ಅವತರಿಸು ಬಾ ಇಂದೆ ಹಿಂದುವಿನ ಹೃದಯಕ್ಕೆ
ಹಂದೆತನವಮ್ ನೂಂಕಿ,
ಓ ಲಂಕಭಯಂಕರ ಸಮಿರಕುಮಾರ,
ಹೇ ಆಂಜನೇಯ!
ನಿನ್ನಾ ಸಮುದ್ರಮಂ ಲಂಘಿಸಿದ ಶಕ್ತಿ,
ಪರ್ವತವ ಕಿತ್ತೆತ್ತಿ ಪೊತ್ತು ತಂದಾ ಶಕ್ತಿ,
ದಂಭದರ್ಪೋನ್ಮತ್ತ ರಾಕ್ಷಸರ ಮರ್ದಿಸಿದ ಶಕ್ತಿ,
ಸೀತಾಪತಿವ್ರತಾ ಮಾನವಂ ಸಂರಕ್ಷಿಸಿದ ಶಕ್ತಿ,
ದುಷ್ಟದಾನವ ಲಂಕೆಯಂ ಧಗದ್ದಹಿಸಿದಾ ಶಕ್ತಿ,
ಬ್ರಹ್ಮಚರ್ಯದ ಶಕ್ತಿ,
ಯೋಗಸಿದ್ಧಿಯ ಶಕ್ತಿ,
ರಾಮಭಕ್ತಿಯ ತಪಶ್ಯಕ್ತಿ,
ಉದ್ಭವಿಸಲಿಂದು ಹಿಂದುವಿನ ಹೃದಯದಲಿ
ಆ ನಿನ್ನ ರುಂದ್ರಶಕ್ತಿ,
ದುಷ್ಟದಾನವ ದಮನ ದಲನ ದೀಕ್ಷಾಶಕ್ತಿ,
ಓ ಲಂಕಾಭಯಂಕರ ಸಮಿರಕುಮಾರ,
ಹೇ ಆಂಜನೇಯ!

ಉದ್ಭವಿಸು ಬಾ ಇಂದೆ ಹಿಂದುವಿನ ಭುಜ ಭುಜುಗ ಫಣೆಗೆ
ಹಂದೆತನವಳಿವಂತೆ,
ಓ ಕೌರವ ಭಯಂಕರ ಸಮಿರಕುಮಾರ,
ಹೇ ಭೀಮಸೇನ!
ನಿನ್ನ ದನಿಗೇಳ್ದ ದುರ್ಯ್ಯೋಧನಂ
ಕೊಳದಿಂದದೆಂತುಣ್ಮಿ ಚಿಮ್ಮಿದನೊ ತಾನ್
ಅಂತೆವೋಲ್ ನಮ್ಮೀ ಹೃದಯ ವಲ್ಮೀಕದಿಂ
ಚಿಮ್ಮಿ ಮಲೆಯಲಿ ನಿನ್ನುಗ್ರ ಗದಾ ಲಯೋರಗಂ
ಪಾಪ ವಿಧ್ವಂಸನಕೆ ಪೂಂಣ್ದ ಪುಣ್ಯ ಪ್ರಲಯ ರುದ್ರನೋಲ್!
ಕಲಿಸೆನಗೆ ನಿನ್ನಾ ಘೋರ ಛಲಮಂ
ದುರುಳ ದುಶ್ಯಾಸನನ ಕರುಳ ಕಿತ್ತೆಳೆದು ನೆತ್ತರ್ ಕುಡಿವವೋಲ್!
ನೀಡೆಮಗೆ ನಿನ್ನ ಭೈರವ ರುಂದ್ರ ಬಲಮಂ
ಬಕ ಹಿಡಿಂಬರ ಕೊರಳ್ ಮುರಿವವೋಲ್,
ಭಗದತ್ತನಾನೆಯಂ ಪತ್ತಿ ಕೊಂದೊತ್ತಿ ಕುರಿದರಿಮಾಳ್ಪವೋಲ್
ಕಲಿಸೆಮಗೆ ನಿನ್ನಾ ಪ್ರತಿಜ್ಞಾ ಪ್ರತಾಪಮಂ
ದ್ರೌಪದಿಯ ಮಾನಕ್ಕೆ ದುರ್ಯ್ಯೋಧನೋರುಸ್ಥಲವನುಡಿವವೋಲ್,
ದಂಭದರ್ಪದ ಕಿರೀಟವನೊದೆವವೋಲ್,
ಧೈರ್ಯ ದಿವ್ಯಾಗ್ನಿಯಿಂ ಬೀರುಹೃದಯದ ತಮಂ ಕಿಡುವವೋಲ್,
ಪೆಣ್ ಮುಡಿಗೆ ಕೆನ್ನೀರಿನೋಕುಳಿಯ ಹೂಮುಡಿಸುವೋಲ್,
ದಿವ್ಯ್ ಧರ್ಮಧ್ವಜಂ ತಾಂ ದಿಗ್ವಿಜಯ ಗೌರವಕೆ
ದಿಗ್ದಂತಿಗಳ್ ಬಿಚ್ಚಿ ಕಣ್ಣೆತ್ತಿ ನೋಡುತಿರೆ
ಗಗನೊತ್ತಮಾಂಗಮಂ ಗುಡಿಸುವೋಲ್!
ಉದ್ಭವಿಸಲಿಂದು ಹಿಂದುವಿನ ಹೃದಯದಲಿ
ನಿನ್ನತುಲ ಶೌರ್ಯ ಹೈಮಚಲಂ
ದುಷ್ಟದಾನವ ದಮನ ದಲನ ದೀಕ್ಷಾ ಛಲಂ,
ಓ ಕೌರವ ಭಯಂಕರ ಸಮಿರಕುಮಾರ,
ಹೇ ಭೀಮಸೇನ!

೧೧-೧೧-೪೬