ಓ ತಾಯಿ ಸರಸತಿಯೆ, ನಿನ್ನ ಬೀಣೆಯ ಮೇಲೆ
ಕುಳಿತೇನ ಮಾಡುತಿವೆ ಈ ಗೂಬೆಗಳ ಮಾಲೆ?
ಒಂದೆರಡೆ? ಮೂರ್ನಾಲ್ಕೆ? ಐದಾರೆ? ಏಳೆ?
ಹೊರಳುತಿವೆ ಮೆಳ್ಳೆಗಣ್ಗಳು ಸಾಲು ಸಾಲೆ!
ಅವುದೊ ಹಿರಿಯ ಚಿಂತೆ ಅಧ್ಯಕ್ಷಗೂಬೆಯ ತಲೆಯ ಸುತ್ತ
ನೊಣದಂತೆ ಹಾರಾಡಿ ವ್ಯೂಹವನು ರಚಿಸುತಿದೆ ಅತ್ತ ಇತ್ತ.
ಪಕ್ಕದೊಳದರ ಸಚಿವ ಹೊಗೆಸೊಪ್ಪ ಸೇದುತ್ತ
ತಲೆಗಣ್ಣ ಹೊರಳಾಡಿಸುತ ಕುಳಿತಿಹುದು ಉನ್ಮತ್ತ!
ಮತ್ತೊಂದಕೇನೊ ಕೆದರಿದಂತಿದೆ ಪಿತ್ತ.
ಅತ್ತೊಂದರಾ ಚಿತ್ತಸ್ಥಿತಿಯೊ ತತ್ತತ್ತತತ್ತಾ!

ದೇವಕವಿ ವಾಲ್ಮೀಕಿಯಾ ದಿವ್ಯ ಪರ್ಣಶಾಲೆ;
ಸುತ್ತಲೂ ಹಬ್ಬಿಹುದು ಸುಂದರ ಗಿರಿ ಅರಣ್ಯಮಾಲೆ.
ನೆತ್ತಿಯಲಿ ನಿಂತಿಹುದು ನೀಲಿಯಾಗಸ ಋಷಿಯ ಶಾಂತಿಯೋಲೆ.
ವನವ ತುಂಬಿದೆ ಪಕ್ಷಿಕೂಜನದ ಮಧುಕಂಠ ಮಧುರ ಲೀಲೆ.
ಬಳಿಯೆ ಹರಿದಿದೆ ಮಂದ ಮಂದಾಕಿನಿಯ ಶಾಶ್ವತಸಲಿಲಯಾತ್ರೆ
ನೀರ ರೂಪದಿ ಲೋಕಕಿಳಿದಿಹ ಪವಿತ್ರೆ ಆ ತ್ರಿಣೇತ್ರೆ.
ಏನಿದಚ್ಚರಿ! ಅಲ್ಲಿ ನೆರೆದಿಹುದೊಂದು ಗೂಬೆಗೊಟ್ಟಿ!
ಆದಿಕವಿಯೀ ದಿವ್ಯ ಪರ್ಣಕುಟಿಯೊಳೆಯೆ ಈ ಘೂಕಗೋಷ್ಠಿ?
ವ್ಯಾಸಪೀಠದ ಮೇಲೆ ಬಿಚ್ಚಿರುವುದೊಂದು ಭೂರ್ಜಪತ್ರದ ಪುಸ್ತಕ;
ಆ ಬಳಿಯೆ ಗರಿಯ ಚಾಪೆಯ ಮೇಲೆ ಪೇರೊಡಲ ವೀಣೆ!
ರಾಮಾಯಣವೆ ಆ ಪುಸ್ತಕ,
ಆ ವೀಣೆ ಲವಕುಶರ ವೀಣೆ!
ತೆರೆದ ಹಾಳೆಯ ಓದು: ಓ ಸುಂದರ ಕಾಂಡದಾದಿ!

ತಾಯಿ ಸೀತೆಯ ಕರೆಗೆ ಮೀಹಕೆಂದು
ಕವಿಯೊಡನೆ ಹೊಳೆಯ ದಂಡೆಗೆ ಓಡಿದರು ಲವನು ಕುಶನು.
ಬಿಚ್ಚಿದಾ ಪುಸ್ತಕಂ ಬಿಚ್ಚಿದಂತೆಯೆ ಇಹುದು ವ್ಯಾಸಪೀಠದಲಿ;
ಮಿಡಿಯುತಿರ್ದಾ ಬೀಣೆ ಮೌನವಾಂತಿಹುದಲ್ಲಿ ರಸಸಮಾಧಿಯಲಿ!
ಆಗಳೆಯೆ ಪರ್ಣಶಾಲೆಗೆ ಪೊಕ್ಕುದಾ ಗೂಬೆವಿಂಡು
ಕವಿವರನ ಮೇಣ್ ಕುಶಲವರ ಗೈರುಹಾಜರಿಯ ಕಂಡು!

“ಏನು ಅನ್ಯಾಯ! ಏನಿದೀ ಧೂರ್ತತನ! ಏನಹಂಕಾರ;
ಕವಿಯೆಂಬ ಹೆಮ್ಮೆಯಾ ಪಿತ್ತಕಿಕ್ಕಲೇಬೇಕು ಮದ್ದಖಾರ!
ಈ ಬೀಣೆಯಾ ಬುರುಡೆ ನಮ್ಮ ಹಕ್ಕೆಗೆ ತಕ್ಕ ಗುಹೆಯಲ್ತೆ?
ಅದನಿವನು ತಂದು, ಮಕ್ಕಳಾಟಕೆ ತಂತಿಯಿಕ್ಕಿ,
ಕರ್ಕಶದ ಸದ್ದು ಮೂಡಿಸುತಿಹನು ಕವಿಯೆಂದು ಸೊಕ್ಕಿ!
ಇನಿತೊಂದು ದೊಡ್ಡ ಹೊತ್ತಗೆಯನೆಯೆ ಬರೆದಿರುವನಾದರೂ
ನಮ್ಮೊಂದು ಪೆಸರ ನುತಿಗಯ್ಯದಿವನ ಬಿಮ್ಮು
ಬಿರಯುವಂತೆಸಗವೇಳ್ಕುಂ! ವೇ. . . .ಳ್ಕು. . . .ಮ್ಮೂ!!
ಬರೆ, ಸಚಿವ, ಒಂದೆಚ್ಚರಿಕೆಯೋಲೆಯಂ: ―
‘ಎಲವೊ ಕವಿ ವಾಲ್ಮಿಕಿ, ತಮ್ಮೊಂದಸಂತೋಷಮಂ
ನಿನಗೆ ತಿಳಿಸಲ್ಕಾಟಿಪುದು ಈ ಮಹಾ ಧ್ವಾಂಕ್ಷಾರತಿ ವಿದ್ವನ್ಮಂಡಲಂ!
ಎಳ್ಚರಿಕೆ! ಇನ್ನು ಮುಂದಾದೊಡಂ ನೀನಂತು
ನಮ್ಮನವಹೇಳನಂಗೈದೆಯಾದೊಡೆ ನಿನಗೆ. . .
ನಿನಗೆ. . . ನಿನಗೆ. . . ನಿ. . .” ನಗೆಕೇಳಿಸಿತು ಹೊರಗೆ!
ಕೇಕೆ ಹಾಕುತ ನುಗ್ಗಿದರು ಲವಕುಶರು ಒಳಗೆ!
ಹಾರೋಡಿದುವು ಗೂಬೆ ಬೆಳಕಂಡಿಯಿಂ ಪೊರಗೆ!

ಬೆನ್ನೊಳೆ ಒಳಗೆವಂದ ವಾಲ್ಮೀಕಿಗಾ ಲವಂ
“ಗುರುದೇವ ಈ ಗೂಬೆಗಳಿಗೇನು ಮಾಳ್ಪುದೊ ಕಾಣೆ!
ಹಾಳಾಗುವುದು ಇವರ ದೆಸೆಯಿಂದೆಮ್ಮ ವೀಣೆ.
ನಾವಿಲ್ಲದಾಗಳೆ ಬಂದು ಮಾಳ್ಪವು ಅಸಹ್ಯಮಂ,
ಕುಳಿತು ತಂತಿಯ ಮೇಲೆ.”
“ಬಿಡು, ವತ್ಸ, ಬಾಗಿಲಿಗೆ
ತಡಿಕೆಯಂ ಬಿಗಿದರಾಯ್ತು!” ಎನುತೆ ಹಾಸ್ಯಕೆ ಮತ್ತೆ
“ಪಿಂತೆ ತುಂಬುರ ಮುನಿಗೆ ಕರುಬಿ ನಾರದನೊಂದು
ಗೂಬೆಯಿಂ ಸಂಗೀತಮಂ ಕಲ್ತು ಗಾನಯೋಗಿ
ತಾನಾದನೈಸಿ ಆ ಘೂಕಯೋಗಿಯ ನೆನೆದು
ಗೌರವಂದೋರಿವುಗಳಿಗೆ!” “ಕತೆ ಅದೇನ್, ಗುರದೇವ?”
“ಅದೊಂದು ರಾಮಾಯಣಾದ್ಭುತಂ! ನನ್ನ ರಾಮಾಯಣಕೆ ಮಿಗಿಲ್!
ನಾಳೆ ಪೇಳ್ವೆನ್. ಶುಚಿಗೆಯ್ದು ಮಿಡಿಯಿಮಾ ವೀಣೆಯಂ.”*

೧೯೫೩


* ವಿಶ್ವವಿದ್ಯಾಯಾನಿಲಯ ಕವಿಗೆ ಒಂದು ಎಚ್ಚರಿಕೆಯ ನೋಟೀಸು ಕೊಟ್ಟ ಸಂದರ್ಭದಲ್ಲಿ ಮೂಡಿದ ವಿಡಂಬನೆ.