ಓಂ ದ್ಯೌಃ ಶಾಂತಿರಂತರಿಕ್ಷಂ ಶಾಂತಿಃ |
ಪೃಥವೀಶಾಂತಿರಾಪಃ ಶಾಂತಿರೋಷಧಯಃ ಶಾಂತಿಃ |
ವನಸ್ಪತಯಃ ಶಾಂತಿರ್ವಿಶ್ವೇದೇವಾಃ ಶಾಂತಿರ್ಬ್ರಹ್ಮ ಶಾಂತಿಃ |
ಸರ್ವಂ ಶಾಂತಿಃ ಶಾಂತಿರೇವ ಶಾಂತಿಃ ||

ಬಾರಮ್ಮ ದೇವಿ,
ಓ ತಾಯಿ ಬಾರತಿಯೆ, ನಿನ್ನ ಮಗಳನ್ನು ಹರಸು.
ವರುಷ ಒಂಬತ್ತರಾಚೆಯಲಿ ಬಂಧನಮುಕ್ತಳಾದಂದು
ನೀ ಕಂಡ ಕನಸು,
ಎರಡು ಕೋಟಿಯ ಹೃದಯದಲಿ ಶತಮಾನದಿಂ ಕುದಿದ ಒಮ್ಮನಸು,
ದುರ್ಮುಖಿಯೆ ಸುಮುಖಿ ತಾನಾದ ದೀವಳಿಯ ಸುದಿನದಿಂದು
ತಾನಾಗಿಹುದ ನನಸು!
ಪುಲಕಿಸುತ್ತಿದೆ ಪಡುಗಡಲ್;
ರೋಮಾಂಚನದಿ ನಿಮಿರುತಿದೆ ಸಹ್ಯಾದ್ರಿ;
ಗಂಧ ಚವರಿಯ ಬೀಸುತಿದೆ ಮಲಯ ವನಸೀಮೆ;
ಪಕ್ಷಿ ಕೋಟಿಯ ಕಂಠ ಘೇಘೋಷಮುಕ್ಕುತಿದೆ
ದಿಕ್ಕು ಕಿವಿಗೆಡುವಂತೆ, ದೇವರ್ಕಳೊಲಿವಂತೆ,
ಕಾರ್ತಿಕದ ಬಾನ್ನೀಲಿ ತಾಂ ಶಾಂತಿಯಾಲಿಂಗನದಿ
ಕನ್ನಡದ ನೆಲಮಗಳನಪ್ಪಿ ಚುಂಬಿಸುವಂತೆ!
ನಮಿಸುತಿದೆ ತುಹಿನಗಿರಿ ಚಾಮುಂಡಿಯಂ;
ಗಂಗೆ ಓಲೈಸಿಹಳು ಕಾಣ್ ತಾಯಿ ತಂಗೆಯಂ;
ನಿನ್ನ ಮಗಳಭ್ಯುದಯ ನಿನಗಭ್ಯುದಯಮಲ್ತೆ
ಬಾರಮ್ಮ ದೇವಿ,
ಓ ತಾಯಿ ಭಾರತಿಯೆ, ನಿನ್ನಮಗಳನು ಹರಸಿ
ಹಾಡು ಓಂ ಶಾಂತಿಯಂ!
ನಿನ್ನ ಋಷಿ ಜನ ಬರಲಿ,
ನಿನ್ನ ಕವಿ ಜನ ಬರಲಿ,
ನಿನ್ನ ಗುರು ಜನ ಬರಲಿ,
ನಿನ್ನಖಿಲ ಶ್ರೀವಿಭೂತಿಗಳೆಲ್ಲರೈತರಲಿ,
ಕನ್ನಡಾಂಬೆಯ ಹರಸಿ ಹಾರೈಸಲಿ:

ಬರಿಯ ಚದರಮೈಲಿಗಳಲ್ತು ಕರ್ಣಾಟಕದ ದೇಶ ವಿಸ್ತೀರ್ಣಂ;
ನೆನೆ, ನೆನೆ, ಮನೋಮಯದ ಸಂಸ್ಕ್ರತಿಯ ಕೋಶ ವಿಸ್ತೀರ್ಣಮಂ.
ಮರೆಯದಿರು ಚದರಸಂವತ್ಸರದ ಶತಮಾನಗಳ ಕಾಲವಿಸ್ತೀರ್ಣಮಂ,
ಪ್ರಾಣಮಯ ಭಾವಪ್ರದೇಶ ವಿಸ್ತೀರ್ಣಮಂ,
ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ!

ಓ ಏಳು, ನೃಪತುಂಗದೇವ,
ಕೃಪೆಯಿಟ್ಟು ಕವಿರಾಜಮಾರ್ಗದರಮನೆಯ ಸಿಂಹಾಸನವನಿಳಿದು ಬಾ
ಕರ್ಣಾಟಕದ ನಿನ್ನ ಈ ಹೆಸರ ತಾಯ್ನೆಲಕೆ.
ನೀನಂದು ಹಾಡಿದಾ ಕನ್ನಡದ ನಾಡು
ಒಂದುಗೂಡಿದೆ ಇಂದು ಇದೊ ಬಂದು ನೀಡು.
ಸಂವತ್ಸರ ಸಹಸ್ರ ಸೋಪಾನಪಂಕ್ತಿಗಳನಿಳಿದು ಬಿಜಯಗೈ
ಪುಣ್ಯದೀಪಾವಳಿಯ ದಿನದ ಈ ರಾಜ್ಯೋದಯ ಮಹೋತ್ಸವಕ್ಕೆ.
ಇಳಿದು ಬರುವಾ ದಾರಿಯೊಳೆ ನಿಂತಿಹರು ಸಾಲುಸಾಲಾಗಿ
ಕನ್ನಡದ ಕುಲದೀಪಧಾರಿಗಳು, ಅವರನೂ ಕರೆದು ತಾ.
ಅಲ್ಲಿ ದೊರೆ, ಇಲ್ಲಿ ಕವಿ, ಅಲ್ಲಿ ಸೇನಾನಿ;
ಇಲ್ಲಿ ಗಾಯಕ, ಅಲ್ಲಿ ಶಿಲ್ಪಿ;
ಇಲ್ಲಿ ಗುರು, ಅಲ್ಲಿ ರಸಋಷಿ ಮತ್ತೆ ಅನುಭಾವಿ;
ದಾರ್ಶನಿಕ, ದ್ರಷ್ಟಾರ, ಸರ್ವಶಾಸ್ತ್ರಜ್ಞಾನಿ;
ಒಬ್ಬರೆಯೆ? ಇಬ್ಬರೆಯೆ? ಕೋಟಿ ಕೋಟಿ!
ಕಡಗ, ಕುಡುಗೋಲು, ಲೆಕ್ಕಣಿ, ಮೇಟಿ!
ಹೆಸರಾಂತವರಿಗಿಂತಲೂ ಹೆಸರ ದೌರ್ಬಲ್ಯವನು ದಾಟಿ
ನಿಂತಾ ಮಹಾತ್ಮರೆಯೆ ಕೋಟಿ ಕೋಟಿ!
ಎಲ್ಲರನು ಕರೆದು ತಾ ಇಂದಿನುತ್ಸವಕ್ಕೆ.
ನಿಮಗೆಲ್ಲ ಸೊಗಮಕ್ಕೆ, ನಿಮಗೆಲ್ಲ ಜಯಮಕ್ಕೆ,
ನಿಮ್ಮ ಆಶೀರ್ವಾದ ನಮಗೆ ಶುಭಮಕ್ಕೆ!
ಓಂ ದ್ಯೌಃ ಶಾಂತಿರಂತರಿಕ್ಷಂ ಶಾಂತಿಃ |
ಪೃಥಿವೀ ಶಾಂತಿರಾಪಃ ಶಾಂತಿರೋಷಧಯಃ ಶಾಂತಿಃ |
ವನಸ್ವತಯಃ ಶಾಂತಿರ್ವಿಶ್ವೇದೇವಾಃ ಶಾಂತಿರ್ಬ್ರಹ್ಮ ಶಾಂತಿಃ |
ಸರ್ವಂ ಶಾಂತಿಃ ಶಾಂತಿರೇವ ಶಾಂತಿಃ ||

೧-೧೧-೧೯೫೬