ಅಂತು ಕೊನೆಗೂ ತೊಲಗಿದೆಯ ಪುಣ್ಯಭೂಮಿಯಿಂ.
ಪಾಪಾತ್ಮ! ಅಲ್ಲಾದೊಡಂ ಮೈತ್ರಿಯಂ ಕಲ್ತು
ಬರ್ದುಕು, ಕರ್ಮಕೆ ತಕ್ಕ ಶಿಕ್ಷೆಯ ಅನಂತರಂ!
ಏನ್ ಕಾಯುತಿದೆಯೊ ನಿನಗಲ್ಲಿ, ಹೇ ದುರಾತ್ಮಾ?
ನೆನೆದರೆಯೆ ಮೈನಡುಗಿತಿದೆ ನನಗೆ: ನರಕಂ
ತನ್ನೆಲ್ಲ ಪಾಪ ಶಿಕ್ಷಾ ಶುನಕ ಕೋಟಿಯಂ
ಕಳುಹದೇನಿರ್ಪುದೆ ಕೊರಳ್ ಬಿಚ್ಚಿ, ಪೇಳ್, ನಿನ್ನ್
ಗೆಯ್ದ ಪಾಪಂಗಳಂ ಬೇರ್ಪಡಿಸೆ ನಿನ್ನಾತ್ಮದಿಂ?
ಕೋಟಿ ದುಃಖಂಗಳಂ ಪೆತ್ತು ಭಾರತಕಿತ್ತ
ಶಠದನುಜ, ನಿನ್ನ ದುಃಷ್ಕ್ರತ ಫಲಂಗಳನಲ್ಲಿ
ಕಾಣ್: ಬಂಗಾಳ ಪಂಜಾಬುಗಳ ಕೊಲೆಗಳಿಂ
ಸಂಭವಿಸಿದನ್ಯಾಯಮಂ, ಶೋಕಂಮಂ, ಶಾಪಮಂ
ಕುದಿವೆದೆಯ ಕಣ್ಣೀರ ತಾಪಂಗಳಂ ಕಾಣ್,
ಕಾಣ್, ಕಾಣ್! ಸತ್ತ ಮೇಲಾದೊಡಂ ಕಣ್ ಬಂದು
ಕಾಣ್! –

ಅಲ್ಲಾದೊಡಂ ಮರೆವೊಗು ಮಹಾತ್ಮನಂ,
ಸರ್ವಮಂ ಕ್ಷಮಿಸಿ, ರಕ್ಷಿಸಬಲ್ಲ ದಿವ್ಯಾತ್ಮನಂ:
ವೈರಿ ದಶಶಿರನಾತ್ಮಮಂ ಕೊನೆಗೆ ತನ್ನೊಳಗೆ
ಕರೆದುಕೊಂಡವನ ನಾಮವನುಚ್ಚರಿಸುತುರುಳಿ
ಒಡಲನುಳಿದಾ ಸತ್ಯ ಆಹಿಂಸಾ ದಯಾತ್ಮನಂ!

ಸತ್ತಂಗೆ ಹಗೆ ಹೊಲ್ಲ. ನಿಂದಾ ಕಳಂಕದಿಂ
ಹೊಲೆಯಾಗಲೊಲ್ಲದೀ ಕವಿಜಿಹ್ವೆ. ರಾವಣಗೆ
ದುರ್ಯ್ಯೋಧನಂಗೆ ಕರುಣದಿ ಮರುಗುವೀ ಮನಂ
ನಿನಗೆ ಕಲ್ಲಾಗದಯ್. ನಿನ್ನ ಕರ್ಮಕೆ ಬಯ್ದೆ,
ನಿನಗಲ್ಲ. ಅನ್ಯಲೋಕಂಗಳಲ್ಲದೊಡಂ
ನಿನ್ನಾತ್ಮಕೈತರ್ಕೆ, ಪಾಪವಕ್ರತೆ ಮಾಣ್ದು,
ಋಜುತೆ! ನಿನಗೊಳ್ಳಿತಂಗೆಯ್ಯಲಿ ಜಗನ್ಮಾತೆ!

೧೨-೯-೧೯೪೮