ಇಂದು ಈ ಲೋಕದಲ್ಲಿ, ನಡೆವ ಘಟನೆಗಳೆಲ್ಲ
ಅಜಗಳೈಸಲೆ ಈ ಗಜೇಂದ್ರ ಘಟನೆಯ ಮುಂದೆ!
ಮುಂದೆ, ಈ ಯದ್ಧವೂ ವಿಸ್ಮೃತಿಯೊಳದ್ದಿದಾ
ಶತಮಾನ ಶತಗಳಾಚೆಯ ಕಣ್ಗೆ ತಳತಳಿಸಿ
ಪೊಳೆವುದೀ ಪ್ರಾಯೋಪವೇಶದ ಪವಿತ್ರ ದೃಶ್ಯಂ.
ರಾಮದರ್ಭಾಸ್ತರಣ ಶರಧಿತರಣ ವ್ರತಂ,
ಭೀಷ್ಮನ ಶರದ ಶಯ್ಯೆ, ಸಾಕ್ರಟೀಸನ ಕರದ
ವಿಷಪಾತ್ರೆ, ಯೇಸುಕ್ರಿಸ್ತನ ಶಿಲುಬೆ ― ಅವೆಲ್ಲಮುಂ
ಒರ್ಮೆಯ್ಯೊಳವತರಿಸಿದಂತಿದೆ ಮಹಾತ್ಮನೀ
ನಿರಶನದ ನೋಂಪಿ; ಸಂಗ್ರಾಮವೀರನ ದೃಢತೆ;
ಜ್ಞಾನವೀರನ ನಡತೆ; ಲೋಕ ಪಾಪ ಪ್ರತಿಮ
ಹಿಂಸಾ ವಿಷವನೀಂಟಿ, ಸಕಲರ ಸುಖಕೆ ತಾನೆ
ಬಲಿಯಪ್ಪ ಕಲಿತನದ ಶಾಂತಿವೀರನ ಮೃಡತೆ! ―

ತೊದಲುತಿದೆ ಪ್ರಾರ್ಥನೆಯ ಜಿಹ್ವೆ. ಮೂಕವಾಗಿದೆ
ಹೃದಯದುತ್ಕಟ ಶೋಕದಾರ್ತರುದಿತಂ. ― ಸಿದ್ಧಿ
ಬೇರುಂಟೆ ಸಕಲಸಾಧನದ ಗಂತವ್ಯಕ್ಕೆ?
ಯಾರ ಬದುಕೆಲ್ಲ ಬಾಳ್ವೆಯ ಸಫಲತೆಯೊ ಅದಕೆ
ಅದುವೆ ಗುರಿ. ಅಧ್ಯಾತ್ಮಮವ್ಯರ್ಥಮ್‌; ಅದರಿಂದೆ,
ಸತ್ತರೂ ಸಾರ್ಥಕಮೆ! ಬದುಕಲಿನ್‌ ಪೇಳ್ವುದೇನ್‌?
ನಿನ್ನನಭಿಷೇಕಿಸುವೆನಶ್ರುತೀರ್ಥದಿ, ನನ್ನ
ಓ ಜಗದ್ಗುರೂ, ಸರ್ವಮಂಗಳ ಶ್ರೀತರೂ!

೨೩-೨-೧೯೪೩