[ಕನ್ನಡನಾಡು ಒಂದಾಗಬೇಕೆಂದು ಹಂಬಲಿಸುವ ಕನ್ನಡ ಮಕ್ಕಳೆಲ್ಲ ಒಂದು ಮಹಾದಿನ ಶುಭಮಹೂರ್ತದಲ್ಲಿ ತಮ್ಮ ಊರಿನ ಹೊಳೆಗೊ ಕೆರೆಗೊ ಗುಂಪಾಗಿ ನಡೆದು ಮಿಂದು ಮಡಿಯುಟ್ಟು ದೇವರಿಗೆ ಬಾಗಿ ದೀಕ್ಷೆ ಕೈಕೊಳ್ಳುತ್ತಾರೆ.]

ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡನಾಡೊಂದೇ;
ಇನ್ನೆಂದೂ ತಾನೊಂದೇ!

ನೃಪತುಂಗನ ದೊರೆಮುಡಿ ಸಾಕ್ಷಿ!
ಪಂಪನ ಪೆದ ದೂಳಿಯ ಸಾಕ್ಷಿ!
ಕೂಡಲ ಸಂಗನ ಅಡಿ ಸಾಕ್ಷಿ!
ಗದುಗಿನ ಕವಿದೇವನ ಸಾಕ್ಷಿ!
ದೀಕ್ಷೆಯ ತೊಡು ಇಂದೇ . . . .

ಇಡು ಸಹ್ಯಾದ್ರಿಯ ಮೇಲಾಣೆ!
ಇಡು ಕಾವೇರಿಯ ಮೇಲಾಣೆ!
ಇಡು ಚಾಮುಂಡಿಯ ಮೇಲಾಣೆ!
ಇಡು ಗೊಮ್ಮಟ ಗುರದೇವಾಣೆ!
ದೀಕ್ಷೆಯ ತೊಡು ಇಂದೇ . . . .

ಕಾಣಲಿ ಕನ್ನಡ ವ್ಯೋಮಾಕ್ಷಿ!
ನಿಲ್ಲಲಿ ರವಿ ಚಂದ್ರರ ಸಾಕ್ಷಿ!
ಕೇಳಲಿ ಕನ್ನಡ ಪಶು ಪಕ್ಷಿ!
ಸರ್ವ ದೇವರೂ ಶ್ರೀ ಸಾಕ್ಷಿ!
ದೀಕ್ಷೆಯ ತೊಡು ಇಂದೇ . . . .

ಇಡು ನಿನ್ನಯ ಸತಿಯಾಣೆ!
ಇಡು ನಿನ್ನಯ ಪತಿಯಾಣೆ!
ಮಕ್ಕಳ ಮೇಲಾಣೆ!
ಅಕ್ಕರೆ ಮೇಲಾಣೆ!
ಗುರುದೇವರ ಆಣೆ!
ನನ್ನಾಣೆ!
ನಿನ್ನಾಣೆ!
ಕನ್ನಡ ಜನರ ಮೇಲಾಣೆ!
ಕನ್ನಡ ನಾಡೊಂದಾಗೆ ಮಾಣೆ!
ತೊಡು ದೀಕ್ಷೆಯ! ಇಡು ರಕ್ಷೆಯ!
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದು!
ಕನ್ನಡ ನಾಡೊಂದೇ!

೧-೧೧-೧೯೪೯