ಯುರೋಪ್‌ ಮೂಲದ ಪಶ್ಚಿಮ ಜಗತ್ತು ಮೆಚ್ಚಿ ಓದಿ, ಸ್ವಲ್ಪವಾದರೂ ಕಲಿಯ ಬಯಸುವ ಕೃತಿಗಳನ್ನು ರಚಿಸುವ ಅವಕಾಶ ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುವ ಕವಿಗಳು ಮತ್ತು ಲೇಖಕರಿಗೆ ಇನ್ನು ಮುಂದೆ ಎಂದಾದರೂ ದಕ್ಕುವುದೇ? ಎಂಬ ಪ್ರಮುಖ ಪ್ರಶ್ನೆಗೆ ಈ ಎಲ್ಲ ಚರ್ಚೆ ಮತ್ತು ಅನ್ವೇಷಣೆ ದಾರಿ ಮಾಡಿಕೊಡುತ್ತದೆ ಪಶ್ಚಿಮ ಜಗತ್ತಿನ ಜನರನ್ನು ಒಳಗೊಂಡ ವಿಶ್ವದ ಎಲ್ಲರು ಎಂದೇ ಆ ಮಾತಿನ ಅರ್ಥ ಕನ್ನಡ, ತಮಿಳು, ಬಂಗಾಳಿ ಅಥವಾ ಮತ್ತಾವುದೇ ಭಾರತೀಯ ಭಾಷೆಗಳಲ್ಲಿ ಬರೆದ ಕೃತಿಗಳನ್ನು ಅವರು ಓದಲೇಬೇಕು ಎಂಬ ಹಠ ಮತ್ತು ನಿರೀಕ್ಷೆಯ ಚಪಲ ಏಕೆ ಎಂಬ ಕೊಂಕು, ಕೆಲವರ ಮನಸ್ಸನ್ನು ಕಾಡಬಹುದು. ಮೊದಲನೇ ಪ್ರಶ್ನೆಗಿಂತಲೂ ಹೆಚ್ಚಾಗಿ ಎರಡನೇ ಕುಹಕವೇ ಹಲವರಿಗೆ ಹೆಚ್ಚು ಪ್ರಿಯವಾಗಿ ಕೇಳಿಸಬಹುದು. ಆ ತರಹ ಯೋಚಿಸುವ ವರ್ಗದ ಜನರು ಇನ್ನೂ ಇದ್ದಾರೆ ಎಂಬ ಸಂಗತಿ ಆಶ್ಚರ್ಯ ತರಿಸುವುದಕ್ಕಿಂತಲೂ ಹೆಚ್ಚಾಗಿ, ಬದಲಾಗದೆ ಇಂದಿಗೂ ಉಳಿದಿರುವ ಮನಃಸ್ಥಿತಿಯ ಮೇಲಿನ ಪರಂಪರಾಗತ ಹಿಡಿತದ ಒತ್ತಡವನ್ನು ಅವರು ಪ್ರತಿನಿಧಿಸುತ್ತಾರೆ. ಆ ಕಾರಣ, ಅಷ್ಟಾಗಿ ಉತ್ತರ ನಿರೀಕ್ಷಿಸದ ಆದರೂ ಸೂಕ್ತ ಸಮಜಾಯಿಸಿ ಬಯಸುವ ಎರಡನೇ ಪ್ರಶ್ನೆಗೆ ಉತ್ತರ ಕಂಡುಕೊಂಡ ನಂತರ ಮೊದಲನೆಯದರ ಕಡೆಗೆ ಗಮನ ಹರಿಸುವುದು ಸೂಕ್ತ. ನೇರವಾಗಿ ಉತ್ತರ ಹುಡುಕುವ ಬದಲು ಕೆಲವು ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುವ ಮೂಲಕ ತಮ್ಮ ನಿಲುವನ್ನು ತಾವೆ ಪುನರ್‌ ಅವಲೋಕಿಸಿಕೊಳ್ಳುವ ಅವಕಾಶವನ್ನು ಅವರಿಗೆ ಒದಗಿಸುವುದು ಇನ್ನೂ ಉತ್ತಮ ವಿಧಾನ.

ಆ ಕಡೆ ಬಿ. ಎಂ. ಶ್ರೀ. ಮತ್ತು ಈ ಕಡೆ ದ. ರಾ. ಬೇಂದ್ರೆ ಮೊದಲಾದವರ ನೇತೃತ್ವದಲ್ಲಿ ಯುರೋಪ್‌ ಮೂಲದ ಸಾಹಿತ್ಯ ಸಂಪರ್ಕದಿಂದ ನವೋದಯ ಕಾಲದ ಬರವಣಿಗೆಯ ಅಧ್ಯಾಯ ತೆರೆದುಕೊಂಡಾಗ ಆ ಬೆಳವಣಿಗೆ ವಿರೋಧಿಸಿದ ಅದಕ್ಕೂ ಹಿಂದಿನ ಕಾವ್ಯ ಪರಂಪರೆಯ ಪ್ರತಿನಿಧಿಗಳು ಮತ್ತು ವಕ್ತಾರರು, ಕಾಲಕ್ರಮೇಣ ಕಣ್ಮರೆಯಾಗಿ ಹೋದರು; ಅವರ ನೆನಪು ಇತಿಹಾಸದ ಪುಟಗಳ ಒಂದು ಮೂಲೆಯಲ್ಲಿ ಈಗ ದಾಖಲಾಗಿರಬಹುದು ಅಥವಾ ಇಲ್ಲದೆಯೂ ಹೋಗಿರಬಹುದು. ಆದರೆ ಆನಂತರದ ದಿನಗಳಲ್ಲಿ ಯುರೋಪ್‌ ಮೂಲದ ಸಾಹಿತ್ಯ ಕೃತಿಗಳು ಮತ್ತು ಬರವಣಿಗೆಯನ್ನು ಓದುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತ ಸಾಗಿದೆ; ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಆ ಬರವಣಿಗೆಯನ್ನೇ ತಮ್ಮದು ಎಂದು ಸ್ವೀಕರಿಸುವ ಮನೋಭಾವ. ಆ ಜನ ಭಾರತೀಯ ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಅದೇ ಪ್ರಮಾಣದಲ್ಲಿ ದೂರವಾಗುತ್ತಿದ್ದು ಕನ್ನಡ ಮೊದಲಾದ ಭಾರತೀಯ ಭಾಷೆಗಳ ಕೃತಿಗಳನ್ನು ಕೈಯಲ್ಲಿ ಮುಟ್ಟಿ ನೋಡುವುದಿರಲಿ, ಹೆಸರು ಕೇಳಿದರೆ ಸಾಕು ಎಲ್ಲಿ ಮೈಲಿಗೆಯಾದೀತೋ ಎಂಬ ಹಗೇವುಗಳಲ್ಲಿ ಸೇರಿಹೋಗುತ್ತಿದ್ದಾರೆ. ಸಂಸ್ಕೃತ ಮತ್ತು ಆ ಭಾಷೆಯ ಕೃತಿಗಳ ಬಗ್ಗೆ ಒಂದು ಕಾಲದಲ್ಲಿ ಇದ್ದ ಭಾವನೆಗಳು ಈಗ ಇಂಗ್ಲಿಷ್‌ ಮತ್ತು ಇತರ ಯುರೋಪಿಯನ್‌ ಭಾಷೆಗಳಲ್ಲಿ ಬಂದ ಕೃತಿಗಳ ಕಡೆಗೆ ವರ್ಗಾವಣೆಗೊಂಡಿದೆ ಎಂದು ಕೆಲವರು ಸರಳವಾಗಿ ಭಾವಿಸಬಹುದು. ಸಂಸ್ಕೃತ ಭಾಷೆಯ ಬಗೆಗಿನ ಮೋಹ, ಇಂಗ್ಲಿಷ್‌ ಮೂಲಕ ಆಮದಾದ ಕೃತಿಗಳ ಕಡೆಗೆ ಒಲಿಯುತ್ತಿರುವ ಮೋಹದಷ್ಟು ಅಪಾಯಕಾರಿ ಎತ್ತರ ತಲುಪುವ ಸಾಧ್ಯತೆ ಇರಲಿಲ್ಲ ಎಂಬ ಕನಿಷ್ಠ ಸಂಗತಿಯನ್ನು ಮರೆಯದಿರುವುದು ಉತ್ತಮ.

ಆ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬ ಪ್ರಶ್ನೆಯನ್ನು ಇಲ್ಲಿ ಮತ್ತೆ ಎತ್ತಬೇಕಾದ ಅಗತ್ಯವಿಲ್ಲ: ಅದಕ್ಕೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಈ ಅನ್ವೇಷಣೆಯ ಹಾದಿಯಲ್ಲಿ ಇಷ್ಟು ದೂರ ಸಾಗಿ ಬರಲಾಗಿದೆ. ಆದರೂ ಮತ್ತೆ ನೆನಪಿಗೆ ತಂದುಕೊಳ್ಳುವ ಅಗತ್ಯದಿಂದಾದರೂ ಅದೇ ಪ್ರಶ್ನೆಯನ್ನು ಪುನಃ ಕೇಳಿಕೊಳ್ಳಬೇಕಿದೆ. ಇಂಗ್ಲಿಷ್‌ ಮತ್ತು ಯುರೋಪ್‌ ಭಾಷೆಗಳಲ್ಲಿನ ಅನೇಕ ಕೃತಿಗಳನ್ನು ತಮ್ಮದು ಎಂದು ಅಪ್ಪಿ ಮುದ್ದಾಡುವ ಅಸಂಖ್ಯಾತ ಭಾರತೀಯರು ನಿರ್ಮಾಣವಾಗಿರಬೇಕಾದರೆ, ಆದರೆ ಭಾರತೀಯ ಕೃತಿಗಳನ್ನು ಅದೇ ತರಹ ಮುದ್ದಾಡುವುದು ಹೋಗಲಿ, ಓದಬಯಸುವ ಕೆಲ ಪ್ರಮಾಣದ ಓದುಗರನ್ನಾದರೂ ಅಲ್ಲಿ ಪಡೆಯುವುದು ಸ್ವಾಭಾವಿಕ ಬೆಳವಣಿಗೆಯಾಗಬೇಕಿತ್ತು. ಅಂದರೆ ಯಾವುದೇ ಕೊಳು – ಕೊಡುಗೆ ಯಾವಾಗಲೂ ಇಮ್ಮುಖಿಯಾಗಿರುತ್ತದೆ ಎಂಬುದಾದಲ್ಲಿ, ಅಂತಹ ವಾತಾವರಣ ಪಂಪನ ಕಾಲದಿಂದಲೇ ಆರಂಭವಾಗಬೇಕಿತ್ತು ಎಂದು ನಿರೀಕ್ಷಿಸುವುದು ತಪ್ಪಲ್ಲ ತಾನೇ? ಸಂಸ್ಕೃತದಿಂದ ಪಡೆಯಬಹುದಾದುದನ್ನು ಪಡೆದು ಕನ್ನಡ ಭಾಷೆ ಮತ್ತು ಸಂಸ್ಕೃತಿ ನಿರ್ಮಿಸುವ ಮತ್ತು ಕಟ್ಟುವ ಕೆಲಸವನ್ನು ಪಂಪ ಮೊದಲಾದವರು “ಅತ್ಯಂತ ಸಮರ್ಪಕ ಮತ್ತು ಯುಕ್ತವಾಗಿ ನಿರ್ವಹಿಸಿದರು”: ಅವರು ನಿರ್ಮಿಸಿದ ಪರಂಪರೆ ಕಟ್ಟುವ ಕೆಲಸ ಎಂತಹದಾಗಿತ್ತು ಎಂಬುದನ್ನು ರುಜುವಾತುಪಡಿಸಲು ಕಾಲ, ನವೋದಯದ ಯುಗ ಆರಂಭವಾಗುವವರೆಗೂ ಕಾಯಬೇಕಾಯಿತು. ಸಂಸ್ಕೃತದಿಂದ ಪಡೆಯುವುದರ ಜತೆಗೆ ಅವರಿಗೂ ಮರಳಿ ನೀಡುವಂತಹದ್ದನ್ನು ಸೃಷ್ಟಿಸಲು ಸಾಧ್ಯವಾಗಿದ್ದಲ್ಲಿ ಕಾಲನ ಗತಿ ಮತ್ತು ಇತಿಹಾಸದ ಎರವಲು ಪಡೆಯುವ ಮನಃಸ್ಥಿತಿ ಮುಂದೆ ನವೋದಯ ಕಾಲದಲ್ಲಿ ಇಂಗ್ಲಿಷ್‌ ಮೂಲದಿಂದ ದೊರಕಿದ್ದನ್ನು ಪಡೆಯುವ ಮನಃಸ್ಥಿತಿಯಾಗಿ ಮಾರ್ಪಟ್ಟಿತೆ!

ಯುರೋಪ್‌ ಮೂಲಕ ಜಗತ್ತಿನ ಜನರ ಮೇಲೂ ಪ್ರಭಾವ ಬೀರುವಂತಹ ಕೃತಿಗಳು[1] ಕನ್ನಡ ಮೊದಲಾದ ಭಾಷೆಗಳಲ್ಲೂ ಸೃಷ್ಟಿಯಾಗಬೇಕು ಎಂದು ನಿರೀಕ್ಷಿಸುವುದು ಬೇರೊಂದು ಮೂಲದಿಂದ ಪಡೆಯಬಹುದಾದಂತೆಯೇ, ಆ ರೀತಿ ಪಡೆದುದನ್ನು ಮರಳಿ ಹಿಂತಿರುಗಿಸುವ ನೈಪುಣ್ಯ ಮತ್ತು ಸಬಲತೆ ಯಾವುದೇ ಸಂಸ್ಕೃತಿ ಮತ್ತು ನಾಗರಿಕತೆಗೂ ಇರಬೇಕಾಗುತ್ತದೆ. ಅವೆರಡೂ ಪರಸ್ಪರ ಪೂರಕವಾದವು. ಒಂದಿಲ್ಲದೆ ಮತ್ತೊಂದಿರಲು ಸಾಧ್ಯವಿಲ್ಲ. ಅಂತಹ ಸಂಸ್ಕೃತಿ ಮಾತ್ರ ಸ್ವಯವೂ ಮತ್ತು ಸ್ವಾವಲಂಬಿಯಾದುದೂ ಆಗಿರಲು ಸಾಧ್ಯ. ಅದುವೇ ನಿಜವಾದ ಸ್ವಾಭಿಮಾನ. ಆ ಕಾರಣವೇ ಯುರೋಪ್‌ ಮೂಲದ ಪಶ್ಚಿಮ ಜಗತ್ತು ಮತ್ತು ವಿಶ್ವದ ಇತರ ಭಾಗದ ಜನರು ಓದಿ ಮೆಚ್ಚಬಹುದಾದಂತಹ ಹಾಗೂ ಅವರಿಗೂ ಪೂರಕವಾಗಬಹುದಾದಂತಹ ಕೃತಿಗಳನ್ನು ನೀಡಲು ಉಳಿದ ಭಾಷೆಗಳು ಸಮರ್ಥವಾಗಿರಬೇಕು ಎಂಬ ನಿರೀಕ್ಷೆಯನ್ನು ಲಘುವಾಗಿ ಕಾಣುವವರನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಆದರೆ ಅಂತಹ ಮನಃಸ್ಥಿತಿ ಇರುವ ವರ್ಗದ ಜನರು ಇನ್ನೂ ಮುಂದುವರಿದಿದ್ದಾರೆ ಎಂಬುದನ್ನು ಪರಿಗಣನೆಗೆ ತಂದುಕೊಳ್ಳುವುದು ಸಹ ಅಷ್ಟೇ ಅಗತ್ಯ.

ಆಧುನಿಕ ಯುರೋಪಿನ ಭಾಷೆಗಳ ಮೊದಲ ಅಭಿವ್ಯಕ್ತಿಯಾದ ದಾಂತೆ ಬರೆದುದು ಇಟಾಲಿಯನ್‌ ಭಾಷೆಯಲ್ಲಾದರೂ, ಆತನ ಕೃತಿ ಹೊರಬಂದುದೆ ಯುರೋಪಿನ ಮತ್ತು ವಿಶ್ವದ ಕಲಾಕೃತಿಯಾಗಿ ಮಾರ್ಪಟ್ಟಿತು. ತನ್ನ ಕಾಲದ ಆಡುಭಾಷೆಯಾದ ಇಟಾಲಿಯನ್‌ ಭಾಷೆಯಲ್ಲಿ ಬರೆಯುತ್ತಲೇ ಇಡೀ ಯುರೋಪಿಗೆಲ್ಲ ಸಲ್ಲುವ ಕಾವ್ಯವನ್ನು ನೀಡಿದ ಆ ಮಹಾನುಭಾವ ಆ ಮುಖೇನ, ತನಗೂ ಹಿಂದಿನ ಲ್ಯಾಟಿನ್‌ ಮತ್ತು ಗ್ರೀಕ್‌ ಸಂಸ್ಕೃತಿ, ನಾಗರಿಕತೆ ಮತ್ತು ಕಾವ್ಯ ಪರಂಪರೆಯನ್ನು ಪ್ರಭಾವಿಸಿದ, ಕಟ್ಟಿದ ಮತ್ತು ಮುಂದುವರಿಸಿದ ರೀತಿ ಇಂದಿಗೂ ಅನನ್ಯವಾಗಿ ಉಳಿದಿದೆ ಎಂಬ ಸಾದಾ ಮಾತು ಬಳಸುವುದರಿಂದ ದಾಂತೆಯ ಪ್ರಾಮುಖ್ಯತೆಯನ್ನು ಅದರ ನಿಜವಾದ ಅರ್ಥದಲ್ಲಿ ಗ್ರಹಿಸಿದಂತಾಗುವುದರಿಂದ ದಾಂತೆಯ ಪ್ರಾಮುಖ್ಯತೆಯನ್ನು ಅದರ ನಿಜವಾದ ಅರ್ಥದಲ್ಲಿ ಗ್ರಹಿಸಿದಂತಾಗುವುದಿಲ್ಲ. ಅಂತಹ ಸದೃಢ ಮತ್ತು ಸಬಲ ಪರಂಪರೆಯ ನಿರ್ಮಾಣಕ್ಕೆ ಬೇಕಾದ ತಳಹದಿ ನಿರ್ಮಿಸಿದ ದಾಂತೆ ತನಗೆ ದೊರಕಿದ ಆ ಅವಕಾಶವನ್ನು ಕರ್ತವ್ಯವಾಗಿ ಸ್ವೀಕರಿಸಿ, ಸಾಂಸ್ಕೃತಿಕ ಮಾದರಿಯೊಂದನ್ನು ನಿರ್ಮಿಸಿದ ಕವಿ. ಕನ್ನಡದ ‘ಆದಿಕವಿ ಪಂಪ’ನ ಬಗ್ಗೆಯೂ ಅದೇ ಮಾತನ್ನು ಅಷ್ಟೇ ಧೈರ್ಯದಿಂದ ಎದೆಮುಟ್ಟಿ ಹೇಳಬರುತ್ತದೆಯೇ? ವ್ಯಾಸಭಾರತದ ಸಂಪಾದನೆ ಕಾಲದಲ್ಲಿ ಪ್ರಸಿದ್ಧ ವಿದ್ವಾಂಸ ವಿ. ಎಸ್‌. ಸುಕ್ತಂಕರ್‌, ‘ಪಂಪಭಾರತ’ವನ್ನು ಪರಿಗಣನೆಗೆ ತೆಗೆದುಕೊಳ್ಳದಿರಲು ನಿರ್ಧರಿಸುವುದರ ಮೂಲಕ ಪ್ರದರ್ಶಿಸಿದ ಔಚಿತ್ಯವನ್ನು ಪ್ರಶ್ನಿಸುವುದು ಅಷ್ಟು ಸುಲಭವದ ಮಾತಲ್ಲ.

ತನಗೆ ದತ್ತವಾಗಿ ಬಂದ ಅವಕಾಶ ಬಳಸಿಕೊಂಡು ಸಾಂಸ್ಕೃತಿಕ ಮಾದರಿಯೊಂದನ್ನು ನಿರ್ಮಿಸುವ ಕರ್ತವ್ಯವನ್ನು ಪಂಪ ಸಮರ್ಪಕವಾಗಿ ನಿರ್ವಹಿಸಿದಂತೆ ಕಾಣುವುದಿಲ್ಲ ಎಂದು ಭಾವಿಸಿ, ಕೂಡಲೇ ಆತ ತುಳಿದ ಹಾದಿ ಬಗ್ಗೆ ಜಿಗುಪ್ಸೆ ಅಥವಾ ತಿರಸ್ಕಾರ ತಳೆಯುವ ಆತುರ ಮಾಡಬಾರದು: ಹೇಗೆಂದರೆ, ಪಂಪ ಸೃಷ್ಟಿಸಿದ ಸಾಂಸ್ಕೃತಿಕ ಮಾದರಿ ಅಷ್ಟರಲ್ಲಾಗಲೇ ಖಚಿತ ರೂಪ ಮತ್ತು ಆಕಾರ ಪಡೆದುಕೊಂಡಿದ್ದ ಭಾರತೀಯ ಮನೋಭಾವ ಮತ್ತು ಮನೋಧರ್ಮಕ್ಕೆ ಅನುಗುಣವಾದುದಾಗಿತ್ತು.[2]

ಅಂಥ ವಿಚಿತ್ರ ಸನ್ನಿವೇಶವನ್ನು ಬದಲಿಸಿ ಸ್ವಯವೂ ಮತ್ತು ಸ್ವಾಭಿಮಾನಪೂರ್ಣವೂ ಆದ ಸಂಸ್ಕೃತಿ, ಕಾವ್ಯಪರಂಪರೆ ಮತ್ತು ನಾಗರಿಕತೆಯನ್ನು ನಿರ್ಮಿಸುವ ಪ್ರಯತ್ನವನ್ನು ಭಾರತದ ನೆಲದಲ್ಲಿ ಮೊದಲು ಮಾಡಿದವರೇ ವಚನಕಾರರು: ನಿಜವಾದ ಸ್ವಾಭಿಮಾನದ ಅರ್ಥವನ್ನು ನಿಜವಾದ ರೀತಿಯಲ್ಲಿ ಕಂಡುಕೊಂಡವರೇ ಅವರಾಗಿರುವಂತೆ ತೋರುತ್ತದೆ. ಭಾರತ ಕಳೆದುಕೊಂಡಿದ್ದ ಅಥವಾ ದಕ್ಕದೇ ಹೋಗಿದ್ದ ಆ ಅವಕಾಶವನ್ನು ಮರಳಿ ಪಡೆಯುವ ಇಲ್ಲವೇ ತಂದುಕೊಡುವ ಪ್ರಯತ್ನವಾಗಿ ವಚನಕ್ರಾಂತಿಗೆ ಮುಂದಾದ ಅವರಿಗೆ ಆ ಕಾರಣವೇ ಕಾವ್ಯ ಬರೆಯುವುದು ಎಷ್ಟು ಮುಖ್ಯವಾಗಿತ್ತೋ, ಆ ಕಾವ್ಯ ರಚಿಸಲು ಪೂರಕವಾದ ಸಮಾಜ ಮತ್ತು ಬದುಕನ್ನು ನಿರ್ಮಿಸುವುದು ಅಷ್ಟೇ ಮುಖ್ಯವಾಗಿ ಕಂಡಿತು. ಆ ಕಾರಣವೇ ಪ್ರಾಮಾಣಿಕತೆ, ಬದುಕು, ಅನುಭವ ಪ್ರಮಾಣಕ್ಕೆ ಬದ್ಧವಾದ ಮತ್ತು ಸತ್ಯನಿಷ್ಠುರವಾದ ಬರವಣಿಗೆ ಮಾಡುವುದು ಅವರಿಗೆ ಅಷ್ಟೇ ಮುಖ್ಯವಾಯಿತು. ಕಲ್ಪನೆಯನ್ನು ಇಮ್ಯಾಜಿನೇಷನ್‌ ಆಗಿ ಪರಿವರ್ತಿಸುವ ಸಮಸ್ಯೆಯನ್ನು ಅದರ ತೀವ್ರ ರೂಪದಲ್ಲಿ ಎದುರಿಸಿದ ಹೋರಾಟಗಾರರು ಮತ್ತು ಬರಹಗಾರರು ಅವರೇ ಆಗಿದ್ದಿರಬಹುದು. ಪಂಪ, ರನ್ನ ಮೊದಲಾದವರು ಯೋಚಿಸಲು ಹಿಂಜರಿದ ನಿರ್ದಿಷ್ಟ ಸಮಸ್ಯೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ಅವರು ಪ್ರಯತ್ನಪಟ್ಟಂತೆಯೂ ತೋರುತ್ತದೆ.

ಮಹಾಭಾರತ – ರಾಮಾಯಣಗಳು ವ್ಯಾಸ – ವಾಲ್ಮೀಕಿಯರ ಕೃತಿಗಳು ಮಾತ್ರವಲ್ಲ; ಅನುಭವ ಪ್ರಮಾಣ, ಬದುಕು, ಕಾಲ ಮತ್ತು ಸತ್ಯದ ಪ್ರಾಮಾಣಿಕ ದಾಖಲೆಗಳು ಕೂಡ ಹೌದು; ಕವಿತ್ವ ಶಕ್ತಿ ಮತ್ತು ಕಾವ್ಯಕಲೆಯ ತಂತ್ರಗಾರಿಕೆಯ ಏಕೈಕ ಆಧಾರದ ಮೇಲೆ ಆ ಎಲ್ಲವನ್ನು ಮುಂದೆ ಬಂದ ಮತ್ತೊಬ್ಬರು ತಮ್ಮದಾಗಿಸಿಕೊಳ್ಳಲು ಸಾಧ್ಯವೇ? ಸಾಧ್ಯವಿಲ್ಲ ಎಂಬ ಸರಳ ಸಂಗತಿಯನ್ನು ಪಂಪ – ರನ್ನರು ಬಂದ ಒಂದೆರಡು ಶತಮಾನಗಳ ಅಂತರದಲ್ಲಿ ಬರವಣಿಗೆ ಮಾಡಲು ಮುಂದಾದ ವಚನಕಾರರು ಕಂಡುಕೊಂಡಿರಬೇಕು. ಅದರ ಪರಿಣಾಮವೇ ವಚನ ಮಾಧ್ಯಮ. ತಾನು ಬಂದ ಕಾಲ, ಬದುಕು, ಸತ್ಯ, ಅನುಭವ, ಪ್ರಮಾಣ ಮತ್ತು ಪ್ರಾಮಾಣಿಕತೆಗೆ ನಿಷ್ಠರಾದ ಕವಿಗಳ ಕವಿತ್ವ ಶಕ್ತಿ ಮತ್ತು ಪ್ರತಿಭೆ ಯಾವ ರೀತಿ ಕಾವ್ಯವಾಗಿ ಮಾರ್ಪಡಲು ಹವಣಿಸುತ್ತದೆ ಎಂಬುದಕ್ಕೆ ವಚನಗಳು ನಿರ್ದಶನ. ಇಸ್ಲಾಂ ಶಕ್ತಿಗಳ ಆಗಮನ, ಅದನ್ನು ಸ್ವೀಕರಿಸಲು ಸಜ್ಜಾಗುತ್ತಿರುವ ಭಾರತದ ಮನಸ್ಸು ಮತ್ತು ಸಮಾಜದ ದೌರ್ಬಲ್ಯ ಕುರಿತ ಒಳನೋಟ ಮತ್ತು ಮುಂದಾಲೋಚನೆ, ಅಂತಹ ವಚನಕಾರರಲ್ಲಿ ಒಬ್ಬರಾದ ಬಸವಣ್ಣನನ್ನು ಕಿಂಚಿತ್‌ ಪ್ರಮಾಣದಲ್ಲಿಯಾದರೂ ಸೋಂಕಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಅಲ್ಲಿಯೇ ಅಡಗಿದೆ. ಪಂಪ, ರನ್ನನಿಗೆ ದಕ್ಕದೆ ಹೋದುದು, ವಚನಕಾರರಿಗೆ ಸ್ವಲ್ಪ ಪ್ರಮಾಣದಲ್ಲಿಯಾದರೂ ದಕ್ಕಲು ಸಾಧ್ಯವಾದುದು ಕೂಡ ಅದೇ ಕಾರಣಗಳಿಂದಾಗಿಯೇ ಆಗಿದ್ದಿರಬಹುದು.

ಅನುಭವ – ಪ್ರಮಾಣ, ಸತ್ಯ, ಬದುಕು ಮತ್ತು ಪ್ರಮಾಣಿಕತೆಗೆ ಬದ್ಧರಾಗಿ ಕಾವ್ಯ ರಚಿಸುವ ಕವಿಗಳು, ಛಂದೋಬದ್ಧವಾದ ಕಾವ್ಯ ಮಾತ್ರ ಬರೆಯುವುದಿಲ್ಲ; ಬದುಕನ್ನು ಸೃಷ್ಟಿಸುತ್ತಾರೆ. ಕಾವ್ಯ ಮಾರ್ಗವನ್ನು ಬದಲಿಸಿಕೊಂಡುದರ ಜತೆಜತೆಗೆ ಬದುಕಿನ ರೀತಿಯನ್ನು ಬದಲಿಸುವ ಹೋರಾಟಗಳನ್ನು ಏಕಕಾಲದಲ್ಲಿ ನಡೆಸಬೇಕಾದ ಅನಿವಾರ್ಯ ಎದುರಿಸಿದರು.

ಆ ಎರಡೂ ಜವಾಬ್ದಾರಿಗಳನ್ನು ಏಕಕಾಲದಲ್ಲಿ ಮೈಮೇಲೆ ಹಾಕಿಕೊಂಡು ನಿಭಾಯಿಸ ಹೊರಟವರು ವಚನಕಾರರು. ಅನೇಕ ಮಹಾಪ್ರತಿಭಾವಂತ ಸೃಷ್ಟಿಶೀಲ ಮನಸ್ಸುಗಳನ್ನು ಕಾಡದ ಆ ಸಮಸ್ಯೆ, ವಚನಕಾರರನ್ನು ಆ ಪ್ರಮಾಣದಲ್ಲಿ ಕಾಡಿದ್ದಾದರೂ ಏಕೆ? ಮತ್ತು ಹೇಗೆ? ಯಾವ ಭಾರತೀಯ ಮನೋಧರ್ಮ ಮತ್ತು ಮನೋಭಾವವು ಪಂಪ ಪರಂಪರೆಯ ಸೃಷ್ಟಿಗೆ ಕಾರಣವಾಯಿತೋ, ಅದೇ ಮನೋಧರ್ಮವು ಅನಂತರ ಬಂದ ವಚನ ಆಂದೋಲನದ ಸೃಷ್ಟಿಗೂ ಕಾರಣವಾಗಿರಬೇಕು! ರವೀಂದ್ರನಾಥ ಠಾಕೂರರು ಸಹ ಅದೇ ಪರಂಪರೆ ಆಧಾರಿತ ಮನೋಧರ್ಮದ ಕೊಡುಗೆ ಅಲ್ಲವೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ‘ಭಾರತೀಯ ದೇಹದ ಯುರೋಪಿಯನ್‌ ಮನಸ್ಸು’ ಪ್ರಯತ್ನಿಸುತ್ತದೆಯಾದರೂ, ಮರುಚಿಂತನೆ ರೂಪದ ಒಂದೆರಡು ಮಾತು ಅಗತ್ಯ.

I

ಹಿಂದಕ್ಕೆ ತಿರುಗಿ ಇತಿಹಾಸ ಸಾಗಿಬಂದ ಹಾದಿಯನ್ನು ಇಲ್ಲಿನ ಅಗತ್ಯಕ್ಕೆ ಅನುಗುಣ ಬಹಳ ಚುರುಕಾಗಿ ಅವಲೋಕಿಸುವುದಾದರೆ, ವ್ಯಾಸ ಭಾರತದ ಬಗ್ಗೆ ಯಾವುದೇ ತಕರಾರನ್ನು ಎತ್ತುವುದು ಕಷ್ಟಸಾಧ್ಯ. ತಕರಾರು ಇರುವುದು, ಅನಂತರದ ತಲೆಮಾರಿನ ‘ಮರಿಕವಿ’ಗಳು ‘ಅಜ್ಞಾತ ಕವಿ’ಗಳು ಮತ್ತು ‘ಜನರು’ ಮೂಲಭಾರತಕ್ಕೆ ನೀಡಲು ಯತ್ನಿಸಿದ ತಿರುವು ಮತ್ತು ರೂಪ ಕುರಿತಂತೆ ಮಾತ್ರ. ಕುರುಕ್ಷೇತ್ರ ಯುದ್ಧದವರೆಗಿನ ಭಾಗ ಮಾತ್ರ ಮೂಲಭಾರತ ಎಂಬುದಾದಲ್ಲಿ, ‘ಇಲಿಯಡ್‌’ ತರಹವೇ ಅತ್ಯಂತ ಕಟು ವಾಸ್ತವ ಮತ್ತು ಭೀಕರ ಸತ್ಯದಿಂದ ಕೂಡಿದ ಎಪಿಕ್‌ ಆಗಿ ಅದು ಕಾಣಬರುತ್ತದೆ. ಯಾವುದೇ ಒಣ ಆದರ್ಶ ಮತ್ತು ಕೃತ್ರಿಮಗಳಿಗೆ ಅವಕಾಶ ಇಲ್ಲದ ಅದರಲ್ಲಿ, ಕಲ್ಪನೆ ಇಮ್ಯಾಜಿನೇಷನ್‌ ಆಗಿ ಪಕ್ವವಾಗಿ ಪರಿವರ್ತನೆಗೊಂಡಿರುವುದನ್ನು ಕಾಣಬಹುದಾಗಿದೆ.

ಹನುಮಂತನು ಸಮುದ್ರಲಂಘನ ಮಾಡುವ ಫ್ಯಾನ್ಸಿ ಐಡಿಯಾ ಕಲ್ಪನೆಯಾಗಿ ಎಪಿಕ್‌ ಸಂದರ್ಭದಲ್ಲಿ ಸಾಕಾರಗೊಂಡು ಇಮ್ಯಾಜಿನೇಷನ್‌ ಆಗಿ ಪರಿವರ್ತನೆಗೊಳ್ಳುವ ರೀತಿಗೆ ಅತ್ಯುತ್ತಮ ಉದಾಹರಣೆ, ನಂಬಿಕೆ – ಅಪನಂಬಿಕೆಗಳು ಆ ಮಟ್ಟಿಗೆ ಆ ಗಳಿಗೆಯಲ್ಲಿ ರದ್ದಾಗುತ್ತವೆ. ಆದರೆ ಅದೇ ರಾವಣನಿಗೆ ಹತ್ತು ತಲೆಗಳಿದ್ದವು ಎಂಬ ಕಲ್ಪನೆ ಇಮ್ಯಾಜಿನೇಷನ್‌ ಆಗಿ ಸಾಕಾರಗೊಳ್ಳುವುದಿಲ್ಲ. ಅದೊಂದು ಫ್ಯಾನ್ಸಿ ಐಡಿಯಾ ಮತ್ತು ಕಲ್ಪನೆಯಾಗಿಯೇ ಉಳಿಯುತ್ತದೆ. ಮಾನವ ಜನಾಂಗದ ಮೂಲ ಸ್ವಭಾವದ ಪ್ರತಿನಿಧಿ, ಎಲ್ಲರಲ್ಲೂ ಇರುವ ಮತ್ತು ಎಲ್ಲೆಲ್ಲೂ ಕಾಣುವ ಪುರಾಣಾಕೃತಿಯ ರಾವಣಿಗೆ ಕೇವಲ ಹತ್ತು ತಲೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮಾತಿರಲಿ ಸೂಕ್ತ ಸಮಜಾಯಿಸಿ ನೀಡುವುದಾದರೂ ಹೇಗೆ? ಈ ಜಗತ್ತಿನಲ್ಲಿ ಹುಟ್ಟಿ ಸಾಯುವ ಬಹುತೇಕ ಎಲ್ಲಾ ಗಂಡಸರಲ್ಲೂ ಇರುವ ರಾವಣ, ಕೇವಲ ಹತ್ತು ತಲೆಯ ವ್ಯಕ್ತಿಯೇ? ಆತ ಕೆಲವರಲ್ಲಿ ಹೆಚ್ಚು ಪ್ರಮಾಣದಲ್ಲಿರಬಹುದು, ಮತ್ತೆ ಕೆಲವರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು. ಅಂತಹ ರಾವಣನ ವ್ಯಕ್ತಿತ್ವ ರೂಪಿಸಿ ಚಿತ್ರಿಸುವಾಗ ವಾಲ್ಮೀಕಿ ಎದುರಿಸಿರಬಹುದಾದ ಸಮಸ್ಯೆ, ಕೃತಿಯ ಅಂತ್ಯ ನಿಭಾಯಿಸುವ ವಿಚಾರದಲ್ಲಿ ಸಹ ವ್ಯಕ್ತಗೊಂಡಂತೆ ಕಾಣುತ್ತದೆ.

ಮಿತಿ ಅರಿತುಕೊಂಡು ಆ ಮಿತಿಯ ಒಳಗಡೆಯ ತನ್ನ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಎಷ್ಟು ಸಾಧ್ಯವೋ ಅದೆಲ್ಲವನ್ನು ಸಾಧಿಸಲು ಪ್ರಯತ್ನಿಸಿದ ಕವಿ, ಕಾಳಿದಾಸ. ಆ ಅರ್ಥದಲ್ಲಿ ಆತ ಅಚ್ಚುಕಟ್ಟುತನಕ್ಕೆ ಮತ್ತೊಂದು ಹೆಸರು. ಆತನ ‘ರಘುವಂಶಂ’, ‘ಕುಮಾರ ಸಂಭವಂ’ ಮತ್ತು ‘ಅಭಿಜ್ಞಾನ ಶಾಕುನ್ತಲಂ’ ಹೊರತು ಉಳಿದ ಕೃತಿಗಳು ಸೀಮಿತ ಆಶಯ ಮತ್ತು ಚೌಕಟ್ಟಿನ್ನೊಳಗೊಂಡವು. ಗರ್ಭಿಣಿ ಶಾಕುನ್ತಲೆಯನ್ನು ದುಷ್ಯಂತ ಹಿಂದುಮುಂದು ನೋಡದೆ ನಿರಾಕರಿಸಲು ಗಿರಿಜನ ಬಾಲೆಗೆ ಸಹಜವಾದ ಆಕೆಯ ಮತ್ತು ಆಕೆಯ ಜತೆ ಬಂದಿದ್ದ ವನವಾಸಿಗಳ ಮುಗ್ಧ ನಡುವಳಿಕೆ ಮತ್ತು ಮನೋಧರ್ಮ ಕಾರಣವಾಗಿದ್ದಿರಬಹುದು. ನಗರ ಪ್ರಜ್ಞೆ ಮತ್ತು ನಾಗರಿಕ ನಡವಳಿಕೆಯ ಪರಿಚಯವಿರುವ ಯಾವ ಹೆಂಗಸು ಆ ರೀತಿ ‘ನಾನು ನಿನ್ನ ಪತ್ನಿ’ ಎಂದು ಹೇಳಿಕೊಂಡು ಆಸ್ಥಾನ ಪ್ರವೇಶಿಸಲು ಸಂಕೋಚಪಡದಿರುವುದಿಲ್ಲ? ಅದೂ ಗರ್ಭಿಣಿ ಸ್ಥಿತಿಯಲ್ಲಿ! ಎರಡನೆಯದಾಗಿ, ದುಷ್ಯಂತನಿಗೆ ಒಲಿಯುವುದರ ಮೂಲಕ ಶಾಕುನ್ತಲೆ ತನ್ನ ಬಾಲ್ಯ ಸಹಜ ತಪೋವನದ ವಾತಾವರಣದಿಂದ ನಿರ್ಗಮಿಸಲು ಸಿದ್ಧಳಾಗಿರುತ್ತಾಳೆ. ಕೃಷ್ಣನ ಪಾಲಿಗೆ ಅಂದರೆ ಗಂಡುಮಕ್ಕಳ ಪಾಲಿಗೆ ಯಾವ ಬಾಲ್ಯದ ಜೀವನ ನಂದ ಗೋಕುಲವಾಗಿರುತ್ತದೆಯೋ, ಅದು ಶಾಕುನ್ತಲೆಯಂತಹ ಹೆಣ್ಣು ಮಕ್ಕಳ ಪಾಲಿಗೆ ತಪೋವನ ಅಥವಾ ನಂದನವನ ಆಗಿರುತ್ತದೆ; ಪುನಃ ದುಷ್ಯಂತನನ್ನು ಪತಿಯಾಗಿ ಸ್ವೀಕರಿಸುವ ವೇಳೆಗೆ ಅದೇ ಶಾಕುನ್ತಲೆ ಪ್ರೌಢೆಯಾಗಿರುತ್ತಾಳೆ. ಅಂದರೆ ತನ್ನ ಬಾಲ್ಯ ಸಹಜ ಗಿರಿಜನಸಹಜ ಮುಗ್ಧ ನಡವಳಿಕೆ ನೀಗಿಕೊಂಡು ನಗರೀಕಳಾಗಿರುತ್ತಾಳೆ.

ದುಷ್ಯಂತ ತನ್ನ ಪತ್ನಿಯಾಗಿ ಸ್ವೀಕರಿಸುವುದು ಅಂತಹ ಶಾಕುನ್ತಲೆಯನ್ನು. ಪ್ರಣಯಕ್ಕೆ ಗಿರಿಜನಸಹಜ ಬಾಲೆ ಶಾಕುನ್ತಲೆಯನ್ನು ಬಯಸುವ ದುಷ್ಯಂತ ಪತ್ನಿಯಾಗಿ ಸ್ವೀಕರಿಸುವುದು, ಚಕ್ರವರ್ತಿಯಾಗಲು ಅರ್ಹಳಾದ ಶಾಕುನ್ತಲೆಯನ್ನು ಎಂತಹ ಅಗಾಧ ಪರಿವರ್ತನೆ! ಅಷ್ಟರಲ್ಲಾಗಲೇ ಚಕ್ರವರ್ತಿ ಲಕ್ಷಣಗಳುಳ್ಳ ಮಗನಿಗೆ ಜನ್ಮ ನೀಡಿರುವ ಆಕೆಗೆ ಚಕ್ರವರ್ತಿನಿಯಾಗುವ ಗುಣ ಮತ್ತು ಲಕ್ಷಣಗಳು ಮೈಗೂಡಿ ಬಂದಿರುತ್ತವೆ.

ವರ್ಗಪ್ರಜ್ಞೆ ಅಷ್ಟು ನಯವಾಗಿ ಕೆಲಸ ಮಾಡುವ ಮತ್ತೊಂದು ಕೃತಿಯನ್ನು ಭಾರತದ ಸಾಹಿತ್ಯಲೋಕದಲ್ಲಿ ಹುಡುಕುವುದು ಬಹಳ ಕಷ್ಟ. ಕಣ್ವರು ಮತ್ತು ಅವರ ಆಶ್ರಮದ ನಂದನವನ – ಸಾಕುಮಗಳಾದ ಶಾಕುನ್ತಲೆ, ದುಷ್ಯಂತನನ್ನು ಕಂಡ ಕೂಡಲೇ ಪ್ರೇಮಪರವಶಳಾಗಲು ಆಕೆಯ ಸ್ವಭಾವದಲ್ಲಿಯೆ ಇದ್ದಿರಬಹುದಾದ ನಗರ ಮತ್ತು ಅರಮನೆಯ ಜೀವನದ ಬಲವಾದ ಸೆಳೆತ ಕೂಡ ಕಾರಣವಾಗಿದ್ದಿರಬಹುದು. ಏಕೆಂದರೆ, ಮೂಲತಃ ರಾಜನಾದ ಆದರೆ ಬ್ರಹ್ಮರ್ಷಿಯಾಗಬಯಸುವ ವಿಶ್ವಾಮಿತ್ರ ಮತ್ತು ದೇವಲೋಕದ ನರ್ತಕಿ ಮೇನಕೆ ನಡುವೆ ಜರುಗುವ ಸಂಲಗ್ನದ ಫಲವಾದ – ಅಂದರೆ ಅರಮನೆ ಮತ್ತು ಐಷಾರಾಮಿ ಜೀವನದ ಕೊಡುಗೆಯಾದ ಆಕೆ, ಅವಕಾಶ ಸಿಕ್ಕ ಕೂಡಲೇ ಅದೇ ಜೀವನಕ್ಕೆ ಮರಳಿ ಹೋಗುವ ಕಾತುರ ತೋರಿಸಲು ಆ ಹಿನ್ನೆಲೆ ಕೂಡ ಕಾರಣವಾಗಿದ್ದಿರಬಹುದು. ಹಾಗಾಗಿ ಹುಟ್ಟುಗುಣ ಅಥವಾ ಮೂಲಸ್ವಭಾವ ಮತ್ತು ದತ್ತಕ ವಾತಾವರಣದ ನಡುವಿನ ಪ್ರಭಾವ ಹಾಗೂ ಪರಿಣಾಮಗಳನ್ನೂ ಸಹ ಆ ಕೃತಿ ಅನ್ವೇಷಿಸುವಂತೆಯೂ ತೋರುತ್ತದೆ.

ಯುರೋಪಿನ ಪ್ರಭಾವದಿಂದ ಸಾಹಿತ್ಯ ರಚಿಸುವ ಕಲೆಗಾರಿಕೆಯನ್ನು ಉತ್ತಮಪಡಿಸಿಕೊಳ್ಳುವ ವಿಧಾನ ಕಲಿಯಬಯಸಿದ ‘ಕಾಕನಕೋಟೆ’ ಮತ್ತು ‘ಗೋಕುಲ ನಿರ್ಗಮನ’ ಮೊದಲಾದ ಹಲವಾರು ಕೃತಿಗಳಿಗೂ ಹಂಚಿ ಮಿಗುವಷ್ಟು ವಸ್ತುವನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ‘ಅಭಿಜ್ಞಾನ ಶಾಕುನ್ತಲಂ’, ‘ಈನೀಡ್‌’ ಮತ್ತು ‘ಒಯ್ಡಿಪೌಸ್‌ ರೆಕ್ಸ್‌’ಗಿಂತ ಉತ್ತಮ ಎಂದು ಪರಿಗಣಿಸಲು ಸಾಧ್ಯವೇ? ಆಯಾ ಪ್ರಕಾರಗಳಲ್ಲಿ ಯುರೋಪಿನ ಎವರೆಸ್ಟ್‌ಗಳಾದ ಆ ಕೃತಿಗಳನ್ನು ಮೀರಿಸುವ ಇಲ್ಲವೆ ಸಮನಾಗಿ ನಿಲ್ಲಬಲ್ಲ ಅಪಾರ ಸಾಧ್ಯತೆ ಮತ್ತು ಆಯಾಮಗಳಿಂದ ತುಂಬಿದ ‘ಅಭಿಜ್ಞಾನ ಶಾಕುನ್ತಲಂ’ ಕೃತಿಯನ್ನು ನಿರ್ವಹಿಸುವಾಗ ವಿಫಲತೆ ಕಾಣಲು, ವ್ಯಾಸರನ್ನು ಅಷ್ಟಾಗಿ ಬಾಧಿಸದ ಆ ಕೊರತೆ, ವಾಲ್ಮೀಕಿಯಿಂದ ಮೊದಲಾಗಿ ಕಾಳಿದಾಸ ಸೇರಿದಂತೆ ಆನಂತರ ಬಂದ ಭಾರತದ ಕವಿಗಳನ್ನು ಒಂದಲ್ಲ ಒಂದು ರೂಪದಲ್ಲಿನಲುಗಿಸಲು ಕಾರಣಗಳೇನಿರಬಹುದು ಎಂಬ ಕುತೂಹಲ ಮತ್ತು ಪ್ರಶ್ನೆಗಳು ಉದ್ಭವಿಸದಿರುವುದಿಲ್ಲ.

ಆ ಕೊರತೆಯ ಅರಿವು ಸ್ವತಃ ಕಾಳಿದಾಸನಿಗೆ ಇದ್ದಂತೆ ಕಾಣುತ್ತದೆ. ಆತನ ಕೃತಿಗಳಲ್ಲಿ ಮತ್ತೆ ಮತ್ತೆ ಅನ್ವೇಷಣೆಗೊಳಗಾಗುವ ಅರ್ಹಸಂತಾನ ಮತ್ತು ಸುಪುತ್ರಾಕಾಂಕ್ಷೆಯ ಬಯಕೆಯು ಡಾರ್ವಿನ್‌, ಸ್ಟೀಫನ್‌ ಹಾಕಿನ್‌ ಮುಂತಾದ ಅನೇಕರ ಚಿಂತನ ಕ್ರಮದ ಎಳೆಗಳನ್ನು ತನ್ನ ಗರ್ಭದಲ್ಲಿ ಹುದುಗಿಟ್ಟುಕೊಂಡಿರಬಹುದು. ಡಾರ್ವಿನ್‌ ಸಿದ್ಧಾಂತದ ಅರಿವು ಕಾಳಿದಾಸನಿಗಿತ್ತು ಎಂಬುದು ಆ ಮಾತಿನ ಅರ್ಥವಲ್ಲ. ಅರ್ಹ ಸಂತಾನಕ್ಕಾಗಿ ಹಾತೊರೆಯುವ, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಮತ್ತು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಕುರಿತಂತೆ ಸರಿಯಾದ ತೀರ್ಮಾನ ತೆಗೆದುಕೊಂಡು ಅದರಂತೆ ಕ್ರಿಯಾಶೀಲವಾಗುವ ಮುಂದಿನ ತಲೆಮಾರಿನ ಬರುವಿಕೆಯ ಆಕಾಂಕ್ಷೆಯನ್ನು ಪ್ರಕಟಿಸುತ್ತಾನೆ ಎಂದಷ್ಟೇ ಅರ್ಥ. ತಮ್ಮ ಸುತ್ತಲನ್ನು ಅರ್ಥ ಮಾಡಿಕೊಂಡು ಯೋಗ್ಯನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಪಡೆದವರು ಚಕ್ರವರ್ತಿಗಳಾಗಲು ಅರ್ಹ, ಎಂಬ ಇಂಗಿತ ಕಾಳಿದಾಸನ ಕೃತಿಗಳಲ್ಲಿ ಅಡಕಗೊಂಡಿರುವಂತೆ ತೋರುತ್ತದೆ. ಹಿರಿಯ ಪತ್ನಿಯ ಹಿರಿಯ ಮಗನೇ ರಾಜನಾಗಬೇಕು ಎಂಬ ಯಥಾಸ್ಥಿತಿ ಮನೋಧರ್ಮವನ್ನು ಪ್ರತಿಪಾದಿಸುವ ರಾಮಾಯಣದ ಕತೆಯನ್ನು ತನ್ನ ಅಭಿವ್ಯಕ್ತಿ ಮತ್ತು ಅನ್ವೇಷಣಾ ಮಾಧ್ಯಮದ ಒಂದು ಭಾಗವನ್ನಾಗಿ ಸ್ವೀಕರಿಸುವ ‘ರಘುವಂಶಂ’ನಲ್ಲಿ ಕೂಡ ಅದೇ ಆಕಾಂಕ್ಷೆ ಇನ್ನೂ ಪ್ರಬಲವಾಗಿ ಬರುತ್ತದೆ. ಆ ಕಾವ್ಯ ಕೊನೆಯಾಗುವುದು ಅರ್ಹ ಸಂತಾನದ ನಿರೀಕ್ಷೆಯಲ್ಲಿ. ಅಂತಹ ಮಕ್ಕಳು ಹುಟ್ಟದೇ ಹೋದಾಗ ಎದುರಿಸಬೇಕಾಗಿ ಬರುವ ಬಿಕ್ಕಟ್ಟಿನ ಕತೆಯನ್ನು ಅದು ಹೇಳುತ್ತದೆ ಎಂದರೂ ಒಂದೇ. ಅರ್ಹ ಸಂತಾನಕ್ಕಾಗಿ ತಂದೆ – ತಾಯಿಗಳು ಸಿದ್ಧಗೊಳ್ಳುವ ‘ಕುಮಾರ ಸಂಭವಂ’ ಎಂಬ ಪ್ರತ್ಯೇಕ ಕಾವ್ಯ ಬರೆದ ಕವಿ ಕಾಳಿದಾಸ.

ಸುಪುತ್ರಾಪೇಕ್ಷೆ ಬಹುಮುಖ್ಯ ಧಾರೆಗಳಲ್ಲಿ ಒಂದಾಗಿ ಇಂದಿಗೂ ಪ್ರವಹಿಸುವುದನ್ನು ಮತ್ತು ಅದಕ್ಕಾಗಿ ವರ್ಣಸಂಕರವನ್ನು ಗುಟ್ಟಾಗಿಯಾದರೂ ಪ್ರೋತ್ಸಾಹಿಸುವ ಜನರನ್ನು ಕೆಲ ಪ್ರಮಾಣದಲ್ಲಿಯಾದರೂ ಭಾರತದಲ್ಲಿ ನೆಲದಲ್ಲಿ ಒಂದಾಗಿ ಹೋಗುವುದು ಸುಲಲಿತವಾಗಲು ಮತ್ತು ಅಲ್ಲಿನ ಜಾತೀಯತೆ ಪಡೆದುಕೊಂಡ ಅನೇಕ ರೀತಿಯ ವೀವಯಧ್ಯ ಮತ್ತು ರೂಪಾಂತರಗಳಿಗೆ ಅದೇ ಹಿನ್ನೆಲೆ ಕೂಡ ಕಾರಣ. ಒದಗಿಸಿದ್ದಿರಬಹುದು. ಭಾರತದ ಜನರ ರಕ್ತ ಮತ್ತು ಜನಾಂಗೀಯ ಶುದ್ಧಿ, ಎತ್ತರ, ನಿಲುವು ಇತ್ಯಾದಿ ಕುರಿತಂತೆ ಡಾ. ಬಿ. ಆರ್‌. ಅಂಬೇಡ್ಕರ್‌ ತಮ್ಮ ‘ಅನಿಹಿಲೇಷನ್‌ ಆಫ್‌ ಕ್ಯಾಸ್ಟ್‌’ ಕೃತಿಯಲ್ಲಿ ಅತ್ಯಂತ ಕಹಿ ಮತ್ತು ನೊಂದ ಮನಸ್ಸಿನಿಂದ ಆಡುವ – ಈ ಮಾತುಗಳನ್ನು:

Now ethnologists are of opinion that men of pure race exist nowhere and that there has been a mixture of all races in all parts of the world. Especially is this the case with the People of India. Physically speaking the Hindus are a C3 people. They are a race of Pygmies and dwarfs stunted in stature and wanting in stamina.[3]

ಅವರು ಬಂದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗುತ್ತದೆ ಎಂದಿಟ್ಟುಕೊಡಂರೂ ಸಹ, ಸರಿಯಾದ ತೀರ್ಮಾನ ತಲುಪಲು ಸಮರ್ಥರಾದ ಮಕ್ಕಳನ್ನು ಭಾರತ ಪ್ರಾತಿನಿಧಿಕವಾಗಿ ಪಡೆಯಲಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಾಗಬೇಕು.

ಸಂತಾನಾಪೇಕ್ಷೆಗೆ ಸಂಬಂಧಿಸಿದ ಆ ತರಹದ ಭಾವನೆಗಳು ಮಹಾಭಾರತದ ಕಾಲದಿಂದಲೂ ಚಲಾವಣೆಯಲ್ಲಿವೆ ಎಂಬ ಪ್ರಶ್ನೆಗಳಿಗೂ ವಿವರಣೆ ನೀಡುವುದು ಅಷ್ಟೇ ಅಗತ್ಯ. ರಾಮಾಯಣ ಕಾಲದಲ್ಲಿ ಸ್ವೀಕಾರಾರ್ಹವಾದ ಪಾತಿವ್ರತ್ಯ ಕಲ್ಪನೆ ಮಹಾಭಾರತದ ಕಾಲದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಪಡೆದಿರಲಿಲ್ಲ. ಅವುಗಳ ನಡುವಿನ ಪ್ರಮುಖ ವ್ಯತ್ಯಾಸವೇ ಅದಾಗಿದೆ. ಮತ್ತು ಮಹಾಭಾರತದ ಕಾಲವನ್ನು ಹಿಂದಕ್ಕೆ ಒಯ್ಯಲು ಬೇಕಾದ ಪ್ರಮುಖ ಪುರಾವೆಗಳ ಪೈಕಿ ಅದೂ ಒಂದು. ಚಕ್ರವರ್ತಿ ಲಕ್ಷಣಗಳುಳ್ಳ ಅರ್ಹ ಸಂತಾನವನ್ನು ಪಡೆಯಲು ಜಾತಿ ವ್ಯವಸ್ಥೆ ಧಿಕ್ಕರಿಸುವ ಕಾಳಿದಾಸನ ನಾಯಕರು ಅದಕ್ಕಾಗಿ ತಮಗೆ ಸರಿಕಂಡ ಹೆಂಗಸರ ಸಂಸರ್ಗಕ್ಕೆ ಮುಂದಾಗುವುದರ ಜತೆಗೆ, ಅವರನ್ನು ಪಟ್ಟದ ರಾಣಿಯಾಗಿ ಸ್ವೀಕರಿಸಲು ಸಿದ್ಧರಿರುತ್ತಾರೆ. ಅದಕ್ಕೆ ತದ್ವಿರುದ್ಧವಾಗಿ ಮಹಾಭಾರತದ ಕಾಲದಲ್ಲಿ ಮಕ್ಕಳನ್ನು ಪಡೆಯಲು ನಿಯೋಗ ಪದ್ಧತಿಗೆ ಮುಂದಾಗುವುವವರು ಹೆಂಗಸರಾಗಿರುವುದು ಮತ್ತು ಅದಕ್ಕೆ ಬೇಕಾದ ಪೂರಕ ನೆರವು ನೀಡುವಷ್ಟರ ಮಟ್ಟಿಗೆ ಗಂಡಸರ ಪಾತ್ರ ಸೀಮಿತಗೊಂಡಿರುವುದು ಗಮನಾರ್ಹ. (ಮಹಾಭಾರತದ ಪುರಾತನತೆಗೆ ಆ ಅಂಶವೂ ಮತ್ತೊಂದು ಸಾಕ್ಷಿ.) ಹಾಗಾಗಿ ಮಹಾಭಾರತದ ನಿಯೋಗ ಪದ್ಧತಿಗೂ ಮತ್ತು ಕಾಳಿದಾಸ ಎತ್ತಿ ಹಿಡಿಯುವ ವರ್ಣಸಂಕರಕ್ಕೂ ಗುಣಾತ್ಮಕ ಅಂತರವಿದೆ.

ಮಹಾಭಾರತದ ಹೆಂಗಸರು ನಿಯೋಗ ಪದ್ಧತಿಗೆ ಮುಂದಾಗುವುದು ಪ್ರಧಾನವಾಗಿ ವಂಶದ ಮುಂದುವರಿಕೆಗಾಗಿ.[4] ನಿಯೋಗದ ಮೂಲಕ ವಂಶೋದ್ಧಾರಕರನ್ನು ಪಡೆಯಲು ಶ್ರೇಷ್ಠರು ಮತ್ತು ಉತ್ತಮರೂ ಆದ ವ್ಯಕ್ತಿಗಳನ್ನು ಸ್ವೀಕರಿಸುವ ಆಯ್ಕೆಯ ಸ್ವಾತಂತ್ರ್ಯವನ್ನು ಅಲ್ಲಿ ಅವರು ವಹಿಸುತ್ತಾರಾದರೂ, ಆ ಆಯ್ಕೆ ಕುಟುಂಬದ ಚೌಕಟ್ಟಿಗೆ ಸೀಮಿತವಾಗುವ ಸಂದರ್ಭವೇ ಹೆಚ್ಚು. ಆ ರೀತಿ ನಿಯೋಗದ ಮೂಲಕ ಜನ್ಮ ಪಡೆದ ಧೃತರಾಷ್ಟ್ರ ಅಥವಾ ಪಾಂಡು ಆಗಲಿ, ಅರ್ಹ ಮಕ್ಕಳಾಗಿರುವಂತೆ ಕಾಣುವುದಿಲ್ಲ. ಮುಂದೆ ನಡೆದ ಮಹಾಭಾರತ ಯುದ್ಧಕ್ಕೆ ಅದೇ ನಾಂದಿಯಾಗಿಬಿಡುತ್ತದೆ. ಆದರೆ ಕಾಳಿದಾಸನಲ್ಲಿ ವರ್ಣಸಂಕರ ಜರುಗುವುದು ಅರ್ಹ ಮಕ್ಕಳಿಗಾಗಿ ಹಾಗಾಗಿ ಅಲ್ಲಿ ಆಯ್ಕೆಯ ಸ್ವಾತಂತ್ರ್ಯ ವಹಿಸುವ ಪ್ರಮುಖ ಪಾತ್ರ. ಆ ದೃಷ್ಟಿಯಿಂದ ನೋಡುವುದಾದಲ್ಲಿ ಆ ಮನೋಭಾವ ಆಗಿನ ಭಾರತಕ್ಕೆ ಹೊಸ ಬೆಳವಣಿಗೆಯಾಗಿರುವಂತೆ ತೋರುತ್ತದೆ. ಪ್ರಿಯಂವದೆ, ಅನಸೂಯೆ ಮೊದಲಾದವರು ಅದೇ ಗುಂಪಿನಲ್ಲಿ ಇದ್ದರೂ ದುಷ್ಯಂತ ಒಲಿಯುವುದು ಎಲ್ಲ ರೀತಿಯಲ್ಲೂ ಅರ್ಹಳಾದ ಶಾಕುನ್ತಲೆಗೆ; ದೇವೇಂದ್ರನ ಲೋಕದಲ್ಲಿ ಅನೇಕರಿದ್ದರೂ, ಪುರು ಬಯಸುವುದು ಊರ್ವಶಿಯನ್ನು.

ಕಾಳಿದಾಸನ ಕೃತಿಗಳಲ್ಲಿ ವ್ಯಕ್ತವಾಗುವ ಸಮರ್ಥ ಮಕ್ಕಳ ಹಂಬಲ, ಚಕ್ರವತಿ ಲಕ್ಷಣಗಳುಳ್ಳ ಮಕ್ಕಳನ್ನು ಪಡೆಯುವುದಕ್ಕಷ್ಟೇ ಸೀಮಿತಿಗೊಳ್ಳುತ್ತದೆ ಎಂಬುದಾಗಿ ಆಕ್ಷೇಪ ತೆಗೆಯಬಹುದಾದರೂ, ಆ ಅಪೇಕ್ಷೆ ಪದೇ ಪದೇ ಅನ್ವೇಷಣೆಗೊಳಗಾಗುವ ರೀತಿಯನ್ನು ಗಮನಿಸಿದರೆ, ಅಲ್ಲಿ ಒಂದು ತರಹದ ವಿಶೇಷತೆ ಇರುವುದನ್ನು ಗುರುತಿಸಬಹುದಾಗಿದೆ. ಮುಂದಿನ ತಲೆಮಾರು, ಪರಂಪರೆ ಮತ್ತು ಸಮರ್ಥರಾದ ಮಕ್ಕಳು ಎಂಬ ಪರಿಕಲ್ಪನೆಗಳು ಬಹಳ ವಿಶಾಲ ಅರ್ಥದಲ್ಲಿ ನೋಡಿದಾಗ ಸಮಾನಾರ್ಥಕವಾಗಿ ಕಾಣುವುದಿಲ್ಲವೇ? ಜನ, ಕಾಲ ಮತ್ತು ದೇಶ ಸಿದ್ಧವಿಲ್ಲದಿದ್ದಾಗ ಅತ್ಯುತ್ತಮ ಚಕ್ರವರ್ತಿ ಬರಲು ಸಾಧ್ಯವೇ? ಯಾವುದೇ ವಂಶ, ಸಮಾಜ ಮತ್ತು ದೇಶದ ಏಳಿಗೆ ಮತ್ತು ಪಾರಮ್ಯದ ಹಿಂದಿನ ಗುಟ್ಟೇ ಅವುಗಳಲ್ಲವೇ?

ಬಸವಣ್ಣ ಬರುವುದಕ್ಕೂ ಹಲವಾರು ಶತಮಾನ ಮೊದಲೇ ಕಾಳಿದಾಸನ ಕೃತಿಗಳು ಆ ತರಹ ಚಿಂತಿಸಲು ಕಾರಣವಾದ ಹಿನ್ನೆಲೆ ಏನಾಗಿದ್ದಿರಬಹುದು? ಅಂತಹ ಸಮರ್ಥ ಮಕ್ಕಳಿಗಾಗಿ ಹಂಬಲಿಸುವ ತಂದೆ ತಾಯಿಗಳ ಚಿತ್ರಣ ನೀಡಿದ ಕಾಳಿದಾಸನ ಆಗಮನವನ್ನು ಬಸವಣ್ಣನ ಆಗಮನದ ತರಹವೆ ವಿಶ್ವ ಮನಸ್ಸಿನ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಸಾಧ್ಯವೇ? ಆ ತರಹ ಹಂಬಲಿಸುವುದರ ಮುಖೇನ ಕಾಳಿದಾಸನ ಕೃತಿಗಳು ಕೂಡ ಬಸವಣ್ಣನ ರೀತಿಯಲ್ಲಿಯೇ ಭಾರತ ಕಳೆದುಕೊಳ್ಳಲಿದ್ದ ಅವಕಾಶದ ಕಡೆಗೆ ಗಮನ ಸೆಳೆಯಲು ನಡೆಸಿದ ಪ್ರಯತ್ನ ಎಂದು ಅರ್ಥೈಸಲು ಬರುತ್ತದೆಯೇ? ಕ್ರಿಸ್ತನಿಗಿಂತ ಒಂದೆರಡು ಶತಮಾನ ತಡವಾಗಿ ಮತ್ತು ಪ್ರವಾದಿ ಮಹಮ್ಮದ್‌ಗಿಂತ ಒಂದೆರಡು ಶತಮಾನ ಮೊದಲು ಹುಟ್ಟಿರಬಹುದಾದ ಕಾಳಿದಾಸನನ್ನು ಅದೇ ಕಾಲ ಸ್ವಲ್ಪ ಪ್ರಮಾಣದಲ್ಲಿಯಾದರೂ ಸೋಂಕಿರಬಹುದೇ? ಅಗ್ನಿಮಿತ್ರ ಅಗ್ನಿವರ್ಣ ಮುಂತಾದ ರಾಜರಿಗೆ ಭೂಮಿಕೆಯಾದ ಭಾರತದ ಪರಿಸ್ಥಿತಿಯೇ ಕಾಳಿದಾಸನ ಕೃತಿಗಳ ಸುಪುತ್ರಾಕಾಂಕ್ಷೆ ರೂಪದ ಕನಸುಕಂಡಿರಬಹುದೇ! ಅಥವಾ ಆಡುಭಾಷೆಯಲ್ಲದ ಭಾಷೆಯೊಂದರಲ್ಲಿ ಕಾವ್ಯ ರಚಿಸುವ ಅರಿವು ಮತ್ತು ಸಂಕಷ್ಟ ಕಾಳಿದಾಸನಲ್ಲಿ ಆ ಎಚ್ಚರಿಕೆ ಉಳಿಸಿರಬಹುದೇ?

ವಾಲ್ಮೀಕಿಯ ಹನುಮಣತನ ಸಮುದ್ರಲಂಘನೆಯ ವರ್ಣನೆ ಮತ್ತು ಚಿತ್ರಣ: ಅದನ್ನು ಓದುತ್ತಿದ್ದಂತೆಯೇ ಕೆಲವರಲ್ಲಾದರೂ ಅನುಮಾನಗಳನ್ನು ಹುಟ್ಟಿಸಬಹುದೋ ಏನೋ! ಆದರೆ ಕಾಳಿದಾಸನ ಯಕ್ಷ: ಓದುತ್ತಾ ಹೋದಂತೆ ಆತ ಮೋಡದ ಜತೆ ಸಂಭಾಷಣೆ ನಡೆಸುತ್ತಿದ್ದಾನೆ ಎಂಬುದೇ ಮರೆತುಹೋಗಿ, ಅಲ್ಲಿ ಮನ ತಟ್ಟುವುದು ಆತನ ವಿರಹ. ಕಲ್ಪನೆ, ಕಾವ್ಯದ ಸಂದರ್ಭದಲ್ಲಿ ಇಮ್ಯಾಜಿನೇಷನ್‌ ಆಗಿ ಮಾರ್ಪಡುವುದಕ್ಕೆ ಅದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಬೇಕಿಲ್ಲ. ಅದೇ ತರಹ ತನ್ನ ನಾಯಕ ನಾಯಕರಿಯರ ಆಕಾಶಯಾನ ಕೂಡ ಎಲ್ಲೂ ಕೃತಕ ಆಗದಂತೆ ನೋಡಿಕೊಳ್ಳುವ ಎಚ್ಚರವನ್ನು ಕಾಳಿದಾಸನ ಪ್ರತಿಭೆ ನಿಸರೂವಾಗಿ ನಿರ್ವಹಿಸುತ್ತದೆ ಮತ್ತು ಆ ಎಲ್ಲ ವಿವರಗಳು ಎಲ್ಲೂ ಅಪ್ರಾಣಿಕ ಆಗದಂತೆ ನೋಡಿಕೊಳ್ಳುವ ರೀತಿ ಸಹ ಅನನ್ಯವಾದುದು.

ಭೀಮನು ಸೇಡಿನ ಭರತದಲ್ಲಿ ದುಶ್ಯಾಸನನ ಕರಳು ಬಗಿಯುವ ದೃಶ್ಯ ವ್ಯಾಸಭಾರತದಲ್ಲಿ ಎಷ್ಟು ಬೇಕೋ ಅಷ್ಟು ಬರುತ್ತದೆ. ಅದೇ ಸನ್ನಿವೇಶ ವಿವರಿಸಲು ಕುಮಾರವ್ಯಾಸನ ಕರ್ಣಪರ್ವದ ೧೯ನೇ ಸಂಧಿಯ ೧೦೦ ಭಾಮಿನಿ ಷಟ್ಪದಿಗಳು ಬಳಕೆಯಾಗುತ್ತವೆ – ಅಂದರೆ ೬೦೦ ಸಾಲುಗಳಲ್ಲಿ ಪ್ರವಹಿಸುತ್ತದೆ. ಕುಮಾರವ್ಯಾಸನ ಹುಟ್ಟುಗುಣವಾದ ವಾಚಾಳಿತನದ ಮೂಲವನ್ನು ಅಲ್ಲಿ ಹುಡುಕಬೇಕಾಗುತ್ತದೆ.

ದುಶ್ಯಾಸನನಂತಹ ಸೀರೆ ಎಳೆಯುವ ಮಂದಿ ಅಂದೂ ಇದ್ದರು, ಮುಂದೆಯೂ ಬರಬಹುದು. ಅಂಥವರು ಇರುವವರೆಗೆ ಪ್ರತಿಕಾರ ರೂಪದಲ್ಲಿ ವರ್ತಿಸುವ ಭೀಮನಂತವರು ಇರಬೇಕಾಗುತ್ತದೆ. ಮನುಷ್ಯ ಜನಾಂಗದ ಆ ಸ್ವಭಾವವನ್ನು ಅದರ ಮೂಲಗುಣದಲ್ಲಿ ಗ್ರಹಿಸಿ ಅದಕ್ಕೆ ಮೊದಲ ಬಾರಿಗೆ ಎಪಿಕ್‌ ರೂಪದಲ್ಲಿ ಅಭಿವ್ಯಕ್ತಿ ನೀಡಿದವನು ವ್ಯಾಸ. ಆ ಗುಣ ಮತ್ತು ಸ್ವಭಾವ, ಮಾನವ ಜನಾಂಗದ ವರ್ತನೆ ಬದಲಾದಂತೆ ಬದಲಾಗುತ್ತಾ ಹೋಗಿರಬೇಕು. ಆ ಬದಲಾವಣೆಗಳನ್ನು ಗುರುತಿಸಲು ಪ್ರಯತ್ನಿಸುವ ಕವಿಗಳು ಮಾತ್ರ ತಮ್ಮ ಕಾಲದ ಅನುಭವ ಪ್ರಮಾಣಿಕತೆಗೆ ಅಭಿವ್ಯಕ್ತಿ ನೀಡಲು ಸಾಧ್ಯ. ವ್ಯಾಸರ ಆ ಅನುಭವ ಮತ್ತೊಬ್ಬರದಾಗಲು ಬರುವುದಿಲ್ಲ. ಆ ರೀತಿಯ ತಾತ್ವಿಕ ಮತ್ತು ಮೀಮಾಂಸೆಗೆ ಸಂಬಂಧಿಸಿದ ಹಾಗೂ ಎಲ್ಲಕ್ಕಿಂತಲೂ ಹೆಚ್ಚಾಗಿ ನೈತಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪಂಪ – ಕುಮಾರವ್ಯಾಸರಂತಹ ಅತ್ಯಂತ ಪ್ರತಿಭಾವಂತ ಮನಸ್ಸುಗಳನ್ನು ಬಾಧಿಸದಂತೆ ಕಾಣುವುದಿಲ್ಲ ಎಂಬುದು ನಿಜಕ್ಕೂ ಗಾಬರಿ ತರಿಸುವ ಸಂಗತಿಯೇ ಸರಿ. ಮೂಲತಃ ಸೃಜನಶೀಲತೆಗೆ ಸಂಬಂಧಿಸಿದ ಅವುಗಳಿಗೊಂದು ಪರಿಹಾರ ಕಂಡುಕೊಳ್ಳದ ಶೈಲಿ, ಭಾಷಾಬಳಕೆ, ಕಥನಕ್ರಮ ಇತ್ಯಾದಿ ನಿರ್ವಹಣಾ ವಿಧಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಕಡೆಗೆ ಗಮನ ನೀಡುವುದರ ಮೂಲಕ ಸೃಜನಶೀಲತೆಯ ಹಾದಿಯಲ್ಲಿ ಬಹುದೂರ ಸಾಗಲು ಬರುವುದಿಲ್ಲ ಎಂಬುದಕ್ಕೆ ಕಾಳಿದಾಸ ಮತ್ತು ಗಾಂಧೀಜಿ ಯುಗದ ನಡುವೆ ಬಂದ ಬಹುತೇಕ ಸಾಹಿತ್ಯ ರಾಶಿ ದೊಡ್ಡ ಉದಾಹರಣೆಯಂತಿದೆ. ಕಾಲಕ್ಕೆ ಸ್ಪಂದಿಸುವ ಗುಣ ಮತ್ತು ಸಮಕಾಲೀನ ಬದುಕಿನ ಜವಾಬ್ದಾರಿಯ ಬರವಣಿಗೆ ರೂಪಿಸಿಕೊಂಡ ಕವಿಗಳು ಸಹಜವಾಗಿಯೇ ಅಪ್ರಾಮಾಣಿಕತೆಯನ್ನು ಗೆಲ್ಲಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ವಚನ ಕ್ರಾಂತಿಯ ಆಗಮನವಾಗುತ್ತದೆ. ಅವರು ಎದುರಿಸಿದ ಸಮಸ್ಯೆ ಭಾರತದಷ್ಟೇ ಎತ್ತರವೂ ವಿಶಾಲವಾದುದೂ ಆಗಿತ್ತು. ವಾಲಿಯ ಹತ್ಯೆ ಸಂದರ್ಭದಲ್ಲಿ ಹನುಮಂತ ಉದ್ಗರಿಸುವ “ಕಾಲಸ್ಯ ನಿಶ್ಚಯಃ” ಎಂಬ ಮಾತನ್ನು ಸಮಸ್ತ ಭಾರತಕ್ಕೆ ಮತ್ತೆ ನೆನಪಿಗೆ ತರುವ ರೀತಿಯಲ್ಲಿ ಅವರ ಆಗಮನವಾಗುತ್ತದೆ ಎಂದರೂ ಒಂದೇ, ಆ ಕಾಲದ ನಿಶ್ಚಯವನ್ನು ಬದಲಿಸಲು ಪ್ರಯತ್ನಿಸಿದರು ಎಂದರೂ ಅದೇ ಅರ್ಥ. ತನ್ನದೇ ಆದ ಗತಿ ಮತ್ತು ಲಯಕ್ಕೆ ಹೊಂದಿಕೊಂಡು ಸಾಗುತ್ತಿದ್ದ ಭಾರತದ ಗಡಿಯಾರದ ಮುಳ್ಳುಗಳನ್ನು ವಿಶ್ವದ ಗಡಿಯಾರದ ಮುಳ್ಳುಗಳಿಗೆ ಸರಿಹೊಂದಿಸುವ ಪ್ರಯತ್ನಕ್ಕೆ ಮೊದಲು ಮಾಡಿದ ವ್ಯಕ್ತಿಯೇ ಬಸವಣ್ಣ. ಇಡೀ ಭಾರತ ತನ್ನದೆ ಆದ ಆಂತರಿಕ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದಾಗ, ಹೊರಜಗತ್ತು ಎಂಬುದು ಮತ್ತೊಂದಿದೆ ಮತ್ತು ಅದನ್ನು ಗಮನಕ್ಕೆ ತಂದುಕೊಳ್ಳದೆ ಬದುಕು ಸಾಧ್ಯವಿಲ್ಲ ಎಂಬ ಎಚ್ಚರಕ್ಕೆ, ಅವರ ಬದುಕೇ ಉದಾಹರಣೆ. ಹಾಗಾಗಿ ಕಾಳಿದಾಸ ಮತ್ತು ವಚನಕ್ರಾಂತಿಯ ಸಾಧನೆಯ ಇತಿಮಿತಿ, ವೈಫಲ್ಯ ಮತ್ತು ಸಾಫಲ್ಯದ ಇತಿಮಿತಿಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸದೆ ಬೇರೆ ಮಾರ್ಗ ಇರುವಂತೆ ಕಾಣುವುದಿಲ್ಲ.

ರಿಲಿಜನ್‌ಗಳ ಆಗಮನದ ಮೂಲವನ್ನು ಮೊಸೆಸ್‌ ಮೊದಲಾದವರಲ್ಲಿ ಹುಡುಕಬಹುದಾದರೂ, ಅದರ ಮುಂದಿನ ಕ್ರಮಬದ್ಧ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುವುದೇ ಬುದ್ಧನಲ್ಲಿ. ಆತ ಸ್ಥಾಪಿಸಿದ ‘ಧಮ್ಮ’ದಲ್ಲಿ ರಿಲಿಜನ್ನಿನ ಹಲವಾರು ಗುಣಲಕ್ಷಣಗಳನ್ನು ಕಾಣಬಹುದಾದರೂ ಅದು ರಿಲಿಜನ್‌ ಆಗಲಿಲ್ಲ. ಆತನ ಕಾಲದವರೇ ಆಗಿದ್ದಿರಬಹುದಾದ ಜಾರತುಸ್ತ್ರ, ಕನ್‌ಫ್ಯೂಷಿಯಸ್‌ ಮೊದಲಾದವರ ಪ್ರಭಾವ ಆಯಾ ಸೀಮೆಗಳ ಗಡಿ ದಾಟಿರಲಿಲ್ಲ. ದೇಶ, ಕಾಲ ಮತ್ತು ಭೌಗೋಳಿಕ ಎಲ್ಲೆ ದಾಟಿದ ಧಮ್ಮ ಸ್ಥಾಪಿಸಿದ ಮೊದಲ ಸೀಮಾಪುರುಷನೆ ಬುದ್ಧ. ಆ ಬುದ್ಧ ಸ್ಥಾಪಿಸಿದ ಧಮ್ಮ ನಿಜವಾದ ಅರ್ಥದಲ್ಲಿ ರಿಲಿಜನ್‌ ಆಗಿ ಕೂಡ ಪರಿವರ್ತನೆಗೊಳ್ಳಲಿಲ್ಲ. ಈ ಎರಡರ ನಡುವಿನ ಬೆಳವಣಿಗೆಯೇ ಬೌದ್ಧಧಮ್ಮ. ಹಾಗಾಗಿ ಅದರಲ್ಲಿ ಧರ್ಮ ಮತ್ತು ರಿಲಿಜನ್ನಿನ ಕೆಲ ಲಕ್ಷಣಗಳನ್ನು ಕಾಣಬಹುದಾಗಿದೆ.

ಬುದ್ಧನನ್ನು ಬೌದ್ಧಧರ್ಮದ ಸಂಸ್ಥಾಪಕ ಎಂದು ಬೌದ್ಧರು ಪೂಜಿಸುವುದು ನಿಜ. ಕೆಲವರ ಪಾಲಿಗೆ ಆತನೇ ನೇರ ದೇವರಾದರೆ ಮತ್ತೆ ಕೆಲವರ ಪ್ರಕಾರ ದೇವರ ಅವತಾರ ಅಥವಾ ಪ್ರತಿರೂಪ. ಆ ವಿಚಾರದಲ್ಲಿ ಬುದ್ಧ, ಕ್ರಿಸ್ತ ಮತ್ತು ಮಹಮ್ಮದ್‌ಗಿಂತ ಹೆಚ್ಚು ಅದೃಷ್ಟಶಾಲಿ. ಧಮ್ಮದ ಸಂಸ್ಥಾಪಕನನ್ನೇ ನೇರವಾಗಿ ದೇವರೆಂದು ಪೂಜಿಸುವ ಉದಾಹರಣೆಗಳು ಈ ಜಗತ್ತಿನಲ್ಲಿ ಹೆಚ್ಚಿಲ್ಲ. ಎರಡನೆಯದಾಗಿ ಬುದ್ಧ ಜನಿಸಿದ, ನಿರ್ವಾಣ ಪಡೆದ, ಪರ್ಯಟನೆ ಮಾಡಿದ ಮತ್ತು ದೇಹತ್ಯಾಗ ಮಾಡಿದ ಪ್ರಮುಖ ಸ್ಥಳಗಳನ್ನು ಗೌರವದಿಂದ ಕಾಣಲಾಗುತ್ತದೆಯಾದರೂ, ಅವುಗಳಿಗಾಗಿ ಲಡಾಯಿ ಅಥವಾ ಯುದ್ಧ ನಡೆದ ಉದಾಹರಣೆ ಬಹಳ ಕಡಿಮೆ. ಮೂರನೆಯದಾಗಿ, ಬುದ್ಧ ಬೋಧಿಸಿದ ತತ್ವ ಮತ್ತು ನೀಡಿದ ಪ್ರವಚನಗಳ ಸಾರವನ್ನು ಪ್ರಮಾಣ ಗ್ರಂಥ ರೂಪದಲ್ಲಿ ಕಾಪಾಡಿಕೊಂಡು ಬರಲಾಗಿದೆಯಾದರೂ ಅವುಗಳೇ ಆದಿ ಮತ್ತು ಅಂತಿಮವೇನಲ್ಲ ಬೈಬಲ್‌ ಅದರಲ್ಲು ಕುರಾನ್‌ ತರಹ. ಹಾಗಾಗಿ ಬೌದ್ಧಧಮ್ಮವು ಸಂಘಟಿತ ರಿಲಿಜನ್‌ಗಳ ಉಗ್ರತ್ವ, ಕಾಠಿಣ್ಯ ಮತ್ತು ಹಠಮಾರಿತನವನ್ನು ಪಡೆದುಕೊಳ್ಳಲಿಲ್ಲ. ಆ ಸ್ವಭಾವ ಮತ್ತು ಗುಣಲಕ್ಷಣಗಳು ಬುದ್ಧಧಮ್ಮದಲ್ಲಿ ಸಂಪೂರ್ಣ ಗೈರುಹಾಜರಾಗಿವೆ ಅಥವಾ ಇಲ್ಲವೇ ಇಲ್ಲ ಎಂಬುದು ಆ ಮಾತಿನ ಅರ್ಥವಲ್ಲ, ಇರಬೇಕಾದ ಪ್ರಮಾಣದಲ್ಲಿಲ್ಲ ಅಷ್ಟೇ. ಏಕೆಂದರೆ, ಬುದ್ಧ ಬೋಧಿಸಿದ್ದು ಅಹಿಂಸೆಯನ್ನು!

ಸಮಕಾಲೀನವಾದ ಒಂದು ಉದಾಹರಣೆ, ಬೌದ್ಧಧಮ್ಮದ ಪರಿಸ್ಥಿತಿಯನ್ನು ಅರಿಯಲು ಸಹಾಯ ಮಾಡುವಂತೆ ತೋರುತ್ತದೆ.

ಸೋವಿಯತ್‌ ರಷ್ಯಾ ವಿಸರ್ಜನೆಗೊಳ್ಳುವುದರೊಂದಿಗೆ ಅದರ ಪ್ರಭಾವ ವಲಯದಲ್ಲಿದ್ದ ಅನೇಕ ರಾಷ್ಟ್ರಗಳ ಕಮ್ಯೂನಿಸ್ಟ್‌ ಸರ್ಕಾರಗಳು ಒಂದಾದ ಮೇಲೊಂದರಂತೆ ಉರುಳಿ ಹೋಗಲು ಪೂರಕವಾಗಿ ಒದಗಿಬಂದ ಅಂಶಗಳನ್ನು ಕುರಿತು ಅನೇಕಾನೇಕ ಸಂಪುಟಗಳನ್ನು ತಯಾರಿಸಬಹುದಾದರೂ, ಕ್ರಿಶ್ಚಿಯನ್‌ ರಿಲಿಜನ್‌ ಜತೆ ಸಾಂಸ್ಥಿಕ ಹೊಂದಾಣಿಕೆ ಮತ್ತು ಸಹಬಾಳುವೆ ಕೊನೆಗೂ ಏರ್ಪಡಲು ಸಾಧ್ಯವಾಗದೆ ಹೋದುದು ಕಮ್ಯುನಿಸ್ಟ್‌ ಸರ್ಕಾರಗಳ ಜನರೂ ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ಅವುಗಳು ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ. ಆದರೆ ಅಲ್ಲಿ ಎದುರಾಗುವ ವ್ಯಂಗ್ಯದ ಮಾದರಿಯನ್ನು ಗಮನಿಸುವುದು ಅಗತ್ಯ.

ಕಮ್ಯೂನಿಸ್ಟ್‌ ಸರ್ಕಾರದ ಜತೆ ಹೊಂದಿಕೊಂಡು ಇದ್ದೂ ಇಲ್ಲದಂತಿರುವ ಗುಣ ಪ್ರದರ್ಶಿಸಿದ ಬೌದ್ಧಧಮ್ಮ, ಕನ್‌ಫ್ಯೂಷಿಯಸ್‌ವಾದ, ಥಾವೋವಾದ ಮತ್ತು ಇತರ ಪ್ರಜಾಸತ್ತಾತ್ಮಕ ಆಶಯಗಳ ವಿರುದ್ಧ ಚೀನಾ ಸರ್ಕಾರ ಪ್ರಕಟಿಸಿದ ಕಾಠಿಣ್ಯ, ರಷ್ಯಾದ ಅಂದಿನ ಜನ ತಳೆದ ಮೃದು ಧೋರಣೆಗೆ ತೀರ ತದ್ವಿರುದ್ಧವಾದುದಾಗಿತ್ತು. ಸ್ಥಾಪಿತ ರಿಲಿಜನ್‌ಗಳ ಹಲವಾರು ಮುಖಗಳ ಪೈಕಿ ಒಂದಾದ ಉಗ್ರತ್ವ ಮತ್ತು ಹಠವನ್ನು ಸೋವಿಯತ್‌ ರಷ್ಯಾದ ಅಂದಿನ ಕಮೂನಿಸ್ಟ್‌ ಮಂದಿ ಕಳೆದುಕೊಂಡುದು ಅದರ ವಿಭಜನೆಗೆ ಪ್ರಮುಖ ಕಾರಣವಾಗಿದ್ದಿರಬಹುದು.

ಅಂತಹ ರಿಲಿಜನ್‌ ಸ್ಥಾಪಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತೇ ಎಂಬ ಪ್ರಶ್ನೆಯನ್ನು ಬುದ್ಧನ ಸಂದರ್ಭದಲ್ಲಿ ಕೇಳಲೇಬೇಕು. ಬೌದ್ಧಧಮ್ಮ ರಿಲಿಜನ್‌ ಆಗಿದ್ದಲ್ಲಿ ಭಾರತದ ಮತ್ತು ಆ ಮೂಲಕ ಜಗತ್ತಿನ ಇತಿಹಾಸದ ದಿಕ್ಕು ಬದಲಾಗುತ್ತಿತ್ತೇ? ಕಾಲ ಪಕ್ವವಾಗುವ ಮೊದಲೆ ವಾಲ್ಮೀಕಿ ರೂಪದಲ್ಲಿ ಭಾರತ ತಲುಪಿದ ಪ್ರೌಢಾವಸ್ಥೆ ತರಹವೇ ಬುದ್ಧನ ಆಗಮನವೂ ಆಗಿಹೋಯಿತೇ? ಕೇಂದ್ರೀಕೃತ ರಿಲಿಜನ್‌ಗಳ ಲಕ್ಷಣ ಮತ್ತು ಗುಣಗಳನ್ನು ಬೌದ್ಧಧಮ್ಮದಲ್ಲಿ ತೆಳು ಪ್ರಮಾಣದಲ್ಲಿಯಾದರೂ ಕಾಣಬಹುದಾದರೂ, ಅದು ಇಸ್ಲಾಂ ಅಥವಾ ಕ್ರಿಶ್ಚಿಯನ್‌ ರಿಲಿಜನ್‌ಗಳ ತರಹವೇ ಸ್ಥಾಪಿತ ರಿಲಿಜನ್‌ ರೂಪ ಪಡೆದುಕೊಳ್ಳಲಿಲ್ಲ ಏಕೆ?

ಕ್ರಿಸ್ತ ಕೇಂದ್ರಿತ ರಿಲಿಜನ್ನಿನ ಆಗಮನದ ಮಹತ್ವ ಅರಿತು ಅದನ್ನು ತಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಭದ್ರಬುನಾದಿ ಹಾಗೂ ಕಳಶದ ಮೇಲಿನ ಕಿರೀಟವನ್ನಾಗಿ ಸ್ವೀಕರಿಸುವುದರ ಮುಖೇನ ಯುರೋಪ್‌ ಮೂಲದ ಜನ ಪ್ರದರ್ಶಿಸಿದ ವಿವೇ, ಸಮಯಪ್ರಜ್ಞೆ ಹಾಗೂ ಕಾಲನಿಗೆ ಸ್ಪಂದಿಸುವ ಮನೋಭಾವದ ಮಹತ್ವವನ್ನು ಈ ಹಿನ್ನೆಲೆಯಲ್ಲಿ ಅರಿಯಬೇಕು. ಕ್ರಿಶ್ಚಿಯನ್‌ ರಿಲಿಜನ್‌ ಪಡೆದುಕೊಂಡ ಸುಸಂಘಟಿತ ಸಾಂಸ್ಥಿಕ ರೂಪದೊಂದಿಗೆ ಇಡೀ ಜಗತ್ತಿನ ಇತಿಹಾಸದ ಗತಿ ಮತ್ತು ದಿಕ್ಕು ಸಂಪೂರ್ಣ ಬದಲಾಗಿ ಹೋಯಿತು. ರೋಮನ್ ಸಾಮ್ರಾಜ್ಯದ ಮತ್ತೊಂದು ಸಾಂಸ್ಥಿಕ ರೂಪ ಕ್ರಿಶ್ಚಿಯನ್‌ ರಿಲಿಜನ್‌. ಹಾಗಾಗಿ ಇಡೀ ಜಗತ್ತಿನ ಇತಿಹಾಸ ಮತ್ತು ಕಾಲವನ್ನು ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕೆ ಎಂದು ವಿಭಜಿಸುವುದು ಕಾಲಕ್ಕನುಗುಣವಾದ ಸ್ವಾಭಾವಿಕ ಬೆಳವಣಿಗೆ. ಉಳಿದ ಜಗತ್ತಿನ ಎಲ್ಲ ದೇಶಗಳ ಎಲ್ಲಾ ಜನಾಂಗಗಳ ಜನರು ಆ ವಿಂಗಡಣೆಯನ್ನು ಸ್ವೀಕರಿಸಬೇಕಾಗಿ ಬಂದಿತು ಎಂಬುದು ಸಹ ಅನಿವಾರ್ಯವಾದ ಬೆಳವಣಿಗೆಯಾಗಿ ತೋರಿ ಬರುತ್ತದೆ. ಆ ವಿರುದ್ಧ ಗೊಣಗುವುದು ಎಂದರೆ, ಕಾಲನ ವಿರುದ್ಧ ಗೊಣಗುವುದು ಎಂದೇ ಅರ್ಥ. ಏಕೆಂದರೆ, ಅಲಿಖಿತ ಮತ್ತು ಲಿಖಿತ ಇತಿಹಾಸದ ಆರಂಭದ ಕಾಲದಿಂದಲೂ ಕಾಲನ ಹೆಜ್ಜೆಗನುಗುಣ ಸಾಗಿಬಂದವರು ಅವರಾಗಿದ್ದರು. ಕಾಲನ ಸ್ಪಂದನ, ಪರಂಪರೆಯ ನಿರ್ಮಾಣ, ಕಾಲದಪ್ರಜ್ಞೆ, ಸುತ್ತಮುತ್ತಲ ಅರಿವು, ವಿಕಾಸದ ಪರಿಕಲ್ಪನೆ, ಅರ್ಹಸಂತಾನದ ಅಪೇಕ್ಷೆ, ಮುನ್ನೋಟ ಇತ್ಯಾದಿ ಯಾವುದೇ ಮಾತುಗಳಿಂದ ಹಾಕುವ ಒತ್ತು ಅಥವಾ ಅರ್ಥಛಾಯೆ ಬದಲಾಗಬಹುದೇ ವಿನಾ, ಅವುಗಳ ಭಾವಾರ್ಥ ಮಾತ್ರ ಒಂದೇ. ಅವುಗಳನ್ನು ಪಡೆಯಬೇಕಾದ ಪ್ರಮಾಣದಲ್ಲಿ ಪಡೆದಿರುವುದರ ಜತೆಗೆ ಅದನ್ನು ಅವರು ನಿರಂತರ ಆರ್ಜಿಸಿಕೊಂಡು ಬಂದಂತೆಯೂ ಕಾಣುತ್ತದೆ. ವ್ಯಕ್ತಿ ಮೂಲವೂ ಮತ್ತು ಸಾಮೂಹಿಕವೂ ಆದ ಆ ಜ್ಯೋತಿಯನ್ನು ಹೊತ್ತಿಸಿ ಹೋದವನು ಹೋಮರ್‌; ಹೆಲೆನಳನ್ನು ಮರಳಿ ಪಡೆಯಲು ಯುದ್ಧ ನಡೆಸುವುದರ ಮೂಲಕ ತಾವು ಕಳೆದುಕೊಂಡಿದ್ದಿರಬಹುದಾದ ಸುತ್ತ ಮುತ್ತಲ ಅರಿವು ಮತ್ತು ಎಚ್ಚರವನ್ನು ಮರಳಿ ಪಡೆಯಲು ಯತ್ನಿಸುವವರ ಕತೆಯನ್ನು ಹಾಡಿದವನು.

ಯಾವುದೇ ಜನಾಂಗ, ಸಂಸ್ಕೃತಿ ಅಥವಾ ನಾಗರಿಕತೆ ಹೊರ ಜಗತ್ತು ಮತ್ತು ಸುತ್ತಮುತ್ತಲನ್ನು ಮರೆತು ತನ್ನದೇ ಆಗ ಕೇವಲ ಆಂತರಿಕ ವ್ಯವಹಾರಗಳಲ್ಲಿ ಬಹಳ ಕಾಲ ತಲ್ಲೀನವಾಗಿ ಉಳಿಯಲು ಬರುವುದಿಲ್ಲ. ಆ ತರಹದ ಆಂತರಿಕ ತಲ್ಲೀನತೆಯನ್ನು ಆತ್ಮಶೋಧನೆ ಎಂಬುದಾಗಿ ಬಣ್ಣಿಸಿ ಹೆಮ್ಮೆ ಪಡಲು ಬಹಳ ಜನ ಭಾರತೀಯರು ಮತ್ತು ಅವರನ್ನು ಮೆಚ್ಚುವ ಜನ ಇಷ್ಟಪಡಬಹುದು. ಆತ್ಮಶೋಧನೆ ಎಂಬುದು ಬೇರೇನೂ ಅಲ್ಲ; ತನ್ನನ್ನು ತಾನು ಅರಿಯುತ್ತಲೇ ಸುತ್ತಮುತ್ತಲ ಮತ್ತು ಆ ಜತೆಗೆ ತನ್ನನ್ನು ತಾನು ಅರಿಯುವ ಪ್ರಕ್ರಿಯೆ. ವ್ಯಕ್ತಿಗತವಾದ ಆ ವಿವೇಕ ಸಾಮೂಹಿಕವಾದರೂ ಹೌದು. ವ್ಯಕ್ತಿಗತ ವಿವೇಕವು ಸಾಮೂಹಿಕ ವಿವೇಕದ ಸೀಮೆಯ ಸರಹದ್ದುಗಳನ್ನು ವಿಸ್ತರಿಸಲು ಯತ್ನಿಸಿದರೆ, ಸಾಮೂಹಿಕ ವಿವೇಕವು ವ್ಯಕ್ತಿಗತ ವಿವೇಕವನ್ನು ರೂಪಿಸುವ ಕೆಲಸ ಮತ್ತು ಪ್ರಕ್ರಿಯೆ ನಿರಂತರ ಸಾಗುತ್ತಲೇ ಇರಬೇಕಾಗುತ್ತದೆ. ಆಗಾಗ್ಗೆ ಕಂತುವ ಅದು ಸಂಪೂರ್ಣ ಕುಂದದಂತೆ ಈವರೆಗೆ ನೋಡಿಕೊಂಡು ಬಂದಿರುವುದು, ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಜನರ ವಿಶೇಷತೆಯಾಗಿರಬಹುದು.

ಭಾರತದ ಆ ದೀಪವನ್ನು ಎಷ್ಟೋ ಶತಮಾನಗಳ ನಂತರ ಮತ್ತೆ ಹೊತ್ತಿಸಲು ಪ್ರಯತ್ನಿಸಿದ ಬಸವಣ್ಣನ ಸಾಫಲ್ಯ – ವೈಫಲ್ಯವನ್ನು ಈ ಹಿನ್ನೆಲೆಯಲ್ಲಿ ಪಾತ್ರ ಗ್ರಹಿಸಲು ಸಾಧ್ಯ. ಅರ್ಹ ಮಕ್ಕಳಿಗಾಗಿ ಹಾತೊರೆಯುವ ತಂದೆ – ತಾಯಿಗಳ ಚಿತ್ರಣ ನೀಡುವುದರ ಮೂಲಕ ಕಾಳಿದಾಸನೂ ಅದೇ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸಿರಬಹುದು. ಅಂತಹದ್ದೇ ಪರಿಸ್ಥಿತಿಯ ಮತ್ತೊಂದು ರೂಪವನ್ನು ಅದರ ವಿಶಾಲ ಹಿನ್ನೆಲೆಯಲ್ಲಿ ಎಲ್ಲ ಸಂಕೀರ್ಣತೆಗಳೊಡನೆ ಭಾರತ ಮತ್ತೊಮ್ಮೆ ಎದುರಿಸಬೇಕಾಗಿ ಬಂದುದೇ ಗಾಂಧೀಜಿ ಎದುರಿಸಬೇಕಾಗಿ ಬಂದ ಪರಿಸ್ಥಿತಿಯ ರೂದಲ್ಲಿ. ಭಾರತದ ಕಾಲದ ಮುಳ್ಳುಗಳನ್ನು ವಿಶ್ವ ಅಥವಾ ನಿಯತಿಯ ಗಡಿಯಾರದ ಮುಳ್ಳುಗಳ ಜತೆ ಹೊಂದಿಸಲು ಬಸವಣ್ಣ ಪ್ರಯತ್ನಪಟ್ಟರೆ, ಆ ವಿಶ್ವದ ಗಡಿಯಾರ ತೋರಿಸುವ ಕಾಲವನ್ನು ಪರಿಗಣನೆಗೆ ತಂದುಕೊಂಡು ತಂದುಕೊಳ್ಳದಂತೆ ಭಾರತದ ಗಡಿಯಾರವನ್ನು ಅದರ ಸಹಜ ಗತಿಗನುಗುಣ ಕೆಲ ಮಾರ್ಪಾಡುಗಳೊಡನೆ ನಡೆಸಿಕೊಂಡು ಹೋಗುವುದು ಗಾಂಧೀಜಿಯವರ ಆಶಯವಾಗಿತ್ತು. ಬಹಳ ರೂಕ್ಷವಾಗಿ ಹೇಳುವುದಾದರೆ: ಭಾರತದ ಕಾಲನ ಪದಗತಿಗನುಗುಣವಾಗಿ ವಿಶ್ವ ಗಡಿಯಾರದ ಕಾಲಗತಿಯನ್ನು ಹೊಂದಿಸಲು ಪ್ರಯತ್ನಪಟ್ಟವರು ಗಾಂಧೀಜಿ.

ಆ ಯಾವ ಪ್ರಯತ್ನಗಳನ್ನು ಕಾಲ ತನ್ನ ಲೆಕ್ಕಕ್ಕೆ ಜಮಾ ಮಾಡಿಕೊಂಡಂತೆ ಕಾಣುವುದಿಲ್ಲ.

ಅಂತಹ ಗಾಂಧೀಜಿಯ ಕತೆ ಏನಾಯಿತು ಎಂಬುದು ಇತಿಹಾಸದ ಪುಸ್ತಕಗಳ ಮಾತು. ಪಶ್ಚಿಮ ಜಗತ್ತು ರೂಪಿಸಿದ ಸಿದ್ಧಮಾದರಿ, ಚಿಂತನಕ್ರಮ ಮತ್ತು ಬದುಕಿನ ದಾರಿಯಲ್ಲಿ ಸಾಗುವುದು ಹೊರತು ಅನ್ಯ ದಾರಿಯೇ ಇಲ್ಲವೇ ಎಂಬ ಪ್ರಶ್ನೆಗಳನ್ನು ಕೇಳುವ ಕುತೂಹಲವೂ ಈಗ ಇಲ್ಲದಾಗಿದೆ. ಕೆಲವರ ಪಾಲಿಗೆ ಆ ತರಹದ ಪ್ರಶ್ನೆ ಕೇಳುವುದೇ ಅನಗತ್ಯ, ಮತ್ತು ಅದು ವ್ಯರ್ಥಪ್ರಯತ್ನವಾಗಿ ಕಾಣುತ್ತದೆ. ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಸಿದ್ಧ ಮಾದರಿಗಳನ್ನು ಸಾರಾಸಗಟಾಗಿ ಕಾಣುತ್ತದೆ. ಸ್ವೀಕರಿಸಬೇಕಾಗಿ ಬಂದ ನಂತರವಾದರೂ ತನ್ನ ಬದುಕು, ಸುತ್ತಮುತ್ತಲು ಮತ್ತು ಹಿನ್ನೆಲೆಗೆ ಅನುಗುಣ ಸೃಜನಶೀಲತೆ ಕಂಡುಕೊಳ್ಳುವುದರ ಮೂಲಕ ಆ ಸಿದ್ಧಮಾದರಿಯ ಚೌಕಟ್ಟಿನ ಮಿತಿ ಮತ್ತು ವ್ಯಾಪ್ತಿಯನ್ನು ಹಿಗ್ಗಲಿಸುವ ಅವಕಾಶವನ್ನು ಭಾರತ ಸಮರ್ಪಕವಾಗಿ ಬಳಸಿಕೊಂಡಿತೇ ಎಂಬ ಪ್ರಶ್ನೆಗಳಿಗಾದರೂ ಉತ್ತರ ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಚೀನಾ, ಜಪಾನಿನ ಹಿರಿಮೆ ಇರುವುದೇ ಅದರಲ್ಲಿ. ಆ ಸಿದ್ಧ ಮಾದರಿಗಳನ್ನು ಒಪ್ಪಿಕೊಂಡು ತನ್ನದೇ ಆದ ರೀತಿಯಲ್ಲಿ ಸ್ಪರ್ಧೆ ನೀಡಲು ಅವರಿಗೆ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಾಧ್ಯವಾದುದು ಆ ತರಹದ ಪ್ರಯತ್ನಗಳು ಪಡೆದುಕೊಂಡ ಸಂಘಟಿತ ರೂಪದಿಂದಾಗಿ.

 

[1]ಆ ರೀತಿಯ ಪ್ರಭಾವವನ್ನು ಸೀಮಿತ ಪ್ರಮಾಣದಲ್ಲಿಯಾದರೂ ಬೀರಲು ರವೀಂದ್ರನಾಥ ಠಾಕೂರ್‌ ಅವರಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆ ಕುರಿತ ಉತ್ತರ ಸ್ಫುಟಗೊಳ್ಳುವ ರೀತಿಯಲ್ಲಿ ಚೌಕಟ್ಟು ರೂಪುಗೊಂಡಿದೆ.

[2]ಭಾರತದ ಸಾಂಸ್ಕೃತಿಕ ಆ ಮಾದರಿ, ಅವರು ರೂಢಿಸಿಕೊಂಡ ಬದುಕಿನ ಕ್ರಮ, ಮನೋಭಾವ ಮತ್ತು ಮನೋಧರ್ಮಗಳ ವಿಶಿಷ್ಟತೆಯನ್ನು ಈ ಜಗತ್ತಿನ ಇತಿಹಾಸದ ಹೆಜ್ಜೆಗತಿಗನುಗುಣ ಕಂಡುಕೊಳ್ಳುವುದು ಇಲ್ಲಿನ ಉದ್ದೇಶ ಮಾತ್ರವಲ್ಲ; ಆ ವಿಶಿಷ್ಟತೆಯನ್ನು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವೆ ಎಂಬುದನ್ನು ಪರಿಶೀಲಿಸುವುದು ಆಗಿರುವುದರಿಂದ ಆ ಕುರಿತಂತೆ ತೆಗೆದುಕೊಳ್ಳಬಹುದಾದ ಯಾವುದೇ ತೀರ್ಮಾನ ಆತುರದ್ದಾಗಿ ಬಿಡುವ ಅಪಾಯವಿದೆ.

[3]Dr. Babasaheb Ambedkar Writing and Speeches, Vol. No. I., Education Department, Government of Maharashtra, ೧೯೭೯, ಪುಟ ೪೯ ಮತ್ತು ೫೦.

[4]ಕುಂತಿ ಕುತೂಹಲಕ್ಕಾಗಿ ಸೂರ್ಯನನ್ನು ರಮಿಸಿ ಕರ್ಣನನ್ನು ಪಡೆಯುವ ಕನ್ಯಾಪ್ರೇಮ ಆ ವ್ಯಾಪ್ತಿಗೆ ಬರುವುದಿಲ್ಲ.