ಜಗತ್ತಿನಾದ್ಯಂತ ತನ್ನ ವಸಾಹತುಗಳನ್ನು ನಿರ್ಮಿಸಿಕೊಂಡು, ದೇಶ ದೇಶಗಳ ಸಂಪತ್ತನ್ನು ದೋಚಿ ತಂದು ತನ್ನ ಪ್ರತಿಷ್ಠೆಯನ್ನು ಬೆಳೆಯಿಸಿಕೊಂಡು, ‘ಸೂರ‍್ಯ ಮುಳುಗದ ಸಾಮ್ರಾಜ್ಯ’ ತನ್ನದು ಎಂದು ಹಲವು ಶತಮಾನಗಳ ಕಾಲ ಮೆರೆದ ಇಂಗ್ಲೆಂಡ್, ಒಂದು ಕಾಲಕ್ಕೆ ಹಲವಾರು ವಿದೇಶೀಯ ಆಕ್ರಮಣ ಹಾಗೂ ಆಡಳಿತಗಳಿಗೆ ಒಳಗಾಗಿತ್ತು ಅನ್ನುವ ಸಂಗತಿ ಅದರ ಇತಿಹಾಸದ ಒಂದು ಭಾಗವೂ ಹೌದು. ಕ್ರಿಸ್ತ ಪೂರ್ವದ ಕಾಲದಿಂದ ಹಿಡಿದು, ಕ್ರಿ.ಶ. ಹತ್ತನೆಯ ಶತಮಾನದವರೆಗೂ, ಪಶ್ಚಿಮ ಯೂರೋಪಿನ ಅನೇಕ ಜನಾಂಗಗಳು ಇಂಗ್ಲೆಂಡಿನ ಮೇಲೆ ದಾಳಿ ನಡೆಯಿಸಿ, ಅನಂತರ ಅಲ್ಲಿ ನೆಲಸಿ ಆ ದೇಶದ ಬದುಕನ್ನು ರೂಪಿಸಿವೆ. ಅವುಗಳಲ್ಲಿ ಮುಖ್ಯವಾದುವೆಂದರೆ ರೋಮನ್ನರು ಹಾಗೂ ಆಂಗ್ಲೋ ಸ್ಯಾಕ್ಸನ್ನರು. ಪಶ್ಚಿಮದ ಉಜ್ವಲವಾದ ನಾಗರಿಕತೆಯ ತೊಟ್ಟಿಲು ಎಂದು ಹೆಸರಾದ ನಗರರಾಜ್ಯವಾದ  ಗ್ರೀಸ್ ದೇಶದೊಂದಿಗೆ, ಕ್ರಿ.ಪೂ. ೨೫೦ರಷ್ಟು ಹಿಂದೆಯೇ ಇಂಗ್ಲೆಂಡಿಗೆ ಸಂಪರ್ಕವಿದ್ದಿತ್ತಾದರೂ, ರೋಮನ್ನರು ಇಂಗ್ಲೆಂಡನ್ನು ಗೆದ್ದು ಅದನ್ನು ಸ್ವಾಧೀನಪಡಿಸಿಕೊಂಡದ್ದು ಕ್ರಿ.ಶ. ೪೩ರಲ್ಲಿ – ಚಕ್ರವರ್ತಿ ಕ್ಲಾಡಿಯಸ್‌ನ ಕಾಲದಲ್ಲಿ, ಮೊಟ್ಟಮೊದಲಿಗೆ ದಕ್ಷಿಣ ಇಂಗ್ಲೆಂಡಿನ ವೇಮೌತ್, ಬ್ರಿಸ್ಟಲ್, ನಾರ್ತ್ ಹ್ಯಾಂಫ್ಟನ್, ಲಿಂಕನ್ – ಈ ಪ್ರದೇಶಗಳಲ್ಲಿ ತನ್ನ ಹೆಜ್ಜೆಗಳನ್ನೂರಿದ ರೋಮನ್ ಸಾಮ್ರಾಜ್ಯವು, ಅನಂತರ ಸುಮಾರು ನಾಲ್ಕು ಶತಮಾನಗಳ ಕಾಲ, ಇಂಗ್ಲೆಂಡಿನ ಪ್ರಭುವಾಗಿ ಆಡಳಿತ ನಡೆಯಿಸಿತು. ಈ ಪರಿಣಾಮವಾಗಿ ಇಂಗ್ಲೆಂಡಿನ ಅನೇಕ ಕಡೆ ರೋಮನ್ನರ ಆಳ್ವಿಕೆಯ ಹೆಜ್ಜೆ ಗುರುತುಗಳನ್ನು ಇಂದಿಗೂ ಕಾಣಬಹುದಾಗಿದೆ. ಅಂಥ ಐತಿಹಾಸಿಕ ಸ್ಥಳವಾಗಿ, ರೋಮನ್ನರ ನೆನಪುಗಳನ್ನು ದಟ್ಟವಾಗಿ ಉಳಿಸಿಕೊಂಡಿರುವ ಒಂದು ನಗರ ಬಾತ್.

ಬಾತ್ – ಎಂದರೆ ಇಂಗ್ಲಿಷ್ ಭಾಷೆಯಲ್ಲಿ ಸ್ನಾನ ಎಂದು ಅರ್ಥ. ದಕ್ಷಿಣ ಇಂಗ್ಲೆಂಡಿನ ಬ್ರಿಸ್ಟಲ್‌ದಿಂದ ಕೇವಲ ಹದಿನೈದು – ಇಪ್ಪತ್ತು ಮೈಲಿಗಳ ದೂರದಲ್ಲಿರುವ ಈ ಊರಿನ ಹೆಸರು ವಾಸ್ತವವಾಗಿ ‘ಬಾತ್ – ಸ್ಪಾ’. ‘ಸ್ಪಾ’ ಎಂದರೆ ಫ್ರೆಂಚ್ ಭಾಷೆಯಲ್ಲಿ ‘ನೀರು’. ‘ಬಾತ್ ಸ್ಪಾ’ – ಎಂದರೆ ಸ್ನಾನದ ನೀರು. ಈ ಊರು ಅಂಥ ಸ್ನಾನದ ನೀರಿನ ಒಂದು ಸ್ಥಳ. ಯಾಕೆಂದರೆ ಈ ಊರಿನಲ್ಲಿ ರೋಮನ್ನರು ನಿರ್ಮಿಸಿದ ಬೃಹದಾಕಾರವಾದ ಸ್ನಾನಗೃಹಗಳಿವೆ. ಆದಕಾರಣ ಇದು ಸ್ನಾನದ ನೀರಿನ ಊರು.

ನಾನು ಬರ್ಟನ್‌ನಿಂದ ಬೆಳಿಗ್ಗೆ ಎಂಟುಗಂಟೆಗೆ ರೈಲು ಹಿಡಿದು, ಬರ್ಮಿಂಗ್ ಹ್ಯಾಂ ಮೂಲಕ ಬ್ರಿಸ್ಟಲ್‌ಗೆ ಬಂದು, ಅಲ್ಲಿಂದ ಬೇರೊಂದು ರೈಲು ಹತ್ತಿ ಬಾತ್ ಅನ್ನು ತಲುಪುವ, ಸುಮಾರು ಮೂರು ಗಂಟೆಗಳ ಪಯಣದ ದಾರಿಯ ಉದ್ದಕ್ಕೂ ಮಳೆಯ ಮಬ್ಬಿನ ವಾತಾವರಣ. ಜತೆಗೆ ಛಳಿಗಾಳಿ ಬೇರೆ. ಅಕ್ಟೋಬರ್ ಕೊನೆಯ ವೇಳೆಗೆ ಇಂಗ್ಲೆಂಡಿನಲ್ಲಿ ಎಲ್ಲಿ ಹೋದರೂ ಇದೇ ಹವಾಮಾನ. ಆದರೂ ಛತ್ರಿ – ಮಳೆ ಕೋಟುಗಳಿಂದ ಸನ್ನದ್ಧನಾಗಿ ನಾನು ‘ಬಾತ್’ ರೈಲ್ವೆ  ಸ್ಟೇಷನ್ನಿನಲ್ಲಿ ಇಳಿದಾಗ ಸಣ್ಣಗೆ ತುಂತುರು ಮಳೆ. ರೈಲ್ವೆ ಸ್ಟೇಷನ್ನಿನಿಂದ ಹತ್ತು ನಿಮಿಷದ ಹಾದಿಯಲ್ಲೆ ಕಂಡಿತು ಮಾಹಿತಿಕೇಂದ್ರ. ಅಲ್ಲಿ ಆ ನಗರದ ನಕ್ಷೆಯನ್ನು ಪಡೆದುಕೊಂಡು, ಸಂಚಾರೀ ಬಸ್ಸಿಗೆ ‘ಡೇ ಟಿಕೆಟ್’ ಕೊಂಡುಕೊಂಡು, ಕೆಲವೇ ಕೆಲವು ಪ್ರವಾಸಿಗಳ ಜೊತೆಗೆ ಬಸ್ಸಿಗೆ ಕಾದೆ. ಹನ್ನೊಂದಕ್ಕೆ ಬಂದ ಬಸ್ಸು ಹತ್ತಿ, ಮಾರ್ಗದರ್ಶಕನ ಮಾಹಿತಿಯ ನಿರರ್ಗಳ ಧಾರೆಗೆ ಕಿವಿಗೊಟ್ಟು – ಬಾತ್‌ನಗರದ ಪ್ರದಕ್ಷಿಣೆಗೆ ಹೊರಟೆ. ಇಡೀ ನಗರ, ಇಂಗ್ಲೆಂಡಿನ ಇತರ ನಗರಗಳಂತೆ ತೋರದೆ, ನಾನು ಪ್ರಾಚೀನ ಕಾಲದ ರೋಂ ನಗರವೊಂದರಲ್ಲಿ ಪ್ರಯಾಣ ಮಾಡುತ್ತಿದ್ದೇನೆಯೋ ಎಂಬ ಭ್ರಮೆಯೊಂದನ್ನು ಕವಿಸುವಂತಿತ್ತು – ಅದರ ಕಟ್ಟಡಗಳ ರಾಚನಿಕ ಶೈಲಿಯಿಂದ. ದಾರಿಯಿಕ್ಕೆಲಗಳಲ್ಲಿ ಚೌಕಾಕಾರವಾದ, ಅಚ್ಚುಕಟ್ಟಾದ, ಸ್ತಂಭಾಕೃತಿಗಳನ್ನೂ, ಕಮಾನುಗಳನ್ನೂ, ಬಗೆಬಗೆಯ ಶಿಲ್ಪಕಲಾಕೃತಿ ಗಳನ್ನೂ ಅಳವಡಿಸಿಕೊಂಡ ಕಟ್ಟಡಗಳ ಸಾಲು. ಅಲ್ಲಲ್ಲಿ ವಿಸ್ತಾರವಾದ ಉದ್ಯಾನಗಳು; ನಡುವೆ ಸ್ತಂಭಶಿಲ್ಪಗಳು; ಚಿಮ್ಮುವ ಚಿಲುಮೆಗಳು. ನಗರದ ನಡುವೆಯೇ ಮೊರೆದು ಹರಿಯುವ ಏವನ್ ನದಿಯ ಮೇಲೆ ನಿರ್ಮಿಸಲಾದ (ಇದನ್ನೆ ಷೇಕ್ಸ್‌ಪಿಯರನ ಊರಲ್ಲೂ ಕಂಡಿದ್ದೆ) ವಿವಿಧ ವಿನ್ಯಾಸಗಳ ಸೇತುವೆಗಳು; ಗ್ರೀಕ್ ವಾಸ್ತುಶಿಲ್ಪದ ಚರ್ಚುಗಳು. ಒಂದೆಡೆ ರಾಯಲ್ ಕ್ರೆಸೆಂಟ್ ಎಂದು ಕರೆಯಲಾಗುವ ಅರ್ಧಚಂದ್ರಾಕೃತಿಯ ಕಟ್ಟಡಗಳ ಸಮುಚ್ಚಯ. ಈ ಕಟ್ಟಡ ತನ್ನ ಬೃಹತ್ತಿನಿಂದ ಮಾತ್ರವಲ್ಲದೆ, ಅದರಲ್ಲಿ ಅಳವಡಿಸಿರುವ ನೂರಾ ಹದಿನಾಲ್ಕು ಸ್ತಂಭಗಳಿಂದ ದಿಗ್‌ಭ್ರಮೆಗೊಳಿಸುವಂತಿದೆ. ಹೀಗೆಯೇ ಕಿಂಗ್ಸ್ ಸರ್ಕಲ್ ಎಂಬ ವೃತ್ತಾಕಾರದ ಕಟ್ಟಡಗಳ ಸಮುಚ್ಚಯವು ರೋಂ ನಗರದಲ್ಲಿರುವ ಜಗತ್ ಪ್ರಸಿದ್ಧವಾದ ‘ಕಲೋಸಿಯಂ’ನ ಮಾದರಿಯ ಮೇಲೆ ರಚಿತವಾಗಿದೆ. ಹದಿನೆಂಟನೆಯ ಶತಮಾನದ ಎರಡನೆಯ ಜಾರ್ಜ್ ದೊರೆಯ ಕಾಲದ ಈ ರಚನೆ, ಪ್ರಾಚೀನದಲ್ಲಿ  ರೋಮನ್ನರಿಂದ ನಿರ್ಮಿತಿಯಾದ ನಗರದ ಪರಂಪರೆಯನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ. ಇಂದಿಗೂ ಈ ನಗರವನ್ನು ರೋಮನ್ ಸಾಮ್ರಾಜ್ಯದ ಒಂದು ಘನವಾದ ನೆನಪಿನಂತೆ ಉಳಿಸಿಕೊಳ್ಳುವ ಪ್ರವೃತ್ತಿಯೊಂದು ಸ್ಪಷ್ಟವಾಗಿದೆ. ಇಡೀ ನಗರ ಹಲವಾರು ಸಣ್ಣ ಸಣ್ಣ ಗುಡ್ಡಗಳ ಪರಿಸರದಲ್ಲಿ ನಿರ್ಮಿತಿಯಾಗಿರುವುದನ್ನು ನಾನು ಬಸ್ಸಲ್ಲಿ ಕೂತು ವೀಕ್ಷಿಸಿದೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರಿ ಬಸ್ಸು, ಈ ನಗರದ ಅನೇಕ ಏರಿಳಿವುಗಳ ಮೂಲಕ ಸುತ್ತಿಸಿ, ಈ ನಗರದ ಕೇಂದ್ರ ಆಕರ್ಷಣೆಯ ಸ್ಥಳವಾದ ‘ರೋಮನ್ ಬಾತ್’ ಎಂಬ ಅಪರೂಪದ ಮ್ಯೂಸಿಯಮ್ಮಿನ ಬಳಿಗೆ ಕರೆತಂದಿತು. ಈ ರೋಮನ್ ಬಾತ್ ಅಥವಾ ಸ್ನಾನಗೃಹಗಳು ಇರುವುದು ನಗರದ ಕೇಂದ್ರದಲ್ಲಿ. ಇದು ವಾಸ್ತವವಾಗಿ, ಹಲವಾರು ಗುಡ್ಡಗಳ ನಡುವಣ ಕಣಿವೆಯಲ್ಲಿ ನೈಸರ್ಗಿಕವಾಗಿ ಪುಟಿಯುವ ಬಿಸಿನೀರಿನ ಬುಗ್ಗೆಗಳು ಇದ್ದ ಸ್ಥಳ. ಈ ಬಿಸಿನೀರ ಬುಗ್ಗೆಗಳಿಗೆ ಒಂದು ನೀರ್‌ನೆಲೆ (Reservoir) ಯನ್ನು ಹಾಗೂ ಆ ನೀರನ್ನು ಹರಿಯಿಸಿ ಹಲವು ಸ್ನಾನಘಟ್ಟಗಳನ್ನೂ ಮತ್ತು ಆ ಸ್ನಾನ ಘಟ್ಟಗಳನ್ನೂ ಒಳಗೊಂಡ ಕಟ್ಟಡಗಳನ್ನೂ ಕಟ್ಟಿದವರು ರೋಮನ್ನರು. ಇಂದಿಗೂ ಈ ಸ್ನಾನಘಟ್ಟ ಗೃಹಗಳು ಅಪೂರ್ವವಾದ ವಸ್ತು ಪ್ರದರ್ಶನಾಲಯಗಳಾಗಿ ಪ್ರವಾಸಿಗಳನ್ನು ಆಕರ್ಷಿಸುತ್ತವೆ.

ರೋಮನ್ನರು ಸ್ನಾನಪ್ರಿಯರು. ರೋಮ್ ನಗರಗಳ ಒಂದು ವೈಶಿಷ್ಟ್ಯವೆಂದರೆ, ಹಲವಾರು ಸಾರ್ವಜನಿಕ ಸ್ನಾನಗೃಹಗಳನ್ನು ಒಳಗೊಂಡಿರುವುದು. ಒಂದು ಸ್ವಾರಸ್ಯದ ಸಂಗತಿ ಎಂದರೆ, ಹತ್ತೊಂಬತ್ತನೆ ಶತಮಾನದ ಪ್ರಾರಂಭದವರೆಗೆ ಇಂಗ್ಲೆಂಡಿನ ಜನಕ್ಕೆ ಸ್ನಾನ ಮಾಡಿಯೆ ಅಭ್ಯಾಸವಿರಲಿಲ್ಲವಂತೆ. ಶ್ರೀಮಂತರಾದವರೂ ಸಹ ಕೈ ಮುಖ ತೊಳೆದುಕೊಳ್ಳುತ್ತಿದ್ದರಷ್ಟೇ ಹೊರತು ಸ್ನಾನ ಮಾಡುತ್ತಿದ್ದುದೂ ಅಪರೂಪವಂತೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿಯೆ ಈ ಪರಿಸ್ಥಿತಿ ಇದ್ದ ಮೇಲೆ, ರೋಮನ್ನರು ಆಕ್ರಮಿಸಿಕೊಂಡ ಕ್ರಿ.ಶ. ಮೊದಲ ಶತಮಾನದ ಪೂರ್ವಾರ್ಧದಲ್ಲಿ ಇಂಗ್ಲೆಂಡಿನ ಜನ ಹೇಗಿದ್ದಿರಬೇಕು? ಈ ಜನಕ್ಕೆ ರೋಮನ್ನರು ನಾಗರಿಕತೆಯ ಮೊದಲ ಪಾಠಗಳನ್ನು ಕಲಿಸಿದರೆಂದು ಚರಿತ್ರೆ ಹೇಳುತ್ತದೆ. ಅಂದಿನ ಇಂಗ್ಲೆಂಡಿನ ಆ ಜನ, ನಾಗರಿಕತೆಯ ಒಂದು ಪಾಠವಾಗಿ, ಸ್ನಾನ ಮಾಡುವುದನ್ನು ಕಲಿತರೋ ಇಲ್ಲವೋ, ಇಲ್ಲಿ ಬಂದು ನೆಲಸಿದ ರೋಮನ್ನರಂತೂ ಸ್ನಾನಗೃಹಗಳನ್ನು ಕಟ್ಟಿಕೊಂಡದ್ದಂತೂ ನಿಜ. ಹಾಗೆ ಸ್ನಾನಘಟ್ಟಗಳನ್ನು ಕಟ್ಟಲು ಅವರಿಗೆ ವರವಾಗಿ ದೊರೆತದ್ದು ಈ ಪರಿಸರದಲ್ಲಿ ಸಹಜವಾಗಿ ಪುಟಿಯುತ್ತಿದ್ದ ಬಿಸಿನೀರ ಬುಗ್ಗೆಗಳು. ಈ ಬಿಸಿನೀರ ಬುಗ್ಗೆಗಳಿಂದ ಹರಿಯುವ ನೀರನ್ನು, ಶೇಖರಿಸುವ ವ್ಯವಸ್ಥೆಯನ್ನೂ, ಹಾಗೆ ಶೇಖರಗೊಂಡ ನೀರನ್ನು ಹಿಡಿದು ನಿಲ್ಲಿಸಲು ವಿಸ್ತಾರವಾದ ಸ್ನಾನಘಟ್ಟಗಳನ್ನೂ ಹಾಗೂ ಸ್ನಾನಘಟ್ಟಗಳ ಸುತ್ತ ಸ್ತಂಭಗಳನ್ನೂ, ಗೋಡೆಗಳನ್ನೂ ಛಾವಣಿಯನ್ನೂ ನಿರ್ಮಿಸಿದರು. ಈ ಸ್ನಾನಘಟ್ಟಗಳಲ್ಲಿ ಒಂದು ನಿಶ್ಚಿತವಾದ ಎತ್ತರಕ್ಕೆ ನಿಲ್ಲುವ ನೀರು ಮತ್ತೊಂದು ಕಡೆಯಿಂದ ಹರಿದು ಹೋಗಿ ಏವನ್ ನದಿಯನ್ನು ಸೇರುತ್ತದೆ. ಹೀಗಾಗಿ ಇಂಗ್ಲೆಂಡಿನಂತಹ ಶೀತ ದೇಶದಲ್ಲಿ, ಸದಾ ಸುಖೋಷ್ಣವಾದ ನೀರನ್ನು ಚಿಮ್ಮಿಸುವ ಈ ಬುಗ್ಗೆಗಳಿಂದ ನಿರ್ಮಿತಿಯಾದ ಸ್ನಾನಮಂದಿರವನ್ನು ಕೇಂದ್ರವನ್ನಾಗಿಸಿಕೊಂಡು, ರೋಮನ್ ಪ್ರಭುಗಳು ಅದರ ಸುತ್ತಲೂ ನಗರವೊಂದನ್ನು ನಿರ್ಮಿಸಿದರು. ಈ ನಗರ ನಿರ್ಮಿತಿಗೆ ದೊರೆತ ಪರಿಸರ ಕೂಡಾ ಗ್ರೀಸ್ ದೇಶದ ರೋಂ ನಗರಕ್ಕೆ ದೊರೆತ ಪರಿಸರದಂತೆ ಹಲವಾರು ಗುಡ್ಡ ಹಾಗೂ ಕಣಿವೆಗಳ ಪ್ರದೇಶವಾಗಿರುವುದರಿಂದ, ಇಡೀ ಊರು ರೋಮ್ ನಗರದಂತೆ ಗಿರಿಗಳ ಹಾಗೂ ದರಿಗಳ ಏರಿಳಿತಗಳಲ್ಲಿ ಹರಹಿಕೊಂಡಿದೆ.

ಈ ಸ್ನಾನಮಂದಿರಗಳ ನೀರ್ ನೆಲೆಯಾದ ಬಿಸಿನೀರ ಬುಗ್ಗೆಗಳಿರುವ ಮತ್ತು ನಗರದ ಕೇಂದ್ರವಾದ ಈ ಸ್ಥಳ ಈಗಾಗಲೇ ಹೇಳಿದಂತೆ ಒಂದು ಕಣಿವೆಯ ಪ್ರದೇಶ. ಹಿಂದೆ ಗುಡ್ಡಗಾಡುಗಳ ಈ ಕಣಿವೆಯೊಳಗೆ, ಬಿಸಿನೀರ ಬುಗ್ಗೆಗಳು ಅನೇಕ  ಶತಮಾನಗಳಿಂದ ನೀರನ್ನು ಹೊಮ್ಮಿಸುತ್ತ ಸುತ್ತಣ ಪರಿಸರವನ್ನು ಒಂದು ರೀತಿಯಲ್ಲಿ ಕೆಸರುಸುಬಿನ ನೆಲೆಯನ್ನಾಗಿ ಮಾಡಿದ್ದವು. ಸುತ್ತ ದಟ್ಟವಾದ ಅರಣ್ಯವೂ ಇತ್ತು. ಪ್ರಾಚೀನ ಶಿಲಾಯುಗದ ಕಾಲದಲ್ಲಿ ಬ್ರಿಟನ್ನಿನ ಅನಾಗರಿಕರಾದ ಹಾಗೂ ಬೇಟೆಗಾರರಾದ ಜನ ಈ ಬಿಸಿನೀರಿನ ಬುಗ್ಗೆಗಳ ಸುತ್ತ ವಾಸಿಸುತ್ತ ಇದ್ದರೆಂಬುದಕ್ಕೆ, ಈ ಹೊತ್ತಿಗೂ ಸಾಕಷ್ಟು ದಾಖಲೆಗಳು – ಅಂದು ಅವರು ಬಳಸುತ್ತಿದ್ದ ವಸ್ತುಗಳ ಮೂಲಕ ದೊರೆಯುತ್ತವೆ. ಈ ಬುಗ್ಗೆಗಳ ಸುತ್ತ ಅಂದು ಆ ಅಲೆಮಾರಿಗಳಾದ  ಜನ ಯಾವುದೇ ವಸತಿಗಳನ್ನು ನಿರ್ಮಿಸಿಕೊಂಡ ಬಗ್ಗೆ ಆಧಾರಗಳಿಲ್ಲ. ಈ ಬಿಸಿ ನೀರ ಬುಗ್ಗೆಗಳು, ಬಹುಕಾಲ ಜನದ ಮನಸ್ಸಿನಲ್ಲಿ  ಅತ್ಯಂತ ಪವಾಡಮಯವೋ ರಹಸ್ಯವೋ ಎಂಬಂಥ ಭಾವನೆಗಳನ್ನು ಉಂಟುಮಾಡಿದಂತೆ ತೋರುತ್ತದೆ. ರೋಮನ್ನರು ಇಲ್ಲಿಗೆ ಬರುವ ಮುನ್ನ ಇದು ಕೆಲ್ಟಿಕ್ ಜನಾಂಗ  ದೇವತೆಯಾದ ಸುಲಿಸ್ (Sulis) ಳ ಆರಾಧನೆಯ ಸ್ಥಳವಾಗಿತ್ತು. ಅಷ್ಟೆ ಅಲ್ಲ ಈ ನೀರು ಅತ್ಯಂತ ಪವಿತ್ರವಾದುದೆಂದೂ, ಪಾಪ ಪರಿಹಾರಕವಾದುದೆಂದೂ ನಂಬಿಕೆ ಬೆಳೆದು, ದೂರ ಬಹುದೂರಗಳಿಂದ ಈ ಪವಿತ್ರವಾದ ನೀರಿನ ಸ್ನಾನಕ್ಕೆ ಹಾಗೂ ಸುಲಿಸ್ ದೇವತೆಯ ಆರಾಧನೆಗೆ ಜನ ಬರತೊಡಗಿದರು. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ಬಗೆಯ ರೋಗ ರುಜಿನಗಳು ವಾಸಿಯಾಗುವುದೆಂಬ ಪ್ರತೀತಿಯೂ ಹಬ್ಬಿಕೊಂಡಿತು. ಹೀಗಾಗಿ ಅತಿ ಪ್ರಾಚೀನ ಕಾಲದಿಂದಲೂ, ಈ ಪರಿಸರ ಒಂದು ಬಗೆಯ ಪವಾಡ – ಪಾವಿತ್ರ್ಯಗಳ ನೆಲೆಯಾಗಿರಬೇಕು.

ಕ್ರಿ. ಶ. ದ ಮೊದಲಲ್ಲಿ ರೋಮನ್ನರು ಇಲ್ಲಿಗೆ ಬಂದ ಮೇಲೆ ಹಳೆಯ ಆರಾಧನಾ ವಿಧಿಗಳನ್ನು ನಿಲ್ಲಿಸಿ, ಹಿಂದಿನ ಕೆಲ್ಟಿಕ್ ದೇವತೆಯಾದ ಸುಲಿಸ್‌ಳ ಹೆಸರಿನಲ್ಲಿ ಒಂದು ದೊಡ್ಡ ದೇವಸ್ಥಾನವನ್ನು ನಿರ್ಮಿಸಿ, ಈ ಚಿಲುಮೆಗಳನ್ನು ಸ್ನಾನಘಟ್ಟಗಳನ್ನಾಗಿ ಪರಿವರ್ತಿಸಿದರು. ಈ ಹಳೆಯ ದೇವತೆ ಸುಲಿಸ್, ಈ ಕಾಲದಲ್ಲಿ ಮಿನರ್ವ ಎಂಬ ದೇವತೆಯಾದಳು. ಗ್ರೀಕ್ ಪುರಾಣಗಳ ಪ್ರಕಾರ  ಮಿನರ್ವ, ಜಲದೇವತೆ. ಹೀಗಾಗಿ ಈ ಸ್ಥಳಕ್ಕೆ Aquae Sulis ಎಂಬ ಹೆಸರೂ ಮುಂದುವರಿಯಿತು. ಪ್ರಸಿದ್ಧವಾದ ಪ್ರಾಚೀನ ಭೂಗೋಳಶಾಸ್ತ್ರಜ್ಞನಾದ ಟಾಲೆಮಿ (Ptolemy)  ಇದನ್ನು Aquae Calidac (Hot Waters) ಎಂದು ಕರೆದಿದ್ದಾನೆ.

ರೋಮನ್ನರ ನಗರಗಳಲ್ಲೆಲ್ಲ ಸ್ನಾನಗೃಹಗಳಿವೆ. ಆದರೆ ಬ್ರಿಟನ್ನಿನಲ್ಲಿರುವ ರೋಮನ್ನರ ಈ ಸ್ನಾನಗೃಹ ಅವುಗಳೆಲ್ಲವುಗಳಿಗಿಂತ ಭಿನ್ನವೂ, ಅನನ್ಯವೂ ಆಗಿದೆ. ಯಾಕೆಂದರೆ ಇವು ಕೇವಲ ಸ್ನಾನಕ್ಕಾಗಿಯೆ ನಿರ್ಮಿತವಾದ ನೆಲೆಗಳಲ್ಲ; ಇವು ಅಂದಿನ ರೋಮನ್ ಹಾಗೂ ಬ್ರಿಟನ್ ಜನಾಂಗಗಳ ನಂಬಿಕೆಗಳ ಪವಿತ್ರ ಸ್ಥಾನಗಳೂ ಆಗಿದ್ದುವು- ಆ ನೀರಿಗೆ ರೋಗಗಳನ್ನು ವಾಸಿಮಾಡುವುದೆಂಬ ಭಾವನೆ ಹಾಗೂ ಸುಲಿಸ್ ದೇವಸ್ಥಾನದ ಪಾವಿತ್ರ್ಯತೆ ಇತ್ಯಾದಿಗಳಿಂದ.

ಅಂದಿನ ರೋಮನ್ ನಗರದ ಕೇಂದ್ರದಲ್ಲಿರುವ ಈ ಚಿಲುಮೆಗಳ ಸುತ್ತ, ಅವರು ಕಟ್ಟಿದ ದೇವಸ್ಥಾನ ಹಾಗೂ ನೀರಿನ ಘಟ್ಟಗಳು, ಸುಮಾರು ಕ್ರಿ.ಶ. ೬೫ ರಿಂದ ೭೫ರ ಅವಧಿಯಲ್ಲಿ ನಿರ್ಮಿತಿಯಾಗಿರಬಹುದೆಂದು ತಿಳಿಯುತ್ತದೆ. ಈಗ ಈ ಸ್ನಾನಗೃಹಗಳ ಹೊರತು ಅಂದು ಕಟ್ಟಲಾದ ದೇವಸ್ಥಾನವಾಗಲಿ, ಮತ್ತಿತರ ರಚನೆಗಳಾಗಲೀ ಇಲ್ಲ. ಆದರೆ ಈಗ ಆ ದೇವಸ್ಥಾನದ ತಳಪಾಯ ಹಾಗೂ ಅಂದು ನಿರ್ಮಿತವಾದ ದೇವಾಲಯದ ಅವಶೇಷಗಳನ್ನು, ಅದೆ ಸ್ಥಳವನ್ನೊಳಗೊಂಡ ಮ್ಯೂಸಿಯಂನಲ್ಲಿ ಕಾಣಬಹುದು. ಈ ರಚನೆಗಳು ರೋಮನ್ ಬ್ರಿಟನ್ನಿನ ಅತ್ಯುತ್ಕೃಷ್ಟ ಶಿಲ್ಪದ ಮಾದರಿಗಳಾಗಿವೆ ಎಂದು ವಾಸ್ತುಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಕ್ರಿಸ್ತಶಕದ ಮೊದಲ ಶತಮಾನದ ಈ ರಚನೆಗಳು ಮುಂದಿನ ಮೂರು – ನಾಲ್ಕು ಶತಮಾನಗಳ ಕಾಲದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಒಳಗಾದಂತೆ ತೋರುತ್ತವೆ. ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಈ ದೇಗುಲ ಸಮುಚ್ಚಯ ಹೇಗಿದ್ದಿರಬಹುದೆಂಬುದನ್ನು ಪುನಾರಚಿಸಿ ತೋರಿಸುವ ಚಿತ್ರಗಳು ಈ ಮ್ಯೂಸಿಯಮ್ಮಿನಲ್ಲಿವೆ. ಈ ದೇವಸ್ಥಾನದ ಪಕ್ಕದಲ್ಲಿ ಬಿಸಿನೀರ ಬುಗ್ಗೆಗಳ ನೀರನ್ನು ಶೇಖರಿಸಲು ಅಂದು ಅವರು ಕಟ್ಟಿದ ನೀರ್‌ನೆಲೆ ಇಂದಿಗೂ ಸುಭದ್ರವಾಗಿದೆ.

ಈ ಬಿಸಿನೀರ ಬುಗ್ಗೆಗಳ ಬದಿಗೆ ಅಂದು ರಚಿತವಾದ, ಸುಲಿಸ್ ಮಿನರ್ವ ದೇವತೆಯ ದೇವಸ್ಥಾನ, ಗ್ರೀಕ್ ದೇಗುಲಗಳ ಮಾದರಿಯದು. ಅದು ನಲವತ್ತೈದು ಅಡಿಗಳೆತ್ತರದ, ಬೃಹದಾಕಾರದ ನಾಲ್ಕು ಸ್ತಂಭಗಳ ರಚನೆಯಾಗಿ ಅತ್ಯಂತ ಪ್ರಭಾವಶಾಲಿಯಾದ ನಿಲುವನ್ನು ಪ್ರಕಟಿಸುವಂತಿತ್ತು. ಈ ಕಂಬಗಳ ಮೇಲ್ ಭಾಗದಲ್ಲಿ ಒಂದು ತ್ರಿಕೋನಾಕಾರವಾದ ಕಿರೀಟಶಿಲ್ಪವನ್ನು ಜೋಡಿಸಲಾಗಿತ್ತು. ಈ ತ್ರಿಕೋನಾಕಾರದ ರಚನೆಯೊಳಗೆ ಹಲವು ಸಂಕೇತಗಳಿದ್ದವು. ಅವುಗಳಲ್ಲಿ ಗಮನಾರ್ಹವಾದದ್ದು. ‘ಗಾರ್ಗನ್ಸ್ ಹೆಡ್’ (Gorgons Head) ಆಲಿವ್ ಎಲೆಗಳ ವೃತ್ತದ ನಡುವೆ ಇರುವ, ಬಿಳಿಲು ಗಡ್ಡದ ವೃದ್ಧನೊಬ್ಬನ ಗಂಭೀರವಾದ ಮುಖದ ಶಿಲ್ಪ ಅದು. ಈ ದೇವಸ್ಥಾನದ ಒಳಗೆ ಮಿನರ್ವ ದೇವತೆಯ ವಿಗ್ರಹವಿದ್ದು, ಅದು ಸದಾ ಅರ್ಚಕರು ಹಚ್ಚುತ್ತಿದ್ದ ನಂದಾದೀವಿಗೆಗಳ ಬೆಳಕಿನಲ್ಲಿ ಶೋಭಾಯಮಾನ ವಾಗಿತ್ತೆಂದು ಹೇಳಲಾಗಿದೆ. ದೇವಾಲಯದ ಅಂಗಳದಲ್ಲಿ ದೇವತೆಗೆ ಪ್ರಾಣಿಗಳನ್ನು ಬಲಿಕೊಡುವ ಎತ್ತರವಾದೊಂದು ಬಲಿಪೀಠವಿತ್ತು.

ಈ ಸ್ನಾನಗೃಹಗಳ ಸುತ್ತಣ ಪರಿಸರವನ್ನು ಶೋಧಿಸಿ ಇತಿಹಾಸದಲ್ಲಿ ಮರೆಯಾಗಿ ಹೋದ ನೆನಪುಗಳನ್ನು ಹುಡುಕುವ ಕೆಲಸ ಪ್ರಾರಂಭವಾದದ್ದು ಕ್ರಿ.ಶ. ೧೭೯೦ರಲ್ಲಿ. ಈ ಮೊದಲು ೧೭೨೭ರಲ್ಲಿ ಇದೇ ಊರಿನ ಸ್ಟಾಲ್ ಸ್ಟ್ರೀಟ್‌ನಲ್ಲಿ ಸುಲಿಸ್ – ಮಿನರ್ವಾ ದೇವತೆಯ ವಿಗ್ರಹದ ತಲೆ ದೊರೆಯಿತು.  ಈ ಸ್ನಾನಗೃಹಗಳ ಸುತ್ತಣ ನೆಲವನ್ನು ಪರಿಶೋಧಿಸಿದಂತೆ, ಅಲ್ಲಿದ್ದ ದೇವಸ್ಥಾನದ ಅವಶೇಷಗಳೂ, ತಳಪಾಯದ ನಕ್ಷೆಯೂ, ಸ್ತಂಭಗಳ ತುಣುಕುಗಳೂ, ಗಾರ್ಗನ್ಸ್ ಹೆಡ್, ಮರ್ಕ್ಯುರಿ, ಡಯಾನಾ ದೇವತಾ ವಿಗ್ರಹಗಳೂ, ಪ್ರಾಣಿಗಳನ್ನು ದೇವತೆಗೆ ಬಲಿಕೊಡುವ ಶಿಲಾ ಪೀಠವೂ, ಹದಿಮೂರು ಸಾವಿರ ರೋಮನ್ ನಾಣ್ಯಗಳೂ ಮತ್ತು ಅಂದಿನ ಪೂಜಾ ಸಾಮಗ್ರಿಗಳೂ ಹಾಗೂ ಕೆಲವು ಲಿಖಿತಗಳೂ ದೊರೆತವು. ಅವುಗಳೆಲ್ಲವನ್ನೂ ಕ್ರಮಬದ್ಧವಾಗಿ ಜೋಡಿಸಿ, ಕಾಲಾನುಕ್ರಮವಾಗಿ ಅಳವಡಿಸಿ ಅಂದು ಆ ದೇವಸ್ಥಾನ ಇದ್ದ ಪರಿಸರದಲ್ಲೆ ಒಂದು ದೊಡ್ಡ ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ. ಈ ಮ್ಯೂಸಿಯಂ ಅನ್ನು, ವ್ಯವಸ್ಥಾಪಕರು ಪ್ರವಾಸಿಗಳಿಗೆ ಕೊಡುವ ಶ್ರವಣ ಸಾಧನವೊಂದನ್ನು ಕಿವಿಗೆ ಅಳವಡಿಸಿಕೊಂಡು ಪ್ರವೇಶಿಸಿದರೆ, ಉದ್ದಕ್ಕೂ ಕ್ರಿ.ಶ. ಒಂದನೆ ಶತಮಾನದಿಂದ, ನಾಲ್ಕನೆ ಶತಮಾನದವರೆಗಿನ ಇತಿಹಾಸ ಪ್ರಪಂಚದ ಧ್ವನಿ ಮುದ್ರಿತವಾದ ಸಂಗತಿಗಳನ್ನು ಆಲಿಸುತ್ತ, ಕಣ್ಣೆದುರಿಗೆ ಕಾಣುವ, ದೇವಸ್ಥಾನದ ಅವಶೇಷಗಳನ್ನೂ ಮತ್ತಿತರ ವಸ್ತುಗಳನ್ನು ನೋಡುತ್ತಾ ಮುನ್ನಡೆಯಬಹುದು. ಒಂದೆಡೆ, ಈ ದೇವಸ್ಥಾನವನ್ನು ನಾಶಮಾಡುವವರಿಗೆ ಒದಗುವ ದುರ್ಗತಿಯನ್ನು ಕುರಿತ ಶಾಪವಾಕ್ಯಗಳ ಲಿಖಿತ ಪಾಠಗಳ ಹಲಗೆಗಳೂ ಇವೆ. ಈ ದೇವಸ್ಥಾನದ ಅಮೂಲ್ಯ ವಸ್ತುಗಳನ್ನು ಕದ್ದವನು, ಇದರ ಸಂಪತ್ತನ್ನು ದೋಚಿದವನು, ತನ್ನ ನೆತ್ತರ ಸಹಿತ ಅವುಗಳನ್ನು ಈ ದೇವತೆಗೆ ಹಿಂದಿರುಗಿಸಬೇಕಾಗುತ್ತದೆ; ಹಾಗೂ ಅಂಥವನು ದುರ್ಗತಿಗೆ ಇಳಿಯಬೇಕಾಗುತ್ತದೆ ಎನ್ನುವುದು ಈ ಎಚ್ಚರಿಕೆಯ ಬರೆಹಗಳ ಸಾರಾಂಶವಾಗಿದೆ.

ಈ ಮ್ಯೂಸಿಯಂನಲ್ಲಿ ಒಂದೆಡೆ ಐದು ಕಲ್ಲಿನ ಶವ ಸಂಪುಟಗಳಿವೆ (Stone Coffins). ಸಾಮಾನ್ಯವಾಗಿ ರೋಮನ್ನರು ಶವಸಂಸ್ಕಾರಗಳಲ್ಲಿ  ದಹನ ಪದ್ಧತಿಯನ್ನು ಅನುಸರಿಸುವ ಸಂಪ್ರದಾಯದವರು. ಆದರೆ ಇಂಗ್ಲೆಂಡಿಗೆ ಬಂದ ರೋಮನ್ನರು, ಶವಸಂಪುಟಗಳಲ್ಲಿ ಶವಗಳನ್ನಿರಿಸಿ ಸಮಾಧಿ ಮಾಡುವುದು – ಒಂದು ಪ್ರತಿಷ್ಠೆಯ ಸಂಗತಿ ಎಂದು ಭಾವಿಸಿದಂತೆ ತೋರುತ್ತದೆ. ಮರದ ಶವಸಂಪುಟಗಳ ಬದಲು, ಕಲ್ಲಿನ ಶವಸಂಪುಟಗಳಲ್ಲಿ ಶವವನ್ನಿರಿಸಿ,  ಭದ್ರವಾಗಿ ಮುಚ್ಚುವ ಈ ಮಾದರಿ ತೀರಾ ವಿಶೇಷವಾದದ್ದು.

ವಿಸ್ತಾರವಾದ ಈ ಮ್ಯೂಸಿಯಂ ಅನ್ನು ನೋಡುತ್ತ ಮುಂದುವರಿದಂತೆ ಅದರ ಕೊನೆಯ ಹಂತವಾದ ಬಿಸಿನೀರ ಸ್ನಾಗಗೃಹಗಳ ಒಳಗೆ ಬಂದು ನಿಲ್ಲುತ್ತೇವೆ. ಸುಮಾರು ಅರುವತ್ತೈದು ಅಡಿ ಉದ್ದ, ಇಪ್ಪತ್ತು – ಇಪ್ಪತ್ತೈದು ಅಡಿ ಅಗಲದ ಈ ನೀರಿನ ತೊಟ್ಟಿಯ ಸುತ್ತ ಎತ್ತರವಾದ ದುಂಡು ಜೋಡಿ ಕಂಬಗಳ ಮೇಲೆ ಈ ಸ್ನಾನಗೃಹದ ಸುತ್ತಣ ರಚನೆ ನಿಂತಿದೆ. ಈ ಕಂಬಗಳ ಬದಿಗೆ ಸುಮಾರು ಐದಡಿಯ ಮೊಗಸಾಲೆಯಿದೆ. ಒಳಗಿಂದ ತಲೆಯೆತ್ತಿದರೆ ಮೇಲಿನ ಆಕಾಶದ ಬಯಲು ಕಾಣುತ್ತದೆ. ಹಿಂದೊಂದು ಕಾಲಕ್ಕೆ ಈ ಚೌಕಾಕಾರದ ತೊಟ್ಟಿಯ ಮೇಲೆ ಮರದ ಛಾವಣಿಯನ್ನು ಆಚ್ಛಾದಿಸಲಾಗಿತ್ತಂತೆ. ಇಂಗ್ಲೆಂಡಿನಂತಹ ಛಳಿ-ಮಳೆಯ ದೇಶದಲ್ಲಿ ಅದು ಅಗತ್ಯ ಕೂಡಾ. ಈ ನಡುವಣ ತೊಟ್ಟಿಯ ಪೂರ್ವ ಬಿಸಿನೀರ ಬುಗ್ಗೆಗಳು, ಈ ತೊಟ್ಟಿಗಳ ಮೂಲಕ ಹಾದು ಸದಾ ಒಂದು ನಿಶ್ಚಿತವಾದ ಮಟ್ಟದ ಸುಖೋಷ್ಣವಾದ ನೀರನ್ನು ತುಂಬಿ ನಿಲ್ಲಿಸಿ, ಮುಂದೆ ಒಳಗೆಲ್ಲೋ ಹರಿದು, ಏವನ್ ನದಿಯನ್ನು ಸೇರುವಂತೆ ನಿರ್ಮಿಸಲಾದ ಪ್ರಾಚೀನ ರೋಮನ್ ಯಂತ್ರ ಕೌಶಲಕ್ಕೆ ಬೆರಗಾಗುತ್ತ ನಿಂತೆ. ನಡುವಣ ತೊಟ್ಟಿಯ ನೀರಿನಲ್ಲಿ, ಮೇಲಿನಾಕಾಶದಿಂದ ಸಣ್ಣಗೆ ಬೀಳುತ್ತಿದ್ದ ಮಳೆ ಹನಿಗಳು, ಸಹಸ್ರಾರು ವರ್ತುಲಗಳನ್ನು ಬರೆಯುತ್ತಿದ್ದವು.