ಯುರೋಪಿನ ಕಾವ್ಯ ಪರಂಪರೆಯ ನಿರ್ಮಾಣದ ಹಂತದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವುದರ ಮೂಲಕ ಅವರ ಪ್ರಜ್ಞಾಕೇಂದ್ರವಾಗಿ ಬೆಳೆದುಕೊಂಡಿರುವ ವರ್ಜಿಲನ ಪೂರ್ಣ ಹೆಸರು, ಪುಬ್ಲಿಯಸ್‌ ವೆರ್ಜಿಲಿಯಸ್‌ ಮಾರೊ: ವಿಶಾಲ ಹೆಣೆ, ಬಲಿಷ್ಠ ಮೈಕಟ್ಟು ಮತ್ತು ನೋಡಲು ಎತ್ತರಕ್ಕೆ ಹಳ್ಳಿ ಗಮಾರನ ತರಹ ಕಾಣುತ್ತಿದ್ದ ಆತ ಹುಟ್ಟಿದ್ದು ಕ್ರಿ. ಪೂ. ೭೦ರ ಅಕ್ಟೋಬರ್‌ ೧೫ರಂದು, ಉತ್ತರ ಇಟಲಿಯ ಮಂತುಅ ಸಮೀಪದ ಯಾಂಡಿಸ್‌ ಗ್ರಾಮದಲ್ಲಿ. ‘ಕದಳೀ ಗರ್ಭಶ್ಯಾಮಂ’ ಎಂದು ಪಂಪ ಬಣ್ಣಿಸುವಷ್ಟರ ಮಟ್ಟಿಗೆ ಕಪ್ಪಗಿದ್ದನೆ ಎಂಬುದು ಗೊತ್ತಿಲ್ಲ. ಆದರೆ ಏಷ್ಯನ್ನರ ತರಹ ಕಪ್ಪು ಹೊಳಪಿನಿಂದ ಕೂಡಿದ್ದ ವರ್ಜಿಲ್‌, ಯುರೋಪಿನ ಸಮಸ್ತ ಚೇತನಶಕ್ತಿಯನ್ನು ಅದರ ಸಾರಸರ್ವಸ್ವ ರೂಪದಲ್ಲಿ ಗುರುತಿಸಿ ಅವರೆ ಬದುಕು, ಪ್ರಜ್ಞೆ ಮತ್ತು ವ್ಯಕ್ತಿತ್ವದ ಕೇಂದ್ರವಾದ ಲಿಖಿತ ಎಪಿಕ್‌ ಒಂದನ್ನು ನೀಡಿ ಹೋದ; ಯುರೋಪಿನ ಮನಸ್ಸು ಮತ್ತು ಪ್ರತಿಭೆಯ ಕೇಂದ್ರ ಆತ ಮತ್ತು ಆತನ ಕೃತಿ.

ವರ್ಜಿಲನ ಬರಹದ ಬದುಕು ಕುರಿತು ಲ್ಯಾಟಿನ್‌ನಲ್ಲಿ ಬರೆಯಲಾಗಿರುವ ಅನೇಕ ಕೃತಿಗಳು ಅತ್ಯಂತ ಆಪ್ತವೂ ಮತ್ತು ಆತ್ಮೀಯವೂ ಆದ ವಿವರ ನೀಡುತ್ತವೆ: ತಂದೆ ವರ್ಜಿಲಿಯಸ್‌ ಮಾರೊ ವೃತ್ತಿಯಿಂದ ಕುಂಬಾರ ಎಂಬುದಾಗಿ ಪ್ರತೀತಿ. ವರ್ತಕನೊಬ್ಬನ ಬಳಿ ಸಹಾಯಕನಾಗಿ ದುಡಿಮೆ ಆರಂಭಿಸಿದ ಆತ ಕಠಿಣ ಪರಿಶ್ರಮದಿಂದ ಮೇಲೆ ಬಂದು, ಕೊನೆಗೆ ತನ್ನ ಮಾಲೀನ ಮಗಳನ್ನು ಪತ್ನಿಯಾಗಿ ಸ್ವೀಕರಿಸಿ ಸ್ವತಂತ್ರ ಬದುಕು ಸಾಗಿಸಿದ ಎಂಬುದಾಗಿ ಮತ್ತೊಂದು ಮೂಲ ಭಾವಿಸುತ್ತದೆ. ವೃಕ್ಷಭರಿತ ತೋಟಗಳನ್ನು ಕೊಂಡು ಮಾರಾಟ ಮಾಡುವ ವ್ಯಾಪಾರದಲ್ಲಿ ತೊಡಗಿ ಸಾಕಷ್ಟು ಹಣ ಸಂಪಾದಿಸಿದ ವರ್ಜಿಲನ ತಂದೆ ಹೆಸರು ಗಳಿಸಿದ್ದು ಜೇನುಕೃಷಿಕನಾಗಿಯಂತೆ: ಇತಿಹಾಸದ ಪುಟಗಳಲ್ಲಿ ಗಮನಾರ್ಹ ಸಂಗತಿಯಾಗಿ ದಾಖಲಾಗುವ ಮಟ್ಟಿಗೆ ಅದರಲ್ಲಿ ಆತ ನೈಪುಣ್ಯತೆ ಸಾಧಿಸಿದ್ದ ಎಂಬುದು. ತಂದೆಯ ಕೃಷಿ ಬದುಕಿನ ಪ್ರಭಾವ, ಮಗನ ಕಾವ್ಯಕೃಷಿಯ ಮೇಲಾಯಿತು; ಕೃಷಿ ಮತ್ತು ಜೇನುಕೃಷಿ ಕುರಿತು ಕಾವ್ಯಕೃಷಿ ಮಾಡಿದ ಮೊದಲ ಕವಿ – ಋಷಿ ವರ್ಜಿಲ್‌.

ಮಲೆನಾಡಿನ ಹಿನ್ನೆಲೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ತಂದೆ ತಾಯಿಗಳ ಮಗನಾದ ವರ್ಜಿಲ್‌, ಆಹಾರ ಸೇವನೆಯಿಂದ ಹಿಡಿದು ಮಾತುಕತೆ ನಡೆನುಡಿಗಳಲ್ಲಿ ಮಿತಹಿತ ಕಾಪಾಡಿಕೊಂಡಿದ್ದವನು – ಪಂಪ ಹೇಳುವ ತರಹವೆ ಹಿತಮಿತ ಮೃದು ಮಧುರ ವಚನಂ; ‘ಆದರೆ ಸರೀಕರಂತೆ ಕೊಂಚ ದ್ರಾಕ್ಷಾರಸ ಸೇವಿಸುವ ಹವ್ಯಾಸ ಇಟ್ಟುಕೊಂಡಿದ್ದ’. ಕ್ರೆಯಾನ್‌ ಎಂಬ ಊರಿನಲ್ಲಿ ಪಡೆಯಲಾದ ಆರಂಭದ ಆತ ರೋಂಗೆ ಭೇಟಿ ನೀಡಿದ್ದು ಬಹಳ ಕಡಿಮೆ ಬಂದರೂ ಜನರಿಂದ ತಪ್ಪಿಸಿಕೊಳ್ಳಲು ಬಹಳ ಹೆಣಗಾಡುತ್ತಿದ್ದನಂತೆ. ಅಷ್ಟೊಂದು ಮುಜುಗರ ಮತ್ತು ಸಂಕೋಚ ಸ್ವಭಾವದ ವರ್ಜಿಲ್‌ ರೋಂ ನಗರದ ಬೆಟ್ಟದ ಸಾಲಿನಲ್ಲಿ ಸ್ವಂತ ಮನೆಯಿದ್ದರೂ ತನ್ನ ಕ್ರಿಯಾಶೀಲ ಬದುಕಿನ ಬಹುಭಾಗ ಕಳೆದುದು ನೇಪಲ್ಸ್‌ ಸಮೀಪದ ಹಳ್ಳಿಯ ಮನೆಯಲ್ಲಿ. ಸಿಸಿಲಿಯ ಮನೆಯಲ್ಲಿಯೂ ಕೆಲಕಾಲ ಇರುತ್ತಿದ್ದನಂತೆ. ವಕೀಲಿ ವೃತ್ತಿ ಹಿಡಿಯುವ ಮಹಾದಾಸೆಯಿಂದ ಗಣಿತ, ತತ್ವಜ್ಞಾನ, ಮೀಮಾಂಸೆ, ವೈದ್ಯಕೀಯ ಮೊದಲಾದ ಅನೇಕ ವಿಷಯಗಳಲ್ಲಿ ಅಪಾರ ಪರಿಣತಿ ಗಳಿಸಿದ್ದ ವರ್ಜಿಲ್‌ ಅಗಾಧ ತಿಳುವಳಿಕೆಯ ‘ಸಮಾಹಿತ ವ್ಯಕ್ತಿತ್ವದ ಪ್ರಾಜ್ಯ’ ಎಂಬುದಾಗಿ ತನ್ನ ಸಮಕಾಲೀನರಿಂದ ಬಹಳವಾಗಿ ಪ್ರಶಂಸೆಗೊಳಗಾಗಿದ್ದಾನೆ. ಎಲ್ಲೋ ಒಮ್ಮೆ ತನ್ನ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಆತ – ಗಾಂಧೀಜಿ ತರಹ – ಮತ್ತೆ ಆ ಕಡೆಗೆ ಹೋಗಲಿಲ್ಲ. ಆತನಿಗಿಂತಲೂ ಹೆಚ್ಚು ಕಲಿತವರು, ಬುದ್ಧಿವಂತರು, ಪ್ರತಿಭಾವಂತರು ಮತ್ತು ವಿವೇಕಿಗಳಾಗದವರನ್ನು ಈ ಜಗತ್ತು ಕಂಡಿರಬಹುದು: ಆದರೆ ಪ್ರತಿಭೆ, ಅಭಿವ್ಯಕ್ತಿ ಸಾಮರ್ಥ್ಯ, ಲೋಕಜ್ಞಾನ, ವಿನಯ, ವಿವೇಕ ಮತ್ತು ಕಾಲದ ಸ್ಪಂದನ ಇರಬೇಕಾದ ಪ್ರಮಾಣದಲ್ಲಿ ಇದ್ದ ವರ್ಜಿಲಂನಂತವರು ಕಾಣಸಿಗುವುದು ಬಹಳ ಅಪರೂಪಕ್ಕೆ.

ವೈದ್ಯಕೀಯ, ಜ್ಯೋತಿಷ, ಖಗೋಳ ವಿಜ್ಞಾನ ಮುಂತಾದ ಅನೇಕ ವಿಷಯ ಆಧಾರಿತ ಗ್ರಂಥಗಳನ್ನು ಛಂದೋಬದ್ಧವಾಗಿ ಬರೆಯುವ ಪದ್ಧತಿ, ಬರವಣಿಗೆ ಹೆಚ್ಚು ಚಾಲ್ತಿಯಲ್ಲಿಲ್ಲದಿದ್ದ ಆ ಕಾಲದಲ್ಲಿ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬಂದಿರಬಹುದು. ಆದರೂ ಜೇನು ಸಾಕಣೆ, ಕೃಷಿ ಮೊದಲಾದ ಜೀವಮೂಲ ಚಟುವಟಿಕೆಗಳಲ್ಲಿ ತೊಡಗುವಂತೆ ಜನರನ್ನು ಪ್ರೇರೇಪಿಸುವ ಸದುದ್ದೇಶದಿಂದ ಕಾವ್ಯ ಬರೆದವರು ಬಹಳ ಕಡಿಮೆ. ಅಂಥವರಲ್ಲಿ ವರ್ಜಿಲ್‌ ಒಬ್ಬ. ತುರುಗಾಹಿಗಳ ಕವಿ ಎಂದು ತನ್ನನ್ನು ತಾನು ಬಹಳ ಹೆಮ್ಮೆಯಿಂದ ಕರೆದುಕೊಳ್ಳುವ ವರ್ಜಿಲ್‌, ಕುರಿ ದನ ಕಾಯುವವರ ಒಲವಿನ ಬದುಕು ಕುರಿತು ಬರೆದಿರುವ ೧೦ ಪದ್ಯಗಳ ಅವನ ಮೊದಲ ಸಂಕಲನದ ಹೆಸರೇ ‘ಬ್ಯುಕೋಲಿಕ’ (ತುರುಗಾಹಿಗೀತೆ): ‘ಆಯ್ದ ಗೀತೆಗಳು’ (ಎಕ್ಲೋಗ್ಸ) ಎಂಬ ಮತ್ತೊಂದು ಹೆಸರು ಹಸ್ತಪ್ರತಿಯಲ್ಲಿ ಅಲ್ಲಲ್ಲಿ ನಮೂದಾಗಿರುವುದರಿಂದ ಅದನ್ನು ಆ ಹೆಸರಿನಿಂದಲೂ ಕರೆಯುವುದು ವಾಡಿಕೆ. ಕೊಳಲೂದುತ್ತಾ ಹಾಡು ಹಾಡಿಕೊಂಡು ಕುರಿ ದನ ಕಾಯುವವರ ನಲಿವಿನ ಬದುಕನ್ನು ವೈಭವೀಕರಿಸಿ ಪದ್ಯ ಪದ್ಯ ಬರೆಯುವ ಪರಂಪರೆ ಗ್ರೀಕ್ ಭಾಷೆಯಲ್ಲಿ ಬಹಳ ಹಿಂದಿನಿಂದಲೂ ಜನಪ್ರಿಯವಾಗಿತ್ತು. ಅದನ್ನೇ ಅನುಸರಿಸಿ ವರ್ಜಿಲ್‌ ಲ್ಯಾಟಿನ್‌ನಲ್ಲಿ ತುರುಗಾಹಿ ಗೀತೆಗಳನ್ನು ಬರೆಯುವ ಪರಂಪರೆ ಮುಂದುವರೆಸಿದ.

ಆತನ ಎರಡನೇ ಕೃತಿ ‘ಜೊರ್ಜಿಕ’ (ಕೃಷಿಗೀತೆ) ನಾಲ್ಕು ಸರ್ಗಗಳ ಎರಡು ಸಾವಿರ ಸಾಲಿನ ಖಂಡಕಾವ್ಯ: ಹೋಮರನ ಹೆಕ್ಸಾಮೀಟರನ್ನು ಅದರಲ್ಲಿ ಬಳಸುವ ವರ್ಜಿಲ್‌ ಜೇನು ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಬೇಸಾಯ ಇತ್ಯಾದಿ ಕೃಷಿಸಂಬಂಧಿತ ವಿಷಯಗಳನ್ನು ಬಹಳ ಜನಾಕರ್ಷಕವಾಗಿ ಮಂಡಿಸಲು ಪ್ರಯತ್ನಪಟ್ಟಂತೆ ಕಾಣುತ್ತದೆ. ಬೋಧಪ್ರದವಾದ ಅದರ ಉದ್ದೇಶವೇ ಜನರನ್ನು ಕೃಷಿ ಬದುಕಿಗೆ ಮರಳುವಂತೆ ಪ್ರೇರೇಪಿಸುವುದು.

ರೋಂ ಸಾಮ್ರಾಜ್ಯದ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ವರ್ಜಿಲನ ಜನಪ್ರಿಯತೆ ‘ಕೃಷಿಗೀತೆ’ ಬಂದನಂತರ ಮತ್ತೂ ಹೆಚ್ಚಾಯಿತು. ಹಳ್ಳಿಗರ ತರಹ ತಡೆತಡೆದು ಮಾತನಾಡುತ್ತಿದ್ದ ವರ್ಜಿಲ್‌; ಕಾವ್ಯ ಓದುವಾಗ ತನಗೆ ದತ್ತವಾಗಿ ಬಂದಿದ್ದ ಮಾಂತ್ರಿಕತೆಯಿಂದ ಕೇಳುಗರ ಮನಸೂರೆಗೊಳ್ಳುತ್ತಿದ್ದ. ಆತನ ಕಾವ್ಯಭಾಗಗಳನ್ನು ಆತನ ಬಾಯಿಯಿಂದಲೇ ಓದಿಸಿ ಕೇಳಿ, ಖುಷಿಪಟ್ಟವರ ಪೈಕಿ ಚಕ್ರವರ್ತಿ ಆಗಸ್ಟಸ್‌ ಕೂಡ ಒಬ್ಬ. ಅದರಲ್ಲೂ ಅಗಸ್ಟಸ್‌ ಖುದ್ದಾಗಿ ಕವಿಯ ಮನೆಗೆ ಬಂದು, ಜತೆಯಲ್ಲಿ ಕುಳಿತು ಕಾವ್ಯ ಓದಿಸಿ ಕೇಳಿ ಸಂತಸಪಡುವ ಸಂಭ್ರಮ ಅನುಭವಿಸಿರಬೇಕಾದರೆ! ರಸ್ತೆಯಲ್ಲಿ ಎಲ್ಲಿಯೂ ಓಡಾಡುವಂತಿರಲಿಲ್ಲ. ಜನ ಕೈ ಮಾಡಿ ಗುರುತಿಸಿದರು ಎಂಬ ಒಂದೇ ಕಾರಣಕ್ಕೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ರೋಂ ನಗರಕ್ಕೆ ಬಂದಿದ್ದ ವರ್ಜಿಲ್‌ ಅಲ್ಲಿಂದ ತಪ್ಪಿಸಿಕೊಂಡು ಮರಳಿ ಮನೆಗೆ ಹೋದ ಘಟನೆಯ ವಿವರಗಳನ್ನು ಆತನ ಸಮಕಾಲೀನರು ನಿರ್ಮತ್ಸರದಿಂದ ದಾಖಲಿಸಿದ್ದಾರೆ. ಹಳ್ಳಿಗನಾಗಿಯೆ ಉಳಿದು ಹಳ್ಳಿಗರ ತರಹ ಅಷ್ಟೊಂದು ರಸಭರಿತವಲ್ಲದ ಬದುಕು ಸಾಗಿಸಿದ ವರ್ಜಿಲ್‌ ಬರೆದುದು. ಅತ್ಯಂತ ವಿಷಾದದಿಂದ ತುಂಬಿರುವ ರಾಜ ಗಾಂಭೀರ್ಯದ ಮಾರ್ಗಶೈಲಿಯ ಶಿಷ್ಟ ಕಾವ್ಯ.

ಒಂದು ದಿನದಲ್ಲಿ ಆತ ಬರೆಯುತ್ತಿದ್ದುದು ಹೆಚ್ಚೆಂದರೆ ೧೦ ಸಾಲು. ಆ ಸಾಲುಗಳನ್ನು ಮತ್ತೆ ಮತ್ತೆ ಪರಿಷ್ಕರಿಸುವುದರಲ್ಲಿ ಇಡೀ ದಿನ ಕಳೆಯುತ್ತಿದ್ದ ಪುಣ್ಯಾತ್ಮನಿಗೆ ಎಷ್ಟು ತಿದ್ದಿತೀಡಿದರೂ ತೃಪ್ತಿಯಿಲ್ಲ. ೮೨೯ ಸಾಲುಗಳ ‘ಬ್ಯುಕೋಲಿಕ’ ಪೂರ್ಣಗೊಳಿಸಲು ಕ್ರಿ.ಪೂ. ೪೨ ರಿಂದ ೩೯ ರ ನಡುವೆ ಮೂರು ವರ್ಷ ಕಾಲ ತೆಗೆದುಕೊಂಡ ವರ್ಜಿಲ್‌, ‘ಜೊರ್ಜಿಕ’ ಪೂರ್ಣಗೊಳಿಸಲು ತೆಗೆದುಕೊಂಡ ಅವಧಿ ಸುಮಾರು ೭ ವರ್ಷ – ೩೭ ರಿಂದ ೩೦ರವರೆಗೆ. ಯುರೋಪಿನ ಎವರೆಸ್ಟ್‌ ಆದ ಒಂಬತ್ತು ಸಾವಿರ ಸಾಲಿನ ೧೨ ಸರ್ಗಗಳ ‘ಈನೀಡ್‌’ ರಚಿಸಲು ತೆಗೆದುಕೊಂಡ ಕಾಲ, ೧೦ ವರ್ಷಗಳಿಗೂ ಹೆಚ್ಚು.

ಗದ್ಯರೂಪದಲ್ಲಿ ‘ಈನೀಡ್‌’ ಬರೆಯಲು ಆರಂಭಿಸಿದ ವರ್ಜಿಲ್‌ ಎಷ್ಟೋ ಸರ್ಗಗಳನ್ನು ಬರೆದಾದ ನಂತರ ಮಧ್ಯದಲ್ಲಿ ಅದನ್ನು ಪದ್ಯರೂಪಕ್ಕೆ ಪರಿವರ್ತಿಸಿದ. ಹಾಗಾಗಿ ಕೃತಿಗೆ ಗದ್ಯದ ಶಿಸ್ತು ಮತ್ತು ಪದ್ಯದ ಬಂಧ ದೊರಕಲು ಸಾಧ್ಯವಾಗಿದೆ. ಬರೆಯಬೇಕು ಎಂದು ಅನ್ನಿಸಿದ್ದನ್ನೆಲ್ಲ ಬರೆದು ನಂತರ ಸರಿಕಂಡ ಸಾಲುಗಳನ್ನು ಮಾತ್ರ ಉಳಿಸಿಕೊಂಡು ಮಿಕ್ಕವುಗಳನ್ನು ವರ್ಜಿಸುವುದು ವರ್ಜಿಲನ ಬರವಣಿಗೆಯ ಕ್ರಮ. ಆ ರೀತಿ ಅಂತಿಮ ಸುತ್ತಿನಲ್ಲಿ ಒಪ್ಪಿತವಾದ ಸಾಲುಗಳನ್ನು ಪರಿಷ್ಕರಿಸಿ ಪುಟ ನೀಡುವುದರಲ್ಲಿ ದಿನದ ಉಳಿಕೆ ಸಮಯ ಕಳೆದು ಹೋಗುತ್ತಿತ್ತು. ಆಯಾಸವಾದಾಗ ತನ್ನ ಆಪ್ತ ಸಹಾಯಕನಿಗೆ ಹೇಳಿ ಬರವಣಿಗೆ ಮುಂದುವರಿಸುತ್ತಿದ್ದ ವರ್ಜಿಲ್‌ ಸ್ಫೂರ್ತಿಗಾಗಿ ಪರಿತಪಿಸುತ್ತಿದ್ದನಂತೆ; ಬರಲಿಲ್ಲ ಎಂದು ಅನ್ನಿಸಿದಾಗ ಬರವಣಿಗೆ ರೂಪ ಪಡೆದುಕೊಂಡಿದ್ದ ಸಾಲುಗಳನ್ನೇ ಮತ್ತೆ ಓದಿಸಿ ಕೇಳಿಸಿಕೊಳ್ಳುತ್ತಾ ಹೋಗುವುದು, ಸ್ಫೂರ್ತಿ ಬಂದಿತು ಎಂದೆನ್ನಿಸಿದ ಕ್ಷಣವೇ ಕಾವ್ಯ ಬರೆಯುವುದನ್ನು ಮುಂದುವರಿಸುವುದು ಆತನ ಕಠಿಣ ದಿನಚರಿ. ಬರವಣಿಗೆ ಸ್ಫೂರ್ತಿ ತರುವ ಕೆಲಸ ಮಾತ್ರವಲ್ಲ ಬೆವರು ಹರಿಸುವ ಕಾಯಕ ಎಂಬುದನ್ನು ಬಹಳ ಹಿಂದೆಯೇ ಕಂಡುಕೊಂಡ ವರ್ಜಿಲ್‌ ಎಂದೂ ಸ್ಫೂರ್ತಿಯ ಮಹತ್ವವನ್ನು ಪ್ರಶ್ನಿಸುವ ಗೋಜಿಗೆ ಹೋದವನಲ್ಲ. ಅಷ್ಟಾದರೂ ತಾನು ಬರೆದುದು ಸರಿಬರಲಿಲ್ಲ ಎಂಬ ಅತೃಪ್ತಿಯ ಬೇಗುದಿಯಲ್ಲೇ ಪ್ರಾಣಬಿಟ್ಟ, ವರ್ಜಿಲ್‌, ‘ಈನೀಡ್‌’ನ ಹಸ್ತಪ್ರತಿಯನ್ನು ಸುಟ್ಟುಬಿಡುವಂತೆ ಸಾಯುವುದಕ್ಕೆ ಮೊದಲು ಸ್ನೇಹಿತರಿಂದ ಮಾತು ತೆಗೆದುಕೊಳ್ಳುವುದನ್ನು ಮರೆಯದ ನಿಸ್ಪೃಹ.

ಗ್ರೀಕ್‌ ಭಾಷೆ ಮತ್ತು ಹೋಮರನನ್ನು ಮಾದರಿಯಾಗಿ ಸ್ವೀಕರಿಸಿದ ವರ್ಜಿಲ್‌, ಪರಿಷ್ಕರಿಸಿದ ‘ಈನೀಡ್‌’ಗೆ ಅಂತಿಮ ರೂಪ ನೀಡುವ ಉದ್ದೇಶದಿಂದ ಗ್ರೀಸ್‌ಗೆ ಹೋಗಿ ಅಲ್ಲಿ ಮೂರು ವರ್ಷ ಕಾಲ ತಂಗಿದ್ದ. ಆರೋಗ್ಯ ಹದಗೆಟ್ಟ ಕಾರಣ, ಮಧ್ಯದಲ್ಲೇ ಇಟಲಿಗೆ ಮರಳಬೇಕಾಯಿತು. ಯಾವುದೋ ರಾಜಕಾರ್ಯನಿಮಿತ್ತ ಅಲ್ಲಿಗೆ ಹೋಗಿದ್ದ ಅಗಸ್ಟಸ್‌ ಮರಳಿ ಬರುವಾಗ ತನ್ನ ಜೊತೆಯಲ್ಲಿಯೆ ವರ್ಜಿಲನನ್ನು ಕರೆತರುತ್ತಾನೆ. ‘ಈನೀಡ್‌’ ಕಾವ್ಯದ ೫೭ – ೫೮ ಸಾಲುಗಳು ಅಪೂರ್ಣವಾಗುಳಿಯಲು ಆ ಹಿನ್ನೆಲೆಯೇ ಕಾರಣ ಎಂದು ಲ್ಯಾಟಿನ್‌ ವಿದ್ವಾಂಸರು ಭಾವಿಸುತ್ತಾರೆ: ಅಪೂರ್ಣ ಎನ್ನುವುದಕ್ಕಿಂತ ಇತರೇ ಸಾಲುಗಳ ತರಹ ತಿದ್ದಿ ತೀಡಿ ಅವುಗಳಿಗೂ ಅಂತಿಮ ರೂಪ ನೀಡಲಾಗಲಿಲ್ಲ ಎಂದು ಅರ್ಥೈಸುವುದೇ ಸರಿ. ಅಗಸ್ಟಸ್‌ನ ಕೋರಿಕೆಯಂತೆ ಹಸ್ತಪ್ರತಿಯನ್ನು ಸುಡುವ ವಿಚಾರವನ್ನು ಕೈಬಿಟ್ಟ ವರ್ಜಿಲನ ಸ್ನೇಹಿತರು ‘ಈನೀಡ್‌’ ಕೃತಿಯನ್ನು ಕವಿ ಬಿಟ್ಟು ಹೋದ ರೂಪದಲ್ಲೇ ಪ್ರಕಟಿಸಿದರು. ಅವರಲ್ಲಿ ಕೆಲವರು ರಾಜಕಾರಣಿಗಳು.

ಜೂಲಿಯಸ್‌ ಸೀಸರನ ಹತ್ಯೆಯಾದಾಗ ವರ್ಜಿಲ್‌ ೨೫ರ ತರುಣ. ಸೆನೆಟ್‌ಗೆ ಪರಮಾಧಿಕಾರವಿದ್ದ ರೋಮ್‌ ಗಣತಂತ್ರ ವ್ಯವಸ್ಥೆಯಲ್ಲಿ ಗುಲಾಮರು, ಮಹಿಳೆಯರು ಮತ್ತು ದುಡಿವ ವರ್ಗದ ಜನರಿಗೆ ಮತದಾನದ ಹಕ್ಕಿರಲಿಲ್ಲ. ಸದಾ ಮೊರಗುಡುತ್ತಿದ್ದ ವರ್ಗಸಂಘರ್ಷ ಮತ್ತು ಕೊನೆ ಮೊದಲಿಲ್ಲದ ಭ್ರಷ್ಟಾಚಾರಗಳಿಂದ ಹೊಲಸೆದ್ದು ಹೋಗಿದ್ದ ಚುನಾವಣಾ ವ್ಯವಸ್ಥೆ; ಹಾಗಾಗಿ ನಾಮಕಾವಸ್ಥೆ ಮಟ್ಟಕ್ಕಿಳಿದುಕೊಂಡಿದ್ದ ಗಣತಂತ್ರದ ಅಣಕುರೂಪದ ಸೆನೆಟ್‌ಗೆ ನಿಷ್ಠೆ ತೋರಿಸುತ್ತಲೇ ಫ್ರಾನ್ಸ್‌, ಇಂಗ್ಲೆಂಡ್‌ ಮೊದಲಾದ ದೇಶಗಳನ್ನು ಗೆದ್ದು ರೋಮ್‌ ಸಾಮ್ರಾಜ್ಯದ ವ್ಯಾಪ್ತಿ ವಿಸ್ತರಿಸಿದ ಜೂಲಿಯಸ್‌ ಸೀಸರ್‌ನ ಹತ್ಯೆಯಾದ ನಂತರ ಅಧಿಕಾರಕ್ಕೆ ಬಂದ ಅವನ ದತ್ತುಪುತ್ರ ಅಗಸ್ಟಸ್‌ ಕಿರೀಟ ಧರಿಸದೆ ಮತ್ತು ತನ್ನನ್ನು ತಾನು ಚಕ್ರವರ್ತಿ ಎಂದು ಎಲ್ಲೂ ಕರೆಸಿಕೊಳ್ಳದೆ ಚಕ್ರವರ್ತಿ ತರಹ ಆಳ್ವಿಕೆ ನಡೆಸಿದ್ದು ಈ ಜಗತ್ತಿನ ರೋಚಕ ಸಂಗತಿಗಳಲ್ಲಿ ಒಂದು. ಗೌರವಾನ್ವಿತ, ಸೃಜನಶೀಲ ಮತ್ತು ಬಲಶಾಲಿ ಎಂದೆಲ್ಲ ಅನೇಕ ಅರ್ಥ ನೀಡುವ ‘ಅಗಸ್ಟಸ್‌’ ಎಂಬುದಾಗಿ ತನ್ನ ಹೆಸರು ಬದಲಿಸಿಕೊಂಡ ಅಕ್ಟೇವಿಯಸ್‌ ಆತನ ಮೂಲ ಹೆಸರು ಅದರ ಮುಂದೆ ತನ್ನ ಸಾಕು ತಂದೆಯ ಹೆಸರನ್ನು ಸೇರಿಸಿಕೊಳ್ಳುವುದರ ಮೂಲಕ ಅಗಸ್ಟಸ್‌ ಸೀಸರ್‌ ಆಗುತ್ತಾನೆ. ಜೂಲಿಯಸ್‌ ಸೀಸರ್‌ ಸೋತ ಕಡೆ ಗೆಲುವು ಸಾಧಿಸಿದ ಅಗಸ್ಟಸ್‌ ರಾಜಕೀಯ ಎಂಬ ಮಾತಿಗೆ ಹೊಸ ವ್ಯಾಖ್ಯಾನ ನೀಡಿದ ‘ವಿವೇಕಿ’, ಮತ್ತು ಗಣತಂತ್ರವನ್ನು ಬಲಪಡಿಸುವುದಾಗಿ ಘೋಷಿಸುತ್ತಲೇ ಯುರೋಪಿನ ನೆಲದಲ್ಲಿ ವಂಶಾಧಾರಿತ ಚಕ್ರಾಧಿಪತ್ಯ ವ್ಯವಸ್ಥೆಯನ್ನು ಹುಟ್ಟುಹಾಕಿದ ‘ಸಾಮ್ರಾಜ್ಯಷಾಹಿ’, ಯುರೋಪಿನಲ್ಲಿ ಸೀಸರ್‌ ವ್ಯವಸ್ಥೆ ಜಾರಿಗೆ ಬಂದುದೆ ಅಗಸ್ಟಸ್‌ನಿಂದ. ಗಣತಂತ್ರ ಮತ್ತು ರಾಜಸತ್ತೆ ನಡುವಿನ ಅಂತರ ಬಹಳ ಕಿರಿದಾದುದು. ಒಂದರಿಂದ ಮತ್ತೊಂದರಕ್ಕೆ ಹೊರಳುವುದು ಬಹಳ ಕಷ್ಟದ ವಿಚಾರವೇನಲ್ಲ ಎಂಬುದನ್ನು ಈ ಜಗತ್ತಿಗೆ ತೋರಿಸಿಕೊಟ್ಟವನೆ ಅಗಸ್ಟಸ್‌. ಗೊಂದಲ ಮತ್ತು ಅವ್ಯವಸ್ಥೆಯಿಂದ ತುಂಬಿದ್ದ ರೋಮ್‌ಗೆ ಸಾಮ್ರಾಜ್ಯ ಸ್ಥಿರತೆ ತಂದು ಕೊಟ್ಟವನು ಆತನೆ.

ಅಂತಹ ರಾಜಕೀಯ ಸ್ನೇಹವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡ ಆಕ್ಷೇಪ. ವರ್ಜಿಲನ ಮೇಲೆ ಇಲ್ಲದಿಲ್ಲ ಸರ್ಕಾರ ವಶಪಡಿಸಿಕೊಂಡಿದ್ದ ತನ್ನ ತಂದೆಯ ಆಸ್ತಿಯನ್ನು ಮರಳಿ ಪಡೆಯಲು ಸಾಧ್ಯವಾದುದು ರಾಜಕೀಯ ಸಾಮೀಪ್ಯದಿಂದ ಎಂಬ ಪಿಸುಮಾತಿದೆ. ಗೆಲುವು ಸಾಧಿಸಿ ಯುದ್ಧಭೂಮಿಯಿಂದ ಮರಳಿ ಬಂದ ಸೈನಿಕರಿಗೆ ಪುನರ್ವಸತಿ ಕಲ್ಪಿಸಲು ಕೆಲವರ ಆಸ್ತಿ ವಶಪಡಿಸಿಕೊಳ್ಳುತ್ತಿದ್ದುದು ಆ ಕಾಲದಲ್ಲಿ ವಾಡಿಕೆ. ಅದರಂತೆ ಸರ್ಕಾರದ ಪಾಲಾಗಿದ್ದ ತನ್ನ ತಂದೆಯ ಆಸ್ತಿಯನ್ನು ಮರಳಿ ಪಡೆಯಲು ತನಗೆ ಪ್ರಕೃತಿದತ್ತವಾಗಿ ಬಂದಿದ್ದ ಕವಿತ್ವಶಕ್ತಿ ಮತ್ತು ಪ್ರತಿಭೆಯನ್ನು ದುರ್ಬಳಕೆ ಮಾಡುವ ಅಗತ್ಯ ವರ್ಜಿಲನಿಗೆ ಬಂದಿರಲಾರದು. ಆತನ ಅಪೇಕ್ಷೆ ಮತ್ತು ಬಯಕೆಗಳು ಸೀಮಿತವಾದುವುಗಳಾಗಿದ್ದವು. ಆತ ಕಾವ್ಯ ಬರೆದುದು ಕೀರ್ತಿ, ಹಣ, ವರ್ಚಸ್ಸು ಅಥವಾ ಮತ್ತಾವುದೇ ತರಹದ ವೈಯಕ್ತಿಕ ಲಾಭಗಳಿಗಾಗಿ ಯಾಗಿರಲಿಲ್ಲ. ಆ ಅಭಿಪ್ಸೆಗಳು ಆತನಿಗೆ ಸಂಪೂರ್ಣ ಇರಲೇ ಇಲ್ಲ ಎಂಬುದು ಆ ಮಾತಿನ ಅರ್ಥವಲ್ಲ. ಆದರೆ ವೈಯಕ್ತಿಕವಾದ ಆಮಿಷ ಮತ್ತು ಪ್ರಲೋಭನೆಗಳನ್ನು ಮೀರಿದ ಮಹಾನ್‌ ಕಾರಣಗಳಿಗಾಗಿ ಕಾವ್ಯ ಬರೆದವನು ಆತ; ಘನವಾದ ಉದ್ದೇಶ ಇಟ್ಟುಕೊಂಡು ಕಾವ್ಯ ಬರೆಯಲು ಮುಂದಾದ ವರ್ಜಿಲ್‌, ಈ ಜಗತ್ತಿನ ಇತಿಹಾಸದಲ್ಲೆ ಪ್ರಾಯಶಃ ಮೊದಲ ಬಾರಿಗೆ ಕಾವ್ಯದ ತಲೆಯ ಮೇಲೆ ಘನವಾದ ಜವಾಬ್ದಾರಿ ಮತ್ತು ಉದ್ದಿಶ್ಶ ಹೊರಿಸುವ ಪ್ರಯತ್ನ ಮಾಡಿದ ಕವಿ.

ಜತೆಗೆ, ತಾನು ಹುಟ್ಟಿರುವುದೆ ಕಾವ್ಯ ಬರೆಯಲು ಮತ್ತು ಬದುಕಬೇಕಾಗಿರುವುದೇ ಅದಕ್ಕಾಗಿ ಎಂಬ ತರಹದಲ್ಲಿ ಬದುಕು ಸಾಗಿಸಿದವನು: ಆ ಕಾರಣ ತನ್ನ ತಂದೆಯ ಆಸ್ತಿ ಮರಳಿ ಬಂದಲ್ಲಿ ಯಾವುದೇ ಆತಂಕವಿಲ್ಲದೆ ಮತ್ತು ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡುವ ತಾಪತ್ರಯಕ್ಕೆ ಒಳಗಾಗದೆ ಬದುಕನ್ನು ಕಾವ್ಯರಚನೆಗಾಗಿ ನಿರಾತಂಕದಿಂದ ಸಮರ್ಪಿಸಿಕೊಳ್ಳಬಹುದು ಎಂದು ಆತ ಭಾವಿಸಿದ್ದಿರಬಹುದು. ಅದನ್ನು ಅರಿತ ಆತನ ರಾಜಕಾರಣಿ ಗೆಳೆಯರು ತಂದೆಯ ಆಸ್ತಿ ಮರಳಿ ವರ್ಜಿಲನಿಗೆ ದಕ್ಕುವಂತೆ ಪ್ರಭಾವ ಬೀರಿರಬಹುದು. ಅದರಿಂದ ಒಳ್ಳೆಯದೇ ಆಯಿತು. ಅದೇ ತರಹ ಬದುಕು ಸಾಗಿಸಿದ ವರ್ಜಿಲ್‌: ‘ಈನೀಡ್‌’ ಬರೆದು ಮುಗಿಸಿದವನೆ ತಾನು ಬಂದ ಕೆಲಸ ಮುಗಿಯಿತು ಎಂಬಂತೆ ಈ ಜಗತ್ತಿಗೆ ವಿದಾಯ ಹೇಳುತ್ತಾನೆ. ತನ್ನ ಚರಮಗೀತೆಯನ್ನು ಸಾಯುವ ಮುನ್ನ ತಾನೇ ಬರೆದು ಸತ್ತಿರುವುದಾಗಿ ಅನೇಕರು ಭಾವಿಸುತ್ತಾರೆ. ಬೇರೆ ಯಾರಾದರೂ ಬರೆದು ಆತನ ತಲೆಗೆ ಕಟ್ಟಿರುವ ಸಾಧ್ಯತೆ ಇಲ್ಲದಿಲ್ಲ. ಏನಾದರಿರಲಿ, ಆತನ ಸಮಾಧಿ ಮೇಲೆ ಕೆತ್ತಲಾಗಿರುವ ನಾಲ್ಕು ಸಾಲುಗಳ ಮಾತು ಅವನ ವ್ಯಕ್ತಿತ್ವ, ಬದುಕು, ಕೃತಿ ಮತ್ತು ಸಾಧನೆಗೆ ಹೇಳಿ ಮಾಡಿಸಿದಂತಿದೆ:

ಹಳ್ಳಿಗಾಡ ತೋಟ ತುಡಿಕೆ, ಯುದ್ಧನಿರತ
ಧೀರರ ಹಾಡ ಹಾಡಿದ ನನ್ನ ಹೆತ್ತವಳು ಮಂತುಅ:
ಕ್ಯಾಲಬ್ರಿ ಕೊನೆಗೂ ಕಿತ್ತುಕೊಂಡ ನನ್ನನ್ನು
ತನ್ನಲ್ಲಿ ಐಕ್ಯಮಾಡಿಕೊಂಡಳು ಪಾರ್ಥೆನೊಪೆ.

ಇಟಲಿಯ ಮಂತುಅ ಪ್ರದೇಶದಲ್ಲಿ ಹುಟ್ಟಿದ ವರ್ಜಿಲ್‌ ಸತ್ತದ್ದು ಕ್ರಿ.ಪೂ. ೧೯ರ ಸೆಪ್ಟೆಂಬರ್‌ ೨೧ ರಂದು, ಕ್ಯಾಲಬ್ರಿ ಜಿಲ್ಲೆಯಲ್ಲಿ, ಆತನ ಸಮಾಧಿ ಇರುವ ಭಾಗವೇ ಪಾರ್ಥೆನೊಪೆ, ಈಗಿನ ನೇಪಲ್ಸ್‌. ಆತನಿಗೆ ಆಗ ಐವತ್ತರ ತುಂಬಪ್ರಾಯ. ಬಾಳುವೆಯ ಹಾದಿಯಲ್ಲಿ ಸಾಗಬೇಕಾದ ವಯಸ್ಸು. ವರ್ಜಿಲನ ಆರೋಗ್ಯ ಮೊದಲಿನಿಂದಲೂ ನಾಜೂಕಿನದಾಗಿತ್ತು ಎಂಬ ಮಾತಿದೆ.

ಅಗಸ್ಟಸ್‌ ಮತ್ತು ಆತನ ಕೆಲ ಸಮಕಾಲೀನ ಜತೆ ವರ್ಜಿಲನಿಗೆ ಇದ್ದ ಸ್ನೇಹ ಅನೇಕ ರೀತಿಯಿಂದ ಬಹಳ ವಿಶಿಷ್ಟವಾದುದು. ಆ ಸ್ನೇಹ ಇಡೀ ಜಗತ್ತಿನ ಅದರಲ್ಲೂ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿಯೆ ಅಪರೂಪದ ಸಂಗತಿ. ಆ ಅಪೂರ್ವ ಹೊಂದಾಣಿಕೆ ಫಲವೇ ‘ಈನೀಡ್‌’. ಈನಿಯಾಸ್‌ನಂತಹ ಸಮಾಹಿತ ವ್ಯಕ್ತಿತ್ವದ ಆದರ್ಶ ನಾಯಕನ ಚಿತ್ರಣ ರೂಪುಗೊಂಡ ಹಿನ್ನೆಲೆಯಲ್ಲಿ ಅಂತಹ ಅನೇಕ ಪೂರಕ ಸಂಗತಿಗಳು ಪ್ರಮುಖ ಪಾತ್ರ ವಹಿಸಿವೆ. ಕಾಲವೂ ಅದಕ್ಕೆ ತಕ್ಕುದಾಗಿತ್ತು.

ತನ್ನ ಸಮಕಾಲೀನ ಸಮಾಜದ ಬಿಕ್ಕಟ್ಟು ಮತ್ತು ಕಾಲಕ್ಕೆ ಸ್ಪಂದಿಸಿ ಆ ಬಿಕ್ಕಟ್ಟನ್ನು ಲಿಖಿತ ಎಪಿಕ್‌ ಆಗಿ ಪರಿವರ್ತಿಸುವ ವಿಚಾರದಲ್ಲಿ ಇಂದಿಗೂ ಮಾದರಿಯಾಗಿ ಉಳಿದಿರುವ ವರ್ಜಿಲ್‌: ಅಂತಹ ಕೃತಿ ಮಾತ್ರ ಏಕಕಾಲದಲ್ಲಿ ಪುರಾಣ, ಇತಿಹಾಸ ಮತ್ತು ಕಾದಂಬರಿಯಾಗಿ ಬೆಳೆಯಲು ಸಾಧ್ಯ ಎಂಬುದನ್ನು ಈ ಜಗತ್ತಿಗೆ ಕಲಿಸಿಕೊಟ್ಟವನು. ಹಿಮಾಲಯದೆತ್ತರದ ಸಾಧನೆ ಮಾತ್ರ ಉಳಿದ ಮಾನವ ಸಾಧನೆಗಳ ಅಳತೆಗೋಲು ಅಥವಾ ಮಾನದಂಡವಾಗಲು ಸಾಧ್ಯ ಎಂಬ ಮಾತನ್ನು ಪದ್ಯರೂಪದಲ್ಲಿ ಬರೆದಾತ ಭಾರತದ ಕವಿ: ಆ ಮಾತನ್ನು ಎಲ್ಲಿಯೂ ಆಡಿ ತೋರಿಸದೆ ಮಾಡಿ ತೋರಿಸಿದವನು ವರ್ಜಿಲ್‌. ಹಿಮಾಲಯದೆತ್ತರದ ಕಾವ್ಯ ನೀಡುವುದರ ಜತೆಗೆ ಅದೆ ಎತ್ತರದ ವ್ಯಕ್ತಿತ್ವದ ಚಿತ್ರಣ ನೀಡಿದವನೂ ಆತನೇ. ಕವಿ ಋಷಿಕಲ್ಪನೆ ನೀಡಿದವರೂ ಭಾರತೀಯರೆ ; ಆ ಬದುಕು ಬದುಕಿ ಎಪಿಕ್‌ ಬರೆದವನು ವರ್ಜಿಲ್‌.

ಅಂತಹ ವರ್ಜಿಲನನ್ನು ಕ್ರಿಶ್ಚಿಯನ್‌ ಸಂಸ್ಕೃತಿಯ ಹರಿಕಾರ ಅಥವಾ ಮುಂಗೋಳಿ ಎಂಬುದಾಗಿ ಪಶ್ಚಿಮ ಜಗತ್ತು ಆರಾಧಿಸುತ್ತದೆ. ಕ್ರಿಸ್ತ ಬರುವುದಕ್ಕೆ ಮೊದಲೇ ಆತನ ಆಗಮನ ಸಾರುವ ಪದ್ಯವನ್ನು ವರ್ಜಿಲ್‌ ಬರೆದಿರುವ ನಂಬಿಕೆ, ಆ ಗೌರವಕ್ಕೆ ಕಾರಣವಾಗಿದ್ದಿರಬಹುದು. ವಾಸ್ತವವಾಗಿ ನೋಡುವುದಾದರೆ, ಪಶ್ಚಿಮ ಸಂಸ್ಕೃತಿ ಮತ್ತು ಜಗತ್ತಿನ ಆಗಮನದ ದಟ್ಟ ಸೂಚನೆಯನ್ನು ವರ್ಜಿಲನಲ್ಲಿ ಕಾಣಬಹುದಾಗಿದೆ. ಯುರೋಪಿನ ಆಧುನಿಕ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸ ವರ್ಜಿಲನಿಂದ ಆರಂಭವಾಗುವಂತೆ, ಆಧುನಿಕ ರಾಜಕಾರಣದ ಮೂಲ ಅಗಸ್ಟಸ್‌ನಿಂದ ಮೊದಲಾಗುತ್ತದೆ.