ನಾನು ಶಿವಮೊಗ್ಗ ಜಿಲ್ಲೆಯವನು ಅನ್ನುವುದು ನನಗೊಂದು ಹೆಮ್ಮೆಯ ಸಂಗತಿಯಾಗಿದೆ. ನಾನು ಹುಟ್ಟಿದ್ದು ಈ ಜಿಲ್ಲೆಯ ಶಿಕಾರಿಪುರದಲ್ಲಿ. ಶಿಕಾರಿಪುರ ಅದರ ಹೆಸರೇ ಸೂಚಿಸುವಂತೆ ಬೇಟೆಗಾರರ ಸಾಹಸದ ಬೀಡಾಗಿರಬಹುದಾದ ದಟ್ಟವಾದ ಅರಣ್ಯ ಪರಿಸರದ ನಡುವಣ ಒಂದು ಊರು. ಇಂಥ ಊರಲ್ಲಿ ಹುಟ್ಟಿಯೂ ನಾನು ಅಲ್ಲೇ ಬೇರೂರಿ ಬೆಳೆಯುವ ಅವಕಾಶದಿಂದ ವಂಚಿತನಾದೆ. ಹೀಗಾಗಿ ಹುಟ್ಟಿದ್ದು ಶಿಕಾರಿಪುರದಲ್ಲಾದರೂ, ನನ್ನ ಬಾಲ್ಯ ಹಾಗೂ ಆನಂತರದ ಬದುಕು ಚಿತ್ರದುರ್ಗ, ತುಮಕೂರು ಮತ್ತು ಮೈಸೂರು ಪರಿಸರಗಳಲ್ಲಿ ಚೆದುರಿಹೋಗಿದೆ. ಒಂದು ವೇಳೆ ನಾನು, ಹುಟ್ಟಿದ ಶಿಕಾರಿಪುರದ ಪರಿಸರದಲ್ಲಿಯೇ ಬೆಳೆದಿದ್ದರೆ, ನನ್ನ ಕವಿತೆಯ ಸ್ವರೂಪ, ಈಗಿರುವುದಕ್ಕಿಂತ ಬೇರೆಯೆ ಆಗಿರುತ್ತಿತ್ತೋ ಅಥವಾ ನಾನು ಹುಟ್ಟೂರು ತೊರೆದು ಅಲೆಮಾರಿಯಾದ್ದರಿಂದ ನನ್ನ ಕವಿತೆಗೆ ಬೇರೆ ಚಹರೆ ಬಂದಿದೆಯೋ, ನಾನು ಹೇಳಲಾರೆ. ಆದರೂ ನನ್ನ ಶೈಶವದ ಸ್ಮ ತಿಗಳಲ್ಲಿ ಇಂದಿಗೂ ಆ ದಟ್ಟ ಮಲೆನಾಡಿನ, ಅದರಲ್ಲೂ ತುಂಗಭದ್ರಾನದಿಯ ಸ್ಮರಣೆಗಳು ಮನೆಮಾಡಿಕೊಂಡು ಆಗಾಗ ಕನಸುಗಳಲ್ಲಿ ಕಾಡುತ್ತವೆ. ನಾನು ಪೆಮರಿ ಶಾಲೆಗೆ ಸೇರಿದ್ದು ಹೊನ್ನಾಳಿಯಲ್ಲಿ. ಹೊನ್ನಾಳಿಯ ತುಂಗಭದ್ರಾ ನದಿ ನನ್ನ ಪಾಲಿಗೊಂದು ಅದಮ್ಯವಾದ ಸೆಳೆತ. ವಿವಿಧ ಋತುಮಾನಗಳಲ್ಲಿ ಅದರ ಏರಿಳಿತಗಳನ್ನು ನಾನು ನನ್ನ ತಾಯ ಕಂಕುಳಿನಲ್ಲಿ ಕೂತು ಬೆರಗುಗಣ್ಣಿನಿಂದ ವೀಕ್ಷಿಸಿದ್ದೇನೆ. ಅಂದಿನ ನೆನಪೊಂದು ಇಂದಿಗೂ ಸಜೀವವಾದ ಚಿತ್ರದಂತೆ ಇದೆ. ಒಂದು ಸಲ ಶಿವಮೊಗ್ಗದಿಂದ ಹೊನ್ನಾಳಿಗೆ, ನನ್ನ ತಾಯಿ ನನ್ನನ್ನು ಬಸ್ಸಲ್ಲಿ ಕರೆತರುತ್ತಿದ್ದಳು. ನನ್ನ ತಾಯಿಯ ತವರುಮನೆ ಬೀರೂರು. ಬೀರೂರಿಂದ ರೈಲಲ್ಲಿ ಬಂದು ಶಿವಮೊಗ್ಗೆಯಲ್ಲಿಳಿದು, ಹೊನ್ನಾಳಿಯ ಬಸ್ಸು ಹಿಡಿಯುವ ಹೊತ್ತಿಗೆ ಮಳೆಗಾಲದ ಮಬ್ಬು ಹಬ್ಬಿಕೊಂಡ ರಾತ್ರಿಯ ದಟ್ಟವಾದ ಕತ್ತಲು.ಆಗ ಶಿವಮೊಗ್ಗೆಗೂ ಹೊನ್ನಾಳಿಗೂ ನಡುವೆ ಒತ್ತಾದ ಕಾಡು. ಈ ಕಾಡು ದಾರಿಯ ನಡುವೆ ಹೊರಟಿತು ಬಸ್ಸು. ಆಗ ನನ್ನ ವಯಸ್ಸು ಬಹುಶಃ ಐದಾರಿರಬಹುದೇನೋ. ತಾಯಿ ತೊಡೆ ಮೇಲೊರಗಿ ಬೆಚ್ಚನೆಯ ಸೆರಿಗನಲ್ಲಿ ನನಗೆ ನಿದ್ದೆ. ಅದಾವಾಗಲೋ ಬಸ್ಸಿಗೆ ಗಕ್ಕನೆ ಬ್ರೇಕು ಬಿದ್ದು, ಕುಲಕಾಟಕ್ಕೆ ಜನ ಹೋಹೋ ಅಂದ ಸದ್ದಿಗೆ ಎಚ್ಚರವಾಯಿತು. ಕಣ್ಣ ತೆರೆದುನೋಡುತ್ತೇನೆ. ಗವ್ ಎಂಬ ಕತ್ತಲ ಕಾಡ ನಡುವಣ ದಾರಿಯಲ್ಲಿ ಮೋಟರಿನ ಬಿಡುದೀಪಗಳ ಬೆಳಕಿನಲ್ಲಿ ದಾರಿಯಗಲಕ್ಕೂ ಮೈಚಾಚಿಕೊಂಡು ಹಾಯಾಗಿ ಕುಳಿತಿದೆ ಒಂದು ದೊಡ್ಡ ಪಟ್ಟೆ ಹುಲಿ!  ಎಂಥ ಗಂಭೀರವಾದ, ಎಂಥ ನಿರ್ಲಕ್ಷ ವಾದ, ನಿಲುವು ಅದರದು. ಕೆಲವು ಕ್ಷಣ ಜನ ಉಸಿರು ಬಿಗಿ ಹಿಡಿದು ಕೂತರು. ಡ್ರೆ ವರು ಧೈರ್ಯ ಮಾಡಿ ಒಂದೆರಡುಸಲ ಹಾರನ್ ಮಾಡಿದ. ಆ ಹುಲಿ ಒಮ್ಮೆ ಆಕಳಿಸಿ, ನಿಧಾನವಾಗಿ ಮೇಲೆದ್ದು, ತನ್ನ ಕಪ್ಪುಹಳದಿ ಪಟ್ಟೆಗಳ ಮೈಯನ್ನೆಳೆದುಕೊಂಡು ದಾರಿಬದಿಯ ಕಾಡಿನೊಳಗೆ ಮರೆಯಾಯಿತು. ಇವತ್ತು ನೋಡಿದರೆ ಆ ಹುಲಿಯೂ ಇಲ್ಲ, ಆ ಕಾಡೂ ಇಲ್ಲ. ಹೊನ್ನಾಳಿ ಶಿವಮೊಗ್ಗೆಯ ನಡುವೆ ಎಲ್ಲ ಬಹುತೇಕ ಬಟಾಬಯಲು. ಎಂಥ ಕಾಲದಿಂದ ಎಂಥ ಕಾಲಕ್ಕೆ ಬಂದು ಬಿಟ್ಟೆವು! ನಮ್ಮನ್ನು ಈ ಹೊತ್ತು ತೀವ್ರವಾಗಿ ಕಾಡುತ್ತಿರುವ ಸಂಗತಿ ಎಂದರೆ ಈ ಪರಿಸರನಾಶದ ತಲ್ಲಣಗಳು. ಇದು ಇಡೀ ದೇಶವನ್ನೇ ಕಾಡುತ್ತಿರುವ ಸಮಸ್ಯೆ ಕೂಡಾ. ಯಾಕೆ ಹೀಗಾಯಿತು? ಉತ್ತರ ಸಿದ್ಧವಾಗಿದೆ. ಜನಸಂಖ್ಯೆ ಅಧಿಕವಾಗಿದೆ, ದೇಶ ನಗರೀಕರಣದ ಕಡೆಗೆ ಚಲಿಸುತ್ತಾ ಇದೆ, ಜಗತ್ತಿನ ಇತರ ರಾಷ್ಟ್ರಗಳಿಗೆ ಸಮಸ್ಪರ್ಧಿಯಾಗಿ ನಾವು ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ ಇತ್ಯಾದಿ. ಆದರೆ ಈ ಪ್ರಕ್ರಿಯೆಯಲ್ಲಿ ಅರಣ್ಯ ನಾಶವಾಗುತ್ತಾ ಇದೆ. ನದಿಗಳ ನೀರು ಕಲುಷಿತವಾಗುತ್ತಾ ಇದೆ. ಗಾಳಿ ಕಲುಷಿತವಾಗುತ್ತಾ ಇದೆ. ತಿನ್ನುವ ಅನ್ನ ಕೂಡ ಕಲುಷಿತವಾಗುತ್ತಾ ಇದೆ.

ಈ ಮಾಲಿನ್ಯ ಯಾವ ಸ್ಥಿತಿಗೆ ಬಂದಿದೆ ಅಂದರೆ ಕೆಲವು ವರ್ಷಗಳ ಹಿಂದೆ ಕೇಂದ್ರ ಸರಕಾರ ಗಂಗಾನದಿಯ ಜಲವನ್ನು ಶುದ್ಧೀಕರಣಗೊಳಿಸಲು ಕೋಟ್ಯಂತರ ರೂಪಾಯಿಗಳ ಯೋಜನೆಯನ್ನು ಹಾಕಿಕೊಂಡಿತು. ಯಾವ ನದಿಯಲ್ಲಿ ಸ್ನಾನ ಮಾಡಿದರೆ ಜನ್ಮಾಂತರದ ಪಾಪಗಳೆಲ್ಲವೂ ಪರಿಹಾರವಾಗುತ್ತವೆ ಅಂತ ಕಾವ್ಯಶಾಸ್ತ್ರ ಪುರಾಣಗಳೆಲ್ಲವೂ ಸಾರುತ್ತ ಬಂದವೋ, ಯಾವ ಪಾವನ ಗಂಗೆಯ ಸ್ಪರ್ಶ ಮಾತ್ರದಿಂದಲೇ, ಮನಸ್ಸು ನಿರ್ಮಲವಾಗುತ್ತದೆ ಎಂದು ಈ ದೇಶದ ಜನ ನಂಬಿಕೊಂಡು ಬಂದಿದ್ದರೋ, ಆ ಪರಮಪಾವನ ಗಂಗಾಜಲವನ್ನು ಶುದ್ಧಿ ಮಾಡುವ ಯೋಜನೆಯೊಂದನ್ನು  ಸರ್ಕಾರ ಹಾಕಿಕೊಳ್ಳುವ ಪ್ರಸಂಗ ಪ್ರಾಪ್ತವಾಯಿತೆಂಬುದೇ ನಮ್ಮ ಈ ಹೊತ್ತಿನ ನಾಗರಿಕತೆಯ ದುರಂತಕ್ಕೆ ಒಂದು ಸಮರ್ಥವಾದ ಸಂಕೇತವಾಗಿದೆ. ಹೀಗಾಗಿ ಈ ದಿನ ನಾವು ಸಮುದಾಯದ ಹಿತಕ್ಕೆ ಅಗತ್ಯವಾದ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಮತ್ತು ಪರಿಸರ ಸಂರಕ್ಷಣೆಯನ್ನು ಜತೆಜತೆಗೆ ತೂಗಿಸಿಕೊಂಡು ಹೋಗುವುದು ಹೇಗೆ ಎಂಬ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಒಂದು ಕಡೆ ಅಭಿವೃದ್ಧಿ ಯೋಜನೆಯನ್ನು ಕುರಿತ ಅರ್ಥಶಾಸ್ತ್ರಜ್ಞರ ಹಾಗೂ ಆಡಳಿತಗಾರರ ಚಿಂತನೆಗಳು, ವಾದಗಳು, ಮತ್ತೊಂದೆಡೆ ಪರಿಸರವಾದಿಗಳ ಪ್ರತಿಭಟನೆಗಳು-ಈ ಮುಖಾಮುಖಿಯಲ್ಲಿ ಒಂದು ಬಗೆಯ ಗೊಂದಲದ ಪರಿಸ್ಥಿತಿ ಏರ್ಪಟ್ಟಿದೆ. ಪರಿಸರಕ್ಕೆ ಧಕ್ಕೆ ತಾರದಂತೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸಾಧ್ಯವೇ? ಅಥವಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪರಿಸರನಾಶ ಅನಿವಾರ್ಯವೆ? ಇವು ನಮ್ಮನ್ನು ಗಾಢವಾಗಿ ಕಾಡುತ್ತಿರುವ ಪ್ರಶ್ನೆಗಳು.

ನಾನು ಇತ್ತೀಚೆಗೆ ಇಂಗ್ಲೆಂಡ್ ಮತ್ತು ಯೂರೋಪು ದೇಶಗಳನ್ನು ಸಂಚಾರ ಮಾಡಿದಾಗ ನಾನು ಕಂಡ ವಾಸ್ತವಗಳೆ ಬೇರೆ. ಯೂರೋಪಿನ ಅನೇಕ ಸಣ್ಣಪುಟ್ಟ ರಾಷ್ಟ್ರಗಳೂ ಆಧುನಿಕ ನಾಗರಿಕತೆಯ ಜತೆಗೆ ದಾಪುಗಾಲಲ್ಲಿ ಹೆಜ್ಜೆ ಹಾಕುತ್ತಾ ಎಂಥ ಪ್ರಗತಿಯನ್ನು ಸಾಧಿಸಿವೆ ಅನ್ನುವುದು ಆಶ್ಚರ್ಯದ ಸಂಗತಿಯಾಗಿದೆ. ಬೆಲ್ಜಿಯಂ,  ಲಕ್ಸಂಬರ್ಗ್, ಸ್ವಿಟ್ಜರ್‌ಲೆಂಡ್ ಮತ್ತು ಆರ್ಥಿಕವಾಗಿ ನಮ್ಮಂತೆಯೇ ಇರುವುದೆನ್ನಲಾದ ಇಟಲಿ- ಈ ದೇಶಗಳ ಜೀವನಕ್ರಮವನ್ನು ನೋಡಿದಾಗ, ಜನರ ಮೂಲಭೂತ ಅಗತ್ಯಗಳಿಗೆ ಅವು ಸ್ಪಂದಿಸಿರುವ ರೀತಿಯನ್ನು ನೋಡಿದಾಗ, ಯಾಕೆ ನಮ್ಮ ಮಹಾನ್ ರಾಷ್ಟ್ರವಾದ ಭಾರತ, ಅವುಗಳಿಗೆ ಹೋಲಿಸಿದರೆ ಅನೇಕ ವಿಷಯಗಳಲ್ಲಿ ಇಷ್ಟೊಂದು ಹಿಂದುಳಿದಂತೆ ತೋರುತ್ತದೆ ಅನ್ನುವುದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಯೂರೋಪಿನ ಆ ದೇಶಗಳಿಗೂ ನಮ್ಮ ದೇಶಕ್ಕೂ ಥಟ್ಟನೆ ಎದ್ದು ಕಾಣುವ ಒಂದು ವ್ಯತ್ಯಾಸ ಎಂದರೆ ನಿಸರ್ಗದ ಬಗ್ಗೆ ಆ ದೇಶಗಳು ತೋರುವ ಪ್ರತಿಕ್ರಿಯೆಯೇ. ಹಸಿರನ್ನು, ಬದುಕಿನ ಜೀವ ದ್ರವ್ಯವಾದ ನಿಸರ್ಗ ಶ್ರೀಮಂತಿಕೆಯನ್ನು, ಯಾವುದೇ ರೀತಿಯಲ್ಲಿ ಆಘಾತಗೊಳಿಸದೆ ಆ ಜನ ಉಳಿಸಿಕೊಂಡಿರುವುದರ ಹಿಂದಿರುವ ಕಾಳಜಿ ಬಹುಮುಖ್ಯವಾದದ್ದು. ನನ್ನ ಪಯಣದ ದಾರಿಯುದ್ದಕ್ಕೂ, ಊರೂರು-ಕೇರಿಗಳಲ್ಲಿ, ಗುಡ್ಡ-ಬೆಟ್ಟ-ಬಯಲುಗಳಲ್ಲಿ ಹಸಿರನ್ನು ಒಂದಿಷ್ಟೂ ನಾಶಪಡಿಸದೆ ಬೆಳಸಿ ಉಳಿಸಿಕೊಂಡಿರುವ ಕ್ರಮ ಅತ್ಯಂತ ಚೇತೋಹಾರಿಯಾಗಿದೆ. ಇಟಲಿ ಮತ್ತು ಫ್ರಾನ್ಸ್ ಪರಿಸರಗಳಲ್ಲಿ ಅರಣ್ಯಗಳ ನಡುವೆ, ಬೆಟ್ಟಗಳ ನಡುವೆ ಏರಿಳಿವ ವಸತಿ ಸಮುಚ್ಚಯಗಳಿದ್ದರೂ, ಅಲ್ಲಿ ನಿಸರ್ಗವನ್ನು ಒಂದಿನಿತೂ ಕದಲಿಸದೆ ಅದರೊಂದಿಗೆ ಸಹ ಬಾಳ್ವೆಯನ್ನು ರೂಢಿಸಿಕೊಂಡಂತೆ ಭಾಸವಾಗುತ್ತದೆ. ಕಟ್ಟಡಗಳ ನಿರ್ಮಾಣ ಅಂದರೆ ಗಿಡಮರಗಳ ನಾಶ ಅಲ್ಲ, ಆ ಗಿಡ ಮರಗಳನ್ನು ತನ್ನ ವಾಸ್ತುವಿನ ಒಂದು ಅಂಗವನ್ನಾಗಿ ಮಾಡಿಕೊಂಡು ಅವುಗಳ ಜತೆಗೆ ಬದುಕುವ ಒಂದು ಕ್ರಮ ಎಂಬ ಹೊಸ ಅರ್ಥವನ್ನು ಹುಟ್ಟಿಸುತ್ತದೆ. ಹೀಗಾಗಿ ನೂರಾರು ಮೈಲಿಗಳ ಉದ್ದಕ್ಕೂ ಉಳಿದು ವಿಜೃಂಭಿಸುವ ಹಸಿರು ಆ ದೇಶದ ಅಭಿವೃದ್ಧಿಯ ಒಂದು ಭಾಗವಾದಂತೆಯೇ ತೋರುತ್ತದೆ. ಹೀಗೆ ಹಸಿರಿನ ಸಮೃದ್ಧಿ ನಿರಂತರವಾಗಿ ಉಳಿದಿರಲು ಆ ದೇಶದ ‘ಶೀತಲ’ ಹವಾಮಾನವೂ ಕಾರಣವಿರಬಹುದೇನೋ. ಆದರೆ ನಮ್ಮ ದೇಶದ ನೆಲದ ಗುಣವಾಗಲಿ ಹವಾಮಾನದ ಏರಿಳಿತಗಳಾಗಲಿ ಹಾಗೆ ನಿರಂತರವಾಗಿ ಹಸಿರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಉಂಟುಮಾಡುತ್ತವೆ ಎಂಬ ಸಂಗತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ನಮ್ಮ ದೇಶದ ನೈಸರ್ಗಿಕ ಸಂಪನ್ಮೂಲಗಳು ಬೇರೆ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಅಧಿಕ ಪ್ರಮಾಣದಲ್ಲಿಯೇ ಇವೆ ಎಂಬುದನ್ನು ಮರೆಯಬಾರದು. ಅದರ ಅಜ್ಞಾನದಿಂದಲೋ ಸ್ವಾರ್ಥದಿಂದಲೋ ನಾವು ಈ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿಕೊಳ್ಳಲಾಗದೆ, ಬಳಸಿಕೊಳ್ಳಲಾಗದೆ ಮತ್ತು ಈ ನಿಸರ್ಗ ಎನ್ನುವುದು ನಮ್ಮ ಬದುಕಿಗೆ ಎಷ್ಟು ಅಗತ್ಯವೆಂಬುದನ್ನು ತಿಳಿದುಕೊಳ್ಳಲಾಗದ ಸ್ಥಿತಿಯಲ್ಲಿದ್ದೇವೆ. ಇದರಿಂದಾಗಿಯೇ ನಿಸರ್ಗದ ಮೇಲೆ ನಮ್ಮ ಜನ ಮಾಡಿರುವಷ್ಟು ಅತ್ಯಾಚಾರವನ್ನು ಬೇರಾರೂ ಮಾಡಿಲ್ಲ ಎಂದು ಹೇಳಿದರೂ ತಪ್ಪಾಗಲಾರದು.

ಈ ಹಿನ್ನೆಲೆಯಲ್ಲಿ ಮಲೆನಾಡಿನ ನಿಜವಾದ ಪ್ರತಿನಿಧಿಯಾದ ಶ್ರೀ ಕವಿ ಕುವೆಂಪು ಅವರು ಬೆಳೆಯಿಸಿಕೊಂಡ ಹಾಗೂ ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸಿದ ಅದಮ್ಯವಾದ ನಿಸರ್ಗ ಪ್ರೀತಿಯಿದೆಯಲ್ಲ, ಅದು ಎಷ್ಟು ದೊಡ್ಡ ಮೌಲ್ಯ ಅನ್ನುವುದನ್ನು ನಾವಿನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಒಂದು ಗಿಡವನ್ನು, ಮರವನ್ನು, ಹೂವನ್ನು, ಹಕ್ಕಿಯನ್ನು, ಗುಡ್ಡವನ್ನು, ಬೆಟ್ಟವನ್ನು ಪ್ರೀತಿಸಲಾರದವನು ಮನುಷ್ಯರನ್ನು ಹೇಗೆ ಪ್ರೀತಿಸಲು ಸಾಧ್ಯ? ನಿಜವಾಗಿ ನೋಡಿದರೆ ನಿಸರ್ಗ ಪ್ರೀತಿ ಅನ್ನುವುದು ಸಮಗ್ರಜೀವನದ ಪ್ರೀತಿಯ ಒಂದು ವಿಸ್ತರಣೆ ಕೂಡಾ. ಈ ಅರ್ಥದಲ್ಲಿ ನಿಸರ್ಗವನ್ನು ಪ್ರೀತಿಸುವುದೆಂದರೆ ಅದೊಂದು ಸಾಮಾಜಿಕವಾದ ಅಗತ್ಯ ಮಾತ್ರ ಅಲ್ಲ, ಆಧ್ಯಾತ್ಮಿಕವಾದ ಅಗತ್ಯ ಕೂಡಾ ಹೌದು. ಪರಿಸರನಾಶದ ತಲ್ಲಣಗಳ ಈ ದಿನಗಳಲ್ಲಿ ಕುವೆಂಪು ಪ್ರತಿಪಾದಿಸಿದ ಈ ನಿಸರ್ಗಪ್ರೀತಿ ಎಂಥ ಅದ್ಭುತವಾದ ಮೌಲ್ಯ ಅನ್ನುವುದನ್ನು ನಾವಿನ್ನೂ ತಿಳಿದುಕೊಳ್ಳಬೇಕಾಗಿದೆ. ಕುವೆಂಪು ಅವರಂತೆ ಕನ್ನಡದ ಕವಿ ಪಂಪನೂ, ನಿಸರ್ಗ ಪ್ರೀತಿಯನ್ನು ಮೊಟ್ಟಮೊದಲು ಎತ್ತಿ ಹಿಡಿದ ಕವಿ. ಅಂದಿನ ಪಂಪನ ಬನವಾಸಿಯೂ ಇಂದಿನ ಕುವೆಂಪುವಿನ ಕುಪ್ಪಳಿಯೂ ಇದೇ  ಮಲೆನಾಡಿನ ಪರಿಸರದಲ್ಲಿ ಜತೆಜತೆಗಿವೆ ಅನ್ನುವುದು ಆಕಸ್ಮಿಕ ಸಂಗತಿಯೇನೂ ಅಲ್ಲ.

ಚದುರಿದ ಚಿಂತನೆಗಳು : ೨೦೦೦