ಈ ಜಗತ್ತಿನ ಉತ್ತಮ ಮನಸ್ಸುಗಳ ಪೈಕಿ ಒಂದಾದ ಬಸವಣ್ಣ, ಮತ್ತವರ ಸಮಕಾಲೀನ ವನಚಕಾರರ ನೇತೃತ್ವದಲ್ಲಿ ನಡೆದ ವಚನಕ್ರಾಂತಿಯಂತಹ ಆಂದೋಲನವನ್ನು ಜಗತ್ತಿನ ಬೇರಾವ ಭಾಷೆಯಲ್ಲೂ ಕಾಣಲಾಗುವುದಿಲ್ಲ ಎಂಬ ಮಾತು ಉತ್ಪ್ರೇಕ್ಷೆಯ, ಇಲ್ಲವೆ ಭಾಗಶಃವಾದರೂ ಅಸತ್ಯದಿಂದ ಕೂಡಿದ ಹೇಳಿಕೆಯಾಗಿ ಅನೇಕರಿಗೆ ತೋರಬಹುದು; ಉಳಿದವರ ಮಾತಿರಲಿ, ಅನೇಕ ಕನ್ನಡಿಗರಿಗೆ ಆ ತರಹ ಕೇಳಿಸಲೂಬಹುದು.

ಕಾಲದ ವಿಕಾಸಗತಿ ಮತ್ತು ವಿಶ್ವದ ವಿಶಾಲ ನಿಯತಿಯ ಚೌಕಟ್ಟಿನಲ್ಲಿ ಮಾತ್ರ ವಚನಕ್ರಾಂತಿಯ ಮಹತ್ವವನ್ನು ಅರಿಯಲು ಸಾಧ್ಯ, ಎಂಬ ನೈಜ ದೃಷ್ಟಿಕೋನದ ಅರಿವಿಲ್ಲದಿರುವುದು ಆ ತರಹದ ಭಾವನೆಗಳಿಗೆ ಒಂದು ಕಾರಣವಾಗಿರಬಹುದಾದರೆ, ಅದರಿಂದ ಸ್ಫುರಿತವಾಗುವ ತತ್ವ ಮತ್ತು ಮೂಲಮಾನಗಳನ್ನು ಅನುಸರಿಸಿ ೧೨ನೇ ಶತಮಾನವನ್ನು ಅರ್ಥೈಸುವ ಪ್ರಯತ್ನಗಳು ಈವರೆಗೂ ನಡೆಯದಿರುವುದು ಮತ್ತೊಂದು ಕಾರಣವಿದ್ದಿರಬಹುದು. ಬಸವಣ್ಣ ಮತ್ತು ಅವರ ಸಮಕಾಲೀನ ವಚನಕಾರರು ನಿರ್ಮಿಸಿದ ವಚನಕ್ರಾಂತಿಯ ಅರಿವನ್ನು ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸಲು ಸಿದ್ಧವಾಗಿಲ್ಲದಿರುವುದು, ಅವರು ಏರಿದ ಎತ್ತರ ಮತ್ತು ಸ್ಥಿತಿ ತಲುಪುವ ಮಾತಿರಲಿ, ಹತ್ತಿರ ಹೋಗಲು ಕನ್ನಡ ಮನಸ್ಸು ಮತ್ತು ಭಾಷೆಗೆ ಇಂದಿಗೂ ಸಾಧ್ಯವಾಗಿಲ್ಲದಿರುವುದು ನಿಜವಾದ ಕಾರಣವಿರಬಹುದು. ಕಾಲನಿಗೆ ಸ್ಪಂದಿಸುವ ವಿಚಾರದಲ್ಲಿ ಅವರು ತೋರುವ ಜಾಗೃತ ಮನಃಸ್ಥಿತಿ, ಅದರ ಫಲವಾಗಿ ದಕ್ಕಬಹುದಾದ ಮುನ್ನೋಟ, ದರ್ಶನ ಅಥವಾ ಕಾಣ್ಕೆಯನ್ನು ಕ್ರಿಯಾತ್ಮಕವಾಗಿ ಈ ಲೌಕಿಕ ಬದುಕಿನಲ್ಲಿ ಪಾಲಿಸುತ್ತಲೇ ಸೃಜನಶೀಲತೆ ಕಾಣುವ ವಿಚಾರದಲ್ಲಿ ಅವರು ಪ್ರದರ್ಶಿಸುವ ವಿವೇಕ ಮತ್ತು ಆ ಜತೆಜತೆಗೆ ಅವರು ತಲುಪಿದ ಕಾವ್ಯ ಪ್ರತಿಭೆಯ ಎತ್ತರ, ಅದರಲ್ಲೂ ಆಧ್ಯಾತ್ಮಿಕ ತುಡಿತವನ್ನು ಲೌಕಿಕ ಬದುಕಿನಲ್ಲಿ ಸಮೀಕರಿಸಿಕೊಳ್ಳಲು ಬಸವಣ್ಣ, ಸಿದ್ಧರಾಮ ಮೊದಲಾದ ಅನೇಕ ವಚನಕಾರರು ತೋರಿರುವ ವಿವೇಚನೆ ಭಾರತಕ್ಕೆ ಅಪರೂಪವಾದುದು. ಇಡೀ ಬದುಕನ್ನು ಸೃಜನಶೀಲಗೊಳಿಸುವ ಪರಿಸರ ಮತ್ತು ವಾತಾವರಣವಿದ್ದಾಗ ಮಾತ್ರ ನಿಜವಾದ ಸೃಜನಶೀಲತೆ ಬರಲು ಸಾಧ್ಯ ಎಂಬ ತಮ್ಮ ಆ ಅರಿವನ್ನು ಬದುಕಿನಲ್ಲಿ ಕಾರ್ಯಗತಗೊಳಿಸಲು ಅವರು ನಡೆಸುವ ಪ್ರಯತ್ನ ಅವರಿಗೆ ವಿಶಿಷ್ಟವಾದುದು.

ವಚನಕ್ರಾಂತಿಯಂತಹ ಅದ್ಭುತ ಪುನರಾವರ್ತನೆಗೊಳ್ಳುವ ಸಾಧ್ಯತೆ ಇಲ್ಲ ಎಂಬ ಸರಳ ಸೂತ್ರವನ್ನು ಒಪ್ಪಿಕೊಂಡರೂ ಸಹ, ವಿಷಯಸ್ಪಷ್ಟತೆಗಾಗಿ ಒಂದು ಪ್ರಮುಖ ವ್ಯತ್ಯಾಸವನ್ನು ಗಮನಿಸಿ ಮುಂದುವರಿಯುವುದು ಸೂಕ್ತ. ತಾನು ಕಂಡ ದರ್ಶನ ಮತ್ತು ಧರ್ಮದ ಪ್ರಚಾರಕ್ಕಾಗಿ ಬುದ್ಧ ಬದುಕಿಗೆ ಮರಳಿ ಬಂದರೆ, ಆ ಬದುಕಿನಲ್ಲಿ ಸೃಜನಶೀಲತೆ ಕಂಡುಕೊಳ್ಳಲು ತನ್ನಲ್ಲಿನ ಆಧ್ಯಾತ್ಮಿಕ ಹಂಬಲ ಮತ್ತು ತುಡಿತವನ್ನು ಸಮರ್ಪಿಸಿಕೊಂಡ ವ್ಯಕ್ತಿ ಬಸವಣ್ಣ. ಬಸವಣ್ಣ ಮತ್ತು ದಾಂತೆ ನಡುವಿನ ತೆಳುವಾದ ಕೆಲ ಸೂಕ್ಷ್ಮ ಹೊಂದಾಣಿಕೆಗಳನ್ನು ಗಮನಿಸುವುದು ಸಹ ಬಹಳ ಮುಖ್ಯ. ದಾಂತೆಯ ಆಗಮನ ಈಗಾಗಲೇ ನಮೂದಿತವಾದಂತೆ ಇಟಾಲಿಯನ್‌, ಫ್ರೆಂಚ್, ಇಂಗ್ಲಿಷ್‌, ಜರ್ಮನ್ ಇತ್ಯಾದಿ ಭಾಷೆ ಆಧಾರಿತ ವಿನೂತನ ಸಂಸ್ಕೃತಿ ಮತ್ತು ನಾಗರಿಕತೆಯ ಉದಯಕ್ಕೆ ಚಾಲನೆ ನೀಡಿದರೆ, ಬಸವಣ್ಣ ಒಂದು ೮೦೦ ವರ್ಷಗಳು ಕಳೆದರೂ, ಕನ್ನಡದ ಮನಸ್ಸು ಕನ್ನಡವಾಗಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.

ಪರಿಸ್ಥಿತಿ ಎಷ್ಟು ನಾಜೂಕಾಗಿದೆ ಎಂದರೆ, ಬಸವಣ್ಣ ಮತ್ತು ವಚನಕ್ರಾಂತಿಯ ಮಹತ್ವವನ್ನು ಕನ್ನಡಿಗರು ಅರಿತುಕೊಳ್ಳದೆ ಭಾರತೀಯರು ಅರಿತುಕೊಳ್ಳುವಂತಿಲ್ಲ; ಅದು ಭಾರತೀಯ ಪ್ರಜ್ಞೆಯ ಒಂದು ಭಾಗವಾಗದೆ ಕನ್ನಡಿಗರು ಅರಿಯುವಂತಿಲ್ಲ. ಅದಿರಲಿ, ದಾಂತೆಯ ಆಗಮನ ಯುರೋಪಿನ ಸಂದರ್ಭದಲ್ಲಿ ಪರಿಕ್ರಮ ಅಥವಾ ಪರ್ವಕಾಲವಾಗಿ ಮಾರ್ಪಟ್ಟರೆ ಸಂಕ್ರಮಣ ಕಾಲದಲ್ಲಿ ದಾಂತೆಯ ಆಗಮನವಾಯಿತು. ಎಂದಾದರು ಸಹ ಬಸವಣ್ಣನ ಆಗಮನ ಸಂಕ್ರಮಣ ಕಾಲವಾಗಿ ಮಾರ್ಪಡಲಿಲ್ಲವೆ? ಸಂಕ್ರಮಣ ಕಾಲದಲ್ಲಿ ಬಸವಣ್ಣನ ಆಗಮನವಾಗಲಿಲ್ಲವೆ? ವಚನಕ್ರಾಂತಿಯ ಆಗಮನದ ದಿಡೀರ್‌ ಆದುದೆ? ವಚನಕ್ರಾಂತಿ ಇಂದಿಗೂ ಮೇಲುನೋಟಕ್ಕಾದರೂ ಒಂದು ನಡುಗಡ್ಡೆಯ ತರಹ ಉಳಿದುಬರಲು ಆ ಹಿನ್ನೆಲೆ ಕಾರಣವೆ? ಯಾವುದೇ ಹಿನ್ನೆಲೆ – ಮುನ್ನೆಲೆ ಮತ್ತು ಸಿದ್ಧತೆ ಇಲ್ಲದೆ ಅಂತಹ ಆಂದೋಲನದ ಆಗಮನ ಸಾಧ್ಯವೇ?

ಹಾಗಾದರೆ ಬಸವಣ್ಣ ಮತ್ತು ವಚನಕ್ರಾಂತಿಯನ್ನು ರೂಪಿಸಿದ ಶಕ್ತಿಗಳಾದರೂ ಯಾವುವು? ಆ ಸೆಳೆಮಿಂಚು ಬಂದುದಾದರೂ ಎಲ್ಲಿಂದ? ಅಥವಾ ಕೇವಲ ಆಂತರಿಕ ತುಡಿತದ ಫಲವೆ?

ಗೋಪಾಲಕೃಷ್ಣ ಅಡಿಗರ ‘ನನ್ನ ಅವತಾರ’ದ ಎರಡು ಸಾಲುಗಳು:

ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?

ರಾಮ, ಬುದ್ಧ, ಗಾಂಧಿ ಮೊದಲಾದವರ ಮುಖೇನ ಭಾರತದ ವ್ಯಕ್ತಿತ್ವ ವಿಕಾಸವನ್ನು ಪರಿಶೋಧಿಸುವ ಆ ಕವನದಲ್ಲಿ ಗಾಂಧೀಜಿಯವರ ಸಂದರ್ಭದಲ್ಲಿ ಆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದರೂ ಆ ಸಾಲುಗಳು ರಾಮ, ಬುದ್ಧ ಮೊದಲಾದವರಿಗೂ ಅನ್ವಯವಾಗುವ ರೀತಿಯಲ್ಲಿ ಎಚ್ಚರವಹಿಸಲಾಗಿದೆ.

ಆದರೆ ಕನ್ನಡದ ಕವಿಯೊಬ್ಬ ಬರೆದ ಕನ್ನಡದ ಆ ಕವನದಲ್ಲಿ ಬಸವಣ್ಣನ ಪ್ರಸ್ತಾಪ ಬರುವುದಿಲ್ಲ. ರಾಷ್ಟ್ರೀಯ ಸಮೂಹ ಪ್ರಜ್ಞೆಯ ಭಾಗವಾಗಿ ಬಸವಣ್ಣ ಮಾರ್ಪಟ್ಟಿಲ್ಲ ಎಂಬುದು ಕಾರಣವಾಗಿದ್ದಿರಬಹುದು. ಭಾಷಾಮಿತಿ ಆಂದೋಲನದ ಮಿತಿಗೂ ಕಾರಣವಾಯಿತೆ? ಹಾಗಾದರೆ ಬುದ್ಧ ಬಳಸಿದ ಅರ್ಧಮಾಗಧಿ ಮೊದಲಾದ ಆಡುಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿರಲಿಲ್ಲ ಅಲ್ಲವೆ? ಭಾರತದ ಸಂದರ್ಭದಲ್ಲಿ ಮೇಲುನೋಟಕ್ಕಾದರೂ ಅನ್ಯವಾದಂತೆ ಕಾಣುವ ಕೆಲವೊಂದು ಗುಣಗಳು ವಚನ ಕ್ರಾಂತಿಯಲ್ಲಿ ಅಡಕವಾಗಿರುವುದು ಆ ಪರಿಸ್ಥಿತಿಗೆ ಕಾರಣವಾಗಿರಲೂಬಹುದು. ತಲಸ್ಪರ್ಶಿಯಾದ ಅಂಥ ಆಂದೋಲನವನ್ನು ಆವರೆಗಿನ ಭಾರತದ ಇತಿಹಾಸ ಕಂಡರಿದ ಉದಾಹರಣೆ ಇಲ್ಲ. ಹಲವಾರು ಅಂಶಗಳು ಮೇಳೈಸುವಿಕೆಯ ಫಲವಾದ ವಚನಕ್ರಾಂತಿ ಭಾರತೀಯ ಪ್ರಜ್ಞೆಯ ಭಾಗವಾಗಲಿಲ್ಲ ಏಕೆ? ಅದು ಭಾರತದ ಮನಸ್ಸು ಮತ್ತು ಮಣ್ಣಿನ ಮಿತಿಯಎ? ಅಥವಾ ಬಸವಣ್ಣ ಮತ್ತು ಅವರ ಆಂದೋಲನದ ಮಿತಿಯೆ?

ಬುದ್ಧ, ವಿವೇಕಾನಂದ, ಮಹಾತ್ಮಾಗಾಂಧಿ ಮೊದಲಾದವರ ಆಗಮನ ಹಿನ್ನೆಲೆ, ಪರಂಪರೆ ಮತ್ತು ಅವರ ಕೊಡುಗೆಯನ್ನು ಕ್ರಮಬದ್ಧವಾಗಿ ಗ್ರಹಿಸಬಹುದಾಗಿದೆ: ವಚನಕ್ರಾಂತಿ ಕರ್ನಾಟಕದಲ್ಲಿ ಆರಂಭವಾದ ರೀತಿಯೇ ಅತ್ಯಂತ ಸೋಜಿಗದ ಸಂಗತಿಯಾಗಿರುವಂತೆ, ಪರ್ಯವಸಾನಗೊಂಡ ರೀತಿ ಕೂಡ ಸೋಜಿಗ ಮೂಡಿಸುತ್ತದೆ. ಕಾಲಕ್ಕೆ ಸ್ಪಂದಿಸಿ ಕ್ರಮಬದ್ಧವಾಗಿ ಯೋಚಿಸಲು ಪ್ರಯತ್ನಿಸಿದ ಬಸವಣ್ಣನಂತಹ ಚೇತನವೊಂದು ಕರ್ನಾಟಕದಲ್ಲಿ ಹುಟ್ಟಿದ್ದೇ ಮೊದಲ ಸೋಜಿಗ. ಆ ತರಹದ ಚಿಂತನಕ್ರಮ ಬಂದುದಾದರೂ ಎಲ್ಲಿಂದ ಎಂಬುದು ಎರಡನೆಯ ಸೋಜಿಗ. ಅವರ ನಡವಳಿಕೆ ಹಾಗೂ ಅವರ ಸುತ್ತಮುತ್ತಲಿನ ಶರಣ ಸಮುದಾಯದ ಬೆಳವಣಿಗೆ ಮೂರನೇ ಸೋಜಿಗ.

ಸಮಾನತೆ, ಭ್ರಾತೃತ್ವ, ಸ್ವಾವಲಂಬನೆ ಆಧಾರಿತ ಆರ್ಥಿಕ ಪರಿಕಲ್ಪನೆ ಮೊದಲಾದವುಗಳಿಂದ ಪ್ರೇಷಿತವಾದ ಸೃಜನಶೀಲ ಬದುಕಿನ ಸಾಧ್ಯತೆಗಳನ್ನು ಮುಂದಿಟ್ಟ ವ್ಯಕ್ತಿ ಬಸವಣ್ಣ; ಅವರ ಸುತ್ತಮುತ್ತಲಿನ ಸಿದ್ಧರಾಮ ಮೊದಲಾದ ಕೆಲವರು ಆ ನಿಲುವಿನಿಂದ ಪ್ರೇಷಿತರಾದವರೇ ಆಗಿದ್ದರು. ಹಾಗಾಗಿ ವಚನ ಕ್ರಾಂತಿಯ ಆಧ್ಯಾತ್ಮಿಕ ಪರಿಕಲ್ಪನೆಗೂ ಭಾರತದಲ್ಲಿ ಆವರೆಗೂ ಅನುಸರಿಸಿಕೊಂಡು ಬಂದ ಆಧ್ಯಾತ್ಮಿಕ ನೀತಿ – ನಿಲುವಿಗೂ ಅಂತರವಿಲ್ಲದಿಲ್ಲ. ಬದುಕಿನಲ್ಲಿ ಸಂಗತವಾಗುವಂತೆ ಅದನ್ನು ಕಾಣುವ ಹಂಬಲಗಳಿಗೆ ಮೂರ್ತರೂಪ ನೀಡಲು ಯತ್ನಿಸಿದ ಕನಸಿಗರು, ಅಲ್ಲಮಪ್ರಭುವಿನಂತಹ ಸ್ವಯಂಭು ಕೂಡ ಆ ಮಾತಿಗೆ ಹೊರತಲ್ಲ.

ಉಪನಿಷದ್‌ ಋಷಿಗಳ ತರಹಕಾಡಿನಲ್ಲಿ ವಾಸಿಸಲು ಹೋಗದೆ, ಬುದ್ಧನ ತರಹ ನಿರ್ವಾಣ ತಲುಪಲು ಬದುಕನ್ನು ತ್ಯಜಿಸದೆ ಮತ್ತು ಬದುಕಿ ಬಾಳಿದನಂತರ ವಾನಪ್ರಸ್ಥಾಶ್ರಮ ಹುಡುಕಿಕೊಂಡು ಹೊರಡುವ ಆತುರ ತೋರಿಸದೆ, ಈ ಬದುಕಿನಲ್ಲಿ ಎಲ್ಲರ ತರಹ ಬದುಕುತ್ತಲೇ ಸಮಾನತೆಗಾಗಿ ಹೋರಾಡುತ್ತಲೇ ಮತ್ತು ತಮ್ಮ ಅನುಭವವನ್ನು ವಚನಮಾಧ್ಯಮದ ಮೂಲಕ ಅಭಿವ್ಯಕ್ತಗೊಳಿಸುತ್ತಲೆ, ಬದುಕಿನಲ್ಲಿ ಆಧ್ಯಾತ್ಮವನ್ನು ಸಂಗತಗೊಳಿಸಿಕೊಂಡವರು ವಚನಕಾರರು. ಲೌಕಿಕ ಬದುಕನ್ನು ಸುಂದರಗೊಳಿಸುವ ಸಂಕಲ್ಪವನ್ನು ಆಧ್ಯಾತ್ಮಿಕ ಸೌಂದರ್ಯದ ಅನಿವಾರ್ಯ ಭಾಗವಾಗಿ ಕಂಡುಕೊಂಡ ಅವರ ಆಧ್ಯಾತ್ಮಿಕ ಹಂಬಲ, ಲೌಕಿಕ ಬದುಕಿನ ಕನಸಿನಿಂದ ಪರಿತ್ಯಾಜ್ಯವಾದುದಾಗಿ ಕಾಣುವುದಿಲ್ಲ.

ಯುರೋಪಿನ ಸಂಸ್ಕೃತಿ ಮತ್ತು ನಾಗರಿಕತೆ ಪ್ರಮುಖವಾಗಿ ಮೂರು ಹಂತಗಳಲ್ಲಿ ಸಾಗಿ ಬಂದಿರುವಂತೆ, ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ಸಂದರ್ಭದಲ್ಲೂ ಅಂತಹ ಅನೇಕ ಘಟ್ಟಗಳನ್ನು ಕಾಣಬಹುದಾದರೂ, ಅವುಗಳಾವು ಮಹತ್ವದ ತಿರುವು ನೀಡಿದ ಸಂಕ್ರಮಣ ಕಾಲಗಳಾಗಿ ಕಾಣಬರುವುದಿಲ್ಲ – ಸ್ವಾತಂತ್ರ್ಯ ಸಂಗ್ರಾಮ ಹೊರತು. ಕಾವ್ಯ ಮತ್ತು ಇತರ ಸಾಂಸ್ಕೃತಿಕ ಯಾ ರಾಜಕೀಯ ಮುಖಮುದ್ರೆಗಳ ನಡುವೆ ಹೆಚ್ಚಿನ ಅನ್ಯೋನ್ಯತೆ ಅಥವಾ ಸಂಬಂಧವಿರುವಂತೆ ಕಾಣಬರುವುದಿಲ್ಲ: ವ್ಯಾಸರ ಕಾಲದ ಬಗ್ಗೆ ಹೋಗಲಿ, ವಾಲ್ಮೀಕಿ ಕಾಲದ ಬಗ್ಗೆ ದೊರಕುವ ತಿಳುವಳಿಕೆ ಬಹಳ ಸೀಮಿತವಾದುದು. ಅಗಸ್ಟಸ್‌ ಬರುವುದಕ್ಕೆ ಕನಿಷ್ಠ ಎರಡು ಶತಮಾನಗಳಿಗೂ ಮೊದಲೇ ಕಟ್ಟಲಾದ ಮೌರ್ಯರ ಸಾಮ್ರಾಜ್ಯ ಕಾವ್ಯದೃಷ್ಟಿಯಿಂದ ಅಷ್ಟೊಂದು ಪ್ರಮುಖವಾಗುವುದಿಲ್ಲ. ಬಸವಣ್ಣ ಬರುವ ಕಾಲಕ್ಕೆ ದಕ್ಷಿಣ ಭಾರತದಲ್ಲಿ ಚೋಳ, ರಾಷ್ಟ್ರಕೂಟ ಇತ್ಯಾದಿ ಭಾಷಾಪ್ರಜ್ಞೆ ಆಧಾರಿತ ಸಾಮ್ರಾಜ್ಯಗಳು ಬಂದು ಹೋಗಿದ್ದವು. ಉತ್ತರ ಭಾರತದಲ್ಲಿ ಹಿಂದಿ – ಗುಜರಾತಿ – ಬಂಗಾಳಿ – ಮರಾಠಿ ಇತ್ಯಾದಿ ಭಾಷೆಗಳ ಆಗಮನಕ್ಕೆ ಬೇಕಾದ ವಾತಾವರಣ ಸಿದ್ಧವಾಗುತ್ತಿತ್ತು.

ಅಷ್ಟರಲ್ಲಾಗಲೆ ಇಸ್ಲಾಂ ಶಕ್ತಿಗಳು ಉತ್ತರ ಭಾರತ ಪ್ರವೇಶಿಸಿಯಾಗಿತ್ತು ಎಂಬುದು ಬಹಳ ಮುಖ್ಯ.

ಆದರೂ ಹೋಮರ್‌ ಮತ್ತು ವರ್ಜಿಲರ ಆಗಮನ ಸಂಕ್ರಮಣ ಮತ್ತು ಪರ್ವಕಾಲದ ಜತೆ ಮೇಳವಿಸಿಕೊಂಡಂತೆ ವ್ಯಾಸ, ವಾಲ್ಮೀಕಿ ಮತ್ತು ಕಾಳಿದಾಸರ ಆಗಮನ ಪರ್ವಕಾಲದ ಜತೆ ಹೊಂದಿಕೊಂಡ ಉದಾಹರಣೆ ಇಲ್ಲ. ಬುದ್ಧನ ಆಗಮನ, ಮೌರ್ಯ ಸಾಮ್ರಾಜ್ಯ ಸ್ಥಾಪನೆ, ಇಸ್ಲಾಂ ಶಕ್ತಿಗಳ ಪ್ರವೇಶ ಮತ್ತು ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ತಂತ್ರಗಾರಿಕೆಯ ಆಗಮನ ಇತ್ಯಾದಿ ನಾಲ್ಕು ಘಟ್ಟಗಳಲ್ಲಿ ಭಾರತ ಎದುರಿಸಿದ ಸಂಕ್ರಮಣ ಕಾಲವನ್ನು ಪ್ರಧಾನವಾಗಿ ಗುರುತಿಸಬಹುದಾಗಿದೆ. ಬುದ್ಧ ಮತ್ತು ಮೌರ್ಯರ ಕಾಲದ ನಡುವೆ[1] ಭಾರತ ಮಹತ್ವದ ಬದಲಾವಣೆಗಳನ್ನು ಕಂಡಿದೆಯಾದರೂ, ಅವುಗಳು ಸಹಜವಾದ ಆಂತರಿಕ ಒತ್ತಡದಿಂದ ನಡೆದ ಮಾರ್ಪಾಡುಗಳಾಗಿರುವಂತೆಯೂ ತೋರುತ್ತವೆ. ಆದರೆ ಭಾರತ ನಿಜವಾದ ಅರ್ಥದಲ್ಲಿ ಸಂಕ್ರಮಣ ಪರಿಸ್ಥಿತಿಯನ್ನು ಎದುರಿಸಿದ್ದು ಇಸ್ಲಾಂ ಶಕ್ತಿಗಳ ಪ್ರವೇಶಕ್ಕೆ ತನ್ನನ್ನು ತಾನು ತೆರೆದುಕೊಳ್ಳಬೇಕಾಗಿ ಬಂದ ಕಾಲದಲ್ಲಿ ಮತ್ತು ನಂತರದಲ್ಲಿ ವಿಚಿತ್ರವೆಂದರೆ ಅವು ಕೂಡ ನಿಜವಾದ ಅರ್ಥದಲ್ಲಿ ಪರ್ವಕಾಲವಾಗಿ ಪರಿವರ್ತನೆಗೊಂಡಂತೆ ಕಾಣುವುದಿಲ್ಲ.

ಭಾರತ ನಿಜವಾದ ಅರ್ಥದಲ್ಲಿ ಸಂಕ್ರಮಣ ಕಾಲವನ್ನು ಕಂಡುದೇ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ.

ಮೌರ್ಯ ಸಾಮ್ರಾಜ್ಯ ಸ್ಥಾಪನೆಯ ಹಿಂದಿನ ಆಶಯ ಮತ್ತು ಉತ್ಸುಕತೆಗಳು ಬೀಜ ರೂಪದಲ್ಲಿ ರಾಮಾಯಣದಲ್ಲಿ ಹುದುಗಿರುವುದನ್ನು ಈಗಾಗಲೆ ಗುರುತಿಸಲಾಗಿದೆ. ಸೀತೆಯ ಅಪಹರಣ ಮತ್ತು ವಾಲಿ ಸುಗ್ರೀವರ ನಡುವಿನ ಬಿಕ್ಕಟ್ಟಿನ ರೂಪದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಹಿಂದಿನ ಸಂಕಷ್ಟಗಳನ್ನು ಶೋಧಿಸುವಂತೆ ತೋರುವ ಬುದ್ಧ ಯುಗದ ಆಜುಬಾಜಿನ ಕವಿಯಾದ ವಾಲ್ಮೀಕಿಯು, ಬುದ್ಧನ ರೂಪದಲ್ಲಿ ಭಾರತ ಎದುರಿಸಿದ ಪರ್ವಕಾಲದ ಜತೆ ತನ್ನನ್ನು ತಾನು ಸಮೀಕರಿಸಿಕೊಂಡಂತೆ ಕಾಣುವುದಿಲ್ಲ.[2]

ಆ ರೀತಿಯ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದವರೇ ಮುಂದೆ ಬಂದ ವಚನಕಾರರು. ವಚನ ಆಂದೋಲನವು ಸಮಾನತೆ ಮತ್ತು ಸೃಜನಶೀಲತೆಗಾಗಿ ನಡೆದ ಆಂದೋಲನ ಮಾತ್ರವಾಗಿರಲಿಲ್ಲ; ರಾಜಕೀಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಂದೋಲನ ಕೂಡ ಆಗಿತ್ತು. ಅದರಲ್ಲಿ ಭಾಗವಹಿಸಿದವರೆ ತಮ್ಮ ಅನುಭವಗಳನ್ನು ಪದ್ಯರೂಪದಲ್ಲಿ ದಾಖಲಿಸಿ ಹೋಗಿರುವುದು ವಚನಕ್ರಾಂತಿಯ ಮತ್ತೊಂದು ವಿಶೇಷ. ಪರ್ವಕಾಲವಾಗಿ ಮಾರ್ಪಡದ ಪರ್ವಕಾಲದಲ್ಲಿ ಬಂದವರೇ ಬಸವಣ್ಣ.[3] ಬಸವಣ್ಣನ ಆಗಮನ ಭಾರತ ಚರಿತ್ರೆಯ ಇತಿಹಾಸದಲ್ಲಿ ಎದುರಾಗಿರಬಹುದಾದ ಸಂಕ್ರಮಣ ಕಾಲದ ಜತೆ ಸಮೀಕರಿಸಿಕೊಂಡಂತೆ ಕಾಣುತ್ತದೆ. ಆ ಆಗಮನದ ಸೂಚನೆಯನ್ನು ಕವಿರಾಜಮಾರ್ಗಕಾರನಲ್ಲಿಯೇ ಕಾಣಬಹುದಾಗಿದೆ. ಆದರೂ ಕವಿರಾಜ ಮಾರ್ಗಕಾರ ಮತ್ತು ಬಸವಣ್ಣನ ಆಗಮನ ಭಾರತದ ಇತಿಹಾಸದ ಸಂದರ್ಭದಲ್ಲಿ ಸಂಕ್ರಮಣ ಕಾಲವಾಗಿ ಮಾರ್ಪಡಲಿಲ್ಲ. ಅದಕ್ಕೆ ಕಾಲದಲ್ಲಿ ಅವಕಾಶ ಇಲ್ಲದಿದ್ದುದೇ ಬಸವಣ್ಣನ ಬದುಕಿನ ಮಿತಿಯಾಯಿತೇ?

ಲೌಕಿಕ ಬದುಕಿನಲ್ಲಿ ಕಾಪಾಡಿಕೊಳ್ಳಬೇಕಾದ ಆಧ್ಯಾತ್ಮಿಕ ಎಚ್ಚರ ಮತ್ತು ಆದ್ಯಾತ್ಮಿಕ ಬದುಕಿನಲ್ಲಿ ಉಳಿಸಿಕೊಳ್ಳಬೇಕಾದ ಲೌಕಿಕ ಎಚ್ಚರದ ಬದುಕು ಸಾಗಿಸಿದವರು ಅವರು; ಆ ಮೂಲಕ ಇಡೀ ಬದುಕನ್ನು ಸೃಜನಶೀಲವಾಗಿ ಪರಿವರ್ತಿಸಲು ಹೋರಾಟ ನಡೆಸಿದ ವ್ಯಕ್ತಿ. ಸೃಜನಶೀಲತೆ ಮೇಲೆ ಬಸವಣ್ಣ ಹಾಕಿದ ಒತ್ತನ್ನು ಆವರೆಗೆ ಬಂದ ಯಾರೂ ಹಾಕಿದ ಉದಾಹರಣೆ ಇಲ್ಲ – ವಿವೇಕಾನಂದ ಹಾಗೂ ಗಾಂಧೀಜಿ ಬರುವವರೆಗೂ ಕಾಯಬೇಕಾಯಿತು. ಬಸವಣ್ಣನ ಬದುಕು ಒಂದು ಎಚ್ಚರ ಮಾತ್ರವಲ್ಲ, ಸೃಜನಶೀಲತೆಯ ಸಂಕೇತ. ವಚನ ಬರೆಯುವುದರ ಜತೆಗೆ ವಚನ ನೀಡಲು ಮುಂದಾದ ಅವರು, ಅದಕ್ಕೆ ಬದ್ಧವಾದ ಬದುಕನ್ನು ಸಾಗಿಸಿದವರು. ವಚನ ಪರಂಪರೆ ಮುಂದುವರಿಯದೆ ಹೋದುದಕ್ಕೆ ಕಾರಣ ಅಲ್ಲಿರಬಹುದು.

ಬದುಕಿನ ಸ್ಪಂದನದ ತೀವ್ರತೆ, ಕಾಲ ಮತ್ತು ಇತಿಹಾಸದ ಗತಿಯ ಪ್ರಜ್ಞೆ ಇಲ್ಲದೆ ಆ ತರಹದ ಹೋರಾಟ ಮತ್ತು ಬರವಣಿಗೆ ರೂಪಿಸಲು ಬರುವುದಿಲ್ಲ. ಬದುಕು ಮತ್ತು ಕಾಲನ ಸ್ಪಂದನ ಎಂದರೆ, ನೆರೆಹೊರೆ ಮತ್ತು ಸುತ್ತಮುತ್ತಲಿಗೆ ಸ್ಪಂದಿಸಿ ಸರಿಯಾದ ಮಾರ್ಗ ಕಾಣಲು ಹಾಗೂ ಅದನ್ನು ಬದುಕಿನ ಒಂದು ಕಠಿಣ ವ್ರತವನ್ನಾಗಿ ಸ್ವೀಕರಿಸಿ ಕಾವ್ಯ ಬರೆಯುವುದು

ಎಂದೇ ಅರ್ಥ. ಅತ್ಯಂತ ಎತ್ತರದ ಆಧ್ಯಾತ್ಮಿಕ ತಿಳುವಳಿಕೆ ಮತ್ತು ಸೌಂದರ್ಯ ಪ್ರಜ್ಞೆ ತುಂಬಿದಾಗ ಮಾತ್ರ ಅಂತಹ ಸೃಜನಶೀಲ – ಕ್ರಿಯಾಶೀಲತೆ ಬರಲು ಸಾಧ್ಯ. ವಚನಕಾರರ ಸಮಾನತೆ, ಭ್ರಾತೃತ್ವ ಮತ್ತು ಕಾಯಕ ಕಲ್ಪನೆಯ ಮಹತ್ವವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ.

ಇಸ್ಲಾಂ ಆಗಮನದ ನಂತರ ಭಾರತ ಪಡೆದುಕೊಂಡ ವೈವಿಧ್ಯ ಅಗಾಧವಾದುದಾದರೂ ಮುಸ್ಲಿಂ ದೊರೆಗಳ ಆಕ್ರಮಣದ ಆಳ್ವಿಕೆಗೆ ತನ್ನನ್ನು ತಾನು ಒಳಪಡಿಸಿಕೊಳ್ಳದೆ ಇಸ್ಲಾಂ ಸಂಸ್ಕೃತಿ ನಾಗರಿಕತೆಯಿಂದ ಪಡೆಯಬಹುದಾದನ್ನು ಪಡೆದು ತನ್ನ ಐಸಿರಿ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಭಾರತ ಕಳೆದುಕೊಂಡುದು ಏಕೆ? ಈಜಿಪ್ಟ್‌, ಇರಾಕ್‌ ಮತ್ತು ಇರಾನ್ ಹಾದಿಯಲ್ಲಿ ಭಾರತ ಸಾಗಲಿಲ್ಲ ಎಂಬುದಾಗಿ ಅನೇಕರು ಸಮಾಧಾನ ತಂದುಕೊಳ್ಳಬಹುದಾದರೂ, ಸಮಾಧಾನಕರವಾದ ಅಂಶಗಳು ಅಲ್ಲಿ ಹೆಚ್ಚಿಗೆ ಇರುವಂತೆ ಕಾಣುವುದಿಲ್ಲ. ಈಜಿಪ್ತ್‌, ಇರಾಕ್‌, ಇರಾನ್ಗಳು ಇಸ್ಲಾಂ ರಿಲಿಜನ್‌, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕಾಗಿ ಬಂದರೆ ಭಾರತ, ಅದರ ಪ್ರಭಾವ ಮತ್ತು ಇರುವಿಕೆಯನ್ನು ಭಾಗಶಃವಾಗಿಯಾದರೂ ಸ್ವೀಕರಿಸಬೇಕಾಗಿ ಬಂತು. ಪ್ರಭಾವವನ್ನು ಸ್ವೀಕರಿಸುವುದು ಬೇರೆ, ಅದರ ಆಳ್ವಿಕೆಗೆ ತುತ್ತಾಗುವುದು ಬೇರೆ. ಆ ವ್ಯತ್ಯಾಸೆ ಮತ್ತು ಹಿನ್ನೆಲೆ ಕುರಿತ ಪ್ರಶ್ನೆಗಳು ಭಾರತದ ಚಿಂತಕರನ್ನು ಬಹಳವಾಗಿ ಕಾಡತೊಡಗಿದ್ದು ತೀರ ಇತ್ತೀಚೆಗೆ. ಆ ಪ್ರಶ್ನೆಗಳು ಪಡೆದುಕೊಂಡಿರುವ ತಿರುವನ್ನು ಈ ಹಿಂದೆಯೆ ಸೂಕ್ಷ್ಮವಾಗಿ ಗುರುತಿಸಲಾಗಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್‌ ರಿಲಿಜನ್ನುಗಳ ಪ್ರಭಾವವನ್ನು ಅಂತರ್ಗತಗೊಳಿಸಿಕೊಳ್ಳಲು ಬಹುಮುಖಿಯಾದ ಭರತವರ್ಷದ ಇಂಡಿಯನ್‌ ಧರ್ಮವನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್‌ ರಿಲಿಜನ್ನುಗಳ ತರಹವೇ ರಿಲಿಜನ್‌ ಆಗಿ ಪರಿವರ್ತಿಸುವ ಪ್ರಕ್ರಿಯೆ ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಎಲ್ಲರ ಮುಂದಿದೆ: ಇಸ್ಲಾಂ ಅಥವಾ ಮತ್ತಾವುದೇ ರಿಲಿಜನ್ನುಗಳ ಪ್ರಭಾವ ಎದುರಿಸುವ ಆತುರದಲ್ಲಿ ಆಂತರಿಕವಾಗಿ ಅವುಗಳ ಮತ್ತೊಂದು ರೂಪವಾಗಿ ಪರಿವರ್ತನೆಗೊಳ್ಳುವುದಕ್ಕಿಂತ ಹೆಚ್ಚಿನ ಅಪಾಯ ಮತ್ತೊಂದಿರಲಾರದು.

ಆ ಪ್ರಭಾವ ಎದುರಿಸಲು ಭಾರತವನ್ನು ಸಿದ್ಧಗೊಳಿಸುವ ಪ್ರಕ್ರಿಯೆ ಮತ್ತು ಹೋರಾಟಕ್ಕೆ ಬಸವಣ್ಣ ೧೨ನೇ ಶತಮಾನದಲ್ಲಿಯೇ ಚಾಲನೆ ನೀಡಿದಂತೆ ಕಾಣುತ್ತದೆ. ಬಸವಣ್ಣ ಮತ್ತು ವಚನಕ್ರಾಂತಿಯು ಇಸ್ಲಾಂ ಅಥವಾ ಮತ್ತಾವುದೇ ರಿಲಿಜನ್‌ ಆಗಮನದ ವಿರುದ್ಧವಾಗಿತ್ತು ಎಂಬುದು ಆ ಮಾತಿನ ಅರ್ಥವಲ್ಲ; ಮಹತ್ವದ ಬದಲಾವಣೆ ರೂಪದಲ್ಲಿ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಇಸ್ಲಾಂ ಶಕ್ತಿಗಳ ಆಗಮನವನ್ನು ಅಪ್ರಜ್ಞಾಪೂರ್ವಕವಾಗಿಯಾದರೂ ಗ್ರಹಿಸಿ, ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಪುನರ್‌ ನಿರ್ಮಿಸುವ ಮತ್ತು ಪ್ರಭಾವವನ್ನು ತನಗೆ ಬೇಕಾದ ರೀತಿಯಲ್ಲಿ ಸ್ವೀಕರಿಸಲು ಭಾರತೀಯ ಮನಸ್ಸನ್ನು ಸಿದ್ಧಗೊಳಿಸುವ ಕೆಲಸಕ್ಕೆ ಮೊದಲು ಮಾಡಿದರು ಎಂದಷ್ಟೇ ಅರ್ಥ. ಈಗಾಗಲೇ ಗುರಿತಿಸಲಾದಂತೆ, ದಂಡಯಾತ್ರೆ ಮತ್ತು ದಾಳಿಗಳ ಅರ್ಥ ಇಸ್ಲಾಂ ಆಗಮನದೊಂದಿಗೆ ಸಂಪೂರ್ಣ ಬದಲಾಯಿತು. ಬುದ್ಧನಂತಹ ಬುದ್ಧ ಕೂಡ ರಾಜರು ಮತ್ತು ಅಧಿಕಾರಸೂತ್ರ ಹಿಡಿದವರನ್ನು ಪರಿವರ್ತಿಸುವ ಮೋಹದಿಂದ ಸಂಪೂರ್ಣ ನಿರ್ವಾಣ ಪಡೆದಿರಲಿಲ್ಲ ಎಂದ ಮೇಲೆ, ಧಾರ್ಮಿಕ ಪುರುಷರು ಮತ್ತು ರಾಜಕಾರಣದ ನಡುವಿನ ಸಂಬಂಧ ಅವುಗಳ ಹುಟ್ಟಿನಷ್ಟೇ ಪುರಾತನವಾದುದು.

ರಾಜಕೀಯವನ್ನು ರಿಲಿಜನ್ನಿನ ಮತ್ತು ರಿಲಿಜನ್ನನ್ನು ರಾಜಕೀಯದ ಪ್ರಬಲ ಅಸ್ತ್ರವಾಗಿ ಮಾಡಿಕೊಂಡ ಮೊದಲ ರಾಜಕೀಯ – ರಿಲಿಜನ್‌ ಇಸ್ಲಾಂ: ‘ಹಳೆಯ ಒಡಂಬಡಿಕೆ’, ‘ಹೊಸ ಒಡಂಬಡಿಕೆ’, ‘ಕುರಾನ್‌’, ‘ದಾಸ್‌ ಕ್ಯಾಪಿಟಲ್‌’ ಈ ರೂಪದಲ್ಲಿ ಕಣ್ಣಾಡಿಸಿ ನೋಡಿದಾಗ ಮಾತ್ರ ಆ ಮಾತಿನ ಮಹತ್ವ ಗೊತ್ತಾಗಲು ಸಾಧ್ಯವಾಗಬಹುದು. ರಿಲಿಜನ್‌ ಮತ್ತು ರಾಜಕಾರಣ ಐಕ್ಯಗೊಳ್ಳುವುದೇ ಇಸ್ಲಾಂನಲ್ಲಿ. ಅನ್ವೇಷಣೆ, ಮಹತ್ವಾಕಾಂಕ್ಷೆ, ಹೊಸ ನೆಲೆ, ಹೊಸ ಬದುಕು, ದ್ವೇಷ, ಸಾಹಸ, ಪೌರುಷ ಇತ್ಯಾದಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ನಡೆಯುತ್ತಿದ್ದ ದಂಡಯಾತ್ರೆ ಮತ್ತು ದಾಳಿಗಳಿಗೆ ರಿಲಿಜನ್ನಿನ ಮೊನಚು ಸೇರಿಕೊಂಡುದು ಸಹ ಇಸ್ಲಾಂ ಆಗಮನದ ನಂತರ. ಕ್ರಿಶ್ಚಿಯನ್‌ ರಿಲಿಜನ್ನಿನಲ್ಲಿಯೇ ಆ ಎಲ್ಲ ಅಂಶಗಳನ್ನು ಕೆಲ ಪ್ರಮಾಣದಲ್ಲಿಯಾದರೂ ಗುರುತಿಸಬಹುದಾದರೂ, ಇಸ್ಲಾಂ ಶಕ್ತಿಗಳ ಉದಯದವರೆಗೂ ಆ ‘ಕ್ರಿಶ್ಚಿಯನ್‌ ರೋಮನ್‌’ ಜಗತ್ತು ಇದ್ದೂ ಇಲ್ಲದಂತಿತ್ತು ಎಂಬುದನ್ನು ಮರೆಯಬಾರದು.

ದಂಡಯಾತ್ರೆ ಮತ್ತು ದಾಳಿ ಕಾಲದಲ್ಲಿ ಆಗುತ್ತಿದ್ದ ಅನಾಹುತಗಳ ಪ್ರಮಾಣದ ಬಗ್ಗೆ ಸಹಾನುಭೂತಿ ತೋರಿಸುವುದು ಸಾಧ್ಯವಿಲ್ಲವಾದರೂ, ಅವುಗಳಿಂದಾಗಿ ಜರುಗಿತ್ತಿದ್ದ ಸಾಮಾಜಿಕ, ಆರ್ಥಿಕ, ವಾಣಿಜ್ಯ, ರಾಜಕೀಯ, ಸಾಂಸ್ಕೃತಿಕ ಮತ್ತು ಜನಾಂಗೀಯ ವಿನಿಮಯದ ಮಹತ್ವವನ್ನು ತಿರಸ್ಕರಿಸಲು ಬರುವುದಿಲ್ಲ. ರಿಲಿಜನ್‌ಗಳ ಆಗಮನದೊಂದಿಗೆ ಆ ತರಹದ ಜನಾಂಗೀಯ ಮರುಹೊಂದಾಣಿಕೆ, ಮತಾಂತರದ ತೀವ್ರರೂಪ ಪಡೆದುಕೊಂಡುದು ಈಗ ಇತಿಹಾಸ. ಇಟಲಿಗೆ ಹೋಗಿ ನೆಲಸಿದ ಟ್ರೋಜನ್ನರು ಆ ಭಾಗದ ಜನರಲ್ಲಿ ಒಂದಾಗುವ ಅವಕಾಶವಿತ್ತು. ಸೋತ ಪರ್ಷಿಯನ್ನರು ಮತ್ತು ಇತರೆ ಜನಾಂಗದವರಿಗೆ ಸಮಾನ ಸ್ಥಾನ ನೀಡಲು ನಿರಾಕರಿಸಿ, ಆ ತೀರ್ಮಾನ ತೆಗೆದುಕೊಂಡ ಅಲೆಗ್ಸಾಂಡರ್‌ನ ವಿರುದ್ಧ ಬಂಡಾಯ ಹೂಡಿದ ಗ್ರೀಕರು ಸಹ ತಾವು ಹೋಗಿ ನೆಲೆ ನಿಂತ ಭಾಗದಲ್ಲಿ ಒಂದಾದ ಅನೇಕ ಉದಾಹರಣೆಗಳಿವೆ. ಅದೇ ತರಹ ಭಾರತಕ್ಕೆ ಕಾಲಿಟ್ಟ ಹೂಣರು, ಶಕರು, ಕುಶಾನರು ಮೊದಲಾದವರು ಇಂದು ಬೇರೆ ಉಳಿದಿಲ್ಲ. ರಿಲಿಜನ್‌ಗಳು ಮತ್ತು ಅವುಗಳ ಅಂಗವಾದ ಮತಾಂತರ ಜಾರಿಗೆ ಬಂದ ನಂತರ ಏನಾಗಿದೆ ಎಂಬುದು, ಇತಿಹಾಸದ ಕಣ್ಣ ಮುಂದಿದೆ.

ಆ ಎಲ್ಲ ತರಹದ ಬಿಕ್ಕಟ್ಟು ಮತ್ತು ಸಮಸ್ಯೆಯ ಸಾಧ್ಯತೆಗಳು ವಚನಕ್ರಾಂತಿಯಲ್ಲಿ ಭಾಗಿಯಾದ ಕೆಲವರನ್ನಾದರೂ ಅಪ್ರಜ್ಞಾಪೂರ್ವಕವಾಗಿಯಾದರೂ ಬಾಧಿಸಿರುವಂತೆ ತೋರುತ್ತದೆ. ಅದಲ್ಲದೆ ಅವರು ಪ್ರತಿಪಾದಿಸಿದ ಹೋರಾಟದ ಹಿಂದಿನ ಪ್ರೇರಣೆಗಳ ಮೂಲ ಮತ್ತು ಹಿನ್ನೆಲೆಯನ್ನು ಗ್ರಹಿಸಲು ಬರುವುದಿಲ್ಲ. ಅವುಗಳಲ್ಲಿ ಕೆಲವಾದರೂ ಗುಣಗಳು ಭಾರತದಲ್ಲಿ ಅವರಿಗೂ ಹಿಂದೆಯೆ ಪ್ರತಿಪಾದನೆಗೊಂಡಿದ್ದವು. ಆದರೆ ಬದುಕಿನಲ್ಲಿ ಅವು ಪಡೆದುಕೊಳ್ಳಬೇಕಾದ ಪ್ರಾಮುಖ್ಯತೆಗಾಗಿ ಆಂದೋಲನ ಹೂಡಿದವರೇ ಬಸವಣ್ಣ ಮತ್ತು ಇತರ ವಚನಕಾರರಾಗಿದ್ದರು. ಅವರು ಬರುವ ಕಾಲಕ್ಕಾಗಲೇ ಭಾರತ, ನೆಹರು ಗುರುತಿಸುವಂತೆ ಸ್ವಂತಿಕೆಯ ಸೃಜನಶೀಲತೆ ಕಳೆದುಕೊಂಡು ಅನುಕರಣೆ ಮತ್ತು ಪುನರಾವೃತ್ತಿಯಲ್ಲಿ ಮುಳುಗಿಹೋಗಿತ್ತು:

Civilizations, like empires, fall, not so much because of the strength of the enemy outside, as through the weakness and decay within. Rome fell not because of the barbarians; they merely knocked down something that was already dead.

……………..……………..

Long before Mahmud o Ghazni came to India this process had started. We can see the change in the minds of the people. Instead of creating new ideas and things, the people of India busied themselves with repetition and imitation of what had been done. Their minds were keen enough still, but they busied themselves in interpreting and explaining what had been said and written long ago. They still produced wonderful sculpture and carvings, but they were heavy with too much detail and ornament, and often almost a touch of the grotesque crept in. Originality was absent, and so was bold and noble design. The polished graces and arts and luxury continued among the rich and the well – to – do, but little was done to relieve the toil and misery of the people as a whole or to increase production.

All these are the signs of the evening of a civilization. When this takes place you may be sure that the life of that civilization is vanishing; for creation is the sighn of life, not repetition and imitation. – Glimpses of World History, ಪುಟ ೧೮೦.

ಸ್ವಂತಿಕೆ ಕಳೆದುಕೊಂಡ ಅನುಕರಣೆಯ ಕೊಳೆತ ನೀರಿನಲ್ಲಿ ಸ್ಫೋಟಗೊಂಡ ಮೊದಲ ನಿಜವಾದ ಸೃಜನಶೀಲ ಆಂದೋಲನವೇ ವಚನಕ್ರಾಂತಿ. ಉಪನಿಷತ್ತುಗಳ ಕಾಲದಲ್ಲೂ ಸೃಜನಶೀಲತೆ ಆ ಪ್ರಮಾಣದಲ್ಲಿ ಸಾಮೂಹಿಕ ಕ್ರಿಯಾಶೀಲ ಚಟುವಟಿಕೆಯಾಗಿ ರೂಪುಗೊಂಡ ಉದಾಹರಣೆ ಇಲ್ಲ. ಆಂತರಿಕ ದೋಷ ಮತ್ತು ಹಳಸಲು ದೌರ್ಬಲ್ಯಗಳಿಂದ ಬಿಡಿಸಿಕೊಂಡು ಎಚ್ಚೆತ್ತುಕೊಳ್ಳಲು ಸಾಧ್ಯವಾಗದೇ ಹೋದಲ್ಲಿ, ಇಡೀ ಭಾರತ ಅನ್ಯಾಕ್ರಮಣಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಒಳನೋಟ ಬಸವಣ್ಣನಿಗೆ ಆಗಲೆ ದಕ್ಕಿದಂತೆ ಕಾಣುತ್ತದೆ – ಮುಸ್ಲಿಂ ದೊರೆಗಳ ಆಳ್ವಿಕೆ ಆರಂಭವಾಗುವ ಕೆಲ ವರ್ಷ ಮೊದಲು ಅಥವಾ ಭಾರತ ಆ ಸನಿಹದಲ್ಲಿರಬೇಕಾದರೆ, ಬಸವಣ್ಣನಿಗೆ ಆ ಒಳನೋಟ ದಕ್ಕಿತು ಎಂಬುದು ಅಸಾಧಾರಣ ಸಂಗತಿಯೇ ಸರಿ. ಅದು ಅವರಿಗೆ ಗೊತ್ತಿಲ್ಲದೆಯೂ ಅಪ್ರಜ್ಞಾಪೂರ್ವಕ ಜರುಗಿರಬಹುದು. ಇಂದು ತಿರುಗಿ ನೋಡಿದರೆ, ಇಡೀ ವಚನಕ್ರಾಂತಿ ಆ ತರಹ ಇದೆ.

 

[1]ಅಲೆಗ್ಸಾಂಡರನ ಕಾಲದ ಪ್ರಭಾವವನ್ನು ಬಹಳ ಇತ್ಯತ್ಮಕವಾಗಿ ಪರಿಗಣನೆಗೆ ತಂದುಕೊಂಡರು ಸಹ

[2]ಆದರೂ ಆ ಬಗ್ಗೆ ಖಚಿತ ಮಾತನಾಡುವುದು ಕಷ್ಟದ ವಿಚಾರ.

[3]ಅಥವಾ ಹೀಗೂ ಇರಬಹುದು: ಬಂದಂಥ ಬದುಕನ್ನು ಬಂದಂತೆ ಸ್ವೀಕರಿಸಿದ ಭಾರತೀಯರಿಗೆ ಅವುಗಳೆಲ್ಲ ಮುಖ್ಯವಾಗಿ ಕಂಡಿಲ್ಲದೆಯೂ ಹೋಗಿರಬಹುದು.