ರವಿ ಮೂಡಿದನು;
ಕವಿ ನೋಡಿದನು:
ಬಾಹ್ಮೀಘಟನೆಗೆ ಭಾವಸ್ಪಂದಿತೆಯಾದಳು ಸಹೃದಯೆ ಪೃಥಿವಿ!

ರವಿ ಮೂಡುತಿರೆ
ಕವಿ ನೋಡುತಿರೆ
ಕ್ರತುವಿಂದುಣ್ಮಿತು ಗಾಯತ್ರಿ,
ವಾಗ್ರಸರೂಪಿಣಿ ಸಾವಿತ್ರಿ: –
“ಓಂ ಭೂರ್ಭುವಸ್ಸುವಃ
ತತ್ಸವಿತುರ್ವರೇಣಿಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್!”
ಆಲಿಸಿ ರಸವಿದ್ಯುನ್ಮಯಿಯಾದಳ್ ಸಹೃದಯೆ ಪೃಥಿವಿ!

ರವಿ ಮೂಡಿದನು,
ಕವಿ ನೋಡಿದನು:
ಬಾನುಲಿಯೊರೆಯದ ಪತ್ರಿಕೆ ಬರೆಯದ
ರಾಷ್ಟ್ರಾಧ್ಯಕ್ಷರು ಗೋಷ್ಠಿಗೆ ಕರೆಯದ
ಆ ವನವಾಸೀ ವಾರ್ತೆ
ತಾನಾದುದು ದಿಕ್ಕರಿ ಕರ್ಣ ಸುವಾರ್ತೆ!
ನಂದನಸುಮ ಜಯಮಾಲೆಯನೆತ್ತಿತು ಐರಾವತ ಹಸ್ತಂ:
ರಸರೋಮಾಂಚನ ತಟಿದಾಲಿಂಗನಕಾನಂದಿತೀ ವಿಶ್ವಸಮಸ್ತಂ!
ಅಂಬರ ಔಕಸ ಹಸ್ತನ್ಯಸ್ತಂ
ಕುಂಭ ಹಿರಣ್ಮಯಮಾ ಸೋಮಂ
ಕುಂಭಿನಿಗವತರಿಸಿತು ಸ್ಪರ್ಧಾಮಂ |
ಆ ಋಷ್ಯನುಭವದಗ್ನಿಯ ಸೇತುವೆಯಿಂ
ಪರಿದಿಳಿತಂದುದು ಅಮೃತಂ ದೈವೀಚರಣಸಮೂಹಂ,
ಮೃಣ್ಮಯ ಪರಿವರ್ತನಕಾರಣ ಯೋಗಕ್ಷೇಮಂ,
ಅತಿಮಾನಸ ಋತಚಿನ್ಮಯ ದಿವ್ಯಪ್ರೇಮಂ!

೩೧-೧-೧೯೫೧