II

ತೀರ ಇತ್ತೀಚಿನವರೆಗೂ ಉತ್ತಮ ಕಾವ್ಯ ಓದುವ, ಚಿತ್ರಕಲೆ ನೋಡಿ ಆನಂದಿಸುವ ಮತ್ತು ಅತ್ಯುತ್ತಮ ಶಾಸ್ತ್ರೀಯ ಸಂಗೀತ ಆಸ್ವಾದಿಸುವ ಗುಣ ಆಧರಿಸಿ ಯಾವುದೇ ವ್ಯಕ್ತಿ ಅಥವಾ ಸಮಾಜ, ಸಂಸ್ಕೃತಿ ಮತ್ತು ನಾಗರಿಕತೆಯ ಹಾದಿಯಲ್ಲಿ ತಲುಪಿದ ಎತ್ತರ ಮತ್ತು ಔನ್ನತಿಕೆಯನ್ನು ಅಳೆಯಲಾಗುತ್ತಿತ್ತು. ಕಾವ್ಯ, ಕಲೆ, ಸಂಗೀತ ಮತ್ತು ವಾಸ್ತುಶಿಲ್ಪ ಮೊದಲಾದ ಕ್ಷೇತ್ರಗಳಲ್ಲಿ ಮಾಡಲಾದ ಸಾಧನೆಗಳು ಆಯಾ ಸಂಸ್ಕೃತಿ ಮತ್ತು ನಾಗರಿಕ ಮನಸ್ಸಿನ ಅಭಿವ್ಯಕ್ತಿಗಳಾಗಿ ಪರಿಗಣನೆಗೆ ಬರುತ್ತಿದ್ದವು. ಸುಂದರವಾದ ಹೆಣ್ಣಿನ ರೂಪದಲ್ಲೂ ಸಹ ಆಯಾ ಸಂಸ್ಕೃತಿ ಮತ್ತು ನಾಗರಿಕತೆಯ ಸೌಂದರ್ಯ ಶ್ರೇಷ್ಠತೆ ಅಭಿವ್ಯಕ್ತಗೊಳ್ಳುತ್ತದೆ ಎಂಬ ನಂಬಿಕೆ ಇದ್ದ ಕಾಲವೊಂದಿತ್ತು.

ಸೂಕ್ತವಾದ ವಾತಾವರಣ ಮತ್ತು ರಕ್ಷಿತ ವ್ಯವಸ್ಥೆ ಇದ್ದಾಗ ಮಾತ್ರ ಯಾವುದೇ ಸಾಂಸ್ಕೃತಿಕ ಮತ್ತು ನಾಗರಿಕ ಅಭಿವ್ಯಕ್ತಿಗಳು ಅರಳಲು ಸಾಧ್ಯ : ಆ ವಾತಾವರಣ ಮತ್ತು ಅನನ್ಯತೆಯನ್ನು ಸದಾ ಎಚ್ಚರ ಮತ್ತು ನಿರಂತರ ಜಾಗೃತಿಯಿಂದ ಕಾಪಾಡಿಕೊಳ್ಳಲಾಗದೇ ಹೋದಲ್ಲಿ, ಅಭಿವ್ಯಕ್ತಿ ಮೂಲಗಳು ಪಲಾಯನ ಮಾಡಿಬಿಡಬಹುದು[1] ಅಥವಾ ಅನ್ಯಾಕ್ರಮಣಕ್ಕೆ ತುತ್ತಾಗಿಬಿಡಬಹುದು ಎಂಬ ಸಾಧ್ಯತೆಯ ಕಡೆಗೆ ಹೆಲೆನ್‌ ಪಲಾಯನದ ಕತೆ ಹೇಳುವುದರ ಮೂಲಕ ಜನರ ಗಮನ ಸೆಳೆದವನೇ ಹೋಮರ್‌. ಆಗಿದ್ದಿರಲೂಬಹುದು. ಬುದ್ಧನಂತಹ ವ್ಯಕ್ತಿಯನ್ನು ಧಾರಣ ಮಾಡಲು ಬೇಕಾದ ಶಕ್ತಿ ಮತ್ತು ಸಾಮರ್ಥ್ಯವಿರುವ ವ್ಯವಸ್ಥೆಯನ್ನು ರೂಪಿಸಿಕೊಂಡಾಗ ಮಾತ್ರ ಅಂತಹ ವ್ಯಕ್ತಿ ಅವತರಿಸಲು ಸಾಧ್ಯ: ಆ ಧಾರಣಶಕ್ತಿಯೇ ಇಲ್ಲದೇ ಹೋದಲ್ಲಿ ಬುದ್ಧ ಅಥವಾ ಮತ್ತಾವುದೇ ಮಹಾಪುರುಷರ ಬದುಕು, ಬಾಳುವೆ ಮತ್ತು ಸಂದೇಶಗಳಿಗೆ ಅರ್ಥವಿರಲು ಸಾಧ್ಯವೆ? ಬುದ್ಧನಂತಹ ವ್ಯಕ್ತಿಗಳ ಆಗಮನವೇ ಸಹ ಧಾರಣ ಶಕ್ತಿಯಿಂದ ತುಂಬಿದ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದಿಟ್ಟುಕೊಂಡರೂ, ಮುಂದುವರಿಕೆಯ ದೃಷ್ಟಿಯಿಂದಲಾದರೂ ಅದರ ಅಗತ್ಯ ಇರುತ್ತದೆ. ತಾವು ಕಂಡುಕೊಂಡ ಮತ್ತು ಬದುಕಿನ ಹಾದಿಯಲ್ಲಿ ತಲುಪಿದ ಶ್ರೇಷ್ಠವಾದುದನ್ನು ಮುಂದೆಯೂ ಉಳಿಸಿ ಬೆಳಸಿಕೊಳ್ಳಬೇಕಾದ ಕಡೆಗೂ ಅದಕ್ಕಿಂತಲೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಅಲ್ಲವೆ?

ಆ ತರಹದ ಮೂಲಭೂತ ಪ್ರಶ್ನೆಗಳ ಕಡೆಗೆ ರಾಜಕೀಯದ ಹಿನ್ನೆಲೆಯಿಂದ ಬಂದ ಮತ್ತು ವಿವೇಕದ ತುತ್ತತುದಿ ತಲುಪಿದ ಬುದ್ಧ[2] ಕೂಡ ಹೆಚ್ಚಾಗಿ ಚಿಂತಿಸಿದಂತೆ ಕಾಣುವುದಿಲ್ಲ. ಎಲ್ಲರ ಅರ್ಥವಂತಿಕೆ ಮತ್ತು ತಿಳುವಳಿಕೆಯ ಪ್ರಮಾಣ ಒಂದೇ ತರಹ ಇರಲು ಸಾಧ್ಯವಿಲ್ಲ. ಆ ರೀತಿಯ ಅಂತರದ ಕಾರಣ ತಮ್ಮತನ ಮತ್ತು ಅನನ್ಯತೆ ಉಳಿಸಿಕೊಳ್ಳಲು ನಿರಂತರ ಜಾಗೃತಿ ಮತ್ತು ಸದಾ ಎಚ್ಚರ ಈ ಲೌಕಿಕ ಬದುಕಿನಲ್ಲಿಯೇ ಬೇಕಾಗುತ್ತದೆ ಎಂಬುದನ್ನು ಕಲಿಸಿದವನೇ ಹೋಮರ್‌ ಆಗಿದ್ದಿರಬಹುದು. ರಾಜಕೀಯ ಅಭದ್ರತೆಗೆ ತುತ್ತಾದ ಭಾಷೆ ಮತ್ತು ಸಂಸ್ಕೃತಿ ಬಹಳ ಕಾಲ ಉಳಿಯುವುದಿಲ್ಲ ಎಂಬ ಅರಿವು ಯುರೋಪಿಯನ್ನರಿಗೆ ಬಹಳ ಹಿಂದೆಯೇ ದಕ್ಕಿರಬೇಕು; ಆ ತರಹದ ಭಯ ಭಾರತದ ಕವಿಗಳನ್ನು ಕಾಡಿದ ಉದಾಹರಣೆ ಇಲ್ಲ ಮತ್ತು ರಾಜಕೀಯ ಅಭದ್ರತೆ ಕಾಣಿಸಿಕೊಂಡ ನಂತರ ಉಳಿದ ಎಲ್ಲ ತರಹದ ಅಭದ್ರತೆ ಆರಂಭವಾಗುತ್ತದೆ ಎಂಬ ಅರಿವು ಅವರಿಗೆ ದಕ್ಕಿದಂತೆ ತೋರುವುದಿಲ್ಲ. ‘ಕವಿರಾಜ ಮಾರ್ಗ’ ಆ ಮಾತಿಗೆ ಅಪವಾದವಾಗಿದ್ದಿರಬಹುದೆ!

ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ನಿರ್ಲಕ್ಷ್ಯ ಮನೋಭಾವದ ಸೂಚಕವಾಗಿರಬಹುದಾದಂತೆಯೇ, ಮುಂದೇನು ಎಂಬ ಭಯ ಅಷ್ಟಾಗಿ ಕಾಡದ ತ್ಯಕ್ತ ಸ್ಥಿತಿಯೊಂದರ ಸಂಕೇತ ಆಗಿರಲಿಕ್ಕೂ ಸಾಕು.

ಇಡೀ ಭಾರತವನ್ನು ಒಂದುಗೂಡಿಸಿ ಭಾರತದ ಜನರಿಗೆ ಸಾಮ್ರಾಜ್ಯದ ಕಲ್ಪನೆ ಮತ್ತು ಆ ಅನುಭವವನ್ನು ಮೊದಲ ಬಾರಿಗೆ ನೀಡಿದ ಮೌರ್ಯರ ಕಾಲದಲ್ಲಿ ಯಾವುದೇ ಭಾಷೆಯಲ್ಲೂ ಮಹತ್ವದ ಕವಿಗಳು ಹೋಗಲಿ ಕಾವ್ಯಗಳು ಬಂದ ಉದಾಹರಣೆ ಇಲ್ಲ. ಸಾಮ್ರಾಜ್ಯದ ಆಗಮನದ ಸೂಚನೆಯನ್ನು ‘ರಾಮಾಯಣ’ದಲ್ಲಿಯೇ ಕಾಣಬಹುದಾದಂತೆ, ಅದರ ಇಳಿಮುಖದ ಕತೆಯನ್ನು ಮೌರ್ಯ ಸಾಮ್ರಾಜ್ಯದನಂತರ ಬಂದ ಕಾಳಿದಾಸನ ‘ರಘುವಂಶಂ’ನಲ್ಲಿ ಕಾಣಬಹುದೇನೋ. ಆ ನಡುವೆ ಬರುವ ಅಪರಭಾರತ ಉತ್ತರರಾಮಾಯಣದ ಕವಿಗಳು ಯಾವ ಕಾಲದ ಹಂಗಿಗೆ ಒಳಗಾದವರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ? ಆ ತರಹದ ಕೆಲ ತಲ್ಲಣ ಹೊರತು ಕಾಳಿದಾಸ, ಒಟ್ಟಾರೆ ನೆಮ್ಮದಿಯಿಂದ ಬದುಕುತ್ತಿದ್ದ ಅಥವಾ ಆ ನೆಮ್ಮದಿಯನ್ನು ಕಳೆದುಕೊಳ್ಳುವ ಹೊಸ್ತಿಲಲ್ಲಿದ್ದ ಕಾಲದ ಕವಿಯಾಗಿರುವಂತೆ ತೋರುತ್ತದೆ.

ಆ ನೆಮ್ಮದಿ ಪಂಪ ಬರುವ ಕಾಲಕ್ಕಾಗಲೇ ತಲ್ಲಣಿಸತೊಡಗಿ ಪಂಪನ ಆಗಮನವಾದ ಕೆಲವೇ ವರ್ಷಗಳಲ್ಲಿ ಕುಸಿದುಹೋದ ರಾಷ್ಟ್ರಕೂಟ ಸಾಮ್ರಾಜ್ಯಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಬೇಕಿಲ್ಲ. ‘ಕಾವೇರಿಯಿಂದಾಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್‌ ಭಾವಿಪ ಜನಪದಂ’[3] ಎಂಬ ಕನ್ನಡ ಪ್ರಜ್ಞೆ ಮೆರೆದ ಕವಿ ಬಂದುದು ಈ ರಾಷ್ಟ್ರಕೂಟರ ಕಾಲದಲ್ಲಿಯೇ ಎಂಬುದು ಕೇವಲ ಆಕಸ್ಮಿಕವಾದ ಬೆಳವಣಿಗೆ ಏನಲ್ಲ. ರಾಷ್ಟ್ರಕೂಟರ ನಂತರ ಕರ್ನಾಟಕವನ್ನು ಒಂದು ಚಕ್ರಾಧಿಪತ್ಯದಡಿ ತಂದು ಆಳ್ವಿಕೆ ನಡೆಸಿದ ರಾಜಮನೆತನಗಳು ಬರಲೇ ಇಲ್ಲ.

ಆ ಮಾತು ಬರುವ ‘ಕವಿರಾಜ ಮಾರ್ಗ’ದ ರಚನಾಕಾರ ಶ್ರೀ ವಿಜಯನೋ ಅಥವಾ ಅಮೋಘವರ್ಷ ನೃಪತುಂಗನೋ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವ ಕನ್ನಡ ಸಾರಸ್ವತಲೋಕ ಅಲ್ಲಿಯೇ ಹುದುಗಿರುವ ಒಂದು ಸೂಕ್ಷ್ಮ ಸಂಗತಿಯನ್ನು ಗಣನೆಗೆ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ವ್ಯಕ್ತವಾಗುವ ಗಾಢ ಕನ್ನಡ ಕನ್ನಡ ಪ್ರಜ್ಞೆ ಮತ್ತು ಮುಂದಿನ ಕೃತಿಗಳಿಗೆ ಮಾರ್ಗದರ್ಶನ ನೀಡುವ ಹುಮ್ಮಸ್ಸು ಆ ಕೃತಿಗೆ ವಿಶಿಷ್ಟ ಮತ್ತು ಅಪರೂಪವಾದುದು. ಆ ತುರ್ತಿನಿಂದ ಬರೆಯಲಾದ ಮತ್ತೊಂದು ಕೃತಿಯನ್ನು ಭಾರತದ ಮತ್ತಾವುದೇ ಭಾಷೆಯಲ್ಲಿ ಕಾಣುವುದು ಕಷ್ಟ ಸಾಧ್ಯ. ಅಂತಹ ತುರ್ತು ಮತ್ತು ಗಾಢ ಕನ್ನಡ ಪ್ರಜ್ಞೆಯಿಂದ ಬರೆಯಲಾದ ಕೃತಿಯ ರಚನಾಕಾರನಾಗಿ ಚಕ್ರವರ್ತಿಯೊಬ್ಬ ತನ್ನ ಹೆಸರನ್ನು ನೀಡಲು ಮುಂದಾಗುವುದು ಮತ್ತು ಅಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳನ್ನು ಚಕ್ರವರ್ತಿಯೊಬ್ಬ ತನ್ನವು ಎಂದು ಅಧಿಕೃತ ಮುದ್ರೆ ನೀಡಿ ಪ್ರಚುರಕ್ಕೆ ತರಲು ಬಯಸುವುದು ಸಾಧಾರಣ ಸಂಗತಿ ಏನಲ್ಲ. ಆ ದೃಷ್ಟಿಯಿಂದ ನೋಡುವುದಾದಲ್ಲಿ ರಚನಕಾರ ಮತ್ತು ಚಕ್ರವರ್ತಿ ಇಬ್ಬರೂ ಚರ್ಚಿಸಿ ಆ ಕೃತಿ ರಚಿಸಿದಂತೆ ತೋರುತ್ತದೆ. ಅಲ್ಲಿನ ಬಹುತೇಕ ಅಥವಾ ಕೆಲವಾದರೂ ಅಭಿಪ್ರಾಯಗಳು ಚಕ್ರವರ್ತಿಯವಾಗಿದ್ದು, ತನ್ನ ಭಾವನೆಗಳನ್ನು ಸೇರಿಸಿ ಛಂದೋರೂಪದಲ್ಲಿ ಅಭಿವ್ಯಕ್ತಿ ನೀಡಿದ ಕವಿ ಶ್ರೀ ವಿಜಯನಿದ್ದಿರಬಹುದು. ‘ಕವಿರಾಜ ಮಾರ್ಗ’ ಎಂಬ ಹೆಸರೇ ಹೇಳುವಂತೆ ಆ ಕೃತಿ ರಾಷ್ಟ್ರಕೂಟ ಸಾಮ್ರಾಜ್ಯದ ಅಧಿಕೃತ ಹೊತ್ತಿಗೆ ಇಂದಿನ ಅರ್ಥದ ಅಂದಿನ ಪ್ರಣಾಳಿಕೆ. ಹಾಗಾಗಿ ಆ ಕೃತಿಯನ್ನು ಶ್ರೀವಿಜಯ ಬರೆದನೋ ಅಥವಾ ಬೇರೊಬ್ಬ ಕವಿಯೋ ಎಂಬ ವಿಷಯ ಕೇವಲ ಐತಿಹಾಸಿಕ ಕುತೂಹಲಕ್ಕೆ ಮಾತ್ರ; ಅದು ರಾಷ್ಟ್ರಕೂಟರ ಕಾಲದ ಹೊತ್ತಿಗೆ ಎಂಬುದು ಇಲ್ಲಿ ಬಹಳ ಮುಖ್ಯ. ಸಾಮ್ರಾಜ್ಯದ ಉಸ್ತುವಾರಿ ನೋಡಿಕೊಳ್ಳುವ ಹೊಣೆ ಹೊತ್ತ ಚಕ್ರವರ್ತಿಯೊಬ್ಬ ಅಂತಹ ಮಾರ್ಗದರ್ಶಿ ಕೃತಿಯನ್ನು ತನ್ನ ಹೆಸರಿನಲ್ಲಿ ಬರೆದು ಪ್ರಕಟುಸಲು ಮುಂದಾದ ಮತ್ತೊಂದು ಉದಾಹರಣೆ ಈ ಜಗತ್ತಿನಲ್ಲಿ ಇಲ್ಲ. ಮೊದಲೇ ಹೇಳಿದಂತೆ ಅದೊಂದು ಮಾರ್ಗದರ್ಶಿ ಕೃತಿ – ಎಲ್ಲ ಅರ್ಥದಲ್ಲೂ : ಶ್ರೀವಿಜಯ ಒಬ್ಬನೇ ಏಕೆ ಅಮೋಘವರ್ಷ ನೃಪತುಂಗನ ಅನೇಕ ಸಮಕಾಲೀನರ ಮತ್ತು ಹಿಂದಿನವರ ಅಭಿಪ್ರಾಯಗಳೂ ಅದರಲ್ಲಿ ಅಡಕಗೊಂಡಿರಬಹುದು.

ಈ ಜಗತ್ತಿನ ವಿಶಿಷ್ಟ ಕೃತಿಯಾದ ‘ಕವಿರಾಜಮಾರ್ಗ’ದ ಪ್ರಾಮುಖ್ಯ ಅರಿಯುವ ಕಡೆಗೆ ಗಮನ ಹೋಗುವ ಮೊದಲು, ಭಾರತದ ಪ್ರಸಿದ್ದ ಇತಿಹಾಸಗಾರ್ತಿ ರೊಮಿಲಾ ಥಾಪರ್‌ ಆಡುವ ಒಂದು ಮಾತನ್ನು ಗಮನಿಸುವುದು ಅಗತ್ಯ. ಆ ಮಾತನ್ನು ಗ್ರಹಿಕೆಗೆ ತಂದುಕೊಳ್ಳುವ ಮೊದಲು, ಪೂರಕವಾದ ಹಿನ್ನೆಲೆಯ ಮಹತ್ವವನ್ನು ಸಹ ಅರಿಯಬೇಕಾಗುತ್ತದೆ. ಕವಿರಾಜಮಾರ್ಗದ ದಟ್ಟ ಕನ್ನಡ ಪ್ರಜ್ಞೆಯ ಪ್ರತೀಕವಾದ ರಾಷ್ಟ್ರಕೂಟ ಸಾಮ್ರಾಜ್ಯ ಅಖಿಲ ಕನ್ನಡಿಗರ ಕೊನೆಯ ಸಾಮ್ರಾಜ್ಯವಾದಂತೆ, ಅಖಿಲ ಭಾರತ ಮಟ್ಟದ ಮೊದಲ ಮತ್ತು ಕೊನೆಯ ಸಾಮ್ರಜ್ಯ ಮೌರ್ಯರ ಸಾಮ್ರಜ್ಯ. ಆನಂತರ ಬಂದ ಗುಪ್ತರ ಸಾಮ್ರಜ್ಯ ಆ ವ್ಯಾಪ್ತಿ ಮತ್ತು ಪ್ರತಿಷ್ಠೆಯನ್ನು ಎಂದೂ ಪಡೆದುಕೊಳ್ಳಲಿಲ್ಲ. ಗುಪ್ತರ ಪತನಾನಂತರ ಆಳಿ ಬೆಳಗಿದ ಪ್ರಮುಖ ಸಾಮ್ರಾಜ್ಯಗಳ ನೆಲೆ ದಕ್ಷಿಣ ಭಾರತ. ತಮಿಳ್ನಾಡು ಮೂಲದ ಸಾಮ್ರಾಜ್ಯಗಳ ಚಕ್ರವರ್ತಿಗಳ ಗಮನ ಪ್ರಮುಖವಾಗಿ ಶ್ರೀಲಂಕಾ ಮತ್ತು ಇಂಡೋ – ಚೀನಾ ಭಾಗದ ಕಡೆಗೆ ಹರಿಯಿತು. ದೇಶದ ಒಳಗಡೆ ಉತ್ತರಾಭಿಮುಖವಾಗಿ ಸಾಗುವ ಮಹತ್ವಾಕಾಂಕ್ಷೆ ಪ್ರಕಟಿಸಿದವರಲ್ಲಿ ರಾಷ್ಟ್ರಕೂಟರು ಪ್ರಮುಖರು. ಪಂಪನ ಮಾತಿನಲ್ಲಿಯೇ ಹೇಳುವುದಾದರೆ:

‘ಗಂಗಾವಾರ್ಧಿಯೊಳಾತ್ಮ ತು |
ರಂಗಮುಮಂ ಮಿಸಿಸಿ ನೆಗೆೞ್ದ’

ಮೊದಲ ದಾಕ್ಷಿಣಾತ್ಯ ಚಕ್ರವರ್ತಿಯ ಕುಟುಂಬದಲ್ಲಿ ‘ಸೆಲೆ ನೆಗೞ್ದ ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ’ ಎಂಬ ಕೀರ್ತಿ ಪಡೆದ ಅರಿಕೇಸರಿ ಸಾಧಾರಣನಾದವನಲ್ಲ. ಆ ಎಲ್ಲ ಹಿನ್ನೆಲೆಯ ವಿವರ ಮತ್ತು ಅರಿವು ಅರಿಕೇಸರಿಯ ಆಸ್ಥಾನ ಕವಿಪಂಪನಿಗೆ ಇತ್ತು. ಪಂಪ ಬರುವ ಕಾಲಕ್ಕಾಗಲೇ ಪುಲಕೇಶಿ ಹರ್ಷ ಚಕ್ರವರ್ತಿಯನ್ನು ಸೋಲಿಸಿದ್ದ ಅಷ್ಟೇ, ಅಲ್ಲಿಂದ ಮುಂದುವರಿಯುವ ಆಕಾಂಕ್ಷೆ ತೋರಲಿಲ್ಲ. ಆ ಆಕಾಂಕ್ಷೆ ಪ್ರಕಟಿಸಿದವರೇ ರಾಷ್ಟ್ರಕೂಟ ಚಕ್ರವರ್ತಿಗಳು. ಆ ಬಗ್ಗೆ ರೊಮಿಲಾ ಆಡುವ ಮಾತುಗಳು:

If we can explan the reasons for shift in from the Indus vally to the Ganges valley in proto – historic times, Then we can also throw some light on one of the more in – Teresting facets of ancient Indian history, namely, the Geographical shift in the unclear regions which were the Matrices of large states and empire. At least three regions come immediately to mind : Magadha, the Raichur – Bijapur districts, and the area between Kanchipuram and Tanjore. Why did these regions give rise to a series of politically Dominant states and then go into quiescence? Was it due to The fertility of the region yielding large revenues, or the abundant availability of iron, or access to trade routes, or the exploitation of a new technology or the rise of ideologies motivating political action? Or was it merely the strong but happy coincidence of series of strong rulers, which is the explanation generally offered?[4]

ಅದೇ ಮಾತುಗಳಿಗೆ ಟಿಪ್ಪಣಿ ರೂಪದಲ್ಲಿ ಅದೇ ಪುಸ್ತಕದಲ್ಲಿ ಬರೆದ ಮಾತುಗಳು;

Magadha in the period from 400 B.C to A.D.400 saw the Rise of the Mauryas and the Guptas; the Raichur – Bijapur Region in period from 500 to 1200 was nucleus of Ca – lukya and Ra – strakuta – power and Kanchi – Tanjore Rehion in the same period was the homeland of the Pallavas And Cholas. Other areas also gave rise to important dynas – Ties, but generally to only a single dynasty in a shorter Period, e.g. Kannauj under Harsa – , Bengal under the pa – as, Etc.   ಪುಟ ೨೩೮

ಗಂಗಾನದಿಯಲ್ಲಿ ತಮ್ಮ ಕುದುರೆಗೆ ಸ್ನಾನ ಮಾಡಿಸಿದ ಹೆಮ್ಮೆ ಪಡೆದ ರಾಷ್ಟ್ರಕೂಟರ ಸಾಮ್ರಾಜ್ಯ ಪಂಪ ಬಂದು ಹೋದ ಕೆಲವೇ ವರ್ಷಗಳಲ್ಲಿ ಕಾಣೆಯಾಯಿತು. ಸುಭದ್ರವಾದ ರಾಜಕೀಯ ನೆಲೆಯಿಲ್ಲದ ಭಾಷೆ ಮತ್ತು ಸಂಸ್ಕೃತಿಗಳು ಬಹಳ ಕಾಲ ಉಳಿಯಲಾರವು ಎಂಬ ಸಂಗತಿ, ಜನಸಾಮಾನ್ಯರ ಆಡುಭಾಷೆಯನ್ನು ಎಪಿಕ್‌ – ಮಾದರಿ – ಕಾವ್ಯದ ಭಾಷೆಯಾಗಿ ಅತ್ಯಂತ ಸಮರ್ಪಕ ರೀತಿಯಲ್ಲಿ ಪರಿವರ್ತಿಸಿದ ಪಂಪನಿಗೆ ತೋಚಲಿಲ್ಲವೆ! ಪಂಪ ಬರುವ ಕಾಲಕ್ಕಾಗಲೇ ಭಾರತೀಯ ಸಮಾಜ ಜೈನ, ಶೈವ ಇತ್ಯಾದಿ ಹಲವಾರು ಮತೀಯ ಪಂಗಡಗಳಾಗಿ ವಿಭಜಿಸಿ ಹೋಗಿತ್ತು. ಆ ಕಾರಣವೇ ಆತನಿಗೆ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯಂ’ ಪ್ರತ್ಯೇಕ ಕಾವ್ಯಗಳಾಗುತ್ತವೆ. ಆದರೆ ವ್ಯಾಸಭಾರತದಲ್ಲಿ ಆ ತರಹದ ಮತೀಯ ವಿಭಜನೆ ಇಲ್ಲ; ಇಲಿಯಡ್‌ – ಒಡಿಸ್ಸಿ ತರಹವೇ ಅತ್ಯಂತ ಸೆಕ್ಯುಲರ್‌ ಪೇಗನ್‌ ಕಾವ್ಯವಾದ ಮಹಾಭಾರತದ ಚೌಕಟ್ಟು ತನ್ನ ಕಾಲದ ಮತೀಯ ವಾತಾವರಣಕ್ಕೆ ಹೊಂದುವುದಿಲ್ಲ ಎಂಬ ಸರಳ ವಿಚಾರ ಪಂಪನಿಗೆ ಹೊಳೆಯಲಿಲ್ಲವೇ? ಪಂಪ ಬಳಸುವ ಭಾಷೆಯಲ್ಲಿ ಮತ್ತು ನೀಡುವ ಕೆಲ ವರ್ಣನಾತ್ಮಕ ವಿವರಗಳಲ್ಲಿ ಆತನ – ಸಮಕಾಲೀನ ಸಮಾಜದ ಅಂಶ ಅಥವಾ ಲೇಪಗಳನ್ನು ಬಹಳ ಕಷ್ಟಪಟ್ಟು ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಗುರುತಿಸಬಹುದಾದರೂ, ಆತ ಬರೆದ ವಿಕ್ರಮಾರ್ಜುನ ವಿಜಯವಾಗಲಿ ಅಥವಾ ಆದಿಪುರಾಣವಾಗಲಿ ಆತನ ಕಾಲದ ಕಾವ್ಯವಾಗಲು ಸಾಧ್ಯವೇ?

ರಾಷ್ಟ್ರಕೂಟರ ಪತನಾನಂತರ ಕನ್ನಡದ ಬಗ್ಗೆ ಒಲವಿದ್ದ ಮತ್ತೊಂದು ಸಾಮ್ರಾಜ್ಯ ಕರ್ನಾಟಕದಲ್ಲಿ ಬರಲೇ ಇಲ್ಲ. ಆ ಕಾಲದ ಕವಿಯಾದ ಪಂಪನ ಕಾಲಕ್ಕಾಗಲೇ ಭಾರತದ ಮೇಲೆ ದಂಡೆತ್ತಿ ಬರಲು ಇಸ್ಲಾಂ ಶಕ್ತಿಗಳು ಸಜ್ಜಾಗುತ್ತಿದ್ದವು. ಜತೆಗೆ ಇಸ್ಲಾಂ ರಿಲಿಜನ್‌ ಉದಯವಾಗುವವರೆಗಿನ ದಂಡಯಾತ್ರ, ದಾಳಿ ಅಥವಾ ಆಕ್ರಮಣಗಳು ಮೂಲತಃ ರಾಜಕೀಯ ಪ್ರೇರಿತವಾದುವಾಗಿದ್ದವು. ಆ ಮೂಲಕ ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶವಾಗುತ್ತಿತ್ತು. ಆದರೆ ಇಸ್ಲಾಂ ಶಕ್ತಿಗಳ ಉದಯದನಂತರ ದಾಳಿ ಅಥವಾ ದಂಡಯಾತ್ರೆಯ ಅರ್ಥ ಮತ್ತು ಪರಿಕಲ್ಪನೆಯೇ ಬದಲಾಗಿ ಹೋಗಿ ಅದಕ್ಕೆ ಹಿನ್ನೆಲೆಯಾಗಿ ರಿಲಿಜನ್‌ ಕೂಡ ಸೇರಿಸಿಕೊಂಡಿತು. ಹಾಗಾಗಿ ಇಸ್ಲಾಂ ಶಕ್ತಿಗಳು ಮತ್ತು ಇಸ್ಲಾಂ ಆಧಾರಿತ ಸಾಮ್ರಾಜ್ಯಗಳ ಉದಯದೊಂದಿಗೆ ಇಡೀ ಜಗತ್ತಿನಲ್ಲಿ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಸಂಬಂಧಗಳೇ ಬದಲಾಗಿ ಹೋದವು. ರಾಜಕೀಯ ರೂಪ ಪಡೆದುಕೊಂಡ ಮೊದಲ ರಿಲಿಜನ್‌ ಇಸ್ಲಾಂ. ತಮ್ಮ ಅನುಯಾಯಿಗಳ ಸಂಖ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಬುದ್ಧ, ಕ್ರಿಸ್ತ ಮೊದಲಾದ ಎಲ್ಲರು ಮತ್ತವರ ಅನುಯಾಯಿಗಳು ಮಾಡಿದ್ದಾರೆ. ರಾಜರನ್ನು ಓಲೈಸಿ ಅವರನ್ನು ಪರಿವರ್ತಿಸಲು ನೋಡಿದ್ದಾರೆ. ಕ್ರಿಶ್ಚಿಯನ್‌ ರಿಲಿಜನ್‌ ಆಗಮನದನಂತರ ಆವರೆಗೂ ಇದ್ದ ಹೋಮರ್‌ ವರ್ಜಿಲ್‌ ಕಾಲದ ಸೆಕ್ಯುಲರ್‌ ಪರಿಕಲ್ಪನೆಗೆ ಹತ್ತಿರವಾದ ಧಾರ್ಮಿಕ ವಾತಾವರಣ ಬದಲಾಗುತ್ತಾ ಹೋಯಿತಾದರೂ, ಇಸ್ಲಾಂ ಉದಯದೊಂದಿಗೆ ಅದು ಮಹತ್ವದ ಬದಲಾವಣೆ ಕಂಡಿತು; ಸಾಹಿತ್ಯ, ಕಲೆ ಇತ್ಯಾದಿ ಎಲ್ಲ ಸಾಂಸ್ಕೃತಿಕ ಕ್ಷೇತ್ರಗಳನ್ನು ರಿಲಿಜನ್‌ ಆವರಿಸಿಕೊಳ್ಳುವ ಪರಂಪರೆ ಮತ್ತಷ್ಟು ಬಲಗೊಂಡಿತು.

ಆ ರೀತಿ ಆಗುತ್ತಿದ್ದ ಬದಲಾವಣೆಗಳು ಪಂಪನಂತಹ ಕವಿಯ ಒಳಗಣ್ಣನ್ನು ಮುಟ್ಟಲಿಲ್ಲ ಏಕೇ? ಕಾಳಿದಾಸನ ಕಾಲಕ್ಕಾಗಲೇ ಆ ಸೂಚನೆಗಳು ಕಾಣಿಸಿಕೊಂಡಿದ್ದವು. ಒಂದು ಖಚಿತ ಕಾಲಮಾನದ ಕೊಡುಗೆಯಾದ ಮಹತ್ವದ ಕವಿಗಳು ಈ ಮೊದಲೇ ಹೇಳಿದಂತೆ ಎಲ್ಲ ಕಾಲದಲ್ಲೂ ಬರುವುದು ಸಾಧ್ಯವಿಲ್ಲ. ಆ ಕಾರಣವೇ ಬಂದ ಕವಿಗಳು ಎಂಥವರಾಗಿರುತ್ತಾರೆ ಮತ್ತು ಅವರು ನೀಡುವ ದರ್ಶನ ಯಾವುದಾಗಿರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಮಹರ್ಷಿ ಮತ್ತು ದ್ರಷ್ಟಾರ ಎಂಬ ಪದಗಳನ್ನು ಯಾವುದೇ ಮುಲಾಜಿಲ್ಲದೆ ಅನ್ವಯಿಸುವುದಾದಲ್ಲಿ ಅದು ಎಪಿಕ್‌ ಕವಿಗಳಿಗೆ ಮಾತ್ರ: ವ್ಯಾಸ, ವಾಲ್ಮೀಕಿ, ವರ್ಜಿಲ್‌ ಮೊದಲಾದವರು ಆ ಸಾಲಿಗೆ ಸೇರಿದವರು. ಪಂಪನಿಗೆ ಆ ಪಾತ್ರ ನಿರ್ವಹಿಸುವ ಎಲ್ಲ ಅವಕಾಶಗಳಿದ್ದವು. ಒಂದು ದೇಶದ ಸಂಸ್ಕೃತಿ ಮತ್ತು ವೈಶಿಷ್ಟ್ಯ ಅಂಥವರನ್ನು ಬಹಳವಾಗಿ ಅವಲಂಬಿಸಿರುತ್ತದೆ. ಯಾವ ಕನ್ನಡ ಪ್ರಜ್ಞೆಯನ್ನು ಬದುಕಿನ ಮಾರ್ಗ ಮತ್ತು ಭಾಗವಾಗಿ ಕಾಣುವ ಉದ್ದೇಶದಿಂದ ರಾಷ್ಟ್ರಕೂಟರ ಕಾಲದ ಕವಿಗಳು ಮತ್ತು ರಾಜರು ‘ಕವಿರಾಜಮಾರ್ಗ’ ರಚಿಸಿದರೋ, ಅದರ ಮಹತ್ವವನ್ನು ಅದು ಬಂದ ಕೆಲವೇ ವರ್ಷಗಳಲ್ಲಿ ಆಗಮಿಸಿದ ಪಂಪ ಕವಿಯ ಕೈಯಲ್ಲೂ ಗ್ರಹಿಸಲು ಆಗಲಿಲ್ಲವೇ?

ಅರಿಕೇಸರಿಯ ಕತೆ ಬರೆಯುವ ಉದ್ದೇಶದಿಂದ ಪಂಪ ಮಹಾಭಾರತ ಆರಿಸಿಕೊಂಡಂತೆ, ವರ್ಜಿಲ್‌ ಕೂಡ ಜೂಲಿಯಸ್‌ ಸೀಸರ್‌ ಕುಟುಂಬದ ಕತೆ ಆಧರಿಸಿದ ಲಿಖಿತ – ಎಪಿಕ್‌ ಬರೆಯಲು ಹೋಮರನ ‘ಇಲಿಯಡ್‌’ಗೆ ಹೋಗುತ್ತಾನೆ. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗ ಮತ್ತು ತುಳಿದ ದಾರಿ ಮತ್ತು ತಲುಪಿದ ಗುರಿ ಹೇಗೆ ಭಿನ್ನವಾಗಿವೆ ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ ಸನ್ನಿವೇಶದಲ್ಲಿನ ಕೆಲ ವ್ಯತ್ಯಾಸಗಳನ್ನು ಗಮನಿಸುವುದು ಒಳ್ಳೆಯದು. ಕನ್ನಡದ ಮೊದಲ ಎಪಿಕ್‌ ಮಾದರಿಯ ಕಾವ್ಯ ಬರೆದ ಪಂಪ ಇದ್ದುದು ಮಾಂಡಲೀಕನಾದ ಅರಿಕೇಸರಿಯ ಆಶ್ರಯದಲ್ಲಿ. ಆದರೆ ವರ್ಜಿಲ್‌ ಎಂದೂ ಯಾರ ಆಶ್ರಯವನ್ನೂ ಬಯಸಿರಲಿಲ್ಲ. ಚಕ್ರವರ್ತಿ ಎಂದು ಘೋಷಿಸಿಕೊಳ್ಳದೆ ಅದೇ ತರಹ ನಡೆದುಕೊಂಡ ಅಗಸ್ಟಸ್‌ ಸೀಸರ್‌ ವರ್ಜಿಲನನ್ನು ಮಿತ್ರ ಎಂದೇ ಪರಿಗಣಿಸಿದ್ದ. ರಾಜಾಶ್ರಯದಲ್ಲಿ ಉಳಿದುಕೊಳ್ಳಬೇಕಾಗಿ ಬಂದ ಕವಿಯೊಬ್ಬ ಆಶ್ರಯದಾತನನ್ನು ಮಿತ್ರನನ್ನಾಗಿ ಪರಿಗಣಿಸಲು ಸಾಧ್ಯವೇ? ವರ್ಜಿಲ್‌ ಬರೆದುದು ‘ಈನೀಡ್‌’ ಆದರೆ, ಪಂಪ ಬರೆದುದು ‘ವಿಕ್ರಮಾರ್ಜುನ ವಿಜಯಂ’ ಆಯಿತು. ‘ಈನೀಡ್‌’ ವರ್ಜಿಲ್‌ ಕಾಲದ ಕೃತಿ. ಆ ಮಾತನ್ನು ‘ಪಂಪ ಭಾರತ’ದ ಬಗ್ಗೆ ಹೇಳುವ ಧೈರ್ಯ, ಅತಿ ಜಾಣರು ಮತ್ತು ಅತ್ಯಂತ ಬುದ್ಧಿವಂತರಿಗೆ ಮಾತ್ರ ಬರಲು ಸಾಧ್ಯ. ಜನರಿಗೆ ಹತ್ತಿರವಾಗಿ ಯಾವುದೇ ರಾಜರ ಹಂಗಿಲ್ಲದೆ ಬದುಕಿ ಆ ಜನರಾಡುವ ಭಾಷೆಯನ್ನೇ ಎಪಿಕ್‌ ಮಾದರಿಯ ಕಾವ್ಯದ ಭಾಷಾಮಾಧ್ಯಮವಾಗಿ ಪರಿವರ್ತಿಸುವ ವಿಚಾರದಲ್ಲಿ ಅಸಾಧ್ಯದ ಸಾಧನೆ ಮಾಡಿದ ಕುಮಾರವ್ಯಾಸ ನಂಥ ಕವಿ ಕೂಡ ಸಾಗುವುದು ಕೊನೆಗೆ ಪಂಪನ ಹಾದಿಯಲ್ಲಿ. ಆತನ ಕಾಲಕ್ಕಾಗಲೇ ಭಾರತ ಪರಾಕ್ರಮಣಕ್ಕೆ ತುತ್ತಾಗಿ ಹೋಗಿತ್ತು. ಕುಮಾರವ್ಯಾಸನಂಥ ಪ್ರತಿಭಾವಂತ ಮತ್ತು ಶಕ್ತಿಶಾಲಿ ಕವಿಯನ್ನು ಕಾಣಬೇಕಾದರೆ ಯಾವುದೇ ಭಾಷೆಗೆ ಎಷ್ಟೋ ಶತಮಾನಗಳು ಬೇಕಾಗುತ್ತದೆ.

೧೨ನೇ ಶತಮಾನದ ವಚನಕ್ರಾಂತಿಯ ನಂತರ ಬಂದ ಮತ್ತು ಕುಮಾರವ್ಯಾಸನ ತರಹವೇ ಜನಸಾಮಾನ್ಯರ ನಡುವೆ ಬದುಕಿ ಕಾವ್ಯ ಬರೆದ ಹರಿಹರ – ರಾಘವಾಂಕರು ವಸ್ತುವಿನ ಆಯ್ಕೆಯಲ್ಲಿ ಸ್ವಲ್ಪವಾದರೂ ಭಿನ್ನ ಜಾಡಿನಲ್ಲಿ ಸಾಗುತ್ತಾರಾದರೂ, ಕಾಲನಿಗೆ ಸ್ಪಂದಿಸುವ ವಿಚಾರದಲ್ಲಿ ಅದೇ ಮಾಮೂಲು ಜಾಡನ್ನೇ ತುಳಿಯುತ್ತಾರೆ. ಕೇವಲ ಛಂದೋರೂಪದಲ್ಲಿ ತರಲಾಗುವ ಬದಲಾವಣೆಗಳಿಂದ ಹೆಚ್ಚಿನದೇನನ್ನೂ ಸಾಧಿಸಬರುವುದಿಲ್ಲ ಎಂಬುದನ್ನು ಕಂಡುಕೊಳ್ಳಬೇಕಾದರೆ ಹರಿಹರ – ರಾಘವಾಂಕರನ್ನು ಹತ್ತಿರದಿಂದ ಅಧ್ಯಯನ ಮಾಡಬೇಕು. ಆ ಇಬ್ಬರನ್ನೂ ಕಾವ್ಯರಚನೆಯಿಂದ ಬರುವ ಹಣ ಅಥವಾ ಕೀರ್ತಿ ಇತ್ಯಾದಿ ಪ್ರಲೋಭನೆಗಳು ಹೆಚ್ಚಾಗಿ ಕಾಡಿದಂತೆ ಕಾಣುವುದಿಲ್ಲ. ಆದರೂ!

‘ಗಿರಿಜಾ ಕಲ್ಯಾಣ’, ‘ಹರಿಶ್ಚಂದ್ರ ಕಾವ್ಯ’ ಬರೆಯುವ ರೀತಿಯಲ್ಲಿಯೇ ಹರಿಹರ ರಾಘವಾಂಕರು ಶರಣರ ಬದುಕನ್ನು ಆಧರಿಸಿದ ರಗಳೆಗಳು ಮತ್ತು ಇತರ ಕಾವ್ಯ ಬರೆಯುತ್ತಾರೆ, ತಮಗೂ ಕೆಲ ವರ್ಷಗಳ ಹಿಂದೆ ಬದುಕಿದ ಶರಣರು ಅವರ ಕೈಯಲ್ಲಿ ಪುರಾಣಪುರುಷರಾಗಿ ಮಾರ್ಪಡುತ್ತಾರೆ. ಪರಿಣಾಮವಾಗಿ, ಹರಿಶ್ಚಂದ್ರ ಕಾವ್ಯದ ಹರಿಶ್ಚಂದ್ರ ಕಾಲಾತೀತ ಪುರಾಣ ಪುರುಷನಾಗಿ ಮಾರ್ಪಡುವಂತೆಯೇ, ಐತಿಹಾಸಿಕ ವ್ಯಕ್ತಿಯಾದ ಸಿದ್ಧರಾಮ ಕೂಡ ಪುರಾಣ ಪುರುಷನಾಗಿ ಮಾರ್ಪಡುವಂತೆಯೇ, ಐತಿಹಾಸಿಕ ವ್ಯಕ್ತಿಯಾದ ಸಿದ್ಧರಾಮ ಕೂಡ ಪುರಾಣ ಪುರುಷನಾಗಿ ಮಾರ್ಪಡುತ್ತಾನೆ. ಶರಣರ ಬದುಕು ಆಧರಿಸಿದ ರಾಘವಾಂಕನ ಕಾವ್ಯ ಲಿಖಿತ ಎಪಿಕ್‌ ಕಾವ್ಯದ ಮಾದರಿಯಲ್ಲಿದೆ. ವಚನಕ್ರಾಂತಿಯ ಸಫಲತೆ – ವಿಫಲತೆಯನ್ನು ತಮ್ಮ ಬದುಕಿನ ಸಂದರ್ಭದಲ್ಲಿ ನೋಡುವ ಅಗತ್ಯ ಅವರಿಬ್ಬರನ್ನೂ ಅಷ್ಟಾಗಿ ಕಾಡಿದಂತೆ ಕಾಣುವುದಿಲ್ಲ. ಕನಕದಾಸರ ತರಹ ಹರಿಹರ – ರಾಘವಾಂಕರು ಆ ಜತೆಗೆ ಕೆಲ ವಚನಗಳನ್ನಾದರೂ ಬರೆಯುವ ಸಾಹಸ ಮಾಡಿದ್ದಲ್ಲಿ, ವಚನ ಸಾಹಿತ್ಯ ಇಂದು ಕನ್ನಡದಲ್ಲಿ ನಡುಗಡ್ಡೆಯಾಗಿ ಉಳಿಯುತ್ತಿರಲಿಲ್ಲವೋ ಏನೋ!

ವಸ್ತುವಿನ ಆಯ್ಕೆಯಲ್ಲಿ ಅತ್ಯಂತ ಭಿನ್ನಜಾಡಿನಲ್ಲಿ ಸಾಗುವ ಮತ್ತೊಬ್ಬ ಕವಿ ಜನ್ನ: ಆದರೆ ಅದು ಸಂಸ್ಕೃತದ ವಾದಿರಾಜನ ಕಾವ್ಯದಲ್ಲಿ ಅಷ್ಟರಲ್ಲಾಗಲೇ ಪಡೆಯಬಹುದಾದ ರೂಪ ಪಡೆದುಕೊಂಡಾಗಿತ್ತು. ಹಿಂಸೆ ಎಸಗಬೇಕಾಗಿ ಬಂದ ಅನಿವಾರ್ಯ ಸ್ಥಿತಿಗೆ ಮಾನಸಿಕವಾಗಿ ಸಿದ್ಧನಾದನೆಂಬ ಏಕೈಕ ಕಾರಣಕ್ಕೆ, ಹಲವಾರು ಭವಾಂತರ ಮತ್ತು ತೊಳಲಾಟಕ್ಕೆ ಒಳಗಾಗುವ ಸೂಕ್ಷ್ಮ ಪ್ರತಿಪಾದನೆ, ಅಮೃತಮತಿಯಂಥ ಸಂಕೀರ್ಣ ವ್ಯಕ್ತಿತ್ವದ ಹೆಂಗಸಿನ ಚಿತ್ರಣ ನೀಡುವಾಗ ವಹಿಸಬೇಕಾದ ಎಚ್ಚರ, ಸೂಕ್ಷ್ಮತೆ, ನಯವಂತಿಕೆ ಮತ್ತು ಹೃದಯ ವೈಶಾಲ್ಯವನ್ನು ಜನ್ನ ತೋರಿಸುವಂತೆ ಕಾಣುವುದಿಲ್ಲ. ಏಕೆಂದರೆ, ಆ ರೀತಿಯ ನಡವಳಿಕೆಗೆ ಕಾರಣವಾದ ಅಂಶಗಳು ಅವಳ ವ್ಯಕ್ತಿತ್ವ, ದೈಹಿಕ ರಚನೆ ಮತ್ತು ಸಂಸಾರದಲ್ಲಿ ಇರಲು ಸಾಧ್ಯ. ಏನೇ ಅಡೆತಡೆಗಳು ಬಂದರೂ ಸತ್ಯಪ್ರತಿಪಾದನೆಗಾಗಿ ಹರಿಶ್ಚಂದ್ರ ಗೆದ್ದು ಬರುವುದು ನಿಜವಾದಂತೆ, ಅಮೃತಮತಿಯ ಅಧಃಪತನ ನಿರ್ಧಾರಿತ ಹಾದಿಯಲ್ಲಿ ಸಾಗುತ್ತದೆ. ಮನೆಗೆಲಸ ಮಾಡಿಕೊಂಡಿರುವ ಸೇವಕನ ಜತೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವ ಶ್ರೀಮಂತ ಗೃಹಿಣಿಯರು ಇರುವಂತೆಯೇ, ಕುದುರೆಲಾಯದ ಕೆಲಸಗಾರ ಅಥವಾ ಮಾವುತರ ಜತೆ ಸಂಬಂಧವಿಟ್ಟುಕೊಂಡಿದ್ದ ರಾಣಿಯರಿಗೆ ಇತಿಹಾಸದಲ್ಲಿ ಕೊರತೆಯೇನೂ ಇಲ್ಲ. ಅಂತಹ ಹೆಂಗಸರು ಜನ್ನನ ಕಾಲದಲ್ಲೂ ಇದ್ದರು. ಇಂದೂ ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ.[5]

ಮೊದಲನೆಯದಾಗಿ ಆತ ರಾಜ. ಆತನು ನಡೆಸುವ ರಾಜಕೀಯ ವ್ಯವಸ್ಥೆ ನಿಂತಿರುವುದೇ ಹಿಂಸೆಯ ಆಧಾರದ ಮೇಲೆ. ರಾಜನಾಗಿ ಹಿಂಸೆಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳಬೇಕಾಗಿ ಬಂದ ಆತ ತನ್ನ ವೈಯಕ್ತಿಕ ಬದುಕಿನಲ್ಲಿ ಅಹಿಂಸೆಯ ವ್ರತಧಾರಿ; ಆದರೆ ಅಮೃತಮತಿಯಂಥ ಹೆಂಡತಿಯ ನಡವಳಿಕೆಯಿಂದಾಗಿ ಬೊಂಬೆಯ ಕೋಳಿ ಬಲಿಕೊಡಲು ಮಾನಸಿಕವಾಗಿ ಸಿದ್ಧನಾಗಬೇಕಾಗುತ್ತದೆ. ರಾಜನಾಗಿ ತನ್ನ ಕರ್ತವ್ಯ ನಿರ್ವಹಿಸುವಾಗ ಹಿಂಸೆಯ ಅನಿವಾರ್ಯತೆಯನ್ನು ಪರೋಕ್ಷವಾಗಿಯಾದರೂ ಒಪ್ಪಿಕೊಳ್ಳಬೇಕಾಗಿ ಬಂದುದು ಆತ ಎದುರಿಸಬೇಕಾಗಿ ಬಂದ ನೈತಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.

ಎಂತಹ ಅದ್ಭುತ ವೈರುದ್ಧ್ಯ ಮತ್ತು ವಿಚಿತ್ರ ದ್ವಂದ್ವಗಳಿಂದ ಕೂಡಿದ ವಸ್ತು ಅದು! ಉಳಿದೆಲ್ಲ ಕನ್ನಡ ಕವಿಗಳಿಗೆ ಹೋಲಿಸಿದಲ್ಲಿ ಕನಕದಾಸರು ‘ರಾಮಧಾನ್ಯ ಚರಿತೆ’ ವಸ್ತುವಿನ ಆಯ್ಕೆಯಲ್ಲಿ ಅತ್ಯಂತ ಭಿನ್ನ ದಾರಿಯಲ್ಲಿ ಸಾಗುತ್ತಾರೆ ಎಂಬುದೇನೋ ನಿಜ. ಎಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಕೆಡದೆ ಉಳಿಯುವ ರಾಗಿಯ ಕತೆ ಬರೆಯುವ ಕನಕದಾಸರು, ಅದೇ ತರಹ ಎಂತಹ ಬಿಕ್ಕಟ್ಟು ಮತ್ತು ಕಷ್ಟದ ಪರಿಸ್ಥಿತಿಯಲ್ಲೂ ಕೆಡದೆ ಉಳಿಯುವ ನಳನ ಕತೆಯನ್ನು ಆಧರಿಸಿ ‘ನಳಚರಿತ್ರೆ’ ಬರೆಯುತ್ತಾರೆ. ಅವೆರಡು, ಬೇರೆ ಬೇರೆಯಲ್ಲ: ಒಂದೇ ಸಮಸ್ಯೆಯ ಎರಡು ಮುಖಗಳು ಎಂಬುದು ಕನಕದಾಸರಿಗೆ ಹೊಳೆಯಲಿಲ್ಲ ಏಕೆ? ನಳ ಬೇರೆಯಲ್ಲ, ರಾಗಿ ಬೇರೆಯಲ್ಲ; ರಾಗಿಯ ವ್ಯಕ್ತಿರೂಪ ನಳ ಆದರೆ ನಳನ ಮತ್ತೊಂದು ವಸ್ತುರೂಪವೇ ರಾಗಿ.

ಐತಿಹಾಸಿಕ ವಸ್ತು ಆಧರಿಸಿ ಯಥಾವತ್ತಾದ ಎಪಿಕ್‌ ಅಥವಾ ಎಪಿಕ್‌ ಮಾದರಿಯ ಕಾವ್ಯ ಬರೆದು ಯಶಸ್ಸು ಸಾಧಿಸಿದ ಕವಿಯನ್ನು ಕಂಡ ಉದಾಹರಣೆ ಈ ಜಗತ್ತಿನ ಯಾವುದೇ ಭಾಷೆಯಲ್ಲೂ ಇಲ್ಲ. ಷಿನ್‌ – ಎಖಿ – ಉನ್ನಿನ್ನಿ ಬರುವ ವೇಳೆಗೆ ಅವನಿಗೂ ಎಷ್ಟೋ ಶತಮಾನ ಹಿಂದಿನವನಾದ ಗಿಲ್ಗಮೆಷ್‌, ಪುರಾಣ ಪ್ರಸಿದ್ಧ ವ್ಯಕ್ತಿಯಾಗಿ ಮಾರ್ಪಟ್ಟಿದ್ದ. ಇಲಿಯಡ್‌, ಒಡಿಸ್ಸಿ, ಭಾರತ, ರಾಮಾಯಣ ಮೊದಲಾದ ಎಲ್ಲ ಎಪಿಕ್‌ಗಳಲ್ಲೂ ಐತಿಹಾಸಿಕ ಅಂಶಗಳನ್ನು ಗುರುತಿಸಬಹುದಾದರೂ, ಇತಿಹಾಸದ ಅರ್ಥದಲ್ಲಿ ಅವುಗಳು ಐತಿಹಾಸಿಕ ಕೃತಿಗಳಲ್ಲ. ಇತಿಹಾಸ, ಪುರಾಣ ಅಥವಾ ಜನಪದ ಮೂಲದಿಂದ ತಮಗೆ ಬೇಕಾದ ಸಾಮಗ್ರಿಗಳನ್ನು ಬೇಕಾದ ರೂಪದಲ್ಲಿ ಬೇಕಾದ ರೀತಿಯಲ್ಲಿ ಎಪಿಕ್‌ ಕವಿಗಳು ಬಳಸಿಕೊಂಡಿರುತ್ತಾದರೂ, ಅವುಗಳು ಗುರುತಿಸಲಾಗದೇ ಹೋದುದನ್ನು ಹೇಳುವ ಉದ್ದೇಶದಿಂದ ಬರೆಯಲಾದ ಎಪಿಕ್‌ಗಳು ಆ ಎಲ್ಲವನ್ನು ಮೀರಿ ಬೆಳೆಯುತ್ತವೆ. ಆ ಕಾರಣವೇ ಅವು ಕೇವಲ ಇತಿಹಾಸವಾಗಿ ಉಳಿಯುವುದಿಲ್ಲ. ಬದುಕು ಮತ್ತು ಕಾಲಕ್ಕೆ ಬದ್ಧವಾಗಿ ಬದುಕು – ಕಾಲವನ್ನು ಮೀರುವ ಅವು ಐತಿಹಾಸಿಕ ಅಲ್ಲದೆಯೂ ಅಲ್ಲ ಎಂಬ ಪ್ರಾಥಮಿಕ ಅರಿವು ಸಿದ್ಧರಾಮನಂತಹ ಇತಿಹಾಸ ಪ್ರಸಿದ್ಧ ಪುರುಷನನ್ನು ಆಧರಿಸಿ ಎಪಿಕ್‌ ಮಾದರಿಯ ಕಾವ್ಯ ಬರೆಯಲು ಮುಂದಾದ ರಾಘವಾಂಕನಿಗೆ ಲಭಿಸಲಿಲ್ಲವೇ?

ಕನಕದಾಸರ ನಳ ಮತ್ತು ರಾಗಿ ಬೇರೆ ಬೇರೆ ಅಲ್ಲವಾದಂತೆ, ಸತ್ಯಹರಿಶ್ಚಂದ್ರ ಮತ್ತು ಸಿದ್ಧರಾಮ ಬೇರೆ ಬೇರೆ ಅಲ್ಲ. ಸತ್ಯಹರಿಶಚಂದ್ರನ ಕಾವ್ಯ ಬರೆಯಲು ಸಿದ್ಧರಾಮನನ್ನು ಅಥವಾ ಸಿದ್ಧರಾಮನ ಕತೆ ಬರೆಯಲು ಹರಿಶ್ಚಂದ್ರನನ್ನು ವಸ್ತುಪ್ರತಿರೂಪವಾಗಿ ಆರಿಸಿಕೊಳ್ಳಬೇಕಾಗುತ್ತದೆ. ನಳನ ಕತೆ ಬರೆಯಲು ರಾಗಿಯ ಕತೆಯನ್ನು ಅಥವಾ ರಾಗಿಯ[6] ಕತೆ ಬರೆಯಲು ನಳನ ಕತೆಯನ್ನು ವಸ್ತುಪ್ರತಿರೂಪವಾಗಿ ಸ್ವೀಕರಿಸುವ ಅಪರೂಪದ ಅವಕಾಶವಿತ್ತು. ಆ ರೀತಿ ಆದಾಗ ಮಾತ್ರ ಪುರಾಣದಲ್ಲಿ ಇತಿಹಾಸವನ್ನು ಮತ್ತು ಇತಿಹಾಸದಲ್ಲಿ ಪುರಾಣವನ್ನು ಮತ್ತು ಅವೆರಡರಲ್ಲೂ ಸಾಮಾಜಿಕವನ್ನು ಕಾಣಲು ಸಾಧ್ಯವಾಗುತ್ತದೆ. ಆ ರೀತಿ ಆದಾಗ ಮಾತ್ರ ಕಾಲಕ್ಕೆ ಪುರಾಣದಲ್ಲಿ ಇತಿಹಾಸವನ್ನು ಮತ್ತು ಇತಿಹಾಸದಲ್ಲಿ ಪುರಾಣವನ್ನು ಮತ್ತು ಅವೆರಡರಲ್ಲೂ ಸಾಮಾಜಿಕವನ್ನು ಕಾಣಲು ಸಾಧ್ಯವಾಗುತ್ತದೆ. ಆ ರೀತಿ ಆದಾಗ ಮಾತ್ರ ಕಾಲಕ್ಕೆ ಬದ್ಧವಾದ ಮತ್ತು ಕಾಲವನ್ನು ಮೀರಿದ ಕೃತಿಯನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಕಾವ್ಯರಚನೆಗೆ ಸಂಬಂಧಿಸಿದ ಸರಳ ತತ್ವ ಮತ್ತು ಸೂತ್ರ ಅವರಿಗೆ ದಕ್ಕಲೇ ಇಲ್ಲವೇ?

ರಾಘವಾಂಕರ ‘ಹರಿಶ್ಚಂದ್ರ ಕಾವ್ಯ’ ಮತ್ತು ಕನಕದಾಸರ ‘ನಳಚರಿತ್ರೆ’ ನಡುವೆ ಬಹಳ ಹೊಂದಾಣಿಕೆ ಇದೆ.

ಎಂತಹ ಪರಿಸ್ಥಿತಿಯಲ್ಲಿಯೂ ಕೆಡದೆ ಉಳಿಯುವ ರಾಗಿ ಮತ್ತು ನಳನ ಕತೆ ಒಂದೇ ಆದಂತೆ, ಸಿದ್ಧರಾಮನ ಕಾಯಕನಿಷ್ಠೆ ಮತ್ತು ಹರಿಶ್ಚಂದ್ರನ ಸತ್ಯನಿಷ್ಠೆ ಒಂದೇ ಅಲ್ಲವೇ? ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕನಕದಾಸರು ಅನುಭವಿಸುವ ಸೋಲು, ಪಂಪ – ನಾರಣಪ್ಪ ಸಾಧಿಸಿದ ಗೆಲುವಿಗಿಂತ ಹೆಚ್ಚು ಮಹತ್ವಪೂರ್ಣ ಮತ್ತು ಗಮನಾರ್ಹವಾದುದು. ಸಮಕಾಲೀನ ಬದುಕಿನ ವಿವರಗಳು ಹೆಚ್ಚಾಗಿ ಸಿಗುವುದು ಈ ಕನಕದಾಸರಲ್ಲಿಯೇ ಎಂಬುದು ಅಚಾನಕ್‌ ಅಲ್ಲ.

ಆ ತತ್ವ ಮತ್ತು ಕಾವ್ಯ ನಿರ್ಮಾಣ ಕಲೆ ಕೇವಲ ಹೋಮರ್‌ ಮೂಲವಾದ ಯುರೋಪ್‌ ಕಾವ್ಯ ಪರಂಪರೆಗೆ ಮಾತ್ರ ಸೀಮಿತವಾದುದಲ್ಲ ಎಂಬುದನ್ನು ಕಂಡುಕೊಳ್ಳಬೇಕಾದರೆ ಮರಳಿ

ರಾಮಾಯಣಕ್ಕೆ ಹೋಗಬೇಕು. ಹಲವಾರು ಸಂಗತಿ, ಬಿಕ್ಕಟ್ಟು ಮತ್ತು ಕಥಾನಕಗಳು ಏಕತ್ರ ಹೊಯ್‌ಕ್ಕೆಯಾಗಿ ಸಾಗುವುದನ್ನು ಅಲ್ಲಿ ಕಾಣಬಹುದಾಗಿದೆ. ಸುಭದ್ರ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಜಾರಿಗೆ ಬರುತ್ತಿದ್ದ ಕಾಲದ ಕೃತಿ ಅದು. ಮೊದಲ ಹೆಂಡತಿಯ ಮೊದಲ ಮಗ ರಾಜನಾಗಬೇಕು ಎಂಬ ಸೂತ್ರ ಸರ್ವಸಮ್ಮತವಾಗಿ ತೋರಿಬಾರದ ಕಾರಣ ೧೪ ವರ್ಷಗಳ ವನವಾಸಕ್ಕೆ ಹೋದ ಶ್ರೀರಾಮ, ಸಿಂಹಾಸನದ ಮೇಲಿನ ತನ್ನ ಹಕ್ಕು ಕಳೆದುಕೊಂಡು ಕಾಡಿನಲ್ಲಿ ಅಲೆಯುತ್ತಿರಬೇಕಾದರೆ ತನ್ನ ಪತ್ನಿ ಪಟ್ಟದರಸಿಯ ಮೇಲಿನ ಹಕ್ಕನ್ನೂ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅವೆರಡೂ ಬೇರೆ ಬೇರೆಯಲ್ಲ ಎಂಬ ಧ್ವನಿ ರಾಮಾಯಣದಲ್ಲಿ ಸೂಕ್ಷ್ಮವಾಗಿ ಅಡಕವಾಗಿದೆ. ಅಪಹರಣಕಾರನನ್ನು ವಧಿಸಿದ ನಂತರ ತನ್ನ ಪತ್ನಿಯನ್ನು ಮರಳಿ ಪಡೆಯುವುದರೊಂದಿಗೆ, ಸಿಂಹಾಸನದ ಹಕ್ಕಿನ ಪ್ರಶ್ನೆಯೂ ಇತ್ಯರ್ಥಗೊಳ್ಳುತ್ತದೆ. ರಾಜನಾಗುವ ಅರ್ಹತೆ ಜತೆಗೆ ಹೆಣ್ಣಿನ ಚಾರಿತ್ರ‍ದ ಪ್ರಶ್ನೆಯೂ ರಾಮಾಯಣದಲ್ಲಿ ಅನ್ವೇಷಣೆಗೊಳ್ಳುವ ರೀತಿ, ಯಾವುದೇ ಹೆಣ್ಣು ಅಥವಾ ಗಂಡಿನ ಚಾರಿತ್ರ‍್ಯದ ಪ್ರಶ್ನೆ ಅತ್ಯಂತ ಖಾಸಗಿಯಾದ ವಿಚಾರವಾದರೂ ಖಾಸಗಿಯಾಗಿ ಉಳಿಯುವುದಿಲ್ಲ ಎಂಬ ಸೂಚನೆಯೂ ಅದೇ ರಾಮಾಯಣದಲ್ಲಿ ದೊರಕುತ್ತದೆ. ಆ ಜತೆಜತೆಗೆ ವಾಲಿ – ಸುಗ್ರೀವ, ರಾವಣ – ವಿಭೀಷಣ ಮತ್ತು ಶೂರ್ಪನಖಿ – ತಾರಾ – ರುಮೆಯರ ಜೀವನಧರ್ಮ ಮತ್ತು ಮನೋಧರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಅನ್ವೇಷಣೆಗೊಳಗಾಗುವುದು. ಆ ಒಂದು ಕೃತಿಯಲ್ಲಿ ಏನೆಲ್ಲ ಸಾಧ್ಯತೆಗಳು, ಆಯಾಮಗಳು ಮತ್ತು ಜೀವನಧರ್ಮಕ್ಕೆ ಸಂಬಂಧಿಸಿದ ಮನೋಧರ್ಮಗಳ ಸಂಘರ್ಷವೇ ಹುದುಗಿದೆ. ಅಂತಹ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಯಾವುದೇ ರೀತಿಯ ಮತೀಯ ಅಥವಾ ರಿಲಿಜನ್‌ ಲೇಪವಿಲ್ಲದೆ ವಾಲ್ಮೀಕಿ ತನ್ನ ಎಪಿಕ್‌ ನಿರ್ವಹಿಸುವುದು, ಸೆಕ್ಯುಲರ್‌ ಕಾಲದ ಸೆಕ್ಯುಲರ್‌ ಎಪಿಕ್‌ನ ಪ್ರಧಾನ ಗುಣಲಕ್ಷಣವೇ ಅದು; ಪೇಗನ್‌ ಕಾಲದ ಪೇಗನ್‌ ಕೃತಿ.

ವಸ್ತುಪ್ರತಿರೂಪ ತತ್ವ ಮತ್ತು ಸಿದ್ಧಾಂತ ಕೇವಲ ಯುರೋಪ್‌ ಮೂಲದ ಕವಿಗಳ ಸ್ವತ್ತು ಮಾತ್ರವಲ್ಲ, ಅದು ಷಿನ್‌ – ಎಖಿ – ಉನ್ನಿನ್ನಿ, ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿಯರಿಗೂ ಸಮಾನವಾದುದು. ಆ ಕಾಣ್ಕೆ ಮತ್ತು ಕವಿ ಕಾವ್ಯ ಜೀವನ ಧರ್ಮವನ್ನು ತನ್ನ ಬದುಕಿನ ಸಂದರ್ಭದಲ್ಲಿ ಕಂಡುಕೊಂಡು ಅನ್ವೇಷಿಸಲು ಪ್ರಯತ್ನಿಸುವುದರ ಮೂಲಕ ಅದಕ್ಕೆ ಬೇಕಾಗಿದ್ದ ಹೊಸ ಹೊಳಪು ನೀಡಿದವನು ವರ್ಜಿಲ್‌; ವಾಲ್ಮೀಕಿ ನಂತರ ಆ ಕಡೆಗೆ ಹರಿಸಬೇಕಾದ ಗಮನಹರಿಸಿ ಪ್ರತಿಭಾ ಸಂಪನ್ನತೆಯನ್ನು ಸೀಮಿತ ಪ್ರಮಾಣದಲ್ಲಿಯಾದರೂ ತೋರಿದಾತನೇ ಕಾಳಿದಾಸ.

‘ಕುಮಾರಸಂಭವಂ’ ದಿಢೀರನೆ ಕೊನೆಗೊಳ್ಳುವಂತೆ ತೋರಿಬಂದರೆ, ‘ಶಾಕುನ್ತಲಂ’ ಕೃತಿಯ ಹಂದರ ಮತ್ತು ಭೂಮಿಕೆಯಲ್ಲಿ ಹುದುಗಿರುವ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸಲು ಕವಿಗೆ ಸಾಧ್ಯವಾಗಿಲ್ಲ. ಹಾಗಾಗಿ ಈ ಮೊದಲೇ ಗುರುತಿಸಲಾದಂತೆ ‘ರಘುವಂಶಂ’ ಕಾವ್ಯಕ್ಕೆ ಬದುಕನ್ನು ರೂಪಿಸುವ ಆದರ್ಶದ ಕಲ್ಪನೆ ಮತ್ತು ಹೊಸಕಲಾಗದ ಕನಸು ನೀಡುವ ಋಷಿತ್ವ ದೊರಕಲಿಲ್ಲ.

ಅದನ್ನು ಗಮನಿಸಿದರೂ ಗಮನಿಸಿದಂತೆ ಸಾಗಿಬಿಡುವ ಕಾಳಿದಾಸ, ತಾನು ಬಂದ ಕಾಲದ ಮತ್ತು ಕಂಡ ಬದುಕಿನ ಬಂಜೆತನವನ್ನು ಮೀರಲು ಸಾಧ್ಯವಾಗದೇ ಹೋದುದು ಆ ಕೊರತೆಗೆ ಕಾರಣ ಆಗಿದ್ದಿರಬಹುದೇ?

ಮನೋಧರ್ಮ, ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಭಿನ್ನರಾದ ನೆರೆಹೊರೆಯರನ್ನು ಸದಾ ಗಮನದಲ್ಲಿಟ್ಟುಕೊಂಡು ಬದುಕಲು ಸಾಧ್ಯವಾದಾಗ ಮಾತ್ರ ಸಾಂಸ್ಕೃತಿಕ ವಿಶಿಷ್ಟತೆಯನ್ನು ಉಳಿಸಿಕೊಳ್ಳಲು ಬರುತ್ತದೆ ಇಲ್ಲದೆ ಹೋದಲ್ಲಿ ಸೀತೆಯನ್ನು ಕಳೆದುಕೊಂಡಂತೆ ಕಳೆದುಕೊಳ್ಳಬೇಕಾಗುತ್ತದೆ ಎಂಬ ವಿವೆಕ ರಾಮಾಯಣದಲ್ಲಿ ಸಹ ಅಂತರ್ಗತವಾಗಿದೆ. ಆದರೆ ರಾಮಾಯಣದಲ್ಲಿ ಅಂಥ ರಾವಣ ರಾಕ್ಷಸನಾಗಿ ಪರಿವರ್ತನೆಗೊಳ್ಳುತ್ತಾನೆ. ರಾವಣ ಕೂಡ ರಾಮನಂತೆ ಮನುಷ್ಯ ಮತ್ತು ಭಿನ್ನ ಮನೋಧರ್ಮ ಮನೋಭಾವದ ವ್ಯಕ್ತಿ ಮತ್ತು ಎಲ್ಲರಂಥೆ ಇದ್ದುಕೊಂಡೇ ‘ರಾಕ್ಷಸ’ನಾಗಿ ಪರಿವರ್ತನೆಗೊಂಡ ‘ರಾಕ್ಷ’ ಎಂದು ತೋರಿಸಿದ್ದಲ್ಲಿ ರಾಮಾಯಣದ ಘನತೆಗೆ ಕುಂದು ಉಂಟಾಗುತ್ತಿತ್ತೆ?

ರಾಮ ಪ್ರತಿನಿಧಿಸುವ ಕೆಲ ‘ಘನಮೌಲ್ಯ’ಗಳನ್ನು ಪ್ರಶ್ನಿಸುವ ಅಥವಾ ಧಿಕ್ಕರಿಸುವ ರಾವಣ ಆಧುನಿಕ ತತ್ವ ಮತ್ತು ಸಿದ್ಧಾಂತಗಳ ಪ್ರತಿನಿಧಿ ಎಂಬ ದೂರದೃಷ್ಟಿ ಆತನನ್ನು ಸೃಷ್ಟಿಸಿದ ವಾಲ್ಮೀಕಿಗೆ ದಕ್ಕಲಿಲ್ಲವೆ? ಅಂತಹ ರಾವಣನ ಕೊಲೆ ಸಾಧ್ಯವೇ! ಕೊಲೆ ಸಾಧ್ಯವಿಲ್ಲ ಎಂದಾದಲ್ಲಿ ರಾವಣ ಪ್ರತಿನಿಧಿಸುವ ಸಮಸ್ಯೆಗೆ ಪರಿಹಾರವಾದರೂ ಏನು? ಪರಿಹಾರವನ್ನು ವಾಲ್ಮೀಕಿಯಂತಹ ಋಷಿ ಎಪಿಕ್‌ ಕವಿಗೆ ಮಾತ್ರ ಕೊಡಲು ಸಾಧ್ಯವಿತ್ತು. ಈನಿಯಾಸ್‌ ನೆಲೆ ಹುಡುಕಿಕೊಂಡು ಹೊರಡುವುದು ತನ್ನ ಜನರಿಗಾಗಿ ಮತ್ತು ನಂತರ ತನಗಾಗಿ. ಆದರೆ ರಾಮ ಹೋರಾಟ ನಡೆಸುವುದು ತನ್ನ ಹೆಂಡತಿಯನ್ನು ಮರಳಿ ಪಡೆಯಲು. ಆ ಸಮಸ್ಯೆ ರಾಮನೊಬ್ಬನ ಸಮಸ್ಯೆಯಾಗಿ ಉಳಿಯುವುದಿಲ್ಲ, ನಿಜ. ಆದರೂ ಅದು ಮೂಲತಃ ವ್ಯಕ್ತಿಯೊಬ್ಬನ ಖಾಸಗಿಯಾಗಿ ಉಳಿಯದ ‘ಖಾಸಗಿ ಸಮಸ್ಯೆ’ ಎಂಬುದನ್ನು ಮರೆಯಬರುವುದಿಲ್ಲ.

ಪ್ರತಿಯೊಬ್ಬ ಕವಿಯೂ ತನ್ನ ಕಾಲ ಮತ್ತು ಬದುಕಿನ ಪರಿಸರಕ್ಕೆ ಸ್ಪಂದಿಸಿ ಕಾವ್ಯರಚನೆ ಮಾಡುವುದು ಅನಿವಾರ್ಯವಾದಂತೆ ತನ್ನ ಹಿಂದಿನ ಮುಂದಿನ ಕವಿಗಳಿಗೂ ಸ್ಪಂದಿಸಬೇಕಾಗುತ್ತದೆ. ಆ ಕಾರಣವೇ ಪ್ರತಿಯೊಬ್ಬ ಕವಿಯೂ ತನ್ನದೇ ಆದ ಮಿತಿಯಲ್ಲಿ ಪ್ರಯೋಗ ಮಾಡುವುದರ ಜತೆಗೆ ಹಿಂದಿನ ಸ್ಥಾಪಿತ ಪರಂಪರೆಯನ್ನು ಮುರಿದು ಹೊಸದೊಂದನ್ನು ಸ್ಥಾಪಿಸಬೇಕಾಗುತ್ತದೆ. ಅದು ಯಾವುದೇ ಸಂಸ್ಕೃತಿಯ ಜೀವಂತ ಲಕ್ಷಣ. ಆ ಕಾರಣವೇ ವಸ್ತುವಿನ ಆಯ್ಕೆ ಬಹಳ ಮುಖ್ಯವಾಗುತ್ತದೆ. ಉಳಿದುದು ನಿರ್ವಹಣೆ. ವಸ್ತು ಮತ್ತು ನಿರ್ವಹಣೆ ಒಟ್ಟಿಗೆ ಸಾಗಬೇಕು. ಅವೆರಡೂ ದೇಹ ಮತ್ತು ರಕ್ತವಿದ್ಧ ಹಾಗೆ. ಒಂದರಲ್ಲಿ ವಿಫಲನಾದ ಕವಿ ಮತ್ತೊಂದರಲ್ಲಿ ಯಶಸ್ಸು ಸಾಧಿಸಲು ಬರುವುದಿಲ್ಲ. ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ವ್ಯಾಸ ವಾಲ್ಮೀಕಿ ಜೋಡಿ ಸಾಧಿಸುವ ಯಶಸ್ಸು ಅತ್ಯಂತ ಅದ್ಭುತವಾದುದು. ಆದರೂ ಅವರು ವಿಫಲವಾದುದಾದರೂ ಎಲ್ಲಿ? ಸೂಕ್ತ ಉತ್ತರಾಧಿಕಾರಿಗಳಾಗಬೇಕಾದ ಮುಂದಿನ ತಲೆಮಾರಿನ ಕವಿಗಳನ್ನು ಪಡೆಯಲಾಗದೆ ಹೋದುದೆ ಅವರ ವಿಫಲತೆಯೇ? ಅಥವಾ ಮುಂದಿನ ತಲೆಮಾರಿನ ಕವಿಗಳಿಗೆ ನೀಡಬಹುದಾದ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ ಗಟ್ಟಿಯಾದ ಪರಂಪರೆಯೊಂದನ್ನು ನಿರ್ಮಿಸಲು ಸಾಧ್ಯವಾಗದೆ ಹೋದುದೆ ಅವರ ವಿಫಲತೆಯಾಯಿತೇ? ಅದಕ್ಕೆ ಅವರು ಮಾತ್ರ ಕಾರಣರೇ ಅಥವಾ ಮುಂದಿನ ತಲೆಮಾರಿನ ಜನರೇ? ಅಥವಾ ಭಾರತೀಯ ನೆಲ ಮತ್ತು ಮನಸ್ಸಿನ ಒಟ್ಟಾರೆ ಮಿತಿ ಆ ತರಹದ ವೈಫಲ್ಯಕ್ಕೆ ಪೂರಕವಾಯಿತೇ? ಅವರನ್ನು ಸರಿಯಾಗಿ ಓದುವ ಓದುಗರನ್ನು ಪಡೆಯದೆ ಹೋದುದು ಕಾರಣವಾಯಿತೆ?

ಪಂಪ – ನಾರಣಪ್ಪ ಮೊದಲಾದವರು ವಸ್ತುವಿನ ಆಯ್ಕೆ ಎಂಬ ಪ್ರಥಮ ಹಂತದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟದ ಮಾತು. ವಸ್ತುವಿನ ಆಯ್ಕೆಯಲ್ಲಿ ಸ್ವಲ್ಪವಾದರೂ ಯಶಸ್ಸು ಸಾಧಿಸುವ ರಾಘವಾಂಕ, ಕನಕದಾಸ ಮೊದಲಾದವರು, ಆ ವಸ್ತುವನ್ನು ನಿರ್ವಹಿಸಿ ಅದಕ್ಕೊಂದು ರೂಪ ನೀಡುವಲ್ಲಿ ಸಫಲತೆ ಸಾಧಿಸಿದ ಉದಾಹರಣೆ ಇಲ್ಲ. ಇನ್ನೂ ಕೆಲವರು ಅತ್ಯದ್ಭುತವಾದ ದೇವಾಲಯ ನಿರ್ಮಿಸಿದ್ದಾರೆ ಮತ್ತು ಅದ್ಧೂರಿಯಾದ ಗರ್ಭಗುಡಿಯನ್ನು ಕಟ್ಟಿದ್ದಾರೆ. ಆದರೆ ಆ ಗರ್ಭಗುಡಿಯಲ್ಲಿ ಏನು ಕೂರಿಡಬೇಕೆಂಬುದೇ ತೋಚದೆ ಕಂಗೆಟ್ಟು ಹೋದಂತೆ ಕಾಣುತ್ತದೆ. ಕೆಲವರು ತಾವು ನಿರ್ಮಿಸಿದ ದೇಗುಲಕ್ಕೆ ಕಳಸ ಅಥವಾ ಗೋಪುರ ಇಡಬೇಕು ಎಂಬುದನ್ನೇ ಮರೆತಿರುತ್ತಾರೆ. ಆ ತರಹದ ನಿದ್ರಿತ ಮತ್ತು ತ್ರುಟಿತ ಪರಂಪರೆಯ ಕಾರಣವೋ ಏನೋ ಅನಂತಮೂರ್ತಿ, ಕಾರ್ನಾಡ್‌, ತೇಜಸ್ವಿ ಮೊದಲಾದವರಿಗೂ ಕಾಳಿದಾಸ ಹಾಕಿದ ಮಿತಿಯನ್ನು ದಾಟಲು ಸಾಧ್ಯವಾಗಲಿಲ್ಲ. ಭಾರತದ ಬಹುತೇಕ ಕವಿಗಳು ಕಾಳಿದಾಸ ಹಾಕಿದ ಸೀಮಾರೇಖೆಯಿಂದ ಬಹಳ ದೂರವೇ ನಿಂತಿರುವಂತೆ ಕಾಣುತ್ತದೆ.

ಯುರೋಪಿನ ಸಾಹಿತ್ಯದ ನೇರ ಸಂಪರ್ಕದಿಂದ ಸಂಪನ್ನತೆ ಪಡೆದ ಮಾಸ್ತಿ, ಕುವೆಂಪು ಮತ್ತು ಯುರೋಪಿನ ಮಾದರಿಯಲ್ಲೇ ಸಾಹಿತ್ಯ ಸೃಷ್ಟಿಸಲು ಹೊರಟ ಅನಂತಮೂರ್ತಿ, ಕಾರ್ನಾಡ್‌, ತೇಜಸ್ವಿ, ಮೊದಲಾದವರಿಗೂ ಆ ಪರಂಪರೆಯ ಹಿಡಿತದಿಂದ ಸಂಪೂರ್ಣ ಬಿಡಿಸಿಕೊಳ್ಳಲಾಗಲಿಲ್ಲ ಎಂದರೆ! ಕೃಷ್ಣ – ಅರ್ಜುನರ ಗುಣಗಳು ಒಬ್ಬರಲ್ಲೇ ಇರುವ ಸಾಮಾಹಿತ ವ್ಯಕ್ತಿತ್ವದ ಪಾತ್ರ ಚಿತ್ರಣವನ್ನು ಭಾರತದ ಕವಿಗಳ ಕೈಯಲ್ಲಿ ನೀಡಲಾಗಲಿಲ್ಲ. ಅದೊಂದು ಕೊರತೆ ಅಥವಾ ದೌರ್ಬಲ್ಯವೇ? ಅಥವಾ ಅದೇ ಭಾರತದ ವಿಶಿಷ್ಟತೆಯೂ ಆಗಿರಬಹುದೇ? ವಸ್ತುಸ್ಥಿತಿಯ ಬೆಂಬಲ ಇಲ್ಲದೆ ಆ ತರಹದ ಪಾತ್ರಗಳನ್ನು ಕವಿಗಳು ನಿರ್ಮಿಸಲು ಬರುತ್ತದೆಯೇ? ಅಥವಾ ಅವೆರಡೂ ಪರಸ್ಪರ ಪೂರಕವಲ್ಲವೇ?

ಕರ್ವಾಲೋ ಇಲ್ಲದ ಮಂದಣ್ಣನ ಪರಂಪರಾಗತ ತಿಳುವಳಿಕೆ ಅರ್ಥಹೀನವಾದರೆ, ಮಂದಣ್ಣನಿಲ್ಲದ ಕರ್ವಾಲೋ ವೈಜ್ಞಾನಿಕ ಶಿಸ್ತು ಪ್ರಯೋಜನಕ್ಕೆ ಬರುವುದಿಲ್ಲ; ಆ ಎರಡು ಗುಣಗಳು ಇಲ್ಲದ ಹೊರತು ಈ ಜಗತ್ತಿನಲ್ಲಿ ಏನನ್ನೂ ಸಾಧಿಸಬರುವುದಿಲ್ಲ. ಅದನ್ನು ಯುರೋಪಿನ ಜನ ವರ್ಜಿಲನ ಕಾಲಕ್ಕಾಗಿಯೇ ಕಂಡುಕೊಂಡಿದ್ದರು. ಇಬ್ಬರೂ ಕೂಡಿಯಾದ ಚಾರ್ಲ್ಸ್‌ ಡಾರ್ವಿನ್‌ ಮೊದಲಾದವರು ಅಂತಹ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ ಮಾತ್ರ. ಆ ದೃಷ್ಟಿಯಿಂದ ನೋಡುವುದಾದರೆ ‘ಕರ್ವಾಲೋ’, ಮಹಾಭಾರತ – ರಾಮಾಯಣ ಪರಂಪರೆಯಲ್ಲೇ ಸಾಗುವ ‘ಅಪ್ಪಟ ಭಾರತೀಯ’ ಕೃತಿ. ಮಹಾಭಾರತದಲ್ಲಿ ಅರ್ಜುನ ಮತ್ತು ಕೃಷ್ಣ, ಬೇರೆ ಬೇರೆ; ಅರ್ಜುನನ ಕ್ರಿಯಾಶಕ್ತಿ ಮತ್ತು ಸಾಮರ್ಥ್ಯದ ಬೆಂಬಲವಿಲ್ಲದ ಕೃಷ್ಣನ ಸಾರಥ್ಯ ಕೆಲಸಕ್ಕೆ ಬಾರದ್ದಾದರೆ, ಕೃಷ್ಣನ ಸಾರಥ್ಯವಿಲ್ಲದೆ ಅರ್ಜುನ ಏನನ್ನೂ ಸಾಧಿಸಲಾರ; ಅದೇ ಭಾರತದಲ್ಲಿ ಗೀತೆ ಬೋಧಿಸುವವನು ಕೃಷ್ಣ, ಪಾಲಿಸಬೇಕಾದವನು ಅರ್ಜುನ. ಅದೇ ತರಹದ ಇಜ್ಜೋಡು ವ್ಯಕ್ತಿತ್ವ ರಾಮಾಯಣದಲ್ಲೂ ಮುಂದುವರಿದಿರುವ ಪರಿಯನ್ನು ಕಾಣಬಹುದಾಗಿದೆ. ರಾಮನ ಪತ್ನಿಯನ್ನು ಹುಡುಕಲು ಹನುಮಂತ ಬೇಕು; ರಾಮ ಸ್ವತಃ ತಾನೇ ಹುಡುಕಲಾರ, ಒಂದೇ ವ್ಯಕ್ತಿತ್ವದ ಎರಡು ಮುಖಗಳಾದ ರಾಮತನ ಮತ್ತು ಹನುಮತನ ರಾಮಾಯಣದಲ್ಲಿ ಎರಡು ವ್ಯಕ್ತಿಗಳಲ್ಲಿ ಹಂಚಿಹೋಗಿದೆ; ಭೃತ್ಯನಾಗಿರಲು ಸಿದ್ಧನಿರಬೇಕಾಗುತ್ತದೆ.

ಆ ತರಹದ ವಿಭಜನೆ ಭಾರತದ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದ್ದು ಬದುಕಿನ ಎಲ್ಲ ಅಂಗ ಮತ್ತು ವ್ಯವಹಾರಗಳಲ್ಲೂ ವ್ಯಾಪಿಸಿರುವುದನ್ನು ಕಾಣಬಹುದಾಗಿದೆ. ಪಂಪನಿಗೆ ಜಿನಾಗಮ ಮತ್ತು ಲೌಕಿಕ ಬೇರೆ ಬೇರೆ; ಅಲೌಕಿಕ ಕಾಣಲು ಬೇರೊಂದು ಕಾವ್ಯವನ್ನೇ ಬರೆಯಬೇಕಾಯಿತು. ಕಾರಂತರ ಚೋಮನ ಪ್ರಪಂಚವೇ ಬೇರೆಯಾದಂತೆ, ಐತಾಳರ ಬದುಕೇ ಬೇರೆ. ಅವುಗಳೆಲ್ಲೂ ಒಂದೇ ಬದುಕಿನಲ್ಲಿ ಒಟ್ಟಿಗೆ ಕಾಣುವ ಸತ್ಯಗಳು ಎಂಬ ಕಾವ್ಯಮಾರ್ಗ ಅವರ ಕೈಗೆಟುಗಲೇ ಇಲ್ಲ. ಈನಿಯಾಸ್‌ನಿಗೆ ಗೀತೆ ಬೋಧಿಸುವವರ ಅಗತ್ಯವೇ ಬರುವುದಿಲ್ಲ. ಏಕೆಮದರೆ ಆ ಗೀತೆ, ತಾನು ಬದುಕಿನಲ್ಲಿ ಕಂಡುಕೊಂಡು ಅನುಪಾಲಿಸಬೇಕಾದ ಕಟುಸತ್ಯ ಎಂಬ ತಿಳುವಳಿಕೆ ಆತನಿಗೆ ದಕ್ಕಿರುತ್ತದೆ. ನಿಜವಾದ ಕರ್ಮಯೋಗಿ ಅವನು. ಗೀತೆ ಕರ್ಮಯೋಗವನ್ನು ಬೋಧಿಸಿತು. ಅಂತಹ ನಿಜವಾದ ಕರ್ಮಯೋಗಿ ಭಾರತದ ನೆಲದಲ್ಲಿ ಹುಟ್ಟಲು ಮಹಾತ್ಮಾ ಗಾಂಧೀಜಿ ಬರುವವರೆಗೂ ಕಾಯಬೇಕಾಯಿತು.

ಭಾರತದ ಜನ ಹೆಚ್ಚಾಗಿ ಮಾತನಾಡಿದ ನಿಜವಾದ ಆಧ್ಯಾತ್ಮ, ವ್ಯಕ್ತಿ ರೂಪದಲ್ಲಿ ಪ್ರಕಟವಾಗುವುದನ್ನು ಕಾಣಲು ಬಸವಣ್ಣನ ಆಗಮನದವರೆಗೂ ಕಾಯಬೇಕಾಯಿತು.

ಈನಿಯಾಸ್‌ನಂತಹ ಸಮಾಹಿತ ವ್ಯಕ್ತಿತ್ವವುಳ್ಳವರನ್ನು ಕಲ್ಪಿಸಿಕೊಳ್ಳಲು ಭಾರತೀಯ ಕವಿಗಳು ಮತ್ತು ಸಾಹಿತಿಗಳಿಗೆ ಈವರೆಗೂ ಸಾಧ್ಯವಾಗದಿರಲು ಆ ಹಿನ್ನೆಲೆ ಕೂಡ ಕಾರಣವಿದ್ದಿರಬಹುದು. ಆ ಕಾರಣವೊ ಏನೋ ಬಸವಣ್ಣ; ಗಾಂಧಿ ಮೊದಲಾದ ಕರ್ತೃತ್ವ ಶಕ್ತಿಯ ಕನಸುಗಾರ ಚಿಂತಕರು ಮತ್ತು ಕ್ರಿಯಾಶೀಲ ವ್ಯಕ್ತಿಗಳನ್ನು ಚಿತ್ರಿಸುವಲ್ಲಿ ಭಾರತೀಯ ಪ್ರತಿಭೆ ವಿಫಲವಾಗಲು ಮಹಾಭಾರತ – ರಾಮಾಯಣ ಕಾಲದಿಂದಲೂ ಉಳಿದು ಬಂದ ಪರಂಪರೆಯ ಕೊರತೆಯೇ ಕಾರಣವಾಗಿದ್ದಿರಲೂಬಹುದು. ವಚನ ಕ್ರಾಂತಿ, ಸ್ವಾತಂತ್ರ್ಯ ಹೋರಾಟ ಮೊದಲಾದ ಅಲ್ಲೋಲ ಕಲ್ಲೋಲಗಳಿಗೆ ಸ್ಪಂದಿಸಲು ಸಹ ಆಗದಿರುವುದು. ಈನಿಯಾಸ್‌ ಅವನಿಗವನೇ ಅರ್ಜುನ ಮತ್ತು ಕೃಷ್ಣ, ರಾಮ ಮತ್ತು ಹನುಮ, ಮಂದಣ್ಣ ಮತ್ತು ಕರ್ವಾಲೋ: ಅವರೆಲ್ಲರ ವ್ಯಕ್ತಿತ್ವದ ಕೆಲ ಅಂಶಗಳು ಅವನ ವ್ಯಕ್ತಿತ್ವಕ್ಕೆ ಪೂರಕವಾದ ಪ್ರಮಾಣದಲ್ಲಿ ಹದಬೆರಕೆಯಾದ ಸಮಾಹಿತ ವ್ಯಕ್ತಿತ್ವದ ಕರ್ಮಯೋಗಿ. ಬಸವಣ್ಣ, ಗಾಂಧೀಜಿಯಂಥವರ ವ್ಯಕ್ತಿತ್ವ ಚಿತ್ರಿಸಲು, ಈನಿಯಾಸ್‌ ನಂತಹ ಪಾತ್ರಗಳನ್ನು ಬರೆದು ಅನುಭವ ಮತ್ತು ಸ್ವೀಕರಿಸಿದ ಹಿನ್ನೆಲೆ ಅಗತ್ಯ ಎಂದು ನಮೂದಿಸಬೇಕೇ?

ಇಡೀ ಭಾರತೀಯ ಸಮಾಜ – ತಾನೂ ಸೇರಿದಂತೆ – ಸಂಸ್ಕೃತಿ – ವಿಹೀನಾಗಿದೆ ಎಂದು ಪ್ರಾಣೇಶಾಚಾರ್ಯ ಕಂಡುಕೊಳ್ಳುವ, ಭಾರತದ ಪರಂಪರಾಗತ ತಿಳುವಳಿಕೆ ಮಂದಣ್ಣನ ಸ್ಥಿತಿಯಲ್ಲಿ ಉಳಿದಿದೆ; ಮತ್ತು ಅದರ ಮಹತ್ವ ಅರಿಯಲು ಯುರೋಪ್‌ ಮೂಲದ ಆಧುನಿಕ ಶಿಕ್ಷಣ ಪಡೆದ ಕರ್ವಾಲೋ ಅಂಥವರು ಬೇಕು ಎಂಬ ಬೆಚ್ಚಿಬೀಳಿಸುವ ಒಳನೋಟವನ್ನು ಅನಂತಮೂರ್ತಿ ಮತ್ತು ತೇಜಸ್ವಿ ತಮ್ಮ ‘ಸಂಸ್ಕಾರ’ ಮತ್ತು ‘ಕರ್ವಾಲೋ’ ಕಾದಂಬರಿ ಮೂಲಕ ನೀಡುತ್ತಾರೆ; ಮೇಧಾವಿಗಳಿಗೆ ದಕ್ಕುವ ಸೆಳೆಮಿಂಚೂ ಹೌದು ಮತ್ತು ಅದುವೇ ಆ ಎರಡು ಕಾದಂಬರಿಗಳ ಯಶಸ್ಸಿನ ಗುಟ್ಟು. ಆದರೆ ಇಡೀ ಭಾರತ ಸಂಸ್ಕಾರ – ವಿಹೀನವಾಗಿದೆ ಮತ್ತು ಮಂದಣ್ಣನ ಸ್ಥಿತಿಯಲ್ಲಿ ಉಳಿದಿವೆ ಎಂಬ ಮಹತ್ತರ ಒಳನೋಟವನ್ನು ಕೇವಲ ೧೦೦ ಅಥವಾ ೧೫೦ ಪುಟದ ಕಿರು – ಕಾದಂಬರಿಯಲ್ಲಿ ಸಮರ್ಪಕವಾಗಿ ಪ್ರತಿಪಾದಿಸಲು ಸಾಧ್ಯವೇ?

‘ಸಂಸ್ಕಾರ’ದ ಅಗ್ರಹಾರ ಮತ್ತು ‘ಕರ್ವಾಲೋ’ದ ಕರ್ವಾಲೋ – ಮಂದಣ್ಣ ಜೋಡಿ ಭಾರತ ಪ್ರತೀಕವೇ?

ಪರಂಪರೆ ವ್ಯಕ್ತಿ ಪ್ರತಿಭೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದಕ್ಕೆ ಕನಕದಾಸರ ಮಾತಿರಲಿ, ಅನಂತಮೂರ್ತಿ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಾಧನೆ ಸೂಕ್ತ ಉದಾಹರಣೆ. ಅದರಲ್ಲೂ ತೇಜಸ್ವಿ ಈವರೆಗೆ ಬರೆದಿರುವ ಎಲ್ಲ ಕತೆ ಮತ್ತು ಕಿರುಕಾದಂಬರಿಗಳು – ಅವರು ಮುಂದೆ ಬರೆಯಬೇಕಿರುವ ಬೃಹತ್‌ ಕಾದಂಬರಿಯೊಂದರ ವಿವಿಧ ಅಧ್ಯಾಯಗಳಾಗಿರುವಂತೆ ತೋರುತ್ತವೆ. ಅದೇ ಮಾತನ್ನು ಅನಂತಮೂರ್ತಿಯವರ ಸೃಷ್ಟಿಯ ಬಗ್ಗೆಯೂ ಹೇಳಬಹುದಾಗಿದೆ. ಬರವಣಿಗೆಯಲ್ಲಿ ಆ ರೀತಿಯ ಸಾತತ್ಯತೆ ಕಾಪಾಡಿಕೊಂಡಿರುವ ಅವರಿಬ್ಬರ ಬರವಣಿಗೆ, ಕೃತಿಯಿಂದ ಕೃತಿಗೆ ಮಾಗುವ ಅದ್ಭುತ ಬೆಳವಣಿಗೆಯನ್ನು ಕಾಣಲಾಗುವುದಿಲ್ಲ ಏಕೆ?

ನವ್ಯೋತ್ತರ ಬರವಣಿಗೆಯ ಪ್ರಮುಖ ದನಿ ಮತ್ತು ಹೊಸ ರೀತಿಯ ಬರವಣಿಗೆಯ ಪ್ರತಿಪಾದಕ ಎಂದು ಪರಿಗಣಿಸಲಾದ ದೇವನೂರು ಮಹಾದೇವ ಬಗ್ಗೆ ಒಂದು ಮಾತು: ದಲಿತರ ಬದುಕನ್ನು ಬೇರೆಯಾಗಿ ನೋಡಿ ಬರವಣಿಗೆ ಮಾಡುವುದು ಸಾಧ್ಯ. ಆದರೆ ಈ ರೀತಿ ನೋಡುವುದರಿಂದ, ಸಮಾಜದ ಒಟ್ಟು ಸಂದರ್ಭದಲ್ಲಿಟ್ಟು ತೂಗುವ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ ಎಂಬುದು ಬಹಳ ಮುಖ್ಯ. ಬದುಕನ್ನು ಈ ರೀತಿ ವಿಭಜಿಸಿ ನೋಡಲು ತೊಡಗಿದ ದಿನವೇ ಆ ಸಾಹಿತಿ ಆವರೆಗೆ ಸಾಗಿಬಂದ ಪರಂಪರೆಯಿಂದ ದೂರ ಅಥವಾ ಭಿನ್ನವಾಗಿ ಉಳಿಯಬೇಕಾಗುತ್ತದೆ ಎಂಬ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿರುವುದು ಒಳ್ಳೆಯದು. ಅದೇ ತರಹ ಭಾಷಾ ಬಳಕೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಗಮನಕ್ಕೆ ತಂದುಕೊಳ್ಳುವುದು ಅಗತ್ಯ. ಯಾವುದೇ ಕವಿ ಅಥವಾ ಸಾಹಿತಿ, ಆಡುಭಾಷೆಯನ್ನು ಅತಿಯಾಗಿ ಅವಲಂಬಿಸಿರುವುದರಿಂದ ಎದುರಾಗಬಹುದಾದ ಅಪಾಯಗಳನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ; ಆಡುಭಾಷೆ ಮತ್ತು ಸಾಹಿತ್ಯ ಭಾಷೆಗಳ ಸಂಪರ್ಕ ಸೇತುವಾದ ಕವಿ ಅಥವಾ ಸಾಹಿತಿ, ಭಾಷೆಯ ಸಾಹಿತ್ಯ ರೂಪವನ್ನು ಶ್ರೀಮಂತಗೊಳಿಸುವುದರ ಜತೆಜತೆಗೆ ಆಡುಭಾಷೆಯ ವ್ಯಾಪ್ತಿಯನ್ನು ಹಿರಿದುಗೊಳಿಸುವ ಮತ್ತು ಸೂಕ್ಷ್ಮಗೊಳಿಸುವ ಪ್ರಮುಖ ಜವಾಬ್ದಾರಿಯನ್ನು ಕಾಲ ಕಾಲಕ್ಕೆ ನಿರಂತರವಾಗಿ ನಿರ್ವಹಿಸುತ್ತಿರಬೇಕಾಗುತ್ತದೆ. ಇಲ್ಲದೇ ಹೋದಲ್ಲಿ, ಆಡುಭಾಷೆಯ ಸಂಪರ್ಕ ಕಳೆದುಕೊಂಡ ಸಾಹಿತ್ಯ ಭಾಷೆಯು ಸಂಸ್ಕೃತದ ತರಹ ಕೇವಲ ಗ್ರಾಂಥಿಕ ಭಾಷೆಯಾಗಿ ಉಳಿಯುವ ಅಪಾಯಕರ ಪರಿಸ್ಥಿತಿಗೆ ಹತ್ತಿರ ಸಾಗಿದರೆ, ಪರಸ್ಪರ ಸಂಪರ್ಕದಿಂದ ವಂಚಿತವಾದ ಆಡುಭಾಷೆಯೊಂದರ ನಡುವಿನ ವ್ಯತ್ಯಾಸಗಳು ಆ ಭಾಷೆಯನ್ನು ಹಲವಾರು ಭಾಷೆಗಳಾಗಿ ವಿಂಗಡಿಸುವ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬ ಸಮಸ್ಯೆಯ ಕಡೆಗೆ ಮಹಾದೇವ, ಸೃಜನಶೀಲ ಲೇಖಕರಾಗಿ ಎದುರಿಸಬೇಕಾದ ಗಮನ ಹರಿಸದಂತೆ ಕಾಣುವುದಿಲ್ಲ.

ಹಾಗಾಗಿ ಸೃಜನಶೀಲ ಲೇಖಕನೊಬ್ಬ ಎದುರಿಸಬೇಕಾದ ಜಾತಿ, ವರ್ಗ, ಭಾಷಾ ಬಳಕೆ ಮತ್ತು ಅವುಗಳ ನಡುವಿನ ಪರಸ್ಪರವಾದ ಅಂತರ್ಗತ ಸಂಬಂಧ ಹಾಗೂ ತನ್ನ ಜನರು ಪ್ರತಿನಿಧಿಸುವ ಬದುಕನ್ನು ತಾನು ಬರುವವರೆಗಿನ ಸಾಹಿತ್ಯ ಪರಂಪರೆಯ ಭಾಗವಾಗಿ ಅನ್ವೇಷಿಸುವುದರ ಮುಖೇನ ಅದರ ಪ್ರಭಾವ ಮತ್ತು ವ್ಯಾಪ್ತಿ, ಚೌಕಟ್ಟು ಮತ್ತು ಭೂಮಿಕೆಯನ್ನು ಏಕ್‌ದಂ ವಿಸ್ತರಿಸುವ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಬರವಣಿಗೆ ಕಾಲದಲ್ಲಿ ಅವರು ಬಹಳ ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ – ಇಡೀ ಬದುಕು ಮತ್ತು ವ್ಯವಸ್ಥೆಯನ್ನು ದಲಿತ ವರ್ಗದ ಹಿನ್ನೆಲೆ ಮತ್ತು ದೃಷ್ಟಿಯಿಂದ ನೋಡುವ ಅಪೂರ್ವ ಅವಕಾಶವನ್ನು ಸಹ.

 

[1]ಸ್ಟೀಫನ್‌ ಹಾಕಿನ್‌, ಏಷ್ಯಾ ಅಥವಾ ಆಫ್ರಿಕ ಖಂಡದ ಯಾವುದಾದರೊಂದು ಕಡೆ ಹುಟ್ಟಿದ್ದಲ್ಲಿ ಗತಿ ಏನಾಗುತ್ತಿತ್ತು ಎಂಬ ಬಗ್ಗೆ ವಿವರಣೆ ಅನಗತ್ಯ.

[2]ಮಾಸ್ತಿಯವರ ‘ಯಶೋಧರಾ’ ನಾಟಕದಲ್ಲಿ ಬರುವ ತ್ಯಕ್ತ ಪತ್ನಿ ಯಶೋಧರೆಯನ್ನು ಬುದ್ಧನಾದ ನಂತರ ಸಿದ್ಧಾರ್ಥ ಭೇಟಿಯಾಗುವ ಸನ್ನಿವೇಶ; ದೀಕ್ಷೆ ಸ್ವೀಕರಿಸಲು ಯಶೋಧರೆ ಮುಂದಾದಾಗ:

ಬುದ್ಧ : ಸ್ತ್ರೀಯರಿಗೆ ದೀಕ್ಷೆ ಕೊಡುವೊಡೆ ನಾನು ಮೊಳೆಯಿಟ್ಟ
ಧರ್ಮದಾಯುಷ್ಯದಲಿ ಅರ್ಧ ಅಳಿವುದು.

ಯಶೋ : ಆಹ!
ಸ್ತ್ರೀಯೆಂಬುದಿಷ್ಟಲ್ಪವಾಯಿತೇ?

ಬುದ್ಧ : ಅಂತಲ್ಲ;
ಸ್ತ್ರೀಗೆ ಇದರಿಂದ ಕುಂದಿಲ್ಲ. ಶ್ರಮಣರಿಗೆ
ವ್ರತ ತಪೋನುಷ್ಠಾನ ಕಷ್ಟತರವಾಗುವುದು ;
ಹಲಜೀವ ಸೋಲುವುದು; ವ್ಯವಹರಣೆ ಕೆಡುವುದು.

ಯಶೋ : ಪುರುಷರನು ಮಾತ್ರ ಸಲಹುವುದಾಗೆ ಒಂದು ಯುಗ ;
ಸ್ತ್ರೀಪುರುಷನು ಸಲಹೆ ಅರ್ಧ ಯುಗ. ಇರ್ವರೂ
ಮುಕ್ತರಾಗಲಿ, ಅರ್ಧ ಯುಗವೆ ಸಾಕೆಂಬೆನು.

ಆಕೆಯ ಒತ್ತಾಸೆಯಿಂದಾಗಿ ಬುದ್ಧ ತೆಗೆದುಕೊಂಡ ನಿಲುವು ಪ್ರಗತಿಪರ ಮತ್ತು ಅತ್ಯಾಧುನಿಕವಾಗಿ ಅನೇಕರಿಗೆ ಇಂದಿಗೂ ಕಾಣಿಸಬಹುದು.

ಕ್ರಿಸ್ತ ಕಾಶ್ಮೀರಕ್ಕೆ ನೀಡಿದ್ದಿರಬಹುದಾದ ಭೇಟಿ ಕುರಿತಂತೆ ಅನೇಕ ಊಹಾಪೋಹಗಳಿವೆ. ಬುದ್ಧ ಸಂಘಗಳ ರಚನೆಯ ಪ್ರಭಾವ ಕ್ರಿಶ್ಚಿಯನ್‌ ಮಿಷನರಿ ಸಂಸ್ಥೆಗಳ ಮೇಲೆ ಆಗಿರಬಹುದು ಅಥವಾ ಇಲ್ಲದಿರಬಹುದು. ಆದರೂ ಕ್ರಿಶ್ಚಿಯನ್‌ ಮಿಷನರಿ ಸಂಸ್ಥೆಗಳು ಹುಟ್ಟುವುದಕ್ಕೆ ಎಷ್ಟೋ ಶತಮಾನ ಮೊದಲಿನಿಂದಲೂ ಬುದ್ಧಸಂಘಗಳು ಕಾರ್ಯನಿರತವಾಗಿರುವಂತೆಯೇ, ಕ್ರಿಶ್ಚಿಯನ್‌ ನನ್‌ಗಳು ಮತ್ತು ಮದರ್‌ಗಳು ಬರುವುದಕ್ಕೆ ಎಷ್ಟೋ ಮೊದಲೇ ಬೌದ್ಧ ಸನ್ಯಾಸಿನಿಯರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರು. ಆಧುನಿಕ ನಿರ್ವಹಣಾ ಸೂತ್ರಗಳು ಮತ್ತು ವಿಧಾನದ ಮೂಲವನ್ನು ಅರಸುವುದಾದಲ್ಲಿ, ಒಂದರ ಮೂಲ ಬುದ್ಧ ಸಂಘಗಳಿಗೆ ಹತ್ತಿರವಾಗದೆ; ಮತ್ತೊಂದು ಕ್ರಿಶ್ಚಿಯನ್‌ ಮಿಷನರಿ ಸಂಘ ಸಂಸ್ಥೆಗಳಿಂದ ಆರಂಭವಾಗಿರುವಂತೆ ಕಾಣುತ್ತದೆ. ಅಂದರೆ ಚಾಲತಿಯಲ್ಲಿರುವ ಎರಡು ಪ್ರಮುಖ ನಿರ್ವಹಣಾ ಚಿಂತನಾಕ್ರಮಗಳ (Management school of thoughts)ಪೈಕಿ ಒಂದು ಪ್ರಮುಖವಾಗಿ ಜಪಾನಿನ ಕೊಡುಗೆಯಾದರೆ, ಮತ್ತೊಂದು ಯುರೋಪ್‌ ಮತ್ತು ಉತ್ತರ ಅಮೆರಿಕಾದ ಬಳುವಳಿ. ಪಶ್ಚಿಮದ ನಿರ್ವಹಣಾ ಚಿಂತನಕ್ರಮದ ಬೆಳವಣಿಗೆಯ ಮೇಲೆ ಕ್ರಿಶ್ಚಿಯನ್‌ ರಿಲಿಜನ್‌ ಮತ್ತು ಸಂಘ ಸಂಸ್ಥೆಗಳ ಪ್ರಭಾವವಿರುವಂತೆಯೇ, ಜಪಾನಿನ ನಿರ್ವಹಣಾ ಚಿಂತನಕ್ರಮ ರೂಪುಗೊಂಡ ಹಾದಿಯಲ್ಲಿ ಬುದ್ಧ ಸಂಘಗಳ ಪರಿಣಾಮವಿದೆ.

ಸ್ತ್ರೀಯರಿಗೆ ಸನ್ಯಾಸಿನಿ* ದೀಕ್ಷೆ ಕೊಡುವುದರಿಂದ ಬೌದ್ಧಧರ್ಮದ ಆಯುಸ್ಸು ಅರ್ಧದಷ್ಟು ಕ್ಷಣಿಸುತ್ತದೆ ಎಂಬುದಾದಲ್ಲಿ ಮಹಿಳೆಯರನ್ನು ನನ್‌, ಸಿಸ್ಟರ್‌ ಮತ್ತು ಮದರ್‌ಗಳನ್ನಾಗಿ ಸ್ವೀಕರಿಸಿದ ಕ್ರಿಶ್ಚಿಯನ್‌ ರಿಲಿಜನ್‌ ಆಯುಸ್ಸು ಕೂಡ ಅದೇ ಹಾದಿ ಹಿಡಿಯಬೇಕಿತ್ತು. ಅಲ್ಲವೆ?

* ಸೇವಾ ಮನೋಭಾವ ಅವರದು.

[3]‘ವರಮಿರ್ದ’ ಮತ್ತು ‘ಭಾವಿಸಿದ’ ಎಂಬ ಮಾತುಗಳು ಭೂತಕಾಲ ಸೂಚಿಯಾಗಿ ಕಾಣಬರುವ ಕಾರಣ ಈ ರೀತಿ ಬದಲಾವಣೆ ಮಾಡಿಕೊಳ್ಳಲಾಗಿದೆ.

[4]Ancient Indian Social History,ಪುಟ 222-223

[5]ದಾಸಿಯರು ಮನೆಕೆಲಸದಾಳುಗಳ ಜತೆ ಲೈಂಗಿಕ ಸಂಬಂಧ ಬಯಸುವ ರಾಜರು, ಯಜಮಾನರ ಕತೆ ಕೂಡ ಹಳೆಯ ಕತೆ.

[6]ಕೆಳಜಾತಿ ಮತ್ತು ಕೆಳವರ್ಗದ ಜನರ ಪ್ರತಿನಿಧಿಯಾಗಿ ರಾಗಿಯ ಕತೆಯನ್ನು ಓದುವುದು ಬೇರೆ.