III

ಪರ್ಷಿಯನ್ನರು ಮತ್ತು ಗ್ರೀಕರ ನಡುವೆ ಲಿಖಿತ ಇತಿಹಾಸದ ಆರಂಭದ ಕಾಲದಲ್ಲಿಯೇ ಕಾಣಿಸಿಕೊಂಡ ಈ ಮಹಾ ಕುರುಕ್ಷೇತ್ರ ನಿನ್ನೆ ಮೊನ್ನೆಯದಲ್ಲ; ರೋಮನ್ನರು ಮತ್ತು ಅರಬ್ಬರ ನಡುವಿನ ಸಂಘರ್ಷದ ಅಧ್ಯಾಯವಾಗಿ ಮುಂದುವರೆದ ಆ ಕುರುಕ್ಷೇತ್ರ, ತುರ್ಕಿ ಸಾಮ್ರಾಜ್ಯದ ಪತನದೊಂದಿಗೆ ಒಂದು ಹಂತ ಕಂಡುದು ಸರಿಯಷ್ಟೆ. ತುರ್ಕಿ ಸಾಮ್ರಾಜ್ಯದ ಪತನದಲ್ಲಿ ಯುರೋಪಿನ ಪರಮುಖ ಬಣಗಳು ತಮ್ಮ ತಮ್ಮ ಶಕ್ತ್ಯನುಸಾರ ಪಾಲುಗೊಂಡಿವೆಯಾದರೂ, ತುರ್ಕಿಗಳ ಪತನಾನಂತರ ಪ್ರಬಲ ಸಾಮ್ರಾಜ್ಯ ಕಟ್ಟುವ ಅವಕಾಶ ಪಡೆದವರು ಬ್ರಿಟಿಷರಾಗಿದ್ದರು. ಹಾಗಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಕಾಣಿಸಿಕೊಂಡ ಆ ತಿರುವು, ಆ ಕಾಲಕ್ಕೆ ಸಂಪೂರ್ಣ ಹೊಸ ಬೆಳವಣಿಗೆ. ಅಂದರೆ ತುರ್ಕಿ ಸಾಮ್ರಾಜ್ಯದ ಪತನದವರೆಗೂ ಒಂದು ನಿರ್ದಿಷ್ಟ ಜಾಡಿನಲ್ಲಿ ಸಾಗಿಬಂದಂತೆ ಕಾಣುವ ಆ ಸಂಘರ್ಷವು, ಎರಡನೇ ಜಾಗತಿಕ ಸಮರದ ಕಾಲದಲ್ಲಿ ಯುರೋಪಿನ ಎರಡು ಪ್ರಮುಖ ಬಣಗಳಿಗೆ ಸೀಮಿತಗೊಂಡಿತ್ತು ಎಂಬ ಸೂಕ್ಷ್ಮವನ್ನು ಎಚ್ಚರದಿಂದ ಗಮನಿಸಬೇಕು. ಜಪಾನಿನ ಸೇರ್ಪಡೆ ಆಕಸ್ಮಿಕ. ಮೊದಲು ಗ್ರೀಕರು – ಪರ್ಷಿಯನ್ನರು ಅನಂತರದಲ್ಲಿ ರೋಮನ್ನರು – ಅರಬ್ಬರು, ಅದರ ಮುಂದಿನ ಹಂತದಲ್ಲಿ ಯುರೋಪ್ ಮತ್ತು ತುರ್ಕರ ನಡುವೆ ನಡೆದುಬಂದ ಆ ಸಂಘರ್ಷ ಎರಡನೇ ಜಾಗತಿಕ ಸಮರದ ಕಾಲದಲ್ಲಿ ಪ್ರಧಾನವಾಗಿ ನಡೆದುದು ಯುರೋಪ್‌ಗೆ ಸೇರಿದ ಎರಡು ಪ್ರಮುಖ ಬಣಗಳ ನಡುವೆ. ತುರ್ಕಿಯ ಪತನಾನಂತರ ಎರಡನೇ ಜಾಗತಿಕ ಸಮಯದವರೆಗೂ ನಡೆದ ಯುರೋಪಿನ ಬಣಗಳ ನಡುವಿನ ಕದನವನ್ನು ‘ಮನೆ ಜಗಳ’ ಎಂದು ಪರಿಗಣಿಸುವುದು ಉಚಿತ.

ಎರಡನೇ ಜಾಗತಿಕ ಸಮರದ ಕಾಲದಲ್ಲಿ ಕಾಣಿಸಿಕೊಂಡ ಅಂತಹ ಒಂದು ಮಹತ್ವದ ಮಾರ್ಪಾಡು ಮತ್ತು ಅಚಾನಕ್‌ ಬೆಳವಣಿಗೆಯನ್ನು ಬಿಟ್ಟರೆ, ಇತಿಹಾಸದ ಪುಸ್ತಕಗಳ ಹಳೆಯ ಕತೆಯಾದ ಕುರುಕ್ಷೇತ್ರ ರೂಪದ ಆ ಮಹಾಭಾರತ, ಮತ್ತೆ ತನ್ನ ಹಿಂದಿನ ಜಾಡಿಗೆ ಇಳಿದುಕೊಂಡಿದೆ. ಅಮೆರಿಕ ಆ ಸಾಲಿಗೆ ಹೊಸ ಸೇರ್ಪಡೆ, ರೋಮ್‌ ಮತ್ತು ಬ್ರಿಟಿಷ್‌ ಸಾಮ್ರಾಜ್ಯದ ಮತ್ತೊಂದು ಆಯಾಮ. ಸಾಮ್ರಾಜ್ಯ ಕಟ್ಟಲು ತುರ್ಕರಿಗೆ ಸಾಧ್ಯವಾದುದು ಇಸ್ಲಾಂವಾದಿಗಳಾಗಿ ಪರಿವರ್ತನೆಗೊಂಡ ನಂತರ. ಅಲ್ಲಿಯವರೆಗೂ ಗ್ರೀಕ್‌ – ಲ್ಯಾಟಿನ್‌ ಜನರ ತರಹವೇ ಪೇಗನ್ನರಾಗಿ ಉಳಿದಿದ್ದ ಅವರು ‘ಇಲಿಯಡ್‌’ನ ಟ್ರೋಜನ್ ಸಂತತಿಗೆ ಸೇರಿದವರಾಗಿಬಹುದು. ಆದರೆ ಅರಬ್ಬರು, ಪರ್ಷಿಯನ್ನರು ಮತ್ತು ತುರ್ಕರು ಇಸ್ಲಾಂವಾದಿಗಳಾಗಿ ಪರಿವರ್ತನೆಗೊಳ್ಳುವುದಕ್ಕೆ ಎಷ್ಟೋ ಶತಮಾನ ಮೊದಲೇ ಗ್ರೀಕ್‌ – ಲ್ಯಾಟಿನ್‌ ಜನರ ತರಹವೇ ಪೇಗನ್ನರಾಗಿ ಉಳಿದಿದ್ದ ಅವರು ‘ಇಲಿಯಡ್‌’ನ ಟ್ರೋಜನ್‌ ಸಂತತಿಗೆ ಸೇರಿದವರಾಗಿರಬಹುದು. ಆದರೆ ಅರಬ್ಬರು, ಪರ್ಷಿಯನ್ನರು ಮತ್ತು ತುರ್ಕರು ಇಸ್ಲಾಂವಾದಿಗಳಾಗಿ ಪರಿವರ್ತನೆಗೊಳ್ಳುವುದಕ್ಕೆ ಎಷ್ಟೋ ಶತಮಾನ ಮೊದಲೇ ಗ್ರೀಕ್‌ – ರೋಮನ್ನರು ಕ್ರಿಶ್ಚಿಯನ್ನರಾಗಿ ಪರಿವರ್ತನೆಗೊಂಡಿದ್ದರು. ರಿಲಿಜನ್‌ ಸ್ವೀಕರಿಸುವ ವಿಚಾರದಲ್ಲಿ ಸಹ ಅವರು ಇಸ್ಲಾಂವಾದಿಗಳಿಗಿಂತ ಮುಂದಿದ್ದರು.

ಮೇಲುಗೈ ಸಾಧಿಸಲು ಗ್ರೀಕರ ಮೇಲೆ ಪರ್ಷಿಯನ್ನರು ಹೇರಿದ ಆ ಸಂಘರ್ಷ, ಮುಂದೆ ಚೀನಾ ಮತ್ತು ಭಾರತದ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸುವ ಪೈಪೋಟಿಯಾಗಿ ರೋಮನ್ನರು ಮತ್ತು ಅರಬ್ಬರ ಕಾಲದಲ್ಲಿ ಪರಿವರ್ತನೆಗೊಂಡ ಕತೆಯನ್ನು ಇತಿಹಾಸದ ಪುಟಗಳು ದಾಖಲಿಸುತ್ತವೆ. ಕ್ರಿ. ಶ. ೫೫೨ರ ಸುಮಾರಿನಲ್ಲಿ ಒಂದಿಬ್ಬರು ಪಾದ್ರಿಗಳು ಮಾಡಿದ ರೇಷ್ಮೆಗೂಡು ಕಳ್ಳಸಾಗಣೆಯೊಂದಿಗೆ ಕೊನೆಗೊಂಡ ಚೀನಾದ ಮೇಲಿನ ಆಕರ್ಷಣೆ, ಭಾರತದ ಮೇಲಿನ ಮೋಹವಾಗಿ ಪರಿವರ್ತನೆಗೊಂಡಿತು. ಮುದ್ರಣ ಕಲೆ, ಮದ್ದುಗುಂಡುಗಳ ಬಳಕೆ, ದಿಕ್ಸೂಚಿ ಉಪಯೋಗ ಇತ್ಯಾದಿ ವಿದ್ಯೆಗಳನ್ನು ಪಶ್ಚಿಮ ಜಗತ್ತಿನ ಜನ ಚೀನಾ ಮೂಲದಿಂದ ಪಡೆದರಾದರೂ ಅವರ ಮೇಲೆ ನೇರ ಪ್ರಭುತ್ವ ಸಾಧಿಸಲು ಕೊನೆಗೂ ಸಾಧ್ಯವಾಗಲಿಲ್ಲ. ಮಂಗೋಲರ ಕಾಲದಲ್ಲಿ ಆದ ಪ್ರವೇಶದ ಹೊರತು ಪ್ರತ್ಯೇಕತೆಯ ಪ್ರತೀಕವಾದ ಚೀನಾದ ಮಹಾಗೋಡೆಗಳನ್ನು ಇಂದಿನ ಜಾಗತೀಕರಣದ ಕಾಲದಲ್ಲೂ ಭೇದಿಸಲು ಸಾಧ್ಯವಾಗಿಲ್ಲ; ತ್ಯಕ್ತತೆ ಕಾಪಾಡಿಕೊಳ್ಳಲು ಅಂದು ಗೋಡೆ ಕಟ್ಟಿಕೊಂಡ ಚೀನಾದ ಜನ, ಇಂದು ಹಾಕಿಕೊಂಡಿರುವ ಜರಡಿ ಹೆಚ್ಚಾಗಿ ಮಾನಸಿಕ ಮತ್ತು ಬೌದ್ಧಿಕವಾದುದು.

ಅನ್ಯಶಕ್ತಿಗಳ ಚದುರಂಗದಾಟಕ್ಕೆ ಆಯಕಟ್ಟಿನ ಹಾಸಾಗಿ ಬಂದ ಭಾರತ, ಇಂದೂ ಅದೇ ಸ್ಥಿತಿಯಲ್ಲಿ ಉಳಿದಿರುವುದು: ಕಾಶ್ಮೀರದ ನೆಪದಲ್ಲಿ ನಡೆಯುತ್ತಿರುವ ಬೆದರು – ಸಮರ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದ ಸಂಘರ್ಷದ ಮತ್ತೊಂದು ಅಧ್ಯಾಯ. ಇತಿಹಾಸದ ಪುಟಗಳ ಬಗ್ಗೆ ನಿರ್ಲಕ್ಷ್ಯ ತೋರಬಯಸುವ ಮಂದಿ ಅಂತಹ ಕೆಲವಾದರೂ ಅಲ್ಲಟಪಲ್ಲಟಗಳ ಕಡೆಗೆ ಕಣ್ಣು ಹಾಯಿಸುವ ಅಗತ್ಯವಿದೆ.

ಎಂದೋ ಆರಂಭಗೊಂಡ, ಇಂದಿಗೂ ತಣಿಯದಂತೆ ಕಾಣದ ಮತ್ತು ಮರಳ ತನ್ನ ಹಳೆಯ ಜಾಡಿಗೆ ಬಿದ್ದಿರುವ ಆ ಸಾಮ್ರಾಜ್ಯದಾಹ, ಎರಡು ಬಣಗಳಾಗಿ ಮತ್ತೆ ವಿಭಜನೆಗೊಂಡಿದ್ದು ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಎಂದು ರೂಕ್ಷವಾಗಿ ಆ ಸಂಘರ್ಷವನ್ನು ಗುರುತಿಸಲು ಸುಸಂಸ್ಕೃತ ಮನಸ್ಸುಗಳು ಸಂಕೋಚಪಡುವುದು ಸಹಜ. ಏಷ್ಯಾದ ಶ್ರೀಮಂತ ಹಿನ್ನೆಲೆಗಿಂತ ಹೆಚ್ಚಾಗಿ ಅವರಿಗೆ ಅವರ ಇಸ್ಲಾಂ ಮುಖವೆ ಮುಖ್ಯ ಆಗುವುದು, ತೊಡಕಿಗೆ ಕಾರಣ ಆಗಿರಬಹುದು.

ಬದಲಿ ಇಂಧನ ಮಾರ್ಗ ಕಂಡುಕೊಳ್ಳುವುದರ ಮುಖೇನ ಅರಬ್‌ ಮೂಲದ ತೈಲದ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು; ಭೂಮಿ ಆಧಾರಿತ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಎಷ್ಟು ಸಾಧ್ಯವೋ ಅಷ್ಟು ಬದಲಾಯಿಸಿ ನೂತನ ರೀತಿಯ ಜೀವನ ಪದ್ಧತಿಯನ್ನು ಕಂಡುಕೊಳ್ಳುವುದು – ಪಶ್ಚಿಮ ಜಗತ್ತಿನ ಜನರ ಎದುರಿರುವ ಸದ್ಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಎರಡು. ಆಹಾರ ಪದ್ಧತಿ ಬದಲಿಸುವ ವಿಚಾರದಲ್ಲಿ ಈಗಾಗಲೇ ಸಾಕಷ್ಟು ದೂರ ಸಾಗಿ ಬಂದಿದ್ದಾರೆ.

ಕೃಷಿ ಜತೆಗಿನ ಕೈಗಾರಿಕಾ ಸಂಬಂಧ ಮೊನ್ನೆಮೊನ್ನೆಯವರೆಗೂ ಒಟ್ಟಾರೆ ಪರಸ್ಪರ ಪೂರಕವಾದುದೇ ಆಗಿತ್ತು. ಕೈಗಾರಿಕಾ ಪ್ರಗತಿಯ ಪ್ರಮಾಣಕ್ಕನುಗುಣ ಅಲ್ಲಲ್ಲಿ ನಡೆದ ಕೃಷಿಕ ಸಮಾಜಗಳ ಒಕ್ಕಲೆಬ್ಬಿಸುವಿಕೆ ಮೊದಲಾದ ತೊಂದರೆ ತಾಪತ್ರಯ ಬಿಟ್ಟರೆ, ಕೃಷಿಕ್ಷೇತ್ರವನ್ನು ಉತ್ತಮಪಡಿಸುವ ಹಾದಿಯಲ್ಲಿ ತನ್ನೆಲ್ಲ ಶಕ್ತಿಯೊಡನೆ ನೆರವಿಗೆ ಬಂದ ಕೈಗಾರಿಕಾ ರಂಗ ಇಂದು ಪಡೆದುಕೊಂಡಿರುವ ತಿರುವು, ಅದಕ್ಕೆ ವಿರುದ್ಧವಾದುದಾಗಿದೆ. ತನ್ನ ಈವರೆಗಿನ ಜೀವಿತದ ಅವಧಿಯಲ್ಲಿ ಹಲವಾರು ತರಹದ ಸಂಘರ್ಷ ಹಾಗೂ ಮಹಾಸಂಘರ್ಷಗಳನ್ನು ಕಂಡಿರುವ ಇತಿಹಾಸದೇವಿಯು, ಕೃಷಿ ಮತ್ತು ಕೈಗಾರಿಕಾ ಸಮಾಜಗಳ ನಡುವೆ ಇಂದು ನಡೆಯುತ್ತಿರುವ ಮಹಾಸಂಘರ್ಷದಮತಹ ಸಂಘರ್ಷದ ರುಚಿ ನೋಡಿದ ದಾಖಲೆ ಇಲ್ಲ. ಪ್ರಕೃತಿ ಮತ್ತು ಮನುಷ್ಯ ಸುಖಾನ್ವೇಷಣೆಗಳ ನಡುವಿನ ಹೊಂದಾಣಿಕೆಯು ಸಮತೋಲನ ಕಳೆದುಕೊಂಡಾಗ ಉಂಟಾಗಹುದಾದ ಅನಾಹುತ ಕುರಿತಂತೆ ಅನೇಕರು ಎಚ್ಚರಿಸಿರುವ ಉದಾಹರಣೆಗಳಿವೆ. ಆದರೆ ಕೃಷಿ ಮತ್ತು ಕೈಗಾರಿಕಾ ಸಂಘರ್ಷ ಕುರಿತಂತೆ ಮಾಡಿರಬಹುದಾದ ಮುಂದಾಲೋಚನೆ ಮತ್ತು ಆಡಿರಬಹುದಾದ ಮಾತುಗಳೆಲ್ಲ ಹೆಚ್ಚಾಗಿ ಇತ್ತೀಚಿನ ಬೆಳವಣಿಗೆ.

ಗ್ರಾಮೀಣ ಮತ್ತು ನಗರ, ಮೌಖಿಕ ಮತ್ತು ಲಿಖಿತ, ಮುದ್ರಣ ಮತ್ತು ದೃಶ್ಯ, ಕಾಡು ಮತ್ತು ಮರಳುಗಾಡು ಹಾಗೂ ಪ್ರಕೃತಿಪರ ಮತ್ತು ವಿರೋಧಿ ಮನೋಭಾವಗಳ ನಡುವಿನ ಸಂಘರ್ಷ ಎಂದು ಬೇಕಾದರೂ ಗುರುತಿಸಬಹುದಾಗಿದೆ. ಇತಿಹಾಸದ ಆರಂಭದ ಕಾಲದಿಂದಲೂ ಒಂದಲ್ಲ ಒಂದು ರೂಪದಲ್ಲಿ ನಡೆಯುತ್ತಾ ಬಂದ ಆ ಸಂಘಷವಿಂದು ಕೃಷಿ ಮತ್ತು ಕೈಗಾರಿಕಾ ಸಂಘರ್ಷ ರೂಪದಲ್ಲಿ ಪ್ರಮುಖವಾಗಿ ಎದುರಾಗಿದೆ. ಎಂದು ಸಹ ಸರಳೀಕರಿಸಬಹುದು. ಏಕಾಧಿಪತ್ಯ ಮತ್ತು ಬಹುತ್ವಗಳ ನಡುವಿನ ಸಂಘರ್ಷ ಕೂಡ ಹೌದು.

ಲಿಖಿತ ಸಂಸ್ಕೃತಿಯ ಪ್ರಾಬಲ್ಯ ಹೆಚ್ಚುತ್ತಾ ಹೋದಂತೆಲ್ಲಾ ಪ್ರಾಮುಖ್ಯತೆ ಕಳೆದುಕೊಳ್ಳತೊಡಗಿರುವ ಸಂಸ್ಕೃತಿ, ಇಂದು ತೀರ ತಾತ್ಸಾರಕ್ಕೆ ಗುರಿಯಾಗಿರುವುದು ಸಂಬಂಧಿಸಿದ ಬೆಳವಣಿಗೆ. ಕೃಷಿ ಪದ್ಧತಿ ಪ್ರಧಾನವಾಗಿ ಚಲಾವಣೆಗೆ ಬಂದನಂತರವೂ ಅರಣ್ಯಗಳ ಒಳಗಡೆ ಉಳಿದುಹೋದ ಆದಿವಾಸಿ ಸಮುದಾಯಕ್ಕೆ ತಾನು ತೋರತೊಡಗಿದ ‘ಗೌರವ’ವನ್ನು ಮೌಖಿಕ ಪರಂಪರೆಗೆ ಸೇರಿದ ಕೃಷಿಕ ಸಮುದಾಯವು ಇಂದಿನ ಅಕ್ಷರವಂತ ಜನರಿಂದ ಮರಳಿ ಪಡೆಯತೊಡಗಿದೆ.

ವರ್ಣ, ಜಾತಿ, ಜನಾಂಗ, ಅಂತಸ್ತು, ಹುಟ್ಟು ಆಧಾರಿತ ತಾರತಮ್ಯಗಳ ಪಾಲಿಗೆ ಹೊಸ ಸೇರ್ಪಡೆ. ಕೃಷಿ ಜೀವನಕ್ಕೆ ಹೊಂದಿಕೊಂಡವರು ಮತ್ತು ಕಾಡುಜೀವನಕ್ಕೆ ಮಾರುಹೋದವರ ನಡುವಿನ ಅಂತರದಲ್ಲಿ ಭಾರತದ ಜಾತೀಯತೆಯ ಮೂಲ ಹುಡುಕುವುದರಿಂದ ಹೆಚ್ಚಿನ ಅನುಕೂಲ ಆಗಬಹುದು. ಕೃಷಿ ಬದುಕು ಕೈಗೂಡಿದ ನಂತರ ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದವರು ಜಾತಿಶ್ರೇಣಿಯಲ್ಲಿ ಮೇಲೆ ಮೇಲೆ ಹೋಗಲು ಸಾಧ್ಯವಾದಂತೆ ತೋರುತ್ತದೆ. ಅದೇ ತರಹದ ಪ್ರಕ್ರಿಯೆ ಇಂದಿಗೂ ಹಲವಾರು ಅವತಾರಗಳಲ್ಲಿ ಕಾರ್ಯಪ್ರವೃವತ್ತವಾಗಿರುವುದನ್ನು ಕಾಣಬಹುದಾಗಿದೆ.

ಮೌಖಿಕ ಸಂಸ್ಕೃತಿಯನ್ನು ಸಂಪೂರ್ಣ ಅಳಿಸಿಹಾಕಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂಬ ತೀರ್ಮಾನ ತಲುಪಿರುವ ಇಂದಿನ ಕೈಗಾರಿಕಾ ನಾಗರಿಕತೆಯ ಪ್ರತಿಪಾದಕರು ತಮ್ಮ ಪ್ರಗತಿಯ ಪರಾಕಾಷ್ಠೆಯನ್ನು ಕೃಷಿಕ ಸಮಾಜದ ಅವಸಾನದಲ್ಲಿ ಕಾಣಬಯಸುತ್ತಾರೆ. ಹಣ್ಣು ಹಂಪಲು ಹೆಕ್ಕುವವರು ಮತ್ತು ಕೃಷಿಕ ಸಮಾಜದ ವಕ್ತಾರರ ನಡುವೆ ನಡೆಯುತ್ತಾ ಬಂದ ಆ ಪೈಪೋಟಿ ಕೃಷಿ ಸಮಾಜಗಳ ವ್ಯಾಪಕತೆಯಲ್ಲಿ ಪರ್ಯವಸಾನಗೊಳ್ಳುತ್ತಾ ಬಂತು. ಅದರ ಮುಂದಿನ ಹಂತವಾಗಿ ಕೈಗಾರಿಕಾ ಮತ್ತು ಕೃಷಿ ಸಮಾಜಗಳ ನಡುವೆ ನಡೆಯುತ್ತಿರುವ ಸಂಘರ್ಷ ಕೊನೆಯದರ ಅವಸಾನದಲ್ಲಿ ಮುಕ್ತಾಯ ಕಾಣುವುದು ಸ್ವಾಭಾವಿಕ ಎಂಬುದಾಗಿ, ಕೈಗಾರಿಕಾ ಸಂಸ್ಕೃತಿಯ ಪ್ರಬಲ ವಕ್ತಾರರಾದ ಪಶ್ಚಿಮ ಜಗತ್ತಿನ ಒಂದು ವರ್ಗದ ಜನ ಭಾವಿಸುತ್ತಾರೆ. ಭಾರತದಂತಹ ಕೃಷಿ ಆಧಾರಿತ ಸಮಾಜಗಳ ಪರಿಸ್ಥಿತಿ ನೋಡಿದರೆ, ಅವರ ಗ್ರಹಿಕೆ ಸರಿಯಾಗಿರುವಂತೆ ತೋರುತ್ತದೆ ಎಂಬ ಭಯ ಉಂಟಾಗುವುದು ಸಹಜ. ಆಫ್ರಿಕಾ ಖಂಡದ ಬಹುಭಾಗದ ಮಟ್ಟಿಗೆ ಆ ಗ್ರಹಿಕೆ ಈಗಾಗಲೇ ನಿಜವೂ ಆಗಿದೆ.

ಅಂತ ಅಲ್ಲಟಪಲ್ಲಟಗಳನ್ನು ಸಂಘರ್ಷ ಎಂದು ಕರೆಯಬಹುದೆ ಎಂಬುದು ಅವರ ತಿಳುವಳಿಕೆಯ ಮಟ್ಟ ಮತ್ತು ಮನೋಧರ್ಮವನ್ನು ಹೊಂದಿಕೊಂಡಿದೆ. ಅವರು ಹೇಳುವಂತೆ ಆ ‘ಮಹಾಸಂಘರ್ಷ’ ‘ಪರಾಕಾಷ್ಠೆ’ ಕಂಡಿದ್ದ ಕಾಲದಲ್ಲಿಯೂ ಆದಿವಾಸಿ ಸಂಸ್ಕೃತಿ ಸಂಪೂರ್ಣ ನಿರ್ನಾಮ ಆಗುವ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ. ಉಳಿದು ಬಂದ ಅರಣ್ಯಗಳು ಅವರ ಬದುಕಿನ ಮಾದರಿಗೆ ಮೊನ್ನೆ ಮೊನ್ನೆಯವರೆಗೂ ರಕ್ಷಿತ ಆಸರೆಯಾಗಿದ್ದವು. ಲಿಖಿತ ಸಂಸ್ಕೃತಿಗೆ ಮೌಖಿಕ ಸಂಸ್ಕೃತಿ ಆಸರೆಯಾಗಿದ್ದ ರೀತಿಯಲ್ಲಿಯೇ ಅರಣ್ಯವಾಸಿಗಳ ಸಂಸ್ಕೃತಿ ಕೃಷಿ ಸಮಾಜಕ್ಕೆ ಪೂರಕವಾಗಿತ್ತು. ಆದಿವಾಸಿ ಸಮಾಜಗಳ ಬದುಕುವ ಹಕ್ಕನ್ನು ಸಂಪೂರ್ಣ ಕಸಿದುಕೊಳ್ಳಲು ಕೃಷಿ ಸಂಸ್ಕೃತಿಗೆ ಎಂದೂ ಸಾಧ್ಯವಾಗಿರಲಿಲ್ಲ. ಅವರು ಪ್ರತಿನಿಧಿಸುವ ಜೀವನ ಕ್ರಮ ಕಂಡ ಅವಸಾನ ಏನಿದ್ದರೂ ಇತ್ತೀಚಿನ ಬೆಳವಣಿಗೆ: ಕೈಗಾರಿಕಾ ರಂಗದ ಕೊಡುಗೆ.

ಕೈಗಾರಿಕಾ ರಂಗ ಮತ್ತು ಯಂತ್ರ ಜಗತ್ತಿನ ಭಾಷೆಯಾಗಿ ಬೆಳೆಯದೆ ಹೋದ ಕನ್ನಡ ಮೊದಲಾದ ಭಾಷೆಗಳ ಪರಿಷ್ಥಿತಿ, ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳನ್ನು ಹೆಚ್ಚಾಗಿ ಹೊಂದಿಕೊಂಡಿರುವ ವ್ಯಂಗ್ಯದ ಮಾದರಿಯನ್ನು ಗಮನಿಸದಿರಲು ಸಾಧ್ಯವೇ?

ಬ್ರಿಟಿಷ್‌ ಸಾಮ್ರಾಜ್ಯ ತನ್ನ ಗರ್ವದ ತುತ್ತತುದಿ ತಲುಪಿದ ಕಾಲದಲ್ಲಿ ಅದರ ಮುಂದಿನ ಗತಿ ಕುರಿತಂತೆ ವ್ಯಥಿತನಾಗಿ ಭಾರತೀಯ ಸಂಜಾತನಾದ ರುಡ್ಯಾರ್ಡ್‌ ಕಿಪ್ಲಿಂಗ್‌ ೧೮೯೭ರಲ್ಲಿ ಬರೆದ Recessional ಪದ್ಯವನ್ನು ಈಗಿನ ಅಮೆರಿಕನ್‌ ಸಾಮ್ರಾಜ್ಯದ ಪ್ರಜ್ಞೆಗಳು ಮತ್ತು ಬುದ್ಧಿಜೀವಿಗಳು ಅನೇಕ ರೀತಿ ಮೆಲಕು ಹಾಕುತ್ತಿದ್ದಾರೆ. ಆ ಪದ್ಯದ ಬಹುಮುಖ್ಯವಾದ ಆರು ಸಾಲುಗಳು ಈ ರೀತಿ ಇವೆ :

Far – Called, our navies melt away;
On dune and headland sinks the fire:
Lo, all our pomp of yesterday
Is one with Niveveh and Tyre!
Judge of the Nations, Space us yet,
Lest we forget – Lest we forget !

ಅಮೇರಿಕೀಕರಣ, ಪಾಶ್ಚಿಮಾತ್ಯೀಕರಣ ಹಾಗೂ ಜಾಗತೀಕರಣ ಎಂದರೂ ಬಹುತೇಕ ಒಂದೇ ಆದ ಅಮೆರಿಕದ ವೈಭವ ಕಂಡು ದಂಗಾಗುತ್ತಿರುವರು ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ ಜನರು ಮಾತ್ರವಲ್ಲ. ಅಮೆರಿಕಾದ ನಿರ್ವಹಣಾ ವಿಧಾನ, ಆಡಳಿತ ವೈಖರಿ, ಏಕಪಕ್ಷೀಯ ತೀರ್ಮಾನ ಹಾಗೂ ಪಾರುಪತ್ತೆ ಮನೋಭಾವ, ಯುರೋಪ್‌ ಖಂಡದಲ್ಲಿ ತೀವ್ರ ವಿರೋಧ ಎದುರಿಸುತ್ತಿದೆ. ಹಾಗಾಗಿ ಇಲ್ಲಿ ಎದುರಾಗುವ ಒಂದೆರಡು ಮೇಲುನೋಟದ ಹೊಂದಾಣಿಕೆಗಳನ್ನುಮೆಲುಕು ಹಾಕುವುದು ಒಳ್ಳೆಯದು. ೧೯೦೦ರಲ್ಲಿ ತನ್ನ ಪರಾಕಾಷ್ಠೆಯ ತುತ್ತತುದಿ ತಲುಪಿದ ಬ್ರಿಟಿಷ್‌ ಸಾಮ್ರಾಜ್ಯ, ಭಾರತ ಸ್ವತಂತ್ರ ರಾಷ್ಟ್ರವಾಗುವುದರೊಂದಿಗೆ ಎಲ್ಲ ದೇಶಗಳಂತೆ ತಾನೂ ಒಂದು ಸಣ್ಣ ಸಮಾಜವಾಗಿ ಉಳಿದುಕೊಂಡಿತು. ಅದರ ಮುಂದಿನ ಹೆಜ್ಜೆಯಾದ ಅಮೆರಿಕನ್‌ ಸಾಮ್ರಾಜ್ಯ, ೨೦೦೦ದಲ್ಲಿ ತನ್ನ ಪರಾಕಾಷ್ಠೆಯ ಹೊಸ್ತಿಲಲ್ಲಿ ನಿಂತಿದೆ. ಅವೆರಡರ ನಡುವಿನ ಅಂತರ ಕೇವಲ ನೂರು ವರ್ಷ ಮಾತ್ರ.

ಇರಾಕ್‌ ಸಮರದ ನಂತರ, ಅಥವಾ ಮುಂದೆ ಒಂದಲ್ಲ ಒಂದು ದಿನ ಅಮೆರಿಕನ್‌ ಸಾಮ್ರಾಜ್ಯ ಕುಸಿಯುತ್ತದೆ ಎಂದಾದಲ್ಲಿ, ಅದರ ಪರಿಣಾಮ ಯಾವ ರೀತಿ ಆಗಲುಸಾಧ್ಯ? ಸೋವಿಯತ್‌ ರಷ್ಯಾ ವಿಘಟಿಸಿದಾಗ ಆದುದಕ್ಕಿಂತ ಹೆಚ್ಚಿನ ಪರಿಣಾಮ ಅಂತೂ ಆಗಿಯೇ ತೀರುತ್ತದೆ. ಆ ಜತೆಗೆ, ಇಂದಿನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯೇ ಕುಸಿದು ಹೋಗಿಬಿಡಬಹುದೆ? ಹಾಗಾದಾಗ ಉಳಿಕೆ – ಪಳಿಕೆ ಜನ, ನೂರು ವರ್ಷಗಳಿಗೂ ಹಿಂದಿನ ಬದುಕಿಗೆ ಮರಳಿ ಹೋಗಬೇಕಾಗಿ ಬರುತ್ತದೆಯೆ? ಅಂತಹ ಬದುಕಿನ ಪ್ರತಿನಿಧಿಗಳಾದ ಕನ್ನಡದಂತಹ ಭಾಷೆಗಳಿಗೆ ಆಗಲಾದರೂ ಹೊಸ ಸಂಸ್ಕೃತಿ ಸಮಾಜ ನಿರ್ಮಿಸುವ ಅವಕಾಶ ದೊರಕೀತೆ? ಅಥವಾ ಅಮೆರಿಕನ್‌ ಸಾಮ್ರಾಜ್ಯ ತರಬಹುದಾದ ಸರ್ವನಾಶದ ಜಾಲದಿಂದ ತಪ್ಪಿಸಿಕೊಳ್ಳುವ ಅವಕಾಶ ಯಾವ ಸಮಾಜಗಳಿಗೂ ದೊರಕದೆ ಹೋಗಿಬಿಡಬಹುದೆ?

ಒಂದು ಪಕ್ಷ ಅವಕಾಶ ದೊರಕುತ್ತದೆ ಎಂಬುದಾದಲ್ಲಿ ಅದು ಯಾರದಾಗಬಹುದು? ಆ ಅವಕಾಶ ಪಡೆವ ಅಪೂರ್ವ ಸಮಾಜಗಳ ಸಾಲಿನಲ್ಲಿ ಎಂದೂ ಪರಾಕಾಷ್ಠೆಯ ತುತ್ತತುದಿ ತಲುಪದ ಕನ್ನಡವೂ ಒಂದಾಗಿರಬಹುದೇ?

ಹಾಗಾಗಿ, ಅವಕಾಶ ಮತ್ತೆ ದೊರಕುವುದೆ ಇತ್ಯಾದಿ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರ ಅಥವಾ ಸವಿವರಣೆ, ಎಂದೆಂದಿಗಿಂತಲೂ ಹೆಚ್ಚಾಗಿ ಇಂದು ಭೂಮಂಡಲದ ಗ್ರಹಗತಿ ಮತ್ತು ದಣಿವನ್ನು ಹೊಂದಿಕೊಂಡಿದೆ: ನಿನ್ನೆ ಗೊತ್ತಿಲ್ಲದವರಿಗೆ ಇಂದು ಗೊತ್ತಿರುವುದು ಸಾಧ್ಯವಿಲ್ಲವಾದಂತೆ, ಇಂದು ಗೊತ್ತಿಲ್ಲದವರಿಗೆ ನಾಳೆ ತಿಳಿಯುವುದು ಕಷ್ಟದ ಮಾತು.*

 

*೨೦೫೦ರ ಸುಮಾರಿಗೆ ಅಮೆರಿಕ ಕುಸಿಯು ಸಾಧ್ಯತೆ ಇದೆ ಎಂದು ಅಲ್ಲಿ ವಿಜ್ಞಾನಿಗಳು ಈಗಾಗಲೇ ಅಂದಾಜು ಮಾಡಿದ್ದಾರೆ.