ಆಯುಧ ಮತ್ತು ಮನುಷ್ಯರನ್ನು ಕುರಿತ ಹಾಡು ಹಾಡುವುದಾಗಿ ಹೇಳಿ ಲಿಖಿತ ಎಪಿಕ್‌ ಕಾವ್ಯ ರಚನೆಗೆ ಮುಂದಾಗುವ ವರ್ಜಿಲ್, ನೆಲೆ ಹುಡುಕಿಕೊಂಡು ಅಲೆಯುತ್ತಾ ಹೊರಟ ನಾಯಕನೊಬ್ಬ ವಿಧವೆಯಾದ ಯುವರಾಣಿಯ ಆತಿಥ್ಯದ ಒತ್ತಾಯಕ್ಕೆ ಮಣಿದು ತನ್ನ ಮತ್ತು ತನ್ನ ಜನರ ಕತೆಯನ್ನು ತಾನೆ ನಿರೂಪಿಸುವ ತಂತ್ರ ಮತ್ತು ಕಲೆಗಾರಿಕೆಯನ್ನು ಕಾವ್ಯದ ಆರಂಭದಲ್ಲಿಯೇ ಹೆಣೆಯುತ್ತಾನೆ. ಆ ರೀತಿ ತನ್ನ ಕತೆಯನ್ನು ತಾನೇ ಹೇಳುತ್ತಲೇ ಗ್ರೀಕರು ಮತ್ತು ಟ್ರೋಜನ್ನರ ನಡುವೆ ನಡೆದ ಸುದೀರ್ಘ ಕದನದಿಂದ ಉಂಟಾದ ಅನಾಹುತಗಳ ಕತೆ ನಿರೂಪಿಸುವ ಈನಿಯಾಸ್‌, ಗ್ರೀಕರ ಕೈಯಲ್ಲಿ ನಿರ್ನಾಮವಾದ ಟ್ರೋಜನ್‌ ವಂಶದ ಕುಡಿ; ರೋಂನಲ್ಲಿ ನೆಲೆ ಕಂಡುಕೊಳ್ಳಲು ಟ್ರಾಯ್‌ನಿಂದ ಹೊರಟಿರುತ್ತಾನೆ. ಮಾರ್ಗಮಧ್ಯೆ ಆತ ಭೇಟಿಯಾಗುವ ದಿದೊ, ಕಾರ್ಥೇಜಿನ ರಾಣಿ, ರೋಂ ಮತ್ತು ಕಾರ್ಥೇಜ್‌ ಬದ್ಧ ವೈರಿಗಳು; ಮುಂದೆ ನಡೆಯಲಿರುವ ರಾಜಕೀಯ ಮತ್ತು ಮಾನವೀಯ ದುರಂತವೊಂದಕ್ಕೆ ಬೀಜಾಂಕುರವಾಗುವುದು ಅಲ್ಲಿಯೆ.

ಗೆಲುವು ಸಾಧಿಸಲು ಗ್ರೀಕರು ಮರದ ಕುದುರೆ ತಂತ್ರದ ಕುಯುಕ್ತಿಯ ವಿವರಣೆ ಬರುವುದು ಎರಡನೆ ಸರ್ಗದಲ್ಲಿ. ಪರಿಣಾಮವಾಗಿ, ಮಣ್ಣಿನಲ್ಲಿ ಬೂದಿಯಾಗುವ ಟ್ರಾಯ್‌ ವೀನಸ್‌ ದೇವತೆ ಮಗನಾದ ಈನಿಯಾಸ್‌, ಹೆಕ್ತರ್‌ನ ಭೂತ ಮತ್ತು ತಾಯಿಯ ಅಣತಿ ಮೇರೆ ತನ್ನ ಮುದಿ ತಂದೆ ಅಂಖೈಸಸ್‌ನನ್ನು ಹೆಗಲ ಮೇಲೆ ಹೊತ್ತು ಮಗನನ್ನು ಕೈಹಿಡಿದು ನಡೆಸುತ್ತಾ ಹೊತ್ತಿ ಉರಿಯುತ್ತಿದ್ದ ಟ್ರಾಯ್‌ನಿಂದ ಹೊರನಡೆಯುತ್ತಾನೆ. ಸಹಚರರ ಜತೆ ಹಿಂಬಾಲಿಸಿ ಬರುತ್ತಿದ್ದ ಪತ್ನಿ ಮಾರ್ಗಮಧ್ಯೆ ಮೃತಳಾಗುತ್ತಾಳೆ. ದೂರದ ಬೇರೊಂದು ದೇಶದಲ್ಲಿ ನೆಲೆ ಹುಡುಕಿಕೊಂಡು ಹೊರಟ ಅವರಿಗೆ ಅದನ್ನೆಲ್ಲ ವಿಚಾರಿಸಲು ಅವಕಾಶ ತಾನೇ ಎಲ್ಲಿರುತ್ತದೆ!

ಕಾರ್ಥೇಜ್ ತಲುಪುವವರೆಗೆ ಅಟವರು ಪಟ್ಟ ಪಾಡು ಮತ್ತು ಅಲೆದಾಟ ಮೂರನೇ ಸರ್ಗ ತುಂಬಿದರೆ, ಅವನ ಕತೆ ಕೇಳುತ್ತಾ ಪ್ರೇಮವಶಳಾಗುವ ದಿದೊ ಮತ್ತು ಆ ನಂತರದ ಬೆಳವಣಿಗೆಯ ಕಥಾನವನ್ನು ನಾಲ್ಕನೆಯ ಸರ್ಗ ಹೇಳುತ್ತದೆ. ತಾನು ಸ್ಥಾಪಿಸಬೇಕಾದ ಸಾಮ್ರಾಜ್ಯದ ನೆಲೆ ಮತ್ತು ತಲುಪಬೇಕಾದ ಗುರಿ ಇನ್ನೂ ತುಂಬಾ ದೂರ ಇದೆ ಎಂಬ ಕರ್ತವ್ಯ ಪ್ರಜ್ಞೆಯಿಂದ ಎಚ್ಚೆತ್ತ ಈನಿಯಾಸ್‌, ತನ್ನ ಸಹಚರರೊಡನೆ ಯಾತ್ರೆ ಮುಂದುವರಿಸುತ್ತಾನೆ. ಗಂದರ್ವ ವಿವಾಹದ ರೀತಿಯಲ್ಲಿ ನಡೆದುಹೋದ ಮಿಲನದ ಪ್ರೇಮವಂಚಿತೆ ದಿದೊಗೆ ಈ ಕಡೆ ಸಾವೇ ಸ್ವಾಗತಾರ್ಹವಾಗುತ್ತದೆ.

ಸಿಸಿಲಿ ಭಾಗದಲ್ಲಿ ಸತ್ತ ತನ್ನ ತಂದೆ ಸ್ಮರಣಾರ್ಥ ಟ್ರೋಜನ್‌ ಮೂಲದ ರಾಜನೊಬ್ಬನ ನೆರವಿನಿಂದ ಏರ್ಪಡಿಸಲಾದ ಆಟೋಟಗಳ ಸ್ಪರ್ಧೆ ನಡೆಯುತ್ತಿರಬೇಕಾದರೆ ನಿರಂತರ ಅಲೆದಾಟದ ಪ್ರಯಾಸದಿಂದ ಬೇಸತ್ತ ಮಹಿಳೆಯರು ಹಡಗುಗಳಿಗೆ ಬೆಂಕಿ ಕೊಡುವ ದುರ್ಘಟನೆಯ ಚಿತ್ರಣ ಬರುವುದು ಐದನೇ ಸರ್ಗದಲ್ಲಿ: ಗೊತ್ತಾದ ಕೂಡಲೇ ಬೆಂಕಿಯಾರಿಸಿ ಉಳಿದ ಹಡಗುಗಳನ್ನು ರಕ್ಷಿಸುವ ಈನಿಯಾಸ್‌, ಅಲ್ಲಿಯೇ ನೆಲೆ ನಿಲ್ಲಲು ಬಯಸಿದವರಿಗೆ ನಗರವೊಂದನ್ನು ನಿರ್ಮಿಸಿ ತನ್ನೊಂದಿಗೆ ಬರಲು ಸಿದ್ಧವಿರುವವರನ್ನು ಕಟ್ಟಿಕೊಂಡು ಯಾತ್ರೆ ಮುಂದುವರಿಸುತ್ತಾನೆ. ನಿದ್ರಾಭಾರ ತಾಳಲಾರದೆ ಮಾರ್ಗಮಧ್ಯೆ ಸಾಯುವ ಅವನ ಅಚ್ಚುಮೆಚ್ಚಿನ ನಾವಿಕ ಪಾಲಿಮುರಸ್‌.

ತನ್ನ ತಂದೆಯನ್ನು ಕಂಡು ರೋಂ ಸಾಮ್ರಾಜ್ಯ ಮತ್ತು ತನ್ನ ಜನರ ಭವ್ಯ ಭವಿತವ್ಯ ತಿಳಿದಬರಲು ಪಿತೃಲೋಕಕ್ಕೆ ಇಳಿಯುವ ಈನಿಯಾಸ್‌ ತನ್ನ ಮಾಜಿ ಪ್ರೇಯಸಿ ದಿದೊಭೂತದ ರೂಪದಲ್ಲಿ ಎದುರಾದ ತನ್ನದೇ ನೈತಿಕ ಪ್ರಜ್ಞೆಯ ಜತೆ ಮುಖಾಮುಖಿಯಾಗಬೇಕಾಗಿ ಬರುವ ಅತ್ಯಂತ ಮಾನವೀಯ ದೃಶ್ಯ ಬರುವುದು, ಆರನೆಯ ಸರ್ಗದಲ್ಲಿ: ಯುರೋಪಿನ ಸಾಹಿತ್ಯ ಲೋಕದ ಗೌರಿಶಂಕರ ಎಂದು ಪರಿಗಣಿತವಾಗಿರುವ ಆ ಸನ್ನಿವೇಶದ ನಿರ್ವಹಣೆಯಲ್ಲಿ ವರ್ಜಿಲ್‌ ತೋರುವ ಅಸಾಧಾರಣ ಪ್ರತಿಭೆ ಮತ್ತು ಕಲಾವಂತಿಕೆ, ಯುರೋಪಿಯನ್‌ ಮನಸ್ಸು ತಲುಪಿದ ಅತ್ಯಂತ ಎತ್ತರದ ಉನ್ನತಿ, ಸೌಂದರ್ಯಪ್ರಜ್ಞೆ, ಮಾನವೀಯತೆ ಮತ್ತು ನೈತಿಕ ಎಚ್ಚರಕ್ಕೆ ಸಾಕ್ಷಿ. ಇತ್ತೀಚೆಗೆ ಕಾವ್ಯದ ಅರ್ಧಭಾಗ ಮುಗಿಯುತ್ತದೆ.

ಏಳನೆಯ ಸರ್ಗ ಆರಂಭವಾಗುವ ವೇಳೆಗೆ ಈನಿಯಾಸ್‌ನ ಅಲೆದಾಟ ಒಂದು ಹಂತ ತಲುಪಿರುತ್ತದೆ. ತನ್ನ ಗುರಿ ಮತ್ತು ಕನಸಿನ ರೋಂ ಸಾಮ್ರಾಜ್ಯದ ಮೂಲನೆಲೆಯಾದ ಇಟಲಿ ಪ್ರವೇಶಿಸುವ ಆತ ಅಲ್ಲಿನ ದೊರೆ ಲ್ಯಾಟಿನಸ್‌ ಮಗಳಾದ ಲ್ಯಾವಿನಿಯಾಳನ್ನು ಕೈಹಿಡಿಯುವ ಮಾತುಕತೆ ನಡೆಸುತ್ತಿರಬೇಕಾದರೆ, ಆಕೆಯ ಪ್ರಿಯಕರ ಟರ್ನಸ್‌ನ ತೀವ್ರ ವಿರೋಧ, ಪರಿಣಾಮವಾಗಿ ನಡೆಯುವ ಯುದ್ಧಕ್ಕೆ ಸಿದ್ಧವಾಗುವ ವಿವರ ಎಂಟನೇ ಸರ್ಗದಲ್ಲಿ. ಈನಿಯಾಸ್‌ ತನ್ನ ಪಡೆಯೊಂದಿಗೆ ಹಿಮ್ಮೆಟ್ಟಬೇಕಾಗಿ ಬರುವ ಚಿತ್ರಣದ ವಿವರ ಒಂಬತ್ತನೇ ಸರ್ಗದಲ್ಲಿ ದೊರಕಿದರೆ, ನಾಸ್ತಿಕ ಮೆನೆಂಜೆಟಿಸ್‌ ಕೊಲೆಯೊಂದಿಗೆ ಹತ್ತನೇ ಸರ್ಗ ಕೊನೆಗೊಳ್ಳುತ್ತದೆ. ಸೋಲಿನ ಭಯದಿಂದ ತತ್ತರಿಸಿದ ಲ್ಯಾಟಿನಸ್‌ ಶಾಂತಿ ಒಪ್ಪಂದ ಮುಂದಿಡುತ್ತಾನೆ. ಹನ್ನೊಂದನೇ ಸರ್ಗದಲ್ಲಿ. ಇನ್ನು ಹೆಚ್ಚಿನ ಸಾವು ನೋವು ಬೇಡವೆಂದು ಭಾವಿಸಿದ ಟರ್ನಸ್‌ ಮತ್ತು ಈನಿಯಾಸ್‌ ದ್ವಂದ್ವ ಯುದ್ಧಕ್ಕೆ ಅಣಿಯಾಗುತ್ತಾರೆ: ಒಂದು ಮಹತ್ವದ ವಿಚಾರ ಹೊರತು, ಉಳಿದಂತೆ ಈನಿಯಾಸ್‌ಗೆ ಸರಿಸಮನಾದ ಟರ್ನಸ್‌ನ ಸಾವಿನೊಂದಿಗೆ ಕಾವ್ಯ ಮುಕ್ತಾಯಗೊಳ್ಳುತ್ತದೆ; ಕಾಲ ಟರ್ನಸ್‌ಗೆ ವಿರುದ್ಧವಿತ್ತು ಎಂಬುದೇ ಆತ ಬದುಕಿನಲ್ಲಿ ಎದುರಿಸಬೇಕಾಗಿ ಬಂದ ದೊಡ್ಡ ಕೊರತೆ.

ಸಾಂಪ್ರದಾಯಿಕ ವಸ್ತು ಆಧರಿಸಿ ಸಾಂಪ್ರದಾಯಿಕ ಚೌಕಟ್ಟಿನ ಮಿತಿಯಲ್ಲಿಯೇ ಮಹತ್ವದ ಬದಲಾವಣೆ ತಂದುಕೊಂಡು ಬರೆಯಲಾಗಿರುವ ‘ಈನೀಡ್‌’ನ ಕತೆ ಮತ್ತು ಹಂದರ ಇದಾಗಿದೆ ಎಂದು ಸ್ಥೂಲವಾಗಿಯಾದರೂ ಪರಿಚಯಿಸಬಹುದಾಗಿದೆ. ಆದರೆ ದಾಂತೆಯ ‘ಡಿವೈನ್‌ ಕಾಮಿಡಿ’ಯನ್ನು ಸಂಗ್ರಹಿಸುವುದಾದರೂ ಹೇಗೆ? ಇಂಥಾದ್ದೇ ಎಂದು ಹೇಳಲು ಒಂದು ಪ್ರಮುಖ ಕತೆ ಇಲ್ಲ ಮತ್ತು ಯಾವುದೇ ರೀತಿಯ ಸಾಂಪ್ರದಾಯಿಕ ಚೌಕಟ್ಟಿನ ಜಾಡಿನಲ್ಲಿ ಕೃತಿ ಸಾಗುವುದಿಲ್ಲ. ಲ್ಯಾಟಿನ್‌ ಕವಿ ವರ್ಜಿಲನನ್ನು ತನ್ನ ಕಾವ್ಯದ ಗುರಿ ಮತ್ತು ಅನ್ವೇಷಣೆಯ ಹಾದಿಯ ಮಾರ್ಗದರ್ಶಿ ಎಂದು ಸ್ವೀಕರಿಸುವುದರ ಮೂಲಕ ಆವರೆಗಿನ ಸ್ಥಾಪಿತ ಪರಂಪರೆಗೆ ಸಲ್ಲಿಸುವ ಗೌರವ ಕೂಡ ಅತ್ಯಂತ ವಿಶಿಷ್ಟವಾದುದು. ತನಗೂ ಹಿಂದಿನ

[ಅ]ಮೃತ ಕವಿಯೊಬ್ಬನನ್ನು ಕಾವ್ಯ ಅನ್ವೇಷಣೆಯ ಹಾದಿಯಲ್ಲಿ ಗುರು ಎಂದು ಸ್ವೀಕರಿಸಿ ಮತ್ತು ಆತನನ್ನು ಒಂದು ಪಾತ್ರವಾಗಿ ಚಿತ್ರಿಸಿ ಕಾವ್ಯ ಬರೆದ ಉದಾಹರಣೆ ಆವರೆಗಿನ ಜಗತ್ತಿನಲ್ಲಿ ನಡೆದಿರಲಿಲ್ಲ. ಈಗಲೂ ಇಲ್ಲ. ಸಾಂಪ್ರದಾಯಿಕ ನಮನ ಸಲ್ಲಿಸಲು ಆತ ಆರಿಸಿಕೊಂಡ ವಿಧಾನ ಕೂಡ ಅತ್ಯಂತ ವಿಲಕ್ಷಣದ ವಿನೂತನ ಕ್ರಮವಾಗಿರುವಂತೆಯೇ ಉಳಿದ ವಿಚಾರದಲ್ಲೂ ಆತ ಅತ್ಯಂತ ಭಿನ್ನ ಜಾಡಿನಲ್ಲಿ ಸಾಗುತ್ತಾನೆ. ಅವನು ನಡೆದುದೇ ದಾರಿ. ಹಾಗಾಗಿ ಯಾರನ್ನಾದರೂ ಅನುಸರಿಸುವ ಅಗತ್ಯ ಆತನಿಗೆ ಎದುರಾಗಲಿಲ್ಲವಾದಂತೆ, ಆತನನ್ನು ಎಲಿಯಟ್‌ ಹೊರತು ಯಾವ ಕವಿಯೂ ಅನುಸರಿಸುವ ಸಾಹಸ ಮಾಡಿದ ಉದಾಹರಣೆ ಇಲ್ಲ. ತನಗೂ ಹಿಂದಿನ ಕವಿಯೊಬ್ಬನನ್ನು ಕಾವ್ಯದಲ್ಲಿ ಪಾತ್ರವಾಗಿ ತರುವ ವಿಚಾರ ಅದ್ಭುತವಾದ ವಿನೂತನ ಕಲ್ಪನೆಯಾಗಿ ಉಳಿದಿರುವುವಂತೆಯೇ ಆತನ ಕಾವ್ಯ ಕಟ್ಟುವ ಕಲೆ ಕೂಡ ಇಂದಿಗೂ ಹೊಚ್ಚ ಹೊಸತನದಿಂದ ಕೂಡಿದೆ. ಅಷ್ಟೆಲ್ಲ ಪ್ರಯೋಗಶೀಲ ಗುಣಲಕ್ಷಣಗಳಿಂದ ಕೂಡಿದ ದಾಂತೆಯ ‘ಕಮಿದಿಯಾ’, ಯುರೋಪಿನ ಕಾವ್ಯಪರಂಪರೆಯ ಹಿಂದಿನ ಮತ್ತು ಮುಂದಿನದರ ನಡುವಿನ ಪ್ರಮುಖ ಸೇತು.

‘ನರಕ’, ‘ಮಾರ್ಜಕಲೋಕ’ ಮತ್ತು ‘ಸ್ವರ್ಗ’ ಎಂದು ಮೂರು ಅಧ್ಯಾಯ, ಹಂತ ಅಥವಾ ಕಾಂಡಗಳಲ್ಲಿ ಕಾವ್ಯವನ್ನು ವಿಂಗಡಿಸಲಾಗಿದ್ದು ಕವಿ ಗುರು ವರ್ಜಿಲನ ಮಾರ್ಗದರ್ಶನದಲ್ಲಿ ಮೊದಲ ಎರಡು ಘಟ್ಟಗಳನ್ನು ಹಾದುಹೋಗುವ ಕವಿ, ಕತೆಗಾರ, ಅನ್ವೇಷಕ, ಸಾಧಕ, ನಿರೂಪಕ, ಆತ್ಮ ಅಥವಾ ಪ್ರೇಮಿಯು, ದೇವತೆಯಾಗಿ ಪರಿವರ್ತನೆಗೊಂಡಿರುವ ತನ್ನ ಬಾಲ್ಯದ ಗೆಳತಿ ಮತ್ತು ಪ್ರೇಯಸಿ ಅರ್ಥಾತ್‌ ಭವತಾರಿಣಿಯ ಸಹಾಯದಿಂದ ಮುಂದುವರಿದು ಕೊನೆಯ ಘಟ್ಟವಾದ ಸ್ವರ್ಗ ತಲುಪುವುದು, ಬಹಳ ಸರಳವಾಗಿ ಹೇಳುವುದಾದರೆ ಕಾವ್ಯದ ಹಂದರ ಅಥವಾ ವಸ್ತು. ಆ ರೀತಿ ಸ್ವರ್ಗಾಭಿಮುಖವಾಗಿ ಸಾಗುವ ಹಾದಿಯಲ್ಲಿ ನರಕದ ಪಾತಾಳ ಲೋಕದ ಮೊದಲ ಕೋಣೆಯಿಂದ ಹಿಡಿದು ಸ್ವರ್ಗದ ತುತ್ತತುದಿಯವರೆಗಿನ ಮೂಲಕತೆಗೆ ಪೂರಕವಾಗಿ ನೂರಾರು ಕತೆ, ಆಖ್ಯಾನ, ಉಪಾಖ್ಯಾನ ಅಥವಾ ಘಟನೆಗಳು ಬರುತ್ತವೆ, ಇಲ್ಲವೆ ಜರುಗುತ್ತವೆ. ಪಯಣ ಸಾಗಿದಂತೆ ಆ ಮೂರು ಲೋಕಗಳು ಕ್ರಮವಾಗಿ ತೆರೆದುಕೊಳ್ಳುತ್ತಾ ಹೋಗಿ ಮಾನವ ಜಗತ್ತು ಅದರ ಎಲ್ಲ ವೈವಿಧ್ಯಮಯ ರೂಪದಲ್ಲಿ ಹಂತಹಂತವಾಗಿ ಅನಾವರಣಗೊಳ್ಳುತ್ತಾ ಸಾಗುತ್ತದೆ. ನರಕ ಮತ್ತು ಮಾರ್ಜಕಲೋಕಗಳನ್ನು ಹಾದು ಸ್ವರ್ಗದ ಹೊಸ್ತಿಲವರೆಗೆ ಕರೆದುಕೊಂಡು ಹೋಗುವ ಕೆಲಸವನ್ನಷ್ಟೆ ವರ್ಜಿಲ್‌ ಮಾಡುತ್ತಾನೆ. ಏಕೆಂದರೆ ಕ್ರಿಸ್ತ ಬರುವುದಕ್ಕೆ ಮೊದಲು ಹುಟ್ಟಿದ ಪೇಗನ್‌ ಆದ ಆತನಿಗೆ ಕ್ರಿಶ್ಚಿಯನ್‌ ಸ್ವರ್ಗ ಪ್ರವೇಶಿಸುವ ಹಕ್ಕಿರುವುದಿಲ್ಲ. ಅಲ್ಲಿಗೆ ಕರೆದುಕೊಂಡು ಹೋಗುವ ಮುಂದಿನ ಕೆಲಸವನ್ನು ಕ್ರಿಶ್ಚಿಯನ್‌ ರಿಲಿಜನ್ನಿನಲ್ಲಿ ಹುಟ್ಟಿದ ಆತನ ಬಾಲ್ಯಗೆಳತಿ ಮಾಡುತ್ತಾಳೆ; ಆಕೆಯೇ ಬಿಯಾತ್ರಿಸ್‌ ಎಂಬ ಕಾವ್ಯನಾಮದ ಬೈಸ್‌ಪೊರ್ತಿನರಿ. ಆಕೆಯ ಮೇಲಿನ ನಿಷ್ಕಲ್ಮಷ ಪ್ರೀತಿಯಿಂದ ಅದನ್ನು ಸಾಧಿಸುತ್ತಾನೆ. ಸ್ವಲ್ಪ ತುಂಟತನದಿಂದ ನೋಡುವುದಾದರೆ, ತನ್ನ ಬಾಲ್ಯದ ಗೆಳತಿಯನ್ನು ಸೇರಲು ಪ್ರೇಮಿಯೊಬ್ಬ ನಡೆಸಿದ ಸಾಹಸಯಾತ್ರೆ: ಎಲ್ಲರಿಗೂ ಸಹಜವಾದ ಬಾಲ್ಯದ ತುಂಟ ಅಥವಾ ಪೋಲಿ ಚೇಷ್ಟೆಗಳಿಗೆ ನೀಡಲಾದ ದಿವ್ಯದ ಲೇಪನ ಎಂದು ಬೇಕಾದರೂ ಆ ಕಾವ್ಯವನ್ನು ಅರ್ಥೈಸಬಹುದು; ಮನಸ್ಸು ಬಹಳ ಬಯಸಿದ್ದ ಗೆಳತಿಯನ್ನು ಎಷ್ಟೋ ವರ್ಷಗಳ ‘ನರಕದ ಅನುಭವ’ದ ನಂತರ ಸೇರುವುದು ‘ಸ್ವರ್ಗವಲ್ಲದೆ’ ಮತ್ತೇನು? ಆ ಅನೇಕ ರೀತಿ ಓದಬಹುದಾದ ದಾಂತೆಯ ‘ಡಿವೈನ್‌ ಕಾಮಿಡಿ’ಗೆ ದಕ್ಕಿರುವ ಅರ್ಥಪೂರ್ಣತೆ ಅಷ್ಟೇ ಸಮಕಾಲೀನವೂ ನಿತ್ಯವಿನೂತನವೂ ಆದುದು.

ಸಾಂಪ್ರದಾಯಿಕ ರೀತಿಯಲ್ಲಿ ದಾಂತೆಯ ಕೃತಿಯನ್ನು ಪರಿಚಯಿಸುವುದು ಅತ್ಯಂತ ಕಷ್ಟದ ಕೆಲಸ, ಅದು ಅಸಾಧ್ಯವೂ ಹೌದು. ಪರಿಚಯಿಸಲು ಆತನ ಕಾವ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಘಟನೆ, ಕತೆ ಮತ್ತು ಆಖ್ಯಾನಗಳನ್ನು ಸಂಗ್ರಹಿಸಬೇಕಾಗುತ್ತದೆ; ಸಂಗ್ರಹಿಸುವ ಕೆಲಸವನ್ನು ಆತನೇ ಬಹಳ ಅಚ್ಚುಕಟ್ಟಾಗಿ ಎಚ್ಚರಿಕೆಯಿಂದ ನಿರ್ವಹಿಸಿದ್ದಾನೆ. ಆತನ ಕಾವ್ಯದ ಒಂದು ಇಟ್ಟಿಗೆ ಕದಲಿಸಲು ಬರುವುದಿಲ್ಲ. ಆವರೆಗಿನ ಯುರೋಪಿನ ಜನಪದ, ಪುರಾಣ, ಇತಿಹಾಸ, ಕಾವ್ಯ ಮತ್ತಿರ ಮೂಲಗಳಲ್ಲಿ ದಾಖಲಾಗಿರುವ ಪ್ರಮುಖ ಘಟನೆಗಳನ್ನು ಕಾವ್ಯದ ಪರಿಧಿಯ ವ್ಯಾಪ್ತಿಯಲ್ಲಿ ತರುವುದರ ಜತೆಗೆ ತನ್ನ ಸಮಕಾಲೀನ ಸಮಾಜದ ಅನೇಕ ಆಗುಹೋಗುಗಳನ್ನು ನಿಕಷಕ್ಕೊಡ್ಡುತ್ತಾನೆ. ಜರಡಿ ಹಿಡಿಯುವ ಕೆಲಸವನ್ನು ಆತನೇ ಎಷ್ಟು ಚೆನ್ನಾಗಿ ಮಾಡಿದ್ದಾನೆಂದರೆ, ಯುರೋಪಿನ ಆ ಮೂಲಕ ಇಡೀ ಮಾನವ ಜನಾಂಗದ ವಿವಿಧ ಗುಣ ಲಕ್ಷಣಗಳನ್ನು ಅದರ ವೈವಿಧ್ಯಮಯ ರೂಪದಲ್ಲಿ ಪ್ರತಿನಿಧಿಸುವ ಪ್ರಾತಿನಿಧಿಕ ಅಂಶಗಳನ್ನು ಮಾತ್ರ ಹೆಕ್ಕಿಕೊಂಡು ಅವುಗಳಿಗೆ ಕಾವಯದ ಪರಿಮಿತಿಯಲ್ಲಿ ಒಂದು ರೂಪ ಕೊಡುತ್ತಾನೆ. ಅವರು ಎಸಗುವ ಕೃತ್ಯ ಮತ್ತು ಅಕೃತ್ಯಗಳನ್ನಾಧರಿಸಿ ಮನುಷ್ಯರನ್ನು ನರಕ ಇಲ್ಲವೆ ಮಾರ್ಜಕ ಲೋಕದ ವಿವಿಧ ನಮೂನೆಯ ಕೋಣೆಗಳಲ್ಲಿ ತೋರಿಸುವ ದಾಂತೆ, ಈ ಭೂಮಿಯ ಮೇಲಿನ ಬದುಕಿನಲ್ಲಿ ಮನುಷ್ಯರು ಎಸಗಲು ಸಾಧ್ಯವಿರುವ ಬಹುತೇಕ ಕೃತ್ಯಗಳನ್ನು ಅವುಗಳ ಪ್ರಾತಿನಿಧಿಕ ರೂಪದಲ್ಲಿ ತೆರೆದು ತೋರಿಸುತ್ತಾನೆ. ಅದು ಹೊರತು, ಆ ಬಗ್ಗೆ ತತ್ವ ಅಥವಾ ಮೌಲ್ಯದ ಮಾತುಗಳನ್ನಾಡಲು ಹೋಗುವುದಿಲ್ಲ. ಅವರು ಎಸಗಿದ ಕೃತ್ಯವೇ ಅವರ ವ್ಯಕ್ತಿತ್ವ, ಮನೋಧರ್ಮ ಮತ್ತು ಬದುಕಿನ ಬಗ್ಗೆ ತೆರೆದ ದೃಷ್ಟಿಕೋನವನ್ನು ಬಿಂಬಿಸುವ ರೀತಿಯಲ್ಲಿ ಕಾವ್ಯ ನಿರ್ವಹಿಸುತ್ತಾನೆ. ಸನ್ನಿವೇಶಗಳಿಗೆ ಆತ ನೀಡುವ ಒತ್ತು ಬಹಳ ಮುಖ್ಯ; ಬದುಕಿನಲ್ಲಿ ಎದುರಾದ ಸನ್ನಿವೇಶ ಕೂಡ ಕಾರಣವಾಗಿದ್ದಿರಬಹುದು ಎಂದು ತೋರುವ ರೀತಿಯಲ್ಲಿ ನಿರೂಪಣೆ ಸಾಗುವ ಕಾರಣ ದಾಂತೆಯ ಕಾವ್ಯದಲ್ಲಿ ಹನಿಯುವ ಮಾನವೀಯತೆ ಅವನಿಗೆ ಅತ್ಯಂತ ವಿಶಿಷ್ಟವಾದುದು. ಬೇರಾವನೆ ಕವಿ ಅಥವಾ ಲೇಖಕನ ಕೈಯಲ್ಲಿ ರೋಚಕ ಕತೆಗಳ ಅಥವಾ ಅಕೃತ್ಯಗಳ ಭಯಾನಕ ಸಂಗ್ರಹವಾಗಿ ಬಿಡಬಹುದಾಗಿದ್ದ ಆ ಕೃತಿ, ಅದ್ಭುತ ಪ್ರತಿಭೆಯ ದಾಂತೆಯ ಮಾಂತ್ರಿಕ ಕೈಯಲ್ಲಿ ಮಹತ್ವದ ಕಾವ್ಯವಾಗಿ ರೂಪುಗೊಂಡಿದೆ. ಬಿಡಿ ಘಟನೆಗಳಾದರೂ ಬಿಡಿಯಾಗಿ ಉಳಿಯುವುದಿಲ್ಲ. ಪರಸ್ಪರ ಪೂರಕವಾದ ಅಂತಸ್ತುಗಳಿಂದ ಕೂಡಿದ ಮಹಾನ್‌ ಮಂದಿರವೊಂದರ ವಿವಿಧ ರಚನೆಗಳಾಗಿ ಒಟ್ಟಂದಕ್ಕೆ ಕಾರಣವಾಗುತ್ತದೆ. ಕಾವ್ಯಕ್ಷೇತ್ರದ ಜಕ್ಕಣಾಚಾರಿ ದಾಂತೆ; ಛಾಯಾಚಿತ್ರ ಕಲೆ ಬರುವುದಕ್ಕೆ ಮೊದಲೇ ಅದರ ಸಾಧ್ಯತೆಗಳನ್ನು ಕಾವ್ಯಮಾಧ್ಯಮದಲ್ಲಿ ಅನ್ವೇಷಿಸಿದ ಅದ್ಭುತ ಕಲಾವಿದ.

ದಿನನಿತ್ಯದ ಬದುಕಿನ ಸಮರಾಂಗಣದಲ್ಲಿ ನಡೆಯುವ ಅತ್ಯಂತ ಸಣ್ಣ ಮತ್ತು ಕ್ಷುಲ್ಲಕತನಗಳು ದಾಂತೆಯ ಅಂತಃಪಟಲದ ಸೂಕ್ಷ್ಮದರ್ಶಕ ಯಂತ್ರದ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ; ಚಾಡಿ ಹೇಳುವುದು, ಹೊಟ್ಟೆಬಕುತನ ಮೊದಲಾದ ಜುಜುಬಿ ಸಂಗತಿಳಿಂದ ಹಿಡಿದು ಅಸೂಯೆ, ಜಿದ್ದು, ಕ್ರೋಧ, ಪ್ರತೀಕಾರ, ಮದ, ಮಾತ್ಸರ್ಯ, ಕೋಪತಾಪ, ನೀಚತನ, ಅಲ್ಪತೆ, ಸಣ್ಣತನ, ವಕ್ರತನ, ದ್ವೇಷ, ವಂಚನೆ, ನಯವಂಚಕತನ, ಸುಲಿಗೆ, ಮೋಸ, ದಗ, ಕುಯುಕ್ತಿ, ಕುತಂತ್ರ, ಹಾದರ, ಸೇಡು ಮೊದಲಾದ ಎಲ್ಲ ರೀತಿಯ ಗಣನೆಗೆ ಬರುವ ಮತ್ತು ಬಾರದೇ ಹೋಗುವ ಲೋಕವ್ಯವಹಾರಗಳನ್ನು ಅವುಗಳ ವೈವಿಧ್ಯಮಯ ಪ್ರಾತಿನಿಧಿಕ ರೂಪದಲ್ಲಿ ಕಂಡಿರಿಸಿದ್ದಾನೆ. ಅರ್ಜುನನಿಗೆ ಕೃಷ್ಣ ವಿಶ್ವರೂಪ ತೋರಿಸಿದ್ದಾಗಿ ಭಗವದ್ಗೀತೆ ಹೇಳುತ್ತದೆ. ಲೋಕವ್ಯವಹಾರದ ಅನಾಚಾರಗಳ ವಿಶ್ವದರ್ಶನ ಮಾಡಿಸುವ ದಾಂತೆಯ ಕೃತಿಯಲ್ಲಿ ಏನಿಲ್ಲ ಏನುಂಟು, ಎಂದು ನಿಬ್ಬೆರಗಾಗುವ ರೀತಿಯಲ್ಲಿ ಲೋಕನಡವಳಿಕೆಗಳು ಆತನ ರಾಡಾರ್‌ ಕಣ್ಣಿನಲ್ಲಿ ಸಿಕ್ಕು ಪ್ರಸ್ಫುಟಗೊಳ್ಳುತ್ತವೆ.

ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಅಸ್ಥಿರತೆಯ ಪಿಂಜ್ರಾಪೋಲು ಯುಗದ ಕವಿಯಾದ ದಾಂತೆ, ಮನುಷ್ಯ ಜಗತ್ತಿನ ಅರಾಜಕತೆಯನ್ನು ಚಿತ್ರಿಸುತ್ತಾ ಹೋಗುತ್ತಾನೆ. ವರ್ಜಿಲ್‌ ಮತ್ತು ದಾಂತೆಯ ಕಾಲದ ನಡುವೆ ವ್ಯತ್ಯಾಸವಿರುವುದೇ ಇಲ್ಲಿ. ಸ್ಥಿರತೆಗಾಗಿ ಹಾತೊರೆಯುವ ಕಾಲದ ಕವಿ ವರ್ಜಿಲ್‌ ಆದರೆ ಎಲ್ಲ ತರಹದ ತಲ್ಲಣ, ಕ್ಷೋಭೆ ಮತ್ತು ಆತಂಕ ತುಂಬಿದ ಯುಗದ ಕವಿಯಾದ ದಾಂತೆ ಸ್ವರ್ಗಕ್ಕಾಗಿ ಹಂಬಲಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಾಣಲು ಹವಣಿಸುತ್ತಾನೆ. ರೋಮನ್‌ ಕ್ಯಾಥೊಲಿಕ್‌ ಚೌಕಟ್ಟನ್ನು ಆ ಸಾರ್ಥಕತೆಗಾಗಿ ಸ್ವೀಕರಿಸಬೇಕಾಗುತ್ತದೆ.

ತೀರ ತದ್ವಿರುದ್ಧ ಕಲ್ಪನೆಗಳಾದ ನರಕ ಮತ್ತು ಸ್ವರ್ಗದ ಅನುಭವ ಅಥವ ಸ್ಥಿತಿಯಲ್ಲಿ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ: ನರಕ ನರಕವೇ ಸ್ವರ್ಗ ಸ್ವರ್ಗವೇ… Hell is not a place but a state;[1] ಅವುಗಳ ನಡುವಿನ ಅಂತರ ಅಷ್ಟು ಅಗಾಧವಾದುದು. ನರಕದಿಂದ ಬಿಡುಗಡೆ ಹೊಂದಬೇಕಾದರೆ ಪರಿವರ್ತನೆ ಹೊಂದಬೇಕು. ಆ ತರಹದ ಪರಿವರ್ತನಶೀಲ ಮಧ್ಯಂತರ ಸ್ಥಿತಿಯೇ ಮಾರ್ಜಕಲೋಕ : ಭರವಸೆ ಮತ್ತು ಬೆಳಕಿನ ಸೋಂಕಿಲ್ಲದ ಸಂಪೂರ್ಣ ದಡ್ಡುಗಟ್ಟಿದ ಸ್ಥಿತಿ ನರಕವಾದರೆ, ಭರವಸೆ ಮತ್ತು ಬೆಳಕಿನ ಸೋಂಕಿಗೆ ಅವಕಾಶವಿರುವ ಹಂಬಲದ ಮಾರ್ಜಕಲೋಕ. ನರಕದ ಮುಂದುವರಿದ ಸ್ಥಿತಿಯಾದರೂ ಸಂಪೂರ್ಣ ನರಕವಲ್ಲ; ನರಕ ಮತ್ತು ಸ್ವರ್ಗದ ನಡುವಿನ ಸ್ಥಿತ್ಯಂತರ ಲೋಕ. ನರಕದಲ್ಲಿ ಸಿಗುವವರೇ ಬೇರೆ. ಮಾರ್ಜಕ ಲೋಕದಲ್ಲಿ ಎದುರಾಗುವ ಅನುಭವಗಳೇ ಬೇರೆ. ದಾಂತೆ ಪರ್ಗೇಟರಿ ಎಂದು ಕರೆಯುವ ಪರ್ಜ್ ಮೂಲದ ಆ ಪರಿಕಲ್ಪನೆಗೆ ಕ್ರಿಶ್ಚಿಯನ್‌ ದೇವತಾಶಾಸ್ತ್ರದಲ್ಲಿ ಬಹಳ ವಿಶಾಲ ಅರ್ಥವಿದೆ. ನರಕ, ಮಾರ್ಜಕಲೋಕ ಮತ್ತು ಸ್ವರ್ಗ ಎಂಬುದಾಗಿ ರೋಮನ್‌ ಕ್ಯಾಥೊಲಿಕ್‌ ನಂಬಿಕೆಗೆ ಅನುಗುಣವಾಗಿ ವಿಭಜಿಸುತ್ತಾನ್ನಾದರೂ, ಆ ವಿಭಜನೆ ಬದುಕಿಗೆ ಅನುಗುಣವಾಗಿಬಿಡುವ ಕಾರಣ ಸೀಮಿತ ಅರ್ಥದ ‘ರೋಮನ್‌ ಕ್ಯಾಥೊಲಿಕ್‌’ ಚೌಕಟ್ಟು ದಾಂತೆಯ ಕೈಯಲ್ಲಿ ನಿಜವಾದ ‘ಹ್ಯೂಮನ್‌ ಕ್ಯಾಥೊಲಿಕ್‌’ ಆಗಿಬಿಡುತ್ತದೆ. ಕಾವ್ಯದ ವಿಭಜನೆ ಮತ್ತು ಬರವಣಿಗೆಗೆ ಕ್ರಿಶ್ಚಿಯನ್‌ ನಂಬಿಕೆಗಳನ್ನು ಬಳಸಿ ಕೊಂಡರೂ ಅದನ್ನು ಮೀರಿ ವಿಶ್ವಸಾಮಾನ್ಯವಾಗಿ ನಿಲ್ಲುವ ರೀತಿ ಅವನಿಗೆ ವಿಶಿಷ್ಟವಾದುದು : Divine comedy is a complete scale of the depths and heights of human emotion….ಎಂಬ ಎಲಿಯಟನ ಮಾತು ಸ್ಮರಣಾರ್ಹ.

ಅವನ ಕಾವ್ಯ ತೆರೆದುಕೊಳ್ಳುವುದೇ ಅತ್ಯಂತ ನಾಟಕೀಯ ರೀತಿಯಲ್ಲಿ.

ಬದುಕಿನ ನಡುಬಟ್ಟೆಯಲ್ಲಿ ಸಾಗಿರಲು ಕತ್ತಲೆಯ ಮರಗಳ ಸಾಲಿನಲಿ ಸಿಕ್ಕುಬಿದ್ದ ನಾನು ಎಚ್ಚೆತ್ತು ನೋಡಿದರೆ, ದಾರಿ ಇಲ್ಲವಾಗಿ ಅಯ್ಯೋ, ಆ ದಟ್ಟ ನಿರ್ದಾಕ್ಷಿಣ್ಯ ರೂಕ್ಷ ಕಾಡೋ; ಆ ಬಗ್ಗೆ ಮಾತನಾಡದಿರುವುದೇ ಲೇಸು. ಅದರ ಉಸಿರೆತ್ತಿದರೆ ಸಾಕು ರಕ್ತದಲಿ ಹಳೆಯ ನೆನಪುಗಳ ಕೆದಕಲು, ಕಹಿಯಾದ ಆ ಎಲ್ಲ ನೆನಪು ಸಾವಿಗೆ ಹತ್ತಿರ. ಆದರೂ ನೆಮ್ಮದಿ ಉಳಿಸಿಕೊಂಡ ನಾನು ಕಂಡ ಕತೆ ಹೇಳುವೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬುವ ಮಾತ್ರ ಹೇಳಲಾರೆ. ಏಕೆಂದರೆ, ಕರಿದಾದ ಇಕ್ಕಟ್ಟಿನ ಕಣಿವೆಯ ದಾರಿಯಲ್ಲಿ ಮುಗ್ಗರಿಸಿದಾಗ ಭಾರವಾದ ಮನಸ್ಸು ನಿದ್ರೆಯಿಂದ ತುಂಬಿತ್ತು.

ಕೇವಲ ಹತ್ತು ಸಾಲುಗಳಲ್ಲಿ ಎಷ್ಟೊಂದು ಪ್ರತಿಮೆ ಮತ್ತು ರೂಪಕಗಳು. ದಾಂತೆಯ ಕಾವ್ಯವೇ ಒಂದು ಪ್ರತಿಮಾಲೋಕ. ಅನುಭವ ಆಧಾರಿತ ಶ್ರೀಮಂತ ವಿಭಾವನೆ ಮೇಲೆ ನಿಂತ ಬೃಹತ್‌ ರಚನೆ ಅಥವಾ ನಿರ್ಮಾಣ. ಷೇಕ್ಸ್‌ಪಿಯರ್‌ ಹಲವಾರು ನಾಟಕಗಳನ್ನು ಬರೆದಿರಬಹುದು. ಆದರೆ ಕಾವ್ಯದ ಚೌಕಟ್ಟಿನಲ್ಲಿ ಹಲವಾರು ನಾಟಕಗಳನ್ನು ಬರೆದಿರುವ ಕವಿ ಯಾರಾದರೂ ಇರುವುದಾದಲ್ಲಿ ಆತ ದಾಂತೆ. ಅವನ ಇಡೀ ಕಾವ್ಯವೇ ಒಂದು ನಾಟಕ. ನಾಟಕ ರೂಪದ ಕಾವ್ಯ. As a poet he was a great innovator, ಎಂಬುದಾಗಿ ಬರ್ಟ್ರಂಡ್‌ ರಸೆಲ್‌ ತನ್ನ ‘ಹಿಸ್ಟರಿ ಆಫ್‌ ವೆಸ್ಟರ್ನ್‌ ಫಿಲಾಸಫಿ’ಯ ೪೬೦ನೇ ಪುಟದಲ್ಲಿ ದಾಖಲಿಸುತ್ತಾನೆ.

ಅಲ್ಲಲ್ಲಿ ಕ್ವಚಿತ್ತಾಗಿ ಬಳಕೆಯಾಗುತ್ತಿದ್ದ ಅಲಿಗೋರಿ[2] ತಂತ್ರ ಬಳಸಿ ಇಡೀ ಕಾವ್ಯ ಬರೆದ ಮೊದಲ ಕವಿ ದಾಂತೆ. ಆನಂತರ ಬಂದ ಛಾಸರ್‌, ಜಾನ್ ಬನ್ಶನ್‌, ಮಿಲ್ಟನ್‌, ಡ್ರೈಡನ್‌, ಗಯಟೆ, ಶೆಲ್ಲಿ, ಕೀಟ್ಸ್‌, ಹಾಡಿ ಮೊದಲಾದವರು ಆ ತಂತ್ರ[3]ವನ್ನು ಬಳಸಿದ್ದಾರಾದರೂ ಆ ವಿಧಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿದ ಆಧುನಿಕ ಲೇಖಕ ಎಂದರೆ ಕಾಫ್ಕ. ಮನುಷ್ಯ ಸಮಾಜದ ವಾಸ್ತವತೆಯನ್ನು ಹೆಚ್ಚು ವಾಸ್ತವವಾಗಿ ಚಿತ್ರಿಸಲು ಆ ವಿಧಾನವನ್ನು ಆತ ಅನುಸರಿಸಿದಂತೆ ಕಾಣುತ್ತದೆ.

ದಾಂತೆ ನೀಡುವ ಸ್ವರ್ಗಲೋಕದ ಅನುಭವ ಆಧ್ಯಾತ್ಮಿಕ ಅನುಭವದಿಂದ ಬಂದುದೇ ಅಥವಾ ರೋಮನ್‌ ಕ್ಯಾಥೊಲಿಕ್‌ ನಂಬಿಕೆಗಳಿಗೆ ಪದ್ಯರೂಪದ ಅಭಿವ್ಯಕ್ತಿಯೇ ಅಥವಾ ಅದೊಂದು ಒಣ ಬೌದ್ಧಿಕ ಕಸರತ್ತೇ ಎಂಬ ಪ್ರಶ್ನೆ ಉದ್ಭವಿಸದಿರುವುದಿಲ್ಲ. ಆಧ್ಯಾತ್ಮಿಕ ಅಥವಾ ಮತ್ತಾವುದೇ ಅನುಭವ, ದಿನನಿತ್ಯದ ಲೋಕವ್ಯವಹಾರದ ಆಡುಮಾತಿನಿಂದ ಪರಿಪ್ಲುತವಾದ ಕಾವ್ಯ ಭಾಷೆಯಲ್ಲಿ ಸಾಕಾರಗೊಳ್ಳಲು ನಿರಾಕರಿಸುವುದಾದಲ್ಲಿ ಅದು ಕಾವ್ಯವಾಗುವುದಿಲ್ಲ ಎಂಬ ಸರಳ ಚೌಕಟ್ಟಿಗೆ ಅನುಗುಣ ಕಾವ್ಯರಚನೆ ಮಾಡುತ್ತಾನೆ.

ಆದರೂ ‘ಸ್ವರ್ಗ’ ಭಾಗದ ಕೆಲವೊಂದು ತೊಡಕುಗಳನ್ನು ಗಮನಕ್ಕೆ ತಂದುಕೊಂಡು ಮುಂದುವರಿಯುವುದು ಉಚಿತ. ಆಧ್ಯಾತ್ಮಿಕ ಅನುಭವ ಮತ್ತು ಒಳನೋಟಗಳನ್ನು ಕಾವ್ಯವಾಗಿಸುವ ವಿಚಾರದಲ್ಲಿ ಮಾಡಲಾದ ಸಾಧನೆಗೆ ಪ್ರತೀಕವಾಗಿ ‘ಸ್ವರ್ಗ’ ಭಾಗದ ಉದಾಹರಣೆ ನೀಡಲಾಗುತ್ತದೆಯಾದರೂ, ಓದುಗರಿಂದ ಹೆಚ್ಚಿನ ಸಿದ್ಧತೆ ನಿರೀಕ್ಷಿಸುತ್ತದೆ.

ತೀರ ಸಾಧಾರಣ ಘಟನೆಯನ್ನು ಸಹ ಅತ್ಯುತ್ತಮ ಕಾವ್ಯವಾಗಿಸುವ ಕಲೆ ಆತನಿಗೆ ಪ್ರಕೃತಿ ದತ್ತವಾಗಿ ಬಂದಿರುವುದಕ್ಕೆ ಉದಾಹರಣೆಯಾಗಿ ರಮಿನಿ ಪ್ರಸಂಗವನ್ನು ಉದಾಹರಿಸದವರೇ ಇಲ್ಲ. ನರಕದ ಐದನೇ ಸರ್ಗದಲ್ಲಿ ಎದುರಾಗುವ ಹೆಲೆನ್‌, ಕ್ಲಿಯೋಪಾತ್ರ, ದಿದೊ ಮೊದಲಾದ ಯುರೋಪಿನ ಪ್ರಸಿದ್ಧ ಪೌರಾಣಿಕ, ಐತಿಹಾಸಿಕ, ಜನಪದ ಪ್ರೇಮಿಗಳ ಸಾಲಿನಲ್ಲಿ ಬರುವ ರಮಿನಿ, ದಾಂತೆಗೆ ತೀರ ಪರಿಚಿತವಿದ್ದ ಕುಟುಂಬದ ಕುಟುಂಬದ ಹೆಣ್ಣು. ತನ್ನ ಮೈದುನನ ಜತೆ ಲೈಂಗಿಕ ಮತ್ತು ಭಾವನಾತ್ಮಕ ಸಂಬಂಧ ಏರ್ಪಟ್ಟ ಸಂದರ್ಭ ಮತ್ತು ಸನ್ನಿವೇಶವನ್ನು ಸ್ವತಃ ಆಕೆಯ ಬಾಯಿಂದ ನಿರೂಪಿಸುವ ತಂತ್ರವನ್ನು ದಾಂತೆ ಅನುಸರಿಸುತ್ತಾನೆ. ಆಕೆ ಬದುಕಿನಲ್ಲಿ ಎದುರಿಸಬೇಕಾಗಿ ಬಂದ ವಿಚಿತ್ರ ಸನ್ನಿವೇಶವನ್ನು ಯಥಾವತ್ತಾಗಿ ಕಟ್ಟಿಕೊಡುವುದರ ಮುಖೇನ ಹೇಳಬೇಕಾದ ಎಲ್ಲವನ್ನೂ ಆ ಸನ್ನಿವೇಶವೇ ಹೇಳುವ ರೀತಿಯಲ್ಲಿ ಕಾವ್ಯವನ್ನು ನಿರ್ವಹಿಸುವುದು; ರಮಿನಿಯನ್ನು ನರಕದಲ್ಲಿ ಎದುರಾಗುವ ಸಾಂದರ್ಭಿಕ ಸನ್ನಿವೇಶ ಹೊರತು ಉಳಿದಂತೆ ಎಲ್ಲೂ ಮೌಲ್ಯನಿರ್ಣಯದ ಮಾತುಗಳನ್ನು ಆಡಲು ಹೋಗುವುದಿಲ್ಲ:

“………………………………………….
One day we read for pastime how in thrall
Lord Lancelot lay to love, who loved the Queen;
We were alone – we thought no harm at all.

As we read on, our eyes met now and then.
And to our cheeks the changing colour started,
But just one moment overcame us – when

We read of the smile, desired oflips long – thwarted,
Such smile, by such a lover kissed away,
He that may never more from me be parted

Trembling all over, kissed my mouth. I say
The book was Galleot, Galleot the complying
Ribald who wrote; we read no more that day.’’

While the one spirit thus spoke, the other’s crying
Wailed on me with a sound so lamentable,
I swooned for pity like as I were dying,

And, as a dead man falling, down I fell.[4]

ಹಾಗಾಗಿ ತನ್ನ ಕಾವ್ಯದಲ್ಲಿ ಬರುವ ನೂರಾರು ಪಾತ್ರಗಳು ತಮ್ಮ ತಮ್ಮ ಬದುಕಿನಲ್ಲಿ ಎದುರಿಸಬೇಕಾಗಿ ಬಂದ ಸನ್ನಿವೇಶ ಮತ್ತು ಬಿಕ್ಕಟ್ಟುಗಳನ್ನು ಸೃಷ್ಟಿಸುವ ಮೂಲಕ ಹಲವಾರು ಪೌರಾಣಿಕ, ರಾಜಕೀಯ, ಸಾಮಾಜಿಕ ಕೃತಿಗಳಿಗೆ ವಸ್ತುವಾಗಬಹುದಾದ ಸಂಗತಿಗಳನ್ನು ಕೆಲವೇ ಸಾಲುಗಳಲ್ಲಿ ಅತ್ಯಂತ ಚುಟುಕಾಗಿ, ಚುರುಕಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸಲು ದಾಂತೆಗೆ ಸಾಧ್ಯವಾಗುತ್ತದೆ.

ಹೋಮರ್‌ ಮತ್ತು ಮಿಲ್ಟನ್‌ ಕಾವ್ಯ ಆರಂಭವಾಗುವುದೇ ಕಾವ್ಯದೇವತೆಯ ಸ್ತುತಿಯೊಂದಿಗೆ. ತನ್ನ ಕಾವ್ಯದ ಉದ್ದೇಶ ಮತ್ತು ಗುರಿ ಕುರಿತಂತೆ ಕೆಲ ಸಾಲು ಬರೆದ ನಂತರ ವರ್ಜಿಲ್‌ ಕಾವ್ಯದೇವತೆಗೆ ನಮನ ಅರ್ಪಿಸುತ್ತಾನೆ. ಆದರೆ ನೇರವಾಗಿ ವಿಷಯಕ್ಕೆ ಬರುವ ದಾಂತೆ ಎಲ್ಲೂ ಕಾವ್ಯದೇವತೆಯನ್ನು ಸ್ತುತಿಸುವ ಗೋಜಿಗೆ ಹೋಗುವುದಿಲ್ಲ; ಅವನ ಕಾವ್ಯವೇ ಇಡಿಯಾಗಿ ದಿವ್ಯದ ಆರಾಧಾನೆಯಾಗಿರುವ ಕಾರಣ ಆ ಅಗತ್ಯ ಆತನಿಗೆ ಕಾಣದೆ ಹೋಗಿರಬಹುದು.

ಯುರೋಪ್‌ ಸಾಗಿ ಬಂದ ದಾರಿಯನ್ನು ಅವಲೋಕಿಸಿ ಮುಂದೆ ಸಾಗಬೇಕಾದ ಹಾದಿಯತ್ತ ಕಣ್ಣು ಹಾಯಿಸಿದ ದ್ರಷ್ಟಾರ ದಾಂತೆ.


 

[1]T. S. Eliot, Selected Essays Faber And Faber, ೧೯೬೯, ಪುಟ ೨೫೦.

[2]Dante’s is visual imagination… Speech varies, but our eyes are all the same. And allegory was not a local Italian custom, but a universal European method. ಅಲ್ಲಿಯೇ, ಪುಟ ೨೪೩

Dante’s `allegorical’ method has great advantages for the writing of poetry: it simplifies the direction, and makes clear and precise the images. ಅಲ್ಲಿಯೇ, ಪುಟ ೨೬೮

[3]ಅನ್ಯಾರ್ಥರೂಪಕ ಎಂಬುದಾಗಿ ಕೆಲವರು ಅನುವಾದಿಸುವ ಆ ಮಾತನ್ನು ಕನ್ನಡದಲ್ಲಿ ಬೆಡಗಿನ – ರೂಪಕ ಎಂದು ಕರೆಯಬಹುದು.

[4]Dorothy L. Sayers (tr.) The Divine Comedy, Hell, Penguin Classics, ೧೯೭೬,, ಪುಟ ೧೦೦ – ೧೦೧