ಏನೆಂದು ಪ್ರಾರ್ಥಿಸಲಿ? ಏನೆಂದು ಪ್ರಾರ್ಥಿಸಲಿ
ಈ ವೈರ್ಯ ಸಂದಿಗ್ಧ ವಿಷಮ ಸಂಸ್ಥಿತಿಯಲ್ಲಿ?
ಬೆಂಕಿ ಬೇಡೆಮ್ದೆ? ಶತಮಾನಗಳ ದಾಸ್ಯಕಶ್ಮಲ
ಸುಡುವುದೆಂತು? ಕಷ್ಟ ತಪ್ಪಲಿ ಎಂದೆ? ಆತ್ಮ
ಪರಿಪಕ್ವವಹುದೆಂತು ಭಾರತಕೆ ಬರದಿರಲಿ
ರಣರುದ್ರನೆಂದೆ? ಕರಗದೆ, ಬಿರುಕುಗಳ್ ಬರಿದೆ
ಬೆಸೆಯುವುವೆ? ಕಮ್ಮಾರನಿಕ್ಕದೆಯೆ ಛಿದ್ರಗಳ್
ತೊಲಗುವುವೆ? ಏನೆಂದು ಪ್ರಾಥಿಸಲಿ ನಿನ್ನನೋ
ಅದಿಶಕ್ತಿ? ಸಮರಾಗಿ ಸರ್ವಮಂ ಸುಡಲೆಂದೆ?
ಹಿರಿ ಬೆಲೆಯ ಕಲೆಯ ಸೃಷ್ಟಿಗಳೆಲ್ಲ ಸಿಡಿಲಗ್ನಿ
ಮಳೆಯಿಂದೆ ಕರಿಕುವೋಗಲಿ ಎಂದೆ?

ಹೊಸಕವಿಯ
ಹೊಸರಚನೆ ಮೂರ್ಖಸೈನಿಕರಂಧ ರೋಷಕ್ಕೆ,
ಸೇನಾನಿಗಳ ಸುಯೋಧನ ಛಲಕೆ, ಪ್ರತಿಭಟಿಪ
ಮಿತ್ರಪಕ್ಷದ ಆಕ್ರಮಿಪ ಶತ್ರುಪಕ್ಷದ ಉಗ್ರ
‘ಅಗ್ನಿನೀತಿ’ಗೆ ನಶಿಸಲೆಂದೆ? ಕವಿ ಸಹಿಸುವನೆ
ಕಲೆಯ ಸೃಷ್ಟಿಯ ನಾಶಮಂ, ಹೇ ಜನಗ್ಮಾತೆ?
ಈ ಜಗದ್ ಯುದ್ಧಕಿಂ ಪಿರಿಯವೈಸಲೆ ಕವಿಯ
ರಚಿಸುತಿಹ ರಾಮಾಯಣಂ ಮೇಣ್ ಕೆಂಪುವೂ ಗಿಡದಿ,
ಪಕ್ಷಿಗಾಂಧಿಯ ತೆರದಿ, ” ಶಾಂತಿ ಸುಗ್ಗಿಗೆ ಸುವ್ವಿ,
ಸುವ್ವಿ!” ಎನುವೀ ಟುವ್ವಿ ಹಕ್ಕಿಯಾಲಾಪನಂ? –
ಏನೆಂದು ಪ್ರಾರ್ಥಿಸಲಿ? ಏನೆಂದು ಪರ್ಥಿಸಲಿ
ಈ ವಿಷಮ ಸಂಸ್ಥಿತಿಯಲ್ಲಿ, ಓ ಮಹಾತಾಯಿ?
ಕೊರತೆಗಳೇನೆಇರಲಿ, ಕೈಮುಗಿದುಲಿವೆನಿಂತು:
“ನಿನ್ನಿಚ್ಛೆ ನೆರವೆರಲಿ! ಕವಿಯಾಸೆ ಕೈಸೇರಲಿ!
ಬೇಗ ಲೋಕಕೆ ಶಾಂತಿ ಮೈದೋರಲಿ! ಸರ್ವರಿಗೆ,
ತಾರತಮ್ಯಗಳಳಿದು, ಸ್ವಾತಂತ್ರ್ಯ ಸಮತೆಗಳ್
ಸಿದ್ಧಿಯಾಗಲಿ, ಸಾಧಿಸಲ್ ಪರಮಪುರುಷಾರ್ಥಮಂ!”

ಬೆಂಗಳೂರು, ೧೦-೪-೧೯೪೨