ಜನನ : ೪-೭-೧೯೩೬ ರಂದು ಹೊಳೆನರಸೀಪುರದಲ್ಲಿ

ಮನೆತನ : ಸಂಗೀತಾಸಕ್ತರ ಮನೆತನ. ತಂದೆ ಟಿ. ವಿ. ರಾಮರಾವ್ ತಾಯಿ ಸುಬ್ಬಮ್ಮ, ಇವರನ್ನು ಬೆಳೆಸಿದ್ದು ಅಕ್ಕ ಅಂಬಿಕಾದೇವಿ ಮತ್ತು ಭಾವ ಸಿ. ಎನ್. ನರಸಿಂಹಸ್ವಾಮಿ.

ಗುರುಪರಂಪರೆ :  ಬಿ.ಎಸ್.ಎಸ್. ಕೌಶಿಕ್ ಮತ್ತು ಗಂಗಮ್ಮ ಕೇಶವಮೂರ್ತಿಯವರಲ್ಲಿ ಗಮಕ ಶಿಕ್ಷಣವನ್ನು ಪಡೆದು ಮುಂದೆ ಸತ್ಯವತಿ ಕೇಶವಮೂರ್ತಿಯವರಲ್ಲೂ ಕೆಲಕಾಲ ಅಭ್ಯಾಸ ಮಾಡಿದ್ದಾರೆ. ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕ್ಷೇತ್ರ ಸಾಧನೆ : ಗಮಕ ರಂಗದಲ್ಲಿ ಇವರದು ಹಲವಾರು ವರ್ಷಗಳ ಸಾಧನೆ. ರಾಜ್ಯಾದ್ಯಂತ ಸಂಚಾರ ಮಾಡಿ ಗಮಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಬೆಂಗಳೂರು ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ವಾಚನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹೊರ ರಾಜ್ಯಗಳಲ್ಲೂ ಸಂಚಾರ ಮಾಡಿ ದೆಹಲಿ, ಭಿಲಾಯಿ, ಮಧ್ಯಪ್ರಾಚ್ಯದ ಅಬುಧಾಬಿಯ ಕರ್ನಾಟಕ ಸಂಘಗಳ ಆಶ್ರಯದಲ್ಲಿ ಕಾವ್ಯ ವಾಚನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ. ೧೯೬೯ ರಲ್ಲಿ ತಮ್ಮದೇ ಆದ ಗುರುಕೃಪಾ ಗಮಕ ಮಂಡಳಿಯನ್ನು ಸ್ಥಾಪಿಸಿ ಗಮಕ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೇ ಅಲ್ಲದೆ ಸಮಗ್ರ ಕಾವ್ಯ ವಾಚನಗಳನ್ನು ಹಿರಿಯ ಗಮಕಿಗಳಿಂದ ಮಾಡಿಸಿ ಇಂದಿನ ಪೀಳಿಗೆಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯ ಶಾಖೆಗಳನ್ನು ಬೆಂಗಳೂರಿನಲ್ಲಿ ತೆರೆದಿದ್ದಾರೆ. ಇದೊಂದು ಸಂಪೂರ್ಣ ಮಹಿಳಾ ಕಲಾವಿದರ ಸಂಸ್ಥೆಯಾಗಿ ಬೆಳೆದುಬಂದಿದೆ. ಇದರ ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ಅನೇಕ ಗಮಕಿಗಳನ್ನು ಗೌರವಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರ : ಅಬುದಾಬಿ ಕರ್ನಾಟಕ ಸಂಘ, ಬೆಂಗಳೂರಿನ ಹೊಯ್ಸಳ ಕರ್ನಾಟಕ ಸಂಘ, ಗಾಂಧಿ ಸಾಹಿತ್ಯ ಸಂಘ ಮತ್ತು ಶಿಷ್ಯ ವರ್ಗದವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಖಿಲ ಕರ್ನಾಟಕ ರಾಜ್ಯಮಟ್ಟದ ೪ನೇ ಸಮ್ಮೇಳನದಲ್ಲಿ ಗಮಕ ದಿಗ್ಗಜರ ಸಮ್ಮುಖದಲ್ಲಿ ಗೌರವಿಸಲ್ಪಟ್ಟಿದ್ದಾರೆ. ’ಗಮಕ ಕಲಾ ಪ್ರವೀಣೆ’ ಯೆಂಬ ಬಿರುದಿಗೆ ಪಾತ್ರರಾದ ಇವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.