ಬದುಕಿನ ಎಲ್ಲಾ ರಂಗಗಳಲ್ಲೂ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಜನರು ಗಳಿಸಿರುವ ನೈಪುಣ್ಯ ಮತ್ತು ಜಗತ್ತಿನ ಮೇಲೆ ತಾವು ಸ್ಥಾಪಿಸಿರುವ ಪ್ರಭಾವಜಾಲದ ನಿಯಂತ್ರಣವನ್ನು ಉತ್ತಮಪಡಿಸಿಕೊಂಡು ಹೋಗಲು ಅವರು ನಡೆಸುತ್ತಿರುವ ವ್ಯವಸ್ಥಿತ ಯತ್ನಗಳ ಹಿಂದೆ ಕ್ರಿಯಾಶೀಲವಾಗಿರುವ ಇಚ್ಛಾಶಕ್ತಿ, ಶ್ರದ್ಧೆ ಮತ್ತು ಆತ್ಮವಿಶ್ವಾಸ ಕುರಿತ ಪ್ರಶ್ನೆಗಳು ಇತರೆ ಭಾಗದ ಜನರನ್ನು ಕಾಡತೊಡಗಿವೆ. ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿರುವ ಕಣ್ಣು ಕೋರೈಸುವ ಸಾಧನೆಗಳ ಕಡೆಗೆ ಕೈ ತೋರಿಸುವುದರ ಮೂಲಕ ಉತ್ತರಗಳಿಗಾಗಿ ತಡಕಾಡುವುದು ಯುಕ್ತವಾದ ವಿಧಾನವಾಗಿ ತೋರಬಹುದಾದರೂ, ಹಲವಾರು ಸಂಗತಿಗಳು ಆ ವ್ಯಾಪ್ತಿಯ ಹೊರಗುಳುಯುವುದನ್ನು ತಪ್ಪಿಸಲಾಗುವುದಿಲ್ಲ; ಏಷ್ಯಾ ಅಂದರೆ ‘ಆಧ್ಯಾತ್ಮ’ ಮತ್ತು ಯುರೋಪ್‌ ಎಂದರೆ ‘ಪ್ರಾಪಂಚಿಕ’ ಅಥವಾ ‘ಲೌಕಿಕ’ ಎಂಬ ಸಾಂಪ್ರದಾಯಿಕ ಜಾಡಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ: ‘ಜಡತ್ವ’ ಮತ್ತು ‘ಐಹಿಕಸುಖ’ ಎಂಬ ಪದಗಳಿಗೆ ಪರ್ಯಾಯವಾಗಿ ಆ ಗೌರವದ ನುಡಿಕಟ್ಟುಗಳನ್ನು ಬಳಸಲಾಗುತ್ತದೆ ಎಂಬುದನ್ನು ಮರೆಯಲಾಗದು. ಜತೆಗೆ, ಆ ರೀತಿಯ ನೈಪುಣ್ಯ ತಂದುಕೊಡಲು ಕಾರಣವಾಗಿರುವ ವಿಜ್ಞಾನ – ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾದ ಹಿನ್ನೆಲೆ, ಮತ್ತು ಇತರ ಅಂಶಗಳನ್ನು ಕಂಡುಕೊಳ್ಳುವ ಅಗತ್ಯ ಉಳಿದೇ ಉಳಿಯುತ್ತದೆ.

ವಿಜ್ಞಾನ – ತಂತ್ರಜ್ಞಾನ ಚರಿತ್ರೆಯ ಮೂಲ, ಸಾಹಿತ್ಯ ಅಥವಾ ಕಲೆಯ ಚರಿತ್ರೆಗಿಂತ ಬಹಳ ಹಿಂದಕ್ಕೆ ಹೋಗುತ್ತದಾದರೂ, ಅದರ ಕ್ರಮಬದ್ಧ ಬೆಳವಣಿಗೆ ಕಾಣಿಸಿಕೊಂಡುದು ಕೋಪರ್‌ ನಿಕಸ್‌ ಮತ್ತು ಗೆಲಿಲಿಯೋ ಆಗಮನದ ನಂತರ. ಅವರಿಗೂ ಹಿಂದಿನ ಮತ್ತು ಪೂರ್ವದ ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಗೆ ವಿವಿಧ ಸಂಸ್ಕೃತಿ ಮತ್ತು ಜನಾಂಗಗಳು ನೀಡಿರುವ ಕೊಡುಗೆಯ ಪ್ರಾಮುಖ್ಯತೆ ಮತ್ತು ಗುಣದಲ್ಲಿ ಅಂತರ ಇರಬಹುದಾದರೂ ಅದರಲ್ಲಿ ಎಲ್ಲರೂ ತಮ್ಮದೇ ರೀತಿಯಲ್ಲಿ ಪಾಲುಗೊಂಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಬರುವುದಿಲ್ಲ.[1] ಅಷ್ಟಾದರೂ ಪ್ರಧಾನವಾಗಿ ಯುರೋಪ್‌ ಮೂಲದ್ದು ಎಂಬಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಒಡಮೂಡಲು ಕಾರಣವೇನಿರಬಹುದು? ವೈಜ್ಞಾನಿಕ ಮನೋಧರ್ಮ ಮತ್ತು ಶಿಸ್ತು ಎಂಬುದು ಆ ಬೆಳವಣಿಗೆಗೆ ಕಾರಣವಾದ ಒಟ್ಟಾರೆ ಹಿನ್ನೆಲೆಯ ಒಂದು ಭಾಗವೇ ಆಗಿರಬೇಕಾಗಿರುತ್ತದೆ ಅಲ್ಲವೆ? ಅಥವಾ ಉಳಿದವುಗಳಿಂದ ಬೇರೆಯಾಗಿ ಪ್ರತ್ಯೇಕ ಬೆಳೆಯಲು ಸಾಧ್ಯವೆ? ವಿಜ್ಞಾನ ಕ್ಷೇತ್ರದಲ್ಲಿ ಪ್ರಕಟವಾಗುವ ಶಿಸ್ತು, ಮನೋಧರ್ಮ, ಸ್ಥೈರ್ಯ, ಸಂಕಲ್ಪಬಲ, ಪರಿಶ್ರಮ ಮತ್ತು ಪ್ರತಿಭೆಯು ಕಾವ್ಯ, ಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಕಟವಾಗುವುದಕ್ಕಿಂತ ಭಿನ್ನವೆ ಅಥವಾ ವೈರುದ್ಧ್ಯದಿಂದ ಕೂಡಿದುವೆ? ಆ ಎಲ್ಲ ಕ್ಷೇತ್ರಗಳಲ್ಲಿ ಪ್ರಕಟವಾಗುವ ಸಾಧನೆ ಆಯಾ ಜನರ ಒಪ್ಪಂದದ ಪ್ರತೀಕವಲ್ಲವೆ? ಆ ಎಲ್ಲವುಗಳ ಹಿಂದೆ ಕೆಲಸ ಮಾಡುವ ಸೃಷ್ಟಿಶೀಲ ಸಾಮೂಹಿಕ ಆಗಿರುವಂತೆಯೇ ವ್ಯಕ್ತಿಗತವೂ ಆದ ಮನಸ್ಸು ಸಾಧನೆಗೆ ಸಿದ್ಧವಾಗುವ ಮತ್ತು ಆ ಸಾಧನೆಗಳನ್ನು ಅರ್ಜಿಸಿಕೊಳ್ಳಲು ಸಜ್ಜಾಗುವ ರೀತಿ ಅಚಾನಕವೂ ವಿಸ್ಮಯದಿಂದ ಕೂಡಿರುವುದು ಆಗಿರುವಂತೆಯೇ ಕ್ರಮಾಗತ ಆದುದು ಆಗಿರಬೇಕಾಗುತ್ತದೆಯಲ್ಲವೆ?

ಅದೇ ಪ್ರಶ್ನೆಗಳು ಭಾರತದ ಸಂದರ್ಭದಲ್ಲಿ ಪಡೆದುಕೊಳ್ಳುವ ರೂಪ ಇದಾಗಿದೆ : ಭಾರತದ ಮೊದಲ ಮಹಾಸೃಷ್ಟಿಯಾದ ‘ಮಹಾಭಾರತ’ದ ಕವಿಗಳಿಗೆ ಪಾಂಡವರ ಸ್ವರ್ಗಾರೋಹಣ ಮುಖ್ಯವಾಗುವಷ್ಟು ಕುರುಕ್ಷೇತ್ರ ಯುದ್ಧಾನಂತರದ ಬದುಕಿನಲ್ಲಿ ಅವರು ಎದುರಿಸಬೇಕಾಗಿ ಬಂದ ಸಮಸ್ಯೆ ಅಥವಾ ಬಿಕ್ಕಟ್ಟುಗಳು ಮುಖ್ಯವಾಗಿಲ್ಲವೆ? ಸೀತೆಯ ಅಪಹರಣದಂತಹ ಸಮಸ್ಯೆಗೆ ರಾವಣನ ಸಂಹಾರ ಪರಿಹಾರವೆ? ಬುದ್ಧನ ಬದುಕು ಮತ್ತು ಸಾಧನೆಯ ನೇರ ಮತ್ತು ಸರಳ ನಿರೂಪಣೆ ಎಪಿಕ್‌ ಆಗಬಲ್ಲುದೆ? ತನ್ನ ಸಮಕಾಲೀನ ಸಮಾಜದ ಆಡುಭಾಷೆ ಕೈಬಿಟ್ಟು ಸಂಸ್ಕೃತದಂತಹ ಅತ್ಯಂತ ಸುಧಾರಿತ ಗ್ರಂಥಸ್ಥ ಭಾಷೆಯಲ್ಲಿ ಕಾವ್ಯ ಬರೆಯಲು ಮನಸ್ಸು ಮಾಡಿದ ಕಾಳಿದಾಸನಿಗೆ ಸಂಕೋಚ ತಂದಿರುವುದೇ ಜನಸಾಮಾನ್ಯರ ಆಡುಭಾಷೆಯನ್ನು ಎಪಿಕ್‌ ಭಾಷೆಯ ಸ್ಥಾನಮಾನಕ್ಕೇರಿಸಲು ಪ್ರಯತ್ನಿಸಿದ ಭಾರತದ ಕೆಲವೇ ಮೊದಲಿಗರ ಪೈಕಿ ಒಬ್ಬನಾದ ಪಂಪನಿಗೆ ಕನ್ನಡ ಭಷೆ ಮತ್ತು ಸಂಸ್ಕೃತಿಯ ಅಳಿವು – ಉಳಿವಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಶ್ನೆಗಳು ಕಕ್ಕುಲಾತಿ ತೋರಿದುವೆ? ನಿಜವಾದ ಅರ್ಥದಲ್ಲಿ ಸೃಷ್ಟಿಕ್ರಿಯಾಶೀಲವಾಗಲು ಬೇಕಾದ ವಾತಾವರಣ ನಿರ್ಮಿಸಲು ಹಂಬಲಿಸಿದ್ದೇ ಬಸವಣ್ಣ ಇಂದಿಗೂ ಅಗ್ರಾಹ್ಯವಾಗಿ ಉಳಿಯಲು ಕಾರಣವಾಯಿತೆ?

ಆ ತರಹದ ಉತ್ತರರೂಪದ ಪ್ರಶ್ನೆಗಳು ಮತ್ತು ಪ್ರಶ್ನೆರೂಪದ ಉತ್ತರಗಳ ಬಯಕೆಯ ಬೆನ್ನು ಹತ್ತಿ ಬಹುದೂರ ಹೋಗುವ ಮೊದಲು ಏಳಬಹುದಾದ ಆಕ್ಷೇಪಗಳ ಕಡೆಗೆ ಗಮನ ಹರಿಸುವುದು ಅಗತ್ಯ : ಯುರೋಪಿನ ಕಾವ್ಯ ಪರಂಪರೆ ಬೆಳೆದುಬಂದ ರೀತಿ, ರೂಪಿಸಿಕೊಂಡ ವಿಮರ್ಶಾ ವಿಧಾನ, ಅವರ ಜೀವನಕ್ರಮ ಹಾಗೂ ಅವರ ಬದುಕಿನ ವಾತಾವರಣವೇ ಬೇರೆ ಎಂಬುದೇ ತೆಗೆಯಬಹುದಾದ ಪ್ರಮುಖ ಆಕ್ಷೇಪ.

“ಹೋಮರಗೆ, ವರ್ಜಿಲಗೆ, ಡಾಂಟೆ ಮೇಣ್‌ ಮಿಲ್ಟನಗೆ” ಎಂದು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಆರಂಭದಲ್ಲಿಯೇ ಉದ್ಘೋಷಿಸುವುದರ ಮೂಲಕ ಆ ತರಹದ ಆಕ್ಷೇಪಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿರುವ ಕುವೆಂಪು, ಕಾಳಿದಾಸ ಮತ್ತು ಪಂಪ ಹೇಗೋ ಹಾಗೆಯೇ ಹೋಮರ್‌ ಮತ್ತು ವರ್ಜಿಲ್‌ ಕೂಡ ತಮ್ಮ ಕಾವ್ಯ ಪ್ರಜ್ಞೆ, ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ಒಪ್ಪಿಕೊಳ್ಳಬೇಕಾದ ಅಗತ್ಯವನ್ನು ಪ್ರಶ್ನಿಸಲು ಹೋಗದೆ ಸ್ವೀಕರಿಸುತ್ತಾರೆ. ಅದೇ ತರಹದ ಅನಿವಾರ್ಯ ಪರಿಸ್ಥಿತಿಯ ಒತ್ತಡವನ್ನು ಅವರಿಗಿಂತ ಕೊಂಚ ಮೊದಲೇ ಎದುರಿಸಿದ ಬಿ.ಎಂ.ಶ್ರೀ. ಬ್ರಿಟಿಷ್‌ ಕಾವ್ಯಕನ್ಯೆಯ ಉಡುಗೆತೊಡುಗೆ ತೊಡಿಸಿ ಕನ್ನಡ ಕಾವ್ಯಮಾತೆಯ ಅಂದ ಹೆಚ್ಚಿಸಿ ನೋಡುವ ಆಸೆ ವ್ಯಕ್ತಪಡಿಸಿದ್ದರು – ತಮ್ಮ ‘ಇಂಗ್ಲಿಷ್‌ ಗೀತ’ಗಳಲ್ಲಿ.

ಯುರೋಪಿನ ಸಾಹಿತ್ಯ ಮೂಲದಿಂದ ಆ ರೀತಿ ಕಡ ಪಡೆಯಬೇಕಾದ ಅಗತ್ಯ ಕಾಲ ಕಳೆದಂತೆ ಹೆಚ್ಚುತ್ತಲೇ ಹೋಯಿತು ವಿನಾ, ಕಡಿಮೆಯಾಗಲಿಲ್ಲ: ಕತೆ, ಕಾದಂಬರಿ, ಭಾವಗೀತೆ, ಕವನ, ಪ್ರಬಂಧ, ವಿಮರ್ಶೆ, ವಿಶ್ಲೇಷಣೆ, ಚಿಂತನೆ ಇತ್ಯಾದಿ ತೊಡುಗೆರೂಪದ ವಿವಿಧ ಪ್ರಕಾರ ಮತ್ತು ಆಕಾರಗಳನ್ನು ಮಾತ್ರ ಕೆಲವರು ಎರವಲು ಪಡೆಯಲು ಮುಂದಾದರೆ; ಅವರ ಮುಂದಿನ ತಲೆಮಾರಿನ ಜನ ಇನ್ನೂ ಹಲವಾರು ಹೆಜ್ಜೆ ಮುಂದೆ ಹೋಗಿ ತಂತ್ರಗಾರಿಕೆ, ಮಂಡನಾಕ್ರಮ, ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ಅವರು ತೋರುವ ಕಸುಬುಗಾರಿಕೆ ಮೊದಲಾದುದನ್ನು ಅನಾಮತ್ತಾಗಿ ಅನುಸರಿಸುವ ಇಲ್ಲವೇ ಸ್ವೀಕರಿಸಬೇಕಾದ ಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡರು ಭಾರತೀಯ ಸಂದರ್ಭದಲ್ಲಿ ಹೆಚ್ಚು ಬುದ್ಧಿವಂತರು, ಪ್ರತಿಭಾವಂತರು ಮತ್ತು ಆಧುನಿಕರೆಂಬಂತೆ ಕಾಣಿಸಿಕೊಳ್ಳುವ ಪ್ರಕ್ರಿಯೆ ಮೊದಲಾಯಿತು. ಆ ಬೆಳವಣಿಗೆಗಳು ಮುಂದುವರಿದೇ ಇವೆ.[2]

ಈವರೆಗೆ ನಡೆದಿರುವುದು ಏಕಮುಖವಾದ ಕಸರತ್ತು : ಉಳಿದವರ ಮಾತಿರಲಿ ವ್ಯಾಸ, ವಾಲ್ಮೀಕಿ, ಕಾಳಿದಾಸರನ್ನು ತಮ್ಮ ಕಾವ್ಯ ಪಂಪರೆಯ ಒಂದು ಭಾಗ ಎಂದು ಬಹಿರಂಗವಾಗಿ ಘೋಷಿಸುವ ಸ್ಥಿತಿಯನ್ನು ಎದುರಿಸಬೇಕಾಗಿ ಬಂದ ಒಬ್ಬರಾದರೂ ಯುರೋಪಿನ ಕವಿಯನ್ನು ಕಾಣುವುದು ಕಷ್ಟಸಾಧ್ಯ. ಅಂದರೆ ಭಾರತೀಯ ಕಾವ್ಯಮಾತೆಯ ಉಡುಗೆ ತೊಡುಗೆ ತೊಡಿಸಿ ತಮ್ಮ ಕಾವ್ಯಕನ್ಯೆಯ ಅಂದ ಬದಲಿಸಿ ನೋಡುವ ಅಗತ್ಯ ಅವರನ್ನು ಕಾಡಿಲ್ಲ ಎಂದಾಯಿತು. ತಮ್ಮ ಆಗಮನಾನಂತರದ ಆರಂಭದ ವರ್ಷಗಳಲ್ಲಿ ಯುರೋಪ್‌ ಮೂಲದ ವಿದ್ವಾಂಸರು ಮತ್ತು ಲೇಖಕರು ನಡೆಸಿದ ಗ್ರಂಥಸಂಪಾದನೆ, ಶಾಸನಸಂಗ್ರಹ, ನಿಘಂಟು ರಚನೆ, ಇತಿಹಾಸ ಕುರಿತ ಬೆಳವಣಿಗೆ, ಅನುವಾದ ಇತ್ಯಾದಿ ಅರಿತುಕೊಳ್ಳುವ ಕುತೂಹಲಕಾರಿ ಕೆಲಸ ಕಾರ್ಯಗಳನ್ನು ಬಿಟ್ಟರೆ, ಭಾರತೀಯ ಕೃತಿಗಳನ್ನು ಭಾರತೀಯ ಮೂಲದವರೇ ಇಂಗ್ಲಿಷಗೆ ಅನುವಾದಿಸಿ ಮೆಚ್ಚುಗೆ ಗಿಟ್ಟಿಸಲು ನಡೆಸುವ ಪರಿಪಾಠಗಳು ಸ್ವಾತಂತ್ರ್ಯ ಬಂದನಂತರ ಹೆಚ್ಚುತ್ತಾ ಹೋದವು : ಇಂಗ್ಲಿಷ್‌ ಭಾಷೆಯನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಅರಿಸಿಕೊಳ್ಳುವ ಭಾರತೀಯ ಸಂಜಾತ ಲೇಖಕರ ಸಂಖ್ಯೆಯಲ್ಲಿ ತದನುಗುಣ ತರಾತುರಿ ಕಾಣಿಸಿಕೊಂಡಿದೆ.

ಕಾವ್ಯ ಅಥವಾ ಮತ್ತಾವುದೆ ಚಿಂತನಾತ್ಮಕ ಪರಂಪರೆಯೊಂದು ಮತ್ತೊಂದನ್ನು ಪ್ರಭಾವಿಸುವ ರೀತಿಗೆ ಟಿ. ಎಸ್‌. ಎಲಿಯಟ್‌ನ ‘ದಿ ವೇಸ್ಟ್‌ ಲ್ಯಾಂಡ್‌’ ವಿಚಿತ್ರ ಕೊಡುಗೆ. ಲಂಡನ್‌ನಂತಹ ನಗರ ಜೀವನಕ್ಕೆ ಹೊಂದಿಕೊಳ್ಳಬೇಕಾಗಿ ಬಂದ ಕಾರಣ ಎದುರಾದ ದಿಗಿಲು, ದಿಬ್ಭ್ರಮೆ ಮತ್ತು ಆತಂಕದಿಂದ ಕುದಿದ ಭಾರತೀಯ ಅದರಲ್ಲೂ ಬೌದ್ಧ ಮನಸ್ಸೊಂದು ರಚಿಸಿದ ಕೃತಿಯಂತೆ ಅದು ಕೆಲವರಿಗಾದರೂ ಗಮ್ಯವಾದರೆ ಆಶ್ಚರ್ಯವೇನಿಲ್ಲ. ಅನೇಕ ಭಾರತೀಯರು ಎಲಿಯಟ್‌ನನ್ನು ತಮ್ಮವನೇ ಎಂಬಂತೆ ಸ್ವೀಕರಿಸಲು ಆ ತರಹದ ಬವಣೆ ಕೂಡ ಕಾರಣವಾಗಿದ್ದಿರಬಹುದು. ಆದರೆ ಆ ಕೃತಿರಚನೆ ಕಾಲದಲ್ಲಿ ಎಲಿಯಟ್‌ ಭಾರತೀಯ ಕಾವ್ಯಪರಂಪರೆಯಿಂದ ವಿಚಲಿತನಾದಂತೆ ಕಾಣುವುದಿಲ್ಲ. ತ್ರಿಪಿಟಿಕಗಳು ಮತ್ತು ಉಪನಿಷತ್ತುಗಳು ತನ್ನ ಮೇಲೆ ಗಂಭೀರ ಪ್ರಭಾವ ಬೀರಿದ್ದನ್ನು ಆತನೇ ಒಪ್ಪಿಕೊಂಡಿರುತ್ತಾನೆ….and I know that my own poetry shows the influence of Indian thought and sensibility.[3] ಅದು ಹೊರತು ಏಜ್ರಾಪೌಂಡ್‌ ಮೊದಲಾದವರ ಮೂಲಕ ಚೀನಾದ ಪದ್ಯಗಳು ಮತ್ತು ಜಪಾನಿ ಹಾಯಿಕುಗಳು ಬೀರಿದ ಸಣ್ಣ ಪ್ರಮಾಣದ ಪ್ರಭಾವವನ್ನು ಭಾರತದ ಕಾವ್ಯ ಪರಂಪರೆ ಉಂಟುಮಾಡಿದ ಉದಾಹರಣೆ ಇಲ್ಲ.[4]

‘ಇನ್‌ಎವಿಟೆಬಲ್‌’ ಮತ್ತು ‘ಅನಿವಾರ್ಯ’ ಪದಗಳಿಗಿರುವ ಸಮಾನ ಅರ್ಥ ವ್ಯಾಪ್ತಿ ಮತ್ತು ಹೊಂದಾಣಿಕೆ ನೋಡಿದರೆ, ಅವೆರಡೂ ಒಂದೇ ಮೂಲದಿಂದ ಬಂದುವೇನೋ ಎಂದು ಯೋಚಿಸಲು ಅವಕಾಶವಾಗುತ್ತದೆ. ಆದರೆ ಇಂಗ್ಲಿಷಿನ ಆ ಪದ ಇತ್ತೀಚಿನ ವರ್ಷಗಳಲ್ಲಿ ಪಡೆದುಕೊಂಡಿರುವ ಅರ್ಥವ್ಯಾಪ್ತಿ ಎಷ್ಟು ದೊಡ್ಡದು ಎಂದರೆ ವಿಧಿ, ಕಾಲ, ಐತಿಹಾಸಿಕ ಪ್ರಕ್ರಿಯೆ ಮತ್ತು ವಿಕಾಸವಾದಿ ಪ್ರಕ್ರಿಯೆ ಇತ್ಯಾದಿ ಪರಿಕಲ್ಪನೆಗಳಿಗೆ ಸಮಾನವಾದ ಪರಿಭಾಷೆಯಾಗಿ ಬಳಕೆಯಾಗುವ ಮಟ್ಟಿಗೆ ಬೆಳೆದುಕೊಂಡಿದೆ. ಸೋವಿಯತ್‌ ರಷ್ಯಾದ ವಿಘಟನೆ ಸಂಪ್ರದಾಯವಾದಿ ವಿಚಾರಶೀಲ ಮನಸ್ಸಿಗೆ ವಿಧಿ ಅಥವಾ ದೈವನಿಯಾಮಕದಂತೆ ತೋರಿಬಂದರೆ, ವೈಧಾನಿಕ ಮನಸ್ಸಿಗೆ ಅದು ಐತಿಹಾಸಿಕ ಪ್ರಕ್ರಿಯೆಯಾಗಿ ಕಾಣಿಸುವುದು ವಿಕಾಸವಾದಿ ಪ್ರಕ್ರಿಯೆ ಕಾರಣ ಡಯನೋಸಾರಸ್‌ ಮೊದಲಾದ ಪರ್ವತಗಾತ್ರದ ಪ್ರಾಣಿಗಳು ಭೂಮಿ ಮೇಲಿಂದ ಕಣ್ಮರೆಯಾದಂತೆ ಆನೆಗಳು ಸಹ ಒಂದಲ್ಲ ಒಂದು ದಿನ ಅದೇ ರೀತಿ ‘ಅನಿವಾರ್ಯ’ ಪರಿಸ್ಥಿತಿ ಎದುರಿಸಬೇಕಾಗಿ ಬರಬಹುದು ಎಂಬುದಾಗಿ ಜೀವವಿಜ್ಞಾನಿಗಳು ತಳೆಯುವ ನಿಲುವು ಹಾಗೂ ಪರಮಾಣು ಬಾಂಬ್‌ ತಯಾರಿಕೆಯು ‘ಅನಿವಾರ್ಯ’ವಾಗಿತ್ತು ಎಂದಷ್ಟೇ ಹೇಳುವುದರ ಮೂಲಕ ವಿಜ್ಞಾನದ ಪ್ರಗತಿಯನ್ನು ಅರಿಯಲು ಬಯಸುವ ಯತ್ನಗಳ ನಡುವೆ ಹೆಚ್ಚಿನ ಅಂತರ ಇರುವಂತೆ ತೋರುವುದಿಲ್ಲ. ವ್ಯತ್ಯಾಸ ಇರುವುದು, ನೋಡುವ ಮನೋಧರ್ಮದಲ್ಲಿ ಮತ್ತು ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನದಲ್ಲಿ. ವಿಧಿ ಅಥವಾ ಕಾಲ ಎಂಬ ಸಾಂಪ್ರದಾಯಿಕ ನಂಬಿಕೆಗಳು ಯುರೋಪಿನ ಸಂದರ್ಭದಲ್ಲಿ ಕೇವಲ ನಂಬಿಕೆಗಳಾಗಿ ಉಳಿದಿಲ್ಲ. ಐತಿಹಾಸಿಕ ಪ್ರಕ್ರಿಯೆ ಮತ್ತು ವಿಕಾಸವಾದಿ ಪ್ರಕ್ರಿಯೆ ತರಹವೆ ಒಂದು ಸಿದ್ಧಾಂತ ಮತ್ತು ಪರಿಕಲ್ಪನೆಯಾಗಿ ವಿಧಿ ಕುರಿತು ನಂಬಿಕೆಯನ್ನು ಪರಿವರ್ತಿಸುವ ಪ್ರಯತ್ನಗಳು ನಡೆದಿದ್ದು ‘ವಾರ್‌ ಅಂಡ್‌ ಪೀಸ್‌’ಗಿಂತ ಸಮರ್ಥ ಉದಾಹರಣೆ ಬೇಕಿಲ್ಲ; ವಿಧಿವಾದವನ್ನು ಸಿದ್ಧಾಂತದ ಮಟ್ಟಕ್ಕೇರಿಸುವ ಉದ್ದೇಶದಿಂದಲೇ ಮಹಾಭಾರತದಂತಹ ಆ ಬೃಹತ್‌ ಕಾದಂಬರಿಯನ್ನು ಬರೆದ ಹಾಗಿದೆ.

ಬೇರೆ ಸಂಸ್ಕೃತಿ ಮತ್ತು ನಾಗರಿಕತೆ ಸಂದರ್ಭದಲ್ಲಿ ರೂಪುಗೊಂಡ ಹಿಸ್ಟಾರಿಕಲ್‌ ಪ್ರೊಸೆಸ್‌ (Historical Process) ಮತ್ತು ಎವಲೂಷನರಿ ಪ್ರೊಸೆಸ್‌ (Evolutionary Process) ಎಂಬ ಹೊಸ ಸಿದ್ಧಾಂತ ಮತ್ತು ಪರಿಕಲ್ಪನೆಗಳನ್ನು ತನ್ನದಾಗಿಸಿಕೊಳ್ಳಲು ಐತಿಹಾಸಿಕ ಪ್ರಕ್ರಿಯೆ ಮತ್ತು ವಿಕಾಸವಾದಿ ಪ್ರಕ್ರಿಯೆ ಎಂಬ ಪದಗಳನ್ನು ಹೊಸ ಸಂದರ್ಭ ಮತ್ತು ಹಿನ್ನೆಲೆಯಲ್ಲಿ ಹೊಸ ಅರ್ಥದೊಡನೆ ಚಲಾವಣೆಗೆ ತರಲಾಗಿದೆ. ಆದರೆ ವಿಧಿ, ಕಾಲ ಮತ್ತು ಅನಿವಾರ್ಯ ಎಂಬ ಪದಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿವೆ. ಫೇಟ್‌, ಟೈಂ ಮತ್ತು ಇನ್‌ಎವಿ ಟೆಬಲ್‌ ಪದಗಳಿಗೆ ಸಾಧ್ಯವಾಗಿರುವ ಅರ್ಥವ್ಯಾಪ್ತಿ ಮತ್ತು ಮಹತ್ವ ಕನ್ನಡದ ಆ ಪದಗಳಿಗೆ ದಕ್ಕಿದೆಯೆ? ಒಂದು ಅರ್ಥದಲ್ಲಿ ಪ್ರಾಪ್ತವಾಗಿದೆ. ಮತ್ತೊಂದು ದೃಷ್ಟಿಯಿಂದ ನೋಡುವುದಾದಲ್ಲಿ ದಕ್ಕಿಲ್ಲ. ಕನ್ನಡವೂ ಸೇರಿದಂತೆ ಈ ಜಗತ್ತಿನ ಬೇರಾವುದೇ ಭಾಷೆಯಲ್ಲಿ ವಿಧಿ, ಕಾಲ ಅಥವಾ ಅನಿವಾರ್ಯ ಎಂಬ ಪದಗಳಿಗೆ ಸಂವಾದಿಯಾದ ನುಡಿಗಳನ್ನು ಬಳಸಿದರೆ ಸಾಕು, ಯುರೋಪಿನ ಭಾಷೆಗಳ ಸಂದರ್ಭದಲ್ಲಿ ಅವುಗಳಿಗೆ ದಕ್ಕಿರುವ ಅರ್ಥವ್ಯಾಪ್ತಿಯಿಂದ ಬಂಧಿತರಾಗಬೇಕಾಗುತ್ತದೆ. ಇನ್ನುಳಿದಿರುವುದು ಏನಿದ್ದರೂ ಪ್ರಾಪ್ತವಾಗಿರುವ ಆ ಅರ್ಥವ್ಯಾಪ್ತಿಯನ್ನು ಪ್ರಜ್ಞಾಪೂರ್ವಕವಾಗಿ ಗ್ರಹಿಸುವ ಮೂಲಕ ಅರಿವಿನ ದಿಗಂತವನ್ನು ವಿಸ್ತರಿಸಿಕೊಳ್ಳುವ ಮುಂದಿನ ಜವಾಬ್ದಾರಿ ಮಾತ್ರ.

ಕಾಲಕಾಲಕ್ಕೆ ತೆರೆದುಕೊಳ್ಳುತ್ತಾ ಸಾಗುವ ನಿತ್ಯದ ಸೂಕ್ಷ್ಮಗಳನ್ನು ಆವಿಷ್ಕರಿಸುವ ಅವಕಾಶ ಎಲ್ಲೋ ಕೆಲವರ ಪಾಲಿನದಾಗಿರುತ್ತದೆ: ಅವುಗಳನ್ನು ಪರಿಷ್ಕರಿಸುವ ಅವಕಾಶ ಕೂಡ ಎಲ್ಲರಿಗೂ ಬರುವುದಿಲ್ಲ. ಆ ಕಾರಣವೆ ನ್ಯೂಟನ್‌ – ಐನ್‌ಸ್ಟೈನ್‌ ಮೊದಲಾದವರು ಗ್ರಹಿಸಿ ಸೂತ್ರೀಕರಿಸಿದ ಸಿದ್ಧಾಂತಗಳು ಬೇರೆ ಬೇರೆ ಜನಾಂಗಗಳಿಗೆ ಬೇರೆ ಬೇರೆಯಾಗಲು ಸಾಧ್ಯವಿಲ್ಲವಾದಂತೆ, ಬದುಕಿನಲ್ಲಿ ಕಂಡುಕೊಂಡು ವರ್ಜಿಲ್‌ ಅನುಸರಿಸಿದ ಮೂಲತತ್ವಗಳು ಮತ್ತು ವಿಮರ್ಶಾ ಸಿದ್ಧಾಂತಗಳು ಬೇರೆಯಾಗಿರಲು ಸಾಧ್ಯವೆ? ಗುರುತ್ವಾಕರ್ಷಣೆಯ ತತ್ವ, ಸಾಪೇಕ್ಷ ಸಿದ್ಧಾಂತ ಮೊದಲಾದವರನ್ನು ರೂಪಿಸುವ ಅವಕಾಶ ಯುರೋಪ್‌ ಮೂಲದ ಕೆಲವರಿಗೆ ಒದಗಿಬಂದಂತೆ, ವಿಮರ್ಶಾ ಸೂತ್ರ ಮತ್ತು ಸಿದ್ಧಾಂತಗಳನ್ನು ರೂಪಿಸುವ ಅವಕಾಶ ಕೂಡ ಅವರಲ್ಲಿ ಕೆಲವರಿಗೆ ಆ ಹಿಂದೆಯೇ ಒದಗಿ ಬಂತು. ವಿಮರ್ಶಾಸೂತ್ರ ಮತ್ತು ಸಿದ್ಧಾಂತಗಳನ್ನು ರೂಪಿಸಿದ ಜನರೆ ವಿಜ್ಞಾನ – ತಂತ್ರಜ್ಞಾನದ ಮೂಲತತ್ವ ಮತ್ತು ಸಿದ್ಧಾಂತಗಳನ್ನು ಆವಿಷ್ಕರಿಸಿದರು. ಮತ್ತು ಅವುಗಳು ಪರಸ್ಪರ ಪೂರಕವಾದುವೇ ಆಗಿರಬೇಕು. ಏಕೆಂದರೆ, ಆ ತರಹದ ಎಲ್ಲ ರೀತಿಯ ಬೆಳವಣಿಗೆಗಳ ಹಿಂದೆ ಕೆಲಸ ಮಾಡಿದ ಬಹುತೇಕ ಮನಸ್ಸುಗಳು ಒಂದೇ ಮೂಲ, ಹಿನ್ನೆಲೆ ಮತ್ತು ಪರಂಪರೆಯಿಂದ ಬಂದುವಾಗಿರುವುದು: ಹೋಮರ್‌, ಸೊಪೊಕ್ಲೆಸ್‌, ವರ್ಜಿಲ್‌, ದಾಂತೆ ಮುಂತಾದವರನ್ನು ನೀಡಿದ ಜನರೇ ಪೈಥಾಗೊರಸ್‌, ಥಾಮಸ್‌ ಜಫರ್‌ಸನ್‌, ಡಾರ್ವಿನ್‌ ಮೊದಲಾದವರನ್ನೂ ನೀಡಿದ್ದಾರೆ. ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಗೆ ಬೇಕಾದ ತಳಹದಿ ಹಾಕಿದವರೇ ಕ್ರೀಡೆ, ಇತಿಹಾಸ, ಸಾಮಾಜಿಕ ವಿಜ್ಞಾನಗಳು, ರಾಜಕೀಯ ಮೊದಲಾದವುಗಳಿಗೂ ಬೇಕಾದ ಗುಣಮಟ್ಟ ಮತ್ತು ಮಾನದಂಡಗಳನ್ನು ರೂಪಿಸುವ ಅವಕಾಶ ಪಡೆದರು.

ಭಾರತೀಯ ಕೃತಿಗಳನ್ನು ಅಳೆಯಲು ದೇಶೀಯವಾದ ಮೂಲಮಾನಗಳಿಗೆ ಹೋಗಬೇಕಾಗುತ್ತದೆ ಎಂದು ವಾದಿಸುವ ಜನರು ತಮ್ಮ ಎದುರಿಸುವ ಆ ವಾಸ್ತವ ಸತ್ಯದ ಜತೆ ಒಂದು ಒಪ್ಪಂದ ಅಥವಾ ತೀರ್ಮಾನಕ್ಕೆ ಬರಬೇಕಾಗುತ್ತದೆ.[5] ವಿಜ್ಞಾನ, ಇತಿಹಾಸ, ಸಾಮಾಜಿಕ ವಿಜ್ಞಾನಗಳು, ಕ್ರೀಡೆ, ಕಡೆಗೆ ರಾಜಕೀಯ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ಯುರೋಪ್‌ ಮೂಲದ ಜನ ರೂಪಿಸಿದ ಗುಣಮಟ್ಟ ಮತ್ತು ಮಾನದಂಡಗಳನ್ನು ಕೆಮಕ್‌ ಕಿಮಕ್‌ ಎನ್ನದೆ ಈಗಾಗಲೇ ಸ್ವೀಕರಿಸಲಾಗಿದೆ.

ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿನ ಅವರ ಅಳತೆಗೋಲು ಮತ್ತು ಮೂಲಮಾನಗಳನ್ನು ಒಪ್ಪಲಾಗುವುದಿಲ್ಲ ಎಂದು ಹೇಳಬರುತ್ತದೆಯೆ?

ತಾಂತ್ರಿಕ ಪ್ರಗತಿ ಮತ್ತು ನಿರ್ವಹಣಾ ನಿಪುಣತೆ ಆಧರಿಸಿ ಅಗಾಧ ಶ್ರೀಮಂತಿಕೆಯ ಸ್ಥಿರತೆ ಸಾಧಿಸಿರುವ ಜಪಾನ್‌ ಮತ್ತು ಅವಿಚ್ಛಿನ್ನವಾದ ಪರಂಪರೆ ಹಾಗೂ ಭಿನ್ನ ಸಿದ್ಧಾಂತ ಆಧಾರಿತ ವ್ಯವಸ್ಥೆ ಪಡೆದಿರುವುದಾಗಿ ಹೇಳುವ ಚೀನಾ ಕೂಡಾ ಯೂರೋಪಿನ ಪ್ರಭಾವವನ್ನು ನಿರಾಕರಿಸುವ ಸ್ಥಿತಿಯನ್ನು ಪಡೆಯಲಿಲ್ಲ. ಅನ್ಯಾಕ್ರಮಣಕ್ಕೆ ತಮ್ಮನ್ನು ತಾವು ಅಷ್ಟಾಗಿ ಒಡ್ಡಿಕೊಳ್ಳದ ಜಗತ್ತಿನ ಕೆಲವೇ ಜನಾಂಗಗಳ ಪೈಕಿ ಒಬ್ಬರಾದ ಜಪಾನಿಯರು ಮತ್ತು ಚೀನಿಯರು ಪಡೆದಿರುವ ತಾಂತ್ರಿಕ ಪರಿಣಿತಿ, ರಾಜಕೀಯ ಮತ್ತು ಆರ್ಥಿಕ ಮೊದಲಾದ ಚಿಂತನೆಗಳು ಒಂದಲ್ಲ ಒಂದು ರೂಪದಲ್ಲಿ ಯುರೋಪ್‌ ಮೂಲದವುಗಳಿಂದ ಪ್ರೇರಿತವಾದುವೇ ಆಗಿವೆ. ಯುರೋಪ್‌ ಮೂಲ ಎಂದರೆ ಇಲ್ಲಿ ಅದರ ವಿಸ್ತೃತ ರೂಪವಾದ ಉತ್ತರ ಅಮೆರಿಕವನ್ನು ಒಳಗೊಳ್ಳುತ್ತದೆ.

ಯುರೋಪ್‌ ಮೂಲದ ಸಧನೆ ಮತ್ತು ಭಾರತದ ಕವಿಗಳ ಸಂದರ್ಭದಲ್ಲಿ ಎತ್ತಲಾದ ಕೆಲ ಪ್ರಶ್ನೆಗಳು ಪರಸ್ಪರ ಬೇರೆ ಎಂಬಂತೆ ತೋರಿಬಂದರೂ, ಅವು ಬೇರೆ ಬೇರೆ ಅಲ್ಲ. ಆ ಕಾರಣವೆ ಅವುಗಳಲ್ಲಿ ಯಾವುದಾದರೂ ಒಂದು ಗುಂಪಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದಲ್ಲಿ ಮತ್ತೊಂದು ಗುಂಪಿನ ಪ್ರಶ್ನೆಗಳಿಗೂ ಉತ್ತರ ದಕ್ಕಿದಂತಾಗುತ್ತದೆ. ಯುರೋಪಿನ ಜನ ಎಪಿಕ್‌ ಹಾಡಲು ಆರಂಭಿಸಿದ ಸರಿಸುಮಾರಿನಲ್ಲಿಯೇ ಭಾರತದ ಜನ ಕೂಡ ಎಪಿಕ್‌ ಭಾಷೆ ಮಾತನಾಡುವುದನ್ನು ಕಲಿತರು. ಅದನ್ನನುಸರಿಸಿ ಅವರು ರೂಪಿಸಿದ ವಿಮರ್ಶೆಯ ಸೂತ್ರಗಳು ವಿಶ್ವಮಾನ್ಯತೆ ಪಡೆದುಕೊಳ್ಳಲು ಸಾಧ್ಯವಾದಂತೆ ಭಾರತೀಯವಾದುದಕ್ಕೆ ಸಾಧ್ಯವಾಗಲಿಲ್ಲ ಏಕೆ?

ಆ ಕಾರಣ ಯುರೋಪಿನ ಜನರ ಆತ್ಮ ವಿಶ್ವಾಸದ ಮೂಲ ಸೆಲೆ – ನೆಲೆಗಳನ್ನು ಶೋಧಿಸುವುದು ಎಂದರೂ ಒಂದೇ, ಭಾರತದ ಇತಿಮಿತಿ ಮತ್ತು ಅವಕಾಶಗಳ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಎಂದರೂ ಒಂದೇ.


 

[1]ಕಾಗದದ ತಯಾರಿಕೆ ಚೀನಾದ ಕೊಡುಗೆಯಾದಂತೆ, ಭಾರತೀಯರ ‘ಸೊನ್ನೆ’ಯನ್ನು ಉದಾಹರಣೆ ತೆಗೆದುಕೊಳ್ಳಬಹುದು.

[2]ಈ ಕೃತಿಯೂ ಆ ಮಾತಿಗೆ ಹೊರತಾದುದಾಗಿಲ್ಲದಿರಬಹುದು.

[3]Notes towards the Definition of Culture, ಪುಟ ೧೧೩.

[4]ಯೂರೋಪಿನ ಮಹಾನ್‌ ಪ್ರತಿಭಾವಂತ ಕವಿಯೊಬ್ಬ ಭಾರತೀಯ ಕವಿಯಿಂದ ಪ್ರೇರಿತವಾಗಿ ಮಾಡಿಕೊಂಡ ತಾಂತ್ರಿಕ ಮಾರ್ಪಾಡು ಕುರಿತ ವಿಚಾರ ‘ಏಕಮಾತ್ರ ಪ್ರತಿನಿಧಿ’ ಅಧ್ಯಾಯದಲ್ಲಿ ಬರಲಿದೆ.

[5]ಆ ಕೆಲಸ ನವೋದಯ ಕಾಲದಲ್ಲಿಯೇ ಆಗಬೇಕಿತ್ತು. It is not a novel even less is it a poem and still less a historical chronicle. ಎಂಬುದಾಗಿ ತನ್ನ ‘ಶಾಂತಿ ಮತ್ತು ಸಮರ’ ಕಾದಂಬರಿ ಕುರಿತಂತೆ ಹೇಳುವುದರ ಮೂಲಕ ಭಾರತೀಯರು ಬಹಳವಾಗಿ ಗೌರವಿಸುವ ಲಿಯೊ ಟಾಲ್ಸ್‌ಟಾಯ್‌ ೧೮೯೬ರ ವೇಳೆಗಾಗಲೇ ಕಾದಂಬರಿ ಪ್ರಕಾರ ತನ್ನ ತವರುಮನೆಯಲ್ಲಿ ಎದುರಿಸುತ್ತಿದ್ದ ಬಿಕ್ಕಟ್ಟಿನ ಸೂಚನೆ ನೀಡಿಯಾಗಿತ್ತು.