‘ತನಗೆ ದತ್ತವಾಗಿ ಬಂದ ಅವಕಾಶ ಬಳಸಿಕೊಂಡು ಸಾಂಸ್ಕೃತಿಕ ಮಾದರಿಯೊಂದನ್ನು ನಿರ್ಮಿಸುವ ಕರ್ತವ್ಯವನ್ನು ಪಂಪ ಸಮರ್ಪಕವಾಗಿ ನಿರ್ವಹಿಸಿದಂತೆ ಕಾಣುವುದಿಲ್ಲ ಎಂದು ಭಾವಿಸಿ, ಆತ ತುಳಿದ ಹಾದಿಯ ಬಗ್ಗೆ ಜುಗುಪ್ಸೆ ಅಥವಾ ತಿರಸ್ಕಾರ ತಳೆಯುವ ಆತುರ ಮಾಡಬಾರದು: ಹೇಗೆಂದರೆ, ಪಂಪ ಸೃಷ್ಟಿಸಿದ ಸಾಂಸ್ಕೃತಿಕ ಮಾದರಿ ಅಷ್ಟರಲ್ಲಾಗಲೆ ಖಚಿತ ರೂಪ ಪಡೆದುಕೊಂಡಿದ್ದ ಭಾರತೀಯ ಮನೋಭಾವ, ಮನೋಧರ್ಮಕ್ಕೆ ಅನುಗುಣವಾದುದಾಗಿತ್ತು.’

ಎಂಬುದಾಗಿ ಈ ಕೃತಿಯ ಕೊನೆಯ ಭಾಗದಲ್ಲಿ ಬರುವ ಮಾತುಗಳನ್ನು ಮನಸ್ಸಿನ ಹಿಂಬದಿಯಲ್ಲಿಟ್ಟುಕೊಂಡು ಪ್ರವೇಶಿಸುವುದು ಉಚಿತ. ಇಲ್ಲದೇ ಹೋದಲ್ಲಿ, ‘ಪಶ್ಚಿಮ ಜಗತ್ತಿನ ಆರಾಧನೆ’ ಮತ್ತು ‘ಬಿಳಿ ತೊಗಲಿನ ಜನರ ಸಾಧನೆ ಬಗ್ಗೆ ಹೇಸಿಗೆ ತರಿಸುವ ಮೋಹವಾಗಿ’ ಇಡೀ ಪ್ರಯತ್ನ ಕೆಲವರಿಗಾದರೂ ತೋರಿಬರುವ ಸಾಧ್ಯತೆ ಇದ್ದಿರಬಹುದು; ಅದು ಹೋಗಲಿ, ಭಾರತೀಯವಾದುದನ್ನು ಸಾರಾಸಗಟಾಗಿ ತಿರಸ್ಕರಿಸುವ ಪ್ರಯತ್ನವಾಗಿಯೂ ಕೆಲವರಿಗೆ ಕಾಣಬಹುದು.

ಆ ಎರಡೂ ಅಲ್ಲ ಎಂಬುದನ್ನು ಮೊದಲಿಗೆ ಹೇಳಿಬಿಡುವುದು ಉಚಿತ. ಆ ಮಾತುಗಳು ಸಮರ್ಥನೆಯೂ ಅಲ್ಲ, ಸಮಜಾಯಿಷಿಯೂ ಅಲ್ಲ. ಆ ರೀತಿಯ ಸಮಜಾಯಿಷಿ ಕೊಡುವ ಅಥವಾ ಸಮರ್ಥಿಸಿಕೊಳ್ಳುವ ಅಗತ್ಯವೂ ಇಲ್ಲ. ಏಕೆಂದರೆ, ಕನ್ನಡಕ್ಕಿರುವ ಕೆಲ ವಿಶಿಷ್ಟ ಗುಣ, ಲಕ್ಷಣ, ಅವಕಾಶ ಮತ್ತು ಅರ್ಹತೆಗಳನ್ನು ಅದರ ಎಲ್ಲ ಅನುಮಾನ ಮತ್ತು ಸಾಧ್ಯತೆಗಳೊಡನೆ ಜಗತ್ತಿನ ಸನ್ನಿವೇಶದ ಹಿನ್ನೆಲೆಯಲ್ಲಿ ಅರಿಯಲು ಪ್ರಯತ್ನಿಸುವುದರ ಜೊತೆಗೆ, ಈ ವಿಶ್ವದ ಪ್ರಜೆಯಾಗಿರುವ ಸಾಧಾರಣ ಕನ್ನಡಿಗರ ದಿನನಿತ್ಯದ ಬದುಕಿನಲ್ಲಿ ಕಾಡುವ ಕೆಲ ಪ್ರಶ್ನೆಗಳಿಗೆ ಉತ್ತರ ಕಾಣಲು ಹಂಬಲಿಸುವುದು: ಅದು ಸಾಧ್ಯವಾಗದೆ ಹೋದಲ್ಲಿ, ಆ ಸಮಸ್ಯೆಗಳ ಸುತ್ತಮುತ್ತಲ ಅರಿವು ಸ್ಪಷ್ಟವಾಗುವ ರೀತಿಯಲ್ಲಿ ಅದೇ ಬದುಕನ್ನು ಅರ್ಥೈಸಲು ಯತ್ನಿಸುವುದು ಇಲ್ಲಿನ ಉದ್ದೇಶವಾಗಿರುವುದರಿಂದ, ಆ ಯಾವುದೇ ಸಮಜಾಯಿಷಿಯ ಅಗತ್ಯ ಇಲ್ಲ ನಿಜ.

ಆದರೆ ಅದಕ್ಕೂ ಮೀರಿದ ಒಂದೆರಡು ಬೇರೆ ಕಾರಣಗಳಿಗಾಗಿ ವಿವರಣೆ ನೀಡುವ ಅಗತ್ಯವಿದೆ. ಜಗತ್ತಿನ ಪುರಾತನ ಮತ್ತು ಸಾಹಿತ್ಯದ ಪರಿಚಯ ಸ್ವಲ್ಪವಾದರೂ ಇರಬೇಕು; ಅದರಲ್ಲೂ ಇಂಗ್ಲಿಷ್‌ ಮತ್ತು ಸಂಸ್ಕೃತದ ಆತ್ಮೀಯ ತಿಳುವಳಿಕೆ ಇರುವುದನ್ನು ಈ ಕೃತಿ ಬಯಸುತ್ತದೆ, ಎಂಬುದಾಗಿ ಕೆಲವರಾದರೂ ಓದುಗರಿಗೆ ತೋರಬಹುದು.

ಯಾವುದೇ ಕೃತಿ ಓದುಗರಿಂದ ಒಂದು ಹಂತದ ಸಿದ್ಧತೆಯನ್ನು ನಿರೀಕ್ಷಿಸುತ್ತದಾದರೂ, ತೆರೆದ ಮನಸ್ಸಿನ ಓದುಗರು ಗ್ರಹಿಸಬಹುದಾದಷ್ಟೇ ಸರಳ ರೀತಿಯಲ್ಲಿ ಕೃತಿಯ ರಚನೆ ಸಾಗಿದೆ ಇಂಗ್ಲಿಷ್‌ ಮತ್ತು ಸಂಸ್ಕೃತ ಬಾರದವರು ಗ್ರಹಿಸಬರಲು ಸಾಧ್ಯವಾಗುವಂತೆ: ಮಧ್ಯೆ ಮಧ್ಯೆ ಉದಹರಿಸಲಾಗಿರುವ ಭಾಗಗಳು ವಿಚಾರ ಸರಣಿಗೆ ಪೂರಕವಾಗಿ ಮಾತ್ರ ಬರುತ್ತವೆ. ಅದು ಹೊರತು ಹೋಮರ್‌, ವ್ಯಾಸ, ವಾಲ್ಮೀಕಿ, ವರ್ಜಿಲ್‌, ಕಾಳಿದಾಸ ಮೊದಲಾದವರ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದವರು ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಕೃತಿ ಸಾಗುತ್ತದೆ. ಕನ್ನಡದ ಮೂಲಕವೇ ಅಂಥವರ ಪರಿಚಯ ಸ್ವಲ್ಪವಾದರೂ ಆಗಿದ್ದರೆ ಸಾಕು. ಇಲ್ಲದಿದ್ದರೂ ನಡೆಯುತ್ತದೆ.

ಆ ಕಾರಣವೇ ಉದಹರಿಸಲಾಗಿರುವ ಎಲ್ಲಾ ಭಾಗಗಳನ್ನು ಮತ್ತೆ ಸಂಗ್ರಹಿಸಿ ವಿವರಿಸಲು ಹೋಗಿಲ್ಲ. ಅದು ಅನಗತ್ಯ ಎಂದು ತೋರಿಬಂದ ಕಾರಣ ಆ ವಿಧಾನ ಕೈಬಿಡಲಾಗಿದೆ. ವಿವರಿಸಲು ಪ್ರಯತ್ನಿಸಿದಲ್ಲಿ ಈಗಾಗಲೇ ಸಾಕಷ್ಟು ದೊಡ್ಡದಿರುವ ಇದರ ಗಾತ್ರ ದುಪ್ಪಟ್ಟಾಗುವುದು ಅನಿವಾರ್ಯವಾಗುತ್ತಿತ್ತು. ಅಲ್ಲಲ್ಲಿ ಉದಹರಿಸಲಾಗಿರುವ ಪದ್ಯ ಭಾಗಗಳು ಕಠಿಣವಾದುವೂ ಅಲ್ಲ. ಗ್ರಹಿಸಲು ಬೇಕಾದ ಗದ್ಯಭಾಗಗಳನ್ನು ಗ್ರಹಿಸಲು ತುಂಬ ತೊಂದರೆ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ತೀರ ಅಗತ್ಯ ಬಂದಲ್ಲಿ ಕೈಬಿಟ್ಟು ಸಹ ಮುನ್ನಡೆಯಬಹುದಾಗಿದೆ ಎಂದು ಹೇಳಬಹುದಾದರೂ, ಆ ರೀತಿ ಹೇಳುವುದು ಬೇಡ.

ಕೆಲ ಪ್ರಶ್ನೆಗಳು ಮತ್ತು ಅಭಿಪ್ರಾಯಗಳು ಮತ್ತೆ ಮತ್ತೆ ತಲೆಹಾಕಿರಬಹುದು: ಮೊದಲನೆಯದಾಗಿ ಕೃತಿಯ ಹರವು, ಎರಡನೆಯದಾಗಿ ಕೃತಿ ಒಳಗೊಳ್ಳಲು ಯತ್ನಿಸುವ ವಿಷಯದ ವ್ಯಾಪ್ತಿ ಮತ್ತು ಮೂರನೆಯದಾಗಿ ಪ್ರಶ್ನೆಗಳ ಸಾಂದ್ರತೆ ಹಾಗೂ ಅವು ಪಡೆದುಕೊಳ್ಳುವ ವಿವಿಧ ರೂಪಗಳು. ಕೆಲ ಅಭಿಪ್ರಾಯ ಮತ್ತು ಭಾವನೆಗಳು ಬೇರೆ ಮಾತು ಮತ್ತು ಪದಗಳಲ್ಲಿ ವ್ಯಕ್ತವಾಗುವುದನ್ನು ಸಂಪೂರ್ಣ ತಪ್ಪಿಸಲು ಸಾಧ್ಯವಾಗದೇ ಹೋಗಿರಬಹುದು. ಅದಕ್ಕಾಗಿ ಕ್ಷಮೆ ಅಗತ್ಯ. ಅಥವಾ ಹಿಂದೆಯೂ ಒಂದು ಕ್ರಮ ಇರುವುದನ್ನು ಕಾಣಬಹುದೋ ಏನೋ!

ದೊರಕಿದ ಪುಸ್ತಕವನ್ನು ಕೈಗೆ ಬಂದಂತೆ ಓದುತ್ತಾ ಹೋಗುವ ಕನ್ನೆತನದೊಂದಿಗಿನ ಅತಿ ಮಧುರವಾದ ಆ ಸ್ನೇಹವನ್ನು ಉಳಿಸಿಕೊಂಡು ಹೋಗಬೇಕಾದ ಅದಕ್ಕೆ ಅದರದೇ ಆದ ತಾಜಾತನದ ಔಚಿತ್ಯವಿದೆ. ಅದನ್ನು ಕಳೆದುಕೊಂಡವರು ನಿಜವಾದ ಓದುಗರಾಗಿ ಉಳಿಯುವ ಸಾಧ್ಯತೆ ಕಡಿಮೆ. ಆದರೆ ಎಲ್ಲವೂ ಅಲ್ಲವಾದ ಆ ಗುಣವನ್ನು ಜೀವನದುದ್ದಕ್ಕೂ ಉಳಿಸಿಕೊಂಡು ಅಕ್ಷರ ಸಂಸ್ಕೃತಿ ಒತ್ತಾಯಿಸುವ ಓದು, ಅದಕ್ಕಿರುವ ಮತ್ತು ಇರಬೇಕಾದ ಕ್ರಮವನ್ನು ಕಂಡುಕೊಂಡು ಮುಂದೆ ಸಾಗಬೇಕಾಗುತ್ತದೆ.

ನಿಜವಾದ ‘ಓದುವ ಕ್ರಮ’ವನ್ನು ಅದರ ಎಲ್ಲಾ ನಿಜವಾದ ಅರ್ಥ ಮತ್ತು ಸಾಧ್ಯತೆಗಳೊಡನೆ ಕಂಡುಕೊಳ್ಳಲು ಯತ್ನಿಸುವುದು ಅನಿವಾರ್ಯವಾಗುತ್ತದೆ. ಕೆಲವರು ಎದುರಿಸಬೇಕಾಗಿ ಬಂದ ಅದರ ಕೊರತೆ ಕೂಡ ಇಂದಿನ ಪರಿಸ್ಥಿತಿಗೆ ಕಾರಣವಾದ ಹಲವಾರು ಸಂಗತಿಗಳ ಪೈಕಿ ಒಂದಾಗಿದ್ದಿರಬಹುದು. ‘ತೀರದ ಋಣ’ದಲ್ಲಿ ನಮೂದಿಸಲಾದ ಓದುಗಾರಿಕೆ ಒಂದು ನಮೂನೆಯದ್ದಾದರೆ, ತಮ್ಮ ಸುತ್ತಲ ಆಗುಹೋಗುಗಳನ್ನು ಅರ್ಥೈಸಿಕೊಂಡು ಸರಿಯಾದ ಮಾರ್ಗದಲ್ಲಿ ಸಾಗಲು ಬೇಕಾದ ಅರಿವನ್ನು ಪಡೆಯುವುದು ಅದರ ಮತ್ತೊಂದು ಮುಖವಾಗಿದ್ದಿರಬಹುದು. ತಾವು ರೂಢಿಗೆ ತಂದ ಓದುವ ರೀತಿ ಮಾತ್ರ ಕರಾರುವಕ್ಕಾದುದು ಎಂಬುದನ್ನು ಪ್ರತಿಪಾದಿಸಿ ತೋರಿದವರ ಓದಿನ ಕ್ರಮವನ್ನು ಗುರುತಿಸಲು ಯತ್ನಿಸುವ ಇಲ್ಲಿನ ಕ್ರಮದ ಹಿಂದೆ ಒಂದು ಕ್ರಮ ಇರಲೇಬೇಕು.

ಅಂತಹ ಓದುಗಾರಿಕೆ ಕಂಡುಕೊಳ್ಳಲು ಯತ್ನಿಸುವುದರ ಮೂಲಕ ಇಲ್ಲಿ ಎದುರಾಗುವ ಅನೇಕ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಲಾಗಿದೆ. ಕೆಲವರಿಗೆ ಮಾತ್ರ ಅದು ದಕ್ಕಲು ಕಾರಣಗಳೇನಿರಬಹುದು? ‘ಸರಿಯಾದ ಮಾರ್ಗ’ ಎಂಬುದು ಕಾಲ ಅಥವಾ ಐತಿಹಾಸಿಕ ಪ್ರಕ್ರಿಯೆಯ ಮತ್ತೊಂದು ಮುಖವಾಗಿರಬಹುದೆ? ಓದುವ ಕ್ರಮವನ್ನು ಈ ಮಟ್ಟದಲ್ಲಿ ಸಾಧಿಸುವುದು ಅತ್ಯುನ್ನತ ಮಟ್ಟದ ಅತ್ಯಾಧುನಿಕ ಸಾಧನೆಗಿಂತ ಯಾವ ರೀತಿಯಲ್ಲಿ ಭಿನ್ನ? ಬಾಯಿ ಬಲ್ಲವರು ಬಳಗ ಗೆದ್ದರು ಎಂಬ ಕನ್ನಡ ಮಾತಿನ ವ್ಯವಸ್ಥಿತ ರೂಪವಾದ ಸಂವಹನ ಕುಶಲತೆ’ ಇಲ್ಲದ ಓದುಗಾರಿಕೆ ಅರ್ಥಹೀನವೇ?

ಇತ್ಯಾದಿ ಪ್ರಶ್ನೆಗಳು ಸಹ ಈ ಕೃತಿಯ ಹಾಸಿನಲ್ಲಿ ಒಂದಾಗಿ ನಿರ್ವಹಣೆಗೊಳ್ಳುವುದು ಆ ಕಾರಣ ಸಹಜವಾಗಿ ಕಾಣುತ್ತದೆ.