ಹೃದಯ ಧರ್ಮಸ್ಥಲದಿ ನಿನ್ನಂತರಾತ್ಮನಿರೆ
ಅಂಜುತಿಹೆ ಏಕೆಲೆ ಅಗಸ್ತ್ಯ ಭ್ರಾತ?
ಅಲ್ಲಿ ಧರ್ಮಸ್ಥಳದಿ, ಹೇಳಿಗೆಯ ಹಾವಿನೊಲು,
ದೇಗುಲಕೆ ವಶನೆ ಹೇಳ್ ಮಂಜುನಾಥ?

ನಿನ್ನ ಭಯದುರಿಗೊಳ್ಳಿ ನಿನಗದುವೆ ಪಂಜ್ರೊಳ್ಳಿ;
ನಿನ್ನಳುಕೆ ನಿನಗೆ ಅಣ್ಣಪ್ಪಭೂತ!
ಉಪನಿಷತ್ತಿನ ಹಿರಿಯ ಧರ್ಮವನು ಕೆಳತಳ್ಳಿ
ಬೆದರಿಸುವ ಗುರ ಬಿಭೀಷಿಕಾ ಪ್ರೇತ!

ಎಲ್ಲಿ ಮತ್ಸರವಳಿದು ಮೈತ್ರಿ ಮೂಡುವುದಲ್ಲಿ
ಮೂಡಿತೆಂದೇ ತಿಳಿಯೊ ಧರ್ಮಸ್ಥಲ.
ಸುಲಿಗೆ ವಂಚನೆ ಹಿಂಸೆಗಳನುಳಿದವನ ಮನವೆ
ಮಂಜುನಾಥನ ಮಂಚ, ಹೃದಯಕಮಲ!

ಮೂಢ ಹೃದಯದ ಗೂಢ ಗಾಢಾಂಧಕಾರವನು
ಹೊರದೂಡದೆಯೆ ರೂಢಿ ಎಂಬ ನೆವದಿ
ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದಕೊಳೆ
ಜ್ಯೋತಿ ಮೂಡುವುದೆಂದೂ ಜಡದ ಜಗದಿ?

ನ್ಯಾಯ ಸಮ್ಮತವಲ್ಲ ಎಂಬುದದು ಮತವಲ್ಲ;
ನ್ಯಾಯ ನರನದು; ಧರ್ಮ ಈಶ್ವರನದು.
ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ!
ನಿನ್ನಂತೆ ಸಂಸ್ಥೆಯ ನಶ್ವರವದು!

ಧರ್ಮಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ;
ಧರ್ಮವೇಷದ ಅಧರ್ಮಕ್ಕೆ ಮುನಿದೆ.
ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೊ
ಕೈಮುಗಿದೆ, ಮಣಿದೆ, ಹಿರಿದು ಕಿರಿದೆನದೆ!

೨೩-೪-೧೯೪೪