ಭಾಷೆ: ಒಂದು ಪರಿಚಯ

‘ಭಾಷೆ’ ಎಂಬುದು ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ತುಂಬಾ ವಿಶಿಷ್ಟ ಎಂದು ಗುರುತಿಸಿಕೊಳ್ಳುವಂತೆ ಮಾಡಿದೆ. ಒಂದು ಭಾಷೆಯ ಹಲವಾರು ರೂಪಗಳಲ್ಲಿ ವ್ಯಕ್ತವಾಗುತ್ತದೆ. ಮಾತಿಲ್ಲದೇ ನಾವು ಭಾವನೆಗಳನ್ನು ನಮ್ಮ ಭಂಗಿ, ಸನ್ನೆಗಳ ಮೂಲಕ ವ್ಯಕ್ತಪಡಿಸಬಹುದು. ಅದನ್ನು ‘ದೇಹ ಭಾಷೆ’ ಅಥವಾ ‘ಬಾಡಿ ಲ್ಯಾಂಗ್ವೆಜ್‌’ ಎಂದು ಕರೆಯುತ್ತಾರೆ. ಮಾತುಗಳನ್ನು ಆಲಿಸಿಕೊಳ್ಳುವ ಮೂಲಕ ನಾವು ಮಾತನಾಡುವುದನ್ನು ಕಲಿಯುತ್ತೇವೆ. ಆಲಿಸಿಕೊಳ್ಳುವಿಕೆ ಮತ್ತು ಮಾತನಾಡುವಿಕೆಗಳನ್ನು ಪ್ರಾಥಮಿಕ ಭಾಷಾ ಕೌಶಲ್ಯಗಳೆಂದು ಕರೆಯುತ್ತಾರೆ. ಹಾಗೂ ಓದುವ ಮತ್ತು ಬರೆಯುವ ಕೌಶಲ್ಯಗಳಿಗೆ ಆನಂತರದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರಪಂಚದ ಎಷ್ಟೋ ಭಾಷೆಗಳಿಗೆ ಲಿಪಿಯಹೇ ಇಲ್ಲ. ಕರ್ನಾಟಕದಲ್ಲೇ ಬಳಕೆಯಲ್ಲಿರುವ ಕೊಂಕಣಿ ಮತ್ತು ತುಳು ಭಾಷೆಗಳು ಇಂಥ ಗುಂಪಿಗೆ ಸೇರಿದವಾಗಿದ್ದು, ಗಣನೀಯವಾಗಿ ಭಿನ್ನ ಸಂಸ್ಕೃತಿಗಳಾಗಿ ತಮ್ಮದೇ ಛಾಪು ಮೂಡಿಸಿವೆ. ಇವು ಕನ್ನಡ ಅಥವಾ ಮಲಯಾಳಂ ಲಿಪಿಗಳನ್ನು ಉಪಯೋಗಿಸಿ ಬರೆಯಲಾಗುತ್ತದೆಯಾದರೂ ಅವುಗಳ ಅಸ್ಥಿತ್ವಕ್ಕೇನೂ ಕುಂದುಂಟಾಗಿಲ್ಲವೆಂಬುದನ್ನು ಗಮನಿಸಿದರೆ ಪ್ರಾಥಮಿಕ ಭಾಷಾ ಕೌಶಲ್ಯಗಳು ಹೇಗೆ ಮುಖ್ಯವಾಗುತ್ತವೆ ಎಂದು ಅರಿವಾಗುತ್ತದೆ. ಇನ್ನು ಎಲ್ಲೆಡೆ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳೇ ಭರಾಟೆಯಲ್ಲಿ ನಡೆಯುತ್ತಿದ್ದು, ಇಂಗ್ಲಿಷ್‌ ಬರೆಯುವುದನ್ನು ಕಲಿಸಲೆಂದೇ ಇರುವ ಸಂಸ್ಥೆಗಳು ಕಡಿಮೆ ಎಂಬುದನ್ನು ಗಮನಿಸಿದಾಗಲೂ ಈ ಅಂಶ ಮನವರಿಕೆಯಾಗುತ್ತದೆ.

ಇನ್ನು ಭಾಷೆಯ ಅಭಿವ್ಯಕ್ತಿಯ ವಿಷಯಕ್ಕೆ ಬಂದರೆ, ನಾವು ಮಾತು ಅಥವಾ ಲಿಪಿಯ ಮೂಲಕ ನಮ್ಮ ಭಾವನೆಗಳನ್ನು, ವಿಚಾರಗಳನ್ನು ಬೇರೆಯವರಿಗೆ ತಿಳಿಸುತ್ತೇವೆ. ಈ ಅಭಿವ್ಯಕ್ತಿಯು ಕಾಲದೊಂದಿಗೆ ಬದಲಾಗುವ ಗುಣವನ್ನು ಹೊಂದಿದೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಏಕತಾನತೆಯಿಂದ ಬೇಸತ್ತು ಬಳಕೆದಾರರು ವಿಭಿನ್ನ ಶೈಲಿಯಲ್ಲಿ ವಿಷಯವೊಂದನ್ನು ತಿಳಿಸಬಹುದು; ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಪದಗುಚ್ಚಗಳು ಹುಟ್ಟಿಕೊಳ್ಳಬಹುದು; ಬಳಕೆದಾರರ ಆಲಸ್ಯದಿಂದ ದೀರ್ಘವಾಗಿರುವ ಪದಗಳನ್ನು ಬಳಕೆದಾರರು ಸಂಕ್ಷಿಪ್ತಗೊಳಿಸಬಹುದು; ಕಾಲದ ಗತಿಯೊಂದಿಗೆ ಕೆಲವು ಪದಗಳ ಅರ್ಥಗಳೇ ಬದಲಾಗಬಹುದು; ಇಂದಿನ ಒಂದು ಪ್ರಾಂತಭಾಷೆಯು ನಾಳೆ ಶಿಷ್ಟಭಾಷೆಯಾಗಿ ಬದಲಾಗಬಹುದು; ಅನ್ಯಭಾಷೆಗಳ ಪ್ರಭಾವದಿಂದ ಭಾಷೆ ಬದಲಾಗಬಹುದು ಅಥವಾ ಹೊಸ ತಂತ್ರಜ್ಞಾನದ ಪ್ರಭಾವದಿಂದಲೂ ಭಾಷೆ ಬದಲಾಗಬಹುದು. (ವರ್ಮ ಮತ್ತು ಕೃಷ್ಣಸ್ವಾಮಿ:೧೯೮೬) ಮುದ್ರಣ, ತಂತಿ ಸಂದೇಶ, ದೂರವಾಣಿ, ದೂರದರ್ಶನ ಹಾಗೂ ತೀರ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದ ಪ್ರಭಾವಗಳಿಂದ ನಾವು ಬಳಸುವ ಭಾಷೆ ಬದಲಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಪ್ರಭಾವ ಮುಂಚಿನ ಎಲ್ಲ ಪ್ರಭಾವಗಳಿಗಿಂತ ಹೆಚ್ಚು ತ್ವರಿತವಾಗಿ, ಸ್ಪಷ್ಟವಾಗಿ ಕಾಣತೊಡಗಿದೆ. ಭಾಷೆಯ ಬದಲಾವಣೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಬಂದೇ ಬರುತ್ತವೆ. ಕೆಲವರು ಬದಲಾದ ಭಾಷೆಯನ್ನು ಸಾಂಪ್ರದಾಯಿಕ ಭಾಷೆಗೆ ಮಾಡುವ ಅವಮಾನವೆಂದು ಭಾವಿಸುತ್ತಾರೆ ಹಾಗೂ ಭಾಷೆಯ ಬದಲಾವಣೆಯನ್ನು ಖಂಡಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವಸಾನಗೊಳ್ಳುತ್ತಿರುವ ಭಾಷೆಯನ್ನು ಉಳಿಸಲು ಹೋರಾಟ ನಡೆಸುವ ಹಲವಾರು ವಿಧಾನಗಳನ್ನು ಯೋಚಿಸುತ್ತಿರುತ್ತಾರೆ. ಆದರೆ ಭಾಷೆಯ ಬದಲಾವಣೆಯನ್ನು ಉದಾರ ಮನಸ್ಸಿನಿಂದ ಸ್ವಾಗತಿಸುವವರು, ಭಾಷೆಯ ಬದಲಾವಣೆಗೆ ಕಾರಣಗಳನ್ನೂ, ಅವುಗಳಲು ಬದಲಾಗುವ ಪರಿಯನ್ನೂ ಅಧ್ಯಯನ ಮಾಡುತ್ತಾ ಕ್ರಮೇಣ ಅವನ್ನು ದಾಖಲಿಸುತ್ತಾ ಹೋಗುತ್ತಾರೆ. ನಾವು ಗಮನಿಸಬೇಕಾದ ಸಂಗತಿಯೆಂದರೆ, ಯಾವುದೋ ಒಂದು ಗುಂಪು ಭಾಷೆಯನ್ನು ಒಂದು ನಿರ್ಧಿಷ್ಟ ರೀತಿಯಲ್ಲಿ ಬದಲಾಯಿಸುತ್ತಾ ಹೋದರೆ, ಭಾಷೆಯನ್ನು ಬಳಸುವವರೆಲ್ಲರೂ ಅದೇ ಬದಲಾವಣೆಗಳನ್ನು – ಒಪ್ಪಿಕೊಂಡು ತಮ್ಮ ಮುಖ್ಯವಾಹಿನಿ ಭಾಷೆಯಲ್ಲಿ ಸೇರಿಸಿಕೊಳ್ಳುತ್ತಾರೊ ಇಲ್ಲವೋ ಎಂಬುದನ್ನು ಸುಲಭವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಬದಲಾದ ಒಂದು ಲಕ್ಷಣವನ್ನು ಇಡೀ ಸಮುದಾಯ ಒಪ್ಪಿಕೊಳ್ಳುವುದು, ಜನಪ್ರಿಯವಾಗುವುದು, ಎಲ್ಲ ಮಾಧ್ಯಮಗಳಲ್ಲಿ ಅದು ಬಳಕೆಯಾಗುವುದು ಮುಂತಾದ ವಿಚಾರಗಳು ಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರವೇ. ಕನ್ನಡ ಚಿತ್ರನಿರ್ದೇಶಕ ಉಪೇಂದ್ರ ‘ಸುಳ್ಳು’ ಎಂಬರ್ಥ ಬರುವಂತೆ ಬಳಸಿದ ‘ಓಳು’ ಎಂಬ ಪದ ಬಹುಬೇಗ ಜನರ ಬಳಕೆಗೆ ಬಂದಿತು. ಸಮೂಹ ಮಾಧ್ಯಮಗಳ ಪಾತ್ರ ಈ ಮುಂಚೆ ಭಾಷೆಯ ಬದಲಾವಣೆಯಲ್ಲಿ ಗಮನಾರ್ಹವಾಗಿತ್ತು. ಆದರೆ ವಿದ್ಯುನ್ಮಾನ ಮಾಧ್ಯಮದ ಭಾಷೆಯಲ್ಲಿ ವೈಯಕ್ತಿಕ ಸಂವಹನದ ಮೂಲಕವೇ ಗಮನಾರ್ಹ ಬದಲಾವಣೆ ಕಂಡುಬರುತ್ತಿದೆ. ಈ ಭಾಷೆಯು ಶಿಷ್ಟ ಭಾಷೆಯ ಬಳಕೆಯಲ್ಲಿ ಎಂಥ ಬದಲಾವಣೆಗಳನ್ನು ತರುತ್ತಿದೆ ಎಂದು ಸ್ಥೂಲವಾಗಿ ನೋಡುವುದೇ ಈ ಕೃತಿಯ ಉದ್ದೇಶ.

ಮಾಹಿತಿ ತಂತ್ರಜ್ಞಾನ

೨೦ನೇ ಶತಮಾನದ ಕೊನೆಯ ದಶಕ ಮತ್ತು ೨೧ನೇ ಶತಮಾನದ ಮೊದಲ ದಶಕಗಳಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ನಮ್ಮ ಜೀವನದ ಹಲವು ವಲಯಗಳ ಗತಿಯನ್ನೇ ಬದಲಿಸಿಬಿಟ್ಟಿದೆ. ಯಾವುದೇ ಮಾಹಿತಿಯು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಯಾವುದೇ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ತಲುಪುವ ಕ್ರಾಂತಿ ಈ ಕ್ಷೇತ್ರದಲ್ಲಿ ಆಗಿದೆ. ಕೆಲವೇ ವರ್ಗಗಳ ಸ್ವತ್ತಾಗಿದ್ದ ಜ್ಞಾನದ ಹಲವು ಮಜಲುಗಳು ಯಾವುದೇ ವ್ಯಕ್ತಿಗೆ ಗಂಟೆಗೆ ೧೦ – ೧೫ ರೂಪಾಯಿಗೆ ಬೀದಿಯ ಮೂಲೆಯಲ್ಲಿನ ಅಂತರ್ಜಾಲ ಕೇಂದ್ರದಲ್ಲೋ, ತನ್ನದೇ ಜೇಬಿನಲ್ಲಿನ ಮೊಬೈಲ್‌ ಫೋನಿನಲ್ಲೋ ಸುಲಭವಾಗಿ ದಕ್ಕುತ್ತವೆ. ಕಂಪ್ಯೂಟರ್ ಜ್ಞಾನದ ಕೊರತೆಯಿರುವವರನ್ನು ಅನಕ್ಷರಸ್ಥರೋ ಎಂಬಂತೆ ನೋಡಲು ಪ್ರಾರಂಭಿಸಿ ಹಲವು ದಿನಗಳೇ ಕಳೆದಿವೆ. ಈ ಅಂತರ್ಜಾಲವೆಂಬ ಮಾಯಾಜಾಲ ತನ್ನ ಪ್ರಭಾವವನ್ನು ಹರಡಲು ಬಹಳ ಕಡಿಮೆ ಸಮಯವನ್ನು ತೆಗೆದುಕೊಂಡಿದೆ. ರೇಡಿಯೋ ೫೦ ದಶಲಕ್ಷ ಕೇಳುಗರನ್ನು ತಲುಪಲು ೩೮ ವರ್ಷಗಳನ್ನು ತೆಗೆದುಕೊಂಡರೆ, ದೂರದರ್ಶನ ಆ ಸಂಖ್ಯೆಯನ್ನು ತಲುಪಲು ೧೩ ವರ್ಷ ತೆಗೆದುಕೊಂಡಿತ್ತು. ಆದರೆ ಅಂತರ್ಜಾಲ ಆ ಸಂಖ್ಯೆಯನ್ನು ತಲುಪಲು ಕೇವಲ ೪ ವರ್ಷಗಳನ್ನು ತೆಗೆದುಕೊಂಡಿತೆಂದರೆ ಅದರ ಜನಪ್ರಿಯತೆ ಮತ್ತು ತುರ್ತು ಎಂಥದೆಂದು ಅರ್ಥವಾಗುತ್ತದೆ (ಪಾರ್ಥಸಾರಥಿ: ೨೦೦೧).

ಮೊಬೈಲಿನಲ್ಲಿ ಅಂತರ್ಜಾಲವನ್ನು ಪಡೆಯುವ ಸೌಲಭ್ಯವಿರುವಂತೆ ಅಂತರ್ಜಾಲವನ್ನು ಬಳಸಿ ಫೋನ್‌ ಕರೆಗಳನ್ನು ಮಾಡಬಹುದಾಗಿದೆ. ಹೀಗಾಗಿ ಎರಡೂ ಸಂಪರ್ಕ ಸಾಧನಗಳೂ ಪರಸ್ಪರ ಒಂದರೊಳಗೊಂದು ಸೇರಿ ಹೋಗಿವೆ. ‘ಮೊಬೈಲ್‌ ಫೋನ್‌ ಕೇವಲ ಒಂದು ಸಾಧನವಲ್ಲ ಅದು ನಿಮ್ಮ ವ್ಯಕ್ತಿತ್ವದ ಪ್ರತೀಕ’ ಎನ್ನುತ್ತಾ ಈ ಸಾಧನ ಸೌಲಭ್ಯಗಳು ನಮ್ಮೆಲ್ಲ ಇಷ್ಟಗಳನ್ನು ತೀರಿಸುವ ಕಲ್ಪವೃಕ್ಷವೆಂಬಂತೆ ಬಿಂಬಿಸಲಾಗುತ್ತಿದೆ. ನಮ್ಮ ಮೂಲ ಸೌಕರ್ಯಗಳ ಜೊತೆ ಮೊಬೈಲ್‌ ಫೋನನ್ನು ಕೂಡ ಸೇರಿಸಿ ಒಂದು ಕಂಪನಿಯು ತನ್ನ ಜಾಹೀರಾತಿನಲ್ಲಿ ‘ರೋಟಿ, ಕಪಡಾ, ಮಕಾನ್‌ ಔರ್ ಮೊಬೈಲ್‌ಫೋನ್‌’ (ಆಹಾರ, ಬಟ್ಟೆ, ಮನೆ ಮತ್ತು ಮೊಬೈಲ್‌ ಫೋನ್‌) ಎಂದು ಉದ್ಗರಿಸತೊಡಗಿ ಒಂದು ದಶಕವೇ ಕಳೆದಿದೆ. ಅತ್ಯಂತ ವೇಗವಾಗಿ ಮುಂದುವರೆಯುತ್ತಿರುವ ಪ್ರಪಂಚವು ಯಾರೊಡನೆಯಾದರೂ ಬಹು ಬೇಗನೆ ಸಂಪರ್ಕ ಸಾಧಿಸುವ ವ್ಯವಸ್ಥೆಯನ್ನೂ ಹುಟ್ಟು ಹಾಕಿಕೊಂಡಿದೆ. ಎಲ್ಲರಿಗೂ ಎಲ್ಲದಕ್ಕೂ ಸಮಯವೇ ಇಲ್ಲವೇನೋ ಎಂಬಂತೆ ಈ ತಂತ್ರಜ್ಞಾನದ ಜಾಲದಲ್ಲಿ ಸಿಕ್ಕಿಕೊಂಡಿದ್ದಾರೆ.

ಕಾಗದರಹಿತ ಪ್ರಪಂಚ?

ಈ ಮುಂಚೆ ದಾಖಲೆಗಳ ನೈಜತೆಗೆ ಸಂಬಂಧಿಸಿದಂತೆ `Everything should be in black and white.’ ಎಂದು ಎಲ್ಲದೂ ಬರವಣಿಗೆಯಲ್ಲಿರಬೇಕು ಎಂದು ಕೇಳುತ್ತಿದ್ದವರಿಗೆ, ಈಗ ಸಿಗುತ್ತಿರುವ ವ್ಯವಹಾರಿಕ ವಿದ್ಯುನ್ಮಾನ ಪತ್ರಗಳಲ್ಲಿ `This is an electronically generated document and signature of the authorized person is not required.’ ಎಂಬ ಅಡಿವಾಕ್ಯ ಕಂಡುಬರುತ್ತದೆ. ಅದನ್ನು ವಿಧಿಯಿಲ್ಲದೇ ಒಪ್ಪಿಕೊಳ್ಳಲೂ ನಾವು ಪ್ರಾರಂಭಿಸಿದ್ದೇವೆ. ಇನ್ನು ದೂರವಾಣಿ ಬಿಲ್ಲುಗಳು ಮತ್ತಿತರ ದಾಖಲೆಗಳಲ್ಲಿ, ಈ – ಬಿಲ್ಲುಗಳನ್ನು ಪಡೆದು ಕಾಗದದ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ರಕ್ಷಣೇ ಮಾಡಿ ಎಂಬ ಸಲಹೆಗಳು ಪುನಾರವರ್ತನೆಯಾಗುತ್ತವೆ. ಎಷ್ಟೋ ಈ – ಅಂಚೆಗಳ ಕೊನೆಯಲ್ಲಿ ತೀರಾ ಅವಶ್ಯಕತೆಯಿಲ್ಲದಿದ್ದರೆ ಈ ಪುಟವನ್ನು ಮುದ್ರಿಸಬೇಡಿ – ಮರಗಳನ್ನು ಉಳಿಸಿ, ಪರಿಸರ ರಕ್ಷಿಸಿ ಎಂಬ ಅಹವಾಲುಗಳು ಕಾಣಸಿಗುತ್ತವೆ. ಹಲವಾರು ಪತ್ರಿಕೆ ಹಾಗೂ ನಿಯತಕಾಲಿಕೆಗಳು ಈ – ರೂಪದಲ್ಲಿಯೂ ಲಭ್ಯವಿರುವುದಷ್ಟೇ ಅಲ್ಲ ಅವು ಲೇಖಕರಿಂದ ಲೇಖನಗಳನ್ನು ಆಹ್ವಾನಿಸುವಾಗ ಅವನ್ನು ಈ – ಅಂಚೆಯ ಮೂಲಕ ಕಳಿಸಲು ಕೋರುತ್ತವೆ. ಇದು ಕಾಗದರಹಿತ ಸಮಾಜಕ್ಕೆ ನಾಂದಿ ಹಾಡುತ್ತಿರುವಂತೆ ಕಾಣುತ್ತಿರುವುದಂತೂ ಸತ್ಯ.

ಭಾಷೆ: ಒಂದು ಪರಿಚಯ

ಮಾಹಿತಿ ತಂತ್ರಜ್ಞಾನ ಇತರ ಕ್ಷೇತ್ರಗಳ ಮೇಲೆ ಬೀರಿರುವ ಅಗಾಧ ಪರಿಣಾಮದಂತೆ, ಅಲ್ಲಿ ಉಪಯೋಗಿಸುವ ಭಾಷೆಯ ಮೇಲೂ ಬಹಳಷ್ಟು ಪರಿಣಾಮ ಬೀರಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಉಪಯೋಗಿಸುವ ಭಾಷೆಯನ್ನು ಸಂಕ್ಷಿಪ್ತವಾಗಿ ಈ – ಭಾಷೆ(ಇಲೆಕ್ಟ್ರಾನಿಕ್‌ ಭಾಷೆ)ಯೆಂದು ಕರೆಯುತ್ತಾರೆ. ತ್ವರಿತಗತಿಯ ಸಂಪರ್ಕಕ್ಕಾಗಿ ಬಳಸುವ ಈ ಮಾಧ್ಯಮದಲ್ಲಿ ವಿಸ್ತಾರವಾದ ಅಭಿವ್ಯಕ್ತಿಗೆ ಆಸ್ಪದವೇ ಇಲ್ಲ. ಟೈಪ್‌ರೈಟರ್ ಕಾಲದಲ್ಲಿ ೪೦ – ೪೫ ಪದಗಳನ್ನು ಒಂದು ನಿಮಿಷಕ್ಕೆ ಟೈಪ್‌ ಮಾಡುವುದನ್ನು ಪರಿಣತಿ ಎಂದು ಪರಿಗಣಿಸುತ್ತಿದ್ದರೆ, ಐಟಿ ಕಾಲದಲ್ಲಿ ಅದೆಷ್ಟು ಕಡಿಮೆ ಪದಗಳಲ್ಲಿ ಹೇಳಬಹುದಾದ್ದನ್ನು ಹೇಳಿದ್ದಾರೆ ಎಂಬುದರ ಮೇಲೆ ಪರಿಣತಿಯನ್ನು ಅಳೆಯಲಾಗುತ್ತದೆ. ತಂತ್ರಾಂಶ ಅಭಿವೃದ್ಧಿಪಡಿಸುವವರ ಪ್ರೋಗ್ರಾಂಗಳ ಆದೇಶಗಳು ಬಹಳಷ್ಟು ಸಂಕ್ಷಿಪ್ತವಾಗಿರಬಹುದನ್ನು ಗಮನಿಸಬಹುದು. ಈ ಪ್ರವೃತ್ತಿಯು ಅವರ ವೃತ್ತಿಯಿಂದಾಚೆಗೂ ಕಂಡುಬರುತ್ತದೆ. ಅವರ ಅನುಕರಣೆಯ ದೆಸೆಯಿಂದ ಆ ವಿಶೇಷ ಭಾಷೆ ಜನ ಸಾಮಾನ್ಯರಲ್ಲೂ, ಯುವಕರಲ್ಲೂ, ವಿದ್ಯಾರ್ಥಿಗಳಲ್ಲೂ ಬಳಕೆಗೆ ಬಂದಿದೆ. ಭಾಷೆ ಹಿಂದೆಂದೂ ಕಾಣದಂಥ ಅಗಾಧ ಬದಲಾವಣೆಯನ್ನು ಕಾಣುತ್ತಿದೆ. ಭಾಷಾತಜ್ಞರು ಇದನ್ನು ‘ಭಾಷಾ ಕ್ರಾಂತಿ’ ಎಂದೇ ವ್ಯಾಖ್ಯಾನಿಸಿದ್ದಾರೆ. (ಕ್ರಿಸ್ಟಲ್‌:೨೦೦೧)

ಮುಂಚಿನ ಒಬ್ಬರಿಗೊಬ್ಬರ ನಡುವಿನ ಸಂವಹನ ರೀತಿಯು ಈಗ ಮೊಬೈಲ್‌ ಫೋನ್‌ ಮತ್ತು ಅಂತರ್ಜಾಲದ ಆಗಮನದೊಂದಿಗೆ ಆಗಿರುವ ರೀತಿಯನ್ನು ಕೆಲವು ಉದಾಹರಣೆಗಳೊಂದಿಗೆ ಗಮನಿಸಬಹುದು. ಮೊದಲು ಯಾರಾದರೂ ಸಿಕ್ಕಾಗ “ನೀವು ಹೇಗಿದ್ದೀರಿ?” ಎಂದು ಕರೆಯುವುದು ಶಿಷ್ಟಾಚಾರವಾಗಿದ್ದರೆ, ಈಗ “ನೀವೀಗ ಎಲ್ಲಿದ್ದೀರಿ?” ಎಂಬುದರೊಂದಿಗೆ ಸಂಭಾಷಣೆ ಶುರುವಾಗುತ್ತದೆ. ಇನ್ನು ಆನ್‌ಲೈನ್‌ ಕುರುಡು ಹರಟೆಗಳಲ್ಲಿ “ನೀನು ಮಾತನಾಡುವ ರೀತಿಯನ್ನು ನೋಡಿದರೆ ನೀನು ಹುಡುಗಿ ಅನ್ನಿಸುವುದಿಲ್ಲ. ನೀನು ಭಾರತೀಯ ಮೂಲದ ಹುಡುಗ ಅನ್ನಿಸುತ್ತದೆ.” ಎಂಬರ್ಥದ ಮಾತುಗಳು ಸಿಗುತ್ತವೆ. ಇತ್ತೀಚೆಗಂತೂ ಮಾತನಾಡಲು ಆರಂಭಿಸಿದ ತಕ್ಷಣ ನಿಮಗೆ ಎದುರಾಗುವ ಪ್ರಶ್ನೆ ೦ಖಐ? ಅದರರ್ಥ ಏಜ್‌, ಸೆಕ್ಸ್‌ ಮತ್ತು ಲೊಕೇಶನ್‌. ಇದಕ್ಕೆ ಸಿಗುವ ಉತ್ತರಗಳನ್ನು ನೀವು ನಂಬಲೂ ಸಾಧ್ಯವಾಗದು. ಹಲವಾರು ಯುವಕ ಯುವತಿಯರು ಸುಳ್ಳು ಗುರುತಿನಲ್ಲಿ ಈ ಹರಟೆಗಳಲ್ಲಿ ತೊಡಗುತ್ತಾರೆ. ಒಬ್ಬರು ಒಂದೇ ಸಮಯಕ್ಕೆ ಒಬ್ಬರಿಗಿಂತ ಹೆಚ್ಚು ಜನರ ಜೊತೆ ಆನ್‌ಲೈನ್‌ ಹರಟೆಗಳಲ್ಲಿ ತೊಡಗಬಹುದಾಗಿರುವುದರಿಂದ, ಒಬ್ಬೊಬ್ಬರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಗುವುದು ತಡವಾಗಬಹುದು. ಆಗ “ಇದ್ದೀರಾ? ಎಂಬ ಪ್ರಶ್ನೆಯೂ ಮತ್ತೆ ಮತ್ತೆ ಕಂಡುಬರುತ್ತದೆ. ಇನ್ನು ಒಬ್ಬರಿಗೆ ಕೇಳಬೇಕಾದ ಪ್ರಶ್ನೆಯೋ, ನೀಡಬೇಕಾದ ಉತ್ತರವೋ ಆತುರದಲ್ಲಿ ಇನ್ನೊಬ್ಬರಿಗೆ ತಲುಪಿ ಕಸಿವಿಸಿಯಾಗುವ ಸಂದರ್ಭಗಳೂ ಇವೆ.

ಭಾಷೆಯ ಬಳಕೆ

ಬದಲಾವಣೆ ಹೆಚ್ಚಾಗಿ ಕಂಡು ಬರುತ್ತಿರುವ ಈ – ಭಾಷೆಯು ಮೂಲವಿರುವುದು, ಮಾಹಿತಿ ತಂತ್ರಜ್ಞಾನವನ್ನು ಬಳಸಿ ಸಂಪರ್ಕ ಸಾಧಿಸುತ್ತಿರುವ ವಿಧಾನಗಳಲ್ಲಿ. ಅವುಗಳಲ್ಲಿ ಪ್ರಮುಖವಾದದ್ದು ಈ – ಮೆಯ್ಲ್‌. ಹೆಸರೇ ಸೂಚಿಸುವಂತೆ ಇದು ವಿದ್ಯುನ್ಮಾನ ಅಂಚೆ. ಯಾಹೂ ಮೆಯ್ಲ್‌, ಜಿ – ಮೆಯ್ಲ್‌, ರೆಡಿಪ್‌ ಮೆಯ್ಲ್‌, ಇಂಡಿಯಾಟೈಮ್ಸ್‌ ಮೆಯ್ಲ್‌ ಮುಂತಾದ ವೆಬ್‌ಸೈಟ್‌ಗಳು ತಮ್ಮ ಗ್ರಾಹಕರಿಗಾಗಿ ವಿದ್ಯುನ್ಮಾನ ಅಂಚೆಯ ಸೌಲಭ್ಯವನ್ನು ಉಚಿತವಾಗಿ ನೀಡುತ್ತವೆ. ಎಲ್ಲ ಬಳಕೆದಾರರು ತಮ್ಮದೇ ಆದ ಒಂದು ಅಂಚೆಖಾತೆಯನ್ನು ಪ್ರಾರಂಭಿಸಿದಾಗ ಅವರಿಗೊಂದು ಮೆಯ್ಲ್‌ ವಿಳಾಸ ಸಿಗುತ್ತದೆ. ಉದಾ: nagarj7tp@gmail.com, smart_latha@yahoo.com ಮುಂತಾದವು. ಈ ಬಳಕೆದಾರರೆಲ್ಲರಿಗೂ ತಾವೇ ಸೃಷ್ಟಿಸಿಕೊಂಡ ಒಂದು ಗುಪ್ತ ಪಾಸ್‌ವರ್ಡ್ ಇರುತ್ತದೆ. ಅದನ್ನು ಬಳಸಿ ತಮ್ಮ ಅಂತರ್ಜಾಲ ಪುಟಕ್ಕೆ ಕಾಲಿಟ್ಟರೆಂದರೆ ಅಲ್ಲಿಂದ ಅದೇ ರೀತಿಯ ಮೆಯ್ಲ್‌ ವಿಳಾಸ ಹೊಂದಿದವರೆಗೆ ಅವರು ಪತ್ರಗಳನ್ನು, ಚಿತ್ರಗಳನ್ನು, ವಿದ್ಯುನ್ಮಾನ ಪುಸ್ತಕಗಳನ್ನು, ಚಲನಚಿತ್ರಗಳನ್ನು ಕಳಿಸಬಹುದು, ಪಡೆಯಬಹುದು, ಬೇರೆಯವರಿಂದ ಬಂದ ಉತ್ತಮ ಅಂಚೆಗಳನ್ನು ಕ್ಷಣಾರ್ಧದಲ್ಲಿ ಇನ್ನೊಬ್ಬರಿಗೆ ವರ್ಗಾಯಿಸಬಹುದು, ಪ್ರಪಂಚದ ಯಾವುದೇ ಮೂಲೆಯಲ್ಲಿರುವ ನೂರಾರು ಜನರಿಗೆ ಒಮ್ಮೆಲೇ ಅಂಚೆಯನ್ನು ರವಾನಿಸಬಹುದು. ನೀವು ಕಳಿಸಿದ ಎಲ್ಲ ಅಂಚೆಗಳ ಒಂದು ಪ್ರತಿ ನಿಮ್ಮಬಳಿ ಇದ್ದೇ ಇರುತ್ತದೆ. ನಮ್ಮ ಪುರಾತನ ಅಂಚೆ ವ್ಯವಸ್ಥೆಯ(ಇದನ್ನು ಈ – ಪ್ರಪಂಚದವರು ಅದು ತಲುಪುವ ವೇಗವನ್ನು ನೋಡಿ ಸ್ನೈಲ್‌ ಮೆಯ್ಲ್, ಅಂದರೆ ಬಸವನ ಹುಳುವಿನ ಅಂಚೆ ಎಂದೂ ಕರೆಯುತ್ತಾರೆ) ಜೊತೆ ಹೋಲಿಸಿದಾಗ ಈ – ಅಂಚೆಯಲ್ಲಿ ಮೆಚ್ಚಬಲ್ಲ ಮುಖ್ಯ ಗುಣಗಳೆಂದರೆ ಅದರ ಸಾಟಿಯಿಲ್ಲದ ವೇಗ, ಇನ್ನೊಬ್ಬ ವ್ಯಕ್ತಿಯು ಯಾವ ಜಾಗದಲ್ಲಿದ್ದರೂ ಈ ವೇಗಕ್ಕೆ ಯಾವ ವಿಳಂಬವಾಗದಿರುವುದು, ತೀರಾ ಕಡಿಮೆ ಖರ್ಚಿನಲ್ಲಿ ಆಗುವಂಥದ್ದು, ಒಟ್ಟಿಗೇ ಹಲವರಿಗೆ ಅಂಚೆ ಕಳಿಸುವ ವ್ಯವಸ್ಥೆ, ಹಾಗೆ ವಿದ್ಯುನ್ಮಾನ ಅಂಚೆಯಲ್ಲಿ ಬರುವ ಉಪಯುಕ್ತ ಮಾಹಿತಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವ ವ್ಯವಸ್ಥೆಗಳಿರುತ್ತವೆ.

ಎರಡನೆಯ ಬಹುಮುಖ್ಯ ಸಂಪರ್ಕ ವಿಧಾನವೆಂದರೆ ಆನ್‌ಲೈನ್‌ ಚಾಟ್‌. ಈ ವಿಧಾನದಲ್ಲಿ ಒಂದೇ ಸಮಯದಲ್ಲಿ ಬೇರೆ ಬೇರೆ ಜಾಗಗಳಲ್ಲಿರುವ ವ್ಯಕ್ತಿಗಳು ಅಂತರ್ಜಾಲ ಸಂಪರ್ಕ ಸಾಧನೆಯೊಂದಿಗೆ ಕುಳಿತಿದ್ದರೆ ಅವರು ಲಿಪಿಯ ಮೂಲಕ ಸಂಭಾಷಣೆ ನಡೆಸಬಹುದು. ವಿದ್ಯುನ್ಮಾನ ಪತ್ರಗಳ ಸೇವೆಯನ್ನು ಆರಂಭಿಸಿದ ಕಂಪನಿಗಳೇ ಈ ವ್ಯವಸ್ಥೆಯನ್ನೂ ತಮ್ಮ ಗ್ರಾಹಕರಿಗೆ ನೀಡತೊಡಗಿವೆ. ಅವುಗಳಲ್ಲಿ ಪ್ರಮುಖವಾದವು ಗೂಗಲ್‌ ಟಾಕ್‌, ಯಾಹೂ ಮೆಸೆಂಜರ್, ರೆಡಿಪ್‌ ಬೋಲ್‌ ಮುಂತಾದವು. ಈಗ ವೆಬ್‌ ಕ್ಯಾಮೆರಾಗಳು ಇರುವ ಕಂಪ್ಯೂಟರ್ ಮೂಲಕ ವಿಡಿಯೋ ಹರಟೆ ಕೂಡ ಮಾಡಬಹುದಾಗಿದ್ದು, ಲಿಪಿಯನ್ನು ಬಳಸದೆಯೂ ಮಾನಿಟರ್ ಮೇಲೆ ಮುಖ ನೋಡಿಕೊಂಡು ಮಾತನಾಡಬಹುದು. ಇದೇ ಮುಂದುವರೆದು ಭಿನ್ನ ಭಿನ್ನ ಜಾಗಗಳಲ್ಲಿರುವ ಹಲವಾರು ವ್ಯಕ್ತಿಗಳು ಒಂದೇ ಜಾಗದಲ್ಲಿ ಕುಳಿತವರಂತೆ ಸಭೆ ಅಥವಾ ಸಂದರ್ಶನಗಳನ್ನು ನಡೆಸಬಹುದಾದ ವಿಡಿಯೋ ಕಾನ್ಫರೆನ್ಸ್‌ ಕೂಡ ಈಗ ಜನಪ್ರಿಯವಾಗಿದೆ.

ಮೂರನೆಯ ಸಂಪರ್ಕ ವಿಧಾನವೆಂದರೆ ಆನ್‌ಲೈನ್‌ ಕಮ್ಯೂನಿಟಿ ಅಂದರೆ ಅಂತರ್ಜಾಲದಲ್ಲೇ ಭೇಟಿಯಾಗಿ ಸಭೆ, ಹರಟೆ, ಉಭಯ ಕುಶಲೋಪರಿ, ಚರ್ಚೆ, ಫ್ಲೊಟೋ ವಿಡಿಯೋಗಳನ್ನು ಹಂಚಿಕೊಳ್ಳುವುದು ಮುಂತಾದವನ್ನು ನಡೆಸಬಹುದಾದ ಸಂಘಗಳು ಅಥವಾ ಅಂತರ್ಜಾಲ ಸಾಮಾಜಿಕ ತಾಣಗಳು. ಈ ದಶಕದ ನಡುವೆ ಆರಂಭವಾದ ಗೂಗಲ್‌ ಸ೦ಸ್ಥೆಯ ಆರ್ಕುಟ್‌ ಈ ಸೇವೆಯನ್ನು ಒದಗಿಸಲು ಆರಂಭಿಸಿದ ಮಂಚೂಣಿಯ ಅಂತರ್ಜಾಲ ಪುಟ. ಸಮಾನ ಆಸಕ್ತರು, ಸಮಾನ ವಯಸ್ಕರು, ಸಮಾನ ಮನಸ್ಕರು ಇಲ್ಲಿ ಆಗಾಗ ಸೇರಿ ತಮಗನಿಸಿದ್ದನ್ನು ವ್ಯಕ್ತಪಡಿಸುತ್ತಾರೆ. ಈಗಾಗಲೇ ಆರ್ಕುಟ್‌ನಲ್ಲಿರುವ ಒಬ್ಬ ಸ್ನೇಹಿತನನ್ನು ಹುಡುಕುವುದೂ ಇಲ್ಲಿ ಸಾಧ್ಯ. ಒಂದೇ ಶಾಲೆ ಅಥವಾ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಇಲ್ಲೊಂದು ಗುಂಪು ಮಾಡಿಕೊಂಡು ವಿವಿಧ ವಿಷಯಗಳನ್ನು ಚರ್ಚಿಸುತ್ತಾರೆ, ತಮ್ಮ ಹಳೆಯ ನೆನಪುಗಳನ್ನು ಕೆದಕುತ್ತಾರೆ; ತಮಗಿದ್ದ ಶಿಕ್ಷಕರಲ್ಲಿ ಯಾರು ಅತ್ಯುತ್ತಮ ಎಂದು ಮತ ಚಲಾಯಿಸಿ ಒಂದು ಫಲಿತಾಂಶವನ್ನು ಪ್ರಕಟಿಸುತ್ತಾರೆ. ಹಳೆಯ ವಿದ್ಯಾರ್ಥಿಗಳೆಲ್ಲ ಎಲ್ಲಿ ಹೇಗೆ ಸೇರಬಹುದು ಎಂಬ ವಿಷಯವನ್ನು ಎಲ್ಲರಿಗೂ ಮುಟ್ಟಿಸುತ್ತಾರೆ. ಅದೇ ರೀತಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳೆಲ್ಲ ಒಂದು ಗುಂಪು ಮಾಡಿಕೊಂಡು ಅವರ ಕೃತಿಗಳ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಚರ್ಚಿಸುತ್ತಾರೆ. ಡಿಜಿಟಲ್‌ ಛಾಯಾಗ್ರಾಹಕರೆಲ್ಲ ಒಂದೆಡೆ ಸೇರಿ ತಾವು ತೆಗೆದ ಛಾಯಾಚಿತ್ರಗಳಲ್ಲಿ ಅತ್ಯುತ್ತಮವಾವುದೆಂದು ಇತರರನ್ನು ಕೇಳುತ್ತಾರೆ, ತಮ್ಮ ಪ್ರತಿಮೆಯನ್ನು ಉತ್ತಮ ಪಡಿಸಿಕೊಳ್ಳಲು ತಮ್ಮಂಥ ಹವ್ಯಾಸಿಗಳ ಬಳಿ ಸಲಹೆ ಸೂಚನೆಗಳನ್ನೂ, ಮೆಚ್ಚಿಗೆಯನ್ನೂ, ಟೀಕೆಯನ್ನೂ ಪಡೆಯುತ್ತಾರೆ. ಇಂಥ ಲಕ್ಷಾಂತರ ಅಂತರ್ಜಾಲ ಸಾಮಾಜಿಕ ತಾಣಗಳು ಲಭ್ಯವಿದ್ದು, ನಿಮ್ಮ ಆಸಕ್ತಿಗೆ ಹೊಂದುವಂಥವು ಅಲ್ಲಿ ಸಿಕ್ಕೇ ಸಿಗುತ್ತವೆ. ಇದರಲ್ಲಿ ಋಣಾತ್ಮಕ ಅಂಶಗಳಿಲ್ಲವೆಂದೇನಲ್ಲ. ಈ ಅಂತರ್ಜಾಲ ತಾಣದಲ್ಲಿ ವೈಯಕ್ತಿಕ ಎಂಬುದೇ ಇಲ್ಲವೆನಿಸುತ್ತದೆ, ಒಬ್ಬರ ವಿವರಗಳನ್ನು, ಫ್ಲೊಟೋಗಳನ್ನು ಕದ್ದು ಇನ್ನೊಂದು ನಕಲಿ ಖಾತ ಸೃಷ್ಟಿಸಿಕೊಳ್ಳುವುದು ಇಲ್ಲಿ ಸಾಧ್ಯ; ತಮ್ಮ ವ್ಯವಹಾರಗಳನ್ನು ಕುದುರಿಸಿಕೊಳ್ಳಲು ಜಾಹೀರಾತುಗಳನ್ನು ತೇಲಿಬಿಡುವ ಉದಾಹರಣೆಗಳುಂಟು; ಅಶ್ಲೀಲ ಆಹ್ವಾನಗಳನ್ನು ನೀಡುವ ಅಪರಿಚಿತರು ಹೆಚ್ಚಾಗುತ್ತಾ ಹೋಗುತ್ತಿದ್ದಾರೆ; ಒಬ್ಬ ಯುವತಿ ತನ್ನ ಸ್ನೇಹಿತರಿಗೆ ನೀಡಿದ ವಿವರಗಳನ್ನು ಇನ್ನೊಬ್ಬ ಅಪರಿಚಿತ ಪರಿಶೀಲಿಸಿ, ಅವರಿರುವ ಸ್ಥಳವನ್ನೂ ಕಂಡುಹಿಡಿದು ತೊಂದರೆ ಕೊಡುವ ಸಾಧ್ಯತೆ ಇಲ್ಲಿ ಉಂಟು; ಭಯೋತ್ಪಾದಕರೂ ದೂರವಾಣಿಗಿಂತಲೂ ಸುರಕ್ಷಿತವೆನಿಸಿದ ಈ ತಾಣದಲ್ಲಿ ತಮ್ಮ ರಹಸ್ಯ ಸಂದೇಶಗಳನ್ನು ರವಾನಿಸತೊಡಗಿದ್ದಾರೆ. ಇವೆಲ್ಲ ನ್ಯೂನತೆಗಳನ್ನು ನೋಡಿಕೊಂಡು ಆರ್ಕುಟ್‌ನ ನಂತರ ಬಂದ ಪೇಸ್‌ಬುಕ್‌ ಮತ್ತು ಟ್ವಿಟರ್ ಗಳು ಆರ್ಕುಟ್‌ಗಿಂತ ಹೆಚ್ಚು ಜನಪ್ರಿಯವಾಗುತ್ತಿವೆ. ಹಲವಾರು ಪ್ರಸಿದ್ಧ ವ್ಯಕ್ತಿಗಳೂ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹೇಳುವುದು ಸಾಕಷ್ಟು ಪ್ರಚಲಿತವಿದೆ. ಚ ಲನಚಿತ್ರ ಕಲಾವಿದರು, ಕ್ರೀಡಾ ಪಟುಗಳು ಹಾಗೂ ರಾಜಕಾರಣಿಗಳು ತಮ್ಮ ಆಗು ಹೋಗುಗಳ ಬಗ್ಗೆ ಇಲ್ಲಿ ತಿಳಿಸುತ್ತಿರುತ್ತಾರೆ. ಅವರ ಕಾರ್ಯವೈಖರಿ, ಸಾಧನೆಗಳ ಬಗ್ಗೆ ಜನರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಾರೆ. ಅಲ್ಲಿನ ಅನೌಪಚಾರಿಕ ವಾತಾವರಣದ ಪ್ರಭಾವಕ್ಕೊಳಗಾಗಿ ತುಟಿಮೀರಿ ಬಂದ ಮಾತುಗಳಿಂದಾಗಿ ವಿವಾದಗಳು ಸೃಷ್ಟಿಯಾಗುವುದೂ ಇಲ್ಲದಿಲ್ಲ.

ನಾಲ್ಕನೆಯ ಸಂಪರ್ಕ ವಿಧಾನವೆಂದರೆ ಬ್ಲಾಗ್‌. ಇದು ಒಂದು ರೀತಿಯ ವೈಯಕ್ತಿಕ ವೃತ್ತ ಪತ್ರಿಕೆಯಂಥ ಅಂತರ್ಜಾಲ ಪುಟ. ಆಸಕ್ತರು ತಮ್ಮ ಒಂದು ಬ್ಲಾಗ್‌ನಲ್ಲಿ ತಮ್ಮ ಸೃಜನಶೀಲ ಬರಹಗಳನ್ನೂ, ಲೇಖನಗಳನ್ನೂ, ವಿಶಿಷ್ಟ ಅನುಭವಗಳನ್ನೂ, ಛಾಯಾಚಿತ್ರಗಳನ್ನೂ ಹಂಚಿಕೊಳ್ಳುತ್ತಾರೆ. ಅವುಗಳನ್ನು ಓದಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವೂ ಇರುತ್ತದೆ.

ಈ ಮೇಲಿನವೆಲ್ಲವೂ ಕಂಪ್ಯೂಟರ್ ಆಧಾರಿತ ಸಂಪರ್ಕ ವಿಧಾನಗಳಾದರೆ, ಮೊಬೈಲ್‌ ಫೋನ್‌ ಆಧಾರಿತ, ಹೆಚ್ಚಿನ ಜನರನ್ನು ತಲುಪಿರುವ, ಹೆಚ್ಚು ಗ್ರಾಹಕ ಸ್ನೇಹಿಯಾಗಿರುವ ಕಿರು ಸಂದೇಶಗಳು (ಎಸೆಮೆಸ್‌/ಎಸ್‌.ಎಮ್‌.ಎಸ್‌) ನಾವು ಗಮನಿಸಬೇಕಾದ ಒಂದು ಸಂಪರ್ಕ ವಿಧಾನ. ಮೊಬೈಲುಗಳ ಬಳಕೆದಾರರ ಸಂಖ್ಯೆ ಭಾರತದಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆಗಿಂತ ಬಹುಪಾಲು ಹೆಚ್ಚಿದೆ. ಅವರಲ್ಲಿ ಹೆಚ್ಚಿನವರು ಕಿರುಸಂದೇಶಗಳನ್ನು ಕಳಿಸಲು ಬಾರದ, ಸ್ವೀಕರಿಸಿದ ಸಂದೇಶಗಳನ್ನು ಓದಲು ಬಾರದವರೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಕಿರು ಸಂದೇಶಗಳು ಸಾಮಾನ್ಯವಾಗಿ ಇಂಗ್ಲಿಷಿನಲ್ಲಿದ್ದು, ಅದರ ಜ್ಞಾನವಿಲ್ಲದವರು ಓದಲು ಸಾಧ್ಯವಿಲ್ಲ. ಇನ್ನೂ ಕೆಲವು ಗ್ರಾಮೀಣ ಪ್ರದೇಶದ ಮೊಬೈಲ್‌ ಫೋನ್‌ ಬಳಸುವ ವಯಸ್ಕರಿಗೆ ಕೇವಲ ಕರೆ ಮಾಡುವ ಮತ್ತು ಕರೆ ಸ್ವೀಕರಿಸುವ ಜ್ಞಾನ ಮಾತ್ರ ಇರುತ್ತದೆ. ಆದರೆ ಈ – ಭಾಷೆಯೆಂಬುದು ರೂಪುಗೊಳ್ಳುವಲ್ಲಿ ಕಿರುಸಂದೇಶಗಳದ್ದು ಬಹು ಮುಖ್ಯಪಾತ್ರವಾಗಿರುತ್ತದೆ. ೧೬೦ ಅಕ್ಷರ ಅಥವ ಸಂಕೇತಗಳನ್ನು (ಪದಗಳ ನಡುವಿನ ತೆರವುಗಳೂ ಸೇರಿದಂತೆ) ಬಳಸಿ ಟೈಪ್‌ ಮಾಡಲಾದ ಸಂದೇಶವು ಒಂದು ಕಿರುಸಂದೇಶದ ಲೆಕ್ಕ. ಇದನ್ನು ‘ಟೆಕ್ಸ್ಟಿಂಗ್‌’ ಎಂದೂ ಕರೆಯಲಾಗುತ್ತದೆ. ಆದರೆ ಭಾರತದಲ್ಲಿ ‘ಎಸೆಮೆಸ್‌’ ಎಂಬ ಪದಬಳಕೆಯೇ ಹೆಚ್ಚು ಪ್ರಚಲಿತವಿದೆ. ಕಿರುಸಂದೇಶಗಳನ್ನು ಮೊಬೈಲ್‌ ಫೋನಿನಲ್ಲಿ ಕಳಿಸುವುದು ಭಾರತದಲ್ಲಿ ಜನಪ್ರಿಯವಾದದ್ದು ಸುಮಾರು ೨೦೦೩ – ೦೪ರ ಸುಮಾರಿಗೆ. ಮೊಬೈಲ್‌ ಸೇವೆಯ ಕಂಪನಿಗಳು ತಮ್ಮ ಬ್ಯ್ರಾಂಡನ್ನು ಪ್ರಚುರ ಪಡಿಸಲು ಅಪರಿಮಿತ ಕಿರುಸಂದೇಶಗಳನ್ನು ಉಚಿತವಾಗಿ ಕಳಿಸುವ ಅವಕಾಶವನ್ನು ನೀಡಿದವು. ಅದರಲ್ಲೂ ಈ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮಾತ್ರ ಎಂಬಂತೆಯೂ ಕೆಲವು ಕಂಪನಿಗಳು ನೀಡತೊಡಗಿದವು. ಆಗ ಯುವಜನ ತಮ್ಮ ಮೊಬೈಲುಗಳಲ್ಲಿ ಮಾತನಾಡುವುದನ್ನೇ ಹೆಚ್ಚೂ ಕಡಿಮೆ ಬಿಟ್ಟು ಬಿಟ್ಟರು. ಎಲ್ಲವೂ ಮೌನವಾಗಿ ಸಂದೇಶಗಳ ಮೂಲಕ ಸಾಗುತ್ತಿದ್ದವು. ವೈಯಕ್ತಿಕ ಸಂದೇಶಗಳ ಜೊತೆಯಲ್ಲಿ ನಗೆಹನಿಗಳು, ಉದ್ಧರಣೆಗಳು, ಗಾದೆಗಳು, ವಕ್ರತುಂಡೋಕ್ತಿಗಳು, ಗಾಂಭೀರ್ಯವನ್ನು ನಟಿಸುತ್ತಾ ಬೇಸ್ತು ಬೀಳಿಸುವ ಸಂದೇಶಗಳು, ಶುಭಾಶಯಗಳು, ಮೊದಲಾದವೆಲ್ಲವೂ ಕಿರುಸಂದೇಶದ ವಸ್ತುಗಳಾದವು. ಬರಬರುತ್ತ ಅಪರಿಮಿತ ಉಚಿತ ಸಂದೇಶಗಳ ಕೊಡುಗೆಯನ್ನು ಕಂಪನಿಗಳು ನಿಲ್ಲಿಸುತ್ತಾ ಬಂದವು. ದಿನಕ್ಕೆ ೧೦೦ ಸಂದೇಶಗಳು ಮಾತ್ರ ಉಚಿತ ನಂತರ ಪ್ರತಿ ಸಂದೇಶಕ್ಕೆ ೫೦ಪೈಸೆ ಎಂಬಂಥ ಯೋಜನೆಗಳು ಬಂದವು. ಆಗ ಅವುಗಳನ್ನು ಆತುರಾತುರವಾಗಿ ಟೈಪ್‌ ಮಾಡುವುದರೊಂದಿಗೆ, ೧೬೦ ಲಿಪಿಸಂಕೇತಗಳ ಮಿತಿಯಲ್ಲೇ ಕಳಿಸಬೇಕಾದ ಅನಿವಾರ್ಯತೆಯೂ ಹುಟ್ಟಿಕೊಂಡಿತು. ಇತ್ತೀಚಿನ ಮೊಬೈಲ್‌ ಸಾಧನಗಳಲ್ಲಿ ೧೦೦೦ ಲಿಪಿಸಂಕೇತಗಳನ್ನು ಒಂದು ಸಂದೇಶದಲ್ಲಿ ಕಳಿಸಬಹುದಾದರೂ, ಅದು ಆರು ಸಂದೇಶಗಳಿಗೆ ಸಮನಾಗಿ, ಅವನ್ನು ಸ್ವೀಕರಿಸುವವರ ಸಾಧನಗಳಲ್ಲಿ ಅದು ಪುರಸ್ಕರಣೆಯಾಗದೆ ಸರಿಯಾಗಿ ಸ್ವೀಕೃತವಾಗದೇ ಹೋಗುವ ಸಾಧ್ಯತೆಗಳೂ ಇರುವುದರಿಂದ ಬಹಳ ಬಳಕೆದಾರರು ಒಂದೇ ಸಂದೇಶದ ಲಿಪಿಸಂಕೇತಗಳ ಮಿತಿಯಲ್ಲಿಯೇ, ಅಂದರೆ ೧೬೦ ಸಂಕೇತ ಅಥವಾ ಅಕ್ಷರಗಳನ್ನು ಬಳಸಿ (ಪದಗಳ ನಡುವಿನ ತೆರವೂ ಸೇರಿ) ಹೇಳಬೇಕಾದುದನ್ನೆಲ್ಲ ಹೇಳಲು ಪ್ರಯತ್ನಿಸುತ್ತಾರೆ. ಇಂಗ್ಲಿಷ್‌ ಅಲ್ಲದ ಬೇರಾವುದಾದರೂ ಭಾರತೀಯ ಭಾಷೆಗಳಲ್ಲಿ ಕನಿಷ್ಟ ಸುಮಾರು ೫೫ ಅಕ್ಷರಗಳನ್ನು ಬರೆಯುವಲ್ಲಿ ಒಂದು ಸಂದೇಶವಾಗಿ ಹೋಗುತ್ತದೆ. ಹಾಗಾಗಿ ಇಂಗ್ಲಿಷ್‌ ಲಿಪಿಯಲ್ಲಿ ಒಂದು ಸಂದೇಶವನ್ನು ಬರೆಯುವಾಗ ಹೆಚ್ಚು ಪದಗಳನ್ನು ಬಳಸಬಹುದು. ಟಿ – ೯ ನಿಘಂಟು ಎಂಬ ಸೌಲಭ್ಯದಿಂದ ಕಿರುಸಂದೇಶ ಕಳಿಸುವವರು ಇಂಗ್ಲಿಷ್‌ನಲ್ಲಿ ಸುಲಭವಾಗಿ ಸಂದೇಶವನ್ನು ಬರೆಯಬಹುದು. ಮೊಬೈಲುಗಳಲ್ಲೇ ಅಡಕವಾಗಿರುವ ಈ ನಿಘಂಟಿಗೆ ಬಹುತೇಕ ಎಲ್ಲ ಇಂಗ್ಲಿಷ್‌ ಪದಗಳ ಅರಿವಿರುತ್ತದೆ. ನಮಗೆ ಬೇಕಾಗಿರುವ ಪದದ ಕಾಗುಣಿತದಲ್ಲಿ ಇರುವ ಅಕ್ಷರಗಳನ್ನು ಹೊಂದಿದ ಕೀಲಿಗಳನ್ನು ಒಮ್ಮೆ ಮಾತ್ರ ಒತ್ತಿ, ಪದವನ್ನು ಮುಗಿಸಿದ ನಂತರ ನಮಗೆ ಬೇಕಾದ ಪದ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ನಿಮಗೆ ಛಠಠಞ ಎಂಬ ಪದಬೇಕಿದ್ದರೆ ಸಾಮಾನ್ಯ ವಿಧಾನದಲ್ಲಿ, ೨ನೇ ಕೀಲಿಯನ್ನು ಎರಡು ಬಾರಿ ಒತ್ತಿ, ೬ನೇ ಕೀಲಿಯನ್ನು ಮೂರು ಬಾರಿ ಒತ್ತಿ, ಸ್ವಲ್ಪ ಸಮಯದ ನಂತರ ಮತ್ತೆ ೬ನೇ ಕೀಲಿಯನ್ನು ಮೂರು ಬಾರಿ ಒತ್ತಿ, ನಂತರ ೫ನೇ ಕೀಲಿಯನ್ನು ಎರಡುಬಾರಿ ಒತ್ತಿದರೆ ಛಠಠಞ ಪದ ಸಿಗುತ್ತದೆ. ಆದರೆ ಟಿ – ೯ ವಿಧಾನದಲ್ಲಿ ೨ನೇ ಕೀಲಿಯನ್ನು ಒಮ್ಮೆ, ೬ನೇ ಕೀಲಿಯನ್ನು ಎರಡು ಬಾರಿ ಹಾಗೂ ೫ನೇ ಕೀಲಿಯನ್ನು ಒಮ್ಮೆ ಒತ್ತಿದರೆ ಛಠಠಞ ತಾನಾಗಿಯೇ ಬರುತ್ತದೆ. ಇನ್ನು ಒಂದೇ ಕೀಲಿ ಸಂಯೋಗದಲ್ಲಿ ಎರಡು ಭಿನ್ನ ಪದಗಳಿದ್ದರೆ # ಕೀಲಿಯನ್ನು ಬಳಸಿ ಅಥವಾ ಭಿನ್ನ ಮಾದರಿಯ ಸಾಧನಗಳಲ್ಲಿ ಬೇರೊಂದು ಟಾಗ್ಲ್‌ ಕೀಲಿಯನ್ನು ಬಳಸಿ ಪರ್ಯಾಯ ಪದವನ್ನು ಪಡೆಯಬಹುದು. ಸಾಮಾನ್ಯವಾಗಿ ಟಿ – ೯ ನಿಘಂಟಿನ ಪರಿಚಯವಿರುವವರು ಸಂಕ್ಷಿಪ್ತ ರೂಪಗಳನ್ನು ಉಪಯೋಗಿಸುವುದು ಕಡಿಮೆ.

ಭಾಷೆ: ಮುಂಚಿನ ಅಧ್ಯಯನಗಳು

ಈ – ಭಾಷೆಯನ್ನು ಕುರಿತು ಚರ್ಚೆಗಳು, ವಿಚಾರ ಸಂಕಿರಣಗಳು, ಲೇಖನಗಳು, ಉಪನ್ಯಾಸಗಳು, ನಿಯತಕಾಲಿಕೆಗಲು ೨೧ನೇ ಶತಮಾನದ ಆರಂಭದ ವರ್ಷಗಳಲ್ಲೇ ಪ್ರಾರಂಭವಾದವು. ಭಾಷಾವಿಜ್ಞಾನದ ಹಿರಿಯಜ್ಜ, ಬ್ರಿಟಿಷ್‌ ಭಾಷಾತಜ್ಞ ಡೇವಿಡ್‌ ಕ್ರಿಸ್ಟಲ್‌, ೨೦೦೧ರಲ್ಲಿ ‘ಲ್ಯಾಂಗ್ವೆಜ್‌ ಅಂಡ್‌ ದಿ ಇಂಟರ್ನೆಟ್‌’ ಎಂಬ ಕೃತಿಯಲ್ಲಿ ಬಹುಶಃ ಪ್ರಪ್ರಥಮವಾಗಿ ಸಾಕಷ್ಟು ವಿಸ್ತಾರವಾಗಿ ಅಂತರ್ಜಾಲವೆಂಬ ಮಾಯಾಜಾಲದ ದೆಸೆಯಿಂಧ ಭಾಷೆಯಲ್ಲಿ ಕಂಡುಬರುತ್ತಿರುವ ವಿಶಿಷ್ಟ ಲಕ್ಷಣಗಳು, ಭಾಷೆಯನ್ನು ಬಳಸುವಲ್ಲಿ ಅವುಗಳ ಬಳಕೆದಾರರ ವಿಭಿನ್ನ ದೃಷ್ಟಿಕೋನ, ಬದಲಾಗುತ್ತಿರುವ ಭಾಷೆಯ ಸ್ವರೂಪ ಹಾಗೂ ಸಂವಹನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಗಣಕ ಪ್ರಪಂಚದ ವಿವಿಧ ವಾಹಕಗಳನ್ನು ಕುರಿತಾದ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ. ಅವರು ಅಂತರ್ಜಾಲವನ್ನು ಕೇವಲ ತಂತ್ರಜ್ಞಾನದ ಕ್ರಾಂತಿಯಲ್ಲ ಬದಲಿಗೆ ಒಂದು ಸಾಮಾಜಿಕ ಕ್ರಾಂತಿಯೆಂದು ಕರೆಯುತ್ತಾರೆ. ಈ ಸಂವಹನ ಮಾಧ್ಯಮದ ನೂತನ ಸಾಧ್ಯತೆಗಳು ಮತ್ತು ಮಿತಿಗಳನ್ನು ವಿಶಾಲಾರ್ಥದಲ್ಲಿ ನೋಡುವ ಪ್ರಯತ್ನವನ್ನು ಮಾಡಿದ್ದಾರೆ. ಇದೊಂದು ಕೇವಲ ಲಿಪಿಸಂಬಂಧಿತ ವಿಚಾರವಲ್ಲ ಎಂಬುದನ್ನೂ ಕ್ರಿಸ್ಟಲ್‌ ಸಮರ್ಥಿಸಿಕೊಂಡಿದ್ದಾರೆ. ಅವರು ಈ – ಭಾಷೆಯನ್ನು ‘ನೆಟ್‌ಸ್ಪೀಕ್‌’ ಎಂಬ ಹೊಸ ಹೆಸರಿನೊಂದಿಗೆ ಕರೆದಿರುವುದೇ ಇದಕ್ಕೆ ಸಾಕ್ಷಿ. ಮಾತು ಮತ್ತು ಲಿಪಿಯ ಜೊತೆ ಈ – ಭಾಷೆಯನ್ನು ಹೋಲಿಸಿ ನೋಡುವ ಪ್ರಯತ್ನವನ್ನೂ ಮಾಡಿ, ಅದನ್ನು ‘ಒಂದು ಅಪ್ಪಟ ಭಾಷಾ ತಳಿ’ ಎಂದು ಕರೆಯುತ್ತಾರೆ.

ಸಲೋನಿ ಪ್ರಿಯ (೨೦೦೮) ಸಂಪಾದಿಸಿರುವ ‘ನೆಟ್‌ಲಿಂಗೋ – ದ ಮೆಟಮಾರ್ಪಸಿಸ್‌ ಆಫ್‌ ಲ್ಯಾಂಗ್ವಿಜ್‌’ ಎಂಬ ಕೃತಿಯು ಅಂತರ್ಜಾಲದಲ್ಲಿ ಬಳಸಲಾದ ಭಾಷೆಯನ್ನು ಕುರಿತು ಇರುವ ಜನಪ್ರಿಯ ಅಭಿಪ್ರಾಯಗಳಿಗೆ ಸಂಶೋಧನೆಯ ಒರೆ ಹಚ್ಚಿ ನೋಡಿರುವ ವಿವಿಧ ತಜ್ಞರ ಲೇಖನಗಳನ್ನು ಒಳಗೊಂಢಿದೆ. ಈ – ಭಾಷೆಯ ಅಸಾಂಪ್ರದಾಯಿಕ ಕಾಗುಣಿತಗಳು, ಮೊದಲಕ್ಕರಿಗಳು, ಬಹುಭಾಷಿತ್ವ, ಶೈಕ್ಷಣಿಕ ಪತ್ರಗಳ ಮೇಲಿನ ಪ್ರಭಾವ, ಬ್ಲಾಗ್‌ಗಳನ್ನು ಬಳಸಿ ಭಾಷೆಯನ್ನು ಕಲಿಸುವ ವಿಧಾನಗಳು, ಈ – ಭಾಷೆಯ ಪ್ರಭಾವಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ಭಾಷೆಯ ವಿಶ್ಲೇಷಣೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಲೇಖಕರ ಬರಹಗಳು ಈ ಕೃತಿಯಲ್ಲಿವೆ.

ನವೋಮಿ ಬ್ಯಾರನ್‌ (೨೦೦೮) ತಮ್ಮ ‘ಆಲ್ವೇಸ್‌ ಆನ್‌: ಲ್ಯಾಂಗ್ವಿಜ್‌ ಇನ್‌ ಅನ್‌ ಆನ್‌ಲೈನ್‌ ಅಂಡ್‌ ಮೊಬೈಲ್‌ ವರ್ಲ್ಡ್’ ಎಂಬ ಕೃತಿಯಲ್ಲಿ ಭಾಷೆಯಲ್ಲಿ ಬದಲಾವಣೆ ತರುತ್ತಿರುವ ಯುವಜನರ ಮನೋಭಾವವನ್ನು ಕುರಿತು ಚರ್ಚಿಸಲಾಗಿದೆ. ಅವರದ್ದು ‘ವಾಟೆವರ್’(ಏನೋ ಒಂದು) ಎಂಬ ಭಾವ ಎಂದು ಆಕೆ ಹೇಳುತ್ತಾರೆ. ಈ ಪೀಳಿಗೆಗೆ ಸರಿಯಾದ ಭಾಷೆ ಅಂದರೆ ಕಾಗುಣಿತ, ಉಚ್ಛಾರ ಅಥವಾ ವ್ಯಾಕರಣದ ಬಗ್ಗೆ ಯಾವುದೇ ಗಮನವಿಲ್ಲ ಎಂಬುದನ್ನು ಅವರು ಉದಾಹರಣೆಗಳೊಂದಿಗೆ ವಿಶ್ಲೇಷಿಸುತ್ತಾರೆ.

ಡೇವಿಡ್‌ ಕ್ರಿಸ್ಟಲ್‌(೨೦೦೮) ಅವರೇ ‘ಟೆಕ್ಸ್ಟಿಂಗ್‌:ದ ಗ್ರೇಟ್‌ ಡಿಬೇಟ್‌’ ಕೃತಿಯಲ್ಲಿ ಮೊಬೈಲ್‌ ಫೋನ್‌ಗಳಲ್ಲಿ ಬಳಸಲಾಗುವ ಕಿರುಸಂದೇಶಗಳ ಮೂಲ, ಬೆಳವಣಿಗೆ, ವೈಚಿತ್ಯ್ರ, ಬಳಕೆದಾರರು, ವಸ್ತು, ಸಾಂಕೇತಿಕ ಭಾಷೆ, ಬಹುಭಾಷಿತ್ವ ಹಾಗೂ ಶಿಕ್ಷಕರ ಮತ್ತು ಪೋಷಕರ ಧಾವಂತಗಳನ್ನು ಕುರಿತಾದ ಹಲವಾರು ಸಂಗತ ವಿಚಾರಗಳ ಕುರಿತಾದ ಆಸಕ್ತಿದಾಯಕ ಚರ್ಚೆಯನ್ನು ನಡೆಸಿದ್ದಾರೆ. ಇಲ್ಲಿ ಬಳಸಲಾಗುವ ಸಂಕ್ಷಿಪ್ತ ರೂಪಗಳು ಈ – ಭಾಷೆಯಿಂದಲೇ ಹುಟ್ಟಿದವನೇನೂ ಅಲ್ಲ ಬದಲಿಗೆ ಈಗ್ಗೆ ೫೦ ವರ್ಷಗಳ ಹಿಂದೆಯೇ ಪ್ರಚಲಿತವಿದ್ದಂಥವು. ಅವುಗಳ ಬಳಕೆ ವಿದ್ಯುನ್ಮಾನ ಮಾಧ್ಯಮದ ಬಳಕೆಯಿಂದ ಪ್ರಚಲಿತವಾಗಿವೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಕ್ಯಾರೊಲಿನ್‌ ಟ್ಯಾಗ್‌(೨೦೦೯)ರವರು ‘ಎ ಕಾರ್ಪಸ್‌ ಲಿಂಗ್ವಿಸ್ಟಿಕ್‌ ಸ್ಟಡಿ ಆಫ್‌ ಎಸೆಮಸ್‌ ಟೆಕ್ಸ್ಟಿಂಗ್‌’ ಎಂಬ ವಿಷಯವನ್ನು ಕುರಿತು ಡಾಕ್ಟರೇಟ್‌ ಮಹಾಪ್ರಬಂಧವನ್ನು ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪದವಿ ಪಡೆದಿದ್ದಾರೆ. ವಿಶಿಷ್ಟವಾದ ಪದಪ್ರಯೋಗಗಳು, ಅವುಗಳ ಹಿಂದಿನ ತರ್ಕ, ಲಕ್ಷಣಗಳ ಪುನರಾವರ್ತನೆ, ಸೃಜನಶೀಲತೆ, ನುಡಿಗಟ್ಟುಗಳ ವಿಶೇಷ ಬಳಕೆ, ಮುಂತಾದವುಗಳನ್ನು ೧೧,೦೦೦ ಎಸೆಮೆಸ್‌ಗಳನ್ನಿಟ್ಟುಕೊಂಡು ಅಧ್ಯಯನ ಮಾಡಿರುತ್ತಾರೆ. ಎಸೆಮೆಸ್‌ಗಳಲ್ಲಿನ ಮರುಕಾಗುಣಿತಗಳನ್ನು ತಿದ್ದಿ ಸರಿಮಾಡಿದರೆ, ಅಲ್ಲಿಯ ಮುಖ್ಯ ಲಕ್ಷಣವದ ಅನೌಪಚಾರಿಕತೆ ಮಾಯವಾಗುತ್ತದೆ, ಹಾಗಾಗಿ ಅವನ್ನು ಹಾಗೇ ಬಿಡಬೇಕೆಂದು ಅಭಿಪ್ರಾಯಪಡಲಾಗಿದೆ.

ನವೀನ್‌ ಕುಮಾರ್ ಎಚ್‌.ಸಿ.(೨೦೧೦) ತಮ್ಮ ‘ಎ ಲಿಂಗ್ವಿಸ್ಟಿಕ್‌ ಅಪ್ರೋಚ್‌ ಟು ಈ – ಇಂಗ್ಲಿಷ್‌’ ಎಂಬ ಮಹಾಪ್ರಬಂಧದಲ್ಲಿ ಭಾರತೀಯ ಮೂಲದ ಈ – ಇಂಗ್ಲಿಷ್‌ ಬಳಕೆದಾರರು ಭಾಷೆಯಲ್ಲಿ ತಂದಿರುವ ಬದಲಾವಣೆಗಳ ವಿಶ್ಲೇಷಣೆ ಮಾಡಿದ್ದಾರೆ. ಈ ಅಧ್ಯಯನಕ್ಕಾಗಿ ಸುಮರು ೪೦೦೦ ಎಸೆಮೆಸ್‌ಗಳು(ಕಿರುಸಂದೇಶಗಳು), ೨೦೦೦ ಆನ್‌ಲೈನ್‌ ಕಮ್ಯುನಿಟಿ ಸ್ಕ್ಯಾಪ್‌ಗಳು (ಅಂತರ್ಜಾಲ ಸಾಮಾಜಿಕ ಗುಂಪುಗಳ ಸಂದೇಶಗಳು), ೨೦೦ ಈಮೆಯಿಲ್‌ಗಳು(ವಿದ್ಯುನ್ಮಾನಪತ್ರಗಳು) ಮತ್ತು ೫೦ ಚಾಟ್‌ಗಳನ್ನು(ಅಂತರ್ಜಾಲ ಸಮಕಾಲಿಕ ಮಾತುಕತೆಗಳು) ಗಮನಿಸಲಾಗಿದೆ. ಈ ಕುರಿತಾದ ಈ ಹಿಂದಿನ ಅಧ್ಯಯನಗಳು ಇಂಗ್ಲಿಷನ್ನು ಮಾತೃಭಾಷೆಯಾಗಿ ಬಳಸುವವರ ಸಂದೇಶಗಳನ್ನು ಅಧ್ಯಯನ ಮಾಡಿರುತ್ತವೆ. ಆದ್ದರಿಂದ ಈ ದತ್ತಾಂಶವನ್ನು ಇಂಗ್ಲಿಷ್‌ಗೆ ಹೊರತಾದ ಅನ್ಯಭಾಷೆಯೊಂದನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಭಾರತೀಯ ಬಳಕೆದಾರರಿಂದ ಸಂಗ್ರಹಿಸಲಾಗಿದೆ. ೨೦೦೪ರಿಂದ ೨೦೧೦ರವರೆಗೆ ಈ ದತ್ತಾಂಶವನ್ನು, ಭಾಷೆಯಲ್ಲಿ ಬಹುತೇಕ ಬದಲಾವಣೆ ತರುತ್ತಿರುವವರಲ್ಲಿ ಮುಂಚೂಣಿಯಲ್ಲಿರುವ ೨೫ವರ್ಷ ದಾಟಿರದ ಯುವಕ – ಯುವತಿಯರಿಂದ ಸಂಗ್ರಹಿಸಲಾಗಿದೆ. ಮೊಬೈಲಿನಲ್ಲಿ ಅಂತರ್ಜಾಲವನ್ನು ಪಡೆಯುವ ಸೌಲಭ್ಯವಿರುವಂತೆ ಅಂತರ್ಜಾಲವನ್ನು ಬಳಸಿ ಫೋನ್‌ ಕರೆಗಳನ್ನು ಮಾಡಬಹುದಾಗಿದೆ ಹಾಗೂ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಹೀಗಾಗಿ ಎರಡೂ ಸಂಪರ್ಕ ಸಾಧನಗಳೂ ಪರಸ್ಪರ ಒಂದರೊಳಗೊಂದು ಸೇರಿ ಹೋಗಿವೆ. ಈ ಕಾರಣದಿಂದಾಗಿ ಎರಡೂ ಸಾಧನಗಳಲ್ಲಿಯೂ ಬಳಕೆಯಲ್ಲಿರುವ ಈ ಭಾಷೆಯನ್ನು ‘ಈ – ಭಾಷೆ’ಯೆಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ಅಧ್ಯಯನ ಮಾಡಲಾಗಿದೆ. ಈ – ಭಾಷೆಯು ಬರವಣಿಗೆಯೂ ಅಲ್ಲದ, ಮಾತೂ ಅಲ್ಲದ ವಿಶಿಷ್ಟ ಭಾಷಾಪ್ರಕಾರವೆಂದು ಗ್ರಹಿಸಲಾಗಿದೆ. ಸಂಕ್ಷಿಪತೆ ಮತ್ತು ಅನೌಪಚಾರಿಕತೆ ಈ ಭಾಷೆಯ ಮುಖ್ಯ ಲಕ್ಷಣಗಳಾಗಿವೆ. ಇಂಗ್ಲಿಷನ್ನು ಮಾತೃಭಾಷೆಯಾಗಿ ಉಪಯೋಗುಸುತ್ತಿರುವವರು ಉಪಯೋಗಿಸುವ ಸಂಕ್ಷೇಪಗಳಿಗೂ, ಸಂಕೇತಗಳಿಗೂ, ಭಾರತೀಯರು ಬಳಸುತ್ತಿರುವ ವಿವಿಧ ರೂಪಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಲಾಗಿದೆ.

ಈ ಮೇಲಿನ ಕೃತಿಗಳೆಲ್ಲವೂ ಈ – ಭಾಷೆಯನ್ನು ವಿಮರ್ಶಾತ್ಮಕವಾಗಿ ನೋಡಿದರೆ, ವಿಲ್ಟನ್‌(೨೦೦೫) ಅವರ ‘ಟ್ಯ್ರಾನ್ಸ್‌ಲೇಟ್‌! ಡಿಕ್ಷನರಿ ಅಂಡ್‌ ಗ್ಲಾಸರಿ: ಯೋರ್ ಕಂಪ್ಲೀಟ್‌ ಗೈಡ್‌ ಟು ಆನ್‌ಲೈನ್‌ ಚ್ಯಾಟ್‌ ಅಂಡ್‌ ಎಸೆಮೆಸ್‌ ಟೆಕ್ಸ್ಟ್‌ ಲಿಂಗೋ’ ಎಂಬ ಕೃತಿಯು ಇಲ್ಲಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು; ಅನುಮಾನ, ಗೊಂದಲಗಳನ್ನು ಪರಿಹರಿಸಿಕೊಳ್ಳಲು; ಹೊಸ ಪದಗುಚ್ಛಗಳನ್ನು ಅರ್ಥ ಮಾಡಿಕೊಳ್ಳಲು, ಸಂಕೇತಗಳನ್ನು, ಭಾವನಾತ್ಮಕ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿ ಯಾಹೂ ಮೆಸೆಂಜರ್ ನಲ್ಲಿ ಉಪಯೋಗಿಸಲಾಗುವ ಚಿಹ್ನೆ ಮತ್ತು ವಿಶೇಷ ಕಾಗುಣಿತವನ್ನು ಪರಿಚಯಿಸುವ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವಲ್ಲದೇ ಹಲವಾರು ವಿದ್ಯುನ್ಮಾನ ಪುಟಗಳಲ್ಲಿ ಸಂಕ್ಷಿಪ್ತ ರೂಪಗಳನ್ನೂ, ಭಾವನಾತ್ಮಕ ಚಿಹ್ನೆಗಳನ್ನೂ ಪರಿಚಯಿಸುವ ಹಲವಾರು ವೆಬ್‌ಸೈಟ್‌ಗಳಿವೆ. ಇನ್ನು ಸಂವಹನ ಕೌಶಲ್ಯಗಳನ್ನು ಕಲಿಕಸುವ ವೃತ್ತಿಪರ ತರಗತಿಗಳಲ್ಲಿ ವಿದ್ಯುನ್ಮಾನ ಪತ್ರಗಳನ್ನು ಬರೆಯುವುದು ಹೇಗೆ ಎಂದು ತಿಳಿಸಿಕೊಡುವ ವಿಶೇಷ ಅಧ್ಯಾಯಗಳು ಕಡ್ಡಾಯವಾಗಿ ಇರತೊಡಗಿವೆ. ಇವು ಈ – ಭಾಷೆ ಇಲ್ಲಿರಲೆಂದೇ ಕಾಲಿಟ್ಟಿರುವ ಎಲ್ಲ ಸೂಚನೆಗಳನ್ನು ತೋರುತ್ತಿದೆ.

‘ಈ – ಭಾಷೆ’ಯೆಂಬುದು ವಿದ್ಯುನ್ಮಾನ ಸಂಪರ್ಕದಲ್ಲಿ ಬಳಸಬಹುದಾದ ಯಾವುದೇ ಭಾಷೆಯಾಗಬಹುದಾದರೂ ಈ ಮಾಧ್ಯಮದಲ್ಲಿ ಇಂಗ್ಲಿಷಿನ ಬಳಕೆ ತುಲನಾತ್ಮಕವಾಗಿ ಹೆಚ್ಚಾಗಿಯೇ ಇದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬಳಕೆದಾರರ ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ವಿಶ್ವದಾದ್ಯಂತ ಹರಡಿಕೊಂಡಿರುವ ಭಾಷೆಯೆಂರೆ ಇಂಗ್ಲಿಷ್‌. ಬೇರೆಯ ಭಾಷೆಗಳು ಇಂಗ್ಲಿಷ್‌ನಷ್ಟು ಜನಪ್ರಿಯವಾಗಲು, ವ್ಯಾಪಕವಾಗಿ ಬಳಕೆಯಾಗಲು ಜಾರಿಗೆ ತರಲು ಹಲವು ಪ್ರಯತ್ನಗಳು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಏಷ್ಯಾ ಖಂಡದಲ್ಲಿ ನಿರಂತರವಾಗಿ ನಡೆಯುತ್ತಿವೆ. ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್‌, ಇಂಗ್ಲಿಷ್‌ ಗೊತ್ತಿರದ ಜನರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಚೈನಾ ಹಾಗೂ ರಾಷ್ಟ್ರೀಯ ಭಾಷೆ ಮತ್ತು ಸ್ಥಳೀಯ ಭಾಷೆಗಳ ಜೊತೆ ವೈವಿಧ್ಯತೆಯಲ್ಲಿ ಏಕತೆಯ ಕಲ್ಪನೆಯನ್ನು ಹೊಂದಿರುವ ಭಾರತ, ಈ ದೇಶಗಳು ವೇಗವಾಗಿ ಬೆಳೆಯುತ್ತಿರುವ ಇಂಗ್ಲಿಷ್‌ಗೆ ಸವಾಲೊಡ್ಡುವ ಎಲ್ಲ ಲಕ್ಷಣಗಳನ್ನು ಈಗಾಗಲೇ ಈ ಕ್ಷೇತ್ರದಲ್ಲೂ ತೋರತೊಡಗಿವೆ. ಹಲವಾರು ಭಾಷೆಗಳನ್ನು ಮೊಬೈಲ್‌ಗಳಲ್ಲಿ ಹಾಗೂ ಕಂಪ್ಯೂಟರ್ ನಲ್ಲಿ ಟೈಪ್‌ ಮಾಡುವ ಸೌಲಭ್ಯಗಳಿದ್ದರೂ, ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು, ಇಂಗ್ಲಿಷ್‌ ಆರಂಭದಿಂದಲೇ ಹತ್ತಿಕ್ಕಿರುವ ರೀತಿಯನ್ನು ಮೀರಿಸಲು ಬೇರೆ ಭಾಷೆಗಳಿಗೆ ಸಾಧ್ಯವಾಗಿಲ್ಲ (ಪ್ರಿಯ:೨೦೦೭). ಯಾವ ಭಾಷೆಯಲ್ಲಿ ಎಸೆಮೆಸ್‌ ಅಥವಾ ಈ – ಮೆಯ್ಲ್‌ ಕಳಿಸಲಾಗುತ್ತಿದ್ದರೂ ಅದಕ್ಕೆ ಬಳಸಲಾಗುತ್ತಿರುವ ಮೊಬೈಲ್‌ ಅಥವಾ ಕಂಪ್ಯೂಟರ್ ಸಾಧನಗಳ ಕೀಲಿಗಳಲ್ಲಿ ಮೂಲತಃ ಇಂಗ್ಲಿಷ್‌ ಅಕ್ಷರಗಳೇ ಇರುತ್ತವೆ. ಅಲ್ಲದೇ ಈ ಕೀಲಿಗಳನ್ನು ಬಳಸಿ ಬೇರೆಯ ಭಾಷೆಯಲ್ಲಿ ಬರೆಯುವುದಕ್ಕೆ ಸಾಧನಗಳಲ್ಲಿ ವಿಶೇಷ ವ್ಯವಸ್ಥೆ ಮತ್ತು ಬಳಸುವವರಿಗೆ ವಿಶೇಷ ಜ್ಞಾನದ ಅವಶ್ಯಕತೆ ಇದೆ. ಇವು ಎಲ್ಲರಿಗೂ, ಎಲ್ಲ ಸಾಧನಗಳಲ್ಲಿಯೂ ಸುಲಭವಾಗಿ ದೊರಕದ ಕಾರಣ ಇಂಗ್ಲಿಷ್‌ ಲಿಪಿಯನ್ನೇ ಉಪಯೋಗಿಸಿ ಹಲವಾರು ಭಾಷೆಗಳಲ್ಲಿ(ಲಿಪ್ಯಂತರ) ಸಂದೇಶ ಕಳುಹಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಸಂದೇಶವನ್ನು ಪಡೆಯುವವರ ಸಾಧನಗಳಲ್ಲಿ ಸ್ಥಳೀಯ ಭಾಷೆಯ ಲಭ್ಯತೆಯ ಬಗ್ಗೆ ಸಂದೇಶ ಕಳಿಸುವವರಿಗೆ ಅರಿವಿಲ್ಲದಿದ್ದಾಗಲೂ ಇಂಗ್ಲಿಷಿನಲ್ಲಿಯೇ ಟೈಪ್‌ ಮಾಡಿ ಕಳಿಸುವುದು ಕ್ಷೇಮ ಎಂದು ಭಾವಿಸಲಾಗುತ್ತದೆ. ಎಲ್ಲ ಸಂಪರ್ಕ ಸಾಧನಗಳಲ್ಲಿ ಎಲ್ಲ ಲಿಪಿಗಳೂ ಲಭ್ಯವಿಲ್ಲದಿರುವುದು ಅದಕ್ಕೆ ಸಾಮಾನ್ಯ ಕಾರಣವಾಗಿದೆ. ಇನ್ನು ಯಾವುದೇ ಭಾಷೆಯಲ್ಲಿ ಸಂದೇಶವನ್ನು ಸೃಷ್ಟಿಸಿಯೂ, ಆ ಸಂದೇಶವನ್ನು ಬೇರೆಯ ವ್ಯಕ್ತಿಯು ತನ್ನದೇ ಭಾಷೆಯಲ್ಲಿ ಪಡೆಯುವ ಸಂಶೋಧನೆಗಳು ನಡೆದವಾದರೂ ಅವು ಅಷ್ಟು ಜನಪ್ರಿಯವಾಗಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಪ್ರಸ್ತುತ ಕೃತಿಯಲ್ಲಿ ವಿದ್ಯುನ್ಮಾನ ಸಂವಹನದಲ್ಲಿ ಬಳಸಲಾಗುತ್ತಿರುವ ಇಂಗ್ಲಿಷ್‌ ಭಾಷೆಯ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ ಹಾಗೂ ಹೆಚ್ಚಿನ ಉದಾಹರಣೆಗಳು ಇಂಗ್ಲಿಷ್‌ನಲ್ಲೇ ಇವೆ.

ಈ – ಭಾಷೆಯನ್ನು ಬರೆಯಲು ಬಳಸುವ ಸಾಧನಗಳ ದೆಸೆಯಿಂದಲೂ ಭಾಷೆ ಬದಲಾಗಿರುವ ಕೆಲ ಉದಾಹರಣಗಳುಂಟು. ಆದ್ದರಿಂದ ಆ ಸಾಧನಗಳ ಪರಿಚಯವನ್ನು ಮಾಡಿಕೊಳ್ಳೋಣ. ಸುಮಾರು ೧೮೭೦ರಿಂದಲೂ QWERTY ಕೀಲಿಮಣೆಯನ್ನು ಟೈಪ್‌ರೈಟರ್ ಗಳಲ್ಲಿ ಬಳಸಲಾಗುತ್ತಿದೆ. ಅದೇ ಮಾದರಿಯ ಕೀಲಿಮಣೆಗಳು ಕಂಪ್ಯೂಟರ್ ಕೀಲಿಮಣೆಯಲ್ಲೂ ಬಳಕೆಗೆ ಬಂದವು. DVORAK ಮಾದರಿಯ ಕೀಲಿಮಣೆಗಳು ೧೯೩೬ರಲ್ಲಿ ಚಾಲ್ತಿಗೆ ಬಂದು, QWERTY ಕೀಲಿಮಣೆಗಿಂತ ಹೆಚ್ಚು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದು, ಕಂಪ್ಯೂಟರ್ ಯುಗಕ್ಕೆ ಅದು ಹೆಚ್ಚು ಸೂಕ್ತ ಎಂಬ ಮಾತುಗಳಿದ್ದರೂ DVORAK ಮಾದರಿಯು ಹೆಚ್ಚು ಜನಪ್ರಿಯವಾಗಲಿಲ್ಲ. ಹಾಗಿದ್ದೂ ಎಲ್ಲ ಆಪರೇಟಿಂಗ್‌ ಸಿಸ್ಟಂ ನೀಡುವ ಕಂಪನಿಗಳ ಕಂಪ್ಯೂಟರ್ ಗಳಲ್ಲಿಯೂ ಎರಡೂ ಮಾದರಿಗಳು ಲಭ್ಯವಿವೆ. ಇದಕ್ಕೆ ಬಹುಶಃ QWERTY ಮಾದರಿಯಲ್ಲಿ ಟೈಪಿಂಗ್‌ ಕಲಿಸುವ ಶಾಲೆಗಳೂ, ಕಂಪ್ಯೂಟರ್ ನಲ್ಲಿ ಟೈಪಿಂಗ್‌ ಕಲಿಸುವ ಟೈಪಿಂಗ್‌ ಟ್ಯೂಟರ್ ಗಳೂ ಕಾರಣವಿರಬಹುದು. ಟೈಪಿಂಗ್‌ನ ಪರಿಚಯವಿರುವ ಬಳಕೆದಾರರು ಒಮ್ಮೆ ಹೋಂ ಕೀಲಿಗಳ ಮೇಲೆ ಬೆರಳುಗಳನ್ನಿಟ್ಟುಕೊಂಡ ನಂತರ ಸಾಮಾನ್ಯವಾಗಿ ಮತ್ತೆ ಮತ್ತೆ ಕೀಲಿಮಣೆಯತ್ತ ನೋಡುವುದಿಲ್ಲ. ಆದರೆ ಟೈಪಿಂಗ್‌ನ ಪರಿಚಯವಿರದವರು ಅಕ್ಷರಗಳನ್ನು ಹುಡುಕಿ ಹುಡುಕಿ, ತೋರುಬೆರಳುಗಳನ್ನು ಹೆಚ್ಚು ಉಪಯೋಗಿಸಿ ಟೈಪ್‌ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೈಪಿಂಗ್‌ ತರಗತಿಗಳಿಗಿಂತ ಕಂಪ್ಯೂಟರ್ ತರಗತಿಗಳು ಹೆಚ್ಚು ಪ್ರಚಲಿತವಾಗಿದ್ದು ಅಕ್ಷರಗಳನ್ನು ಹುಡುಕಿ ಟೈಪ್‌ ಮಾಡುವವರ ಸಂಖ್ಯೆ ಹೆಚ್ಚಿದಂತೆ, ಸಂಕ್ಷಿಪ್ತ ರೂಪಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗಿದೆ. ಟೈಪಿಂಗ್‌ ಗೊತ್ತಿರುವವರಿಗೆ ಸಂಕ್ಷಿಪ್ತ ರೂಪಗಳನ್ನು ಯೋಚಿಸುವ ಮುಂಚೆಯೇ ಬೆರಳುಗಳೇ ಪೂರ್ಣ ಪದಗಳನ್ನು ಹೊಮ್ಮಿಸಿರುತ್ತವೆ. ಇನ್ನು ನಿಮಿಷಕ್ಕೆ ೪೫ ಪದಗಳನ್ನು ಟೈಪ್‌ ಮಾಡುವುದನ್ನು ಟೈಪ್‌ರೈಟರ್ ಗಳ ಕಾಲದಲ್ಲಿ ಪರಿಣತಿಯೆಂದು ಪರಿಗಣಿಸುತ್ತಿದ್ದರೆ, ಕಂಪ್ಯೂಟರ್ ಯುಗದಲ್ಲಿ ಸಾಫ್ಟ್ ವೇರ್ ಅಭಿಯಂತರರ ಕೌಶಲ್ಯವನ್ನು ಅಳೆಯುವುದು ಅದೆಷ್ಟು ಕಡಿಮೆ ಪದಗಳಲ್ಲಿ ಅವರು ತಮ್ಮ ಪ್ರೋಗ್ರಾಮ್‌ಗಳನ್ನು ಬರೆಯುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಹಾಗಾಗಿ ‘ಎಷ್ಟು ವೇಗವಾಗಿ’ ಎನ್ನುವುದಕ್ಕಿಂತ, ‘ಎಷ್ಟು ಕಡಿಮೆ ಪದಗಳಲ್ಲಿ’ ಎನ್ನುವುದು ಆ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತವಿದೆ. ಅದೇ ಅವರ ಅನೌಪಚಾರಿಕ ಸಂವಹನಕ್ಕೂ ಬಂದಿರಬಹುದು.