I

ಕಾಲದ ಲೆಕ್ಕಾಚಾರದಲ್ಲಿ ವಚನಕಾರರ ಬದುಕಿನ ಅವಧಿಯನ್ನು ಕ್ರಿ. ಶ. ೧೧೦೦ ಮತ್ತು ೧೨೦೦ ನಡುವೆ ಇರಿಸಬಹುದಾಗಿದೆ. ಅದು ಜಗತ್ತಿನ ಒಟ್ಟಾರೆ ಇತಿಹಾಸದ ದೃಷ್ಟಿಯಿಂದ ಅಲ್ಲೋಲಕಲ್ಲೋಲಗಳ ಯುಗ. ಮೊದಲ ಕ್ರಿಶ್ಚಿಯನ್‌ ಕ್ರುಸೇಡ್‌ ನಡೆದುದು ೧೦೯೬ರಲ್ಲಾದರೆ, ಭಾರತದ ಮೇಲೆ ಹಲವಾರು ಬಾರಿ ದಂಡೆತ್ತಿ ಬಂದ ಘಜ್ನಿ ಮಹಮ್ಮದನು ಸತ್ತು ಅಲ್ಲಿಗೆ ೬೬ ವರ್ಷಗಳಾಗಲು ಬಂದಿದ್ದವು. ಎರಡನೆ ಕ್ರುಸೇಡ್‌ ನಡೆದುದು ೧೧೪೭ರಲ್ಲಿ ಈ ಕಡೆ ೧೧೯೨ರಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿದ ಷಹಾಬುದ್ಧಿನ್, ಭಾರತದಲ್ಲಿ ಮುಸ್ಲಿಂ ಆಳ್ವಿಕೆಗೆ ಚಾಲನೆ ನೀಡಿದ. ಆ ಕಡೆ ಇಂಗ್ಲೆಂಡಿನ ದೊರೆ ಜಾನ್‌, ಮ್ಯಾಗ್ನಕಾರ್ಟ ಒಪ್ಪಂದಕ್ಕೆ ಸಹಿ ಹಾಕಿದ್ದು ೧೨೧೫ರಲ್ಲಿ ಮಕ್ಕಳ ಕ್ರುಸೆಡ್‌ ನಡೆದ ಮೂರು ವರ್ಷಗಳ ನಂತರ. ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದ ಮೊದಲ ಮುಸ್ಲಿಂ ದಂಡನಾಯಕನಾದ ಮಲ್ಲಿಕಾಫರ್‌ನ ಸುಲ್ತಾನನಾದ ಅಲ್ಲಾವುದ್ದೀನ್‌ ಕ್ರಿ. ಶ. ೧೨೯೬ ಕಾಲಕ್ಕಾಗಲೇ ವಚನ ಕ್ರಾಂತಿ ನಡೆದು ಶತಮಾನ ಕಳೆಯಲು ಬಂದಿದ್ದಂತೆ ಕಾಣುತ್ತದೆ. ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋಗುವುದಾದಲ್ಲಿ, ಕುತುಬುದ್ದೀನ್‌ ಐಬಕ್ ದೆಹಲಿಯಲ್ಲಿ ಕುತುಬ್‌ ಮಿನಾರ್‌ ಕಟ್ಟುವ ಕಾಲದಲ್ಲಿ ೧೨೦೬ರ ಸುಮಾರು – ವಚನಕಾರರ ಆಂದೋಲನದ ಅಧ್ಯಾಯ ಮುಗಿದು ಮುಂದಿನ ಹಂತದ ಕೆಲಸವಾದ ಸಂಘಟನೆಗೆ ಚನ್ನಬಸವಣ್ಣ ಮೊದಲಾದವರ ನೇತೃತ್ವದಲ್ಲಿ ತಯಾರಿ ನಡೆದಿರಬಹುದು. ಇಡೀ ಜಗತ್ತನ್ನು ತಲ್ಲಣಗೊಳಿಸಿದ ಮಂಗೋಲರ ಚಂಗೀಸ್‌ಖಾನ್‌ ಹುಟ್ಟಿದ್ದು ಸಹ ಆ ಸುಮಾರಿನಲ್ಲಿಯೇ. ಆತನ ಕಾಲವನ್ನು ಇತಿಹಾಸದ ಪುಸ್ತಕಗಳು ೧೧೫೫ ಎಂದು ದಾಖಲಿಸುತ್ತವೆ. ಅದು ನಿಜವಿದ್ದಲ್ಲಿ ಆತ ವಚನಕಾರರ ಸಮಕಾಲೀನ ಎಂದಾಯಿತು. ಯುರೋಪಿನ ಮುಂಜಾವದ ಕೋಳಿಯಾದ ದಾಂತೆ ಹುಟ್ಟಿದ್ದು ೧೨೬೫ರ ಸುಮಾರಿನಲ್ಲಿ. ಈ ಕಡೆ ಮಧ್ಯ – ಅಮೆರಿಕ ಮತ್ತು ಮೆಕ್ಸಿಕೊ ಭಾಗದ ನಾಗರಿಕ ಸಂಸ್ಕೃತಿ ಆ ರೀತಿಯ ಎಲ್ಲ ತಲ್ಲಣ ಮತ್ತು ಕ್ಷೋಭೆಯಿಂದ ದೂರವಾಗಿ ನೆಮ್ಮದಿಯ ಪರಾಕಾಷ್ಠೆ ಕಂಡಿದ್ದ ಕಾಲವದು.

ಭಾರತದ ನೆಮ್ಮದಿ ಉಳಿಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಬಸವಣ್ಣ ಬರುವ ಕಾಲಕ್ಕಾಗಲೇ ಅದು ಸಂಪೂರ್ಣ ಕಲಕಿ ರಾಡಿಯಾಗಿ ಹೋಗಿತ್ತು. ಬಸವಣ್ಣನ ಆಗಮನ ಎಂದರೆ ಸಂಪೂರ್ಣ ಹದಗೆಟ್ಟು ಹೋಗಿದ್ದ ಹಳೆಯ ವ್ಯವಸ್ಥೆಯನ್ನು ಕೆಡವಿ ಹೊಸದನ್ನು ಕಟ್ಟುವ ಚೇತನಗಳ ಆಗಮನ ಎಂದೇ ಅರ್ಥ. ಕೇವಲ ಆಂತರಿಕ ಕಾರಣಗಳಿಂದಾಗಿ ಹದಗೆಟ್ಟಿದ್ದ ಭಾರತದ ವಿಷಮ ಪರಿಸ್ಥಿತಿಯನ್ನು ದುರಸ್ತು ಮಾಡಲು ಮುಂದಾದ ಬಸವಣ್ಣ ಆ ಕಾಯಕವನ್ನು ಒಳಗಿನಿಂದ ಮೊದಲು ಮಾಡಿದರು. ಅದನ್ನು ಆದಷ್ಟು ಬೇಗನೆ ಸರಿಪಡಿಸಿಕೊಳ್ಳಲು ಸಾಧ್ಯವಾಗದೆ ಹೋದಲ್ಲಿ ಪರಿಸ್ಥಿತಿ ಕೈಮೀರಿ ಅನ್ಯಶಕ್ತಿಗಳ ಪ್ರವೇಶಕ್ಕೆ ಅವಕಾಶವಾಗುವ ಸಾಧ್ಯತೆಗಳನ್ನು ಬಸವಣ್ಣನ ಒಳಗಣ್ಣು ಆಗಲೇ ಮುಂಗಂಡಿದ್ದಂತೆ ತೋರುತ್ತದೆ. ಆ ಕಾರಣವೋ ಏನೋ ಬಸವಣ್ಣ ಎಲ್ಲೂ ಬಾಹ್ಯ ಶಕ್ತಿಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಅಂತಹ ಬಾಹ್ಯ ಶಕ್ತಿಯನ್ನು ಎದುರಿಸಲು ಸಜ್ಜಾಗುವ ರೀತಿಯಲ್ಲಿ ತಮ್ಮ ಮನ ಮತ್ತು ಮನೆಯನ್ನು ಪುನರ್‌ ನಿರ್ಮಿಸುವ ಕೆಲಸಕ್ಕೆ ತಮ್ಮನ್ನು ತಾವು ನಿರ್ವಂಚನೆಯಿಂದ ತೊಡಿಗಿಸಿಕೊಂಡರು:

ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ (ಮೆನದೊ)ಡೆಯನಿದ್ದಾನೊ, ಇಲ್ಲವೊ?
ಇಲ್ಲ, ಕೂಡಲಸಂಗಮದೇವಾ.

ಮನೆ ಎಂಬುದನ್ನು ಇಲ್ಲಿ ಭಾರತ ಎಂದು ಕಲ್ಪಿಸಿಕೊಂಡಾಗ ಚಿತ್ರಣ ಸಮಗ್ರವಾಗುತ್ತದೆ. ಅವೆರಡೂ ಒಂದೆ. ಮನ ಇಲ್ಲದ ಮನೆ, ಮನೆ ಇಲ್ಲದ ಮನ ಲೌಕಿಕ ಬದುಕಿನಲ್ಲಿ ಸಾಧ್ಯವಿಲ್ಲ. ದೇಶ ಕೂಡ ಒಂದು ದೊಡ್ಡ ಮನೆ. ಭಾರತದ ‘ಮನ’ದೊಳಗೆ ‘ಮನೆ’ಯೊಡೆಯನಿಲ್ಲ ಎಂದು ಸತ್ಯವನ್ನು ಪರಿಭಾವಿಸುವ ರೀತಿ. ಚೈತನ್ಯವಿಲ್ಲದ ಭಾರತದ ಆ ಮನೆಗೆ ಚೈತನ್ಯ ತುಂಬಿ ಅದನ್ನು ಪುನರ್‌ – ನಿರ್ಮಿಸುವ ಕೆಲಸಕ್ಕೆ ಕೈಹಾಕಿದ ವ್ಯಕ್ತಿ ಬಸವಣ್ಣ. ಇಡೀ ಭಾರತೀಯ ಮನೆ – ಮನಸ್ಸು ಜಾತೀಯತೆಯ ವಿಷ[ಯ]ದಿಂದ ತುಂಬಿ ಹೋಗಿರುವುದನ್ನು ಅಷ್ಟು ಸೂಕ್ಷ್ಮವಾಗಿ ಗುರುತಿಸಿದ ಉದಾಹರಣೆ ಮತ್ತೊಂದಿರಲಾರದು.

ಆ ಕಾರಣವೋ ಏನೋ, ಕೆಲವರು ಬಸವಣ್ಣನನ್ನು ಜಾತಿ ವ್ಯವಸ್ಥೆಯ ಸುಧಾರಕನನ್ನಾಗಿ ನೋಡಿದರೆ, ಮತ್ತೆ ಕೆಲವರು ವಚನಕ್ರಾಂತಿಯಲ್ಲಿ ಒಬ್ಬನಾಗಿ ಕಾಣುತ್ತಾರೆ. ಇದ್ದಿರಬಹುದು, ಅದಕ್ಕೂ ಮಿಗಿಲಾಗಿ ಬದುಕಿನಲ್ಲಿ ಸೃಜನಶೀಲತೆ ಕಂಡುಕೊಳ್ಳಲು ಹೆಣಗಿದ ವ್ಯಕ್ತಿ; ಪ್ರತಿಯೊಬ್ಬ ಮನುಷ್ಯರೂ ತಮ್ಮ ಶಕ್ತಿಸಾಮರ್ಥ್ಯ, ಪ್ರತಿಭೆ ಮತ್ತು ಸಿದ್ಧತೆಗನುಗುಣ ಸೃಜನಶೀಲರಾಗಲು ಬೇಕಾದ ಪರಿಸರ ಮತ್ತು ಅವಕಾಶಕ್ಕಾಗಿ ಅವರು ಹೋರಾಟ ಮಾಡಿದಂತೆ ಕಾಣುತ್ತದೆ. ಮೂಲತಃ ಅತ್ಯಂತ ಪ್ರಖರ ಸೃಜನಶೀಲ ಕವಿ, ಕ್ರಿಯಾಶೀಲ ಚಿಂತಕ ಮತ್ತು ಬಹುಮುಖಿ ವ್ಯಕ್ತಿಯೂ ಆಗಿದ್ದ ಅವರಿಗೆ ಅದಕ್ಕೆ ಬೇಕಾದ ಸೂಕ್ತ ವಾತಾವರಣ ಭಾರತದಲ್ಲಿದ್ದ ಎಂಬುದನ್ನು ಕಂಡುಕೊಳ್ಳಲು ಬಹಳ ಕಾಲ ಬೇಕಾಗಲಿಲ್ಲ. ಬಸವಣ್ಣನಿಗೆ ಪ್ರಕೃತಿದತ್ತವಾಗಿ ಬಂದಿರಬಹುದಾದ ಬದುಕು ಮತ್ತು ಕಾಲಕ್ಕೆ ಸ್ಪಂದಿಸುವ ಗುಣ, ಅದರ ಫಲವಾಗಿ ದಕ್ಕಿರಬಹುದಾದ ಬದುಕು ಮತ್ತು ಕಾಲಕ್ಕೆ ಸ್ಪಂದಿಸುವ ಗುಣ, ಅದರ ಫಲವಾಗಿ ದಕ್ಕಿರಬಹುದಾದ ಮುಂಗಾಣ್ಕೆ ಅಥವಾ ಮುನ್ನೋಟ ಅವರಲ್ಲಿ ಅಗಾಧ ಕರ್ತೃತ್ವಶಕ್ತಿಯನ್ನು ತುಂಬಿತ್ತು. ಮುನ್ನೋಟದಿಂದ ತುಂಬಿದ ಕರ್ತೃತ್ವಶಕ್ತಿ ಅವರಿಗೆ ವಿಶೇಷವಾದುದು. ಬಸವಣ್ಣನ ಆ ಗುಣ ಸಮರ್ಥಿಸಲು ಅವರ ಒಂದೆರಡು ವಚನಗಳನ್ನು ಪೂರಕವಾಗಿ ಉದಹರಿಸುವ ಅಗತ್ಯ ಇಲ್ಲ. ಏಕೆಂದರೆ, ಅವರ ಬದುಕೇ ಒಂದು ದೊಡ್ಡ ಉದಾಹರಣೆ.

ಆದರೂ ಬಸವಣ್ಣನವರ ಕೆಲ ವಚನಗಳನ್ನಾದರೂ ಉದಾಹರಿಸದೆ ಮುಂದೆ ಸಾಗುವುದು ದುಸ್ತರದ ಕೆಲಸ. ‘ಜಾತಿವ್ಯವಸ್ಥೆ’ ಕುರಿತಂತೆ ಬಸವಣ್ಣ ಬರೆದಿರುವ ಕೆಲ ವಚನಗಳು ಸೃಜನಶೀಲತೆಗೂ ಸಂಬಂಧಿಸಿದಂತೆ ತೋರುವುದರಿಂದ ಅವುಗಳನ್ನು ಇಲ್ಲಿ ದಾಖಲಿಸಲಾಗಿದೆ:

ಉತ್ತಮಕುಲದಲ್ಲಿ ಹುಟ್ಟಿದನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ.
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ!

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.

ಜಾತಿವ್ಯವಸ್ಥೆಯನ್ನು ಖಂಡಿಸಿ ಈ ವಚನಗಳನ್ನು ಬರೆಯಲಾಗಿದೆ ಎಂಬುದು ಸಾಮಾನ್ಯ ತಿಳುವಳಿಕೆ. ಜಾತಿಯತೆಯನ್ನು ತಿರಸ್ಕರಿಸಿ ಕೆಳಜಾತಿ ಕೆಳವರ್ಗದ ಜನರ ಜತೆ ತನ್ನನ್ನು ತಾನು ಗುರುತಿಸಿಕೊಳ್ಳುವ ವಿಚಾರದಲ್ಲಿ ಆ ತರಹ ನಡೆದುಕೊಂಡ ಮತ್ತೊಂದು ಚೇತನವನ್ನು ಭಾರತದ ಚರಿತ್ರೆಯಲ್ಲಿ ಕಾಣುವುದು ಕಷ್ಟದ ಮಾತು. ಆದರೆ ಆ ಎರಡೂ ಕವನಗಳ ಹಿಂದಿರುವ ಮನಸ್ಸು, ಭಾರತದಂತಹ ಶ್ರೇಣೀಕೃತ ಸಮಾಜ ಮತ್ತು ಬದುಕಿನಲ್ಲಿ ಸೃಜನಶೀಲತೆ ಕ್ರಿಯಾಶೀಲತೆ ಕಂಡುಕೊಳ್ಳಲು ಪಡಬೇಕಾದ ಸಂಕಷ್ಟ ಮತ್ತು ಎದುರಿಸಬೇಕಾದ ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಎಲ್ಲರೂ ಭಾವಿಸಿದಂತೆ ಬರೀ ಜಾತಿಯತೆ ಖಂಡಿಸುವ ಕೆಲಸ ಮಾಡಿದ್ದಲ್ಲಿ ಆ ವಚನಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಬೇಕಾದ ಅಗತ್ಯವಿರಲಿಲ್ಲ. ಜಾತೀಯತೆ ಎಂಬುದು ಭಾರತದಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿಸಲು ಬಿಡದ ವಿಷಮಯವಾದ ವಿಷಮಸ್ಥಿತಿ. ಆ ಬಗ್ಗೆ ಮಾತನಾಡುತ್ತಲೆ ಅದರಿಂದಾಗಿ ಈ ದೇಶದಲ್ಲಿ ಬತ್ತಿಹೋಗಿರುವ ಸೃಜನಶೀಲತೆಯ ಸೆಲೆಯ ಬಗ್ಗೆ ಮಾತನಾಡುತ್ತಿರುವುದರಿಂದಾಗಿ ಆ ವಚನಗಳು ಹೆಚ್ಚು ಗಮನ ಸೆಳೆಯುತ್ತವೆ. ಜಾತೀಯತೆ ಈ ದೇಶದ ಜನರಲ್ಲಿನ ಮನುಷ್ಯತ್ವವನ್ನು ನಿರ್ನಾಮ ಮಾಡಿದೆ ಮಾತ್ರವಲ್ಲ. ಸೃಜನಶೀಲತೆ, ಕರ್ತೃತ್ವಶಕ್ತಿ ಮತ್ತು ಸೃಷ್ಟಿಕ್ರಿಯಾ ಚೇತನವನ್ನು ಸಂಪೂರ್ಣ ಹೊಸಕಿಹಾಕಿದೆ ಎಂದು ಕಂಡುಕೊಂಡ ವ್ಯಕ್ತಿ ಬಸವಣ್ಣ : ಅವೆರಡೂ ಪರಸ್ಪರ ಬೇರೆ ಬೇರೆಯಲ್ಲ ಎಂಬುದು ಅವರ ನಿಲುವು.

ಕೆಳಗೆ ಉದಹರಿಸಲಾದ ಈ ವಚನವನ್ನು ಮೇಲಿನ ಆ ಎರಡೂ ವಚನಗಳ ಜತೆ ಓದುವುದರಿಂದ ಹೆಚ್ಚಿನ ಸ್ಪಷ್ಟತೆ ದೊರಕುತ್ತದೆ :

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್‌ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ
ಕೌಂಡಿನ್ಯನೆಂಬ ಋಷಿ ಮೂರು ಭುವನವರಿಯೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು :
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!

ಜಾತೀಯತೆಯಿಂದಾಗುವ ಅನಾಹುತ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತಾಡುತ್ತಲೆ, ಋಷಿಸಂಸ್ಕೃತಿ ನಿರ್ಮಿಸಿದವರ ಹಿನ್ನೆಲೆ ಮತ್ತು ಚರಿತ್ರೆ ಬರೆಯುತ್ತಾರೆ. ಅಗಸ್ತ್ಯ, ದುರ್ವಾಸ, ಕಶ್ಯಪ, ಕೌಂಡಿನ್ಯ ಮೊದಲಾದವರು ಭಾರತದ ಅಂದರೆ ಮನುಷ್ಯ ಜನಾಂಗದ ಒಂದು ಭಾಗವಾದ ಪುರಾತನ ಋಷಿ ಸಂಸ್ಕೃತಿ ನಿರ್ಮಿಸಿದ ಮಹಾ ಮೇಧಾವಿಗಳು, ಪ್ರತಿಭಾವಂತ ವ್ಯಕ್ತಿಗಳಾದ ಅವರ ಸೃಜನಶೀಲತೆ ಮತ್ತು ಸೃಷ್ಟಿಕ್ರಿಯಾ ಶಕ್ತಿ ಉಳಿದವರಿಗಿಂತ ಭಿನ್ನವಾಗಿ ಉಳಿಯುವಂತೆ ಮಾಡಿತು ಎಂಬುದನ್ನು ಗುರುತಿಸುವ ಬಸವಣ್ಣ ಅವರ ಹುಟ್ಟು ಅವರ ಸಾಧನೆಗೆ ಅಡ್ಡಿಯಾಗಲಿಲ್ಲ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತಾರೆ.

ವ್ಯಾಸ, ಕಶ್ಯಪ ಇತ್ಯಾದಿ ಮಹಾಋಷಿಗಳ ಹುಟ್ಟಿನ ಬಗ್ಗೆ ಮಾತನಾಡುತ್ತಲೇ ಸೃಜನಶೀಲತೆ ಮತ್ತು ಚಲನಶೀಲತೆಯ ಮತ್ತೊಂದು ಆಯಾಮವನ್ನು ಅನ್ವೇಷಿಸುತ್ತಾರೆ. ಕಾಳಿದಾಸನ ಕೃತಿಗಳ ಆಸಕ್ತಿ, ಉತ್ತಮ ಸಂತಾನಲಾಭದಿಂದ ದೊರಕುವ ಚಲನಶೀಲ ಸೃಜನಶೀಲತೆ, ಪರಂಪರೆ, ತಲೆಮಾರು ಮತ್ತು ವಂಶವಾಹಿನಿಯ ಮುಂದುವರಿಕೆಗೆ ಸಂಬಂಧಿಸಿದ್ದಾದರೆ, ಬಸವಣ್ಣನ ಕಲ್ಪನೆಯ ಸೃಷ್ಟಿಕ್ರಿಯೆ, ಇಡೀ ಬದುಕು ಮತ್ತು ಪರಿಸರಕ್ಕೆ ಸಂಬಂಧಿಸಿದ್ದು. ಆ ವಚನಗಳ ಮೂಲಕ ಲೈಂಗಿಕ ಅಥವಾ ಕಾಮ ಎನ್ನುವುದಕ್ಕಿಂತಲೂ ಹೆಚ್ಚಾಗಿ ಬದುಕಿನ ಬಗೆಗಿನ ದೃಷ್ಟಿಕೋನ ಕುರಿತು ಬಸವಣ್ಣ ಮಾತನಾಡುತ್ತಾರೆ. “ಹೊಲದಲ್ಲಿ ಸೆಗಣಿ ತೆಗೆಯಲು ಹೋದಾಗ ನಡೆದ ಸಂಸರ್ಗದಿಂದ ಹುಟ್ಟಿದವನು ನಾನು” ಎಂದು ಹೇಳುವ ಮಾತು ದಿದೊ – ಈನಿಯಾಸ್‌, ಶಕುಂತಲೆ – ದುಷ್ಯಂತರ ಪರಿಣಯ ನೆನಪಿಗೆ ತಾರದಿರುವುದರಿಂದ. ಪ್ರಕೃತಿ ಮತ್ತು ಪರಿಸರಕ್ಕೆ ಹತ್ತಿರದಲ್ಲಿ ಬದುಕುವ ಜನರಲ್ಲಿ ಹೆಚ್ಚಾಗಿ ಕಾಣಬಹುದಾದ ಆದರೆ ಜಾತಿ ವರ್ಗ ಇತ್ಯಾದಿ ಅಹಂಗಳನ್ನು ಮೀರಿದ ಸಹಜ, ಸ್ವಾಭಾವಿಕ ಪರಿಣಯವನ್ನು ಗೌರವಿಸುವ ಬಸವಣ್ಣ ಆ ಮೂಲಕ ಬದುಕಿನಲ್ಲಿನ ಮತ್ತೊಂದು ರೀತಿಯ ಸೃಜನಶೀಲತೆ ಮತ್ತು ಚಲನಶೀಲತೆ ಬಗ್ಗೆ ಮಾತನಾಡುತ್ತಾರೆ.

ಜಾತೀಯತೆ ವಿರುದ್ಧ ಮಾತನಾಡುವ ಮತ್ತು ಆಕ್ರೋಶ ಕಾರುವ ಹಲವರನ್ನು ಈ ದೇಶ ಕಂಡಿದೆ. ಬಸವಣ್ಣ ಹುಟ್ಟುವುದಕ್ಕೆ ಮೊದಲೇ ಬುದ್ಧ ಮೊದಲಾದ ಮಹನೀಯರು ಹುಟ್ಟಿದ್ದರು. ಚಲನಶೀಲತೆ ಮತ್ತು ಎಂಬ ಪದಗಳನ್ನು ಬಳಸದೆಯೆ, ಬದುಕಿನಲ್ಲಿ ಇರಬೇಕಾದ ಕ್ರಿಯಾಶೀಲತೆ ಬಗ್ಗೆ ಮಾತನಾಡಿದ ಅನೇಕರು ಇರಬಹುದು. ಆದರೆ ಜಾತೀಯತೆ, ಸೃಜನಶೀಲತೆ, ಚಲನಶೀಲತೆ ಮತ್ತು ಕ್ರಿಯಾಶೀಲತೆ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಿ ಮಾತನಾಡುವವರು ಬಂದಿರಲಿಲ್ಲ. ಜಾತೀಯತೆಯಿಂದಾಗಿ ಭಾರತ ಕಳೆದುಕೊಂಡ ಸೃಜನಶೀಲತೆ, ಚಲನಶೀಲತೆ ಮತ್ತು ಕ್ರಿಯಾಶೀಲತೆ ಬಗ್ಗೆ ಗಂಭೀರವಾಗಿ ಯೋಚಿಸಿದ ಅವರು, ಇಡೀ ಭಾರತದ ಮನಸ್ಸಿನ ಮನೆಯ ತುಂಬ ಜಾತೀಯತೆಯ ರಜ ತುಂಬಿರುವಾಗ ಸೃಜನಶೀಲತೆ ಸಾಧ್ಯವೇ ಎಂಬ ಪ್ರಶ್ನೆಗಾಗಿ ನಡೆದ ಹುಟುಕಾಟದ ಫಲವೇ ವಚನಕ್ರಾಂತಿ.

ಭಾರತಕ್ಕೆ ಅಪರೂಪವಾದ ಹಲವಾರು ಆಯಾಮ ಮತ್ತು ಗುಣಗಳಿಂದ ಕೂಡಿದ ಸಾಮೂಹಿತ ವ್ಯಕ್ತಿತ್ವ ಪಡೆದಿದ್ದ ಅವರಲ್ಲಿ ಉನ್ನತ ಮಟ್ಟದ ಸೃಜನಶೀಲತೆ, ಆಧ್ಯಾತ್ಮಿಕ ತುಡಿತ, ಸಾಮಾಜಿಕ ಮತ್ತು ರಾಜಕೀಯ ಕರ್ತೃತ್ವಶಕ್ತಿ ತುಂಬಿದ್ದವು: ಬಹುಮುಖಿ ವ್ಯಕ್ತಿತ್ವದ ಜತೆಗೆ ಚಿಂತನವನ್ನು ಕ್ರಿಯೆಯಾಗಿ ಮಾರ್ಪಡಿಸುವ ಚಲನಶೀಲತೆ ಪಡೆದಿದ್ದ ಅಂತಹ ವ್ಯಕ್ತಿಗಳನ್ನು ಕಾಣಲು ಭಾರತ, ಬ್ರಿಟಿಷ್‌ ಆಗಮನದನಂತರ ರೂಪುಗೊಂಡ ಯುಗದವರೆಗೂ ಕಾಯಬೇಕಾಯಿತು ವಿವೇಕಾನಂದ, ಮಹಾತ್ಮಾ ಗಾಂಧೀಜಿ ರೂಪದಲ್ಲಿ.

ಬಸವಣ್ಣನಿಗೆ ಪಂಪ – ರನ್ನರ[1] ತರಹದ ಸೃಜನಶೀಲತೆ ಬೇಕಿರಲಿಲ್ಲ. ತನ್ನ ವ್ಯಕ್ತಿತ್ವಕ್ಕೆ ಸರಿಹೋಗುವ ಪಗದ್ಯ ಮತ್ತು ಗಪದ್ಯದ ವಚನ ಮಾಧ್ಯಮ ಆರಿಸಿಕೊಳ್ಳಲು ಸೃಜನಶೀಲತೆಯ ಸ್ವಂತಿಕೆಯೂ ಮತ್ತೊಂದು ಕಾರಣವಾಗಿದ್ದಿರಬಹುದು. ಬಸವಣ್ಣ ಮತ್ತು ವಚನಕಾರರಿಗೆ ಬೇಕಿದ್ದುದು ನಿಜವಾದ ಬದುಕನ್ನು ಕಟ್ಟುವ ಮತ್ತು ಸ್ವಂತಿಕೆಯಿಂದ ಕೂಡಿದ ಸೃಜನಶೀಲತೆ; ಚಿಂತನಶೀಲತೆಯ ನಾವೀನ್ಯ, ಸೃಷ್ಟಿಕ್ರಿಯೆಯ ಪಾವಿತ್ರ್ಯ ಮತ್ತು ಚಾರಿತ್ರ್ಯದಿಂದ ತುಂಬಿದ ಕ್ರಿಯಾಶೀಲತೆ ಕಳೆದುಕೊಂಡು ಅನ್ಯರ ಆಕ್ರಮಣಕ್ಕೆ ಸಿದ್ಧವಾಗುತ್ತಿದ್ದ ತನ್ನ ಸಮಕಾಲೀನ ಸಮಾಜದಲ್ಲಿ ಸ್ವಂತಿಕೆಯ ಸಂಯಮದ ಸೃಜನಶೀಲತೆ ಸಾಧ್ಯವಿಲ್ಲ ಎಂಬುದನ್ನು ಬಹಳ ಬೇಗನೆ ಅರಿತುಕೊಂಡ ಅವರು; ಆ ಜಾಗದಲ್ಲಿ ಪೂರಕವಾದ ಹೊಸ ವ್ಯವಸ್ಥೆಯನ್ನು ನಿರ್ಮಿಸುವುದನ್ನು ಸೃಜನಶೀಲತೆಯ ಮತ್ತೊಂದು ಆಯಾಮವಾಗಿ ಕಂಡುಕೊಂಡ ವ್ಯಕ್ತಿ. ಆಧ್ಯಾತ್ಮ ಎಂಬುದು ಅವರಿಗೆ ಬದುಕಿನಿಂದ ಪ್ರತ್ಯೇಕವಾದುದಾಗಿರಲಿಲ್ಲವಾದಂತೆ, ಸಮಾಜ ಬದಲಾವಣೆ ಮತ್ತು ಕಾವ್ಯ ರಚನೆಯನ್ನು ಬೇರೆ ಬೇರೆಯಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ. ಇಡೀ ಬದುಕು ಚಲನಶೀಲವಾದಾಗ ಸೃಜನಶೀಲತೆ ದಕ್ಕುತ್ತದೆ ಮತ್ತು ಸೃಜನಶೀಲವಾದಾಗ ಚಲನಶೀಲತೆ ತಾನಾಗಿಯೇ ಒದಗಿ ಬರುತ್ತದೆ ಎಂಬುದನ್ನು ಬಹು ಬೇಗನೆ ಕಂಡುಕೊಂಡ ಬಸವಣ್ಣ, ಬಹುಮುಖಿ ಮತ್ತು ವಿಭಿನ್ನ ಆಯಾಮಗಳಿಂದ ಕೂಡಿದ ಸ್ವಂತಿಕೆಯ ಸೃಜನಶೀಲತೆ ಕಂಡುಕೊಳ್ಳಲು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಏಕಕಾಲದಲ್ಲಿ ಕ್ರಿಯಾಶೀಲವಾಗುವುದು ಅನಿವಾರ್ಯವಾಯಿತು.

ಆಂತರಿಕ ತುಡಿತಗಳಿಗಾಗಿ ವಚನಗಳನ್ನು ರಚಿಸುವುದು ಸೃಜನಶೀಲ ಚಟುವಟಿಕೆಯಾಗಿದ್ದಂತೆಯೆ, ಅಂತ್ಯಜರ ಹುಡುಗ ಮತ್ತು ಬ್ರಾಹ್ಮಣರ ಹುಡುಗಿ ನಡುವೆ ವಿವಾಹ ಸಂಬಂಧ ಏರ್ಪಡಿಸಿ ಅಂತಹ ಮಾನವೀಯ ಸಂಬಂಧಗಳು ಮುಂದೆ ಸಹಜವಾಗಿ ನಡೆಯುವಂತಹ ಸಮಾಜ ನಿರ್ಮಿಸುವುದು ಅದೇ ಸೃಜನಶೀಲತೆಯ ಮತ್ತೊಂದು ಮುಖ ಅಥವಾ ಆಯಾಮವಾಗಿತ್ತು. ಮತ್ತು ಅವೆರಡೂ ಬಸವಣ್ಣನವರ ಪಾಲಿಗೆ ಬೇರೆ ಬೇರೆಯಾಗಿರಲಿಲ್ಲ. ಕಾವ್ಯವನ್ನು ಓದಿ ಮೆಚ್ಚುವ ಜನ ಇದ್ದಾಗ ಬರೆಯುವ ಕ್ರಿಯೆ ಅರ್ಥಪೂರ್ಣವಾಗುವಂತೆಯೇ, ನಿಜವಾದ ಬರವಣಿಗೆ ಮಾಡಲು ಸಾಧ್ಯವಾದಾಗ ನಿಜವಾದ ಓದುಗರು ದೊರಕುತ್ತಾರೆ; ಅವೆರಡೂ ಪರಸ್ಪರ ಪೂರಕವಾದವು. ಬರವಣಿಗೆ ಅರ್ಥವತ್ತಾಗಿರಬೇಕಾದರೆ ವೈವಿಧ್ಯ ಇರಬೇಕು. ವೈವಿಧ್ಯತ ಬರಬೇಕಾದರೆ ಜನ ಬರವಣಿಗೆ ಮತ್ತು ಓದಿನಲ್ಲಿ ಅರ್ಥವತ್ತಾಗಿ ಪಾಲುದಾರರಾಗಬೇಕು. ವಿಶೇಷತೆ, ವಿಶಿಷ್ಟತೆ ಮತ್ತು ವೈವಿಧ್ಯ ನಿಜವಾದ ಬದುಕಿನಲ್ಲಿ ಅರಳಬೇಕಾದರೆ ಮೇಲು ಕೀಳು ಎಂಬ ಅಂತರ ಕಡಿಮೆಯಾಗಿ, ಎಲ್ಲ ವೈವಿಧ್ಯಗಳು ಪ್ರಕೃತಿ ಪರಿಸರ ಪ್ರಭಾವಿತ ಮಾನವ ಜನಾಂಗದ ಸಮಾನ ನೆಲೆಯಲ್ಲಿ ಪರಿಗಣನೆಗೊಳಗಾಗುವ ವಾತಾವರಣ ಮತ್ತು ಪರಿಸ್ಥಿತಿ ನಿರ್ಮಾಣ ಆಗಬೇಕು. ಆಗ ಮಾತ್ರ ಬದುಕಿನ ವೈವಿಧ್ಯಪ್ರೇರಿತ ಸೃಜನಶೀಲತೆಯ ವೈವಿಧ್ಯ ಅದೇ ಬದುಕಿನಲ್ಲಿ ದಕ್ಕಬಹುದು.

ಮೇಲು – ಕೀಳು ಮತ್ತು ಸ್ಪೃಶ್ಯ – ಅಸ್ಪೃಶ್ಯ ಎಂಬ ಭಾವನೆಗಳು ಮಡುಗಟ್ಟಿದ ಸಮಾಜ ಮತ್ತು ಬದುಕಿನಲ್ಲಿ ಅಂತಹ ವೈವಿಧ್ಯಮಯ ಸೃಜನಶೀಲತೆ ಸಾಧ್ಯವೆ? ಸೃಜನಶೀಲತೆ ಬರಬೇಕಾದರೆ, ಸಮಾಜದ ವಿವಿಧ ಜನಾಂಗಗಳ ನಡುವಿನ ಆಂತರಿಕ ಸಂಬಂಧ ಮತ್ತು ಅದರಿಂದಾಗಿ ಬರುವ ಪರಸ್ಪರ ಕೊಳು – ಕೊಡುಗೆ ಹಾಗೂ ಚಲನಶೀಲತೆ ಮತ್ತೆ ಪ್ರತಿಷ್ಠಾಪಿತಗೊಳ್ಳುವುದಾಗಬೇಕು. ಅದು ಸ್ಥಾಪನೆಗೊಳ್ಳದೆ ಸೃಜನಶೀಲತೆ ಸಾಧ್ಯವಿಲ್ಲ. ಮೇಲ್‌ಸ್ತರದ ಬ್ರಾಹ್ಮಣರಿಂದ ಕೆಳಸ್ತರದ ಅಂತ್ಯಜರು ಕಲಿಯಬಹುದಾದದ್ದು ಬಹಳ ಇರುವಂತೆಯೇ, ಅದೇ ಬದುಕಿನಲ್ಲಿ ಕೆಳಸ್ತರದ ಅಂತ್ಯಜರು ಕಲಿಯಬಹುದಾದದ್ದು ಬಹಳ ಇರುವಂತೆಯೇ, ಅದೇ ಬದುಕಿನಲ್ಲಿ ಕೆಳಸ್ತರದ ಅಂತ್ಯಜರಿಂದ ಮೇಲ್‌ಸ್ತರದ ಬ್ರಾಹ್ಮಣರು ಕಲಿಯುವುದು ಬಹಳವಿರುತ್ತದೆ. ಅದರಲ್ಲೂ ಪ್ರಕೃತಿಗೆ ಹತ್ತಿರವಾಗಿ ಬದುಕುವವರಿಂದ ಕಲಿಯುವಂತಾದ್ದು ಬಹಳ. ಎಲ್ಲರಿಂದ ಎಲ್ಲರೂ ಕಲಿಯುವ ವಾತಾವರಣ ಇಲ್ಲದೆ ಹೋದಲ್ಲಿ ಓದು, ಕಲಿಕೆ ಮತ್ತು ಅರಿವು ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಎಲ್ಲ ಜಾತಿ ಮತ್ತು ವರ್ಗಗಳ ಜನರು ಒಬ್ಬರಿಂದ ಒಬ್ಬರು ಕಲಿತು ಅರಿಯುವಂತಹ ವಾತಾವರಣ ಇದ್ದಾಗ ಮಾತ್ರ ಒಟ್ಟಾರೆ ಬದುಕು ಸೃಜನಶೀಲ ಮತ್ತು ಚಲನಶೀಲವಾಗಿರಲು ಸಾಧ್ಯ.

ಭಾರತ ಚಲನಶೀಲತೆ, ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಕಳೆದುಕೊಳ್ಳಲು[2] ಆ ಅರಿವು ಮತ್ತು ಕಲಿಕೆಯ ವಾತಾವರಣವನ್ನು ಕಳೆದುಕೊಂಡುದೆ ಕಾರಣ ಎಂಬ ತೀರ್ಮಾನಕ್ಕೆ ಬಸವಣ್ಣ ಆಗಲೆ ಬಂದಿದ್ದಂತೆ ಕಾಣುತ್ತದೆ. ಒಂದು ತರಹದಲ್ಲಿ ಸರಳ ಗ್ರಹಿಕೆಯಂತೆ ತೋರುವ ಆ ಅರ್ಥವಂತಿಕೆಯನ್ನು ಆ ಕಾಲದಲ್ಲಿ ಪಡೆದು ಅದರಂತೆ ಬದುಕಿನಲ್ಲಿ ಕ್ರಿಯಾಶೀಲವಾಗಲು ಪ್ರಯತ್ನಿಸುವುದು ಸಾಧಾರಣ ಸಂಗತಿಯಲ್ಲ. ಈ ಮೊದಲು ಉದಹರಿಸಲಾದ ಬಸವಣ್ಣನವರ ಆ ಮೂರು ವಚನಗಳು ಆ ಸತ್ಯವನ್ನೇ ನುಡಿಯುತ್ತವೆ. “ಉತ್ತಮ ಕುಲದಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ” ಎಂಬ ಮಾತಿನಲ್ಲಿ ಆ ಎಲ್ಲ ದನಿಗಳು ಅಡಕವಾಗಿವೆ. ಮೇಲುಜಾತಿಯಲ್ಲಿ ಹುಟ್ಟಿದೆನೆಂಬ ಅಹಂಕಾರ – ಎಲ್ಲ ತಿಳುವಳಿಕೆ ಮತ್ತು ಅರಿವು ಆ ಹುಟ್ಟಿನಿಂದಲೇ ಬಂದಿದೆ ಎಂಬ ದುರಹಂಕಾರವಾಗಿ ಮಾರ್ಪಟ್ಟಲ್ಲಿ ಮತ್ತೊಬ್ಬರ ಜತೆ ಕಲಿಯಲು ಮತ್ತು ಚಲಿಸಲುಬೇಕಾದ ಸಹಜ ಒಡನಾಟಕ್ಕೆ ಅವಕಾಶ ಒದಗಿಸುವುದಿಲ್ಲವಾದಂತೆ; ಅಲ್ಲಿ ಮನುಷ್ಯ ಸಹಜ ಸಂಬಂಧವೇ ಸಾಧ್ಯವಾಗುವುದಿಲ್ಲ. ಅದು ಸ್ಥಾಪಿತವಾಗದೆ ಒಬ್ಬರಿಂದ ಒಬ್ಬರು ಕಲಿಯುವುದು ಮತ್ತು ಅರಿಯುವುದು ಎಲ್ಲಿ ಬಂತು?

ಮೇಲುಜಾತಿ ಮತ್ತು ಕೆಳಜಾತಿ ಎಂಬ ಅಂತಸ್ತುಗಳಿಂದಾಗಿ ಕಕ್ಕಯ್ಯ ತಾನು ಒಕ್ಕಿದ್ದನ್ನು ಇಕ್ಕಲು ಮುಂದಾಗುವುದಿಲ್ಲ. ದಾಸಯ್ಯ ಶಿವದಾನ ಎರೆಯಲು ಬರುವುದಿಲ್ಲ. ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಮನ್ನಣೆಯ ಚೆನ್ನಯ್ಯ ಮನ್ನಿಸುವುದೇ ಇಲ್ಲ. ಎಂತಹ ಪರಿಸ್ಥಿತಿ! ಅಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾದ ಸಮಾಜ ಮತ್ತು ಬದುಕಿನಲ್ಲಿ ಮನುಷ್ಯರು ಮನುಷ್ಯರಾಗಿ ಉಳಿದಿರಲು ಸಾಧ್ಯವೆ? ಮನುಷ್ಯತ್ವ ಉಳಿಯದೆ ಚಲನಶೀಲತೆ ಸಧ್ಯವೆ? ಚಲನಶೀಲತೆ ಬಾರದೆ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಬರುತ್ತದೆಯೆ? ಅದನ್ನೆ ಬಸವಣ್ಣ ಉತ್ತಮ ಕುಲದಲ್ಲಿ ಹುಟ್ಟಿದ ಕಷ್ಟ ಎಂಬುದಾಗಿ ಕರೆಯುತ್ತಾರೆ.

ಬಂಜೆತನ ಮತ್ತು ಬರಡು ಸ್ಥಿತಿ ಬದುಕಿನ ಎಲ್ಲ ರಂಗ ಮತ್ತು ಹಂತಗಳಲ್ಲೂ ವ್ಯಾಪಿಸಿರುವುದನ್ನು ಕಂಡುಕೊಂಡಂತೆ ಕಾಣುವ ಅವರು ಯಾವುದೇ ಸಂವೇದನಾಶೀಲ, ಚೈತನ್ಯಶೀಲ ಮತ್ತು ಸೃಜನಶೀಲ ವ್ಯಕ್ತಿ ಅನುಭವಿಸಬಹುದಾದ ಸಂಕಷ್ಟಗಳ ಮೊತ್ತ; ಆ ಸ್ಥಿತಿಯ ಸ್ಫೋಟವೇ ವಚನಕ್ರಾಂತಿ. ಜಾತೀಯತೆ ಹೇಗೆ ಸೃಜನಶೀಲತೆಗೆ ದೊಡ್ಡ ಅಡ್ಡಿಯಾಗಿದೆ ಎಂಬುದನ್ನು ಗುರುತಿಸುತ್ತಲೇ ಮನುಷ್ಯ ಮನುಷ್ಯರ ನಡುವೆ ಅದು ಎಬ್ಬಿಸಿರುವ ಕಂದಕಗಳ ಸ್ಥಿತಿಯನ್ನು ಸಹ ಅದರ ತೀವ್ರ ರೂಪದಲ್ಲಿ ವಿವರಿಸುತ್ತಾರೆ. ಜಾತೀಯತೆಯ ಮುಚ್ಚಿದ ಸ್ಥಿತಿಯಿಂದಾಗಿ ಸಮಾಜ, ಬದುಕು ಮತ್ತು ವ್ಯಕ್ತಿಗಳು ಅನುಭವಿಸಬೇಕಾಗಿರುವ ದಡ್ಡುಗಟ್ಟಿದ ಜಡಸ್ಥಿತಿಯನ್ನು ಅನುಭವಿಸಿ ವಿವರಿಸಿದವರು; ಜಾತೀಯತೆಯ ಅಡ್ಡ ಪರಿಣಾಮಗಳನ್ನು ಅಷ್ಟು ತೀವ್ರವಾಗಿ ಅನುಭವಿಸಿ ಅವುಗಳಿಗೆ ಅಭಿವ್ಯಕ್ತಿ ನೀಡಿದ ಮತ್ತೊಬ್ಬ ಕವಿಯನ್ನು ಕಾಣುವುದು ಕಷ್ಟಸಾಧ್ಯ. ಮನುಷ್ಯರ ಜತೆ ಮನುಷ್ಯರಂತೆ ವರ್ತಿಸಲು ಬಿಡದ; ಕ್ರಿಯಾಶೀಲತೆ, ಮಾನವೀಯತೆ, ಚಲನಶೀಲತೆ ಮತ್ತು ಸೃಜನಶೀಲತೆಗಳ ಶಕ್ತಿ ಸಾಮರ್ಥ್ಯವನ್ನು ನಾಶಮಾಡುವ ಉತ್ತಮ ಕುಲದಲ್ಲಿ ಹುಟ್ಟಿದವನು ಎಂಬ ಅಭಿಧಾನ ಅವರಿಗೆ ಆ ಕಾರಣವೇ ಕಷ್ಟವಾಗಿ ಕಾಣಿಸುತ್ತದೆ.

“ಹೊಲದಲ್ಲಿ ಬೆರಣಿಗೆ ಹೋದವರು ನಡೆಸಿದ ಪರಿಣಯದಿಂದಾಗಿ ಹುಟ್ಟಿದವನು ನಾನು” ಎಂದು ಘೋಷಿಸಿಕೊಳ್ಳುವಷ್ಟರ ಮಟ್ಟಿಗೆ ಹೋಗುವ ಅವರು, ಅದಕ್ಕೆ ಸಾಕ್ಷಿಯಾಗಿ ಕೂಡಲಸಂಗಮದೇವನನ್ನು ತರುತ್ತಾರೆ. ಅಂಕಿತದ ಅರ್ಥವೇ ಆ ಸಂದರ್ಭದಲ್ಲಿ ಬೇರೆಯಾಗುತ್ತದೆ. ಅವರಿಬ್ಬರು ಎಂಥವರು ಎಂದರೆ, ಚೆನ್ನಯ್ಯನ ಮನೆಯ ದಾಸನ ಮಗ ಮತ್ತು ಕಕ್ಕಯ್ಯನ ಮನೆಯ ದಾಸಿಯ ಮಗಳು, ಅಂತ್ಯಜರಲ್ಲಿ ಅಂತ್ಯಜನಾಗಿ ಮತ್ತು ದಾಸದಾಸಿಯರಲ್ಲಿ ಒಬ್ಬನಾಗಿ ತಮ್ಮನ್ನು ಕಂಡುಕೊಳ್ಳುವುದರ ಮುಖೇನ ಜಾತಿಯ ಅಹಂಕಾರ ಕಳೆದುಕೊಂಡು ಮನುಷ್ಯರಾಗಬಯಸುತ್ತಾರೆ. ಆ ತರಹದ ಮನುಷ್ಯತ್ವ ದೊರಕಿದಾಗ ಮಾತ್ರ ಮನುಷ್ಯರಾಗಬಯಸುತ್ತಾರೆ. ಆ ತರಹದ ಮನುಷ್ಯತ್ವ ದೊರಕಿದಾಗ ಮಾತ್ರ ಮನುಷ್ಯ ಸಹಜ ಚಟುವಟಿಕೆಗಳಾದ ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಚಲನಶೀಲತೆ ದೊರಕಲು ಸಾಧ್ಯ ಎಂದು ಭಾವಿಸುವ ಅವರು ಅಂಥವರ ದೊಡ್ಡ ಪಟ್ಟಿಯನ್ನೇ ಕೊಡುತ್ತಾರೆ: ವ್ಯಾಸ, ಮಾರ್ಕಂಡೇಯ, ಅಗಸ್ತ್ಯ, ದುರ್ವಾಸ, ಕಶ್ಯಪ, ಕೌಂಡಿನ್ಯ ಇತ್ಯಾದಿ.

ಆ ತಿಳುವಳಿಕೆ ಮತ್ತು ಅರಿವಿನ ಮುಂದಿನ ಹೆಜ್ಜೆಯಾಗಿ ಅಂತರಜಾತಿ ವಿವಾಹಕ್ಕೆ ಕೈ ಹಾಕುತ್ತಾರೆ. ಕಾಯಕದ ಮಹತ್ವ ಮತ್ತು ಪ್ರಾಧಾನ್ಯತೆ ಒಪ್ಪಿಕೊಂಡರೂ, ವೃತ್ತಿಗಳು ಜಾತಿಗಳಾಗಿ ಪರಿವರ್ತನೆಗೊಳ್ಳುವುದರಿಂದ ನೈಪುಣ್ಯ ಮತ್ತು ಕುಶಲತೆ ಮೇಲಾಗುವ ದುಷ್ಪರಿಣಾಮಗಳನ್ನು ಅವರು ಪರಿಗಣನೆಗೆ ತೆಗೆದುಕೊಂಡಂತೆ ಕಾಣುತ್ತದೆ. ಜಾತೀಯತೆಯು ಸೃಜನಶೀಲತೆಯನ್ನು ನಾಶಪಡಿಸುವುದರ ಜತೆಗೆ, ವೃತ್ತಿ ನೈಪುಣ್ಯ ಮತ್ತು ಕುಶಲತೆಯನ್ನು ಕ್ರಮವಾಗಿಯಾದರೂ ಮೊಂಡು ಮಾಡದಿರುವುದಿಲ್ಲ. ಅದರಿಂದಾಗಿ ತಲೆಮಾರಿನಿಂದ ತಲೆಮಾರಿಗೆ ವಂಶ ಪಾರಂಪರ್ಯವಾಗಿ ಹರಿದುಬರುವ ಯಾವುದೇ ಕುಶಲತೆ ಮತ್ತು ನೈಪುಣ್ಯ ಬದಲಾಗುವ ಪರಿಸ್ಥಿತಿಗೆ ಹೊಂದಿಕೊಂಡು ವೃದ್ಧಿಯಾಗುವ ಸಾಮರ್ಥ್ಯ ಕಳೆದುಕೊಳ್ಳುವಂತೆಯೇ, ಹೊಸತನದ ಪ್ರಯೋಗಶೀಲತೆ ಹಾಗೂ ಹುಮ್ಮಸ್ಸಿನಿಂದ ಎಂದೋ ವಂಚಿತವಾಗಬೇಕಾಗುತ್ತದೆ.

ಆ ಎಲ್ಲ ಕಾಯಿಲೆಗಳಿಗೆ ಪರಿಹಾರವಾಗಿ ಅಂತರಜಾತಿ ವಿವಾಹ ಎಂಬ ಔಷಧವನ್ನು ರೂಪಿಸಿದ ಬಸವಣ್ಣ, ಆ ತೀರ್ಮಾನಕ್ಕೆ ಬರುವ ಮೊದಲು ಬ್ರಾಹ್ಮಣರು ಮತ್ತು ಅಂತ್ಯಜರು ಹಾಗೂ ಇತರ ಜಾತಿಗಳ ಜನರ ನಡುವಿನ ಸಾಂಸ್ಕೃತಿಕ, ಸಾಮಾಜಿಕ ಇತ್ಯಾದಿ ಅಂತರಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ಸಾಧ್ಯತೆ ಇಲ್ಲದಿಲ್ಲ. ಮೇಲ್‌ಸ್ತರದ ಬ್ರಾಹ್ಮಣರು ಮತ್ತು ಕೆಳಸ್ತರದ ಶೂದ್ರ ಜಾತಿಗಳ ನಡುವಿನ ಅಂತರಗಳು ಅಷ್ಟೊಂದು ಭೀಕರವಾದುವಲ್ಲ: ಮತ್ತು ಇರುವ ಆ ಅಂತರ ಕಡಿಮೆಯಾಗುವುದು ಸಮಾಜದ ಒಟ್ಟಾರೆ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅರಿತೆ ಅಂತರಜಾತಿ ವಿವಾಹ ಏರ್ಪಡಿಸಲು ಮುಂದಾಗಿರಬಹುದು.

 

[1]ನೆಹರು ಅವರ ಮಾತುಗಳಿಗೆ ಉದಾಹರಣೆಯಂತೆ ಕಾಣುವ

[2]ಭಾರತ ಕಳೆದುಕೊಂಡ ಮಾನವೀಯತೆಯ ಮುಖದ ಬಗ್ಗೆ ೫೦೦ ವರ್ಷಗಳ ಹಿಂದೆ ಕಮೊ ಆಡಿದ ಮಾತುಗಳನ್ನು ಈಗಾಗಲೇ ಉದಹರಿಸಲಾಗಿದೆ. ವಾಸ್ಕೋಡಗಾಮ ಭಾರತಕ್ಕೆ ಕಾಲಿಡುವುದಕ್ಕೆ ಕನಿಷ್ಠ ೩೦೦ ವರ್ಷಗಳಿಗೂ ಮೊದಲೇ ಭಾರತವನ್ನು ಕಾಡತೊಗಿದ್ದ ಆ ಬರಡು ಸ್ಥಿತಿಯ ಮೂಲವನ್ನು ಬದಲಿಸುವ ಕನಸು ಕಂಡ ಕವಿ ಬಸವಣ್ಣ.