ಕಂದ ಕನ್ನಡನಿವನು ಕೈಬಿಡದಿರಮ್ಮಾ
ನೊಂದು ಬಂದಿಹನು ಹಾಲೂಡಿ ಪೊರೆಯಮ್ಮ!

ಕಂದಗಲ್ಲವೆ ಮೊದಲ ಪಾಳಿ ನಿನ್ನೆದೆಗಮ್ಮಾ?
ಕಂದನಲ್ಲವೆ ನಿನ್ನ ಜೀವದಾನಂದವಮ್ಮಾ?
ಕಂದನನು ತೊರೆದನ್ಯರಾ ಮಗುಗೆ ಮೋಹಮಾಡಿ
ಕಂದನೆಂದರೆ ಕರುಳು ಕಿಲಕಿಲ ನಗದೆ ಹೇಳಮ್ಮಾ?

ಹೆರರ ಮಕ್ಕಳ ಮೀರ ನಿನ್ನವನು ಚೆಲುವನಮ್ಮಾ.
ನೀನು ಒಲಿದರೆ ಮುಗಿಲ ಸರಿಸಕೆ ನಿಲುವನಮ್ಮಾ;
ವಿಶ್ವನೆ ಗೆಲುವನಮ್ಮಾ!
ಲೋಕವನ್ನೊಲಿಸುವನು, ನಿನ್ನನೂ ನಲಿಸುವನು,
ತಾನೊಲಿದು ನಲಿವನಮ್ಮಾ!

ನಿನ್ನ ತೊಡೆಯೇರಿ ಕೊರಳಪ್ಪಿಕೊಳ್ಳುವನಮ್ಮಾ:
ನಿನ್ನ ಕಂದನ ಬೇಡಿಕೆಯ ನೀಡಿ ಸಲಹಮ್ಮಾ!
ಮೊದಲೆನ್ನ ಸಿಂಗರಿಸಿ ಕಣ್ದಣಿಯೆ ನೋಡಿ ನಲಿಯಮ್ಮಾ:
ಮೊದಲು ಮುದ್ದಿಸು ನನ್ನ: ನಾ ನಿನ್ನೊಡಲು ಬಾಳುಸಿರಮ್ಮಾ!

೩೦-೫-೧೯೩೮