ನೇಸರುದಯಿಸುವ ನಾಡಿಂದಲೈತಂದು ಅದೊ
ಬಂಗಾಳ ಕೊಲ್ಲಿಯಲಿ ಬಂದು ನಂತಿದೆ ಭೀತಿ:
ಭರತ ಭೂಮಿಯ ಮಾಲೆ ಹಾದುಹೋಗಿದೆ ಅದರ
ಭೀಕರ ಬೃಹಚ್ಛಾಯೆ! ಜನಮನದೊಳೇನೊ ಭಯ;
ರೂಪಕೆಳಸುವ ಪ್ರೇತವತ್ ಶಂಕೆ: ಮನೆಯೊಳಗೆ
ಪಿಸು ಮಾತು. ದೀಪಗಳ್ ಕೂಡ ಮುಸುಗಿನ ಕೆಳಗೆ
ತಲೆಮರಸಿಕೊಳ್ಳುತಿವೆ. ಗಗನಕೇರುವ ಮನುಜ,
ಇಲಿಗಳೊಲ್, ಕುಣಿ ತೋಡುತಿಹನು ಬಿಲದೊಳಗಡಗಿ
ಬದುಕಲ್ಕೆ, ಲಾರಿಲಾರಿಯಲಿ ಸೆಟ್ಟರ ಮನೆಯ
ಹೊನ್ ಹದಿಗಿ, ಹುದುಗಿಕೊಳ್ಳಲು ಹಳ್ಳಿಗೋಡುತಿದೆ.
ಗಾಡಿಯಲಿ ಚಿಂದಿ ಹರಕಲು ಮುರುಕುಗಳನೆಲ್ಲ
ಹೇರಿ, ‘ಎಲ್ಲಾದರೂ ಸರಿಯೆ, ಏನಾದರೂ
ಸರಿಯೆ, ಇಲ್ಲಿರವು ಬೇಡೆಂ’ ದು ದೌಡೋಡುತಿದೆ
ಗಾರುಗೊಂಡಿಹ ಬಡತನಂ. ರೈಲು ರೈಲುಗಳ್
ಹೊರಲಾರದೆಯೆ ಹೊತ್ತು ಹೆದರೆದೆಯ ಹೊರೆಗಳಂ
ಧಾವಿಸುತ್ತೇದುತಿವೆ ನಿಲ್ದಾಣದಿಂ. ‘ಧೈರ್ಯ!
ಧೈರ್ಯ!’ ಎಂಬರ ಕೊರಳೆ ಗದ್ಗದಿಸುತಿದೆ; ಏಕೊ
ಏನೊ, ಕಂಪಿಸಿ ತೊದಲುತಿದೆ! ನಾಡ್ನೀ ಸ್ಥಿತಿಗೆ
ತಂದಿಟ್ಟವರಿಗಾವ ಕರ್ಮ ಕಾಯುತ್ತಿದೆಯೊ
ದೇವರೋಬ್ಬನೆ ಬಲ್ಲ ರಾಮಾಯಣದ ನಾಡು;
ಮಾಭಾರತದ ನಾಡು; ವೀರಪೂಜೆಯ ನಾಡು;
ಈ ನಾಡನೀ ನಾಚಿಗೆಯ ಗತಿಗೆ ನೂಕಿದಾ
ರಾಜತಂತ್ರದ ಲೋಭನೈಚ್ಯಕೆ – ಧಿಕ್! ಧಿಕ್! ಧಿಕ್!*

ಬೆಂಗಳೂರು, ೧೩-೪-೧೯೪೨


* ಕ್ರಿಪ್ಸ್ ಸಂಧಾನ ಮುರಿದು ಬಿದ್ದ ಸಮಯ.