ಸಾಧಿಸಿದರೆ ದೊಡ್ಡದಾದುದನ್ನೇ ಸಾಧಿಸಬೇಕೆಂಬ ವಾಂಛೆ ಮತ್ತು ತುಡಿತ ಯಾವೊಂದು ಜನಾಂಗ ಅಥವಾ ವ್ಯಕ್ತಿಗಳಿಗೆ ಸೀಮಿತವಾದುದಲ್ಲ. ಅದಿಲ್ಲದೆ ಬದುಕು ಸಾಗುವುದೂ ಇಲ್ಲ. ಆದರೆ ಆಸೆ ಅಥವಾ ಹಂಬಲವಿದ್ದ ಆ ಮಾತ್ರಕ್ಕೆ ಎಲ್ಲರಿಂದಲೂ ಎತ್ತರದ ಸಾಧನೆ ಮಾಡಲು ಬರುವುದಿಲ್ಲ. ಆ ಅವಕಾಶ ದಕ್ಕುವುದು ಬೆರಳೆಣಿಕೆಯ ಕೆಲವರಿಗೆ. ಎಪಿಕ್, ಕ್ಲಾಸಿಕ್‌, ಮಹಾಕವಿ, ಮಹಾವಿಜ್ಞಾನಿ, ಮಹಾಮೇಧಾವಿ, ಜೀನಿಯಸ್‌ ಮೊದಲಾದ ಮಹಾಪದಗಳು ದುರ್ಬಳಕೆಗೊಳಗಾಗಲು, ಅವುಗಳಿಗೆ ಅಂಟಿಕೊಂಡಿರುವ ಮಹತ್ವ ಕಾರಣವಾಗಿರಬಹುದಾದರೆ, ಗುರಿ ತಲುಪುವಲ್ಲಿ ವಿಫಲರಾದವರು ಬೆಳೆಸಿಕೊಳ್ಳುವ ಸಿನಿಕತನ ಅಥವಾ ಅತೃಪ್ತಿ, ಆಕಾಂಕ್ಷೆ ಮತ್ತು ಸಾಧನೆ ನಡುವಿನ ಅಂತರವೂ ಕಾರಣವಿದ್ದಿರಬಹುದು.

ತಮ್ಮ ದೇಶ ಅನೇಕಾನೇಕ ಮಹಾವ್ಯಕ್ತಿಗಳು, ಮಹಾಕವಿಗಳು, ಮಹಾವಿಜ್ಞಾನಿಗಳು ಮೊದಲಾದ ಮಹಾಕಲಾವಿದರಿಗೆ ಜನ್ಮ ನೀಡಿದೆ ಎಂದು ಹೆಮ್ಮೆ ಪಡುವುದು, ಅದನ್ನಾಧರಿಸಿ ಒಂದು ದೇಶದ ಸಂಸ್ಕೃತಿ ಮತ್ತು ನಾಗರಿಕತೆಯ ಶ್ರೇಷ್ಠತೆ ಮತ್ತು ಕೊಡುಗೆ ಅಳೆಯುವುದು ಸಾಮಾನ್ಯ. ತಮ್ಮ ಕೈಯಲ್ಲಿ ಆ ಮಟ್ಟದ ಸಾಧನೆ ಮಾಡಲಾಗದಿದ್ದರೂ ಪರವಾಗಿಲ್ಲ; ತಾವು ಮೆಚ್ಚುವ ಕವಿ, ಸಂಗೀತಗಾರ, ವಿಜ್ಞಾನಿ ಅಥವಾ ಕಲಾವಿದರು ಮಹಾ ಆಗಿರಬೇಕು ಎಂಬ ಒತ್ತಾಸೆಯ ಬಯಕೆಯು ಅದರಲ್ಲಿ ಸೇರಿರುವಂತೆ ತೋರುತ್ತದೆ.

ಕಾವ್ಯಕ್ಕೆ ಮೊದಲಿದ್ದ ಹಿರಿಮೆ ಈಗಿಲ್ಲ, ಆದರೂ ಮಹಾಕಾವ್ಯ ಬರೆದು ಮಹಾಕವಿ ಅನ್ನಿಸಿಕೊಳ್ಳಬೇಕು ಎಂಬ ಆಸೆ ಬದಲಾಗುತ್ತಿರುವ ಕಾಲಕ್ಕೆ ಅನುಗುಣ ಹಲವಾರು ತಿರುವು ಪಡೆದುಕೊಂಡಿದೆ. ಸೊಫೊಕ್ಲೆಸ್‌ – ಯುರಿಪಿದೇಸ್‌ರಂತಹ ಅಪ್ರತಿಮ ಪ್ರತಿಭಾವಂತರು ನಡೆಸಿದ ಭಿನ್ನ ಬಗೆಯ ಪ್ರಯೋಗಗಳು ಒಂದು ತರಹದವಾದರೆ; ಕಥನಕವನ, ಭಾವಗೀತೆ, ಕಾದಂಬರಿ, ನೀಳ್ಗತೆ ಒಳಗಡೆ[1] ಮಹಾಕಾವ್ಯಕ್ಕೆ ಸಹಜವಾದ ಸಾಧ್ಯತೆಗಳನ್ನು ಸುಲಿಗೆ ಮಾಡುವ ಪ್ರಯತ್ನಗಳು ಮತ್ತೊಂದು ತರಹದವು. ಗಯಟೆಯ ‘ಫೌಸ್ಟ್‌’, ಟಾಲ್ಸ್‌ಟಾಯ್‌ನ ‘ವಾರ್‌ ಅಂಡ್‌ ಪೀಸ್‌’, ಜೇಮ್ಸ್‌ಜಾಯ್ಸ್‌ನ ‘ಯುಲಿಸಿಸ್‌’, ಎಲಿಯಟ್‌ನ ‘ದಿ ವೇಸ್ಟ್‌ ಲ್ಯಾಂಡ್‌’ ಕೆಲ ಉದಾಹರಣೆ. ಆ ಮಹಾಕವಿ ಯಾರು? ಯಾವುದು ಮಾತ್ರ ಮಹಾಕಾವ್ಯ? ಆ ಸ್ಥಾನಮಾನ ಪಡೆಯಲು ಪೂರ್ಣಗೊಳಿಸಬೇಕಾದ ಅರ್ಹತೆ ಅಥವಾ ಮಾನದಂಡಗಳು ಯಾವುವು? ಆ ಬಗ್ಗೆ ಒಂದು ಖಚಿತ ನಿರ್ಧಾರ ಮತ್ತು ಸ್ಪಷ್ಟತೆ ತಲುಪಲು ಸಾಧ್ಯವಾಗದ ಕಾರಣವೋ ಏನೋ, ಮಹಾಕಾವ್ಯ ಮತ್ತು ಮಹಾಕವಿ ಪದಗಳನ್ನು ಬಹಳ ಸಡಿಲವಾಗಿ ಬಳಸಲಾಗುತ್ತಿದೆ. ‘ಕ್ಲಾಸಿಕ್’ ಪದವನ್ನು ದುರ್ಬಳಕೆ ಮಾಡುವ ವಿಚಾರದಲ್ಲಿ ಬಹಳ ಮುಂದುವರಿದ ಯುರೋಪಿನ ಜನ, ಕುದುರೆ ಜೂಜಿನಿಂದ ಹಿಡಿದು ಪಾಕಶಾಸ್ತ್ರ ಕುರಿತ ಕೃತಿಗಳವರೆಗೂ ಅದರ ಬಳಕೆ ಹರಡಿಹೋಗಲು ಕಾರಣರಾದರು. ಮಹೋನ್ನತಿಗೆ ಸಂಕೇತವಾದಂತೆ ದುರ್ಬಳಕೆಯಲ್ಲಿ ತಲುಪಿದ ಅಧೋಗತಿಗೂ ಸಾಕ್ಷಿ ಆ ಪದ. ಅಷ್ಟಾದರೂ, ಮಹತ್ವದ ಕವಿಗಳ ಮತ್ತು ಕೃತಿಗಳ ಸ್ಥಾನಮಾನ ಕುರಿತಂತೆ ಅವರಲ್ಲಿ ಅಂತಹ ಗೊಂದಲವಿಲ್ಲ. ಸ್ಪಷ್ಟ ಮತ್ತು ಖಚಿತ ಮೂಲಮಾನ ಆಧರಿಸಿ ಕ್ರಮಬದ್ಧವಾದ ಹೊಂದಾಣಿಕೆಗೆ ಬರಲಾಗಿದ್ದು, ಆ ಪರಂಪರೆ ಅವರಲ್ಲಿ ಬಹಳ ಹಿಂದಿನಿಂದಲೂಬೆಳೆದು ಬಂದಿದೆ.

ಕ್ಲಾಸಿಕ್ ಎಂದರೆ ಓದಲಾಗದ ಮಹಾಕಗ್ಗ ಎಂಬ ಕುಹಕದ ಅರ್ಥವ್ಯಾಪ್ತಿಯಾಗಿರುವಂತೆಯೇ ಗ್ರೀಕ್‌, ಲ್ಯಾಟಿನ್‌ ಭಾಷೆಯ ಎಲ್ಲಾ ಮಹತ್ವದ ಪುರಾತನ ಕೃತಿಗಳು ಎಂಬ ಸೀಮಿತ ಅರ್ಥವೂ ಅದಕ್ಕಿದೆ; ಆಧುನಿಕ ಕ್ಲಾಸಿಕ್‌ – ಅದರ ಅರ್ಥವನ್ನು ವಿಸ್ತರಿಸುವ ಪ್ರಯತ್ನ ನಡೆದಿದ್ದು ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ‘ಈನೀಡ್‌’ ಮಾತ್ರ ಯುರೋಪಿನ ಏಕೈಕ ‘ಕ್ಲಾಸಿಕ್‌’ ಕೃತಿ ಎಂಬ ಖಚಿತ ಅಭಿಪ್ರಾಯವೂ ಇದೆ. ಅದು ನಿಜವೂ ಹೌದು. ಹೋಮರ್‌, ಸೊಫೊಕ್ಲೆಸ್‌ ಮೊದಲಾದ ಯಾವ ಮಹತ್ವದ ಗ್ರೀಕ್‌ ಕವಿಗಳಿಗೂ ಆ ಸ್ಥಾನಮಾನ ದೊರಕಿಲ್ಲ. ಹೋಮರನ ಕೃತಿಗಳನ್ನು ಪರಂಪರಾಗತ ಎಪಿಕ್‌ಗಳು ಎಂದು ಗೌರವಿಸುವ ಯುರೋಪಿನ ಜನರು ವರ್ಜಿಲನ ಕೃತಿಯನ್ನು ಕಲಾ ಎಪಿಕ್‌ ಎಂದು ಗುರುತಿಸುತ್ತಾರೆ: ದಾಂತೆ, ಷೇಕ್ಸ್‌ಪಿಯರ್‌ ಮತ್ತು ಗಯಟೆ ಮಾತ್ರ ಯುರೋಪಿನ ಮಹಾಕವಿಗಳು Great Poets[2] ಆ ತೀರ್ಮಾನಕ್ಕೆ ಬರಲು ಬೇಕಾದ ಮೂಲಮಾನ, ಮಾನದಂಡ, ಮೀಮಾಂಸೆ ಮತ್ತು ಮೂಲತತ್ವಗಳ ಬಗ್ಗೆ ಕೂಡ ಅವರಲ್ಲಿ ಖಚಿತತೆ ಮತ್ತು ಸ್ಪಷ್ಟತೆ ಸಾಧ್ಯವಾಗಿದೆ.

ವ್ಯಾಸ – ವಾಲ್ಮೀಕಿಯರು ಮಹಾಕವಿಗಳಾದಲ್ಲಿ ಕಾಳಿದಾಸ – ಪಂಪ ಕೂಡ ಮಹಾಕವಿಗಳಾಗಲು[3] ಸಾಧ್ಯವೆ? ನಾಲ್ಕು ಜನರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಬರುತ್ತದೆಯೇ? ಭಾರತದ ‘ಮಹಾಕವಿ’ ಎಂಬ ಪದವನ್ನು ಇಂಗ್ಲಿಷಿಗೆ ಸಡಿಲವಾಗಿ ಅನುವಾದಿಸುವುದಾದಲ್ಲಿ ‘ಗ್ರೇಟ್‌ ಪೊಯಟ್‌’ ಎಂದು ಬರೆಯಬೇಕು. ಆ ಅರ್ಥದಲ್ಲಿ ಕಾಳಿದಾಸನನ್ನು ‘ಮಹಾಕವಿ’ ಎಂದು ಕರೆಯುವುದಾದಲ್ಲಿ, ಕನ್ನಡದ ಕಂಪನಿಗೂ ಆ ಸ್ಥಾನ ದೊರಕಲು ಸಾಧ್ಯವೇ?

ಮಹಾಕವಿ ಎಂಬ ಪದ ಭಾರತದ ಸಂದರ್ಭದಲ್ಲಿ ಹೆಚ್ಚಾಗಿ ದುರ್ಬಳಕೆಗೆ ಒಳಗಾಗಲು ಮತ್ತೂ ಒಂದು ಹೆಚ್ಚಿನ ಕಾರಣವಿರುವಂತೆ ತೋರುತ್ತದೆ: ಕೆಲ ಶತಮಾನಗಳ ಹಿಂದೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಇದ್ದ ಮಾಧ್ಯಮ, ಕಾವ್ಯ ಮಾತ್ರವಾಗಿತ್ತು. ಕನ್ನಡ ಒಂದರಲ್ಲೆ ಅರ್ಧ ಡಜನ್‌ಗೂ ಹೆಚ್ಚು ಮಹಾಕವಿಗಳ ಪಟ್ಟಿ ಮಾಡಲಾಗುತ್ತದೆ. ೨೦ನೇ ಶತಮಾನದಲ್ಲಿ ಬಂದ ಕೆಲವರನ್ನು ಸೇರಿಸುವುದಾದಲ್ಲಿ, ಆ ಸಂಖ್ಯೆ ಹೆಚ್ಚಾಗುವುದು ಖಂಡಿತ.

ಮಹಾಕಾವ್ಯ ಬರೆದು ಮಹಾಕವಿ ಸ್ಥಾನಮಾನ ಪಡೆಯುವ ಹಂಬಲ ನವೋದಯ ಕಾಲ ಮತ್ತು ತದನಂತರದಲ್ಲೂ ಮುಂದುವರಿಯಿತು. ‘ಶ್ರೀರಾಮಾಯಣ ದರ್ಶನಂ’ನಲ್ಲಿ ಕುವೆಂಪು ಬಳಸುವ “ಮಹಾ ಛಂದಸ್ಸು” ಎಂಬ ನುಡಿಗಟ್ಟು ಆ ಅಭೀಪ್ಸೆಯ ಮತ್ತೊಂದು ರೂಪ: ಹಂಬಲ ಕನ್ನಡದಲ್ಲಿ ಎಷ್ಟು ಜೀವಂತ ಹರಿಯುತ್ತಿದೆ ಎಂಬುದಕ್ಕೆ ವಿ. ಕೃ. ಗೋಕಾಕರ ‘ಭಾರತ ಸಿಂಧು ರಶ್ಮಿ’, ಚಂದ್ರಶೇಖರ ಕಂಬಾರರ ‘ಚಕೋರಿ’[4] ಮತ್ತು ಸುಜನಾ ಅವರ ‘ಯುಗಸಂಧ್ಯಾ’ ಕೆಲ ಉದಾಹರಣೆ. ಆ ಸಾಲಿಗೆ ಸೇರಬಯಸುವ ಹಂಬಲ ವ್ಯಕ್ತಪಡಿಸುವವರಿಗೆ ಏನೇನೂ ಕೊರತೆ ಇಲ್ಲ.

ಎಲ್ಲ ‘ಭಾರತೀಯ ಭಾಷೆಗಳ ಮತ್ತು ಸಂಸ್ಕೃತಿಯ ತಾಯಿಬೇರು, ಎಂದು ‘ನಂಬಲಾಗಿರುವ’ ಸಂಸ್ಕೃತದ ಮಹಾಕವಿಗಳ ಪಟ್ಟಿ ಕನ್ನಡಕ್ಕಿಂತ ಕಡಿಮೆಯಾಗಲು ಸಾಧ್ಯವೇ? ಆ ಪ್ರಕಾರ, ಭಾರತದ ಎಲ್ಲ ಭಾಷೆಗಳ ಮಹಾಕವಿಗಳ ಸಂಖ್ಯೆ ಕನಿಷ್ಠ ಅರ್ಧ ನೂರಕ್ಕಿಂತ ಹೆಚ್ಚಿರಬೇಕಾಗುತ್ತದೆ. ಯಾವುದೇ ಭಾಷೆ ಅಥವಾ ಹಲವಾರು ಭಾಷೆಗಳನ್ನಾಡುವ ದೇಶದ ಜನರ ಹಿರಿಮೆ, ವೈವಿಧ್ಯ ಮತ್ತು ಬಹುಮುಖಿ ಸಾಂಸ್ಕೃತಿಕ ತಿಳುವಳಿಕೆ ಅನಂತಮುಖಿಯಾದುದಾಗಿದ್ದರೂ ಡಜನ್‌ಗಟ್ಟಲೆ ಮಹಾಕವಿಗಳನ್ನು ನೀಡಲು ಸಾಧ್ಯವೇ? ಭಾರತೀಯರಿಗೆ ತೀರ ಪರಿಚಿತವಾದ ಮತ್ತು ಜಗತ್ತಿನ ಸಮೃದ್ಧ ಸಾಹಿತ್ಯ ಭಾಷೆಗಳ ಪೈಕಿ ಒಂದಾದ ಇಂಗ್ಲಿಷಿನಲ್ಲಿ ಈವರೆಗೆ ಒಬ್ಬರಾದರೂ ಎಪಿಕ್‌ ಮತ್ತು ಕ್ಲಾಸಿಕ್‌ ಕವಿ ಬಂದಿಲ್ಲ. ಆ ಕೊರತೆ ನೀಗಿಸಲು ಪ್ರಯತ್ನಿಸಿದ ಮಿಲ್ಟನ್‌ ಸ್ಥಾನಮಾನ ಕುರಿತಂತೆ ಎಲಿಯಟ್‌ನಂಥವನ ಕೈಯಲ್ಲೂ ಕೊನೆಗೂ ಒಂದು ತೀರ್ಮಾನಕ್ಕೆ ಬರಲಾಗಿಲ್ಲ! ಸೊಫೊಕ್ಲೆಸ್‌, ಗಯಟೆ ಅದರಲ್ಲೂ ಷೇಕ್ಸಪಿಯರನಿಗೆ ದೊರಕಿದ ಗೌರವ ಮತ್ತು ಜನಪ್ರಿಯತೆ ಬೇರಾರಿಗೂ ದೊರಕಿಲ್ಲದಿರಬಹುದು: ಆ ಮೂರು ಜನ ವರ್ಜಿಲನಿಗಿಂತ ಹೆಚ್ಚು ಪ್ರತಿಭಾವಂತರಿರಬಹುದು ಮತ್ತು ಆ ಕಾರಣವೇ ಹೆಚ್ಚಿನ ಕೀರ್ತಿ ಪಡೆದಿರಬಹುದು; ಆದರೂ ಅವರಾರು ವರ್ಜಿಲನ ಪೂಜನೀಯ ಸ್ಥಾನದಲ್ಲಿ ನಿಲ್ಲಲು ಬರುವುದಿಲ್ಲ ಎಂಬುದನ್ನು ಮರೆಯಲಾಗದು.

ಯಾವುದೇ ಮಹತ್ವದ ಸಾಧನೆ ವ್ಯಕ್ತಿಯ ಕೊಡುಗೆಯಾದಂತೆ ಕಾಲದ ಕೊಡುಗೆಯೂ ಹೌದು; ಅವೆರಡೂ ಪರಸ್ಪರ ಸಂಧಿಸಿ ಪೂರಕವಾದಾಗ ಮಾತ್ರ ವರ್ಜಿಲನಂಥ ಕವಿಯೊಬ್ಬ ಬರಲು ಸಾಧ್ಯ. ಒಂದು ದೇಶ ಅಥವಾ ಜನಾಂಗದ ಸಂಸ್ಕೃತಿ ಮತ್ತು ನಾಗರಿಕತೆ ನಿರ್ಣಾಯಕ ಹಂತದಲ್ಲಿ ಹಾದು ಹೋಗುತ್ತಿದ್ದಾಗ ಮಾತ್ರ ಅದು ಘಟಿಸುತ್ತದೆ; ಮಾನವ ಜನಾಂಗದ ಸಾಧನೆಗಳ ಇತಿಮಿತಿ ಅಳೆಯಲು ಬೇಕಾದ ಮೂಲಮಾನಗಳನ್ನು ಆ ಬಗ್ಗೆ ಎಲ್ಲೂ ಏನೂ ಮಾತನಾಡಲು ಹೋಗದೆ ಮಾಡಿ ತೋರಿಸುವುದರ ಮೂಲಕ ನೀಡಲು ಅಂಥವರಿಗೆ ಮಾತ್ರ ಸಾಧಿತವಾಗಿರುತ್ತದೆ ಎಂಬುದನ್ನು ತೋರಿಸದೆ ತೋರಿಸಿಕೊಟ್ಟವನೆ ವರ್ಜಿಲ್‌. ಅದುವೆ ಅವನು ನೀಡಿದ ಮೊದಲ ಕ್ಲಾಸಿಕ್‌ ತತ್ವ.

‘ಪೃಥಿವ್ಯಾ ಇವ ಮಾನದಂಡಃ’ ಎಂಬ ಪದಪುಂಜ ಅಥವಾ ಪರಿಭಾಷಿಕ ಸೃಷ್ಟಿಸುವುದರ ಮೂಲಕ ಭೂಮಿಯನ್ನು ಅಳೆಯಲು ಪ್ರಕೃತಿಯೇ ಸೃಷ್ಟಿಸಿಕೊಂಡ ಮಾನದಂಡ ಹಿಮಾಲಯ, ಎಂಬ ಅರ್ಥ ನೀಡುವ ಪದ್ಯ ಬರೆದ ಮೊದೆಲ ಕವಿ ಭಾರತದ ಕಾಳಿದಾಸ ಎಂದೇ ಕಾಣುತ್ತದೆ. ಆ ಅರ್ಥಪರಂಪರೆ ನೀಡುವ ಪದ್ಯವನ್ನು ಜಗತ್ತಿನ ಬೇರಾವುದೇ ಕವಿಗಳು ಬರೆದಿರುವ ಉದಾಹರಣೆ ಇಲ್ಲ. ಭೂಮಿಯನ್ನು ಅಳೆಯಲು ಪ್ರಕೃತಿಯೇ ಸೃಷ್ಟಿಸಿದ ಹಿಮಾಲಯದ ಸಾದೃಶ್ಯ ಇರಬೇಕಾದಂತೆ; ಮನುಷ್ಯ ಜಗತ್ತಿನ ಸಾಧನೆಗಳ ಇತಿಮಿತಿ ಗ್ರಹಿಸಲು ಅವರಲ್ಲೇ ಕೆಲವರು ಸೃಷ್ಟಿಸುವ ಹಿಮಾಲಯಗಳನ್ನು ಮಾನದಂಡಗಳನ್ನಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆ. ಪ್ರಕೃತಿಯ ಕೊಡುಗೆಯಾದ ಹಿಮಾಲಯವನ್ನು ಮತ್ತೊಮ್ಮೆ ಸೃಷ್ಟಿಸಲು ಬರುವುದಿಲ್ಲವಾದಂತೆ, ಮನುಷ್ಯರ ಸೃಜನಶೀಲ ಸಾಮರ್ಥ್ಯದ ಪರತೀಕಗಳಾದ ಮಾನವ ನಿರ್ಮಿತ ಹಿಮಾಲಯಗಳನ್ನು ಸಹ ಮತ್ತೆ ಪುನರ್‌ ನಿರ್ಮಿಸಲು ಬರುವುದಿಲ್ಲ ಎಂಬ ಒಳನೋಟವೂ ಕಾಳಿದಾಸನ ಆ ಮಾತಿನಲ್ಲಿ ಹುದುಗಿದೆ.

ಅಷ್ಟೆಲ್ಲ ಕಾಣ್ಕೆಯಿಂದ ತುಂಬಿರುವ ನುಡಿಕೋಶ ಸೃಷ್ಟಿಸುವಾಗ ಕಾಳಿದಾಸನ ಎಚ್ಚರದ ಹೊರಗಣ್ಣು ತೆರೆದಿತ್ತೋ ಇಲ್ಲವೋ ಬಲ್ಲವರಾರು? ಅದರಿಂದ ಸ್ಫುರಿತವಾಗುವ ಎಲ್ಲ ಅರ್ಥ ಗ್ರಹಿಸಬೇಕಾದರೆ ಮರಳಿ ವರ್ಜಿಲನಲ್ಲಿಗೆ ಹೋಗಬೇಕು. ಕಾಳಿದಾಸ ಬರೆದ ಅಂತಹ ಒಂದು ಪದ್ಯವನ್ನು ವರ್ಜಿಲ್‌ ಎಲ್ಲಿಯೂ ಬರೆಯಲು ಹೋಗಿಲ್ಲ. ಆದರೆ ಅವನ ಇಡೀ ಬರವಣಿಗೆ ಆ ತತ್ವ ಮತ್ತು ಅದರಿಂದ ಬರುವ ಒಳನೋಟದ ವಿವೇಕ ಅನುಸರಿಸಿ ಬರೆದ ಹಾಗಿದೆ. ಅದನ್ನು ಮುಂದಿನ ತಲೆಮಾರಿನ ಜನ ಪಾಲಿಸಿಕೊಂಡು ಬಂದರು. ಆ ಒಳನೋಟ, ಅರಿವು ಮತ್ತು ವಿವೇಕ ಅವರ ಬದುಕಿನ ಭಾಗವಾಗಿ ಹೋಗಿದೆ. ವರ್ಜಿಲನ ವಿಶಿಷ್ಟತೆ ಅಡಗಿರುವುದೇ ಅಲ್ಲಿ.

ನಿಜವಾದ ಕವಿಯೆ ನಿಜವಾದ ವಿಮರ್ಶಕ. ಮಹತ್ವದ ಕವಿಯೊಬ್ಬ ತನ್ನ ಹಿಂದಿನ ಪರಂಪರೆಯನ್ನು ವಿಮರ್ಶಿಸುವುದರ ಜತೆಗೆ ಮುಂದಿನ ಪರಂಪರೆಯ ಕೊಡುಗೆಯನ್ನು ಸದಾ ವಿಮರ್ಶೆಗೆ ಗುರಿಪಡಿಸುತ್ತಿರುತ್ತಾನೆ ಎಂಬ ವಿಮರ್ಶಾಸೂತ್ರವನ್ನು ಯುರೋಪಿನ ಸಾಹಿತ್ಯಲೋಕದಲ್ಲಿ ಮೊದಲಬಾರಿಗೆ ಹಾಕಿಕೊಟ್ಟನು ವರ್ಜಿಲ್‌. ಅದನ್ನು ಕಂಡುಕೊಂಡು ಹೆಚ್ಚು ಸ್ಪಷ್ಟಪಡಿಸಿಕೊಳ್ಳುವುದಷ್ಟೇ ಉಳಿದವರ ಪಾಲಿಗೆ ಬಂದುದು. ಆ ಮಾತು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ವಿಜ್ಞಾನ, ಕಲೆ, ರಾಜಕೀಯ ಇತ್ಯಾದಿ ಬದುಕಿನ ಎಲ್ಲ ಅಂಗಗಳಿಗೂ ಅನ್ವಯಿಸುತ್ತದೆ ಎಂಬ ಒಳನೋಟವನ್ನು ತಾನೂ ಅರಿತು ಆ ಮೂಲಕ ಇತರರು ಕಲಿಯುವಂತೆ ಮಾಡಿದವನು ಸಹ ವರ್ಜಿಲನೇ. ಆ ಅರ್ಥದಲ್ಲಿ ನೋಡುವುದಾದಲ್ಲಿ, ಯುರೋಪ್‌ ಕಂಡ ಮೊದಲ ವಿಮರ್ಶಕ ಹೋಮರ್‌. ಅದೇ ಹಾದಿಯಲ್ಲಿ ಸಾಗಿಬಂದ ಅಯ್‌ಸ್ಖುಲೋಸ್‌ ಸೊಫೊಕ್ಲೆಸ್‌ ಯುರಿಪಿ ದೇಸ್‌ ಮೊದಲಾದವರು ತಮ್ಮನ್ನು ತಾವು ನಾಟಕ ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಳ್ಳುವುದರ ಮೂಲಕ, ಆ ವಿಮರ್ಶಾ ಪರಂಪರೆಯನ್ನು ಮುಂದುವರಿಸಿದರು. ಹೋಮರನ ಹಾದಿಯಲ್ಲಿ[5] ಸಾಗಲು ಕಾಲ ಪಕ್ವವಾಗಿಲ್ಲ ಮತ್ತು ಆ ತರಹದ ಪ್ರಯೋಗಗಳಿಗೆ ಸಮಯವೂ ಇದಲ್ಲ ಎಂಬ ಸರಳ ತೀರ್ಮಾನ, ಅವರ ಕಾವ್ಯಪ್ರತಿಭೆಯನ್ನು ನಾಟಕ ಮಾಧ್ಯಮಕ್ಕೆ ಸೀಮಿತಗೊಳಿಸಲು ಕಾರಣವಾಗಿದ್ದಿರಬಹುದು.

ವಸ್ತು ಮತ್ತು ಆಕೃತಿಯ ಆಯ್ಕೆ ಹಾಗೂ ನಿರ್ವಹಣಾ ವಿಧಾನದಲ್ಲಿ ಆ ಐದೂ ಜನ ತೋರಿರುವ ಎಚ್ಚರ, ಯುರೋಪಿನ ಸಾಹಿತ್ಯಲೋಕಕ್ಕೆ ನೀಡಿದ ಮಹತ್ವದ ಕೊಡುಗೆ. ಅವರು ಆಯ್ದುಕೊಳ್ಳುವ ವಸ್ತು ಕವಿಗಳು ಎಂಥವರು ಎಂಬುದನ್ನು ತೋರಿಸಿದರೆ, ಅದನ್ನು ನಿರ್ವಹಿಸುವ ರೀತಿ ಅವರ ಸಾಮಥ್ಯವನ್ನು ಬಿಂಬಿಸುತ್ತದೆ. ಅತ್ಯುತ್ತಮ ಸಾಧ್ಯತೆ ಮತ್ತು ಬಹುಮುಖಿ ಆಯಾಮದಿಂದ ಕೂಡಿರುವ ವಸ್ತುವನ್ನು ಆಯ್ದುಕೊಂಡವರು, ಅದರ ಸಮರ್ಪಕ ನಿರ್ವಹಣೆಯಲ್ಲಿ ವಿಫಲವಾಗಿಬಿಡಬಹುದು; ಉತ್ತಮ ನಿರ್ವಹಣಾ ಸಾಮರ್ಥ್ಯ ಇದ್ದವರ ಪ್ರತಿಭೆ ವಸ್ತುವಿನ ಆಯ್ಕೆಯಲ್ಲಿ ಎಡವಿಬಿಡಬಹುದು. ಅವೆರಡೂ ಒಂದಿಲ್ಲದೆ ಮತ್ತೊಂದಿಲ್ಲ; ಹೊಯ್‌ಕೈಯಾಗಿ ಸಾಗಬೇಕು. ಕವಿಯ ಪ್ರತಿಭೆ ಎಂಥದ್ದು ಯಾವ ಮಟ್ಟದ್ದು ಎಂಬುದನ್ನು ಅವರು ಆಯ್ದುಕೊಳ್ಳುವ ವಸ್ತು ನಿರ್ಬಂಧಿಸಿದರೆ, ಅವರ ಪ್ರತಿಭೆಯ ಪ್ರಮಾಣ ಮತ್ತು ಸಿರಿವಂತಿಕೆಯ ಐಸಿರಿ ಆ ವಸ್ತುವಿನ ನಿರ್ವಹಣೆಯ ಕಾಲದಲ್ಲಿ ತನ್ನೆಲ್ಲ ಸಂಭ್ರಮಗಳೊಡನೆ ತೆರೆದುಕೊಳ್ಳುತ್ತದೆ ಅಥವಾ ಅಭಿವ್ಯಕ್ತಗೊಳ್ಳುತ್ತದೆ.

ಹೋಮರ್‌ನಂಥ ಪ್ರತಿಭಾವಂತರ ಕೈಯಲ್ಲಿ ಸಮರ್ಪಕವಾಗಿ ಈಗಾಗಲೇ ನಿರ್ವಹಣೆಗೊಳಗಾಗಿರುವ ವಸ್ತು ಆಧರಿಸಿ ಕಾವ್ಯ, ನಾಟಕವನ್ನು ಮತ್ತೆ ಬರೆಯಲು ಬರುವುದಿಲ್ಲ ಎಂಬ ಸರಳ ಸಂಗತಿಯನ್ನು ಅರಿತು, ಅದನ್ನೊಂದು ವ್ರತವಾಗಿ ಬಹುತೇಕ ಎಲ್ಲ ಗ್ರೀಕ್‌ ಕವಿಗಳು ಮತ್ತು ನಾಟಕಕಾರರು ಅನುಸರಿಸಿಕೊಂಡು ಬಂದಿದ್ದಾರಾದರೂ, ಅದಕ್ಕೊಂದು ಖಚಿತ ಸೈದ್ಧಾಂತಿಕ ರೂಪ ನೀಡಿದವನೆ ವರ್ಜಿಲ್‌. ಹೋಮರ್‌ ಅಥವಾ ಅವನಿಗೂ ಮೂಲವಾಗಿರಬಹುದಾದ ಪುರಾಣದಿಂದ ತಮಗೆ ಬೇಕಾದ ವಸ್ತುವನ್ನು ಆಯ್ದುಕೊಳ್ಳುವ ಗ್ರೀಕ್‌ ನಾಟಕಕಾರರು, ಅದರ ನಿರ್ವಹಣೆಯಲ್ಲಿ ಸಂಪೂರ್ಣ ಭಿನ್ನ ಹಾದಿಯಲ್ಲಿ ಸಾಗುತ್ತಾರೆ. ಸೊಫೊಕ್ಲೆಸ್‌ನ ‘ಅಯಾಸ್‌’ ಅಥವಾ ‘ಏಜಾಕ್ಸ್‌’ ನಾಟಕವನ್ನೇ ಆ ಮಾತಿಗೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಹೋಮರನ. ಎಪಿಕ್‌ ಪ್ರಪಂಚದಲ್ಲಿ ಕಾಣಸಿಗುವ ವಿಚಾರಮತಿಯಾದ ಏಕೈಕ ಅಸಾಮಾನ್ಯ ಶೂರ ಅಯಾಸ್‌, ಸೊಫೊಕ್ಲೆಸ್‌ನ ಕೈಯಲ್ಲಿ ಅರೆಮರುಳಾಗಿ ಪರಿವರ್ತನೆಗೊಂಡು ದುರಂತ ಕಾಣುತ್ತಾನೆ. ಆತನ ಅಂತ್ಯ ಹೇಗಾಯಿತು ಎಂಬ ವಿವರ, ಹೋಮರನ ‘ಇಲಿಯಡ್‌’ನಲ್ಲಿ ಕಾಣುವುದಿಲ್ಲ. ಆ ಒಂದು ಸಣ್ಣ ಎಳೆ ಆಧರಿಸಿ ಇಡೀ ನಾಟಕ ನಿರ್ಮಿಸಿದ್ದಾನೆ. ಅದು ಹೊರತು ಹೋಮರನ ಎಪಿಕ್‌ಗೂ ಸೊಫೊಕ್ಲೆಸ್‌ನ ನಾಟಕಕಕ್ಕೂ ಅರ್ಥಾತ್‌ ಸಂಬಂಧವಿಲ್ಲ. ಸ್ವತಂತ್ರ ನಿರ್ವಹಣೆಗೆ ಹೆಚ್ಚಿನ ಅವಕಾಶ ನೀಡುವ ಪಾತ್ರ, ಸನ್ನಿವೇಶ ಅಥವಾ ಥೀಮ್‌ಗೆ ಅವರ ಆಯ್ಕೆ ಸೀಮಿತಗೊಳ್ಳುತ್ತದೆ: ಆ ಹೊರತು ಅವರು ಹೋಮರನ ಎಪಿಕ್‌ ಅನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಯಥಾವತ್ತಾಗಿ ಮತ್ತೆ ಬರೆಯುವ ಸಾಹಸಕ್ಕೆ ಕೈಹಾಕುವುದಿಲ್ಲ ಎಂಬುದು ಬಹಳ ಮುಖ್ಯ.

ಹೋಮರನ ನಂತರ ಎಪಿಕ್‌ ಬರೆಯುವ ಸಾಹಸಕ್ಕೆ ಕೈ ಹಾಕಿದವನೇ ವರ್ಜಿಲ್‌. ಅವರಿಬ್ಬರ ನಡುವೆ ಕನಿಷ್ಠ ೯೦೦ ವರ್ಷಗಳ ಅಂತರವಿದೆ. ಅಷ್ಟರಲ್ಲಾಗಲೆ ಹೋಮರನಿಂದ ಅರಿಸ್ತೋಫನೇಸ್‌ವರೆಗೆ ನಿರಂತರ ಹಲವಾರು ಶತಮಾನಗಳ ಕಾಲ ಬೆಳಗಿದ ಗ್ರೀಕ್‌ ಪ್ರತಿಭೆ ಕಂತುವ ಹಾದಿಯಲ್ಲಿ ಬಹಳ ದೂರ ಕ್ರಮಿಸಿಯಾಗಿತ್ತು. ಸೃಜನಶೀಲ ಭಾಷೆಯಾಗಿ ಆಗತಾನೆ ಅರಳತೊಡಗಿದ ಲ್ಯಾಟಿನ್‌ನಲ್ಲಿ ಅನೇಕ ಅನುವಾದಕರು, ಕವಿಗಳು ಬಂದಿದ್ದರು. ಹೋಮರನ ಎಪಿಕ್‌ಗಳನ್ನು ಲ್ಯಾಟಿನ್‌ ಅನುವಾದಿಸುವ ಪ್ರಯತ್ನಗಳು ನಡೆದಿದ್ದವು. ಅದೇ ತರಹ ವರ್ಜಿಲ್‌ ಕೂಡ ಹೋಮರನ ಕೃತಿಗಳನ್ನು ಆಧರಿಸಿ ಮತ್ತೆ ಲ್ಯಾಟಿನ್‌ನಲ್ಲಿ ಬರೆಯಬಹುದಿತ್ತು. ಆ ರೀತಿ ಮಾಡಲು ಹೋಗದೆ, ಹೋಮರನಂತೆಯೇ ತನಗೆ ಬೇಕಾದ ವಸ್ತುವನ್ನು ತಾನೇ ರೂಪಿಸಿಕೊಳ್ಳುವ ಎಚ್ಚರ ಮತ್ತು ಸ್ವಾತಂತ್ರ್ಯ ವಹಿಸುತ್ತಾನೆ. ವಸ್ತುವಿನ ಆಯ್ಕೆ ಮಾಡುವಾಗ ಅನೇಕ ಗ್ರೀಕ್‌ ನಾಟಕಕಾರರ ತರಹವೆ ಹೋಮರನಲ್ಲಿಗೆ ಹೋಗುತ್ತಾನಾದರೂ, ಉಳಿದೆಲ್ಲ ಅವನ ಸೃಷ್ಟಿ. ಹೋಮರನ ‘ಇಲಿಯಡ್‌’ನಲ್ಲಿ ಬರುವ ಪಾತ್ರವೊಂದನ್ನು ತನ್ನ ಕಥಾನಾಯಕನನ್ನಾಗಿ ಆರಿಸಿಕೊಂಡ ನಂತರ, ಆತ ಮಾಡಿಕೊಂಡ ಬದಲಾವಣೆಗಳು ಹೋಮರನ ಎಪಿಕ್‌ ಪರಂಪರೆಯನ್ನು ಯಥಾಸ್ಥಿತಿ ಮುಂದುವರಿಸಲು ಸಧ್ಯವಿಲ್ಲ ಎಂಬುದಲ್ಲನು ಪ್ರತಿಪಾದಿಸಿ ತೋರಿಸಿದಂತೆಯೇ; ಆ ಪರಂಪರೆ ನಿಜವಾದ ಅರ್ಥದಲ್ಲಿ ಮುಂದುವರಿಸಲು ಎದುರಿಸಬೇಕಾದ ತೊಡಕುಗಳು ಮತ್ತು ಸಮಸ್ಯೆಗಳ ಕಡೆಗೆ ಗಮನ ಸೆಳೆಯುತ್ತವೆ. ಆ ಸಂದರ್ಭದಲ್ಲಿ ಆತ ತೋರುವ ಜಾಗೃತಿ ಮತ್ತು ವಿವೇಕ ಯುರೋಪ್‌ ಮೂಲದ ಜನರಿಗೆ ವರ್ಜಿಲ್‌ ನೀಡಿದ ಅಸಾಮಾನ್ಯವಾದ ಮತ್ತೊಂದು ಮಹತ್ವದ ಕ್ಲಾಸಿಕ್‌ ಕೊಡುಗೆ. ಯುರೋಪಿನ ಸಾಹಿತ್ಯ ಸಂಸ್ಕೃತಿಯ ಇತಿಹಾಸದಲ್ಲಿ ಅದೊಂದು ಅದ್ಭುತ ಸಂಗತಿ; ಕಾವ್ಯ ಮತ್ತು ಸತ್ಯದ ಅನ್ವೇಷಣೆಯ ಹಾದಿಯಲ್ಲಿ ದಾಂತೆಯಂತಹ ಕ್ರಿಶ್ಚಿಯನ್‌ ಮನಸ್ಸಿನ ಕವಿ, ವರ್ಜಿಲನನ್ನು ಮಾರ್ಗದರ್ಶಿಯಾಗಿ ಸ್ವೀಕರಿಸುವ ಮಹತ್ವದ ಅರ್ಥವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ.

ವರ್ಜಿಲ್‌ ಬರುವುದಕ್ಕೆ ಮೊದಲು ಲ್ಯಾಟಿನ್ ಭಾಷೆಯಲ್ಲಿ ಕೆಲಸ ಮಾಡಿದ್ದ ಅನೇಕ ಭಾಷಾಂತರಕಾರರು ಮತ್ತು ಕವಿಗಳು ಆತನ ಆಗಮನಕ್ಕೆ ಬೇಕಾದ ವಾತಾವರಣ, ಹಿನ್ನೆಲೆ ಮತ್ತು ಭೂಮಿಕೆ ಸಿದ್ಧಪಡಿಸಿದ್ದರು. ಹಾಗೆ ನೋಡುವುದಾದಲ್ಲಿ, ವರ್ಜಿಲ್‌ ಬರುವುದಕ್ಕೆ ಸುಮಾರು ೨೦೦ ವರ್ಷ ಮೊದಲು ಆರಂಭವಾಗುವ ಲ್ಯಾಟಿನ್‌ ಸಾಹಿತ್ಯ ಚರಿತ್ರೆ ‘ಈನೀಡ್‌’ ನಂತರ ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸುವ ಹಾದಿಯಲ್ಲಿ ಹಂತ ಹಂತವಾಗಿ ಮುಂದುವರಿಯತೊಡಗಿತು. ಸ್ವಲ್ಪ ಕಠಿಣವಾಗಿ ಹೇಳುವುದಾದರೆ, ವರ್ಜಿಲನೆ ಲ್ಯಾಟಿನ್‌ ಭಾಷೆಯ ಮೊದಲ ಮತ್ತು ಕೊನೆಯ ಕವಿ. ಅವನ ಎತ್ತರದ ಅಥವಾ ಹತ್ತಿರ ಬರುವ ಮತ್ತೊಬ್ಬ ಕವಿಯನ್ನು ಲ್ಯಾಟಿನ್‌ ನೀಡಿದ ಉದಾಹರಣೆ ಇಲ್ಲ ; ಪ್ರಮುಖ ಕವಿಗಳಾದ ಹೂರೇಸ್‌ ಮತ್ತು ಒವಿಡ್‌ ವರ್ಜಿಲನ ಕಿರಿಯ ಸಮಕಾಲೀನರು.

ರಾಜಕೀಯವಾಗಿ ಸೋತವರು ಗೆದ್ದವರ ಸಂಸ್ಕೃತಿ ಅನುಸರಿಸುವ ಮಾತನ್ನು ಹುಸಿಮಾಡಿದ ಲ್ಯಾಟಿನ್‌ ಜನರು ತಮ್ಮನ್ನು ಸಾಂಸ್ಕೃತಿಕವಾಗಿ ಸೋಲಿಸಿದ ಗ್ರೀಕರಿಂದ ಕಲಿಯಬಹುದಾದನ್ನು ಕಲಿತು, ರಾಜಕೀಯವಾಗಿ ತಮ್ಮ ಕೈಯಲ್ಲಿ ಸೋಲು ಕಂಡ ಗ್ರೀಕ್‌ ಸಂಸ್ಕೃತಿ ಮತ್ತು ನಾಗರಿಕತೆಯು ಗೆಲುವಿನ ಹಾದಿಯಲ್ಲಿನ ಲ್ಯಾಟಿನ್ ಸಂಸ್ಕೃತಿ ಮತ್ತು ನಾಗರಿಕತೆಯ ಬೆಳವಣಿಗೆಗೆ ಪೂರಕವಾಗಿ ಹರಿಯುವಂತೆ ಮಾಡಿಕೊಂಡುದು ಆ ಕಾಲಕ್ಕೆ ಹೊಸ ಬೆಳವಣಿಗೆ. ಗ್ರೀಕರ ಮುಂದಿನ ಅಧ್ಯಾಯವೆ ಲ್ಯಾಟಿನ್‌. ತನಗೂ ಹಿಂದಿನ ಪರಂಪರೆಯಿಂದ ಪಡೆಯಬಹುದಾದ ಎಲ್ಲವನ್ನು ಪಡೆದು, ಹೊಸ ಪರಂಪರೆ ನಿರ್ಮಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವನೆ ವರ್ಜಿಲ್‌. ಆತ ನೀಡಿದ ಮತ್ತೊಂದು ಕ್ಲಾಸಿಕ್ ಒಳನೋಟ. ಆ ರೀತಿ ತನ್ನ ಹಿಂದಿನ ಪರಂಪರೆಯಿಂದ ಕಲಿಯುವ ಅವಕಾಶ ವರ್ಜಿಲನಿಗಿತ್ತು. ಆ ಭಾರ ಜಾಸ್ತಿಯೂ ಆಗಿರಲಿಲ್ಲ, ಕಡಿಮೆಯೂ ಇರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ. ಆ ಸದಾವಕಾಶ ಹೋಮರ್‌ ಅಥವಾ ಇತರ ಯಾವ ಗ್ರೀಕ್‌ ಕವಿಗಳಿಗೂ ಇರಲಿಲ್ಲ.

ಅಂತಹ ಹಲವಾರು ಸಂಗತಿ ಮತ್ತು ಪೂರಕ ಅಂಶಗಳು ಮೇಳೈಸುವಿಕೆಯ ಫಲ ‘ಈನೀಡ್‌’, ಭಾರತೀಯ ಪರಿಭಾಷೆಯಲ್ಲಿ ಯೋಗಾಯೋಗಾ ಎಂದು ಪರಿಗಣಿಸಬಹುದಾಗಿದೆ. ಆ ಕಾರಣವೆ ಯುರೋಪಿನ ಎಲ್ಲ ಭಾಷೆಗಳ ಕ್ಲಾಸಿಕ್‌ ಕೃತಿಯಾಗಿ ಹೊರಹೊಮ್ಮಲು ‘ಈನೀಡ್‌’ಗೆ ಸಾಧ್ಯವಾಯಿತು ಎಂದು ಎಲಿಯಟ್‌ ತನ್ನ What is a Classic? ಲೇಖನದಲ್ಲಿ ಪ್ರತಿಪಾದಿಸುತ್ತಾನೆ:

A classic can only occur when a civilization is mature; When a language and a literature are mature: and it must be the Work of a muture mind. It is the importance of that civilization and of that language. As well as the comprehensiveness of the mind of the individual poet, which gives the universality.[6]

ನಡೆನುಡಿ, ಆಚಾರವಿಚಾರ, ಜನಜೀವನ, ಸಮಾಜ, ಸಂಸ್ಕೃತಿ, ನಾಗರಿಕತೆ ಅವರಾಡುವ ಭಾಷೆ ಮತ್ತು ಇಡೀ ವ್ಯವಸ್ಥೆ ಹದಗೊಂಡು ಅದಕ್ಕಾಗಿ ಸಿದ್ಧವಾಗಿದ್ದಾಗ ಮಾತ್ರ ನಿಜಕ್ಕೂ ಕ್ಲಾಸಿಕ್‌ ಆದ ಕೃತಿ ಅವತರಿಸಲು ಸಾಧ್ಯ; ಅದರ ಪ್ರಮುಖ ಸಲ್ಲಕ್ಷಣವೇ ಪಕ್ವತೆ ಮತ್ತು ಪ್ರೌಢಿಮೆ. ಆ ಭಾಷೆಯನ್ನಾಡುವ ಜನರು ರೂಪಿಸಿಕೊಂಡ ಅಥವಾ ನಿರ್ಮಿಸಿದ ನಾಗರಿಕತೆ, ಅಭಿರುಚಿ ಮತ್ತು ಸಂವೇದನೆಗಳು ಪಕ್ವವಾಗಿ ಅಣಿಗೊಂಡಿರಬೇಕು. ಜತೆಗೆ ಭಾಷಾಬಳಕೆಯಲ್ಲಿ ಗಳಿಸಲಾದ ವಿಶಿಷ್ಟ ಅರ್ಥಪೂರ್ಣತೆ: ತನ್ನ ಕಾಲದ ಪ್ರಾಂತೀಯ ಮತ್ತು ಪ್ರಾದೇಶಿಕ ವೈವಿಧ್ಯ, ಅಲ್ಲಿನ ಲಯ, ತಾಳ, ಸಂಗೀತ, ಸತ್ವ, ಮಾಧುರ್ಯ, ಧ್ವನಿ ಮತ್ತು ಇತರೇ ಎಲ್ಲ ಪ್ರಧಾನ ಗುಣಲಕ್ಷಣಗಳನ್ನೊಳಗೊಂಡು ಸಮಾನವಾದ ಸರ್ವಸಾಮಾನ್ಯ ಭಾಷೆಯೊಂದನ್ನು ನೀಡುವುದರಲ್ಲಿ ಯಶಸ್ವಿಯಾಗಬೇಕು. ಆ ಭಾಷೆ ಎಲ್ಲಾ ಪ್ರಾಂತೀಯ ಭಾಷಾ ಪ್ರಭೇದಗಳಿಗೂ ಹತ್ತಿರವಿದ್ದು, ಅವುಗಳ ಗತ್ತು ಮತ್ತು ಬನಿ ಒಳಗೊಳ್ಳುವ ಹಾಗೂ ಆ ಮೂಲಕ ಎಲ್ಲ ರೀತಿಯ ಸೂಕ್ಷ್ಮತೆ, ಮೌನದಾಚೆಯ ಮಾತು ಮತ್ತು ಮಾತಿನಾಚೆಯ ಮೌನವನ್ನು ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಹದಗೊಂಡಿರಬೇಕು. ಆದರೆ ಯಾವುದೇ ರೀತಿಯ ಪ್ರಾಂತೀಯ ಹದ್ದುಬಸ್ತಿಗೆ ಒಳಗಾಗಿರದೆ ಅವುಗಳಲ್ಲಿನ ಉತ್ತಮವಾದ ಅಂಶಗಳನ್ನು ಒಳಗೊಂಡು, ಸಂಗ್ರಾಹ್ಯತೆ ಮತ್ತು ಸಾರ್ವತ್ರಿಕತೆ ಪಡೆಯುವುದರ ಮೂಲಕ ವಿಶ್ವಸಾಮಾನ್ಯವಾದ ಹರಹು ಮತ್ತು ಸರಳತೆ ಪಡೆದು, ಅವೆಲ್ಲ ಮೀರಿದ ಸಂಕೀರ್ಣತೆಯನ್ನು ತನ್ನದಾಗಿಸಿಕೊಂಡಿಬೇಕು. ಕ್ಲಾಸಿಕ್ ಕೃತಿಯ ಪ್ರಮುಖ ಸಲ್ಲಕ್ಷಣವಾದ ಪಕ್ವತೆ ವಸ್ತುವಿನ ಆಯ್ಕೆ, ಭಾಷಾಬಳಕೆ, ಮಂಡನಾಕ್ರಮ ಮತ್ತು ನಿರ್ವಹಣಾ ವಿಧಾನದಲ್ಲಿ ಸ್ಫುಟಗೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಅಂತಹ ಕೃತಿಯನ್ನು ಸ್ವೀಕರಿಸಲು ಪ್ರಮುಖವಾಗಿ ಕೃತಿ ಬಂದ ಕಾಲದ ಜನ ಸಿದ್ಧರಿರುವುದು. ಆ ವಿಚಾರದಲ್ಲಿ ವರ್ಜಿಲ್‌ ಬಹಳ ‘ಅದೃಷ್ಟಶಾಲಿ’ ಕವಿ.

ಸಂಗ್ರಾಹ್ಯತೆ ಎಂದರೆ ಒಂದು ಭಾಷೆಯನ್ನಾಡುವ ಜನರ ಭಾವನೆಗಳು, ಮೂಲ ತುಡಿತ ಮತ್ತು ಸದಾಶಯಗಳನ್ನು ಅವುಗಳ ಪ್ರಾತಿನಿಧಿಕ ರೂಪದಲ್ಲಿ ಗ್ರಹಿಸಿ, ಅವುಗಳಿಗೆ ಮಾರ್ಗದರ್ಶಕವಾಗಿರುವಂತೆಯೇ ದೂರಗಾಮಿಯೂ ಆದುದಾಗಿರುವುದು. ಕ್ಲಾಸಿಕ್‌ ಮನೋಧರ್ಮದ ಕವಿ, ತನಗೆ ದಕ್ಕಿದ ಕಾವ್ಯ ಪರಂಪರೆ ಮತ್ತು ಹಿಂದಿನ ಕವಿಗಳ ಜತೆ ಅನಗತ್ಯವಾಗಿ ಪೈಪೋಟಿಗಿಳಿಯಲು ಹೋಗುವುದಿಲ್ಲ, ಅದರ ಅಗತ್ಯವೂ ಬರುವುದಿಲ್ಲ. ಏಕೆಂದರೆ, ಅವರಿಂದ ಪಡೆಯಬಹುದಾದ ಪ್ರೇರಣೆ ಮತ್ತು ಪ್ರೋತ್ಸಾಹ ಪಡೆದು ನಿರ್ಮಿಸಲಾಗುವ ಹೊಸಪರಂಪರೆ, ಹಿಂದಿನದರ ಒಂದು ಭಾಗ ಹಾಗೂ ಮುಂದಿನದರ ಜೀವಂತ ಅಧ್ಯಾಯವಾಗುವಂತೆ ನೋಡಿಕೊಳ್ಳುವುದು: ಆ ರೀತಿಯ ಬೆಳವಣಿಗೆಗೆ ಬೇಕಾದ ಕಸುಬುಗಾರಿಕೆ ಮತ್ತು ಶ್ರೇಷ್ಠತೆಯ ಪಾಠವನ್ನು ಹಿಂದಿನವರಿಂದ ಕಲಿತ ಅರಿವು, ಅದರಿಂದ ಬರುವ ನಿಜವಾದ ವಿನಯ ಮತ್ತು ತನ್ನ ಸ್ವಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸದಿಂದ ತುಂಬಿರುವ ಕವಿ ಮಾತ್ರ ಆ ತರಹ ನಡೆದುಕೊಳ್ಳಲು ಸಾಧ್ಯ. ಕ್ಲಾಸಿಕ್‌ ಕವಿಯ ಮೂಲಕ್ಷಣವೇ ಅದು. ಆ ತರಹದ ಅನೇಕ ಅಂಶಗಳ ಕಾರಣವೆ ಗ್ರೀಖ್‌ ಕವಿಗಳಿಗೆ ಸಾಧ್ಯವಾಗದ ಕೆಲಸವನ್ನು ಸಾಧಿಸಲು ವರ್ಜಿಲನಿಗೆ ಸಾಧ್ಯವಾಯಿತು. ವರ್ಜಿಲ್‌ ತನಗೂ ಹಿಂದಿನ ಗ್ರೀಕ್‌ ಕವಿಗಳಿಗಿಂತ ಶ್ರೇಷ್ಠ ಎಂದು ಆ ಮಾತಿನ ಅರ್ಥವಲ್ಲ. ಅವರಿಂದ ಕಲಿಯಬೇಕಾದ್ದನ್ನು ಕಲಿತು, ಭಿನ್ನ ಹಾದಿಯಲ್ಲಿ ಸಾಗುವುದರ ಮೂಲಕ ಆ ಶ್ರೇಷ್ಠತೆಯ ಎಲ್ಲೆಯನ್ನು ವಿಸ್ತರಿಸುವುದರ ಜೊತೆಗೆ, ಪರಂಪರೆಯ ಜ್ಯೋತಿ ಆರದಂತೆ ನೋಡಿಕೊಳ್ಳುವುದು.

ಆ ತರಹದ ಅನೇಕ ಅಂಶಗಳಿಂದಾಗಿ ವರ್ಜಿಲ್‌ ಉಳಿದೆಲ್ಲ ಕವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ. ಅದು ಕಾಲದ ಮತ್ತು ಅವನ ಕೊಡುಗೆಯೂ ಹೌದು. ಆ ತರಹದ ವೈಶಿಷ್ಟ್ಯ ಬಂದುದೇ ಕಾಲಕ್ಕೆ ಸ್ಪಂದಿಸುವ ಗುಣದಿಂದ.

ವಾಸ್ತವವಾಗಿ ‘ಈನೀಡ್‌’ ಜೂಲಿಯಸ್‌ ಸೀಸರ್‌ನ ಕಾಲದ ಕತೆ. ಹಲವಾರು ಶತಮಾನಗಳ ಕೊಡುಗೆಯಾದ ಅನಿಶ್ಚಿತತೆ ಮತ್ತು ಪೈಪೋಟಿಯಿಂದ ತಲ್ಲಣಿಸಿಹೋಗಿದ್ದ ರೋಮನ್ನರು ಬಹಳವಾಗಿ ಬಯಸಿದ್ದ ಸ್ಥಿರತೆ ತಂದುಕೊಟ್ಟ ಅಗಸ್ಟಸ್‌ನ ಕತೆ ಬಹಳ ಸಡಿಲ ಅರ್ಥದಲ್ಲಿ ಎಂದರೂ ನಡೆಯುತ್ತದೆ. ಮೂಲತಃ ತನ್ನ ಕಾಲದ ಬಿಕ್ಕಟ್ಟಿನ ಕಥೆಯಾದ ಕತೆಯೊಂದನ್ನು ತನ್ನ ಕಾಲದ ಕತೆಯಲ್ಲದ ರೀತಿಯಲ್ಲಿ ಮಾರ್ಪಡಿಸುವುದರ ಮೂಲಕ ಅದನ್ನು ಏಕಕಾಲದಲ್ಲಿ ಕಾಲಾತೀತವಾದ ಮತ್ತು ಕಾಲಕ್ಕೆ ಬದ್ಧವಾದ ಕತೆಯನ್ನಾಗಿ ರೂಪಿಸಿದ್ದಾನೆ. ಅಂತಹ ಕೃತಿ ಮಾತ್ರ ಏಕಕಾಲದಲ್ಲಿ ಪುರಾಣ, ಇತಿಹಾಸ ಮತ್ತು ಕಾದಂಬರಿಯಾಗಿ ಬೆಳೆಯಲು ಸಾಧ್ಯ. ಕಾಲಕ್ಕೆ ಬದ್ಧವಾದ ಕೃತಿ ಮಾತ್ರ ಕಾಲಾತೀತವಾಗುಳಿಯಲು ಸಾಧ್ಯವಾದಂತೆ; ಇತಿಹಾಸ, ಪುರಾಣ ಆದುದು ಮಾತ್ರ ಸಮಕಾಲೀನವಾಗಲು ಮತ್ತು ಅದೇ ರೀತಿ ಸಮಕಾಲೀನವಾದುದನ್ನು ಇತಿಹಾಸ ಹಾಗೂ ಪುರಾಣವಾಗಿ ಪರಿವರ್ತಿಸಲು ಸಾಧ್ಯ ಎಂಬ ಕಸುಬುಗಾರಿಕೆಯ ಕಲಾವಂತಿಕೆಯನ್ನು ತೋರಿಸಿಕೊಟ್ಟವನೇ ವರ್ಜಿಲ್‌. ಹಾಗಾಗಿ ಅದು ಕೇವಲ ಸೀಸರ್‌ನ ಅಥವಾ ಅವರ ಕಾಲದ ಕತೆಯಾಗಿ ಮಾತ್ರ ನಿಲ್ಲುವುದಿಲ್ಲ ಎಂಬ ಮಾತನ್ನು ಮತ್ತೆ ಹೇಳಬೇಕಾದ ಅಗತ್ಯವಿಲ್ಲ.

ಕಾವ್ಯ ಮತ್ತು ಕವಿಯ ತಲೆಯ ಮೇಲೆ ಅತ್ಯಂತ ಗುರುತರ ಜವಾಬ್ದಾರಿ ಮತ್ತು ಮಹೋದ್ದೇಶವನ್ನು ಹೊರಿಸಿ ಅದನ್ನು ಸಮರ್ಪಕವಾಗಿ ನಿಭಾಯಿಸಿದವನು ವರ್ಜಿಲ್‌, ಯುರೋಪ್‌ ಮೂಲದ ಜನರಿಗೆ ಕಲಿಸಿದ ಮತ್ತೊಂದು ಪಾಠ.

ಈ ವಿಶಾಲ ನಿಯತಿಯ ಚೌಕಟ್ಟಿನಲ್ಲಿ ರೋಮನ್‌ ಜನರ ಭವಿತವ್ಯ ಕುರಿತು ಬರೆದ ಅವನ ಪಾಲಿಗೆ ಅದು ಒಣ ಸಿದ್ಧಾಂತವಾಗಿರಲಿಲ್ಲ. ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲದ ಕೆಲ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಅಲವತ್ತುಕೊಂಡು ಬರೆದ ಆತ, ತನ್ನ ಇಡೀ ಜೀವಮಾನದ ಸಾಧನೆಯಾದ ಎಪಿಕ್‌ ಮಾದರಿಯ ಕೃತಿಯನ್ನು ಸುಟ್ಟುಹಾಕುವಂತೆ ಸ್ನೇಹಿತರಿಂದ ತೆಗೆದುಕೊಂಡ ಮಾತು ಗುರಿಸಾಧನೆ ಎಷ್ಟು ಕಷ್ಟದ ಕೆಲಸ ಎಂಬುದರ ಪ್ರತೀಕ. ಅಷ್ಟಾದರೂ ಕಾಲ ಹೊರಿಸಿದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬರುವುದಿಲ್ಲ ಎಂಬ ವಾಸ್ತವ ಸತ್ಯ ಎದುರಿಸುತ್ತಲೇ ಎಲ್ಲ ರೀತಿಯ ಹತಾಶೆ ಮತ್ತು ಆತಂಕಗಳ ನಡುವೆಯೂ ಮಹತ್ತರ ಸಾಧನೆ ಮಾಡಿದ ವರ್ಜಿಲ್‌ ಕಾಲದಲ್ಲಿ ಆಧುನಿಕ ಯುರೋಪಿನ ಸಾಹಿತ್ಯ, ಸಂಸ್ಕೃತಿ ಮತ್ತು ನಾಗರಿಕತೆ ನಿರ್ಮಾಣಕ್ಕೆ ಬೇಕಾದ ಆಸ್ತಿಭಾರ ನಿರ್ಮಾಣವಾಯಿತು. ಕ್ರಿಸ್ತನ ಆಗಮನ ಸೂಚಿಸುವ ಪದ್ಯವೊಂದನ್ನು ಕೆಲ ವರ್ಷ ಮೊದಲೇ ಬರೆದಿದ್ದ ಎಂದು ಭಾವಿಸಿದ ಕ್ರಿಶ್ಚಿಯನ್‌ ಜಗತ್ತು ಆತನನ್ನು ಆ ಕಾರಣಕ್ಕಾಗಿ ಬಹಳವಾಗಿ ಗೌರವಿಸುತ್ತದೆ.

ಸಾಹಿತ್ಯ ಲೋಕಕ್ಕೆ ಬರುವುದಾದರೆ: ಗ್ರೀಕ್‌ ಕವಿಗಳು, ನಾಟಕಕಾರರು ಚಾಲತಿಗೆ ತಂದ ವಸ್ತು ಪ್ರತಿರೂಪ’, ‘ವ್ಯಕ್ತಿತ್ವ ನಿರಸನ’ ಮತ್ತು ‘ಭಾವನೆಗಳಿಂದ ಪಲಾಯನ’ ಇತ್ಯಾದಿ ತತ್ವಗಳಿಗೆ ಲಿಖಿತ ಎಪಿಕ್‌ ರೂಪ ನೀಡಿ ಕಾವ್ಯ ರಚಿಸಿದ ಕವಿ ವರ್ಜಿಲ್‌; ಪರಂಪರೆಯಿಂದ ಪ್ರೇರಣೆ ಪಡೆದು ತನ್ನ ಬರವಣಿಗೆ ಬದುಕಿನಲ್ಲಿ ಆತ ಕಂಡುಕೊಂಡ ಆ ತತ್ವಗಳು, ಯುರೋಪಿನ ಬದುಕಿನ ಸಾಹಿತ್ಯಲೋಕವನ್ನು ಈವರೆಗೆ ಕೈಹಿಡಿದು ನಡೆಸಿಕೊಂಡು ಬಂದಿದ್ದು ಅವರ ಒಳಗಣ್ಣು ಕಂಡ ಅವುಳನ್ನು ತತ್ವ, ಸಿದ್ಧಾಂತ ಇಲ್ಲವೇ ಪಾಲಿಸಬೇಕಾದ ಕನಿಷ್ಠ ನಿಯಮಗಳನ್ನಾಗಿ ವಿವರಿಸಿ ಹೇಳಲು ಯುರೋಪಿನ ಜಗತ್ತು ಎಲಿಯೆಟ್‌[7] ಆಗಮನದವರೆಗೂ ಕಾಯಬೇಕಾಯಿತು.

…………In short, without the constant application of the classical measure, which we owe to Virgil more than to any other one poet, we tend to become provincial.[8]

ಲಾರ್ಡ್ ಟೆನ್ನಿಸನ್‌ ಬರೆದ ‘ಟು ವರ್ಜಿಲ್‌’ ಪದ್ಯದಿಂದ ನಾಲ್ಕ ಸಾಲುಗಳನ್ನು ಉದಾಹರಿಸುವುದಕ್ಕಿಂತ ಹೆಚ್ಚಿನ ಗೌರವ ಮತ್ತೊಂದಿರಲಾರದು.

Thou that seest Universal
Nature moved by Universal Mind;
Thou majestic in thy sadness
At the doubtful of human kind;


 

[1]ಬೇಂದ್ರೆಯವರ ‘ಸಖೀಗೀತ’ ಮತ್ತು ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’.

[2]ಎಲಿಯಟ್‌ನ Goethe as the Sage ಲೇಖನ ನೋಡಬಹುದು.

[3]ಆ ಗೊಂದಲ ನಿವಾರಣೆ ಆಗಲಿ ಎಂಬ ಹಾರೈಕೆಯಿಂದ ಮಹಾಕವಿ ಮಹಾಕಾವ್ಯ ಎಂಬ ಪದಗಳನ್ನು ಮುಂದಿನ ಪಟುಗಳಲ್ಲಿ ಬಳಸಲು ಹೋಗುವುದಿಲ್ಲ. ಎಪಿಕ್, ಕ್ಲಾಸಿಕ್‌ ಪದಗಳನ್ನು ಭಾರತ ಮೂಲದ್ದೇ ಎಂದು ಭಾವಿಸಿ ಉಪಯೋಗಿಸುವ ಧೈರ್ಯ ಮಾಡಲಾಗಿದೆ. ಆ ಧೈರ್ಯ ನೀಡಿದವರೇ ವ್ಯಾಸ ಮತ್ತು ವಾಲ್ಮೀಕಿ ಹಾಗೂ ಕಾಳಿದಾಸ.

[4]ಕನ್ನಡದಲ್ಲಿ ಮಹಾಕಾವ್ಯವಾಗುವ ‘ಚಕೋರಿ’ ಇಂಗ್ಲಿಷ್‌ಗೆ ಅನುವಾದಗೊಂಡ ಕೂಡಲೇ ಕಾದಂಬರಿ ಪೆಂಗ್ವಿನ್‌ ಇಂಡಿಯ ಪ್ರಕಟಣೆ, ೧೯೯೯.

[5]ಒಂದು ಮಾತನ್ನು ಪ್ರಾಸಂಗಿಕವಾಗಿ ಕುತೂಹಲದ ಉದ್ದೇಶದಿಂದ ನಮೂದಿಸುವುದು ಉಚಿತ. ಕುವೆಂಪು ಸಾಧನೆ ಕುರಿತಂತೆ ನಿಜವಾದ ವಿಮರ್ಶೆ ಬಂದಿರುವುದು, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯಿಂದ; ಅದರಲ್ಲೂ ಕರ್ವಾಲೋ – ಮಂದಣ್ಣ ಜೋಡಿಯ ‘ಕರ್ವಾಲೋ’.

[6]On poetry and Poets, ಪುಟ ೫೫. ಇಲ್ಲಿನ ಕೆಲ ಮಾತುಗಳನ್ನು ಆ ಲೇಖನದಿಂದ ಪಡೆಯಲಾಗಿದೆ.

[7]‘ವರ್ಜಿಲ್‌: ಫಾದರ್‌ ಆಫ್‌ ದಿ ವೆಸ್ಟ್‌’ ಎಂಬ ಹೆಸರಿನಲ್ಲಿ ಜರ್ಮನಿಯ ವಿದ್ವಾಂಸ ಮತ್ತು ಸಮಾಜವಾದಿ ತಿಯೊಡೋರ್‌ ಹೆಕೆರ್‌ ೧೯೩೧ರಲ್ಲಿ ಬರೆದ ಪುಸ್ತಕ ಇಂಗ್ಲಿಷ್‌ಗೆ ಅನುವಾದಗೊಂಡುದು ೧೯೩೪ರಲ್ಲಿ. ಅಂದರೆ ಅಪ್ರಜ್ಞಾಪೂರ್ವಕವಾಗಿ ಗ್ರಹಿಸಿದ್ದನ್ನು ಪ್ರಜ್ಞಾಪೂರ್ವಕವಾಗಿ ಕಂಡುಕೊಳ್ಳಲು ಜಗತ್ತಿನ ಜನ, ಆವರೆಗೂ ಕಾಯಬೇಕಾಯಿತು.

[8]On Poetry and Poets, ಪುಟ ೬೯.