಹಿತ್ಯ ರಚನೆ ಮತ್ತು ಸೃಜನಶೀಲತೆ ಕುರಿತು ಈವರೆಗೆ ಉಳಿದುಬಂದಿರುವ ಕೆಲ ನಂಬಿಕೆ ಮತ್ತು ತತ್ವಗಳನ್ನು ಪೊಳ್ಳು ಮಾಡಲು ಹೊರಟಿರುವಂತೆ ಕಾಣುತ್ತದೆ. ಮಾತೃಭಾಷೆ ಅಥವಾ ಮಾತೃಭಾಷೆಗೆ ಸಮಾನವಾದ ಸೋದರ ಭಾಷೆಗಳಲ್ಲಿ ಮಾತ್ರ ಕವಿಗಳಿಗೆ ನಿಜವಾದ ಸೃಜನಶೀಲತೆ ಸಾಧ್ಯ ಎಂಬುದೇ ಆ ನಂಬುಗೆ. ಕ್ರಿಶ್ಚಿಯನ್‌ ರಿಲಿಜನ್‌ಗೆ ಮಾತಾಂತರಗೊಂಡು ಆಕ್ರಮಣಕಾರರು ನೀಡಿದ ಸ್ಪ್ಯಾನಿಷ್ ಮುಂತಾದ ಒಂದಲ್ಲ ಒಂದು ಯುರೋಪ್‌ ಮೂಲದ ಭಾಷೆಗಳನ್ನು ಬಳಸುವ ಸ್ಥಿತಿಗೆ ಇಳಿದಿರುವ ಲ್ಯಾಟಿನ್‌ ಅಮೆರಿಕಾದಿಂದ ಮಾರ್ಕೆಜ್‌, ಅಕ್ಟೇವಿಯಾ ಪಾಜ್‌ನಂತಹ ಬರಹಗಾರರು ಬರುವುದು ಸಾಧ್ಯ ಎಂಬುದಾದಲ್ಲಿ, ಭಾರತದಂತಹ ದೇಶಗಳಿಂದ ಇಂಗ್ಲಿಷನಲ್ಲಿ ಬರವಣಿಗೆ ಏಕೆ ಸಾಧಯವಿಲ್ಲ ಎಂಬುದುಅವರ ಪ್ರಶ್ನೆ. ತಮ್ಮ ವಾದಕ್ಕೆ ಪೂರಕವಾಗಿ ಇಂಗ್ಲಿಷ್‌ ಸಾಹಿತಿಗಳ ಪ್ರಮುಖ ಹೆಸರನ್ನು ಅವರು ಉದಹರಿಸುತ್ತಾರೆ. ಡಿ. ಎಚ್‌. ಲಾರೆನ್ಸ್‌ ಹೊರತು, ಯೇಟ್ಸ್‌, ಬರ್ನಾಡ್‌ ಷಾ, ಜೇಮ್ಸ್‌ ಜಾಯ್ಸ್‌, ಎಲಿಯಟ್‌ ಮೊದಲಾದ ಯಾರೂ ಮೂಲತಃ ಬ್ರಿಟಿಷ್‌ ಲೇಖಕರಲ್ಲ.

ತಮ್ಮ ಸಂಸ್ಕೃತಿ ಜತೆಗೆ ಭಾಷೆಗಳನ್ನು ಕರೆದುಕೊಂಡಿರುವ ಲ್ಯಾಟಿನ್‌ ಅಮೆರಿಕದ ಜನ ತಮ್ಮನ್ನು ಕ್ರಿಶ್ಚಿಯನ್‌ ರಿಲಿಜನ್‌ಗೆ ಮತಾಂತರ ಮಾಡಿದ ಸ್ಪೇನ್ ಮೊದಲಾದ ಜನ ನೀಡಿದ ವಿದೇಶಿ ಭಾಷೆಯನ್ನು ತಮ್ಮದಾಗಿಸಿಕೊಳ್ಳಬೇಕಾದ ಅನಿವಾರ್ಯ ಸಂಕಟದಲ್ಲಿದ್ದಾರೆ. ಆದರೆ ಭಾರತದ ಸ್ಥಿತಿ ಇನ್ನೂ ಆ ಹಂತ ತಲುಪಿಲ್ಲ. ಇಂಗ್ಲಿಷಿನಲ್ಲಿ ಬರವಣಿಗೆ ಮಾಡಿದ ಆರ್‌. ಕೆ. ನಾರಾಯಣ್‌, ರಾಜಾರಾವ್‌ ಮೊದಲಾದವರ ನೆನಪು ಈಗಾಗಲೇ ಸಾಂದರ್ಭಿಕವಾಗುತ್ತಿದೆ. ರಶ್ದಿ, ಅರುಂಧತಿ ರಾಯ್‌, ವಿಕ್ರಂ ಸೇಠ್‌ ಮೊದಲಾದವರನ್ನು ಜನ ಹೆಚ್ಚಾಗಿ ಓದುತ್ತಿರುವುದು ಬಹುತೇಕ ಅವರು ನಡೆಸಿದ ಭಾಷಾಬಳಕೆ ಇತ್ಯಾದಿ ಪ್ರಯೋಗಗಳ ಹಿಂದಿನ ಖುಷಿಗಾಗಿ. ಭಾರತದ ಜನಕ್ಕೆ ಬೇಕಾದುದನ್ನು ಅವರ ಕೈಯಲ್ಲಿ ನೀಡಲು ಸಾಧ್ಯವಾಗಿದೆಯೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಿನ ತಲೆಮಾರಿನವರೆಗೆ ಕಾಯಬೇಕಾದ ಅಗತ್ಯ ಇರಲಾರದು.

ಹೆಸರಿನ ಜತೆಗೆ ಹಣ ಮಾಡುವುದೇ ಬರವಣಿಗೆಯ ಗುರಿ ಎಂಬುದಾದಲ್ಲಿ ಅದು ಸಂಪೂರ್ಣ ಬೇರೆ ವಿಚಾರ.

ಹಾಗಾಗಿ ಇಂಗ್ಲಿಷಿನಲ್ಲಿ ಬರವಣಿಗೆ ಮಾಡುತ್ತಿರುವ ಬಹುತೇಕ ಭಾರತೀಯ ಲೇಖಕರಿಗೆ ಸಿಗಬೇಕಾದ ನೆಲೆ ಮತ್ತು ದೃಷ್ಟಿಕೋನವೇ ಈವರೆಗೆ ದೊರಕಿದಂತೆ ಕಾಣುತ್ತಿಲ್ಲ. ತಮ್ಮ ನೆಲೆರಹಿತ ವಲಸೆ ಬದುಕಿನ ಅನುಭವಗಳನ್ನು ವಿ. ಎಸ್‌. ನೈಪಾಲ್‌ ರೀತಿ ಅನ್ವೇಷಿಸುವುದು ಒಂದು ಮಾರ್ಗವಾಗಿದ್ದು, ಇಂಗ್ಲಿಷನಲ್ಲಿ ಬರವಣಿಗೆ ಮಾಡುತ್ತಿರುವ ಇತ್ತೀಚಿನ ತಲೆಮಾರಿನ ಅನೇಕ ಲೇಖಕರು ಅದಕ್ಕೆ ಜೋತು ಬಿದ್ದಿರುತ್ತಾರೆ. ಮೂಲತಃ ಭಾರತೀಯವಾದ ತಮ್ಮ ಅನುಭವಗಳನ್ನು ವಿಶ್ವಸಾಮಾನ್ಯವಾಗಿಸಲು ಪ್ರಯತ್ನಿಸುವುದು ಇರುವ ಮತ್ತೊಂದು ಅವಕಾಶ; ಇಂಗ್ಲಿಷ್‌ ಅಥವಾ ಮತ್ತಾವುದೇ ವಿದೇಶೀ ಭಾಷೆಯಲ್ಲಿ ಕೆಲಸ ಮಾಡುತ್ತಿರುವ ಸಾಹಿತಿಗಳಿಗೂ ಇರುವಂತೆಯೇ, ಭಾರತೀಯ ಭಾಷೆಗಳಲ್ಲಿ ಕಾರ್ಯನಿರತವಾಗುವ ಬರಹಗಾರರಿಗೂ ಇದ್ದೇ ಇದೆ. ವ್ಯತ್ಯಾಸ ಇರುವುದು ತಮ್ಮ ಅನುಭವಕ್ಕೆ ಅಭಿವ್ಯಕ್ತಿ ನೀಡಲು ಅವರು ಬಳಸಿಕೊಳ್ಳುವ ಮಾಧ್ಯಮ ಮತ್ತು ಭಾಷೆಯಲ್ಲಿ. ಕೆಲವರು ಇಂಗ್ಲಿಷಿನಲ್ಲಿ ಬರೆದರೆ ಮತ್ತೆ ಕೆಲವರು ಕನ್ನಡ, ತಮಿಳು ಇತ್ಯಾದಿ ಭಾಷೆಯಲ್ಲಿ ಬರೆಯಬಹುದು. ಭಾರತೀಯ ಬದುಕನ್ನು ತಮಗೆ ತೋಚಿದ ರೀತಿ ಇಂಗ್ಲಿಷ್‌ ಭಾಷಿಕರಿಗೆ ಪರಿಚಯ ಮಾಡುವುದು ಅಥವಾ ಅರ್ಥೈಸುವುದು, ಮೂರನೆಯ ಅವಕಾಶ. ಇಂಗ್ಲಿಷ್‌ ಭಾಷೆಯಲ್ಲಿ ಬರವಣಿಗೆ ಮಾಡುತ್ತಿರುವ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊದಲನೆ ಮತ್ತು ಮೂರನೇ ಗುಂಪಿಗೆ ಸೇರಿದವರಾಗಿರುತ್ತಾರೆ. ಎರಡನೇ ಗುಣ ಮತ್ತು ಆಶಯದಿಂದ ತುಂಬಿದ ಬರವಣಿಗೆ ಮಾಡುತ್ತಿರುವವರು ಈವರೆಗೆ ಬರಲು ಸಾಧ್ಯವಾಗಿಲ್ಲದಿರುವುದೇ ಇಂಗ್ಲಿಷ್‌ ಭಾಷೆಯಲ್ಲಿ ಭಾರತೀಯ ಮೂಲದ ಮಾರ್ಕೆಜ್‌ ಬರಲು ಸಾಧ್ಯವಾಗಿಲ್ಲದಿರುವುದಕ್ಕೆ ಬಹುಮುಖ್ಯ ಕಾರಣ.

ಇಂಗ್ಲಿಷ್‌ ಭಾಷೆಯಲ್ಲಿ ಬರವಣಿಗೆ ಮಾಡುತ್ತಿರುವ ಬಹುತೇಕ ಲೇಖಕರು ಮತ್ತು ಕವಿಗಳು, ಇತರ ಭಾರತೀಯ ಭಾಷೆಗಳ ಲೇಖಕರು ಉಳಿದಿರುವ ಸ್ಥಿತಿಯಲ್ಲಿಯೇ ನಿಂತಿದ್ದಾರೆ: ಏನಾದರೂ ವ್ಯತ್ಯಾಸ ಇರುವುದಾದಲ್ಲಿ, ಪುಸ್ತಕಗಳಿಂದ ಬರುವ ಹಣ ಮತ್ತು ಹೆಸರಿನ ಪ್ರಮಾಣದಲ್ಲಿ ಮಾತ್ರ. ಮಾಸ್ತಿ ಮತ್ತು ಕುವೆಂಪು ಮುಂತಾದ ಕೆಲವರಿಗೆ ಹೋಲಿಸಿದರೆ ಅನಂತಮೂರ್ತಿ, ಕಾರ್ನಾಡರಿಗೆ ಕರ್ನಾಟಕದ ಹೊರಗಡೆಯೂ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ದೊರಕಿರಬಹುದು. ಅವರಿಗೆ ಹೋಲಿಸಿದರೆ ಸಲ್ಮಾನ್‌ ರಶ್ದಿ ಅಥವಾ ವಿಕ್ರಮ್‌ ಸೇಠ್‌ ಮೊದಲಾದವರು ಇಂಗ್ಲಿಷ್‌ ವಿಶ್ವದಲ್ಲಿ ಹೆಚ್ಚು ಜನಪ್ರಿಯರಾಗಿರಬಹುದು. ಅದು ಹೊರತು ಅವರಾರು ಟಾಲ್ಸ್‌ಸ್ತಾಯ್‌, ದಾಸ್ತೋವಸ್ಕಿ ಅಥವಾ ಹೋಗಲಿ ಮಾರ್ಕೆಜ್‌ಗಳಲ್ಲ. ಆ ರೀತಿಯ ಸಾಧ್ಯತೆ ಸಾಧ್ಯವಾಗಿಲ್ಲದಿರಲು ಕಾರಣವಾಗಿರಬಹುದಾದ ಅಂಶಗಳು, ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಕೃತಿರಚನೆ ಮಾಡುತ್ತಿರುವ ಲೇಖಕರಿಗೂ ಹೆಚ್ಚು ಕಡಿಮೆ ಸಮಾನವಾದುವು.

ಇಂಗ್ಲಿಷಿನಲ್ಲಿ ಮತ್ತು ಒಂದಲ್ಲ ಒಂದು ಭಾರತೀಯ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಿರುವ ಭಾರತೀಯ ಸಾಹಿತಿಗಳು ಒಟ್ಟಾರೆ ಎದುರಿಸುತ್ತಿರುವ ಪರಿಸ್ಥಿತಿ ಅತ್ಯಂತ ಭಿನ್ನವಲ್ಲ ಎಂಬುದು ವಸ್ತುಸ್ಥಿತಿಯ ಪ್ರತೀಕ; ಮುಲ್ಕರಾಜ್‌ ಆನಂದ್‌ ತರಹವೇ ಮಾನವೀಯವಾದಿ ದೃಷ್ಟಿಕೋನ ಆಧರಿಸಿ ಕೃತಿ ರಚನೆ ಮಾಡಿದ ಭಾರತೀಯ ಭಾಷೆಗಳ ಹಲವಾರು ಲೇಖಕರನ್ನು ಹುಡುಕಲು ಕಷ್ಟಪಡಬೇಕಿಲ್ಲ. ಹಿಂದಿಯ ಪ್ರೇಮಚಂದ್‌, ಉರ್ದುನ ಕೃಷ್ಣಚಂದ್‌ ಅವರ ಕತೆಗಳು ಅದೇ ಸಾಲಿನಲ್ಲಿ ಬರುತ್ತವೆ. ಹಾಗಾಗಿ ಇಂಗ್ಲಿಷ್‌ ಮತ್ತು ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಲೇಖಕರ ನಡುವಿನ ಅಂತರ ಕೇವಲ ಸಾಪೇಕ್ಷವಾದುದೇ ವಿನಾ ಅಂತಹ ಹೆಚ್ಚಿನ ವ್ಯತ್ಯಾಸವಿಲ್ಲ – ಇಂಗ್ಲಿಷ್‌ ಭಾಷೆಯಲ್ಲಿ ಬರೆಯುತ್ತಿರುವ ಸಾಹಿತಿಗಳಿಗೆ ಆ ಭಾಷೆಯ ವ್ಯಾಪಕತೆಯ ಪ್ರಭಾವದಿಂದಾಗಿ ದೊರಕುವ ಮಾರುಕಟ್ಟೆಯ ಹಣದ ಸೌಲಭ್ಯ ಹೊರತು. ಆ ಒಂದು ಕಾರಣಕ್ಕೆ ಅವರಾರು ವಿಶ್ವಮಾನ್ಯ ಕವಿಗಳು ಅಥವಾ ಸಾಹಿತಿಗಳಾಗಿ ಪರಿವರ್ತನೆಗೊಳ್ಳಲು ಸಾಧ್ಯವಾಗಿಲ್ಲ ಎಂಬುದು ಗಮನಿಸಬೇಕಾದ ಸತ್ಯ.

ವಿಜ್ಞಾನ ಇತ್ಯಾದಿ ಯಾವುದೇ ಕ್ಷೇತ್ರದಲ್ಲಿ ಉತ್ತಮ ಮಟ್ಟದ ಸಾಧನೆ ಮಾಡಬಯಸುವ ಯಾವುದೇ ಭಾರತೀಯ, ಏಷ್ಯಾ ಅಥವಾ ಆಫ್ರಿಕಾ ಮೂಲದ ಜನರು, ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಯುರೋಪ್‌ ಮೂಲದ ಜನರಿಗಿಂತಲೂ ಹೆಚ್ಚು ಪ್ರತಿಭಾಶಾಲಿ ಆಗಿರಬೇಕು. ಅಥವಾ ಅವರಲ್ಲಿನ ಹೆಚ್ಚು ಪ್ರತಿಭಾವಂತರಿಗೆ ಸಮನಾದ ಪ್ರತಿಭೆ ಸಿದ್ಧಿಸಿಕೊಂಡಿರಬೇಕಾಗುತ್ತದೆ. ಅಂತಹ ಅಸಾಮಾನ್ಯ ಮೇಧಾವಿಗಳ ಮಾತಿರಲಿ ಉಳಿದಂತೆ, ಯುರೋಪ್‌ ಮೂಲದ ಆ ಶಿಸ್ತನ್ನು ಭಾರತದ ಸಂದರ್ಭಕ್ಕೆ ಅನುಗುಣ ಅನ್ವಯಿಸಿಕೊಂಡು ತಮ್ಮ ಸುತ್ತಮುತ್ತಲನ್ನು ಆ ಶಿಸ್ತಿನ ವ್ಯಾಪ್ತಿಗೆ ತರುವುದರ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ತಮ್ಮ ಅರಿವಿನ ವ್ಯಾಪ್ತಿಯನ್ನು ಹಿಗ್ಗಲಿಸುವುದಕ್ಕಷ್ಟೇ ಸೀಮಿತಗೊಳಿಸಿಕೊಳ್ಳಬೇಕಾಗುತ್ತದೆ. ಒಂದು ರೀತಿಯಲ್ಲಿ ಅದು ಕುಡ ಮಹತ್ವದ ಕೊಡುಗೆಯೇ, ಆ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದರ ಮೂಲಕ ಸೃಜನಶೀಲತೆಯನ್ನು ಕಂಡುಕೊಳ್ಳುವುದರಿಂದ ಎರಡು ರೀತಿಯ ಬದಲಾವಣೆಗಳಾಗುತ್ತವೆ. ಭಾರತದ್ದನ್ನು ಜಗತ್ತು ಸ್ವೀಕರಿಸಿದ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಮಾದರಿ ವ್ಯಾಪ್ತಿಗೆ ತರುವುದರ ಮೂಲಕ, ಅದರ ಆಶಯ ಮತ್ತು ವ್ಯಾಪ್ತಿಯನ್ನು ಹಿಗ್ಗಲಿಸುತ್ತಲೇ ಭಾರತೀಯವಾದುದರಲ್ಲಿ ಹೊಸತನದ ಸಂಚಾರ ಆಗುವಂತೆ ನೋಡಿಕೊಳ್ಳುವುದು ಸಾಧಾರಣವಾದ ಕೆಲಸವಲ್ಲ. ಆ ಮೂಲಕ ಇಡೀ ಜಗತ್ತಿಗೆ ಸಾಮಾನ್ಯವಾದುದಾಗಿದ್ದಿರಬಹುದಾದ ವೈವಿಧ್ಯ ಮತ್ತು ಆ ಹಿಂದಿನ ಸಮಾನ ತಂತುಗಳನ್ನು ಒಂದೇ ವೇದಿಕೆ ಮತ್ತು ಶಿಸ್ತಿನ ವ್ಯಾಪ್ತಿಗೆ ತಂದು ನೋಡುವ ಅವಕಾಶ ದೊರಕುತ್ತದೆ.

ಸಸ್ಯವಿಜ್ಞಾನದ ಉದಾಹರಣೆ ತಂದುಕೊಳ್ಳುವುದರ ಮೂಲಕ ಆ ವ್ಯತ್ಯಾಸವನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.

ಸಸ್ಯಸಂಪದ ಕುರಿತ ತಿಳುವಳಿಕೆ ಯುರೋಪ್‌ ಮೂಲದ ಜನರ ಸ್ವತ್ತೇನಲ್ಲ. ಅದರ ಕ್ರಮಬದ್ಧ ಅಧ್ಯಯನ ನಡೆಸಲು ಬೇಕಾದ ಒಪ್ಪಿತ ಮಾದರಿ, ಶಿಸ್ತು ಮತ್ತು ಪರಂಪರೆ ರೂಪಿಸುವುದರ ಮೂಲಕ, ಆ ಎಲ್ಲವನ್ನು ತಮ್ಮದಾಗಿಸಿಕೊಂಡ ವಿವೇಕಿಗಳು ಮತ್ತು ಜಾಣರು ಅವರು. ಆದರೂ ಎಲ್ಲ ಜನಾಂಗಗಳಿಗೂ ಸಾಮಾನ್ಯವಾಗಿದ್ದಿರಬಹುದಾದ ಸಸ್ಯಸಂಪದ ಕುರಿತ ಪರಂಪರಾಗತ ಅರಿವು, ತಿಳುವಳಿಕೆ ಮತ್ತು ಪ್ರಯೋಜನದ ಮಾದರಿಗಳನ್ನು ಸಂಪೂರ್ಣ ಅಳಿಸಿಹಾಕಲು ಅಥವಾ ಕಿತ್ತುಕೊಳ್ಳಲು ಬರುವುದಿಲ್ಲ. ಅದರ ಬಳಕೆಯಲ್ಲಿ ಕೆಲವರು ಮುಂದಿರಬಹುದು, ಮತ್ತೆ ಕೆಲವರು ಹಿಂದಿರಬಹುದು. ಆ ವ್ಯತ್ಯಾಸ ಹೊರತು, ಸಸ್ಯಸಂಪದ ಆಧಾರಿತ ಪರಂಪರಾಗತ ಅರಿವು ಎಲ್ಲರಿಗೂ ಸಾಮಾನ್ಯವಾದುದು. ಆ ರೀತಿಯ ಪರಂಪರಾಗತ ತಿಳುವಳಿಕೆ ರೂಪದಲ್ಲಿ ಸಸ್ಯಸಂಪದ ಕುರಿತಂತೆ ಯುರೋಪ್ ಮೂಲದ ಪಶ್ಚಿಮ ಜಗತ್ತಿನ ಜನರಿಗಿಂತಲೂ ಹೆಚ್ಚಿನ ತಿಳುವಳಿಕೆ ಪಡೆದಿರುವ ಅನೇಕ ಸಮುದಾಯಗಳನ್ನು ಇಂದಿಗೂ ಗುರುತಿಸಬಹುದಾಗಿದೆ.

ತಮ್ಮ ಪರಂಪರಾಗತ ಜ್ಞಾನ ಮತ್ತು ತಿಳುವಳಿಕೆಯನ್ನು ಆಧುನಿಕ ಸಸ್ಯ ವಿಜ್ಞಾನದ ಪ್ರಮುಖ ಧಾರೆಯಾಗಿ ಪ್ರವಹಿಸುವಂತೆ ಮಾಡಲು ಅದನ್ನು ದತ್ತವಾಗಿ ಪಡೆದ ಸಸ್ಯವಿಜ್ಞಾನದ ಅನೇಕ ಭಾರತೀಯ ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ ಏಕೆ? ಜಗದೀಶ್‌ಚಂದ್ರ ಬೋಸ್‌ ಅವರಂತಹ ಒಂದಿಬ್ಬರು ಅಪ್ರತಿಮ ಮೇಧಾವಿಗಳನ್ನು ಗಮನದಲ್ಲಿಟ್ಟುಕೊಂಡು ಆ ಮಾತುಗಳನ್ನು ಬರೆಯಲಾಗಿಲ್ಲ. ಅವರು ಹಾಕಿದ್ದು ಪರಂಪರೆಯಾಗಿ ಸಂಘಟಿತ ರೂಪ ಪಡೆದುಕೊಳ್ಳಲು ಸಾಧ್ಯವಾಗದುದರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಆ ತರಹದ ಪರಂಪರಾಗತ ತಿಳುವಳಿಕೆ ಆಧರಿಸಿದ ಎತ್ನೊ ಬಾಟನಿ (Ethno Botany)[1] ಎಂಬ ನೂತನ ಜ್ಞಾನಶಾಖೆಯ ಬೆಳವಣಿಗೆಗೆ ಬೇಕಾದ ಕೊಡುಗೆ ನೀಡಿದವರು ಹೆಚ್ಚು ಪ್ರಮಾಣದಲ್ಲಿ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಸಸ್ಯವಿಜ್ಞಾನಿಗಳೇ ಆಗಿರುವುದು ಮತ್ತು ಔಷಧಗಳ ಮೂಲವಾದ ಸಸ್ಯಸಂಪತ್ತನ್ನು ವಾಣಿಜ್ಯೀಕರಣಗೊಳಿಸಿದವರು ಸಹ ಪ್ರಧಾನವಾಗಿ ಅವರೇ ಆಗಿರುವುದು ಆ ಹಿನ್ನೆಲೆಗೆ ಅನುಗುಣವಾಗಿಯೇ ಇದೆ.

ಎಲ್ಲೋ ಕೆಲ ಅಚಾನಕ್‌ ಘಟನೆಗಳನ್ನು ಬಿಟ್ಟರೆ, ಸಾಮಾಜಿಕ ವಿಜ್ಞಾನಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಭಾರತ ಮೂಲದ ಸಾಧನೆ, ಅವರ ಸಾಹಿತ್ಯ ಮತ್ತು ಕಲಾಕ್ಷೇತ್ರದ ಸಾಧನೆಯ ಮಟ್ಟದಲ್ಲಿಯೇ ಉಳಿದಿದೆ ಎಂದಾಯಿತು. ಅವೆರಡೂ ಒಂದು ಹಂತದವರೆಗಾದರೂ ಪರಸ್ಪರ ಪೂರಕ ಎಂಬುದಕ್ಕೆ ಅದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಭಾರತದ ಎಲ್ಲ ರಂಗಗಳ ಪರಿಸ್ಥಿತಿ ಒಂದೇ ಆಗಿದ್ದು ಒಂದೇ ಹಂತ ಮತ್ತು ಮಟ್ಟದಲ್ಲಿ ಉಳಿದಿದೆ ಎಂಬುದನ್ನು ಅದು ತೋರಿಸುತ್ತದೆ.

ಯುರೋಪ್‌ ಮೂಲದ ಸಿದ್ಧಮಾದರಿಗಳನ್ನು ಅನಾಮತ್ತಾಗಿ ಅನುಕರಿಸುವುದರ ಜತೆಗೆ ಇಂಗ್ಲಿಷ್‌ ಮೊದಲಾದ ಅದೇ ಯುರೋಪಿಯನ್‌ ಮೂಲದ ಭಾಷೆಗಳನ್ನು ತಮ್ಮ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಮಾಧ್ಯಮವನ್ನಾಗಿ ಆರಿಸಿಕೊಂಡವರು ಹಾಗೂ ಆ ಯುರೋಪಿನ ಸಿದ್ಧಮಾದರಿಗಳನ್ನು ಅನುಕರಿಸಿ ಕನ್ನಡ, ತಮಿಳು, ಬಂಗಾಳಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪ್ರಯೋಗ ನಡೆಸಲು ಮುಂದಾದವರ ನಡುವೆ ಒಟ್ಟಾರೆ ಸಾಧನೆಯ ದೃಷ್ಟಿಯಿಂದ ಹೆಚ್ಚಿನ ಅಂತರವಿಲ್ಲ. ವ್ಯತ್ಯಾಸ ಇರುವುದು ಅವರು ತುಳಿದ ಭಿನ್ನ ದಾರಿಯಲ್ಲಿ. ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ಯುರೋಪಿನ ಸಿದ್ಧಮಾದರಿ ಮತ್ತು ಚಿಂತನಕ್ರಮದ ಜತೆಗೆ ಇಂಗ್ಲಿಷ್‌ ಭಾಷೆಯನ್ನು ಮೆಟ್ಟುಲುಗಳಾಗಿ ಬಳಸಿಕೊಂಡವರು ಕೊನೆಗೆ ತಲುಪಿದ್ದು ಸಿದ್ಧಮಾದರಿಯನ್ನು ಅಳವಡಿಸಿಕೊಳ್ಳಲು ಹೊರಟವರು ಕೊನೆಗೆ ಬಂದು ನಿಂತುದು ಅಲ್ಲಿಯೇ.

ತಮ್ಮ ಅನುಭವ ಪ್ರಾಮಾಣಿಕತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಇಂಗ್ಲಿಷ್‌ ಭಾಷೆಯನ್ನು ಆರಿಸಿಕೊಂಡ ಯಾರೂ ಮಾರ್ಕೆಜ್‌ ಆಗಲಿಲ್ಲವಾದಂತೆ, ಭಾರತದ ನೆಲೆಯಿಂದ ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ಕುರಿತಂತೆ ಸಹ ಇಂಗ್ಲಿಷಿನಲ್ಲಿಯೇ ಬರವಣಿಗೆ ಮಾಡಹೊರಟ ಯಾರೂ ಕೂಡ ಇ.ಎಚ್‌. ಕಾರ್‌ ಅಥವಾ ಜೆ. ಎಂ. ಕೇನ್ಸ್‌ ತಲುಪಿದ ಎತ್ತರವನ್ನು ತಲುಪಿದ ಉದಾಹರಣೆ ಇಲ್ಲ. ನ್ಯೂಟನ್‌, ಐನ್‌ಸ್ಟೈನ್‌ ಆಗುವ ಮಾತಿರಲಿ.

ಸ್ಟೀಫನ್‌ ಹಾಕಿನ್ ತನ್ನ ಕೃತಿಯಲ್ಲಿ ಆಡುವ ಮಹತ್ವಪೂರ್ಣ ಮಾತುಗಳನ್ನು ಮನನಮಾಡಲು ಇದು ಸಕಾಲ. ತಾನು ಈವರೆಗೆ ಮಾಡಿದ ಅಥವಾ ಯೋಚಿಸಿದ ಕ್ರಮ ಸರಿಯಾಗಿದೆಯೇ ಎಂದು ಪ್ರತಿ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ಕೇಳಿಕೊಳ್ಳಬೇಕಾದ ಪ್ರಶ್ನೆಗಳನ್ನು ತನಗೆ ತಾನೇ ಹಾಕಿಕೊಳ್ಳುವ ಹಾಕಿನ್, ಉತ್ತರ ಕಂಡುಕೊಳ್ಳಲು ಡಾರ್ವಿನ್ನನ ವಿಕಾಸವಾದದ ಮೊರೆ ಹೋಗುವುದನ್ನು ತೀವ್ರತರವಾದ ಆಸಕ್ತಿಯಿಂದ ಗಮನಿಸಬೇಕಾಗುತ್ತದೆ. ಆ ತರಹದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಡಾರ್ವಿನ್‌ವಾದವಲ್ಲದೆ ಮತ್ತೊಂದಿರುವುದು ಸಾಧ್ಯವಿಲ್ಲ ಎಂಬ ಗ್ರಹಿಕೆ ಆ ರೀತಿಯ ಬೆಳವಣಿಗೆಗೆ ಪ್ರಮುಖ ಕಾರಣ. ಅವರ ಇಡೀ ಸಂಸ್ಕೃತಿ, ಸಾಹಿತ್ಯ, ಚರಿತ್ರೆ, ನಾಗರಿಕತೆ, ಪ್ರಗತಿ ಮತ್ತು ಮನಸ್ಸು ಆ ದಿಕ್ಕಿನಲ್ಲಿಯೇ ಸಾಗಿಬಂದಿರುವುದು ನಿಜವಾದ ಕಾರಣ ಆಗಿದ್ದಿರಬಹುದು. ಐನ್‌ಸ್ಟೈನ್‌, ನ್ಯೂಟನ್‌, ಗೆಲಿಲಿಯೊ ಮೊದಲಾದವರು ಯುರೋಪ್‌ ನೆಲದಲ್ಲಿ ಮಾತ್ರವೇ ಏಕೆ ಬೆಳವಣಿಗೆ ಕಂಡರು. ಉಳಿದ ಕಡೆ ಅವರ ಆಗಮನವಾಗಲಿಲ್ಲ ಏಕೆ ಎಂಬ ಪ್ರಶ್ನೆಗಳಿಗೆ ಸಹ ಉತ್ತರ ಅಲ್ಲಿಯೇ ಅಡಗಿದೆ. ವಿಕಾಸವಾದದ ಸುಳಿವು ಅದೇ ಭಾಗದ ಚಾರ್ಲ್ಸ್‌ ಡಾರ್ವಿನ್‌ಗೆ ಮಾತ್ರವೆ ದಕ್ಕಿತು. ಉಳಿದ ಭಾಗದ ಜನರಿಗೆ ಹೊಳೆಯಲಿಲ್ಲ ಏಕೆ ಎಂಬ ಸಖೇದಾಶ್ಚರ್ಯಾತ್ಮಕ ಪ್ರಶ್ನೆಗಳಿಗೂ ಉತ್ತರವಾಗಿ ಹಾಕಿನ್‌ ಪ್ರತಿಪಾದಿಸುವ ಮನೋಧರ್ಮ ಈ ರೀತಿ ಸಾಗುತ್ತದೆ:

The only answer that I can give to this problem is based on Darwin’s principle of natural selection. The idea is that in any population of self – reproducing organisms, there will be variations in the genetic material and upbringing that different individuals are better able than others to draw the right conclusions about the world around them and to act accordingly.ಅಲ್ಲಿಯೇ ಪುಟ ೧೩

ತಮ್ಮ ಸುತ್ತಮುತ್ತಲಿನ ಆಗುಹೋಗು ಮತ್ತು ಜಗತ್ತನ್ನು ಸರಿಯಾಗಿ ಗ್ರಹಿಸಿ ಅರ್ಥೈಸಿಕೊಂಡು ಅದರಂತೆ ಕ್ರಿಯಾಶೀಲವಾಗುವುದನ್ನು ಕಲಿತುದರ ಫಲವಾಗಿ ಆ ತರಹದ ಮುನ್ನಡೆ, ಪ್ರಭಾವ ಮತ್ತು ಪ್ರಭುತ್ವ ಸ್ಥಾಪಿಸಲು ಅವರಿಗೆ ಸಾಧ್ಯವಾಗಿದೆ ಮತ್ತು ತತ್ಫಲವಾಗಿ ಉಳಿದವರು ಅದನ್ನು ಒಪ್ಪಿಕೊಂಡು ಸಾಗುವುದು ಅನಿವಾರ್ಯವಾಗುತ್ತದೆ ಎಂಬ ಇಂಗಿತ ಆ ಮಾತುಗಳಲ್ಲಿ ಅಡಕವಾಗಿರುವುದನ್ನು ಗಮನಿಸಲಾಗದಿರುವುದಿಲ್ಲ. ಪ್ರಭುತ್ವ, ಪ್ರಭಾವ, ಮುನ್ನಡೆ ಎಂಬ ಮಾತುಗಳನ್ನು ಬಳಸುವುದಿಲ್ಲವಾದರೂ ಆ ಎಲ್ಲ ಮತ್ತು ಸಂಬಂಧಿಸಿದ ಅರ್ಥಗಳನ್ನು ಅದರಿಂದ ಹೊರಡಿಸಬಹುದಾಗಿದೆ. ಉಳ್ಳವರು ಮತ್ತು ಇಲ್ಲದವರು ಎಂಬ ಎರಡು ವರ್ಗದ ಜನರಿರುವಂತೆಯೇ, ಕಾಲಕ್ಕೆ ಸ್ಪಂದಿಸುವವರು ಮತ್ತು ಸ್ಪಂದಿಸುವಲ್ಲಿ ವಿಫಲರಾದವರು ಹಾಗೂ ಆಳುವವರು ಮತ್ತು ಆಳಿಸಿಕೊಳ್ಳುವವರು ಇತ್ಯಾದಿ ಜನರ ಸಮುದಾಯ ವಿಭಜನೆಗೊಂಡಿರುವುದನ್ನು ಹಾಕಿನ್‌ ತೋರಿಸದೆ ತೋರಿಸುವ ವಿಚಿತ್ರ ಕೂಡ ಅಲ್ಲಿ ಜರುಗುತ್ತದೆ. ಆ ತರಹದ ಜನ ಸಮುದಾಯಗಳನ್ನು ಎಲ್ಲ ದೇಶ ಮತ್ತು ಭಾಷೆಗಳಲ್ಲಿ ಗಮನಿಸಬಹುದಾಗಿದೆಯಾದರೂ, ‘ಉಳ್ಳವರು’, ‘ಆಳುವವರು’ ಮತ್ತು ‘ಕಾಲಕ್ಕೆ ಸ್ಪಂದಿಸುವವರು’ ಎಂಬ ಮೂರು ಪಂಗಡಗಳ ಜನರು ಒಂದೇ ವರ್ಗ ಮತ್ತು ತೆಂಡೆಗೆ ಸೇರಿದವರಾಗಿರುವುದು ಸರ್ವೆಸಾಮಾನ್ಯ. ಮತ್ತು ಅಂಥವರು ಯುರೋಪ್‌ ಮೂಲದ ಪಶ್ಚಿಮ ಜಗತ್ತಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸುಸಂಘಟಿತ ರೂಪದಲ್ಲಿ ಕಂಡುಬರುತ್ತಾರೆ ಎಂದು ವಾದಿಸುವ ಅಗತ್ಯ ಬರಬಾರದು. ಆ ಸ್ವಭಾವ, ಮನೋಭಾವ, ಮನೋಭಾವ ಮತ್ತು ಮನೋಧರ್ಮ ಅವರಲ್ಲಿ ಬೇಕಾದ ಪ್ರಮಾಣದಲ್ಲಿದೆ ಎಂಬ ಅರ್ಥಸೂಕ್ಷ್ಮವನ್ನು ಗ್ರಹಿಸಲು ಪ್ರಕೃತಿ ನೀಡಿರುವ ಈ ಎರಡು ಕಣ್ಣುಗಳೇ ಸಮರ್ಥ, ಬೇರೆ ಸಾಧನಗಳ ಅಗತ್ಯವಿಲ್ಲ. ವರ್ಜಿಲ್‌ ಪ್ರತಿಪಾದಿಸುವ ನಿಯತಿಯಲ್ಲಿ ನಂಬಿಕೆ ಇಲ್ಲದ ಹಾಕಿನ್, ಅವುಗಳಿಗೆ ಬೇರೊಂದು ರೂಪದಲ್ಲಿ ಅಭಿವ್ಯಕ್ತಿ ನೀಡುತ್ತಿದ್ದಾನೆ ಎಂದು ಮೇಲೆ ಉದಹರಿಸಲಾದ ಆ ಕೆಲ ಮಾತುಗಳನ್ನು ಓದಿದ ಯಾರಿಗಾದರೂ ಅನ್ನಿಸಬಹುದು. ಆತನ ದನಿ ಆ ತರಹದ ನಿರ್ಣಾಯಕ ದಾಟಿಯಲ್ಲೇ ಸಾಗುತ್ತದೆ.

ಪ್ರಕಟವಾಗಿ ೧೦ ಸಂವತ್ಸರಗಳನ್ನು ದಾಟಿರುವ ಹಾಕಿನ್‌ರ ಆ ಕೃತಿ ಎತ್ತುವ ಪ್ರಶ್ನೆಗಳು ಮತ್ತು ಪ್ರತಿಷ್ಠಾಪಿತ ಧೋರಣೆಯನ್ನು ಪ್ರಶ್ನಿಸುವ ಅಗತ್ಯ, ಏಷ್ಯಾ ಮತ್ತು ಆಫ್ರಿಕಾ ಖಂಡದ ಜನರಿಗೆ ಈವರೆಗೂ ಎದುರಾದಂತೆ ಕಾಣುತ್ತಿಲ್ಲ. ಪ್ರಶ್ನಿಸಿದವರು ಯಾರಾದರೂ ಇದ್ದಲ್ಲಿ ಅವರು ಹೆಚ್ಚಾಗಿ ಯುರೋಪ್‌ ಜನರೇ ಆಗಿರುತ್ತಾರೆ. ಆದರೆ ಚಾರ್ಲ್ಸ್‌ ಡಾರ್ವಿನ್‌ ಮತ್ತು ಆತನ ವಿಕಾಸವಾದವನ್ನು ಟೀಕಿಸಲು ಬಳಸಲಾಗುವ ಬೈಬಲೀಕೃತ ಮನೋಧರ್ಮ ಮತ್ತು ಮನೋಭಾವದ ನೆರವಿನಿಂದ ಹಾಕಿನ್‌ ನಿಲುವು ಮತ್ತು ಧೋರಣೆಯನ್ನು ಟೀಕಿಸುವುದು ಅಥವಾ ಗೇಲಿ ಮಾಡುವುದರಿಂದ ಹಚ್ಚಿನ ಪ್ರಯೋಜನವಾಗುವುದಿಲ್ಲ. ಹಾಕಿನ್‌ ವಾದವನ್ನು ಟೀಕಿಸಲು ಪ್ರಯತ್ನಿಸುವವರು ಹೆಚ್ಚಾಗಿ ಅಂಥವರೇ ಆಗಿರುತ್ತಾರೆ. ಅವರ ನಿಲುವನ್ನು ಪ್ರಶ್ನಿಸಲು ಹಿಂದೂ ಅಥವಾ ಇಸ್ಲಾಂ ದೃಷ್ಟಿಕೋನ ಅಳವಡಿಸಿಕೊಳ್ಳುವುದಕ್ಕಿಂತ ನಗೆಪಾಟಲಿನ ಸಂಗತಿ ಮತ್ತೊಂದಿರಲಾರದು.

ಅದು ಹೊರತು ಅನ್ಯಮಾರ್ಗವೇ ಇಲ್ಲವೆ? ಯುರೋಪ್‌ ಮೂಲದ ಜನರು ಹಬ್ಬಿಸಿರುವ ಚಿಂತನಕ್ರಮ ಮತ್ತು ವಿಧಾನ, ಬದುಕಿನ ಮಾರ್ಗ ಮತ್ತು ಕಲೆ, ಸಂಸ್ಕೃತಿ ಮತ್ತು ನಾಗರಿಕತೆಗಳಿಗಿಂತಲೂ ಅತ್ಯಂತ ಭಿನ್ನವಾದ, ಪರ್ಯಾಯವಾದ ಮತ್ತು ಹೆಚ್ಚು ಅರ್ಥಪೂರ್ಣವಾದುದನ್ನು ನಿರ್ಮಾಣ ಮಾಡುವುದರಿಂದ ಹೆಚ್ಚಾಗಿ, ಅಂತಹದ್ದನ್ನು ನಿರ್ಮಿಸುವ ಮನಃಸ್ಥಿತಿಯಲ್ಲಿ ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾ ಖಂಡದ ಜನರು ಇದ್ದಾರೆಯೇ ಎಂಬುದು ಪ್ರಶ್ನೆ. ಆ ಸಾಧ್ಯತೆಯತ್ತ ಕೈಚಾಚಲು ಪ್ರಯತ್ನಿಸಿದ ಮಹಾತ್ಮಾ ಗಾಂಧೀಜಿ ಆ ರೀತಿ ಅಂತ್ಯ ಕಾಣಲು, ಹಾಕಿನ್‌ ಗ್ರಹಿಸುವ ಸತ್ಯದ ಅಂದರೆ ಕಾಲನ ಪರಿಮಿತಿ ಕಾರಣವಾಯಿತೆ!

ಅರ್ಹರಾದ ಸುಪುತ್ರರಿಗಾಗಿ ಹಂಬಲಿಸುವ ತಂದೆತಾಯಿಗಳ ಚಿತ್ರಣವನ್ನು ನೀಡುವುದರ ಮುಖೇನ ಕಾಳಿದಾಸ, ಸುತ್ತಮುತ್ತಲಿನ ಆಗುಹೋಗುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ಕ್ರಿಯಾಶೀಲವಾಗುವ ಜನಾಂಗದ ಕನಸು ಕಂಡಿಬಹುದೇ! ಆತನ ಸಾಧನೆ ಅನುಲ್ಲಂಘನೀಯವಾದ ಸೀಮಾರೇಖೆಯಾಗಿ ಉಳಿದು ಬಂದಿರಲು ಆತನ ಹಂಬಲದ ಹಿಂದಿನ ತುಡಿತಗಳನ್ನು ಗ್ರಹಿಸಲು ಸಾಧ್ಯವಾಗದೇ ಹೋದುದೆ ಕಾರಣವಾಗಿದ್ದಿರಬಹುದೇ?

ಕಾಲಕ್ಕೆ ಸ್ಪಂದಿಸುವವರು ಎಂದರೆ, ತಮ್ಮ ಸುತ್ತಮುತ್ತಲ ಜಗತ್ತಿಗೆ ಸ್ಪಂದಿಸಿ ಸರಿಯಾದ ನಿರ್ಣಯ ತೆಗೆದುಕೊಂಡು ಅದರಂತೆ ಕಾರ್ಯತತ್ಪರವಾಗುವುದು ಎಂದೇ ಅರ್ಥ.

ಬಸವಣ್ಣನ ಆಗಮನವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸುವ ಯತ್ನ ಮಾಡಬೇಕಾಗುತ್ತದೆ.

 

*೧೯೯೯ರ ಸುಮಾರಿನಲ್ಲಿ ಎಂದೋ ಒಂದು ದಿನ ಈ ಮಾತು ದಾಖಲಾಗುವ ಕಾಲಕ್ಕೆ ಅಮೆರಿಕದ ಪ್ರಮುಖ ಕಟ್ಟಡಗಳ ಮೇಲೆ ೨೦೦೧ರ ಸೆಪ್ಟೆಂಬರ್‌ ೧೧ ರಂದು ನಡೆದ ವಿಮಾನ ದಾಳಿ ಮತ್ತು ಪರಿಣಾಮವಾಗಿ ಬಿಲ್‌ಲಾಡೆನ್‌ ಗುಂಪಿನ ವಿರುದ್ಧ ಸಮರ ಸಾರಿದ ಘಟನೆ ಜರುಗಿರಲಿಲ್ಲ.

[1]‘ಸರ್ವಭೂತಗಳಲ್ಲಿ ತನ್ನನ್ನು ಮತ್ತು ತನ್ನಲ್ಲಿ ಸರ್ವಭೂತಗಳನ್ನು ಕಾಣುವವನಿಗೆ ಜಿಗುಪ್ಸೆ ಎಂಬುದಿರುವುದಿಲ್ಲ’ ಎಂಬ ಕ್ರಿ. ಪೂ. ಆರನೇ ಶತಮಾನದ್ದಿರಬಹುದಾದ ಉಪನಿಷತ್ತಿನ ಆರನೇ ಶ್ಲೋಕದಲ್ಲಿಯೇ ಇಂದಿನ ಏಕಾಲಜಿಯ ಉಗಮವನ್ನು ಕಾಣಬಹುದಾಗಿದೆ.