ಯುರೋಪಿನ ಕಾವ್ಯ ಪರಂಪರೆ ಮಾತ್ರ ಕ್ರಮಾಗತವಾಗಿ ಸಾಗಿಬಂದಿದ್ದು ಅವರು ಮಾತ್ರವೇ ಸರಿಯಾದ ಹಾದಿ ಹಿಡಿದಿದ್ದಾರೆ ಎಂಬುದಾದಲ್ಲಿ ಉಳಿದವರಿಗೆ ಆ ಸಾಲು ಏಕೆ ದೊರಕಲಿಲ್ಲ ಎಂಬ ಪ್ರಶ್ನಾರ್ಥಕ ಆಶ್ಚರ್ಯ ಚಿಹ್ನೆ, ಸಹಜವಾಗಿಯೇ ಮೂಡುತ್ತದೆ; ಕಾಲದ ಸಂಕ್ಷಿಪ್ತ ಇತಿಹಾಸ ಬರೆದಿರುವ – ಮತ್ತು ಐನ್‌ಸ್ಟೈನ್‌ ನಂತರದ ಮಹಾವಿಜ್ಞಾನಿ ಎಂದು ಪರಿಗಣಿಸಲಾದ – ಸ್ಟೀಫನ್‌ ಹಾಕಿನ್‌ ಕೇಳಿಕೊಳ್ಳುವ ಅದೇ ತರಹದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಕಂಡುಕೊಳ್ಳಲು ಆತ ಯತ್ನಿಸುವ ರೀತಿ :

And why should it determine that we come to the right Conclusions from the evidence? Might it not equally well Determine that we draw the wrong conclusion? Or no Conclusion at all?[1]

ವಿಜ್ಞಾನಿಯಾಗಿ ತಾನು ಮತ್ತು ತನ್ನಂತಹ ಅನೇಕರು ಹಿಡಿದ ದಾರಿ ಎಷ್ಟು ಸರಿ ಎಂಬ ಪ್ರಶ್ನೆಯನ್ನು ತನಗೆ ತಾನೇ ಹಾಕಿಕೊಳ್ಳುವ ಹಾಕಿನ್‌, ತಾವು ಸಾಗಿದ ಹಾದಿ ಕ್ರಮಬದ್ಧವಾಗಿದೆ ಎಂಬುದಕ್ಕೆ ಕಾಲವೆ ಸಾಕ್ಷಿ ಎಂಬ ಮಾತುಗಳನ್ನು ನುಡಿಯುತ್ತಾನೆ.

ಯುರೋಪಿನ ಕವಿಗಳು ಹಾಕಿದ ಪರಂಪರೆ, ತುಳಿದ ಹಾದಿ ಸರಿಯಾಗಿದೆ ಮತ್ತು ಕ್ರಮಬದ್ಧವಾಗಿದೆ ಎಂಬುದನ್ನು ಅದೇ ಕಾಲ ರುಜುವಾತುಪಡಿಸಿದೆ ಎಂಬ ಅರ್ಥ ಹಾಕಿನ್‌ನ ಮಾತಿನಿಂದ ಅದೇ ರೀತಿ ಸ್ಫುರಿತವಾಗುತ್ತದೆ ಎಂದು ಹೇಳಬೇಕಾದ ಅಗತ್ಯವಿಲ್ಲ; ಏಕೆಂದರೆ ಅವೆರಡೂ ಬೇರೆ ಬೇರೆಯಲ್ಲ, ಯುರೋಪಿನ ಪ್ರಫುಲ್ಲ ಮನಸ್ಸಿನ ವಿವಿಧ ಅಭಿವ್ಯಕ್ತಿ ಮುಖಗಳು ಮತ್ತು ಆಯಾಮಗಳು. ಆ ಕಾರಣವೇ ವ್ಯಾಸ – ವಾಲ್ಮೀಕಿಯಂಥ ಕವಿಗಳನ್ನು ಪಡೆದ ಭಾರತ ಸೇರಿದಂತೆ ಜಗತ್ತಿನ ಉಳಿದ ರಾಷ್ಟ್ರಗಳ ಜನರು ಸಹ ಅವರ ಪ್ರಭಾವವಲಯವನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳಬೇಕಾಗಿ ಬಂದಿದೆ ಎಂದು ಮತ್ತೆ ನುಡಿಯುವ ಅಗತ್ಯ ಬರಬಾರದು. ಯಾವುದೋ ಒಂದು ಹಂತದಲ್ಲಿ ತಿರಸ್ಕೃತಗೊಂಡವು ಅದೇ ಕಾಲನಿಂದಾಗಿ ಮರುಹುಟ್ಟು ಪಡೆಯುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡಿರಬೇಕಾದುದು ಅಗತ್ಯ ಎಂಬ ಎಚ್ಚರಿಕೆಯನ್ನು ಪರಿಗಣನೆಗೆ ತಂದುಕೊಂಡರು ಸಹ, ಯುರೋಪಿನ ಮೂಲದ ಜನರಿಗೆ ಆ ತರಹದ ವೈಶಿಷ್ಟ್ಯ ಬಂದುದಾದರೂ ಎಲ್ಲಿಂದ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ.

ಸೀತೆಯ ಅಪಹರಣಕ್ಕೆ ಕಾರಣ ಹುಡುಕುವುದು ಕಷ್ಟವಾಗುವುದಿಲ್ಲವಾದಂತೆ, “ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್‌” ಮತ್ತು “ಇಂದೆನಗಾತನೆ ಕುಲದೈವಂ ಕಾಮದೇವನಿಂದ್ರಂ ಚಂದ್ರಂ” ಎಂದು ಬಡಬಡಿಸುವ ಜನ್ನನ ಅಮೃತಮತಿಯ ನಡವಳಿಕೆಗೆ ಕಾರಣ ಹುಡುಕುವುದು ಕಷ್ಟವಾಗುವುದಿಲ್ಲ. ಆದರೆ ಹೆಲೆನ್‌ಳ ವ್ಯಕ್ತಿತ್ವ ಚಿತ್ರಣ ‘ಇಲಿಯಡ್‌’ನಲ್ಲಿ ವಿಧಿ ಅಥವಾ ಕಾಲನ ತರಹವೆ ಸಂವೃತವಾಗುಳಿಯುತ್ತದೆ. ಅಂತಹ ಸುರಸುಂದರಿ ಹೆಲೆನ್‌ಗಾಗಿ ಕದನ ಹೂಡಿರುವ ಟ್ರೋಜನ್ನರು ಅಥವಾ ಅಖ್ಯೆಯನ್ನರನ್ನು ದೂಷಿಸಿ ಫಲವಿಲ್ಲ ಎಂಬ ಮಾತು ಸರ್ಗ ಮೂರರಲ್ಲಿ ಬರುತ್ತದೆ. ಹೆಲೆನ್ ನೋಡಿದ ಕೆಲ ಹಿರಿಯರು ತಮಗೆ ತಾವು ಆಡಿಕೊಳ್ಳುವ ಮಾತು:

‘Surely there is no blame on Trojans and strong – greaved Achains if for long time they suffer hardship for a woman like this one.’ ಪುಟ ೧೦೪

ಅಂತಹ ಆಕೆಯನ್ನು ಮರಳಿ ಕಳುಹಿಸುವುದು ಉತ್ತಮ ಎಂಬ ಸಲಹೆ ಪರಿಗಣನೆಗೆ ಬಾರದೆಹೋಗುತ್ತದೆ. ಯುರೋಪ್‌ ಮೂಲದ ಜನರ ಆಡುಭಾಷೆಯೊಂದರಲ್ಲಿ ಅರಳಿದ ಮೊದಲ ಎಪಿಕ್‌ ಆದ ‘ಇಲಿಯಡ್‌’, ಕಾಲವನ್ನು ಅರಿಯಲು ನಡೆಸಿದ ಮೊದಲ ಪ್ರಯತ್ನ ಕೂಡ ಹೌದು.

ಕವಿಯಾದವರು ಕೊನೆಯವರೆಗೂ ಕವಿಯಾಗಿ ಉಳಿಯುವ ವಿಚಾರದಲ್ಲಿ ತೋರುವ ಎಚ್ಚರ ಎಲ್ಲಕ್ಕಿಂತ ಮುಖ್ಯ; ಯಾವುದೇ ಆಧ್ಯಾತ್ಮಿಕ ದರ್ಶನ, ದಾರ್ಶನಿಕ ತುಡಿತ ಅಥವಾ ಅನುಭಾವದ ಹಂಬಲ ಕಾವ್ಯದ ಚೌಕಟ್ಟಿನಲ್ಲಿ ಕಾವ್ಯಭಾಷೆಯಲ್ಲಿ ಒಡಮೂಡುವುದಾಗಬೇಕು. ಆಧ್ಯಾತ್ಮ ಎಂಬುದು, ಕಾವ್ಯದ ಒಟ್ಟಂದ. ಜನಸಾಮಾನ್ಯರು ಬಳಸುವ ದಿನ ನಿತ್ಯದ ಆಡುನುಡಿ ಮತ್ತು ಭಾಷೆಯನ್ನು ಆಧರಿಸಿರುವ ಕಾವ್ಯದ ಎಲ್ಲವನ್ನೂ ಆ ಚೌಕಟ್ಟಿನಲ್ಲೇ ಸಾಧಿಸುವುದಾಗಬೇಕು: ಕವಿಯಾದವರು ಕವಿಯಾಗಿದ್ದುಕೊಂಡೆ ಋಷಿ, ಸಂತ, ಅನುಭಾವಿ ಅಥವಾ ತತ್ವಜ್ಞಾನಿ ಆಗಬೇಕು. ಆ ತರಹದ ಶಿಸ್ತು ಕಾಪಾಡಿಕೊಳ್ಳುವುದೆ ನಿಜವಾದ ಆಧ್ಯಾತ್ಮಿಕ ಸಾಧನೆ. ಕವಿ ನೀಡುವ ಆಧ್ಯಾತ್ಮಿಕ ಅನುಭವ, ದರ್ಶನ ಅಥವಾ ಅನುಭಾವ ಕಾವ್ಯದ ಶಿಸ್ತು ಮತ್ತು ಚೌಕಟ್ಟಿನ ಒಳಗಡೆ ಅಭಿವ್ಯಕ್ತಿಗೊಳ್ಳಬೇಕು. ಅಪರಭಾರತದ ಕವಿಗಳು ಆ ಶಿಸ್ತನ್ನು ಕಾಪಾಡಿಕೊಂಡಂತೆ ಕಾಣುತ್ತದೆಯೆ? ಅವರು ಪ್ರಾಥಮಿಕವಾಗಿ ಜಿಜ್ಞಾಸುಗಳು, ದಾರ್ಶನಿಕರು ಮತ್ತು ತತ್ವಜ್ಞಾನಿಗಳು. ಆದರೆ ವ್ಯಾಸ, ಹೋಮರ್‌ ಮತ್ತು ವಾಲ್ಮೀಕಿ ಪ್ರಾಥಮಿಕವಾಗಿ ಮತ್ತು ಮೂಲತಃ ಕವಿಗಳು.

ಬಹಳ ಸರಳವಾಗಿ ನೋಡುವುದಾದರೆ, ‘ಈನೀಡ್‌’ ಬರುವ ಕಾಲಕ್ಕಾಗಲೇ ಏಷ್ಯಾ ಮತ್ತು ಯುರೋಪ್‌ ಎಂಬ ವಿಭಜನೆ ನಡೆದುಹೋಗಿತ್ತು. ಈವರೆಗಿನ ಜಗತ್ತಿನಲ್ಲಿ ಅನೇಕ ಸಾಮ್ರಾಜ್ಯಗಳು ಡಿವಿಜಿಯ ಉಮರ್‌ ಖಯ್ಯಾಂ ಹೇಳುವಂತೆ ಅಳಿಸಿ ಉದಯಿಸಿ ಹೋಗಿವೆ.

ಆದರೆ ಸಾಮ್ರಾಜ್ಯ ಸ್ಥಾಪಿಸುವ ಮನುಷ್ಯರ ಹಂಬಲ ಮತ್ತು ಕಲ್ಪನೆ ಮಾತ್ರ ಕಳೆದುಹೋಗಿಲ್ಲ. ಬದಲಾಗುವ ಕಾಲಕ್ಕನುಗುಣ ಹೊಸ ಹೊಸ ಆಯಾಮ ಮತ್ತು ತರತರಹದ ರೂಪ ಪಡೆದುಕೊಳ್ಳುತ್ತಲೇ ಸಾಗಿದೆ. ಒಂದು ಕಾಲದಲ್ಲಿ ರಾಜಕೀಯ ಸಾಮ್ರಾಜ್ಯಗಳ ಸ್ಥಾಪನೆಗೆ ಮಾತ್ರ ಸೀಮಿತವಾಗಿದ್ದ ಸಾಮ್ರಾಜ್ಯ ಕಲ್ಪನೆ ಇಂದು ಆವರಿಸದ ಕ್ಷೇತ್ರವಿಲ್ಲ; ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಸಾಂಸ್ಕೃತಿಕ, ವಾಣಿಜ್ಯ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನೂ ಆವರಿಸಿರುವ ಆದರೆ ನಿಮಿಷಕ್ಕೆ ತುತ್ತಾಗದವರು ಸಿಗುವುದು ಬಹಳ ಅಪರೂಪವಾಗುತ್ತಿದೆ. ಆಧುನಿಕ ಸ್ವಾಮಿಗಳು, ಸಂತರು, ತತ್ವಜ್ಞಾನಿಗಳು, ದಾರ್ಶನಿಕರು ಆ ಸಾಲಿಗೆ ಸೇರುತ್ತಿರುದ್ದಾರೆ. ರಿಲಿಜನ್‌ ಸಂಸ್ಥಾಪಕರು ಸಹ. ಪ್ರಕೃತಿದತ್ತವಾಗಿ ಬಂದ ಪ್ರತಿಭೆ, ಶ್ರಮ ಅಥವಾ ಮತ್ತಾವುದೇ ವಿಧಾನ ಅನುಸರಿಸಿ ತಮ್ಮ ಸ್ವಂತ ಇಲ್ಲವೆ ಎರವಲು ಸಾಮರ್ಥ್ಯಕ್ಕನುಗುಣ ಸಾಮ್ರಾಜ್ಯ ನಿರ್ಮಿಸಬಯಸುವ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕಲಾವಿದರು, ಸಾಹಿತಿಗಳು, ಧಾರ್ಮಿಕ ಪುರುಷರು, ರಾಜಕಾರಣಿಗಳು, ವರ್ತಕರು, ಉದ್ಯಮಿಗಳು, ಕ್ರೀಡಾಪಟುಗಳಿಗೆ ಇಂದು ಲೆಕ್ಕವೇ ಇಲ್ಲ.

ಪ್ರತಿಯೊಬ್ಬ ಮಹತ್ವಾಕಾಂಕ್ಷಿಯೂ ತನ್ನದೇ ಆದ ರೀತಿ ಮತ್ತು ಮಿತಿಯಲ್ಲಿ ಸಾಮ್ರಾಜ್ಯಷಾಹಿಯಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಈ ಯುಗವೇ ಸಾಮ್ರಾಜ್ಯಷಾಹಿಗಳ ಯುಗ ಮತ್ತು ಸಾಮ್ರಾಜ್ಯ ಸ್ಥಾಪನೆಯ ಅರ್ಥ ಮತ್ತು ವ್ಯಾಪ್ತಿ ಬದಲಾಗುತ್ತ ಹೋಗುತ್ತಿದ್ದು ಸಾಮ್ರಾಜ್ಯಷಾಹಿಗಳಾಗಲು ಈವರೆಗೆ ಸಾಧ್ಯವಾಗದೇ ಹೋದವರು ಅದನ್ನು ಸಾಧಿಸಲು ಹವಣಿಸುತ್ತಿದ್ದರೆ, ಮತ್ತೆ ಕೆಲವರು ಆ ತರಹ ಆಗಬೇಕು ಎಂಬ ಕನಸಿನ ಗುಂಗಿನಲ್ಲಿಯಾದರೂ ಇರುತ್ತಾರೆ. ಅದರ ವ್ಯಾಪಕತೆ ಆ ಮಟ್ಟಿಗೆ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಸಾಮ್ರಾಜ್ಯ ಸ್ಥಾಪನೆಯ ಕನಸಿನಲ್ಲಿ ಸಿಕ್ಕಿ ನಲುಗದ ಎಷ್ಟು ಮಂದಿಯನ್ನು ಇಂದಿನ ಜಗತ್ತಿನ ಕಾಣಲು ಸಾಧ್ಯ? ಅಮೆರಿಕನ್‌ ಕನಸು ಎಂದರೂ ಅದೇ ಅರ್ಥ! ಅದುವೆ ರೋಮನಂ ಇಂಪೀರಿಯಂ; ಜಾಗತೀಕರಣ, ಉದಾರೀಕರಣ ಎಂದರೂ ಒಂದೇ.

‘ಈನೀಡ್‌’ ಮೂಲತಃ ನೆಲೆ ಹುಡುಕಿಕೊಂಡು ಹೊರಟ ದೇಶಭ್ರಷ್ಟರ ಅಥವಾ ನೆಲೆ ಇಲ್ಲದ ವಲಸಿಗರ ಕತೆ; ಸಾಮ್ರಾಜ್ಯ ಸ್ಥಾಪಕನೊಬ್ಬನ ಕತೆಯೂ ಹೌದು. ಅವನು ಸ್ಥಾಪಿಸುವ ರೋಮನ್ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಗಂಗಾನದಿ ಮೊದಲಾದ ಹೆಸರುಗಳ ಉಲ್ಲೇಖವೂ ಬರುತ್ತದೆ.

His empire shall expand
Past Garamants and Indians to a land beyond the zodiac
ಪುಟ ೧೮೪

Even as Ganges or Nile, all seven tranquil branches,ಪುಟ ೨೪೯

ಹಾಗಾಗಿ ಈನಿಯಾಸ್‌, ನೆಲೆಗಾಗಿ ಹಾತೊರೆಯುವ ನೆಲೆ ಇಲ್ಲದ ಎಲ್ಲ ಮಹತ್ವಾಕಾಂಕ್ಷಿಗಳ ಪ್ರತಿನಿಧಿಯೂ ಆಗುತ್ತಾನೆ. ಅಂತಹ ವರ್ಜಿಲನಿಗೆ ಪ್ರವಾದಿ ಪಟ್ಟ ತಂದುಕೊಟ್ಟ ‘ತುರುಗಾಹಿ ಗೀತೆ’ಯ ನಾಲ್ಕನೇ ಪದ್ಯ ಗಮನಿಸಲು ಇದು ಸಕಾಲ:

ಶತಮಾನಗಳ ಮಹಾಸಾಲು ಹೊಸದಾಗಿ
ಆರಂಭವಾಗಲಿದೆ. ಕನ್ಯೆಯ ಆಗಮನ
ವಾಗಲಿದೆ. ಈಗ ಶನಿಯ ಆಳ್ವಿಕೆ ಬರಲಿದೆ.
ದಿವ್ಯ ಚೇತನದ ಕಾಂತಿಯ ಅವನು ದೇವತೆಗಳ ಜತೆ
ನಾಯಕಮಣಿಗಳೆಲ್ಲ ಒಂದಾಗುವುದನ್ನು ಅವರಲ್ಲಿ
ತಾನು ಒಂದಾಗುವುದನ್ನು ಕಾಣಲಿದ್ದಾನೆ.
ತನ್ನ ನಡೆಯ ಸದ್ಗುಣಗಳು ತರಲಿರುವ ಶಾಂತಿಯಲಿ
ಜಗತ್ತನ್ನೇ ಪ್ರಭಾವಿಸಲಿದ್ದಾನೆ.
……………………………………………
ನಾಗಿಣಿ ನಾಶವಾಗಲಿದೆ. ಖೊಟ್ಟಿ ವಿಷದ ಗಿಡ ಹಾಳಾಗಲಿದೆ.

ಕ್ರಿಸ್ತನ ಆಗಮನ ಸಾರುವ ಈ ಪದ್ಯ ಬರೆದಿದ್ದಾನೆ ಎಂದು ಭಾವಿಸಿದ ಕ್ರಿಶ್ಚಿಯನ್‌ ಜಗತ್ತು ವರ್ಜಿಲನನ್ನು ಪ್ರವಾದಿ ಎಂದು ಭಾವಿಸಿ ಕೊಂಡಾಡಿತು. ಅಗಸ್ಟೈನ್‌ ಮೊದಲಾದ ನಂತರ ಮತ್ತು ಪ್ರಚಾರಕರ ಮಾತಿರಲಿ ದಾಂತೆ, ವಿಕ್ಟರ್‌ ಹ್ಯೂಗೊ ಮೊದಲಾದ ಅನೇಕರು ಅದೇ ತರಹ ಭಾವಿಸಿದರು. ಹಾಗಾಗಿ ಆ ಪದ್ಯ ಹಲವಾರು ರೀತಿಯ ವ್ಯಾಖ್ಯಾನ ಮತ್ತು ಓದುವಿಕೆಗೆ ಗುರಿಯಾಗಿದೆ. ಆಗಸ್ಟಸ್‌ ಮಗುವಿನ ತಂದೆಯಾದಾಗ ಅಥವಾ ಕ್ಲಿಯೋಪಾತ್ರ ಮತ್ತು ಮಾರ್ಕ್‌ ಆಂಟನಿ ಜೋಡಿಗೆ ಮಗುವಾದಾಗ ಏಷ್ಯದ ಆಣಿಮುತ್ತುಗಳಿಂದ ಕೂಡಿದ ಆ ಭಟ್ಟಂಗಿ ಪದ್ಯವನ್ನು ವರ್ಜಿಲ್‌ ಬರೆದಿರಬಹುದೆಂದು ಲೇವಡಿ ಮಾಡುವವರೂ ಇದ್ದಾರೆ.

ಪೇಗನ್‌ ಸಂಸ್ಕೃತಿಯಿಂದ ಕೊಡವಿಕೊಂಡು ಕ್ರಿಶ್ಚಿಯನ್‌ ಸಂಸ್ಕೃತಿ ಸ್ವೀಕರಿಸಲು ಯುರೋಪ್ ಅಣಿಯಾಗುತ್ತಿದ್ದ ಸಂಕ್ರಮಣ ಕಾಲದಲ್ಲಿ ಬಂದ ವರ್ಜಿಲನಲ್ಲಿ ಆ ತರಹದ ಎಲ್ಲ ಸೂಕ್ಷ್ಮಗಳನ್ನು ಕಾಣಬಹುದಾಗಿದೆ ಎಂಬುದೇ ಅಚ್ಚರಿ. ಹಾಗೆಂದು ವರ್ಜಿಲ್‌ ಕ್ರಿಸ್ತನ ಆಗಮನ ಸಾರುವ – ಕಾಲಜ್ಞಾನ ತರಹದ – ಪದ್ಯ ಬರೆದಿದ್ದಾನೆ ಎಂದರೆ ಸಲೀಸಾಗಿ ನಂಬಲು ಬರುತ್ತದೆಯೇ? ಇಂದಿನ ಉತ್ತರ ಅಮೆರಿಕದ ನವಸಾಮ್ರಾಜ್ಯದ ಉದಯ ಸೂಚಿಸುವ ರೀತಿಯಲ್ಲಿ ಅವನ ಕಾವ್ಯ ಕೊನೆಗೊಳ್ಳುವ ಕಾರಣ, ಅಮೆರಿಕನ್‌ ವ್ಯವಸ್ಥೆಯ ಆಗಮನ ಸಾರಿ ಪ್ರವಾದಿ ತರಹ ಕಾವ್ಯ ಬರೆದಿದ್ದಾನೆ ಎಂದು ಹೇಳಲು ಬರುತ್ತದೆಯೇ? ಅವರೆಡರಲ್ಲಿ ಯಾವುದಾದರೊಂದನ್ನು ನಂಬುವುದಾದಲ್ಲಿ ಮತ್ತೊಂದನ್ನು ನಂಬದಿರಲು ಸಾಧ್ಯವೆ?

ವರ್ಜಿಲನನ್ನು ತನ್ನ ಅನ್ವೇಷಣೆಯ ಹಾದಿಯಲ್ಲಿ ಮಾರ್ಗದರ್ಶಿಯಾಗಿ ಸ್ವೀಕರಿಸುವುದರ ಮೂಲಕ ಪೇಗನ್‌ ಧರ್ಮವನ್ನು ಕ್ರಿಶ್ಚಿಯನ್‌ ರಿಲಿಜನ್ನಿನ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ಕುರಿತು ದಾಂತೆ ಕಾವ್ಯ ಬರೆದುದು ಸಾಧಾರಣ ಒಳನೋಟವೆ?

ಅಂತಹ ಎಟುಕುನೋಟ ನೀಡುವ ಪರಂಪರೆ ಸಹ ಹೋಮರನಿಂದಲೇ ಮೊದಲಾದಂತೆ ತೋರುತ್ತದೆ.

I

ಯುರೋಪಿನ ಕಾವ್ಯ ಪರಂಪರೆಯನ್ನು ಎರಡು ಪ್ರಮುಖ ಧಾರೆಗಳಲ್ಲಿ ಗುರುತಿಸಬಹುದಾಗಿದೆ. ಮೊದಲನೆಯದು ಹೋಮರ್‌, ಮತ್ತೊಂದು ವರ್ಜಿಲ್‌ ಧಾರೆ; ವರ್ಜಿಲ್‌ ಪರಂಪರೆಗೆ ಸೇರಿದ ಕವಿ ಹೋಮರ್‌ ಪರಂಪರೆಯ ಎಲ್ಲ ಸಲ್ಲಕ್ಷಣಗಳನ್ನು ಉಳಿಸಿಕೊಳ್ಳಲು ಹೆಣಗಿದರೆ, ವರ್ಜಿಲ್‌ ಪರಂಪರೆಯ ಅಂಶಗಳನ್ನು ತನ್ನ ಕಾವ್ಯರಚನೆಯ ಕಾಲದಲ್ಲಿ ಅಂತರ್ಗತಗೊಳಿಸಿಕೊಳ್ಳಲು ಹೋಮರ್‌ ಪರಂಪರೆಗೆ ಸೇರಿದ ಕವಿ, ಹೆಣಗುವುದು ಸರ್ವಸಾಮಾನ್ಯ. ೨೦ನೇ ಶತಮಾನದ ಅತ್ಯಂತ ದೊಡ್ಡ ಕವಿಯಾದ ಯೇಟ್ಸ್‌ ಪ್ರಧಾನವಾಗಿ ಹೋಮರ್‌ ಪರಂಪರೆಗೆ ಸೇರಿದವರನಾದರೆ, ಎಲಿಯಟ್ ವರ್ಜಿಲ್‌ ಪರಂಪರೆಯ ಕವಿ; ಆದರೆ ಮನೋಧರ್ಮ ಮತ್ತು ನಿರ್ವಹಣೆಯಲ್ಲಿ ವರ್ಜಿಲ್‌ ಪರಂಪರೆಯ ಮುಂದಿನ ಬೆಳವಣಿಗೆಯಾದ ದಾಂತೆಗೆ ಬಹಳ ಹತ್ತಿರನಾದವನು.

ಯುರೋಪಿನ ಕಾವ್ಯಪರಂಪರೆ ಸಾತತ್ಯತೆ ಉಳಿಸಿಕೊಂಡು ಎಷ್ಟು ಸುಸಂಗತ ಮತ್ತು ಕ್ರಮಬದ್ಧವಾಗಿ ಸಾಗಿಬಂದಿದೆ ಎಂದರೆ – ಆ ರೀತಿ ವಿಭಜಿಸಿ ನೋಡುವುದೇ ಒಂದು ತರಹದಲ್ಲಿ ಕೃತಕವಾಗಿ ಕಾಣುವಷ್ಟರಮಟ್ಟಿಗೆ ಒಂದರ ಪ್ರಮುಖ ಗುಣಲಕ್ಷಣಗಳನ್ನು ಮತ್ತೊಂದು ಒಳಗೊಳ್ಳುವ ಪ್ರಯತ್ನಗಳು ಆ ಎರಡೂ ಪರಂಪರೆಯ ನಡುವೆ ನಿರಂತರ ನಡೆದುಬಂದಿದ್ದು ವ್ಯತ್ಯಾಸಗಳು ಸೂಕ್ಷ್ಮವಾಗುತ್ತಾ ಸಾಗಿವೆ. ಸ್ವಯಂಭು ರೀತಿ ಹುಟ್ಟುಕವಿಯಾದ ಹೋಮರನಿಗೆ ಪದ್ಯರಚನಾ ಕಲೆ ಒಂದು ತರಹದಲ್ಲಿ ಲೀಲಾಜಾಲವಾಗಿ ಸಿದ್ಧಿಸಿದ್ದರೆ, ವರ್ಜಿಲನಲ್ಲಿ ಪ್ರಯತ್ನಪೂರ್ವಕ ಅಂಶವೂ ಬಂದು ಸೇರಿಕೊಳ್ಳುತ್ತದೆ; ವರ್ಜಿಲ್‌ ಹುಟ್ಟು ಕವಿಯಲ್ಲ ಮತ್ತು ಹೋಮರನಲ್ಲಿ ಪ್ರಯತ್ನಪೂರ್ವಕ ಅಂಶ ಇಲ್ಲವೇ ಇಲ್ಲ ಎಂದರ್ಥವಲ್ಲ. ಪ್ರಯತ್ನ ಪೂರ್ವಕವಾದ ಅಂಶಗಳು ಹೋಮರನಲ್ಲಿ ಇದ್ದೂ ಇಲ್ಲದಂತಿದ್ದರೆ, ಹೊಳೆದುದನ್ನು ಮತ್ತೆ ಪರಿಷ್ಕರಿಸಿ ತಿದ್ದಿ ನೋಡುವುದರ ಮೂಲಕ ತನ್ನಲ್ಲಿನ ಅಭಿಜಾತ ಕವಿತ್ವ ಶಕ್ತಿ ಮತ್ತು ಪ್ರತಿಭೆಗೆ ವಿಶೇಷ ಮೊನಚು ಮತ್ತು ಹೊಳಪು ನೀಡುವುದರ ಜತೆಗೆ, ಕಾವ್ಯದ ರಚನೆಯನ್ನು ವಾಸ್ತುಶಿಲ್ಪಿಯ ತರಹ ನಿರ್ವಹಿಸುವುದು ವರ್ಜಿಲ್‌ ಪರಂಪರೆಗೆ ಬಹಳ ಆಪ್ತವಾದುದು. ಘನವಾದ ಉದ್ದೇಶ ಮತ್ತು ವಿಶೇಷ ಅರ್ಥವಿಟ್ಟುಕೊಂಡು ಆತ ಕಾವ್ಯ ನಿರ್ಮಾಣಕ್ಕೆ ಮುಂದಾಗುತ್ತಾನೆ. ಹಾಗಾಗಿ ಸರಳತೆ ಕೂಡ ಸರಳವಾಗಿ ಉಳಿಯುವುದಿಲ್ಲ.

ಹೋಮರ್‌ ಪರಂಪರೆಗೆ ಯಾವುದೇ ಘನವಾದ ಉದ್ದೇಶವಿಲ್ಲ ಎಂದು ಆ ಮಾತಿನ ಅರ್ಥವಲ್ಲ. ಎದ್ದು ಕಾಣುವ ನಿರುದ್ದಿಶ್ಯತೆ ಮೂಲಕ ಸದ್ದಿಲ್ಲದೆ ಸಾಧಿಸುವುದು ಅಥವಾ ಆ ಘನವಾದ ಉದ್ದೇಶ ಮಗುಂ ಆಗಿ ಹುದುಗಿರುವಂತೆ ನೋಡಿಕೊಳ್ಳುವುದು ಹೋಮರ್‌ ಪರಂಪರೆಗೆ ವಿಶಿಷ್ಟವಾದುದು. ಒಟ್ಟಾರೆ ವ್ಯತ್ಯಾಸ ಇರುವುದು ನೀಡಲಾಗುವ ಒತ್ತಿನಲ್ಲಿ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ರೀತಿಯಲ್ಲಿ; ಬದುಕನ್ನು ತಾನು ಕಂಡಂತೆ ಎಲ್ಲ ವಿವರ ಮತ್ತು ಮಗ್ಗುಲುಗಳಲ್ಲಿ ದಾಖಲಿಸುತ್ತಲೇ ಏನನ್ನೂ ಹೇಳದೆ ಹೇಳುವುದು ಹೋಮರನಿಗೆ ಬಹಳ ಆಪ್ತವಾದುದು; ಕಾವ್ಯವನ್ನು ಧ್ಯಾನಿಸುತ್ತಲೇ ಬದುಕನ್ನು ಹಾಗೂ ಬದುಕಿಗಾಗಿ ಕಾವ್ಯವನ್ನು ಕುರಿತು ಧ್ಯಾನಿಸುವುದು ವರ್ಜಿಲನಿಗೆ ಇಷ್ಟವಾದುದು.

ಕಾವ್ಯರಚನಾ ಕಲೆ ಎಂಬುದೊಂದು ಮಹಾಧ್ಯಾನ ಮತ್ತು ಅತ್ಯುನ್ನತ ಮಟ್ಟದ ಆಧ್ಯಾತ್ಮಿಕ ಸಾಧನೆ ಎಂಬುದನ್ನು ಮಾಡಿ ತೋರಿಸಿದವರೇ ಅವರು. ಆ ಗುಣ ಆ ಎರಡೂ ಪರಂಪರೆಗಳಿಗೆ ಸಮಾನವಾದುದು.

ಪ್ರತಿಭೆ, ಕಾಲ, ಬದುಕಿಗೆ ಸ್ಪಂದಿಸುವ ಗುಣ ಮತ್ತು ಕವಿತ್ವ ಶಕ್ತಿಯಲ್ಲಿನ ವ್ಯತ್ಯಾಸ ಹೊರತು, ಹೋಮರ್‌ ಪರಂಪರೆ ಈ ಜಗತ್ತಿನ ಬಹುತೇಕ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಾಮಾನ್ಯವಾದುದಾಗಿರುವಂತೆ ತೋರುತ್ತದೆ. ಎಲ್ಲರೂ ಹೋಮರ್‌ ಆಗಲು ಬರುವುದಿಲ್ಲವಾದ ಕಾರಣ ಮುಂದಿನ ಬೆಳವಣಿಗೆಯೇ ವರ್ಜಿಲ್‌ ಆ ಪರಂಪರೆ ನಿಜವಾದ ಅರ್ಥದಲ್ಲಿ ಭಾರತದಲ್ಲಿ ಆರಂಭವಾದಂತೆ ಕಾಣುವುದಿಲ್ಲ. ಆದರೆ ವರ್ಜಿಲ್‌ ಪರಂಪರೆಯ ಅನೇಕ ಅಂಶಗಳನ್ನು ವಾಲ್ಮೀಕಿಯಲ್ಲಿಯೇ ಗುರುತಿಸಬಹುದಾಗಿದೆ. ವರ್ಜಿಲ್‌ ಪರಂಪರೆಯ ಯರೋಪಿನಲ್ಲಿ ಆರಂಭವಾಗುವುದಕ್ಕೆ ಐದು ಶತಮಾನಗಳ ಮೊದಲೇ ವಾಲ್ಮೀಕಿ ಭಾರತದಲ್ಲಿ ಕಾಣಿಸಿಕೊಂಡಿದ್ದ ಎಂಬುದು ನಿಜ. ಆದರೆ ವಾಲ್ಮೀಕಿ ಮೂಲತಃ ಹೋಮರ್‌ ತರಹವೇ ಅಲಿಖಿತ ಚಾರಣ ಪರಂಪರೆಗೆ ಸೇರಿದ ಕವಿ. ಆದರೂ ಆತನಲ್ಲಿ ವರ್ಜಿಲ್‌ ಪರಂಪರೆಯ ಕೆಲ ಲಕ್ಷಣಗಳು ಕಾಣಸಿಗುತ್ತವೆ. ಭಾರತದ ಸಂಸ್ಕೃತಿಯ ಇತಿಹಾಸದ ರೋಚಕ ಸಂಗತಿಗಳಲ್ಲಿ ಒಂದಾದ ಅದೇ ಭಾರತದ ದೌರ್ಬಲ್ಯವಾಗಿರಬಹುದೆ – ಕಾಲ ಪಕ್ವವಾಗುವ ಮೊದಲೇ ಪ್ರೌಢಿಮೆ ತಲುಪುವುದು!

ಗ್ರೀಕರು ತಲುಪಿದ ನಾಗರಿಕತೆ ಮತ್ತು ಸಂಸ್ಕೃತಿಯ ಮಟ್ಟ ಎಷ್ಟೇ ಎತ್ತರದ್ದಾಗಿರಬಹುದು, ಅದನ್ನು ಉಳಿಸಿ ಮುಂದುವರಿಸಿಕೊಂಡು ಹೋಗಲು ನಿರಂತರ ಜಾಗೃತಿ ಮತ್ತು ಯತ್ನ ಅಗತ್ಯ; ಇಲ್ಲದೇ ಹೋದಲ್ಲಿ ಪರರ ಆಕ್ರಮಣಕ್ಕೆ ತುತ್ತಾಗಬೇಕಾಗುತ್ತದೆ ಮತ್ತು ಆ ರೀತಿಯ ಪರಾಕ್ರಮಣಕ್ಕೆ ತುತ್ತಾಗದೆ ಬೇರೆಯವರಿಂದ ಕಲಿಯಬಹುದಾದನ್ನು ಮತ್ತು ಪಡೆಯಬಹುದಾದನ್ನು ಪಡೆಯಲು ಸಾಧ್ಯ. ಏಕೆಂದರೆ ಆಧ್ಯಾತ್ಮ ಎಂಬುದು ಬೇರೇನೂ ಅಲ್ಲ, ನಿರಂತರ ಜಾಗೃತಿ: ಅವರವರ ಕ್ಷೇತ್ರದಲ್ಲಿ ಮಾಡಲಾಗುವ ಸಾಧನೆ. ಅದು ಬದುಕಿನಿಂದ ದೂರವಾದುದಲ್ಲ. ಬದುಕಿನ ಮತ್ತು ದಿನನಿತ್ಯದ ಚಟುವಟಿಕೆಗಳ, ಅನ್ವೇಷಣೆಗಳ ಮತ್ತು ಸಾಧನೆಗಳ ಹಿಂದಿನ ಕ್ರಿಯಾಶೀಲ ಶಕ್ತಿ ಮತ್ತು ಶಿಸ್ತು ಎಂದು ಕಂಡುಕೊಂಡವನೇ ಹೋಮರ್‌. ಆ ಆಧ್ಯಾತ್ಮಿಕ ಮನಃಸ್ಥಿತಿ ಅಥವಾ ಮನೋಭಾವವಿಲ್ಲದೆ ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನ – ತಂತ್ರಜ್ಞಾನ ಅಥವಾ ರಾಜಕೀಯ ಮೊದಲಾದ ಯಾವುದೇ ಕ್ಷೇತ್ರದಲ್ಲೂ ಮಾಡಬೇಕಾದ ಸಾಧನೆ ಮಾಡಲಾಗುವುದಿಲ್ಲ.

ಸಿದ್ಧಿ ಮತ್ತು ಸಾಧನೆಯ ಮಾರ್ಗವನ್ನಾಗಿ ಆಧ್ಯಾತ್ಮಿಕ ಅನುಭವವನ್ನು ಸೀಮಿತಗೊಳಿಸಿದಂತೆ ಕಾಣುವ ಹೋಮರ್‌ ನೆರೆಯವರ ಇರುವಿಕೆಯನ್ನು ಸದಾ ಎಚ್ಚರದಿಂದ ಗಮನಿಸುತ್ತಾ ಅವರಿಂದ ಪಡೆಯಬಹುದಾದನ್ನು ಪಡೆಯುತ್ತಲೇ ತಮ್ಮ ಮತ್ತು ತಮ್ಮದರ ತಮ್ಮತನದ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬೋಧಿಸದೆ ಬೋಧಿಸಿದವನು; ಇಲ್ಲದೇ ಹೋದಲ್ಲಿ ಅದು ಪರರ ಪಾಲಾಗುತ್ತದೆ ಎಂಬುದರ ಪ್ರತೀಕವಾಗಿ ಹೆಲೆನ್‌ ಪಲಾಯನವನ್ನು ಕಣ್ಮುಂದೆ ತಂದು ನಿಲ್ಲಿಸಿದ ಕವಿ.

ಜನಾಂಗೀಯ ಪ್ರಜ್ಞೆಯನ್ನು ಹೋಮರನಲ್ಲಿ ಎಳ್ಳಷ್ಟು ಕಾಣಲಾಗುವುದಿಲ್ಲವಾದರೂ, ಏಷ್ಯನ್ನರು ಮತ್ತು ಯುರೋಪಿಯನ್ನರು ಎಂಬ ವಿಭಜನೆ ಮತ್ತು ವಿಂಗಡಣೆ ತೆರೆದುಕೊಳ್ಳುತ್ತಿದ್ದ ಕಾಲಕ್ಕೂ ಸ್ವಲ್ಪ ಮೊದಲು ಬಂದವನಿದ್ದಿರಬಹುದಾದ ಹೋಮರ್‌, ಅವರ ನಡುವಿನ ವ್ಯತ್ಯಾಸಗಳನ್ನು ಯಾವುದೇ ರೀತಿಯ ಪೂರ್ವಗ್ರಹಗಳನ್ನು ಲವಲೇಶವೂ ಇಟ್ಟುಕೊಳ್ಳದೆ ಜನಾಂಗ ದ್ವೇಷರಹಿತವಾಗಿ ಮತ್ತು ವಸ್ತುನಿಷ್ಠವಾಗಿ ಮಂಡಿಸುವ ರೀತಿ ಇಂದಿಗೂ ಅನನ್ಯವಾಗಿ ಉಳಿದಿದೆ. ಟ್ರೋಜನ್ನರನ್ನು ಏಷ್ಯನ್ನರ ಪ್ರತಿನಿಧಿಗಳಾಗಿ ಹೋಮರ್‌ ಎಲ್ಲಿಯೂ ಕಾಣುವುದಿಲ್ಲ. ಆ ತರಹ ಕಾಣಲು ಸಾಧ್ಯವಾಗುವ ಆರಂಭದ ಸೂಚನೆಗಳನ್ನು ಬಹಳ ಸೂಕ್ಷ್ಮವಾಗಿಯಾದರೂ ಅವನಲ್ಲಿ ಗುರುತಿಸುವುದು ಬಹುತೇಕ ಅಸಾಧ್ಯವೇ ಸರಿ. ಭೌಗೋಳಿಕ ಮತ್ತು ಸಾಂಸ್ಕೃತಿಕ ಭಿನ್ನತೆಯಿಂದಾಗಿ ಟ್ರೋಜನ್ನರು ಏಷ್ಯನ್ನರಾಗಿ ಕಾಣಿಸಿಕೊಂಡುದು ಸಂಪೂರ್ಣವಾಗಿ ಮುಂದಿನ ಬೆಳವಣಿಗೆ. ಆ ತರಹದ ಬೆಳವಣಿಗೆಗೆ ಪೂರಕವಾಗಬಹುದಾದ ಅಂಶಗಳನ್ನು ಅವುಗಳ ಬೀಜಾಣು ರೂಪದಲ್ಲಿ ಬಹಳ ಸೂಚ್ಯವಾಗಿ ಗ್ರಹಿಸಿ ಎಪಿಕ್‌ ರಚಸಿದವನೇ ಹೋಮರ್‌ ಆಗಿದ್ದಿರಬಹುದು. ಅದರಲ್ಲೂ ಹೆಕ್ತರ್‌, ಏಷ್ಯನ್ನರ ದೊಡ್ಡತನ ಮತ್ತು ದೋಷದೌರ್ಬಲ್ಯಗಳ ಪ್ರತೀಕವಾಗಿ ಒಡಮೂಡುವ ರೀತಿ ಬಹಳ ನಾಜೂಕಿನದಾಗಿರುವಂತೆಯೇ, ಆತನ ಪ್ರತಿಧ್ವಂದ್ವಿಯಾದ ಅಖಿಲ್ಯೂಸ್‌ ಯುರೋಪಿನ ಪ್ರತಿನಿಧಿಯಾಗಿಬಿಡುವುದು ಕಾಲ ಕಳೆದಂತೆ ಕಾಣಿಸಿಕೊಂಡ ಬೆಳವಣಿಗೆಯಾಗಿಬಿಡುತ್ತದೆ. ಅದೇ ತರಹ ಪ್ಯಾರಿಸ್‌ ಮತ್ತು ಆತನ ತಂದೆ ಅದೇ ಏಷ್ಯಾದ ಗುಣಗಳ ಮಾನವರೂಪಗಳಾದರೆ, ಓದಿಸ್ಯೂಸ್‌ ಮತ್ತು ಅಗಮೆಮ್ನೊನ್‌ ಯುರೋಪ್‌ ಮೂಲದ ವ್ಯಕ್ತಿತ್ವ ಮತ್ತು ಸಂಸ್ಕೃತಿಯ ಮತ್ತೊಂದು ಮುಖ ಮುದ್ರೆಗಳಾಗಿ ಬಿಡುತ್ತಾರೆ.

ಹೆಕ್ತರ್‌ನ ಪಾತ್ರಚಿತ್ರಣ ಕಂಡಿರಿಸುವ ಸಂದರ್ಭದಲ್ಲಿ ಹೋಮರ್‌ ಪ್ರದರ್ಶಿಸುವ ವಿಶೇಷ ಎಚ್ಚರವನ್ನು ಗಮನಿಸಬೇಕು. ಮೊದಲನೆಯದಾಗಿ ಅವನು ಕುಟುಂಬ ಜೀವಿ ಮತ್ತು ತ್ಯಾಗಕ್ಕೆ ಸಿದ್ಧನಾದ ಮನಸ್ಸುಳ್ಳ ವ್ಯಕ್ತಿ ಮತ್ತು ಉದಾರಿ. ಹೆಲೆನ್‌ ರೂಪದಲ್ಲಿ ಇಡೀ ಟ್ರಾಯ್‌ ಮತ್ತು ಟ್ರೋಜನ್ನರಿಗೆ ಕೆಡುಕು ಆವರಿಸಿಕೊಂಡಿದೆ ಎಂಬ ಅರಿವು ತನ್ನ ಒಳಮನಸ್ಸಿನ ಯಾವುದೋ ಮೂಲೆಯಲ್ಲಿ ಹೊಳೆದರೂ, ಅದನ್ನು ಅನುಸರಿಸಲಾಗದೇ ಹೋದ ನಿಶ್ಚಿತಮತಿ; ಹೆಕ್ತರ್‌ನನ್ನು ವಧಿಸದೆ ಟ್ರೋಜನ್ನರು ಮತ್ತು ಟ್ರಾಯ್‌ ನಗರದ ನಿರ್ನಾಮ ಸಾಧ್ಯವಿಲ್ಲ ಎಂಬುದು ಅಖೈಯನ್ನರಿಗೆ ಗೊತ್ತಿದ್ದಂತೆಯೇ, ಹೆಕ್ತರ್‌ ಮತ್ತು ಅವನ ಕಡೆಯವರಿಗೂ, ಅರಿವಿರುತ್ತದೆ. ಅಖಿಲ್ಯೂಸ್‌ನ ಕೈಯಲ್ಲಿ ಹತನಾಗುವುದು ಖಚಿತ ಎಂಬುದು ಗೊತ್ತಾದನಂತರ ಅದರಿಂದ ತಪ್ಪಿಸಿಕೊಳ್ಳಲು ಓಡಾಡುವ ರೀತಿ, ಹೆಕ್ತರ್‌ನ ಶವವನ್ನು ತನ್ನ ರಥಕ್ಕೆ ಕಟ್ಟಿಕೊಂಡು ಹಲವಾರು ದಿನಗಳ ಕಾಲ ಎಳೆದಾಡುತ್ತಿದ್ದ ಅಖಿಲ್ಯೂಸ್‌ನ ಕೈಯಿಂದ ಬಿಡಿಕೊಂಡು ಅದಕ್ಕೊಂಡು ತರ್ಪಣ ನೀಡಲು ಆತನ ವೃದ್ಧ ತಂದೆ ಪ್ರಿಅಂ ಬೇಡಿಕೊಳ್ಳಬೇಕಾಗಿ ಬರುವುದು ಮತ್ತು ಆಗ ಅಖಿಲ್ಯೂಸ್‌ ಪ್ರದರ್ಶಿಸುವ ದೊಡ್ಡತನ – ಇಂದಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಎಪಿಕ್‌ ಪ್ರತಿಮೆ ರೂಪದಲ್ಲಿ ಕಟ್ಟಿದಂತಿದೆ.

ಮೆನಲೊಸನ ಕೈಯಲ್ಲಿ ಹತನಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪ್ಯಾರಿಸ್‌ ರಣಭೂಮಿಯಿಂದ ನೇರವಾಗಿ ಬರುವುದು ತನ್ನ ಮಲಗುವ ಕೋಣೆಗೆ: in his own perfumed bedchamber. ಆಗ ಹೆಲೆನ್‌ on the high tower, with a cluster of Trojan women about her ನಿಂತಿರುತ್ತಾಳೆ. ಮಲಗುವ ಕೋಣೆಗೆ ಬರುವಂತೆ ಪ್ಯಾರಿಸ್‌ ಹೇಳಿಕಳಿಸಿದಾಗ ಹೆಲೆನ್‌ ಆಡುವ ಮಾತು ಈ ರೀತಿ ಇದೆ:

Not I. I am not going to him. It would be too shameful. I will not serve his bed, since the Trojan women hereafter Would laught at me, all and my heart even now is confused with sorrows. ಪುಟ ೧೧೧

ಆದರೂ ಅವನಿದ್ದ ಮಲಗುವ ಕೋಣೆಗೆ ಬರುವ ಹೆಲನ್ ನಿರ್ದಾಕ್ಷಿಣ್ಯವಾಗಿ ಪ್ಯಾರಿಸ್‌ನನ್ನು ಖಂಡಿಸಲು ಹಿಂದುಮುಂದು ನೋಡುವುದಿಲ್ಲ. ಮೆನಲೊಸನ ಭರ್ಜಿಯ ಹೊಡೆತದ ಇರಿತ ಸಹಿಸಲಾಗದೆ ಹೆದಚರಿ ಓಡಿಬರುವುದಕ್ಕಿಂತ ಶೂರನಾದ ಅವನ ಕೈಯಲ್ಲಿ ಹತನಾಗುವುದು ಉತ್ತಮವಾಗುತ್ತಿತ್ತು ಎಂದು ಹಂಗಿಸುವ ಮಟ್ಟಕ್ಕೆ ಹೋಗುತ್ತಾಳೆ. ಪ್ಯಾರಿಸ್ ಮತ್ತು ಮೆನಲೊಸರ ಹೋಲಿಕೆ ಮಾಡುತ್ತ ಹೆಲನ್ ಆಡುವ ಈ ಮಾತು:

There was a time before now you boasted that you were better
than warlike Menelaos, in spear and hand and your own strength.
ಪುಟ ೧೧೧

ಆಕೆಯ ಆ ಮಾತಿನಿಂದ ಅರ್ಥವಾಗುವುದಿಷ್ಟು ಪೌರುಷ. ಸಾಮರ್ಥ್ಯ, ರೂಪ, ಗುಣ ಎಲ್ಲದರಲ್ಲೂ “ನಾನು ಮೆನಲೊಸನಿಗಿಂತ ಹೆಚ್ಚಿನವರು” ಎಂಬುದಾಗಿ ಹೆಲೆನ್‌ಳ ಜತೆ ಪಲಾಯನ ಮಾಡುವುದಕ್ಕೆ ಮೊದಲು ಪ್ಯಾರಿಸ್ ತನ್ನ ಜಂಬ ಕೊಚ್ಚಿಕೊಂಡಿರುತ್ತಾನೆ. ಅದನ್ನು ನಂಬಿ ಹೆಲೆನ್‌ ಪೇರಿ ಕಿತ್ತಿರಬಹುದು.

ದೇವರ ಸಹಾಯದಿಂದ ಮೆನಲೊಸ್‌ ನನ್ನನ್ನು ಈ ಸಾರಿ ಸೋಲಿಸಿದ್ದಾನೆ. ಮತ್ತೊಂದು ಸಾರಿ ನಾನು ಅವನನ್ನು ಸೋಲಿಸುವೆ. ನಮ್ಮ ಕಡೆಯಲ್ಲಿಯೂ ದೇವರಿದ್ದಾನೆ ಎಂದು ಹೇಳುವ ಪ್ಯಾರಿಸ್‌, ಆ ಕೂಡಲೇ ಅದನ್ನೆಲ್ಲ ಮರೆತು ನಡೆ ಹಾಸಿಗೆಗೆ ಹೋಗೋಣ ಎಂದು ಆಕೆಯನ್ನು ಪುಸಲಾಯಿಸುತ್ತಾನೆ. ಆಗ ಅಲೆಕ್ಸಾಂಡ್ರೊಸ್‌ ಆಡುವ ಮಾತುಗಳು ಮತ್ತು ಹೋಮರ್‌ ಆ ಸನ್ನಿವೇಶವನ್ನು ಚಿತ್ರಿಸುವುದು ಈ ರೀತಿ.[2] ಆ ರೀತಿ ಓಡಿಬಂದ ಹೆಲೆನಳನ್ನು ಪ್ಯಾರಿಸ್‌ ತನ್ನ ಪತ್ನಿಯಾಗಿ ಸ್ವೀಕರಿಸಿರುತ್ತಾನೆ. So these two were laid in the carven bed. ಎರಡು ಸಂಗತಿಳು ಆ ತರಹದ ನಡವಳಿಕೆಗೆ ಕಾರಣವಾಗಿದ್ದಿರಬಹುದು. ಅಖೈಯನ್ನರ ಕೈಯಲ್ಲಿ ಟ್ರೋಜನ್ನರು ಸೋಲುವುದು ಮತ್ತು ಹೆಲೆನ್‌ ಮರಳಿ ಹೋಗುವುದು ಖಂಡಿತ ಎಂಬ ಸಂಗತಿ ಅದಕ್ಕೆ ಮೂಲ ಕಾರಣನಾದ ಪ್ಯಾರಿಸ್‌ನ ಒಳಗಣ್ಣಿನ ಅಷ್ಟರಲ್ಲಾಗಲೇ ಹೊಳೆದಿದ್ದಂತೆ ಕಾಣುತ್ತದೆ. ಕೊಟ್ಟ ಮಾತಿನಂತೆ ಯುದ್ಧ ನಿಲ್ಲಿಸಿ ಹೆಲೆನಳನ್ನು ಒಪ್ಪಿಸಿ, ಕೊಡಬೇಕಾದುದನ್ನು ಕೊಡುವುದರ ಮೂಲಕ ಗುಣಭರಿತ ನಡವಳಿಕೆ ಪ್ರದರ್ಶಿಸಿ ಮುಂದಿನ ತಲೆಮಾರಿನ ಜನರಿಗೆ ಮಾದರಿಯಾಗುವಂತೆ ಅಖೈಯನ್ನರ ಮುಖಂಡನಾದ ಅಗಮೆಮ್ನೊನ್‌ ಒತ್ತಾಯಿಸುತ್ತಾನೆ. ಅದರಂತೆ ಯಾವ ಟ್ರೋಜನ್ನರೂ ನಡೆದುಕೊಳ್ಳುವುದಿಲ್ಲ. ಅದು ಹೋಗಲಿ ಆ ನಿರ್ಣಾಯಕಗಳಿಗೆಯಲ್ಲಿ ಹೆಕ್ತರ್‌ನ ವಿವೇಕ ಕೂಡ ವಿವೇಕ ಕಳೆದುಕೊಳ್ಳುತ್ತದೆ. ಹೆಕ್ತರ್‌ ನಿರ್ದಾಕ್ಷಿಣ್ಯವಾಗಿ ಸಮತೆಯಿಂದ ವರ್ತಿಸಿದ್ದಲ್ಲಿ ಪರಿಸ್ಥಿತಿ ಬೇರೆಯಾಗುತ್ತಿತ್ತು.

ಸಹಜವಾಗಿಯೇ ವಂಚನೆ ಅಖೈಯನ್ನರನ್ನು ಮತ್ತುಷ್ಟು ಕೆರಳಿಸುತ್ತದೆ.

ಅದೇ ಸಂದರ್ಭದಲ್ಲಿ ರಣಭೂಮಿಯಿಂದ ಮನೆಗೆ ಬರುವ ಹೆಕ್ತರನಿಗೆ ಆತನ ತಾಯಿ ದ್ರಾಕ್ಷಾರಸ ಕುಡಿದಲ್ಲಿ ಹುಮ್ಮಸ್ಸು ಉಕ್ಕಬಹುದು ಎಂದು ನೀಡಲು ಮುಂದಾಗುತ್ತಾಳೆ. ರಣರಂಗದ ಮಧ್ಯದಲ್ಲಿರುವಾಗ ಹೆಕ್ತರ್‌, ದ್ರಾಕ್ಷಾರಸ ಸೇವಿಸಲು ನಿರಾಕರಿಸುತ್ತಾನೆ. ತೊಳೆಯದ ಕೈಗಳಿಂದ ಜ್ಯೂಸ್‌ ದೇವರಿಗೆ ಅದೇ ದ್ರಾಕ್ಷರಸ ಅರ್ಪಿಸಲು ನಾಚಿಕೆ ಆಗುತ್ತದೆ ಎನ್ನುವ ಹೆಕ್ತರ್‌ನ ನಡತೆ ಮತ್ತು ಗುಣ.

ಅಲ್ಲಿಂದ ಮುಂದೆ ತನ್ನ ಒಳಿತಿಗಾಗಿ ದೇವರಿಗೆ ಮೊರೆಯಿಡುತ್ತಿದ್ದ ಪತ್ನಿ ಆಂದ್ರೊಮಖೆ ಮತ್ತು ಮಗನನ್ನು ಭೇಟಿಯಾಗುವ ಕೌಟುಂಬಿಕ ದೃಶ್ಯ: ಹೆಂಡತಿಯನ್ನು ಕಂಡ ತಕ್ಷಣ ಹೆಕ್ತರ್‌ ಕರೆದುಕೊಂಡು ಮಲಗುವ ಕೋಣೆಗೆ ಹೋಗುವುಇಲ್ಲ. ಬದಲಾಗಿ ಅವಳನ್ನು ಸಂತೈಸುತ್ತಾನೆ. ಪತ್ನಿ ಕಂಕುಳಲ್ಲಿದ್ದ ಮಗುವನ್ನು ಎತ್ತಿಕೊಳ್ಳಲು ಕೈಚಾಚಲು, ಮಗು ಅವನ ಹತ್ತಿರ ಬರುವುದಿಲ್ಲ. ಕಾರಣವಿಷ್ಟೆ: ಅವನ ತಲೆಯಲ್ಲಿದ್ದ ಹೊಳೆಯುವ ಶಿರಸ್ತ್ರಾಣ ಮತ್ತು ಅಲ್ಲಲ್ಲಿ ಮೆತ್ತಿಕೊಂಡಿದ್ದ ಕುದುರೆಕೂದಲು ಮೊದಲಾದ ರಣರಂಗದ ದಿರಿಸಿನಲ್ಲಿದ್ದ ತನ್ನ ತಂದೆಯನ್ನು ನೋಡಿ ಆ ಮಗು ಬೆಚ್ಚಿ ಬೀಳುತ್ತದೆ. ಆಗ ಶಿರಸ್ತ್ರಾಣವನ್ನು ತಲೆಯಿಂದ ತೆಗೆದು ನೆಲದ ಮೇಲಿಟ್ಟು ಮಗುವನ್ನು ಎತ್ತಿಕೊಂಡು ತಬ್ಬಿ ಮುದ್ದಾಡುತ್ತಾ ಮತ್ತು ನೀಡುವ ಕೌಟುಂಬಿಕ ಚಿತ್ರಣವನ್ನು ಹೋಮರ್‌ ನೀಡುತ್ತಾನೆ.

ಅವನು ಸಲ್ಲಿಸುವ ಕೋರಿಕೆ ಪ್ರಮುಖವಾಗಿ ಎರಡು: ತಂದೆಗಿಂತ ಉತ್ತಮವಾದ ಹಾಗೂ ತಾಯಿ ಹೃದಯಕ್ಕೆ ಸಂತಸ ತರುವ ಮಗನಾಗಿ ತನ್ನ ಮಗ ಬೆಳೆಯಲಿ ಎಂದು. ಆದರೆ ಆ ಅವಕಾಶ ದೊರಕದೇ ಹೋಗಬಹುದು ಎಂಬುದನ್ನು[3] ಹೆಕ್ಟರ್‌ ಮುಂದುಗಾಣದೆ ಹೋಗುತ್ತಾನೆ. ಪರಿಣಾಮವಾಗಿ, ಅಖಿಲ್ಯೂಸ್‌ ಕೈಯಲ್ಲಿ ಅತ್ಯಂತ ಭೀಕರ ರೀತಿಯಲ್ಲಿ ಸಾವನ್ನಪ್ಪಬೇಕಾಗುತ್ತದೆ.

ಸುಂದರಿಯೊಬ್ಬಳ ಹಂಚಿಕೆ ವಿಚಾರದಲ್ಲಿ ಅಗಮೆಮ್ನೊನ್‌ ಮತ್ತು ಅಖಿಲ್ಯೂಸ್‌ ನಡುವೆ ಉಂಟಾದ ವಿವಾದದಿಂದಾಗಿ ಅಖಿಲ್ಯೂಸ್‌ ಯುದ್ಧದಲ್ಲಿ ಭಾಗವಹಿಸದೆ ತಟಸ್ಥನಾಗಿ ಉಳಿದಿದ್ದಾಗ, ಅಖೈಯನ್ನರಿಗೆ ಭಾರೀ ಸಾವುನೋವು ಮತ್ತು ಹಿನ್ನಡೆ ಉಂಟಾಗಿ ಆಗೆಲ್ಲಾ ಹೆಕ್ತರ್‌ ವಿಜೃಂಭಿಸುತ್ತಾನೆ. ಅದನ್ನು ತಡೆಯಲು ಅಖಿಲ್ಯೂಸ್‌ನ ವೇಷ ಧರಿಸಿ ಹೋಗಿದ್ದ ಆತನ ಮಿತ್ರ ಪತ್ರೋಕ್ಲೊಸ್‌, ಹೆಕ್ತರ್‌ ಕೈಯಲ್ಲಿ ಭೀಕರ ಮರಣವನ್ನಪ್ಪಬೇಕಾಗುತ್ತದೆ. ಸೇಡು ತೀರಿಸಿಕೊಳ್ಳಲು ಕಾದಿದ್ದ ಅಖಿಲ್ಯೂಸ್‌ ಕೂಡಲೇ ಯುದ್ಧಭೂಮಿ ಪ್ರವೇಶಿಸಿ ತನ್ನೆಲ್ಲ ಸಿಟ್ಟು ಮತ್ತು ರೋಷವನ್ನು ಹೆಕ್ತರ್‌ ಮೇಲೆ ತಿರುಗಿಸುತ್ತಾನೆ. ಅಂತಹ ಅಖಿಲ್ಯೂಸ್‌ನನ್ನು ಎಕಾಂಗಿಯಾಗಿ ಎದುರಿಸುವುದು ಬೇಡ ಎಂದು ಆತನ ತಂದೆ – ತಾಯಿ ಬಹಳವಾಗಿ ಬೇಡಿಕೊಂಡರೂ ಕೇಳದ ಹೆಕ್ತರ್ :

…………………………it would be much better
at that time, to go against Achilleus, and slay him, and come back,
or else be killed by him in glory in front of the cityಪುಟ ೪೩೮

ಅದಕ್ಕಿಂತ ವೀರಮರಣ ಉತ್ತಮ ಎನ್ನುತ್ತಾನೆ. ಆದರೆ ರೋಷದಿಂದ ಕುದಿದು ಬರುತ್ತಿದ್ದ ಅಖಿಲ್ಯೂಸ್‌ನನ್ನು ಕಂಡ ಕೂಡಲೇ ಓಡತೊಡಗುವ ಹೆಕ್ತರ್‌; ಓಡತೊಡಗಿದ ಹೆಕ್ತರ್‌ನನ್ನು ಅಖಿಲ್ಯೂಸ್‌ ಅಟ್ಟಿಸಿಕೊಂಡು ಹೋಗುವ ರೀತಿ : They ran ….one escaping, the other after him ತರಹ ಇರುತ್ತದೆ. ಅಖಿಲ್ಯೂಸ್‌ ಕೈಯಲ್ಲಿ ಸಾವನ್ನಪ್ಪುವ ಗಳಿಗೆ ಹತ್ತಿರವಾದಾಗ ಹೆಕ್ತರ್‌ ಬೇಡಿಕೊಳ್ಳುವ ದೃಶ್ಯವನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದಾಗಿದೆ. ಅದು ಅಷ್ಟಕ್ಕೆ ನಿಲ್ಲುವುದಿಲ್ಲ. ರೋಷಭರಿತನಾದ ಅಖಿಲ್ಯೂಸ್‌ ಆ ಹೆಕ್ತರ್‌ನ ಶವವನ್ನು ತನ್ನ ಪ್ರಿಯಮಿತ್ರ ಪತ್ರೊಕ್ಲೊಸ್‌ನ ಸಮಾಧಿಯ ಸುತ್ತ ಹಲವಾರು ದಿನಗಳ ಕಾಲ ನಿರಂತರವಾಗಿ ಎಳೆದಾಡುತ್ತಿರುತ್ತಾನೆ. ಅಂತ್ಯಕ್ರಿಯೆ ನಡೆಸುವ ಉದ್ದೇಶದಿಂದ ಮಗನ ಶವವನ್ನು ಪಡೆಯಲು ಆತನ ಮುದಿ ತಂದೆ ಪ್ರೀಅಂ, ಅಖಿಲ್ಯೂಸ್‌ನ ವಾಸಸ್ಥಳವನ್ನು ಪ್ರವೇಶಿಸುವ ಮತ್ತು ಆಗ ಅಖಿಲ್ಯುಸ್‌ ಘನತೆಯಿಂದ ನಡೆದುಕೊಳ್ಳುವ ಅತೀ ದಾರುಣ ಸನ್ನಿವೇಶವನ್ನು ಹೋಮರ್‌ ಬಹಳ ಜಾಗರೂಕತೆಯಿಂದ ನಿರ್ವಹಿಸಿರುವಂತೆ ತೋರುತ್ತದೆ[4]:

…………………………………………………………..Tall Priam
came in unseen by the other men and stood close beside him
and caught the knees of Achilleus in his arms, and kissed the hands
that were dangerous and manslaughtering and had killed so many
of his sons.
ಪುಟ ೪೮೭ – ೪೮೮

ಆ ರೀತಿ ದೀನನಾಗಿ ಬಂದ ಪ್ರಿಅಂನನ್ನು ನೋಡಿ ಅಖಿಲ್ಯೂಸ್‌ಗೆ ಮಾತ್ರವಲ್ಲ, ಆತನ ಎಲ್ಲ ಸಹಚರರಿಗೆ ಆಶ್ಚರ್ಯವಾಗುತ್ತದೆ. ಅಷ್ಟರಲ್ಲಾಗಲೇ ತನ್ನ ೫೦ ಮಕ್ಕಳನ್ನು ಯುದ್ಧದಲ್ಲಿ ಕಳೆದುಕೊಂಡಿರುವ ‘ದೇವರಂಥ ಪ್ರಿಅಂ’ ಆ ರೀತಿ ಹತರಾದ ತನ್ನ ಮಕ್ಕಳ ಪೈಕಿ ಒಬ್ಬನಾದ ಹೆಕ್ತರ್‌ನ ಶವಕ್ಕೆ ಅಂತ್ಯಸಂಸ್ಕಾರ ನೀಡಲು ಆತನನ್ನು ಕೊಂದ ವ್ಯಕ್ತಿಯ ಹತ್ತಿರ ಆರ್ತನಾಗಿ ಒಂದು ತನ್ನ ಮಕ್ಕಳನ್ನು ಕೊಂದ ಕೈಗಳಿಗೆ ಮುತ್ತಿಡಬೇಕಾಗುತ್ತದೆ:

…………………………………………………………. Achilleus, and take pity upon me
remembering you father, yet I am still more pitiful;
I have gone through what no other mortal on earth has gonethrough;
I put my lips to the hands of the man who has killed my children.’
ಪುಟ ೪೮೮

ತನ್ನ ಕಾಲ ಬಳಿ ಮುದುರಿ ಕುಳಿತ ತನ್ನ ತಂದೆಯ ವಯಸ್ಸಿನ ಪ್ರಿಅಂನನ್ನು[5] ನೋಡಿ ಅಖಿಲ್ಯೂಸ್‌ನ ಹೃದಯ ಮರುತೊಡಗುತ್ತದೆ. ಆತನನ್ನು ಪಕ್ಕ ಕುಳ್ಳಿರಿಸಿಕೊಂಡು ಮಾತನಾಡುತ್ತಾನೆ. ತನ್ನ ಮಕ್ಕಳನ್ನು ಕೊಂದ ವ್ಯಕ್ತಿಯ ಹತ್ತಿರವೇ ಬಂದಿರುವ ಪ್ರಿಅಂನ ಹೃದಯ ಕಬ್ಬಿಣದ್ದು ಎನ್ನಿಸುತ್ತದೆ ಅಖಿಲ್ಯೂಸ್‌ನಿಗೆ :

Come then, we also, aged magnificent sir, must remember to eat, and afterwards you may take your beloved son back to Ilion, and mourn for him; and he will be much larnented. ಪುಟ ೪೯೧

ಎಂದು ಸಂತೈಸಿ ಶವವನ್ನು ಮರಳಿ ನೀಡಲು ಒಪ್ಪುವ ಅಖಿಲ್ಯೂಸ್‌ ಅದಕ್ಕೆ ಮೊದಲು ಕುರಿ ಕಡಿದು ಔತಣ ಮಾಡಿ ವಾಪಸ್ ‌ಕಳಿಸಿಕೊಡುವುದನ್ನು ಮರೆಯುವುದಿಲ್ಲ. ಶವಸಂಸ್ಕಾರ ಮುಗಿಯುವವರೆಗೆ ಸುಮಾರು ೧೨ ದಿನ ಪ್ರಿಅಂನ ಕೋರಿಕೆಯಂತೆ ಯುದ್ಧ ಮುನ್ನಡೆಸದಿರಲು ಸಹ ಒಪ್ಪುತ್ತಾನೆ.

ಏಷ್ಯಾದ ಪ್ರತಿನಿಧಿಗಳಂತೆ ಕಾಣುವ ಟ್ರೋಜನ್ನರು ಮತ್ತು ಮುಂದೆ ಯುರೋಪಿನ ಪ್ರತಿನಿಧಿಗಳಾದ ಅಖೈಯನ್ನರು ರಣರಂಗ ಪ್ರವೇಶಿಸುವ ಚಿತ್ರಣವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ೩೦೦೦ ವರ್ಷಗಳ ಹಿಂದೆಯೇ ಹೋಮರ್‌ ಈ ರೀತಿ ದಾಖಲಿಸುತ್ತಾನೆ:

Now when the men of both sides were set in order by their leaders,
the Trojans came on with clamour and shouting, like wildfowl,
as when the clamour of cranes goes high to the heavens,
when the cranes escape the winter time and the rains unceasing
and clamorously wing their way to the streaming Ocean,
bringing to the Pyagmaian men bloodshed and destruction:
at daybreak they bring on the baleful battle against them.
But the Achaian men went silently, breathing valour,
stubbornly minded each in his heart to stand by the others.
ಪುಟ ೧೦೦

ಏಷ್ಯನ್ನರ ಅಸಂಘಟಿತ ಗುಣ ಮತ್ತು ಯುರೋಪ್‌ ಮೂಲದ ಜನರ ಸಂಘಟಿತ ನಡವಳಿಕೆಯನ್ನು ಅದಕ್ಕಿಂತ ಉತ್ತಮನಾಗಿ ಹೇಳಲು ಸಾಧ್ಯವೇ? ಟ್ರೋಜನ್ನರು ಅಖೈಯನ್ನರ ಕೈಯಲ್ಲಿ ಸರ್ವನಾಶದ ಗತಿ ಕಾಣಲುಆ ಗುಣ ಕೂಡ ಪ್ರಮುಖ ಕಾರಣವಾಗಿತ್ತು ಎಂದು ಹೋಮರ್‌ ಕಾದಂಬರಿಕಾರರ ತರಹ ಎಲ್ಲೂ ಸೂಚಿಸಿ ವಿಶ್ಲೇಷಿಸಲು ಹೋಗುವುದಿಲ್ಲ; ಸದ್ದಿಲ್ಲದೆ ತನ್ನಷ್ಟಕ್ಕೆ ತಾನೇ ವ್ಯಕ್ತವಾಗುವಂತೆ ಎಪಿಕ್‌ ನಿರೂಪಣೆ ಸಾಗುತ್ತದೆ. ಯುರೋಪ್‌ ಮೂಲದ ಪ್ರಭಾವ ವ್ಯಾಪಕವಾಗಲು ಮತ್ತು ಉಳಿದವರು ಅದನ್ನು ಸ್ವೀಕರಿಸಲು ಪೂರಕವಾಗುವ ಹಿನ್ನೆಲೆ ಮತ್ತು ಗುಣಗಳನ್ನು ಎಷ್ಟೋ ಶತಮಾನಗಳ ಹಿಂದೆಯೇ ಹೋಮರನ ಎಪಿಕ್‌ ಶೋಧಿಸುತ್ತದೆ ಎಂದರೆ ಆಶ್ಚರ್ಯವಾದೀತೆ? ಕಾಲನ ಸ್ಪಂದನದಿಂದ ಬಂದಿರಬಹುದಾದ ಆ ಮುನ್ನೋಟ ಅಥವಾ ದರ್ಶನ ಆಧ್ಯಾತ್ಮಿಕವಲ್ಲವೇ? ಅಂತರ್ಬೋಧೆ ಮತ್ತು ಒಳನೋಟಗಳಿಲ್ಲದ ತಿಳುವಳಿಕೆ ಆಧ್ಯಾತ್ಮಿಕವಾಗಲು ಸಾಧ್ಯವೇ?

ಏಷ್ಯಾ ಮತ್ತು ಯುರೋಪ್‌ ಎಂಬ ವಿಂಗಡಣೆ ಗ್ರೀಕ್‌ ನಾಟಕಕಾರ ಕಾಲಕ್ಕಾಗಲೇ ಸ್ಫುಟಗೊಂಡಿದ್ದವು. ಗ್ರೀಕ್‌ ನಗರ ರಾಜ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪರ್ಷಿಯನ್‌ ಚಕ್ರವರ್ತಿಗಳು ನಡೆಸಿದ ಪ್ರಯತ್ನ, ಸೋಲು ಕುರಿತಂತೆ ಈ ಜಗತ್ತು ಕಂಡ ಮೊದಲ ಇತಿಹಾಸಕಾರ ಎಂದು ಭಾವಿಸಲಾದ ಹೆರೊಡೊಟಸ್‌ ವಿವರವಾದ ದಾಖಲೆ ಬಿಟ್ಟು ಹೋಗಿದ್ದಾನೆ: ಅಂತಹ ಸಾಮ್ರಾಜ್ಯ ಸ್ಥಾಪನೆಯ ಆಕಾಂಕ್ಷೆ ಹೊತ್ತು ಗ್ರೀಕ್‌ – ಅಂದರೆ ಯುರೋಪಿನ – ನೆಲದಿಂದ ಹೊರಟ ಮೊದಲ ವ್ಯಕ್ತಿ ಅಲೆಗ್ಸಾಂಡರ್‌. ಆತ ಬರುವವರೆಗೆ ಅಥೇನಿನ ಗ್ರೀಕರ ಆಸಕ್ತಿಗಳೇ ಬೇರೆಯಾಗಿದ್ದವು. ಭಾರತ ಕಂಡ ಮೊದಲ ಸಾಮ್ರಾಜ್ಯವಾದ ಮೌರ್ಯರ ಕಾಲದಲ್ಲಿ ಒಬ್ಬ ಕವಿಯೂ ಬರಲಿಲ್ಲವಾದಂತೆ, ಬೃಹತ್‌ ಸಾಮ್ರಾಜ್ಯವಾದ ಮೌರ್ಯರ ಕಾಲದಲ್ಲಿ ಒಬ್ಬ ಕವಿಯೂ ಬರಲಿಲ್ಲವಾದಂತೆ, ಬೃಹತ್‌ ಸಾಮ್ರಾಜ್ಯ ನಿರ್ಮಿಸಿದ ಡೇರಿಯಸ್‌ ಅಥವಾ ಅವನ ಮಕ್ಕಳ ಕಾಲದಲ್ಲಿ ಉತ್ತಮ ಕವಿಗಳು ಬಂದ ಉದಾಹರಣೆ ಇಲ್ಲ. ಆದರೆ ಸಾಮ್ರಾಜ್ಯ ನಿರ್ಮಿಸುವ ಕಡೆಗೆ ಗಮನ ನೀಡದೇ ಹೋದ ಅಥೇನಿನ ಗ್ರೀಕರು ನಿರ್ಮಿಸಿದ ಸಾಮ್ರಾಜ್ಯವೇ ಬೇರೆಯಾಗಿತ್ತು. ಅಲೆಗ್ಸಾಂಡರ್‌ ಬಂದನಂತರದ ಗ್ರೀಕರ ಕತೆ ಬೇರೆ ತಿರುವು ಪಡೆದುಕೊಂಡ ‘ಭಾಗ್ಯ’ವನ್ನು ಇತಿಹಾಸದ ಪುಟಗಳು ಹೇಳುತ್ತವೆ. ಆ ವಿಭಜನೆ ಮತ್ತು ವ್ಯತ್ಯಾಸಗಳು ವರ್ಜಿಲ್ ಕಾಲಕ್ಕೆ ಮತ್ತಷ್ಟು ಸ್ಫುಟಗೊಂಡಿದ್ದವು.

ಏಷ್ಯಾ ಮತ್ತು ಯುರೋಪ್‌ ಹಾಗೂ ಪೂರ್ವ ಮತ್ತು ಪಶ್ಚಿಮ ಪ್ರಜ್ಞೆಗಳನ್ನು ತುಂಬಿಕೊಂಡು ಕೃತಿ ರಚಿಸುವಾಗಿನ ವರ್ಜಿಲನ ಸೃಷ್ಟಿಯಾದ ‘ಈನೀಡ್‌’ ತಳೆಯುವ ಜೀವನ ಧರ್ಮ ಮತ್ತು ದೃಷ್ಟಿಕೋನವನ್ನು ಎಚ್ಚರಿಕೆ ಮತ್ತು ಹತ್ತಿರದಿಂದ ಗಮನಿಸುವುದು ಉತ್ತಮ. ಇಲ್ಲವಾದಲ್ಲಿ ಅನಗತ್ಯವಾಗಿ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಳ್ಳಲು ಅವಕಾಶವುಂಟಾಗುವ ಸಂಭವವೇ ಹೆಚ್ಚು.

‘ಈನೀಡ್‌’ನಲ್ಲಿ ಟ್ರೋಜನ್ನರು ಏಷ್ಯನ್ನರಾಗಿಯೂ ಮತ್ತು ಅವರನ್ನು ಸರ್ವನಾಶ ಮಾಡಿದ ಅಖೈಯನ್ನರು ಪಶ್ಚಿಮದ ಜಗತ್ತಿಗೆ ಸೇರಿದ ಗ್ರೀಕರಾಗಿಯೂ ಚಿತ್ರಣಗೊಂಡಿದ್ದರೆ, ಲ್ಯಾಟಿನಮ್‌ ಭಾಗದ ಜನರನ್ನು ರೋಮನ್ನರಾಗಿ ಗುರುತಿಸಲಾಗುತ್ತದೆ; ಆ ಟ್ರೋಜನ್ನರನ್ನು ಸರ್ವನಾಶ ಮಾಡಿದ ಗ್ರೀಕರನ್ನು ತಮ್ಮ ಪೂರ್ವಿಕರು ಎಂದು ಗುರುತಿಸುವ ಲ್ಯಾಟಿನಮ್‌ ಭಾಗದ ಜನರು ಮುಂದೆ ಅದೇ ಟ್ರೋಜನ್‌ ನಾಯಕನನ್ನು ತಮ್ಮ ರಾಜನನ್ನಾಗಿ ಸ್ವೀಕರಿಸುವ ಕತೆಯೇ ‘ಈನೀಡ್‌’. ಅಂತಹ ಟ್ರೋಜನ್ನರನ್ನು ತಮ್ಮಲ್ಲಿ ಒಂದಾಗಿ ಸ್ವೀಕರಿಸುವುದು ಮಾತ್ರವಲ್ಲ ಅವರಿಗೆ ಅಧಿಕಾರದ ಹೊಣೆ ಒಪ್ಪಿಸಲು ಮುಂದಾಗುವಲ್ಲಿಂದ ರೋಮ ಸಾಮ್ರಾಜ್ಯದ ಉಗಮದ ಕತೆ ಆರಂಭವಾಗುತ್ತದೆ. ಅಲೆಗ್ಸಾಂಡರ್‌ ಸ್ಥಾಪಿಸಬಯಸಿದ ಸಾಮ್ರಾಜ್ಯದ ವ್ಯಾಪ್ತಿಗೆ ಬಂದ ಪರ್ಷಿಯನ್ನರು ಮೊದಲಾದವರಿಗೆ ಸಮಾನ ಸ್ಥಾನ ಹಾಗೂ ಅಧಿಕಾರ ನೀಡಲು ಆಗಿನ ಗ್ರೀಕರು ಸಿದ್ಧರಿರುವುದಿಲ್ಲ. ಈನಿಯಾಸ್‌ ಮತ್ತು ಆತನ ಕಡೆಯವರನ್ನು ತಮ್ಮಲ್ಲಿ ಒಬ್ಬನನ್ನಾಗಿ ಸ್ವೀಕರಿಸಲು ಟರ್ನಸ್‌ ಮೊದಲಾದವರು ಅದೇ ತರಹ ನಿರಾಕರಿಸುತ್ತಾದರೂ, ಆತನ ಅಂತ್ಯದೊಂದಿಗೆ ಆ ಸಮಸ್ಯೆ ಬಗೆಹರಿಯುತ್ತದೆ; ಆಗ ವಿಧಿಸಲಾಗುವ ಷರತ್ತುಗಳನ್ನು ಇಲ್ಲಿ ಅವಲೋಕಿಸುವುದು ಉತ್ತಮ.

ಅದಕ್ಕೂ ಮೊದಲು ಏಷ್ಯಾ ಮತ್ತು ರೋಂ ಕುರಿತು ಕಾವ್ಯದ ಉದ್ದಕ್ಕೂ ಬರುವ ಕೆಲ ಪ್ರಮುಖ ಪ್ರಸ್ತಾಪಗಳನ್ನು ಗಮನಿಸುವುದು ಸೂಕ್ತ; ‘ಈನೀಡ್‌’ ಕಾವ್ಯದ ಆರಂಭದಲ್ಲಿಯೇ ಮೊದಲ ಸರ್ಗದಲ್ಲಿ ಬರುವ ಮಾತು ಈ ರೀತಿ ಹೇಳುತ್ತದೆ:

Toy’s renaissance would come, would spring the Roman people And rule as sovereigns absolute over earth and sea.ಪುಟ ೧೨

ಅಂತಹ ರೋಮನ್ನರು ಸ್ಥಾಪಿಸುವ ರೋಮನ್‌ ಸಾಮ್ರಾಜ್ಯಕ್ಕೆ :

To these I set no bounds, either in space or time;ಪುಟ ೧೩

ಎಂಬ ಭರವಸೆಯೂ ದೊರಕುತ್ತದೆ. ಆ ಜತೆಗೆ :

When the children of Troy shall enslave the children of Agamaemnon,
Of Diomed and Achilles, and rule in conquered Argos.
From the fair seed of Troy there shall be born a Caeser-
Julius, his name derived from great lulus…..ಅದೇ ಪುಟ ೧೨

ಎಂಬ ಧೀರ ಉಕ್ತಿಯು ಬರುತ್ತದೆ. ಟ್ರಾಯ್‌ನ ಮತ್ತೊಂದು ಹೆಸರು ಇಲಿಯೊಸ್‌. ಅದರ ಕತೆಯೇ ಹೋಮರನ ‘ಇಲಿಯಡ್‌’ ಟ್ರಾಯ್‌ ಮೂಲದವನಾದ ಜೂಲಿಯಸ್‌ ಸೀಸರ್‌ ಮತ್ತವನ ಪೂರ್ವಿಕರು ಏಷ್ಯನ್‌ ಭಾಗದಿಂದ ಬಂದವರು ಎಂಬುದಾಗಿ ಪ್ರತೀತಿ. ಆ ಇಲಿಯೊಸ್‌ನ ಲ್ಯಾಟಿನ್‌ ರೂಪ ಜೂಲಿಯಸ್‌; ಅಂಥವರು ಸ್ಥಾಪಿಸುವ ರೋಮನ್‌ ಸಾಮ್ರಾಜ್ಯದ ಕತೆಯೇ ‘ಈನೀಡ್‌’. ಲ್ಯಾಟಿಯಮ್‌ ಭಾಗದಲ್ಲಿ ರೋಂ ಸಾಮ್ರಾಜ್ಯ ಸ್ಥಾಪಿಸುವುದರ ಮುಖೇನ ಟ್ರಾಯ್‌ ಪತನಕ್ಕೆ ಕಾರಣರಾದ ಅಗಮೆಮ್ನೊನ್‌, ಅಖಿಲ್ಯೂಸ್‌ ಮೊದಲಾದವರ ಸಂತತಿಗೆ ಸೇರಿದ ಗ್ರೀಕರನ್ನು ಆ ವ್ಯಾಪ್ತಿಗೆ ತಂದುಕೊಳ್ಳುವ ಸೇಡು ಮತ್ತು ಪ್ರತಿಕಾರದ ಮಾತು ಅಲ್ಲಿಯೇ ಬರುತ್ತದೆ.

ಟ್ರಾಯ್‌ ಎಂತಹದ್ದಾಗಿತ್ತು ಎಂದರೆ:

His Troy which boasted once such wealth of lands and subjects, The mistress of Asia once. ಪುಟ ೫೩

ಇಡೀ ಏಷ್ಯಾದ ರಾಣಿಯಾಗಿದ್ದ ಆ ಟ್ರಾಯ್‌:

After the gods had seen fit to destroy our Asian empire.ಪುಟ ೬೩

ದೇವರ ವಿಶ್ವಾಸ ಕಳೆದುಕೊಂಡ ನಂತರ ನಾಶವಾಯಿತು ಎಂಬ ಮತ್ತೊಂದು ಮಾತು ಬರುತ್ತದೆ. ಅಂತಹ ಸಾಮ್ರಾಜ್ಯವನ್ನು ಕಳೆದುಕೊಂಡ ಟ್ರೋಜನ್ನರು ಯುರೋಪಿನ ನೆಲೆಯಾದ ರೋಂಗೆ ಬಂದು ಮತ್ತೆ ಅದಕ್ಕೂ ಮಿಗಿಲಾದ ಸಾಮ್ರಾಜ್ಯ ನಿರ್ಮಿಸಬೇಕಾಗುತ್ತದೆ. ಏಕೆಂದರೆ:

But, Romans, never forget that government is your medium!
Be this your art: – to practice men in the habit of peace,
Generosity to the conquered, and firmness against aggressors.
ಪುಟ ೧೮೬

ಸರ್ಕಾರವೇ ಅವರಿಗೆ ಸರ್ವಸಾಧನ, ಕಲೆ ಮತ್ತು ಜೀವನ ಧರ್ಮ ಹಾಗೂ ಅಭಿವ್ಯಕ್ತಿ ಮಾಧ್ಯಮ. ಆದ್ದರಿಂದ ಟ್ರಾಯ್‌ ಪತನಾನಂತರ ಅದಕ್ಕಿಂತಲೂ ಹಿರಿದಾದ ಸಾಮ್ರಾಜ್ಯ ಸ್ಥಾಪಿಸುವ ಮಹತ್ವಾಕಾಂಕ್ಷೆಯಿಂದ ಏಷ್ಯಾದ ಮೂಲದ ಟ್ರೋಜನ್ನರು ನೆಲೆ ಹುಡುಕಿಕೊಂಡು ಇಟಲಿಗೆ ಬಂದಿರುತ್ತಾರೆ. ಆದರೆ ಆ ತರಹದ ಮಾತುಗಳು ಗ್ರೀಕ್‌ ಸಂಸ್ಕೃತಿಗೆ ಸಹಜವಾದುದಲ್ಲ ಎಂಬುದು ಇಲ್ಲಿ ಮುಖ್ಯ. ಡೇರಿಯಸ್‌ ಮೊದಲಾದ ಪರ್ಷಿಯ ಭಾಗದ ಚಕ್ರವರ್ತಿಗಳು ತಮ್ಮ ಮೇಲೆ ದಂಡೆತ್ತಿ ಬರುವವರೆಗೂ ನಗರ – ರಾಜ್ಯಗಳನ್ನು ಸ್ಥಾಪಿಸಿಕೊಂಡು ಕಾವ್ಯ, ನಾಟಕ, ಕಲೆ, ವಿಜ್ಞಾನ, ತತ್ವಜ್ಞಾನ, ಮೀಮಾಂಸೆ ಇತ್ಯಾದಿ ಸಾಂಸ್ಕೃತಿಕ ಸಾಧನೆಗಳಲ್ಲಿ ತಲ್ಲೀನರಾಗಿದ್ದವರು ಅಥೇನಿನ ಗ್ರೀಕರು.

ಗ್ರೀಕರು, ರೋಮನ್ನರು ಎಂಬ ಮಾತುಗಳು ವರ್ಜಿಲನ ‘ಈನೀಡ್‌’ನಲ್ಲಿ ಪದೇ ಪದೇ ಬರುತ್ತವಾದರೂ, ಯುರೋಪ್‌ ಎಂಬ ಪರಿಕಲ್ಪನೆ ಅಲ್ಲಲ್ಲಿ ಬರುತ್ತದೆ – ಅದೇ ತರಹ ಪೂರ್ವ ಮತ್ತು ಪಶ್ಚಿಮ ಎಂಬ ಪರಿಕಲ್ಪನೆಗಳು ಸಹ.

………………………how destiny compelled A war between East and West, the collision of Europe and Asia: – All have heard this.   ಪುಟ ೧೯೬

ಆ ತರಹ ಮುಂದೆ ಆಗದಂತೆ ನೋಡಿಕೊಂಡು ನೆಲೆ ಕಂಡುಕೊಳ್ಳಲು ಬಂದವನು ಈನಿಯಾಸ್‌: ಜನಾಂಗೀಯ ಸಂಘರ್ಷ ಆಗದ ರೀತಿಯಲ್ಲಿ ಜನಾಂಗ – ಸಾಮರಸ್ಯ ಸಾಧಿಸುವುದು ಅವನು ಹಮ್ಮಿಕೊಂಡ ಉದ್ದೇಶಗಳ ಪೈಕಿ ಒಂದಾಗಿರುತ್ತದೆ. ಅದನ್ನು ವಿವರಿಸಿದ ನಂತರ ಇಟಲಿಯ ಲ್ಯಾಟಿಯಂ ಭಾಗದ ಲ್ಯಾಟಿನಸ್‌ ಮಹಾರಾಜನು ಕೂಡಲೇ ತನ್ನ ಮಗಳಾದ ಲ್ಯಾವಿನಿಯಾಳನ್ನು ಈನಿಯಾಸ್‌ಗೆ ಕೊಡುವ ಮನಸ್ಸು ಮಾಡುತ್ತಾನೆ. ಆ ರೀತಿ ನಡೆದುಕೊಳ್ಳುವಂತೆ ವಿಧಿ, ಅಥವಾ ನಿಯತಿಯ ಅಣತಿ ಎಂಬುದು ಆತನ ನಂಬಿಕೆ. ನೆಲೆ ನೀಡುವಂತೆ ಕೋರಿ ಈನಿಯಾಸ್‌ ಕಳುಹಿಸಿದ ಶಾಂತಿ ಸಂದೇಶ ಬಂದ ಸಂದರ್ಭದಲ್ಲಿ ಲ್ಯಾಟಿನಸ್‌ ರಾಜನ ಮನಸ್ಸಿನಲ್ಲಿ ಬಂದು ಹೋಗುವ ಭಾವನೆಗಳು ಈ ರೀತಿ ಇವೆ:

This, he reflected, must be the man from abroad who is meant
By the fates to become my son – in law and to be partner in
My sovereignty: from him shall stem that future breed,
Excelling in courage, whose might is to master the whole world.
ಪುಟ ೧೯೭

ಇಡೀ ಜಗತ್ತನ್ನು ತಮ್ಮ ಅಧೀನಕ್ಕೆ ತಂದುಕೊಳ್ಳುವ ಶಕ್ತಿ ಮತ್ತು ಪೌರುಷದ ಕನಸಿನ ಪ್ರತೀಕವಾಗಿ ಟ್ರಾಯ್‌ನಿಂದ ಬಂದ ಆ ಜನರನ್ನು ತಮ್ಮ ಪಂಗಡದ ಒಬ್ಬರನ್ನಾಗಿ ಮತ್ತು ಅವರ ಮುಖಂಡನನ್ನು ತಮ್ಮ ಮುಂದಿನ ರಾಜನನ್ನಾಗಿ ಸ್ವೀಕರಿಸಲು ಲ್ಯಾಟಿಯಂ ಭಾಗದ ಜನ ಸಿದ್ಧರಿರುತ್ತಾರೆ ಎಂಬುದು ಇಲ್ಲಿ ಬಹಳ ಮುಖ್ಯ. ವರ್ಣ, ಜಾತಿ ಅಥವಾ ವರ್ಗಕ್ಕೆ ಸಂಬಂಧಿಸಿದ ಪ್ರಶ್ನೆಗಳು ಅವರನ್ನು ಅಷ್ಟಾಗಿ ಬಾಧಿಸಿದಂತೆ ತೋರುವುದಿಲ್ಲ. ಆ ಎಲ್ಲ ಪ್ರಶ್ನೆ, ಬಿಕ್ಕಟ್ಟು ಮತ್ತು ಸಂಘರ್ಷ ಉದ್ಭವವಾಗುವುದೇ ಲ್ಯಾವಿನಿಯಾಳ ಭಾವೀ ಪತಿ ಎಂದು ಭಾವಿಸಲಾದ ಟರ್ನಸ್‌ ಆ ಒಪ್ಪಂದವನ್ನು ತಿರಸ್ಕರಿಸಿದ ನಂತರ. ಈನಿಯಾಸ್‌ನನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುವ ಟನಶ್‌, ಜನಾಂಗ, ಜಾತಿ, ವರ್ಣದ್ವೇಷ ಮತ್ತು ಭೌಗೋಳಿಕ ವಿಭಜನೆಗಳಿಂದ ತುಂಬಿದ ರೋಷದ ಮಾತುಗಳನ್ನು ಆಡುತ್ತಾನೆ. ಏಷ್ಯಾದಿಂದ ಓಡಿಬಂದ ದಿಕ್ಕೆಟ್ಟ ಆ ಜನರನ್ನು ನರಕಕ್ಕೆ ಅಟ್ಟುವೆ ಎಂಬ ಬೆದರಿಕೆ ಬಾಯಿಂದ ಬರುತ್ತದೆ.

Either this hand of mine will send that Dardan, that run – away
Asiatic. to hell – the Latins may sit and look on at us –
And with my sword I’ll wipe out the slur on our people’s good name,
Or he’ll have Lavinia in marriage and the rest of you in subjection.
ಪುಟ ೩೬೧

ಲ್ಯಾಟಿನಸ್‌ ರಾಜನ ಮಗಳನ್ನು ಟ್ರೋಜನ್‌ ಸಂತತಿಗೆ ಸೇರಿದ ಈನಿಯಾಸ್‌ಗೆ ನೀಡುವುದಾದಲ್ಲಿ ಅದು ರೋಂಗೆ ತಗುಲಿದ ಕಳಂಕ ಆಗುತ್ತದೆ ಎಂದು ಭಾವಿಸುವ ಟರ್ನಸ್‌ ಸತ್ತ ನಂತರ ವಿಧಿಸಲಾಗುವ ಷರತ್ತುಗಳಿಗೆ ಹೋಗುವ ಮೊದಲು ಯುದ್ಧದ ಆರಂಭದ ಕಾಲದಲ್ಲಿಯೇ ಈನಿಯಾಸ್‌ ಆಡುವ ಕೆಲ ಮಾತುಗಳನ್ನು ಗಮನಿಸುವುದು ಸೂಕ್ತ:

You ask me to make peace with the dead, whom the fortunes of battle
Have killed: believe me, I’d like to make peace with the living equally.
I would not be here, but that denstiny. Said it should be my home.
It is not you people that I’m at war with; only your king,
Who broke off relations with me, put faith in the weapons of Turnus.
Fairer if Turnus had stayed to face the death which your friends met.
If he’s so keen to force an issue and drive out us Trojans
By fighting, he ought to have met me here in single combat:
The better man, or the one heaven favoured, would have survived.
   ಪುಟ ೩೨೬

ಸತ್ತವರ ಜತೆ ಮಾತ್ರವಲ್ಲ, ಇದ್ದವರ ಜತೆಯೂ ಸ್ನೇಹಕ್ಕೆ ಸಿದ್ಧವಿರುವುದಾಗಿ ಈನಿಯಾಸ್‌ ನುಡಿಯುತ್ತಾನೆ. ಅಂತಹ ಹಲವಾರು ಮಾತುಗಳು ಕಾವ್ಯದ ಉದ್ದಕ್ಕೂ ಬರುತ್ತವೆ. ‘ಈನೀಡ್‌’ನಲ್ಲಿ ಬರುವ ಸೂಕ್ತಿಗಳನ್ನು ಸೂಕ್ತ ಸಂದರ್ಭದಲ್ಲಿ ಉದಾಹರಿಸುವುದು ಎಂದರೆ ಅದರಲ್ಲೂ ಲ್ಯಾಟಿನ್‌ ಮೂಲದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆಯ ಹಾದಿಯಲ್ಲಿ ತಲುಪಿದ ಔನ್ನತಿ ಮತ್ತು ಎತ್ತರಕ್ಕೆ ಸಂಕೇತವಾಗಿತ್ತು. ಆ ಪರಿಸ್ಥಿತಿ ಇಂದು ಉಳಿದಿಲ್ಲ.

ಟರ್ನಸ್‌ನ ವಧೆಯ ನಂತರ ವಿಧಿಸಲಾಗುವ ಷರತ್ತುಗಳು ಈ ರೀತಿ ಇವೆ:

ಅ : ಈನಿಯಾಸ್‌ ರಾಜನಾದ ನಂತರ ಮೂಲ ಸಂತತಿಗೆ ಸೇರಿದ ಲ್ಯಾಟಿನ್‌ ಜನರು ಪುರಾತನ ಕಾಲದಿಂದ ಅನುಸರಿಸಿಕೊಂಡು ಬಂದ ತಮ್ಮ ಹೆಸರನ್ನು ಬದಲಿಸುವಂತೆ ಒತ್ತಾಯಿಸಕೂಡದು.

ಆ : ತಲೆತಲಾಂತರದಿಂದಲೂ ಅವರು ಅನುಸರಿಸಿಕೊಂಡು ಬರುತ್ತಿರುವ ಭಾಷೆ ಮತ್ತು ಪರಂಪರಾಗತ ಉಡುಪನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡುವುದು.

ಇ : ಈ ಭಾಗ ಲ್ಯಾಟಿಯಂ ಆಗಿಯೇ ಉಳಿಯಬೇಕು, ಸಂತತಿ ರೋಮನ್ ಆಗಿರಬೇಕು ಮತ್ತು ಮಹತ್ವ ತಂದುಕೊಡುವ ಗುಣಗಳು ಮತ್ತು ಶೌರ್ಯ ಇಟಲಿಯಾವಾಗಿಯೇ ನಿಲ್ಲಬೇಕು.

ಈ : ಕೊನೆಯವರೆಗೂ ಟ್ರಾಯ್‌ ತಾನು ಬಿದ್ದ ಕಡೆಯಲ್ಲಿಯೇ ಅನಾಮಧೇಯವಾಗಿರಬೇಕು.

ಟ್ರಾಯ್‌ನಿಂದ ಬಂದ ಎಲ್ಲ ಟ್ರೋಜನ್ನರು ಅಕ್ಷರಶಃ ರೋಮನ್ನರಾಗಿ ಮತ್ತು ಲ್ಯಾಟಿಯಂ ಜನರಾಗಿ ಪರಿವರ್ತನೆಗೊಳ್ಳುವುದರೊಂದಿಗೆ, ಹೆಲೆನ್‌ ನೆಪದಲ್ಲಿ ಆರಂಭವಾದ ಏಷ್ಯಾ ಮತ್ತು ಯುರೋಪ್‌ ನಡುವಿನ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ವರ್ಜಿಲ್‌[6] ‘ಈನೀಡ್‌’ನಲ್ಲಿ ಪ್ರಯತ್ನಿಸಿದಂತೆ ಕಾಣುತ್ತದೆ. ಟ್ರಾಯ್‌ ನಿರ್ನಾಮಕ್ಕೆ ಕಾರಣವಾಗಿದ್ದಿರಬಹುದಾದ ದುಡುಕು ಸ್ವಭಾವ, ವಿವೇಕರಹಿತ ವರ್ತನೆ, ಕಾಲನ ಸ್ಪಂದನದಿಂದ ವಂಚಿತವಾದ ಕಾರಣ ನಿಯತಿಯ ಆಣತಿಯನ್ನು ಗ್ರಹಿಸುವಲ್ಲಿನ ವಿಫಲತೆ ಮೊದಲಾದ ಟ್ರೋಜನ್‌ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಈನಿಯಾಸ್‌ ಮತ್ತವನ ತಂಡದವರು ಕಳೆದುಕೊಳ್ಳುತ್ತಾರೆ. ಅವುಗಳೆಲ್ಲದರ ಪ್ರತಿರೂಪದಂತಿದ್ದ ದಿದೊಳನ್ನು ಬಿಟ್ಟು ಬರುವುದರ ಮುಖೇನ ಈನಿಯಾಸ್, ಅವುಗಳನ್ನೆಲ್ಲ ತ್ಯಜಿಸಿ ಬಂದಿರುತ್ತಾನೆ. ಈನಿಯಾಸ್‌ನನ್ನು ರಾಜನಾಗಿ ಸ್ವೀಕರಿಸುವುದರ ಮೂಲಕ ಏಷ್ಯನ್ನರ ಕೊಡುಗೆಯಾಗಿದ್ದಿರಬಹುದಾದ ಸಾಮ್ರಾಜ್ಯ ಕಟ್ಟುವ ಕಲೆಯನ್ನು ತಮ್ಮದೇ ಅನುಭವ ಮತ್ತು ಹಿನ್ನೆಲೆಗನುಗುಣ ತಮ್ಮದಾಗಿಸಿಕೊಳ್ಳಲು ರೋಮನ್ನರು ಪ್ರಯತ್ನಪಟ್ಟಂತೆ ಕಾಣುತ್ತದೆ. ಆ ಪರ್ಷಿಯನ್‌ ಸಾಮ್ರಾಜ್ಯಕ್ಕೆ ರೋಮನ್‌ ಸಾಮ್ರಾಜ್ಯದ ಉತ್ತರ ಅದೇ ಏಷ್ಯನ್‌ ಮೂಲದ ಬೈಬಲ್‌ ಮತ್ತು ಕ್ರಿಶ್ಚಿಯನ್‌ ರಿಲಿಜನ್‌ಅನ್ನು ತಮ್ಮದಾಗಿಸಿಕೊಂಡಂತೆ.

ಏಷ್ಯಾದಿಂದ ತಮಗೆ ಸರಿಕಂಡುದನ್ನು ನಮ್ರವಾಗಿ ಸ್ವೀಕರಿಸುವ ಕಲೆಯನ್ನು ಯುರೋಪ್‌ ಮೂಲದ ಜನರು ಬಹಳ ಪುರಾತನ ಕಾಲದಲ್ಲಿಯೇ ಕರಗತ ಮಾಡಿಕೊಂಡಂತೆ ಕಾಣುತ್ತದೆ ಮರಳಿ ನೀಡುವ ಕಲೆಯನ್ನು ಸಹ. ಅದಷ್ಟೇ ಅಲ್ಲ, ಏಷ್ಯಾ ಮೂಲದಿಂದ ಬರಬಹುದಾದ ಕೆಲವೊಂದು ಅಷ್ಟೊಂದು ಸಮಂಜಸವಲ್ಲದ ಪ್ರಭಾವಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡು, ಅನನ್ಯತೆ ಕಾಪಾಡಿಕೊಳ್ಳುವ ಎಚ್ಚರವನ್ನು ಬಹಳ ಹಿಂದೆಯೇ ರೂಢಿಸಿಕೊಂಡಂತೆಯೂ ಕಾಣಿಸುತ್ತದೆ. ಆದ್ಯಾತ್ಮ ಸಾಧನೆಗೆ ಬೇಕಾದ ನಿರಂತರ ಜಾಗೃತ ಪ್ರಜ್ಞೆ ಮತ್ತು ಎತ್ತರದ ಮನಃಸ್ಥಿತಿ ಕುರಿತಾಗಿ ಬುದ್ಧ, ಭಗವದ್ಗೀತೆ ಬೋಧಿಸಿದ ಕೃಷ್ಣ ಮೊದಲಾದ ಎಲ್ಲ ಸಾಧಕರು ಬಹಳ ಹೇಳಿದ್ದಾರೆ. ಆ ತರಹದ ಜಾಗೃತಿ ಮಹಃಸ್ಥಿತಿ ಮತ್ತು ನಿರಂತರ ಎಚ್ಚರದ ಪ್ರಜ್ಞಾವಂತಿಕೆ ಕೇವಲ ಆಧ್ಯಾತ್ಮ ಸಾಧನೆಗೆ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಬೇಕು ಎಂಬುದರ ಮಹತ್ವವನ್ನು ಅದರಲ್ಲಿ ಹೋಮರ್‌ ವಹಿಸಿದ ಪಾತ್ರ.

 

[1]A Brief History of Time, Bantam Books, ೧೯೯೮, ಪುಟ ೧೩

[2]‘Come, then, rather let us go to bed and turn to love-making.
Never before as now has assion enmeshed my sences,
not when I took you the first time from Lakedaimon the lovely
and caught you up and carried away in seafaring vessels.
and lay with you in the bed of love on the island Kranae,
not even then, as now, did I love you and sweet desire seize me.
Speaking, he led the way to the bed; and his wife went with him.    ಪುಟ ೧೧೨

[3]ವಾತ್ಸಲ್ಯಮಯಿ ಹೆಕ್ತರ್‌ ಜ್ಯೂಸ್‌ ದೇವರಿಗೆ ಸಲ್ಲಿಸುವ ಕೋರಿಕೆ ಈ ರೀತಿಯದು:

‘Zeus, and you other immortals, grant that this boy, who is my son,
may be I am, pre-eminent among the Trojans,
great in strength, as am I, and rule strogly over Ilion;
and some day let them say of him; “He is better by far than his father’’,
as he comes in from the fighting: and let him kill his enemy
and bring home the blooded spoils, and delight the heart of his mother.’  ಪುಟ ೧೬೫-೧೬೬

[4]In his weakness Heaktor of the shining helm spoke to him:
I entreat you, by your life, by your knees, by your parents,
do not let the dogs feed on me by the ships of the Achains,
but take yourself the bronze and gold that are there abundance,
those gifts that my father and the lady my mother will give you,
and give my body to be taken home again, so that the Trojans
and the wives of the Trojans may give me in death my rite of burning.’   ಪುಟ ೪೪೪

[5]ಪಶ್ಚಿಮ ಜಗತ್ತಿನ ಶ್ರೀಮಂತ ರಾಷ್ಟ್ರಗಳ ನಾಯಕರ ಎದುರು ನಿಂತು ಬಡರಾಷ್ಟ್ರಗಳ ಅಧಿಕಾರಸೂತ್ರ ಹಿಡಿದ ಜನ ಮತ್ತು ಬುದ್ಧಿಜೀವಿಗಳು, ಒಂದಲ್ಲ ಒಂದು ನೆರವಿನ ಹೆಸರಿನಲ್ಲಿ ಕೈಚಾಚುವ ವಿಧಾನಗಳನ್ನು ಪ್ರಿಅಂನ ದೀನತೆ ನೆನಪಿಗೆ ತಾರದಿರುವುದಿಲ್ಲ. ಅಲ್ಲಿನ ಹೋಲಿಕೆ ಮತ್ತು ವ್ಯಂಗ್ಯದ ಮಾದರಿ: ತನ್ನ ಮಗನ ಶವ ನೀಡುವಂತೆ ಆತನನ್ನು ಕೊಂದವನನ್ನು ಪ್ರಿಅಂ ಬೇಡುವ ರೀತಿಯಲ್ಲಿಯೇ… ನೆರವು ಕೋರುವುದು.

[6]ವರ್ಜಿಲ್‌ ಕೂಡ ಏಷ್ಯಾದವನಿರಬಹುದೆಂಬ ಗುಮಾನಿ ಇದೆ. ಏಷ್ಯಾದ ಹೋಮರನಿಗೆ ಮಾದರಿಯಾಗಿದ್ದಿರಬಹುದಾದ ಉನ್ನಿನ್ನಿ ಕೂಡ ಎಷ್ಯನ್‌ ಮೂಲದ ಎಪಿಕ್‌ ಕವಿ ತಾನೇ!