ಪಂಪರನ್ನರ್ ಕುಮಾರವ್ಯಾಸ ಲಕ್ಷ್ಮೀಶ
ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ
ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ,
ಉಳಿವುದೀ ಕನ್ನಡಂ! ಮೊನ್ನೆ ಕಣ್ ಬಿಟ್ಟುದೀ
ಪಸುಳೆ ವಿದ್ಯಾನಿಲಯವಾ ಮುತ್ತ ನುಡಿತಾಯ್ಗೆ
ಮೊಲೆವಾಲನಿತ್ತೊಲಿದು ಸಹಿದಪುದೆಂಬಾಸೆ
ನಗೆಗೀಡು, ನಾಣ್ಗೇಡು, ಬೆಳ್ತನಂ! ತಾಯಿಂದೆ
ಪಸುಳೆವಾಳ್; ತಾಯಿರ್ದೆಯೆ ಸಿಸುಗೆ ಕೂಳ್‌! ಪೆತ್ತಳಂ
ಪಳಿದುಳಿವುದೇನರ್ಭಕಂ ಪೇಳ್? ಪ್ರಭೇದವೇನ್;
ಗೊತ್ತೆ, ಪಸುಳೆಗೆ ಮತ್ತೆ ಪೇನ್ಗೆ? ನೆತ್ತರುಣೆ ಪೇನ್;
ಪಾಲುಣಲ್ ಪಸುಳೆ, ಕೊಂದು ಸಾವುದು ಕೊನೆಗೆ ತಾನ್
ಪೇನ್; ಬಳ್ದು ಬರ್ದುಕಿಪುದು ತನ್ನಬ್ಬೆಯಂ ಪಸುಳೆ!
ನೆತ್ತರುಣಿ ಪೇನಾಗದೆಯೆ ಪಸುಳೆ ತಾನಾಗಲೀ
ಕನ್ನಡಮ್ಮನ ಎರ್ದೆಯ ಅಮೃತ ಜೀವನವೀಂಟಿ,
ಮರಳಿ ಜೀವನಾಮೃತವನೀವ ವಿದ್ಯಾಲಯಂ!

೨೩-೧೨-೧೯೪೨