ಗ್ರಂಥಋಣ ಅಥವಾ ಆಕರ ಗ್ರಂಥಗಳ ಪಟ್ಟಿಯನ್ನು ಕೊನೆಯಲ್ಲಿ ನೀಡುವುದು ವಾಡಿಕೆ ಮತ್ತು ಸಂಪ್ರದಾಯ. ಆದರೆ ಸಾವಿರಾರು ವರ್ಷಗಳ ಸಾವಿರಾರು ಮನಸ್ಸುಗಳ ಬೋಧನೆಯ ಫಲವಾದ ಕೃತಿಯೊಂದರ ಋಣವನ್ನು ಲೋಪ ಎಸಗದ ರೀತಿಯಲ್ಲಿ ಸಲ್ಲಿಸುವುದಾದರೂ ಹೇಗೆ? ರಚನೆ ಕಾಲದಲ್ಲಿ ಓದಲಾದ ಕೃತಿಗಳು ಮತ್ತು ಅವುಗಳ ಕರ್ತೃಗಳ ಎಲ್ಲ ಹೆಸರುಗಳನ್ನು ನಮೂದಿಸುವುದಾದಲ್ಲಿ ಅದೇ ಒಂದು ದೊಡ್ಡ ಅಧ್ಯಾಯವಾಗಿ ಬಿಡುವ ಸಂಭವ ಇಲ್ಲದಿಲ್ಲ: ಅಲ್ಲಲ್ಲಿ ಉದಾಹರಿಸಲಾಗಿರುವ ಕೆಲ ಪ್ರಮುಖ ಕೃತಿಗಳ ಪಟ್ಟಿ ನೀಡುವುದರ ಮೂಲಕ ಆ ಇಕ್ಕಟ್ಟಿನ ಸನ್ನಿವೇಶದಿಂದ ಪಾರಾಗುವ ‘ಜಾಣತನ’ ಪ್ರದರ್ಶಿಸಬಹುದಾದರೂ, ಚಿಂತನೆ ಮತ್ತು ಮಂಡನ ಕ್ರಮ ರೂಪುಗೊಳ್ಳುವ ಸಂದರ್ಭದಲ್ಲಿ ಕಿಂಚಿತ್‌ ಪ್ರಮಾಣದಲ್ಲಿಯಾದರೂ ಬೆಳಕು ನೀಡಿದವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದಂತಾಗುವುದಿಲ್ಲ ಎಂಬ ನೋವು ಉಳಿಯುತ್ತದೆ.

ಇಂಗ್ಲಿಷಿನಲ್ಲಿ ಲಭ್ಯವಿರುವ ಹೋಮರನ[1] ಅನುವಾದಗಳ ಪಟ್ಟಿಯನ್ನು ಅವುಗಳ ಓದಿಗೆ ಸಾಕ್ಷಿಯಾಗಿ ವರ್ಷಾನುಕ್ರಮದಲ್ಲಿ ನೀಡುವುದು ಒಂದು ವಿಧಾನ. ಅದೇ ರೀತಿ ಹೋಮರ್‌ ಮತ್ತು ಆತನ ಕಾಲದ ಬಗ್ಗೆ ಬಂದಿರುವ ಮಹತ್ವದ ಕೃತಿಗಳ ಪರಿಚಯವಿಲ್ಲದೆ ಆ ಓದು ಅಸಮಗ್ರ ಎಂಬ ಭಾವನೆಯಿಂದ ಅವುಗಳನ್ನು ಗ್ರಂಥಋಣದ ಪಟ್ಟಿಯಲ್ಲಿ ಸೇರಿಸುವುದು ಅಷ್ಟೇ ಸಹಜವಾಗಿ ಹೋಗಿದೆ. ಆದರೆ ಹೋಮರನನ್ನು ಓದುವುದೆಂದರೆ ಆತ ರಚಿಸಿ ಹಾಡಿದ್ದಾನೆ ಎನ್ನಲಾದ ಎರಡು ಎಪಿಕ್‌ಗಳು ಮತ್ತು ಆ ಸುತ್ತಮುತ್ತ ಬಂದಿರುವ ಬಹುತೇಕ ಕೃತಿಗಳನ್ನು ಓದುವುದು ಎಂದು ಮಾತ್ರ ಅರ್ಥವಲ್ಲ; ಆತ ಬಂದ ಕಾಲದ ಜತೆಗೆ ಗ್ರೀಕ್‌ ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾದ ಹೋಮರ್‌ ಮತ್ತು ಆ ಹೋಮರನನ್ನು ನೀಡಿದ ಗ್ರೀಕ್‌ ಸಮಾಜ ಹಾಗೂ ಅವುಗಳನ್ನು ಒಳಗೊಂಡ ಮಾನವ ಜನಾಂಗ ಮತ್ತು ವಿಶ್ವ ಸಂಸ್ಕೃತಿಯ ಅಳಿಯದ ಆಯಾಮಗಳನ್ನು ಅರಿಯಬೇಕಾಗುತ್ತದೆ. ಆ ಮಾತು ವ್ಯಾಸ, ವಾಲ್ಮೀಕಿ, ವರ್ಜಿಲ್‌, ಕಾಳಿದಾಸ, ಬಸವಣ್ಣ ಮೊದಲಾದವರಿಗೂ ಅನ್ವಯಿಸುತ್ತದೆ ಅನ್ವಯವಾಗುವ ಪ್ರಮಾಣದಲ್ಲಿ ಅಂತರ ಇರಬಹುದು.

ಗ್ರಂಥಋಣ ನೀಡುವಾಗಲು ಓದಿನ ಕ್ರಮದ ಜಾಡಿಗನುಗುಣವಾಗಿಯೇ ಸಾಗುವುದು ಅನಿವಾರ್ಯವಾಗಿಬಿಡುತ್ತದೆ. ಪುಸ್ತಕಗಳ ಪಟ್ಟಿ ಮಾಡುವುದರಿಂದ ವಿದ್ವತ್‌ ಅಥವಾ ಪಾಂಡಿತ್ಯ ಪ್ರದರ್ಶನ ಆಗಬಹುದೋ ಏನೋ! ಆದರೆ ಇಲ್ಲಿನ ಉದ್ದೇಶ ಬೇರೆ ಬಗೆಯದು.

ಅಕ್ಷರ ಸಂಸ್ಕೃತಿಯ ಆರಂಭದೊಂದಿಗೆ ಎಪಿಕ್‌ಗಳ ರಚನೆಯ ಕಾಲ ತನ್ನ ದಿಕ್ಕು ಬದಲಿಸಿತು ಎಂಬ ಇಲ್ಲಿನ ತಿಳುವಳಿಕೆ ಹೆಚ್ಚು ಯತಾರ್ಥವು ಮತ್ತು ವೈಜ್ಞಾನಿಕವೂ ಆಗಿರುವಂತೆ ತೋರುತ್ತದೆ. ಆ ಅರ್ಥದಲ್ಲಿ ಈ ಜಗತ್ತು ಕಂಡಿರುವ ನಾಲ್ಕು ಎಪಿಕ್‌ಗಳ ಪೈಕಿ – ಇಲಿಯಡ್‌ – ಒಡಿಸ್ಸಿ, ಮಹಭಾರತ ಮತ್ತು ರಾಮಾಯಣ – ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಂಡ ಮಹಾಭಾರತ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿಕೊಂಡಿತು. ಉಳಿಯುವುದು, ಆ ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿರಬಹುದಾದ ರಾಮಾಯಣ. ಹಾಗಾಗಿ ಎಪಿಕ್‌ ಮಾದರಿಗಳನ್ನು ಕಾಣಲು ಗ್ರೀಕ್‌ನ ಹೋಮರನಿಗೆ ಶರಣು ಹೋಗಬೇಕು – ಅಂದರೆ ವಸ್ತುಸ್ಥಿತಿಗೆ ಹತ್ತಿರವಾಗಿ ಇಂದಿಗೂ ಉಳಿದು ಬಂದಿರುವ ಎಪಿಕ್‌ಗಳು. ಅಂತಹ ಪರಂಪರೆ ಪಡೆದೂ ಭಿನ್ನ ಜಾಡು ಹಿಡಿದ ಮತ್ತೊಂದು [ಏಕೈಕ] ಸಂಸ್ಕೃತಿಯಾದ ಭಾರತದ ವಿಭಿನ್ನ ಹಾದಿಯ ಕತೆ, ಅಲ್ಲಿಂದಲೇ ಪ್ರಾರಂಭಗೊಂಡಿರಬೇಕು.

ಆ ತರಹದ ಗೊಂದಲ ಮತ್ತು ತೊಡಕುಗಳ ನಡುವೆಯೂ ಆ ನಾಲ್ಕು ಕೃತಿಗಳನ್ನು ಬಹಳ ವಿಶಾಲ ಅರ್ಥದಲ್ಲಿ ಎಪಿಕ್‌ಗಳು ಎಂದು ಪರಿಗಣಿಸಬಹುದಾಗಿದೆ: ಎರಡು ಗ್ರೀಕ್‌ ಮಾದರಿಯಾರೆ: ಮತ್ತೆರಡು ಭಾರತದ ಮಾದರಿಗಳು. ಸಾಮಾನ್ಯ ಅರ್ಥದಲ್ಲಿ ಅವು ಕಾವ್ಯಗಳಾದರೂ, ನಿರ್ದಿಷ್ಟ ಅರ್ಥದಲ್ಲಿ ‘ಕಾವಯ’ಗಳಲ್ಲ. ಮಹಾಕಾವ್ಯ ಎಂಬ ಪದಕ್ಕೆ ಸಂವಾದಿಯಾಗಿ ಎಪಿಲಿಯೊನ್‌ (Epyllion) ಎಂಬ ಪರಿಭಾಷಿಕವನ್ನು ಯೂರೋಪ್‌ ಮೂಲದ ವಿದ್ವಾಂಸರು ಬಳಸುವ ವಿಚಾರ ಭಾರತೀಯರ ಗಮನವನ್ನು ಅಷ್ಟಾಗಿ ಸೆಳೆದಂತೆ ಕಾಣುವುದಿಲ್ಲ. ಪೊಯಟ್ರಿ ಎಂಬ ಮಾತಿನ ತರಹವೆ ಸಾಮಾನ್ಯ ಪದವಾದ ಕಾವ್ಯವು, ಕಾವ್ಯ ಪ್ರಕಾರವೊಂದನ್ನು ಖಚಿತ ಮತ್ತು ನಿರ್ದಿಷ್ಟವಾಗಿ ನಿರ್ದೇಶಿಸುತ್ತದೆ ಎಂಬುದಾಗಿ ಭಾವಿಸಲು ಬರುವುದಿಲ್ಲ. ಹಾಗಾಗಿ ಇಲ್ಲಿನ ಅನುಗಮನ ಆ ಎಪಿಕ್‌ ಪರಂಪರೆಗೆ ಸಂಕ್ರಮಣ ಕಾಲದಲ್ಲಿ ಮಹತ್ವದ ತಿರುವು ನೀಡಿದ ವರ್ಜಿಲನಿಂದ ಮೊದಲಾಗುತ್ತದೆ ಹೋಮರನ ರೀತಿ ಎಪಿಕ್‌ ಬರೆಯಲು ಸಾಧ್ಯವಿಲ್ಲ ಎಂಬ ಸರಳ ಸಂಗತಿಯನ್ನು ಕಂಡುಕೊಂಡ ಕವಿಯಿಂದ.

ಮಾನವ ಜನಾಂಗದ ಚರಿತ್ರೆ ಮತ್ತು ಕಾಲದ ನಡಿಗೆ, ಮಹತ್ವದ ತಿರುವು ಪಡೆದುಕೊಂಡುದು ಆ ಪರ್ವಕಾಲದಲ್ಲಿಯೇ ಎಂಬ ಮತ್ತೊಂದು ಇಲ್ಲಿನ ಗ್ರಹಿಕೆ ವಸ್ತುಸ್ಥಿತಿಗೆ ಹೆಚ್ಚು ಹತ್ತಿರವಾದುದಾಗಿರಬಹುದು; ಏಕೆಂದರೆ, ಕ್ರಿಸ್ತನ ಆಗಮನ ಸಹ ಆ ಸಂಧಿಕಾಲದಲ್ಲಿಯಾದಂತೆ, ಆಗಸ್ಟಸ್‌ ಸೀಸರನ ಕಾಲವೂ ಅದೇ ಆಗಿತ್ತು. ಅಲಿಖಿತ ಎಪಿಕ್‌ ಪರಂಪರೆಯಿಂದ ಬಿಡಿಸಿಕೊಂಡು ಲಿಖಿತ – ಎಪಿಕ್‌ ಮಾದರಿಯ ಕಾವ್ಯ ಪ್ರಕಾರವೊಂದಕ್ಕೆ ನಾಂದಿ ಹಾಡಿದ ಕವಿ ವರ್ಜಿಲ್‌ ಆದರೆ, ಸಡಿಲವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳಿಂದ ಪಡೆಯಬಹುದುದನ್ನು ಪಡೆದು ಹೆಚ್ಚು ಸಂಘಟಿತ ರೂಪದ ನೂತನ ರಿಲಿಜನ್‌ ಒಂದರ ಆಗಮನಕ್ಕೆ ಬೇಕಾದ ಪೂರಕ ಶಕ್ತಿಯಾಗಿ ಒದಗಿಬಂದ ಮಹಾನ್‌ ಚೇತನವೇ ಕ್ರಿಸ್ತ, ಗ್ರೀಕರ ‘ನಗರರಾಜ್ಯ’ ಮತ್ತು ಪರ್ಷಿಯನ್ನರ ‘ಸಾಮ್ರಾಜ್ಯ’ ಆಕಾಂಕ್ಷೆಯ ಮುಂದಿನ ಹಂತವಾದ ‘ಜಗತ್ತಿಗೆಲ್ಲ ಒಂದೇ ಸಾಮ್ರಾಜ್ಯ’ ಎಂಬ ಸಾಮ್ರಾಜ್ಯಷಾಹಿ ಪ್ರಯೋಗ ಒಂದು ಖಚಿತ ರೂಪ ಪಡೆದುಕೊಂಡುದು ಸಹ ಅದೇ ಕಾಲದಲ್ಲಿ. ಮಾನವ ಜನಾಂಗ, ಪ್ರಕೃತಿ, ಪರಿಸರ ಮತ್ತು ವಿಶ್ವದ ಮೇಲೆ ಆ ಸಂಕ್ರಮಣ ಕಾಲ ಮಾಡಿದ ಹಾಗೂ ಮಾಡುತ್ತಿರುವ ಪರಿಣಾಮ – ಪ್ರಭಾವದ ಸೆಣಸಾಟದ ಮಹತ್ವ ಗುರುತಿಸುವುದರೊಂದಿಗೆ ಮುಂದಿನ ಬೆಳವಣಿಗೆಯ ಆತಂಕಭರಿತ ತರಗಳನ್ನು ಹಿಂದಿನದರ ಆಧಾರದ ಮೇಲೆ ಅರಿಯುವ ಯತ್ನ ಇಲ್ಲಿನದು.

ಅದನ್ನು ಸಾಧಿಸಲು ಗ್ರೀಕ್‌, ಸಂಸ್ಕೃತ, ಲ್ಯಾಟಿನ್‌ ಮತ್ತು ಕನ್ನಡ ಮಾದರಿಗಳನ್ನು ಕೃತಿಗಳನ್ನಾಗಿ ಸ್ವೀಕರಿಸಲಾಗಿದೆ.

ಗ್ರೀಕ್‌ ಮತ್ತು ಲ್ಯಾಟಿನ್‌ ಕಾವ್ಯ ಪರಂಪರೆ ಇಂದಿನವರೆಗೂ ಮುಂದುವರಿದು ಬಂದಿರುವ ಸಾಹಿತ್ಯ ಪರಂಪರೆ ಮತ್ತು ಮನಸ್ಸುಗಳಿಗೆ ಮಾದರಿಯಾದರೆ, ಒಂದಲ್ಲ ಒಂದು ಕಾರಣ ಮುಂದುವರಿಯದೇ ಹೋದ ಅಥವಾ ತ್ರುಟಿತಗೊಂಡ ಎಪಿಕ್‌ ಪರಂಪರೆ ಮತ್ತು ಮನಸ್ಸಿನ ಮಾದರಿಯಾಗಿ ಸಂಸ್ಕೃತ ನಿಲ್ಲುತ್ತದೆ : ಪೊರೆ ಬಿಡುವ ಸಂಸ್ಕೃತಿ ಮತ್ತು ನಾಗರಿಕತೆಗಳ ಮಾದರಿಯಾಗಿಯೂ ಅದನ್ನು ಸ್ವೀಕರಿಸಬಹುದಾಗಿದೆ. ಭಾರತದ ಜನರಾಡುವ ಭಾಷೆಗಳಿಗೆ ಮಾದರಿಯಾಗಿ ಕನ್ನಡವನ್ನು ಒಪ್ಪಿಕೊಳ್ಳಲಾಗಿದೆ: ಅದಕ್ಕಿರುವ ಎರಡು ಅಥವಾ ಮೂರು ಶಿಷ್ಟ ಗುಣಗಳು ಭಾರತದ ವೈಶಿಷ್ಟ್ಯವನ್ನು ಅತ್ಯಂತ ಸಮರ್ಪಕವಾಗಿ ಪ್ರತಿನಿಧಿಸಬಲ್ಲವುದಗಿಬಂದ ಅವಕಾಶ ಸ್ವಲ್ಪದರಲ್ಲಿ ಕಳೆದುಹೋಗುವ ರೀತಿಗೆ ಅಥವಾ ಆ ಅವಕಾಶ ಅದರಲ್ಲ ಸಾಧ್ಯತೆಗಳೊಡನೆ ಬಾರದೇ ಹೋಗುವುದಕ್ಕೆ, ಕನ್ನಡಕ್ಕಿಂತ ಉತ್ತಮ ಉದಾಹರಣೆಯಾಗುವುದು ಕಷ್ಟಸಾಧ್ಯ. ತನ್ನ ಆ ‘ಗುಣ’ದಿಂದಾಗಿ ಚೀನಾ ಮತ್ತು ಜಪಾನ್‌ ಹೊರತು ಜಗತ್ತಿನ ಇತರ ಭಾಗದ ಜನರಾಡುವ ಭಾಷೆಯನ್ನು ಪ್ರತಿನಿಧಿಸುವ ದೊಡ್ಡತನ ಕನ್ನಡಕ್ಕಿದೆ ಎಂದು ಕೃತಿ ಪರಿಭಾವಿಸುತ್ತಿದೆ.

ಅಂತಹ ಕನ್ನಡವನ್ನು ಮಾದರಿಯಾಗಿ ಸ್ವೀಕರಿಸಲು ನಿಕಟತೆ, ಸಾಮೀಪ್ಯ ಮತ್ತೆ ಮನೆ ಬಳಕೆ ಕೂಡ ಕಾರಣ.

ಕಾವ್ಯ ಜಗತ್ತಿನ ಕತೆ ಹೇಳುತ್ತಲೇ ಮಾನವ ಜನಾಂಗದ ಸಂಸ್ಕೃತಿ ಮತ್ತು ನಾಗರಿಕತೆಯ ವಿಕಾಸ ಅಥವಾ ಬೆಳವಣಿಗೆಯ ನಡಿಗೆಯನ್ನು ಅರಿಯುವ ಪ್ರಯತ್ನ ಇದಾಗಿರುವುದರಿಂದ ಮೆಸಪೊಟೊಮಿಯೊ, ಈಜಿಪ್ಟ್‌, ಗ್ರೀಕ್‌, ಪರ್ಷಿಯ, ಭಾರತ, ಚೀನಾ, ಮಾಯ ಮತ್ತು ಇಂಕಾ ಹಾಗೂ ಪಶ್ಚಿಮ ಜಗತ್ತಿನ ಸಂಸ್ಕೃತಿಯ ನಾಗರಿಕತೆಗಳ ಕತೆ ಇಲ್ಲಿಗೆ ಬೇಕಾದಷ್ಟು ಪ್ರಮಾಣದಲ್ಲಿ ಬರುತ್ತದೆ. ಆದರೆ ಈಜಿಪ್ಟ್‌, ಪರ್ಷಿಯ, ಚೀನಾ, ಜಪಾನ್‌, ಇಂಕ ಮತ್ತು ಮಾಯ ಸಂಸ್ಕೃತಿ ಮತ್ತು ನಾಗರಿಕತೆಗಳು ಎಪಿಕ್‌ ಪರಂಪರೆಯನ್ನು ಪೋಷಿಸಿದ ಉದಾಹರಣೆ ಇಲ್ಲ. ಆ ಕಾರಣವೇ ‘ಹಹನಾಮ’ ಬರೆದ ಫಿರ್ದೂಸಿಯಂತಹ ಅನೇಕ ಕವಿಗಳು ಪರಿಗಣನೆಗೆ ಬರಬೇಕಾದ ಪ್ರಮಾಣದಲ್ಲಿ ಬರಲು ಸಾಧ್ಯವಾಗದೆ ಹೋಗಲು ಕಾರಣವಾದ ಹಿನ್ನೆಲೆಯನ್ನು ಗ್ರಹಿಸಲು ಬರುವ ರೀತಿಯಲ್ಲಿ ಇಲ್ಲಿನ ಚೌಕಟ್ಟು ರೂಪುಗೊಂಡಿದೆ. ಜತೆಗೆ, ಗ್ರಿಕ್‌ ಮತ್ತು ಲ್ಯಾಟಿನ್‌ ಪರಂಪರೆಯನ್ನು ಮಾದರಿಯಾಗಿ ಸ್ವೀಕರಿಸುವುದು ಎಂದರೆ: ಅವುಗಳ ಮುಂದಿನ ಬೆಳವಣಿಗೆಯಾದ ಇಟಾಲಿಯನ್‌, ಫ್ರೆಂಚ್‌, ಇಂಗ್ಲಿಷ್‌, ಜರ್ಮನ್‌, ಪೋರ್ಚುಗೀಸ್‌, ಸ್ಪ್ಯಾನಿಷ್‌, ರಷ್ಯನ್‌ ಪರಂಪರೆಗಳನ್ನು ಮಾದರಿಯಾಗಿ ಒಪ್ಪಿಕೊಳ್ಳುವುದು ಎಂದೇ ಅರ್ಥ.

ಹಾಗಾಗಿ ಇಲ್ಲಿ ಎರಡು ರೀತಿಯ ವಿವೇಚನೆ ಕಾರ್ಯಗತವಾಗುವುದು ಅನಿವಾರ್ಯವಾಗಿಬಿಡುತ್ತದೆ. ಮಾದರಿಯಾಗಿ ಸ್ವೀಕರಿಸಿರುವ ಗ್ರೀಕ್‌, ಸಂಸ್ಕೃತ, ಲ್ಯಾಟಿನ್‌, ಕನ್ನಡ, ಇಟಾಲಿಯನ್‌, ಇಂಗ್ಲಿಷ್‌ ಮತ್ತು ರಷ್ಯನ್‌ ಸಾಹಿತ್ಯ ಪರಂಪರೆಯ ಪ್ರಮುಖರನ್ನು ಮಾನದಂಡವಾಗಿ ಗುರುತಿಸಿಕೊಂಡು ಅವರಲ್ಲಿನ ವ್ಯತ್ಯಾಸಗಳನ್ನು ಗಮನಿಸುತ್ತಲೇ ಮಾದರಿಯಾಗುವ ಅವಕಾಶಗಳನ್ನು ಕಳೆದುಕೊಂಡವರ ಕತೆಯನ್ನು ಹೇಳುವುದು. ಅದೇ ವಿಧಾನವನ್ನು ಭಾರತದ ಭಾಷೆಗಳ ಸಾಹಿತ್ಯ ಪರಂಪರೆಯ ಅಧ್ಯಯನದ ಸಂದರ್ಭದಲ್ಲಿಯೂ ಅನುಸರಿಸಲಾಗಿದೆ. ಆ ಕಾರಣವೇ ಚೌಕಟ್ಟನ್ನು ರೂಪಿಸಿ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಿದವರನ್ನು ಬಹಳ ಎಚ್ಚರಿಕೆಯಿಂದ ಆಪ್ತವಾಗಿ ಗಮನಿಸಬೇಕಾಗಿ ಬಂದಂತೆಯೇ ಅದರಿಂದ ದೂರ ಉಳಿದವರನ್ನೂ ಸಹ.

ಮೂಲಭಾಷೆಯ ನಿಕಟ ಪರಿಚಯವಿದ್ದಾಗ ಮಾತ್ರ ಆ ರೀತಿಯ ಅಧ್ಯಯನ ಸಾಧ್ಯ ಎಂಬ ‘ಒಪ್ಪಿತ ನಿಲುವು’ ಅಪೇಕ್ಷಣೀಯವಾಗಿ ಕಂಡರೂ, ಮೀರಲಾಗದ ನಿರ್ಬಂಧವಾಗಿ ಉಳಿಯದ ರೀತಿಯಲ್ಲಿ ಇಲ್ಲಿನ ಚೌಕಟ್ಟು ಮತ್ತು ವ್ಯಾಪ್ತಿ ರೂಪುಗೊಂಡಿದೆ: ಅಂದರೆ ಅನುವಾದದಲ್ಲೂ ಉಳಿಯುವ ಪ್ರಮುಖ ಗುಣಲಕ್ಷಣಗಳೇ ಇಲ್ಲಿ ರೂಪುಗೊಂಡಿದೆ: ಅಂದರೆ ಅನುವಾದದಲ್ಲೂ ಉಳಿಯುವ ಪ್ರಮುಖ ಗುಣಲಕ್ಷಣಗಳೇ ಇಲ್ಲಿ ಪ್ರಧಾನವಾಗಿ ಗಣನೆಗೆ ಬರುವುದು ಭಾಷಾ ನಿಕಟತೆ ಇರಬೇಕೆಂಬ ನಿರೀಕ್ಷೆಯ ಪ್ರಮಾಣವನ್ನು ನಿರಪೇಕ್ಷಗೊಳಿಸುವುದಿಲ್ಲವಾದರೂ, ಕಡಿಮೆ ಮಾಡುತ್ತದೆ. ಹಾಗಾಗಿ ಅಭಿವ್ಯಕ್ತಿ ಕಾಲದಲ್ಲಿ ಭಾಷೆ ವಹಿಸುವ ಸೂಕ್ಷತೆಗೂ ಮೀರಿದ ಕೆಲ ಗಂಭೀರ ಸಂಗತಿಗಳು ಇಲ್ಲಿ ಪ್ರಧಾನವಾಗಿ ಬಿಡುತ್ತವೆ. ಭಾಷೆ ವಹಿಸುವ ಸೂಕ್ಷ್ಮ ಪಾತ್ರವನ್ನು ನಿರ್ಲಕ್ಷಿಸಲಾಗಿದೆ ಎಂಬುದು ಆ ಮಾತಿನ ಅರ್ಥವಲ್ಲ ಬೇಕಾದ ಪ್ರಮಾಣದಲ್ಲಿ ಪರಿಗಣನೆಗೆ ಬಂದೇ ಬರುತ್ತದೆ.

ಗ್ರೀಕ್‌ನ ಹೋಮರ್‌, ಅಯ್‌ಸ್ಖುಲೋಸ್‌, ಸೊಫೊಕ್ಲೆಸ್‌, ಯೂರಿಪಿದೇಸ್‌ ಮತ್ತು ಅರಿಸ್ತೋಫನೇಸ್‌, ಲ್ಯಾಟಿನ್ನಿನ ವರ್ಜಿಲ್, ಹೊರೇಸ್‌ ಮತ್ತು ಒವಿಡ್‌, ಇಟಲಿಯದಂತೆ, ಫ್ರೆಂಚ್‌ನ ಮೊಲಿಯೆರ್‌, ರಾಸಿನೆ, ವಿಕ್ಟರ್‌ ಹ್ಯೂಗೊ, ಸ್ಟೆಂಡಾಲ್‌, ಬಾಲ್ಜಾಕ್‌, ಪ್ಲಾಬೋ, ಎಮಿಲಿ ಜೋಲಾ, ಕಮು ಮತ್ತು ಸಾತ್ರೆ, ಇಂಗ್ಲಿಷಿನ ಛಾಸರ್‌, ಷೇಕ್ಸಪಿಯರ್‌, ಮಿಲ್ಟನ್‌, ಚಾರ್ಲ್ಸ್‌ ಡಿಕನ್ಸ್‌, ಜಾರ್ಜ್‌ ಎಲಿಯಟ್‌, ಹೆನ್ರಿ ಜೇಮ್ಸ್‌, ಜೇಮ್ಸ್‌ ಜಾಯ್ಸ್‌, ಯೇಟ್ಸ್‌, ಎಲಿಯಟ್‌, ಸಿಂಗ್‌, ರ್ಬರ್ನಾಡ್‌ ಷಾ, ಡಿ.ಎಚ್‌.ಲಾರೆನ್ಸ್‌, ಜೋಸೆಫ್‌ ಕಾನ್ರಾಡ್‌, ಥಾಮಸ್‌ ಹಾರ್ಡಿ, ಹೆಮಿಂಗ್ವೆ ಮತ್ತು ಮಾರ್ಕ್‌ಟ್ವೇನ್‌, ಜರ್ಮನಿಯ ಗಯಟೆ, ರಿಲ್ಕ್‌, ಕಾಫ್ಕ್‌, ಥಾಮಸ್‌ಮನ್‌, ಹರ್ಮನ್‌ ಹೆಸ್‌, ಗುಂಟರ್‌ಗ್ರಾಸ್‌ ಮತ್ತು ಬ್ರೆಕ್ಟ್‌, ರಷ್ಯಾದ ಪುಷ್ಕಿನ್‌, ಗೊಗೋಲ್‌, ಚೆಕಾಫ್‌, ತರ್ಜಿನೋವ್‌, ದಾಸ್ತೋವಸ್ಕಿ, ಟಾಲ್ಸ್‌ಸ್ಟಾಯ್‌, ಪಾಸ್ತರ್‌ಖಾನ್‌ ಮತ್ತು ಮಿಖಾಯಿಲ್‌ ಶೊಲೊಖೋವ್‌, ನಾವ್ರೆಯ ಹೆನ್ರಿಕ್‌ ಇಬ್ಸನ್‌, ಸ್ವೀಡನ್ನಿನ ಸ್ಟ್ರಂಡ್‌ಬರ್ಗ್‌, ಸ್ಪೇನ್‌ನ ಸರ್ವಾಂಟೀಸ್‌ ಮತ್ತು ಸ್ಪಾನಿಷ್‌ ಭಾಷೆಯಲ್ಲಿ ಬರೆಯುವ ಲ್ಯಾಟಿನ್ ಅಮೆರಿಕದ ಪಾಬ್ಲೋ ನೆರೂದ, ಮಾರ್ಕೆಜ್‌ ಮತ್ತು ಆಕ್ಟೇವಿಯೊ ಪಾಜ್‌ ಹಾಗೂ ಜೆಕ್‌ನ ಮಿಲನ್‌ ಕುಂದೆರಾ ಮೊದಲಾದವರನ್ನು ಅವರು ಪ್ರತಿನಿಧಿಸುವ ಭಾಷೆಗಳ ಜತೆಗೆ ಮಾದರಿಯಾಗಿ ಸ್ವೀಕರಿಸಲಾಗಿದೆ.

ಹೋಮರನ ಬಗ್ಗೆ ಈ ಮೊದಲು ಬರೆದ ಮಾತು ಇವರೆಲ್ಲರಿಗೂ ಅವರದೇ ಆದ ರೀತಿಯಲ್ಲಿ ಅನ್ವಯವಾಗುತ್ತದೆ ಎಂಬುದನ್ನು ಮತ್ತೆ ನೆನಪಿಸಬೇಕಾದ ಅಗತ್ಯವಿಲ್ಲ.

ಸುಕ್ತಂಕರ್‌ ನೇತೃತ್ವದಲ್ಲಿ ಹೊರತರಲಾಗಿರುವ ಮಹಾಭಾರತದ ಸಂಪುಟಗಳನ್ನು ಅಧ್ಯಯನದ ವ್ಯಾಪ್ತಿಗೆ ತಂದುಕೊಳ್ಳಲಾಗಿದೆಯಾದರೂ ಹೆಚ್ಚಾಗಿ ಅವಲಂಬಿಸಿರುವದು ಎ. ಆರ್‌. ಕೃಷ್ಣಶಾಸ್ತ್ರೀಗಳ ‘ವಚನ ಭಾರತ’ವನ್ನು. ಪೂರಕವಾಗಿ ಮಾತ್ರ ಸುಕ್ತಂಕರ್‌ ಆವೃತ್ತಿಯನ್ನು ಅನುಸರಿಸಲಾಗಿದೆ. ರಾಮಾಯಣದ ವಿಚಾರದಲ್ಲಿ, ಪಂಡಿತ ಕೆ. ಚಿನ್ನಸ್ವಾಮಿ ಶಾಸ್ತ್ರಿಗಳ್‌ ಮತ್ತು ವಿ. ಎಚ್‌. ಸುಬ್ರಮಣ್ಯಶಾಸ್ತ್ರಿ ಸಂಪಾದಿಸಿ ಮದ್ರಾಸಿನಿಂದ ಪ್ರಕಟಿಸಲಾಗಿರುವ ಎರಡನೇ ಆವೃತ್ತಿಯನ್ನು ಗಮನಿಸಲಾಗಿದೆ. ಆ ಜತೆಗೆ ಬರೋಡದ ಓರಿಯಂಟಲ್‌ ಇನ್‌ಸ್ಟಿಟ್ಯೂಟ್‌ನವರು ೧೯೬೦ರ ಸುಮಾರಿನಲ್ಲಿ ಪ್ರಕಟಿಸಿರುವ ‘ಕ್ರಿಟಿಕಲ್‌’ ಆವೃತ್ತಿಯನ್ನು ಗಮನಿಸಲಾಗಿದೆಯಾದರೂ ಮೂಲವನ್ನು ಕನ್ನಡ ಲಿಪಿಯಲ್ಲಿ ನೀಡಿ ಪಕ್ಕದಲ್ಲಿಯೇ ಗದ್ಯಾನುವಾದವನ್ನು ಒದಗಿಸಿರುವ ವಿದ್ವಾನ್‌ ಎನ್‌ ರಂಗನಾಥ ಶರ್ಮ ಅವರ ಸಂಪುಟಗಳಿಂದ ಮಾತ್ರ ಬೇಕಾದ ಭಾಗವನ್ನು ಉಲ್ಲೇಖಿಸಲಾಗಿದೆ. ಸಂಪಾದನಾ ಮತ್ತು ಅನುವಾದ ಕಾರ್ಯ ಅಲ್ಲಲ್ಲಿ ಎಡವಿರುವಂತೆ ತೋರುತ್ತದೆಯಾದರೂ ಆ ಕುರಿತ ಯಾವುದೇ ಚರ್ಚೆ ಇಲ್ಲಿನ ವ್ಯಾಪ್ತಿಗೆ ಮೀರಿದ್ದು.

ಉಳಿದಂತೆ ಅಧ್ಯಯನ ವ್ಯಾಪ್ತಿಗೆ ಬರುವ ಸಂಸ್ಕೃತದ ಏಕೈಕ ಕವಿ, ಕಾಳಿದಾಸ, ಎಸ್‌. ವಿ. ಪರಮೇಶ್ವರ ಭಟ್ಟರ ಕನ್ನಡ ಕಾಳಿದಾಸ. ಎಸ್‌. ವಿ. ಪರಮೇಶ್ವರ ಭಟ್ಟರ ಕನ್ನಡ ಕಾಳಿದಾಸ ಮಹಾಸಂಪುಟವನ್ನು ಅನುಸರಿಸಲಾಗಿದೆ. ಭಾಸ, ಅಶ್ವಘೋಷ ಮೊದಲಾದವರ ಅಧ್ಯಯನಕ್ಕೂ ಭಟ್ಟರೇ ಊರುಗೋಲು. ಆ ಜತೆಗೆ ಸಂಸ್ಕೃತದ ಭಾರವಿ, ಬಾಣ, ಮಾಘ ಮತ್ತು ಶ್ರೀಹರ್ಷ, ಭರ್ತೃಹರಿ, ಭವಭೂತಿ ಮೊದಲಾದವರನ್ನು ಬೇಕಾದ ಪ್ರಮಾಣದಲ್ಲಿ ಗಮನಿಸದೆ ಬೇರೆ ದಾರಿಯೇ ಇಲ್ಲ.

ಇನ್ನು ಕನ್ನಡದ ಸಂದರ್ಭದಲ್ಲಿ ಈ ವ್ಯಪ್ತಿಗೆ ಬರುವವರು ಎಂದರೆ: ಕವಿರಾಜಮಾರ್ಗಕಾರ, ಪಂಪ, ರನ್ನ, ಜನ್ನ, ಹರಿಹರ – ರಾಘವಾಂಕ ಜೋಡಿ, ಕುಮಾರವ್ಯಾಸ ಮತ್ತು ಕನಕದಾಸ; ಅನಂತರದಲ್ಲಿ ದ. ರಾ. ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಕುವೆಂಪು, ಗೋಪಾಲಕೃಷ್ಣ ಅಡಿಗ, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ, ಪುತಿನ, ಯು. ಆರ್‌. ಅನಂತಮೂರ್ತಿ, ಪಿ. ಲಂಕೇಶ್‌ ಮತ್ತು ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಎಚ್‌. ಎಸ್‌. ಶಿವಪ್ರಕಾಶ್‌ ಮತ್ತು ದೇವನೂರು ಮಹಾದೇವ ಅವರ ಸಾಧನೆಯನ್ನು ಈ ಕೃತಿ ತನ್ನ ವ್ಯಾಪ್ತಿಗೆ ತಂದುಕೊಳ್ಳುತ್ತದೆಯಾದರೂ, ಮಹಾದೇವ ಅವರ ಬರವಣಿಗೆಯನ್ನು ಒಂದು ನಿರ್ದಿಷ್ಟ ಉದ್ದೇಶದಿಂದ ಮಾತ್ರ ಉಲ್ಲೇಖಿಸಬೇಕಾಗುತ್ತದೆ.

ಅದರಲ್ಲೂ ಬಸವಣ್ಣನ ಬಗ್ಗೆ ಹರಿಸಲಾಗಿರುವ ಗಮನ ಈ ಕೃತಿಯ ಮುಖ್ಯ ಲಕ್ಷಣಗಳಲ್ಲಿ ಒಂದು. ಬಸವಣ್ಣನವರ ಜತೆಗಿನ ಅನುಗಮನ ಎಂದರೆ: ಅವರ ಸಮಕಾಲೀನ ವಚನ ಸಮಾಜದ ಇಂದು ಮತ್ತು ಮುಂದಿನ ಜಗತ್ತಿನ ಜತೆಗಿನ ಸಂವಾದ ಎಂದೆ ಅರ್ಥ; ಅಂದರೆ ಅರ್ಥ ಮಾಡಿಕೊಳ್ಳಬೇಕಾದ ರೀತಿಯಲ್ಲಿ ಅರಿಯಲು ಪ್ರಯತ್ನಿಸುವುದು. ಕಾಳಿದಾಸನ ಅಧ್ಯಯನ ಈ ಕೃತಿಯ ಮತ್ತೊಂದು ಲಕ್ಷಣ.

ಭಾರತದ ಇತರ ಭಾಷೆಗಳ ಸಾಹಿತ್ಯ ಪರಂಪರೆಯನ್ನು ನೋಡುವಾಗ ಬಂಗಾಳಿಯ ರವೀಂದ್ರನಾಥ ಠಾಕೂರ್‌ ಮತ್ತು ಮಹಾಶ್ವೇತಾದೇವಿ, ಹಿಂದಿಯ ಪ್ರೇಮಚಂದ್‌ ಮತ್ತು ಮಲಯಾಳಂನ ತಕಜಿ ಶಿವಶಂಕರ ಪಿಳ್ಳೆ ಮೊದಲಾದವರನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಲಭ್ಯವಿರುವ ಅನುವಾದಗಳ ಮೂಲಕ ಮಾದರಿಯಾಗಿ ಇಲ್ಲಿನ ಚೌಕಟ್ಟಿನ ವ್ಯಾಪ್ತಿಗೆ ತಂದುಕೊಳ್ಳಲು ಯತ್ನಿಸಲಾಗಿದೆ. ಆದರೂ ಪರಿಗಣನೆಗೆ ಬರುವವರು ಎಂದರೆ ಠಾಕೂರ್‌ ಮತ್ತು ಪ್ರೇಮಚಂದ್‌ ಮಾತ್ರ. ಅದು ಕೆಲ ಕಾರಣಗಳಿಂದಾಗಿ. ಇಂಗ್ಲಿಷ್‌ ಬಳಸುವ ಆರ್‌. ಕೆ. ನಾರಾಯಣ್‌, ಮುಲ್ಕ್‌ರಾಜ್‌ ಆನಂದ್‌, ಸಲ್ಮಾನ್‌ ರಶ್ದಿ, ವಿಕ್ರಂ ಸೇಠ್‌ ಮೊದಲಾದ ಅನೇಕರನ್ನು ಗಮನಿಸಬೇಕಾಗಿ ಬಂತು.

ಉಪನಿಷತ್ತುಗಳ ಅಧ್ಯಯನಕ್ಕೆ ಮೈಸೂರಿನ ರಾಮಕೃಷ್ಣ ಆಶ್ರಮದವರು ಹೊರತಂದಿರುವ ಮೂಲ, ಅನುವಾದ ಮತ್ತು ವ್ಯಾಖ್ಯಾನ ಅನುಸರಿಸಲಾಗಿದೆ. ಇನ್ನು ಋಗ್ವೇದ ಅಧ್ಯಯನದ ನೆರವಿಗೆ ಬಂದವು, ಮೈಸೂರು ಮಹಾರಾಜರ ಕಾಲದಲ್ಲಿ ಪ್ರಕಟಿಸಲಾಗಿರುವ ಅನುವಾದದ ಸಂಪುಟಗಳು. ಮ್ಯಾಕ್ಸ್‌ ಮುಲ್ಲರ್‌ ಸಂಪಾದಿಸಿರುವ ‘ಸೆಕ್ರೆಡ್‌ ಬುಕ್ಸ್‌ ಆಫ್‌ ದಿ ಈಸ್ಟ್‌’. ಭಾರತದ ತತ್ವಜ್ಞಾನ ಮತ್ತು ದರ್ಶನಶಾಸ್ತ್ರಕ್ಕೆ ಎಸ್‌. ರಾಧಾಕೃಷ್ಣನ್‌, ಎ. ಹಿರಿಯಣ್ಣ, ದೇವಿಪ್ರಸಾದ ಚಟ್ಟೋಪಾಧ್ಯಾಯ ಮತ್ತು ಎನ್‌. ಎಸ್‌. ದಾಸಗುಪ್ತ ಅವರನ್ನು ಅನುಸರಿಸಲಾಗಿದೆ.

ಸಾಕ್ರೇಟಿಸ್‌, ಅರಿಸ್ಟಾಟಲ್‌, ಪ್ಲೇಟೋ, ಥಾಮಸ್‌ ಅಕ್ವಿನಾಸ್‌, ಫ್ರಾನ್ಸಿಸ್‌ ಬೇಕನ್‌, ಡೆಕಾರ್ತೆ, ಸ್ಪಿನೋಜ, ಲಾಕೆ, ಕ್ಯಾಂಟ್, ಹೆಗಲ್‌ ಮತ್ತು ನೀತ್ಸೆ, ವಿಜ್ಞಾನಕ್ಕೆ ಬೇಕಾದ ಫಿಲಾಸಫಿ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸಿದ ಬರ್ಟ್ರಾಂಡ್‌ ರಸೆಲ್‌ ಮತ್ತು ವೈಟ್‌ಹೆಡ್‌ ಮೊದಲಾದವರ ಜತೆಗೆ ಮಾನವ ಜನಾಂಗದ ಮೇಲೆ ಅಗಾಧ ಪರಿಣಾಮ ಬೀರುವ ಆಡಂ ಸ್ಮಿತ್‌, ಕಾರ್ಲ್‌ ಮಾರ್ಕ್ಸ್‌, ಕೇನ್ಸ್‌, ಫ್ರಾಯ್ಡ್‌, ಯೂಂಗ್‌ ಮತ್ತು ಎರಿಕ್‌ ಫ್ರಾಮ್‌, ಗೆಲಿಲಿಯೊ, ನ್ಯೂಟನ್‌, ಚಾರ್ಲ್ಸ್‌ ಡಾರ್ವಿನ್‌, ಐನ್‌ಸ್ಟೀನ್‌ ಮತ್ತು ಸ್ಟಿಫನ್‌ ಹಾಕಿನ್‌ ಅವರನ್ನು ಅಧ್ಯಯನದ ವ್ಯಾಪ್ತಿಗೆ ತಂದುಕೊಳ್ಳಲಾಗಿದೆ.

ಬೈಬಲ್‌ನ ಓದುವಿಕೆಗೆ ಕಿಂಗ್‌ ಜೇಮ್ಸ್‌ ಮತ್ತು ಪರಿಷ್ಕೃತ ಆವೃತ್ತಿ, ಕುರಾನ್‌ ಓದುವಿಕೆಗೆ ಪೆಂಗ್ವಿನ್‌ ಅನುವಾದ : ಆದರೆ ಕುರಾನ್‌ ಉಲ್ಲೇಖಿಸಲು ಎ. ಯುಸುಫ್‌ ಅಲಿಯವರ ಅನುವಾದ ಮತ್ತು ವ್ಯಾಖ್ಯಾನವನ್ನು ಬಳಸಲಾಗಿದೆ. ಥಾವೊ ಓದುವಿಕೆಗೆ ಲಭ್ಯವಿರುವ ಹಲವಾರು ಇಂಗ್ಲಿಷ್‌ ಮತ್ತು ಕನ್ನಡ ಅನುವಾದಗಳನ್ನು ಗಮನಿಸಲಾಗಿದೆ.

ಜೊಸೆಫ್‌ ನೀಡ್ಹಂನ ‘ಸೈನ್ಸ್‌ ಅಂಡ್‌ ಸಿವಿಲಿಜೇಷನ್‌ ಇನ್‌ ಚೈನಾ’, ವಿಲ್‌ ಡುರಾಂಟ್‌ರ ‘ಸ್ಟೋರಿ ಆಫ್‌ ಸಿವಿಲಿಜೇಷನ್‌’, ಅರ್ನಾಲ್ಡ್‌ ಟಾಯ್ನ್‌ಬಿಯ ‘ಸ್ಟಡಿ ಆಫ್‌ ಹಿಸ್ಟರಿ’, ಎಡ್ವರ್ಡ್‌ ಗಿಬ್ಬನ್‌ ಬರೆದ ‘ಡಿಕ್ಲೈನ್‌ ಅಂಡ್‌ ಫಾಲ್‌ ಆಫ್‌ ರೋಮನ್‌ ಎಂಪೈರ್‌’ ಮತ್ತು ಸೋವಿಯತ್‌ ರಷ್ಯಾ ಕುರಿತ ಇ. ಎಚ್‌. ಕಾರ್‌ನ ‘ಹಿಸ್ಟರಿ ಆಫ್‌ ಸೋವಿಯತ್‌ ರಷ್ಯಾ’ ಹಾಗೂ ‘ಗ್ರೇಟ್‌ ಬುಕ್ಸ್‌ ಆಫ್‌ ದಿ ವೆಸ್ಟರ್ನ್‌ ವರ್ಲ್ಡ್‌’ (ಪ್ರಧಾನ ಸಂಪಾದಕರು; ಮೊರ್ಟಿಮರ್‌ ಜೆ. ಆಡ್ಲರ್‌, ೫೪ ಸಂಪುಟಗಳು) ಅಧ್ಯಯನದ ಹಾದಿಯಲ್ಲಿ ಸೇರಿವೆ. ಅದರಲ್ಲೂ ಎಡಪಂಥೀಯ ಚಿಂತನೆ ಕುರಿತು ಡೆವಿಡ್‌ ಮ್ಯಾಕ್‌ಲಿನ್‌ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಚಿಂತಕರನ್ನು ನೆನೆಯಬೇಕು.

ಈ ಜಗತ್ತಿನಲ್ಲಿ ಇರುವುದು ಎರಡೇ ರಿಲಿಜನ್‌ಗಳು: ಒಂದು ಕ್ರಿಶ್ಚಿಯಾನಿಟಿ, ಮತ್ತೊಂದು ಇಸ್ಲಾಂ; ಉಳಿದವು ಧರ್ಮ, ಧಮ್ಮ ಮತ್ತು ರಿಲಿಜನ್‌ ಉದಯಕ್ಕೂ ಪೂರ್ವದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಸೇರಿದ ವಾದ, ಚಿಂತನಕ್ರಮ ಮತ್ತು ನಂಬುಗೆಗಳು ಎಂಬುದಾಗಿ ಪರಂಪರೆಯನ್ನು ಗುರುತಿಸುವ ಪ್ರಯತ್ನ ಇಲ್ಲಿನದು. ಮೊಸೆಸ್‌, ಜಾರತುಸ್ತ್ರ, ಬುದ್ಧ, ಕ್ರಿಸ್ತ, ಮಹಮ್ಮದ್‌, ಮಾರ್ಕ್ಸ್‌ ಮುಂತಾಗಿ ಬೆಳವಣಿಗೆಯ ಮುಂದಿನ ಮಿತಿಯೇ ಗಾಂಧೀಜಿಯಾಗಿರಬಹುದು ಎಂಬ ರೀತಿಯಲ್ಲಿ ವಸ್ತುಸ್ಥಿತಿಯನ್ನು ಗ್ರಹಿಸುವ ಯತ್ನವನ್ನು ಆ ಜತೆಗೆ ಮಾಡಲಾಗಿದೆ.

ಭಾರತದ ಇತಿಹಾಸದ ಸಂದರ್ಭದಲ್ಲಿ ಡಿ.ಡಿ.ಕೋಸಾಂಬೀ, ಕೆ.ಎಂ.ಪಣಿಕ್ಕರ್‌, ರೊಮಿಲಾ ಥಾಪರ್‌, ಬಿಪಿನ್‌ ಚಂದ್ರ, ಇರ್‌ಫಾನ್‌ ಹಬೀಬ್‌, ನೀಲಕಂಠಶಾಸ್ತ್ರಿ, ಆರ್‌. ಎಸ್‌. ಶರ್ಮ, ಸುಮಿತ್‌ ಸರ್ಕಾರ್‌ ಮೊದಲಾದವರ ಜತೆಗೆ, ಮುಂಬೈನ ಭಾರತೀಯ ವಿದ್ಯಾಭವನದವರು ಪ್ರಕಟಿಸಿರುವ ಇತಿಹಾಸದ ಎಲ್ಲ ಸಂಪುಟಗಳು ಮತ್ತು ‘ದಿ ಕೇಂಬ್ರಿಡ್ಜ್‌ ಎಕನಾಮಿಕ್‌ ಹಿಸ್ಟರಿ ಆಫ್‌ ಇಂಡಿಯಾ’ದ ಎರಡು ಸಂಪುಟಗಳನ್ನು ಲಕ್ಷಿಸಲಾಗಿದೆ. ಡಾ. ಎಚ್. ಎಲ್‌. ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ದ ಸಂಪುಟಗಳು ನೀಡಿದ ವಿಶಿಷ್ಟ ನೆರವಿಗೆ ವಿಶಿಷ್ಟವಾದ ಕೃತಜ್ಞತೆಗಳು ಸಲ್ಲಬೇಕು. ಕನ್ನಡ ಅಧ್ಯಯನ ಸಂಸ್ಥೆಯ ‘ಕನ್ನಡ ಸಾಹಿತ್ಯ ಚರಿತ್ರೆ’, ಬೆಂಗಳೂರು ವಿ.ವಿ.ಯ ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’, ಮೈಸೂರು ವಿ.ವಿ. ಪ್ರಸಾರಾಂಗದ ‘ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಮತ್ತು ‘ಕರ್ನಾಟಕ ಚರಿತ್ರೆ’ ಹೆಸರಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ ಸಂಪುಟಗಳನ್ನು ಉಲ್ಲೇಖಿಸಬೇಕು.

ಜಾರ್ಜ್‌ ಸ್ಟೈನರ್‌ನ ‘ದಿ ಡೆತ್‌ ಆಫ್‌ ಟ್ರಾಜಿಡಿ’ ಮತ್ತು ‘ಟಾಲ್‌ಸ್ಟಾಯ್‌ ಆರ್‌. ದಾಸ್ತೋವಸ್ಕಿ’, ರಸೆಲ್‌ನ ‘ಹಿಸ್ಟರಿ ಆಫ್‌ ವೆಸ್ಟರ್ನ್‌ ಫಿಲಾಸಫಿ’, ಎಲಿಯಟ್‌ನ ‘ನೋಟ್ಸ್‌ ಟುವರ್ಡ್ಸ್‌ ದಿ ಡೆಫನಿಷನ್‌ ಆಫ್‌ ಕಲ್ಚರ್‌’, ಬ್ರಾಕಿಂಗ್‌ಟನ್‌ರ ‘ರೈಟಿಯಸ್‌ ರಾಮ’ ಮತ್ತು ಸ್ಟೀಫನ್‌ ಹಾಕಿನ್‌ರ ‘ಎ ಬ್ರೀಪ್‌ ಹಿಸ್ಟರಿ ಆಫ್‌ ಟೈಮ್‌’ಗಳಿಗೆ ವಿಶೇಷ ವಂದನೆಗಳು ಸಲ್ಲಬೇಕು. ಮಾದರಿ ವಿಧಾನವೊಂದನ್ನು ರೂಪಿಸಿಕೊಳ್ಳುವ ವಿಚಾರದಲ್ಲಿ ಒದಗಿಬಂದ ವಿಶೇಷ ನೆರವಿಗಾಗಿ: ಈ ವಿಧಾನ ಏನಾದರೂ ದೋಷಪೂರಿತವಾಗಿರುವುದಾದಲ್ಲಿ ಅವರು ಹೊಣೆಗಾರರಲ್ಲ.

ಕವಿಯಾಗಿ ಯೇಟ್ಸ್‌, ಎಲಿಯಟ್‌ಗಿಂತ ದೊಡ್ಡವನಿರಬಹುದು ಮತ್ತು ಕಾವ್ಯಕಲೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದವನಾಗಿರಬಹುದು. ಆದರೆ ಸಾಂಸ್ಕೃತಿಕ ಶಕ್ತಿಯಾಗಿ ಎಲಿಯಟ್‌, ಪ್ರಮುಖ. ಮತ್ತೂ ಒಂದು ಕಾರಣ ಇಲ್ಲದಿಲ್ಲ. ಎಲಿಯಟ್‌ ನಂತರ ಪಶ್ಚಿಮ ಜಗತ್ತು ಅವನಷ್ಟೇ ಎತ್ತರದ ಮತ್ತೊಂದು ಕಾವ್ಯ ಪ್ರತಿಭೆಯನ್ನು ಕಂಡ ಉದಾಹರಣೆ ಇಲ್ಲ. ಜತೆಗೆ ಪಾಬ್ಲೊನೆರೂದ, ಆಕ್ಟೇವಿಯಾ ಪಾಜ್‌ ಮೊದಲಾದವರು ಪ್ರತಿನಿಧಿಸುವ ಮಾನವೀಯ ಸಂಸ್ಕೃತಿಯ ಉದಯದ ಮಾತು ಕನ್ನಡ ಮತ್ತು ಇತರ ಭಾಷೆಗಳ ಕಾವ್ಯ ಪರಂಪರೆಯ ತರಹವೇ ಆತಂಕ ಮತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿರುವುದು. ಆ ರೀತಿಯ ಇನ್ನೂ ಹಲವಾರು ಕಾರಣಗಳಿಗಾಗಿ ಚಿನುಅ ಅಚಬೆ, ವ್ಹೊಲೆ ಸೊಯಿಂಕಾ, ಡೆರಿಕ್‌ ವಾಲ್ಕಾಟ್‌ ಮೊದಲಾದವರು ಪರಿಗಣನೆಗೆ ಬರಬೇಕಾದ ಪ್ರಮಾಣದಲ್ಲಿ ಏಕೆ ಬರುವುದಿಲ್ಲ ಎಂಬುದೂ ಸಹ ಇಲ್ಲಿನ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯವೇ ಆಗಿದೆ.

ಆದ್ದರಿಂದ ಈ ಕೃತಿ ಎದುರಿಸುವ ಕೆಲ ತೊಡಕುಗಳನ್ನು ಹಂಚಿಕೊಳ್ಳುವುದು ಆ ಕಾರಣ ಅನುಚಿತ ಆಗಲಾರದು.

ಮಹಾಭಾರತದ ಆಧುನಿಕ ರೂಪವಾದ ಸುಮಾರು ೧೫೦೦ ಪುಟಗಳ ವಿಸ್ತಾರದ ‘ವಾರ್‌ ಅಂಡ್‌ ಪೀಸ್‌’ ರಚನೆ ಕುರಿತಂತೆ ಟಾಲ್ಸ್‌ಟಾಯ್‌ : …..on which I have spent five years of uninterrupted and exceptionally strenuous labour under the best conditions of life,[2] ಎಂಬುದಾಗಿ ಅತ್ಯಂತ ಸಮಾಧಾನ ಮತ್ತು ಸಾರ್ಥಕತೆ ತುಂಬಿದ ಮನಸ್ಸಿನಿಂದ ಹೇಳಿಕೊಳ್ಳುವ ಅವಕಾಶ ಭಾರತದ ಎಷ್ಟು ಮಂದಿಗಿದ್ದೀತು? ಅದೊಂದು ರೀತಿಯಲ್ಲಿ ‘ಸುಕೃತ’ವೇ ಸರಿ. ಅಂತಹ ಸದವಕಾಶ ಪಡೆದ ಎಷ್ಟು ಮಂದಿಯ ಕೈಯಲ್ಲಿ ಆ ಎತ್ತರದ ಸಾಧನೆ ಮಾಡಲಾದೀತು ಎಂಬುದು ಬೇರೆ ವಿಚಾರ. ಆದರೂ ಸಾಧನೆಗೆ ಅಂತಹ ಅವಕಾಶ ಇರುವುದ ಅಪೇಕ್ಷಣೀಯ ಮಾತ್ರವಲ್ಲ, ಕನಿಷ್ಠ ಅಗತ್ಯ.

ಆದರೂ ಜೇನ್‌ ಆಸ್ಟಿನ್‌, ಹೆನ್ರಿ ಜೇಮ್ಸ್‌ ಮೊದಲಾದವರಲ್ಲಿ ಕಾಣಲಾಗುವ ಅಚ್ಚುಕಟ್ಟುತನವನ್ನು ‘ವಾರ್‌ ಅಂಡ್‌ ಪೀಸ್‌’ನಲ್ಲಿ ಕಾಣಲಾಗುವುದಿಲ್ಲ: ಅದೇ ಅದರ ದೊಡ್ಡತನ. ಹೆನ್ರಿ ಜೇಮ್ಸ್‌ ಅಥವಾ ಜೇನ್‌ ಆಸ್ಟೀನ್‌ನಗಳಲ್ಲಿ ದೌರ್ಬಲ್ಯವಾಗಿ ಬಿಡಬಹುದಾಗಿದ್ದ ಅಚ್ಚುಕಟ್ಟುತನದ ಕೊರತೆ, ‘ವಾರ್‌ ಅಂಡ್‌ ಪೀಸ್‌’ನಲ್ಲಿ ಅದರ ಸಾಮರ್ಥ್ಯ ಮತ್ತು ಶ್ರೇಷ್ಠ ಗುಣಲಕ್ಷಣವಾಗಿ ಪರಿವರ್ತನೆಗೊಳ್ಳುತ್ತದೆ. ಏಕೆಂದರೆ, ಅಂತಹ ಕೆಲವರಲ್ಲಿ ಕಾಣುವ ಅವರ ಕಾಲದ ಬದುಕಿನ ರೀತಿಗೂ ಮೀರಿದ ಗೊಂದಲ, ಅವ್ಯವಸ್ಥೆ ಮತ್ತು ರಣರಂಗದ ಲಯ ಆಧರಿಸಿದ ಕೃತಿ ‘ವಾರ್‌ ಅಂಡ್‌ ಪೀಸ್‌’.

ಟಾಲ್‌ಸ್ಟಾಯ್‌ ಅಷ್ಟೇ ಪ್ರೀತಿಯಿಂದ ಆದರೆ ಲೋಕಾಭಿರಾಮವಾಗಿ ದಾಖಲಿಸುವ under the best conditions of life ನಲ್ಲಿ ಬರೆಸಿಕೊಳ್ಳುವ ಅವಕಾಶ ದೊರಕಲಿಲ್ಲವಾಗಿ ಇನ್ನೂ ಏರಬಹುದಾಗಿದ್ದ ಎತ್ತರವನ್ನು ಏರಲಾಗಲಿಲ್ಲ ಎಂಬ ಕೊರಗು: ಅದು ವಸ್ತುಸ್ಥಿತಿ. ವರ್ಷದ ಲೆಕ್ಕಾಚಾರದಲ್ಲಿ ಮಾತನಾಡುವುದಾದಲ್ಲಿ ಒಟ್ಟಾರೆ ಬರವಣಿಗೆಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯವನ್ನು ವಿನಿಯೋಗಿಸಲಾಗಲಿಲ್ಲ. ಅದರಲ್ಲೂ ದಿನದಲ್ಲಿ ಸರಾಸರಿ ಒಂದೆರಡು ಗಂಟೆಗಳಷ್ಟು ಸಮಯ ಕಳೆಯಲು ಸಾಧ್ಯವಾಗಿದ್ದಲ್ಲಿ ಅದೇ ಹೆಚ್ಚು.[3] ಮಧ್ಯೆ ಮಧ್ಯೆ ತಿಂಗಳಾನುಗಟ್ಟಲೆ ಕಾಲ ನಿಲ್ಲಿಸಿ ಬರವಣಿಗೆ ಮುಂದುವರಿಸಬೇಕಾಗಿ ಬಂದುದರ ಪರಿಣಾಮ ಚಿಂತನಕ್ರಮ, ಮಂಡನೆ ಮತ್ತು ಕೃತಿಯ ಬಂಧದ ಮೇಲಾಗಿರಬಹುದು. ಅದರಲ್ಲೂ ಕಾಳಿದಾಸನನ್ನು ಕುರಿತಂತೆ ಬರೆಯಲಾಗಿದ್ದುದನ್ನು ಬದಲಿಸಿ ಬರೆಯಬೇಕಾಯಿತು ಆತ ಮತ್ತು ಆತನ ಕೃತಿಗಳ ಮಹತ್ವ ಅರ್ಥವಾಗುತ್ತಾ ಹೋದಂತೆ.

ಮತ್ತೊಂದು ‘ಸಂಗತಿ’ ಎಂದರೆ, ಇಡೀ ಪಶ್ಚಿಮ ಜಗತ್ತಿನ ಕೇಂದ್ರವಾಗಿ ವರ್ಜಿಲನನ್ನು ಪರಿಗಣಿಸಿ ಬರವಣಿಗೆ ಮಾಡುವ ಕಾಲಕ್ಕೆ ಆ ಪರಿಗಣನೆ ಅಲ್ಲಿ ಚಾಲತಿಗೆ ಬಂದು ಶತಮಾನ ತುಂಬಲು ಬಂದಿದ್ದ ಸಂಗತಿ ಗೊತ್ತೇ ಇರಲಿಲ್ಲ. ಆ ‘ಸತ್ಯ’ವನ್ನು ಜಗತ್ತಿಗೆ ವಿವರಿಸಿ ಹೇಳಿದ ತಿಯೊಡೋರ್‌ ಹೆಕೆರ್‌ ಮೊದಲಾದ ವಿದ್ವಾಂಸರ ಹೆಸರನ್ನು ಆಗ ಕೇಳಿರಲಿಲ್ಲ. ಕವಿಯೊಬ್ಬನಿಗೆ ಆತ ವರ್ಜಿಲ್‌ ಅಥವಾ ಮತ್ತೊಬ್ಬ ಆಗಿರಬಹುದು – ಅಷ್ಟೊಂದು ಮಹತ್ವ ಮತ್ತು ಪ್ರಾಮುಖ್ಯತೆ ನೀಡಿ ಬರೆದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದಾಗ ಮನಸ್ಸು ಪ್ರಜ್ಞಾಪೂರ್ವಕ ಗ್ರಹಿಸಿದ್ದ ಆ ಎಲ್ಲವನ್ನೂ ಹೊಸದಾಗಿ ಓದಿ ಬುದ್ಧಿಪೂರ್ವಕ ಕಾಣಬೇಕಾಯಿತು. ಆಗ ಉಂಟಾದ ಸಮಾಧಾನ ಮತ್ತು ಸಂತೋಷ! ಹಾಗಾಗಿ ವರ್ಜಿಲ್‌, ದಾಂತೆ ಮೊದಲಾದವರನ್ನು ಕುರಿತ ಮಂಡನೆಯ ಕ್ರಮವನ್ನು ಕೈಬಿಡಬೇಕಾದ ಅಥವಾ ತಿದ್ದಬೇಕಾದ ಪ್ರಮೇಯ ಎದುರಾಗಲಿಲ್ಲ. ಬದಲಾಗಿ ಹೆಕೆರ್‌, ಜಿಅಲ್ಕೋವ್‌ಸ್ಕಿ ಮೊದಲಾದ ಪಂಡಿತರ ಅಭಿಪ್ರಾಯಗಳನ್ನು ಪೂರಕವಾಗಿ ಉದಹರಿಸುವ ಸದವಕಾಶ ದೊರಕಿತು.

ಹಾಗಾಗಿ ಇಲ್ಲಿನ ‘ಲಯ’, ‘ನಡಿಗೆ’, ‘ಗೊಂದಲ’ ಮತ್ತು ‘ಅಚ್ಚುಕಟ್ಟುತನ’ ಅದು ಏಕವಾಗಿ ಗ್ರಹಿಸಬಯಸುವ ಭೂತ, ಭವಿಷ್ಯತ್‌ ಮತ್ತು ವರ್ತಮಾನದ ಬದುಕನ್ನೊಳಗೊಂಡ ಲಯಕ್ಕೆ ಹೊಂದಿಕೊಂಡಿರಬಹುದು: ಬೇಕಾದ ಆ ಎಲ್ಲವನ್ನೂ ಕನ್ನಡದ ಆಡುಮಾತಿನಿಂದ ಪಡೆಯಲಾಗಿರುವುದರ ಜತೆಗೆ ಅದರ ಜಾಯಮಾನಕ್ಕೆ ಹೊಂದಿಸಲು ಯತ್ನಿಸಲಾಗಿದೆ.

* * *

ಕೆಲ ವಿಷಯಗಳನ್ನು ಹೆಚ್ಚಾಗಿ ವಿವರಿಸಲು ಹೋಗಿಲ್ಲ. ಓದುಗಾರಿಕೆಯಲ್ಲಿ ಅಕ್ಷರ ಸಂಸ್ಕೃತಿ ತರುವ – ವ್ಯತ್ಯಾಸ, ರಿಲಿಜನ್‌ಗಳ ಚರಿತ್ರೆ, ಬುದ್ಧಿಮತ್ತೆ ಮತ್ತು ಪ್ರತಿಭೆಯಿಂದಾಗಿ ಸೃಜನಶೀಲತೆಯಲ್ಲಿ ಕಾಣಿಸುವ ಅಂತರ, ಬುದ್ಧಿಮತ್ತೆಯ ಸಾರ್ವತ್ರೀಕರಣ, ಮಹತ್ತರ ಸಾಧನೆಯಲ್ಲಿ ಸಾರ್ವಜನಿಕ ಒತ್ತಾಸೆ, ಪಶ್ಚಿಮ ಮತ್ತು ಪೂರ್ವದ ಸಂಸ್ಕೃತಿ ಹಾಗೂ ನಾಗರಿಕತೆಗಳು ಸಾಗಿ ಬಂದ ಹಾದಿಯಲ್ಲಿನ ಅಂತರ ಮತ್ತು ಘಟ್ಟಗಳು ಇತ್ಯದಿ ಕೆಲ ವಿಷಯಗಳನ್ನು ಇನ್ನೂ ಹೆಚ್ಚು ವಿಶದವಾಗಿ ಮಂಡಿಸುವುದು ಅಗತ್ಯವಿತ್ತು ಎಂಬುದಾಗಿ ಕೆಲವರಿಗೆ ತೋರಬಹುದು. ಅಂತಹ ಅನೇಕಾನೇಕ ಸಂಗತಿಗಳು ಇಲ್ಲಿವೆ. ಆ ಒಂದೊಂದನ್ನು ಕುರಿತು ಪ್ರತ್ಯೇಕ ಬರೆಯಲು ಹೊರಟಲ್ಲಿ, ಇನ್ನೂ ದಪ್ಪವಾದ ಹಲವಾರು ಸಂಪುಟಗಳನ್ನು ನಿರ್ವಹಿಸಬೇಕಾಗುತ್ತದೆ. ಇಲ್ಲಿನ ಉದ್ದೇಶವೇ ಬೇರೆ ಬಗೆಯದಾದ ಕಾರಣ ಸಂದರ್ಭಕ್ಕೆ ತಕ್ಕಷ್ಟು ಮಾತ್ರ ಬರುವಂತೆ ನೋಡಿಕೊಳ್ಳಲಾಗಿದೆ.

ಹೋಮರ್‌ ಮತ್ತು ವ್ಯಾಸರ ಕಾಲವನ್ನು ಕ್ರಿ.ಪೂ. ಒಂಬತ್ತನೇ ಶತಮಾನದ ಆಜುಬಾಜಿನಲ್ಲಿ ಇರಿಸುವ ಪಾಶ್ಚಿಮಾತ್ತಯ ವಿದ್ವಾಂಸರ ನಿಲುವನ್ನು ಉದಹರಿಸುವ ಈ ಕೃತಿಯು, ಮೂಲ ಮಹಾಭಾರತದಲ್ಲಿ ಚಿತ್ರಿತವಾಗುವ ಬದುಕು ಮತ್ತು ಸಮಾಜದ ಕಾಲವನ್ನು ‘ಇಲಿಯಡ್‌’ನದಕ್ಕಿಂತ ಹಿಂದಿನದ್ದಿರಬಹುದೆಂದು ಭಾವಿಸಿ ಅಂದಾಜು ಚಿತ್ರಣ ನೀಡಲು ಪ್ರಯತ್ನಿಸುವುದು ದೊಡ್ಡ ತಮಾಷೆಯಾಗಿ ಕಾಣಬಹುದು. ಅಲ್ಲಿ ಯಾವ ದ್ವಂದ್ವ ಅಥವಾ ವಿರೋಧಾಭಾಸವು ಇಲ್ಲ. ವ್ಯಾಸರನ್ನು ವಾಲ್ಮೀಕಿಗಿಂತ ಈಚಿನ ವ್ಯಕ್ತಿಯಾಗಿ ಕಾಣುವ ಭಾರತೀಯ ನಿಲುವಿನ ಮಿತಿಯನ್ನು ಅರಿಯಲು, ವ್ಯಾಸರ ಕಾಲ ಕುರಿತಂತೆ ಪಾಶ್ಚಿಮಾತ್ಯ ವಿದ್ವಾಂಸರು ಮಾಡಿರುವ ಅಂದಾಜನ್ನು ಉಲ್ಲೇಖಿಸಲಾಗಿದೆ: ಅದೇ ಅಂತಿಮ ಏನಲ್ಲ.

ಪ್ರತಿಭಟನೆ, ವಿರೋಧ, ಮೌಖಿಕ ಮತ್ತು ಜನಪದ ಪರಂಪರೆ ವಹಿಸುವ ಪಾತ್ರವನ್ನು ಈ ಕೃತಿ ತನ್ನ ವ್ಯಾಪ್ತಿಗೆ ತಂದುಕೊಂಡಂತೆ ಕಾಣುವುದಿಲ್ಲ ಎಂಬ ಸಂದೇಹ ಉಂಟಾಗಬಹುದು, ಆದರೆ ವಿಷಯ ಅಷ್ಟು ಸರಳ ಇರುವಂತೆ ತೋರುವುದಿಲ್ಲ. ಏಕೆಂದರೆ, ಬೀಸುವ ಗಾಳಿ ಮತ್ತು ಹರಿಯುವ ನೀರು ಮಾಡುವ ಪ್ರಭಾವದ ಪರಿಣಾಮವನ್ನು ಅಂದಾಜು ಮಾಡುವ ಯತ್ನಗಳು ಈವರೆಗೆ ನಡೆದ ಉದಾಹರಣೆ ಅಷ್ಟಾಗಿ ಇಲ್ಲ. ವ್ಯಾಸ, ಹೋಮರ್‌, ವಾಲ್ಮೀಕಿ, ಕಾಳಿದಾಸ ಮೊದಲಾದ ಯಾರೊಬ್ಬರೂ ಯಾರ ಅನುವರ್ತಿಗಳೂ ಆಗಿರಲಿಲ್ಲ. ಕಾಳಿದಾಸ ಸೇರಿದಂತೆ ಮೌಖಿಕ ಮತ್ತು ಜನಪದ ಪರಂಪರೆಯಿಂದ ಪಡೆಯಬೇಕಾದುದನ್ನು ಪಡೆಯಬಹುದಾದ ರೀತಿಯಲ್ಲಿ ಪಡೆದವರೇ ಆಗಿರುತ್ತಾರೆ. ಅವರೆಲ್ಲರೂ ಈ ಜಗತ್ತಿನ ವೈಖರಿ ಬಗ್ಗೆ ನೋವು ತುಂಬಿ ಬರೆದವರೆ.

ಈ ಎಲ್ಲ ಹುಡುಕಾಟ ವಸಾಹತುಷಾಹಿ ನೀತಿಯ ಫಲ ಎಂದು ಲಘುವಾಗಿ ತೆಗೆದುಕೊಳ್ಳುವವರಿಗೆ ಒಂದು ಮಾತು ಅಗತ್ಯ. ಜಾಗತೀಕರಣ, ವಸಾಹತುಷಾಹಿ ನೀತಿ ಇಂದಿನ ಬೆಳವಣಿಗೆಯೇನಲ್ಲ. ಕ್ರಿಸ್ತಪೂರ್ವದಲ್ಲಿ ಗ್ರೀಕರ ನಗರ – ರಾಜ್ಯಗಳ ಮೇಲೆ ಪರ್ಷಿಯನ್‌ ದೊರೆಗಳು ನಡೆಸಿದ ದಾಳಿಗಳ ಕಾಲದಿಂದ ಆರಂಭವಾದ ಆ ಸಂಘರ್ಷ, ಇರಾಕ್‌ನ ಮೇಲೆ ಮೊನ್ನೆ ನಡೆದ ದಾಳಿಯೊಂದಿಗೆ ಒಂದು ಹಂತಕ್ಕೆ ಬಂದಿದೆ ಎಂದು ಹೇಳಲು ಬರುವಂತಿಲ್ಲ. ಆ ಕಾರಣ ಅವು ತಂದೊಡ್ಡುವ ಸಮಸ್ಯೆಗಳನ್ನು ಎದುರಿಸದೆ ಬೇರೆ ದಾರಿಯೇ ಇಲ್ಲ, ಎದುರಿಸಲು ಸಿದ್ಧಗೊಳ್ಳುವ ಹಾದಿಯಲ್ಲಿ ಒಂದು ಸಣ್ಣ ಯತ್ನ ಈ ಕೃತಿ.

ಪಶ್ಚಿಮ ಜಗತ್ತಿನ ನೆತ್ತಿಯ ತುದಿಯಾದ ಅಮೆರಿಕ ವ್ಯವಸ್ಥೆ ಕುಸಿಯುವ ಭೀತಿಯ ಮಾತುಗಳು ಈಗಾಗಲೇ ಕೇಳಿ ಬರುತ್ತಿದ್ದು ಚೀನಾ, ಮಲೆಷಿಯಾ, ಭಾರತ ಮೊದಲಾದ ರಾಷ್ಟ್ರಗಳು ಪ್ರಬಲವಾಗಿ ಬೆಳೆಯುವ ಬಗ್ಗೆ ಕೆಲವರು ಬಹಳ ಉತ್ಸುಕತೆಯಿಂದ ಮಾತನಾಡತೊಗಿದ್ದಾರೆ. ಆ ಮಾತುಗಳನ್ನು ಪುನರ್‌ ಉಚ್ಛರಿಸುತ್ತಿರುವ ಭಾರತೀಯರಿಗೂ ಏನೇನೂ ಕೊರತೆ ಇಲ್ಲ. ಅಲ್ಲಿನ ಒಂದೆರಡು ವ್ಯಂಗ್ಯದ ಮಾದರಿಗಳನ್ನು ಗಮನಿಸುವುದು ಅಗತ್ಯ.

೧. ಉತ್ಪಾದನಾ ಹೆಚ್ಚಳವನ್ನು ತನ್ನ ಏಕೈಕ ಗುರಿಯಾಗಿಸಿಕೊಂಡಿರುವ ಚೀನಾಕ್ಕೆ ಮಾನವೀಯತೆ ಮೊದಲಾದ ಯಾವ ಸಂಗತಿಗಳೂ ಮುಖ್ಯವಾಗಿ ಕಾಣುತ್ತಿಲ್ಲ.

೨. ಸಂಪನ್ಮೂಲದ ಸದ್ಬಳಕೆ ವಿಚಾರದಲ್ಲಿ ಭಾರತವು ಉಳಿಸಿಕೊಳ್ಳಬೇಕಾದ ಜಾಗೃತಿ ಕಾಪಾಡಿಕೊಂಡ ಉದಾಹರಣೆ ಇಲ್ಲ.

ಒಂದು ಸಣ್ಣ ಉದಾಹರಣೆ : ಶತಮಾನಗಳ ಇತಿಹಾಸ ಪಡೆದಿರುವ ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ ಮೊದಲಾದ ವಿಶ್ವವಿದ್ಯಾನಿಲಯಗಳು ಇಂದಿಗೂ ಹಲವಾರು ತರಹದ ತಾಪತ್ರಯಗಳ ನಡುವೆಯೂ ಇಡೀ ಜಗತ್ತಿನಲ್ಲಿ ತಮ್ಮ ಹೆಗ್ಗಳಿಕೆ ಉಳಿಸಿಕೊಂಡು ಬರಲು ಸಾಧ್ಯವಾಗಿದೆ. ಪಶ್ಚಿಮ ಜಗತ್ತಿನ ಪ್ರಜಾಸತ್ತಾತ್ಮಕ ಸಂಸ್ಥೆಗಳು ಆ ಚೌಕಟ್ಟಿನ ಒಳಗಡೆ ಕಾಪಾಡಿಕೊಳ್ಳಬೇಕಾದ ‘ಆರೋಗ್ಯ’ ಕಾಪಾಡಿಕೊಂಡಿರುವ ಉದಾಹರಣೆ ಇದೆ.

ಭಾರತದ ವಿವಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳು ಏನಾಗಿವೆ ಎಂಬ ಬಗ್ಗೆ ಚರ್ಚೆಯ ಅಗತ್ಯ ಇದೆಯೇ? ಮತ್ತೂ ಒಂದು ವ್ಯತ್ಯಾಸವನ್ನು ಗಮನಕ್ಕೆ ತಂದುಕೊಳ್ಳುವುದು ಅಗತ್ಯ.

ವರ್ಣ, ವರ್ಗ ಆಧಾರಿತ ಜನಾಂಗ ದ್ವೇಷಕ್ಕೆ ಅದರ ವಿಕಾರ ರೂಪದಲ್ಲಿ ತುತ್ತಾದ ದಕ್ಷಿಣ ಆಫ್ರಿಕಾದಂತಹ ಮತ್ತೊಂದು ಸಮಾಜವನ್ನು ಈ ಜಗತ್ತಿನ ಭೂಪಟದಲ್ಲಿ ಹುಡುಕಬೇಕು. ಅಂತಹ ದೇಶದಲ್ಲೂ ಕೂಡ ನೆಲ್ಸನ್‌ ಮಂಡೇಲರಂತಹವರ ಬದುಕಿನ ಹಕ್ಕನ್ನು ಕಸಿದುಕೊಳ್ಳಲು ಆಗಲಿಲ್ಲ. ಆದರೆ ಮಹಾತ್ಮಾ ಗಾಂಧೀಜಿ!

 

[1]ಹೋಮರ್‌ ಮತ್ತು ವರ್ಜಿಲ್‌ ಕಾವ್ಯಭಾಗಗಳನ್ನು ಕ್ರಮವಾಗಿ ರಿಚ್ಮಂಡ್‌ ಲ್ಯಾಟಿಮೋರ್‌, ರಾಬರ್ಟ್ ಫಿಜೆರಾಲ್ಡ್‌ ಮತ್ತು ಸಿ. ಡೆ. ಲೇವಿಸ್‌ ಅವರ ಅನುವಾದಗಳಿಂದ ಮಾತ್ರ ಉಲ್ಲೇಖಿಸಲಾಗಿದೆ.

[2]Louise and Aylmer Maude (tr), Oxford University Press, ೧೯೮೩, ಪುಟ ೧೩೨೧

[3]ಆದರೆ ಇಡೀ ಕೃತಿಯ ಸಿದ್ಧತೆಗೆ ತೆಗೆದುಕೊಂಡ ಸಮಯವನ್ನು ಆ ತರಹ ಲೆಕ್ಕ ಹಾಕಲು ಬರುವುದಿಲ್ಲ.