ಜನನ : ೨೩-೬-೧೯೫೬ ಚಿಕ್ಕಮಗಳೂರು

ಗುರುಪರಂಪರೆ : ಚಿಕ್ಕಮಗಳೂರಿನ ಕೆ.ಟಿ.ಕೃಷ್ಣಸ್ವಾಮಿ ಅವರಲ್ಲಿ ಪ್ರಾರಂಭಿಕ ಶಿಕ್ಷಣ. ಮುಮದೆ ಬೆಂಗಳೂರಿನಲ್ಲಿ ಟಿ. ವಿ. ಮುತ್ತಾಚಾರ್ಯ ಅವರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಮಾರ್ಗದರ್ಶನ. ಅನಂತರ ಹೆಚ್.ಕೆ.ನಾರಾಯಣ ಅವರ ಬಳಿಯಲ್ಲಿ ಸುಗಮ ಸಂಗೀತದಲ್ಲಿ ಉನ್ನತ ಮಾರ್ಗದರ್ಶನ. ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಹಿನ್ನೆಲೆ ಗಾಯನದಲ್ಲಿ ಡಿಪ್ಲೊಮಾ ಸಹ ಪಡೆದಿದ್ದಾರೆ.

ಸಾಧನೆ: ೧೯೭೩ ರಲ್ಲಿ ಚಿಕ್ಕಮಗಳೂರಿನಲ್ಲಿ ಮೊದಲ ಕಾರ್ಯಕ್ರಮ. ಮುಂದೆ ಗುಡಿಬಂಡೆ, ಗೌರಿಬಿದನೂರು, ಧರ್ಮಸ್ಥಳ ಮುಂತಾದೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೆಚ್.ಕೆ. ನಾರಾಯಣ ಅವರೊಂದಿಗೆ ಯುಗಳ ಗಾಯನದಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆಕಾಶವಾಣಿ – ದೂರದರ್ಶನದ ’ಎ’ ಶ್ರೇಣಿ ಕಲಾವಿದೆ. ಹಿನ್ನೆಲೆ ಗಾಯಕಿಯಾಗಿ ಕೆಲವೊಂದು ಚಲನಚಿತ್ರಗಳಿಗೂ ಧ್ವನಿ ನೀಡಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಸುಮಾರು ೧೦೦ ಕ್ಕೂ ಮಿಕ್ಕಿ ಧ್ವನಿ ಸುರುಳಿಗಳಲ್ಲಿ ಹಾಡಿದ್ದಾರೆ. ತಾವು ಸ್ವತಃ ೨೫ ಧ್ವನಿ ಸುರುಳಿಗಳನ್ನು ತಯಾರಿಸಿ ಅದರಲ್ಲಿ ಹೆಸರಾಂತ ಹಿನ್ನೆಲೆ ಗಾಯಕರುಗಳಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ವಾಣಿ ಜಯರಾಂ ಮುಂತಾದವರು ಹಾಡಿದ್ದಾರೆ. ಹಲವು ನೃತ್ಯ ರೂಪಕಗಳಿಗೆ, ಟೆಲಿ ಚಿತ್ರಗಳಿಗೆ, ಟಿವಿ ಧಾರಾವಾಹಿಗಳಿಗೆ ಸಂಗೀತ ಸಂಯೋಜಕಿಯಾಗಿ ಶ್ರಮಿಸಿದ್ದಾರೆ. ವೈಶಾಖದ ದಿನಗಳು ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದುದೇ ಅಲ್ಲದೆ ಒಬ್ಬ ಮಹಿಳಾ ನಿರ್ದೇಶಕಿಯಾಗಿ ದಾಖಲೆ ಸೃಷ್ಟಿಸಿದ್ದಾರೆ. ರಾಗವಾಹಿನಿ ಧಾರಾವಾಹಿನಿಗೆ ಸಂಗೀತ ನೀಡಿದ್ದಾರೆ.

ಪ್ರಶಸ್ತಿ – ಸನ್ಮಾನ : ಹಲವಾರು ಸಂಗೀತ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ. ೨೦೦೦-೦೧ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಇವರಿಗೆ ಸಂದಿದೆ.