ಕಾವ್ಯರಚನೆಗೆ ಸಂಬಂಧಿಸಿದ ಕೆಲ ನಂಬಿಕೆ ಮತ್ತು ತಿಳುವಳಿಕೆಗಳನ್ನು ಹುಸಿ ಮಾಡುವ ಉದ್ದೇಶದಿಂದ ಕಾಲನ ವಿರುದ್ಧ ಸೆಣಸಿದ ಮಹತ್ವಾಕಾಂಕ್ಷಿಗಳ ಸಾಲಿನಲ್ಲಿ ಎದ್ದು ಕಾಣುವ ಹೆಸರು ಮಿಲ್ಟನ್‌. ಮಾನವ ಜನಾಂಗದ ಇತಿಹಾಸಕ್ಕೆ ಮಹತ್ವದ ತಿರುವು ನೀಡಿದ ಸಂಕ್ರಮಣಾವಸ್ಥೆಯ ಆಜುಬಾಜಿನಲ್ಲಿ ಕಾವ್ಯ ರಚನೆ ಮಾಡಿದ ಆತ, ಕಾವ್ಯಕೃಷಿ ಸಂದರ್ಭದಲ್ಲಿ ಎದುರಿಸಿದ ಬಿಕ್ಕಟ್ಟು ಮತ್ತು ಒತ್ತಡಗಳ ಮಹತ್ವ ಎಷ್ಟಿದೆ ಎಂದರೆ, ಅವುಗಳಿಗೆ ಪರಿಹಾರ ಕಂಡುಕೊಳ್ಳದೆ ಮಹತ್ವವಾದುದನ್ನು ಸಾಧಿಸುವ ಆಕಾಂಕ್ಷೆಯಿಂದ ತುಂಬಿದ ಯಾವ ಕವಿಯೂ ಸೃಜನಶೀಲತೆಯ ಹಾದಿಯಲ್ಲಿ ಬಹಳ ದೂರ ಸಾಗಲು ಬರುವುದಿಲ್ಲ. ಎಪಿಕ್ ಶೈಲಿಯ ಕಥನ ಕಾವ್ಯ – ಪರಂಪರೆಯ ಸುದೀರ್ಘ ಇತಿಹಾಸವಿರುವ ಭಾರತೀಯರು – ಅದರಲ್ಲೂ ಕನ್ನಡಿಗರು – ಮಿಲ್ಟನ್‌ನನ್ನು ಕೆಲ ಕಾರಣಗಳಿಗಾಗಿ ಬಹಳ ಹತ್ತಿರದಿಂದ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ‘ಶ್ರೀರಾಮಾಯಣ ದರ್ಶನಂ’ ರಚನೆ ಕಾಲದಲ್ಲಿ ಮಿಲ್ಟನ್‌ ಪ್ರಭಾವಕ್ಕೆ ಒಳಗಾಗಿರುವ ಕುವೆಂಪು ಗದ್ಯಶೈಲಿಯ ಮೇಲೂ ಆತನ ಪ್ರಭಾವ ಇಲ್ಲದಿಲ್ಲ. ಪತ್ರಿಕೋದ್ಯಮಕ್ಕೆ ಸೃಜನಶೀಲತೆಯ ಮುಲಾಮು ಹಚ್ಚುವ ಲೋಲುಪತೆಯಲ್ಲಿಯೆ ಕೃತ್ಯಕೃತ್ಯತೆ ಕಾಣುವ ಜನರು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಿಲ್ಟನ್‌ ನೆನಪು ಬಹಳ ಅವಶ್ಯಕ. ಹುಟ್ಟುತ್ತ ಸಾಯುವ ಪತ್ರಿಕೋದ್ಯಮದ ಕ್ಷಣಿಕ ತೆವಲಿನಿಂದ ಬಿಡಿಸಿಕೊಂಡು ಉಳಿದ ಬದುಕನ್ನು ಕಾವ್ಯ ರಚನೆಗೆ ವಿನಿಯೋಗಿಸಿದ ಮಿಲ್ಟನ್‌ ತೋರಿದ ಎಚ್ಚರ ಮತ್ತು ಜಾಗೃತ ಪ್ರಜ್ಞೆಯ ಹಾದಿಯಲ್ಲಿ ಚಾರ್ಲ್ಸ್ ಡಿಕನ್ಸ್‌, ಮಾರ್ಕ್‌ ಟ್ವೇನ್‌, ಹೇಮಿಂಗ್‌ವೇ ಮೊದಲಾದ ಅನೇಕರು ಸಾಗಿಬಂದಿದ್ದು ಅಂಥವರ ಸುದೀರ್ಘ ಪರಂಪರೆ ಅವರದು.

ಹೋಮರ್‌, ವರ್ಜಿಲ್‌, ದಾಂತೆ ಮೊದಲಾದವರನ್ನು ಮೂಲದಲ್ಲಿ ಓದುವ ಸದವಕಾಶ ಪಡೆದಿರುವ ಜನರು ಭಾರತದಲ್ಲಿ ಹೆಚ್ಚು ಮಂದಿ ಸಿಗಲಾರರು. ಎಷ್ಟೆಂದರೂ, ಅನುವಾದ ಅನುವಾದವೆ, ಅದರಲ್ಲೂ ಸಂಕ್ರಮಣ ಕಾಲದಲ್ಲಿ ಬಂದ ಕವಿಗಳನ್ನು ಮತ್ತೊಂದು ಭಾಷೆಯಲ್ಲಿ ಮರುಸೃಷ್ಟಿ ಮಾಡುವುದು ಅತ್ಯಂತ ಕಷ್ಟದ ಕೆಲಸ. ಆ ಕಾರಣವೇ ಮೂಲದಲ್ಲಿ ಓದಲು ಸಾಧ್ಯವಿಲ್ಲದ ಕವಿಗಳ ಸಂದರ್ಭದಲ್ಲಿ ಆಡಲಾಗುವ ಕೆಲ ಮಾತುಗಳು ಮತ್ತು ದಕ್ಕುವ ಒಳನೋಟಗಳು ಎಷ್ಟೇ ಮಹತ್ವದವೂ ಮತ್ತು ಒರಿಜನಲ್‌ ಆದುವೂ ಆಗಿದ್ದರೂ, ಯಾರದೋ ಮಾತುಗಳ ಪ್ರತಿಫಲನವಾಗಿಬಿಡುವ ಅವಕಾಶವಿದೆ ಎಂಬ ಎಚ್ಚರದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಅಗತ್ಯ. ಆದರೆ ಮಿಲ್ಟನ್‌ ವಿಚಾರದಲ್ಲಿ ತೀರ ಅಷ್ಟೊಂದು ಮುಜುಗರ ಅನುಭವಿಸಬೇಕಾದ ಅಗತ್ಯವಿಲ್ಲ.

ಕವಿಯಾಗಿ ಮಿಲ್ಟನ್‌ ಎದುರಿಸಿದ ಬಿಕ್ಕಟ್ಟುಗಳನ್ನು ಈ ರೀತಿ ಗ್ರಹಿಸಬಹುದಾಗಿದೆ; ಸೊಫೊಕ್ಲೆಸ್‌, ಷೇಕ್ಸ್‌ಪಿಯರ್‌ – ಅವರ ಪ್ರತಿಭೆ ಎಷ್ಟೇ ಶ್ರೀಮಂತವಾದುದಾಗಿದ್ದರೂ ಮೊದಲಾದ ನಾಟಕಕಾರರು ಹೋಮರ್‌, ವರ್ಜಿಲ್‌ ಮುಂತಾದ ಎಪಿಕ್‌ ಕವಿಗಳ ಸ್ಥಾನದಲ್ಲಿ ನಿಲ್ಲಲು ಸಾಧ್ಯವಿಲ್ಲ; ಎಪಿಕ್‌ ಹಾಗೂ ಲಿಖಿತ – ಎಪಿಕ್‌ಗಳನ್ನು ಪಡೆದ ಭಾಷೆಯ ಗೈರತ್ತು ಮತ್ತು ಶ್ರೀಮದ್ಗಾಂಭಿರ್ಯವೇ ಬೇರೆಯಾಗಿರುತ್ತದೆ ಎಂಬ ಅರಿವು ಮಿಲ್ಟನ್‌ಗಿತ್ತು. ಇಂಗ್ಲಿಷಿಗಿರುವ ಆ ಕೊರತೆ ನೀಗಿಸುವ ಉದ್ದೇಶದಿಂದ ಹೊರಡುವ ಮಿಲ್ಟನ್‌ ತನ್ನ ಭಾಷೆಯಲ್ಲೂ ಒಂದು ಎಪಿಕ್‌ ಮಾದರಿ ಕಾವ್ಯ ಬರೆಯಲು ಮುಂದಾಗುತ್ತಾನೆ. ಹೋಮರನ ‘ಎಪಿಕ್‌’ಅನ್ನು ಮಾದರಿಯಾಗಿ ಸ್ವೀಕರಿಸುವ ಹಾದಿಯಲ್ಲಿ ಎದುರಾಗುವ ಎಲ್ಲ ತೊಡಕುಗಳ ಅರಿವಿದ್ದ ಅಯ್‌ಸ್ಸುಲೋಸ್‌, ಸೊಫೊಕ್ಲೆಸ್‌ ಮೊದಲಾದ ಗ್ರೀಕ್ ‌ಕವಿಗಳು ನಾಟಕ ಮಾಧ್ಯಮಕ್ಕೆ ಆತುಕೊಳ್ಳಬೇಕಾಯಿತು. ಮತ್ತು ಹೋಮರನನ್ನು ಮಾದರಿಯಾಗಿ ಸ್ವೀಕರಿಸಿದ ವರ್ಜಿಲ್‌ ಹಾಗೂ ಆ ಹಾದಿಯಲ್ಲಿ ಮುಂದುವರಿಯಬಯಸಿದ ದಾಂತೆ ತಂದುಕೊಂಡ ಹಲವಾರು ಮಹತ್ವದ ಬದಲಾವಣೆಗಳ ಸ್ಪಷ್ಟ ಅರಿವು ಸಹ ಮಿಲ್ಟನ್‌ಗಿತ್ತು. ಹೋಮರ್‌ ಮತ್ತು ವರ್ಜಿಲ್‌ ಮಾದರಿಯಲ್ಲಿ ಎಪಿಕ್‌ ಬರೆಯಲು ಸಾಧ್ಯವಿಲ್ಲ ಎಂಬುದನ್ನು ದಾಂತೆಯೇ ಕಂಡುಕೊಂಡಿದ್ದ. ಆ ಕಾರಣವೆ ಆತನ ಕೃತಿಯನ್ನು ಸಾಂಪ್ರದಾಯಿಕ ಅರ್ಥದಲ್ಲ ‘ಎಪಿಕ್‌’ ಅಥವಾ ‘ಕ್ಲಾಸಿಕ್‌’ ಎಂದು ಪರಿಗಣಿಸಲು ಬರುವುದಿಲ್ಲವೆಂಬ ತಿಳುವಳಿಕೆ ಮಿಲ್ಟನ್‌ಗೆ ಇಲ್ಲದಿರಲಿಲ್ಲ. ಜತೆಗೆ, ಅಂತಹ ಎಪಿಕ್‌ಗಳ ಕಾಲ ಮುಗಿದುಹೋಯಿತು ಎಂಬ ಭಾವನೆ ಪ್ರಬಲವಾಗಿದ್ದ ಕಾಲದಲ್ಲಿ ಆ ಹಿನ್ನೆಲೆಯ ಅರಿವಿದ್ದೂ ಅವನು ಎಪಿಕ್‌ ಮಾದರಿ ಕಾವ್ಯ ರಚನೆಗೆ ಮುಂದಾಗುತ್ತಾನೆ.

ಡಿ.ಎಚ್‌. ಲಾರೆನ್ಸ್‌ ಸುತ್ತಲ ವಿವಾದಗಳು ಅವನು ಸಾಯುವ ಮೊದಲೇ ಮೊನಚು ಕಳೆದುಕೊಂಡಿದ್ದವು. ಸಲ್ಮಾನ್‌ ರಶ್ದಿ ಕುರಿತ ವಿವಾದಗಳಿಗೂ ಮತ್ತು ಸಾಹಿತ್ಯದ ಸೀಮೆಗೂ ಇರುವ ನಂಟು ಅಷ್ಟಕ್ಕಷ್ಟೆ. ಆದರೆ ಮಿಲ್ಟನ್‌ ಕಾವ್ಯ ರಚನೆಯ ಸಂದರ್ಭದಲ್ಲಿ ಎದುರಿಸಿದ ಬಿಕ್ಕಟ್ಟು ಮತ್ತು ಪ್ರಶ್ನೆಗಳ ತೀವ್ರತೆ ಕಾಲ ಸಾಗಿದಂತೆ ಹೆಚ್ಚಾಗುತ್ತಲೆ ಸಾಗಿದೆ. ಏಕೆಂದರೆ, ಅವುಗಳು ನೂರಕ್ಕೆ ನೂರು ಪಾಲು ಕಾವ್ಯ ಕೃಷಿಗೆ ಸಂಬಂಧಿಸಿದವು. ಇಂಗ್ಲಿಷ್‌ ಭಾಷೆಯನ್ನು ಕಲಕಿ ರಾಡಿ ಎಬ್ಬಿಸಿ ಹೋದ ಎಂಬುದಾಗಿ ನಂತರ ಬಂದ ಬ್ಲೇಕ್‌, ಷೆಲ್ಲಿ, ಕೀಟ್ಸ್‌, ಜಾನ್ಸನ್‌ ಮೊದಲಾದವರು ಆಡಿರುವ ಸಂಕಷ್ಟದ ಮಾತುಗಳ ಹಿಂದಿನ ತೊಳಲಾಟವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ಕವಿಯಾಗಿ ಮಿಲ್ಟನ್‌ ಎದುರಿಸಿದ ಬಿಕ್ಕಟ್ಟುಗಳನ್ನು ಬೇರೊಂದು ರೂಪದಲ್ಲಿ ಎದುರಿಸಿ ಕಾವ್ಯ ರಚನೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದ ಮತ್ತು ಒಂದಾದ ಮೇಲೊಂದರಂತೆ ಎರಡು ಲೇಖನ ಬರೆದು ತನ್ನ ಅಭಿಪ್ರಾಯಗಳನ್ನು ತಾನೇ ಮರುವಿಮರ್ಶೆಗೊಳಪಡಿಸಿಕೊಂಡ ಟಿ. ಎಸ್‌. ಎಲಿಯಟ್‌ನಿಗೂ ಆತನ ಸ್ಥಾನಮಾನ ಕುರಿತಂತೆ ಒಂದು ಖಚಿತ ತೀರ್ಮಾನಕ್ಕೆ ಬರಲಾಗಲಿಲ್ಲ.

ಕಾವ್ಯ ಧರ್ಮದ ಬಿಕ್ಕಟ್ಟುಗಳನ್ನು ಅದರ ತೀಕ್ಷ್ಣ ರೂಪದಲ್ಲಿ ಗ್ರಹಿಸಿದ ಮಿಲ್ಟನ್‌ನ ಸೂಕ್ಷ್ಮ ಸಂವೇದನೆ ಮತ್ತು ಒಳನೋಟಗಳಿಗೆ ಅದಕ್ಕಿಂತ ಬೇರೆ ಶಿಫಾರಸ್ಸಿನ ಅಗತ್ಯವಿದೆಯೆ?

[1]

ಕವಿ ಮಿಲ್ಟನ್‌ (೧೬೦೮ – ೭೪) ಎಂದೇ ಕರೆಯಲಾಗುವ ಜಾನ್‌ ಮಿಲ್ಟನ್ ತಂದೆಯ ಹಸರು ಕೂಡ ಜಾನ್‌ ಮಿಲ್ಟನ್‌. ರೋಮನ್‌ ಕ್ಯಾಥೊಲಿಕ್‌ ಪಂಗಡದಿಂದ ಪ್ರಾಟೆಸ್ಟಂಟ್‌ ಆಗಿ ಪರಿವರ್ತನಗೊಂಡ ಕವಿ ಮಿಲ್ಟನ್‌ನ ತಂದೆ ಧೀಮಂತ ವ್ಯಕ್ತಿ ಮತ್ತು ಅತ್ಯಂತ ಹೆಸರುವಾಸಿಯಾದ ಸಂಗೀತಗಾರ, ಬಾಲ್ಯದಿಂದಲೂ ಓದುವ ಗೀಳು ಅಂಟಿಸಿಕೊಂಡಿದ್ದ ಕವಿ ಮಿಲ್ಟನ್‌, ಲ್ಯಾಟಿನ್‌ನಲ್ಲಿ ಹಲವಾರು ಕವಿತೆ ಬರೆದು ಚಿಕ್ಕಂದಿನಲ್ಲಿಯೆ ಹೆಸರು ಮಾಡಿದ್ದ. ಹಠಮಾರಿತನ ಮತ್ತು ಯಾರಿಗೂ ಅಂಜದ ಸ್ವಭಾವದ ಮಿಲ್ಟನ್‌ಗೆ ಹುಕುಂ ಚಲಾಯಿಸಿ ಮಾತನಾಡುವವರನ್ನು ಕಂಡರೆ ಮೊದಲಿನಿಂದಲೂ ಎಲ್ಲಿದಲ್ಲದ ಅಸಡ್ಡೆ. ಕವಿ ಮಿಲ್ಟನ್‌ ಎಂದರೆ ದೃಢಮನಸ್ಸಿನ, ಕಠಿಣ ನಿಲುವಿನ, ಸದಾ ಓದುಬರಹದಲ್ಲಿ ತಲ್ಲೀನನಾದ ಮತ್ತು ಸಾರ್ವಜನಿಕ ಆಗುಹೋಗುಗಳಿಗೆ ತೀರ ವೈಯಕ್ತಿಕವಾದ ನೆಲೆಯಿಂದ ಪ್ರತಿಕ್ರಿಯಿಸುತ್ತಿದ್ದ ಏಕಾಂಗಿ ಎಂಬ ಭಾವನೆ ತರಿಸುವ ರೀತಿಯಲ್ಲಿ ಅವನ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ. ಓದುಬರಹ ಆತನ ಬದುಕಿನ ಬಹುಭಾಗವನ್ನು ಆಕ್ರಮಿಸಿಕೊಂಡಿತ್ತು ನಿಜ. ಆ ವಿಚಾರದಲ್ಲಿ ಕುವೆಂಪು ಮತ್ತು ಆತನ ನಡುವೆ ಎದ್ದು ಕಾಣುವ ಹೊಂದಾಣಿಕೆಯಿದೆ. ಆದರೂ ಮಿಲ್ಟನ್‌ ಸಾರ್ವಜನಿಕ ಸಂಪರ್ಕ ಕಳೆದುಕೊಂಡ ವ್ಯಕ್ತಿ ಏನಾಗಿರಲಿಲ್ಲ. ತನಗೆ ಬಹಳ ಪ್ರಿಯವಾದ ಆಗುಹೋಗುಗಳ ಬಗ್ಗೆ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಬರೆದಿರುವ ಆತನ ಗದ್ಯ ಬರವಣಿಗೆಯ ಬಹುಭಾಗ ಕಾಲಕಳೆದಂತೆ ಅರ್ಥಪೂರ್ಣತೆ ಕಳೆದುಕೊಳ್ಳಲು ಸಮಕಾಲೀನ ಸಮಾಜದ ಒತ್ತಡ ಮೀರಿ ಯೋಚಿಸಲು ಸಾಧ್ಯವಾಗದಿರುವುದು ಒಂದು ಕಾರಣ. ಸಂವಿಧಾನಾತ್ಮಕ ಪ್ರಜಾಸತ್ತೆ, ಪತ್ರಿಕಾ ಸ್ವಾತಂತ್ರ್ಯ, ವಿವಾಹ ವಿಚ್ಛೇದನ ಅಗತ್ಯ ಇತ್ಯಾದಿ ಅನೇಕ ಸಂಗತಿಗಳನ್ನು ಪ್ರತಿಪಾದಿಸಿ ಆತ ಬರೆದಿರುವ ಕೆಲವಾದರೂ ಲೇಖನಗಳಿಗೆ ಐತಿಹಾಸಿಕ ಮಹತ್ವವಿಲ್ಲದೆ ಇಲ್ಲ.

ಆ ತರಹದ ಪತ್ರಿಕೀಯ ಬರವಣಿಗೆಯ ಮಿತಿಯನ್ನು ಬಹಳ ಬೇಗನೆ ಗ್ರಹಿಸಿದ ಮಿಲ್ಟನ್‌ ತನ್ನ ಮುಂದಿನ ಬದುಕನ್ನು ಸಂಪೂರ್ಣವಾಗಿ ಕಾವ್ಯ ರಚನೆಗೆ ವಿನಿಯೋಗಿಸಿದ; ಕಾವ್ಯ ರಚನೆಯಲ್ಲಿ ಮುಳುಗಿಹೋದ ಎಂಬುದು ಸರಿಯಾದ ಮಾತು. ಆ ವೇಳೆಗಾಗಲೇ ತಾರುಣ್ಯದ ಹುಡುಗಾಟಿಕೆ ಕಳೆದು ಮನಸ್ಸು ಮಾಗಲು ಬಂದಿತ್ತು. ತಾನು ಪ್ರಬಲವಾಗಿ ಪ್ರತಿಪಾದಿಸಿದ ಯಾವೊಂದು ವಿಚಾರದಲ್ಲೂ ಜಯಗಳಿಸಲು ಸಾಧ್ಯವಾಗದೇ ಹೋದುದು ಕಾವ್ಯ ರಚನೆಯಲ್ಲಿ ಮುಳುಗುವಂತೆ ಮಾಡಲು ಕಾರಣವಾಯಿತು ಎಂದು ಲೇವಡಿ ಮಾಡುವವರು ಹೋಗುತ್ತಾನೆ:

On analysis, the marks against him appear both more numerous and more significant than the marks to his credit….. As man, he is antipathetic…. Milton is unsatisfactory.[2]

ತವರಿಗೆ ಹೋದ ತನ್ನ ಮೊದಲ ಪತ್ನಿ ಬಹಳ ವರ್ಷಳ ಕಾಲ ಮರಳಿ ಮನೆಗೆ ಬಾರದೇ ಹೋದಾಗ ವಿವಾಹ ವಿಚ್ಛೇದನದ ಅಗತ್ಯ ಕುರಿತು ವೈಯಕ್ತಿಕ ತುರ್ತಿನಿಂದ ಲೇಖನ ಬರೆಯುತ್ತಾನಾದರೂ ಅದರಿಂದಾಗಿ ಆ ತಕ್ಷಣವೇ ವಿಚ್ಛೇದನಕ್ಕೆ ಅವಕಾಶವಾಗಲಿಲ್ಲ. ಆದರೆ ಆಕೆ ಮರಳಿ ಬಂದು ಮೊದಲಿನಂತೆ ಸಂಸಾರ ನಡೆಸಿದಳು. ಅದಕ್ಕೆ ಲೇಖನ ಕಾರಣ ಎಂದೇನೂ ಹೇಳಬರುವುದಿಲ್ಲ. ಅಂತೂ ಬಂದಳು. ಆ ತರಹದ ಹಲವಾರು ಸಂಗತಿಗಳಿಂದ ಮಿಲ್ಟನ್‌ ವೈವಾಹಿಕ ಬದುಕು ಕುರಿತು ಬರೆಯಲಾದ ಪುಸ್ತಕಗಳು ಹಲವಾರಿವೆ. ೧೭ರ ಹರಯದ ಮೇರಿ ಪೊವೆಲಳನ್ನು ೧೬೪೩ರಲ್ಲಿ ತನ್ನ ಮೊದಲ ಹೆಂಡತಿಯನ್ನಾಗಿ ಸ್ವೀಕರಿಸಿದಾಗ ಮಿಲ್ಟನ್‌ಗೆ ಆಕೆಯ ಎರಡರಷ್ಟು ವಯಸ್ಸಾಗಿತ್ತು. ತಾನೇ ಸರಿ ಎಂಬ ಹಟ ವೈವಾಹಿಕ ಜೀವನಕ್ಕೆ ಅಡ್ಡಿಯಾದಂತೆ ತೋರುತ್ತದೆ. ತವರುಮನೆಗೆ ಹೋದ ಆಕೆ ಅನೇಕ ವರ್ಷಗಳ ಕಾಲ ಮರಳಿ ಬರಲೇ ಇಲ್ಲ. ಬರುವ ವೇಳೆಗೆ ಮಾನಸಿಕ ಸಮತೋಲನ ಕಂಡುಕೊಂಡಿದ್ದ ಮಿಲ್ಟನ್‌ ಎಲ್ಲ ಮರೆತು ಆಕೆಯ ಜತೆ ಎಂದಿನಂತೆ ಸಂಸಾರ ನಡೆಸುತ್ತಾನೆ. ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಆಕೆ ನಾಲ್ಕನೇ ಹೆರಿಗೆ ಕಾಲದಲ್ಲಿ ೧೬೪೨ರಲ್ಲಿ ಈ ಜಗತ್ತಿನಿಂದ ದೂರವಾಗುವ ವೇಳೆಗೆ ಸಂಪೂರ್ಣ ಕುರುಡನಾಗಿದ್ದ ಮಿಲ್ಟನ್‌ನ ಎರಡನೇ ಹೆಂಡತಿ ಕೂಡ ೧೯೫೬ರಲ್ಲಿ ಹೆರಿಗೆ ಕಾಲದಲ್ಲಿ ಇಲ್ಲವಾದಳು. ೧೬೬೩ರಲ್ಲಿ ಮತ್ತೆ ಮದುವೆಯಾದ ಮಿಲ್ಟನ್‌ ಹೊಟ್ಟೆ ಪಾಡಿಗಾಗಿ ಶಿಕ್ಷಕ ವೃತ್ತಿ ಮಾಡುತ್ತಿದ್ದ. ರಾಜ್ಯ ಸಮಿತಿಯ ಲ್ಯಾಟಿನ್‌ ಕಾರ್ಯದರ್ಶಿಯಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದ. ರಾಜಸತ್ತೆ ಮತ್ತು ಪ್ರಜಾಸತ್ತೆವಾದಿಗಳ ನಡುವೆ ನಡೆದ ದೀರ್ಘ ಹೋರಾಟದ ಕಾಲದಲ್ಲಿ ರಾಜಸತ್ತೆವಾದಿಗಳ ಕೈಮೇಲಾದಾಗ ಪ್ರಜಾಸತ್ತೆವಾದಿಗಳ ಮೇಲೆ ಹಗೆ ತೀರಿಸಿಕೊಂಡ ಅನೇಕ ಉದಾಹರಣೆಗಳಿವೆ. ಆದರೆ ಪ್ರಜಾಸತ್ತೆ ಬೆಂಬಲಿಸಿದ ಮಿಲ್ಟನ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ರಾಜಸತ್ತೆ ಬೆಂಬಲಿಗರಿಗೆ ಎದುರಾಗಲಿಲ್ಲ ಎಂಬುದು ಸಾರ್ವಜನಿಕ ಬದುಕಿನಲ್ಲಿ ಆತ ಗಳಿಸಿದ್ದ ಪ್ರಾಮುಖ್ಯ ಕುರಿತು ವಿವರ ನೀಡುತ್ತದೆ. ಆದರೂ ಆ ತರಹದ ಸಾರ್ವಜನಿಕ ಆಗುಹೋಗುಗಳಲ್ಲಿ ತೋರಿದ ಆಸಕ್ತಿಯ ಫಲವಾಗಿ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಬಹುಪಾಲನ್ನು ಕಳೆದುಕೊಳ್ಳಬೇಕಾಗಿ ಬಂದಿತು. ಈ ಮಧ್ಯೆ ಪಿತ್ರಾರ್ಜಿತವಾಗಿ ಬಂದಿದ್ದ ಲಂಡನ್‌ ಮನೆ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಹೋಯಿತು. ಆ ತರಹದ ಕೆಲವೊಂದು ತೊಂದರೆ ಮತ್ತು ತಾಪತ್ರಯ ಬಿಟ್ಟರೆ, ಮಿಲ್ಟನ್‌ ತನ್ನ ಬದುಕಿನ ಬಹುಭಾಗವನ್ನು ಕಳೆದುದು ಲಂಡನ್‌ ನಗರದಲ್ಲಿ.

ಇಳಿವಯಸ್ಸಿನಲ್ಲಿ ನೆಮ್ಮದಿ ಮತ್ತು ಶಾಂತಿಯಿಂದ ಕೂಡಿದ ಬದುಕು ಸಾಗಿಸಿದ ಮಿಲ್ಟನ್‌ ‘ತನ್ನ ಹೆಣ್ಣು ಮಕ್ಕಳಿಗೆ ತುಂಬಾ ಕಿರುಕುಳ ನೀಡಿದ’ ಎನ್ನುವ ಅಪವಾದವಿದೆ. ಪುಸ್ತಕ ಪ್ರೇಮಿಯಾಗಿದ್ದ ಆತ ತಂಬಾಕು ಮತ್ತು ದ್ರಾಕ್ಷಾರಸದ ಪ್ರೇಮಿಯೂ ಆಗಿದ್ದ. ಡ್ರೈಡನ್‌ ಮೊದಲಾದ ಕವಿಗಳ ಸ್ನೇಹ ಸಂಪಾದಿಸಿದ್ದ ಮಿಲ್ಟನ್‌ ಕುರುಡತನ ಕುರಿತ – ಬಿಥೋವನ್‌ ಕಿವುಡುತನದ ಸುತ್ತ ಇರುವಂತೆ ಅನೇಕ ತರಹದ ದಂತಕತೆಗಳಿಗೇನೂ ಕೊರತೆ ಇಲ್ಲ. ಆದರೂ ಮಿಲ್ಟನ್‌ ಸಮಾಧಿಯ ಗುರುತು ಇಂದು ಉಳಿದಿಲ್ಲ. ಆತನ ಸಾಧನೆ ಬಗ್ಗೆ ಬ್ರಿಟನ್ನಿನ ಜನ ತೋರಿದ ‘ಪ್ರೀತಿ’ ಮತ್ತು ‘ಪರಿಗಣನೆ’ಗೆ ಉದಾಹರಣೆ.

ಕವಿಯಾಗಿ ಮಿಲ್ಟನ್‌ ಎದುರಿಸಿದ ಬಿಕ್ಕಟ್ಟು ಮತ್ತು ಸಂಕಷ್ಟಗಳನ್ನು ಅಷ್ಟೇ ತೀಕ್ಷ್ಣ ರೂಪದಲ್ಲಿ ಎದುರಿಸಿದ ಮತ್ತೊಬ್ಬ ಕವಿಯನ್ನು ಕಾಣುವುದು ಕಷ್ಟಸಾಧ್ಯ. ಆತನ ಬಗ್ಗೆ ಉಳಿದ ಕವಿಗಳಲ್ಲಿ ಹೊಗೆಯಾಡುವ ಅಸಮಾಧಾನಕ್ಕೆ ಮೂಲದಲ್ಲಿ ಮಾತ್ಸರ್ಯಪ್ರೇರಿತವಾದ ಆ ತರಹದ ಅನೇಕ ಸಂಗತಿಗಳು ಕಾರಣವಾಗಿರುವಂತೆ ತೋರುತ್ತದೆ. ಭೂಮಿ ಸೌರಮಂಡಲದ ಕೇಂದ್ರವಲ್ಲ ಎಂಬ ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸಿ ತೋರಿಸಲು ದೂರದರ್ಶಕ ರೂಪಿಸಿದ ಗೆಲಿಲಿಯೋನ ಕಿರಿಯ ಸಮಕಾಲೀನನಾದ ಮಿಲ್ಟನ್; ಭೂಮಿಯೇ ಸೌರವ್ಯೂಹದ ಕೇಂದ್ರ ಎಂದು ನಂಬುವ ಬೈಬಲ್‌ನ ಯಾಡಂ ಮತ್ತು ಈವ್‌ನ ಕತೆಯನ್ನು ವಸ್ತುವನ್ನಾಗಿ ಆರಿಸಿಕೊಳ್ಳುತ್ತಾನೆ ಎನ್ನುವುದು ಗಮನಾರ್ಹ. ‘ಎಪಿಕ್‌’ ರಚನೆ ಸಾಧ್ಯವಿಲ್ಲ ಎಂಬ ಕಾಲದಲ್ಲಿ ‘ಎಪಿಕ್‌’ ಬರೆಯುವ ಸಾಹಸ ಮಾಡಿದ ಮಿಲ್ಟನ್‌ ತನ್ನ ಕಾಲದಲ್ಲಿ ಅನಾವರಣಗೊಳ್ಳುತ್ತಿದ್ದ ವೈಜ್ಞಾನಿಕ ತಿಳುವಳಿಕೆಗೆ ವಿರುದ್ಧ ಗತಿಯಲ್ಲಿ ಸಾಗತೊಡಗುತ್ತಾನೆ.

‘ಪ್ಯಾರಡೈಸ್‌ ಲಾಸ್ಟ್‌’ನ ಮೊದಲರ್ಧ ಭಾಗ ಉತ್ತಮ ಕಾವ್ಯವಾಗಿದ್ದು ಅಷ್ಟಕ್ಕೆ ನಿಲ್ಲಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ಮೆಕಾಲೆ ಮೊದಲಾದವರು ವಾದಿಸಿದ್ದಾರೆ. ಸೈತಾನನ ವಿಜೃಂಭಣೆಯೇ ಅವನ ಕಾವ್ಯದ ನಿಜವಾದ ಗುರಿ ಎಂದು ಅನುಮಾನ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಹೋಗಿರುವ ಕೆಲವರು ಆತನ ಕಾವ್ಯದ ಬೀಸಿನಿಂದ ತಲ್ಲಣಿಸಿ ಹೋಗಿದ್ದಾರೆ. ಪ್ರಾಟೆಂಸ್ಟಂಟ್‌ ಮನೋಧರ್ಮದ ಮೂಲಕ ಕವಿ ಕತೆಯನ್ನು ಪ್ರವೇಶಿಸುವ ಸಂಗತಿ ಹಲವರ ತಾಳ್ಮೆ ಮತ್ತು ಸಹನೆ ಪರೀಕ್ಷಿಸುತ್ತದೆ. ‘ಪ್ಯಾರಡೈಸ್‌ ಲಾಸ್ಟ್‌’ನಲ್ಲಿ ಸೈತಾನನಿಗೆ ದಕ್ಕಿರುವ ಪ್ರಾಮುಖ್ಯತೆ; ದೇವರು, ದೈವತ್ವ, ಋಜುತ್ವ ಮತ್ತು ನ್ಯಾಯ ಕುರಿತ ಮಿಲ್ಟನ್‌ನ ಪರಿಕಲ್ಪನೆಗಳು ವಿವಾದದ ತೀವ್ರತೆ ಹೆಚ್ಚಿಸಲು ಪೂರಕವಾಗಿರುಬಹುದು. ಅವನ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳು ವಿವಾದದ ಸಾಲಿನಲ್ಲಿ ಸೇರಿಹೋಗಿವೆ.

ಆದರೆ ಕವಿಯಾಗಿ ಮಿಲ್ಟನ್‌ ಎದುರಿಸಿದ ಸಮಸ್ಯೆಗಳ ಬಿಕ್ಕಟ್ಟು ಮತ್ತು ಆತ ಸಾಧಿಸಿದ ಸಾಧನೆಯ ಮಹತ್ವವನ್ನು ಕುಗ್ಗಿಸಲು ಅವುಗಳಿಗೆ ಸಾಧ್ಯವಾಗಿಲ್ಲ ಎಂಬುದನ್ನು ಮರೆಯಬಾರದು.

ದೈವತ್ವ ಮತ್ತು ಸೈತಾನನ ನಡುವೆ ಡೆಯುವ ಘರ್ಷಣೆಯ ವ್ಯಾಪ್ತಿಯಲ್ಲಿ ಸಿಕ್ಕಿ ಬೀಳುವ ಯಾಡಂ ಮತ್ತು ಈವ್‌ ಅಂತಹ ಮುಗ್ಧ ನಾಯಕ ನಾಯಕಿಯರು, ಯಾವುದೋ ಒಂದು ಗಳಿಗೆಯಲ್ಲಿ ವಿವಂಚನೆಗೆ ಒಳಗಾಗಿ ಮುಗ್ಧತೆಯ ಸ್ವರ್ಗದಿಂದ ವಂಚಿತವಾಗುವುದು ಆತನ ಕಾವ್ಯದ ವಸ್ತು. ಕೇಡು ಮತ್ತು ದುಷ್ಕೃತ್ಯಕ್ಕೆ ಕೋಟ್ಯಂತರ ಸಾಧ್ಯತೆ ಮತ್ತು ರೂಪಾಂತರಗಳಿರುವುವುದಾದಲ್ಲಿ ಋಜುತ್ವ ಮತ್ತು ಮುಗ್ಧತೆಗಳಿರುವುದು ಒಂದೇ ದಾರಿ ಮತ್ತು ಒಂದೇ ರೂಪ. ಹಾಗಾಗಿ ಸೈತಾನನ ಎದುರು ದೈವತ್ವ ಸಪ್ಪೆ ಅಥವಾ ಪೇಲವವಾಗಿ ಕಾಣುವುದು ಅನಿವಾರ್ಯವಿರಬಹುದು. ಅಷ್ಟೆಲ್ಲ ವಿಭ್ರಮಗಳ ಸೈತಾನನ ಮಾರ್ಗ ಹಿನ್ನಡೆ ಕಾಣಬೇಕಾಗುತ್ತದೆ ಎಂಬ ಸಂಗತಿ ಮಿಲ್ಟನ್‌ನನ್ನು ಆ ವಿಚಾರದಲ್ಲಿ ಬಹಳವಾಗಿ ಟೀಕಿಸಿದ ಮೆಕಾಲೆ ಮೊದಲಾದ ವಿಮರ್ಶಕರ ಕಣ್ಣಿಗೆ ಕಾಣದಿರುವುದು ಖೇದದ ಸಂಗತಿ.

ಮಿಲ್ಟನ್‌ನ ಪ್ಯಾರಡೈಸ್‌ ಲಾಸ್ಟ್‌ ಮೂಲತಃ ಪ್ರಾಟೆಸ್ಟಂಟ್‌ ಕಾವ್ಯ ಮತ್ತು ಆ ಮನೋಧರ್ಮದಿಂದಲೇ ಆ ಕಾವ್ಯ ರಚಿಸಿದ್ದಾನೆ ಎಂಬ ಮತ್ತೊಂದು ಆರೋಪ ಆತನ ಮೇಲಿದೆ. ರೋಮನ್‌ ಕ್ಯಾಥೊಲಿಕ್‌ ದೇವತಾಶಾಸ್ತ್ರೀಯ ಚೌಕಟ್ಟು ಮತ್ತು ಹಿನ್ನೆಲೆ ಒಪ್ಪಿಕೊಂಡು ದಾಂತೆ ಕಾವ್ಯ ಬರೆದಂತೆ, ಮಿಲ್ಟನ್‌ ಕೂಡ ಪ್ರಾಟೆಸ್ಟಂಟ್‌ ದೇವತಾಶಾಸ್ತ್ರೀಯ ಚೌಕಟ್ಟು ಸ್ವೀಕರಿಸಬೇಕಾಗಿ ಬಂದಿತು ಎಂಬುದು ಇತಿಹಾಸಬಲ್ಲ ವಿಚಾರ. ದಾಂತೆಯ ‘ದಿ ಡಿವೈನ್‌ ಕಾಮಿಡಿ’ ಕೇವಲ ರೋಮನ್‌ ಕ್ಯಾಥೊಲಿಕ್‌ ಕಾವ್ಯವಾಗಿ ಉಳಿಯುವುದಿಲ್ಲವಾದಂತೆ, ಮಿಲ್ಟನ್ನ ‘ಪ್ಯಾರಡೈಸ್ ಲಾಸ್ಟ್‌’ ಕೂಡ ಪ್ರಾಟೆಸ್ಟಂಟ್‌ ಕಾವ್ಯವಾಗಿ ಉಳಿಯುವುದಿಲ್ಲ. ದಾಂತೆ ವಿಚಾರದಲ್ಲಿ ಆ ಉದಾರತೆ ತೋರಿಸುವ ವಿಮರ್ಶಕರು ಮಿಲ್ಟನ್‌ ವಿಚಾರದಲ್ಲಿ ಏಕೆ ಹಿಂಜರಿಯುತ್ತಾರೆ? ಸಿ. ಎಂ. ಬೌರ ಅವರ ಮಾತುಗಳಲ್ಲೇ ಕಾಣುವ ವಿರೋಧಾಭಾಸಗಳನ್ನು ಗಮನಿಸಿದರೆ ಸಾಕು: emphatically Protestant ಅಲ್ಲ ಎನ್ನುವ ಬೌರ ಅವರೇ It is candidly and unashamedly Protestant[3] ಎನ್ನುತ್ತಾರೆ.

ಮನುಷ್ಯ ಜನಾಂಗ ವೈಯಕ್ತಿಕವಾಗಿ ಮಾತ್ರವಲ್ಲ ಸಾಮೂಹಿಕವಾಗಿ ಕಳೆದುಕೊಳ್ಳುತ್ತಿರುವ ಕಾವ್ಯ ಜಗತ್ತಿನ ಮೂಲ ಸೆಲೆಯಾದ ಮುಗ್ಧತೆಯನ್ನು ಮರಳಿ ಪಡೆಯುವುದರ ಹಂಬಲದ ಹಿಂದಿನ ಸಂಕಷ್ಟಗಳನ್ನು ಕುರಿತು ಕಾವ್ಯ ಬರೆದವನು ಮಿಲ್ಟನ್‌. ಅದನ್ನೇ ಕುವೆಂಪು ತಮ್ಮ ಪರಿಭಾಷೆಯಲ್ಲಿ ಭಾವಕೋಶ ಎಂಬುದಾಗಿ ಕರೆದರು. ಆ ಸಮಸ್ಯೆ ಮತ್ತು ಮತ್ತು ಬಿಕ್ಕಟ್ಟನ್ನು ಎದುರಿಸಿ ಕಾವ್ಯ ಬರೆದುದು ಮಿಲ್ಟನ್‌ನ ಹೆಚ್ಚುಗಾರಿಕೆ ಮತ್ತು ಸಾಧನೆ. ಆದರೆ ಮಿಲ್ಟನ್‌ ತಾನು ಎದುರಿಸಿದ ಬಿಕ್ಕಟ್ಟುಗಳನ್ನು ಕಾವ್ಯವಾಗಿಸುವಲ್ಲಿ ಸಫಲನಾದನೇ ಎಂಬುದನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾದರೆ ಅದರಿಂದ ಕಾವ್ಯ ಜಗತ್ತಿಗೆ ಮತ್ತು ಕವಿಗಳಿಗೆ ಹೆಚ್ಚಿನ ಲಾಭವಿದೆ.

ಮಿಲ್ಟನ್‌ ಬರೆದ ಕಾವ್ಯ, ಲಿಖಿತ ಎಪಿಕ್‌ ಅಥವಾ ಕ್ಲಾಸಿಕ್‌ ಆಯಿತೆ ಅಥವಾ ಇಲ್ಲವೆ? ತಾನಂದುಕೊಂಡಂತೆ ಇಂಗ್ಲಿಷ್‌ ಭಾಷೆಗೊಂದು ಎಪಿಕ್‌ ಮಾದರಿ ಕಾವ್ಯ ನೀಡುವಲ್ಲಿ ಆತ ಸಫಲನಾದನೆ ಅಥವಾ ಇಲ್ಲವೆ? ಎಂಬ ಪ್ರಶ್ನೆಗಳು ಬಹಳ ಮುಖ್ಯವಾದುವು. ಮುಗ್ಧತೆಯ ಸ್ವರ್ಗದಿಂದ ಮಾನವ ಜನಾಂಗ ದೂರವಾಗುವ ಸಂದರ್ಭದ ಹೊಸ್ತಿಲಲ್ಲಿ ನಿಂತು ಆ ಬಿಕ್ಕಟ್ಟನ್ನು ಕುರಿತು ಎಪಿಕ್‌ ಮಾದರಿಯ ಕಾವ್ಯ ಬರೆದುದು ಕೂಡ ಅಷ್ಟೇ ಮುಖ್ಯವಾದುದು. ಅದೇ ಸಮಸ್ಯೆಗಳನ್ನು ಬೇರೊಂದು ರೂಪದಲ್ಲಿ ಎದುರಿಸಿ ೨೦ನೇ ಶತಮಾನದಲ್ಲಿ ಕಾವ್ಯ ಬರೆಯುವುದರಲ್ಲಿ ಯಶಸ್ವಿಯಾದ ಎಲಿಯಟ್‌ನಿಗೂ ಕೂಡ, ಆತನ ಸ್ಥಾನಮಾನ ಕುರಿತಂತೆ ಒಂದು ಖಚಿತ ತೀರ್ಮಾನಕ್ಕೆ ಬರಲಾಗದೆ ಹೋದುದು ಕಾಲಮಾನದ ಮಿತಿಯಾಗಿರುವಂತೆ ತೋರುತ್ತದೆ.

ಅಂತಹ ಹಲವಾರು ಸಂಗತಿಗಳಿಂದಾಗಿ ಇಂದಿಗೂ ಸವಾಲಾಗಿ ಉಳಿದಿರುವ ಬಂಡುಕೋರ ಕವಿ ಮಿಲ್ಟನ್‌.

 

[1]‘Some of the errors and prejudices have been associated with my own name, and of these in particular I shall find myself impelled to speak; it will, I hope, be attributed to me for modesty rather than for conceit if I maintain that no one can correct an error with better authority than the person who has been held responsible for it. And there is, I think, another justification for my speaking about Milton, besides the singular one which I have just given. The champions of Milton in our time, with one notable exception, have been scholars and teachers. I have no claim to be either: I am aware that my only claim upon your attention, in speaking of Milton or of any other great poet, is by appeal to your curiosity, in the hope that you may care to know what a contemporary writer of verse thinks of one of his predecessors.

On Poetry and Poets, Milton II, Faber And Faber, ೧೯೮೪, ಪುಟ ೧೪೬.

[2]Milton I, ಅಲ್ಲಿಯೇ, ಪುಟ ೧೩೮

[3]From Virgil to Milton. Macmillan, London, ೧೯೯೮, ಪುಟ ೨೨೮