ಆಗ್ರಾ-ಅತ್ರಾಲಿ ಘರಾಣೆಯ ಹೆಸರಾಂತ ಗಾಯಕರಾಗಿರುವ ಶ್ರೀ ಇಂದೂಧರ ನಿರೋಡಿಯವರು ತಮ್ಮ ತಂದೆಯವರಿಂದ ಬಾಲ್ಯದಲ್ಲೇ ಪ್ರೋತ್ಸಾಹ ಪಡೆದವರು. ಶ್ರೀ ಇಂದೂಧರ ನಿರೋಡಿ ಅವರು ಆರಂಭದಲ್ಲಿ ಉಡುಪಿಯ ಗವಾಯಿ ಪಿತ್ರೆ ರಾಮರಾಯರಲ್ಲಿ ಅಭ್ಯಾಸ ಮಾಡಿದರು. ಮುಂದೆ ಮುಂಬಯಿಗೆ ಹೋದ ಇಂದೂಧರ ಅವರು ಆಚಾರ್ಯ ಎಸ್.ಸಿ. ಆರ್. ಭಟ್, ಆಚಾರ್ಯ ಕೆ.ಜಿ. ಗಿಂಡೆ, ಪಂಡಿತ್ ದಿನಕರ್ ಕಾಯ್ಕಿಣಿ, ಪಂಡಿತ್ ಚಿದಾನಂದ ನಗರಕರ್ ಮುಂತಾದ ಅತಿರಥರ ಮಾರ್ಗದರ್ಶನದಲ್ಲಿ ಸುಮಾರು ಇಪ್ಪುತ್ತು ವರ್ಷಗಳ ಸತತ ಅಭ್ಯಾಸ ಮಾಡಿದರು.

೧೯೫೫ರಲ್ಲೇ ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರಿಂದ ರಾಷ್ಟ್ರಮಟ್ಟದ ಆಕಾಶವಾಣಿ ಸಂಗೀತ ಸ್ಪರ್ಧೆಯ ಮೊದಲ ಬಹುಮಾನವನ್ನು ಪಡೆದ ಪ್ರತಿಭಾವಂತರು ಶ್ರೀ ಇಂದೂಧರ ಅವರು. ಅಂದಿನಿಂದ ಆಕಾಶವಾಣಿಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಶ್ರೀಯುತರು ಪ್ರಸ್ತುತ ಆಕಾಶವಾಣಿಯ ’ಎ’ ಶ್ರೇಣಿ ಕಲಾವಿದರು. ಕಚೇರಿಗಳಲ್ಲಿ ತಮ್ಮ ಗುರುಗಳ ಜೊತೆ ಸಹ ಗಾಯಕರಾಗಿ ವೇದಿಕೆಯಲ್ಲಿ ಕೂಡುವ ಅವಕಾಶಗಳನ್ನು ಪಡೆದ ಇಂದೂಧರ್ ಅವರು, ಇಂದರಿಂದಾಗಿಯೇ ’ರಾಗದಾರಿ ಸಂಗೀತ’ ಸೂಕ್ಷ್ಮಗಳನ್ನು ಗ್ರಹಿಸಿ ಅದನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು. ಹಾಗಾಗಿ ಶ್ರೀಯುತರ ಗಾನದಲ್ಲಿ ಅವರದೇ ಆದ ಒಂದು ವಿಶೇಷ ಶೈಲಿಯನ್ನು ರಸಿಕರು ಗುರುತಿಸಲು ಸಾಧ್ಯವಾಗಿದೆ.

ಸಂಗೀತ ರಚನೆಯ ಸೌಂದರ್ಯವನ್ನು ಅಳವಡಿಸಿಕೊಳ್ಳುವುದು, ಅದಕ್ಕೆ ಹೊಂದುವ ’ಬೋಲ್ ಆಲಾಪ್’, ’ಬೆಹೆಲಾವೆ’, ’ಉಪಜ್’ ಹಾಗು ’ತಾನ್’ಗಳೊಂದಿಗೆ ಕಾರ್ಯಕ್ರಮ ನೀಡುದರಿಂದ ಇಂದೂಧರ್ ಅವರ ಗಾಯನ ವಿಭಿನ್ನತೆಯಿಂದ ಕೂಡಿರುತ್ತದೆ. ಹೀಗಾಗಿ ದೇಶದ ಅನೇಕ ಪ್ರತಿಷ್ಠಿತ ವೇದಕೆಗಳಲ್ಲಿ ವೇದಿಕೆಗಳಲ್ಲಿ ಇಂದೂಧರ್ ಅವರು ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಜೀವ ವಿಮಾ ನಿಗಮದ ತಮ್ಮ ವೃತ್ತಿಯಿಂದ ನಿವೃತ್ತರಾಗಿರುವ ಶ್ರೀ ಇಂದೂಧರ ನಿರೋಡಿ ಪ್ರಸ್ತುತ ತಮ್ಮ ಸಂಪೂರ್ಣ ಸಮಯವನ್ನು ಸಂಗೀತಕ್ಕೆ ಮೀಸಲಿರಿಸಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೫-೦೬ನೇ ಸಾಲಿನ ತನ್ನ ಗೌರವ ಪಶಸ್ತಿಯನ್ನು ನೀಡಿ ಹೆಮ್ಮೆಯಿಂದ ಸನ್ಮಾನಿಸಿ ಗೌರವಿಸಿದೆ.