ಉಪಸಂಹಾರ ಇಲ್ಲವೇ ಭರತವಾಕ್ಯ ರೂಪದಲ್ಲಿ ಕೆಲ ಮಾತು ಬರೆದು ಮಂಗಳ ಹಾಡುವುದು ಪದ್ಧತಿ. ಆದರೆ ಯಾವ ಸಂಗತಿಗಳೂ ಅಷ್ಟು ಸುಲಭ ಪರಿಸಮಾಪ್ತಿಗೊಳ್ಳುವುದಿಲ್ಲ. ಮುಕ್ತಾಯ ರೂಪದಲ್ಲಿ ಏನನ್ನಾದರೂ ಬರೆಯಲು ಹೋಗುವುದು ಎಂದರೆ, ಗಮನಿಸಿದೆ ಹೋಗಿರಬಹುದಾದ ಸಮಸ್ಯೆಯ ರಕ್ತಬೀಜಾಸುರನ ಅಂಶವನ್ನು ಎದುರಿಸಲು ಸಜ್ಜಾಗುವುದು ಎಂದೇ ಅರ್ಥ.

ಸ್ಫೂರ್ತಿ ಮತ್ತು ಪ್ರತಿಭೆಯ ಬಲದಿಂದ ಏನೆಲ್ಲವನ್ನು ಸಾಧಿಸಲು ಸಾಧ್ಯ ಎಂಬುದಾಗಿ ಒಂದು ಕಾಲದಲ್ಲಿ ಜನ ಭಾವಿಸಿದ್ದರೋ ಅದೆಲ್ಲವನ್ನು ಬುದ್ಧಿಮತ್ತೆ, ಕಠಿಣ ಪರಿಶ್ರಮ, ಸತತ ಪ್ರಯತ್ನ ಮತ್ತು ಅನುರಕ್ತಿಯ ಆಧಾರದ ಮೇಲೆ ಸಾಧಿಸಲು ಬರುತ್ತದೆ. ಅದರ ಗ್ರಹಿಕೆಯ ಮಟ್ಟ ಮತ್ತು ಪ್ರಮಾಣವನ್ನು ಜನಸಾಮಾನ್ಯರ ಹಂತದಲ್ಲಿ ಕ್ರಮಕ್ರಮವಾಗಿ ವಿಸ್ತರಿಸುವುದರ ಮುಖೇನ ಮಹತ್ವದ ಸಾಧನೆಯ ಮಟ್ಟ ಮತ್ತು ಪ್ರಮಾಣವನ್ನು ವಿಸ್ತರಿಸುತ್ತಾ ಹೋಗುವುದರ ಜತೆಜತೆಗೆ ಸಾಧನೆಯ ಹಾದಿಯಲ್ಲಿ ಇನ್ನೂ ಹೆಚ್ಚಿನ ಎತ್ತರವನ್ನು ತಲುಪಬಹುದಾಗಿದೆ. ಮತ್ತು ಅವೆರಡೂ ಪರಸ್ಪರ ಪೂರಕವಾದವು ಎಂಬುದಾಗಿ ನಂಬಿರುವ ಪಶ್ಚಿಮ ಜಗತ್ತಿನ ಜನರು, ಆ ತಮ್ಮ ಶ್ರದ್ಧೆಯನ್ನು ಬದುಕಿನ ಕ್ರಮಬದ್ಧ ಆಚರಣೆಯಾಗಿ ಪಾಲಿಸಿಕೊಂಡು ಬಹುದೂರ ಸಾಗಿ ಬಂದಿರುತ್ತಾರೆ. ಪರಿಣಾಮವಾಗಿ, ಹಲವಾರು ರೀತಿಯ ಬದಲಾವಣೆ ಮತ್ತು ವ್ಯಾಖ್ಯಾನಗಳಿಗೆ ತುತ್ತಾಗಿರುವ ಸೃಜನಶೀಲತೆಯ ಅಥ್, ವ್ಯಾಪ್ತಿ ಮತ್ತು ಪರಿಕಲ್ಪನೆಯನ್ನು ಮತ್ತೆ ಮತ್ತೆ ಮರುಪರಿಶೀಲನೆಗೊಳಪಡಿಸುತ್ತಿರುವ ಅವರಲ್ಲಿ ಕೆಲವರು, ಬುದ್ಧಿಮತ್ತೆಯ ಪಾರಮ್ಯವನ್ನು ಎತ್ತಿ ಹಿಡಿಯುತ್ತಲೇ ಸ್ಫೂರ್ತಿ ಮತ್ತು ಪ್ರತಿಭೆವಹಿಸುವ ಪಾತ್ರವನ್ನು ಬಹುತೇಕ ನಿರಾಕರಿಸುವ ಹಂತವನ್ನು ಬಂದು ಮುಟ್ಟಿರುತ್ತಾರೆ. ಮತ್ತೆ ಕೆಲವರು ಈ ಹಾದಿಯಲ್ಲಿದ್ದಾರೆ.

ಬುದ್ಧಿಮತ್ತೆಯ ಪ್ರಮಾಣವನ್ನು ಸಾಧಾರಣೀಕರಣ ಮತ್ತು ಸಾರ್ವತ್ರೀಕರಣಗೊಳಿಸುವುದರ ಮೂಲಕ ಉನ್ನತ ಸಧನೆಯ ಪರಂಪರೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಬರುತ್ತದೆ ಎಂದು ಬಲವಾಗಿ ನಂಬಿ ಅದರಂತೆ ನಡೆದುಕೊಂಡು ಬರುತ್ತಿರುವ ಪಶ್ಚಿಮ ಜಗತ್ತಿನ ಜನರಾದ ಅವರಾದರೂ ಕೂಡ, ಎಲ್ಲರೂ ಐನ್‌ಸ್ಟೈನ್‌ ಅಥವಾ ಗಾಂಧೀಜಿ ಆಗಲು ಬರುವುದಿಲ್ಲ ಎಂಬ ಸರಳ ಆದರೆ ಮಹೋನ್ನತ ತಿಳುವಳಿಕೆ ಮತ್ತು ಎಚ್ಚರದಿಂದ ವಂಚಿತರಾಗಿಲ್ಲ ಎಂಬುದನ್ನು ಸ್ಮರಣೆಗೆ ತಂದುಕೊಳ್ಳುವುದು ಅಗತ್ಯ. ಬುದ್ಧಿವಂತಿಕೆ, ವಿಶ್ಲೇಷಣಾ ಸಾಮರ್ಥ್ಯ, ಪ್ರತಿಭೆ, ದೂರದೃಷ್ಟಿ ಮತ್ತು ಬೆರಗುಗೊಳಿಸುವ ಒಳನೋಟ ನೀಡುವ ವಿಚಾರದಲ್ಲಿ ಬರ್ಟ್ರಾಂಡ್‌ ರಸೆಲ್ ಐನ್‌ಸ್ಟೈನ್‌ಗಿಂತ ಹೆಚ್ಚು ಸಿರಿವಂತನಿರಬಹುದು; ಆದರೆ ಮಾನವ ಜನಾಂಗದ ಸೃಜನಶೀಲ ಪ್ರತಿಭೆ ಮತ್ತು ಸೃಷ್ಟಿಕ್ರಿಯಾ ಸಾಮರ್ಥ್ಯ ಏರಬಹುದಾದ ಎತ್ತರಕ್ಕೆ ಸಂಕೇತವಾಗಿ ನಿಲ್ಲುವ ವ್ಯಕ್ತಿಯೇ ಐನ್‌ಸ್ಟೈನ್‌ – ಹೋಮರ್‌, ವರ್ಜಿಲ್‌, ವ್ಯಾಸ, ಕಾಳಿದಾಸ ಮೊದಲಾದ ಕೆಲವರಿಗೆ ಮೀಸಲಿದ್ದ ಸ್ಥಾನವನ್ನು ಗಳಿಸಿಕೊಂಡ ವಿಜ್ಞಾನಿಗಳಲ್ಲಿ ಆತನೂ ಒಬ್ಬ.

ಐನ್‌ಸ್ಟೈನ್‌ನಲ್ಲಿ ವ್ಯಕ್ತವಾಗುವ ಪ್ರತಿಭೆಯ ರೀತಿ, ವೈಖರಿ ಮತ್ತು ಪ್ರಮಾಣ ಬೇರೆಯಾಂತೆ, ರಸೆಲ್‌ ಮೊದಲಾದವರಲ್ಲಿ ಅದು ಸ್ಫೋಟಗೊಳ್ಳುವ ಸೊಗಸೇ ಬೇರೆಯಾಗಿರುತ್ತದೆ ಎಂಬ ವ್ಯತ್ಯಾಸದ ಅರಿವು ಸಮಕಾಲೀನರಾದ ಅವರಿಬ್ಬರಿಗೂ ಇತ್ತು. ಅಂತಹ ಐನ್‌ಸ್ಟೈನ್‌ಗೆ ಸಲ್ಲಿಸಬೇಕಾದ ಗೌರವ ಸಲ್ಲಿಸುವ ವಿಚಾರದಲ್ಲಿ ರಸೆಲ್‌ ಎಂದೂ ಸಂಕೋಚ ಅಥವಾ ಮುಜುಗರ ಅನುಭವಿಸಿರಲಿಲ್ಲ. ‘ಮಹಾತ್ಮಾ ಗಾಂಧೀಜಿಯಂತಹ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿದ್ದರು ಎಂಬುದನ್ನು ನಂಬಲು ಬರುವ ತಲೆಮಾರಿನ ಜನರಿಗೆ ಕಷ್ಟವಾಗಬಹುದು” ಎಂಬ ಮಾತನ್ನು ದಾಖಲಿಸುವುದರ ಮುಖೇನ ಐನ್‌ಸ್ಟೈನ್‌ ಮಾನವ ಜನಾಂಗಕ್ಕಿರುವ ಸೃಜನಶೀಲ ಶಕ್ತಿಯ ಅಪಾರ ಸಾಧ್ಯತೆಗಳನ್ನು ಪರಿಗಣನೆಗೆ ತಂದುಕೊಳ್ಳುತ್ತಾರೆ ಮಾತ್ರವಲ್ಲ; ಆ ಮೂಲಕ ತಮ್ಮ ಇತಿಮಿತಿಯನ್ನು ಸಹ ಐನ್‌ಸ್ಟೈನ್‌ ಮುಖ್ಯವಾಗುವುದೇ ಅಂತಹ ಅನೇಕ ಕಾರಣಗಳಿಗಾಗಿ.

ಮಹತ್ವದ ಸಾಧನೆಯ ಕಾಲದಲ್ಲಿ ಸ್ಫೂರ್ತಿ ಮತ್ತು ಪ್ರತಿಭೆ ವಹಿಸುವ ಪಾತ್ರವನ್ನು ಅತಿರಂಜಿತವಾಗಿ ಉತ್ಪ್ರೇಕ್ಷೆ ಮಾಡಿ ಅಗತ್ಯವಾದುದಕ್ಕಿಂತ ಹೆಚ್ಚು ಒತ್ತು ಹಾಕಿ ಮಾತನಾಡಿದುದರ ಪರಿಣಾಮವೊ ಏನೋ, ಮನಸ್ಸು ಸೃಷ್ಟಿಕ್ರಿಯೆಯಲ್ಲಿ ತೊಡಗುವಾಗ ಅವುಗಳು ವಹಿಸುವ ಪಾತ್ರವನ್ನು ಲೇವಡಿ ಮಾಡುವ ಇಲ್ಲವೇ ಸಂಪೂರ್ಣವಾಗಿ ಹ್ರಸ್ವಗೊಳಿಸಿ ನೋಡುವ ಮಟ್ಟಕ್ಕೆ ಕೆಲವರು ಹೋದರು. ಇಲ್ಲದೇ ಹೋಗಿದ್ದಲ್ಲಿ, ಎಲ್ಲಾ ಕಿಲಾಡಿಗಳು, ಬುದ್ಧಿವಂತರು ಮತ್ತು ಚಾಣಾಕ್ಷರು ಸೃಜನಶೀಲ ವ್ಯಕ್ತಿಗಳಾಗಿ ಪರಿವರ್ತನೆಗೊಂಡಿರಬೇಕಾಗುತ್ತಿತ್ತು. ಆದರೆ ಆ ತರಹ ಆಗಲಿಲ್ಲ. ಕಠಿಣ ಪರಿಶ್ರಮ, ಸತತ ಪ್ರಯತ್ನ ಮತ್ತು ಅನುರಕ್ತಿಯ ಬೆಂಬಲವಿಲ್ಲದೆ ಪ್ರತಿಭೆ ಮತ್ತು ಸ್ಫೂರ್ತಿಯು ಅಪ್ರಯೋಜನಕಾರಿಯಾಗಿಬಿಡಬಹುದಾದಂತೆ, ಬುದ್ಧಿಮತ್ತೆ, ಅಧ್ಯಯನ ಮತ್ತು ಪರಿಶ್ರಮಗಳ ಏಕೈಕ ಆಧಾರದ ಮೇಲೆ ಎಲ್ಲವನ್ನು ಸಾಧಿಸಲು ಬರುವುದಿಲ್ಲ.

ಆ ಎಲ್ಲವುಗಳ ಕ್ರಮಬದ್ಧ ಹೊಂದಾಣಿಕೆ ಮತ್ತು ಅನುರೂಪತೆ ಮಹತ್ವದ ಸಾಧನೆಗೆ ಅಗತ್ಯವೆಂಬ ವರ್ಜಿಲನ ಕ್ಲಾಸಿಕ್‌ ತತ್ವ ಇಂದಿಗೂ ಸತ್ಯ – ಅದರಲ್ಲಿ ಕಾಲ ವಹಿಸುವ ಪಾತ್ರ; ಆ ಸತ್ಯವನ್ನು ಬೇರೆಯವರು ಬೇರೆ ಬೇರೆ ರೂಪದಲ್ಲಿ ಪ್ರಮಾಣೀಕರಿಸಿಕೊಂಡಿರಬಹುದು.

ಮಹತ್ವದ ಸಾಧನೆಯೊಂದು ಘಟಿಸಿದಾಗ ಅದನ್ನು ಗ್ರಹಿಸಬಹುದಾದ ರೀತಿಯಲ್ಲಿ ಗ್ರಹಿಸಿ ಸ್ವೀಕರಿಸಲು ಸಿದ್ಧವಿರುವ ಓದುಗರು ಮತ್ತು ನೋಡುಗರು ಸೇರಿದ ಸಮಾಜದ ಬೆಂಬಲ ಕೂಡಲೇ ದೊರಕದೇ ಹೋದಲ್ಲಿ, ಅದು ತಾತ್ಕಾಲಿಕವಾಗಿಯಾದರೂ ತನ್ನ ಮಹತ್ವ ಕಳೆದುಕೊಳ್ಳುವ ಒತ್ತಾಯಕ್ಕೆ ತುತ್ತಾಗುವಂತೆ, ತಾವು ಮೆಚ್ಚಲು ಅರ್ಹವಾದ ಮತ್ತು ಜೀವನದುದ್ದಕ್ಕೂ ಮತ್ತೆ ಮತ್ತೆ ಅನುಸಂಧಾನಿಸಬಯಸುವ ಕೃತಿಗಳನ್ನು ಕಂಡುಕೊಳ್ಳದ ಹೊರತು, ನಿಜವಾದ ಓದುಗರು ಮತ್ತು ರಸಿಕರು ಸೇರಿಯಾದ ಸಮಾಜದ ಬದುಕು ಅರ್ಥಪೂರ್ಣವಾಗುವುದಿಲ್ಲ ಮತ್ತು ಸಾರ್ಥಕತೆ ಕಾಣುವುದಿಲ್ಲ. ಅದು ಅಷ್ಟಕ್ಕೆ ನಿಲ್ಲುವುದಿಲ್ಲ. ಆ ರೀತಿ ಮೆಚ್ಚುಗೆಗೆ ಪಾತ್ರವಾದ ಕೃತಿಗಳು ಭಿನ್ನ ಹಿನ್ನೆಲೆಯಿಂದ ಬಂದವರಿಗೂ ಅರ್ಥಪೂರ್ಣವಾಗಿ ಕಾಣುವ ‘ಸೌಭಾಗ್ಯ’ ಪಡೆದುವಾಗಿರಬೇಕು. ಆಗ ಮಾತ್ರ ನಿಜವಾದ ಸಾರ್ಥಕತೆ ಲಭಿಸಲು ಸಾಧ್ಯ ಅಷ್ಟೇ ಅಲ್ಲ, ಆನಂತರ ಬರುವ ಅಷ್ಟೇ ಮಹತ್ವದ ಅಥವಾ ಇನ್ನೂ ಎತ್ತರದ ಸಾಧನೆ ಮಾಡುವ ಪ್ರತಿಭೆಯಿಂದ ತುಂಬಿದ ಜನ ಹಾಗೂ ಅವರನ್ನು ಸ್ವೀಕರಿಸುವ ಮುಂದಿನ ತಲೆಮಾರಿನ ಸಮಾಜ ತೋರುವ ಪ್ರತಿಕ್ರಿಯೆ ಮತ್ತು ಸ್ವೀಕರಿಸುವ ರೀತಿಯನ್ನು ಅದು ಹೊಂದಿಕೊಂಡಿರುತ್ತದೆ. ಆ ಎಲ್ಲ ಬೆಳವಣಿಗೆ ಅಥವಾ ಹೊಂದಾಣಿಕೆ ಪರಸ್ಪರ ಪೂರಕವಾದುದು ಮತ್ತು ಆ ಪ್ರಕ್ರಿಯೆ ನಿರಂತರವಾದುದು.

ಆ ಅವಕಾಶ ಮತ್ತು ಹಿನ್ನೆಲೆ ವ್ಯಾಸ, ವಾಲ್ಮೀಕಿ, ಕಾಳಿದಾಸ ಮೊದಲಾದ ಯಾರಿಗೂ ಒದಗಿಬರಲಿಲ್ಲ.

ಆ ಎಲ್ಲ ಕೊರತೆ ಕಾಳಿದಾಸನನ್ನು ಅಪ್ರಜ್ಞಾಪೂರ್ವಕವಾಗಿಯಾದರೂ ಕಾಡಿದಂತೆ ಕಾಣುತ್ತದೆ. ಇಲ್ಲದೇ ಹೋಗಿದ್ದಲ್ಲಿ ಅರ್ಹ ಗುರು, ಅರ್ಹ ಶಿಷ್ಯ ಅರ್ಹ ಮಕ್ಕಳು ಮತ್ತು ಅರ್ಹ ತಂದೆ ತಾಯಿಗಳ ಅಪೇಕ್ಷೆಯನ್ನು ಪ್ರಧಾನವಾಗಿ ಅನ್ವೇಷಿಸುವ ಇಲ್ಲವೇ ಪರಿಶೋಧಿಸುವ ಅಗತ್ಯ ನಿರ್ಮಾಣ ಆಗುತ್ತಿರಲಿಲ್ಲ. ಅದು ಅರ್ಹ ಓದುಗರು ಮತ್ತು ಅರ್ಹ ಸಮಾಜವನ್ನು ಒಳಗೊಳ್ಳುತ್ತದೆ. ಏಕೆಂದರೆ, ಓದುವ ಕಲೆ ಮತ್ತು ಪರಂಪರೆ ನಿರ್ಮಾಣ ಪರಸ್ಪರ ಪೂರಕವಾದವು; ಒಂದಿಲ್ಲದೆ ಮತ್ತೊಂದಿರುವುದು ಸಾಧ್ಯವಿಲ್ಲ. ಅಕ್ಷರ ಸಂಸ್ಕೃತಿ ಚಾಲನೆಗೆ ಬರುತ್ತಿದ್ದಂತೆಯೇ ಕಾವ್ಯ ರಚನಾ ವಿಧಾನ ಬದಲಾವಣೆ ಕಂಡುಕೊಳ್ಳುವುದು ಅನಿವಾರ್ಯವಾಯಿತು ಅದರಂತೆ ಓದುವ ಕಲೆ ಕೂಡ ಎಂಬುದಾಗಿ ವರ್ಜಿಲನ ಪರಂಪರೆ ಪರಿಭಾವಿಸುತ್ತದೆ. ಆದರೆ ಆ ಯಾವ ಸೂಕ್ಷ್ಮ ಸಂಗತಿಗಳು ಭಾರತೀಯರ ಗಮನವನ್ನು ಅಷ್ಟಾಗಿ ಸೆಳೆದಂತೆ ಮತ್ತು ಬ್ರಿಟಿಷರ ಆಗಮನದನಂತರವೂ ಆ ಪರಿಸ್ಥಿತಿ ಆ ನಿಟ್ಟಿನಲ್ಲಿ ಬಹಳ ಸುಧಾರಿಸಿದಂತೆ ಕಾಣುವುದಿಲ್ಲ.

ಆನಂದವರ್ಧನ ಮೊದಲಾದ ಮೀಮಾಂಸಕಾರರನ್ನು ನೀಡಿದ ಭಾರತದ ಜನರಿಗೆ ಕಾವ್ಯ ಅಥವಾ ಮತ್ತಾವುದೇ ಕೃತಿಗಳನ್ನು ಓದುವ ಕಲೆ ಗೊತ್ತಿರಲಿಲ್ಲ ಎನ್ನುವುದು ಅತ್ಯಂತ ದಾಷ್ಟ್ಯದ ಮತ್ತು ದುರಹಂಕಾರದ ಮಾತಾಗಿ ಕಾಣಬಹುದು. ಆನಂದವರ್ಧನ ಮೊದಲಾದವರ ಪಠ್ಯದ ಓದುಗಾರಿಕೆಗೂ ಮೀರಿದ ಮತ್ತೊಂದು ತರಹದ ಓದುಗಾರಿಕೆ ಇರುತ್ತದೆ. ಅದು ದೊರಕಿದ್ದಲ್ಲಿ ಅಪರಭಾರತ, ಉತ್ತರರಾಯಣ ಮೊದಲಾದವುಗಳ ರಚನೆಯ ಅಗತ್ಯ ಕಾಣುತ್ತಿರಲಿಲ್ಲ ಮತ್ತು ಅವುಗಳನ್ನು ಆಯಾ ಕೃತಿಗಳ ಅವಿಭಾಜ್ಯ ಅಂಗ ಎಂದು ಸ್ವೀಕರಿಸುವ ಮನಃಸ್ಥಿತಿ ಹಲವಾರು ಶತಮಾನಗಳ ಕಾಲ ಖಂಡಿತ ನಿರ್ಮಾಣವಾಗುತ್ತಿರಲಿಲ್ಲ. ಅಕ್ಷರ ಸಂಸ್ಕೃತಿ ಒತ್ತಾಯಿಸುವ ಓದುಗಾರಿಕೆಯ ಕಲೆ ದಕ್ಕದೇ ಹೋದುದಕ್ಕೆ ಅದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ದೊರಕುವುದು ಅಸಾಧ್ಯ. ಅದೊಂದು ರೀತಿಯಲ್ಲಿ ವೈಯಕ್ತಿಕ ನೆಲೆಯಲ್ಲಿ ಜರುಗುವ ಓದುಗಾರಿಕೆಯಾಗಿರಬಹುದಾದಂತೆಯೇ, ಸಾಮಾಜಿಕ ಕ್ರಿಯೆಯೂ ಹೌದು.

ಶತಶತಮಾನಗಳಿಂದಲೂ ಬೆಳೆದು ಬಂದಿರುವ ಜಾತೀಯತೆ ಹಾಗೂ ಅಕ್ಷರ ಸಂಸ್ಕೃತಿ ಮೇಲೆ ಕೇವಲ ಬೆರಳೆಣಿಕೆಯ ವರ್ಗದ ಮಂದಿ ಉಳಿಸಿಕೊಂಡು ಬಂದಿದ್ದ ಏಕಸ್ವಾಮ್ಯವನ್ನು ಆ ಎಲ್ಲ ಕಾಯಿಲೆಗಳ ಮೂಲವಾಗಿ ದೂಷಿಸುವುದು ಸರ್ವೇ ಸಾಮಾನ್ಯ. ಅಂತಹ ಜಾತೀಯತೆ ಮುಂದುವರಿದು ಬರಲು ಕಾರಣ ಆಗಿದ್ದಿರಬಹುದಾದ ಕೆಲ ಮೂಲಭೂತ ಅಂಶಗಳು ಸೇರಿದಂತೆ, ಅಕ್ಷರ ಸಂಸ್ಕೃತಿಯ ಲಾಭ ಪಡೆದುಕೊಂಡ ಜನರ ಕೈಯಲ್ಲೂ ಮಾಡಬಹುದಾದ ಸಾಧನೆ ಮಾಡಲಾಗದಿರುವ ಬಗ್ಗೆ ನಿಜವಾದ ಕಾರಣಗಳನ್ನು ಹುಡುಕುವುದು ಅಗತ್ಯ.

ಅನುಭವ, ಅನುಭಾವ ಅಥವಾ ಅಂತರ್ಬೋಧೆ (Intuition) ಆಧಾರಿತ ಸಂಸ್ಕೃತಿ ನಿರ್ಮಾಣದಲ್ಲಿ ಭಾರತೀಯರು ಈ ಜಗತ್ತಿನ ಎಲ್ಲ ಜನರಿಗಿಂತ ಅತ್ಯಂತ ಶ್ರೇಷ್ಠರಾದವರೇ ಆಗಿದ್ದಿರಬಹುದು. ಅದರ ಮುಂದಿನ ಹಂತವಾಗಿ ಮತ್ತು ಜತೆಜತೆಗೂ ಸಾಗುವ ಅಕ್ಷರ ಕಲಿಕೆ ಮತ್ತು ಅಧ್ಯಯನ ಮೂಲವಾದ ನಾಗರಿಕತೆ ನಿರ್ಮಾಣ ಕಲೆ ಜಾರಿಗೆ ಬಂದ ನಂತರ ಅದನ್ನು ಬೆಳೆಸಬೇಕಾದ ರೀತಿಯಲ್ಲಿ ಬೆಳೆಸುವ ಕಡೆಗೆ ನೀಡಬೇಕಾದ ಗಮನ ನೀಡಲಾಗದೆ ಹೋದುದು ಭಾರತದ ದೊಡ್ಡ ದೌರ್ಬಲ್ಯವಾಗಬೇಕಾಯಿತು. ಅಕ್ಷರ ಸಂಸ್ಕೃತಿ ಜಾರಿಗೆ ಬಂದ ನಂತರ ಓದುವ ಕಲೆ ಪಡೆದುಕೊಂಡ ಹಲವಾಗು ಆಯಾಮಗಳನ್ನು ಗಮನಕ್ಕೆ ತಂದುಕೊಳ್ಳದೆ ಹೋದುದರ ಮತ್ತೊಂದು ರೂಪವೇ ಆ ದೌರ್ಬಲ್ಯ. ಹಾಗಾಗಿ ಸ್ಟಿಫನ್‌ ಹಾಕಿನ್‌ ಗುರುತಿಸುವಂತಹ ಓದುಗರ ಸಮೂಹವೊಂದನ್ನು ನಿರ್ಮಿಸುವ ಪ್ರಕ್ರಿಯೆ ಭಾರತದಲ್ಲಿ ಇಂದಿಗೂ ಸಾಕಾರಗೊಂಡಂತೆ ಕಾಣುವುದಿಲ್ಲ.

ಅಂತರ್ಬೋಧೆ ಅಥವಾ ಅನುಭಾವ ಅಥವಾ ಆಧ್ಯಾತ್ಮ ಆಧಾರಿತ ಅರಿವನ್ನು ಅಕ್ಷರ ಸಂಸ್ಕೃತಿಯ ಸಾಮಾನ್ಯ ತಿಳುವಳಿಕೆಯ ಭಾಗವಾಗಿ ಜನಸಾಮಾನ್ಯ ಮಟ್ಟದಲ್ಲಿ ಲೋಕ ತಿಳುವಳಿಕೆಯಾಗಿ, ವೈಧಾನಿಕ ಮತ್ತು ವೈಜ್ಞಾನಿಕ ಶಿಸ್ತಾಗಿ ವಿಸ್ತರಿಸುವ ಕೆಲಸ ಭಾರತದಲ್ಲಿ ನಡೆದ ಉದಾಹರಣೆ ಇಲ್ಲ. ದಾಸರು, ಆಳ್ವಾರರು ಮೊದಲಾದ ಭಕ್ತ ಕವಿಗಳು ಆ ತರಹದ ಪ್ರಯತ್ನಗಳನ್ನು ಕೈಗೊಂಡರಾದರೂ, ಅವರ ಉದ್ದೇಶವು ಅಂತರ್ಬೋಧೆ ಆಧಾರಿತ ತಿಳುವಳಿಕೆಯನ್ನು ಪ್ರಸಾರ ಮಾಡುವುದಾಗಿತ್ತೇ ವಿನಾ, ಅಕ್ಷರ ಪ್ರಜ್ಞೆ ಆಧಾರಿತ ನಾಗರಿಕತೆಯನ್ನು ಅದರ ನಿಜವಾದ ಅರ್ಥದಲ್ಲಿ ಜನಸಾಮಾನ್ಯ ಮಟ್ಟದಲ್ಲಿ ವಿಸ್ತರಿಸುವ ಅಥವಾ ಕಟ್ಟುವ ಪ್ರಯತ್ನವಾಗಿರಲಿಲ್ಲ. ಜತೆಗೆ, ಬ್ರಿಟಿಷರ ಆಗಮನವಾಗುವರೆಗೂ ಭಾರತದಲ್ಲಿ ಚಾಲತಿಯಲ್ಲಿದ್ದ ಮಹತ್ವಾಕಾಂಕ್ಷೆ, ಬದುಕಿನ ಬಗೆಗಿನ ಸಾಧ್ಯತೆಯ ಕಲ್ಪನೆಯ ನಮೂನೆ ಮತ್ತು ಕನಸುಗಳು ಬಹಳ ಸೀಮಿತವಾದುವಾಗಿದ್ದವು. ಉತ್ತಮ ಸಮಾಜ ಆಧಾರಿತ ಬದುಕಿನ ಉನ್ನತಿಯನ್ನು ನಿರ್ಮಿಸುವ ಗುರಿ ಮತ್ತು ಕನಸು ಎಂದೂ ಅವರನ್ನು ವಿಚಲಿತಗೊಳಿಸಿ ಗಾಬರಿ ಉಂಟು ಮಾಡಿದ ಉದಾಹರಣೆ ಇಲ್ಲ. ಅದರ ಮೊದಲ ಆ ಸ್ಫೋಟವೇ ಬಸವಣ್ಣ. ಅವರ ನಂತರ ಏನೂ ಆಗಿಲ್ಲವೆಂಬಂತೆ ಎಲ್ಲ ತಣ್ಣಗಾಯಿತು.

ಮತ್ತೊಂದು ಘಾಟೀ ತೊಡಕಿರುವಂತೆ ಕಾಣುತ್ತದೆ. ದುರಂತಕ್ಕೆ ಮೂಲ ಕಾರಣಗಳ ಪೈಕಿ ಒಂದಾಗಿ ವ್ಯಾಸ ಮತ್ತು ಹೋಮರ್‌ ಹುಡುಕುವ ಪುತ್ರವ್ಯಾಮೋಹ: ಆ ವಿಚಾರದಲ್ಲಿ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದ ಎಂಬುದು ಅದ್ಭುತ ಸಂಕೇತ ಮತ್ತು ಪ್ರತಿಮೆ. ಮಕ್ಕಳ ಮತ್ತು ಸ್ವಜನರ ಅರ್ಹತೆ ಅಥವಾ ಅನರ್ಹತೆ ಇಲ್ಲಿ ಲೆಕ್ಕಕ್ಕೆ ಬರುವುದೇ ಇಲ್ಲ: ಕುಟುಂಬ, ಸಮಾಜ ಅಥವಾ ಸಾಮ್ರಾಜ್ಯದ ಹಿತಾಸಕ್ತಿ ಕಾಪಾಡಿಕೊಂಡು ಅದನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುವ ಯೋಗ್ಯತೆ ಅವರಿಗಿದೆಯೇ ಎಂಬ ಪ್ರಶ್ನೆ ಸಹ ಪರಿಗಣನೆಗೆ ಬಾರದೇ ಹೋಗಿಬಿಡುತ್ತದೆ. ಸ್ವಜನರು ಅನರ್ಹರು ಮತ್ತು ಅಸಮರ್ಥರು ಆಗಿದ್ದಾಗ ಏನು ಮಾಡುವುದು ಎಂಬ ಬಹುಮುಖ್ಯ ಪ್ರಶ್ನೆಯ ಬಗ್ಗೆ ಚಿಂತಿಸಿ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ತೆಗೆದುಕೊಳ್ಳಬಹುದಾದ ಸೂಕ್ತ ಕ್ರಮ ಮತ್ತು ವಿಧಾನಗಳ ಬಗ್ಗೆ ಎಂದಾದರೂ ಭಾರತೀಯರು ಗಮನ ಹರಿಸಿದ್ದಾರೆಯೇ ಎಂಬ ಪ್ರಶ್ನೆ ಉತ್ತರ ಬೇಡುತ್ತದೆ.

ಧೃತರಾಷ್ಟ್ರ ವ್ಯಾಮೋಹ ಮತ್ತು ಕುರುಡು ಪ್ರೀತಿಯಿಂದಾಗಿ ದುರ್ಬಲರು, ಅಸಹಾಯಕರು, ಅಬಲರು, ಅಸಮರ್ಥರು, ಅನರ್ಹರು, ಕೊಂಕರು ಎಂಬ ವ್ಯತ್ಯಾಸಗಳನ್ನು ಅಷ್ಟಾಗಿ ಮಾಡದೆ ಎಲ್ಲರನ್ನೂ ‘ಅವರವರ ಜಾತಿ ಶ್ರೇಣಿಗನುಗುಣ’ ಕಾಪಾಡಿಕೊಂಡು ಹೋಗುವ ವ್ಯವಸ್ಥೆಯನ್ನು ಭಾರತ ಕಂಡುಕೊಂಡಿತು. ಅದು ಪ್ರಕೃತಿಪರವಾದ ಬದುಕಿನ ಭಾರತದ ಮನೋಧರ್ಮದ ಮತ್ತೊಂದು ಮುಖ: ಸ್ಪರ್ಧೆ, ಪೈಪೋಟಿ ಮತ್ತು ಮಹತ್ವಾಕಾಂಕ್ಷೆ ಅಷ್ಟಾಗಿ ಬೇಕಿಲ್ಲದ ಬದುಕಿನ ಇನ್ನೊಂದು ಆಯಾಮ ಹಾಗೂ ರೂಪವೂ ಹೌದು. ಸಾಧಾರಣವಾಗಿ ಯಾರ ಬಗ್ಗೆಯೂ ತಾತ್ಸಾರ ಅಥವಾ ತಾರತಮ್ಯ ತೋರುವುದಿಲ್ಲವಾದ ಅದೆ ಪ್ರಕೃತಿಯು ಡಾರ್ವಿನ್‌ವಾದಿಗಳ ಕೈ ಮೇಲಾದಾಗ ಅವರ ‘ಹುಕುಂ’ಗೆ ಮಣಿಯುವ ಕಾಲ ಬರಬಹುದು ಎಂಬ ಒಳಗುಟ್ಟನ್ನು ಭಾರತದ ಧರ್ಮ ಮುಂದಾಲೋಚಿಸಿದ ಉದಾಹರಣೆ ಇಲ್ಲ. ಏಕೆಂದರೆ, ಪ್ರಕೃತಿಪರವಾದ ಬದುಕಿನ ಮನೋಧರ್ಮ, ಕಾಲದ ಬಗೆಗಿನ ದಿವ್ಯ ನಿರ್ಲಕ್ಷ್ಯ, ಮಹಾಮೈಮರೆವು, ಆಯಾಸ ಅಥವಾ ಕೆಲವರು ಕರೆಯುವ ವಿಸ್ಮೃತಿ ಮತ್ತು ಸ್ಪರ್ಧೆ ಬೇಕಿಲ್ಲದ ಬದುಕಿನ ಮಹಾ ಮಾದರಿಗಳನ್ನು ಹೆಚ್ಚಿನ ತೊಂದರೆ ಇಲ್ಲದೆ ಮುಂದುವರಿಸಿಕೊಂಡು ಹೋಗಲು ಸುತ್ತಮುತ್ತಲ ಎಲ್ಲರೂ ಅದೇ ತರಹದ ಬದುಕನ್ನು ಸ್ವೀಕರಿಸಿದವರೇ ಆಗಿಬೇಕಾಗುತ್ತದೆ: ಇಲ್ಲದೇ ಹೋದಲ್ಲಿ, ಸಮಸ್ಯೆ ಕಟ್ಟಿಟ್ಟದ್ದು; ಭಾರತದ ಸಂದರ್ಭದಲ್ಲಿ ಆದುದು ಅದೇ.

ಈ ಭೂಖಂಡದ ಮೇಲೆ ವಾಸಿಸುವ ಎಲ್ಲ ಜನ ಭಾರತೀಯರು ಮಾತ್ರವಾಗಿರಲಿಲ್ಲ ಎಂಬುದನ್ನು ಆ ದೇಶದ ಜನ ಹೋಗಲಿ, ಅವರು ಕಟ್ಟಿ ಬೆಳೆಸಿದ ಸಂವಹನ ಸಂಸ್ಕೃತಿ ಮತ್ತು ಮಾತುಗಾರಿಕೆಯ ನೈಪುಣ್ಯತೆಯ ಪ್ರತಿನಿಧಿ ಹಾಗೂ ಮುಖಮುದ್ರೆಗಳೂ ಆದ ಕವಿಗಳು, ಕಲಾವಿದರು, ರಾಜಕಾರಣಿಗಳು ಮೊದಲಾದವರು ಸಹ ಕಣ್ಣಿಟ್ಟು ನೋಡಿದ ಉದಾಹರಣೆ ಇಲ್ಲ ವ್ಯಾಸ, ವಾಲ್ಮೀಕಿ, ಕಾಳಿದಾಸ, ಕವಿರಾಜಮಾರ್ಗಕಾರ, ಬಸವಣ್ಣ ಇತ್ಯಾದಿ ಕೆಲವರ ಹೊರತು. ಆ ವ್ಯಾಸರಿಗೆ ದೊರಕಿದ್ದು ‘ಅಪರ ಭಾರತ’ದ ‘ಉತ್ತರ ಕ್ರಿಯೆ’ಯಾದರೆ, ವಾಲ್ಮೀಕಿಗೆ ದೊರಕಿದ್ದು ‘ಉತ್ತರ ರಾಮಾಯಣ’ದ ಮರ್ಯಾದೆ: ಆ ವಿರುದ್ಧ ದನಿ ಎತ್ತಿದ ‘ಬಸವಣ್ಣ’ ಆದರು. ಕವಿರಾಜಮಾರ್ಗಕಾರನ ಮಾತು ಕೇಳಲಿಲ್ಲ.

ಪಂಪ ನಾರಾಣಪ್ಪ ಮೊದಲಾದವರನ್ನು ಈ ಹಂತದಲ್ಲಿ ತಖ್ತೆಗೆ ಒಳಪಡಿಸಿವುದರಿಂದ ಬರುವುದಾದರೂ ಏನು? ಎಂಬ ಪ್ರಶ್ನೆ ಇಷ್ಟೆಲ್ಲ ಆದನಂತರವೂ ಉಳಿದು ಬಿಡಬಹುದು. ಅಂತಹ ಯಾವುದೇ ಪ್ರಯತ್ನಗಳು ಮುಂದಿನ ದಾರಿಗಾಗಿ ನಡೆಸುವ ಹುಡುಕಾಟ ಆಗುವುದರಿಂದ ಅವನ್ನು ಪೂರೈಸದ ಹೊರತು ಬೇರೆ ದಾರಿ ಇಲ್ಲ. ನಡುದುಹೋದ ಆಗುಹೋಗುಗಳ ಅರಿವಿನಿಂದ ಪಡೆಯುವ ಯಾವುದೇ ತಿಳುವಳಿಕೆ ಉತ್ತರೋತ್ತರವಾದುದು ಎಂದು ಮೂಗು ಮುರಿಯುವಂತಿಲ್ಲ… ಏಕೆಂದರೆ ಆ ಯಾವುದೇ ಉತ್ತರೋತ್ತರ ಅರಿವು, ನಾಳೆಗಾಗಿ ಇಂದಿನ ಸಂದರ್ಭದಲ್ಲಿ ಪಡೆದುದೇ ಆಗಿರುತ್ತದೆ; ನಾಳಿನ ಕತ್ತಲಿನ ದಾರಿಯನ್ನು ಕ್ರಮಿಸಲು ಬೇಕಾದ ನೆರವು ಪಡೆಯಲು ಅದಕ್ಕಿಂತಲೂ ಹೆಚ್ಚು ವಿಶ್ವಾಸಾರ್ಹವೂ ಕಾಲಬೆಂಬಲಿತವೂ ಆದ ಮತ್ತೊಂದು ಹೊಸ ಮಾರ್ಗ. ಮಾನವ ಜನಾಂಗಕ್ಕೆ ಈವರೆಗೆ ದೊರೆತಿಲ್ಲ.*

ಹಿಂದಿನವರ ಬಳುವಳಿಯನ್ನು ಮುಂದುವರಿಸಲು ಹೋಗದೆ, ಮುಂದಕ್ಕಾದರೂ ಸರಿಯಾದ ಮಾರ್ಗ ಕಂಡುಕೊಂಡು ನಡೆಯಲು ಸಾಧ್ಯವಾದಲ್ಲಿ ಆ ಕಾರಣವೇ ಅದಕ್ಕಿಂತಲೂ ದೊಡ್ಡ ಕೊಡುಗೆ ಮತ್ತೊಂದಿರಲು ಸಾಧ್ಯವಿಲ್ಲ.

 

*ಈ ಮಾತು ಬ್ರಿಟಿಷ್ ಲೇಖಕನೊಬ್ಬನ ಮಾತಿನ ಪ್ರತಿಫಲನ ಆಗಿರಬಹುದು.