ಸಾಲೋಟಗಿ

ದೂರ
ಜಿಲ್ಲಾ ಕೇಂದ್ರದಿಂದ : ೬೦ ಕಿ. ಮೀ.
ತಾಲೂಕಾ ಕೇಂದ್ರದಿಂದ : ೧೦ ಕಿ. ಮೀ.

ಶ್ರೀ ಶಿವಯೋಗೀಶ್ವರ ದೇವಾಲಯ

ಇಂಡಿಯಿಂದ ಆಗ್ನೇಯಕ್ಕೆ ೮ ಕಿ.ಮೀ ದೂರದಲ್ಲಿರುವ ‘ಸಾಲೋಟಗಿ,’ ರಾಷ್ಟ್ರಕೂಟ ೩ನೆಯ ಕೃಷ್ಣನ ಕಾಲಕ್ಕೆ ಪ್ರಸಿದ್ಧ ಅಗ್ರಹಾರವಾಗಿತ್ತು. ಪ್ರಾಚೀನ ವಿದ್ಯಾಕೇಂದ್ರಗಳಲ್ಲಿ ತುಂಬಾ ಪ್ರಸಿದ್ದವಾದ ಪಾವಿಟ್ಟಿಗೆಯಲ್ಲಿ ೩ನೆಯ ಕೃಷ್ಣನ ಪ್ರಧಾನಿ, ಸಂಧಿವಿಗ್ರಹಿಯಾಗಿದ್ದ ನಾರಾಯಣನು ಒಂದು ಶಾಲೆಯನ್ನು ಕಟ್ಟಿಸಿ ತ್ರೈಪುರುಷದೇವರನ್ನು ಪ್ರತಿಷ್ಠಾಪಿಸಿದ. ಇಲ್ಲಿನ ಶಾಲೆಗೆ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಊರಿನ ಯಾವದೇ ಸಮಾರಂಭದಲ್ಲಿ ಈ ಶಾಲೆಗೆ ದಾನ ನೀಡುತ್ತಿದ್ದರು. ಇಲ್ಲಿ ವಿದ್ಯಾರ್ಥಿಗಳ ವಸತಿಗಾಗಿ ೨೭ ಕೊಠಡಿಗಳಿದ್ದವು. ದೀಪದ ವ್ಯವಸ್ಥೆಗೆ ೧೨ ನಿವರ್ತನಭೂಮಿ, ವಿದ್ಯಾರ್ಥಿಗಳಿಗಾಗಿ ೫೦೦ ನಿವರ್ತನ ಭೂಮಿ, ಉಪಾಧ್ಯಾಯರುಗಳಿಗೆ ೫೦ ನಿವರ್ತನಭೂಮಿ ಮತ್ತು ಮನೆಯನ್ನು ಕೊಡಲಾಗಿತ್ತು. ಮುಂದಿನ ಶತಮಾನದ ನಂತರದಲ್ಲಿ ಈ ಶಾಲೆ ಕುಸಿದುಬಿದ್ದಾಗ ಶಿಲಾಹಾರ ಕಂಚಿಗನು ಎತ್ತಿ ನಿಲ್ಲಿಸಿದ ಹಾಗೂ ಅನೇಕ ಅರಸರು ವಿವಿಧ ದಾನ-ದತ್ತಿ ನೀಡಿದ ಉಲ್ಲೇಖಗಳು ದೊರೆಯುತ್ತವೆ. ಶಾಲೆಯಿಂದಾಗಿ ‘ಸಾವಿಟ್ಟಿಗೆ’ ಎಂಬ ಗ್ರಾಮ ‘ಶಾಲಾಪಾವಿಟ್ಟಗೆ’ಯಾಗಿ ಅನಂತರದ ದಿನಗಳಲ್ಲಿ ಸಾಲೋಟಗಿ ಎಂದಾಯಿತು ಪೂರ್ಣಪ್ರಮಾಣದಲ್ಲಿ ಈ ಶಾಲೆ ಇಂದು ಕಾಣಬಾರದಿದ್ದರೂ ಕುಲಕರ್ಣಿಯವರ ತೋಟದಲ್ಲಿರುವ  ಪುಷ್ಕರಣಿ ಹಾಗೂ ಶಿವಯೋಗೇಶ್ವರ ದೇವಾಲಯದಲ್ಲಿನ ಅವಶೇಷಗಳಿಂದ ಗುರುತಿಸಬಹುದಾಗಿದೆ.

ಹದಿನಾರನೆಯ ಶತಮಾನದಲ್ಲಿ ಜೀವಂತ ವ್ಯಕ್ತಿಯಾಗಿದ್ದು, ಇಂದು ದೈವವಾಗಿ ಪೂಜೆಗೊಳ್ಳುತ್ತಿರುವ ಶ್ರೀಶಿವಯೋಗೇಶ್ವರರು ಗುಲ್ಬರ್ಗಾ ಜಿಲ್ಲೆಯ ‘ಸನ್ನತಿ’ಯ ಚೆನ್ನಸೋಮ ಮತ್ತು ಹೊನ್ನಮ್ಮರ ಮಗನಾಗಿ ಭುವಿಗವತರಿಸಿದರು. ಅಂದು ಹಿಂದು-ಮುಸ್ಲಿಂ ರೆಲ್ಲರಿಗೂ ಬೇಕಾದವರಾಗಿ ವಿಜಾಪುರದ ಬಾದಶಹರಿಂದ ಕಾಣಿಕೆಗಳನ್ನು ಸ್ವೀಕರಿಸಿದ್ದಾರೆ. ಇವರನ್ನು ಕುರಿತು ಜೇರುಟಗಿ ‘ಸಿದ್ಧಲಿಂಗ’ ಕವಿಯು ಶ್ರೀಶಿವಯೋಗಿಶ್ವರ ಪುರಾಣವನ್ನು ಬರೆದಿದ್ದಾರೆ. ಶ್ರೀಶಿವನೇ ಶಿವಯೋಗಿಯಾಗಿ ಬಂದು ಸಾಲೋಟಗಿಯ ದುರುಳ ದೇವತೆಯ ಗರ್ವಭಂಗ ಮಾಡಿ ಹಲವು ಪವಾಡಗೈದು ಕಲ್ಲುನಂದಿಯನ್ನೇರಿ ಕೈಲಾಸಕ್ಕೆ ಹೋದ ಕಥೆಯನ್ನು ಈ ಪುರಾಣ ಒಳಗೊಂಡಿದೆ ಹಾಗೆಯೇ ಗಂಗಾಧರ ವೆಂಬ ಕವಿಯು ಬರೆದಿದ್ದಾನೆಂದು ಹೇಳಲ್ಪಡುವ ‘ಡಂಗುರ’ ಪದಗಳನ್ನು ಸ್ವತಃ ಶ್ರೀಶಿವಯೋಗಿಶ್ವರರೇ ಬರೆದಿದ್ದಾರೆಂದು ಸಂಶೋದಕರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಕಾಲಜ್ಞಾನ ವಚನಗಳಿವೆ. ಶ್ರೀಶಿವಯೋಗೀಶ್ವರರ ದೇವಸ್ಥಾನ ಹಾಗೂ ಮುಂದಿರುವ ಬಾವಿಗಳ ಕಟ್ಟಡಗಳು ನೋಡುವಂತಿವೆ.

 

ಲಚ್ಯಾಣ

ದೂರ:
ತಾಲೂಕ ಕೇಂದ್ರದಿಂದ – ೧೨ ಕಿ. ಮೀ.
ಜಿಲ್ಲಾ ಕೇಂದ್ರದಿಂದ – ೬೨ ಕಿ. ಮೀ.

ಶ್ರೀ ಸದ್ಗುರು ಸಿದ್ಧಲಿಂಗ ಮಹಾರಾಜರ ಕಮರಿಮಠ ಲಚ್ಯಾಣ

ಮನುಕುಲದ ಅಭ್ಯುದಯಕ್ಕಾಗಿ ಮಹಾ ಪುರುಷರು ಜನ್ಮವೆತ್ತಿ ಬರುತ್ತಾರೆ. ಅಂತಹ ಮಾಹಾತ್ಮರೂ, ಪವಾಡ ಪುರುಷರೂ ಆದ ಲಚ್ಯಾಣದ ಸಿದ್ಧಲಿಂಗ ಮಹಾರಾಜರು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ಮತ್ತು ನಾಗಮ್ಮ ದಂಪತಿಗಳ ಮಗನಾಗಿ ಅವತರಿಸಿ ‘ಸಿದ್ಧಲಿಂಗ’ ನಾಮದಿಂದ ಬೆಳಗಿದರು.

ಶ್ರೀ ಸಿದ್ಧಲಿಂಗ ಮಹಾರಾಜರು ಅನೇಕ ಪವಾಡಗಳನ್ನು ಮಾಡಿರುವ ಬಗ್ಗೆ ದಂತಕಥೆಗಳಿವೆ. ಅವುಗಳಲ್ಲಿ ಲಚ್ಯಾಣ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದು ನಿಲ್ಲಿಸಿ, ಅದು ಮುಂದೆ ಚಲಿಸದಂತೆ ಮಾಡಿರುವದು.

ಬಂಥನಾಳದ ಶ್ರೀಗುರು ಶಂಕರಲಿಂಗ ಗುರುಗಳ ಸೇವೆಗೈದು ಅಂತರಂಗ – ಬಹಿರಂಗ ಶುದ್ಧವಾಗಿ ಪರಿಪಕ್ವಗೊಂಡು ಗುರುವಿನ ಸೂಚನೆಯಂತೆ ಸನ್ಯಾಸ ಧರ್ಮ ಸ್ವೀಕರಿಸಿ ದೇಶ ಸಂಚಾರಗೈದು, ಹೋದಲ್ಲೆಲ್ಲಾ ಭಜನೆ, ಧ್ಯಾನ, ಗುರುಸ್ಮರಣೆ, ಭಿಕ್ಷಾಟನೆ, ಅನ್ನ ಸಂತರ್ಪಣೆ ನಡೆಯುತ್ತಿತ್ತು. ನಿತ್ಯಕಾಯಕಯೋಗಿ ಸಿದ್ಧಲಿಂಗ ಸಾಧುರವರನ್ನು ಜನಸಮೂಹ ಆದರಿಸಿ, ಗೌರವಿಸಿ ನಮಿಸಿದರು. ಸೊಲ್ಲಾಪುರದಿಂದ ಕರ್ನಾಟಕದತ್ತ ಸಾಗಿ ಬಂದ ಸಿದ್ಧಲಿಂಗರು ಭೀಮೆಯಲ್ಲಿ ಮಿಂದು ಸಮೀಪದ ಲಚ್ಯಾಣ ಗ್ರಾಮದ ಗೌಡರಿಗಾಗಿ ಮೀಸಲಿರಿಸಿದ್ದ ರುದ್ರಭೂಮಿಯಲ್ಲಿ ಠಿಕಾಣಿ ಹೂಡಿದರು. ಆ ರುದ್ರಭೂಮಿ ಸಿದ್ಧಿಪುರುಷ ಸಿದ್ಧಲಿಂಗರ ಪಾದಸ್ಪರ್ಶದಿಂದ ಪುನೀತವಾಯಿತು. ಸಿದ್ಧಲಿಂಗರನ್ನು ನೋಡಿ ಜನಸಮುದಾಯ ಭಕ್ತಿಯಿಂದ ತಲೆಬಾಗಿದರು. ಅವರ ದರುಶನದಿಂದ ಪುಲಕಿತರಾದರು. ಅಲ್ಲಿ ಸಿದ್ಧಲಿಂಗರ ವಾಸಕ್ಕೆ ‘ಕೊಂಪೆ’ ನಿರ್ಮಾಣವಾಯಿತು. ರಣಗುಡುತ್ತಿದ್ದ ರುದ್ರಭೂಮಿಯಲ್ಲಿ ಆಧ್ಯಾತ್ಮದ ಜ್ಯೋತಿ ಬೆಳಗಿತು.

ಸ್ವತಃ ಸಿದ್ಧಲಿಂಗರು ಸದ್ಗುರು ಶಂಕರಲಿಂಗರ ವಿಶಾಲವಾದ ಮಂಟಪದ ಕೆಳಗಿನ ಗವಿಯಲ್ಲಿ ತಮ್ಮ ಸಮಾಧಿಯನ್ನು ಸಜ್ಜುಗೊಳಿಸಿಕೊಂಡರು. ೧೮ ನೆಯ ಸಪ್ಟಂಬರ ೧೯೨೭ ರಂದು ಧ್ಯಾನಾಸಕ್ತ ಸ್ಥಿತಿಯಲ್ಲಿ ಬೆಳಗಿನ ಜಾವ ದೇಹತ್ಯಾಗ ಮಾಡಿ ಲಿಂಗದಲ್ಲಿ ಲೀನವಾದರು.

ಸಿದ್ಧಲಿಂಗ ಮಹಾರಾಜರ ಸೂಚನೆ ಪ್ರಕಾರ ಲಚ್ಯಾಣ ಸುಕ್ಷೇತ್ರದಲ್ಲಿ
೧. ಸರ್ವಧರ್ಮ ಸಮ್ಮೇಳನ
೨. ಒಂದು ಲಕ್ಷ ತೊಂಭತ್ತಾರು ಸಾವಿರ ಗಣಂಗಗಳ ಸಾಮೂಹಿಕ ಇಷ್ಟಲಿಂಗ ಪೂಜಾ ಮಹೋತ್ಸವ
೩. ಉಚಿತ ಪ್ರಸಾದ ನಿಲಯ
೪. ಶಿಕ್ಷಕರ ತರಬೇತಿ ಕಾಲೇಜು- ಇವೆಲ್ಲ ಪ್ರಗತಿಯ ಸಂಕೇತಗಳಾದವು

 

ಹಲಸಂಗಿ ಮಧುರ ಚೆನ್ನರು

ದೂರ: 

ತಾಲೂಕ ಕೇಂದ್ರದಿಂದ – ೧೨ ಕಿ. ಮೀ.
ಜಿಲ್ಲಾ ಕೇಂದ್ರದಿಂದ – ೫೮ ಕಿ. ಮೀ.


ಇಂಡಿಯಿಂದ ಪಶ್ಚಿಮಕ್ಕೆ ೨೦ ಕಿ.ಮೀ. ದೂರವಿರುವ ಹಲಸಂಗಿಯನ್ನು ‘ಕನ್ನಡ ನುಡಿ’ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಒಂದೆಂದು ಭಾವಿಸಲಾಗುತ್ತಿದೆ. ಇಲ್ಲಿ ದಿನಾಂಕ ೩೧-೦೭-೧೯೦೩ ರಂದು ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವನವರ ಉದರದಲ್ಲಿ ಜನಿಸಿದ ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು; ಗೆಳೆಯ ಮಾದಣ್ಣನ ಮಧುರತೆಯೊಂದಿಗೆ ಬೆರೆತು ತಮ್ಮನ್ನು ಮಧುರಚೆನ್ನರೆಂದು ಕರೆದುಕೊಂಡರು.

೧೯೨೨ ರಲ್ಲಿಯೇ ಹಲಸಂಗಿ ಗೆಳೆಯರ ಗುಂಪನ್ನು (ಪಿ. ದುಲಾಸಾಹೇಬ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ ಹಾಗೂ ಓಲೆಕಾರ ಮಾದಣ್ಣ) ಕಟ್ಟಿಕೊಂಡು ಧಾರವಾಡದ ಗೆಳೆಯರ ಗುಂಪಿನೊಂದಿಗೆ ಸಂಪರ್ಕ ಪಡೆದು ಅವರೊಂದಿಗೆ ಅನನ್ಯವಾಗಿ ಬೆರೆತುಕೊಂಡರು. ಶಾರದಾ ವಾಚನಾಲಯ ಸ್ಥಾಪಿಸಿ ತಾವೂ ಸಾಹಿತ್ಯ ರಚಿಸುವುದಲದೇ ಗೆಳೆಯರನ್ನು ಬೆಳೆಯಿಸಿದರು. ‘ನನ್ನ ನಲ್ಲ’ದ ಮೂಲಕ ಅನುಭಾವ ಕವಿಯಾದ ಅವರು ‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಎಂಬ ಗದ್ಯ ಕೃತಿಗಳ ಮೂಲಕ ಆ ಕಾಲಕ್ಕೆ ವಿಶಿಷ್ಟ ತಂತ್ರವನ್ನು ಬಳಸಿದ್ದರು. ಮುಲ್ಕಿ ಪರೀಕ್ಷೆಯವರೆಗೆ ಓದಿದ ಮಧುರ ಚೆನ್ನರು ಸುಮಾರು ೨೨ ಭಾಷೆಗಳನ್ನು ಬಲ್ಲವರಾಗಿದ್ದರೆಂಬುದು ಸೋಜಿಗ. ಜಾನಪದ ಸಾಹಿತ್ಯ, ಶಾಸನ ಸಾಹಿತ್ಯ ಇತ್ಯಾದಿಗಳಿಗೂ ಪ್ರಾಮುಖ್ಯತೆ ನೀಡಿದ್ದರು.

ಶ್ರೀಅರವಿಂದರ ಕಡೆಗೆ ವಾಲಿದ ಮಧುರ ಚೆನ್ನರ ಹಲಸಂಗಿ ಗೆಳೆಯರ ಗುಂಪು ೧೯೪೩ ರಲ್ಲಿ ಅರವಿಂದ ಮಂಡಲವಾಗಿ ರೂಪುಗೊಂಡಿತು. ಈ ಮೊದಲ ೧೫ ನೆಯ ಅಗಷ್ಟ ೧೯೩೮ ರಲ್ಲಿ ಶ್ರೀಅರವಿಂದರ ಪ್ರಥಮ ದರ್ಶನ ಪಡೆದ ಮಧುರ ಚೆನ್ನರು ೧೫ನೆಯ ಅಗಷ್ಟ ೧೯೫೩ ರಂದು ತಾವು ಹುಟ್ಟಿದ ಶ್ರಾವಣದ ಸಿರಿಯಾಳ ಷಷ್ಠಿಯ ದಿನದಂದೇ ಲಿಂಗೈಕ್ಯರಾದರು. ಮುಂದೆ ೧೫ ನೆಯ ಜುಲೈ ೧೯೭೨ ರಲ್ಲಿ ಹಲಸಂಗಿಯಲ್ಲಿ ಶ್ರೀಅರವಿಂದರ ಸ್ಮಾರಕ ಭವನದ ಸ್ಥಾಪನೆಯೂ ಆಗಿದೆ.

ಹಲಸಂಗಿಯಲ್ಲಿ ಇಂದು ಮಧುರಚೆನ್ನರ ಸ್ವಂತ ತೋಟದಲ್ಲಿ ಅವರ ಸಮಾಧಿ ಮತ್ತು ಮಹರ್ಷಿ ಶ್ರೀಅರವಿಂದರ ಸ್ಮಾರಕ ಭವನ ಕಾಣಬಹುದಾಗಿದೆ. ಸಾಹಿತ್ಯ, ಆಧ್ಯಾತ್ಮ ಹಾಗೂ ಸಂಸ್ಕೃತಿಗಳ ತ್ರಿವೇಣಿ ಸಂಗಮವನ್ನಿಲ್ಲಿ ಕಾಣಬಹುದಾಗಿದೆ.

ಸೂಚನೆ : ಮಧುರ ಚೆನ್ನರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಲಸಂಗಿಯಲ್ಲಿ ವಾಸವಾಗಿರುವ ಅವರ ಮಗನಾದ ಪುರುಷೋತ್ತಮ ಗಲಗಲಿಯವರೊಂದಿಗೆ ಸಂವಾದ ಮಾಡಬಹುದು.

 

ನಿಂಬಾಳ

ದೂರ:
ತಾಲೂಕ ಕೇಂದ್ರದಿಂದ – ೧೨ ಕಿ. ಮೀ.
ಜಿಲ್ಲಾ ಕೇಂದ್ರದಿಂದ – ೫೦ ಕಿ. ಮೀ.

ಕಲ್ಯಾಣಿ ಚಾಲುಕ್ಯರ ಕಾಲದಿಂದಲೂ ಶಿಲ್ಪಕಲೆ, ದಾನ-ಧರ್ಮಕ್ಕೆ ಪ್ರಸಿದ್ಧವಾಗಿದ್ದು, ನಿಂಬಾಳ ಆಧುನಿಕ ಕಾಲದಲ್ಲಿ ಗುರುದೇವ ಆರ್. ಡಿ. ರಾನಡೆಯವರ ಆಧಾತ್ಮಿಕ ಕೇಂದ್ರದಿಂದ ರಾರಾಜಿಸುತ್ತಿದೆ.

ಇಂಡಿಯಿಂದ ೨೨ ಕಿ.ಮೀ. ದೂರದಲ್ಲಿರುವ ಇದು ‘ನಿಂಬರ’ ಎಂಬ ಜನಾಂಗದಿಂದಾಗಿ ನಿಂಬರಪುರ >ನಿಂಬಹಳ್ಳಿ> ನಿಂಬಾಳ ಎಂದು ಹೆಸರನ್ನು ಪಡೆಯಿತು. ತರ್ದವಾಡಿ ನಾಡಿನ ಅಂಕಲಿಗೆ ಐವತ್ತೂರಲ್ಲಿದ್ದ ಈ ಗ್ರಾಮದಲ್ಲಿ ಈಗ ಉಳಿದಿರುವ ಕೆಲವೇ ಸ್ಮಾರಕಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಶಂಕರಲಿಂಗ ಅಥವಾ ಕೋಟಿ ಶಂಕರಲಿಂಗ ದೇವಾಲಯ ಬಹಳ ಮುಖ್ಯವಾದುದು.

ಈ ದೇವಸ್ಥಾನ ಸದ್ಯ ಕೇಂದ್ರ ಪುರಾತತ್ವ ಇಲಾಖೆಯ ಸಂರಕ್ಷಣೆಗೆ ಒಳಪಟ್ಟಿದ್ದು ಇದೇ ಇಲಾಖೆಯಿಂದ ಜೀರ್ಣೋದ್ಧಾರಗೊಂಡಿದೆ. ಈ ದೇವಾಲಯದ ಆವರಣದಲ್ಲಿ ನೂರಾರು ಲಿಂಗಗಳು, ಎತ್ತರವಾದ ಬಾಣಲಿಂಗ ಹೊಂದಿದ ಪಾಣಿಪೀಠಗಳು ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಬೇರೆಕಡೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬರುತ್ತದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪೂರ್ವಭಿಮುಖವಾಗಿ ಕಟ್ಟಲ್ಪಟ್ಟಿದ್ದು;  ಗರ್ಭಗೃಹ, ಅರ್ಧಮಂಟಪ, ನವರಂಗ, ಮುಖ ಮಂಟಪವನ್ನು ಒಳಗೊಂಡಿದೆ. ದೇವಾಲಯದಲ್ಲಿರುವ ಗರ್ಭಗೃಹದಲ್ಲಿರುವ ಪಾಣಿಪೀಠದ ಕೆಳಗೆ ಆಳವಾದ ‘ಗವಿ’ ಇರುವುದೆಂದು ಅಲ್ಲಿಯೇ ಒಂದು ಗುಪ್ತಮಾರ್ಗವಿದ್ದು ಅದು ಅಲ್ಲಿಂದ ದೇಸಾಯಿಯವರ ಮನೆಯವರೆಗೆ ಇದೆಯೆಂದು, ದೇಸಾಯಿಯವರ ಮನೆಯಿಂದ ಇನ್ನೊಂದು ಗುಪ್ತಮಾರ್ಗ ಊರ ಹೊರಗೆ ಹೋಗುವದು. ಆದರೆ ಇವರಡೂ ಮಾರ್ಗಗಳು ಈಗ ಮುಚ್ಚಿವೆಯೆಂದು ಸ್ಥಳೀಕರು ಹೇಳುತ್ತಾರೆ.

 

ಆರ್. ಡಿ. ರಾನಡೆ

ನಿಂಬಾಳದ ಹೆಸರನ್ನು ಭಾರತದುದ್ದಕ್ಕೂ ಹಾಗೂ ಭಾರತದ ಹೊರಗೂ ಪಸರಿಸಿದವರು ಗುರುದೇವ ರಾಮಚಂದ್ರ ದತ್ತಾತ್ರೇಯ ರಾನಡೆಯವರು.

ದಿನಾಂಕ : ೦೩-೦೭-೧೮೮೬ ರಲ್ಲಿ ಜನಿಸಿದ ರಾನಡೆಯವರು ನಿಂಬಾಳದಲ್ಲಿ ಬಾಹು ಮಹಾರಾಜರ ಚಿತಾಭಸ್ಮವನ್ನಿರಿಸಿ ಆಶ್ರಮವನ್ನು ಸ್ಥಾಪಿಸಿದರು. ಪ್ರತಿವರ್ಷ ನಿಂಬರಗಿ, ಉಮದಿ, ಇಂಚಗೇರಿಗಳಿಗೆ ಹೋಗಿ ದರ್ಶನ ಪಡೆದು ಬರುತ್ತಿದ್ದರು. ರಾನಡೆಯವರು ಅನೇಕ ಕೃತಿಗಳನ್ನು ರಚಿಸಿದರು. ಇದರಲ್ಲಿ ಉಪನಿಷದ್ರಹಷ್ಯ ಬಹುಮುಖ್ಯವಾದದ್ದು. ಹಾಗೆಯೇ ನಿತ್ಯಸೀಮಾವಲಿ, ಬೋಧಸುದೆ, ಮಹಾರಾಷ್ಟ್ರ ಸಂತರ ಅನುಭಾವ, ಹಿಂದು ಸಂತರ ಪಾರಮಾರ್ಥ ಪಥ, ಭಗವದ್ಗೀತೆಯ ಸಾಕ್ಷಾತ್ಕಾರ  ದರ್ಶನ, ಧ್ಯಾನಗೀತೆ, ಕನ್ನಡ ಸಂತರಫಾ ಪಾರಮಾರ್ಥ ಪಥ ಇವು ಮುಖ್ಯವಾದವುಗಳು.

ಗುರುದೇವ ರಾನಡೆಯವರು ದಿನಾಂಕ : ೦೬-೦೬-೧೯೮೭ ರಲ್ಲಿ ನಿಂಬಾಳದಲ್ಲಿ ನಿರ್ವಾಣ ಹೊಂದಿದರೂ ಅವರ ದಿವ್ಯ ಚೈತನ್ಯ ಇನ್ನೂ ಮುಮುಷುಗಳಿಗೆ ದಾರಿತೋರುತ್ತಿದೆ. ಅವರ ದೇಶ-ವಿದೇಶಗಳ ಶಿಷ್ಯರು ಈಗಲೂ ನಿಂಬಾಳಕ್ಕೆ ಬಂದು ಕೆಲದಿನವಿದ್ದು ಹೋಗುತ್ತಿದ್ದಾರೆ. ಧ್ಯಾನ, ದೇವರ ನಾಮಸ್ಮರಣೆ, ದಾರ್ಶನಿಕರ ಗ್ರಂಥ ಪಾರಾಯಣ ನಿಂಬಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

 

ಚಡಚಣ ಡಾ. ಸಿಂಪಿ ಲಿಂಗಣ್ಣ

ದೂರ:
ತಾಲೂಕ ಕೇಂದ್ರದಿಂದ – ೪೦ ಕಿ. ಮೀ.
ಜಿಲ್ಲಾ ಕೇಂದ್ರದಿಂದ – ೭೫ ಕಿ. ಮೀ.

ಶ್ರೀ ಸಿಂಪಿ ಲಿಂಗಣ್ಣನವರ ಸ್ಮಾರಕ

ಇಂಡಿಯಿಂದ ಸುಮಾರು ೪೦ ಕಿ. ಮೀ. ದೂರದಲ್ಲಿರುವ ಚಡಚಣ ಗ್ರಾಮದಲ್ಲಿ ಜಾನಪದ ಜಂಗಮ, ವಿಶ್ವಕೋಶವೆನಿಸಿದ ಸಿಂಪಿ ಲಿಂಗಣ್ಣನವರು ೧೦ನೇ ಫೆಬ್ರುವರಿ  ೧೯೦೫ ರಲ್ಲಿ ಜನಿಸಿದರು. ಅರವಿಂದವಾಣಿಯನ್ನು ಮೊದಲು ಪ್ರತಿಧ್ವನಿಸಿದ ಹಲಸಂಗಿ ಬಳಗದ ಬಳ್ಳಿಗೆ ಸೇರಿದವರು. ಸೃಜನ ಸಾಹಿತ್ಯ, ಜಾನಪದ ಸಾಹಿತ್ಯ, ಅನುವಾದ ಸಾಹಿತ್ಯ, ಅನುಭಾವ ಸಾಹಿತ್ಯದಲ್ಲಿ ಸಿಂಪಿಯವರ ಪ್ರತಿಭೆ-ಪರಿಶ್ರಮ ಪಾಂಡಿತ್ಯಗಳ ತ್ರಿವೇಣಿಯನ್ನು ಕಾಣಬಹುದು. ಕಥೆ, ಕವನ, ನಾಟಕ, ಪ್ರಬಂಧ, ಜೀವನ

ಚರಿತ್ರೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ರಾಮತೀರ್ಥರ ಅರವಿಂದ ಸಾಹಿತ್ಯವನ್ನು ಮರಾಠಿ, ಬಂಗಾಲಿ, ಹಿಂದಿಭಾಷೆಯಿಂದ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಇವರು ಹಿಂದಿ, ಬಂಗಾಲಿ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ಗರತಿಯಬಾಳು, ಜನಾಂಗದ ಜೀವಾಳ (ಸರಕಾರದಿಂದ ಬಹುಮಾನದ) ವೈಚಾರಿಕ ಕೃತಿಗಳು. ಇವರ ‘ಸ್ವರ್ಗದೋಲೆಗಳು’ ಜನಪ್ರಿಯ ಗ್ರಂಥವೆನಿಸಿದೆ.

ಮಧುರಚೆನ್ನರ ಸಂಪರ್ಕದಲ್ಲಿ ಸಿಂಪಿಲಿಂಗಣ್ಣನವರು ಆಧ್ಯಾತ್ಮದೆಡೆ ಸೆಳೆತಕ್ಕೊಳಪಟ್ಟವರು. ಇವರು ರಾಷ್ಟ್ರಪ್ರಶಸ್ತಿ ಶಿಕ್ಷಕ ಪ್ರಶಸ್ತಿ, ಜೊತೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಕೊಪ್ಪಳದಲ್ಲಿ ಜರುಗಿದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದದ್ದು ಸ್ಮರಣೀಯವಾಗಿದೆ.

ಸೂಚನೆ : ಸಿಂಪಿ ಲಿಂಗಣ್ಣನವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಚಡಚಣದ ಸ್ಥಳೀಕರೊಂದಿಗೆ ಸಂವಾದ ಮಾಡಬಹುದು.

 

ಉತ್ತಮ ಶಾಲೆ

ದೂರ:
ತಾಲೂಕ ಕೇಂದ್ರದಿಂದ – ೪೫ ಕಿ. ಮೀ.
ಜಿಲ್ಲಾ ಕೇಂದ್ರದಿಂದ – ೭೫ ಕಿ. ಮೀ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರೇವತಗಾಂವ, ಚಡಚಣ ವಲಯ

ಕರ್ನಾಟಕದ ಗಡಿ ಗ್ರಾಮವಾದ ರೇವತಗಾಂವ ವಿಜಾಪೂರ ಜಿಲ್ಲೆಯ ಇಂಡಿ ತಾಲೂಕಿನ ಕೊನೆಯ ಹಳ್ಳಿ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿರುವ ಝಳಕಿಯಿಂದ ಫಂಡರಪೂರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೩೫ ಕಿ.ಮೀ ಅಂತರದಲ್ಲಿದೆ.

ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಾತಂತ್ರ್ಯ ಪೂರ್ವ ೧೮೮೩ ರಲ್ಲಿ ಸ್ಥಾಪನೆಯಾಗಿದೆ. ಇದೊಂದು ಜಿಲ್ಲೆಯ ಉತ್ತಮ ಶಾಲೆಯಾಗಿದ್ದು, ಶಾಲೆಗೆ ೬ ಎಕರೆ ಜಮೀನನ್ನು ಗ್ರಾಮದ ದಾನಿಗಳಾದ ಶ್ರೀ ಮಾನೆ ಸಹೋದರರು ನೀಡಿದ್ದಾರೆ. ಇದೇ ಜಮೀನಿನಲ್ಲಿ ಶಾಲಾ ಕೋಣೆಗಳ ನಿರ್ಮಾಣವಾಗಿದೆ ಆಟದ ಮೈದಾನದ ಸುತ್ತಲೂ ೨೦೦ ಬೇವಿನ ಮರಗಳನ್ನು ನೆಟ್ಟು ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ಒಟ್ಟು ೧೨ ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ೩೬೨ ಮಕ್ಕಳ ದಾಖಲಾತಿ ಇದ್ದು ಶೇ. ೯೦% ರಷ್ಟು ಹಾಜರಾತಿ ಇದೆ. ಎಸ್.ಡಿ.ಎಮ್.ಸಿ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಲಿದೆ. ಇಲ್ಲಿ ಮಕ್ಕಳ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಗಮನ ನೀಡಲಾಗುತ್ತಿದ್ದು ಕೆ.ಎಸ್.ಕ್ಯೂ.ಎ.ಓ. ಫಲಿತಾಂಶದಲ್ಲಿ ಮಕ್ಕಳ ಸಾಧನೆ ಪ್ರಶಂಸನೀಯವಾಗಿದೆ.

ಸರಕಾರದ ಎಲ್ಲಾ ಪ್ರೋತ್ಸಾಹದಾಯಕ ಯೋಜನೆಗಳನ್ನು ಯಶಸ್ವಿಯಾಗಿ ಇಲ್ಲಿ ಜಾರಿಗೊಳಿಸಲಾಗಿದೆ.