ಮೊಬೈಲಿನ ಕೀಲಿಪಟದಲ್ಲಿ ಸೊನ್ನೆಯೂ ಸೇರಿದಂತೆ ೧ರಿಂದ ೯ರವರೆಗಿನ ಕೀಲಿಗಳ ಜೊತೆ * ಮತ್ತು # ಕೀಲಿಗಳು ಸಾಮಾನ್ಯವಾಗಿ ಎಲ್ಲ ಸರಳ ಮೊಬೈಲ್‌ ದೂರವಾಣಿಗಳಲ್ಲಿರುತ್ತವೆ. ಇನ್ನು ಯಾವುದೇ ಭಾಷೆಯ ಅಕ್ಷರಗಳು ಸೊನ್ನೆಯೂ ಸೇರಿದಂತೆ ೨ ರಿಂದ ೯ರವರೆಗಿನ ಕೀಲಿಗಳಲ್ಲೇ ಇರುತ್ತದೆ. ಇರುವ ಕೀಲಿಗಳೇ ೧೨ ಆಗಿರುವಾಗ ಯಾವ ಭಾಷೆಯಲ್ಲಿ ಅದೆಷ್ಟೇ ಅಕ್ಷರಗಳಿದ್ದರೂ ಅವೆಲ್ಲವೂ ಅಲ್ಲದೇ ಎಲ್ಲ ಮೂಲಭೂತ ಸಂಕೇತಗಳೂ, ವಿರಾಮಚಿಹ್ನೆಗಳು ಇಷ್ಟೇ ಕೀಲಿಗಳಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಕಿರುಸಂದೇಶಗಳನ್ನು ಕಳಿಸುವಾಗ ಒಂದೇ ಕೀಲಿಯನ್ನು ಮತ್ತೆ ಮತ್ತೆ ಒತ್ತಿ ಬೇರೆಬೇರೆ ಅಕ್ಷರಗಳನ್ನು ಪಡೆಯಬೇಕಾಗುತ್ತದೆ. ಟಿ – ೯ ನಿಘಂಟಿನ ಬಗ್ಗೆ ಈಗಾಗಲೇ ಹೇಳಲಾಗಿದೆ.

ತೀರಾ ಇತ್ತೀಚಿನ ದಿನಗಳಲ್ಲಿ ಇದೇ ಕಿಘಿಖಖಿಙ ಮಾದರಿಯ ಕೀಲಿಗಳೇ ಮೊಬೈಲುಗಳಲ್ಲೂ ಬರಲಾರಂಭಿಸಿವೆ. ಎಲ್ಲ ಬೆರಳುಗಳನ್ನೂ ಈ ಕೀಲಿಪಟದ ಮೇಲೆ ಆಡಿಸಲು ಸಾಧ್ಯವಾಗದಿದ್ದರೂ ಯಾವ ಕೀಲಿ ಎಲ್ಲಿದೆ ಎಂಬುದಂತೂ ಟೈಪಿಂಗ್‌ ಪರಿಚಯವಿದ್ದವರಿಗೆ ಗೊತ್ತೇ ಇರುತ್ತದೆ.

ಮಾಹಿತಿ ತಂತ್ರಜ್ಞಾನದ ಕಾರಣದಿಂದಾಗಿ ಕಂಡುಬಂದ ಭಾಷೆಯಲ್ಲಿನ ಕೆಲವು ವಿಶೇಷ ಲಕ್ಷಣಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಸಂವಹನವು ಸಾಂಪ್ರದಾಯಿಕ ಭಾಷೆಯನ್ನು ಬಳಸಿಲ್ಲವೆಂದ ಮಾತ್ರಕ್ಕೆ ಅವು ತಪ್ಪುಗಳೆಂದು ಹಣೆಪಟ್ಟಿ ಕಟ್ಟುವುದರಿಂದ ನಮ್ಮ ಗ್ರಹಿಕೆ ಸೀಮಿತವಾಗುತ್ತದೆ ಎಂಬ ಕಾರಣಕ್ಕೆ ಇವುಗಳನ್ನು ತಪ್ಪುಗಳೆಂದು ಕರೆಯದೆ ‘ಬದಲಾವಣೆ’/ವ್ಯತ್ಯಯ’ಗಳೆಂದು ಪರಿಗಣಿಸಲಾಗಿದೆ. ಅಂಥ ಈ – ಭಾಷೆಯ ಕೆಲವು ಮುಖ್ಯಲಕ್ಷಣಗಳನ್ನು, ಅವುಗಳ ಭಿನ್ನತೆಯನ್ನೂ, ಸಾಧ್ಯವಿರುವ ಕಾರಣಗಳನ್ನೂ ವಿವರವಾಗಿ ಈ ಕೆಳಗೆ ಪರಿಚಯಿಸಲಾಗಿದೆ:

. ಸಂಕ್ಷಿಪ್ತತೆ: ಪ್ರಚಲಿತವಲ್ಲದ, ರೂಢಿಗತ ರೂಪದಲ್ಲಿಲ್ಲದ, ಬಹುರೂಪಗಳಲ್ಲಿರುವ ಹಲವಾರು ಸಂಕ್ಷಿಪ್ತ ರೂಪಗಳನ್ನು ಈ – ಭಾಷೆಯಲ್ಲಿ ಬಳಸಲಾಗುತ್ತಿದೆ. ಅವು ಸಂಪರ್ಕದಲ್ಲಿ ಇರುವ ಇಬ್ಬರಿಗೂ ಅರ್ಥವಾಗುತ್ತವಾದರೂ ಬೇರೆಯವರಿಗೆ ಅವು ಅರ್ಥವಾಗುವುದು ಅಷ್ಟು ಸುಲಭವಲ್ಲ. ಸಂಕ್ಷೇಪಿಸಿದ ಭಾಷೆಯನ್ನು ಸಾಮಾನ್ಯವಾಗಿ ‘ಎಸೆಮೆಸ್‌ ಭಾಷೆ’ಯೆಂದು ಕರೆಯಲು ಕೂಡ ಪ್ರಾರಂಭಿಸಲಾಗಿದೆಯೆಂದರೆ, ಆ ರೂಪಗಳ ವ್ಯಾಪಕತೆ ಅರ್ಥವಾಗುತ್ತದೆ. `tnq.. by.. cu..I’l brb..’ ಎನ್ನುವುದು `Thank you… bye… see you… I will be right back’ ಎಂಬ ವಿಸ್ತಾರವಾದ ಸಂದೇಶವೆಂದು ಗ್ರಹಿಸುವುದು ಈ ಭಾಷೆಗೆ ಹೊಸಬರಾಗಿರುವವರಿಗೆ ಕಷ್ಟವಾಗುತ್ತದೆ. ಅವರಿಗೆ ಇವು ಏನೂ ಅರ್ಥವಾಗದ ಗುಪ್ತ ಸಂಕೇತಗಳಂತೆ ಕಾಣುತ್ತವೆ. ಆದರೂ ಈ – ಭಾಷೆಯಲ್ಲಿ ಮುಖ್ಯ ಬದಲಾವಣೆಗಳನ್ನು ತರುತ್ತಿರುವ ಯುವಜನಾಂಗಕ್ಕೆ ಇದೊಂದು ಸಮಸ್ಯೆಯಾಗಿಯೇ ಕಾಣುವುದಿಲ್ಲ. ಅವರು `2b r 02 b izd?’ ಎಂಬುದನ್ನು ಶೇಕ್ಸ್‌ಪಿಯರನ ಪ್ರಸಿದ್ಧ ಸಾಲಾದ “To be or not to be is the question” ಎಂದು ಬದಲಿಸಿ ಬಳಸಿದ ಉದಾಹರಣೆಯುಂಟು. ಮೇಲ್ನೋಟಕ್ಕೆ `you ‘ ಪದಕ್ಕೆ `u’ ಎಂದೋ, `night’ ಎಂಬುದಕ್ಕೆ `n8′ ಎಂದೋ ಉಪಯೋಗಿಸುವುದು ಸರಳವೆಂದು ಕಂಡರೂ ಅವನ್ನು ಸೃಷ್ಟಿಸುವವರ ಮನದಲ್ಲಿ ಒಂದು ನಿಗದಿತ ತಂತ್ರ ಅವರಿಗೇ ಅರಿವಿಲ್ಲದಂತೆ ಕೆಲಸ ಮಾಡಿರುವುದು ಕಂಡುಬರುತ್ತದೆ. ಅಂಥ ಸಂಕ್ಷೇಪ ರೂಪಗಳನ್ನು ನಿಕಟ ಅಧ್ಯಯನಕ್ಕೆ ಒಳಪಡಿಸಿದಾಗ ಅವುಗಳು ಐದು ರೀತಿಯಲ್ಲಿ ಸಂಕ್ಷಿಪ್ತಗೊಂಡಿವೆ ಎಂದು ಮನಗಾಣವಾಯಿತು. ಅವೆಂದರೆ ಉಚ್ಛಾರಾಧಾರಿತ ಸಂಕ್ಷೇಪಗಳು (because ಬದಲು bcoz), ಪದದ ಒಂದು ಅಥವಾ ಎರಡೂ ಬದಿಗಳನ್ನು ತುಂಡರಿಸುವುದು (picture ಬದಲು pic), ಪದಗಳ ನಡಿವಿನ ಕೆಲಅಕ್ಷರಗಳನ್ನು ಬಿಟ್ಟುಬಿಡುವುದು (about ಬದಲು abt), ಆರಂಭಿಕ ಅಕ್ಷರಗಳನ್ನು ಮಾತ್ರ ಬಳಸುವುದು (yesterday ಬದಲು yday) ಅಥವಾ ಬದಲಿ ಅಕ್ಷರಗಳನ್ನು ಬಳಸುವುದು (tough ಬದಲು tuf). ಒಂದು ಪದವನ್ನು ಸಂಕ್ಷೇಪಿಸುವಾಗ ಅದರ ಉಚ್ಚಾರಣೆಗೆ ಅನುಗುಣವಾಗಿಯೇ ಹೊಸ ರೂಪ ಹುಟ್ಟಿಕೊಂಡಿರುವುದು ಬಹಳಷ್ಟು ಕಡೆ ಕಂಡುಬಂದಿತು. ಈ ಕುರಿತು ನಡೆಸಲಠಾದ ಅಧ್ಯಯನದಲ್ಲಿ ಇಂಥ ಉಚ್ಚಾರಣೆ ಆಧಾರಿತ ಸಂಕ್ಷಿಪ್ತ ರೂಪಗಳು ೬೦%ನಷ್ಟು ಕಂಡುಬಂದವು. ಸ್ವರಗಳನ್ನು ಸೂಚಿಸುವ ಅಕ್ಷರಗಳನ್ನೂ ಬಿಟ್ಟು ಮುಖ್ಯ ವ್ಯಂಜನಾಕ್ಷರಗಳನ್ನು ಬಳಸಿರುವುದೂ ಉಂಟು. ಉದಾಹರಣೆಗೆ people ಎಂಬುದನ್ನು ppl ಎಂದೂ, goodnight ಎಂಬುದನ್ನು gdnt ಎಂದೂ ಬಳಸಲಾಗುತ್ತಿದೆ. ಇನ್ನು ಪದಗಳನ್ನು ಸಂಕ್ಷಿಪ್ತ ರೂಪಗಳಿಗೆ ಇಳಿಸುವ ಇತರ ವಿಧಾನಗಳಲ್ಲಿ ಒಂದು ಪದದ ಉಚ್ಛಾರದಂತೆಯೇ ಇರುವ ಒಂದು ಅಂಕೆ ಅಥವಾ ಒಂದು ಅಕ್ಷರವನ್ನು ಬಳಸುವುದು. ಉದಾಹರಣೆಗೆ `are’ಗೆ ಬದಲು `r’ ಎಂದು ಬಳಸುವುದು ಅಥವಾ `for’ಗೆ ಬದಲು `4′ ಎಂದು ಬಳಸುವುದು. ಇಲ್ಲಿ ಬಳಸಲಾಗುವ ಅದೆಷ್ಟೋ ಕಾಗುಣಿತಗಳು ಅತಾರ್ಕಿಕವೆಂಬಂತೆ ತೋರುವ ಸಾಂಪ್ರದಾಯಿಕ ಕಾಗುಣಿತ ವ್ಯವಸ್ಥೆಯ ಬಗ್ಗೆ ತಮಗಿರುವ ಅಸಮಾಧಾನ ಮತ್ತು ವಿರೋಧವನ್ನು ವ್ಯಕ್ತಪಡಿಸುವಂತೆ ಕಂಡುಬರುತ್ತವೆ. `future ‘ಬದಲಿಗೆ `fuchr’ ಎಂದು ಬಳಸಿರುವುದು ಅಂಥ ಪ್ರತಿಭಟನೆಗೆ ಒಂದು ಉದಾಹರಣೆ.

ವಿವಿಧ ರೀತಿಯ ಸಂಕ್ಷೇಪಗಳು ಅದರ ಸೃಷ್ಟಿಕರ್ತನ ಸೃಜನಶೀಲತೆಯನ್ನೂ, ಕಲ್ಪನಾಶೀಲತೆಯನ್ನೂ, ಭಾಷಾ ಚಾತುರ್ಯವನ್ನೂ ಸೂಚಿಸುತ್ತವೆ. ಎಸೆಮೆಸ್‌ಗಳ ವಿಷಯದಲ್ಲಿ ಇದು ಹಣ ಉಳಿತಾಯದ ವಿಷಯವೂ ಆಗಿದೆ. ಹೇಳಬೇಕೆಂದಿದ್ದ ಎಲ್ಲದ್ದನ್ನೂ ೧೬೦ ಅಕ್ಷರ ಸಂಕೇತಗಳ ಒಂದೇ ಸಂದೇಶದೊಳಕ್ಕೆ ತುಂಬುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಸಂದೇಶ ಕಳುಹಿಸುವವರು ಮಾಡುತ್ತಾರೆ. ಒಂದು ಅಲ್ಪವಿರಾಮ ಚಿಹ್ನೆ ಹೆಚ್ಚಾದರೂ, ಆ ಸಂದೇಶ ಕಳಿಸಲು ದುಪ್ಪಟ್ಟು ಖರ್ಚಾಗುತ್ತದೆ. ಹಾಗಾಗಿ ಯಾವ ಪದದಲ್ಲಿ ಯಾವ ಅಕ್ಷರವಿಲ್ಲದಿದ್ದರೂ ಅರ್ಥವಾಗುತ್ತದೆ ಎಂದು ಹುಡುಕಿ ಹೆಚ್ಚಾದ ಅಕ್ಷರಗಳನ್ನು ತೆಗೆದುಹಾಕುತ್ತಾ ಬರುತ್ತಾರೆ ಅಥವಾ ವಾಕ್ಯಗಳಲ್ಲಿ ಕೆಲವು ಪದಗಳನ್ನೇ ತೆಗೆದುಹಾಕುತ್ತಿದ್ದಾರೆ. ಉದಾಹರಣೆಗೆ `I am riding bike’ ಎನ್ನುವುದನ್ನು `ridin’ ಎಂದು ಹೇಳಬಹುದು. ವಾಹನ ಸಂಚಾರದ ದಟ್ಟಣೆ ಇರುವಾಗ ನಿರಾತಂಕವಾಗಿ ನಿಂತು ಸಂಪೂರ್ಣ ವ್ಯಾಕರಣಬದ್ಧ ವಾಕ್ಯವನ್ನು ಬರೆಯಲು ಸಾಧ್ಯವಾಗಿರಲಿಕ್ಕಿಲ್ಲ ಆದರೆ, ಕರೆ ಮಾಡುತ್ತಿರುವ ವ್ಯಕ್ತಿಗೆ ವಿಷಯವನ್ನು ತಿಳಿಸಲೇಬೇಕೆಂದರೆ ಒಂದು ತುಂಡುಪದದಲ್ಲೇ ಹೇಳಬಹುದಲ್ಲ ಎಂದು ಈ – ಭಾಷೆಯ ಬಳಕೆದಾರರು ಯೋಚಿಸುತ್ತಾರೆ.

೨. ಲಿಪ್ಯಂತರ: ಲಿಪ್ಯಂತರ ಮಾಡಿ ಅದರಲ್ಲೂ ಯಾವುದೇ ಭಾಷೆಯನ್ನೂ ಇಂಗ್ಲಿಷ್‌ ಅಕ್ಷರಗಳನ್ನು ಬಳಸಿ ಸಂವಹಿಸುವ ಪದ್ದತಿಯು ಈ – ಭಾಷೆಯ ಮುಖ್ಯ ಲಕ್ಷಣವಾಗಿದೆ. ಇದಕ್ಕೆ ಮೂರು ಕಾರಣಗಳು ಇರಬಹುದು. ಅವರು ಬಳಸುತ್ತಿರುವ ಸಾಧನದಲ್ಲಿ ಆ ಭಾಷೆಯ ಲಭ್ಯತೆ ಇಲ್ಲದಿರಬಹುದು. ಎರಡನೆಯದಾಗಿ ಅವರು ಕಳಿಸುವ ಸಂದೇಶವನ್ನು ಪಡೆಯುವವರ ಸಾಧನದಲ್ಲಿ ಆ ಭಾಷೆಯ ಲಭ್ಯತೆ ಇಲ್ಲದೆ, ಸಂವಹನಕ್ಕೆ ಅಡಚಣೆಯಾಗಬಹುದು. ಇಂಗ್ಲಿಷ್‌ ಬಹುತೇಕ ಎಲ್ಲ ಸಾಧನಗಳಲ್ಲೂ ಸಿಗಬಹುದಾದ ಭಾಷೆಯಾಗಿರುವುದರಿಂದ, ಆ ಅಕ್ಷರಗಳನ್ನು ಬಳಸಿದಾಗ ಸಂದೇಶ ಅಂದುಕೊಂಡಂತೆ ತಲುಪುವ ಸಾಧ್ಯತೆ ಇರುತ್ತದೆ. ಮೂರನೆಯ ಕಾರಣವೆಂದರೆ, ಸಾಧನಗಳಲ್ಲಿ ಈ ಭಾಷೆಯ ಲಭ್ಯತೆಯಿದ್ದೂ ಅದನ್ನು ಬಳಸುವ ಜ್ಞಾನವಿಲ್ಲದಿದ್ದರೆ ಅವರು ಆ ಭಾಷೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದ ಲಿಪ್ಯಂತರವು ಈ – ಮಾಧ್ಯಮದಲ್ಲಿ ಜನಪ್ರಿಯವಾಗಿದೆ. ಈ – ಭಾಷೆಯ ಪರಿಚಯವಿರುವವರು ಈ ಮುಂಚೆ ತಿಳಿಸಿದಂತೆ ಇಂಗ್ಲಿಷ್‌ ಭಾಷೆಯನ್ನು ವ್ಯಾಪಕವಾಗಿ ಬಳಸುತ್ತಾರಾದರೂ ತೀರಾ ಸನಿಹದವರ ಜೊತೆ ಸಂವಹಿಸುವಾಗ ಅವರಿಗೆ ಪರಿಚಯವಿರುವ ಎರಡು ಅಥವಾ ಮೂರು ಭಾಷೆಗಳನ್ನು ಒಂದೇ ವಾಕ್ಯದಲ್ಲಿ ಉಪಯೋಗಿಸುತ್ತಾರೆ. ಅಥವಾ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಒಂದೇ ಸಂಭಾಷಣೆಯಲ್ಲಿ ಜಿಗಿಯುತ್ತಾರೆ. ನುಡಿ ಮಿಶ್ರಣ ಮತ್ತು ನುಡಿ ಜಿಗಿತದ ನಿದರ್ಶನಗಳು ಆಡುಮಾತಿನಲ್ಲಿ ಇರುವಂತೆ ಈ – ಭಾಷೆಯಲ್ಲೂ ಕಂಡುಬರುತ್ತಿವೆ. ‘ಯು ಆರ್ ಕಮಿಂಗ್‌, ಅಲ್ವಾ?’ ಎಂದು ಅಥವಾ ‘ಐ ಆಮ್‌ ನಾಟ್‌ ಅನ್‌ ಇಕ್ಸ್‌ಪರ್ಟ್. ಅಲ್ಪ ಸ್ವಲ್ಪ ಗೊತ್ತು ಅಷ್ಟೆ’ ಎಂಬಂಥ ಮಾತುಗಳು ಕಾಣಸಿಗುತ್ತವೆ. ಒಂದೇ ಬಾಷೆಯನ್ನು ಬಳಸಬೇಕೆನ್ನುವ ಬಂಧವನ್ನು ಈ – ಸಂಪರ್ಕಿಗಳು ಪಾಲಿಸುವುದು ಕಡಿಮೆ. ಇನ್ನು ಯುವ ಜನಾಂಗವು ಯಾವಭಾಷೆಯನ್ನು ಬಳಸಿದರೂ ಅವರಲ್ಲಿ ರೂಢಿಯಲ್ಲಿರುವ ಅನ್ಯಭಾಷೆಯ ಸಂಬೋಧನೆಯನ್ನೂ ತನ್ನ ತೀರಾ ಹತ್ತಿರದ ಗೆಳೆಯರಿಗಾಗಿ ಬಳಸುತ್ತಾರೆ. ಮಗಾ(ಕನ್ನಡ), ಯಾರ್(ಹಿಂದಿ), ಮಚ್ಚಾ(ತಮಿಳು) ಇತ್ಯಾದಿ ಪದಗಳನ್ನು ಇಂಗ್ಲಿಷಿನ ಜೊತೆಯಲ್ಲಿ ಬಳಸಲಾಗುತ್ತಿದೆ. ‘ಇಟ್ಸ್‌ ಗೆಟಿಂ ಲೇಟ್‌, ಯಾ(ರ್)’ ಅಥವಾ ‘ಪಿಲ್ಮ್‌ ಸೂಪರ್ ಮಗಾ!’ ಎಂಬ ಉದ್ಧರಣೆಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಎರಡು – ಮೂರು ಭಾಷೆಗಳ ಲಿಪಿಯನ್ನು ಬಳಸದಿದ್ದರೂ ಲಿಪ್ಯಂತರದಲ್ಲೇ ಬಹುಭಾಷಾ ಸಂದೇಶಗಳನ್ನು ಕಳಿಸಲಾಗುತ್ತದೆ. ಉದಾಹರಣೆ: A 6yr boy went to shop: Ondu small kodi. SK: magne ishru chikka vayasalle small sedtiya?Boy:adu nanagalla, nantammanige nanagondu king kodu. ಇಲ್ಲಿ ಮೊದಲ ವಾಕ್ಯವನ್ನು ಮಾತ್ರ ಇಂಗ್ಲಿಷಿನಲ್ಲಿ ಬಳಸಿ, ಸಂಭಾಷಣೆಯ ರೂಪದಲ್ಲಿರುವ ವಾಕ್ಯಗಳನ್ನೆಲ್ಲ ಭಾಷೆಯ ಸೊಗಡನ್ನು ಉಳಿಸಿಕೊಳ್ಳಲೋ ಎಂಬಂತೆ ಕನ್ನಡದಲ್ಲಿ ಹೇಳಲಾಗಿದೆ. ಒಂದೇ ಸಮಯದಲ್ಲಿ ಒಬ್ಬ ವ್ಯಕ್ತಿ ಬೇರೆ ಭಾಷೆಯಲ್ಲಿ ಮೂರು ಭಿನ್ನ ವ್ಯಕ್ತಿಗಳ ಜೊತೆ ಚ್ಯಾಟ್‌ ಮಾಡುವಾಗ ನುಡಿಜಿಗಿತದ ನಿದರ್ಶನವನ್ನು ನಾವು ಕಾಣುತ್ತೇವೆ. ಇದು ಅವರ ನಿಜ ಜೀವನದಲ್ಲಿಯೂ ನಡೆಯುತ್ತಿರುವುದರಿಂದ ಅದೇ ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿಯೂ ಮುಂದುವರಿಯುತ್ತದೆ.

. ಚಿಹ್ನೆಗಳ ಬಳಕೆಯಲ್ಲಿ ಹೊಸತನ: ಎಸೆಮೆಸ್‌, ಈ – ಮೆಯ್ಲ್‌, ಆನ್‌ಲೈನ್‌ ಚಾಟ್‌ ಹಾಗೂ ನೆಟ್‌ ಕಮ್ಯೂನಿಟಿಗಳಲ್ಲಿ ವ್ಯಾಕರಣದ ಹಲವು ಚಿಹ್ನೆಗಳ ಬಳಕೆಯಲ್ಲಿ ವಿವಿಧ ರೀತಿಯ ಬದಲಾವಣೆಗಳು ಕಾಣಸಿಗುತ್ತವೆ. ಇಲ್ಲಿ ಬೇಕಾದ ಮುಖ್ಯ ಚಿಹ್ನೆಗಳನ್ನು ಬಳಸದೇ ಇರುವುದು ಕಂಡುಬಂದರೆ, ಕೆಲವು ಚಿಹ್ನೆಗಳ ಅತಿಯಾದ ಬಳಕೆಯೂ ಕಂಡುಬರುತ್ತದೆ. ಕೆಲವು ಬಾರಿ ಚಿಹ್ನೆಗಳ ಬಳಕೆಯಲ್ಲಿ ಸೃಜನಶೀಲತೆ ಕಂಡು ಬಂದರೆ, ಹಲವು ಬಾರಿ ಅವುಗಳಲ್ಲಿ ಭಿನ್ನವಾದ ಹಾಗೂ ಅಸಂಪ್ರದಾಯಿಕವಾದ ಬಳಕೆಯೇ ಕಂಡು ಬರುತ್ತದೆ. ಕೆಲವು ಚಿಹ್ನೆಗಳ ಬಳಕೆಯಲ್ಲಿ ಹೊಸ ಅರ್ಥಗಳೂ ಹುಟ್ಟಿಕೊಂಡಿವೆ. ಮುಂದುವರಿಕೆಯನ್ನು ಸೂಚಿಸುವ (…) ಚಿಹ್ನೆಯು ಹಲವಾರು ಬಾರಿ ಅನವಶ್ಯಕವಾಗಿ ಬಳಕೆಯಾಗಿರುವುದು ಕಂಡುಬರುತ್ತಿದೆ. ಅದು ಸಾಮಾನ್ಯವಾಗಿ ಕೆಲವು ಸಲ ಆ ಸಂದೇಶದ ಸೃಷ್ಟಿಕರ್ತನ ಆಲೋಚನಾ ಸಮಯವನ್ನು ಸೂಚಿಸಿದರೆ ಮತ್ತೆ ಕೆಲವು ಬಾರಿ ಒಂದೇ ಸಂಭಾಷಣಾ ಸಂದರ್ಭದಲ್ಲಿ ವಿಷಯಾಂಥರ ಮಾಡಲು ಬಳಸಲಾಗಿದೆ. ಈ ಚಿಹ್ನೆಗೆ ಈಗ ಕೇವಲ ಮುಂದುವರಿಕೆಯ ಅರ್ಥವಿಲ್ಲ. ಚಿಹ್ನೆಯು ಹಲವಾರು ಬಾರಿ ಅನವಶ್ಯಕವಾಗಿ ಬಳಕೆಯಾಗಿರುವುದು ಕಂಡುಬರುತ್ತಿದೆ. ಆಗ ಟೈಪ್‌ ಮಾಡುತ್ತಿರುವವರು ಮುಂದೇನು ಹೇಳಬೇಕೆಂದು ಯೋಚಿಸುತ್ತಿರುತ್ತಾರೆ ಎಂದು ಗೊತ್ತಾಗುತ್ತದೆ. ಎಷ್ಟೋ ಸಲ ಕೇವಲ ಚಿಹ್ನೆಯನ್ನು ಒಂದು ವಾಕ್ಯದ ಬದಲಿಗೆ ಬಳಸುವ ಉದಾಹರಣೆಗಳು ಕಂಡು ಬರುತ್ತವೆ. ಅರ್ಥವಾಗದ ಯಾವುದೋ ಒಂದು ವಾಕ್ಯ ಅಥವಾ ಪದಗಳು ಅತ್ತಲಿಂದ ಕೇಳಿಬಂದಾಗ ಅದಕ್ಕೆ ಕೇವಲ ‘?’ ಒಂದು ಪ್ರತಿಕ್ರಿಯೆಯಾಗಬಹುದು. ಈಘ @ ಕೇವಲ ಬಡ್ಗಡಿ ದರವನ್ನು ಸೂಚಿಸುವ ಚಿಹ್ನೆಯಾಗಿ ಉಳಿದಿಲ್ಲ. ಅದು ಈ – ಪತ್ರಗಳ ವಿಳಾಸಗಳೆಲ್ಲವುಗಳಲ್ಲಿ ಇರಬೇಕಾದ ಜರೂರು ಚಿಹ್ನೆಯಾಗುವುದರ ಜೊತೆಗೆ ವಿಳಾಸ ಅಥವಾ ಸಮಯವನ್ನು ಸೂಚಿಸುವ ಮುಂಚೆಯೂ `at’ ಎಂಬ ಸರಳ ಅರ್ಥದಲ್ಲಿ ಬಹಳಷ್ಟು ಉಪಯೋಗವಾಗುತ್ತಿದೆ. ಒಂದು ವಿಷಯಕ್ಕೆ ಒತ್ತು ಕೊಡಲು ಇಂಗ್ಲಿಷ್‌ನಲ್ಲಿ ಟೈಪ್‌ ಮಾಡುವಾಗ ಎಲ್ಲ ಅಕ್ಷರಗಳನ್ನು ಕ್ಯಾಪಿಟಲ್‌ ಮಾಡುವುದು ಕಂಡುಬರುತ್ತವೆ. ಉದಾಹರಣೆಗೆ, `he calls me his PEST friend.’ ಇಲ್ಲಿ ಪ್ರಚಲಿತ ಬಳಕೆಯಾದ ‘ಬೆಸ್ಟ್‌’ ಎಂಬ ಪದದ ಬದಲು ತಮಾಷೆಗೆ ಬಳಸಿರುವ ‘ಪೆಸ್ಟ್‌’ ಎಂಬ ಪದದ ಪಂಚ್‌ನತ್ತ ಗಮನ ಸೆಳೆಯಲು ದೊಡ್ಡಕ್ಷರಗಳನ್ನು ಬಳಸಿರುವುದು ಸ್ಪಷ್ಟವಾಗಿದೆ. ಇದಲ್ಲದೇ ಎಲ್ಲ ಅಕ್ಷರಗಳನ್ನೂ ದೊಡ್ಡ ಅಕ್ಷರಗಳನ್ನು ಉಪಯೋಗಿಸಿ ಬರೆಯುವುದಕ್ಕೆ ಕೋಪ ಬಂದಿರುವ ಸೂಚನೆ ಅಥವಾ ಜೋರಾಗಿ ಕೂಗುತ್ತಿರುವ ಸೂಚನೆಯೆಂಬ ಅರ್ಥವೂ ಬರತೊಡಗಿದೆ. ಇನ್ನು ಸಂದೇಶದ ಎಲ್ಲ ಪದಗಳೂ ದೊಡ್ಡ ಅಕ್ಷರಗಳಿಂದ ಆರಂಭ ಮಾಡುವುದನ್ನು ಅಲಂಕಾರಿಕವಾಗಿ ಉಪಯೋಗಿಸಿರುವುದನ್ನು ನಾವು ಕಾಣುತ್ತಿದ್ದೇವೆ. ಚಿಹ್ನೆಗಳ ಅತಿಯಾದ ಬಳಕೆ ಹಾಗೂ ವೈವಿಧ್ಯತೆ ಮೊಬೈಲ್‌ ಸಾಧನಗಳಿಗಿಂತ ಕಂಪ್ಯೂಟರ್ ಬಳಸಿ ಸಾಧಿಸುವ ಸಂಪರ್ಕದಲ್ಲಿ ಕಂಡುಬರುತ್ತದೆ. ಉದಾಹರಣೆ: Heeeelllllllllllllllllllloooooooooooo Sir………OOOPPPPPsss!!!!GOOD EVENING…….Hw ru???????? ಮೇಲ್ನೋಟಕ್ಕೇ ಗೊತ್ತಾಗುವಂತೆ ಇದು ಈ ಎರಡೂ ಸಾಧನಗಳ ಕೀಲಿಮಣೆಯ ಗುಣಗಳ ಕಾರಣದಿಂದಾಗಿ ಉಂಟಾಗಿವೆ. ಕಂಪ್ಯೂಟರ್ ನಲ್ಲಿ ‘?’ ಕೀಲಿಯನ್ನು ಒತ್ತಿ ಹಿಡಿದರೆ ನಿಮ್ಮ ಮನಸ್ಸಿದ್ದಷ್ಟು ಬಾರಿ ‘???????’ ಎಂದು ಮೂಡಿಸಬಹುದು. ಆದರೆ ಕೇವಲ ಒಂದು ಪ್ರಶ್ನಾರ್ಥಕ ಚಿಹ್ನೆ(?)ಯನ್ನು ಮೂಡಿಸಲು ಹಲವಾರು ಕೀಲಿಗಳನ್ನು ಮೊಬೈಲಿನಲ್ಲಿ ಒತ್ತಬೇಕಾಗುತ್ತದೆ. ಈ ರೀತಿಯ ಬಳಕೆ ಎಲ್ಲ ಚಿಹ್ನೆಗಳೊಡನೆಯೂ ಇದೆ. ಪ್ರಸ್ತುತ ಅಧ್ಯಯನದ ಆಯ್ದ ೨೦೦ ಸಂದೇಶಗಳಲ್ಲಿ ೧೪೯೯ ಚಿಹ್ನೆಗಳಿಗೆ ಸಂಬಂಧಿಸಿದ ವ್ಯತ್ಯಯಗಳು ಗಮನಕ್ಕೆ ಬಂದವು. ಅದರಲ್ಲಿ ಸುಮಾರು ೬೩೪ ನಿದರ್ಶನಗಳಲ್ಲಿ ಬೇಕಾಗಿದ್ದ ಚಿಹ್ನೆಯನ್ನು ಉಪಯೋಗಿಸಿಲ್ಲದಿದ್ದರೆ, ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿಹ್ನೆಗಳ ಬಳಕೆಯಾಗಿರುವ ೨೯೫ ನಿದರ್ಶನಗಳು ಇದ್ದವು. ಇನ್ನು ಆರ್ಕುಟ್‌ನಂಥ ವೆಬ್‌ಪುಟಗಳಲ್ಲಿ ಯುವಕ – ಯುವತಿಯರು ತಮ್ಮ ಹೆಸರನ್ನು ತೀರಾ ವಿಶೇಷವಾಗಿ ಬರೆಯಲು ಭಿನ್ನ ಭಿನ್ನವಾದ ಸಂಕೇತಗಳನ್ನು ಬಳಸುವುದು ಕಂಡುಬರುತ್ತದೆ. ಒಮ್ಮೆಮ್ಮೆ ಅದು ಹೆಸರನ್ನು ಗುಟ್ಟಾಗಿಟ್ಟು ಹತ್ತಿರದವರಿಗೆ ಮಾತ್ರ ಗೊತ್ತುಪಡಿಸುವುದಕ್ಕಾದರೆ, ಇನ್ನೂ ಕೆಲವೊಮ್ಮೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಆಗಿರುತ್ತದೆ. ಮನೀಶ್‌ ಎನ್ನುವ ಹೆಸರು ಒ@ಟಿ!$o ಆಗಿದ್ದರೆ, ಶರ್ಮಿಲಿ ಎನ್ನುವ ಹೆಸರು ****ಒ!ಟ! ಆಗಿರುವ ಉದಾಹರಣೆಗಳಿವೆ. ಇರುವ ಚಿಹ್ನೆಗಳನ್ನೇ ಉಪಯೋಗಿಸಿ ಸೃಷ್ಟಿಸಿದ ವಿವಿಧ ತಮಾಷೆಯ ಚಿತ್ರಗಳೂ ಇಲ್ಲಿ ಕಾಣಸಿಗುತ್ತವೆ.

ಉದಾಹರಣೆಗೆ:                            ((((((( ))))))
(((( @) (@ ))))
(((((;<. – >;)))))
((((( ,__, ))))))

There should be a limit to kidding. They say this is you. You only tell, is it?

 

. ಅನೌಪಚಾರಿಕ ಸಂಭಾಷಣೆಯ ಲಕ್ಷಣಗಳು:ಈ – ಭಾಷೆಯು ಹಲವಾರು ಅನೌಪಚಾರಿಕ ಸಂದರ್ಭಗಳಲ್ಲಿ ಉಪಯೋಗಿಸಲಾಗುವುದರಿಂದ ಭಾಷೆಯ ಬಳಕೆದಾರರು ತಾವು ಮಾತನಾಡುವಗ ಉಪಯೋಗಿಸುವ ಅಶಿಷ್ಟ ಪದಗಳನ್ನು ಅಥವಾ ಪದಪುಂಜಗಳನ್ನು ಬರವಣಿಗೆಯ ರೂಪಕ್ಕಿಳಿಸುವುದನ್ನು ಕಾಣುತ್ತೇವೆ. ಭಾಷೆಯ ನಿಯಮಗಳೇನನ್ನೂ ಪಾಲಿಸಬೇಕಾದ ಅವಶ್ಯಕತೆ ಇಲ್ಲಿಲ್ಲ ಎಂದು ನಿರಾಳವಾಗಿ ಭಾಷೆಯನ್ನು ಬಳಸಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಈ – ಭಾಷೆಯಲ್ಲಿ `Do you want to come friend?’ ಎನ್ನುವುದು `wana com dud’ ಆಗಿದೆ. ಮೂಲ ಇಂಗ್ಲಿಷ್‌ ಬಳಕೆದಾರರಲ್ಲಿ ಪ್ರಚಲಿತವಿರುವ ಇಂಥ ಹಲವು ಅನೌಪಚಾರಿಕ ಸಂಭಾಷಣೆಯ ಲಕ್ಷಣಗಳು ಇಲ್ಲಿಯೂ ಜನಪ್ರಿಯವಾಗುತ್ತಿವೆ. ಈ ಅಭಿವ್ಯಕ್ತಿಯನ್ನು ಅರ್ಥ ಮಾಡಿಕೊಂಡೂ ಓದುಗರು ಅದನ್ನು ವ್ಯವಹಾರಿಕ ಭಾಷೆಯಲ್ಲಿ ಅನುಚಿತ ಎಂದೇ ಭಾವಿಸುತ್ತಾರೆ. ಇವೆಲ್ಲವೂ ಆಡು ಮಾತಿನ ಧಾಟಿಯನ್ನು ಬರಹ ರೂಪಕ್ಕೆ ತಂದಿರುವುದನ್ನು ಸೂಚಿಸುತ್ತವೆ. `because; ಎಂಬುದರ ಬದಲಾಗಿ `bcoz’ ಎಂದು ಬಳಸುವುದು ಸಾಂಪ್ರದಾಯಿಕ ಶೈಲಿಯಿಂದ ಹೊರತಾದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಅಂತರ್ಜಾಲ ಚ್ಯಾಟ್‌ಗಳಲ್ಲಿ ಭಾವಸೂಚಕಾವ್ಯಯಗಳನ್ನು (interjections) ಬಹಳಷ್ಟು ಉಪಯೋಗಿಸುವುದೂ ಉಂಟು. ಉದಾಹರಣೆ: ‘hi!!!’ `oops!’ `my god!’ `Gosh!’ `Hmm…’`well…’ ಇಂಥ ಕಾರಣಗಳಿಗಾಗಿಯೇ ಈ – ಭಾಷೆಯನ್ನು ಸಾಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಭಾಷೆಗಳ ನಡುವಿನ ಹೈಬ್ರಿಡ್‌ ಭಾಷೆ ಎಂದು ಪರಿಭಾವಿಸುವುದು. ಈ – ಭಾಷೆಯಲ್ಲಿ ತಿದ್ದುಪಡಿಗಳನ್ನು ಮಾಡಿದರೆ ಆ ಸಂವಹನದ ಜೀವಾಳವಾಗಿರುವ ಅನೌಪಚಾರಿಕತೆಯನ್ನೇ ತೊಡೆದು ಹಾಕಿದಂತಾಗಿಬಿಡುತ್ತದೆ ಎಂದು ಎಸೆಮೆಸ್‌ ಭಾಷೆಯ ಕುರಿತಾದ ಅಧ್ಯಯನದಲ್ಲಿ ಡಾಕ್ಟರೇಟ್‌ ಪಡೆದಿರುವ ಕ್ಯಾರೋಲಿನ್‌ ಟ್ಯಾಗ್‌(೨೦೦೯) ಅಭಿಪ್ರಾಯಪಡುತ್ತಾರೆ. ಗೆಳೆಯರ ನಡುವಿನ ಸಂವಹನವಾದ್ದರಿಂದ ಲಿಪಿಯನ್ನು ಬಳಸುತ್ತಿರುವ ಒಂದೇ ಕಾರಣಕ್ಕೆ ಔಪಚಾರಿಕ ಭಾಷೆಯನ್ನು ಬಳಸುವುದು ಸಹಜವಾಗಿಯೇ ಈ – ಬಳಕೆದಾರರಿಗೆ ಅಸಹಜವಾಗಿ ತೋರಿರುವುದರಲ್ಲಿ ಸಂಶಯವಿಲ್ಲ. ನನ್ನ ಸ್ನೇಹಿತರ ಜೊತೆ೪ ನಾನು ಮಾತನಾಡುವಾಗ ನನಗೆ ಬೇಕಾದ ಶೈಲಿಯಲ್ಲಿ ಮಾತನಾಡಲೂ ಬಾರದೇ? ಎಂಬುದು ಇವರ ಧೋರಣೆಯಾಗಿರುತ್ತದೆ.

. ಭಾವನಾ ಚಿಹ್ನೆಗಳು: ಇಲ್ಲಿ ಬಳಸುವ ಭಾಷೆ ಲಿಖಿತ ರೂಪದಲ್ಲಿದ್ದು ಸಂಕ್ಷಿಪ್ತವಾಗುವ ಕಾರಣ ಯಾವುದೇ ಚಿಕ್ಕ ವಾಕ್ಯ ಅಥವಾ ಪದಪುಂಜ ಯಾರಲ್ಲೇ ಆದರೂ ಗೊಂದಲ ಹುಟ್ಟಿಸುವ ಸಂಭಾವನೆ ಇರುತ್ತದೆ. ಭಾವನೆಗಳು ಉದ್ದೇಶಿತ ಅರ್ಥದಲ್ಲೇ ಸಂವಹನವಾಗದಿರಬಹುದು. ಇಂಥ ಸಂದರ್ಭಗಳಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮುಖಗಳನ್ನು ಸೃಷ್ಟಿಸಿ ಸಂವಹಿಸುವ ಹೊಸ ವಿಧಾನ ಇಲ್ಲಿ ಬಳಕೆಯಲ್ಲಿದೆ. ಉದಾಹರಣೆಗೆ, ‘ನೀನೊಬ್ಬ ಈಡಿಯಟ್‌’ಎನ್ನುವ ಬದಲು ‘ನೀನೊಬ್ಬ ಈಡಿಯಟ್‌ :)’ ಎಂದರೆ ನಿಂದನೆಯ ಕಟುತ್ವ ಕಡಿಮೆಯಾಗುತ್ತದೆ ಹಾಗೂ ಆ ಸಂದೇಶವನ್ನು ಪಡೆದ ವ್ಯಕ್ತಿ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿವರಣ ಚಿಹ್ನೆ, ಕೂಡುಗೆರೆ ಮತ್ತು ಮುಚ್ಚುವ ಆವರಣವನ್ನು ಒಟ್ಟಿಗೇ ಬಳಸಿ 🙂 ಹೀಗೆ ಕಾಣುವ ಸ್ಮೈಲಿ(ನಗುಮುಖ) ಅಥವಾ ಎಮೋಟಿಕಾನ್‌(ಭಾವನಾ ಚಿಹ್ನೆ) ಅನ್ನು ಬಳಸಲಾಗುತ್ತದೆ. ಅದರಲ್ಲೇ ತೆರೆದ ಆವರಣವನ್ನು ಬಳಸಿದರೆ ದುಃಖದ ಮುಖವಾಗುತ್ತದೆ [:-( ಅಥವಾ L]. ಇತ್ತೀಚೆಗೆ ಮೈಕ್ರೊಸಾಫ್ಟ್‌ ವರ್ಡ್‌‌ನಲ್ಲಿ ಈ ಚಿಹ್ನೆಗಳನ್ನು ಜೊತೆಯಲ್ಲಿ ಬಳಸಿದಾಗ ತಾನಾಗಿಯೇ ಮುಖವಾಗಿ ಬದಲಾಗುವುದು ಹಾಗೂ ಮೊಬೈಲುಗಳಲ್ಲಿ (…) ಹೀಗೆ ಟೈಪ್‌ ಮಾಡಿದರೆ ತಾನಾಗಿಯೇ ಮುಖವಾಗಿ, J ಅಥವಾ ಇತರ ಮುಖಗಳಾಗಿ ಬದಲಾಗುವ ವ್ಯವಸ್ಥೆಗಳೂ ಬಂದಿವೆ. ಇದು ಸ್ಮೈಲಿಗಳ ಜನಪ್ರಿಯತೆಯನ್ನು ಸೂಚಿಸುತ್ತದೆ. ನಗುವ, ಅಳುವ, ಕಿರುಚುವ, ಕಿಚಾಯಿಸುವ, ಕೋಪಿಸಿಕೊಂಡಿರುವ, ಕಣ್ಣು ಹೊಡೆಯುವ ಮುಂತಾದ ಹಲವು ಮುಖಗಳನ್ನು ವಿವಿಧ ವಿರಾಮ ಚಿಹ್ನೆಗಳು ಹಾಗೂ ಕೆಲವು ಅಕ್ಷರಗಳನ್ನು ಬಳಸಿ ಸೃಷ್ಟಿಸಲಾಗುತ್ತಿದೆ. ಜೊತೆಗೆ ಸಿದ್ಧ ಮುಖಗಳೇ ಎರಡೂ ರೀತಿಯ ಸಾಧನಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಯಾಹೂ ಸಂಸ್ಥೆಯು ತನ್ನ ಚಾಟ್‌ ಸೇವೆಯಾದ ಮೆಸೆಂಜರ್ ನಲ್ಲಿ ಹಲವಾರು ಚಲನೆಯುಳ್ಳ ಬಾವನಾಚಿಹ್ನೆಗಳನ್ನು ತನ್ನ ಗ್ರಾಹಕರಿಗಾಗಿ ಒದಗಿಸಿದೆ. ಚಿಮ್ಮಿ ಬರುತ್ತಿರುವ ಕಣ್ಣೀರ ಕೋಡಿಯನ್ನು ಕರ್ಚೀಪಿನಲ್ಲಿ ಹಿಂಡಿ ಹಾಕುವ ಮುಖದಿಂದ ಹಿಡಿದು, ಕೋಪದಿಂದ ಮುಖ ಕೆಂಪಗೆ ಮಾಡಿಕೊಂಡು ಕಿವಿಗಳಲ್ಲಿ ಹೊಗೆ ಬಿಡುತ್ತಿರುವ ಕೆಂಪು ಮುಖಗಳವರೆಗೆ ಹಲವಾರು ತಮಾಷೆಯ ಮುಖಗಳು ಇಲ್ಲಿ ಲಭ್ಯವಿವೆ. ಬರಹರೂಪದ ಸಂವಹನದಲ್ಲಿ ಗೈರಾಗಿದ್ದ ಭಾವನೆಗಳ ಅಭಿವ್ಯಕ್ತಿಗೆ ಪರ್ಯಾಯ ವಿಧಾನವೆಂಬಂತೆ ಎಮೋಟಿಕಾನ್‌ಗಳು ಹುಟ್ಟಿಕೊಂಡು ಪ್ರಚಲಿತವಾಗಿವೆ. ಈ ಭಾವನಾ ಚಿಹ್ನೆಗಳು ಟಿ – ಶರ್ಟ್‌‌ಗಳ ಮೇಲೆಯೂ, ಮಕ್ಕಳ ಆಟದ ಚೆಂಡುಗಳ ಮೇಲೆಯೂ ರಾರಾಜಿಸತೊಡಗಿರುವುದು, ಇವು ಚಲಾವಣೆಯಲ್ಲಿರಲೆಂದೇ ಬಂದಿರುವ ಲಕ್ಷಣಗಳನ್ನು ಸೂಚಿಸುತ್ತಿವೆ. ಹಲವಾರು ಅಂತರ್ಜಾಲ ತಾಣಗಳಲ್ಲಿ ಇಂಥ ಸುಮಾರು ೨೫೦ ಚಿಹ್ನೆಗಳು ಕಂಡುಬಂದರೂ, ಕೇವಲ ಮುಖ್ಯವಾದ ಹತ್ತು ಭಾವನಾಚಿಹ್ನೆಗಳು ಎಲ್ಲರಿಗೂ ಅರ್ಥವಾಗುವಂಥವಾಗಿದ್ದು ಎಲ್ಲೆಡೆ ಪ್ರಚಲಿತವಾಗಿವೆ.

. ಬದಲಾದ ವ್ಯಾಕರಣ: ಸಾಂಪ್ರದಾಯಿಕ ವ್ಯಾಕರಣವನ್ನು ಈ – ಭಾಷೆಯಲ್ಲಿ ಭಿನ್ನವಾಗಿ ಬಳಸಲಾಗುತ್ತಿದೆ. ಆಡುಮಾತಿನ ಅದೆಷ್ಟೋ ರೂಪಗಳು ಇಲ್ಲಿ ಈ – ಬರಹಕ್ಕಿಳಿದಿವೆ. ವಾಕ್ಯರಚನೆಯಲ್ಲಿ ಕೆಲ ಭಾಗಗಳನ್ನು ಲೋಪ ಮಾಡಿಯೋ, ಬದಲಿ ವಾಕ್ಯರಚನಾ ವಿಧಾನವನ್ನು ಅನುಸರಿಸಿ ಹೇಳಬೇಕಾದದ್ದನ್ನೆಲ್ಲಾ ಹೇಳಲು ಪ್ರಯತ್ನಿಸುತ್ತವೆ. ಒಂದು ವಾಕ್ಯದಲ್ಲಿ ಅರ್ಥವನ್ನು ಸಂವಹಿಸಲು ತುಂಬಾ ಅವಶ್ಯಕತೆಯಿರುವ ಭಾಗಗಳನ್ನು ಮಾತ್ರ ಬಳಸಿ ಮಿಕ್ಕವನ್ನು ಬಿಟ್ಟುಬಿಡುವ ಸಂಪ್ರದಾಯ ಕಂಡುಬರುತ್ತಿದೆ. ಜೊತೆಗೆ ಈಗಾಗಲೇ ಇದ್ದ ವಾಕ್ಯಗಳ ಸ್ವರೂಪವೂ ಬದಲಾವಣೆ ಹೊಂದುತ್ತಿದೆ. ಆಡುಮಾತಿನ ಪ್ರಚಲಿತ ಸಂಕ್ಷಿಪ್ತ ರೂಪಗಳು ಈ – ಭಾಷೆಯಲ್ಲಿ ಕಂಡುಬರತೊಡಗಿವೆ. `Did you watch the movie?’ ಬದಲಾಗಿ `watchd d movi??’ ಆಗಿದ್ದರೆ, `I have been reading it since 2007.’ ಎಂಬ ವ್ಯಾಕರಣಬದ್ಧ ನೀಳವಾಕ್ಯ `readin it sins 07′ ಎಂದು ಸ – ರ – ಳವಾಗಿದೆ. `there?’ ಎಂಬುದು `Are you there?’ ಎಂದು ಕೇಳುವ ಉದ್ದೇಶವನ್ನು ಹೊಂದಿರುತ್ತದೆ. ಇಂಗ್ಲಿಷ್‌ ವ್ಯಾಕರಣವನ್ನು ಕುರಿತು ನಡೆಸಿದ ಪ್ರಸ್ತುತ ಅಧ್ಯಯನದಲ್ಲಿ ೧೦೦ ಸಂದೇಶಗಳಲ್ಲಿ ಸುಮಾರು ೧೫೦೦ ವ್ಯಾಕರಣ ಸಂಬಂಧಿತ ವ್ಯತ್ಯಯಗಳು ಕಂಡುಬಂದವು. ವಿಸ್ತಾರವಾದ ಔಪಚಾರಿಕ ವಾಕ್ಯರಚನೆಗಳು ಇಲ್ಲಿ ಕಡಿಮೆಯಿದ್ದವೇ ಹೊರತು ಅರ್ಥವ್ಯತ್ಯಾಸವಾಗುವಂಥ ಉದಾಹರಣೆಗಳು ಅತಿ ವಿರಳವಾಗಿ ಕಂಡುಬಂದವು. ಅವು ಸಂವಹನಕ್ಕೆ ಅಡ್ಡಿಯನ್ನೇನೂ ಉಂಟುಮಾಡಿರಲಿಲ್ಲ. ಅರ್ಥವನ್ನು ಸಂವಹಿಸಲು ಬೇಕಾಗುವ ಅತಿ ಮುಖ್ಯ ಭಾಗವನ್ನು ಬಳಸಿ, ಉಪಯೋಗಿಸದೆಯೂ ಸುಲಭವಾಗಿ ಸ್ವಯಂವೇದ್ಯವಾಗುವ ಭಾಗಗಳನ್ನು ಕೈ ಬಿಡುವುದು ಇಲ್ಲಿ ಕಂಡುಬಂದಿತು. ವಾಕ್ಯವನ್ನು ಸಂದರ್ಭದಿಂದ ಪ್ರತ್ಯೇಕಿಸಿ ನೋಡಿದಾಗ ಕೆಲವು ಅಸಹಜ ಅರ್ಥಗಳು ಮೂಡಿಬರುತ್ತವಾದರೂ ಅಂಥ ಅಸಹಜತೆ ಸಾಂಪ್ರದಾಯಿಕ ವ್ಯಾಕರಣಬದ್ಧ ಸಂದರ್ಭದಲ್ಲೂ ಸಾಧ್ಯವಿದ್ದೇ ಇದೆ.

. ಕಂಪ್ಯೂಟರ್ ಹಾಗೂ ಅಂತರ್ಜಾಲದ ಅಧಿಭಾಷೆ: ಇಲ್ಲಿ ಬಳಸುವ ಅಧಿಭಾಷೆ(meta language)ಯಲ್ಲಿ ಬಹುತೇಕ ಈ ಮುಂಚೆ ನಿತ್ಯಜೀವನದಲ್ಲಿ ಬಳಸುತ್ತಿದ್ದ ಸಾಮಾನ್ಯ ಪದಗಳೇ ಇವೆ. ಉದಾ: ಇಲಿಯನ್ನು ಕಂಡು ಶಪಿಸುತ್ತಾ ಬೋನು ಇಡುತ್ತಿದ್ದವರು, ಈಗ ತಮ್ಮ ಬಳಿ ಇರುವ ವೈರ್ ಲೆಸ್‌ ಅಥವಾ ಆಪ್ಟಿಕಲ್‌ ‘ಮೌಸ್‌’ ಬಗ್ಗೆ ಬೀಗುತ್ತಿದ್ದಾರೆ. ‘ಬ್ರೌಜ್‌’ ಎಂಬ ‘ಪದಕ್ಕೆ ಪುಸ್ತಕಗಳ ಮೇಲೆ ಕಣ್ಣಾಡಿಸು’ ಎಂದಿದ್ದ ಅರ್ಥ ಈಗ ಕೇವಲ ಅಂತರ್ಜಾಲ ಪುಟಗಳಲ್ಲಿ ಹುಡುಕು ಎಂಬುದಕ್ಕೇ ಸೀಮಿತವಾಗುತ್ತಿದೆ. ಮೈಕ್ರೋಸಾಫ್ಟ್‌’ ‘ವಿಂಡೋಸ್‌’ ಮಾಹಿತಿ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ‘ಕಿಟಕಿ’ಯೇ ಆಗಿದೆ. ‘ನಿಮಗೆ ಒಳ್ಳೆಯ ನೆನಪಿನ ಶಕ್ತಿ ಇದೆ’ ಎನ್ನುವ ಜಾಗದಲ್ಲಿ ‘ನಿಮ್ದು ಒಳ್ಳೇ ಹಾರ್ಡ್‌ ಡಿಸ್ಕ್‌’ ಎನ್ನತೊಡಗಿದ್ದಾರೆ. ಹೀಗೆ ಬದಲಾದ ಸಂದರ್ಭದಲ್ಲಿ ಭಿನ್ನ ಅರ್ಥಗಳನ್ನು ಪಡೆದುಕೊಂಡಿರುವ ಹಲವು ಪದಗಳಿವೆ. ಈ ಹೊಸ ಪದಸಂಪತ್ತನ್ನು ಗಳಿಸಿರುವ ಸಾಫ್ಟ್ ವೇರ್ ಇಂಜಿನಿಯರ್ ಗಳು ಅಥವಾ ಇತರ ಕಂಪ್ಯೂಟರ್ ಬಳಕೆದಾರರು ತಮ್ಮ ನಿತ್ಯ ಜೀವನದ ಸಾಮಾನ್ಯ ಸಮದರ್ಭಗಳಲ್ಲೂ ಆ ಪದಗಳ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಪೊಲಿಸ್‌ ಪೇದ ಕಳ್ಳನನ್ನು ಹಿಡಿದು ವಿಳಾಸ ಕೇಳಿದರೆ ಅವನು ಈ – ಮೆಯ್ಲ್‌ ವಿಳಾಸ ಕೊಟ್ಟು ತಪ್ಪಿಸಿಕೊಳ್ಳುವ ವ್ಯಂಗ್ಯ ಚಿತ್ರ ಬಿಂಬಿಸುವಂತೆ, ಮಾಹಿತಿ ತಂತ್ರಜ್ಞಾನ ಮತ್ತು ಅದರ ಪಾರಿಭಾಷಿಕ ಪದಗಳು ಸಾಮಾನ್ಯ ಜನಜೀವನದ ಜೊತೆ ಬೆರೆತು ಹೋಗುತ್ತಿವೆ ಹಾಗೂ ಪದಸಂಪತ್ತಿನ ಹರವನ್ನು ಹೆಚ್ಚಿಸುತ್ತಿವೆ.

. ಸಾಗಹಾಕಿದ ಸಂದೇಶಗಳ ವಿಶೇಷತೆ: ನಮಗೆ ಬರುವ ಮೆಯ್ಲ್‌ಗಳು ಅಥವಾ ಕಿರುಸಂದೇಶಗಳು ಬಹಳಷ್ಟು ಬಾರಿ ವೈಯಕ್ತಿಕ ವಿಷಯಗಳಾಗಿರದೆ ಸಾರ್ವತ್ರಿಕ ಆಸಕ್ತಿಯ ವಿಷಯಗಳಾಗಿರುತ್ತವೆ. ಅಂಥ ಸಂದೇಶಗಳ ಸಂಕಥನ ವಿಶ್ಲೇಷಣೆ ನಮಗೆ ಸಾಮಾನ್ಯ ಸಂವಹನದಲ್ಲಿಲ್ಲದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸುತ್ತವೆ. ಅವುಗಳ ವಿಶೇಷಗಳಂತೂ ಹಲವಾರು. ನಮ್ಮ ವಿದ್ಯುನ್ಮಾನ ಅಂಚೆಪೆಟ್ಟಿಗೆ ಮತ್ತು ಮೊಬೈಲ್‌ ದೂರವಾಣಿಗೆ ಅನಾಯಾಸವಾಗಿ ಬಂದು ಬೀಳುವ ಈ ಪಾರ್ವರ್ಡೆಡ್‌ ಸಂದೇಶಗಳ ಸೃಷ್ಟಿಕರ್ತರು ಯಾರೆಂದು ಬಹಳಷ್ಟು ಬಾರಿ ಗೊತ್ತಾಗುವುದೇ ಇಲ್ಲ. ಯಾರದ್ದೋ ವಿಚಾರಗಳು, ಇನ್ನಾರದ್ದೋ ಹೆಸರಿನಲ್ಲಿ, ಇನ್ನಾರನ್ನೋ ತಲುಪಿ ಬಿಡುತ್ತವೆ. ಅಥವಾ ಯಾರ ಹೆಸರೂ ಇಲ್ಲದೇ ಎಲ್ಲರೂ ಮೆಚ್ಚಿಕೊಳ್ಳುವ ಒಂದು ಸಂದೇಶವನ್ನು ಸೃಷ್ಟಿಸಿದವರಾರೆಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಕರ್ತೃವಿಗಿಂತ ಕೃತಿಯೇ ಮುಖ್ಯವೆಂಬಂತೆ, ‘ಈ ಮೆಸೇಜ್‌ ನೋಡ್ರೋ ಎಷ್ಟ್‌ ಚೆನ್ನಾಗಿದೆ’ ಎಂದು ಹೇಳುತ್ತಾ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ಹಾಗಾಗಿ ಇವು ಒಂದು ರೀತಿ ಜಾನಪದಗೀತೆ ಹಾಗೂ ಕಥೆಗಳ ಸೃಷ್ಟಿ ಹಾಗೂ ಸಂವಹನಕ್ಕೆ ಹತ್ತಿರವಾಗಿವೆ. ಇವುಗಳ ವಸ್ತುವಂತೂ ವೈವಿಧ್ಯಮಯವಾಗಿರುತ್ತವೆ. ಅವು ಒಂದು ನಗೆಹನಿಯಿಂದ ಹಿಡಿದು, ಜೆನ್‌ ತತ್ವದವರೆಗೆ ಏನು ಬೇಕಾದರೂ ಆಗಿರಬಹುದು. ಮೆಯ್ಲ್ನ ನಲ್ಲಿ ಬರುವ ಇಂಥ ಸಂದೇಶಗಳು ಸಾಯಿಬಾಬಾನ ಒರಿಜಿನಲ್‌ ಫೋಟೋದಿಂದ ತಾಜ್‌ ಮಹಲ್‌ನ ಅಡಿಯಲ್ಲಿ ಶಿವಮಂದಿರವಿತ್ತು ಎನ್ನುವವರೆಗೆ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ನೀವು ಪಾಲಿಸಬೇಕಾಗಿರುವ ವ್ಯಾಯಾಮ ಮತ್ತು ಪಥ್ಯಗಳಿಂದ ಹಿಡಿದು ಜಪಾನಿನಲ್ಲೆಲ್ಲೋ ಶಿಶುಹತ್ಯೆ ಮಾಡಿ ಉಣಬಡಿಸುತ್ತಿರುವ, ತಿನ್ನುತ್ತಿರುವ ಫೋಟೋಗಳವರೆಗೆ ಏನೆಲ್ಲಾ ಸಿಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಇವುಗಳ ಸತ್ಯಾಸತ್ಯತೆಯ ಬಗ್ಗೆಯೂ ಯಾರಿಗೂ ಯಾವುದೇ ನಿಖರತೆ ಇರುವುದಿಲ್ಲ. ಒಮ್ಮೆಲೇ ಹಲವಾರು ಜನರಿಗೆ ಬಹಳ ಸುಲಭವಾಗಿ ಕಳಿಸಿಬಿಡಬಲ್ಲ ವಿಧಾನವೇ ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಲಕ್ಷಣವಾಗಿ ಒಮ್ಮೆಲೇ ಪರಿಣಮಿಸಿದೆ. ಇವು ತಮ್ಮ ಅಡಿಟಿಪ್ಪಣಿಯಲ್ಲಿ ‘ಇದನ್ನು ನೀವು ೧೦ ಮಂದಿಗೆ ಸಾಗಿಸಿದರೆ ನಿಮಗೆ ೫ ದಿನದಲ್ಲಿ ಶುಭವಾಗುತ್ತದೆ, ಇಲ್ಲದಿದ್ದರೆ ಅನಿಷ್ಟ ಕಟ್ಟಿಟ್ಟ ಬುತ್ತಿ ಎಂಬರ್ಥದ ನುಡಿಗಳನ್ನೂ ಒಳಗೊಂಡಿರುತ್ತವೆ.

ಒಳ್ಳೆಯ ಉಪಯುಕ್ತ ವಿಷಯಗಳ ಜೊತೆಗೆ ಇಲ್ಲಿ ಬರಬಹುದಾದ ತಪ್ಪುಗಳೂ, ವದಂತಿಗಳೂ, ಸುಳ್ಳುಗಳೂ, ಕಲ್ಪಿತ ಕಥೆಗಳೂ ಬಹಳ ಸುಲಭವಾಗಿ ಎಲ್ಲರನ್ನೂ ತಲುಪಿಬಿಡುತ್ತವೆ. ಇವುಗಳಲ್ಲಿ ನಿಮಗೆ ಲಾಟರಿ ಹೊಡೆದಿದೆ; ಅದು ದಕ್ಷಿಣ ಆಫ್ರಿಕಾದ ಯಾವುದೋ ಒಂದು ಬ್ಯಾಂಕಿನ ಅಕೌಂಟಿಗೆ ಹೋಗಬೇಕಾಗಿದೆ; ನಾನು ನಿಮ್ಮ ಪರವಾಗಿ ಬ್ಯಾಂಕ್‌ ಖಾತೆ ತೆರೆಯುತ್ತೇನೆ; ತಕ್ಷಣ ಒಂದು ಸಾವಿರ ಡಾಲರ್ ಕಳಿಸಿ, ನಂತರ ಲಾಟರಿ ಹಣವಾದ ೧೦ ಲಕ್ಷ ಡಾಲರನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಡಪಾಯಿಗಳಿಂದ ಹಣ ಕೀಳುವ ತಂತ್ರಗಳನ್ನು ಹೊಂದಿರುತ್ತವೆ. ಈ ಸಾಗಿಬಂದ ಸಂದೇಶಗಳು ಅದೆಷ್ಟು ನಿರ್ಭಾವುಕತೆಯಿಂದ ಸ್ವೀಕರಿಸಲ್ಪಡುತ್ತವೆಂದರೆ, ಅದನ್ನು ಕಳಿಸಿದವರಿಗೆ ಬಹುತೇಕ ಉತ್ತರಗಳು ಸಿಗುವುದೇ ಇಲ್ಲ. ಆ ಬಗ್ಗೆ ಸಾಗ ಹಾಕಿದವರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇವುಗಳಿಂದ ರೇಜಿಗೆ ಹೊಂದಿದವರು, ಅವುಗಳನ್ನು ಕಳಿಸಿದವರ ಹೆಸರನ್ನೋ, ಅದರ ವಿಷಯವನ್ನು ಗಮನಿಸಿದವರೇ ಹಿಂದ ಮುಂದೆ ನೋಡದೇ ಅವನ್ನು ಅಳಿಸಿಹಾಕುತ್ತಾರೆ. ಇಂಥವುಗಳಿಂದಲೇ ಹಲವಾರು ಜನರ ಒಳಪೆಟ್ಟಿಗೆಗಳು ತುಂಬಿ ಹೋಗಿರುತ್ತವೆ. ಇವುಗಳಲ್ಲಿ ಕೆಳಗೆ ಹೋಗುತ್ತಾ ಹೋಗುತ್ತಾ, ಕುತೂಹಲ ಹೆಚ್ಚಿಸಿ, ಕೊನೆಗೆ ಬೇಸ್ತು ಬೀಳಿಸುವ ತಂತ್ರಗಳನ್ನೂ ಹೊಂದಿರುತ್ತವೆ. ಉದಾಹರಣೆಗೆ

My sweet heart
My kuchiko
My darling
My chinnu
My janu
My lovely,
My heart beat,
My sweetest,
Dog is missing…
Nim mane kade bantha….?

ಹೀಗೆ, ನಮ್ಮ ಮುಖಾಮುಖಿ ಸಂವಹನಗಳಲ್ಲಿಲ್ಲದ ಹಲವಾರು ಲಕ್ಷಣಗಳು ಈ ಸಾಗಿ ಬಂದ ಸಂದೇಶಗಳಲ್ಲಿ ಕಂಡುಬರುತ್ತಿವೆ.

ಜಾಹೀರಾತು ಪ್ರಪಂಚದ ಮೇಲೆ ಭಾಷೆಯ ಪ್ರಭಾವ

ಈ – ಭಾಷೆಯ ವಿಶಿಷ್ಟ ಬದಲಾವಣೆಗಳು ಬೇರೆ ಬೇರೆ ಕ್ಷೇತ್ರಗಳಿಗೂ ಕಾಲಿಡುತ್ತಿರುವುದನ್ನು ಗಮನಿಸಬಹುದಾಗಿದೆ. ಅದರಲ್ಲಿ ಮುಖ್ಯವಾಗಿ ಯುವಗ್ರಾಹಕರನ್ನು ಸೆಳೆಯುವ ಉತ್ಪನ್ನಗಳು ಮತ್ತು ಸೇವೆಗಳ ಜಾಹೀರಾತುಗಳಲ್ಲಿ ಈ – ಭಾಷೆ ಅಥವಾ ಅದಕ್ಕೆ ಹತ್ತಿರವಾದ ಭಾಷೆ ಬಳಕೆಯಾಗುತ್ತಿದೆ. ಯುವಜನಾಂಗವನ್ನು ಆಕರ್ಷಿಸಲೆಂದು ವಿಶೇಷ ಆಫರ್ ಗಳಿರುವ ಮೊಬೈಲ್‌ ನೆಟ್‌ವರ್ಕ್‌‌ನ ಹೊಸ ಯೋಜನೆಯೊಂದಕ್ಕೆ “ಸ್ಪೈಸ್‌ Uth” ಎಂಬ ಹೆಸರಿಟ್ಟಿದ್ದರೆ, ಹೊಸ ಸಂಗಾತಿಗಳನ್ನು ಹುಡುಕಿಕೊಡುವ ಸೇವೆಗೆ “ಇಂಡಿಯಾಟೈಮ್ಸ್‌ liv2luv” ಎಂದು ಕರೆದಿದ್ದಾರೆ. ಇನ್ನು ನೋಕಿಯಾ ತನ್ನ ವಿಡಿಯೋಗೇಮ್‌ ಪ್ಯಾಕೇಜನ್ನು ಓ.ಉಂಉಇ (ಎಂಗೇಜ್‌) ಎಂದು ಕರೆದರೆ, ಪ್ಯಾನಸೋನಿಕ್‌ ತನ್ನ ಕೆಮರಾವನ್ನು e.cam ಎಂದು ಕರೆದಿದೆ. ಇವು ಸ್ಪಷ್ಟವಾಗಿ ಈ – ಭಾಷೆಯ ಪ್ರಭಾವಗಳಾಗಿವೆ. ಇಲ್ಲಿ ಬಳಸಲಾಗುವ ಸಹಸಾಲುಗಳಲ್ಲಿಯೂ, ತಮ್ಮ ಬ್ಯ್ರಾಂಡನ್ನು ಹೊಗಳಿಕೊಳ್ಳುವ ಚಾಟ್ನುಡಿಗಳಲ್ಲಿಯೂ ನುಡಿಮಿಶ್ರಣಗಳ ಉದಾಹರಣೆಗಳು ದೊರಕುತ್ತವೆ. ಉದಾ: ಯೆ ದಿಲ್ಮಾಂಗೆ ಮೋರ್, ಲೈಫ್ಹೊ ತೊ ಐಸಿ, ಇನ್ಸ್ಟಂಟ್ಗಿಫ್ಟ್ ಲೆ ಜಾವ್ ಇತ್ಯಾದಿ. ಇನ್ನು ಲಿಪ್ಯಂತರವೂ ಇಲ್ಲಿ ಸಾಕಷ್ಟು ಕಂಡು ಬರುತ್ತದೆ. ರೆಡ್ಎಫ್ಎಂ ಮಸ್ತ್ಮಜಾ ಮಾಡಿಎಂದು, ರಿಲಯನ್ಸ್ಇಂಡಿಯಾ ಮೊಬೈಲ್‌ – ಕರ್ ಲೋ ದುನಿಯಾ ಮುಠ್ಠಿ ಮೇಎಂದು ಇಂಗ್ಲಿಷಿನಲ್ಲಿ ಅಥವಾ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿವೆ.

ಶಿಕ್ಷಣಕ್ಷೇತ್ರದಲ್ಲಿ ಭಾಷೆಯ ಪ್ರಭಾವ

`Be brief and to the point’ ಎಂದು ಮಾತನಾಡಲು ಪ್ರಾರಂಭಿಸುವ ಇತ್ತೀಚಿನ ಔದ್ಯಮಿಕ ಪ್ರಪಂಚದ ಜನರಿಗೆ ಯಾವುದನ್ನೂ ವಿವರಣಾತ್ಮಕವಾಗಿ ಹೇಳುವ ಅನುಭವ ಅಥವಾ ಕೌಶಲ್ಯವೇ ಇಲ್ಲದಂತಾಗಿದೆ ಎಂಬ ಮಾತು ಇತ್ತೀಚೆಗೆ ಕೇಳಿಬರುತ್ತಿದೆ. ವ್ಯವಹಾರ ನಿರ್ವಹಣೆಯ ಇಡೀ ಸ್ನಾತಕೋತ್ತರ ಪದವಿಯ ಎಲ್ಲ ಪರೀಕ್ಷೆಗಳನ್ನು ಬಹುಆಯ್ಕೆಯ ಪ್ರಶ್ನೆಗಳ ಮೂಲಕವೇ ನಡೆಸುವ ವಿದ್ಯಾಕೇಂದ್ರಗಳಿವೆ. ಅಂಥ ವಿದ್ಯಾಸಂಸ್ಥೆಗಳಿಂದ ಹೊರಬರುವ ಪದವೀಧರರಿಗೆ ಒಂದು ಸಣ್ಣ ಅರ್ಜಿಯನ್ನು ಬರೆಯುವ ಕೌಶಲ್ಯವೂ ಏಕಿಲ್ಲ ಎಂದು ನಮಗೆ ಇಲ್ಲಿ ಅರ್ಥವಾಗುತ್ತದೆ. ಅವರ ಎಲ್ಲ ಪ್ರವೇಶ ಪರೀಕ್ಷೆಗಳು, ಆನ್‌ಲೈನ್‌ ಪರೀಕ್ಷೆಗಳು, ದೂರವಾಣಿ ಸಂದರ್ಶನಗಳು ಮುಂತಾದ ವ್ಯವಸ್ಥೆಗಳೆಲ್ಲವೂ ಅವರ ನ್ಯೂನತೆಗೆ ಕಾರಣವಾಗಿವೆ. ಆದ್ದರಿಂದಲೇ ಶಿಕ್ಷಕರು ಮತ್ತು ಪೋಷಕರು ಇತ್ತೀಚಿನ ಯುವಪೀಳಿಗೆಯ ಎಸೆಮೆಸ್‌ ಭಾಷೆಯ ಬಗ್ಗೆ ಮೂಗು ಮುರಿಯುವುದು. ಅವರು ಈ ರೀತಿಯ ಈ – ಭಾಷೆಯನ್ನು ಉಪಯೋಗಿಸುವ ಮಕ್ಕಳ ಭಾಷಾ ಕೌಶಲ್ಯ, ವ್ಯಾಕರಣ ಮತ್ತು ಕಾಗುಣಿತ ಜ್ಞಾನ ಹಾಗೂ ಅನೌಪಚಾರಿಕ ಶೈಲಿಯ ಬಗ್ಗೆ ಆತಂಕಕ್ಕೊಳಗಗಾಗಿದ್ದಾರೆ. ಹಾಗೂ ತಮ್ಮ ವಿದ್ಯಾರ್ಥಿಗಳು ಅಥವಾ ಮಕ್ಕಳ ಈ ಸ್ಥಿತಿಗೆ ಮೊಬೈಲೊ‌, ಆರ್ಕುಟ್‌, ಟ್ವಿಟ್ವರ್ ಗಳೇ ಕಾರಣ ಎಂದು ಭಾವಿಸುತ್ತಾರೆ. ಬರವಣಿಗೆಯ ಕೌಶಲ್ಯಗಳು ಅವರಲ್ಲಿ ಕಡಿಮೆಯಾಗಿರುವುದಕ್ಕೆ ಅವರ ಕಲಿಕೆಯ ವಾತಾವರಣವೂ, ಆಧುನಿಕ ದೃಷ್ಟಿಕೋನಗಳೂ ಕಾರಣವಾಗತ್ತವೆ.

ಜನಪ್ರಿಯ ಮಾಧ್ಯಮಗಳಲ್ಲಿ ಬಹಳಷ್ಟು ಪ್ರಕಟವಾಗುತ್ತಿರುವ ಲೇಖನಗಳು ಹಾಗೂ ಕಾರ್ಯಕ್ರಮಗಳಲ್ಲಿ ಮಾಹಿತಿ ತಂತ್ರಜ್ಞಾನವು ಭಾಷೆಯ ಮೇಲೆ ಬೀರಿರುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಸಂಬಂಧ ಈ – ಭಾಷೆಗೆ ಒಗ್ಗಿಕೊಂಡಿರುವ ಒಂದಷ್ಟು ಯುವಕ ಯುವತಿಯರು, ಅದನ್ನು ಒಪ್ಪಿಕೊಳ್ಳು ಸಿದ್ಧರಿಲ್ಲದ ಒಂದಷ್ಟು ಶಿಕ್ಷಕರು ಹಾಗೂ ತಮ್ಮ ಮಕ್ಕಳು ಎಸೆಮೆಸ್‌ ಭಾಷೆಯನ್ನು ಬಳಸುತ್ತ ತಮ್ಮ ಭಾಷಾ ಕೌಶಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆಂದು ಭಾವಿಸುತ್ತಿರುವ ಪೋಷಕರ ಅಭಿಪ್ರಾಯಗಳನ್ನು ಆ ಲೇಖನಗಳು/ಕಾರ್ಯಕ್ರಮಗಳು ವ್ಯಕ್ತಪಡಿಸುತ್ತಿವೆ. ಶಿಕ್ಷಣಸಂಸ್ಥೆಗಳ ಮುಖ್ಯಸ್ಥರಿಗೋ, ಮೇಲಧಿಕಾರಿಗಳಿಗೋ ಬರೆದ ಈ – ಪತ್ರದಲ್ಲಿ ಯುವಕ – ಯುವತಿಯರು, `your’ ಎಂಬುದರ ಬದಲಾಗಿ ತಮಗೇ ಅರಿವಿಲ್ಲದಂತೆ `Ur’ ಎಂದು ಬಳಸುವದನ್ನು ನೋಡಿದಾಗ ಆ ಮಾಧ್ಯಮದ ಪರಿಣಾಮ ತುಸು ಗಂಭೀರವಾಗಿಯೇ ಇರುವಂತೆ ಕಾಣುತ್ತದೆ. ‘ಪ್ರತಿಯೊಂದು ಭಾಷಾ ಶೈಲಿಗೂ ತನ್ನದೇ ಆದ ಜಾಗವಿರುತ್ತದೆ. ಅವರು ಅನೌಪಚಾರಿಕ ಭಾಷೆಯನ್ನು ಪರೀಕ್ಷಾ ಪತ್ರಿಕಗಳಲ್ಲಾಗಲಿ ಅಥವಾ ಔಪಚಾರಿಕ ಪತ್ರಗಳಲ್ಲಾಗಲಿ ಬಳಸುವುದನ್ನು ಸಹಿಸಲಾಗುವುದಿಲ್ಲ’ ಎಂಬುದು ಶಿಕ್ಷಕರ ಅಂಬೋಣಕ್ಕೆ ಉತ್ತರವೆಂಬಂತೆ ಇಲ್ಲಿನ ಹಲವು ಸಂಕ್ಷಿಪ್ತ ರೂಪಗಳು ಈಗಾಗಲೇ ನಿಘಂಟಿನಲ್ಲಿ ಕಾಣಿಸಿಕೊಂಡಿವೆ. ಕಾಲಾನುಕ್ರಮದಲ್ಲಿ ಅಲ್ಲಿನ ವ್ಯಾಕರಣವೂ ಹೊಸ ವ್ಯಾಕರಣದ ಪುಸ್ತಕಗಳಿಗೆ ಸೇರಿಕೊಳ್ಳಬಹುದು. ಹಾಗೂ ಬರಬರುತ್ತ ಔಪಚಾರಿಕ ಮತ್ತು ಅನೌಪಚಾರಿಕ ಎಂಬವುಗಳ ನಡುವಿನ ರೇಖೆಯೂ ಮಬ್ಬಾಗಬಹುದು. ಆದರೆ ಯಾವುದನ್ನೂ ನಾವು ಖಚಿತವಾಗಿ ಹೇಳಲಾಗುವುದಿಲ್ಲ. ಟಿವಿ ಬಂದುದರಿಂದ ರೇಡಿಯೋದ ಬಳಕೆಯೇನೂ ಸಂಪೂರ್ಣವಾಗಿ ನಿಂತು ಹೋಗಲಿಲ್ಲ. ಸಂವಹನಕ್ಕೆ ಇನ್ನೊಂದು ದಾರಿ ಹುಟ್ಟಿಕೊಂಡಿತಷ್ಟೆ. ಅದೇ ರೀತಿಯಲ್ಲಿ ಈಗಿನ ಭಾಷೆಯೂ ಈ – ಭಾಷೆಯೂ ಜೊತೆ ಜೊತೆಯಾಗಿ ಬಳಕೆಗೆ ಬರಬಹುದು. ನಾವು ಭಾಷೆ ಬದಲಾದ ನಂತರ ಅದನ್ನು ಗಮನಿಸಬಹುದೇ ಹೊರತು ಬದಲಾವಣೆಯನ್ನು ಮುಂಚೆಯೇ ಊಹಿಸಲಾಗುವುದಿಲ್ಲ ಅಥವಾ ತಡೆಯಲಾಗುವುದಿಲ್ಲ. ಇನ್ನೊಂದು ಮುಖ್ಯವಿಷಯವೆಂದರೆ, ಯುವಕರು ತಮ್ಮ ಸ್ನೇಹಿತರೊಟ್ಟಿಗೆ ನಡೆಸುವ ಖಾಸಗಿ ಮಾತುಗಳ ಶೈಲಿಯ ಮೇಲೆ ಶಿಕ್ಷಕರಾಗಲೀ ಅಥವಾ ಕಂಪನಿಯ ಮುಖ್ಯಸ್ಥರಾಗಲೀ ಯಾವುದೇ ನಿರ್ಬಂಧ ಹೇರಲಾಗುವುದಿಲ್ಲ. ಮುಖ್ಯವಾಹಿನಿಯಲ್ಲಿ ಬಳಕೆಯಾಗುವುದೇ ನಿಜವಾದ ಭಾಷೆಯೇ ಹೊರತು, ಭಾಷಾ ಪ್ರಯೋಗಾಲಯದ್ದಲ್ಲ. ‘ಈ ಸಂದೇಶ ಸೃಷ್ಟಿಸಿರುವ ನಮಗೆ ಅರ್ಥವಾಗುತ್ತಿದೆ; ಓದುತ್ತಿರುವ ನಮ್ಮ ಸ್ನೇಹಿತರಿಗೆ ಅರ್ಥವಾಗುತ್ತಿದೆ; ಇದು ನಿಮಗೆ ಹೇಗೆ ಸಮಸ್ಯೆಯಾಗಲು ಸಾಧ್ಯ?’ ಎಂದು ಈ ಯುವಕರು ಸವಾಲೆಸೆಯುತ್ತಾರೆ. ಒಬ್ಬ ಯುವಕ ತನ್ನ ಶಿಕ್ಷಕರ ಜೊತೆ ಮಾತನಾಡಲು ಬಳಸುವ ಭಾಷೆಗೂ ತನ್ನ ಸ್ನೇಹಿತರ ಜೊತೆ ಮಾತನಾಡಲು ಬಳಸುವ ಭಾಷೆಗೂ ವ್ಯತ್ಯಾಸವಿದ್ದೇ ಇದೆ. ಅದು ಈ ಮಾಧ್ಯಮದಿಂದ ಪ್ರಾರಂಭವಾದ ಪ್ರವೃತ್ತಿಯೇನಲ್ಲ. ಹಾಗೆ ನೋಡಿದರೆ ಎಸೆಮೆಸ್‌ ಸಂಕ್ಷಿಪ್ತ ರೂಪಗಳಲ್ಲಿ ಹಲವು ೧೯೪೨ರಲ್ಲಿ ಪ್ರಕಟವಾದ ಎರಿಕ್‌ ಪ್ಯಾಟ್ರಿಜ್‌ ಸಂಪಾದಿತ ‘ದ ಡಿಕ್ಸ್‌ನರಿ ಆಫ್‌ ಅಬ್ರಿವಿಯೇಶನ್ಸ್‌’ನಲ್ಲಿ ಇದ್ದಂಥವು(ಕ್ರಿಸ್ಟಲ್‌:೨೦೦೮). ಹೀಗಾಗಿ ಇಲ್ಲಿನ ಸಂಕ್ಷಿಪ್ತ ಭಾಷೆಯೂ ಪ್ರಾಚೀನ ಮನುಷ್ಯನ ಸಾಂಕೇತಿಕ ಭಾಷೆಯ ಸ್ವರೂಪಕ್ಕೆ ತೀರಾ ಹತ್ತಿರವಾಗಿರುವಂಥದ್ದಾಗಿದೆ.

ಭಾಷೆಯೊ ಅವನಿತಿಯೆಂದು ಭಾವಿಸಲಾಗುವ, ಜನಪ್ರಿಯ ಪತ್ರಿಕಾ ಬರಹಗಳಲ್ಲಿ ಕಾಣುವ ಆತಂಕಗಳಿಗೆ ಉತ್ತರವೆಂಬಂತೆ, ಈ – ಭಾಷಾ ಸಂದರ್ಭಗಳ ಬಗ್ಗೆ ನಡೆಸಲಾಗಿರುವ ಆಳವಾದ ಸಂಶೋಧನೆಗಳು ಭಿನ್ನವಾದ ನಿರ್ಣಯಗಳನ್ನೇ ಮಂಡಿಸಿವೆ. ಈ ಭಾಷೆಯನ್ನು ಬಳಸುವವರಿಗೆ ಭಾಷಾಜ್ಞಾನವಿಲ್ಲ ಎನ್ನುವ ಪ್ರಚಲಿತ ಅನಿಸಿಕೆಗೆ ವಿರುದ್ಧವಾಗಿ ಅವರಿಗೆ ಬಹುಪಥ ಭಾಷಾ ಕೌಶಲ್ಯಗಳಿವೆಯೆಂದು ಕಂಡು ಹಿಡಿದಿದ್ದಾರೆ (ನ್ಯಾರ್ಡಿ ಮತ್ತಿತರರು: ೨೦೦೧). ಹಲವು ಭಿನ್ನವಾದ ಭಾಷೆಗಳನ್ನು ಒಮ್ಮೆಗೇ ಕಲಿಯುವ ಮಗುವೊಂದು ಯಾರ ಜೊತೆ ಯಾವ ಭಾಷೆಯನ್ನು ಉಪಯೋಗಿಸಬಹುದೆಂದು ತಂತಾನೇ ಸುಲಭವಾಗಿ ನಿರ್ಧರಿಸುವಂತೆ ಈ – ಭಾಷಿಗರೂ ಒಂದೇ ಭಾಷೆಯ ಹಲವು ರೂಪಗಳನ್ನು ವಿವಿಧ ಸಂವಹನ ಸಂದರ್ಭಗಳಲ್ಲಿ ಬಳಸುವ ವಿಶಿಷ್ಟ ಭಾಷಾ ಕೌಶಲ್ಯವನ್ನು ಹೊಂದಿದವರಾಗಿದ್ದಾರೆ. ಈ – ಭಾಷೆ ಲಿಖಿತ ಮತ್ತು ಸಂಭಾಷಣೆಯ ಮಿಶ್ರ ಪ್ರತಿನಿಧಿಯಾಗಿದೆ. ತಂತ್ರಜ್ಞಾನವು ಯಾವಾಗಲೂ ಭಾಷಾ ಮತ್ತು ಸಾಮಾಜಿಕ ನಿರ್ಲಕ್ಷ್ಯಕ್ಕೆಡೆ ಮಾಡಿಕೊಡದೆ ಭಾಷೆಯನ್ನು ಬೆಳೆಸುತ್ತದೆ ಹಾಗೂ ಪ್ರತಿಫಲಿಸುತ್ತದೆ (ಬ್ಯಾರನ್‌: ೨೦೦೪).

ಭಾಷೆ ಸೃಜನಶೀಲತೆಯಷ್ಟೇ ಅಲ್ಲ!

ಈ – ಭಾಷೆಯನ್ನು ಉಪಯೋಗಿಸುವವರೆಲ್ಲರೂ ಸೃಜನಶೀಲರೆಂದು ಹೇಳಲಾಗುವುದಿಲ್ಲ ಭಾಷೆಯ ನಿಯಮಗಳೆಡೆಗೆ ಇರುವ ಉಪೇಕ್ಷೆಯೂ ಒಮ್ಮೆಮ್ಮೆ ಇದಕ್ಕೆ ಕಾರಣವಾಗಬಹುದು. ತೀರಾ ಆಳವಾದ ಅಧ್ಯಯನಶೀಲತೆ ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿರುವಾಗ, ಭಾಷೆಯ ಬಳಕೆಗೆ ಬೇಕಾಗಿರುವ ನಿಯಮಗಳ ಬಗ್ಗೆ ಖಾತರಿ ಇಲ್ಲದಿರುವ ಅವರು ಅವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಧಾವಂತವನ್ನೂ ಕಳೆದುಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಕೂಸಾದ ಬಿಪಿಒಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಅತ್ಯುತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವವರಿಗೆ ಉತ್ತಮ ಸಂಬಳದ ಕೆಲಸ ಸಿಗುತ್ತದೆ ಎಂದು ತಿಳಿದ ಕ್ಷಣದಿಂದ ಚಡಪಡಿಕೆಗೆ ಒಳಗಾಗಿ, ಆದಷ್ಟು ಬೇಗ ಯಾವುದಾದರೂ ಒಳ್ಳೆಯ ಸಂಬಳಬರುವ ಕೆಲಸಕ್ಕೆ ಸೇರಬೇಕೆಂಬ ಆತುರವಿರುವಾಗ, ಅಧ್ಯಯನಶೀಲತೆಯ ಮಾತೆಲ್ಲಿ? ಇನ್ನು ಭಾಷೆಯ ಬಗ್ಗೆ ತಕ್ಕಮಟ್ಟಿನ ಜ್ಞಾನವಿದ್ದು ಬೇಕೆಂದೇ ಸಂಕ್ಷಿಪ್ತ ವಾಕ್ಯ ಅಥವಾ ಪದಗಳನ್ನು ಬಳಸುವವರು, ಈ – ಭಾಷೆಯ ನಿಜವಾದ ಸೃಜನಶೀಲರು. ಇವರಲ್ಲಿ ಉದ್ದೇಶಪೂರ್ವಕವಾಗಿ ಭಿನ್ನವಾದ ಪದಬಳಕೆ ಮಾಡುವವರು ಮಾತ್ರ ಸೇರುತ್ತಾರೆ. ಇನ್ನೂ ಕೆಲವರು ಆಲಸ್ಯದಿಂದ ಪದಗಳನ್ನು ಅಥವಾ ವಾಕ್ಯಗಳನ್ನು ತುಂಡು ಮಾಡಬಹುದು. ಅವರು ಸಾಂಪ್ರದಾಯಿಕ ಭಾಷೆಗೆ ಯಾವುದೇ ಸೊಪ್ಪು ಹಾಕದಿರುವವರಾಗಿರುತ್ತಾರೆ. ಪ್ರಚಲಿತ ಭಾಷೆಯನ್ನು ಆದಷ್ಟು ಅನೌಪಚಾರಿಕವಾಗಿ ಬಳಸುವುದೇ ಅವರ ‘ಲೇಟೆಸ್ಟ್‌ ಟ್ರೆಂಡ್‌’. ಇನ್ನೂ ಒಂದು ಹೆಜ್ಜೆ ಮುಂದ ಹೋಗಿ ನಿಯಮಬದ್ಧವಾಗಿ ಭಾಷೆಯನ್ನು ಬಳಸುವವರನ್ನು ‘ಒಂದು ರೀತಿ’ ನೋಡುವುದು ಅವರಲ್ಲಿ ಉಂಟು.

ಈ – ಭಾಷೆಯೇ ರೂಢಿಯಾದವರು ಅಚಾನಕ್‌ ಆಗಿ ವ್ಯವಹಾರಿಕ ಪತ್ರಗಳಲ್ಲೂ, ಉತ್ತರ ಪತ್ರಿಕೆಗಳಲ್ಲೂ ಯಾವುದೋ ಪದವನ್ನು ಸಂಕ್ಷಿಪ್ತಾಕ್ಷರಗಳಲ್ಲಿ ಅಥವಾ ಸಂಕೇತಗಳಲ್ಲಿ ಹೇಳಿಬಿಡುವುದು, ಅಥವಾ ತಪ್ಪು ವಿರಾಮ ಚಿಹ್ನೆಯನ್ನು ಕಿರುಸಂದೇಶಗಳಲ್ಲಿ ಬಳಸಿದಂತೆ ಬಳಸುವುದು ನಡೆಯುತ್ತದೆ. ಈ ಬಗ್ಗೆ ವಯಸ್ಕ ಅಧಿಕಾರಿಗಳು ಅಥವಾ ನಿಷ್ಠುರನಿಯಮವಂತ ಶಿಕ್ಷಕರು ತೀವ್ರ ಆಕ್ಷೇಪವನ್ನು ಎತ್ತುತ್ತಾರೆ. ಪರೀಕ್ಷೆಯಲ್ಲಿ ಈ ಮಾದರಿಯ ಅಭಿವ್ಯಕ್ತ ಕಂಡುಬಂದಾಗ ಅಂಕಗಳನ್ನು ಕಡಿಮೆ ನೀಡಿ ಅಥವಾ ಅದರ ಬಗ್ಗೆ ಎಚ್ಚರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಿದರೆ, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ತಂತಾನೆ ಅವರ ಭಾಷೆಯ ಬಗ್ಗೆ ಹುಷಾರಾಗುತ್ತಾರೆ. ಈ ರೀತಿಯ ಭಾಷೆಯಿರುವ ಅರ್ಜಿಯನ್ನು ಒಬ್ಬ ಅಧಿಕಾರಿ ತಿರಸ್ಕರಿಸಿದರೆ ಅಲ್ಲಿಯೂ ಬದಲಾವಣೆಯನ್ನು ತರಬಹುದು. ಈ – ಭಾಷೆಯಲ್ಲಿ ಬಳಸಲಾಗುವ ಸಂಕ್ಷೇಪ ರೂಪಗಳ ಅರ್ಥಗಳನ್ನು ಇತ್ತೀಚಿನ ಆಕ್ಸ್ ಫರ್ಡ್ ಮತ್ತು ಕೇಂಬ್ರಿಜ್‌ ನಿಘಂಟುಗಳ ಇತ್ತೀಚಿನ ಆವೃತ್ತಿಗಳಲ್ಲಿ ಸೇರಿಸಲಾಗಿದೆ. ಇನ್ನೂ ಮುಂದುವರೆದು ಕ್ರಮೇಣ ಇಲ್ಲಿನ ಅರೆಬರೆ ವಾಕ್ಯರಚನೆಗಳು ವ್ಯಾಕರಣ ಪುಸ್ತಕಗಳಲ್ಲೂ ಕಾಣಿಸಿಕೊಳ್ಳಬಹುದು. ಅಶಿಷ್ಟ ಭಾಷೆಯು ಶಿಷ್ಟಭಾಷೆಯಾಗುವುದು ತೀರಾ ಅಸಾಧ್ಯವೇನಲ್ಲ. ‘ಬಿಫೋರ್’ ಎನ್ನುವುದನ್ನು `b4′ ಎಂದು ಈಗಿನ ಶಿಕ್ಷಕರೂ ಬಳಸುತ್ತಿರುವ ಉದಾಹರಣೆಗಳನ್ನು ನೋಡಿದರೆ ಆ ದಿನಗಳು ದೂರವಿಲ್ಲವೆಂದೇ ಅನಿಸುತ್ತದೆ.

ಎರಡು ವಾರಕ್ಕೊಂದರಂತೆ ಪ್ರಪಂಚದ ಹಲವು ಭಾಷೆಗಳು ಅವಸಾನ ಹೊಂದುತ್ತಿರುವ ಈ ಘಟ್ಟದಲ್ಲಿ ಇರುವ ಭಾಷೆಗಳನ್ನೇ ಅನುಕೂಲಕ್ಕೆ ತಕ್ಕಂತೆ ಸೃಜನಶೀಲತೆಯಿಂದ ಬದಲಾಯಿಸಿ ಬಳಸುವ ಮೂಲಕ ಈ ಭಾಷೆಗಳಿಗೆ ಈ – ಭಾಷೆಯೆಂಬ ಹೊಸ ರೂಪ ದೊರೆತಿರುವುದು ಆಶಾದಾಯಕ ವಿಷಯವೇ. ಭಾಷೆಯ ಬದಲಾವಣೆಯಲ್ಲಿ ಉತ್ತಮ ಅಥವಾ ಅಧಮ ಎಂದೇನೂ ಇಲ್ಲ. ಅದು ಬದಲಾವಣೆ ಅಷ್ಟೆ(ಕ್ರಿಸ್ಟಲ್‌: ೨೦೦೪)! ಹಾಗೆ ಬದಲಾವಣೆ ತರುವ ಭರದಲ್ಲಿ ಅಸ್ಪಷ್ಟತೆ, ದ್ವಂದ್ವಾರ್ಥ, ಮುಂತಾದವುಗಳನ್ನು ನಿಯಂತ್ರಿಸುವ ಜವಾಬ್ದಾರಿಯೂ ಸಂವಹನ ಕ್ರಿಯೆಯಲ್ಲಿ ತೊಡಗಿರುವವರಿಗಿರುತ್ತದೆ; ಅದನ್ನು ಅವರು ನಿಭಾಯಿಸುತ್ತಲೂ ಇದ್ದಾರೆ. ಸಂವಹನ ಕ್ರಿಯೆಯಲ್ಲಿ ಅತ್ತಲಿನ ತುದಿಯಲ್ಲಿರುವವರಿಗೆ ಒಂದು ಮಾಹಿತಿ ಉದ್ದೇಶಿತ ಅರ್ಥದಲ್ಲಿಯೇ ತಲುಪಿದೆಯೇ ಎಂಬುದನ್ನು ಪರಿಶೀಲಿಸಿಕೊಂಡರೆ ಸಂವಹನದಲ್ಲಿ ಉಂಟಾಗುವ ಅಡಚಣೆಗಳನ್ನು ತಪ್ಪಿಸಬಹುದು. ಶುದ್ಧಭಾಷೆಯೆಂಬುದು ಯಾವಾಗಲೂ ಅಸ್ತಿತ್ವದಲ್ಲೇ ಇಲ್ಲ. ಪ್ರತಿಹಂತದಲ್ಲೂ ಅದನ್ನು ಬಳಸುವವರ ಅನುಕೂಲಕ್ಕೆ ತಕ್ಕಂತೆ ಭಾಷೆ ಬದಲಾಗುತ್ತಲೇ ಇರುತ್ತದೆ. ಭಾಷೆ ಹೀಗೆ ಬದಲಾಗುತ್ತಿರುವುದಕ್ಕೆ ನಮ್ಮ ನಡುವಿನ ಭಾಷೆಯ ಬಳಕೆದಾರರೇ ಕಾರಣರಾಗಿರುತ್ತಾರೆ. ಎಲ್ಲರ ವೈಯಕ್ತಿಕ ಸಂದೇಶಗಳನ್ನೆಲ್ಲ ಪರೀಕ್ಷಿಸಿ ಅವುಗಳು ಸರಿಯಾದ ಭಾಷೆಯನ್ನು ಉಪಯೋಗಿಸಿವೆ ಎಂದು ಖಾತರಿ ಪಡಿಸಿಕೊಂಡು ಕಳಿಸಲಾಗುವುದಿಲ್ಲ. ಸಂಭವಿಸುತ್ತಿರುವ ಭಾಷೆಯ ಬದಲಾವಣೆಯನ್ನು ಗಮನಿಸುತ್ತ ಹೋಗುವುದು ಮತ್ತು ಸಂವಹನಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿರುವುದು. ಉಳಿದದ್ದೆಲ್ಲವನ್ನೂ ನಿಲ್ಲದೇ ಸಾಗುವ ಕಾಲಕ್ಕೆ ಬಿಡೋಣ!