ಯುರೋಪಿನ ಆ ಮೂಲಕ ಮಾನವ ಜನಾಂಗದ ಅನಾಟಮಿಯನ್ನು ಬಹಳ ಸಂಕ್ಷಿಪ್ತವಾಗಿ ಅದರ ಎಲ್ಲ ವೈವಿಧ್ಯಮಯ ರೂಪಗಳಲ್ಲಿ ಹೆಚ್ಚಗೆ ಕತ್ತರಿಸಿ ತೋರಿಸಿದ ಕವಿ ಯಾರಾದರೂ ಇರುವುದಾದಲ್ಲಿ, ಆತ ದಾಂತೆ; ಜಗಳಗಂಟಿ, ತಲೆಹರಟೆ, ಕಿತಾಪತಿ, ತಲೆಪ್ರತಿಷ್ಠೆ, ಗರ್ವಿ, ಹುಡುಗಾಟಿಕೆ ಬುದ್ಧಿಯ ಹುಳಿ ಮನಸ್ಸಿನ ಕಹಿ ಮನುಷ್ಯ ಎಂದೆಲ್ಲಾ ಮೂದಲಿಕೆಗೆ ತುತ್ತಾದ ಆತ ಮೃದು ಹೃದಯಿ, ಸೋಲೊಪ್ಪದ ಕನಸುಗಾರ, ಅಸಾಧ್ಯ ಮಾನವಪ್ರೇಮಿ, ಅದ್ಭುತ ನಿಷ್ಠೆಯ ಧರ್ಮಭೀರು, ಸಂತ, ಕವಿರೂಪದ ವಿಜ್ಞಾನಿ ಮತ್ತು ಮಹಾನ್‌ ವಾಸ್ತುಶಿಲ್ಪಿ ಎಂದೂ ಪ್ರಶಂಸೆಗೊಳಗಾಗಿದ್ದಾನೆ. ದಾಂತೆ ಸಂದರ್ಭದಲ್ಲಿ ಆ ಎರಡೂ ಸತ್ಯ.

ವಾಸ್ತವ ಬದುಕಿನ ವಿವಿಧ ನೆಲೆಗಟ್ಟುಗಳನ್ನು ಅದರ ಎಲ್ಲಾ ವೈವಿಧ್ಯಮಯ ಮಜಲು ಮತ್ತು ಅವತಾರಗಳಲ್ಲಿ ಪರಿಶೋಧಿಸುವ ದಾಂತೆ, ಅದೇ ಬದುಕಿನಲ್ಲಿ ಹುದುಗಿರುವ ಸ್ವರ್ಗೀಯ ಶಿಖರ ತಲುಪಲು ಹೊರಟ ಅನ್ವೇಷಕ ಅಥವಾ ಭಿಕ್ಷು; ಹಾಗಾಗಿ ಅವನು ನೀಡುವ ನಿತ್ಯ ನರಕದ ವೈವಿಧ್ಯಮಯ ಅನುಭವಗಳು ಎಷ್ಟು ಸಹಜವೋ ಅವನು ನೀಡುವ ಸ್ವರ್ಗದ ಕಲ್ಪನೆ ಕೂಡ ಅದೇ ಬದುಕಿಗೆ ಹತ್ತಿರವಾದುದು. ಆದರೆ ಲಕ್ಷಾಂತರ ಆಯಾಮಗಳ ನರಕಕ್ಕೆ ಲಕ್ಷಾಂತರ ಮುಖಗಳಿರುವುದಾದರೆ, ಸ್ವರ್ಗಕ್ಕಿರುವ ದಾರಿ ಒಂದೇ; ನಿಷ್ಕಳಂಕ ಪ್ರೀತಿ ಮಾತ್ರ ಅಲ್ಲಿಗೆ ಕೊಂಡೊಯ್ಯಬಲ್ಲದು ಎಂಬುದನ್ನು ಪ್ರತಿಪಾದಿಸಲು ಕಾವ್ಯ ಬರೆದಂತೆ ಕಾಣುವದಾಂತೆಯ ಇಡೀ ಬದುಕೇ ಅದಕ್ಕಾಗಿ ರೂಪಿತವಾದ ಪ್ರಯೋಗಶಾಲೆಯಾಗಿ ಪರಿವರ್ತನೆಗೊಂಡುದು ಮಾತ್ರ, ಇತಿಹಾಸ ಮರೆಯಲಾಗದ ನಿಷ್ಠುರಸತ್ಯ. ಆತನ ಕಾವ್ಯ ಓದುವಾಗ ಹೇವರಿಕೆ ಮತ್ತು ಪ್ರೀತಿ ಒಟ್ಟೊಟ್ಟಿಗೆ ಆಗುವಂತೆ, ಆತನ ಬದುಕಿನ ವಿವರ ಅರಿಯುವಾಗ ಕೂಡ ಅದೆ ಅನುಭವಕ್ಕೆ ಪಕ್ಕಾಗಬೇಕಾಗುತ್ತದೆ.

ಸಾಕಷ್ಟು ಸಿರಿವಂತಿಕೆಯ ಭೂಮಾಲೀಕ ಕುಟುಂಬದಿಂದ ಬಂದ ದಾಂತೆ ಅಲಿಗೈರಿ ಹುಟ್ಟಿದ್ದು ೧೨೬೫ರ ಫ್ಲಾರೆನ್ಸ್‌ನಲ್ಲಿ, ಮೇ ೩೦ ಅಥವಾ ಏಪ್ರಿಲ್‌ ತಿಂಗಳ ಯಾವುದೋ ಒಂದು ದಿನ. ಆರು ವರ್ಷ ತುಂಬುವುದರಲ್ಲಿ ತಾಯಿಯನ್ನು ಕಳೆದುಕೊಂಡ ದಾಂತೆ, ೧೨ ವರ್ಷದ ಬಾಲಕನಿರುವಾಗಲೇ ತಂದೆಯನ್ನೂ ಕಳೆದುಕೊಂಡ. ಮಲತಾಯಿಯ ಪೋಷಣೆಯಲ್ಲಿ ವಿಶ್ವವಿದ್ಯಾನಿಲಯ – ಶಿಕ್ಷಣ ಪಡೆದಿರಬಹುದೆಂದು ನಂಬಲು ಅವಕಾಶವಿದೆ. ೨೦ ತುಂಬುವುದರೊಳಗೆ ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಐದು ಜನ ಮಕ್ಕಳು. ತನ್ನೊಬ್ಬಳು ಮಗಳಿಗೆ ತನ್ನ ಬಾಲ್ಯದ ಗೆಳತಿಗೆ ನೀಡಿದ ಕಾವ್ಯನಾಮವನ್ನೇ ಹೆಸರಾಗಿ ನೀಡಿದ್ದಾನೆ: ಅದೇ ಬಿಯಾತ್ರಿಸ್‌; ದಾಂತೆಯ ಬರವಣಿಗೆಯ ಹಿಂದಿನ ಪ್ರಮುಖ ಚಾಲನ ಶಕ್ತಿ ಆ ಹೆಸರು.

ಲೈಂಗಿಕ ಜೀವನದಲ್ಲೂ ನಡೆಯುವಂತದ್ದು. ಕಾವಯ ರಚನೆಯ ಹಿಂದಿನ ಪ್ರಮುಖ ಚೋದಕ ಶಕ್ತಿಯಾಗಿ ಕೆಲಸ ಮಾಡುವುದರ ಜತೆಗೆ ಪಡೆದುಕೊಳ್ಳುವ ಆಧ್ಯಾತ್ಮಿಕ ತಿರುವು, ಜಗತ್ತಿನ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿಯೆ ವಿನೂತನವಾದುದು. ಎಂಟು ಅಥವಾ ಒಂಬತ್ತು ವರ್ಷದ ಹುಡಗನಿರುವಾಗ ತನ್ನ ತಂದೆಯ ಜತೆ ಶ್ರೀಮಂತ ಸರದಾರನೊಬ್ಬನ ಮನೆಯ ಸಮಾರಂಭಕ್ಕೆ ಹೋಗಿರಬೇಕಾದರೆ ತನ್ನದೆ ವಯಸ್ಸಿನ, ನೋಡುವವರ ಕಣ್ಣು ಕೋರೈಸುವ ಬಣ್ಣದ ಹುಡುಗಿ[1] ಕಣ್ಣಿಗೆ ಬೀಳುತ್ತಾಳೆ. ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಅನೇಕರು ಆ ಪೋರಿಯನ್ನು ನೋಡಿದ್ದರು. ಆಕೆ ತೊಟ್ಟಿದ್ದ ಸಂಧ್ಯಾ ಬಣ್ಣದ ತೊಡಪು ಆಕೆಯ ಮೈಬಣ್ಣದ ಐಸಿರಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಆ ಗಳಿಗೆಯ ಅನುಭವದಲ್ಲಿ ಅಂತಹ ವಿಶೇಷವಾದುದ್ದೇನೂ ಇದ್ದಿರಲಾರದು. ಎಲ್ಲರಿಗೂ ಆಗುವ ಅನುಭವವೆ. ಆದರೆ ಆ ಸರಳ ಘಟನೆ ಮುಂದೆ ಪಡೆದುಕೊಂಡ ತಿರುವು ಮಾತ್ರ ಅತ್ಯಂತ ವಿಲಕ್ಷಣವಾದುದಾಗಿತ್ತು. ದಾಂತೆಯ ಬದುಕು ಮತ್ತು ಬರಹದ ವೈಶಿಷ್ಟ್ಯ ಅಡಗಿರುವುದೇ ಅಲ್ಲಿ.

ಬಾಲ್ಯದ ಕಣ್ಣು ಕುಕ್ಕಿದ ಗೆಳತಿ ಮತ್ತು ಅನಂತರದ ಬೆಳವಣಿಗೆಗಳು ತನ್ನ ಬದುಕಿನ ಮೇಲುಂಟುಮಾಡಿದ ಪರಿಣಾಮ ಕುರಿತಂತೆ ಕವಿ ದಾಂತೆಯೆ ಸಾಕಷ್ಟು ವಿವರ ಬಿಟ್ಟುಹೋಗಿದ್ದಾನೆ. ಪಾಡು ಹಾಡಾಗಿ ಮಾರ್ಪಟ್ಟ ದಾಂತೆಯ ಬರವಣಿಗೆ ಬದುಕು ಆರಂಭವಾಗುವುದೆ ಆ ರೀತಿಯ ಬೆಳವಣಿಗೆಯನ್ನು ಅರ್ಥೈಸಲು ನಡೆಸಿದ ಪ್ರಯತ್ನಗಳ ಫಲವಾಗಿ. ಆ ಹುಡುಗಿಯನ್ನು ತಾನು ಮೊದಲು ನೋಡಿದಾಗ ಆದ ಅನುಭವವನ್ನು ಕೆಲವರ್ಷಗಳ ನಂತರ ಬರೆದ ಪದ್ಯದಲ್ಲಿ ಬಹಳ ಪ್ರಾಮಾಣಿಕವಾಗಿ ದಾಖಲಿಸಿದ್ದಾನೆ. “ಇವಳೋ ದೇವತೆ ನನಗಿಂತ ಬಲವಾದವಳು, ನನ್ನನ್ನಾಳ ಬಂದವಳು.”[2] ಎಲ್ಲೂ ಒಂದು ಉತ್ಪ್ರೇಕ್ಷೆಯ ಮಾತಿಲ್ಲ. ಅನುಭವನಿಷ್ಠವಾದ ಬರವಣಿಗೆ.

ಕಾವ್ಯಜಗತ್ತಿನ ವಿಸ್ಮಯವಾದ ಈಕೆಯ ನಿಜವಾದ ಹೆಸರು ಬೈಸ್‌ಪೊರ್ತಿನರಿ. ೧೨೭೪ರಲ್ಲಿ ದಾಂತೆಯ ಕಣ್ಣಿಗೆ ಮೊದಲು ಬಿದ್ದ ಆಕೆ ೧೨೮೭ರಲ್ಲಿ ಬ್ಯಾಂಕರ್‌ನೊಬ್ಬನನ್ನು ಮದುವೆಯಾದ ನಂತರ, ಬದುಕಿದ್ದು ಮೂರು ವರ್ಷ ಕಾಲ ಮಾತ್ರ. ಆ ನಡುವೆ ಆಕೆಯನ್ನು ಹಲವಾರು ಬಾರಿ ಕಂಡಿರುತ್ತಾನೆ. ರಸ್ತೆಯಲ್ಲಿ ಗೆಳತಿಯರ ನಡುವೆ ಹೋಗುವಾಗೊಮ್ಮೆ ತನ್ನ ಕಡೆ ನೋಡಿ ಕೈಬೀಸಿದಂತೆ ಅನ್ನಿಸುತ್ತದೆ. ಆಕೆ ನಿಜವಾಗಲೂ ಅವನನ್ನು ನೋಡಿ ಆ ಕಡೆಗೆ ಕೈಬೀಸಿದಳೋ ಅಥವಾ ಬೇರೆ ಯಾವುದೋ ಕಾರಣ ಕೈಬೀಸಿದಾಗ ಅದು ತನಗಾಗಿಯೇ ಎಂದು ಅಂದುಕೊಂಡನೋ! ಅಂತು “ಅಲ್ಲಿಂದಿಚೇಗೆ ನನ್ನ ದೇಹದ ಮಾಮೂಲಿ ಚಟುವಟಿಕೆಗಳು ಕೆಲಸ ನಿಲ್ಲಿಸಿ ತೊಂದರೆ ಕೊಡಲಾರಂಭಿಸಿದವು” ಎಂದು ತನ್ನ ಹರಯದ ದುರ್ಬಲ ಅಸಹಾಯಕ ಸ್ಥಿತಿಯನ್ನು ಬಹಳ ಸಹಜವಾಗಿ ಹೇಳಿಕೊಂಡಿದ್ದಾನೆ. ಮದುವೆಯಾದ ನಂತರವೂ ರಸ್ತೆಯಲ್ಲಿ ಕಂಡಾಗ ಕಾಣಿಸಿಕೊಳ್ಳುವ ತುಟಿಯಂಚಿನ ನಗು, ಕಣ್ಣಲ್ಲೇ ಮಾತಾಡಿಸುವ ಹುಡುಗಾಟಿಕೆ ಮೊದಲಾದ ಯೌವ್ವನಸಹಜ ಚೇಷ್ಟೆಗಳು ಸಾರ್ವಜನಿಕವಾಗಿ ಹಲವಾರು ತರಹದ ಊಹಾಪೋಹ ಆಧಾರಿತ ಮಾತುಕತೆಗಳಿಗೆ ಅವಕಾಶ ನೀಡಿರಬೇಕು. ಏನೋ ಅಂತು ಆಕೆಯ ವೈವಾಹಿಕ ಜೀವನ ಸುಗಮವಾಗಿ ಸಾಗಿದಂತೆ ತೋರುವುದಿಲ್ಲ. ಈ ಕಡೆ ದಾಂತೆಯ ಗೃಹಸ್ಥ ಬದುಕು ಉಲ್ಲಾಸದಾಯಕವಾಗಿ ಉಳಿಯಲಿಲ್ಲ.

ತನ್ನ ಮೆಚ್ಚಿನ ಗೆಳತಿಯನ್ನು ಚರ್ಚ್‌ ಅಥವಾ ರಸ್ತೆಯಲ್ಲಿ ಅಥವಾ ಮತ್ತೆ ಎಲ್ಲಾದರೊಂದು ಕಡೆ ಸಿಕ್ಕಾಗ ನೋಡುವ ಉದ್ದೇಶದಿಂದ ಬೇರೊಬ್ಬರ ಕಡೆಗೆ ನೋಡುವ ನೆಪದಲ್ಲಿ ಕದ್ದುಮುಚ್ಚಿ ಕಣ್ಣು ಹಾಯಿಸುವ ಸಣ್ಣ ಉಪಾಯ ಕೂಡ ತೊಂದರೆಗಳನ್ನು ಹೆಚ್ಚು ಮಾಡಿರಬಹುದು. ದೇಹದ ಸೋಂಕಿಲ್ಲದ ದಾಂತೆಯ ಆದರ್ಶಪ್ರೇಮದ ನಿಷ್ಠೆ ಮತ್ತು ಪರಿಶುದ್ಧತೆಯನ್ನು ಪ್ರಶ್ನಿಸಲು ಆ ತರಹದ ಅಡ್ಡ ತಂತ್ರ ಅವಕಾಶ ಮಾಡಿಕೊಟ್ಟುದರ ಜತೆಗೆ ಆತನ ಪ್ರೇಮ ಪ್ರಕರಣ ಸಮಾಜದ ನಗೆಪಾಟಲಿಗೆ ಗುರಿಯಾದಂತೆ ತೋರುತ್ತದೆ. ಆಗಿನ ಯುರೋಪಿನ ಸಮಾಜದಲ್ಲಿ ಪ್ಲೆಟಾನಿಕ್‌ ಪ್ರೇಮಕ್ಕೆ ಮಾನ್ಯತೆ ಇತ್ತು. ಪರಿಣಾಮ, ಆಕೆ ವಂದನೆ ಸ್ವೀಕರಿಸುವುದನ್ನು ನಿಲ್ಲಿಸುತ್ತಾಳೆ ಅಥವಾ ದಾಂತೆಗೆ ಆ ತರಹ ತೋರುತ್ತದೆ.

ಏಕೆಂದರೆ, ದಾಂತೆಯ ವಿಚಿತ್ರ ಪ್ರೇಮ ಕುರಿತ ಆಕೆಯ ಖಾಸಗಿ ಭಾವನೆಗಳು ಏನಾಗಿದ್ದವು ಎಂಬುದು ಎಲ್ಲೂ ದಾಖಲಾದ ಉದಾಹರಣೆ ಇಲ್ಲ. ತನ್ನ ಮುಗುಳ್ನಗೆ ಬೆರೆತ ವಂದನೆ ಆ ರೀತಿ ನಿರಾಕೃತಗೊಂಡುದನ್ನು ಕಂಡು ಉಂಟಾದ ಭಾವೋದ್ವೇಗ, ಚಿಂತೆ, ತಳಮಳ ಸಹಿಸಲಾಗದೆ ಬವಳಿ ಬಂದಂತಾಗಿ ಕಾಯಿಲೆಗೆ ತುತ್ತಾದ ಅನುಭವ ಆಯಿತು ಎಂದು ಅವನೇ ಒಂದು ಕಡೆ ಹೇಳಿಕೊಂಡಿದ್ದಾನೆ. ತನ್ನ ಆ ದುಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸುವುದರ ಬದಲು ಗೇಲಿ ಮಾಡುತ್ತಿರುವುದಾಗಿ ಭಾವಿಸುವ ದಾಂತೆಯ ಮನಃಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಆರೋಗ್ಯ ಹದಗೆಟ್ಟು ದಾಂತೆ ಕೆಲಕಾಲ ಹಾಸಿಗೆ ಹಿಡಿದುದಾಗಿ ತಿಳಿದು ಬರುತ್ತದೆ. ೧೨೮೯ರಲ್ಲಿ ಆಕೆಯ ಗಂಡ ಬದುಕಿಗೆ ನಮಸ್ಕಾರ ಹೇಳುತ್ತಾನೆ. ಗಂಡ ಸತ್ತ ಒಂದೇ ವರ್ಷದಲ್ಲಿ ಆಕೆಯ ದೇಹವೂ ಮಣ್ಣುಪಾಲಾಗುತ್ತದೆ.

ದಾಂತೆಯ ಮೊದಲ ಕೃತಿ ‘ಲ ವಿತನೋವಾ’ (ನವಜೀವನ) ಪ್ರಕಟವಾದುದೇ ಆ ರೀತಿಯ ಹಲಬಗೆಯ ನೋವು ಮತ್ತು ಒತ್ತಡಗಳ ಹಿನ್ನೆಲೆಯಲ್ಲಿ. “ಈವರೆಗೆ ಯಾವುದೇ ಹೆಂಗಸನ್ನು ಕುರಿತು ಬರೆಯಲು ಸಾಧ್ಯವಾಗದಿರುವಂತಾದ್ದನ್ನು ಆಕೆ ಕುರಿತು ರಚಿಸಲು ಮನಸ್ಸು ಮಾಡಿರುವೆ. ನನ್ನ ಬದುಕನ್ನು ಇನ್ನೂ ಕೆಲಕಾಲ ಮುನ್ನಡೆಸುವ ಹಾಗೂ ಎಲ್ಲವನ್ನೂ ನಡಸುವ ಆತನಿಗೆ ಒಪ್ಪಿಗೆಯಾಗುವುದರಲ್ಲಿ” ಎಂಬ ಸಾಲು ಬರುವ ಅದೇ ಸಂಕಲನದ ಮತ್ತೊಂದು ಕಡೆ: “ಸ್ವರ್ಗದ ಒಳಕಿಂಡಿ ಕಂಡಿರುವೆ ಎಂಬುದಾಗಿ ನರಕದಲ್ಲಿರುವಾತನಿಗೆ ನರಕ ಹೇಳಿದಂತೆ” ಎಂಬ ಮಾತೂ ಬರುತ್ತದೆ. ಸ್ವರ್ಗದ ಒಳಕಿಂಡಿ ಕಡೆಗೆ ಕೈತೋರಿಸುವ ನರಕದ ವಿವಿಧ ಹಾದಿಗಳ ಕಾವ್ಯವನ್ನು ದಾಂತೆ ಮುಂದೆ ಬರೆಯುತ್ತಾನೆ ಮಾತ್ರವಲ್ಲ, ಈ ಜಗತ್ತಿನಲ್ಲಿ ಹೆಣ್ಣನ್ನು ಕುರಿತು ಯಾರೂ ಬರೆಯದಿರುವ ಅದ್ಭುತ ಕೃತಿಯೊಂದನ್ನು ನೀಡುವುದರಲ್ಲಿ ಯಶಸ್ವಿಯೂ ಆಗುತ್ತಾನೆ. ದಾಂತೆ ತಾನು ಅಂದುಕೊಂಡಂತೆ ಆತನಿಗಿದ್ದ ಸ್ಪಷ್ಟ ತಿಳುವಳಿಕೆಗೆ ಒಂದು ಉದಾಹರಣೆ. ಆತನ ಮೊದಲ ಸಂಕಲನದಲ್ಲಿ ಬರುವ ಕೆಲಮಾತುಗಳು ಆತನ ಬದುಕು ಮತ್ತು ಸಾಧನೆ ಕುರಿತ ಪ್ರಣಾಳಿಕೆ ಇದ್ದಂತಿವೆ: ಪ್ರವಾದಿ ರೂಪದ ಆ ಮಾತುಗಳನ್ನು ರುಜುವಾತು ಪಡಿಸುವ ರೀತಿಯಲ್ಲಿ ಮುಂದಿನ ಅವನ ಬದುಕು ಉರುಳುವುದು ವಿಸ್ಮಯದ ಜತೆಗೆ ಗಾಬರಿ ಹುಟ್ಟಿಸದಿರುವುದಿಲ್ಲ.

ಬಾಲ್ಯಗೆಳತಿ ಬೈಸ್‌ಪೊರ್ತಿನರಿ ಮುಂದೆ ಬಿಯಾತ್ರಿಸ್‌ ಎಂಬ ಹೆಸರು ಧರಿಸಿ ದೇವತಾರೂಪದಲ್ಲಿ ಆತನ ಕಾವ್ಯ ಜಗತ್ತು ಪ್ರವೇಶಿಸುತ್ತಾಳೆ. ಭವತಾರಿಣಿ ಅಥವಾ ದೈವಗಾಮಿನಿ ಎಂದು ಭಾರತೀಯ ಪರಿಭಾಷೆಯಲ್ಲಿ ಕರೆಯಬಹುದಾದ ಆಕೆಯ ಪ್ರವೇಶದನಂತರವೇ ದಾಂತೆಯ ಕಾವ್ಯದ ಕೊನೆಯ ಭಾಗವಾದ ‘ಸ್ವರ್ಗ’ ತೆರೆದುಕೊಳ್ಳುತ್ತದೆ. ಮನುಷ್ಯರೂಪದ ದಿವ್ಯಚೇನ ಎಂದು ಆತ ಬಲವಾಗಿ ನಂಬಿದ್ದ ಆಕೆ ಬದುಕಿದ್ದು ೨೫ ವರ್ಷ ಕಾಲ ಮಾತ್ರ. ಕೆಂಬಣ್ಣದ ತೊಡುಗೆ ಧರಿಸಿದ್ದ ಆಕೆಯನ್ನು ಕಂಡಾಗ ದಾಂತೆ ಒಂಬತ್ತರ ಪಟಿಂಗ. ಆಕೆಗೂ ಹೆಚ್ಚು ಕಡಿಮೆ ಅದೇ ವಯಸ್ಸು. ಎರಡನೇ ಭೇಟಿ ಆಗುವ ವೇಳೆಗೆ ಆಕೆಗಾಗಲೇ ೧೬ ಅಥವಾ ೧೮ರ ಕೌಮಾರ್ಯ. ಎಂತಹ ಮಡ್ಡ ಹುಡುಗಿಯರೂ ಮಿಂಚು ಗುಡುಗು ಕಾರುವ ವಯಸ್ಸು. ಅದರಲ್ಲೂ ರೋಮನ್‌ ಬಣ್ಣದ ಹುಡುಗಿಯರು ದಾಂತೆಯಂತಹ ಭಾವೋದ್ವೇಗ ತುಂಬಿದ ಭಾವಪೂರ್ಣ ಕಣ್ಣುಗಳಿಗೆ! ಆ ವಯಸ್ಸೇ ಅಂತಹದ್ದು. ಮೊದಲ ಸಲ ಕಂಡಾಗ ಆಕೆ ತೊಟ್ಟಿದ್ದ ದಟ್ಟಿಯ ನೆನಪು ಕೂಡ ಮಾಸಿರುವುದಿಲ್ಲ.

ಆ ಪ್ರಮಾಣದಲ್ಲಿ ಪ್ರಭಾವದ ದಾಂಧಲೆ ಎಬ್ಬಿಸಿದ ಹುಡುಗಿಯ ವಿವಾಹ ಬೇರೊಬ್ಬನ ಜತೆ ನಡೆದುಹೋದ ನಂತರ ಆಕೆಯ ಬಗೆಗಿನ ತನ್ನ ಪ್ರೀತಿಯನ್ನು ದೇಹದ ಸೋಂಕಿಲ್ಲದ ಆದರ್ಶಪ್ರೇಮವಾಗಿ ಪರಿವರ್ತಿಸಲು ದಾಂತೆ ಪ್ರಯತ್ನಿಸಿದಂತೆ ತೋರುತ್ತದೆ. ‘ಆ ಪ್ರೇಮ’ ಕೂಡ ನಂತರ ಜರುಗಿದ ಘಟನೆಗಳಿಂದಾಗಿ ತಪ್ಪು ತಿಳುವಳಿಕೆಗಳಿಗೆ ಕಾರಣವಾದಾಗ ದಾಂತೆಯ ಮನಸ್ಸು ಸಹಜವಾಗಿಯೇ ಕಲಕಿ ಹೋಗಿರಬೇಕು. ಬಹಳ ದಿನಗಳ ಕಾಲ ಅನಾರೋಗ್ಯದಿಂದ ಬಳಲಿದ ದಾಂತೆ ಚೇತರಿಸಿಕೊಳ್ಳುವ ವೇಳೆಗೆ ಸಾವು ಆಕೆಯನ್ನು ತನ್ನ ಲೋಕಕ್ಕೆ ಕರೆದೊಯ್ದಿರುತ್ತದೆ. ಕವಿಗೆ ಉಳಿದುದು ನೆನಪು ಮಾತ್ರ. ಅದೇ ಗುಂಗಿನಲ್ಲಿ ಬರೆದ ಆತನ ಮೊದಲ ಸಂಕಲನ ಆಕೆ ಸತ್ತ ನಾಲ್ಕು ವರ್ಷಗಳ ನಂತರ ೧೨೯೪ರಲ್ಲಿ ಸಿದ್ಧವಾಗುತ್ತದೆ. ಅಲ್ಲಿನ ಹೆಚ್ಚಿನ ಕವಿತೆಗಳು ಸುನೀತದ ರೂಪದಲ್ಲಿವೆ.

ತನ್ನ ಬದುಕಿನಲ್ಲಿ ಎದುರಾದ ಆ ರೀತಿಯ ವಿಲಕ್ಷಣ ಪ್ರೇಮಪ್ರಕರಣವನ್ನು ಮುಂದೆ ಬರೆಯಲಿರುವ ಕಾವ್ಯದ ಚೌಕಟ್ಟಿನಲ್ಲಿ ನಿಭಾಯಿಸುವ ಯೋಚನೆಯಲ್ಲಿ ತಲ್ಲೀನನಾಗಿರುವಾಗ ಎದುರಾದ ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣ ನಾಡಭ್ರಷ್ಟತೆ ಅನುಭವಿಸಬೇಕಾಗಿ ಬಂದ ದಾಂತೆ: ತನ್ನ ಸುದೀರ್ಘ ಅಲೆದಾಟದ ಅವಧಿಯಲ್ಲಿ ಪ್ಯಾರಿಸ್‌, ಆಕ್ಸ್‌ಫರ್ಡ್‌ ಮೊದಲಾದ ಪ್ರಮುಖ ಕೇಂದ್ರಗಳಿಗೂ ಭೇಟಿ ನೀಡಿರಬಹುದೆಂದು ಭಾವಿಸಲಾಗಿದೆ. ೩೭ರ ನಡುವಯಸ್ಸಿನಲ್ಲಿ, ಬೈಸ್‌ಪೂರ್ತಿನರಿ ಸತ್ತ ೧೨ ವರ್ಷಗಳ ನಂತರ ಹುಟ್ಟೂರಾದ ಫ್ಲಾರೆನ್ಸ್‌ನಿಂದ ಹೊರಗಟ್ಟಲಾದ ಆತ ಮೊದಲು ನೆಲೆ ನಿಂತುದು ವೆರೊನಾದಲ್ಲಿ.

೧೩೨೧ರಲ್ಲಿ ಕಣ್ಣು ಮುಚ್ಚಿದ ದಾಂತೆ ತನ್ನನ್ನು ರೂಪಿಸಿದ ಪರ್ವತದೆತ್ತರದ ಕೃತಿಯನ್ನು ಬರೆಯಲು ಮೊದಲು ಮಾಡಿದ್ದು ೧೩೦೮ರ ಸುಮಾರಿನಲ್ಲಿ ಯುರೋಪಿನ ಡೈರೆಕ್ಟರಿಯಂತಿರುವ ಅದನ್ನು ಬರೆಯಲು ಆತ ತೆಗೆದುಕೊಂಡ ಅವಧಿ ವರ್ಷಗಳ ಲೆಕ್ಕಾಚಾರದಲ್ಲಿ ೧೩ ವರ್ಷಗಳು. ೧೦೦ ಸರ್ಗಗಳಲ್ಲಿ ಹರಡಿರುವ ಸುಮಾರು ೧೩,೫೦೦ ಸಾಲುಗಳ ಕಾವ್ಯವನ್ನು ಬರವಣಿಗೆ ರೂಪದಲ್ಲಿ ಭಟ್ಟಿ ಇಳಿಸಲು ಅವನ ಇಡೀ ಬದುಕೇ ಮೇಣದಬತ್ತಿಯ ತರಹ ಬಳಕೆಯಾಯಿತು ಎಂಬುದು ಸತ್ಯಕ್ಕೆ ಅತ್ಯಂತ ಹತ್ತಿರವಾದ ಮಾತು. ಅದಕ್ಕಾಗಿ ಹುಟ್ಟಿದ ಆತ, ಅದು ಮುಗಿದ ಕೂಡಲೇ ತಾನು ಬಂದ ಕೆಲಸವಾಯಿತು ಎಂಬಂತೆ ಈ ಜಗತ್ತಿನಿಂದ ನಡೆದುಬಿಟ್ಟ ಎಂದು ಹೇಳಬಹುದಾದ ರೀತಿಯಲ್ಲಿ ಸಾಗಿದ ಅವನ ಬದುಕು; ಬರವಣಿಗೆಗಾಗಿ ಬದುಕಿದ ಬಹಳ ಜನರನ್ನು ಕಾಣಬಹುದು. ಆದರೆ ಬದುಕೇ ಬರವಣಿಗೆಯಾಗಿ ಪರಿವರ್ತನೆಗೊಳ್ಳುವುದು. ಆದರೆ ಆತನ ವೈಯಕ್ತಿಕ ಬದುಕಿನ ಸಂಗತಿಗಳು ಸಾಗರದಲ್ಲಿ ಲೀನವಾಗುವ ಮಳೆಹನಿಯಂತೆ ಆತನ ಕಾವ್ಯದಲ್ಲಿ ಕಾಣೆಯಾಗಿವೆ. ‘ಲ ವಿತನೋವಾ’ದಲ್ಲಿ ಆತನ ಕೆಲ ವೈಯಕ್ತಿಕ ಭಾವನೆಗಳು ಮತ್ತು ಅನಿಸಿಕೆಗಳನ್ನು ಕಾಣಬಹುದಾದರೂ, ‘ದಿವಿನಿಯಾ ಕಮಿದಿಯಾ’ದಲ್ಲಿ ಆತ ಪಟ್ಟ ಕಷ್ಟಕೋಟಲೆಗಳು, ವೈಯಕ್ತಿಕ ಭಾವನೆಗಳು ಅಥವಾ ಅನಿಸಿಕೆಗಳನ್ನು ಕಾಣಲಾಗುವುದಿಲ್ಲ. ತನ್ನದೆಲ್ಲವನ್ನು ಇತರರ ಬದುಕಿಗೆ ವಿವರಗಳಲ್ಲಿ ಅಡಗಿಸಿಹೋದ ಕವಿ ದಾಂತೆ.

ಇಂಗ್ಲಿಷ್‌ನಲ್ಲಿ ‘ದಿ ಡಿವೈನ್‌ ಕಾಮಿಡಿ’ ಎಂದು ಕರೆಯಲಾಗುವ ತನ್ನ ಕೃತಿಗೆ ದಾಂತೆ ನೀಡಿದ ಮೂಲ ಹೆಸರು ‘ಕಮಿದಿಯಾ’, ಮುಂದೆ ಬಂದವರು ಅದರ ಹಿಂದಕ್ಕೆ ದಿವಿನಿಯಾ (ಡಿವೈನ್‌) ಸೇರಿಸಿದರು; ‘ದಿವ್ಯಲೀಲೆ ಅಥವಾ ದಿವ್ಯ ವಿನೋದ’ ಎಂದು ಕರೆಯಬಹುದಾದ ಆ ಕೃತಿಯ ಪ್ರತಿ ಸರ್ಗದಲ್ಲಿ ೧೦೦ ರಿಂದ ೧೪೦ ಸಾಲುಗಳು ಬರುತ್ತವೆ. ಕೆಲ ಸರ್ಗಗಳಲ್ಲಿ ಅವುಗಳ ಸಂಖ್ಯೆ ೧೫೦ ತಲುಪುವುದುಂಟು.

ತಾಯ್ನೆಲದಿಂದ ಹೊರದಬ್ಬಲಾದ ಕಾರಣ ಅನುಭವಿಸಬೇಕಾಗಿ ಬಂದ ಹಲವಾರು ತೆರನಯಾತನೆ, ಅವಮಾನ, ಅಲೆತ ಹಾಗೂ ಕಷ್ಟಕೋಟಲೆಗಳ ನಡುವೆಯೂ ಮನಸ್ಸು ಕೆಡಿಸಿಕೊಳ್ಳದೆ ಕಾವ್ಯ ಬರೆಯುವುದರಲ್ಲಿ ಮುಳುಗಿ ಹೋದುದನನು ನೋಡಿದರೆ ಅವನಿಗಿದ್ದ ಅಗಾಧ ಸಂಕಲ್ಪಬಲ, ಇಚ್ಛಾಶಕ್ತಿ, ಕಷ್ಟ ಸಹಿಸಿಕೊಳ್ಳುವ ಮನೋಭಾವ, ದೃಢ ನಿರ್ಧಾರ ಮತ್ತು ಪ್ರಕೃತಿದತ್ತವಾಗಿ ಬಂದಿದ್ದ ಅದ್ಭುತ ಗುಣ ಎಂದರೆ ಅಸಾಧಾರಣ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ದಂತಕತೆಯಾಗಿ ಮಾರ್ಪಡುವ ಮಟ್ಟಕ್ಕಿದ್ದವು. ಒಮ್ಮೆ ಗ್ರಂಧಿಗೆ ಅಂಗಡಿಯಲ್ಲಿ ಕುಳಿತು ಓದುತ್ತಿರಬೇಕಾದರೆ ಪಕ್ಕದ ರಸ್ತೆಯಲ್ಲಿ ಸಂಭ್ರಮದಿಂದ ಕೂಡಿದ್ದ ಮೆರವಣಿಗೆಯೊಂದು ಹಾದುಯೋಯಿತಂತೆ: ಬಹಳ ಸಮಯ ತೆಗೆದುಕೊಂಡ ಆ ಸದ್ದು ಗದ್ದಲ ಓದಿನಲ್ಲಿ ಮಗ್ನವಾಗಿದ್ದ ದಾಂತೆಯ ಅರಿವಿಗೆ ಬಂದಿರಲಿಲ್ಲ. ಎಂತಹ ಅಸಾಧ್ಯ ಕೊಡುಗೆ! ಓದಿ ಓದಿ ಕಣ್ಣು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದ ದಾಂತೆಗೆ ತತ್ವಶಾಸ್ತ್ರ, ದೇವತಾಶಾಸ್ತ್ರ, ರಾಜಕೀಯ, ಇತಿಹಾಸ, ಮೀಮಾಂಸೆ, ಕಲೆ ಸಾಹಿತ್ಯ, ಕಾನೂನು ಮುಂತಾದ ಅನೇಕ ವಿಷಯಗಳಲ್ಲಿದ್ದ ಪರಿಣತಿ ಆಯಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದವರನ್ನು ದಂಗುಬಡಿಸುವ ಮಟ್ಟಕ್ಕಿತ್ತಂತೆ.

ಅಷ್ಟಾದರೂ ತನ್ನ ‘ದಿ ಡಿವೈನ್‌ ಕಾಮಿಡಿ’ಗೆ ಬೇಕಾದ ಚೌಕಟ್ಟನ್ನು, ಕ್ರಿಶ್ಚಿಯನ್‌ ರಿಲಿಜನ್ನಿಗೆ ಬೇಕಾದ ತತ್ವಜ್ಞಾನದ ತಾತ್ವಿಕ ಹಿನ್ನೆಲೆ ಮತ್ತು ದೇವತಾಶಾಸ್ತ್ರೀಯ ಭೂಮಿಕೆ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸಿದ ಥಾಮಸ್‌ ಅಕ್ವಿನಾಸ್‌ನಿಂದ ಪಡೆದುಕೊಳ್ಳಬೇಕಾಗಿ ಬಂತು. ಹಾಗಾಗಿ ಅವನ ಕಾವ್ಯದ ಭೂಮಿಕೆ ಅಕ್ವಿನಾಸ್‌ ವ್ಯಾಖ್ಯಾನಿಸಿದ ರೀತಿಯಲ್ಲಿ ರೋಮನ್‌ ಕ್ಯಾಥೊಲಿಕ್‌ ರಿಲಿಜನ್ನಿಗೆ ಅನುಗುಣವಾದುದಾಗಿದೆ. ಸ್ವರ್ಗದ ಮೇಲಿನ ದೇವರ ರಾಜ್ಯ ಮತ್ತು ಸುವ್ಯವಸ್ಥೆಯನ್ನು ಭೂಮಿಯ ಮೇಲೆ ಸ್ಥಾಪಿಸುವುದಾಗಬೇಕು ಎಂಬುದು ದಾಂತೆಯ ಒತ್ತಾಸೆ. ಅದು ಅವನ ರಾಜಕೀಯ ತಿಳುವಳಿಕೆ, ನಂಬಿಕೆಯೂ ಹೌದು. ಆ ತರಹದ ಕೆಲ ಪ್ರತಿಪಾದನೆಗಳ ಕಾರಣ ಮಧ್ಯಕಾಲೀನಯುಗದ ಕೊನೆಯ ಕವಿ ಎಂಬಂತೆ ಕಾಣಬರುವ ದಾಂತೆ, ರಾಜಕೀಯದಲ್ಲಿ ಚರ್ಚ್ ಮತ್ತು ಮತೀಯ ಗುರುಗಳ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು ಎಂಬಿತ್ಯಾದಿ ಆಧುನಿಕ ನಿಲುವುಗಳಿಂದಾಗಿ ಸೆಕ್ಯುಲರ್‌ ಪ್ರಜಾಸತ್ತಾತ್ಮಕ ಯುಗದ ಹರಿಕಾರನಾಗಿಯೂ ತೋರಿಬರುತ್ತಾನೆ. ಸಂಕ್ರಮಣ ಕಾಲದ ಕವಿಯಾದ ದಾಂತೆಯದು ದ್ವಿಮುಖ ಪಾತ್ರ: ಕತ್ತಲ ಯುಗದ ಕೊನೆಯ ಕವಿಯೂ ಆದಂತೆ ಫ್ರೆಂಚ್, ಇಟಾಲಿಯನ್‌, ಇಂಗ್ಲಿಷ್‌, ಜರ್ಮನ್‌ ಇತ್ಯಾದಿ ಭಾಷಾ ಸಂಸ್ಕೃತಿ ಆಧಾರಿತ ಆಧುನಿಕ ಯುರೋಪಿನ ವ್ಯವಸ್ಥೆಯ ಆಗಮನದ ಮುಂಗೋಳಿಯೂ ಹೌದು.

ತನ್ನ ಅಂತಹ ಅನೇಕ ನಿಲುವುಗಳನ್ನು ಪ್ರತಿಪಾದಿಸಲು ಹೋಗಿ ಚರ್ಚ್‌ ರಾಜಕೀಯ ವ್ಯವಸ್ಥೆಯನ್ನು ಎದುರು ಹಾಕಿಕೊಂಡ ದಾಂತೆಯನ್ನು, ಅವನ ಎದುರಾಳಿಗಳ ಕೈಮೇಲಾದ ಕೂಡಲೇ ಹುಟ್ಟೂರಾದ ಫ್ಲಾರೆನ್ಸ್‌ನಿಂದ ಗಡಿಪಾರು ಮಾಡಲಾಯಿತು. ಆಗ ವಿಧಿಸಲಾದ ಶಿಕ್ಷೆಯ ಷರತ್ತುಗಳನ್ನು ಓದಿದರೆ ಒಂದು ಗುಳಿಗೆಯಾದರೂ ಮನಸ್ಸು ಮರಗಟ್ಟಿದಿರುವುದಿಲ್ಲ: “ಗಡಿಪಾರು ಶಿಕ್ಷೆಗೆ ಗುರಿಯಾದವರು ಆಸ್ತಿ ಮೇಲಿನ ಹಕ್ಕು ಕಳೆದುಕೊಳ್ಳುತ್ತಾರೆ ಅಲ್ಲದೆ ಕೂಡಲೇ ದಂಡ ತೆರಬೇಕಾಗುತ್ತದೆ” ಎಂದು ಘೋಷಿಸಿ ೧೩೦೨ರ ಜನವರಿ ೨೭ ರಂದು ಹೊರಡಿಸಿದ ಆಜ್ಞೆಯ ಬೆನ್ನ ಹಿಂದೆಯೇ ಮಾರ್ಚ್‌ ೧೦ ರಂದು ಮತ್ತೊಂದು ಆದೇಶ ಹೊರಡಿಸಿ; “ಗಡಿಪಾರು ಶಿಕ್ಷೆಗೆ ಗುರಿಯಾದವರು ಕೈಗೆ ಸಿಕ್ಕಿದಲ್ಲಿ ಅವರನ್ನು ಪ್ರಾಣ ಹೋಗುವತನಕ ಸುಟ್ಟು ಕೊಲ್ಲಲಾಗುವುದು” ಎಂದು ಠರಾವಿಸಲಾಯಿತು.

ತಪ್ಪು ಒಪ್ಪಿಕೊಳ್ಳುವುದಾದಲ್ಲಿ ದೇಶಭ್ರಷ್ಟತೆಯ ಆದೇಶ ಹಿಂತೆಗೆದುಕೊಳ್ಳಲಾಗುವುದು ಎಂಬ ನಿರೂಪ ಬರುವ ವೇಳೆಗೆ ೧೫ ವರ್ಷಗಳ ಸುದೀರ್ಘ ‘ಭ್ರಷ್ಟತೆ’ ಅನುಭವಿಸಿ ಹಣ್ಣಾಗಿ ಹೋಗಿದ್ದ ದಾಂತೆ :

ಆ ಮಾರ್ಗದಲ್ಲಿ ತಾಯ್ನಾಡಿಗೆ ಮರಳಿಬರುವುದು ಒಳ್ಳೆಯದಲ್ಲ. ಬರುವುದೆ? ದಾಂತೆಯ ಹೆಸರು ಮತ್ತು ಗೌರವಕ್ಕೆ ಚ್ಯುತಿ ತಾರದ ಅನ್ಯಮಾರ್ಗಗಳಿರುವುದಾದಲ್ಲಿ ಹಿಂಜರಿಯದೆ ಒಪ್ಪಿಕೊಳ್ಳುತ್ತೇನೆ. ನನ್ನನ್ನು ಮರಳಿ ಫ್ಲಾರೆನ್ಸ್‌ಗೆ ಕರೆದುಕೊಂಡು ಹೋಗಲು ಆ ಯಾವುದೇ ಮಾರ್ಗಗಳು ಇಲ್ಲ ಎಂಬುದಾದಲ್ಲಿ ನಾನು ಬರಲಾರೆ. ಮತ್ತೇನು? ನಾನು ಇರುವಲ್ಲಿಯೇ ಸೂರ್ಯ ಹಾಗೂ ತಾರೆಗಳ ಕನ್ನಡಿ ನೋಡಲಾರೆನೆ? ನಾನು ಇರುವಲ್ಲಿಯೇ ಆ ಸ್ವರ್ಗದೊಡನೆಯನ ಅತಿ ಮಧುರವಾದ ಮಾತುಗಳನ್ನು ಕುರಿತು ಚಿಂತಿಸಲು ಬರುವುದಿಲ್ಲವೆ?

ಎಂದು ಉತ್ತರಿಸಿದ್ದಾನೆ. ಎಂತವರ ಮನಸ್ಸನ್ನೂ ಕರಗಿಸುವ ಆ ಗಂಭೀರ ಉತ್ತರ ಮತ್ತು ಘನತೆಯ ನಡವಳಿಗೆ ಗಡಿಪಾರು ಮಾಡಿದವರ ಕಣ್ಣು ತೆರೆಸುವಲ್ಲಿ ಸಫಲವಾಗಲಿಲ್ಲ.

ಆತನೇ ಒಂದು ಕಡೆ ಹೇಳಿಕೊಂಡಿರುವಂತೆ ರಾಜಕೀಯದಲ್ಲಿ ಮುಂದುವರಿಯಲು ಬೇಕಾದ ಕೆಲ ಕಲ್ಯಾಣಗುಣಗಳು ದಾಂತೆಗಿರಲಿಲ್ಲ. ಯಾರನ್ನೂ ಟೀಕಿಸಲು ಹಿಂಜರಿಯದ ಹರಿತ ನಾಲಗೆ, ಹೊಂದಾಣಿಕೆ ಮತ್ತು ರಾಜಿಗೆ ಸಿದ್ಧವಿಲ್ಲದ ನಿಷ್ಠುರ ಮನೋಧರ್ಮ, ಮುಕ್ತ ಮನಸ್ಸು, ಎಲ್ಲಕ್ಕೂ ಮಿಗಿಲಾಗಿ ಪ್ರಕೃತಿದತ್ತವಾಗಿ ಬಂದಿದ್ದ ಅಸಾಧಾರಣ ಪ್ರತಿಭೆ ಮತ್ತು ಧೀಮಂತಿಕೆ ಜತೆಗೆ ಸೇರಿಕೊಂಡಿದ್ದ ಗೇಲಿ ಮಾಡಲು ಹಿಂಜರಿಯದ ಸ್ವಭಾವ ಆತನಿಗೆ ರಾಜಕೀಯದಲ್ಲಿ ಮುಳುವಾದಂತೆ ತೋರುತ್ತದೆ. ಅದರಿಂದ ಕಾವಯಕ್ಷೇತ್ರಕ್ಕೆ ಲಾಭವಾಯಿತು. ಎಂಬುದು ಔಪಚಾರಿಕವಾದ ಮಾತಾಗಿ ತೋರಿದರೂ ದಾಂತೆಯ ಆಗಮನದೊಂದಿಗೆ ಯುರೋಪಿನ ನೆಲದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿತು. ಅವರಿಗಿದ್ದ ಅಪರಿಮಿತ ಆತ್ಮವಿಶ್ವಾಸದ ಮೊದಲ ಸಮಾಹಿತ ಅಭಿವ್ಯಕ್ತಿಯಾದ ಹೋಮರನನಂತರ ಬಂದ ವರ್ಜಿಲನ ಆಗಮನದೊಂದಿಗೆ ಹೊಸದೊಂದು ಅಧ್ಯಾಯಕ್ಕೆ ತೆರೆದುಕೊಂಡಿದ್ದ ಯುರೋಪ್‌, ಅವರ ಮುಂದುವರಿಕೆಯಾದ ದಾಂತೆಯ ಆಗಮನದೊಂದಿಗೆ ಹಿಂದೆಂದೂ ಕಾಣದ ಹೊಸ ಯುಗಕ್ಕೆ ಕಾಡಿಲು ಸಜ್ಜಾಯಿತು.

ಅಗಸ್ಟಸ್‌ನ ಕಾಲದಲ್ಲಿ ಖಚಿತ ರೂಪ. ಪಡೆದುಕೊಂಡಿದ್ದ ರೋಮನ್‌ ಸಾಮ್ರಾಜ್ಯ ಪತನಗೊಂಡುದು ಕ್ರಿ. ಶ. ೪೭೬ರಲ್ಲಿ; ಆದರೂ ಕುಟುಕು ಜೀವ ಹಿಡಿದುಕೊಂಡು ನಿಂತಿದ್ದ ಸಾಮ್ರಾಜ್ಯದ ಪೂರ್ವದ ರಾಜಧಾನಿಯಾಗಿದ್ದ ಕಾನ್ಸ್‌ಸ್ಟಾಂಟಿನೋಪಾಲನ್ನು ೧೪೫೩ರಲ್ಲಿ ಆಕ್ರಮಿಸಿಕೊಂಡ ತುರ್ಕರು ಅದನ್ನು ಇಸ್ಲಾಂಬುಲ್‌ ಆಗಿ ಪರಿವರ್ತಿಸುವುದರೊಂದಿಗೆ ಜಗತ್ತಿನ ಇತಿಹಾಸದ ರೋಚಕ ಅಧ್ಯಾಯವೊಂದು ಕೊನೆಗೊಂಡಿತು. ದಾಂತೆಯ ಕಾಲಕ್ಕಾಗಲೇ ಇಡೀ ಇಟಲಿ ಸಣ್ಣ ಸಣ್ಣ ಪ್ರಾಂತ್ಯಗಳಾಗಿ ಒಡೆದು ಹೋಗಿದ್ದು ಭಾಷೆ ಮತ್ತು ಸಂಸ್ಕೃತಿ ಆಧಾರಿತ ಸಣ್ಣ ಸಣ್ಣ ಪ್ರಭುತ್ವಗಳ ಕಲ್ಪನೆಗೆ ಯುರೋಪಿನಲ್ಲಿ ಚಾಲನೆ ಸಿಕ್ಕಿರಲಿಲ್ಲ. ಇಟಲಿಯ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಮಾಡಲಾದ ಗಡಿಪಾರು, ಭಯಾನಕ ಶಿಕ್ಷೆಯಾಗಿ ಪರಿವರ್ತನೆಗೊಳ್ಳಲು ಅರಾಜಕತೆ ಕಾರಣವಾಗಿತ್ತು.

ಸರದಾರನೊಬ್ಬ ನೀಡಿದ ಆತಿಥ್ಯ ಸ್ವೀಕರಿಸಿ ೧೩೧೭ರಲ್ಲಿ ರವೆನ್ನಾದ ಮನೆಯೊಂದರಲ್ಲಿ ತನ್ನ ಇಬ್ಬರು ಗಂಡು ಮಕ್ಕಳು ಮತ್ತು ಮಗಳ ಜತೆಗೆ ಉಳಿದುಕೊಂಡ ದಾಂತೆಗೆ ಬಡತನದ ಆದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾದುದು ಆ ಅವಧಿಯಲ್ಲಿಯೇ: ‘ದಿ ಡಿವೈನ್‌ ಕಾಮಿಡಿ’ಯ ಎರಡನೆ ಭಾಗದ ಕೊನೆಯ ಸರ್ಗಗಳು ಮತ್ತು ಮೂರನೇ ‘ಸ್ವರ್ಗ’ದ ಭಾಗವನ್ನು ಪೂರ್ಣಗೊಳಿಸಲು ಸಾಧ್ಯವಾದುದು ಆಗಲೆ. ಆ ರೀತಿಯ ಕೆಲ ಮಾಹಿತಿಗಳು ಆತನ ಬದುಕಿನ ಬಗ್ಗೆ ವಿವರ ನೀಡುವಂತೆಯ ಆತನ ಕಾವ್ಯರಚನೆ ಸಾಗಿ ಬಂದ ಹಾದಿಯ ಬಗ್ಗೆ ಕೂಡ ಬೆಳಕು ಚೆಲ್ಲುತ್ತವೆ. ‘ಸ್ವರ್ಗ’ದ ವರ್ಣನೆ ಮಾಡುವಾಗ ದಾಂತೆ ಅದನ್ನು ಬರೆಯುವ ಕಾಲದಲ್ಲಿ ತನಗೆ ನೆಲೆ ನೀಡಿದ ರವೆನ್ನಾ ಮತ್ತು ಸುತ್ತಮುತ್ತಲ ಪರಿಸರವನ್ನೇ ಹೆಚ್ಚಾಗಿ ಬಿಂಬಿಸುತ್ತಾನೆ. ಆ ಕಾಡು ಎರಡನೇ ಜಾಗತಿಕ ಸಮರದ ಕಾಲದಲ್ಲಿ ನಡೆದ ಅವ್ಯಾಹತ ಗುಂಡಿನ ದಾಳಿಗೆ ಸಿಕ್ಕು ಹಾಳಾಯಿತು.

ಹೊಟ್ಟೆಪಾಡಿಗಾಗಿ ಕಲೆ ಇತ್ಯಾದಿ ಕುರಿತು ಉಪನ್ಯಾಸ ನೀಡುತ್ತಿದ್ದುದಾಗಿ ಒಂದು ಕಡೆ ಹೇಳಿಕೊಂಡಿದ್ದಾನೆ. ನೆರೆಯ ಪ್ರಾಂತ್ಯದ ಜತೆ ಉದ್ಭವಿಸಿದ ವಿವಾದ ಬಗೆಹರಿಸಲು ಅಥವಾ ಅದಕ್ಕೊಂದು ಸೂಕ್ತ ಪರಿಹಾರ ರೂಪಿಸುವ ರಾಯಭಾರ ವಹಿಸಿ ಕೆಲವರನ್ನು ೧೩೨೧ರ ಬೇಸಿಗೆಯಲ್ಲಿ ಕಳುಹಿಸಲಾಯಿತು. ಆ ಗುಂಪಿನಲ್ಲಿ ದಾಂತೆಯೂ ಒಬ್ಬ. ಅದರಲ್ಲಿ ಅವರು ವಿಫಲರಾದರು ಎಂದು ಗೊತ್ತಾದನಂತರ ವಾಪಸ್ಸು ಕರೆಸಿಕೊಳ್ಳಲು ಜಹಜಿನ ಸೌಲಭ್ಯ ಒದಗಿಸಲಿಲ್ಲ. ಬೇರೆ ದಾರಿ ಕಾಣದೆ ತನ್ನ ಮನೆ ಸೇರಲು ಕಾಲುನಡಿಗೆಯಲ್ಲಿಯೆ ಹೊರಟ ಕವಿ ಮಾರ್ಗಮಧ್ಯದಲ್ಲಿ ತಗುಲಿದ ಮಲೇರಿಯಾ ಹೊಡತೆ ತಾಳಲಾರದೆ ಕೆಲ ದಿನಗಳಲ್ಲಿಯೇ ತಾನು ನಂಬಿದ ಸ್ವರ್ಗದೊಡೆಯನ ಮನೆ ಸೇರುತ್ತಾನೆ. ಆಗ ಆತನಿಗೆ ೫೬ರ ಹರೆಯ.

ಬರೆದಂತೆ ಐದು ಅಥವಾ ಆರು ಸರ್ಗಗಳನ್ನು ತನಗೆ ಅತ್ಯಂತ ಪ್ರಿಯರಾದ ಸ್ನೇಹಿತರೊಬ್ಬರಿಗೆ ಓದಲು ಕಳಿಸುವುದು ದಾಂತೆಯ ರೀತಿ. ಅವರು ಓದಿ ಮೆಚ್ಚುಗೆ ವ್ಯಕ್ತಪಡಿಸಿದ ನಂತರ ಇತರೆಯವರು ಓದುವ ಅವಕಾಶ ದೊರಕುತ್ತಿತ್ತು. ಕಾವ್ಯದ ಬೆಳವಣಿಗೆಯಲ್ಲಾಗುತ್ತಿದ್ದ ಪ್ರಗತಿ ಕುರಿತಂತೆ ಆತನ ಸಮಕಾಲೀನ ಸಮಾಜ ತೀವ್ರ ಕುತೂಹಲ ತಳೆದಂತೆ ತೋರುತ್ತದೆ. ಇಲ್ಲದಿದ್ದಲ್ಲಿ ಕವಿ ಸತ್ತ ಕೂಡಲೇ ಆತನ ದೇಹದ ಮೇಲೆ ಆಧಿಪತ್ಯ ಸ್ಥಾಪಿಸಲು ಹೋರಾಟ ನಡೆಸಬೇಕಾದ ಪ್ರಮೇಯ ಎದುರಾಗುತ್ತಿರಲಿಲ್ಲ. ಸತ್ತ ನಂತರ ನೋಡಿದರೆ ‘ಸ್ವರ್ಗ’ ಭಾಗದ ೧೩ ಸರ್ಗಗಳೇ ನಾಪತ್ತೆ. ಆತನ ಇಬ್ಬರು ಮಕ್ಕಳು ಆ ಭಾಗವನ್ನು ಮತ್ತೆ ಬರೆಯಲು ಪ್ರಯತ್ನಿಸುತ್ತಿರಬೇಕಾದರೆ ಕನಸಿನಲ್ಲಿ ಕಾಣಿಸಿಕೊಂಡ ದಾಂತೆ ನೀಡಿದ ಸೂಚನೆ ಅನುಸರಿಸಿ ಹೋಗಿ ನೋಡಿದರೆ, ಕವಿಯ ಕೈಬರಹದ ಹಸ್ತಪ್ರತಿ ದೊರಕಿತು ಎಂಬುದಾಗಿ ಬೊಕಾಸಿಯೊ ಬರೆಯುತ್ತಾನೆ.

ಆತನ ಮೃತದೇಹದ ಮೇಲೆ ಹಕ್ಕು ಸ್ಥಾಪಿಸಲು ಜನ್ಮ ನೀಡಿದ ಫ್ಲಾರೆನ್ಸ್‌ ಮತ್ತು ಆಸರೆ ನೀಡಿದ ರವೆನ್ನಾ ನಡುವೆ ನಡೆದ ದೊಡ್ಡ ಲಡಾಯಿ, ಆತನಿಗೆ ದಕ್ಕಿದ ಜನಪ್ರಿಯತೆಯ ಮಾಪಕವಾಗಿರುವಂತೆಯೇ, ಗೌರವದ ಸಂಕೇತವೂ ಆಗಿದೆ. ಅವನ ಕಳೇಬರವನ್ನು ರವೆನ್ನಾದಿಂದ ಮರಳಿ ತಂದು ತಮ್ಮ ನೆಲದಲ್ಲಿ ಮಣ್ಣು ಮಾಡಬೇಕು ಎಂಬುದು ಫ್ಲಾರೆನ್ಸ್‌ನವರ ಹಟ: ಅದಕ್ಕೆ ಅವಕಾಶ ನೀಡಬಾರದು ಎಂದು ರವೆನ್ನಾದವರು ನಿರ್ಧರಿಸುತ್ತಾರೆ. ದೇಹದ ಮೇಲಿನ ಹಕ್ಕು ಬಿಟ್ಟುಕೊಡುವಂತೆ ಕೋರಿ ಕಳಿಸಲಾದ ಮನವಿಗಳು ವಿಫಲವಾದನಂತರ ಪೋಪ್‌ ನೀಡಿದ ಖುದ್ದು ಆದೇಶ ಅನುಸರಿಸಿ ಕದ್ದು ತೆಗೆದುಕೊಂಡು ಹೋಗುವ ಪ್ರಯತ್ನ ಕೂಡ ನಡೆಯುತ್ತದೆ; ಸಮಾಧಿ ಅಗೆದು ನೋಡಿದರೆ ಕಂಡದ್ದು ಕೆಲ ಮೂಳೆಗಳು. ಅದನ್ನು ಮೊದಲೆ ಅಂದಾಜು ಮಾಡಿದ್ದ ರವೆನ್ನಾದವರು ಅಸ್ಥಿಪಂಜರವನ್ನು ಚರ್ಚ್‌ನ ಗೋಡೆಯೊಂದರಲ್ಲಿ ಬಚ್ಚಿಟ್ಟಿದ್ದ ಸಂಗತಿ ಬಯಲಾದುದು ಎಷ್ಟೋ ವರ್ಷಗಳ ನಂತರ. ರಿಪೇರಿ ಕೆಲಸಕ್ಕೆಂದು ೧೮೬೫ರಲ್ಲಿ ಕೈಹಾಕಿದಾಗ ವಿಚಾರ ಗೊತ್ತಾಗಿ ಕಳೆಬರವನ್ನು ಮೊದಲು ಹೂಳಲಾಗಿದ್ದ ಜಾಗದಲ್ಲೇ ವಿಧ್ಯುಕ್ತವಾಗಿ ಸಮಾಧಿ ಮಾಡುವುದರ ಮೂಲಕ ವಿವಾದಕ್ಕೆ ತೆರೆ ಎಳೆಯಲಾಯಿತು. ‘ನರಕ’, ‘ಮಾರ್ಜಕಲೋಕ’ ಮತ್ತು ‘ಸ್ವರ್ಗ’ ಹೀಗೆ ಹಂತಹಂತವಾಗಿ ಆತನ ಕಾವ್ಯ ಸಾಗುವ ರೀತಿಯಲ್ಲಿಯೇ ಅವನ ಬದುಕು ಮತ್ತು ಸತ್ತ ನಂತರ ದೇಹ ಸಾಗಿದುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಗಾಬರಿ ತಾರದಿರುವುದಿಲ್ಲ.

ದಾಂತೆಯಂತಹ ಕವಿಯನ್ನು ಮೆಚ್ಚಿಕೊಂಡ ಆತನ ಸಮಕಾಲೀನ ಸಮಾಜ ಮತ್ತು ನಂತರದ ಓದುಗರಿಗೆ ಕೃತಜ್ಞತೆ ಸಲ್ಲಬೇಕು; ಯಾವುದೇ ದೇಶ ಅಥವಾ ಸಮಾಜದ ಮೇಲ್ಪದರ ಎತ್ತಿದರೆ ಕಾಣುವುದು ದಾಂತೆಯ ಕಾಲದ ಅರಾಜಕತೆ ಮತ್ತು ಅದಕ್ಕೂ ಮೀರಿದ ಭಯಾನಕತೆ. ಅಂತಹ ದಾಂತೆಯನ್ನು ಮುಟ್ಟಿ ನೋಡಲು ಕನ್ನಡದ ರನ್ನ ಹೇಳುವ ಎಂಟೆದೆ ಖಂಡಿತ ಬೇಕು.

 

[1]She was dressed in a very noble colour, a decorous and delicate crimson, tied with a griddle and trimmed in a manner suited to her tender age. Barbara Reynolds (tr), La Vita Nuova, Penguin Books, ೧೯೭೧, ಪುಟ ೨೯.

[2]Behold a god more powerful than I who comes to rule over me (i.e. Love). ಅಲ್ಲಿಯೇ ಪುಟ ೩೦.