II

ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಅಳಿವು ಉಳಿವು ಕುರಿತಂತೆ ಆಲೂರು ವೆಂಕಟರಾಯರು, ಬಿ.ಎಂ.ಶ್ರೀ., ಕುವೆಂಪು ಮೊದಲಾದವರು ಆಡಿದ ಮಾತುಗಳನ್ನು ಕಳೆದ ಒಂದು ನೂರು ವರ್ಷಗಳಿಂದಲೂ ಬದಲಾದ ಸನ್ನಿವೇಶಕ್ಕನುಗುಣ ಬೇರೆ ಬೇರೆ ಪದಗಳಲ್ಲಿ ಪುನರ್‌ ಉಚ್ಚರಿಸುತ್ತಾ ಬರಲಾಗುತ್ತಿದೆ. ಅದೇ ತರಹ ಇಂಗ್ಲಿಷ್‌ ಭಾಷೆಯಲ್ಲಿ ಬರವಣಿಗೆ ಮಾಡುತ್ತಿರುವವರು ಸಹ ತಮ್ಮ ಸ್ಥಿತಿ ಕುರಿತಂತೆ ಕಳೆದ ಹತ್ತಾರು ವರ್ಷಗಳಿಂದ ಇಂಗ್ಲಿಷನಲ್ಲಿ ಆಡುತ್ತಿರುವ ಮಾತುಗಳಲ್ಲಿನ ಹೊಂದಾಣಿಕೆಯನ್ನು ಗಮನಿಸದಿರಲಾಗುವುದಿಲ್ಲ. ಒಂದೇ ವ್ಯತ್ಯಾಸವೆಂದರೆ, ಯುರೋಪ್‌ ಮೂಲದ ಪಶ್ಚಿಮ ಜಗತ್ತನ್ನು ರೂಪಿಸಿದ ಸಿದ್ಧಮಾದರಿ ಮತ್ತು ಚಿಂತನ ಕ್ರಮಗಳನ್ನು ದ್ವೇಷಿಸಲು, ಇಲ್ಲವೇ ಪ್ರೀತಿಸಲು ಅಥವಾ ಟೀಕಿಸಲು, ಅಥವಾ ತಮ್ಮ ಶೋಚನೀಯ ಸ್ಥಿತಿಗೆ ತಾವೇ ಮರುಗಲು ಅವರದೇ ಆದ ಇಂಗ್ಲಿಷ್‌ ಭಾಷೆಯ ಜತೆಗೆ ಲಂಡನ್‌, ನ್ಯೂಯಾರ್ಕ್‌ಗಳನ್ನು ನೆಲೆಯಾಗಿ ಕೆಲವರು ಬಳಸಿದರೆ, ಅದೇ ಕೆಲಸವನ್ನು ಭಾರತೀಯ ಭಾಷೆಗಳ ಮೂಲಕ ದೆಹಲಿ ಇಲ್ಲವೆ ಬೆಂಗಳೂರಿನಿಂದ ಮಾಡಲಾಗುತ್ತಿದೆ. ನವವಸಾಹತುಷಾಹಿ, ಹಿತಶತ್ರು (New Colonial Order, Intimate Enemy) ಎಂಬಿತ್ಯಾದಿ ಪದಗಳಿಂದ ಅವರು ಆ ವ್ಯವಸ್ಥೆ ಜತೆಗೆ ಅನುಸಂಧಾನ ನಡೆಸಲು ಪ್ರಯತ್ನಿಸಿದರೆ, ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುತ್ತಿರುವವರ ತಳಮಳ ಮತ್ತು ಆಂತರಿಕ ಆತಂಕ ಹೆಚ್ಚುತ್ತಲೇ ಸಾಗಿದೆ.

ಆ ಕಾರಣವೇ, ಕನ್ನಡ ಇತ್ಯಾದಿ ಭಾರತೀಯ ಭಾಷೆಗಳಲ್ಲಿ ಎದುರಾದ ಕೊರತೆ ನೀಗಿಸಿಕೊಳ್ಳಲು ಇಂಗ್ಲಿಷ್‌ ಭಾಷೆಯನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಆರಿಸಿಕೊಂಡ ಜನ ಕೂಡ ಇಂದು ಸುಸ್ಥಿತಿಯಲ್ಲಿ ಇರುವಂತೆ ಕಾಣುವುದಿಲ್ಲ. ಅವರು ಎದುರಿಸುತ್ತಿರುವ ಆತಂಕ ಮತ್ತು ತಳಮಳ ಕಡಿಮೆ ಏನಲ್ಲ. ಭಾರತೀಯ ಸಂವೇದನೆ ಮತ್ತು ಜೀವನ ವಿಧಾನಕ್ಕೆ ಸಂಬಂಧಿಸಿದ ವಿವರಗಳನ್ನು ಇಂಗ್ಲಿಷ್‌ ಭಾಷೆ ಮತ್ತು ಪದಸಂಪತ್ತಿನ ಚೌಕಟ್ಟಿನ ಮಿತಿಯಲ್ಲಿ ಅಭಿವ್ಯಕ್ತಿಗೊಳಿಸುವಲ್ಲಿ ಎದುರಾಗುವ ಸಮಸ್ಯೆಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಕೆಲಸ ಮಾಡುವವರು ಎದುರಿಸಿದರೆ, ಅದೇ ಯುರೋಪಿನ ಸಿದ್ಧಮಾದರಿ ಮತ್ತು ಚಿಂತನ ಕ್ರಮಗಳನ್ನು ಕನ್ನಡ ಮೊದಲಾದ ಭಾರತೀಯ ಭಾಷೆಗಳ ಚೌಕಟ್ಟಿನಲ್ಲಿ ಪಾಲಿಸಲು ಭಾರತೀಯ ಭಾಷೆಗಳ ಲೇಖಕರು ಹೆಣಗಾಡಬೇಕಾಗಿದೆ. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಇಂಗ್ಲಿಷ್‌ ಮತ್ತು ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುತ್ತಿರುವವರು ಎದುರಿಸುತ್ತಿರುವ ಸನ್ನಿವೇಶ ಮತ್ತು ಸಮಸ್ಯೆಗಳಲ್ಲಿ ಬಹಳ ಹೊಂದಾಣಿಕೆ ಇದೆ.

ತಮ್ಮನ್ನು ಕಾಡುತ್ತಿರುವ ಆತಂಕ ಮತ್ತು ಅತಂತ್ರ ಸ್ಥಿತಿಯ ಅರಿವು ಭಾರತೀಯ ಭಾಷಾ ಲೇಖಕರು ಮತ್ತು ಸಂವೇದನಾಶೀಲರಲ್ಲಿ ತಲ್ಲಣ ಉಂಟುಮಾಡಿದೆ. ಆ ತಲ್ಲಣವೇ ಒಂದು ತರಹದಲ್ಲಿ ಆರೋಗ್ಯಕಾರಿ ಬೆಳವಣಿಗೆ ಮತ್ತು ಸಜೀವತೆಯ ಲಕ್ಷಣ. ಅದರಲ್ಲೇ ಒಂದು ತರಹದ ನೆಮ್ಮದಿ ಮತ್ತು ಖುಷಿ ಕಂಡುಕೊಂಡು ಜೀವನ ವಿಧಾನವನ್ನಾಗಿ ಪರಿವರ್ತಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ, ಅದಕ್ಕಿಂತ ಹೆಚ್ಚಿನ ಅಪಾಯ ಮತ್ತೊಂದಿರಲಾರದು. ಆ ಎರಡು ಸ್ಥಿತಿಗಳ ನಡುವಿನ ಸಂಕಷ್ಟದಲ್ಲಿ ಕನ್ನಡ ಮೊದಲಾದ ಭಾರತೀಯ ಭಾಷೆಗಳು ಸಿಕ್ಕಿಬಿದ್ದಿರುವಂತೆ ಕಾಣುತ್ತದೆ.

ಇಂಗ್ಲಿಷ್‌ ಭಾಷೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆರಿಸಿಕೊಂಡ ಜನರ ಪರಿಸ್ಥಿತಿಯನ್ನು ಒಂದು ಉದಾಹರಣೆ ನೀಡುವುದರ ಮೂಲಕ ವಿವರಿಸಲು ಪ್ರಯತ್ನಿಸಬಹುದಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಮಾಲೀಕರ ಗರ್ಭಿಣಿ ಪತ್ನಿಯ ಹೊಟ್ಟೆಯಲ್ಲಿರುವ ಮಗುವನ್ನು ತನ್ನದು ಎಂದು ಕರೆದುಕೊಳ್ಳಲು ಹಾತೊರೆಯುವ ನೌಕರನ ತರಹ, ಆಕೆ ಹೆರುವ ಮಗು ನೌಕರನದಾಗಲು ಸಾಧ್ಯವಿಲ್ಲ: ಅದು ನಿಜವಾದುದಾದಲ್ಲಿ, ಆಕೆ ಮಾಲೀಕನ ಪತ್ನಿಯಾಗಿ ಮುಂದುವರಿಯುವುದು ಕಷ್ಟದ ಮಾತು.[1] ಆ ನಿದರ್ಶನ ಉತ್ತಮ ಅಭಿರುಚಿ ಪಡೆದ ಸುಸಂಸ್ಕೃತ ಮನಸ್ಸುಗಳಿಗೆ ಅಷ್ಟಾಗಿ ಹಿಡಿಸದೆ ಹೋಗಬಹುದು. ಆದರೆ ಬೇರೆ ದಾರಿ ಇರುವಂತೆ ಕಾಣುವುದಿಲ್ಲ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದಾದರೆ, ಕನ್ನಡ ಮೊದಲಾದುವು ಎದುರಿಸುತ್ತಿರುವ ಆತಂಕ ಮತ್ತು ತಳಮಳ ಭಾರತೀಯ ಭಾಷೆಗಳಿಗೆ ಮಾತ್ರ ಸೀಮಿತವಾಗಿಲ್ಲ: ಆ ಆತಂಕ ಮತ್ತು ತಳಮಳ ಉಂಟಾಗಲು ಕಾರಣವಾಗಿರಬಹುದಾದ ಇಂಗ್ಲಿಷ್‌ ಮೊದಲಾದ ಯುರೋಪಿಯನ್‌ ಭಾಷೆಗಳು ಎದುರಿಸುತ್ತಿರುವ ಪರಿಸ್ಥಿತಿ ಮತ್ತು ಬಿಕ್ಕಟ್ಟು ಇನ್ನೂ ಹೆಚ್ಚು ಭೀಕರವಾಗಿರುವಂತೆ ತೋರುತ್ತದೆ – ಅದರಲ್ಲೂ ಜಗತ್ತಿನಾದ್ಯಂತ ಏಕಸಂಸ್ಕೃತಿಯ ಆಧಿಪತ್ಯ ಮತ್ತು ಏಕರೂಪಿ ನಾಗರಿಕತೆ ಹರಡಲು ಬಳಕೆಯಾಗುತ್ತಿರುವ ಇಂಗ್ಲಿಷಿನ ಪರಿಸ್ಥಿತಿ.

ಆನೆಗಳು ಎದುರಿಸುತ್ತಿರುವ ಪರಿಸ್ಥಿತಿ ಅರಿಯಲು ಯತ್ನಿಸುವುದರ ಮೂಲಕ ಸನ್ನಿವೇಶದ ಒಟ್ಟಾರೆ ಭೀಕರತೆಯನ್ನು ಗ್ರಹಿಸುವ ಪ್ರಯತ್ನ ನಡೆಬಹುದಾಗಿದೆ. ಭೂಮಿ ಮೇಲಿನ ಅತ್ಯಂತ ಬೃಹತ್‌ ಪ್ರಾಣಿಗಳಾದ ಅವು ಇಂದು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದು, ಕಾಲ ಮತ್ತು ದೇಶ ಎರಡೂ ಅವುಗಳ ವಿರುದ್ಧ ಸಾಗತೊಡಗಿವೆ ಎಂಬುದು ಗೊತ್ತಿರುವ ವಿಚಾರ. ಇದೇ ಪರಿಸ್ಥಿತಿ ಮುಂದುವರಿದರೆ ಆನೆಗಳು ಕೂಡ ಡಯನೋಸರಸ್‌ ಮೊದಲಾದ ಬೃಹದಾಕಾರದ ಬೃಹತ್‌ ಪ್ರಾಣಿಗಳಂತೆ ಸದ್ಯದಲ್ಲಿಯೇ ಕಾಣೆಯಾಗಬೇಕಾಗಿಬರಬಹುದು ಎಂಬ ಆತಂಕ ಪರಿಸರವಾದಿಗಳು ಮತ್ತು ಗಜಶಾಸ್ತ್ರಜ್ಞರನ್ನು ಈಗಾಗಲೇ ಕಾಡತೊಡಗಿದೆ. ಹಾಗಾಗಿ ಆನೆಗಳ ಮುಂದಿರುವ ದಾರಿ ಎರಡೇ ಎರಡು ಕಿರಿದಾಗುತ್ತಿರುವ ವಾಸಸ್ಥಾನಕ್ಕೆ ಅನುಗುಣ ಗಾತ್ರದಲ್ಲಿ ಕಿರಿದಾಗಿ ಬದುಕಿ ಉಳಿಯುವುದು. ಇಲ್ಲವೆ, ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ವಿಶ್ವದ ‘ಪ್ರಗತಿ’ಗೆ ಅನುಗುಣ ಒಂದು ದಿನ ಇಲ್ಲವಾಗಿಬಿಡಬಹುದು. ಅದೇ ಪರಿಸ್ಥಿತಿ ಗಿರಿಜನ ಮೊದಲಾದ ಅನೇಕ ವನವಾಸಿ ಸಮುದಾಯಗಳನ್ನು ಕಾಡತೊಡಗಿದೆ: ಕಾಣೆಯಾಗುತ್ತಿರುವ ಅರಣ್ಯಗಳ ತರಹವೇ ಒಂದಲ್ಲ ಒಂದು ದಿನ ಕಣ್ಮರೆಯಾಗಿ ಹೋಗುವುದು, ಇಲ್ಲವೆ ಆದಿವಾಸಿ ಸಂಸ್ಕೃತಿಯಿಂದ ನಾಗರಿಕತೆಯ ಹಾದಿಯಲ್ಲಿ ಅನೇಕ ಹಂತಗಳನ್ನು ಸಾಗಿಬಂದಿರುವ ಮನುಷ್ಯ ಜನಾಂಗದ ವಿವಿಧ ವೇಷಗಳಲ್ಲಿ ಒಂದಾಗಿಬಿಡುವುದು.

ಆ ಎರಡರ ಪರಿಣಾಮವೂ ಒಂದೆ. ಕುಗ್ಗುತ್ತಿರುವ ಕಾಡುಗಳ ಗಾತ್ರಕ್ಕೆ ಅನುಗುಣ ಕುರಿ, ಕುದುರೆ ಅಥವಾ ಎತ್ತುಗಳ ರೀತಿ ಮಾರ್ಪಾಡಾಗುವುದಾದಲ್ಲಿ ಆನೆಗಳು ಆನೆಗಳಾಗಿ ಉಳಿಯಲು ಸಾಧ್ಯವಿಲ್ಲ. ಕೇವಲ ಮೃಗಾಲಯದಲ್ಲಿ ಆನೆಗಳ ಸಂತತಿಯನ್ನು ಮುಂದುವರಿಸಲು ಬರುವುದಿಲ್ಲ. ಅರಣ್ಯಗಳಲ್ಲಿ ಇಂದಿಗೂ ಉಳಿದು ಬಂದಿರುವ ವಿವಿಧ ಗಿರಿಜನ ಸಮುದಾಯಗಳು ನಾಗರಿಕ ಸಮಾಜದಲ್ಲಿ ಒಂದಾಗಿ ಹೋಗುವುದೇ, ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲ ತಾಯಿಬೇರಾದ ಆದಿಸಂಸ್ಕೃತಿ – ಎಂಕಿಡು – ಗಿಲ್ಗಮೆಷ್‌ ಕತೆ – ಎದುರಿಸುತ್ತಿರುವ ಬಿಕ್ಕಟ್ಟಿಗೆ ಇರುವ ಏಕೈಕ ಪರಿಹಾರವೇ? ಹಿಂದೂ ಧರ್ಮವನ್ನು ರಿಲಿಜನ್‌ ಆಗಿ ಪರಿವರ್ತಿಸದ ಹೊರತು ಉಳಿಗಾಲವಿಲ್ಲವೇ? ಅದೇ ಪರಿಹಾರ ಎಂಬುದಾದಲ್ಲಿ, ಕನ್ನಡ ಮೊದಲಾದ ಭಾಷೆಗಳನ್ನು ಯುರೋಪಿಯನ್‌ ಭಾಷೆಗಳ ಪಡಿನೆಳಲಾಗಿ ಪರಿವರ್ತಿಸುವುದು ಇರುವ ಏಕೈಕ ಮಾರ್ಗವೇ? ಪ್ರಭಾವ ಬೇರೆ, ಪರಿವರ್ತನೆ ಬೇರೆ. ಬೇರೊಂದು ಭಾಷೆಯ ಪ್ರಭಾವ ಮತ್ತು ಪರಿಣಾಮವನ್ನು ಸ್ವೀಕರಿಸಬೇಕಾದ ಪ್ರಮಾಣದಲ್ಲಿ ಸ್ವಾಗತಿಸಿ ತನ್ನ ಸಂಸ್ಕೃತಿ ಮತ್ತು ಭಾಷೆಯಲ್ಲಿ ಬದಲಾವಣೆ ತರುವುದರ ಮೂಲಕ ಉತ್ತಮಪಡಿಸಿಕೊಳ್ಳುವುದು ಬೇರೆ, ಅದೇ ತರಹ ಮಾರ್ಪಾಡಾಗುವುದು ಬೇರೆ.

ಹಾಗಾಗಿ ಕನ್ನಡ ಮೊದಲಾದ ಭಾಷೆಗಳು ಎದುರಿಸುತ್ತಿರುವ ಆತಂಕ ಮತ್ತು ತಲ್ಲಣ ಒಟ್ಟಾರೆ ವಿಶ್ವದ ಪರಿಸ್ಥಿತಿಗೆ ಹೊಂದಿಕೊಂಡಿದೆ.

ಕಾವ್ಯಕಲೆ ಮತ್ತು ಅದರ ಇತಿಹಾಸ ಸಾಗಿಬಂದ ಹಾದಿಯಲ್ಲಿ ಗುರಿತಿಸುವುದು ಎಂದರೆ, ಹರಡಿ ಹೋಗುತ್ತಿರುವ ಅದರ ಸೆಲೆಗಳನ್ನು ಗುರಿತಿಸುವ ಪ್ರಯತ್ನವಾಗಿ ಮಾರ್ಪಡುವ ಅಪಾಯ ಇಲ್ಲದಿಲ್ಲ: ಆ ಅಪಾಯ ಎಂದಿಗಿಂತ ಇಂದು ಹರಚ್ಚು ನಿಜವಾಗತೊಡಗಿದೆ. ಅದು ತಾತ್ಕಾಲಿಕ ಬೆಳವಣಿಗೆಯೇ ಅಥವಾ ವಸ್ತುಸ್ಥಿತಿಯೇ ಎಂಬ ಪ್ರಶ್ನೆಗೆ ಉತ್ತರವನ್ನು ಕಾಲದ ಗರ್ಭದಲ್ಲಿ ಮಾತ್ರ ಹುಡುಕಲು ಸಾಧ್ಯ. ಕಾವ್ಯ ಸಂಸ್ಕೃತಿ ಮತ್ತು ಪರಂಪರೆ ಎಂದೂ, ನೆಲೆರಹಿತ ಪರಿಸ್ಥಿತಿಯನ್ನು ಇಂದು ಎದುರಿಸುತ್ತಿರುವ ಈ ಪ್ರಮಾಣದಲ್ಲಿ ಎದುರಿಸಬೇಕಾಗಿ ಬಂದಿರಲಿಲ್ಲ. ಒಂದು ಕಾಲದಲ್ಲಿ ಮತ್ತು ತೀರ ಇತ್ತೀಚಿನವರೆಗೂ ಕಾವ್ಯ ಕಾದಂಬರಿ ಬರೆಯುವುದರಿಂದ ಬರುತ್ತಿದ್ದ ಹಣ ಅಥವಾ ಕೀರ್ತಿ ಪ್ರಾಸಂಗಿಕವಾದುದಾಗಿತ್ತು. ಇಂದು ಪರಿಸ್ಥಿತಿ ಎಷ್ಟು ಬದಲಾಗಿದೆ ಎಂದರೆ, ಹಣದ ಆರಾಧನೆಯೇ ಪ್ರಧಾನವಾಗುವುದು ಅನಿವಾರ್ಯ ಎನಿಸುವಷ್ಟರ ಮಟ್ಟಿಗೆ: ಕಾವ್ಯಕ್ಕಿಂತಲೂ ಹೆಚ್ಚಾಗಿ ಕವಿಗಳು ಸಾಹಿತಿಗಳು ಬದಲಾಗಿ ಹೋಗಿದ್ದಾರೆ, ಇಲ್ಲದೆ ಹೋದಲ್ಲಿ ಉಳಿಗಾಲವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿ ದಶಕಗಳೇ ಕಳೆಯಲು ಬಂದಿವೆ ( ಅದರಲ್ಲೂ ಪಶ್ಚಿಮ ಜಗತ್ತಿನಲ್ಲಿ). ಅದರ ಪರಿಣಾಮ, ಆ ಪ್ರಭಾವ ವಲಯದ ವ್ಯಾಪ್ತಿಗೆ ಬಂದಿರುವ ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಆಗಿರುವುದು ಈಗ ಬಹಳ ಹಳೆಯ ಮಾತು. ರಾಜಕೀಯ ಮತ್ತು ಅರ್ಥಶಾಸ್ತ್ರಗಳ ನಡುವಿನ ಸಂಬಂಧ ಮತ್ತು ಹೊಂದಾಣಿಕೆಯಲ್ಲಿನ ಬದಲಾವಣೆಯನ್ನು ಗ್ರಹಿಸುವುದರ ಮುಖೇನ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಬಹುದಾಗಿದೆ.

ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ – ಕೆಲವೇ ವರ್ಷಗಳ ಹಿಂದೆ – ಆರ್ಥಿಕ ಶಿಸ್ತು ಮತ್ತು ಚಿಂತನೆ ಬಳಕೆಯಾಗಿತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಿರುಗಮುರುಗ ಆಗಿದ್ದು, ಆರ್ಥಿಕ ವ್ಯವಹಾರ ಮತ್ತು ವಾಣಿಜ್ಯ ಕಾರಣಗಳಿಗಾಗಿ ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ಮೊದಲಾದ ಎಲ್ಲ ಸಂಗತಿಗಳು ಪೂರಕವಾಗಿ ಬಳಕೆಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಬೇಂದ್ರೆಯವರು ಬದುಕಿದ್ದಲ್ಲಿ, ಅವರ ‘ಕುರುಡು ಕಾಂಚಾಣ’ ಪಡೆದುಕೊಳ್ಳಬೇಕಿದ್ದ ರೂಪವೇ ಬೇರೆಯಾಗುತ್ತಿತ್ತು.

ಒಟ್ಟಾರೆ ಕಾವ್ಯ ಪರಂಪರೆ ಮತ್ತು ಸೃಜನಶೀಲತೆ ಎದುರಿಸಬೇಕಾಗಿರುವ ಆತಂಕದ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಎದುರಿಸುತ್ತಿರುವ ಆತಂಕ ಮತ್ತು ತಳಮಳದ ಪ್ರಶ್ನೆಗಳನ್ನು ಆರಿಯಬೇಕಾಗಿದೆ. ಆನೆಗಳು ಎದುರಿಸುತ್ತಿರುವ ಪರಿಸ್ಥಿತಿ ಮುಖೇನವೆ ಅದನ್ನು ಅರಿಯಲು ಪ್ರಯತ್ನಿಸುವುದು ಸೂಕ್ತ. ಅವು ಎದುರಿಸಬೇಕಾಗಿ ಬಂದಿರುವ ಅನಿಶ್ಚಿತ ಸ್ಥಿತಿ ಇಲ್ಲಿಯವರೆಗೂ ಸಾಗಿಬಂದಿರುವ ವಿಕಾಸದ ಗತಿಗೆ ಅನುಗುಣವಾಗಿದ್ದು ಒಂದಲ್ಲ ಒಂದು ದಿನ ಡಯನೋಸರಸ್‌ಗಳ ತರಹವೆ ಭೂಮಿಯ ಮೇಲಿಂದ ಕಣ್ಮರೆಯಾಗಬೇಕಾಗಿಬರುವುದು ಆ ವಿಕಸನಶೀಲತೆಗೆ ಅನುಗುಣವಾಗಿಯೇ ಇರಬಹುದು ಎಂಬ ಮಾತು, ವಿಧಿವಾದ ಅಥವಾ ಕರ್ಮಸಿದ್ಧಾಂತ ಇತ್ಯಾದಿಗಳ ತರಹವೇ ಕೇಳಿಸಿದರೆ ಆಶ್ಚರ್ಯವಿಲ್ಲ. ಆನೆಗಳು ಬದುಕಿ ಉಳಿಯುವಂತೆ ಮಾಡುವ ಯಾವುದೇ ಪ್ರಯತ್ನಗಳು ಆ ವಿಕಾಸದ ಗತಿಗೆ ಅಡ್ಡಿ ಉಂಟು ಮಾಡಿದಂತೆ ಎಂಬ ವಾದವೂ ಇಲ್ಲದಿಲ್ಲ. ಆ ಮಾತು, ಏನು ಆಗಬೇಕೋ ಅದು ಆಗಿಯೇ ತೀರುತ್ತದೆ ಎಂಬ ಪರಂಪರಾಗತ ಹೇಳಿಕೆಯಂತೆ ಕೇಳಿಸಲೂಬಹುದು. ಚಲಿಸುತ್ತಿರುವ ಪ್ರಕೃತಿಯ ಆಯ್ಕೆಯ ಫಲವನ್ನು ಆನೆಗಳ ಅದ್ಯದಲ್ಲಿಯೇ ಉಣ್ಣಬೇಕಾಗಿಬರಬಹುದು ಎಂಬುದಾಗಿ ಒಂದು ವರ್ಗದ ಪರಿಸರವಾದಿಗಳು ಮುಂದೊಡ್ಡುವ ಚಿರಪರಿಚಿತವಾಗಿ ಹೋಗಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿ, ಮತ್ತು ಆ ಸ್ಥಿತಿಯಲ್ಲಿಯೇ ಉಳಿದಿರುವ ಅನೇಕ ಭಾಷಾ ಸಮುದಾಯಗಳು, ಎದುರಿಸುತ್ತಿರುವ ಆತಂಕ ಮತ್ತು ತಳಮಳವು ವಿಕಾಸದ ಗತಿ ಮತ್ತು ಸ್ವಾಭಾವಿಕ ಆಯ್ಕೆಗೆ ಅನುಗುಣವಾಗಿದೆ ಎಂದು ಅರ್ಥವೇ?

ಯಾವ ಮಾರ್ಗ ಅನುಸರಿಸುವುದರಿಂದ ಆ ತರಹದ ಪ್ರಶ್ನೆಗಳಿಗೆ ಉತ್ತರ ಹೇಳಲು ಅಥವಾ ಕಂಡುಕೊಳ್ಳಲು ಸಾಧ್ಯ? ಈ ಜಗತ್ತು ಯಾವಾಗ ಕೊನೆಯಾಗುತ್ತದೆ ಎಂಬ ಪ್ರಶ್ನೆಗಳ ತರಹವೆ ಆ ಕುರಿತ ಪ್ರಶ್ನೆಗಳು ಸದ್ದು ಮಾಡುತ್ತವೆ. ವರ್ಜಿಲ್‌ ಮೊದಲಾದ ಕೆಲ ಕವಿಗಳು ಮತ್ತು ಚಿಂತಕರಿಗೆ ದಕ್ಕಿದ ಒಳನೋಟ ಅಥವಾ ಮುನ್ನೋಟದ ಪರಂಪರೆ ಇಲ್ಲಿಯೂ ಮುಂದುವರಿಯುವ ಅವಕಾಶವಿದೆಯೆ? ಆ ಪರಂಪರೆಯಿಂದ ಬಂದ ತಿಳುವಳಿಕೆ ಮತ್ತು ಅರಿವು ಆಧರಿಸಿ ಈ ಮೇಲೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವೆ? ಮೂಲತಃ ಕವಿಗಳು ಬೆಳೆಸಿಕೊಂಡು ಬಂದ ಆ ಪರಂಪರೆಯು ಕವಿಗಳದೇ ಆಗಿ ಉಳಿದಿಲ್ಲ.

ಕ್ರಿಸ್ತನ ಆಗಮನ ಕುರಿತಂತೆ ವರ್ಜಿಲ್‌ ಬರೆದಿದ್ದಾನೆ ಎಂದು ಭಾವಿಸಲಾದ ಪದ್ಯವನ್ನು ತಪ್ಪಾಗಿ ಭಾವಿಸಿದ ಅನೇಕರು, ಕಾಲಜ್ಞಾನ ಮತ್ತು ಜ್ಯೋತಿಷದ ತರಹ ಭಾವಿಸಿದರೆ ಅದು ವರ್ಜಿಲನ ತಪ್ಪಲ್ಲ. ರೋಮನ್ನರ ವಿಶ್ವಸಾಮ್ರಾಜ್ಯದ ಕನಸಾಗಲಿ ಮತ್ತು ಸರ್ಕಾರವೆ ರೋಮನ್ನರ ಮಾಧ್ಯಮ ಎಂಬ ಹೇಳಿಕೆಯಾಗಲಿ ಕೇವಲ ಮಾತುಗಳಾಗಿ ಇಂದು ಉಳಿದಿಲ್ಲ. ರೋಮ್‌ ಬುನಾದಿಯಾದ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಜಗತ್ತಿನ ಎಲ್ಲ ಜನಾಂಗಗಳು ಸ್ವೀಕರಿಸಬೇಕೆಂಬ ತಮ್ಮ ಆಶಯ ಮತ್ತು ಕನಸನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವ ಹಾದಿಯಲ್ಲಿ ಈಗಾಗಲೆ ಬಹುದೂರ ಸಾಗಿ ಬಂದಿದ್ದಾರೆ. ಆದರೆ, ತಮ್ಮ ಆ ಏಕಸ್ವಾಮ್ಯವನ್ನು ಒಪ್ಪಿಕೊಂಡು ಜಗತ್ತಿನ ಉಳಿದ ಭಾಗದ ಜನರು ಸಾಮರಸ್ಯದಿಂದ ಬದುಕಬೇಕೆಂಬುದು ಅವರ ಮತ್ತೊಂದು ದೊಡ್ಡ ಕನಸು: ಆ ವಿಚಾರದಲ್ಲಿ ಅನೇಕ ತರಹದ ಒತ್ತಡ ಮತ್ತು ತೊಂದರೆಗಳನ್ನು ಎದುರಿಸುತ್ತಿರುವ ಅವರು, ಅವುಗಳನ್ನು ನಿಭಾಯಿಸುವಾಗ ತೋರುತ್ತಿರುವ ‘ಜಾಣತನ’.

ನರಕ, ಸ್ವರ್ಗ ಮತ್ತು ಮಾರ್ಜಕಲೋಕದಲ್ಲಿ ದಾಂತೆ ಕಾಣುವ ಬದುಕು ಇಂದು ಅದರ ತೀಕ್ಷ್ಣ ಮತ್ತು ತೀವ್ರ ರೂಪದಲ್ಲಿ ಹಂಚಿಹೋಗಿದ್ದು ಕೆಲವರ ಪಾಲಿಗೆ ಇಡೀ ಬದುಕೇ ನರಕವಾದರೆ, ಮತ್ತೆ ಕೆಲವರ ಪಾಲಿಗೆ ಇಡೀ ಬದುಕು ಸ್ವರ್ಗವಾಗಿ ಹೋಗಿದೆ: ಆ ನರಕದ ಹಿಂದಿನ ಸ್ವರ್ಗದ ಕ್ಷಣಿಕ ಕ್ಷಣಗಳನ್ನು ಕಾಣಲು ಸೂಕ್ಷ್ಮದರ್ಶಕ ಯಂತ್ರದ ನೆರವು ಬೇಕಾಗಿಲ್ಲವಾದಂತೆಯೇ, ಸ್ವರ್ಗದಲ್ಲಿರುವವರು ಸಾಗಿಸುತ್ತಿರುವ ನರಕದ ಬದುಕನ್ನು ಕಾಣಲು ದೂರ ದರ್ಶನದ ಸಹಾಯ ಬೇಕಾಗಲಾರದು.

ಅಂತಹ ಮುನ್ನೋಟದ ಪರಂಪರೆ ಮುಂದುವರಿಸಿದ ಗಯಟೆ ಮೊದಲಾದ ಅನೇಕ ಕವಿಗಳನ್ನು ಯುರೋಪ್‌ ಕಂಡಿದೆ. ಆತ ಸೃಷ್ಟಿಸಿದ ‘ಫೌಷ್ಟ್‌’ ಮತ್ತು ‘ಮೆಪಿಸ್ಟೊಫಿಲಿಸ್‌’ ಸಂಘರ್ಷ ಒಂದು ಉದಾಹರಣೆ.

ಆ ಸಮಸ್ಯೆಯನ್ನು ಅದರ ಅತ್ಯಂತ ತೀವ್ರ ಮತ್ತು ತೀಕ್ಷ್ಣ ರೂಪದಲ್ಲಿ ಗ್ರಹಿಸಿ ಕಾವ್ಯ ರಚಿಸಲು ಪ್ರಯತ್ನಿಸಿದ ೨೦ನೇ ಶತಮಾನದ ಕವಿಗಳ ಪೈಕಿ ಯೇಟ್ಸ್‌ ಮತ್ತು ಎಲಿಯಟ್‌ ಬಹಳ ಪ್ರಮುಖರು: ಅವರಿಗೆ ದಕ್ಕಿದ ಪ್ರಾಮುಖ್ಯತೆ ಮತ್ತು ಮಹತ್ವಕ್ಕೆ ಪೂರಕವಾದ ಕಾರಣಗಳು ಅಲ್ಲಿವೆ. ಆದರೆ ಮುನ್ನೋಟ ಹರಿಸುವ ಯುರೋಪ್‌ ಮೂಲದ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಅವರು ಸಮರ್ಥರಾದರೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳಲು ಸಾಧ್ಯವಾದಲ್ಲಿ, ಭಾರತೀಯರಿಗೂ ಅವಕಾಶ ಮತ್ತೆ ಬರುವುದೆ ಎಂಬ ಪ್ರಶ್ನೆಗಳಿಗೂ ಅಲ್ಲಿಯೆ ಉತ್ತರ ದಕ್ಕಬಹುದಾದ ಸಾಧ್ಯತೆ ಇಲ್ಲದಿಲ್ಲ.

ಯೇಟ್ಸ್‌ನ ಮಹತ್ವದ ಪದ್ಯಗಳು ಹಿಂದಕ್ಕೆ ತಿರುಗಿ ನೋಡುವ ಪ್ರವೃತ್ತಿ ಮತ್ತು ಮನಃಸ್ಥಿತಿಯಲ್ಲಿ ಕೊನೆಗೊಂಡರೆ, ಎಲಿಯಟ್‌ನ ಪದ್ಯಗಳು ಅವನೇ ಒಂದು ಕಡೆ ಹೇಳುವಂತೆ, Not with a bang but a whimper ನಿಂದ ಕೊನೆಗೊಳ್ಳುತ್ತವೆ.

ಯೇಟ್ಸ್‌ನ “ದಿ ಸೆಕೆಂಡ್‌ ಕಮಿಂಗ್‌’ನ ಹೆಸರೇ ಹೇಳುವಂತೆ, ಕ್ರಿಸ್ತ – ಶಕ್ತಿಯ ಮರು ಆಗಮನಕ್ಕಾಗಿ ಹಾರೈಸಿ ಬರೆದ ಪದ್ಯ. ಆದರೆ ಅದು ಕೊನೆಗೊಳ್ಳುವ ರೀತಿ ನೋಡಿದರೆ: Slouches towards Bethlehem to be born? ಎಂಬಲ್ಲಿನ ಪ್ರತೀಕ್ಷೆ, ಸಂಶಯ, ಆಶ್ಚರ್ಯ ಮತ್ತು ಪ್ರಶ್ನಾರ್ಥಕ ಮನೋಭಾವ ಮಿಶ್ರಿತ ದನಿ ಒಟ್ಟೊಟ್ಟಿಗೆ ಪ್ರಕಟವಾಗುವುದನ್ನು ಗಮನಿಸಲಾಗದಿರುವುದಿಲ್ಲ. ಅದೊಂದು ರೀತಿಯಲ್ಲಿ ಹೊಸ ಬೆಳವಣಿಗೆಯೇ ಸರಿ. ಆತನ ಮತ್ತೊಂದು ಪ್ರಮುಖ ಪದ್ಯವಾದ “ಸೈಲಿಂಗ್‌ ಟು ಬೈಜಾಂಟಿಯಮ್‌” ಕೂಡ ಅದೆ ತರಹದ ಮಿಶ್ರದನಿಗಳಿಂದ ತುಂಬಿದ ಪದ್ಯ. “ದಿ ಸೆಕೆಂಡ್‌ ಕಮಿಂಗ್‌”ನಲ್ಲಿ ಈಜಿಪ್ತ್‌ ಸೇರಿದಂತೆ ಏಷ್ಯಾದ ಹಿನ್ನೆಲೆ ಬಂದರೆ, “ಸೈಲಿಂಗ್‌ ಟು ಬೈಜಾಂಟಿಯಮ್‌”ನಲ್ಲಿ ಗ್ರೀಸ್‌ನ ಹಿನ್ನೆಲೆಯೂ ಬಂದು ಸೇರಿಕೊಳ್ಳುತ್ತದೆ:

To lords and ladies of Byzantium
Of what is past, or passing, or to come.

ಹಿಂದಿನ, ಇಂದಿನ ಮತ್ತು ಮುಂದನ್ನು ಒಳಗೊಳ್ಳುವ ಆಸಯದೊಂದಿಗೆ ಆ ಕವನ ಕೊನೆಗೊಳ್ಳುವುದನ್ನು ಗಮನಿಸಬೇಕು: ಅದು ಆಶಯ ಮತ್ತು ಹಾರೈಕೆ ಮಾತ್ರ. ಅದೇ ಧೋರಣೆ ಧ್ವನಿತವಾಗುವುದನ್ನು ಅವನ ಮತ್ತೊಂದು ಮಹತ್ವದ ಕವನವಾದ “ಅಮಾಂಗ್‌ ಸ್ಕೂಲ್‌ ಚಿಲ್ಡ್ರನ್ಸ್‌”ನಲ್ಲೂ ಗುರುತಿಸಬಹುದಾಗಿದೆ:

How can we know the dancer from the dance?

ಮುಂದಿನ ಮತ್ತು ಬರುವ ಜನಾಂಗದ ಮನಃಸ್ಥಿತಿ, ಸಂರಚನೆ ಮತ್ತು ಚಿಂತನ ವೈಖರಿ ಕುರಿತಂತೆ ಮಾಡಿದ ಮುಂದಾಲೋಚನೆಯ ದಿಟ್ಟ ಪ್ರಯತ್ನವಾದ ಆ ಕವನ ಕೂಡ, ‘ಡ್ಯಾನ್ಸ್‌’ನಿಂದ ‘ಡ್ಯಾನ್ಸರ್‌’ಅನ್ನು ಗುರುತಿಸುವುದು ಹೇಗೆ ಎನ್ನುವ ಅನಿಶ್ಚಿತ ಧಾಟಿಯಲ್ಲಿಯೆ ಕೊನೆಗೊಳ್ಳುತ್ತದೆ: ‘ಡ್ಯಾನ್ಸರ್‌’ ಎಂಬ ಆ ಪದ ವಿಧಿ, ಕಾಲ ಅಥವಾ ಇತಿಹಾಸದ ಗತಿಗೆ ಸಂಕೇತ ಆಗಿಬಿಡಬಹುದು. ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಹುನ್ನಾರಿನಿಂದ ಆಗುತ್ತಿರುವ ಮಾರ್ಪಾಡುಗಳು, ಆ ಪರಿಸ್ಥಿತಿಯ ಉತ್ಪಾದನೆಗಳಾಗುವ ಬರುವ ತಲೆಮಾರಿನ ಜನರಿಗೆ ‘Plato’s parable’, ‘Solider Aristotle’ ಹಾಗೂ ಕ್ರಿಸ್ತನ ನೆನಪು ತರುವ ‘Chestnu tree’ ಮುಖ್ಯವಾಗುವುವೆ? ಅದು ಕೇವಲ ತಾತ್ಕಾಲಿಕ ಬೆಳವಣಿಗೆಯ ಅಥವಾ ಖಾಯಂ ಆದ ಪರಿವರ್ತನೆಯೆ?

ಆ ಅರ್ಥದಲ್ಲಿ ಕೂಡ ಯೇಟ್ಸ್‌ ಹೋಮರನ ಪರಂಪರೆಗೆ ಹತ್ತಿರ ಬರುವ ಕವಿ. ಮುನ್ನೋಟ ಬೀರುವ ವಿಚಾರದಲ್ಲಿ ಯೇಟ್ಸ್‌ಗಿಂತ ಭಿನ್ನಜಾಡಿನಲ್ಲಿ ಸಾಗುವ ಎಲಿಯಟ್‌ ವಹಿಸುವ ಧೈರ್ಯ, ಆತ ಪ್ರತಿನಿಧಿಸುವ ವರ್ಜಿಲ್‌ ದಾಂತೆ ಪರಂಪರೆಗೆ ಸಹಜವಾದುದಾಗಿ ಕಾಣುತ್ತದೆ. ಆತನ ಅತ್ಯಂತ ಮಹತ್ವದ ಸಾಧನೆಯಾದ ‘ದಿ ವೇಸ್ಟ್‌ ಲ್ಯಾಂಡ್‌’ ಉಪನಿಷತ್‌ನ ‘ದ’ ದ ಅರ್ಥ ವಿವರಣೆ ಮತ್ತು ಶಾಂತಿ ಮಂತ್ರ ಜಪಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಮುನ್ನೋಟ ಬೀರುವ ವಿಚಾರದಲ್ಲಿ ಎಲಿಯಟ್‌ ಬಹಳ ಧೈರ್ಯವಹಿಸಲು ಪ್ರಯತ್ನಿಸಿರುವುದೇ ‘ದಿ ಹಾಲೊ ಮೆನ್‌’ನಲ್ಲಿ: This is the way the world ends ಎಂಬ ಸಾಲು ಮೂರು ಸಾರಿ ಪುನರಾವೃತ್ತಿಗೊಂಡ ನಂತರ ಬರುವ Not with a bang but a whimper ಎಂಬ ನುಡಿ ಗಮನಾರ್ಹ. ‘ಬಟ್‌’ ಮತ್ತು ‘ವಿಂಪರ್‌’ ನಡುವೆ ‘ವಿತ್‌’ ಇಲ್ಲದಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

ಅಣುಬಾಂಬ್‌ ಸ್ಫೋಟಿಸುವುದಕ್ಕೆ ಮೊದಲು ರಚಿತವಾಗಿರುವ ಆ ಕವನದ ‘ಬ್ಯಾಂಗ್‌’ ಪದವನ್ನು ಈ ವಿಶ್ವದ ಹುಟ್ಟು, ವಿಕಾಸ ಮತ್ತು ಅವಸಾನ ಅರ್ಥೈಸಬಯಸುವ ಮಹಾಸ್ಫೋಟ ಸಿದ್ಧಾಂತ (Bang Theory) ಮತ್ತು ಎರಡನೇ ಜಾಗತಿಕ ಸಮರ ಕಾಲದಲ್ಲಿ ನಡೆದ ಬಾಂಬ್‌ಸ್ಫೋಟದ ಹಿನ್ನೆಲೆಯಲ್ಲಿ ಅರಿಯಲು ಪ್ರಯತ್ನಿಸಿದಲ್ಲಿ, ಮುನ್ನೋಟ ಬೀರುವ ಪರಂಪರೆ ಎದುರಿಸುತ್ತಿರುವ ಬಿಕ್ಕಟ್ಟನ್ನು ಅರಿಯಲು ಸಹಾಯಕವಾಗಬಹುದೆಂದು ತೋರುತ್ತದೆ. ಕ್ರಿಸ್ತನ ಆಗಮನ ಕುರಿತಂತೆ ವರ್ಜಿಲ್‌ ಬರೆದಿದ್ದಾನೆ ಎಂದು ಪರಿಗಣಿಸಲಾಗಿರುವ ಪದ್ಯ ಕುರಿತಂತೆ ಏನೆಲ್ಲ ಪ್ರೀತಿ, ಅನುಮಾನ ಮತ್ತು ಕುತ್ಸಿತ ಟೀಕೆಗಳು ಇದ್ದಾವೆಯೋ, ಅವೆಲ್ಲವೂ ಎಲಿಯಟ್‌ನ ‘‘ದಿ ಹಾಲೊ ಮೆನ್‌’ ಪದ್ಯಕ್ಕೂ ಮುಲಾಜಿಲ್ಲದೆ ಅನ್ವಯಿಸುತ್ತವೆ.

ಆದ್ದರಿಂದ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಅಥವಾ ಮುನ್ನೋಟ ಸಾಧ್ಯವೆ? ಅಮೆರಿಕನ್‌ ವ್ಯವಸ್ಥೆ ನಂತರ ಮುಂದೇನು ಎಂಬ ಪ್ರಶ್ನೆಗೆ ವರ್ಜಿಲನಲ್ಲಿ ಉತ್ತರ ಕಾಣಲು ಸಾಧ್ಯವೆ? ಆ ತರಹದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳಲ್ಲವೆ? ಆ ಅವಕಾಶ ಕವಿಗಳು ಮತ್ತು ಸಾಹಿತಿಗಳ ಪಾಲಿಗೆ ಇನ್ನೂ ಉಳಿದಿದೆಯೆ?

ಮನುಷ್ಯ ಲೋಕವನ್ನು ನಿಯಂತ್ರಿಸುತ್ತಿರುವ ಮನುಷ್ಯ ಸೃಷ್ಟಿಯ ಯಂತ್ರಲೋಕದ ಕಾಲವಿದು: ಮನುಷ್ಯ ಪರಿಸರ, ಸನ್ನಿವೇಶ ಮತ್ತು ಭಾವನೆಗಳ ಭಾಷೆಗೆ ಸ್ಪಂದಿಸಿ ಈವರೆಗೂ ಬೆಳೆದುಬಂದ ಕಾವ್ಯ ಜಗತ್ತು ಈ ಹೊಸ ಬದಲಾವಣೆಗಳಿಗೆ ಸ್ಪಂದಿಸಬೇಕಿದೆ. ಯಂತ್ರ ಭಾಷೆಯ ಯಾಂತ್ರಿಕ ಜಗತ್ತಿನ ಜತೆ ವ್ಯವಹರಿಸಲು ತೊಡಗಿದಂತೆಯೆ ಕಾವ್ಯ ಭಾಷೆ ಮತ್ತು ಅಭಿವ್ಯಕ್ತಿ ವಿಧಾನ ಮಾರ್ಪಾಡಾಗುವುದು ಅನಿವಾರ್ಯ : ಆ ದೃಷ್ಟಿಯಿಂದ ನೋಡುವುದಾದಲ್ಲಿ, ಆನೆಗಳು ಮತ್ತು ಗಿರಿಜನ ಸಂಸ್ಕೃತಿ ಎದುರಿಸುತ್ತಿರುವ ಅತಂತ್ರ ಪರಿಸ್ಥಿತಿ ಹಾಗೂ ಕಾವ್ಯದ ನೆಲೆ – ಸೆಲೆಗೆ ಸಂಬಂಧಿಸಿದ ಸಮಸ್ಯೆಗಳು ಸಮಾನವಾದುದಾಗಿರಬಹುದೆ? ಅದು ನಿಜವಿದ್ದಲ್ಲಿ, ಕನ್ನಡ ಕಾವ್ಯ ಭಾಷೆ ಮತ್ತು ಕಾವ್ಯ ಪ್ರಪಂಚ ಎದುರಿಸುತ್ತಿರುವ ಬಿಕ್ಕಟ್ಟು ಭಾರತೀಯ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವಂತೆ ಕಾಣುವುದಿಲ್ಲ ಕೆಲ ಪ್ರಮುಖ ವ್ಯತ್ಯಾಸ ಹೊರತು.

ವಿಶ್ವವಿಕಾಸದ ನಡೆಗೆ ಅನುಗುಣ ವಿಕಾಸ ಪಥದಲ್ಲಿ ಸಾಗುತ್ತಿರುವ ಯುರೋಪ್‌ ಮೂಲದ ಭಾಷೆಗಳು ಅದರಲ್ಲೂ ಇಂಗ್ಲಿಷ್‌ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿ ಒಂದು ರೀತಿಯದ್ದಾದರೆ, ನಿಯತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ಮತ್ತು ಅವಜ್ಞೆಯಿಂದಿರಲು ಬಯಸಿದ ಕನ್ನಡ ಮೊದಲಾದ ಅಸಂಖ್ಯಾತ ಭಾಷೆಗಳು ಎದುರಿಸುತ್ತಿರುವ ಇಕ್ಕಟ್ಟಿನ ಪರಿಸ್ಥಿತಿ ಮತ್ತೊಂದು ರೀತಿಯದು. ಹಾಗಾಗಿ ಆ ಎರಡೂ ಭಾಷಾ ಸಮುದಾಯಗಳು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಧ್ರುವಗಳಷ್ಟೇ ಅಂತರವಿದೆಯಾದರೂ ಅಲ್ಲಿ ಕಾಣಬರುವ ಕೆಲ ಸಮಾನ ಅಂಶಗಳು ಆಶ್ಚರ್ಯ ಮತ್ತು ಗಾಬರಿಯನ್ನು ಒಟ್ಟಿಗೆ ತಾರದಿರುವುದಿಲ್ಲ.

ಇಂಗ್ಲಿಷ್‌ ಮತ್ತು ಯುರೋಪ್‌ ಮೂಲದ ಎಲ್ಲ ಭಾಷೆಗಳು ತಮ್ಮ ತಮ್ಮ ಸಾಮರ್ಥ್ಯ, ಸಂಪನ್ಮೂಲ ಸೌಲಭ್ಯ ಮತ್ತು ಪ್ರತಿಭಾ ಶ್ರೀಮಂತಿಕೆಯ ಮಿತಿಗನುಗುಣ ಬದುಕಿನ ಎಲ್ಲ ರಂಗಗಳಲ್ಲೂ ಎದುರಾದ ಹೊಸ ಸವಾಲನ್ನು ಸ್ವೀಕರಿಸಿ ಎದುರಿಸುತ್ತಲೇ ಬೆಳೆಯುತ್ತಾ ಬಂದವು. ಜನಸಾಮಾನ್ಯರು, ಕವಿಗಳು ಕಲಾವಿದರು. ವರ್ತಕರು, ಉದ್ಯಮಿಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳು ಮೊದಲಾದ ಎಲ್ಲ ವರ್ಗ ಮತ್ತು ಎಲ್ಲ ಹಂತದ ಭಾಷೆಯೂ ಆಗಿರುವ ಇಂಗ್ಲಿಷ್‌: ಕಂಪ್ಯೂಟರ್‌, ಇಂಟರ್‌ನೆಟ್‌ ಮತ್ತು ಉಪಗ್ರಹಗಳ ಸಂಪರ್ಕ ಭಾಷೆಯೂ ಆಗಿದೆ. ಕನ್ನಡ ಮುಂತಾದ ಭಾಷೆಗಳ ಸಂದರ್ಭದಲ್ಲಿ ಅದೇ ಮಾತನ್ನು ಹೇಳಲು ಬರುವುದಿಲ್ಲ. ಜನಸಾಮಾನ್ಯರ ದೈನಂದಿನ ಆಡುಭಾಷೆ, ವ್ಯವಹಾರಿಕ, ಸಂಪರ್ಕ ಹಾಗೂ ರಾಜಭಾಷೆಯಾಗಿಯೂ ಬೆಳೆದು ಬಂದ ಕನ್ನಡದ ಲಿಖಿತ ಬಳಕೆ ಹೆಚ್ಚಾಗಿ ಕವಿಗಳು ಹಾಗೂ ರಾಜಭಾಷೆಯಾಗಿಯೂ ಬೆಳೆದು ಬಂದ ಕನ್ನಡದ ಲಿಖಿತ ಬಳಕೆ ಹೆಚ್ಚಾಗಿ ಕವಿಗಳು ಹಾಗೂ ಕಾವ್ಯ ಪ್ರಕಾರಕ್ಕಷ್ಟೇ ಮಿತಗೊಂಡಿತು. ಆ ಮಾತಿನಲ್ಲಿ ಇಂದಿನವರೆಗೂ ಹೆಚ್ಚಿನ ಬದಲಾವಣೆ ಉಂಟಾಗಿಲ್ಲ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಸಂವಹನ, ಮಾಧ್ಯಮ ಇತ್ಯಾದಿ ಯಂತ್ರ ಜಗತ್ತು ಆಧಾರಿತ ಎಲ್ಲ ಆಧುನಿಕ ಕ್ಷೇತ್ರಗಳಲ್ಲೂ ಕನ್ನಡ ಬಳಸುವ ಪ್ರಯತ್ನಗಳು ನಡೆದಿವೆಯಾದರೂ, ಆ ಪ್ರಯತ್ನಗಳಿಗೆ ದಕ್ಕಬೇಕಾದ ಮಾನ್ಯತೆ ಮತ್ತು ಅಧಿಕೃತ ಪ್ರಮಾಣಿಕತೆ ಇನ್ನೂ ಪ್ರಾಪ್ತವಾಗಬೇಕಿದೆ. ಆ ಕ್ಷೇತ್ರಗಳಲ್ಲಿ ಕನ್ನಡ ಬಳಸಬಯಸುವ ಜನರಿಗೆ ಸ್ವಂತಿಕೆ ದಕ್ಕದಿರುವುದು ಕನ್ನಡ ಎದುರಿಸುತ್ತಿರುವ ಕೊರತೆಗೆ ಕಾರಣವಾದರೆ, ಕನ್ನಡ ಬೆಳೆಯದೆ ಕನ್ನಡಿಗರು ಬೆಳೆಯುವಂತಿಲ್ಲ ಹಾಗೂ ಕನ್ನಡಿಗರು ಬೆಳೆಯದೆ ಕನ್ನಡ ಬೆಳೆಯುವುದಿಲ್ಲ; ಪರಸ್ಪರ ಪೂರಕ ಮತ್ತು ಜೀವನಾಡಿಗಳಾದ ಆ ಎರಡೂ ಬೆಳವಣಿಗೆಗಳು ಏಕಕಾಲದಲ್ಲಿ ವ್ಯಕ್ತಿಗತವಾಗಿರುವಂತೆಯೇ ಸಾಮೂಹಿಕವಾದವು ಆಗಿವೆ ಎಂಬ ಅರಿವಿನ ಅಭಾವ ಮತ್ತೊಂದು ಕಾರಣ. ಆ ಕೊರತೆ ನೀಗಿಸಿಕೊಳ್ಳಲು ಇಂಗ್ಲಿಷಿಗೆ ಶರಣುಹೋಗುವ ಜನರು, ಸಾಮೂಹಿಕ ಅಭಿವೃದ್ಧಿಗಿಂತಲೂ ಹೆಚ್ಚಾಗಿ ವ್ಯಕ್ತಿಮೂಲದ ಸಾಧನೆಗೆ ಮಾರುಹೋದವರಾಗಿರುತ್ತಾರೆ. ಹಾಗಾಗಿ ಈ ಕಡೆ ಕನ್ನಡವೂ ಬೆಳೆಯುವ ಆ ಕಡೆ ಕನ್ನಡಿಗರೂ ಬೆಳೆಯಲು ಸಾಧ್ಯವಾಗದ ಇಮ್ಮುಖಿ ದಿಬ್ದಂಧನ ನಿರ್ಮಾಣವಾಗಿ ವರ್ಷಗಳೆ ಕಳೆದಿವೆ.[2]

ಕೆಳಜಾತಿ ಮತ್ತು ಮೇಲ್ಜಾತಿ ಜನರ ನಡುವೆ ಸಾಂಕೇತಿಕವಾಗಿ ವಿವಾಹ ಏರ್ಪಡಿಸುವುದರ ಮೂಲಕ ದೈಹಿಕ ಸಂಲಗ್ನ ಒಳಗೊಂಡಂತೆ ಅದಕ್ಕೂ ಮೀರಿದ ಮಾನಸಿಕ, ಸಾಂಸ್ಕೃತಿಕ ಮತ್ತು ಕಲಾ ನೈಪುಣ್ಯತೆಯ ಸಂಲಗ್ನ ಏರ್ಪಡಿಸುವ ಪ್ರಯತ್ನ ಕನ್ನಡದಲ್ಲಿ ನಡೆಯಿತು. ಆ ರೀತಿ ವಿನಿಮಯದ ಸಂಲಗ್ನ ಸಾಧ್ಯವಾಗದ ಹೊರತು ಕಲಾಕೌಶಲ್ಯ, ನೈಪುಣ್ಯ ಮತ್ತು ಪರಂಪರಾಗತ ತಿಳುವಳಿಕೆ ಪಡೆದುಕೊಳ್ಳಬೇಕಾದ ಹೊಳಪು, ತೀಕ್ಷ್ಣತೆ ಮತ್ತು ತೀವ್ರತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದು ಸಾಧ್ಯವಾಗದ ಹೊರತು ಸರಿಯಾದ ಓದುವಿಕೆ, ಸುತ್ತ ಮುತ್ತಲ ಅರಿವು, ಉತ್ತಮಿಕ ಮತ್ತು ಉನ್ನತಿಕ ಬರುವುದಿಲ್ಲ ಎಂಬ ಬಸವಣ್ಣನವರ ಗ್ರಹಿಕೆ ಸಕಾಲೀಕವೂ ಆಗಿದ್ದಂತೆ ಸಾಧುವೂ ಆಗಿತ್ತು ಎಂಬುದನ್ನು ಇತಿಹಾಸ ಮತ್ತೆ ಮತ್ತೆ ಸಾಬೀತುಪಡಿಸಿದೆ.

ಆ ರೀತಿಯ ಸಂಲಗ್ನ ಮತ್ತು ಕೊಳುಕೊಡುವಿಕೆ ಅದರ ನಿಜವಾದ ಅರ್ಥದಲ್ಲಿ ಭಾರತದಲ್ಲಿ ಇಂದಿಗೂ ಸಾಧ್ಯವಾದಂತೆ ಕಾಣುವುದಿಲ್ಲ. ಹಾಗಾಗಿ ಆಮದಾಗಿ ಬಂದ ಭಾರತದ ‘ಕರ್ವಾಲೋ’ ‘ಕರ್ವಾಲೋ’ ಆಗಿಯೇ ಉಳಿದುಕೊಂಡರೆ, ‘ಮಂದಣ್ಣ’ ಮಂದಣ್ಣನಾಗಿಯೇ ನಿಲ್ಲುತ್ತಾನೆ;

ಕುದುರೆಯನ್ನು ಮೊದಲು ಪಳಗಿಸಿ ತಮ್ಮ ಬದುಕು ಮತ್ತು ಸಂಸ್ಕೃತಿಯ ಭಾಗವನ್ನಾಗಿ ಮಾಡಿಕೊಂಡವರು ಯಾರೇ ಇರಬಹುದು; ಆದರೆ ಆನೆಗಳನ್ನು ಹಿಡಿದು ಪಳಗಿಸುವ ನೈಪುಣ್ಯವನ್ನು ಪ್ರದರ್ಶಿಸಿ ಅವುಗಳನ್ನು ತಮ್ಮ ಸಂಸ್ಕೃತಿ ಮತ್ತು ಬದುಕಿನ ಭಾಗವನ್ನಾಗಿ ಮೊದಲಿಗೆ ಕಂಡುಕೊಂಡವರು ಭಾರತೀಯರು. ಕುದುರೆ ಯುರೋಪ್‌ ಮೂಲದ ಜನರ ಮನೋಧರ್ಮ ಮತ್ತು ಮನೋಭಾವದ ಪ್ರತೀಕವಾದರೆ, ಭಾರತೀಯ ಮನೋಧರ್ಮ ಮತ್ತು ಮನೋಭಾವದ ಸಂಕೇತವಾಗಿ ನಿಲ್ಲುವ ಆನೆಗಳು ಮಂದ ಮತ್ತು ನಿಧಾನಗತಿಯ ಪ್ರತೀಕ.

ಆ ಮನೋಭಾವ ಮತ್ತು ಮನೋಧರ್ಮಕ್ಕೆ ಅನುಗುಣ ಭಾರತೀಯರು ಪ್ರಧಾನವಾಗಿ ಸ್ಪರ್ಧಾರಹಿತವಾದ, ಪೈಪೋಟಿ ಅಷ್ಟಾಗಿಬೇಕಿಲ್ಲದ ಮತ್ತು ನೆಮ್ಮದಿಯಿಂದ ಕೂಡಿದ ಜೀವನ ವಿಧಾನಕ್ಕೆ ಒಲಿದಿರಬಹುದು. ಕುಮಾರವ್ಯಾಸ ಪಂಪನಂತಹ ಕವಿಗಳು ಹುಟ್ಟಲು ಸಾಧ್ಯವಾದುದು ಆ ಕಾರಣದಿಂದಾಗಿಯೇ ಇರಬೇಕು. ಸ್ಪರ್ಧಿಸಲು ಇಷ್ಟವಿಲ್ಲದ ಮತ್ತು ಪೈಪೋಟಿ ಒಲ್ಲದ ಮನಸ್ಸುಗಳಿಗೆ ಸೃಜನಶೀಲತೆಯ ಅಹಂನ ಅಗತ್ಯ ಇರುವುದಿಲ್ಲ. ವ್ಯಾಸಭಾರತ, ವಾಲ್ಮೀಕಿ ರಾಮಾಯಣ ಮೊದಲಾದ ಕವಿಗಳ ಎಪಿಕ್‌ ಅಥವಾ ಮಹಾಕೃತಿಗಳನ್ನು ತಮ್ಮದಾಗಿಸಿಕೊಂಡು ಅವುಗಳನ್ನು ಪುನರ್‌ ಸೃಷ್ಟಿಸುವುದರಲ್ಲಿ ಅವರು ಕಾಣುವ ತೃಪ್ತಿ, ಸಾರ್ಥಕತೆ ಮತ್ತು ಧನ್ಯತೆ; ಸ್ವಂತ ಕೃತಿ ರಚಿಸುವುದರ ಮುಖೇನ ದಾಂತೆಯಂತಹ ಕವಿಗಳು ಪಡೆಯುವುದಕ್ಕಿಂತ ಹೆಚ್ಚಿನದಾಗಿರಬಹುದು. ಅಂತಹ ಮರುಷೃಷ್ಟಿಯನ್ನೇ ಶ್ರೇಷ್ಠ ಎಂಬುದಾಗಿ ಸ್ವೀಕರಿಸಲು ಇಡೀ ಸಮಾಜವೇ ಸಿದ್ಧವಿದ್ದಾಗ ಆಗುವ ಪರಿಣಾಮವೇ ಬೇರೆಯಾಗಿರುತ್ತದೆ. ಅದುವೇ ಭಾರತ; ಭಾರತದ ಸಂಸ್ಕೃತಿ ಮತ್ತು ನಾಗರಿಕತೆ. ಕುಮಾರವ್ಯಾಸ ಅದರಲ್ಲಿ ಎಷ್ಟು ತಲ್ಲೀನನಾಗಿ ಹೋಗಿದ್ದಾನೆ ಎಂದರೆ, ಆತನಿಗೆ ತನ್ನ ಹೆಸರು ಹೇಳಿಕೊಳ್ಳುವುದು ಅಷ್ಟು ಮುಖ್ಯವಾಗಿ ಕಾಣುವುದಿಲ್ಲ. ಭಕ್ತಿಮಾರ್ಗ ಹಿಡಿದವರಿಗೆ ಮಾತ್ರ ಆ ತರಹದ ತಲ್ಲೀನತೆ ಹಾಗೂ ಅಹಂ ಅನ್ನು ತಾವು ಶ್ರೇಷ್ಠ ಮತ್ತು ಭಾವಿಸಿದ ಮತ್ತೊಂದರಲ್ಲಿ ಲೀನಗೊಳಿಸುವ ಮನಃಸ್ಥಿತಿ ದಕ್ಕಲು ಸಾಧ್ಯ. ದೇವರ ಮತ್ತು ಹಿರಿಯರ ಮುಂದೆ ಶಿರಸಾಷ್ಟಾಂಗ ಅಡ್ಡ ಬೀಳುವ ಪದ್ಧತಿಯನ್ನು ಅನುಸರಣೆಗೆ ತಂದುಕೊಂಡವರೇ ಭಾರತೀಯರು ಎಂಬುದು ಅಚಾನಕ್ ಬೆಳವಣಿಗೆ ಏನಲ್ಲ. ಅದು ಅವರು ರೂಢಿಸಿಕೊಂಡ ಮನೋಧರ್ಮ ಮತ್ತು ಮನೋಭಾವಕ್ಕೆ ಅನುಗುಣವಾಗಿಯೇ ಇದೆ. ಕ್ರಿಶ್ಚಿಯನ್ನರು ಚರ್ಚ್‌ನಲ್ಲಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಮೊಣಕಾಲೂರಿ ನಮಸ್ಕರಿಸುತ್ತಾರೆ. ದೇವರ ಮುಂದೆ ಸಂಪೂರ್ಣ ಶರಣಾಗತಿಯನ್ನು ಬೋಧಿಸುವ ಇಸ್ಲಾಂನ ಅನುಯಾಯಿಗಳಾದ ಮುಸ್ಲೀಮರು ನಮಾಜ್‌ ಮಾಡುವಾಗ ಮೊಣಕಾಲೂರಿ ಕುಳಿತು ಶಿರಬಾಗಿ ವಂದಿಸಿದ ನಂತರ ಕತ್ತು ಎತ್ತಿ ಮತ್ತೆ ಅದೇ ಸ್ಥಿತಿಗೆ ಬರುತ್ತಾರೆ. ಅವರು ಸಹ ಎಲ್ಲೂ ಭಾರತೀಯರ ತರಹ ತಮ್ಮ ಸರ್ವಶಕ್ತ ಅಲ್ಲಾಹುವಿನ ಮುಂದೆ ಕೂಡ ಉದ್ದಂಡ ಮತ್ತು ದೀರ್ಘದಂಡ ನಮಸ್ಕಾರ ಹಾಕುವುದಿಲ್ಲ.

ಅಂತಹ ಬದುಕಿಗೆ ಪೈಪೋಟಿ ಬರುವುದು ಸಾಧ್ಯವಿಲ್ಲ ಮತ್ತು ಸ್ಪರ್ಧೆ ಬೇಕಿರುವುದಿಲ್ಲ. ‘ಭಾರತೀಯ ಮಹಾತ್ವಾಕಾಂಕ್ಷೆ’ ಎಂಬುದು ಶತಮಾನಗಳು ಉರುಳಿದಂತೆ ಬದುಕಿನಲ್ಲಿ ಲುಪ್ತವಾಗುತ್ತಾ ಸಾಗಲು ಆ ಅಂಶವೇ ಕಾರಣವಾಗಿದ್ದಿರಬಹುದು. ಭಾರತೀಯ ಬದುಕು ಮತ್ತು ಮನೋಭಾವದಲ್ಲಿ ಸ್ಪರ್ಧೆ ಮತ್ತು ಪೈಪೋಟಿ ಇರಲೇ ಇಲ್ಲ ಎಂಬುದು ಆ ಮಾತಿನ ಅರ್ಥವಲ್ಲ. ಪಶ್ಚಿಮ ಜಗತ್ತಿನ ಅರ್ಥದಲ್ಲಿ ಅದು ಇರಲಿಲ್ಲ ಎಂದಷ್ಟೇ ಅರ್ಥ. ಇರಬೇಕಾದ ಪ್ರಮಾಣದಲ್ಲಿದ್ದು ಮನೋಭಾವ ಮತ್ತು ಮನೋಧರ್ಮವಾಗಿ ರೂಪುಗೊಳ್ಳದೇ ಹೋದಲ್ಲಿ, ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಬಡತನ ಮತ್ತು ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಜೀವನದ ಕರ್ಮ ಎಂದು ನಂಬಿ ಆ ಸ್ಥಿತಿಯಲ್ಲಿಯೇ ಬದುಕು ಸಾಗಿಸುವ ದೀನತೆಯನ್ನು ದೇವರ ಕೃಪೆ ಎಂದು ಭಾರತೀಯರು ಸ್ವೀಕರಿಸಿದರೆ; ಅದನ್ನು ಬದಲಿಸಹೊರಟು ಪ್ರಕೃತಿ ಜತೆ ಸ್ಪರ್ಧೆ ಮತ್ತು ಪೈಪೋಟಿಗಿಳಿದವರೇ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಜನರು. ಬಡತನ, ಸಾವು ನೋವು, ರೋಗ ರುಜಿನ ಮತ್ತು ನಶ್ವರತೆಯ ಭಯ ಯುರೋಪ್‌ ಮೂಲದ ಜನರನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದ್ದರೆ; ಅವುಗಳನ್ನು ಎದುರಿಸಲೆಂದೇ ಪುನರ್ಜನ್ಮ, ಅವತಾರ, ಜಾತೀಯತೆ ಇತ್ಯಾದಿ ಕರ್ಮಕಾಂಡಗಳಲ್ಲಿ ಮುಳುಗಿ ಹೋದ ಭಾರತೀಯರು ಸಹ ಇಂದು ಅಲ್ಲಿಗೇ ಬಂದು ನಿಂತಿದ್ದಾರೆ.

ಆ ಜಾತೀಯತೆಯಿಂದಾಗಿ ಆದ ಅನಾಹುತಗಳು ವರ್ಣನಾತೀತ ಮತ್ತು ವಿವರಣೆಗೆ ಮೀರಿದವು.

ಸೀಮಿತ ಆಶಯದ ಹಾಗೂ ನೆಮ್ಮದಿಯ, ಇದ್ದುದರಲ್ಲೇ ಸಂತೃಪ್ತಿ ಕಾಣುವ, ಬದುಕನ್ನು ಬಂದಂತೆ ಸ್ವೀಕರಿಸುವ, ಸ್ಪರ್ಧೆ, ಪೈಪೋಟಿ – ಅನ್ವೇಷಣಾ ಪ್ರವೃತ್ತಿ ಅಷ್ಟಾಗಿ ಬೇಕಿಲ್ಲದ, ಬದಲಾವಣೆ ಬಯಸದ ಮತ್ತು ಕಾಲನ ಬಗೆಗಿನ ನಿರ್ಲಕ್ಷ್ಯದ ಹಾಗೂ ಅನುಕರಣೆಯನ್ನೆ ನಿಜವಾದ ಸೃಜನಶೀಲತೆ ಎಂದು ತೆಗೆದುಕೊಂಡ ಭಾರೀಯರ ಒಟ್ಟಾರೆ ಮನೋಭಾವ ಮತ್ತು ಮನೋಧರ್ಮವು ಪ್ರಕೃತಿಪರವಾದ ಬದುಕಿನ ವಿಧಾನ ಮತ್ತು ಜೀವನ ಕಲೆಯಾಗಿದ್ದಿರಬಹುದು. ಅಂಥ ಪರಿಸರದಲ್ಲಿ ಮಾತ್ರ ಕುಮಾರವ್ಯಾಸನ ತರಹದ ಕವಿಗಳು ಬರಲು ಸಾಧ್ಯ. ಎಲ್ಲಾ ಭಾರತೀಯರು ಆ ತರಹವೇ ಬದುಕಿದರು ಮತ್ತು ಅದನ್ನೇ ಜೀವನ ವಿಧಾನವನ್ನಾಗಿ ಕಟ್ಟುನಿಟ್ಟಿನಿಂದ ಪಾಲಿಸಿದರು ಎಂಬುದು ಆ ಮಾತಿನ ಅರ್ಥವಲ್ಲ: ಅದು ಅವರ ಬದುಕಿನ ಬಗೆಗಿನ ಒಟ್ಟಾರೆ ನೋಟ ಮತ್ತು ಕಲ್ಪನೆಯಾಗಿತ್ತು. ಶತ ಶತಮಾನಗಳ ಕಾಲದಿಂದ ತಾವು ರೂಢಿಸಿಕೊಂಡು ಬಂದ ಆ ಜೀವನವಿಧಾನ ಮತ್ತು ಮನೋಧರ್ಮವನ್ನು ಕಾಪಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಏಕೆಂದರೆ, ನಿರ್ಲಕ್ಷ್ಯದಿಂದ ಕಾಣಬಯಸಿದ ನಿಯತಿಯ ವಿಶ್ವಜಾಲದಿಂದ ಬಿಡಿಸಿಕೊಳ್ಳಲು ಭಾರತೀಯರಿಗೆ ಕೊನೆಗೂ ಸಾಧ್ಯವಾಯಿತೆ ಎಂಬ ಪ್ರಶ್ನೆಯ ಮತ್ತೊಂದು ರೂಪವೇ ಅದಾಗಿದೆ.

ವಿಶ್ವದ ನಿಯತಿ ಎಂದರೆ, ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಜನರು ಗ್ರಹಿಸಿ ಅರ್ಥ ಮಾಡಿಕೊಂಡ ಕಾಲ ಅಥವಾ ಇತಿಹಾಸದ ಪ್ರಕ್ರಿಯೆ ಎಂದೇ ಅರ್ಥ. ಆ ಕಾಲ ಹೆಣೆದ ವಿಶ್ವ ಜಾಲದ ವ್ಯಾಪ್ತಿಯಿಂದ[3] ಅದು ಬಯಸಿದ ರೀತಿಯಲ್ಲಿ ಸ್ವಲ್ಪವಾದರೂ ದೂರ ಉಳಿಯಲು ಭಾರತಕ್ಕೆ ಸಾಧ್ಯವಾಗಿದ್ದರೆ, ಶತಶತಮಾನಗಳಿಂದ ರೂಢಿಸಿಕೊಂಡು ಬರಲಾಗಿದ್ದ ಜೀವನವಿಧಾನ, ಮನೋಭಾವ ಮತ್ತು ಮನೋಧರ್ಮವನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಲಭಿಸುತ್ತಿತ್ತೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆ ಪ್ರಶ್ನೆ ಪಡೆದುಕೊಳ್ಳುವ ಮತ್ತೊಂದು ರೂಪ ಈ ರೀತಿ ಇದೆ: ಕಾಲದ ಗತಿಯನ್ನು ಅರ್ಥೈಸಿ ಪಶ್ಚಿಮ ಜಗತ್ತು ಹೆಣೆದಿರುವ ಬದುಕಿನ ಜಾಲದ ವ್ಯಾಪ್ತಿಯ ಅಧೀನಕ್ಕೆ ಈಗಾಗಲೇ ಒಳಪಟ್ಟಿರುವ ಭಾರತ, ಕ್ರಮವಾಗಿಯಾದರೂ ತನ್ನ ಮೊದಲಿನ ಬದುಕಿನ ಕ್ರಮದಿಂದ ವಂಚಿತವಾಗುವುದು ಸ್ವಾಭಾವಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಿದಂತೆ ಅಲ್ಲವೆ? ಭಾರತೀಯ ಜೀವನ ವಿಧಾನ ಮತ್ತು ಮನೋಧರ್ಮ ಎಂದ ತಕ್ಷಣ ಮನಸ್ಸಿಗೆ ಬರುವುದು ಕೊಳಕು ಜಾತೀಯತೆ, ಎಲ್ಲ ರೀತಿಯ ದಾರಿದ್ರ್ಯ ಮತ್ತು ಬಡತನ, ಲವಲವಿಕೆ ಇಲ್ಲದೆ ಕುಬ್ಜವಾದ ಬದುಕು, ಸೃಜನಶೀಲತೆಯ ಅರ್ಥವಂತಿಕೆ ಗ್ರಹಿಸದ ಮನಸ್ಸು, ಸುಳ್ಳು ಮತ್ತು ಕೊಳಕನ್ನು ನಾಚಿಕೆಬಿಟ್ಟು ದಿನನಿತ್ಯದ ಬದುಕಿನಲ್ಲಿ ವಿನಾಕಾರಣ ಸಹಿಸಿಕೊಳ್ಳುವ ರೀತಿ, ಅಪ್ರಮಾಣಿಕತೆ, ಮೇರೆ ಮೀರಿದ ಭ್ರಷ್ಟಾಚಾರ ಮತ್ತು ಆಷಾಢಭೂತಿತನ; ಒಂದಲ್ಲ ಹಲವಾರು ಪಿಡುಗುಗಳಿಂದ ಸಂಪೂರ್ಣ ಮುಕ್ತವಾದ ಸಮಾಜವನ್ನು ಈ ಜಗತ್ತಿನಲ್ಲಿ ಕಾಣುವುದು ಕಷ್ಟವಾದರೂ ಆ ಎಲ್ಲ ಸಲ್ಲಕ್ಷಣಗಳು ಭಾರತದ ಭೂಪಟದ ಮೇಲೆ ಒಟ್ಟಿಗೆ ರಾರಾಜಿಸುವುದು ಸಹಜವಾಗಿಯೇ ಕಣ್ಣುಗಳಿಗೆ ಮಂಕು ಕವಿಸುತ್ತದೆ.

ಆದರೂ ಭಾರತದ ಅನಾವರಣ ಇರುವುದೇ ಅದರ ‘ಸ್ಪರ್ಧಾರಹಿತ ಪ್ರಕೃತಿಪರವಾದ ಮನೋಧರ್ಮ’ ಮತ್ತು ಕಾಲದ ಬಗ್ಗೆ ತೋರುವ ‘ದಿವ್ಯ ನಿರ್ಲಕ್ಷ್ಯ’ದಲ್ಲಿ ಎಂಬ ಸಂಗತಿಯನ್ನು ನಿರಾಕರಿಸಲು ಬರುವುದಿಲ್ಲ. ಭಾರತದ ಬದುಕು ಸಂಪೂರ್ಣವಾಗಿ ಪ್ರಕೃತಿಪರವಾದುದಾಗಿದೆ ಎಂಬುದು ಆ ಮಾತಿನ ಅರ್ಥವಲ್ಲ, ಇದ್ದುದರಲ್ಲಿ ಎಂದಷ್ಟೇ ಅರ್ಥ. ಕಾಲನ ಬಗ್ಗೆ ನಿಸ್ಸೀಮ ನಿರ್ಲಕ್ಷ್ಯ ತೋರುತ್ತಾ ಬದುಕು ಸಾಗಿಸಲು ಮತ್ತು ಆ ಬದುಕಿನಲ್ಲಿಯೆ ಅರ್ಥಪೂರ್ಣವಾದ ಸಾರ್ಥಕತೆ ಕಂಡುಕೊಳ್ಳಲು ಮಹಾ ದಿಟ್ಟತನ ಬೇಕಾಗುತ್ತದೆ. ಭಾರತದ ಆ ದಿಟ್ಟತೆಯ ಅಭಿವ್ಯಕ್ತಿಯೆ ಬುದ್ಧ ಮತ್ತು ಗಾಂಧೀಜಿ: ಪ್ರಕೃತಿ ಪರವಾದ ಆ ಭಾರತೀಯ ಮನೋಧರ್ಮ ಮತ್ತು ಮನೋಭಾವವನ್ನು ಅದರ ಕೆಲ ವಿವರಗಳಲ್ಲಿಯಾದರೂ ಗ್ರಹಿಸಿ ಕಾವ್ಯ ರೂಪದಲ್ಲಿ ಚಿತ್ರಿಸಲು ಯತ್ನಿಸಿದ ಕವಿ ಕಾಳಿದಾಸ.

ವಿಶ್ವಭೂಮಿಕೆಯ ಮೇಲೆ ವ್ಯಾಸನ ಕಿರಿಯ ಸೋದರನಂತೆ ತೋರಿಬರುವ ಹೋಮರನ ನೆನಪು ಇಲ್ಲಿ ಬಹಳ ಅಗತ್ಯ. ಏಕೆಂದರೆ, ಹೋಮರ್‌ ಎಂದ ತಕ್ಷಣ ನೆನಪಿಗೆ ಬರುವ ಮತ್ತೊಂದು ಹೆಸರು ಹೆಲೆನ್‌: ಜನಪ್ರಿಯತೆ ಮತ್ತು ಕಣ್‌ ಸೆಳೆಯುವಿಕೆಯಲ್ಲಿ ತನ್ನ ಸೃಷ್ಟಿಕರ್ತನನ್ನು ಮೀರಿಸಿದ ಆಕೆಯನ್ನು ದ್ರೌಪದಿ ಮತ್ತು ಸೀತೆಯರ ಸಾಲಿನಲ್ಲಿ ತಂದಾಗ ಮಾತ್ರವೆ ಮಾನವ ಜನಾಂಗದ ಸಂರಚನೆ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ದೊರಕಲು ಸಾಧ್ಯ. ಅವರಲ್ಲಿ ಯಾರೊಬ್ಬರೂ ಮತ್ತೊಬ್ಬರಂತಿಲ್ಲ. ಆ ಹೆಲೆನ್‌ ಮತ್ತಾರೂ ಅಲ್ಲ. ಸಂರಕ್ಷಣೆ ಪ್ರಶ್ನೆಯ ಪ್ರತಿರೂಪ; ಸಂರಕ್ಷಣೆ ಎಂದರೆ ಹೆಲೆನ್‌ ಮತ್ತು ಹೆಲೆನ್‌ ಎಂದರೆ ಸಂರಕ್ಷಣೆ. ಸಂರಕ್ಷಣೆಯ ಆ ಅರಿವು ಧಮ್ಮ ಸ್ಥಾಪಿಸಿದ ಬುದ್ಧ ಮತ್ತು ನಂತರದ ತಲೆಮಾರುಗಳ ಜನರಿಗೆ ಇರಬೇಕಾದ ಪ್ರಮಾಣದಲ್ಲಿ ಇದ್ದಿದ್ದರೆ! ಆ ಎಚ್ಚರ ಮತ್ತು ಜಾಗೃತ ಪ್ರಜ್ಞೆ ಕಿಂಚಿತ್ ಪ್ರಮಾಣದಲ್ಲಿಯಾದರೂ ಪ್ರಕಟಗೊಳ್ಳುವುದು; ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ಮತ್ತು ಅವರಿಗೆ ಒತ್ತಾಸೆಯಾಗಿ ನಿಂತ ವಿದ್ಯಾರಣ್ಯರ ರೂಪದಲ್ಲಿ.[4] ಬದುಕಿನಲ್ಲಿ ತಾವು ಶ್ರೇಷ್ಠ ಎಂದು ಕಂಡುಕೊಂಡುದನ್ನು ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆಯ ಜವಾಬ್ದಾರಿಯನ್ನು ತಾವೇ ಹೊರಬೇಕಾಗುತ್ತದೆ. ವ್ಯಕ್ತಿಗತವೂ ಆಗಿರುವಂತೆಯೇ ಸಾಮೂಹಿಕವೂ ಆದ ಆ ಕರ್ತವ್ಯ ಪ್ರಜ್ಞೆ ಮತ್ತು ಎಚ್ಚರ ದೊರಕಬೇಕಾದ ಪ್ರಮಾಣದಲ್ಲಿ ದೊರಕದ ಹೊರತು ಯಾವುದೇ ಶ್ರೇಷ್ಠತೆಗೂ ಅರ್ಥ ಬರುವುದಿಲ್ಲ.

ಹಕ್ಕಬುಕ್ಕ ಮತ್ತು ಕನಕದಾಸರಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಪ್ರಕಟಗೊಂಡ ಆ ಗುಣ ಮತ್ತು ಸ್ವಭಾವ ಕಾಲ ಸಾಗತೊಡಗಿದಂತೆ ಲುಪ್ತವಾಗತೊಡಗಿದುದು; ವಿಜಯನಗರ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟಿತು. ಆ ಕುರಿತಂತೆ ಹೆಚ್ಚಿನ ವಿವರಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಕಾಣಲು ಬರುವುದಿಲ್ಲ. ಅವರಿಗೂ ಕೆಲ ಶತಮಾನ ಮೊದಲೇ ಕಾಲನಿಗೆ ಸ್ಪಂದಿಸುವುದನ್ನು ಮರೆತ ಭಾರತೀಯರಲ್ಲಿ ಕಾಲನ ಪ್ರಜ್ಞೆ ಬಿತ್ತನೆ ಮಾಡಲು ಮುಂದಾದ ಬಸವಣ್ಣನವರ ಪ್ರಯತ್ನ, ಹೊಸ ಜಾತಿಗಳ ಸೃಷ್ಟಿಯಲ್ಲಿ ಪರ್ಯವಸಾನಗೊಂಡುದನ್ನು ಭಾರತದ ಅದೇ ಇತಿಹಾಸ ಮತ್ತು ಕಾಲ ಮರೆತಂತಿತ್ತು.

ಭಾರತ ಆವರೆಗೂ ಕಳೆದುಕೊಂಡ ಆ ಎಲ್ಲ ಅವಕಾಶಗಳ ಸಾಧ್ಯತೆಗಳನ್ನು ಬಡ್ಡಿ ಚಕ್ರಬಡ್ಡಿ ಸಹಿತ ಪೂರೈಸಿಕೊಳ್ಳಬಹುದಾದ ಸುಸಂದರ್ಭ ಮತ್ತೊಮ್ಮೆ ಎದುರಾದುದೆ ಮಹಾತ್ಮಾ ಗಾಂಧೀಜಿ ರೂಪದಲ್ಲಿ, ಉಳಿಸಿಕೊಳ್ಳಬಹುದಾದ ಏಷ್ಯಾದ ಸಲ್ಲಕ್ಷಣ ಮತ್ತು ಗುಣಗಳನ್ನು ಉಳಿಸಿಕೊಂಡ ಹೋಮರ್‌ ಯುರೋಪಿನವನಾಗಿ ಮಾರ್ಪಟ್ಟಂತೆ; ಅದೇ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನಿಂದ ಪಡೆಯಬಹುದಾದನ್ನು ಪಡೆದು ಏಷ್ಯನ್‌ ಆಗಿಯೇ ಉಳಿದ ಗಾಂಧೀಜಿ, ಅದಕ್ಕೆ ಪರ್ಯಾಯವಾದ ಮಾದರಿ ಸಂಸ್ಕೃತಿ ಮತ್ತು ನಾಗರಿಕತೆಯನ್ನು ನಿರ್ಮಿಸುವ ಅಸಾಧ್ಯ ಸಾಧ್ಯತೆಗಳ ಮಹಾ – ಕನಸು ಕಂಡರು. ಹಿಮಾಲಯ ಗಾತ್ರದ ಆ ಕನಸು ಇಂದು ಕನಸಾಗಿಯಾದರೂ ಉಳಿದಿರುವಂತೆ ತೋರುವುದಿಲ್ಲ.

ಭಾರತದಲ್ಲಿ ನೆಲೆನಿಂತ ಜನ ರೂಢಿಸಿಕೊಂಡ ಬದುಕು ಮತ್ತು ಜೀವನ ವಿಧಾನವನ್ನು ‘ವಿಶ್ವಸಂಸ್ಕೃತಿ’ಯಾಗಿ ಮಾರ್ಪಡಿಸುವುದರಿಂದ ಮಾತ್ರ ಉಳಿಸಿಕೊಳ್ಳಲು ಸಾಧ್ಯವಿತ್ತೇ? ಅಂದರೆ ವಿಶ್ವಸಾಮ್ರಾಜ್ಯ ಕಟ್ಟಲು ಪಶ್ಚಿಮ ಜಗತ್ತಿನ ಜನ ಅನುಸರಿಸಿದ ಸುಧಾರಿತ ಮಾರ್ಗಗಳನ್ನು ಅನುಸರಿಸುವುದರಿಂದ.

ಆದರೂ ಕಾಲನ ಚಕ್ರವನ್ನು ತಡೆದು ನಿಲ್ಲಿಸುವ ಅಥವಾ ಹಿಂದಕ್ಕೆ ತಿರುಗಿಸುವ ಅವಕಾಶ ಇತ್ತೆ ಎಂಬುದು ಪ್ರಶ್ನೆ.

 

[1]ತೋಟದ ಮಾಲಿಗೆ ಗರ್ಭ ಧರಿಸುವ ಲೇಡಿ ಚಟರ್ಲಿ, ಆಕೆಯ ಗಂಡ ಮತ್ತು ತೋಟದ ಮಾಲಿ ನಡುವಿನ ತ್ರಿಕೋನ ಸಂಬಂಧವನ್ನು ಶೋಧಿಸುವ ಡಿ. ಎಚ್‌. ಲಾರೆನ್ಸ್‌ನ ‘ದಿ ಲೇಡಿ ಚಟರ್ಲಿಸ್‌ ಲವರ್‌’ ಕಾದಂಬರಿಯ ಮೊದಲ ಆವೃತ್ತಿಯು, ಇಂಗ್ಲಿಷ್‌ ಭಾಷೆಯಲ್ಲಿ ಬರವಣಿಗೆ ಮಾಡುವ ಭಾರತದ ಸಾಹಿತಿಗಳ ಸಮಸ್ಯೆಯನ್ನು ಶೋಧಿಸುವಂತೆಯೂ ತೋರುತ್ತದೆ. ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಲೇಡಿ ಚಟರ್ಲಿಯು ಮಗುವಿನ ತಂದೆಯಾದ ಮಾಲಿಯನ್ನು ಸೇರುವುದರ ಮೂಲಕ ಹೊಸ ವರ್ಗವೊಂದನ್ನು ನಿರ್ಮಿಸಲು ಬಯಸಿದರೆ, ಇಂಡಿಯನ್‌ ಇಂಗ್ಲಿಷ್‌ ಎಂಬ ಮತ್ತೊಂದು ಭಾಷಾ ಪ್ರಭೇದ ರೂಪಿಸಲು ಭಾರತದ ಸಾಹಿತಿಗಳು ಹಂಬಲಿಸುತ್ತಾರೆ.

[2]ಕನ್ನಡದ ಏಳಿಗೆ ಮತ್ತು ಉದ್ಧಾರ ಕುರಿತಂತೆ ಬಿ.ಎಂ.ಶ್ರೀ., ಕುವೆಂಪು, ಯು. ಆರ್‌. ಅನಂತಮೂರ್ತಿ ಮೊದಲಾದ ಅನೇಕರು ಆಡಿರುವ ಮಾತುಗಳು ಮತ್ತು ಪದ್ಯಗಳನ್ನು ನೆನಪಿಗೆ ತಂದುಕೊಳ್ಳಲು ಇದು ಸಕಾಲ. ಮೊದಲಿಗೆ, ‘ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ’ ಎಂಬ ತಮ್ಮ ಕೃತಿಯಲ್ಲಿ ಶ್ರೀಯವರು ಆಡಿರುವ ಕೆಲ ಮಾತುಗಳನ್ನು ನೆನಪಿಗೆ ತಂದುಕೊಳ್ಳಬಹುದಾಗಿದೆ:

ಆರ್ಯರೇ, ಬಿದ್ದು ಹೋಗಿರುವ ನಮ್ಮ ಮಾತೃಭಾಷೆಯನ್ನು ತಲೆಯೆತ್ತಿರುವುದು ಸುಲಭವಾದ ಕೆಲಸವಲ್ಲ; ಅಲ್ಲೊಬ್ಬರು, ಇಲ್ಲೊಬ್ಬರು, ಎರಡು ಪಂಕ್ತಿಯನ್ನು ಗೀಚಿ ಅಚ್ಚಿಗೆ ತರುವುದರಿಂದ ಸಾಗತಕ್ಕ ಕೆಲಸವೂ ಅಲ್ಲ. ಮಾತೃಭಾಷೆಯನ್ನು ಸಾಯಿಸುವ ಮಾತನ್ನು ಇಲ್ಲಿಗೇ ಬಿಟ್ಟು ಬಿಡೋಣ.

ಮೇಲಿನ ಮಾತುಗಳನ್ನು ಅನೇಕ ಲೋಕವೇ ಸಂಕುಚಿತವಾಗಿದೆ ಎಂಬ ದುಃಖವೂ ಈ ಕ್ರೋಧದ ಹಿಂದೆ ಅಡಗಿದೆ. ಭಾರತದ ಭಾಷೆಗಳಲ್ಲಿ ಬರೆಯುವುದರ ಮುಖಾಂತರ ಸಾಧಿಸುವುದು ಸಾಧ್ಯವೆಂದು ನನ್ನ ಅಭಿಪ್ರಾಯ.

ಹಾಗೆಯೇ ಮನಃಶಾಸ್ತ್ರ ಸಮಾಜಶಾಸ್ತ್ರಗಳಲ್ಲಿ ಕೂಡ ಭಾಷಾಂತರಿಸಲು ಅರ್ಹವಾದ ಸ್ವತಂತ್ರ ಕೃತಿಗಳು ನಮ್ಮಲ್ಲಿ ಹುಟ್ಟಬಹುದು. ಆದರೆ ದುರ್ದೈವವಶಾತ್‌ ನಾವು ಅಭಿಮಾನ ಕೃಪಣರು; ಸ್ವತಂತ್ರ ವಿಚಾರ ಶಕ್ತಿಯನ್ನು ಕಳೆದುಕೊಂಡವರು;

“ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ” ಎಂಬ ಕುವೆಂಪು ಕವನಗಳನ್ನು, ಓದಿದಾಗ ಅಥವಾ ಹಾಡುವುದನ್ನು ಕೇಳಿದಾಗ ರೋಮಾಂಚನಗೊಳ್ಳುತ್ತಿದ್ದ ಕಾಲವೊಂದಿತ್ತು.

[3]ಉದಾರೀಕರಣ ಮತ್ತು ಜಾಗತೀಕರಣ ಆ ವಿಶ್ವಜಾಲದ ಒಂದು ಅಧ್ಯಾಯ ಮಾತ್ರ. ಆ ಪ್ರಕ್ರಿಯೆಯನ್ನು ವಿರೋಧಿಸುವ ಜನ ಭಾರತ ಮೊದಲಾದ ಅನೇಕಾನೇಕ ದೇಶಗಳಲ್ಲಿಯೂ ಇರುವಂತೆ, ಪಶ್ಚಿಮ ಜಗತ್ತಿನಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಜಾಗತೀಕರಣ ಎಂಬುದು ಕೇವಲ ಗುಮ್ಮ. ಆಗಬೇಕಾದ ಪ್ರಮಾಣದಲ್ಲಿ ಆಗಿಲ್ಲ ಎಂಬುದಾಗಿ ಪಶ್ಚಿಮ ಜಗತ್ತಿನ ಜನರ ವಾದ.

[4]‘ಕವಿರಾಜ ಮಾರ್ಗ’ದಲ್ಲಿಯೇ ಅಂತರ್ಗತವಾಗಿರುವಂತೆ ತೋರುವ ಆ ಪ್ರಜ್ಞೆ, ಸಂಘಟನಾತ್ಮಕ ರೂಪ ಪಡೆದುಕೊಂಡ ಉದಾಹರಣೆ ಇಲ್ಲ.