II

ಬ್ರಿಟಿಷರು ರೂಪಿಸಿದ ಆಧುನಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೆ ಬ್ರಾಹ್ಮಣರು ಮತ್ತು ಇತರ ಜಾತಿಗಳ ನಡುವಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಂತರ ಬಹಳ ಗಾಢವೂ ತೀಕ್ಷಣವೂ ಆದುದಾಗಿರಲಿಲ್ಲ ಎಂಬುದನ್ನು ತಿಳಿಯಬೇಕಾದರೆ ಎಸ್‌. ಎಲ್‌. ಭೈರಪ್ಪನವರ ‘ಗೃಹಭಂಗ’ ಮತ್ತು ಎ. ಎನ್‌. ಮೂರ್ತಿರಾಯರ ‘ಸಂಜೆಗಣ್ಣಿನ ಹಿನ್ನೋಟ’ ನೋಡಬೇಕು – ಅಂತಹ ಹಲವಾರು ಕೃತಿಗಳಿವೆ. ಅಂತರ ಇರುವುದು ಅವರು ಅನುಸರಿಸುತ್ತಿದ್ದ ವೃತ್ತಿ ಮತ್ತು ಜೀವನ ವಿಧಾನ ಹಾಗೂ ಅದರಿಂದ ಬರುವ ಶೈಲಿಯಲ್ಲಿ. ಎಲ್ಲ ಬ್ರಾಹ್ಮಣರು ವೇದ ಪಾರಂಗತರೇನಾಗಿರಲಿಲ್ಲ. ಮತ್ತು ಅಕ್ಷರ ಬಲ್ಲವರೂ ಆಗಿರಲಿಲ್ಲ. ಒಂದೇ ವ್ಯತ್ಯಾಸವೆಂದರೆ, ಬ್ರಾಹ್ಮಣನಾಗಿ ಜನಿಸಿದ ವ್ಯಕ್ತಿ ಪೌರೋಹಿತ್ಯ, ಅರ್ಚಕ ವೃತ್ತಿ, ವೇದಾಧ್ಯಯನ ಇತ್ಯಾದಿ ಮಾಡಬಹುದಿತ್ತು. ಆ ಅವಕಾಶ ಅವರಿಗಿತ್ತು. ಉಳಿದ ಅನೇಕ ಜಾತಿಗಳಿಗೆ ಇರಲಿಲ್ಲ. ಇದ್ದ ಅವಕಾಶವನ್ನು ಬಳಸಿಕೊಳ್ಳಲಾಗದೆ ಬದುಕುವುದು ಒಂದೇ ಅವಕಾಶವಂಚಿತರಾದ ಕಾರಣ ಬದುಕಿನಲ್ಲಿ ಸಾಧಿಸಬಹುದಾದ ಉನ್ನತಿಕೆಯನ್ನು ಸಾಧಿಸಲಾಗದೆ ಇದ್ದಲ್ಲಿಯೇ ಉಳಿಯುವುದು ಒಂದೇ; ಬ್ರಾಹ್ಮಣ ಅಥವಾ ಮತ್ತಾವುದೇ ಜಾತಿಯಲ್ಲಿ ಹುಟ್ಟಿದ ಏಕೈಕ ಕಾರಣಕ್ಕೆ ಸೃಜನಶೀಲತೆ ಪುಕ್ಕಟೆ ಬರುವುದಿಲ್ಲ ಎಂಬ ಪ್ರಾಥಮಿಕ ಅರಿವು ಸಿದ್ಧಿಸುವುದು ಸಾಮಾನ್ಯವಾದುದಲ್ಲ.

ಚಾತುರ್ವರ್ಣ ವ್ಯವಸ್ಥೆಯ ನಿಬಂಧನೆ ಮುರಿದು ರಾಜಕೀಯ ಮಾಡಲು ಮೊದಲು ಮಾಡಿದವರೆ ಬ್ರಾಹ್ಮಣರು ಎಂಬ ಇತಿಹಾಸಬಲ್ಲ ಸಂಗತಿಯ ಅರಿವು ಬಸವಣ್ಣನವರಿಗೆ ಇಲ್ಲದೆ ಏನೂ ಇರಲಿಲ್ಲ. ಅವರು ದಣ್ಣಾಯಕ ಅಥವಾ ಭಂಡಾರಿಯಾಗಿದ್ದುದು ವೈದಿಕ ಕಟ್ಟುಪಾಡುಗಳಿಗೆ ಅನುಗುಣವಾಗಿರಲಿಲ್ಲ. ಅಷ್ಟೆಲ್ಲ ಅವಕಾಶಗಳಿದ್ದು ಬಸವಣ್ಣನ ಕಾಲದವರೆಗಿನ ಬ್ರಾಹ್ಮಣರು ಸಾಧಿಸಿದ ಸಾಧನೆಗಳು ಮಹತ್ವದ್ದೇನಾಗಿರಲಿಲ್ಲ. ಅವರಾದರೂ ತಮಗಿದ್ದ ಉತ್ತಮ ಅವಕಾಶ ಬಳಸಿಕೊಂಡಿದ್ದಲ್ಲಿ ಪರಿಸ್ಥಿತಿ ಈ ಹಂತಕ್ಕೆ ಬರುತ್ತಿರಲಿಲ್ಲ. ಅಂದರೆ ವಚನಕ್ರಾಂತಿ ಮತ್ತು ಅಂತರಜಾತಿ ವಿವಾಹ ಏರ್ಪಡಿಸುವ ಅಗತ್ಯ ನಿರ್ಮಾಣವಾಗುತ್ತಿರಲಿಲ್ಲ ಎಂಬ ಬಸವಣ್ಣನವರ ಆ ಗ್ರಹಿಕೆ ಇಂದಿಗೂ ಅರ್ಥಪೂರ್ಣವಾಗಿ ಉಳಿದಿದೆ ಎಂದು ಪ್ರತ್ಯೇಕ ಹೇಳಬೇಕಾದ ಅಗತ್ಯವಿದೆಯೇ!

ಭಾರತದ ಸೃಜನಶೀಲತೆಯ ಸಾಮರ್ಥ್ಯ ಮತ್ತು ಇತಿಮಿತಿ ಕುರಿತ ಅರಿವು ಬಸವಣ್ಣನವರಿಗೆ ಬಹಳ ಗಾಢವಾಗಿ ಇದ್ದಂತೆ ತೋರುತ್ತದೆ. ಇಲ್ಲದೇ ಹೋಗಿದ್ದಲ್ಲಿ ಪಂಪ ರನ್ನರ ತರಹವೇ ಕಾವ್ಯ ಬರೆದುಕೊಂಡು ನೆಲನಾಳ್ದನನ್ನು ಹೊಗಳಿಕೊಂಡು ಹಾಯಾಗಿ ಇರಬಹುದಾಗಿತ್ತು. ಅಭಿವ್ಯಕ್ತಿ ವಿಧಾನವಾಗಿ ವಚನ ಮಾಧ್ಯಮವನ್ನು ಸ್ವೀಕರಿಸುವುದರ ಮುಖೇನ ಪಂಪ ಪರಂಪರೆ ಮತ್ತು ಆ ಚೌಕಟ್ಟಿನ ಇತಿಮಿತಿಯಿಂದ ಹೊರಬಂದುದು ಬಸವಣ್ಣ ನಡೆಸಿದ ಮೊದಲ ಆಂದೋಲನ. ನಿಗಿನಿಗಿ ಹೊಳೆಯುತ್ತಿದ್ದ ಪ್ರತಿಭೆಯ ಬಸವಣ್ಣನಿಗೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಆಗಬಹುದಾದ ಅನಾಹುತಗಳ ಸೂಕ್ಷ್ಮ ಅರಿವು ಇದ್ದಂತೆ ತೋರುತ್ತದೆ. ಅದನ್ನು ಮುನ್ನೋಟ ಅಥವಾ ಮುಂಗಾಣ್ಕೆ ಎಂದಾದರೂ ಕರೆಯಬಹುದು; ಅತ್ಯುತ್ತಮ ಮಟ್ಟದ ಆಧ್ಯಾತ್ಮಿಕ ಅರಿವು, ದರ್ಶನ ಮತ್ತು ಸಾಧನೆ ಎಂದರೂ ನಡೆಯುತ್ತದೆ. ಅದೇನು ಭವಿಷ್ಯ ಅಥವಾ ಕಾಲಜ್ಞಾನವಲ್ಲ; ನಾಡಿಮಿಡಿತ ನೋಡಿ ಕಾಯಿಲೆ ಗುರುತಿಸಲು ಪ್ರಯತ್ನಿಸುವ ವೈದ್ಯರ ರೀತಿ, ಜಗತ್ತು ಮತ್ತು ಮಾನವ ಜನಾಂಗದ ಇತಿಹಾಸ ಸಾಗಿಬಂದ ಹಾದಿ ಮತ್ತು ಕಾಲನ ನಾಡಿಮಿಡಿತ ಸ್ಪರ್ಶಿಸಲು ಮನುಷ್ಯ ಮನುಷ್ಯ ಎಟುಕಿಸುವ ಒಂದು ಪ್ರಯತ್ನ. ಏಕೆಂದರೆ, ಆ ಮನಸ್ಸು ಕೂಡ ಒಟ್ಟು ಮನಸ್ಸಿನ ಒಂದು ಭಾಗ ತಾನೆ! ಅದನ್ನು ಸಾಧಿಸಲು ಯತ್ನಿಸಿದ ವ್ಯಕ್ತಿ ಬಸವಣ್ಣ: ಆ ಅರ್ಥದಲ್ಲಿ ಯುರೋಪ್‌ ಮೂಲದ ಜನರು ರೂಢಿಸಿಕೊಂಡು ಬಂದ ಪರಂಪರೆಗೆ ಹತ್ತಿರ ಬರುವ ಅಪರೂಪದ ಭಾರತೀಯ ಮನಸ್ಸು.

ಹಾಗೆ ನೋಡುವುದಾದಲ್ಲಿ, ಭಾರತದ ಸಮಾಜ ಸ್ಥಿರವೂ ಜಡವೂ ಚಲನಶೀಲರಹಿತವೂ ಆಗಿತ್ತು ಎನ್ನುವುದಕ್ಕಿಂತ ಪುನರಾವರ್ತನೆ ಮತ್ತು ಅನುಕರಣೀಯ ಚೌಕಟ್ಟಿಗೆ ಸೀಮಿತವಾಗಿತ್ತು ಎನ್ನುವುದು ಹೆಚ್ಚು ಸೂಕ್ತವಾದ ಮತ್ತು ಸತ್ಯಕ್ಕೆ ಹತ್ತಿರವಾದ ಗ್ರಹಿಕೆಯಾಗಿರುವಂತೆ ತೋರುತ್ತದೆ. ವ್ಯಾಸ, ವಾಲ್ಮೀಕಿ ಮೊದಲಾದವರನ್ನು ತಮಗೆ ತೋಚಿದ ರೀತಿ ಬದಲಿಸಿಕೊಂಡು ಕಾವ್ಯ ರಚಿಸಿ ಪಡುವ ಸರಳ ತೃಪ್ತಿ: ಅದರಲ್ಲಿ ಯಾವ ಸ್ವಂತಿಕೆ ಮತ್ತು ಪ್ರಯೋಗಶೀಲತೆಯನ್ನು ಕಾಣಲು ಸಾಧ್ಯ? ಜತೆಗೆ ಭಾರತದ ಪ್ರಯೋಗಶೀಲತೆ ಮತ್ತು ಸೃಜನಶೀಲತೆ ಮತ್ತೊಂದು ಹೊಸ ದಿಕ್ಕಿನಲ್ಲಿ ಸಾಗಿತ್ತು. ಹೊಸ ಹೊಸ ಜಾತಿಗಳ ಸೃಷ್ಟಿ, ವಿಭಜನೆ, ನಿರ್ಮಾಣ ಮತ್ತು ಅವುಗಳಿಗೊಂದು ಭವ್ಯ ತಾತ್ವಿಕ ಹಿನ್ನೆಲೆಯ ಆವಿಷ್ಕಾರದಲ್ಲಿ ಕಂಡುಕೊಂಡ ತಲ್ಲೀನತೆ.

ಅಂತಹ ಅತಿಯಾದ ಮೇಲುಕೀಳುಗಳಿಂದ ತುಂಬಿದ ಯಾವುದೇ ಸಮಾಜ ಹೊರಗಿನಿಂದ ಬರುವ ಪ್ರಭಾವ ಮತ್ತು ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಕಳೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಏಕೆಂದರೆ, ತಮ್ಮೆಲ್ಲ ಇಂದ್ರಿಯಗಳನ್ನು ಮುಚ್ಚಿಕೊಂಡು ಕೇವಲ ಆಂತರಿಕ ಸಮಸ್ಯೆ ಮತ್ತು ಚೌಕಟ್ಟಿನಲ್ಲಿ ಮುಳುಗಿಹೋದ ಸಮಾಜ ಮತ್ತು ಬದುಕು ಜಾಗೃತ ಪ್ರಜ್ಞೆ ಉಳಿಸಿಕೊಳ್ಳುವುದು ಅಸಾಧ್ಯದ ಮಾತು (ಇದ್ದರೂ ಅದು ಬಹಳ ಮೊಂಡಾಗಿರುತ್ತದೆ). ಸಾಂಪ್ರದಾಯಿಕ ಅರ್ಥದಲ್ಲಿ ಆರನೇ ಇಂದ್ರಿಯ ಎಂದು ಕರೆಯಬಹುದಾದ ಮೂರನೇ ಕಣ್ಣು ಪಡೆದ ಈಶ್ವರನ ಭವ್ಯ ವ್ಯಕ್ತಿತ್ವವನ್ನು ಕಲ್ಪಿಸಿಕೊಂಡ ಈ ದೇಶದ ಜನರಿಗೆ ಅದರ ಅಭಾವವಿತ್ತು ಎಂಬುದು ಪರಮಾಶ್ಚರ್ಯಕರ ಸಂಗತಿಯೇ ಸರಿ. ಸದಾ ಜಾಗೃತವಾಗಿರುವ ಮತ್ತು ನಿರಂತರ ನಿಗಿನಿಗಿ ಉರಿಯುವ ಆರನೇ ಇಂದ್ರಿಯ ಆ ಮೂರನೇ ಕಣ್ಣು, ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜಕ್ಕೂ ಇರಬಹುದಾದಂತೆ, ಯಾವುದೇ ಸಂಸ್ಕೃತಿ ಮತ್ತು ನಾಗರಿಕತೆಯ ಹಿನ್ನೆಲೆ ಪಡೆದ ದೇಶಕ್ಕೂ ಇರಬೇಕಾಗುತ್ತದೆ. ಅದರ ಸಾಮೂಹಿಕ ಗೈರುಹಾಜರಿಯನ್ನು ಗಮನಿಸಿ ಕ್ರಿಯಾಶೀಲನಾದ ವ್ಯಕ್ತಿ ಬಸವಣ್ಣ: ಆರನೇ ಇಂದ್ರಿಯ – ಮೂರನೇ ಹಣೆಗಣ್ಣು ಪಡೆದಿದ್ದ ಶಿವನ ಆರಾಧಕರಾಗಿದ್ದುದು ಆಶ್ಚರ್ಯವೇನಲ್ಲ.

ವ್ಯಕ್ತಿಗತವೂ, ಸಾಮೂಹಿಕವೂ ಮತ್ತು ವಿಶ್ವರೂಪಿಯೂ ಆಗಿದ್ದಿರಬಹುದಾದ ಮುಕ್ಕಣ್ಣು ಅಥವಾ ಆರನೇ ಇಂದ್ರಿಯ, ಯಾವುದೇ ಸಂಸ್ಕೃತಿ ಮತ್ತು ರಾಷ್ಟ್ರದ ವಿಶೇಷ ವರ್ಗಕ್ಕೆ ಸೀಮಿತವಾದ ವಿಶೇಷಗುಣವಾಗಿರುವುದು ಕಷ್ಟಸಾಧ್ಯ. ಆದರೆ ಇತಿಹಾಸದ ಗತಿ ಮತ್ತು ಕಾಲನ ನಡಿಗೆಗೆ ಪ್ರತಿಸ್ಪಂದಿಸುತ್ತಿರಬಹುದಾದ ಆ ಕ್ರಮದ ಜತೆ ಸ್ಪಂದಿಸುವ ಗುಣ ಪಡೆದವರಿಗೆ ಅದರದೆ ಆದ ವಿಶೇಷತೆ ದಕ್ಕುವಂತೆ ತೋರುತ್ತದೆ. ಆ ಗುಣ ಮತ್ತು ಪ್ರತಿಭೆಯನ್ನು ವೈಯಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಡೆದಿರುವಂತೆ ಕಾಣುವ ಯುರೋಪ್‌ ಮೂಲದ ಜನರು ಆ ಜಾಗೃತ ಪ್ರಜ್ಞೆಯ ಜತೆಗಿನ ಸಂಬಂಧವನ್ನು ತಮ್ಮ ಸಾಧನೆಯ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿಕೊಂಡರು. ಅದನ್ನೇ ಅವರು ಆಧ್ಯಾತ್ಮಿಕ ಅನುಭವವಾಗಿಯೂ ಕಂಡುಕೊಂಡಂತೆ ತೋರುತ್ತದೆ. ಅದರಾಚೆಗಿನ ಆಧ್ಯಾತ್ಮಿಕ ಅನುಭವ ಅವರಿಗೆ ದಕ್ಕಲಿಲ್ಲ ಎಂಬುದು ಆ ಮಾತಿನ ಅರ್ಥವಲ್ಲ.

ಅಂತಹ ಜ್ಞಾನೇಂದ್ರಿಯವಾದ ಆರನೇ ಇಂದ್ರಿಯ, ಮೂರನೇ ಕಣ್ಣು ಅಥವಾ ಜಾಗೃತ ಪ್ರಜ್ಞೆಯ ಸ್ಪರ್ಶ ಬಸವಣ್ಣನನ್ನು ಸೋಂಕಿದುದಾದರೂ ಹೇಗೆ ಮತ್ತು ಎಲ್ಲಿಂದ? ಮೂರನೇ ಕಣ್ಣು, ಆರನೇ ಇಂದ್ರಿಯ, ಪರಂಪರೆ, ತಲೆಮಾರು, ಕಾಳಿದಾಸನ ಕೃತಿಗಳ ಸುಪುತ್ರಾಕಾಂಕ್ಷೆ, ಕಾಲ – ಬದುಕಿನ ಸ್ಪಂದನ, ಡಾರ್ವಿನ್ನನ ಪ್ರಕೃತಿಯ ಆಯ್ಕೆ ಮತ್ತು ವಿಕಾಸಗತಿ, ಹಾಕಿನ್ನನ ಸುತ್ತಮುತ್ತಲ ಜಗತ್ತಿನ ಅರಿವು. ಹೆಲೆನ್‌ ರೂಪದ ಹೋಮರನ ಸಂರಕ್ಷಣೆಯ ಅರಿವು, ವರ್ಜಿಲ್ ನಡೆಸುವ ನೆಲೆಯ ಶೋಧ ಮೊದಲಾದವು ಬೇರೆ ಬೇರೆಯಲ್ಲ: ಒಂದೇ ಸತ್ಯದ ವಿವಿಧ ಮುಖಗಳು ಎಂಬ ಆಧ್ಯಾತ್ಮಿಕ ಸುಖ ಬಸವಣ್ಣನನ್ನು ಕಂಡು ಕೈ ಕುಲುಕಿ ಮಾತನಾಡಿಸಿತ್ತೇ!

ಬಸವಣ್ಣ ಬರುವ ಕಾಲಕ್ಕೆ ವಿಜ್ಞಾನ, ಇತ್ಯಾದಿಗಳಲ್ಲಿ ಸಾಧನೆ ಮಾಡಲು ಇದ್ದ ಅವಕಾಶ ಅತ್ಯಲ್ಪವಾದುದಾಗಿದ್ದು ದಾಖಲೆಗೆ ಅವಕಾಶ ಇಲ್ಲದಿದ್ದ ಆ ಕಾಲದಲ್ಲಿ ಸಂಗೀತ ಹೆಚ್ಚಾಗಿ ಮೌಖಿಕ ಪರಂಪರೆಗೆ ಹತ್ತಿರವಾದುದಾಗಿತ್ತು. ಹಾಗಾಗಿ ಏನಾದರೂ ಸಾಧನೆ ಮಾಡಲು ಇದ್ದ ಕ್ಷೇತ್ರಗಳು ಪ್ರಧಾನವಾಗಿ ಮೂರು: ಕಾವ್ಯ, ವಾಸ್ತುಶಿಲ್ಪ ಮತ್ತು ಚಿತ್ರಕಲೆ; ಮತ್ತೊಂದು ದೊಡ್ಡ ಕ್ಷೇತ್ರವೆಂದರೆ ರಾಜಕೀಯ. ಅದು ಸಾಮ್ರಾಜ್ಯ ನಿರ್ಮಾಣಕ್ಕೆ ಸೀಮಿತವಾದುದಾಗಿತ್ತು. ಆಧ್ಯಾತ್ಮ ಮತ್ತು ತತ್ವಜ್ಞಾನ ಎಲ್ಲರ ದಾರಿಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಸಾಧನೆಗೆ ಇದ್ದ ದೊಡ್ಡ ಅವಕಾಶಗಳೆಂದರೆ, ಕಾವ್ಯ ಮತ್ತು ಸಂಬಂಧಿಸಿದ ಕ್ಷೇತ್ರಗಳು; ಸೃಜನಶೀಲತೆ ಎಂದರೆ ಕಾವ್ಯ ಬರೆಯುವ ಸಾಮರ್ಥ್ಯ ಮತ್ತು ಕಲೆಗಾರಿಕೆ ಎಂಬ ಅರ್ಥವೇ ತೀರ ಇತ್ತೀಚಿನವರೆಗೂ ಪ್ರಧಾನವಾಗಿ ಚಾಲ್ತಿಯಲ್ಲಿತ್ತು. ಮನುಷ್ಯ ಜನಾಂಗದ ಸಾಧನೆಯ ಅವಕಾಶಗಳು ವಿಸ್ತಾರಗೊಳ್ಳುತ್ತಾ ಸಾಗಿದಂತೆ ಸೃಜನಶೀಲತೆಯ ಅರ್ಥ ಮತ್ತು ವ್ಯಾಪ್ತಿ ಕೂಡ ಹಿರಿದಾಗುತ್ತಾ ಸಾಗಿದ್ದು ಕಾವ್ಯ ಮತ್ತು ಸೃಜನಶೀಲತೆ ನಡುವಿನ ಸಮಾನಾರ್ಥಕ ಸಂಬಂಧ ಕುಗ್ಗುತ್ತಾ ಕಿರಿದಾಗುತ್ತಾ ಸಾಗಿದೆ.

ಎಲ್ಲರೂ ವಾಸ್ತುಶಿಲ್ಪಿಗಳಾಗಲು ಸಾಧ್ಯವಿರಲಿಲ್ಲವಾದುದರಿಂದ ಭಾರತದಲ್ಲಿ ಸೃಜನಶೀಲತೆಗೆ ಇದ್ದ ಮಾಧ್ಯಮ ಬಹುತೇಕವಾಗಿ ಕಾವ್ಯಕ್ಷೇತ್ರವಾಗಿತ್ತು. ಬಸವಣ್ಣ ಬರುವ ಕಾಲಕ್ಕಾಗಲೇ ಮಹಾಭಾರತ ಮತ್ತು ರಾಮಾಯಣ ಪರಂಪರೆಗಳ ನಡುವಿನ ದೊಡ್ಡ ಪೈಪೋಟಿ ಮತ್ತು ಕದನ ಒಂದು ಹಂತಕ್ಕೆ ಬಂದಿದ್ದು, ರಾಮ ಮತ್ತು ಕೃಷ್ಣ ಇಬ್ಬರನ್ನೂ ದೇವರ ಅವತಾರ ಎಂದು ಒಪ್ಪಿಕೊಂಡು ಶತಮಾನಗಳೇ ಕಳೆದಿದ್ದವು. ಮಹಾಭಾರತ ಮತ್ತು ರಾಮಾಯಣಗಳ ಕೃಷ್ಣ ಮತ್ತು ರಾಮರ ನಡುವೆ ನಡೆದ ದೊಡ್ಡ ಪೈಪೋಟಿಯನ್ನು ದಾಖಲಿಸುವುದು ಸಾಧ್ಯವಾದಲ್ಲಿ ಭಾರತದ ಸೃಜನಶೀಲತೆಯ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಾಗಬಹುದೋ ಏನೋ. ಮಹಾಭಾರತ – ರಾಮಾಯಣಗಳನ್ನು ಅನುಸರಿಸಿ ಕಾವ್ಯ ಬರೆಯುವುದರಲ್ಲಿ ಹಲವಾರು ಶತಮಾನಗಳಷ್ಟು ಸುದೀರ್ಘ ಕಾಲವನ್ನು ಅತ್ಯಂತವಾಗಿ ಕಳೆದುಕೊಂಡ ಭಾರತೀಯ ಮನಸ್ಸು, ಮಹಾಭಾರತ ಮತ್ತು ರಾಮಾಯಣಗಳ ಪೈಪೋಟಿಯಲ್ಲಿ ಅದಕ್ಕೂ ಮೀರಿದ ಸಮಯವನ್ನು ಕಳೆದಂತೆ ಕಾಣುತ್ತದೆ ಎಂಬ ಅರಿವು ಬಸವಣ್ಣನವರಿಗೆ ಇಲ್ಲದೆ ಇರಲಿಲ್ಲ.

ಮಾನವ ಜನಾಂಗದ ಗತಿಗೆ ಹೊಂದಿಕೊಂಡು ಸಂಸ್ಕೃತಿ ಮತ್ತು ನಾಗರಿಕತೆ ಅಥವಾ ಅದರ ಗತಿಗೆ ಹೊಂದಿಕೊಂಡೇ ಮಾನವ ಜನಾಂಗದ ಗತಿ ಸಾಗಬೇಕಾಗುತ್ತದೆ. ವ್ಯಾಸರಂಥ ಸ್ವಯಂಭುಗಳು ಹುಟ್ಟುಬಹುದಾದರೂ, ಅವರ ಆಗಮನ ಕೂಡ ಆ ಗತಿಗೆ ಹೊಂದಿಕೊಂಡದ್ದಾಗಿರುತ್ತದೆ. ಮೇಲುನೋಟಕ್ಕೆ ಅಚಾನಕ್‌ ಅಥವಾ ಆಕಸ್ಮಿಕದಂತೆ ಕಾಣುವ ಬೆಳವಣಿಗೆಗಳು ಕೂಡ ವಿಶಾಲ ವಿಶ್ವದ ನಿಯತಿ ಮತ್ತು ವಿಕಾಸ ಗತಿಗೆ ಮೀರಿದವಾಗಿರುವುದು ಕಷ್ಟಸಾಧ್ಯ. ಭಾರತೀಯ ಸಂದರ್ಭದಲ್ಲಿ ಅಚಾನಕ್‌ ಅಥವಾ ನಡುಗಡ್ಡೆಯಾಗಿ ಉಳಿದಂತೆ ಕಾಣುವ ಬಸವಣ್ಣ ಮತ್ತು ವಚನಕ್ರಾಂತಿಯ ಆಗಮನ, ಅಂತಹದ್ದೊಂದು ಬೆಳವಣಿಗೆ.

ಜಾತಿಜಾತಿಗಳ, ಮನುಷ್ಯ ಮನುಷ್ಯರ ನಡುವಿನ ಸಮಾನತೆಯ ತತ್ವವನ್ನು ತಮ್ಮ ಹೋರಾಟದ ಬಹುಮುಖ್ಯ ಅಂಗ ಮತ್ತು ಬದುಕಿನ ಕಠಿಣ ವ್ರತವನ್ನಾಗಿ ಬಸವಣ್ಣ ಸ್ವೀಕರಿಸಲು ಕಾರಣವಾಗಿರಬಹುದಾದ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ. ಅದು ತತ್ವ ಮಾತ್ರವಾಗಿರಲಿಲ್ಲ, ಬದುಕಿನಲ್ಲಿ ಅನುಸರಿಸಲೇಬೇಕಾದ ಕನಿಷ್ಠ ನಿಯಮವನ್ನಾಗಿ ಅವರು ಕಂಡುಕೊಂಡರು. ಸಮಾನತೆ ಮತ್ತು ಭ್ರಾತೃತ್ವವನ್ನು ಎಲ್ಲ ಧರ್ಮಪುರುಷರು, ರಿಲಿಜನ್‌ ಸ್ಥಾಪಕರು ಮತ್ತು ಪ್ರಚಾರಕರು ಪ್ರತಿಪಾದಿಸಿದ್ದರಾದರೂ ಬದುಕಿನಲ್ಲಿ ಅನುಸರಿಸಲೇಬೇಕಾದ ತೀರ ಸಾಧಾರಣ ನಡವಳಿಕೆಯಾಗಿ ಕಂಡುಕೊಂಡವರು ಬಸವಣ್ಣ.[1] ಆ ಅರ್ಥದಲ್ಲಿ ಬಸವಣ್ಣನವರ ಸಮಾನತೆಯ ಕಲ್ಪನೆ, ಎಷ್ಟೋ ಶತಮಾನಗಳ ನಂತರ ಪ್ರತಿಪಾದನೆಗೊಂಡ ಸಮಾಜವಾದಿ ಮತ್ತು ಮಾರ್ಕ್ಸ್‌‌ವಾದಿ ತತ್ವಗಳಿಗೆ ಹತ್ತಿರ ಬರುತ್ತದೆ. ಬದುಕಿನಲ್ಲಿ ಸೃಜನಶೀಲತೆ ಕಂಡುಕೊಳ್ಳಲು ಸಮಾನತೆಯ ಅಗತ್ಯವನ್ನು ಮಂಡಿಸಿದ ಬಸವಣ್ಣ ಅವೆರಡರ ನಡುವಿನ ಸಂಬಂಧ ಮತ್ತು ಒಳಹರಿವಿನ ಬಗ್ಗೆ ಸ್ಪಷ್ಟವಾಗಿದ್ದಂತೆ ತೋರುತ್ತದೆ. ಅದು ಎಷ್ಟು ಸೂಕ್ಷ್ಮ ಮತ್ತು ನಾಜೂಕಾದುದು ಎಂದರೆ, ಅನುಸರಿಸಲಾಗದ ಆದರೆ ಯಾವುದಾದರೊಂದು ಹಂತದಲ್ಲಾದರೂ ಅನುಸರಿಸಲೇಬೇಕಾದ ಆ ಸಮಾನತೆಯ ಕಲ್ಪನೆಯನ್ನು ಕಳೆದುಕೊಂಡ ಸಮಾಜ ಮತ್ತು ಬದುಕು ನಿಜವಾದ ಸೃಜನಶೀಲತೆಯಿಂದ ವಂಚಿತವಾಗಿ ಸ್ಥಾವರವಾಗಬೇಕಾಗುತ್ತದೆ. ಅದಕ್ಕಿಂತ ದೊಡ್ಡ ಆಪತ್ತು ಮತ್ತೊಂದಿರಲಾರದು.

ತಾನು ಹುಟ್ಟಿನಿಂದಲೇ ಸರ್ವಶ್ರೇಷ್ಠ ಎಂಬ ನಂಬಿಕೆಗೆ ತುತ್ತಾದ ವ್ಯಕ್ತಿಗಳು ಮತ್ತು ಸಮಾಜ, ಕಲಿಕೆಯೆಂಬುದು ಪರಸ್ಪರವಾದುದು ಎಂಬ ಅತ್ಯಂತ ಸರಳ ನಡವಳಿಕೆಯಿಂದ ವಂಚಿತವಾಗಬೇಕಾಗುತ್ತದೆ: ಅಂತಹ ಅತಲ್ಲಣಿತ ಪರಂಪರೆಯಲ್ಲಿ ಹುಟ್ಟಿಬಂದ ಜನರಿಗೆ ನಿಜವಾದ ಸೃಜನಶೀಲತೆ ಅಂದರೆ ಜಂಗಮತೆ ಸಾಧ್ಯವೆ ಎಂಬುದಾಗಿ ಪ್ರಶ್ನಿಸಿಕೊಂಡ ಬಸವಣ್ಣನಂತಹ ಎಷ್ಟು ಜನರನ್ನು ಈವರೆಗಿನ ಭಾರತ ಕಂಡಿದೆ? ತನ್ನ ಜಾತಿ ಮತ್ತು ಪರಿಚಿತ ಸೀಮಾ ವಲಯವನ್ನು ದಾಟಿ ಇಡೀ ಸಮಾಜ ಮತ್ತು ಒಟ್ಟಾರೆ ಬದುಕಿನ ಬಗ್ಗೆ ಚಿಂತಿಸಿ ಕೃತಿ ರಚಿಸಿದ ಎಷ್ಟು ಜನ ಮಹತ್ವದ ಕವಿಗಳು ಮತ್ತು ಲೇಖಕರನ್ನು ಭಾರತ ನೀಡಿದೆ? ಯುರೋಪ್‌ ಮೂಲದ ಕವಿಗಳು ಮತ್ತು ಲೇಖಕರ ತರಹವೇ ಇತಿಹಾಸದ ಗತಿ ಮತ್ತು ಕಾಲಕ್ಕೆ ಸ್ಪಂದಿಸಿ ಕೃತಿ ರಚಿಸಲಾಗದಿರಲು ಅವರು ಮುಲಾಜಿಲ್ಲದೆ ಒಪ್ಪಿಕೊಳ್ಳಬೇಕಾಗಿ ಬಂದ ಜಾತಿಯ ಚೌಕಟ್ಟು ಮತ್ತು ಎಲ್ಲೆ ಕಟ್ಟುಗಳ ಮಿತಿ ಕಾರಣವಾಗಿರಬಹುದೇ?

ಅರಿವು ಮತ್ತು ತಿಳುವಳಿಕೆ ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿಭೆ ಮತ್ತು ಸಂಪನ್ನತೆ ಮೂಲವಾದ ಅವು ಯಾರಲ್ಲಿ ಯಾವ ಪ್ರಮಾಣದಲ್ಲಿ ಹುದುಗಿರುತ್ತದೆಯೊ ಹೇಳಲು ಬರುವುದಿಲ್ಲ. ಆದರೆ ಆ ಪ್ರತಿಭೆ ಮತ್ತು ಮೇಧಾವಿತನ ಪ್ರಕಟವಾಗಲು ಬೇಕಾದ ಪರಿಸರ ಮತ್ತು ವಾತಾವರಣವಿರಬೇಕು. ಅವುಗಳ ಬೆಳವಣಿಗೆಗೆ ಅಡ್ಡಿಯಾಗುವ ಯಾವುದೇ ಆತಂಕ, ನಿರ್ಬಂಧ ಮತ್ತು ಅಂತರ ಇರಕೂಡದು. ಅದು ಬರಬೇಕಾದರೆ ಇಡೀ ಬದುಕು ಸೃಜನಶೀಲವಾಗಬೇಕು. ಆ ಎಲ್ಲವನ್ನು ಬಸವಣ್ಣ ‘ಜಂಗಮಕ್ಕಳಿವಿಲ್ಲ’ ಎಂಬ ಒಂದೇ ಮಾತಿನಲ್ಲಿ ಹೇಳಬಯಸುತ್ತಾರೆ. ಇಡೀ ಮನುಷ್ಯ ಸಮಾಜ ಮತ್ತು ಬದುಕು ಶಿವಾಲಯವಾದಾಗ ಮಾತ್ರ ಆ ತರಹದ ಜಂಗಮ ಶೀಲ ಸೃಜನಶೀಲತೆ ಸಾಧ್ಯ:

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಅಂತಹ ಬದುಕಿನ ಹಿಂದಿನ ಬಹುದೊಡ್ಡ ಶಕ್ತಿ ಮತ್ತು ಕಾಣ್ಕೆಯಾಗಿ ಬಸವಣ್ಣ ಆಧ್ಯಾತ್ಮವನ್ನು ಪುನರ್‌ ಅರ್ಥೈಸಿಕೊಂಡರು: ಎಂದೋ ಒಂದು ದಿನ ಬದುಕಿನ ಕೊನೆಯಲ್ಲಿ ಪಡೆಯುವ ಮೋಕ್ಷ, ನಿರ್ವಾಣ ಅಥವಾ ಅರಿವು ಮಾತ್ರವಲ್ಲ; ಬದುಕಿನ ಹೆಜ್ಜೆ ಹೆಜ್ಜೆಯಲ್ಲೂ ಹಂತಹಂತದಲ್ಲೂ ಗಳಿಗಳಿಗೆಯಲ್ಲೂ ವ್ಯಕ್ತವಾಗುವ, ಪರೀಕ್ಷೆಗೊಳಗಾಗುವ ಮತ್ತು ಶೋಧಿತವಾಗುವ ಶಿಸ್ತು. ಅನುಭವ, ಕಾಣ್ಕೆ, ದರ್ಶನ ಮತ್ತು ನಡವಳಿಕೆ ಅದರಿಂದ ಹೊರತಾಗಿರಲು ಸಾಧ್ಯವಿಲ್ಲ. ಆ ಎಲ್ಲವನ್ನೂ ಬದುಕಿನಲ್ಲಿ ಬದುಕುತ್ತಲೆ ಕಂಡುಕೊಂಡು ಬದುಕಬೇಕಾಗುತ್ತದೆ. ಕಾಲನಿಗೆ ಸ್ಪಂದಿಸುವ ವಿಚಾರದಲ್ಲಿ ಯುರೋಪ್‌ ಮೂಲದ ಕವಿಗಳು ಮತ್ತು ವಿಜ್ಞಾನಿಗಳಿಗೆ ಹತ್ತಿರ ಬರುವ ಬಸವಣ್ಣ ಆ ತನ್ನ ಗುಣದಿಂದಾಗಿಯೇ ಭಾರತೀಯ ಸಂದರ್ಭದಲ್ಲಿ ನಡುಗಡ್ಡೆಯ ತರಹದ ಅಚಾನಕ್‌ ಬೆಳವಣಿಗೆಯಾಗಿ ಕಾಣಿಸತ್ತಾದರೂ, ನಿಯತಿಯ ವಿಶಾಲ ಕ್ರಮಾಗತ ಬೆಳವಣಿಗೆಯ ತುಣುಕಿನ ಸೆಳೆಮಿಂಚು ಅವರನ್ನು ಚೋದಿಸಿರಬಹುದು. ಸಮಾನತಾ ತತ್ವ ಆಧಾರಿತ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ತತ್ವವನ್ನು ತಮಗೆ ಇಷ್ಟಬಂದ ರೀತಿಯಲ್ಲಿ ತಿರುಚಲು ಅನೇಕ ಶಕ್ತಿಗಳು ಪ್ರಯತ್ನಿಸಬಹುದಾದರೂ, ಅದನ್ನೊಂದು ಜೀವನ ಕ್ರಮ, ತತ್ವ ಮತ್ತು ಸಿದ್ಧಾಂತವನ್ನಾಗಿ ತಾತ್ವಿಕವಾಗಿಯಾದರೂ ಸ್ವೀಕರಿಸುವ ಅನಿವಾರ್ಯವನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೆ ಇರುವುದಿಲ್ಲ ಎಂಬ ವಿಶ್ವನಿಯಮವನ್ನು ಬಹಳ ಬೇಗನೆ ಕಂಡುಕೊಂಡುವರು ಬಸವಣ್ಣ.

ಅಂತಹ ಸಮಾನತೆಯ ತತ್ವವನ್ನು ತಾತ್ವಿಕವಾಗಿಯಾದರೂ ಒಪ್ಪಿಕೊಂಡ ಶಕ್ತಿಗಳು ಬಂದೆರಗಿದಲ್ಲಿ ಜಾತಿಶ್ರೇಣಿಯ ಅಚ್ಚುಗಳಲ್ಲಿ ತುಂಡರಿಸಿ ಛಿದ್ರವಾಗಿ ಹೋಗಿರುವ ಭಾರತೀಯ ಸಮಾಜ ಮತ್ತು ಬದುಕು ಅವುಗಳನ್ನು ಎದಿರಿಸುವ ಸ್ಥಿತಿಯಲ್ಲಿಲ್ಲ ಎಂಬುದು, ಬಸವಣ್ಣ ನಂತಹಸಂವೇದನಾಶೀಲ ಮತ್ತು ಗತಿಶೀಲ ಮನಸ್ಸಿಗೆ ಗೋಚರಿಸಿರಬಹುದು. ಅಷ್ಟರಲ್ಲಾಗಲೇ ಸಮಾನತೆಯನ್ನು ತತ್ವವನ್ನಾಗಿ ಒಪ್ಪಿಕೊಂಡ ಇಸ್ಲಾಂನ ಆಗಮನದ ಸೂಚನೆಗಳು ದಟ್ಟವಾಗಿದ್ದವು. ಸಮಾನತೆಯನ್ನು ತಾತ್ವಿಕವಾಗಿಯಾದರೂ ಒಪ್ಪಿಕೊಳ್ಳಲು ಆ ಕಾರಣವೆ ಆ ವಿಶ್ವಕ್ರಮಕ್ಕೆ ಅನುಗುಣವಾದ ಬೆಳವಣಿಗೆ.

ಬಸವಣ್ಣ ಮತ್ತು ವಚನಕ್ರಾಂತಿಯ ಆಗಮನವನ್ನು ಮತ್ತಾವುದೆ ರೀತಿಯಲ್ಲಿಯೂ ಅರ್ಥೈಸಲು ಬರುವುದಿಲ್ಲ. ವ್ಯಾಸ – ವಾಲ್ಮೀಕಿಯರ ನಂತರ ವಿಶ್ವದ ನಿಯತಿ, ಕಾಲನಗತಿ ಹಾಗೂ ಇತಿಹಾಸದ ಪ್ರಜ್ಞೆಯ ಜತೆಗಿನ ಸಂಪರ್ಕ ಕಳೆದುಕೊಂಡು ತನ್ನದೇ ಆದ ಜಗತ್ತಿನ ಬಾಂಡಗೆಯಲ್ಲಿ ಮುಳುಗಿದ್ದ ಭಾರತಕ್ಕೆ ವಿಶ್ವಪ್ರಜ್ಞೆಯ ಜತೆಗಿನ ಆ ಸಂಪರ್ಕ ಸೇತುವನ್ನು ಮತ್ತೆ ತುಂಬಲು ಯತ್ನಿಸಿದ ನಿಸ್ಸೀಮ. ಬಹುಮುಖ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ತುಂಬಿದ ವ್ಯಕ್ತಿಗಳು ಅಪರೂಪವಾದ ಭಾರತದಲ್ಲಿ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಒಳನೋಟದ ರಕ್ತ ಜತೆ ಜತೆಯಾಗಿ ಸಂಚರಿಸುವಂತೆ ಮಾಡಿದ ಸುಂದರ ಹಂಬಲಗಳ ಕಲಾವಿದ ಮತ್ತು ಸಮಾಜದ ಗತಿಯನ್ನೇ ಬದಲಿಸ ಹೊರಟ ಕ್ರಾಂತಿಕಾರ. ಅಂತಹಬಹುಮುಖಿ ಮತ್ತು ಸಮಾಹಿತ ವ್ಯಕ್ತಿತ್ವದ ಚಿತ್ರಣ ನೀಡಿದ ಅಥವಾ ಕಲ್ಪಿಸಿಕೊಂಡ ಕವಿಗಳು ಭಾರತದಲ್ಲಿ ಇದ್ದಾರೆಯೆ?

ಬಸವಣ್ಣ ಮಾತನಾಡಿದ್ದು ಮತ್ತು ಬರೆದುದು ಕನ್ನಡವಾದರೂ ಅವರ ಕೆಲ ಗ್ರಹಿಕೆ, ತಿಳುವಳಿಕೆ ಮತ್ತು ಕ್ರಿಯಾಶೀಲತೆ ಅಗ್ರಾಹ್ಯವಾಗುಳಿಯಲು, ಅವರು ಬಂದ ಕಾಲ ಮತ್ತು ಸಂದರ್ಭ ಕುರಿತಂತೆ ಬರೆಯಲಾದ ಬಹುತೇಕ ಕೃತಿಗಳು ಯಶಸ್ಸು ಕಾಣದಿರಲು, ಕಾರಣ ಅಲ್ಲಿರುವಂತೆ ತೋರುತ್ತದೆ. ಹೊರಗಿನಿಂದ ಬಂದೆರಗಬಹುದಾದ ಆಕ್ರಮಣ ಮತ್ತು ದಾಳಿ ಎದುರಿಸಿ, ಅವರಿಂದ ಪಡೆಯಬಹುದಾದ ಸಂಪರ್ಕ ಮತ್ತು ಅರಿವನ್ನು ಅವರ ಆಳ್ವಿಕೆಗೆ ಒಳಗಾಗದೆ ಪಡೆಯುವಂತೆ ಭಾರತವನ್ನು ಎಚ್ಚರಿಸಿ ಸಾಮೂಹಿಕ ಮನಸ್ಸನ್ನು ಸಜ್ಜುಗೊಳಿಸುವ ಕಾಯಕ ಮಾಡಿದ ಬಸವಣ್ಣ, ವಿವೇಕಾನಂದ – ಮಹಾತ್ಮಾಗಾಂಧೀಜಿ ಬರುವುದಕ್ಕೂ ಮೊದಲೇ ಆ ಪ್ರಯತ್ನ ನಡೆಸಿದ್ದರು. ಕಾಲ ಮತ್ತು ಇತಿಹಾಸದ ಗತಿಯ ಜತೆಗಿನ ಸ್ಪಂದನವನ್ನು ಪುನರ್‌ ಸ್ಥಾಪಿಸಿಕೊಳ್ಳಲು ಭಾರತದ ಜನ ಮುಂದಾದಲ್ಲಿ ಮಾತ್ರ ಅದು ಸಾಧ್ಯ ಎಂಬುದು ಬಸವಣ್ಣನವರ ಬದುಕಿನ ಸಂದೇಶದ ಒಟ್ಟಾರೆ ಸಾರ. ಹೋಮರನ ತಿಳುವಳಿಕೆಯೂ ಅದೇ ಆಗಿತ್ತು. ಬದುಕಿನ ಬಗೆಗಿನ ಮನುಷ್ಯ ಜನಾಂಗದ ದೃಷ್ಟಿಕೋನವನ್ನೇ ಬದಲಿಸಿದ ರಿಲಿಜನ್ನುಗಳ ನಡುವಿನ ಪೈಪೋಟಿ ಮತ್ತು ಪರಿಣಾಮವಾಗಿ ರೂಪುಗೊಂಡ ಸಂಘರ್ಷದ ಹಿನ್ನೆಲೆಯಲ್ಲಿ ಅವರ ಆಗಮನದ ಮಹತ್ವವನ್ನು ಗ್ರಹಿಸುವುದು ಉತ್ತಮ: ಏಕೆಂದರೆ ವಿಜ್ಞಾನ ಆಧಾರಿತ ತಂತ್ರಜ್ಞಾನದ ಪ್ರಗತಿ ಬರುವುದಕ್ಕೆ ಎಷ್ಟೋ ಶತಮಾನಗಳಿಗೂ ಮೊದಲೇ ತಪ್ಪೋ ಸರಿಯೋ ದೃಷ್ಟಿಕೋನ ರೂಪಿಸುವ ಅಥವಾ ಬದಲಿಸುವ ದಂಧೆಯಲ್ಲಿ ರಿಲಿಜನ್ನುಗಳು ಮತ್ತು ಅದರ ಪ್ರತಿಪಾದಕರು ನಿರತರಾಗಿದ್ದರು. ಆ ಹಳೆಯ ಸಂಘರ್ಷ ಹೊಸ ರೂಪ ಮತ್ತು ತಿರುವು ಪಡೆದುಕೊಳ್ಳಲು ತಂತ್ರಜ್ಞಾನ ತನ್ನ ಕೈಲಾದ ನೆರವು ನೀಡಿದೆ, ಅದು ಬೇರೆ ವಿಚಾರ.

ಭಾರತದಲ್ಲಿ ಪರಂಪರೆ ಕ್ರಿಯಾಶೀಲವಾಗಿರಬಹುದಾದ ರೀತಿಗೆ ಬಸವಣ್ಣ, ಕನಕದಾಸ, ಪುರಂದರದಾಸ, ಮಾಸ್ತಿ, ಶಿವರಾಮ ಕಾರಂತ, ಕುವೆಂಪು, ಗೋಪಾಲಕೃಷ್ಣ ಅಡಿಗ ಮತ್ತು ಅನಂತಮೂರ್ತಿ ನಡುವೆ ಕಾಣಸಿಗುವ ಕೆಲ ಸಮಾನ ತಂತುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಜಾತಿ ಎಲ್ಲೆ ದಾಟಿ ಕೃತಿ ರಚಿಸಲು ಪ್ರಯತ್ನಿಸಿದ ಕಾರಂತರಿಗೂ ಚೋಮ, ಕುಡಿಯರು, ಐತಾಳರು ಮತ್ತು ಶಂಕರಯ್ಯ ಮೊದಲಾದವರ ಜಗತ್ತನ್ನು ಒಂದೇ ಪಾತಳಿಯಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಒಡೆಯರು ಮತ್ತು ಆಳುಗಳ ಬದುಕು ಒಂದರಲ್ಲೊಂದು ಅಂತರ್ಗತವಾಗಿ ಸಾಗುವುದನ್ನು ಅತ್ಯಂತ ಆಪ್ತತೆಯಿಂದ ಕಲಾತ್ಮಕವಾಗಿ ನೀಡುವ ‘ಮಲೆಗಳಲ್ಲಿ ಮದುಮಗಳು’ವಿನ ಕುವೆಂಪು, ಅದೆ ಬ್ರಾಹ್ಮಣರ ಬದುಕಿನ ಚಿತ್ರಣ ನೀಡುವಾಗ ಪ್ರಕಟಿಸುವ ಅಸಹನೆ, ಬರಹದ ಬದುಕಿನಲ್ಲಿ ಎದುರಿಸಿದ ಮಿತಿ ಮತ್ತೊಂದು ರೂಪವಷ್ಟೆ. ಆ ಕಾರಣದಿಂದಾಗಿಯೇ ಏನೋ, ಪಾದ್ರಿ ಜೀವರತ್ನಯ್ಯ ಮತ್ತು ಚಿಲ್ಲರೆ ಕೆಲಸಗಳಲ್ಲಿ ನಿರತರಾಗುವ ಕೆಲ ‘ಸಾಬಿ’ಗಳನ್ನು ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಸಂಸ್ಕೃತಿಯ ಪ್ರತಿನಿಧಿಗಳಾಗಿ ಕಾಣುವ ಶೃಂಖಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮತಾಂತರಕ್ಕೆ ಪ್ರಯತ್ನಿಸುವ ಪಾದ್ರಿ ಜೀವರತ್ನಯ್ಯ ಕ್ರಿಶ್ಚಿಯನ್‌ ಸಂಸ್ಕೃತಿಯ ಪ್ರತಿನಿಧಿಯಾಗುವುದು ಸಾಧ್ಯವಿಲ್ಲವಾದಂತೆ, ಅಲ್ಲಿ ಬರುವ ಲುಂಗಿ ಸಾಬಿ, ಪುಡಿ ಸಾಬಿ ಮೊದಲಾದವರು ಇಸ್ಲಾಂ ಸಂಸ್ಕೃತಿ ಮತ್ತು ನಾಗರಿಕತೆಯ ಸಮರ್ಥ ಪ್ರತಿಬಿಂಬಗಳಾಗಲು ಸಾಧ್ಯವಿಲ್ಲ. ಆಯಾ ಜನಾಂಗದ ಒಂದು ಅಧ್ಯಾಯ ಅಥವಾ ಮುಖವಾಗಿ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ. ಬಹಳ ವಿಶಾಲ ಅರ್ಥದಲ್ಲಿ ಹಿಂದೂ, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವಿನ ಸಂಘರ್ಷದ ರೂಪವನ್ನು ಅದರ ನಿರೀಕ್ಷಿತ ಮಟ್ಟ ಮತ್ತು ಪ್ರಮಾಣದಲ್ಲಿ ಅಲ್ಲಿ ಕಾಣಲಾಗುವುದಿಲ್ಲ. ಜಾತಿ ವ್ಯವಸ್ಥೆ ಎಂಬುದು ಪ್ರತಿಭೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ.

ಆ ಪ್ರಜ್ಞೆಯನ್ನು ತಮ್ಮ ಬರವಣಿಗೆಯ ಒಂದು ಭಾಗವಾಗಿ ಸ್ವೀಕರಿಸಿ ಕೃತಿ ರಚಿಸಲು ಪ್ರಯತ್ನಿಸಿದ ಅನಂತಮೂರ್ತಿಯವರ[2] ಕೈಯಲ್ಲೂ ಆ ಶೃಂಖಲೆಯಿಂದ ಹೊರಬರಲಾಗಲಿಲ್ಲ. ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಎಲ್ಲರ ತರಹವೇ ಬಾಯಿಬಿಟ್ಟು ತಹತಹಿಸುವ ದುರ್ವಾಸಪುರದ ಸಾಂಪ್ರದಾಯಿಕ ಬ್ರಾಹ್ಮಣರ ಚಿತ್ರಣ ನೀಡುವ ಮುಖೇನ ಬ್ರಾಹ್ಮಣರು ಸಹ ಬದುಕಿನ ಮೋಹ ಮತ್ತು ಸೆಳೆತದಿಂದ ಬಂಧಿತರಾದವರು ಎಂದು ಪ್ರತಿಪಾದಿಸಲು ಹವಣಿಸುವ ‘ಸಂಸ್ಕಾರ’ ಕಾದಂಬರಿ ಹೆಚ್ಚಾಗಿ ಗಮನಿಸುವುದು, ಬ್ರಾಹ್ಮಣರ ಸಂಸ್ಕೃತಿ – ವಿಹೀನತೆಯನ್ನು. ಪ್ರಮುಖ ವ್ಯತ್ಯಾಸವೊಂದನ್ನು ಗಮನಿಸಿ ಮುಂದುವರಿಯುವುದು ಉಚಿತ. ಸೃಜನಶೀಲತೆಗೆ ಪೂರಕವಾದ ಮಾನವೀಯ ಸಮಾನತಾ ನೆಲೆಗಟ್ಟನ್ನು ಕಂಡುಕೊಳ್ಳುವುದಷ್ಟೆ ಬಸವಣ್ಣನವರಿಗೆ ಮುಖ್ಯವಾಗುತ್ತದೆ. ಹಾಗಾಗಿ ಬ್ರಾಹ್ಮಣರು ಅಥವಾ ಮತ್ತಾವುದೇ ಜಾತಿಯ ಜನರ ಅವಗುಣ ಅಥವಾ ಸದ್ಗುಣಗಳು ಅವರಿಗೆ ಅಷ್ಟು ಪ್ರಮುಖವಾಗುವುದಿಲ್ಲ. ಎಲ್ಲರೂ ಮನುಷ್ಯರು ಎಂಬ ಮಾನವ ಪಾತಳಿಯನ್ನಷ್ಟೆ ಗುರುತಿಸಿ ಕ್ರೀಯಾಶೀಲರಾಗಲು ನೋಡುತ್ತಾರೆ. ಅವಗುಣಗಳು ಅಥವಾ ಸದ್ಗುಣಗಳು ಯಾವುದೆ ಒಂದು ಜಾತಿಯ ಜನರಿಗೆ ಸೀಮಿತ ಅಥವಾ ವಿಶೇಷವಾದುವೇನಲ್ಲ, ಒಟ್ಟಾರೆ ಮಾನವೀಯತೆಯ ಒಂದು ಭಾಗ ಎಂಬ ಅತ್ಯುತ್ತಮ ಮಟ್ಟದ ವಿವೇಕ ಮತ್ತು ತಿಳುವಳಿಕೆಯ ಎತ್ತರವನ್ನು ತಲುಪಿದವರು ಅವರು. ಆದರೆ ಬ್ರಾಹ್ಮಣರ ಶ್ರೇಷ್ಠತೆಯ ಸುತ್ತ ತಮ್ಮ ಗಮನವನ್ನು ಅನಂತಮೂರ್ತಿ ಕೇಂದ್ರೀಕರಿಸುತ್ತಾರೆ.

“ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ” ಎಂಬುದಾಗಿ ಗೋಪಾಲಕೃಷ್ಣ ಅಡಿಗರ ತರಹ ಬಸವಣ್ಣನವರು ಎಲ್ಲೂ ಹಲುಬಲು ಹೋಗಿಲ್ಲ ನಿಜ. ಆದರೆ ಅಡಿಗರ ಆ ಸಾಲು ಅವರ ತಲೆಮಾರಿನ ಪರಿಸ್ಥಿಗೂ ಹೆಚ್ಚಾಗಿ ಬಸವಣ್ಣನವರ ಕಾಲದ ಬಗ್ಗೆ ಮಾತನಾಡುತ್ತದೆ ಎಂದರೆ ನಂಬಲು ಕಷ್ಟವಾಗಲೂಬಹುದು. ಕಾಲ ಮತ್ತು ಇತಿಹಾಸದ ಗತಿ ಸಾಗಿಬಂದ ರೀತಿ ಅದಾಗಿದೆ. ಆ ಬೆಳವಣಿಗೆ ಮತ್ತು ಸಾಧ್ಯತೆಯನ್ನು ೧೨ನೇ ಶತಮಾನಕ್ಕಾಗಲೇ ಬಸವಣ್ಣ ಅಂದಾಜು ಮಾಡಿದ್ದರು ಎಂಬುದು ಬರಿದಾದ ಊಹನೆಯಲ್ಲ. ಅಂಥ ದೂರದೃಷ್ಟಿಯ ಆಧ್ಯಾತ್ಮಿಕ ಅನುಭವದ ಫಲವೇ ಅವರ ಬದುಕು ಮತ್ತು ಹೋರಾಟ; ಆಗಲೇ ಆ ಹಾದಿಯಲ್ಲಿ ಸಾಗುತ್ತಿದ್ದ ಭಾರತವನ್ನು ಎಚ್ಚರಿಸಿ ಆ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಅದೆ ಭಾರತದ ಮನಸ್ಸನ್ನು ಸಿದ್ಧಗೊ೨ಳಿಸುವ ಕೆಲಸಕ್ಕೆ ಮೊದಲು ಮಾಡಿದವರೆ ಬಸವಣ್ಣ. ಪಶ್ಚಿಮ ಬುದ್ಧಿಯಾದನಂತರ ಅದೆ ಪಶ್ಚಿಮದ ಬುದ್ಧಿಯನ್ನು ಅನುಸರಿಸುತ್ತಲೆ ಆ ವಿರುದ್ಧ ಹಳಹಳಿಸುವ ಚಡಪಡಿಕೆ ಪ್ರದರ್ಶಿಸುವುದಕ್ಕೂ, ಆ ಸ್ಥಿತಿ ಬರುವುದಕ್ಕೆ ಎಷ್ಟೋ ಶತಮಾನ ಮೊದಲೆ ಅದನ್ನು ಗ್ರಹಿಸಿ ಆ ವಿರುದ್ಧ ಸಿದ್ಧಗೊಳ್ಳಲು ನಡೆಸುವ ಪ್ರಯತ್ನಗಳಿಗೂ ಅಂತರವಿಲ್ಲವೆ? ಭಾರತ ಪ್ರಸಾದವೆಂಬಂತೆ ಸ್ವೀಕರಿಸಬೇಕಾಗಿ ಬಂದ ಪಶ್ಚಿಮ ಬುದ್ಧಿಯ ಬಗ್ಗೆ ಮಾತ್ರ ಅಡಿಗರು ಮಾತಾಡುತ್ತಾರೆ. ಅದರ ಹಿಂದಿನ ಅಧ್ಯಾಯಯದ ಕತೆಯಾದ ಇಸ್ಲಂಆ ಬುದ್ಧಿಯ ಬಗ್ಗೆ ಮಾತನಾಡುವುದಿಲ್ಲ; ಇಸ್ಲಾಂ ಬುದ್ಧಿಯ ಹಂತವನ್ನು ಮನಗಾಣದೆ ಪಶ್ಚಿಮ ಬುದ್ಧಿಯಾಗುವುದು ಸಾಧ್ಯವಿರಲಿಲ್ಲ. ಆ ಎಲ್ಲಾ ಸಾಧ್ಯತೆಗಳನ್ನು ಗ್ರಹಿಸಿದ ಸೃಜನಶೀಲ ಮನಸ್ಸೇ ಬಸವಣ್ಣ; ಸೃಜನಶೀಲತೆ ಎಂದರೆ ಛಂದೋಬದ್ಧವಾಗಿ ಪದ್ಯ ಬರೆಯುವ ಸಾಮರ್ಥ್ಯ ಮಾತ್ರವಲ್ಲ ಎಂಬುದನ್ನು ಬದುಕಿ ಬರೆದು ತೋರಿಸಿದವರು.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ

– ಎಂಬ ಅವರ ವಚನವನ್ನು ಈ ಹಿನ್ನೆಲೆಯಲ್ಲಿ ಮರು – ಓದುವಿಕೆಗೆ ತೆರೆಯಬೇಕು; ಅಂತಹ ಹಲವಾರು ವಚನಗಳಲ್ಲಿ ಬಸವಣ್ಣ ಬೆಳಗಿದ್ದಾರೆ. ಅವರ ವಚನಗಳಲ್ಲಿ ಬರುವ ಕೂಡಲ ಸಂಗಮದೇವ, ಖಚಿತ ಭೌಗೋಳಿಕ ಹಿನ್ನೆಲೆ ಪಡೆದ ಸ್ಥಾಪಿತ ದೇವರ ಕಲ್ಪನೆಯಾಗಿ ಮಾತ್ರ ಉಳಿಯುವುದಿಲ್ಲ. ಪ್ರತಿಯೊಂದು ವಚನದ ಸಂದರ್ಭ ಮತ್ತು ಅಲ್ಲಿ ಅಭಿವ್ಯಕ್ತಿಗೊಳ್ಳುವ ವಸ್ತುವಿನ ಸಾಂದ್ರತೆ, ಅನುಭವ ಮತ್ತು ದರ್ಶನಕ್ಕನುಗುಣ ವಿಭಿನ್ನ ಅರ್ಥಛಾಯೆಗಳನ್ನು ಸಂಪಾದಿಸಿಕೊಳ್ಳುತ್ತಾ ಸಾಗುತ್ತದೆ. ವಿಶ್ವಪ್ರಜ್ಞೆ ಕನ್ನಡ ಮನಸ್ಸಿನ ರೂಪದಲ್ಲಿ ಅವತರಿಸುವ, ಮತ್ತು ಅದೇ ಕನ್ನಡ ಪ್ರಜ್ಞೆಯು ವಿಶ್ವ ಮನಸ್ಸಾಗಿ ಬಿಡುವ ಪಾಕಕ್ಕೆ ಉತ್ತಮ ನಿದರ್ಶನ.

ಉಳ್ಳವರು ನಿರ್ಮಿಸುವ ಶಿವಾಲಯ ಮತ್ತು ಇಲ್ಲದವರು ತಾವೆ ಜಂಗಮ ಶಿವಾಲಯವಾಗಿ ಬೆಳೆಯುವ ಪರಿಕಲ್ಪನೆಗಳನ್ನು ಮುಂದಿಡುತ್ತಲೆ ಅವುಗಳ ನಡುವಿನ ಒಳಹರಿವು ಮತ್ತು ಅಂತರ ಸಂಬಂಧವನ್ನು ಗ್ರಹಿಸಲು ನಿಲುಕಿಸುತ್ತಾರೆ; ಒಂದಿಲ್ಲದೆ ಮತ್ತೊಂದರ ಇರುವಿಕೆಯನ್ನು ಕಲ್ಪಸಿಕೊಳ್ಳಲು ಪ್ರಯತ್ನಿಸಬೇಕು. ಸ್ಥಾವರ ಶಿವಾಲಯ ಇಲ್ಲದ ಸ್ಥಿತಿಯಲ್ಲಿ ಜಂಗಮ ಶಿವಾಲಯವಾಗಿ ರೂಪುಗೊಳ್ಳುವ ಅಗತ್ಯ ಎದುರಾಗದೆ ಹೋಗಿಬಿಡಬಹುದು. ಅಳಿಯುವ ಸ್ಥಾವರ ಶಿವಾಲಯವನ್ನು ಕೆಡವಿ ನಿರ್ಮಿಸಲು ಮತ್ತು ನಿರ್ಮಿಸಿ ಕೆಡವಲು ಜಂಗಮ ಶಿವಾಲಯದ ಕಲ್ಪನೆ ನಿರಂತರ ಬೇಕು. ಇಡೀ ಕಾಯ ದಂಡಿಗೆಯಾದಾಗ ಮಾತ್ರ ದೇಹ ದೇಗುಲವಾಗಲು ಬರುತ್ತದೆ. ಸುಶ್ರಾವ್ಯವಾದ ರಾಗ ನುಡಿಸಲು ಸಿದ್ಧವಾದ ದೇಹ – ದೇಗುಲ ಮತ್ತು ಆ ದೇಹ ದೇಗುಲವಾದ ಕಾಯ – ದಂಡಿಗೆಯಿಂದ ಬತ್ತೀಸ ರಾಗವ ಪಾಡಯ್ಯ ಎಂಬುದಾಗಿ ಕೂಡಲ ಸಂಗಮದೇವನಲ್ಲಿ ಮೊರೆಯಿಡುವ ಬಸವಣ್ಣ, ಬತ್ತೀಸ ರಾಗ ಎಂಬ ಒಂದೇ ಮಾತಿನಿಂದ ಅಸಂಖ್ಯಾತ ಮತ್ತು ವೈವಿಧ್ಯಮಯತೆಯ ಕಲ್ಪನೆಯನ್ನು ಬಿಚ್ಚುವ ರೀತಿ ಅಸಾಮಾನ್ಯವಾದುದು.

ಇಡೀ ದೇಹ ಮತ್ತು ಮನಸ್ಸಿನ ಕಣಕಣವೂ ಅಣಿಗೊಂಡು ಸಿದ್ಧವಾದಾಗ ಮಾತ್ರ ಅದು ಸಾಧ್ಯ. ಹಲವಾರು ‘ಸಂಗಮ’ ಮತ್ತು ಹಲವಾರು ‘ಕೂಡು’ವಿಕೆಗಳ ಫಲವಾಗಿ ನಿರಂತರ ಹರಿಯುವ ಕೂಡಲಸಂಗಮದೇವನು ಕಾಲ ಮತ್ತು ಇತಿಹಾಸದ ಗತಿಯ ನಿರಂತರತೆಗೆ ಸಂಕೇತ; ನಿಯತಿ ಹೊರತಾಗಿರಲು ಸಾಧ್ಯವೇ? ಅದನ್ನೆಲ್ಲ ಒಳಗೊಂಡುದೆ ದೇವರ ಕಲ್ಪನೆಯಲ್ಲವೆ? ಬತ್ತೀಸ ರಾಗವ ಪಾಡಯ್ಯ ಎಂಬುದಾಗಿ ಕೂಡಲ ಮತ್ತು ಸಂಗಮ ದೇವರಾದ ಕೂಡಲ ಸಂಗಮದೇವನು ಪ್ರಾರ್ಥಿಸುವ ಅವರು ಅಷ್ಟಕ್ಕೆ ನಿಲ್ಲದೆ ಮುಂದುವರಿದು, ‘ಉರದಲೊತ್ತಿ ಬಾರಿಸು” ಎಂಬ ಮತ್ತೊಂದು ವಿನಂತಿ ಮುಂದಿಡುತ್ತಾರೆ.

ಮೊದಲ ಕೋರಿಕೆಯನ್ನು ಮನ್ನಿಸಿದ ಕೂಡಲಸಂಗಮದೇವ, ಅವರ ಎರಡನೆ ವಿನಂತಿಯನ್ನು ಮಾನ್ಯ ಮಾಡಲೇ ಇಲ್ಲ. ಒಂದು ಪಕ್ಷ ಮನ್ನಿಸಿದ್ದಲ್ಲಿ, ಬಸವಣ್ಣನವರ ಬದುಕು, ಆ ಮುಖೇನ ಇಡೀ ಭಾರತ ಮತ್ತು ಕೊಂಚಮಟ್ಟಿಗಾದರೂ ಜಗತ್ತಿನ ಇತಿಹಾಸದ ದಿಕ್ಕು ಬದಲಾಗುವುದು ಅನಿವಾರ್ಯವಾಗುತ್ತಿತ್ತು ! ಆ ರೀತಿ ಅತ್ಯಂತ ಉದಾರ ಮನ್ನಣೆಯನ್ನು ಭಾರತಕ್ಕೆ ನೀಡಲು ಕಾಲ ಅಥವಾ ನಿಯತಿ ತಯಾರಿಲ್ಲದೆ ಇದ್ದುದು ಬಸವಣ್ಣನವರ ಆ ಸ್ಥಿತಿಗೆ ಕಾರಣವಾಯಿತೆ? ಅದು ಕಾಲನ ಪಕ್ಷ ಪಾತದ ಧೋರಣೆಯೇ ಅಥವಾ ನ್ಯಾಯಯುತ ನಡವಳಿಕೆಯೆ? ಕನ್ನಡದಂತಹ ಭಾಷಾ ಸಮೂಹಗಳು ಮೂರು ಅಥವಾ ನಾಲ್ಕನೆ ದರ್ಜೆಯ ಪ್ರಜೆಗಳೆ – ಪ್ರಕೃತಿ ಮತ್ತು ದೇವರ ಕಣ್ಣಿನಲ್ಲಿ? ಅದನ್ನು ಪ್ರಶ್ನಿಸುವ ಮನಃಸ್ಥಿತಿ ಕೂಡ ಭಾರತದ ಕವಿಗಳಿಗೆ ದಕ್ಕದೇಹೋದುದು ಅದೆ ಕಾಲ ಹಾಕಿದ ಮಿತಿಯೆ? ದೇಹ ದೇಗುಲ ಮತ್ತು ಕಾಯ ದಂಡಿಗೆಯಾಗಿದ್ದ ಬಸವಣ್ಣನವರನ್ನು ತನ್ನ ಬೆರಳ ತುದಿಯಿಂದ ಮಾತ್ರ ಸೋಂಕಿ ಸ್ಪರ್ಶಿಸಿದ ಕಾಲವೂ ಉದರಲೊತ್ತಿ ಬಾರಿಸುವ ಕೃಪೆಯನ್ನು ಯುರೋಪ್‌ ಮೂಲದ ಕವಿಗಳು ಮತ್ತು ವಿಜ್ಞಾನಿಗಳಿಗೆ ಮಾತ್ರ ಮೀಸಲಿಟ್ಟಿತೇ? ದೇಹ ದೇಗುಲ ಮತ್ತು ಕಾಯ ದಂಡಿಗೆಯಾದ ಬಸವಣ್ಣನನ್ನು ಕಾಲ ತನ್ನ ಬೆರಳ ತುದಿಯಿಂದ ಸ್ಪರ್ಶಿಸಿದ ಫಲವಾಗಿ ಬಂದಿರಬಹುದಾದ ಮುಂದಾಲೋಚನೆ ಮತ್ತು ಆಧ್ಯಾತ್ಮಿಕ ಸಂಪನ್ನತೆಯು ಪಡೆದುಕೊಳ್ಳ ಬೇಕಾಗಿದ್ದ ತಿರುವು ಕಾಣದೆ ಹೋಗಲು, ಅದೇ ಕಾಲ ಬಸವಣ್ಣನ ಎರಡನೆ ಕೋರಿಕೆಯಾದ ಉದರಲೊತ್ತಿ ಬಾರಿಸುವ ಕೃಪೆ ತೋರದೇ ಹೋದುದೇ ಕಾರಣವಾಯಿತೇ? ಅದು ಒಟ್ಟಾರೆ ವಿಶ್ವದ ನಿಯತಿಗೆ ಅನುಗುಣವಾದ ಬೆಳವಣಿಗೆಯೇ?

ವಚನಕ್ರಾಂತಿಯನ್ನು ಈ ದೇಶದ ಜನರು ತೆಗೆದುಕೊಳ್ಳಬೇಕಾದ ರೀತ್ಯನುಸಾರ ಗಂಭೀರವಾಗಿ ತೆಗೆದುಕೊಂಡಿದ್ದಲ್ಲಿ ಭಾರತದ ಇತಿಹಾಸದ ದಿಕ್ಕು ಬದಲಾಗುತ್ತಿತ್ತೆ ? ಅನ್ಯಾಕ್ರಮಣ ಮತ್ತು ವಸಾಹತುಷಾಹಿ ಆಳ್ವಿಕೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಚೀನಾದಂತೆಯೇ ಭಾರತಕ್ಕೂ ದೊರಕುತ್ತಿತ್ತೆ? ಅಥವಾ ಬಸವಣ್ಣನವರ ಆಗಮನವೂ ಬುದ್ಧ, ವಾಲ್ಮೀಕಿ ಆಗಮನದಂತೆಯೇ ಕಾಲ ಪಕ್ವವಾಗುವ ಮೊದಲೇ ನಡೆದುಹೋಯಿತೆ?

ಈನಿಯಾಸ್‌ನನ್ನು ವರ್ಣಿಸುವಾಗ ವರ್ಜಿಲ್‌ ಅಲ್ಲಲ್ಲಿ ಬಳಸುವ ಗಾಡ್‌ – ಫಿಯರಿಂಗ್‌ ಎಂಬ ಮಾತು ಉಲ್ಲೇಖಾರ್ಹ: ಗಾಡ್‌ ಎಂದರೆ ಅಲ್ಲಿ ನಿಯತಿ ಎಂಬ ಅರ್ಥವೂ ಬಂದು ಬಿಡುತ್ತದೆ. ಹಾಗಾಗಿ ಗಾಡ್‌ – ಫಿಯರಿಂಗ್‌ ಎಂದರೆ ಕಾಲ ಮತ್ತು ನಿಯತಿಯ ಸ್ಪಂದನ ಮತ್ತು ಸ್ಪರ್ಶದ ಅರಿವಿರುವ ಮನುಷ್ಯ. ಅಂತಹ ಸಂಪನ್ನತೆ ಪಡೆದಿದ್ದ ಮನುಷ್ಯ ಬಸವಣ್ಣ. ದುರದೃಷ್ಟವೆಂದರೆ, ಬಸವಣ್ಣನನ್ನು ಸ್ಪರ್ಶಿಸಿದ ಆ ಅರಿವು ಮತ್ತು ಘನವು ಸಾಮೂಹಿಕ ಸಾಮಾನ್ಯ ತಿಳುವಳಿಕೆ ಮತ್ತು ವಿವೇಕವಾಗಿ ಮಾರ್ಪಡದೆ ಹೋದುದು ‘ಶಾಕುನ್ತಲಾ ಕಾಂಪ್ಲೆಕ್ಸ್‌’ ಎಂಬ ಪರಿಭಾಷೆ ಮೂಲಕ ವಚನಕ್ರಾಂತಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ದುಷ್ಯಂತ ಕೊನೆಗಾದರೂ ಒಂದು ಆಕೆಯನ್ನು ಸ್ವೀಕರಿಸುತ್ತಾನೆ. ಬಸವಣ್ಣನಿಗೆ ಆ ಅವಕಾಶ ಭಾರತದಲ್ಲಿ ಎಂದು ದೊರಕುವುದೋ ಎಂಬ ಉದ್ಗಾರ ಹೊರಡದಿರುವುದಿಲ್ಲ:

ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೂಡಾ ಚನ್ನಬಸವಣ್ಣಾ

ಎಂಬ ಅಲ್ಲಮಪ್ರಭುವಿನ ಕೋರಿಕೆ ಇಂದಿಗೂ ಉರದಲೊತ್ತಿ ಬಾರಿಸು ಬಸವಣ್ಣನ ಪ್ರಾರ್ಥನೆಯ ತರಹವೆ ವಿನಂತಿಯಾಗಿಯಾಗಿಯೇ ಉಳಿದಿದೆ : ಬಸವಣ್ಣನ ಘನವ ಎಂದರೆ, ಕಾಲನ ನಡಿಗೆ ಅರಿತ ಬಸವಣ್ಣ ಎಂದೇ ಅರ್ಥ.

 

[1]ಏನಿ ಬಂದಿರಿ, ಹದುಳಿದ್ದಿರೆ ಎಂದರೆ
ನಿಮೈಸಿರಿ ಹಾರಿಹೋಹುದೇ?
ಕುಳ್ಳಿರೆಂದಡೆ ನೆಲ ಕುಳಿಹೋಹುದೇ?
– ಎಂಬುದಾಗಿ ಸಮಾನತೆಯನ್ನು ದಿನಿತ್ಯದ ನಡವಳಿಕೆಯಲ್ಲಿ ಸಹ ಪ್ರತಿಪಾದಿಸಿದವರು.

[2]ಭಾರತೀಯ ಪ್ರತಿಭೆಯನ್ನು ಜಾತಿ ವ್ಯವಸ್ಥೆ ನಿಯಂತ್ರಿಸುವ ವಿಚಾರ ಕುರಿತಂತೆ ದನಿ ಎತ್ತಿದ ಅನಂತಮೂರ್ತಿಯವರ ಮಾತುಗಳನ್ನು ಮುಂದೆ ಉದಾಹರಿಸಲಾಗಿದೆ.